Tag: Uttarakhand

  • ಟಿವಿ ಕ್ರೈಂ ಶೋದಿಂದ ಪ್ರೇರಣೆ- 2 ವರ್ಷದ ತಮ್ಮನನ್ನೇ ಕೊಂದ 14ರ ಅಕ್ಕ

    ಟಿವಿ ಕ್ರೈಂ ಶೋದಿಂದ ಪ್ರೇರಣೆ- 2 ವರ್ಷದ ತಮ್ಮನನ್ನೇ ಕೊಂದ 14ರ ಅಕ್ಕ

    ಡೆಹ್ರಾಡೂನ್: ಟಿವಿಯಲ್ಲಿ ಪ್ರಸಾರವಾಗುವ ಕ್ರೈಂ ಶೋ ನೋಡಿ ಪ್ರೇರಣೆಗೊಂಡು ಇಬ್ಬರು ಅಪ್ರಾಪ್ತೆಯರು ಎರಡು ವರ್ಷದ ಸಹೋದರನನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

    ಉತ್ತರಾಖಂಡ್‍ನ ಹರಿದ್ವಾರದ ಜವಲಪುರದಲ್ಲಿ ಘಟನೆ ನಡೆದಿದೆ. ಇಬ್ಬರು ಅಪ್ರಾಪ್ತೆಯರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಕೊಲೆ ಮಾಡಲು ಹೇಗೆ ಪ್ಲಾನ್ ಮಾಡಿದಿರಿ ಎಂಬ ಪ್ರಶ್ನೆಗೆ ಬಾಲಕಿಯರು ಆಘಾತಕಾರಿ ಉತ್ತರ ನೀಡಿದ್ದಾರೆ. ಟಿವಿಯಲ್ಲಿ ಬರುತ್ತಿದ್ದ ಕ್ರೈಂ ಶೋ ನೋಡಿಯೇ ಸಹೋದರನ ಕೊಲೆಗೆ ಸಂಚು ರೂಪಿಸಿದೆವು ಎಂದು ಒಪ್ಪಿಕೊಂಡಿದ್ದಾರೆ.

    ನವೆಂಬರ್ 29ರಂದು ಮಗುವಿನ ದೇಹವು ಗಂಗಾ ನದಿಯಲ್ಲಿ ತೇಲುತ್ತಿರುವುದನ್ನು ಕಂಡ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಎಚ್ಚರಗೊಂಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಪ್ರಾಥಮಿಕ ತನಿಖೆ ನಡೆಸಲಾಗಿದ್ದು, ಮೊದಲು ಮಗುವಿನ ಕುಟುಂಬದವರನ್ನೇ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಸತ್ಯ ಬಯಲಾಗಿದ್ದು, 14 ವರ್ಷದ ಸಹೋದರಿ ಹಾಗೂ 13 ವರ್ಷದ ಸೋದರ ಸಂಬಂಧಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

    ನಂತರ ಇಬ್ಬರೂ ಅಪ್ರಾಪ್ತೆಯರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಕಥೆಯ ರೀತಿಯಲ್ಲಿ ಘಟನೆಯನ್ನು ವಿವರಿಸಿದ್ದಾರೆ. ಮಗುವಿನ ಅಕ್ಕ ಮಾಹಿತಿ ನೀಡಿ, ತಮ್ಮನನ್ನು ನೋಡಿಕೊಳ್ಳುವುದು ಕಿರಿಕಿರಿ ಎನ್ನಿಸುತ್ತಿತ್ತು. ಹೀಗಾಗಿ ಕಾಟ ತಾಳಲಾರದೆ ಕೊಲೆ ಮಾಡಲು ನಿರ್ಧರಿಸಿದೆ. ಟಿವಿಯಲ್ಲಿ ಕ್ರೈಂ ಶೋ ನೋಡಿದ್ದರಿಂದ ಅದರಂತೆ ನಾನು ಮಾಡಿದೆ. ಬೇಸಿಗೆಯ ರಜಾ ದಿನಗಳಲ್ಲಿ ಅಜ್ಜಿಯ ಮನೆಗೆ ಹೋಗುತ್ತಿದ್ದೆ. ಆಗ ಟಿವಿಯಲ್ಲಿ ಹೆಚ್ಚು ಕ್ರೈಂ ಶೋಗಳನ್ನು ನೋಡುತ್ತಿದ್ದೆ. ಇದರಿಂದ ಪ್ರೇರಿತಳಾಗಿ ಸಹೋದರನನ್ನು ನದಿಯಲ್ಲಿ ಮುಳುಗಿಸಿ ಕೊಲ್ಲಲು ಯೋಜನೆ ರೂಪಿಸಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾಳೆ.

    ಅಲ್ಲದೆ ತಮ್ಮನಿಗೆ ಹಾಕಲು ನಿದ್ರೆ ಮಾತ್ರೆಗಳನ್ನು ಪಡೆಯುವಲ್ಲಿ ನಾವಿಬ್ಬರು ಯಶಸ್ವಿಯಾಗಿವು. ಮಾತ್ರೆಗಳನ್ನು ತಮ್ಮ ಕುಡಿಯುವ ಹಾಲಿನಲ್ಲಿ ಬೆರೆಸಿದೆವು. ಅಲ್ಲದೆ ಗಂಗಾನದಿಯಲ್ಲಿ ಮುಳುಗಿಸುವುದಕ್ಕೂ ಮುನ್ನ ತಮ್ಮನನ್ನು ನಿದ್ರಾಹೀನಗೊಳಿಸಿದ್ದೆವು. ಅವನು ನಿದ್ರೆಗೆ ಜಾರಿರುವುದು ಖಚಿತವಾಗುತ್ತಿದ್ದಂತೆ ನಾವಿಬ್ಬರು ಅವನನ್ನು ಚೀಲದಲ್ಲಿ ಹಾಕಿಕೊಂಡು ಸೈಕಲ್‍ನಲ್ಲಿ ಹೋಗಿ ಸುಮಾರು 800 ಮೀ. ದೂರದಲ್ಲಿದ್ದ ಗಂಗಾ ನದಿಗೆ ಹಾಕಿದೆವು. ನದಿಗೆ ಹಾಕಿ 20 ನಿಮಿಷಗಳ ನಂತರ ಮನೆಗೆ ಬಂದೆವು. ನಂತರ ಎಲ್ಲವೂ ಸಹಜವಾಗಿದೆ ಎಂಬಂತೆ ನಟಿಸಿದೆವು ಎಂದು ತಿಳಿಸಿದ್ದಾಳೆ.

    ಘಟನೆ ನಡೆದ ಮರುದಿನ ಬೆಳಗ್ಗೆ ಮಗು ಕಾಣದಿರುವುದನ್ನು ಕಂಡು ಮನೆಯವರು ಗಾಬರಿಯಾಗಿ ಈ ಕುರಿತು ದೂರು ದಾಖಲಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಲು ಮುಂದಾದಾಗ, ಬಾಲಕಿಯು ಆರಂಭದಲ್ಲಿ ತನ್ನ ಚಿಕ್ಕಮ್ಮನ ಮೇಲೆ ಆರೋಪ ಹೊರಿಸಲು ಮುಂದಾಗಿದ್ದಳು. ಆದರೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಘಟನೆ ಕುರಿತು ಬಾಯ್ಬಿಟ್ಟಿದ್ದಾಳೆ.

  • ಮನೆಯಿಂದ ಓಡಿ ಹೋಗಿದ್ದಾಕೆಯ ಮೇಲೆ ಉತ್ತರಾಖಂಡ್‍ನಲ್ಲಿ ರೇಪ್

    ಮನೆಯಿಂದ ಓಡಿ ಹೋಗಿದ್ದಾಕೆಯ ಮೇಲೆ ಉತ್ತರಾಖಂಡ್‍ನಲ್ಲಿ ರೇಪ್

    ಡೆಹ್ರಾಡೂನ್: ಹೈದಾರಾಬಾದ್ ನಲ್ಲಿ ಪಶುವೈದ್ಯೆ ಮೇಲೆ ಕಾಮುಕರು ಅಟ್ಟಹಾಸ ನಡೆಸಿದ ಬೆನ್ನಲ್ಲೇ ಇದೀಗ ಉತ್ತಾರಖಂಡ್ ನಲ್ಲಿ ಕರ್ನಾಟಕ ಮೂಲದ ಯುವತಿಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಉತ್ತಾರಖಂಡ್ ನ ತೆಹ್ರಿ ಜಿಲ್ಲೆಯಲ್ಲಿ ಶನಿವಾರ 28 ವರ್ಷದ ಯುವತಿಯ ಮೇಲೆ ಟ್ರಕ್ ಚಾಲಕ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಯುವತಿ ತನ್ನ ಕುಟುಂಬದೊಂದಿಗೆ ಜಳವಾಡಿ ಮನೆಯಿಂದ ಓಡಿಹೋಗಿರುವುದಾಗಿ ಕಂಡಿಸೌರ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸುರೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.

    ಟ್ರಕ್ ಚಾಲಕ ತನಗೆ ಡ್ರಾಪ್ ಕೊಡುವುದಾಗಿ ಹೇಳಿ ಕರೆದುಕೊಂಡು ಹೋಗಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಆ ಬಳಿಕ ಅರ್ಧ ದಾರಿಯಲ್ಲಿ ಇಳಿಸಿ ಹೋಗಿರುವುದಾಗಿ ಯುವತಿ ಕಂಡಿಸೌರ್ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಕೂಡಲೇ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಯುವತಿ ಮೇಲೆ ಅತ್ಯಾಚಾರವಾಗಿರುವುದು ದೃಢಪಟ್ಟಿದೆ ಎಂದರು.

    ಸದ್ಯ ಮಹಿಳೆಯಿಂದ ಹೇಳಿಕೆಗಳನ್ನು ಪಡೆದುಕೊಂಡು ಕರ್ನಾಟಕದಲ್ಲಿರುವ ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದೇವೆ. ಇತ್ತ ಆರೋಪಿಯ ಪತ್ತೆಗೆ ಬಲೆಬೀಸಿರುವುದಾಗಿ ರಾವತ್ ತಿಳಿಸಿದ್ದಾರೆ.

  • ಪಶ್ಚಿಮ ಬಂಗಾಳ, ಉತ್ತರಾಖಂಡ್ ಉಪಚುನಾವಣೆ – 3ರಲ್ಲಿ ಟಿಎಂಸಿ, 1 ರಲ್ಲಿ ಬಿಜೆಪಿಗೆ ಗೆಲುವು

    ಪಶ್ಚಿಮ ಬಂಗಾಳ, ಉತ್ತರಾಖಂಡ್ ಉಪಚುನಾವಣೆ – 3ರಲ್ಲಿ ಟಿಎಂಸಿ, 1 ರಲ್ಲಿ ಬಿಜೆಪಿಗೆ ಗೆಲುವು

    ಕೋಲ್ಕತ್ತಾ: ಪಶ್ಚಿಮ ಬಂಗಾಳ ಹಾಗೂ ಉತ್ತರಾಖಂಡ್ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ತೃಣಮೂಲ ಕಾಂಗ್ರೆಸ್(ಟಿಎಂಸಿ) 3 ಹಾಗೂ ಬಿಜೆಪಿ ಕೇವಲ ಒಂದು ಸ್ಥಾನಗಳಲ್ಲಿ ಜಯಗಳಿಸಿವೆ.

    ಪಶ್ಚಿಮ ಬಂಗಾಳದಲ್ಲಿ ಆಡಳೀತಾರೂಢ ಟಿಎಂಸಿ ಬಿಜೆಪಿಯನ್ನು ಸ್ವೀಪ್ ಮಾಡಿದ್ದು, ಎಲ್ಲ ಮೂರು ಕ್ಷೇತ್ರಗಳಲ್ಲಿಯೂ ಜಯಗಳಿಸಿದೆ. ಉತ್ತರಾಖಂಡ್ ಪಿತೋರ್ಗರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 3,267 ಮತಗಳಿಂದ ಜಯಗಳಿಸಿದ್ದಾರೆ.

    ಪಿತೋರ್ಗರ್ ಕ್ಷೇತ್ರದ ಅಭ್ಯರ್ಥಿ ಪ್ರಕಾಶ್ ಪಂತ್ ನಿಧನದಿಂದಾಗಿ ಉಪಚುನಾವಣೆ ನಡೆದಿತ್ತು. ಪ್ರಕಾಶ್ ಪಂತ್ ಅವರು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರ ಪತ್ನಿ ಚಂದ್ರಾ ಪಂತ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು.

    ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕಾಳಿಯಗಂಜ್, ಕರೀಂಪುರ ಹಾಗೂ ಖರಗ್‍ಪುರಗಳಲ್ಲಿ ಜಯಗಳಿಸಿದೆ. ವಿಶೇಷ ಏನೆಂದರೆ ಇದೇ ಮೊದಲ ಬಾರಿಗೆ ಖರಗ್‍ಪುರದಲ್ಲಿ ಟಿಎಂಸಿ ಜಯಗಳಿಸಿದೆ. ಬಿಜೆಪಿ ಕೇವಲ ಶೇ.39ರಷ್ಟು ಮತಗಳನ್ನು ಪಡೆದಿದೆ.

    ಬೆಂಗಾಳ್ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಶ್ ಅವರು ಲೋಕಸಭಾ ಚುನಾವಣೆಯಲ್ಲಿ ಖರಗ್‍ಪುರ ಕ್ಷೇತ್ರದಿಂದ ಜಯಗಳಿಸಿದ್ದರು. ಕೇವಲ ಜಯಗಳಿಸಿರುವುದು ಮಾತ್ರವಲ್ಲ ಲೋಕಸಭೆಯಲ್ಲಿ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಜಯಗಳಿಸಿತ್ತು. ಆದರೆ ಈ ಬಾರಿ ಬಿಜೆಪಿ ವಿರುದ್ಧ ಟಿಎಂಸಿ 18 ಸಾವಿರ ಮತಗಳ ಅಂತರದಿಂದ ಜಯಗಳಿಸಿದೆ.

    ಕಾಳಿಗರಂಜ್ ಗೆಲ್ಲುವ ಮೂಲಕ ಟಿಎಂಸಿ ಉತ್ತರ ಬೆಂಗಾಳ್‍ನಲ್ಲಿ ಉಂಟಾಗಿದ್ದ ನಷ್ಟವನ್ನು ಸರಿದೂಗಿಸಿಕೊಂಡಿದೆ. ಈ ಮೂಲಕ ಟಿಎಂಸಿ ಲೋಕಸಭೆಯಲ್ಲಿ ಕಳೆದುಕೊಂಡ ಕ್ಷೇತ್ರಗಳಲ್ಲಿ ತನ್ನ ಹಿಡಿತವನ್ನು ಸಾಧಿಸುತ್ತಿದೆ. ಕರಿಂಪುರದಲ್ಲಿಯೂ ಸಹ ಟಿಎಂಸಿ 24 ಸಾವಿರ ಮತಗಳ ಅಂತರದಿಂದ ಜಯಗಳಿಸಿದೆ.

  • ಪ್ಲಾಸ್ಟಿಕ್ ವಿರುದ್ಧ ಜಾಗೃತಿಗಾಗಿ ವಿದ್ಯಾರ್ಥಿಗಳಿಂದ 50 ಕಿ.ಮೀ ಮಾನವ ಸರಪಳಿ: ವಿಡಿಯೋ

    ಪ್ಲಾಸ್ಟಿಕ್ ವಿರುದ್ಧ ಜಾಗೃತಿಗಾಗಿ ವಿದ್ಯಾರ್ಥಿಗಳಿಂದ 50 ಕಿ.ಮೀ ಮಾನವ ಸರಪಳಿ: ವಿಡಿಯೋ

    ಡೆಹ್ರಾಡೂನ್: 50 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸಿ ಉತ್ತರಾಖಂಡದ ವಿದ್ಯಾರ್ಥಿಗಳು ಪಾಲಿಥಿನ್ (ಪ್ಲಾಸ್ಟಿಕ್) ವಿರುದ್ಧ ಜಾಗೃತಿ ಮೂಡಿಸಿದ್ದಾರೆ.

    ವಿವಿಧ ಶಾಲಾ ಮಕ್ಕಳು ಡೆಹ್ರಾಡೂನ್‌ನ ರಸ್ತೆಯುದ್ದಕ್ಕೂ ಸುಮಾರು 50 ಕಿ.ಮೀ ನಿಂತು, ಪಾಲಿಥಿನ್ ಬಳಕೆಯ ವಿರುದ್ಧ ಜಾಗೃತಿ ಮೂಡಿಸಲು ಮಾನವ ಸರಪಳಿಯನ್ನು ರಚಿಸಿದರು. ಈ ಅಭಿಯನದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕೂಡ ಭಾಗವಹಿಸಿದ್ದರು.

    ವಿದ್ಯಾರ್ಥಿಗಳು ಜಾಗೃತಿ ಮೂಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೆಲ ನೆಟ್ಟಿಗರು ಕಮೆಂಟ್ ಮೂಲಕ ಪಾಲಿಥಿಲ್ ಬಳಸದಂದೆ ಮನವಿ ಮಾಡಿಕೊಂಡಿದ್ದಾರೆ.

    ಪ್ಯಾಕಿಂಗ್ ಕವರ್, ಕೈಚೀಲ, ಉಪಾಹಾರ ನೀಡುವ ಪ್ಲೇಟ್, ನೀರಿನ ಗ್ಲಾಸ್, ಟೇಬಲ್ ಪೇಪರ್ ಸೇರಿ ಹತ್ತು ಹಲವು ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲಾಗಿದೆ. ಆದರೂ ಕೆಲವು ವ್ಯಾಪಾರಸ್ತರು ಕದ್ದು ಮುಚ್ಚಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಅಭಿಯಾನದ ಮೂಲಕ ಹೂವು, ಹಣ್ಣು, ಚಿಲ್ಲರೆ ಅಂಗಡಿಗಳಲ್ಲಿ ಪಾಲಿಥಿನ್ ಕವರ್ ಮಾರಾಟ ಅಥವಾ ಬಳಸಬಾರದು. ಅದಕ್ಕೆ ಪರಾರಯಯವಾಗಿ ಬಟ್ಟೆ ಅಥವಾ ಬ್ಯಾಗ್ ಬಳಸುವಂತೆ ಮನವಿ ಮಾಡಿಕೊಳ್ಳಲಾಗಿದೆ.

  • ಆತ್ಮಹತ್ಯೆಗೆ ಶರಣಾದ ಪತಿಯ ಮೃತದೇಹಕ್ಕಾಗಿ 7 ಜನ ಪತ್ನಿಯರ ಕಿತ್ತಾಟ

    ಆತ್ಮಹತ್ಯೆಗೆ ಶರಣಾದ ಪತಿಯ ಮೃತದೇಹಕ್ಕಾಗಿ 7 ಜನ ಪತ್ನಿಯರ ಕಿತ್ತಾಟ

    ಡೆಹ್ರಾಡೂನ್: ಆತ್ಮಹತ್ಯೆಗೆ ಶರಣಾದ ಪತಿಯ ಮೃತದೇಹಕ್ಕಾಗಿ 7 ಜನ ಪತ್ನಿಯರು ಕಿತ್ತಾಡಿಕೊಂಡ ವಿಚಿತ್ರ ಪ್ರಸಂಗವೊಂದು ಉತ್ತರಾಖಂಡ ರಾಜ್ಯದಲ್ಲಿ ನಡೆದಿದೆ.

    ಹರಿದ್ವಾರದ ರವಿದಾಸ್ ಬಸ್ತಿಯ ನಿವಾಸಿ ಪವನ್ ಕುಮಾರ್ (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪವನ್ ಕುಮಾರ್ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದೇ ದಿನ ರಾತ್ರಿ ಐವರು ಮಹಿಳೆಯರು ಹಾಗೂ ಮಾರನೇ ದಿನ ಇಬ್ಬರು ಪವನ್ ಕುಮಾರ್ ನನ್ನ ಪತಿ ಎಂದು ಪರಸ್ಪರ ಕಿತ್ತಾಡಿಕೊಂಡು ಹೈಡ್ರಾಮಾ ಸೃಷ್ಟಿಸಿದ್ದಾರೆ.

    ಚಾಲಕನಾಗಿ ಕೆಲಸ ಮಾಡುತ್ತಿದ್ದ ಪವನ್ ಕುಮಾರ್ ಭಾನುವಾರ ರಾತ್ರಿ ವಿಷ ಕುಡಿದು ಒದ್ದಾಡುತ್ತಿದ್ದ. ಇದನ್ನು ನೋಡಿದ ಪತ್ನಿ ಪವನ್ ಕುಮಾರ್ ನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ ನಾಲ್ವರು ಮಹಿಳೆಯರು ಪವನ್ ಕುಮಾರ್ ತಮ್ಮ ಪತಿ ಎಂದು ವಾದಿಸಲು ಆರಂಭಿಸಿದರು. ಅವರ ವಾದವನ್ನು ತಳ್ಳಿ ಹಾಕಿದ ಪವನ್ ಕುಮಾರ್ ಪತ್ನಿ, ನನ್ನ ಪತಿ ನನ್ನನ್ನು ಬಿಟ್ಟರೆ ಬೇರೆ ಯಾವ ಮಹಿಳೆಯ ಜೊತೆಗೂ ಸಂಪರ್ಕ ಇಟ್ಟುಕೊಂಡಿಲ್ಲ ಎಂದು ತಿಳಿಸಿದ್ದಾರೆ.

    ಐವರು ಪತ್ನಿಯರು ಆಸ್ಪತ್ರೆ ಹೊರಗೆ ಜಗಳವಾಡುತ್ತಿದ್ದರು. ಇದನ್ನು ನೋಡಿದ ಪೊಲೀಸರಿಗೆ ಏನು ಮಾಡಬೇಕು ಎನ್ನುವುದೇ ಅರ್ಥವಾಗಲಿಲ್ಲ. ಪವನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎನ್ನುವುದಕ್ಕಿಂತ ಆತ ಯಾರ ಪತಿ ಎಂಬ ಕುರಿತೇ ಕುತೂಹಲ ಹೆಚ್ಚಾಗಿತ್ತು. ಕೊನೆಗೂ ಆ ಐವರು ಪತ್ನಿಯರ ಒಪ್ಪಿಗೆ ಬಳಿಕ ಪತಿಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

    ಆದರೆ ಐವರು ಪತ್ನಿರ ಕಿತ್ತಾಟಕ್ಕೆ ಪವನ್ ಕುಮಾರ್ ಸ್ಟೋರಿ ಮುಕ್ತಾಯವಾಗಲಿಲ್ಲ. ಆತನ ಅಂತ್ಯಸಂಸ್ಕಾರ ನೆರವೇರಿಸಿದ ಮಾರನೇ ದಿನ (ಸೋಮವಾರ) ಮತ್ತೆ ಇಬ್ಬರು ಮಹಿಳೆಯರು ಪೊಲೀಸ್ ಠಾಣೆಗೆ ಬಂದು ತಮಗೆ ತಿಳಿಸದೆ ಪತಿಯ ಅಂತ್ಯಸಂಸ್ಕಾರ ಮಾಡಿರುವುದು ಸರಿಯಲ್ಲ ಎಂದು ಗಲಾಟೆ ಮಾಡಿದ್ದಾರೆ. ಈ ಬೆಳವಣಿಗೆಯಿಂದ ಶಾಕ್‍ಗೆ ಒಳಗಾದ ಪೊಲೀಸರು, ಮತ್ತೆ ಯಾರಾದರು ಪವನ್ ಕುಮಾರ್ ತಮ್ಮ ಪತಿ ಅಂತ ಪೊಲೀಸ್ ಠಾಣೆಗೆ ಬರುತ್ತಾರಾ ಎಂದು ಕಾದು ನೋಡುತ್ತಿದ್ದಾರೆ. ಹೀಗಾಗಿ ನಾಲ್ಕೈದು ದಿನ ಕಾದು ನೋಡಿ ಪ್ರಕರಣದ ಕುರಿತು ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

    ಮಹಿಳೆಯರು ಹಣಕ್ಕಾಗಿ ಪವನ್ ಕುಮಾರ್ ತಮ್ಮ ಪತಿ ಎಂದು ಹೇಳುತ್ತಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಮೂಡಿತ್ತು. ಈ ಸಂಬಂಧ ವಿವಾರಣೆ ಮಾಡಿದಾಗ, ಪವನ್ ಕುಮಾರ್ ಖಾತೆಯಲ್ಲಿ ಹಣವೇ ಇಲ್ಲ. ಅಷ್ಟೇ ಅಲ್ಲದೆ ಆತ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ಯಾರು ನಿಜವಾದ ಪತ್ನಿ, ಬೇರೆಯವರು ಯಾಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಪರಿಹಾರ ಸಾಮಾಗ್ರಿ ಹೊತ್ತೊಯ್ತಿದ್ದ ಹೆಲಿಕಾಪ್ಟರ್ ಪತನ- ಮೂವರ ದುರ್ಮರಣ

    ಪರಿಹಾರ ಸಾಮಾಗ್ರಿ ಹೊತ್ತೊಯ್ತಿದ್ದ ಹೆಲಿಕಾಪ್ಟರ್ ಪತನ- ಮೂವರ ದುರ್ಮರಣ

    ಡೆಹ್ರಾಡೂನ್: ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿ ಹೊತ್ತೊಯ್ಯುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಪತನಗೊಂಡಿದ್ದು, ಮೂವರು ದುರ್ಮರಣಕ್ಕೀಡಾಗಿದ್ದಾರೆ.

    ಮೃತರನ್ನು ಪೈಲಟ್ ರಾಜ್ ಪಾಲ್, ಸಹ ಪೈಲಟ್ ಕಪ್ತಾಲ್ ಲಾಲ್ ಹಾಗೂ ಸ್ಥಳೀಯರಾದ ರಮೇಶ್ ಸವಾರ್ ಎಂದು ಗುರುತಿಸಲಾಗಿದೆ. ಈ ಘಟನೆ ಬುಧವಾರ ಮಧ್ಯಾಹ್ನ ಉತ್ತರಾಖಂಡ್‍ನ ಉತ್ತರ ಕಾಶಿಯಲ್ಲಿ ನಡೆದಿದೆ.

    ಉತ್ತರಕಾಶಿಯಲ್ಲಿ ಹೆಲಿಕಾಪ್ಟರ್ ಪತನವಾಗಿದೆ. ಇದು ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಆಹಾರ ಸಾಮಾಗ್ರಿಗಳನ್ನು ಕೊಂಡೊಯ್ಯುತ್ತಿತ್ತು ಎಂದು ಅಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟರ್ ಮಾಹಿತಿ ನೀಡಿದ್ದಾರೆ.

    ಹೆಲಿಕಾಪ್ಟರ್ ಉತ್ತರ ಕಾಶಿ ಜಿಲ್ಲೆಯ ಮೊರಿಯಿಂದ ಮೊಲ್ದಿ ಕಡೆ ಹಾರುತ್ತಿತ್ತು. ಈ ವೇಳೆ ವಿದ್ಯುತ್ ತಂತಿ ತಗುಲಿ ಪತನಗೊಂಡಿದೆ. ಹೆಲಿಕಾಪ್ಟರ್ ಪತನವಾದ ಮಾಹಿತಿ ತಿಳಿಯುತ್ತಿದ್ದಂತೆಯೇ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸರು(ಐಟಿಬಿಪಿ) ಘಟನಾ ಸ್ಥಳಕ್ಕೆ ದೌಡಾಯಿಸಿ, ಮೃತದೇಹಗಳನ್ನು ಪಡೆದುಕೊಂಡಿದ್ದಾರೆ.

    ಸದ್ಯ ಮೃತರ ಕುಟುಂಬಕ್ಕೆ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು 15 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಉತ್ತರ ಕಾಶಿಯಲ್ಲಿ ಉಂಟಾದ ಪ್ರವಾಹದಲ್ಲಿ ಇಲ್ಲಿಯವರೆಗೆ ಸರಿ ಸುಮಾರು 16 ಮಂದಿ ಸಾವಿಗೀಡಾಗಿದ್ದಾರೆ.

  • ಕಮರಿಗೆ ಉರುಳಿದ ಶಾಲಾ ವಾಹನ – 8 ಮಕ್ಕಳು ದುರ್ಮರಣ

    ಕಮರಿಗೆ ಉರುಳಿದ ಶಾಲಾ ವಾಹನ – 8 ಮಕ್ಕಳು ದುರ್ಮರಣ

    ಡೆಹ್ರಾಡೂನ್: ಸುಮಾರು 18 ಮಕ್ಕಳು ಪ್ರಯಾಣಿಸುತ್ತಿದ್ದ ಶಾಲಾ ವಾಹನವೊಂದು ಆಳವಾದ ಕಮರಿಗೆ ಉರುಳಿ ಅಪಘಾತಕ್ಕೀಡಾಗಿದ್ದು, 8 ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

    ಡೆಹ್ರಾಡೂನ್‍ನ ತೆಹ್ರಿ ಗರ್ವಾಲ್‍ನ ಕಂಗ್ಸಾಲಿ ಗ್ರಾಮದ ಬಳಿ ಶಾಲಾ ವಾಹನ ಅಪಘಾತಕ್ಕೀಡಾಗಿದೆ. ಸುಮಾರು 18 ವಿದ್ಯಾರ್ಥಿಗಳು ಶಾಲಾ ವಾಹನದಲ್ಲಿ ಶಾಲೆಗೆ ತೆರೆಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆ ಪಕ್ಕದಲ್ಲಿದ್ದ ಕಮರಿಗೆ ಪಲ್ಟಿಯಾಗಿದೆ. ಈ ದುರಂತದಲ್ಲಿ 8 ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದು, 10 ಮಕ್ಕಳು ಗಾಯಗೊಂಡಿದ್ದಾರೆ.

    ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‍ಡಿಆರ್‍ಎಫ್) ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಸದ್ಯ ಗಾಯಗೊಂಡ ವಿದ್ಯಾರ್ಥಿಗಳನ್ನು ವಾಹನದಿಂದ ಹೊರಗೆ ಕರೆತಂದು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

    ಘಟನೆಯಲ್ಲಿ 8 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಜನರಲ್ (ಗರ್ವಾಲ್) ಅಜಯ್ ರೌತೆಲಾ ಖಚಿತಪಡಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • 2 ಹುಲಿಗಳಿದ್ದರೆ ಕರ್ನಾಟಕಕ್ಕೆ ಮತ್ತೆ ಸಿಗ್ತಿತ್ತು ಅಗ್ರ ಸ್ಥಾನ – ಯಾವ ರಾಜ್ಯದಲ್ಲಿ ಎಷ್ಟು ಹುಲಿಗಳಿವೆ?

    2 ಹುಲಿಗಳಿದ್ದರೆ ಕರ್ನಾಟಕಕ್ಕೆ ಮತ್ತೆ ಸಿಗ್ತಿತ್ತು ಅಗ್ರ ಸ್ಥಾನ – ಯಾವ ರಾಜ್ಯದಲ್ಲಿ ಎಷ್ಟು ಹುಲಿಗಳಿವೆ?

    – ದೇಶದಲ್ಲಿವೆ ಸುಮಾರು 3 ಸಾವಿರ ಹುಲಿಗಳು

    ನವದೆಹಲಿ: ದೇಶದಲ್ಲಿ ಒಟ್ಟು 2,967 ಹುಲಿಗಳಿದ್ದು, 2014ರ ಗಣತಿಗೆ ಹೋಲಿಸಿದರೆ, ಭಾರೀ ಪ್ರಮಾಣದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ. ಆದರೆ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನದಿಂದ ಜಾರಿ ಎರಡನೇ ಸ್ಥಾನ ಪಡೆದಿದೆ.

    ವಿಶ್ವ ಹುಲಿ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿರುವ ಹುಲಿಗಳ ಗಣತಿ ವರದಿಯನ್ನು ಬಿಡುಗಡೆಗೊಳಿಸಿದರು. ಪಟ್ಟಿಯಲ್ಲಿ ಮಧ್ಯಪ್ರದೇಶ 526 ಹುಲಿಗಳನ್ನು ಹೊಂದುವ ಮೂಲಕ ಅಗ್ರ ಸ್ಥಾನ ಪಡೆದಿದೆ. 524 ಹುಲಿಗಳನ್ನು ಹೊಂದುವ ಮೂಲಕ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ಕಳೆದ ಬಾರಿಗೆ ಹೋಲಿಸಿದರೆ ಕರ್ನಾಟಕದಲ್ಲಿ 118 ಹುಲಿಗಳು ಹೆಚ್ಚಾಗಿವೆ ಎಂದು ಸಮೀಕ್ಷೆ ತಿಳಿಸಿದೆ.

    ಉತ್ತರಾಖಂಡ್ 442 ಹುಲಿಗಳನ್ನು ಹೊಂದುವ ಮೂಲಕ ತೃತೀಯ ಸ್ಥಾನ ಪಡೆದಿದೆ. ಛತ್ತೀಸ್‍ಗಢ ಹಾಗೂ ಮಿಜೋರಾಂಗಳಲ್ಲಿ ಹುಲಿಗಳ ಸಂಖ್ಯೆ ಕುಸಿತ ಕಂಡಿದೆ. ಉಳಿದ ರಾಜ್ಯಗಳಲ್ಲಿ ಹುಲಿಗಳ ಪ್ರಮಾಣದಲ್ಲಿ ಗುಣಾತ್ಮಕ ಏರಿಕೆ ಕಂಡಿದೆ.

    ಹೆಚ್ಚು ವ್ಯಾಘ್ರಗಳನ್ನು ಹೊಂದಿದ ರಾಜ್ಯಗಳ ಪಟ್ಟಿಯಲ್ಲಿ ಕಳೆದ ಬಾರಿ ಕರ್ನಾಟಕ 406 ಹುಲಿಗಳ ತಾಣವಾಗುವ ಮೂಲಕ ಅಗ್ರ ಸ್ಥಾನ ಪಡೆದಿತ್ತು. ಉತ್ತರಾಖಂಡ(340), ತಮಿಳುನಾಡು(229), ಮಧ್ಯ ಪ್ರದೇಶ(208), ಮಹಾರಾಷ್ಟ್ರ(190), ಮಧ್ಯ ಪ್ರದೇಶ(208) ಪಶ್ಚಿಮ ಬಂಗಾಳ (76) ಅನುಕ್ರಮವಾಗಿ ನಂತರ ಸ್ಥಾನ ಪಡೆದಿತ್ತು.

    2006 ರಿಂದ ನಾಲ್ಕು ವರ್ಷಗಳಿಗೊಮ್ಮೆ ಹುಲಿಗಳ ಸಮೀಕ್ಷೆ ನಡೆಸಲಾಗುತ್ತಿದ್ದು, ಇದು ನಾಲ್ಕನೇ ಸಮೀಕ್ಷೆಯಾಗಿದೆ. ಪ್ರಸಕ್ತ ಸಾಲಿನ ಸಮೀಕ್ಷೆಯನ್ನು ಸುಮಾರು 15 ತಿಂಗಳುಗಳ ಕಾಲ ಅರಣ್ಯಾಧಿಕಾರಿಗಳು ಅರಣ್ಯ ಪ್ರದೇಶದಲ್ಲಿನ 3,81,400 ಚ.ಕಿ.ಮೀ. ಜಾಗದಲ್ಲಿ ಸಮೀಕ್ಷೆ ನಡೆಸಿದ್ದಾರೆ. ಸುಮಾರು 26,760 ಕ್ಯಾಮರಾ ಬಳಸಿ ವನ್ಯಜೀವಿ ಅಧ್ಯಯನಕಾರರು 3.5 ಕೋಟಿ ಚಿತ್ರಗಳನ್ನು ಅಧ್ಯಯನ ಮಾಡಿ ಈ ವರದಿಯನ್ನು ತಯಾರಿಸಲಾಗಿದೆ. ಅಂದಾಜು ಶೇ.83 ರಷ್ಟು ಹುಲಿಗಳ ಸಂಖ್ಯೆಯನ್ನು ಚಿತ್ರಗಳ ಮೂಲಕ ಸೆರೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.

    2006ರ ವರದಿಯಲ್ಲಿ 1,441 ಹುಲಿಗಳಿದ್ದರೆ, 2010ರಲ್ಲಿ 1,706ಕ್ಕೆ ಏರಿಕೆಯಾಗಿತ್ತು. 2014ರ ವರದಿಯಲ್ಲಿ 2026 ಹುಲಿಗಳಿತ್ತು. ಕೆಲವು ಅಂಶಗಳು ವರದಿಯಲ್ಲಿ ಬಹಿರಂಗವಾಗಿದ್ದು, ಹುಲಿಗಳ ಸಂತತಿಗೆ ಭಾರತಕ್ಕಿಂತ ಉತ್ತಮ ವಾತಾವರಣ ಪ್ರಪಂಚದಲ್ಲಿ ಬೇರೆಲ್ಲೂ ಇಲ್ಲ ಎಂದು ಅಖಿಲ ಭಾರತ ಹುಲಿ ಜನಗಣತಿ ವರದಿಯಲ್ಲಿ ತಿಳಿಸಲಾಗಿದೆ. 2022ಕ್ಕೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕು ಎಂದು ಸೆಂಟ್ ಪಿಟರ್ಸ್‍ಬರ್ಗ್ ನಿರ್ಧರಿಸಿತ್ತು. ಆದರೆ, ಈ ಗುರಿಯನ್ನು ನಾಲ್ಕು ವರ್ಷಗಳಲ್ಲೇ ಪೂರ್ಣಗೊಳಿಸಿದ್ದೇವೆ ಎಂದು ಪ್ರಧಾನಿ ಮೋದಿ ವರದಿ ಬಿಡುಗಡೆ ವೇಳೆ ತಿಳಿಸಿದ್ದಾರೆ.

    ಬಂಡೀಪುರ ಹುಲಿ ರಕ್ಷಿತಾರಣ್ಯ ಒಂದರಲ್ಲೇ ಕಳೆದ ಆರು ತಿಂಗಳಲ್ಲಿ ನಾಲ್ಕು ಹುಲಿಗಳು ಸಾವನ್ನಪ್ಪಿದ್ದು, ಬಂಡೀಪುರ ಅರಣ್ಯದಲ್ಲಿ ವೇಗವಾಗಿ ಬರುವ ವಾಹನಗಳಿಂದ ಹಾಗೂ ಅರಣ್ಯ ಸಮೀಪದ ಗ್ರಾಮಗಳ ಜನರು ಹುಲಿಗಳ ಹಾವಳಿಯಿಂದ ಬಚಾವಾಗಲು ಹುಲಿ ಮೇಲೆ ದಾಳಿ ನಡೆಸಿರುವ ಪ್ರಕರಣಗಳು ದಾಖಲಾಗಿವೆ.

  • ಹಸುಗಳು ಆಮ್ಲಜನಕವನ್ನು ಹೊರಬಿಡುತ್ತವೆ – ಉತ್ತರಾಖಂಡ್‍ ಸಿಎಂ

    ಹಸುಗಳು ಆಮ್ಲಜನಕವನ್ನು ಹೊರಬಿಡುತ್ತವೆ – ಉತ್ತರಾಖಂಡ್‍ ಸಿಎಂ

    ಡೆಹ್ರಾಡೂನ್: ಹಸುಗಳು ಆಮ್ಲಜನಕವನ್ನು ಉಸಿರಾಡಿ, ಆಮ್ಲಜನಕವನ್ನು ಹೊರ ಬಿಡುವ ಏಕೈಕ ಪ್ರಾಣಿ ಎಂದು ಉತ್ತರಾಖಂಡ್‍ನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

    ಡೆಹ್ರಾಡೂನ್‍ನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾವತ್ ಅವರು ಹಸುವನ್ನು ಹೊಗಳುವ ಸಮಯದಲ್ಲಿ, ಹಸು ಆಮ್ಲಜನಕವನ್ನು ಹೊರಬಿಡುತ್ತದೆ. ಹಸುವನ್ನು ಮಸಾಜ್ ಮಾಡುವುದರಿಂದ ಮನುಷ್ಯನ ಉಸಿರಾಟದ ಸಮಸ್ಯೆ ಗುಣವಾಗುತ್ತದೆ ಎಂದು ಹೇಳಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

    ಹಸುವಿನ ಹಾಲು ಮತ್ತು ಮೂತ್ರದಲ್ಲಿ ಔಷಧೀಯ ಗುಣಗಳು ಹೆಚ್ಚಾಗಿ ಇರುತ್ತೇವೆ ಎಂದು ಹೇಳುವ ಬರದಲ್ಲಿ ರಾವತ್ ಅವರು ಹಸು ಅಮ್ಲಜನಕವನ್ನು ಹೊರಬಿಡುತ್ತದೆ. ಹಸುವನ್ನು ಮಸಾಜ್ ಮಾಡುವುದರಿಂದ ಮನುಷ್ಯನಿಗೆ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ. ಹಸುವಿನ ಜೊತೆ ಹತ್ತಿರದಲ್ಲಿ ವಾಸಿಸುವುದರಿಂದ ಕ್ಷಯರೋಗ ಗುಣವಾಗುತ್ತದೆ ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಉತ್ತರಾಖಂಡ್‍ನ ಬಿಜೆಪಿ ಅಧ್ಯಕ್ಷ ಮತ್ತು ನೈನಿತಾಲ್ ಕ್ಷೇತ್ರದ ಶಾಸಕ ಅಜಯ್ ಭಟ್, ಗರ್ಭಿಣಿಯರು ಭಾಗೇಶ್ವರ ಜಿಲ್ಲೆಯ ಗರುದ್‍ನ ಗಂಗಾ ನದಿಯ ನೀರು ಕುಡಿದರೆ ಸಿಸೇರಿಯನ್ ಹೆರಿಗೆ ಮಾಡುವುದನ್ನು ತಪ್ಪಿಸಬಹುದು ಎಂದು ಹೇಳಿದ ಕೆಲ ದಿನಗಳ ನಂತರ ಮುಖ್ಯಮಂತ್ರಿಯವರು ಹಸುವನ್ನು ಹೊಗಳಿರುವುದು ಈಗ ಭಾರೀ ಸುದ್ದಿಯಾಗಿದೆ.

    ಸಿಎಂ ಅವರ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅಧಿಕಾರಿಯೊಬ್ಬರು ಮುಖ್ಯಮಂತ್ರಿಗಳು ಉತ್ತರಾಖಂಡ್‍ನಲ್ಲಿ ಇರುವ ಸಾಮಾನ್ಯ ನಂಬಿಕೆಗಳ ಬಗ್ಗೆ ಮಾತನಾಡುವ ಸಮಯದಲ್ಲಿ ಈ ರೀತಿ ಹೇಳಿದ್ದಾರೆ. ಹಸುವಿನ ಹಾಲು ಮತ್ತು ಮೂತ್ರದಲ್ಲಿ ಔಷಧೀಯ ಗುಣಗಳು ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ ಮತ್ತು ಉತ್ತರಾಖಂಡ್‍ನ ಬೆಟ್ಟದಲ್ಲಿ ವಾಸಿಸುವ ಕೆಲ ಜನರು ಹಸು ನಮಗೆ ಉಸಿರಾಡಲು ಆಮ್ಲಜನಕ ನೀಡುತ್ತದೆ ಎಂದು ನಂಬುತ್ತಾರೆ ಈ ರೀತಿಯಲ್ಲಿ ಸಿಎಂ ಅವರು ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

  • ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ್ನು ರಕ್ಷಿಸಿದ ಪೊಲೀಸ್ – ವಿಡಿಯೋ

    ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ್ನು ರಕ್ಷಿಸಿದ ಪೊಲೀಸ್ – ವಿಡಿಯೋ

    ಡೆಹ್ರಾಡೂನ್: ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ್ನು ಪೊಲೀಸ್ ಅಧಿಕಾರಿಯೊಬ್ಬರು ಕಾಪಾಡಿರುವ ಘಟನೆ ಉತ್ತರಾಖಂಡ್‍ನಲ್ಲಿ ನಡೆದಿದೆ.

    ಈ ಘಟನೆ ಉತ್ತರಾಖಂಡ್‍ನ ಹರಿದ್ವಾರದಲ್ಲಿ ನಡೆದಿದ್ದು, ಗಂಗಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಕಾಪಾಡಲು ಪೊಲೀಸ್ ಅಧಿಕಾರಿಯೊಬ್ಬರು ಲೈಫ್ ಜಾಕೆಟ್ ಧರಿಸಿ ನದಿಗೆ ಹಾರಿದ್ದಾರೆ. ಇದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಉತ್ತರಾಖಂಡ್ ಪೊಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ನದಿಗೆ ಹಾರಿದ ಪೊಲೀಸ್ ಅಧಿಕಾರಯನ್ನು ಸನ್ನಿ ಎಂದು ಗುರುತಿಸಲಾಗಿದೆ. ಇನ್ನು ಹರಿಯಾಣದ ನಿವಾಸಿಯಾದ ವಿಶಾಲ್ ಕಾಂಗ್ರಾ ಘಾಟ್‍ನಲ್ಲಿ ಸ್ನಾನ ಮಾಡಲು ಹೋಗಿ ಸಮತೋಲನ ಕಳೆದುಕೊಂಡು ನದಿಯಲ್ಲಿ ಬಿದ್ದಿದ್ದಾನೆ. ವೇಗದಿಂದ ಹರಿಯುತ್ತಿದ್ದ ಕಾರಣ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ.

    https://twitter.com/subodhh9879/status/1152999979054768131

    ಈ ಸಮಯದಲ್ಲಿ ಅಲ್ಲೇ ಇದ್ದ ಸನ್ನಿಯವರು ಯುವಕನನ್ನು ಕಾಪಾಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ವೀಡಿಯೊವನ್ನು 55,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ ಮತ್ತು ಪೊಲೀಸ್ ಅಧಿಕಾರಿಯ ಧೈರ್ಯವನ್ನು ಶ್ಲಾಘಿಸಿ ತುಂಬಾ ಜನ ಕಮೆಂಟ್ ಮಾಡಿದ್ದಾರೆ.

    ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಆಗಿದ್ದು, ಗಂಗಾ ನದಿಯ ನೀರಿನ ಮಟ್ಟವನ್ನು ಹೆಚ್ಚಾಗಿದೆ. ಈಗ ಅಲ್ಲಿ ನಡೆಯುತ್ತಿರುವ ಕನ್ವರ್ ಯಾತ್ರೆಯಲ್ಲಿ ಜನರು ನೀರಿಗೆ ಇಳಿಯದಂತೆ ನೋಡಿಕೊಳ್ಳಲು ಜಲ ಪೊಲೀಸ್ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್‍ಡಿಆರ್‍ಎಫ್) ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.