ಡೆಹ್ರಾಡೂನ್: ಈ ಬಾರಿಯ ಕುಂಭಮೇಳಕ್ಕೆ ಭಾಗವಹಿಸಲು ಆಗಮಿಸುವಂತಹ ಭಕ್ತರಿಗೆ 72 ಗಂಟೆಗಳ ಒಳಗಿನ ಕೋವಿಡ್ ನೆಗೆಟಿವ್ ಟೆಸ್ಟ್ ರಿಪೋರ್ಟ್ ಕಡ್ಡಾಯ ಎಂದು ಉತ್ತರಾಖಂಡದ ಸರ್ಕಾರ ಆದೇಶ ಹೊರಡಿಸಿದೆ.
ಉತ್ತರಾಖಂಡದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ ಒಂದೇ ದಿನ 200 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಹಾಗಾಗಿ ಹರಿದ್ವಾರದಲ್ಲಿ ನಡೆಯಲಿರುವ ಈ ಬಾರಿಯ ಕುಂಭಮೇಳಕ್ಕೆ ಬರುವ ಭಕ್ತರಿಗೆ 72 ಗಂಟೆಗಳ ಒಳಗಿನ ಕೊರೊನಾ ನೆಗೆಟಿವ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ.
ಈಗಾಗಲೇ ಹರಿದ್ವಾರದಲ್ಲಿ ಕುಂಭಮೇಳಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಎಪ್ರಿಲ್ 1 ರಿಂದ ಕುಂಭಮೇಳ ಆರಂಭವಾಗುತ್ತಿದೆ. ಈ ನಡುವೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ ಒಂದೇ ದಿನ ಹರಿದ್ವಾರದಲ್ಲಿ 71, ಡೆಹ್ರಾಡೂನ್ 63, ನೈನಿತಾಲ್ 22 ಮತ್ತು ಇತರ ನಗರಗಳಲ್ಲಿ ಹೊಸ ಕೊರೊನಾ ಕೇಸ್ ಪತ್ತೆಯಾಗಿದೆ.
ಕುಂಭಮೇಳಕ್ಕೆ ಆಗಮಿಸುವ ಭಕ್ತರು 72 ಗಂಟೆಗಳ ಒಳಗಿನ ಕೋವಿಡ್ ನೆಗೆಟಿವ್ ವರದಿ ಅಥವಾ ಕೊರೊನಾ ಲಸಿಕೆ ಪಡೆದುಕೊಂಡ ವರದಿಯನ್ನು ಸಲ್ಲಿಸಿ ಕುಂಭಮೇಳದಲ್ಲಿ ಪಾಲ್ಗೊಳ್ಳುವಂತೆ ಉತ್ತರಾಖಂಡದ ಹೈಕೋರ್ಟ್ ಆದೇಶ ಹೊರಡಿಸಿರುವುದಾಗಿ ಕುಂಭಮೇಳದ ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ್ ಸ್ಥಳೀಯ ಮಾಧ್ಯಮದೊಂದಿಗೆ ಸ್ಪಷ್ಟಪಡಿಸಿದ್ದಾರೆ.
ಡೆಹರಾಡೂನ್: ಹಿಂದೂಯೇತರರಿಗೆ ದೇವಸ್ಥಾನದೊಳಗೆ ಪ್ರವೇಶವಿಲ್ಲ ಎಂದು ಬ್ಯಾನರ್ ಅಳವಡಿಸಿದ್ದ ದಕ್ಷಿಣಪಂಥಿ ಸಂಘಟನೆಯ ಹಿಂದೂ ಯುವ ವಾಹಿನಿಯ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಉತ್ತರಾಖಂಡ ರಾಜಧಾನಿ ಡೆಹರಾಡೂನ್ ನಗರದ 150ಕ್ಕೂ ಅಧಿಕ ದೇವಸ್ಥಾನಗಳ ಮುಂದೆ ಬ್ಯಾನರ್ ಅಳವಡಿಸಲಾಗಿತ್ತು. ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಲೇ ಎಚ್ಚೆತ್ತ ಪೊಲೀಸರು ವಿವಾದಾತ್ಮಕ ಬರಹವುಳ್ಳ ಬ್ಯಾನರ್ ಗಳನ್ನ ತೆಗೆದು ಹಾಕಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬ್ಯಾನರ್ ನಲ್ಲಿ ಹಿಂದೂ ಧರ್ಮದ ರಕ್ಷಣೆಯ ಕುರಿತಾಗಿ ಹೇಳಲಾಗಿತ್ತು. ಅನ್ಯ ಧರ್ಮದವರು ನಮ್ಮ ಧಾರ್ಮಿಕ ಕ್ಷೇತ್ರಗಳಲ್ಲಿ ಬರುವ ಅವಶ್ಯಕತೆ ಇಲ್ಲ. ಒಂದು ವೇಳೆ ಪ್ರವೇಶ ಮಾಡಿದವರನ್ನ ಥಳಿಸಲಾಗುವುದು ಎಂದು ಎಚ್ಚರಿಕೆಯನ್ನ ಹಿಂದೂ ವಾಹಿನಿಯ ಕಾರ್ಯಕರ್ತರು ನೀಡಿದ್ದರು. ಆರಂಭದಲ್ಲಿ ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದರು. ಚಕರಾತಾ ರಸ್ತೆ, ಸುದೋವಾಲಾ ಮತ್ತು ಪ್ರೇಮನಗರದ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಸಲಾಗಿತ್ತು.
ಅನ್ಯ ಕೋಮಿನವರು ಹಿಂದೂ ದೇವಾಲಯದೊಳಗೆ ಬಂದವರನ್ನ ಥಳಿಸಲಾಗುವುದು. ಥಳಿಸಿದ ಬಳಿಕ ಪೊಲೀಸರ ವಶಕ್ಕೆ ನೀಡಲಾಗುವುದು. ದೇವಸ್ಥಾನ ಅನ್ನೋದು ಹಿಂದೂ ಧರ್ಮದ ನಂಬಿಕೆ ಮತ್ತು ಆಸ್ಮಿತೆ. ದೇವಾಲಯವನ್ನ ಧ್ಯಾನದ ಕೇಂದ್ರ ಅಂದ್ರೆ ಶಾಂತಿ ಸಿಗುವ ಸ್ಥಳ. ಹಾಗಾಗಿ ಅನ್ಯ ಧರ್ಮದವರಿಗೆ ದೇವಾಲಯದ ಪರಿಸರದಲ್ಲಿ ಏನು ಕೆಲಸ? ಧರ್ಮ ರಕ್ಷಣೆಗಾಗಿ ಈ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಹಿಂದೂ ಯುವ ವಾಹಿನಿಯ ಪ್ರದೇಶ ಅಧ್ಯಕ್ಷ ಗೋವಿಂದ್ ವಾದವಾ ಬ್ಯಾನರ್ ಅಳವಡಿಕೆಯನ್ನ ಸಮರ್ಥಿಸಿಕೊಂಡಿದ್ದರು.
ಇದು ಬಿಜೆಪಿ ಸರ್ಕಾರದ ಆಡಳಿತಕ್ಕೆ ಹಿಡಿದ ಕನ್ನಡಿ. ನಾಲ್ಕು ವರ್ಷಗಳಲ್ಲಿ ಏನು ಮಾಡದ ಕಮಲ ಸರ್ಕಾರ, ತನ್ನ ಹುಳುಕುಗಳನ್ನ ಮುಚ್ಚಿಕೊಳ್ಳಲು ಸಂಸ್ಕೃತಿಗೆ ಸಂಬಂಧಿಸಿದ ವಿವಾದಿತ ವಿಷಯಗಳನ್ನ ಮುನ್ನಲೆಗೆ ತಂದಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು. ಇತ್ತ ಸಾರ್ವಜನಿಕರು ಮತ್ತು ಚಿಂತಕರು, ಈ ಘಟನೆ ಹಿಂಸೆ ರೂಪ ಪಡೆದುಕೊಳ್ಳುವ ಮುನ್ನ ಪೊಲೀಸರೇ ಈ ಬ್ಯಾನರ್ ಗಳನ್ನು ತೆಗೆಯಬೇಕೆಂದು ಆಗ್ರಹಿಸಿದ್ದರು.
ಡೆಹರಾಡೂನ್: ಸಿಎಂ ಪಟ್ಟಕ್ಕೇರಿದಾಗಿನಿಂದಲೂ ಉತ್ತರಾಖಂಡದ ಬಿಜೆಪಿ ಮುಖ್ಯಮಂತ್ರಿ ತೀರ್ಥ್ ಸಿಂಗ್ ರಾವತ್ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬುಧವಾರ ರಿಪ್ಪಡ್ ಜೀನ್ಸ್ ಬಗ್ಗೆ ಕಮೆಂಟ್ ಮಾಡಿದ್ದ ಮುಖ್ಯಮಂತ್ರಿಗಳ ಮತ್ತೊಂದು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಮಹಿಳೆಯರು ಧರಿಸುವ ಕಟ್ ಡ್ರೆಸ್ ಅಥವಾ ಶಾರ್ಟ್ಸ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಿಎಂ ವಿರುದ್ಧ ಆಕ್ರೋಶ ಹೊರ ಹಾಕುತ್ತಿರುವ ಮಹಿಳೆಯರು, ಮುಖ್ಯಮಂತ್ರಿಗಳ ತಮ್ಮ ಆಲೋಚನೆ ಬದಲಿಸಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
ವೀಡಿಯೋದಲ್ಲಿ ಏನಿದೆ?:
ನಾನು ಶ್ರೀನಗರದಲ್ಲಿ ಓದುತ್ತಿರುವಾಗ ಚಂಡಿಗಢನಿಂದ ಓರ್ವ ಯುವತಿ ಬಂದಿದ್ದಳು. ಶ್ರೀನಗರದವರೇ ಆಗಿದ್ರೂ ಚಂಡೀಗಢನಿಂದ ಬಂದಿದ್ದರಿಂದ ಯುವತಿಯ ಉಡುಗೆ ಭಿನ್ನವಾಗಿತ್ತು. ಅದಕ್ಕೇ ಏನಂತಾರೆ ಅಂದ್ರೆ ಕಟ್ ಡ್ರೆಸ್ ಅಲ್ವಾ? ನಾವು ಆಕೆಯನ್ನ ಹಾಸ್ಯ ಮಾಡುತ್ತಿದ್ದೇವೆ. ಕಾರಣ ಎಲ್ಲ ಹುಡುಗರು ಆಕೆ ಹಿಂದೆಯೇ ತಿರುಗುತ್ತಿದ್ರು. ಯುನಿವರ್ಸಿಟಿಗೆ ಓದೋದಕ್ಕೆ ಬರೋದಾ ಅಥವಾ ಅಂಗಾಂಗ ಪ್ರದರ್ಶನಕ್ಕೆ ಬರೋದಾ ಎಂದು ತೀರ್ಥ್ ಸಿಂಗ್ ವೀಡಿಯೋದಲ್ಲಿ ಪ್ರಶ್ನೆ ಮಾಡಿದ್ದಾರೆ.
ಹರಿದ ಜೀನ್ಸ್ ಹೇಳಿಕೆ ಬೆನ್ನಲ್ಲೇ ಈ ವೀಡಿಯೋ ವೈರಲ್ ಆಗಿದೆ. ವಿಪಕ್ಷಗಳು ಸೇರಿದಂತೆ ಸಿಎಂ ಹೇಳಿಕೆಯನ್ನ ಅಸ್ತ್ರವಾಗಿ ಬಳಸಿಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆದ್ರೆ ಈ ವೀಡಿಯೋ ಎಲ್ಲಿಯದ್ದು ಮತ್ತು ಯಾವಾಗ ತೀರ್ಥ್ ಸಿಂಗ್ ಹೇಳಿಕೆ ನೀಡಿದ್ದು ಎಂಬುದರ ಬಗ್ಗೆ ವರದಿಯಾಗಿಲ್ಲ.
ಹರಿದ ಜೀನ್ಸ್ ಧರಿಸೋದು ಯಾವ ಸಂಸ್ಕೃತಿ?: ಬುಧವಾರ ಮಕ್ಕಳ ಹಕ್ಕು ಮತ್ತು ಸಂರಕ್ಷಣಾ ಆಯೋಗದ ಕಚೇರಿ ಉದ್ಘಾಟಿಸಿ ಮಾತನಾಡಿದ್ದ ಸಿಎಂ, ಹರಿದ ಜೀನ್ಸ್ ಧರಿಸುವ ಮಹಿಳೆಯರು ಸಮಾಜಕ್ಕೆ ಏನು ಸಂದೇಶ ನೀಡುತ್ತಾರೆ? ಹರಿದ ಜೀನ್ಸ್ ಧರಿಸುವಿಕೆ ಇದ್ಯಾವ ಸಂಸ್ಕೃತಿ ಎಂದು ಪ್ರಶ್ನಿಸಿದ್ದಾರೆ. ಈ ಜೀವನಶೈಲಿ ಪೋಷಕರ ಮೇಲೆ ನಿರ್ಧರಿತವಾಗಿರುತ್ತೆ ಎಂದು ಹೇಳಿದ್ದರು.
ಒಂದು ದಿನ ವಿಮಾನಯಾನ ಮಾಡುವಾಗ ಮಹಿಳೆ ಇಬ್ಬರು ಮಕ್ಕಳ ಜೊತೆ ಬಂದು ಪಕ್ಕದಲ್ಲಿ ಕುಳಿತರು. ಮಹಿಳೆ ಹರಿದ ಜೀನ್ಸ್ ಧರಿಸಿದ್ದರು. ಸೋದರಿ ಎಲ್ಲಿಗೆ ಹೋಗ್ತೀದ್ದೀರಾ ಅಂತ ಕೇಳಿದಾಗ ಮಹಿಳೆ ತಮ್ಮ ಕಿರು ಪರಿಚಯ ಮಾಡಿಕೊಂಡರು. ಪತಿ ಜೆಎನ್‍ಯುನಲ್ಲಿ ಉಪನ್ಯಾಸಕರಾಗಿದ್ದು, ತಾನು ಎನ್‍ಜಿಓ ನಡೆಸುತ್ತಿರೋದಾಗಿ ತಿಳಿಸಿದರು. ಹರಿದ ಜೀನ್ಸ್ ಧರಿಸಿದ ಮಹಿಳೆ ಎನ್‍ಜಿಓ ಮೂಲಕ ಸಮಾಜಕ್ಕೆ ಏನು ಸಂದೇಶ ಕೊಡುತ್ತಾರೆ. ನಮ್ಮ ಶಾಲಾ ದಿನಗಳಲ್ಲಿ ಈ ರೀತಿಯ ಜೀವನ ಶೈಲಿ ಇರಲಿಲ್ಲ ಎಂದು ಹೇಳಿದ್ದರು.
ಡೆಹರಾಡೂನ್: ಮುಂದಕ್ಕೆ ಚಲಿಸಬೇಕಾಗಿದ್ದ ಶತಾಬ್ದಿ ಎಕ್ಸ್ ಪ್ರೆಸ್ ರೈಲು ತಾಂತ್ರಿಕ ದೋಷದಿಂದ ಹಿಂದಕ್ಕೆ ಚಲಿಸಿದ ಘಟನೆ ಉತ್ತರಾಖಂಡದಲ್ಲಿ ಬುಧವಾರ ನಡೆದಿದೆ.
ದೆಹಲಿಯಿಂದ ತನಕಪುರಕ್ಕೆ ತೆರಳಲುತ್ತಿದ್ದ ಪೂರ್ಣಗಿರಿ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲು ತಾಂತ್ರಿಕ ದೋಷದಿಂದ 35ಕಿ.ಮೀ ಹಿಂದಕ್ಕೆ ಚಲಿಸಿದೆ. ಅದೃಷ್ಟವಶತ್ ಈ ಘಟನೆಯಿಂದ ಯಾವುದೇ ಅಪಘಾತ ಸಂಭವಿಸಿಲ್ಲ. ಅಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 60-70 ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ ಹಾಗೂ ಎಲ್ಲರು ಅನಾಹುತದಿಂದ ಪಾರಾಗಿದ್ದಾರೆ. ಸದ್ಯ ಪ್ರಯಾಣಿಕರೆಲ್ಲರನ್ನು ಸುರಕ್ಷಿತವಾಗಿ ಚಕ್ರಪುರಕ್ಕೆ ಕರೆದೊಯ್ದು ಬಸ್ ಮೂಲಕ ಕಳುಹಿಸಲಾಯಿತು.
ಈ ಕುರಿತಂತೆ ಈಶಾನ್ಯ ರೈಲ್ವೆ, ಈ ಘಟನೆಯು 2021ರ ಮಾರ್ಚ್17ರಂದು ಖತಿಮಾ-ತನಕ್ಪುರ ವಿಭಾಗದಲ್ಲಿ ಜಾನುವಾರುಗಳು ರೈಲಿನ ಮಧ್ಯೆ ಓಡಿಹೋದ್ದರಿಂದ ಘಟನೆ ಸಂಭವಿಸಿದ್ದು, ರೈಲನ್ನು ಖತಿಮಾದಲ್ಲಿ ನಿಲ್ಲಿಸಲಾಯಿತು. ಬಳಿಕ ಪ್ರಯಾಣಿಕರನ್ನು ಸುರಕ್ಷಿತವಾಗಿ ತನಕ್ಪುರಕ್ಕೆ ಕಳುಹಿಕೊಡಲಾಗಿದ್ದು, ನಂತರ ಲೊಕೊ ಪೈಲಟ್ ಮತ್ತು ಸಿಬ್ಬಂದಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಘಟನೆ ವಿಚಾರವಾಗಿ ಚಂಪಾವತ್ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ವರ ಸಿಂಗ್, ಪ್ರಾಣಿಗಳ ಜೀವ ಉಳಿಸಲು ತಕ್ಷಣ ಬ್ರೇಕ್ ಹಾಕಿದಾಗ ಮುಂದಕ್ಕೆ ಚಲಿಸುತ್ತಿದ್ದ ರೈಲು ತಾಂತ್ರಿಕ ದೋಷದಿಂದ ವಿರುದ್ಧ ದಿಕ್ಕಿಗೆ ಚಲಿಸಿದೆ. ಹೀಗಾಗಿ ಚಕರ್‍ಪುರದಲ್ಲಿ ರೈಲನ್ನು ನಿಲ್ಲಿಸಲಾಯಿತು ಎಂದು ಹೇಳಿದ್ದಾರೆ.
https://youtu.be/4x6T3wfhqzM
ಇದು ಉತ್ತರಾಖಂಡದಲ್ಲಿ ಈ ವಾರ ಸಂಭವಿಸಿದ 2ನೇ ಘಟನೆಯಾಗಿದ್ದು, ಶನಿವಾರ ದೆಹಲಿ-ಡೆಹ್ರಾಡೂನ್ ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಈ ವೇಳೆ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಹಾನಿಗಳಾಗಲಿಲ್ಲ.
ಡೆಹ್ರಾಡೂನ್: ಮಹತ್ವದ ಬೆಳವಣಿಗೆಯಲ್ಲಿ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ.
ಬಜೆಟ್ ಅಧಿವೇಶನದ ಸಮಯದಲ್ಲಿ ಮಾ.07 ರಂದು ಬಿಜೆಪಿ ದಿಢೀರ್ ಕೋರ್ ಕಮಿಟಿ ಸಭೆ ನಡೆಸಿ ಸರ್ಕಾರದಲ್ಲಿ ಮಹತ್ವದ ಬದಲಾವಣೆಯ ಸುಳಿವು ನೀಡಿತ್ತು. ತ್ರಿವೇಂದ್ರ ಸಿಂಗ್ ರಾವತ್ ಮಂಗಳವಾರ ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.
ಉತ್ತಾರಖಂಡ್ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ 60 ವರ್ಷದ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಪಡೆದು ನಾಯಕತ್ವ ಬದಲಾವಣೆ ನಿರ್ಧಾರಕ್ಕೆ ಹೈ ಕಮಾಂಡ್ ಕೈ ಹಾಕಿರುವುದು ಅಚ್ಚರಿಗೆ ಕಾರಣವಾಗಿದೆ.
ರಾಜೀನಾಮೆ ಯಾಕೆ?
ಬಿಜೆಪಿ ಶಾಸಕರು ರಾವತ್ ಅವರ ಆಡಳಿತ ಶೈಲಿಯ ಬಗ್ಗೆ ಹೈಕಮಾಂಡ್ ಗೆ ದೂರು ನೀಡಿದ್ದರು. ಇವರೇ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂದು ತಿಳಿಸಿದ್ದರು ಎನ್ನಲಾಗುತ್ತಿದೆ.
The party gave me a golden opportunity to serve this State for four years. I had never thought that I would get such an opportunity. The party has now decided that the opportunity to serve as CM should be given to someone else now: Trivendra Singh Rawat, BJP in Dehradun pic.twitter.com/cwj36xkSZd
ಕೋರ್ ಕಮಿಟಿ ಸಭೆ ನಡೆದ ಬೆನ್ನಲ್ಲೇ ಮಾ.08 ರಂದು ದೆಹಲಿಗೆ ಭೇಟಿ ನೀಡಿದ್ದ ರಾವತ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು.
ಒಟ್ಟು 69 ವಿಧಾನಸಭಾ ಕ್ಷೇತ್ರಗಳಿದ್ದು 2017ರ ವಿಧಾನಸಭೆಯಲ್ಲಿ ಬಿಜೆಪಿ 59 ಸ್ಥಾನವನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಏರಿತ್ತು. ಕಾಂಗ್ರೆಸ್ 11 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತ್ತು.
Uttarakhand CM Trivendra Singh Rawat submitted his resignation today. While accepting his resignation, I have asked him to be the acting CM till a new CM is appointed and takes charge: Uttarakhand Governor Baby Rani Maurya pic.twitter.com/NmADWtSrCX
ಡೆಹ್ರಾಡೂನ್: ಹಿಮ ಪ್ರಳಯಕ್ಕೆ ತುತ್ತಾದ ಉತ್ತರಾಖಂಡ್‍ನ ಚಮೋಲಿ ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ರಕ್ಷಣಾ ಕಾರ್ಯ ಮುಂದುವರಿದಿದೆ.
ತಪೋವನ ಜಲವಿದ್ಯುತ್ ಕೇಂದ್ರದ ಸುರಂಗದಲ್ಲಿ ತುಂಬಿದ ಕೆಸರನ್ನು ತೆರವು ಮಾಡಲಾಗಿದ್ದು, ಈ ವೇಳೆ ಹಲವು ಶವ ಪತ್ತೆಯಾಗಿವೆ. ಇದುವರೆಗೂ ಮೃತರ ಸಂಖ್ಯೆ 31ಕ್ಕೆ ಹೆಚ್ಚಳವಾಗಿದೆ. ಸರಿಸುಮಾರು 30 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 160 ಮಂದಿ ಪತ್ತೆಯಾಗಬೇಕಿದೆ.
ಹಿಮಸುನಾಮಿಗೆ ತುತ್ತಾದ ಗ್ರಾಮಗಳಲ್ಲಿಯೂ ರಕ್ಷಣಾ ಕಾರ್ಯಚರಣೆಗಳು ಭರದಿಂದ ನಡೆಯುತ್ತಿವೆ. ಹೆಲಿಕಾಪ್ಟರ್ ಮೂಲಕ ಆಹಾರ ವಿತರಣೆ ಮುಂದುವರಿದಿದೆ. ಈ ಮಧ್ಯೆ ಹಿಮಪ್ರಳಯಕ್ಕೆ ಮುನ್ನ ಹಾಗೂ ಹಿಮಪ್ರಳಯದ ನಂತರ ಎಂಬ ಎರಡು ಸ್ಯಾಟಲೈಟ್ ಇಮೇಜ್‍ಗಳನ್ನು ಪ್ಲಾನೆಟ್ ಲ್ಯಾಬ್ಸ್ ಇಂಕ್ ರಿಲೀಸ್ ಮಾಡಿದೆ. ಇದನ್ನೂ ಓದಿ: ನಂದಾದೇವಿ ಹಿಮಪರ್ವತ ಕುಸಿತ, ಕೊಚ್ಚಿ ಹೋಯ್ತು ಸೇತುವೆ – ನಡೆದಿದ್ದು ಏನು?
ಹಿಮ ಪ್ರಳಯಕ್ಕೆ ಮುನ್ನ ಅಂದ್ರೆ ಫೆಬ್ರವರಿ 6ರಂದು ನಿರ್ಗಲ್ಲುಗಳು ಇರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಫೆಬ್ರವರಿ 7ರಂದು ನಿರ್ಗಲ್ಲುಗಳು ಮುರಿದು ಬಿದ್ದಿರೋದು ಸ್ಯಾಟಲೈಟ್ ಚಿತ್ರಗಳಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. 1970ರಲ್ಲಿ ನಡೆದಿದ್ದ ಚಿಪ್ಕೋ ಚಳಿವಳಿಯ ಕೇಂದ್ರಬಿಂದು ರೇಣಿ ಗ್ರಾಮದ ಸುತ್ತಮುತ್ತಲೇ ಈ ದುರಂತ ನಡೆದಿರೋದು ವಿಪರ್ಯಾಸ. ಇದನ್ನೂ ಓದಿ: ಹಿಮ ಪ್ರಳಯ- ಒಂದು ಫೋನ್ ಕರೆಯಿಂದ ಉಳಿಯಿತು 12 ಜನರ ಜೀವ
ಡೆಹರಾಡೂನ್: ಭಾನುವಾರ ಬೆಳಗ್ಗೆ ಸಂಭವಿಸಿದ ಹಿಮ ಪ್ರಳಯದಿಂದ ಉತ್ತರಾಖಂಡ ಇನ್ನೂ ಚೇತರಿಸಿಕೊಂಡಿಲ್ಲ. ಒಂದು ಫೋನ್ ಕಾಲ್ ನಿಂದ 12 ಜನರ ಜೀವ ಉಳಿದ ವಿಷಯ ಬೆಳಕಿಗೆ ಬಂದಿದೆ. ಸುರಂಗದಲ್ಲಿ ಸಿಲುಕಿದ್ದ 12 ಜನರ ಜೀವವನ್ನ ಒಂದು ಫೋನ್ ಕರೆ ಉಳಿಸಿದೆ.
ಸುರಂಗದಲ್ಲಿ ಸಿಲುಕಿದ್ದ ಓರ್ವ ಕಾರ್ಮಿಕ ತಾವು ಹೊರ ಬಂದ ಅಚ್ಚರಿಯ ವಿಷಯವನ್ನ ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. ದಿಢೀರ್ ಅಂತ ಸುರಂಗದೊಳಗೆ ನೀರು ಮತ್ತು ಕೆಸರು ಸೇರಿಕೊಳ್ಳಲಾರಂಭಿಸಿತು. ಹೊರ ಬರುವ ಎಲ್ಲ ಮಾರ್ಗಗಳು ಬಂದ್ ಆಗಿದ್ದರಿಂದ ಸುರಂಗದಲ್ಲಿದ್ದ 12 ಜನರು ಜೀವದ ಆಸೆಯನ್ನ ಚೆಲ್ಲಿ ಭಯದ ಸ್ಥಿತಿಯಲ್ಲಿದ್ದೀವಿ. ಈ ವೇಳೆ ನಮ್ಮ ಜೊತೆಯಲ್ಲಿದ್ದ ಓರ್ವ ವ್ಯಕ್ತಿಯ ಮೊಬೈಲ್ ನಲ್ಲಿ ನೆಟ್‍ವರ್ಕ್ ಸಿಕ್ತು. ಕೂಡಲೇ ನಮ್ಮ ಅಧಿಕಾರಿಗಳಿಗೆ ಫೋನ್ ಮಾಡಿ ತಾವು ಸಿಲುಕಿರುವ ವಿಷಯ ಮತ್ತು ಸ್ಥಳವನ್ನ ತಿಳಿಸಿದ್ದೀವಿ. ಕೆಲ ಗಂಟೆಗಳ ಬಳಿಕ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸರು ನಮ್ಮೆಲ್ಲರನ್ನ ರಕ್ಷಿಸಿದರು ಎಂದು ಹೇಳಿದ್ದಾರೆ.
ನಾನು ಚಮೋಲಿಯ ಧಾಕಾ ಗ್ರಾಮದ ನಿವಾಸಿ. ತಪೋವನ ಪ್ರೊಜೆಕ್ಟ್ ನಲ್ಲಿ ಕೆಲಸ ಮಾಡಿಕೊಂಡಿದ್ದೆ. ಸುರಂಗದೊಳಗೆ ನೀರು ಬಂದಾಗ ಜೀವದ ಮೇಲಿನ ಆಸೆಯನ್ನೇ ಬಿಟ್ಟಿದ್ದೆ. ಕೊನೆಗೆ ಸುರಂಗದಿಂದ ಸಣ್ಣದಾದ ಬೆಳಕಿನ ಕಿರಣ ಕಾಣಿಸಿದ್ದರಿಂದ ಉಸಿರಾಡಲ ಸಮಸ್ಯೆಯಾಗಲಿಲ್ಲ. ನಮ್ಮ ಸಹದ್ಯೋಗಿ ಫೋನ್ ಮಾಡಿದ್ದರಿಂದ ನಾವು ಬದುಕುಳಿದಿದ್ದೇವೆ ಎಂದು ಮತ್ತೋರ್ವ ನೌಕರ ತಿಳಿಸಿದ್ದಾರೆ.
ಹಿಮ ಸುನಾಮಿಯಲ್ಲಿ ಕೊಚ್ಚಿಹೋದ 170 ಮಂದಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಇಂದು ನಾಲ್ವರ ಶವ ಪತ್ತೆಯಾಗಿದ್ದು, ಮೃತರ ಸಂಖ್ಯೆ 18ಕ್ಕೆ ಹೆಚ್ಚಿದೆ. ರಕ್ಷಣಾ ಪಡೆಗಳು ಹರಸಾಹಸ ನಡೆಸಿ ತಪೊವನ ಸುರಂಗದಲ್ಲಿ ಸಿಲುಕಿದ್ದ 30 ಮಂದಿಯನ್ನು ರಕ್ಷಿಸಿದ್ದಾರೆ. ಸುರಂಗದಲ್ಲಿ ತುಂಬಿಹೋಗಿರುವ ಕೆಸರಿನ ರಾಶಿಯನ್ನು ಹೊರಹಾಕಲು ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ.
250 ಮೀಟರ್ ಉದ್ದದ ಸುರಂಗದೊಳಗೆ 150 ಮೀಟರ್‍ವರೆಗೂ ಎಸ್‍ಡಿಆರ್‍ಎಫ್ ಪಡೆಗಳು ಅತೀಕಷ್ಟದಿಂದ ಹೋಗಿ ಕೆಸರಿನಲ್ಲಿ ಸಿಲುಕಿದ್ದ 30 ಮಂದಿಯನ್ನು ರಕ್ಷಿಸಿವೆ. ಮತ್ತೊಂದೆಡೆ ಧೌಲಿ ಗಂಗಾ ನದಿ ನೀರಿನ ಮಟ್ಟ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಭಾನುವಾರ ದಿಢೀರ್ ಹಿಮ ಪ್ರಳಯದ ಕಾರಣ ತಪೋವನ್-ವಿಷ್ಣುಘಡ ಜಲವಿದ್ಯುತ್ ಕೇಂದ್ರದಲ್ಲಿ ಕೆಲಸ ಮಾಡ್ತಿದ್ದ 170 ಕಾರ್ಮಿಕರು ಕೊಚ್ಚಿಹೋಗಿದ್ರು. ಈ ಮಧ್ಯೆ, ಜಲವಿಲಯದಿಂದ ಪ್ರಾಣನಷ್ಟದ ಜೊತೆಗೆ ಭಾರೀ ಆಸ್ತಿ ಹಾನಿ ಸಂಭವಿಸಿದೆ.
– ದೇವಭೂಮಿ ಉತ್ತರಾಖಂಡ್‍ನಲ್ಲಿ ಮತ್ತೊಮ್ಮೆ ಪ್ರಕೃತಿ ಪ್ರಕೋಪ – ಚಳಿಗಾಲದ ಪ್ರವಾಹಕ್ಕೆ ಚಮೋಲಿಯಲ್ಲಿ ಚೀರಾಟ
ಡೆಹ್ರಾಡೂನ್: ಹಿಮಾಲಯದ ಪರ್ವತ ಪ್ರದೇಶದಲ್ಲಿರುವ ದೇವಭೂಮಿ, ಚಾರ್‌ಧಾಮ್ ನೆಲೆ ಉತ್ತರಾಖಂಡ್ ಮೇಲೆ ಮತ್ತೊಮ್ಮೆ ಪ್ರಕೃತಿ ಮುನಿಸಿಕೊಂಡಿದೆ. ಇವತ್ತು ಬೆಳಗ್ಗೆ ಸುಮಾರು 10:40ರ ಸುಮಾರಿಗೆ ಹಿಮಾಲಯ ಪರ್ವತ ಶ್ರೇಣಿಯ ಹಿಮಚ್ಛಾದಿತ ನಂದಾದೇವಿ ಪರ್ವತ ದಿಢೀರ್ ಕುಸಿದಿದೆ.
ನಂದಾದೇವಿ ಹಿಮ ಪ್ರವಾಹದಿಂದಾಗಿ ಚಮೋಲಿ ಜಿಲ್ಲೆಯ ಜೋಷಿಮಠ ಪ್ರದೇಶದ ಧೌಲಿಗಂಗಾ ನದಿ ರಣಭಯಂಕರ ರೂಪ ಪಡೆದಿದೆ. ನೋಡ ನೋಡುತ್ತಿದ್ದಂತೆಯೇ ಹಿಮಾಲಯವೇ ನಡುಗಿದಂತೆ ಅತಿಘೋರ ಶಬ್ದದೊಂದಿಗೆ ಹೆಬ್ಬಂಡೆಗಳು, ಒಣಗಿದ ಮರಗಳನ್ನು ಆಪೋಶನ ಪಡೆದ ಧೌಲಿಗಂಗಾ ಪ್ರಪಾತ, ಕಂದಕಗಳನ್ನೇ ತುಂಬಿ ರಭಸದಿಂದ ಭೋರ್ಗರೆದಿದೆ.
ರೇನಿಯಲ್ಲಿ ರಿಷಿ ಗಂಗಾ ನದಿಯು ಧೌಲಿ ಗಂಗಾ ನದಿಯನ್ನು ಸೇರುತ್ತದೆ. ಹೀಗಾಗಿ, ಧೌಲಿ ಗಂಗಾ ನದಿಯಲ್ಲೂ ಪ್ರವಾಹ ಪರಿಸ್ಥಿತಿ ಉಂಟಾಯಿತು. ಗ್ರಾಮದಲ್ಲಿದ್ದ ಐದಾರು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ರೇನಿ ಎಂಬಲ್ಲಿ ರಿಷಿ ಗಂಗಾ ನದಿಯನ್ನು ಸೇರಿದ ಧೌಲಿ ಗಂಗಾ ಮತ್ತಷ್ಟು ಪ್ರವಾಹರೂಪಿಯಾಗಿ ತಮ್ಮ ಆಕಾರ, ಆವೇಷವನ್ನು ಮತ್ತಷ್ಟು ಇಮ್ಮಡಿಗೊಳಿಸಿಕೊಂಡಿದೆ. ದಿಢೀರ್ ಪ್ರವಾಹದಿಂದಾಗಿ ಚಮೋಲಿ ನದಿಪಾತ್ರದಲ್ಲಿ ನರಕ ಸದೃಶ ವಾತಾವರಣ ಸೃಷ್ಟಿಸಿದೆ. ನದಿ ಪಕ್ಕದಲ್ಲೇ ಇದ್ದ ಜೋಷಿಮಠ ಹೆದ್ದಾರಿ, ಮಲಾರಿ ಬ್ರಿಡ್ಜ್ ಹಿಮಪ್ರವಾಹದ ನೀರಿಗೆ ಕೊಚ್ಚಿ ಹೋಗಿದೆ.
ಸಂಪೂರ್ಣ ನೆಲಸಮ:
ತಪೋವನ ಬಳಿಯಲ್ಲಿ ನಡೆಯುತ್ತಿದ್ದ ರಿಷಿಗಂಗಾ ಜಲವಿದ್ಯುತ್ ಯೋಜನೆಯ ಕಾಮಗಾರಿ ಪ್ರದೇಶವೂ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇಡೀ ಯೋಜನೆಯೇ ನೀರು ಪಾಲಾಗಿದೆ. ಝುಲ್ಲಾ ಎಂಬಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಎರಡು ಸೇತುವೆಗಳೂ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ನದಿ ಪಾತ್ರದಲ್ಲಿದ್ದ ಗ್ರಾಮಗಳ ಸಂಪರ್ಕವೇ ಕಡಿತವಾಗಿದೆ.
2013ರಲ್ಲಿ ಜಲ ಪ್ರಳಯ:
ಉತ್ತರಾಖಂಡ್‍ನಲ್ಲಿ ಈ ರೀತಿಯ ಪ್ರಕೃತಿ ಪ್ರಕೋಪ 2013ರಲ್ಲೂ ಸಂಭವಿಸಿತ್ತು. ಅಂದು ಮೇಘಸ್ಫೋಟದಿಂದಾಗಿ ಕೇದಾರನಾಥ ಪ್ರದೇಶ ಸಂಪೂರ್ಣ ಜಲಪ್ರಳಯ ಕಂಡಿತ್ತು. ಆದರೆ ಕೇದಾರನಾಥ ದೇಗುಲ ಮಾತ್ರ ಭಯಂಕರ ಪ್ರವಾಹವನ್ನು ತಾಳಿಕೊಂಡಿತ್ತು. ಇದೀಗ ಹಿಮಪ್ರವಾಹ ಸಂಭವಿಸಿದ್ದು, ಉತ್ತರಾಖಂಡ್‍ನ ಜನ ಮತ್ತೊಮ್ಮೆ ಭೀತಿಗೊಂಡಿದ್ದಾರೆ.
150 ಮಂದಿ ಸಾವು ಸಾಧ್ಯತೆ:
ಈ ದುರಂತದಲ್ಲಿ ಬರೋಬ್ಬರಿ 150ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಕೊಚ್ಚಿಹೋಗಿರುವ ಆತಂಕ ವ್ಯಕ್ತವಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ 10 ಮಂದಿ ಹಿಮಪ್ರವಾಹ ಮಿಶ್ರಿತ ಕೆಸರಿನಲ್ಲಿ ಭೂ ಸಮಾಧಿಯಾಗಿದ್ದಾರೆ. ರಿಷಿಗಂಗಾ ನದಿಯ ವಿದ್ಯುತ್ ಯೋಜನೆಯಾದ ವಿಷ್ಣು ಪ್ರಯಾಗ್ ಹೈಡ್ರೋ ಪವರ್ ಯೂನಿಟ್‍ಗೆ ಭಾರೀ ಹಾನಿ ಉಂಟಾಗಿದೆ.
ಪವರ್ ಪ್ರಾಜೆಕ್ಟ್‌ಗಾಗಿ ಸುರಂಗ ಮಾರ್ಗದಲ್ಲಿ 50ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ, ಏಕಾಏಕಿ ನುಗ್ಗಿದ ಹಿಮ ಪ್ರವಾಹದಿಂದಾಗಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ:
ಪ್ರಕೃತಿ ಪ್ರಕೋಪದ ಸುದ್ದಿ ತಿಳಿಯುತ್ತಿದ್ದಂತಲೇ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿತು. ಸ್ಥಳಕ್ಕೆ 600 ಯೋಧರು, 200ಕ್ಕೂ ಅಧಿಕ ಐಟಿಬಿಪಿ ಸಿಬ್ಬಂದಿ ದೌಡಾಯಿಸಿ ನಂದಾದೇವಿ ಹಿಮ ಪರ್ವತಸೃಷ್ಟಿಸಿದ ಅವಾಂತರದ ರಾಡಿಯಲ್ಲೇ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆಳೆತ್ತರದ ರಾಡಿಯಲ್ಲೇ ಸರ್ಚಿಂಗ್ ಆಪರೇಷನ್ ಕೈಗೊಂಡಿದ್ದಾರೆ. ಎಂಐ 17 ಹೆಲಿಕಾಪ್ಟರ್, ಧ್ರುವ ಹೆಲಿಕಾಪ್ಟರ್‌ಗಳು, ಎನ್‍ಡಿಆರ್‌ಎಫ್, ಎಸ್‍ಡಿಆರ್‌ಎಫ್ ಸಿಬ್ಬಂದಿ ರಕ್ಷಣಾ ಕಾರ್ಯ ಹಾಗೂ ಪತ್ತೆ ಕಾರ್ಯಕ್ಕೆ ಕೈ ಜೋಡಿಸಿವೆ.
ಅಣೆಕಟ್ಟು ಧ್ವಂಸ:
ತಪೋವನದಲ್ಲಿ ಬೆಟ್ಟದಿಂದ ಕೆಳಗಿದ್ದ ಅಣೆಕಟ್ಟಿನ ಮೇಲೆ ಹೆಬ್ಬಂಡೆಯೊಂದು ಬಿದ್ದಿದೆ ಎನ್ನಲಾಗ್ತಿದೆ. ಇದರಿಂದಾಗಿ ಅಣೆಕಟ್ಟಿನ ಒಂದು ಭಾಗ ಡ್ಯಾಮೇಜ್ ಆಗಿದೆ. ರಿಷಿಗಂಗಾ ಯೋಜನೆಯೂ ನಾಶವಾಗಿದೆ. ಡ್ಯಾಂ ನೀರು ವೇಗವಾಗಿ ಅಲಕನಂದಾ ನದಿಗೆ ಹರಿದುಹೋಗ್ತಿದೆ. ಹಿಮ ಸೃಷ್ಟಿಸಿದ ಈ ಪ್ರವಾಹದಲ್ಲಿ 2 ಸೇತುವೆಗಳು ಕೂಡಾ ಕೊಚ್ಚಿಹೋಗಿವೆ. ಅಲಕಾನಂದ ನದಿಯಲ್ಲಿ ನೀರು ಹೆಚ್ಚಾಗುವ ಆತಂಕದಿಂದಾಗಿ ನದಿಯಲ್ಲಿನ ಮಾತಾ ದೇವಾಲಯದಲ್ಲಿ ಭಕ್ತರನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ.
ಹೈ ಅಲರ್ಟ್ ಘೋಷಣೆ:
ಸದ್ಯ ಹಿಮಪರ್ವತ ಸ್ಫೋಟದಿಂದಾಗಿ ಅಲಕನಂದ ನದಿ ನೀರು ರಭಸವಾಗಿ ಹರಿಯುತ್ತಿದೆ. ಹಾಗಾಗಿ ಹರಿದ್ವಾರ, ಋಷಿಕೇಶ, ರುದ್ರಪ್ರಯಾಗ, ಕರ್ಣಪ್ರಯಾಗ, ಕೇದಾರನಾಥ ಹಾಗೂ ಬದ್ರೀನಾಥದವರೆಗೆ ಅಲರ್ಟ್ ಘೋಷಣೆ ಮಾಡಲಾಗಿದೆ. ಮೊದಲು ನದಿ ಪಾತ್ರದ ಜನರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಪ್ರವಾಹ ಸುಮಾರು 250 ಕಿಲೋ ಮೀಟರ್ ದೂರದವರೆಗೆ ಹರಿಯಬಹುದು ಅಂತಾ ಅಂದಾಜು ಮಾಡಲಾಗಿದೆ. ಹೀಗಾಗಿ ಪೊಲೀಸರು ಧ್ವನಿವರ್ಧಕಗಳ ಮೂಲಕ ನದಿಪಾತ್ರದಲ್ಲಿರುವ ಜನರಿಗೆ ಎಚ್ಚರಿಕೆ ಸಂದೇಶವನ್ನ ನೀಡ್ತಿದ್ದಾರೆ.
ಅಲಕಾನಂದ ಹಾಗೂ ಸುತ್ತಮುತ್ತಲ ಪ್ರದೇಶದ ಜನರನ್ನು ತುರ್ತಾಗಿ ಸ್ಥಳಾಂತರಿಸಲಾಗುತ್ತಿದೆ. ಸಮೀಪದ ಭಗೀರಥಿ ನದಿಯ ಪ್ರವಾಹ ಸ್ವಲ್ಪ ಕಡಿಮೆಯಾಗಿದೆಯಾದರೂ, ಅಲಕಾನಂದ, ಶ್ರೀನಗರ ಡ್ಯಾಂ ಹಾಗೂ ರಿಷಿಕೇಷ ಡ್ಯಾಂಗಳ ನೀರನ್ನು ಆದಷ್ಟು ಬೇಗ ಖಾಲಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
#WATCH | Uttarakhand: ITBP personnel rescued all 16 people who were trapped in the tunnel near Tapovan in Chamoli. pic.twitter.com/M0SgJQ4NRr
ಡೆಹ್ರಾಡೂನ್: ಕೃಷಿಯಲ್ಲಿ ಪದವಿ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳು ಒಂದು ದಿನದ ಮಟ್ಟಿಗೆ ಉತ್ತರಾಖಂಡ್‍ನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾಳೆ. ಜನವರಿ 24 ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಸರ್ಕಾರ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಹರಿದ್ವಾರ ಮೂಲದ ಯುವತಿ ಸೃಷ್ಟಿ ಗೋಸ್ವಾಮಿ ಒಂದು ದಿನದ ಮಟ್ಟಿಗೆ ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿದ್ದಾರೆ. ಉತ್ತರಾಖಂಡ್‍ನ ಬೇಸಿಗೆ ರಾಜಧಾನಿ ಗೇರ್ಸೈನ್ ನಿಂದ ಯುವತಿ ಆಡಳಿತ ನಡೆಸಲಿದ್ದಾರೆ. ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ.
ಅಟಲ್ ಆಯುಷ್ಮಾನ್, ಸ್ಮಾರ್ಟ್ ಸಿಟಿ, ಪ್ರವಾಸೋದ್ಯಮ ಇಲಾಖೆಯ ಹೋಮ್‍ಸ್ಟೇ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಸಿಎಂ ಕಚೇರಿಗೆ ಪ್ರವೇಶಿಸುವುದಕ್ಕೂ ಮುನ್ನ ಉತ್ತರಾಖಂಡ್ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಐದು ನಿಮಿಷಗಳ ಕಾಲ ಯೋಜನೆಗಳ ಬಗ್ಗೆ ಯುವತಿಗೆ ಪ್ರೆಸೆಂಟೇಶನ್ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸರ್ಕಾರದ ಎಲ್ಲ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಬಗ್ಗೆ ಉತ್ತರಾಖಂಡ್‍ನ ಮಕ್ಕಳ ಹಕ್ಕುಗಳ ರಕ್ಷಣಾ ಆಯುಕ್ತಾಲಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಮಕ್ಕಳ ಹಕ್ಕುಗಳ ರಕ್ಷಣಾ ಆಯುಕ್ತಾಲಯದ ಅಧ್ಯಕ್ಷೆ ಉಷಾ ನೇಗಿ ಈ ಕುರಿತು ಮಾಹಿತಿ ನೀಡಿದ್ದು, ಮಧ್ಯಾಹ್ನ 12ರಿಂದ 3 ಗಂಟೆ ವರೆಗೆ ವಿಧಾನಸಭೆಯ ಕಟ್ಟಡದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ. ಚೈಲ್ಡ್ ಅಸೆಂಬ್ಲಿಯನ್ನು ಸಹ ನಡೆಸಲಾಗುತ್ತಿದೆ ಎಂದು ನೇಗಿ ಮಾಹಿತಿ ನೀಡಿದ್ದಾರೆ.
ಸೃಷ್ಟಿ ಗೋಸ್ವಾಮಿ ಯಾರು?
ಉತ್ತರಾಖಂಡ್ ಬಾಲ ವಿಧಾನಸಭೆಯ ಮುಖ್ಯಮಂತ್ರಿಯಾಗುತ್ತಿರುವ ಸೃಷ್ಟಿ ಗೋಸ್ವಾಮಿ ಹರಿದ್ವಾರ ಜಿಲ್ಲೆಯ ದೌಲತ್‍ಪುರ ನಿವಾಸಿಯಾಗಿದ್ದು, ಇವರ ತಂದೆ ಪ್ರವೀಣ್ ಬ್ಯುಸಿನೆಸ್ ಮ್ಯಾನ್ ಆಗಿದ್ದಾರೆ. ಇವರ ತಾಯಿ ಸುಧಾ ಗೋಸ್ವಾಮಿ ಗೃಹಣಿಯಾಗಿದ್ದಾರೆ. ಸೃಷ್ಟಿ ರೂರ್ಕೆಯ ಬಿಎಸ್‍ಎಂ ಪಿಜಿ ಕಾಲೇಜಿನಲ್ಲಿ ಕೃಷಿಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, 7ನೇ ಸೆಮಿಸ್ಟರ್‍ನಲ್ಲಿ ಓದುತ್ತಿದ್ದಾಳೆ. ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಮೇ, 2018ರಲ್ಲಿ ಸಹ ಉತ್ತರಾಖಂಡ್‍ನ ಬಾಲ ವಿಧಾನಸಭೆಯ ಮುಖ್ಯಮಂತ್ರಿಯಾಗಿದ್ದರು.
ಡೆಹ್ರಾಡೂನ್: 12 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿ ಮೃತಪಟ್ಟಿರುವ ಘಟನೆ ಉತ್ತರಾಖಂಡದ ರುದ್ರಪುರದಲ್ಲಿ ನಡೆದಿದೆ.
ಠಾಕೂರ್ ನಿವಾಸಿಯಾಗಿರುವ 12 ವರ್ಷದ ಬಾಲಕಿ ಶನಿವಾರ ರಾತ್ರಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರಿಂದ ಆಕೆಯನ್ನು ಉದ್ಧಮ್ ಸಿಂಗ್ ನಗರದ ಜೆಎಲ್ ನೆಹರೂ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ವೈದ್ಯರು ನಡೆಸಿದ ಪರೀಕ್ಷೆಯಲ್ಲಿ ಆಕೆ 7 ತಿಂಗಳ ಗರ್ಭಿಣಿ ಎಂಬ ಸತ್ಯ ಬಹಿರಂಗಗೊಂಡಿದೆ. ನಂತರ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಶೀಘ್ರವೇ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅಕಾಲಿಕ ಹೆರಿಗೆಯಿಂದ ಬಳಿಕ ಬಾಲಕಿ ಮೃತ ಪಟ್ಟಿದ್ದಾಳೆ. ಗಂಭೀರ ಸ್ಥಿತಿಯಲ್ಲಿದ್ದಾಗ ಆಕೆ ತನ್ನ ಮೇಲೆ ನೆರೆಮನೆಯ ವ್ಯಕ್ತಿ ಕೆಲವು ತಿಂಗಳ ಹಿಂದೆ ಅತ್ಯಾಚಾರ ಮಾಡಿರುವುದಾಗಿ ತಿಳಿಸಿದ್ದಾಳೆ.
ಈ ವಿಚಾರವಾಗಿ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಬಾಲಕಿಯು ಸಾಯುವ ಮುನ್ನ ಮಂದಲ್(22) ಆರೋಪಿ ಎಂದು ಗುರುತಿಸಿದ್ದಾಳೆ. ಹಾಗಾಗಿ ಆರೋಪಿಯನ್ನು ವಶಕ್ಕೆ ಪಡೆದು ಆತನ ಡಿಎನ್‍ಎ ಮಾದರಿ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಬಾಲಕಿ ಆತ ತನ್ನನ್ನು ಚಾಕೊಲೇಟ್ ನೀಡುವುದಾಗಿ ಹೇಳಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು ಎಂದು ಹೇಳಿದ್ದಾಳೆ. ಬಾಲಕಿಯ ತಾಯಿ ಸಹ ಒಮ್ಮೆ ಆಕೆಯ ದೇಹದಲ್ಲಿ ಆಗುತ್ತಿರುವ ಬದಲಾವಣೆ ಕುರಿತಂತೆ ಪ್ರಶ್ನಿಸಿದ್ದರೂ ಕೂಡ ಬಾಲಕಿ ಇಲ್ಲಿಯವರೆಗೂ ಈ ವಿಚಾರವನ್ನು ಹೇಳಿಕೊಂಡಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.
ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದ್ದು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯಿದೆ(ಪೋಕ್ಸೋ) ಅಡಿ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ.