Tag: Uttarakhand

  • 132 ಗ್ರಾಮಗಳಲ್ಲಿ 3 ತಿಂಗಳಿನಿಂದ ಒಂದೇ ಒಂದು ಹೆಣ್ಣು ಮಗು ಜನಿಸಿಲ್ಲ

    132 ಗ್ರಾಮಗಳಲ್ಲಿ 3 ತಿಂಗಳಿನಿಂದ ಒಂದೇ ಒಂದು ಹೆಣ್ಣು ಮಗು ಜನಿಸಿಲ್ಲ

    ಉತ್ತರಕಾಶಿ: ಉತ್ತರಾಖಂಡ್‍ನ ಉತ್ತರಕಾಶಿ ಜಿಲ್ಲೆಯ 132 ಗ್ರಾಮಗಳಲ್ಲಿ ಕಳೆದ ಮೂರು ತಿಂಗಳಿನಿಂದ ಒಂದು ಹೆಣ್ಣು ಮಗು ಸಹ ಜನಿಸಿಲ್ಲ ಎಂಬ ಅಚ್ಚರಿ ಸಂಗತಿ ಬೆಳಕಿಗೆ ಬಂದಿದೆ.

    ಕೇಂದ್ರ ಸರ್ಕಾರ ಲಿಂಗಾನುಪಾತವನ್ನು ಸರಿದೂಗಿಸಲು ಹಾಗೂ ಹೆಣ್ಣು ಮಕ್ಕಳನ್ನು ವಿದ್ಯಾಂತರನ್ನಾಗಿಸಲು ‘ಬೇಟಿ ಬಚಾವೋ ಬೇಟಿ ಪಡಾವೋ’ ದಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಸಹ ಲಿಂಗಾನುಪಾತವನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಇದರ ಬೆನ್ನಲ್ಲೇ ಇದೀಗ ಉತ್ತರಕಾಶಿ ಜಿಲ್ಲೆಯ 132 ಗ್ರಾಮಗಳಲ್ಲಿ ಕಳೆದ ಮೂರು ತಿಂಗಳಿಂದ ಒಂದು ಹೆಣ್ಣು ಮಗು ಸಹ ಜನಿಸಿಲ್ಲ ಎಂಬ ಸಂಗತಿ ತಿಳಿದು ಬಂದಿದೆ.

    ಅಂಕಿ ಅಂಶಗಳ ಪ್ರಕಾರ, ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯ 132 ಹಳ್ಳಿಗಳಲ್ಲಿ 216 ಮಕ್ಕಳು ಜನಸಿದ್ದು, ಇದರಲ್ಲಿ ಒಂದು ಸಹ ಹೆಣ್ಣು ಮಗುವಿನ ಜನನವಾಗಿಲ್ಲ.

    ಪರಿಸ್ಥಿತಿಯನ್ನರಿತ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶಿಕ್ ಚೌಹಾಣ್ ಈ ಕುರಿತು ಮಾತನಾಡಿ, ಯಾವ ಗ್ರಾಮಗಳಲ್ಲಿ ಹೆಣ್ಣು ಮಕ್ಕಳು ಜನಿಸಿಲ್ಲ ಹಾಗೂ ಯಾವ ಗ್ರಾಮಗಳಲ್ಲಿ ಒಂದಂಕಿಯೊಳಗೆ ಹೆಣ್ಣು ಮಗು ಜನಿಸಿದೆ ಎಂಬುದರ ಕುರಿತು ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಅಂತಹ ಗ್ರಾಮಗಳ ಕಡೆ ಹೆಚ್ಚು ಗಮನಹರಿಸಿ ನಿರ್ವಹಣೆ ಮಾಡಿ, ಯಾವ ಕಾರಣಕ್ಕೆ ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುತ್ತಿದೆ ಎಂಬುದರ ಕುರಿತು ಪತ್ತೆ ಹಚ್ಚಲಾಗುವುದು. ಈ ಕುರಿತು ವಿಸ್ತøತ ಸರ್ವೇ ಹಾಗೂ ಅಧ್ಯಯನ ನಡೆಸಿ ಇದರ ಹಿಂದಿನ ಕಾರಣಗಳನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.

    ಈ ಕುರಿತು ಚರ್ಚಿಸಲು ಆಶಾ ಕಾರ್ಯಕರ್ತೆಯವರೊಂದಿಗೆ ತುರ್ತು ಸಭೆ ಕರೆಯಲಾಗಿದ್ದು, ಈ ಪ್ರದೇಶಗಳಲ್ಲಿ ಹೆಚ್ಚು ಜಾಗರೂಕತೆ ವಹಿಸುವಂತೆ ಹಾಗೂ ದತ್ತಾಂಶಗಳ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಗಂಗೋತ್ರಿ ಶಾಸಕ ಗೋಪಾಲ್ ರಾವತ್ ಸಹ ಈ ಸಭೆಯಲ್ಲಿ ಭಾಗವಹಿಸಿ ವಿಚಾರಿಸಿದ್ದಾರೆ.

    ಸಮಾಜ ಸೇವಕಿ ಕಲ್ಪನಾ ಠಾಕೂರ್ ಅವರು ಈ ಕುರಿತು ಪ್ರತಿಕ್ರಿಯಿಸಿ, ಒಂದೂ ಹೆಣ್ಣು ಮಗು ಜನಿಸದಿರುವುದು ಸ್ತ್ರೀ ಭ್ರೂಣ ಹತ್ಯೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಳ್ಳಿಗಳಲ್ಲಿ ಮೂರು ತಿಂಗಳ ವರೆಗೆ ಯಾವುದೇ ಹೆಣ್ಣು ಮಗು ಜನಿಸಿಲ್ಲ ಎಂಬುದು ಕೇವಲ ಕಾಕತಾಳಿಯವಲ್ಲ. ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಅವ್ಯಾಹುತವಾಗಿ ನಡೆಯುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಈ ಕುರಿತು ನಿರ್ಲಕ್ಷ್ಯ ವಹಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹಿರಿಯ ಪತ್ರಕರ್ತ ಶಿವ್ ಸಿಂಗ್ ಥನ್ವಲ್ ಈ ಕುರಿತು ಪ್ರತಿಕ್ರಿಯಿಸಿ, ಇಂತಹ ಪದ್ಧತಿಯನ್ನು ತೊಲಗಿಸಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಲಿಂಗಾನುಪಾತ ಈ ಮಟ್ಟಕ್ಕೆ ಕುಸಿದಿರುವುದು ಭಯದ ವಾತಾವರಣವನ್ನು ಸೃಷ್ಟಿಸಿದೆ. ಕೇಂದ್ರ ಸರ್ಕಾರದ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯನ್ನೇ ಪ್ರಶ್ನಿಸುವಂತಹ ಸ್ಥಿತಿ ತಲುಪಿದ್ದೇವೆ. ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದನ್ನು ಸಂಖ್ಯೆಗಳು ಸ್ಪಷ್ಟವಾಗಿ ತೋರಿಸುತ್ತಿವೆ. ಇದನ್ನು ತಡೆಗಟ್ಟಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಎಚ್ಚರಿಸಿದ್ದಾರೆ.

  • ಮದ್ಯದ ಗ್ಲಾಸ್, ಕೈತುಂಬ ಗನ್ ಹಿಡಿದು ಬಿಜೆಪಿ ಶಾಸಕನ ಡ್ಯಾನ್ಸ್ – ವಿಡಿಯೋ ವೈರಲ್

    ಮದ್ಯದ ಗ್ಲಾಸ್, ಕೈತುಂಬ ಗನ್ ಹಿಡಿದು ಬಿಜೆಪಿ ಶಾಸಕನ ಡ್ಯಾನ್ಸ್ – ವಿಡಿಯೋ ವೈರಲ್

    ಡೆಹ್ರಾಡೂನ್: ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಿದ್ದ ಉತ್ತರಾಖಂಡ್‍ನ ಬಿಜೆಪಿ ಶಾಸಕ ಪ್ರಣವ್ ಸಿಂಗ್ ಇದೀಗ ಮತ್ತೆ ಸುದ್ದಿಯಾಗಿದ್ದು, ನಾಲ್ಕೈದು ಗನ್ ಹಿಡಿದುಕೊಂಡು ಅಶ್ಲೀಲ ಪದಗಳನ್ನು ಬಳಸಿ ಬೈಯುತ್ತ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಶಾಸಕ ಆಕಾಶ್ ವಿಜಯ್‍ವರ್ಗಿಯಾ ಪ್ರಕರಣದ ನಂತರ ಪ್ರಧಾನಿ ಮೋದಿ ಅವರು ಎಲ್ಲ ಜನಪ್ರತಿನಿಧಿಗಳು ಶಿಸ್ತಿನಿಂದ ವರ್ತಿಸಬೇಕು. ಅಶಿಸ್ತು ಹಾಗೂ ದುರ್ವರ್ತನೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಆದರೂ ಕೆಲ ನಾಯಕರು ಒಂದಿಲ್ಲೊಂದು ವಿವಾದಗಳನ್ನು ಸೃಷ್ಟಿಸುವ ಮೂಲಕ ಸುದ್ದಿಯಾಗುತ್ತಿದ್ದು, ಉತ್ತರಾಖಂಡ ಶಾಸಕರೊಬ್ಬರು ಇದೀಗ ನಾಲ್ಕೈದು ಗನ್‍ಗಳನ್ನು ಹಿಡಿದುಕೊಂಡು ಅಶ್ಲೀಲ ಶಬ್ದಗಳಿಂದ ಬೈಯ್ಯುವ ಮೂಲಕ ವಿಚಿತ್ರವಾಗಿ ವರ್ತಿಸಿದ್ದಾರೆ.

    ಕಪ್ಪು ಬಣ್ಣದ ಬನಿಯನ್ ಹಾಗೂ ಬಿಳಿ ಪ್ಯಾಂಟ್ ಧರಿಸಿ, ಎರಡೂ ಕೈಯ್ಯಲ್ಲಿ ನಾಲ್ಕು ಗನ್ ಹಿಡಿದುಕೊಂಡು, ಮೊಣಕಾಲ ಮೇಲೆ ಮಧ್ಯಪಾನದ ಗ್ಲಾಸ್ ಇಟ್ಟುಕೊಂಡು, ಡ್ಯಾನ್ಸ್ ಮಾಡುತ್ತ ಪೋಸ್ ನೀಡಿದ್ದಾರೆ. ಶಾಸಕರ ಜೊತೆ ಸಹಚರರು ಸಹ ಡ್ಯಾನ್ಸ್ ಮಾಡಿದ್ದು, ಸುಮಾರು 1.45 ನಿಮಿಷಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಈ ಕುರಿತು ಎಚ್ಚರ ವಹಿಸಿದ್ದು, ಗನ್ ಹಾಗೂ ಶಸ್ತ್ರಾಸ್ತ್ರಗಳಿಗೆ ಪರವಾನಿಗೆ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

    ಬಿಜೆಪಿ ಸಹ ಈ ಕುರಿತು ಖಂಡನೆ ವ್ಯಕ್ತಪಡಿಸಿದ್ದು, ಶಾಸಕನ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದೆ.

    ನಾನು ಈ ವಿಡಿಯೋವನ್ನು ಗಮನಿಸಿದ್ದು, ಶಾಸಕ ಪ್ರಣವ್ ಸಿಂಗ್ ಇಂತಹ ವರ್ತನೆಗಳಿಂದಲೇ ಹೆಚ್ಚು ಪ್ರಸಿದ್ದಿ ಪಡೆದಿದ್ದಾರೆ. ಹೀಗಾಗಿಯೇ ಈ ಹಿಂದೆ ಮೂರು ತಿಂಗಳುಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಘಟನೆ ಕುರಿತು ಉತ್ತರಾಖಂಡ್ ರಾಜ್ಯ ಬಿಜೆಪಿ ಜೊತೆ ಮಾತನಾಡಿ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಬಿಜೆಪಿಯ ರಾಷ್ಟ್ರೀಯ ಮಾಧ್ಯಮ ಸಲಹೆಗಾರ ಅನಿಲ್ ಬಲುನಿ ತಿಳಿಸಿದ್ದಾರೆ.

    ಪತ್ರಕರ್ತರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಕಳೆದ ತಿಂಗಳು ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿತ್ತು. ಅಲ್ಲದೆ, ಅಶಿಸ್ತು ಹಾಗೂ ದುರ್ವರ್ತನೆಯಿಂದ ಬಿಜೆಪಿ ರೋಸಿ ಹೋಗಿದ್ದು, ಅಮಾನತುಗೊಳಿಸಿದರೂ ಸಹ ಶಾಸಕರ ದುರ್ವರ್ತನೆಗೆ ಕಡಿವಾಣ ಬಿದ್ದಿಲ್ಲ.

  • ಮದುವೆ ವೇಳೆ ಬಯಲು ಮಲ ವಿಸರ್ಜನೆ, ಕಸ ಹಾಕಿದ್ದಕ್ಕೆ 2.5 ಲಕ್ಷ ರೂ. ದಂಡ

    ಮದುವೆ ವೇಳೆ ಬಯಲು ಮಲ ವಿಸರ್ಜನೆ, ಕಸ ಹಾಕಿದ್ದಕ್ಕೆ 2.5 ಲಕ್ಷ ರೂ. ದಂಡ

    ಡೆಹ್ರಾಡೂನ್: ಉತ್ತರಾಖಂಡ್‍ನ ಔಲಿಯ ದಿ ಸ್ಕೀ ರೆಸಾರ್ಟ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮೂಲದ ಉದ್ಯಮಿ ಗುಪ್ತಾ ಸಹೋದರರ ಮದುವೆ ವೇಳೆ ಎಲ್ಲೆಂದರಲ್ಲಿ ಕಸ ಎಸೆದಿರುವುದು ಹಾಗೂ ಬಯಲು ಮಲ ವಿಸರ್ಜನೆ ಮಾಡಿರುವುದಕ್ಕೆ ಜೋಶಿಮಠ್ ನಗರ ಪಾಲಿಕೆ 2.5 ಲಕ್ಷ ದಂಡ ವಿಧಿಸಿದೆ.

    ಬಯಲು ಮಲ ವಿಸರ್ಜನೆ ಮಾಡಿದ್ದಕ್ಕೆ 1 ಲಕ್ಷ ರೂ., ಎಲ್ಲೆಂದರಲ್ಲಿ ಕಸ ಹಾಕಿದ್ದಕ್ಕೆ 1.5 ಲಕ್ಷ ರೂ. ದಂಡ ವಿಧಿಸಿದೆ. ಗುಪ್ತಾ ಸಹೋದರರ ಮದುವೆಯನ್ನು ಉತ್ತರಾಖಂಡ್‍ನ ಪ್ರವಾಸಿ ತಾಣವಾದ ಔಲಿಯ ಪರ್ವತ ಪ್ರದೇಶದ ಸುಂದರ ತಾಣದಲ್ಲಿ ಆಯೋಜಿಸಲಾಗಿತ್ತು. ಮದುವೆ ಸಮಾರಂಭದ ಎಲ್ಲ ಕಸವನ್ನು ನೇರವಾಗಿ ನಗರಪಾಲಿಕೆ ಸಿಬ್ಬಂದಿಯವರೇ ಸ್ವಚ್ಛಗೊಳಿಸುವುದು ನಿಯಮ, ಇದಕ್ಕೆ ವ್ಯವಸ್ಥೆಯನ್ನೂ ಮಾಡಲಾಗಿತ್ತು. ನಗರಪಾಲಿಕೆ ಕಸ ವಿಲೇವಾರಿಗೆ ಬಿಲ್ ಸಹ ನೀಡಿತ್ತು. ಆದರೂ ಸಹ ಕಸವನ್ನು ಎಲ್ಲೆಂದರಲ್ಲಿ ಚೆಲ್ಲಲಾಗಿದೆ, ಅಲ್ಲದೆ, ಬಯಲು ಮಲ ವಿಸರ್ಜನೆ ಮಾಡಲಾಗಿದೆ ಎಂದು ಪಾಲಿಕೆ 2,5 ಲಕ್ಷ ರೂ. ದಂಡ ವಿಧಿಸಿದೆ.

    ಅಲ್ಲದೆ, ರೆಸಾರ್ಟ್ ಬಳಿಯ ಕಸವನ್ನು ತೆರವುಗೊಳಿಸಲು ಈಗಾಗಲೇ ಪಾಲಿಕೆ 8.14 ಲಕ್ಷ ರೂ. ಬಿಲ್ ಮಾಡಿದ್ದು, ಗುಪ್ತಾ ಸಹೋದರರು ಈಗಾಗಲೇ 5.54 ಲಕ್ಷ ರೂ.ಗಳನ್ನು ಮುಂಗಡವಾಗಿ ಪಾವತಿಸಿದ್ದಾರೆ. ಉಳಿದ ಹಣವನ್ನು ನೀಡುವಂತೆ ಗುಪ್ತಾ ಸಹೋದರರಿಗೆ ತಿಳಿಸಲಾಗಿದೆ. ಅಲ್ಲದೆ 54 ಸಾವಿರ ರೂ.ಗಳನ್ನು ಬಳಕೆದಾರರ ಶುಲ್ಕ ಎಂದು ವಿಧಿಸಲಾಗಿದೆ.

    ಪಾಲಿಕೆಯ ಬಿಲ್ ಹಾಗೂ ದಂಡವನ್ನು ಶೀಘ್ರವೇ ಪಾವತಿಸುವುದಾಗಿ ಗುಪ್ತಾ ಸಹೋದರರು ತಿಳಿಸಿದ್ದಾರೆ. ಈ ಮದುವೆಯೊಂದರಲ್ಲೇ ಜೋಶಿಮಠ್ ನಗರ ಪಾಲಿಕೆ 321 ಕ್ವಿಂಟಾಲ್ ಕಸವನ್ನು ಸಂಗ್ರಹಿಸಿದೆ. ಆದರೂ ಸಹ ಸಮಾರಂಭದ ಸ್ಥಳದಲ್ಲಿ ಎಲ್ಲೆಂದರಲ್ಲಿ ಕಸ ಹಾಕಲಾಗಿದೆ.

    ಈ ಮಧ್ಯೆ ಭದ್ರತಾ ಠೇವಣಿಯಾಗಿ ಉತ್ತರಾಖಂಡ್‍ನ ಚಮೋಲಿ ಜಿಲ್ಲಾಡಳಿತದಲ್ಲಿ ಗುಪ್ತಾ ಸಹೋದರರು ಇಟ್ಟ 3 ಕೋಟಿ ರೂ. ಹಣದ ಕುರಿತು ಜುಲೈ 8 ರಂದು ನೈನಿತಾಲ್ ಹೈ ಕೋರ್ಟ್ ವಿಚಾರಣೆಯ ಮರುದಿನ ನಿರ್ಧರಿಸಲಾಗುವುದು. ನೈನಿತಾಲ್ ಹೈ ಕೋರ್ಟ್ ಆದೇಶದ ಮೇರೆಗೆ 13 ಅಧಿಕಾರಿಗಳ ತಂಡ ಔಲಿಯಲ್ಲಿ ನಡೆಯುವ ಸಮಾರಂಭಗಳ ಮೇಲೆ ಕಣ್ಣಿಟ್ಟಿದ್ದು, ಎಲ್ಲ ಕಾರ್ಯಕ್ರಮಗಳ ವಿಡಿಯೋ ಚಿತ್ರೀಕರಣ ಮಾಡುತ್ತದೆ.

    ಅರಣ್ಯ, ಉತ್ತರಾಖಂಡ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಚಿಮೋಲಿ ಜಿಲ್ಲಾಡಳಿತ, ಉತ್ತರಾಖಂಡ್ ಜಲ್ ಸಂಸ್ಥಾನ್, ಆದಾಯ, ಪಿಡಬ್ಲ್ಯುಡಿ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 13 ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಅಲ್ಲದೆ, ಔಲಿ ಪ್ರದೇಶದಲ್ಲಿ ಹೆಲಿಕಾಪ್ಟ್‍ರ್ ಲ್ಯಾಂಡಿಂಗ್ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಾಪರ್‍ಗಳು ಗಣ್ಯರನ್ನು ಕರೆ ತರಲು ಅವಕಾಶ ನೀಡಲಾಗಿದೆ. ಅಲ್ಲಿಂದ ಕಾರ್ ಮೂಲಕ ಗಣ್ಯರು ಮದುವೆ ಸಮಾರಂಭವಕ್ಕೆ ತೆರಳಬಹುದಾಗಿದೆ.

    ಹೈ ಕೋರ್ಟ್ ಆದೇಶದನ್ವಯ ಕೇವಲ 150 ಗಣ್ಯರಿಗೆ ಮಾತ್ರ ಅವಕಾಶವಿತ್ತು. ಇದರಲ್ಲಿ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಬಾಬಾ ರಾಮ್‍ದೇವ್ ಹಾಗೂ ಇತರ ಗಣ್ಯರು ನವ ಜೋಡಿಗಳನ್ನು ಹಾರೈಸಿದ್ದರು. ಕತ್ರಿನಾ ಕೈಫ್ ಸೇರಿದಂತೆ ಇತರ ಬಾಲಿವುಡ್ ನಟ, ನಟಿಯರೂ ಸಹ ಭಾಗವಹಿಸಿದ್ದರು.

    ಮುಖ್ಯಮಂತ್ರಿ ರಾವತ್ ಅವರು ಈ ಹಿಂದೆಯೇ ಸೂಚಿಸಿದ್ದು, ಪರಿಸರಕ್ಕೆ ಹಾನಿಯುಂಟು ಮಾಡುವ ಯಾವುದೇ ಕೃತ್ಯಗಳನ್ನು ಸಹಿಸುವುದಿಲ್ಲ. ಔಲಿಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ಔಲಿಯ ಸ್ಕೀ ರೆಸಾರ್ಟ್‍ನ್ನು ಇದೀಗ ಸ್ವಚ್ಛಗೊಳಿಸಲಾಗಿದ್ದು, ಎಲ್ಲ ಕಸವನ್ನು ತೆರವುಗೊಳಿಸಲಾಗಿದೆ. ಜೂ. 30ರೊಳಗೆ ಸ್ವಚ್ಛಗೊಳಿಸುವುದಾಗಿ ಜೋಶಿಮಠ್ ಪಾಲಿಕೆ ತಿಳಿಸಿತ್ತು. ಅದರಂತೆ ಎಲ್ಲ ಕಸವನ್ನು ಸ್ವಚ್ಛಗೊಳಿಸಲಾಗಿದೆ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ನೌತಿಯಾಲ್ ತಿಳಿಸಿದ್ದಾರೆ.

  • ಸೈನ್ಯಕ್ಕೆ ಸೇರಿದ 382 ಕೆಡೆಟ್‍ಗಳು – ಸಂಭ್ರಮದ ವಿಡಿಯೋ ವೈರಲ್

    ಸೈನ್ಯಕ್ಕೆ ಸೇರಿದ 382 ಕೆಡೆಟ್‍ಗಳು – ಸಂಭ್ರಮದ ವಿಡಿಯೋ ವೈರಲ್

    ಡೆಹ್ರಾಡೂನ್: ತರಬೇತಿ ಬಳಿಕ ಅಧಿಕೃತವಾಗಿ ಭಾರತೀಯ ಸೇನೆ ಸೇರಿದ ಕೆಡೆಟ್‍ಗಳ ಸಂಭ್ರಮದ ವಿಡಿಯೋ ಸಖತ್ ವೈರಲ್ ಆಗಿದೆ.

    ಉತ್ತರಾಖಂಡದ ಡೆಹ್ರಾಡೂನ್‍ನಲ್ಲಿರುವ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ ಸೇವೆಗೆ ಸೇರಲಿರುವ ಕೆಡೆಟ್‍ಗಳ ಅಂತಿಮ ಪರೇಡ್ ನಡೆಸಲಾಗಿತ್ತು. ಪರೇಡ್ ಬಳಿಕ ಯೋಧರು ಪರಸ್ಪರ ತಬ್ಬಿಕೊಂಡು ಕುಣಿದು ಕುಪ್ಪಳಿಸಿದರು. ಬಳಿಕ ವೃತ್ತಾಕಾರದಲ್ಲಿ ಸೇರಿ ಡಿಪ್ಸ್ ಹೊಡೆದು ಸಂಭ್ರಮಿಸಿದ್ದಾರೆ. ಇದನ್ನೂ ಓದಿ:  ನಮ್ಮನ್ನು ನಂಬಿ ದೇಶ ಭಯವಿಲ್ಲದೆ ಮಲಗುತ್ತೆ, ತಾಪಮಾನಕ್ಕೆಲ್ಲ ನಾವು ಹೆದರಲ್ಲ: ಬಿಎಸ್‍ಎಫ್ ಯೋಧ

    ಯೋಧರ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಜೈ ಹಿಂದ್, ಭಾರತ್ ಮಾತಾಕೀ ಜೈ ಎಂದು ಹೇಳಿ ಯೋಧರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಈ ಮೂಲಕ 382 ಅಧಿಕಾರಿಗಳು ಭಾರತೀಯ ಸೇನೆ ಸೇರಿದ್ದಾರೆ. ಅಂತಿಮ ಪರೇಡ್‍ನಲ್ಲಿ 77 ವಿದೇಶಿಯರು ಸೇರಿದಂತೆ ಒಟ್ಟು 459 ಕೆಡೆಟ್‍ಗಳು ಭಾಗಹಿಸಿದ್ದರು.

  • ವಯಾಗ್ರಾಕ್ಕಾಗಿ ಎರಡು ಗ್ರಾಮಗಳ ಕಿತ್ತಾಟ- ಹಿಮಾಲಯದ ಪರ್ವತದಲ್ಲಿ ನಿಷೇಧಾಜ್ಞೆ

    ವಯಾಗ್ರಾಕ್ಕಾಗಿ ಎರಡು ಗ್ರಾಮಗಳ ಕಿತ್ತಾಟ- ಹಿಮಾಲಯದ ಪರ್ವತದಲ್ಲಿ ನಿಷೇಧಾಜ್ಞೆ

    ಡೆಹ್ರಾಡೂನ್: ಅತ್ಯಮೂಲ್ಯ ನೈಸರ್ಗಿಕವಾಗಿ ದೊರೆಯುವ ‘ಕೀಡಾ ಜಾಡಿ’ ಅಥವಾ ಹಿಮಾಲಯನ್ ವಯಾಗ್ರಾಕ್ಕಾಗಿ ಉತ್ತರಾಖಂಡದ ಎರಡು ಗ್ರಾಮಗಳ ಜನರು ಕಿತ್ತಾಡಿದ್ದು ನಿಷೇಧಾಜ್ಞೆ ಜಾರಿಯಾಗಿದೆ.

    ನೈಸರ್ಗಿಕ ವಯಾಗ್ರಾ ಸಂಗ್ರಹಿಸುವ ವಿಚಾರವಾಗಿ ಪಿತೋರ್‍ಗಢ ಜಿಲ್ಲೆಯ ಬುಯಿ ಮತ್ತು ಪಾಟೋ ಗ್ರಾಮಗಳ ಜನರು ಜಗಳ ಮಾಡಿಕೊಂಡಿದ್ದಾರೆ. ವಯಾಗ್ರಾ ಬೆಳೆಯುವ ಪ್ರದೇಶ ನಮಗೆ ಸೇರಿದ್ದು ಎಂದು ಎರಡೂ ಗ್ರಾಮದವರು ಶಸ್ತ್ರಾಸ್ತ್ರ ಹಿಡಿದು ನಿಂತಿದ್ದಾರೆ.

    ಕಿತ್ತಾಟ ಯಾಕೆ?
    ಪಿತೋರ್‌ಗಢ ಜಿಲ್ಲೆಯ ಹಿಮಾಲಯ ಪ್ರದೇಶ ರಾಲಂ ಮತ್ತು ರಾಜರಾಂಘ ಬಗ್ಯಾಲ್ಸ್ ಹುಲ್ಲುಗಾವಲಿನಲ್ಲಿ ವಯಾಗ್ರಾ ಬೆಳೆಯುತ್ತಿದೆ. ಪರ್ವತದ ಎತ್ತರದಲ್ಲಿ ಬೆಳೆಯುವ ವಯಾಗ್ರಾವನ್ನು ಧಾರ್ಚುಲಾ ಮತ್ತು ಮುನ್ಸಿಯರಿ ಜನರು ಸಂಗ್ರಹಿಸುತ್ತಾರೆ. ಕೀಡಾ ಜಾಡಿ ಅಥವಾ ಹಿಮಾಲಯದ ವಯಾಗ್ರಾ ಸಸ್ಯ ಕಾಮೋತ್ತೇಜಕ ಮಾತ್ರೆಗಳ ರೀತಿಯಲ್ಲಿ ಕೆಲಸ ಮಾಡುತ್ತದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಕೆಜಿ ‘ಕೀಡಾ ಜಾಡಿ’ಯ ಬೆಲೆ 18 ಲಕ್ಷ ರೂ. ಇದೆ. ಇದು ಬೇಸಿಗೆ ಕಾಲದಲ್ಲಿ ಮಾತ್ರ ಬೆಳೆಯುತ್ತದೆ.

    ಬುಯಿ ಮತ್ತು ಪಾಟೋ ಗ್ರಾಮಗಳ ಜನರು ರಾಲಂ ಹುಲ್ಲುಗಾವಲು ಪ್ರದೇಶ ತಮಗೇ ಸೇರಿದ್ದು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ ವಯಾಗ್ರವನ್ನು ಯಾರೂ ಮುಟ್ಟದಂತೆ ಕಾವಲು ಕಾಯುತ್ತಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪರಸ್ಪರ ಒಮ್ಮತದಿಂದ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಜಿಲ್ಲಾಡಳಿತವು ಎರಡೂ ಗ್ರಾಮದ ಜನರಿಗೆ ಸೂಚನೆ ನೀಡಿತ್ತು.

    ಸ್ವತಃ ಜಿಲ್ಲಾಧಿಕಾರಿಗಳು ಎರಡೂ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರಿಗೆ ಕಿತ್ತಾಟ ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಆದರೆ ಗ್ರಾಮಸ್ಥರ ಮಧ್ಯೆ ಸಮಸ್ಯೆ ಇತ್ಯರ್ಥವಾಗದ ಹಿನ್ನಲೆಯಲ್ಲಿ ಹಿಮಾಲಯದ ಗುಡ್ಡಾಗಾಡು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.

  • ಆಧ್ಯಾತ್ಮದತ್ತ ಮೋದಿ ಚಿತ್ತ- ಕೇದಾರನಾಥದಲ್ಲಿ ಪ್ರಧಾನಿಯಿಂದ ಪೂಜೆ

    ಆಧ್ಯಾತ್ಮದತ್ತ ಮೋದಿ ಚಿತ್ತ- ಕೇದಾರನಾಥದಲ್ಲಿ ಪ್ರಧಾನಿಯಿಂದ ಪೂಜೆ

    ಡೆಹ್ರಾಡೂನ್: ಅಧಿಕಾರ ಯುದ್ಧ, ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರವೆಲ್ಲ ಮುಗಿದ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಆಧ್ಯಾತ್ಮದತ್ತ ತನ್ನ ಚಿತ್ತ ಹರಿಸಿದ್ದಾರೆ.

    ಉತ್ತರಾಖಂಡ್ ರಾಜ್ಯದ ಕೇದಾರನಾಥದಲ್ಲಿ ಮೋದಿ ಪೂಜೆ ನಡೆಸುದ್ದಾರೆ. ಭೂಮಿಯಿಂದ 11, 755 ಅಡಿ ಎತ್ತರದಲ್ಲಿರುವ ಈ ಪವಿತ್ರ ಭೂಮಿ ಶಿವನ ಪೂಜಾ ಸ್ಥಾನವಾಗಿದೆ. ಈ ಸ್ಥಳದಲ್ಲಿ ಇಂದು ಪ್ರಧಾನಿಯವರು ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ. ಬದರಿನಾಥಕ್ಕೂ ಭೇಟಿ ನೀಡುವ ಸಾಧ್ಯತೆಗಳಿವೆ.

    ದೀಪಾವಳಿ ಹಬ್ಬದ ಹೊತ್ತಲ್ಲಿ ಅಂದರೆ ಕಳೆದ ವರ್ಷದ ನವೆಂಬರ್‍ನಲ್ಲಿ ಮೋದಿ ಕೇದಾರನಾಥದಲ್ಲಿ ಪೂಜೆ ಸಲ್ಲಿಸಿದ್ದರು. 2017ರಲ್ಲಿ ಚಳಿಗಾಲದ ಮುಗಿದು ದೇವಸ್ಥಾನದ ಬಾಗಿಲು ತೆರೆದ ಬೆನ್ನಲ್ಲೇ ಮೇ ತಿಂಗಳಲ್ಲೂ ದೇವಸ್ಥಾನದ ಬಾಗಿಲು ಮುಚ್ಚುವುದಕ್ಕೂ ಮೊದಲು ಅಕ್ಟೋಬರ್‍ನಲ್ಲಿ ಮೋದಿ ಕೇದಾರನಾಥನ ದರ್ಶನ ಪಡೆದಿದ್ದರು. ಇಂದು ಪ್ರಧಾನಿ ಮೋದಿ ಕೇದಾರನಾಥದಲ್ಲಿ ತಂಗಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

    ಕಳೆದ 2 ತಿಂಗಳಿಂದ ನಿರಂತರವಾಗಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿಯವರು ತೊಡಗಿಕೊಂಡಿದ್ದರು. ನಾಳೆ ಅಂತಿಮ ಹಂತದ ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಶುಕ್ರವಾರ ತೆರೆಬಿದ್ದಿದೆ. ಈ ಹಿನ್ನೆಲೆಯಲ್ಲಿ ಮೋದಿಯವರು ಸಂಪೂರ್ಣವಾಗಿ ರಿಲ್ಯಾಕ್ಸ್ ಮೂಡಿಗೆ ತೆರಳಿದ್ದು, ಧ್ಯಾನ ಮಾಡಲು ಉತ್ತರಾಖಂಡದ ಕೇದರನಾಥ್‍ಗೆ ಭೇಟಿ ನೀಡಿದ್ದಾರೆ. ನಾಳೆ ಮಧ್ಯಾಹ್ನದ ಬಳಿಕ ಪ್ರಧಾನಿಯವರು ದೆಹಲಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

    ಮೇ 9ರ ಬಳಿಕ ದರ್ಶನಕ್ಕಾಗಿ ಕೇದಾರನಾಥ ದೇವಾಲಯವನ್ನು ದರ್ಶನಕ್ಕಾಗಿ ತೆರೆಯಲಾಗಿದ್ದು, ಪ್ರಧಾನಿಯಾದ ಬಳಿಕ ಮೋದಿಯವರು 4ನೇ ಬಾರಿಗೆ ಕೇದರನಾಥಕ್ಕೆ ಭೇಟಿ ನೀಡಿದ್ದಾರೆ.

  • ದಲಿತ ಯುವಕ ಮೇಲ್ವರ್ಗದವರ ಮುಂದೆ ಊಟ ಮಾಡಿದ್ದೇ ತಪ್ಪಾಯ್ತು!

    ದಲಿತ ಯುವಕ ಮೇಲ್ವರ್ಗದವರ ಮುಂದೆ ಊಟ ಮಾಡಿದ್ದೇ ತಪ್ಪಾಯ್ತು!

    ಡೆಹ್ರಾಡೂನ್: 23 ವರ್ಷದ ದಲಿತ ಯುವಕನೊಬ್ಬ ಮೇಲ್ವರ್ಗದ ಜನರ ಮುಂದೆ ಊಟ ಮಾಡಿ ತನ್ನ ಪ್ರಾಣವನ್ನೇ ಕಳೆದುಕೊಂಡ ಅಮಾನವೀಯ ಘಟನೆಯೊಂದು ಉತ್ತರಾಖಂಡ್ ನ ಥೆರಿ ಜಿಲ್ಲೆಯಲ್ಲಿ ನಡೆದಿದೆ.

    ಮೃತ ದುರ್ದೈವಿ ಯುವಕನನ್ನು ಜಿತೇಂದ್ರ ಎಂದು ಗುರುತಿಸಲಾಗಿದೆ. ಈ ಘಟನೆ ಏಪ್ರಿಲ್ 26ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಜೀತೆಂದ್ರ ಭಾನುವಾರ ಥೆರಿ ಜಿಲ್ಲೆಯ ಶ್ರಿಕೋಟ್ ಗ್ರಾಮದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೇಲ್ವರ್ಗದವರ ಮುಂದೆ ಕುರ್ಚಿಯಲ್ಲಿ ಕುಳಿತುಕೊಂಡು ತನ್ನ ಪಾಡಿಗೆ ತಾನು ಊಟ ಮಾಡಿಕೊಂಡಿದ್ದನು. ಈ ವೇಳೆ ಏಳು ಮಂದಿ ಬಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಸದ್ಯ 7 ಮಂದಿ ಆರೋಪಿಗಳಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ಜಿತೇಂದ್ರ ಮೇಲ್ವರ್ಗದ ಜನರ ಮುಂದೆ ಕುಳಿತು ಊಟ ಮಾಡುತ್ತಿದ್ದುದರಿಂದ ತಾಳ್ಮೆ ಕಳೆದುಕೊಂಡು ಅವರು ಆತನಿಗೆ ಥಳಿಸಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗೆ ಹಿರಿಯ ಪೊಲೀಸ್ ಅಧಿಕಾರಿ ಉತ್ತಮ್ ಸಿಂಗ್ ಜಿಮ್ ವಾಲಾ ಹೇಳಿದ್ದಾರೆ.

    ಯುವಕನ ಮೇಲೆ ಹಲ್ಲೆ ನಡೆದ ಪರಿಣಾಮ ಗಂಭೀರ ಗಾಯಗೊಂಡು ಡೆಹ್ರಾಡೋನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೇ 9 ದಿನಗಳ ನಂತರ ಆತ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾನೆ ಎಂದು ಅವರು ವಿವರಿಸಿದ್ದಾರೆ.

    ಘಟನೆ ಸಂಬಂಧ ಮೃತನ ತಂಗಿ ನೀಡಿದ ದೂರಿನಂತೆ ಗಜೇಂದ್ರ ಸಿಂಗ್, ಸೊಬಾನ್ ಸಿಂಗ್, ಕುಶಲ್ ಸಿಂಗ್, ಗಬ್ಬರ್ ಸಿಂಗ್, ಗಂಭೀರ್ ಸಿಂಗ್, ಹರ್ಬಿರ್ ಸಿಂಗ್ ಹಾಗೂ ಹುಕುಮ್ ಸಿಂಗ್ ಎಂಬ 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬುದಾಗಿ ವರದಿಯಾಗಿದೆ.

  • ಹರಿದ್ವಾರದ ಮಹಿಳೆಯನ್ನು ಉಪಚರಿಸಿ ಪೊಲೀಸರಿಗೆ ಮಾಹಿತಿ ನೀಡಿದ ಚಿಕ್ಕಮಗಳೂರಿಗರು

    ಹರಿದ್ವಾರದ ಮಹಿಳೆಯನ್ನು ಉಪಚರಿಸಿ ಪೊಲೀಸರಿಗೆ ಮಾಹಿತಿ ನೀಡಿದ ಚಿಕ್ಕಮಗಳೂರಿಗರು

    ಚಿಕ್ಕಮಗಳೂರು: ಉತ್ತರಾಖಂಡ್ ರಾಜ್ಯದ ಹರಿದ್ವಾರ ಮೂಲದ ಮಹಿಳೆಯೊಬ್ಬರನ್ನು ಚಿಕ್ಕಮಗಳೂರಿನ ಜನತೆ ಉಪಚರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕಳೆದ ಮೂರ್ನಾಲ್ಕು ದಿನಗಳಿಂದ ಅನ್ನ-ನೀರು ಇಲ್ಲದೆ ನಿತ್ರಾಣಗೊಂಡು ಮೂಡಿಗೆರೆ ತಾಲೂಕಿನ ಬಾಳೂರಿನ ಬಸ್ ನಿಲ್ದಾಣದಲ್ಲಿ ಸುಮಾರು 55 ವರ್ಷದ ಈ ಮಹಿಳೆಯೊಬ್ಬರು ಬಿದ್ದಿದ್ದರು. ಉರ್ದು ಮಾತನಾಡುತ್ತಿರುವ ಇವರು ತನ್ನ ಹೆಸರು ಅನಿಸ್ ಕೋಟಾನ್ ಎಂದು ಹೇಳುತ್ತಿದ್ದಾರೆ.

    ಪತಿ ನಿಸಾರ್ ಅಹಮದ್ ತೀರಿಕೊಂಡ ಬಳಿಕ ದಾರಿ ತಪ್ಪಿ ಬಸ್ಸೊಂದನ್ನ ಹತ್ತಿ ಇಲ್ಲಿಗೆ ಬಂದಿರೋದಾಗಿ ಹೇಳುತ್ತಿದ್ದಾರೆ. ನನ್ನ ಸ್ವಂತ ಊರು ಹರಿದ್ವಾರದ ಬಳಿ ಇರೋದು. ನಾನು ಹರಿದ್ವಾರಕ್ಕೆ ಹೋದ್ರೆ ಅಲ್ಲಿಂದ ನನ್ನ ಗ್ರಾಮಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಕಳೆದ ಎರಡು ದಿನಗಳಿಂದ ಬಸ್ ನಿಲ್ದಾಣದಲ್ಲೇ ತಂಗಿದ್ದ ಈಕೆಯನ್ನು ಸ್ಥಳೀಯರು ಉಪಚರಿಸಿ, ಊಟ ಹಾಕಿ, ಹೊಸ ಬಟ್ಟೆ ಕೊಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  • ಹರಿದ್ವಾರದಲ್ಲಿ ಹುತಾತ್ಮ ಯೋಧನಿಗೆ ಅಂತಿಮ ನಮನ- ಹರಿದುಬಂತು ಜನಸಾಗರ

    ಹರಿದ್ವಾರದಲ್ಲಿ ಹುತಾತ್ಮ ಯೋಧನಿಗೆ ಅಂತಿಮ ನಮನ- ಹರಿದುಬಂತು ಜನಸಾಗರ

    ಡೆಹ್ರಾಡೂನ್(ಉತ್ತರಾಖಂಡ್): ಜಮ್ಮು- ಕಾಶ್ಮೀರದ ರಜೌರಿಯಲ್ಲಿ ಶನಿವಾರ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸ್ಫೋಟಗೊಂಡು ಮೇಜರ್ ಚಿತ್ರೇಶ್ ಬಿಸ್ತ್ ಹುತಾತ್ಮರಾಗಿದ್ದು, ಇಂದು ಅವರಿಗೆ ಹರಿದ್ವಾರದಲ್ಲಿ ಅಂತಿಮ ನಮನ ಸಲ್ಲಿಸಲಾಗುತ್ತಿದೆ.

    ಒಂದೆಡೆ ಪುಲ್ವಾಮಾದಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ಮಾಡುತ್ತಿದೆ. ಇನ್ನೊಂದೆಡೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಅಂತಿಮ ಯಾನ ನಡೆಯುತ್ತಿದೆ. ಬಿಸ್ತ್ ಅವರಿಗೆ ಅಂತಿಮ ನಮನ ಸಲ್ಲಿಸಲು ಹರಿದ್ವಾರದಲ್ಲಿ ಜನಸಾಗರವೇ ಹರಿದು ಬರುತ್ತಿದ್ದು, `ಅಮರ್ ರಹೇ’ `ಅಮರ್ ರಹೇ’ ಎಂಬ ಘೋಷಣೆ ಕೂಗುತ್ತಿದ್ದಾರೆ. ಸಾವಿರಾರು ಜನ ಅಂತಿಮ ದರ್ಶನ ಪಡೆಯಲು ಬರುತ್ತಿದ್ದು, ಇನ್ನು ಹಲವರು ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

    ಹುತಾತ್ಮರಾಗಿದ್ದು ಹೇಗೆ?
    ಪುಲ್ವಾಮಾ ದಾಳಿ ನಡೆದು 40 ಸೈನಿಕರು ಹುತಾತ್ಮರಾದ ಬೆನ್ನಲ್ಲೇ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ಬಳಿ ನೆಲದ ಒಳಗಡೆ ಉಗ್ರರು ಹುದುಗಿಸಿಟ್ಟಿದ್ದ ಐಇಡಿ ಸ್ಫೋಟಗೊಂಡು ಸೇನೆಯ ಅಧಿಕಾರಿ ಚಿತ್ರೇಶ್ ಹುತಾತ್ಮರಾಗಿದ್ದರು. ಶನಿವಾರ ಸಂಜೆ 3 ಗಂಟೆಯ ವೇಳೆಗೆ ನಡೆದ ಈ ಘಟನೆಯಲ್ಲಿ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಗಡಿ ನಿಯಂತ್ರಣ ರೇಖೆಯ ಬಳಿಯಿಂದ 1.5 ಕಿ.ಮೀ ದೂರದಲ್ಲಿ ಐಇಡಿಯನ್ನು ಇಡಲಾಗಿತ್ತು. ಗಡಿ ನಿಯಂತ್ರಣ ರೇಖೆಯ ಬಳಿ ಸೇನೆಯ ಅಧಿಕಾರಿಗಳು ಗಸ್ತು ತಿರುಗುವ ವೇಳೆ ಮಣ್ಣಿನಲ್ಲಿ ಹೂತ್ತಿದ್ದ ವಸ್ತು ಪತ್ತೆಯಾಗಿದೆ. ಈ ವಸ್ತುವನ್ನು ಮಣ್ಣಿನಿಂದ ತೆಗೆಯುವಾಗ ಸ್ಫೋಟಗೊಂಡಿತ್ತು. ಇದನ್ನೂ ಓದಿ; ಮುಂದಿನ ತಿಂಗ್ಳು ನಿಶ್ಚಯವಾಗಿತ್ತು ಹುತಾತ್ಮರಾದ ಮೇಜರ್ ಮದ್ವೆ

    ಮದುವೆ ಫಿಕ್ಸ್ ಆಗಿತ್ತು:
    31 ವರ್ಷದ ಮೇಜರ್ ಬಿಸ್ತ್ ಅವರಿಗೆ ಮದುವೆ ನಿಗದಿಯಾಗಿದ್ದು, ಇದೇ ತಿಂಗಳು 28ರಂದು ಊರಿಗೆ ತೆರಳುವವರಿದ್ದರು. ಮಾರ್ಚ್ 7ರಂದು ಮದುವೆ ಫಿಕ್ಸ್ ಆಗಿತ್ತು. ಹೀಗಾಗಿ ಅವರು ಮದುವೆ ತಯಾರಿಯಲ್ಲಿದ್ದರು. ಆದ್ರೆ ಇದೀಗ ಮೇಜರ್ ಚಿತ್ರೇಶ್, ಫಿಯಾನ್ಸಿ, ಫೋಷಕರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇವರ ತಂದೆ ನಿವೃತ್ತ ಪೊಲೀಸ್ ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ.

    ಇಂದು ಭಾರತದಿಂದ ಪ್ರತಿಕಾರ:
    ಆತ್ಮಾಹುತಿ ದಾಳಿ ನಡೆದ ಆವಂತಿಪೂರದಿಂದ ಕೇವಲ 10 ಕಿ.ಮೀ ದೂರದಲ್ಲಿ ಉಗ್ರರು ತಲೆಮರೆಸಿಕೊಂಡಿದ್ದರು. ಭಾನುವಾರ ರಾತ್ರಿ 8.30ರ ಹೊತ್ತಿಗೆ ಪಿಂಗ್ಲಾನ್ ಪ್ರಾಂತ್ಯದ ಕಟ್ಟಡವೊಂದರಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಸೇನೆಗೆ ಸಿಕ್ಕಿದೆ. ಬಳಿಕ ಮಧ್ಯರಾತ್ರಿ ಹೊತ್ತಿಗೆ ಪಿಂಗ್ಲಾನ್ ಪ್ರಾಂತ್ಯದ ಆ ಕಟ್ಟಡವನ್ನು ಸೇನೆ ಸುತ್ತುವರಿದಿತ್ತು. 55 ರಾಷ್ಟ್ರೀಯ ರೈಫಲ್ಸ್ ರೆಜಿಮೆಂಟ್, ಪೊಲೀಸ್ ಮತ್ತು ಸಿಆರ್‍ಪಿಎಫ್ ಒಳಗೊಂಡು ಭಾರತೀಯ ಸೇನೆ ಈ ಕಾರ್ಯಚರಣೆ ನಡೆಸಿ ಮೊದಲು ಉಗ್ರರಿಗೆ ಶರಣಾಗಲು ಸೂಚಿಸಿದ್ದರು. ಆದರೆ ಉಗ್ರರು ಶರಣಾಗುವ ಬದಲು ಯೋಧರಿಗೆ ಗುಂಡಿನ ದಾಳಿ ನಡೆಸಿದ್ದರು. ಇಂದು ಬೆಳಗ್ಗಿನ ಜಾವದವರೆಗೂ ನಿರಂತರವಾಗಿ ಭೀಕರ ಗುಂಡಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಯೋಧರ ಬಲಿಗೆ ಕಾರಣನಾದ ಮಾಸ್ಟರ್ ಮೈಂಡ್ ಫಿನಿಶ್!

    ಗುಂಡಿನ ಚಕಮಕಿ ವೇಳೆ ಓರ್ವ ಮೇಜರ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಆದರೂ ಎದೆಗುಂದದೆ ಯೋಧರು ಕಾರ್ಯಾಚರಣೆ ಮುಂದುವರಿಸಿ ಕಾರ್ಯಾಚರಣೆ ನಡೆಸಿ ಉಗ್ರರು ಅಡಗಿದ್ದ ಇಡೀ ಕಟ್ಟಡವನ್ನೇ ಉಡಾಯಿಸಿದ್ದಾರೆ. ಪರಿಣಾಮ ಸದ್ಯ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ರಕ್ತ ರಕ್ಕಸ ಅಬ್ದುಲ್ ರಶೀದ್ ಘಾಸಿ ಹಾಗೂ ಜೈಷ್ ಸಂಘಟನೆಯ ಮತ್ತೋರ್ವ ಕಮಾಂಡರ್ ಕಮ್ರಾನ್‍ನನ್ನು ಯೋಧರು ಹತ್ಯೆ ಮಾಡಿದ್ದಾರೆ. ಸುದೀರ್ಘ 9 ಗಂಟೆಗಳ ಗುಂಡಿನ ಚಕಮಕಿ ನಂತರ ಈ ಕಾರ್ಯಚರಣೆ ಯಶಸ್ವಿಯಾಗಿ ನಡೆದಿದೆ. ಇನ್ನೂ 6 ಮಂದಿ ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಭಾರತೀಯ ಸೇನೆ ತನ್ನ ಕಾರ್ಯಾಚರಣೆ ಮುಂದುವರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಶ್ವವಿಖ್ಯಾತ ಕೇದಾರನಾಥ ದೇವಾಲಯ ಹಿಮಾವೃತ

    ವಿಶ್ವವಿಖ್ಯಾತ ಕೇದಾರನಾಥ ದೇವಾಲಯ ಹಿಮಾವೃತ

    ಡೆಹ್ರಾಡೂನ್: ಉತ್ತರಾಖಂಡದಲ್ಲಿ ಹಿಮಪಾತ ಮುಂದುವರಿದಿದ್ದು, ವಿಶ್ವವಿಖ್ಯಾತ ಕೇದಾರನಾಥ ದೇವಾಲಯವು ಹಿಮದಿಂದ ಆವೃತವಾಗಿದೆ.

    ಕೇದಾರನಾಥ ದೇವಾಲಯವು ಹಿಮ ಆವೃತವಾಗಿರುವ ದೃಶ್ಯವನ್ನು ಎತ್ತರದಿಂದ ಕ್ಲಿಕ್ಕಿಸಲಾಗಿದೆ. ಈ ಫೋಟೋ ವೈರಲ್ ಆಗಿದ್ದು, ದೃಶ್ಯದಲ್ಲಿ ಗೋಪುರ, ಕೆಲವು ಕಟ್ಟಡಗಳ ಮಳಿಗೆಗಳು ಮಾತ್ರ ಕಾಣಿಸುತ್ತಿವೆ. ಸದ್ಯ ದೇವಾಲಯಕ್ಕೆ ಭಕ್ತರ ಭೇಟಿಯನ್ನು ತಡೆಹಿಡಿಯಲಾಗಿದೆ.

    ಎಲ್ಲಿದೆ ಈ ದೇವಾಲಯ?:
    ಕೇದಾರನಾಥವು ಹಿಂದುಗಳ ಪವಿತ್ರ ಹಾಗೂ ಪ್ರಸಿದ್ಧ ದೇವಾಲಯ. ಉತ್ತರಾಖಂಡ ರಾಜ್ಯದ ಚಮೋಲಿ (ಉತ್ತರಕಾಶಿ) ಜಿಲ್ಲೆಯ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕೇದಾರನಾಥ ದೇವಾಲಯವಿದೆ. ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಕೇದಾರನಾಥ ಚಾರ್ ಧಾಮ್ ಯಾತ್ರೆಯಲ್ಲಿ ಇದೊಂದು ಮುಖ್ಯ ಯಾತ್ರಾ ಸ್ಥಳ. ಕೇದಾರನಾಥ ಯಾತ್ರೆಯು `ಭಾರತ-ಚೀನಾ’ ಗಡಿಗೆ ಅಂಟಿಕೊಂಡಂತಿರುವ `ಗೌರಿಕುಂಡ’ವೆಂಬ ಪ್ರದೇಶದಿಂದ ಪ್ರಾರಂಭವಾಗುತ್ತದೆ. ಸಮತಟ್ಟಾದ ಪ್ರದೇಶವಾದ ಇಲ್ಲಿಂದ ಸುಮಾರು 14 ಕಿ.ಮೀ. ಕಾಲ್ನಡಿಗೆ, ಕುದುರೆಸವಾರಿ ಅಥವಾ ಡೋಲಿಯಲ್ಲಿ ಪಯಣಿಸಬೇಕಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv