Tag: Uttarakhand

  • ಏನಿದು ಕನ್ವರ್ ಯಾತ್ರೆ, ವಿವಾದಕ್ಕಿಡಾಗಿರುವುದೇಕೆ?

    ಏನಿದು ಕನ್ವರ್ ಯಾತ್ರೆ, ವಿವಾದಕ್ಕಿಡಾಗಿರುವುದೇಕೆ?

    -ಶಬ್ಬೀರ್ ನಿಡಗುಂದಿ

    ನವದೆಹಲಿ : ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಟೀಕೆಗೊಳಪಟ್ಟ ಕುಂಭಮೇಳದ ಬಳಿಕ, ಈಗ ಮೂರನೇ ಅಲೆಯ ಭೀತಿಯ ನಡುವೆ ಕನ್ವರ್ ಯಾತ್ರೆ ಹೊಸ ವಿವಾದಕ್ಕೆ ಕಾರಣವಾಗಿದೆ. ಕನ್ವರ್ ಯಾತ್ರೆಗೆ ಅವಕಾಶ ನೀಡಬೇಕಾ ಬೇಡವಾ ಅನ್ನೊ ವಿಚಾರಕ್ಕೆ ಸಂಬಂಧಿಸಿದಂತೆ ಪರ ವಿರೋಧ ಚರ್ಚೆಗಳು ಶುರುವಾಗಿದೆ.

    ಕನ್ವರ್ ಯಾತ್ರೆಗೆ ಈ ಬಾರಿ ಅನುಮತಿ ನಿರಾಕರಿಸಿರುವ ಉತ್ತರಾಖಂಡ ಸರ್ಕಾರ ಕೊರೊನಾ ಸಂದರ್ಭದಲ್ಲಿ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಜನರ ಜೀವದ ಜೊತೆ ಚೆಲ್ಲಾಟವಾಡುವ ಪ್ರಯತ್ನ ಬೇಡ ಎಂದು ಹೇಳಿದೆ. ಭಾರತೀಯ ವೈದ್ಯಕೀಯ ಸಂಘ ಬರೆದ ಪತ್ರದ ಬಳಿಕ ಸಿಎಂ ಪುಷ್ಕರ್ ಸಿಂಗ್ ಧಾಮಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಒಂದು ವೇಳೆ ಯಾತ್ರೆ ನಡೆಯುವ ಹರಿದ್ವಾರ ನಗರವನ್ನು ಪ್ರವೇಶಿಸಬೇಕಾದರೇ 14 ದಿನದ ಕ್ವಾರಂಟೈನ್ ಮುಗಿಸಬೇಕು ಎಂದು ಹೇಳಲಾಗಿದೆ.

    ಆದರೆ ಈ ನಡುವೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಿನ್ನ ನಿಲುವು ತೆಗೆದುಕೊಂಡಿದ್ದಾರೆ. ಯಾತ್ರೆಗೆ ಷರತ್ತು ಬದ್ಧ ಅನುಮತಿ ನೀಡುವುದಾಗಿ ಹೇಳಿದ್ದಾರೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಕೇಂದ್ರೀಕೃತವಾಗಿ ಆಚರಿಸುವ ಯಾತ್ರೆ ಇದಾಗಿದ್ದು, ಈಗ ಅನುಮತಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದೆ.

    ಉತ್ತರ ಪ್ರದೇಶ ಸರ್ಕಾರ ಇಂತದೊಂದು ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆ ಸುಪ್ರೀಂಕೋರ್ಟ್ ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ. ಕೊರೊನಾ ಸಂದರ್ಭದಲ್ಲಿ ಲಕ್ಷಾಂತರ ಜನ ಸೇರುವ ಕಾರ್ಯಕ್ರಮಕ್ಕೆ ಅನುಮತಿ ನೀಡುವ ವಿಚಾರದ ಬಗ್ಗೆ ಅದು ಆತಂಕ ವ್ಯಕ್ತಪಡಿಸಿದೆ. ಸದ್ಯ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು ವಿಚಾರಣೆ ಮುಂದೂಡಲಾಗಿದೆ.

    ಜುಲೈ 25 ರಿಂದ ಅಗಸ್ಟ್ 6 ಈವರೆಗೂ ಈ ಯಾತ್ರೆ ನಡೆಯಲಿದೆ. 2019ರಲ್ಲಿ ನಡೆದ ಕನ್ವರ್ ಯಾತ್ರೆ ಸಂದರ್ಭದಲ್ಲಿ ಹರಿದ್ವಾರಕ್ಕೆ 3.5 ಕೋಟಿ ಮತ್ತು ಉತ್ತರಪ್ರದೇಶದ ನದಿ ತೀರಗಳಿಗೆ 2 -3 ಕೋಟಿ ಭಕ್ತಾದಿಗಳು ಭೇಟಿ ನೀಡಿದ್ದರು. ಈ ಪ್ರಮಾಣದಲ್ಲಿ ಸೇರುವ ಈ ಯಾತ್ರೆ ಈಗ ಕೊರೊನಾ ಸಂದರ್ಭದಲ್ಲಿ ದೊಡ್ಡ ಆತಂಕವನ್ನು ಸೃಷ್ಟಿ ಮಾಡುತ್ತಿದೆ.

    ಏನಿದು ಕನ್ವರ್ ಯಾತ್ರೆ?
    ಕನ್ವರ್ ಯಾತ್ರೆ ಎಂಬುದು ಹಿಂದೂ ಕ್ಯಾಲೆಂಡರ್ ತಿಂಗಳ ಶ್ರಾವಣ (ಸಾವನ್) ದಲ್ಲಿ ಆಯೋಜಿಸಲಾಗುವ ತೀರ್ಥಯಾತ್ರೆಯಾಗಿದೆ. ಕೇಸರಿ ಬಟ್ಟೆಯ ಹೊದಿಕೆಯಿರುವ ಶಿವ ಭಕ್ತರು ಗಂಗಾ ಅಥವಾ ಇತರ ಪವಿತ್ರ ನದಿಗಳಿಂದ ಪವಿತ್ರ ನೀರಿನ ಹೂಜಿಗಳೊಂದಿಗೆ ಬರಿಗಾಲಿನಲ್ಲಿ ನಡೆಯುತ್ತಾರೆ. ಗಂಗಾ ಬಯಲು ಪ್ರದೇಶದಲ್ಲಿ, ಉತ್ತರಾಖಂಡದ ಹರಿದ್ವಾರ, ಗೌಮುಖ್ ಮತ್ತು ಗಂಗೋತ್ರಿ, ಬಿಹಾರದ ಸುಲ್ತಂಗಂಜ್, ಮತ್ತು ಉತ್ತರ ಪ್ರದೇಶದ ಪ್ರಯಾಗ್ರಾಜ್, ಅಯೋಧ್ಯೆ ಅಥವಾ ವಾರಣಾಸಿಯಂತಹ ತೀರ್ಥಯಾತ್ರೆಯ ಸ್ಥಳಗಳಿಂದ ನೀರನ್ನು ತೆಗೆದುಕೊಂಡು ಹೋಗಲಾಗುತ್ತದೆ.

    ನೀರಿನ ಹೂಜಿಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಶಿವ ಭಕ್ತರನ್ನು ಕನ್ವರ್ಸ್ ಎಂದು ಕರೆಯಲಾಗುತ್ತೆ. ಅಲಂಕೃತ ಜೋಲಿಗಳ ಮೇಲೆ ನೀರನ್ನು ತಂದು 12 ಜೋರ್ತಿಲಿಂಗಗಳು ಅಥವಾ ತಮ್ಮ ಗ್ರಾಮ ಅಥವಾ ಪಟ್ಟಣಗಳಲ್ಲಿರುವ ಶಿವಲಿಂಗದ ದೇವಸ್ಥಾನಗಳಲ್ಲಿ ಪೂಜೆಗೆ ಬಳಕೆ ಮಾಡಲಾಗುತ್ತದೆ. ವಿಶೇಷ ಪೂಜೆಯ ಬಳಿಕ ನದಿಯ ನೀರು ಹೂಜಿಗಳಲ್ಲಿ ತುಂಬಿದ ಮೇಲೆ ಅದನ್ನು ನೆಲಕ್ಕೆ ತಾಗಿಸುವಂತಿಲ್ಲ. ಇವುಗಳನ್ನು ಹೊತ್ತು ನೂರಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಪ್ರಯಾಣಿಸಬೇಕು. ಈ ಕಾರಣದಿಂದಲೇ ಕನ್ವರ್ಸ್ ರನ್ನು ಪೂಜ್ಯ ಭಾವದಿಂದ ನೋಡಲಾಗುತ್ತೆ. ಈ ರೀತಿಯ ಶಿವಪೂಜೆಗೆ ಗಂಗಾನದಿಯ ತಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ಮಹತ್ವವಿದೆ. ಕನ್ವರ್ ಯಾತ್ರೆಗೆ ಹೋಲುವ ಪ್ರಮುಖ ಹಬ್ಬವನ್ನು ತಮಿಳುನಾಡಿನಲ್ಲಿ ಆಚರಿಸಲಾಗುತ್ತದೆ, ಅಲ್ಲಿ ಮುರುಗನನ್ನು ಪೂಜಿಸಲಾಗುತ್ತದೆ.

    ಪೌರಾಣಿಕ ಹಿನ್ನೆಲೆ:
    ಲೋಕಕಲ್ಯಾಣಕ್ಕಾಗಿ ಶಿವ ವಿಷ ಸೇವಿಸಿದಾಗ ಅದನ್ನು ಪಾರ್ವತಿ ಗಂಟಲಿನಲ್ಲಿ ತಡೆ ಹಿಡಿಯುತ್ತಾಳೆ. ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗುತ್ತ ನೀಲಕಂಠ ಅಥವಾ ವಿಷಕಂಟನಾಗುತ್ತಾನೆ. ಅದಾಗ್ಯೂ ವಿಷ ದೇಹವನ್ನು ಸೇರಿ ದೇಹ ಊದಿಕೊಳ್ಳುತ್ತದೆ, ವಿಷ ಪರಿಣಾಮ ಕಡಿಮೆ ಮಾಡಲು ನೀಡು ಅರ್ಪಿಸಲಾಗಿತ್ತು. ಇದರ ನಂಬಿಕೆಗಾಗಿ ಪ್ರತಿ ವರ್ಷ ಪವಿತ್ರ ನದಿಗಳಿಂದ ತಂದ ನೀರಿನಿಂದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತೆ. ಮತ್ತೊಂದು ನಂಬಿಕೆಯ ಪ್ರಕಾರ, ಶಿವ ಭಕ್ತ ಪರಶುರಾಮ ಮೊದಲು ಈ ಪದ್ದತಿಯನ್ನು ಆರಂಭಿಸಿದ ಎನ್ನಲಾಗುತ್ತೆ. ಪರಶುರಾಮ್ ಶಿವನ ಆರಾಧನೆಗಾಗಿ ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಗಂಗಾಜಲ ತಂದು ಪೂಜಿಸುತ್ತಿದ್ದ ಎಂದು ನಂಬಲಾಗುತ್ತೆ.

    ಕಾಲ್ನಡಿಗೆ ಪ್ರಯಾಣ:
    ಕನ್ವರ್ ಯಾತ್ರೆ ಕಾಲ್ನಡಿಗೆಯ ಅತ್ಯಂತ ಕಷ್ಟಕರವಾದ ಪ್ರಯಾಣ. ಇದು 100 ಕಿಲೋಮೀಟರ್‍ಗಳಷ್ಟು ವಿಸ್ತರಾವಾಗಿರಬಹುದು. ವೃದ್ಧರು, ಯುವಕರು, ಮಹಿಳೆಯರು, ಪುರುಷರು, ಮಕ್ಕಳು, ಮತ್ತು ವಿಕಲಚೇತನರು ಸೇರಿ ಎಲ್ಲ ವರ್ಗದ ಜನರು ಇದರಲ್ಲಿ ಭಾಗಿಯಾಗುತ್ತಾರೆ.

    ‘ಬೋಲ್ ಬಾಮ್’ ಮತ್ತು ‘ಜೈ ಶಿವಶಂಕರ್’ ಎಂದು ಜಪಿಸುವ ಈ ಭಕ್ತಾದಿಗಳು ಗಂಗೋತ್ರಿ, ಗೌಮುಖ್, ಮತ್ತು ಹರಿದ್ವಾರ ಮುಂತಾದ ಪವಿತ್ರ ನದಿ ಸಂಗಮಗಳ ತಾಣಗಳಲ್ಲಿ ಸೇರುತ್ತಾರೆ. ಪಶ್ಚಿಮ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ದೆಹಲಿಯಂತಹ ರಾಜ್ಯಗಳ ಭಕ್ತರು ಸಾಮಾನ್ಯವಾಗಿ ಉತ್ತರಾಖಂಡಕ್ಕೆ ಪ್ರಯಾಣಿಸಿದರೇ, ಅಯೋಧ್ಯೆ ಮತ್ತು ಹತ್ತಿರದ ಜಿಲ್ಲೆಗಳಿಂದ ಬರುವ ಭಕ್ತರು ಬಿಹಾರದ ಭಾಗಲ್ಪುರ್ ಜಿಲ್ಲೆಯ ಗಂಗಾನದಿ ಮೂಲಕ ಸುಲ್ತಂಗಂಜ್ಗೆ ಹೋಗುತ್ತಾರೆ.

    ಕೆಲವರು ಜಾರ್ಖಂಡ್‍ನ ದಿಯೋಘರ್‍ನಲ್ಲಿರುವ ಬಾಬಾ ಬೈದ್ಯನಾಥ ಧಮ್‍ಗೆ ಪವಿತ್ರ ನೀರನ್ನು ಅರ್ಪಿಸಲಾಗುತ್ತೆ. ಇನ್ನು ಕೆಲವರು ಜಾರ್ಖಂಡ್‍ನ ದುಮ್ಕಾ ಜಿಲ್ಲೆಯ ಬಾಬಾ ಬಸುಕಿನಾಥ್ ಧಾಮ್‍ಗೆ ಪ್ರಯಾಣಿಸುತ್ತಾರೆ. ಪೂರ್ವ ಯುಪಿಯ ಜನರು ಅಯೋಧ್ಯೆಯ ಸರಯು ನದಿಯಿಂದ ನೀರನ್ನು ತೆಗೆದುಕೊಂಡು ಪಟ್ಟಣದ ಕ್ಷೀರೇಶ್ವರ ಮಹಾದೇವ್ ದೇವಸ್ಥಾನಕ್ಕೆ ಅರ್ಪಿಸುತ್ತಾರೆ. ಇತರರು ವಾರಣಾಸಿಗೆ ಹೋಗಿ ಕಾಶಿ ವಿಶ್ವನಾಥರಿಗೆ ಗಂಗಾ ನೀರು ಅರ್ಪಿಸುತ್ತಾರೆ.

    ಕನ್ವರ್ ಯಾತ್ರೆಯ ಕಠಿಣ ನಿಯಮಗಳು:
    ಯಾತ್ರೆ ಕೆಲವು ಕಠಿಣ ನಿಯಮಗಳನ್ನು ಅನುಸರಿಸುತ್ತದೆ, ಕೆಲವು ಭಕ್ತರು ಪ್ರಯಾಣದ ವೇಳೆ, ನಿದ್ದೆ ಮಾಡುವಾಗ, ಊಟ ಮಾಡುವ ಸಮಯದಲ್ಲಿ ಪ್ರತಿ ಬಾರಿ ತಮ್ಮನ್ನು ತಾವು ನಿವಾಳಿಸಿಕೊಳ್ಳುತ್ತಾರೆ. ಪವಿತ್ರ ನೀರಿನಿಂದ ತುಂಬಿದ ಹೂಜಿ ಎಂದಿಗೂ ನೆಲವನ್ನು ಮುಟ್ಟಬಾರದು. ಹೂಜಿ ತುಂಬಿದ ನಂತರ, ದೇವಾಲಯಗಳಿಗೆ ಯಾತ್ರೆ ಸಂಪೂರ್ಣವಾಗಿ ಕಾಲ್ನಡಿಗೆಯಲ್ಲಿರಬೇಕು.

    ಕೊರೊನಾ ಸಂಕಷ್ಟ ಮತ್ತು ಭದ್ರತೆ:
    ಸದ್ಯ ಕೊರೊನಾ ಎರಡನೇ ಅಲೆ ಅಂತ್ಯವಾದರೂ ಮೂರನೇ ಅಲೆಯ ಭೀತಿ ಇದೆ. ಎರಡನೇ ಅಲೆಯಲ್ಲಿ ಉತ್ತರ ಪ್ರದೇಶ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗಲು ಕುಂಭಮೇಳ ಕಾರಣವಾಯ್ತು ಎನ್ನುವ ಆರೋಪವಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕನ್ವರ್ ಯಾತ್ರೆಗೆ ಅನುಮತಿ ನೀಡಿದ್ದಲ್ಲಿ ಸೋಂಕು ಹೆಚ್ಚಾಗಲು ದಾರಿ ಮಾಡಿಕೊಟ್ಟಂತಾಗಲಿದೆ ಎನ್ನುವ ಭೀತಿ ಇದೆ. ಇದರ ಜೊತೆ ಕೋಟ್ಯಾಂತರ ಭಕ್ತಾಧಿಗಳು ಅಂತರ ರಾಜ್ಯಗಳ ನಡುವೆ ದೊಡ್ಡ ಪ್ರಮಾಣದಲ್ಲಿ ಸಂಚಾರ ಮಾಡುವುದರಿಂದ ಸೋಂಕು ವ್ಯಾಪಿಸಬಹುದು ಎನ್ನುವ ಆತಂಕವೂ ಇದೆ.

    ಇದೇ ಆತಂಕವನ್ನು ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ನ ನ್ಯಾ. ಆರ್ ಎಫ್ ನಾರಿಮನ್ ಪೀಠ ವ್ಯಕ್ತಪಡಿಸಿದೆ. ಒಂದು ಕಡೆ ಕೊರೊನಾ ಮತ್ತೊಂದು ಕಡೆ ಇಷ್ಟು ದೊಡ್ಡ ಜನ ಸಂಖ್ಯೆ ಭದ್ರತೆ ವ್ಯವಸ್ಥೆ ಕಲ್ಪಿಸುವ ಕಷ್ಟ ಎಂದು ಹೇಳಲಾಗುತ್ತಿದೆ. ಈ ಕಾರಣಗಳಿಂದ ಉತ್ತರಾಖಂಡ ಸರ್ಕಾರ ಯಾತ್ರೆಗೆ ಅನುಮತಿ ನಿರಾಕರಿಸಿದೆ. ಆದರೆ ಉತ್ತರ ಪ್ರದೇಶ ಯಾತ್ರೆ ನಡೆಸುವ ಸಿದ್ದತೆಯಲ್ಲಿದೆ. ಸದ್ಯ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದ್ದು,ಕೋರ್ಟ್ ಅನುಮತಿ ನೀಡುವ ಬಗ್ಗೆ ಏನು ಹೇಳಲಿದೆ ಕಾದು ನೋಡಬೇಕು.

  • ಉತ್ತರಾಖಂಡ ನೂತನ ಸಿಎಂ ಆಗಿ ಪುಷ್ಕರ್ ಸಿಂಗ್ ಧಾಮಿ ಆಯ್ಕೆ

    ಉತ್ತರಾಖಂಡ ನೂತನ ಸಿಎಂ ಆಗಿ ಪುಷ್ಕರ್ ಸಿಂಗ್ ಧಾಮಿ ಆಯ್ಕೆ

    ಡೆಹ್ರಾಡೂನ್: ತೀರ್ಥ್ ಸಿಂಗ್ ರಾವತ್ ರಾಜೀನಾಮೆಯಿಂದ ನೀಡಿದ್ದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸ್ಥಾನಕ್ಕೆ ಪುಷ್ಕರ್ ಸಿಂಗ್ ಧಾಮಿ ಅವರನ್ನು ಆಯ್ಕೆ ಮಾಡಲಾಗಿದ್ದು, ಪಕ್ಷದ ಕಚೇರಿಯಲ್ಲಿ ನಡೆದ ಸಿಎಲ್‍ಪಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

     

    ತೀರ್ಥ್ ಸಿಂಗ್ ರಾವತ್ ನಿನ್ನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆ ಇಂದು ಹೊಸ ಶಾಸಕಾಂಗ ಪಕ್ಷದ ನಾಯಕ ಆಯ್ಕೆಗೆ ವೀಕ್ಷಕರಾಗಿ ಹೈಕಮಾಂಡ್ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಕಳುಹಿಸಿತ್ತು. ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದ ನರೇಂದ್ರ ಸಿಂಗ್ ತೋಮರ್ ಶಾಸಕರ ಒಪ್ಪಿಗೆ ಮೇರೆಗೆ ಪುಷ್ಕರ್ ಸಿಂಗ್ ಧಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ್ ಮುಂದಿನ ಮುಖ್ಯಮಂತ್ರಿ ಯಾರು?

     

    ಖತೀಮ್ ಕ್ಷೇತ್ರದ ಹಾಲಿ ಶಾಸಕರಾಗಿರುವ ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡನ ಹತ್ತನೇ ಸಿಎಂ ಆಗಿ ಶೀಘ್ರದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಿಎಲ್‍ಪಿ ಸಭೆಯಲ್ಲಿ ಸರ್ವಾನುಮತದಿಂದ ಪುಷ್ಕರ್ ಸಿಂಗ್ ಧಾಮಿ ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಅಧಿಕಾರ ವಹಿಸಿಕೊಂಡ 4 ತಿಂಗಳಿಗೆ ಉತ್ತಾರಖಂಡ ಸಿಎಂ ರಾಜೀನಾಮೆ

    ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 4 ತಿಂಗಳಿಗೆ ತೀರ್ಥ್ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ. ರಾವತ್ ಉತ್ತರಾಖಂಡದ ಮುಖ್ಯಮಂತ್ರಿಯಾಗಿ 2021ರ ಮಾರ್ಚ್ ತಿಂಗಳಲ್ಲಿ ಅಧಿಕಾರವಹಿಸಿಕೊಂಡಿದ್ದರು. ಆದಾದ ಬಳಿಕ ಇದೀಗ ರಾಜೀನಾಮೆಗೆ ಮುಂದಾಗಿದ್ದಾರೆ. ಈ ಕುರಿತು ಮಾತನಾಡಿರುವ ರಾವತ್, ಸಾಂವಿಧಾನಿಕ ಬಿಕ್ಕಟ್ಟಿನಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ. ಕೊರೊನಾದಿಂದಾಗಿ ಬೈ ಎಲೆಕ್ಷನ್ ನಡೆಯದೆ ಇರುವುದರಿಂದಾಗಿ ಈ ನಿರ್ಧಾರ ಸರಿಯೆಂದು ಭಾವಿಸುತ್ತಿದ್ದೇನೆ ಎಂದಿದ್ದರು. ಇದೀಗ ಮುಖ್ಯ ಮಂತ್ರಿ ಸ್ಥಾನಕ್ಕೆ ಪುಷ್ಕರ್ ಸಿಂಗ್ ಧಾಮಿ ಆಯ್ಕೆಯಾಗಿದ್ದಾರೆ.

  • ಉತ್ತರಾಖಂಡ್ ಮುಂದಿನ ಮುಖ್ಯಮಂತ್ರಿ ಯಾರು?

    ಉತ್ತರಾಖಂಡ್ ಮುಂದಿನ ಮುಖ್ಯಮಂತ್ರಿ ಯಾರು?

    ನವದೆಹಲಿ: ನಾಲ್ಕು ತಿಂಗಳ ಹಿಂದಷ್ಟೇ ಉತ್ತರಾಖಂಡ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಸಂಸದ ತೀರ್ಥ್ ಸಿಂಗ್ ರಾವತ್ ನಿನ್ನೆ ತಡ ರಾತ್ರಿ ರಾಜೀನಾಮೆ ನೀಡಿದ್ದಾರೆ. 115 ದಿನಗಳ ಆಡಳಿತದ ಬಳಿಕ ಹೈಕಮಾಂಡ್ ಸೂಚನೆ ಮೇರೆಗೆ ಅವರು ರಾಜೀನಾಮೆ ನೀಡಿದ್ದಾರೆ. ಇದೀಗ ಉತ್ತರಾಖಂಡ ಮುಂದಿನ ಸಿಎಂ ಯಾರು ಅನ್ನೋ ಲೆಕ್ಕಾಚಾರಗಳು ನಡೆಯುತ್ತಿವೆ.

    ಮೂಲಗಳ ಪ್ರಕಾರ, ಉನ್ನತ ಶಿಕ್ಷಣ ಸಚಿವರಾಗಿರುವ ಧನ್ ಸಿಂಗ್ ರಾವತ್, ಮಾಜಿ ರಾಜ್ಯಧ್ಯಕ್ಷ ಬನ್ಶಿಧರ್ ಭಗತ್, ನೀರಾವರಿ ಸಚಿವ ಸತ್ಪಾಲ್ ಮಹಾರಾಜ್ ಮತ್ತು ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಸಿಎಂ ಸ್ಥಾನದಲ್ಲಿ ರೇಸ್‍ನಲ್ಲಿದ್ದಾರೆ. ಕಳೆದ ಬಾರಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದಾಗ ಧನ್ ಸಿಂಗ್ ರಾವತ್ ಹೆಸರು ಮುಂಚೂಣಿಯಲ್ಲಿತ್ತು.

    2013ರ ಪ್ರವಾಹದ ಬಳಿಕ ಕೇದಾರನಾಥ್ ಮರು ನಿರ್ಮಾಣಕ್ಕೆ ಸಹಾಯ ಮಾಡಿದ ನಿವೃತ್ತ ಕರ್ನಲ್ ಅಜಯ್ ಕೋತಿಯಾಲ್ ಗೆ ಆಮ್ ಅದ್ಮಿ ಪಕ್ಷದಿಂದ ಉಪ ಚುನಾವಣೆಗೆ ಟಿಕೆಟ್ ಘೋಷಣೆ ಬಳಿಕ ಬಿಜೆಪಿ ಹೈಕಮಾಂಡ್ ಇಂತದೊಂದು ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ತೀರ್ಥ್ ಸಿಂಗ್ ರಾವತ್, ಪೌರಿ ಲೋಕಸಭೆ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಮಾರ್ಚ್ 10 ರಂದು ಅವರು ಸಿಎಂ ಆಗಿ ಪ್ರಮಾಣ ವಚನ ಪಡೆದುಕೊಂಡಿದ್ದರು. ಹಾಲಿ ಸಂಸದರಾಗಿರುವ ಕಾರಣ ಅವರು ಸೆಪ್ಟೆಂಬರ್ 10 ರೊಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿತ್ತು.

    ಸದ್ಯ ಗಂಗೋತ್ರಿ ಮತ್ತು ಹಲ್ದ್ವಾನಿ ಕ್ಷೇತ್ರಗಳು ಖಾಲಿ ಇದ್ದು ಈ ಎರಡು ಕ್ಷೇತ್ರಗಳ ಪೈಕಿ ಒಂದರಿಂದ ತೀರಥ್ ಸಿಂಗ್ ರಾವತ್ ಆಯ್ಕೆಯಾಗಬೇಕಿತ್ತು. ಆದರೆ ಕೊರೊನಾ ಕಾರಣಗಳಿಂದ ಸದ್ಯ ಕೇಂದ್ರ ಚುನಾವಣಾ ಆಯೋಗ ಈ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸುವುದು ಅನುಮಾನ ಎನ್ನಲಾಗಿದ್ದು, ಈ ಕಾರಣಗಳಿಂದ ರಾಜೀನಾಮೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ್ರೆ ಕೊರೊನಾ ಬರಲ್ಲ: ತೀರ್ಥ್ ಸಿಂಗ್ ರಾವತ್

    ಸಿಎಂ ರಾಜೀನಾಮೆ ಬಳಿಕ ಬಿಜೆಪಿ ಹೈಕಮಾಂಡ್ ಉತ್ತರಾಖಂಡ್‍ಗೆ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ವೀಕ್ಷಕರಾಗಿ ಕಳುಹಿಸಿದ್ದು ಮುಂದಿನ ಸಿಎಂ ಆಯ್ಕೆ ಬಗ್ಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಲು ಸೂಚಿಸಿದೆ. ಇಂದು ಡೆಹ್ರಾಡೂನ್‍ನಲ್ಲಿರುವ ಪಕ್ಷದ ಕಚೇರಿಯಲ್ಲಿ ಎಲ್ಲ ಶಾಸಕರು ಸಭೆ ಸೇರಲಿದ್ದು ಸಿಎಂ ಆಯ್ಕೆಯಾಗಲಿದೆ. ಇದನ್ನೂ ಓದಿ: ಶಾರ್ಟ್ಸ್ ಧರಿಸಿ ಅಂಗಾಂಗ ಪ್ರದರ್ಶನಕ್ಕೆ ಕಾಲೇಜಿಗೆ ಬರೋದಾ? ಮಹಿಳೆಯರ ಉಡುಪು ಪ್ರಶ್ನಿಸಿದ ಸಿಎಂ ರಾವತ್

  • ಅಧಿಕಾರ ವಹಿಸಿಕೊಂಡ 4 ತಿಂಗಳಿಗೆ ಉತ್ತಾರಖಂಡ ಸಿಎಂ ರಾಜೀನಾಮೆ

    ಅಧಿಕಾರ ವಹಿಸಿಕೊಂಡ 4 ತಿಂಗಳಿಗೆ ಉತ್ತಾರಖಂಡ ಸಿಎಂ ರಾಜೀನಾಮೆ

    ಡೆಹರಾಡೂನ್: ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 4 ತಿಂಗಳಿಗೆ ತೀರ್ಥ್ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ.

    ರಾವತ್ ಉತ್ತರಾಖಂಡದ ಮುಖ್ಯಮಂತ್ರಿಯಾಗಿ 2021ರ ಮಾರ್ಚ್ ತಿಂಗಳಲ್ಲಿ ಅಧಿಕಾರವಹಿಸಿಕೊಂಡಿದ್ದರು. ಆದಾದ ಬಳಿಕ ಇದೀಗ ರಾಜೀನಾಮೆಗೆ ಮುಂದಾಗಿದ್ದಾರೆ. ಈ ಕುರಿತು ಮಾತನಾಡಿರುವ ರಾವತ್, ಸಾಂವಿಧಾನಿಕ ಬಿಕ್ಕಟ್ಟಿನಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ. ಕೊರೊನಾದಿಂದಾಗಿ ಬೈ ಎಲೆಕ್ಷನ್ ನಡೆಯದೆ ಇರುವುದರಿಂದಾಗಿ ಈ ನಿರ್ಧಾರ ಸರಿಯೆಂದು ಭಾವಿಸುತ್ತಿದ್ದೇನೆ ಎಂದಿದ್ದಾರೆ.

    ಈಗಾಗಲೇ ರಾವತ್ ಕಳೆದ ಮೂರು ದಿನಗಳಿಂದ ಕೇಂದ್ರ ಬಿಜೆಪಿಯ ನಾಯಕರೊಂದಿಗೆ ಚರ್ಚಿಸಿ ಬಳಿಕ ಈ ನಿರ್ಧಾರ ಮಾಡಿದ್ದಾರೆ. ಈಗಾಗಲೇ ರಾಜೀನಾಮೆ ಪತ್ರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರಿಗೆ ನೀಡಿದ್ದಾರೆ. ಇದಾದ ಬಳಿಕ ಉತ್ತಾರಖಂಡದ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ಇದನ್ನೂ ಓದಿ : ಶಾರ್ಟ್ಸ್ ಧರಿಸಿ ಅಂಗಾಂಗ ಪ್ರದರ್ಶನಕ್ಕೆ ಕಾಲೇಜಿಗೆ ಬರೋದಾ? ಮತ್ತೆ ಮಹಿಳೆಯರ ಉಡುಪು ಪ್ರಶ್ನಿಸಿದ ಸಿಎಂ ರಾವತ್

    ತೀರ್ಥ್ ಸಿಂಗ್ ರಾವತ್ ಸಂಸತ್ ಸದಸ್ಯರಾಗಿ ಮುಖ್ಯಮಂತ್ರಿಯಾಗಿದ್ದಾರೆ. ಇದೀಗ ಸಿಎಂ ಆದ 6 ತಿಂಗಳ ಒಳಗೆ ರಾಜ್ಯ ವಿಧಾನಸಭೆ ಸದಸ್ಯರಾಗಬೇಕಾಗಿತ್ತು. ಆದರೆ ಇದೀಗ ಚುನಾವಣೆ ನಡೆಸಲು ಸಾಧ್ಯವಾಗದೆ ಇರುವ ಹಿನ್ನೆಲೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

    ಈ ಹಿಂದೆ ಉತ್ತರಾಖಂಡದ ಮುಖ್ಯಮಂತ್ರಿ ತೀವೇಂದ್ರ ಸಿಂಗ್ ರಾವತ್ ಕೂಡ ಇದೇ ರೀತಿಯ ಬಿಕ್ಕಟ್ಟಿನಿಂದಾಗಿ ರಾಜೀನಾಮೆ ನೀಡಿದ್ದರು ಬಳಿಕ ತೀರ್ಥ್ ಸಿಂಗ್ ರಾವತ್ ಸಿಎಂ ಆಗಿದ್ದರು. ಅದಾದ ಬಳಿಕ ಉತ್ತರಾಖಂಡದಲ್ಲಿ ಉಂಟಾದ ನಾಯಕತ್ವ ಬಿಕ್ಕಟ್ಟಿನಿಂದಾಗಿ ರಾವತ್ ಮೇಲೆ ಕೇಂದ್ರದಿಂದಲೂ ಅಲ್ಪ ಮಟ್ಟಿನ ಹಿನ್ನಡೆ ಉಂಟಾಗಿತ್ತು. ಅದಲ್ಲದೆ ಮಹಿಳೆಯರು ಧರಿಸುವ ರಿಪ್ಪಡ್ ಜೀನ್ಸ್ ಪ್ಯಾಂಟ್ ಬಗ್ಗೆ ರಾವತ್ ಹೇಳಿದ ಹೇಳಿಕೆಯಿಂದ ವ್ಯಾಪಕ ವಿರೋಧ ಕೂಡ ಉಂಟಾಗಿತ್ತು. ಇದನ್ನೂ ಓದಿ : ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ್ರೆ ಕೊರೊನಾ ಬರಲ್ಲ: ತೀರ್ಥ್ ಸಿಂಗ್ ರಾವತ್

    ಇದೀಗ ಮತ್ತೆ ಉತ್ತರಾಖಂಡದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ನಡೆಯಬೇಕಾಗಿದ್ದು, ಶಾಸಕರಾದ ಸತ್ಪಲ್ ಮಹಾರಾಜ್ ಮತ್ತು ದಾನ್ ಸಿಂಗ್ ರಾವತ್ ಮುಖ್ಯಮಂತ್ರಿ ಹುದ್ದೆಯ ಮುಂಚೂಣಿಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

    ಇಂದು ಮಧ್ಯಾಹ್ನ ಬಿಜೆಪಿ ಸಭೆ ಕರೆದಿದ್ದು, ಮುಂದಿನ ಮುಖ್ಯಮಂತ್ರಿ ಯಾರು ಅನ್ನೋದರ ಬಗ್ಗೆ ಚರ್ಚೆಗಳು ನಡೆದಿವೆ. ಉತ್ತರಾಖಂಡ ಬಿಜೆಪಿಯ ಮಾಜಿ ಅಧ್ಯಕ್ಷ ಬಿಶನ್ ಸಿಂಗ್ ಚುಪ್ಲಾ ಮತ್ತು ಮಾಜಿ ಸಿಎಂ ತ್ರೀವೇಂದ್ರ ಸಿಂಗ್ ಹೆಸರಗಳು ಮುಖ್ಯಮಂತ್ರಿ ರೇಸ್ ನಲ್ಲಿವೆ.

  • ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡಿ ಜೀವನ ಸಾಗಿಸ್ತಿದ್ದಾರೆ 28 ಬಾರಿ ಚಿನ್ನ ಗೆದ್ದ ಪ್ಯಾರಾಶೂಟರ್..!

    ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡಿ ಜೀವನ ಸಾಗಿಸ್ತಿದ್ದಾರೆ 28 ಬಾರಿ ಚಿನ್ನ ಗೆದ್ದ ಪ್ಯಾರಾಶೂಟರ್..!

    ಡೆಹ್ರಾಡೂನ್: ಭಾರತ ಪರ 28 ಬಾರಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ದೇಶದ ಮೊದಲ ಪ್ಯಾರಾಶೂಟರ್ ದಿಲ್ರಾಜ್ ಕೌರ್ ಇದೀಗ ತನ್ನ ಜೀವನ ನಿರ್ವಹಣೆಗಾಗಿ ರಸ್ತೆ ಬದಿಯಲ್ಲಿ ಬಿಸ್ಕತ್, ಚಿಪ್ಸ್ ಮಾರಾಟ ಮಾಡುವಂತಹ ಪರಿಸ್ಥಿತಿ ಬಂದಿದೆ.

    ದಿಲ್ರಾಚ್ ಕೌರ್ 2005ರಲ್ಲಿ ಪ್ರಾರಂಭಿಸಿದ ತನ್ನ ಕ್ರೀಡಾ ಜೀವನದಲ್ಲಿ 15 ವರ್ಷಗಳ ಕಾಲ ಭಾರತವನ್ನು ಪ್ರತಿನಿಧಿಸಿ ಹಲವು ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿದ್ದರು. ಬಳಿಕ ಇದೀಗ ಜೀವನ ನಿರ್ವಹಣೆಗಾಗಿ ಉತ್ತರಾಖಂಡದ ಡೆಹ್ರಾಡೂನ್, ಗಾಂಧಿ ಪಾರ್ಕ್ ಬಳಿ ಬಿಸ್ಕತ್ ಮತ್ತು ಚಿಪ್ಸ್ ಮಾರಾಟ ಮಾಡುತ್ತಿದ್ದಾರೆ. ಇದನ್ನೂ ಓದಿ: ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ

    ಈ ಕುರಿತು ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ದಿಲ್ರಾಜ್ ಕೌರ್, ನಾನು ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ಯಾರಾಶೂಟರ್ ಆಗಿ ದೇಶಕ್ಕಾಗಿ ಈವರೆಗೆ 28 ಚಿನ್ನದ ಪದಕ, 8 ಬೆಳ್ಳಿ ಪದಕ, ಮತ್ತು 3 ಕಂಚಿನ ಪದಕ ಪಡೆದಿದ್ದೇನೆ. ಆದರೂ ನನಗೆ ಇದೀಗ ಜೀವನ ನಿರ್ವಹಣೆಗೆ ಕಷ್ಟಪಡುವಂತಹ ಪರಿಸ್ಥಿತಿ ಇದೆ. ಹಾಗಾಗಿ ಇಲ್ಲಿ ಬಿಸ್ಕತ್ ಚಿಪ್ಸ್ ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

    https://twitter.com/shubham_jain999/status/1407302791429705728

    ಈ ಬಗ್ಗೆ ರಾಜ್ಯದ ಪ್ಯಾರಾಶೂಟಿಂಗ್ ಕ್ರೀಡಾ ಇಲಾಖೆಯೊಂದಿಗೆ ತಿಳಿಸಿದಾಗ ನನಗೆ ಯಾವುದೇ ನೆರವು ಸಿಕ್ಕಿಲ್ಲ. ನಾನು ನನ್ನ ಕ್ರೀಡಾ ಸಾಧನೆಯನ್ನು ಪರಿಗಣಿಸಿ ನನಗೆ ಸರ್ಕಾರಿ ಉದ್ಯೋಗ ಕೊಡಿ ಎಂದು ಮನವಿ ಮಾಡಿಕೊಂಡಿದ್ದೆ ಈವರೆಗೆ ಯಾವುದೇ ಕೆಲಸ ಸಿಕ್ಕಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  • ಕೋವಿಡ್ ಕರ್ಫ್ಯೂ ವಿಸ್ತರಿಸಿದ ಉತ್ತರಾಖಂಡ್ – ಮದ್ವೆಯಲ್ಲಿ ಭಾಗಿಯಾಗಲು ರಿಪೋರ್ಟ್ ಕಡ್ಡಾಯ

    ಕೋವಿಡ್ ಕರ್ಫ್ಯೂ ವಿಸ್ತರಿಸಿದ ಉತ್ತರಾಖಂಡ್ – ಮದ್ವೆಯಲ್ಲಿ ಭಾಗಿಯಾಗಲು ರಿಪೋರ್ಟ್ ಕಡ್ಡಾಯ

    ದೆಹ್ರಾಡೂನ್: ಉತ್ತರಾಖಂಡ್ ಸರ್ಕಾರ ರಾಜ್ಯದಲ್ಲಿ ಕೊರೊನಾ ಕರ್ಫ್ಯೂವನ್ನು ಸೋಮವಾರದಿಂದ ವಿಸ್ತರಿಸಿದ್ದು, ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳವವರಿಗೆ ಕೋವಿಡ್-19 ನೆಗೆಟಿವ್ ವರದಿಯನ್ನು ತರಲು ಕಡ್ಡಾಯಗೊಳಿಸಿದೆ.

    ಮೇ 18ರ ಬೆಳಗ್ಗೆ 6 ಗಂಟೆಗೆ ಮುಕ್ತಾಯವಾಗಬೇಕಿದ್ದ ಕೋವಿಡ್-19 ಕರ್ಫ್ಯೂ ಮೇ 25ರ ಬೆಳಗ್ಗೆ 6 ಗಂಟೆಯವರೆಗೂ ವಿಸ್ತರಿಸಲಾಗಿದೆ ಎಂದು ಕ್ಯಾಬಿನೆಟ್ ಸಚಿವರು ಮತ್ತು ರಾಜ್ಯ ಸರ್ಕಾರದ ಅಧಿಕೃತ ವಕ್ತಾರ ಸುಬೋಧ್ ಯುನಿಯಲ್ ತಿಳಿಸಿದ್ದಾರೆ.

    ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಜನರು ತಮ್ಮ ಕೋವಿಡ್-19 ನೆಗೆಟಿವ್ ಪರೀಕ್ಷಾ ವರದಿಯನ್ನು ತೆಗೆದುಕೊಂಡು ಬರಬೇಕು. ಅದು 72 ಗಂಟೆಗಳಿಗಿಂತ ಒಳಗಿನದ್ದಾಗಿರಬೇಕು ಹಾಗೂ ಮದುವೆ ಸಮಾರಂಭಗಳಿಗೆ 20 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು 20 ಮಂದಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಅಲ್ಲದೇ ಶವಸಂಸ್ಕಾರಕ್ಕೆ ಹೋಗುವವರಿಗೆ ಆಡಳಿತವು ಕರ್ಫ್ಯೂ ಪಾಸ್ ನೀಡುವುದು ಅಗತ್ಯವಾಗಿದೆ. ಒಟ್ಟಾರೆ ಕೊರೊನಾ ಸೋಂಕನ್ನು ತಡೆಗಟ್ಟಲು ಕರ್ಫ್ಯೂ ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

  • ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ್ರೆ ಕೊರೊನಾ ಬರಲ್ಲ: ತೀರ್ಥ್ ಸಿಂಗ್ ರಾವತ್

    ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ್ರೆ ಕೊರೊನಾ ಬರಲ್ಲ: ತೀರ್ಥ್ ಸಿಂಗ್ ರಾವತ್

    – ಕೊರೊನಾ ಮಾರ್ಗಸೂಚಿ ಪಾಲಿಸಿ ಕುಂಭಮೇಳ
    – ಕುಂಭಮೇಳ, ಮರ್ಕಜ್ ನಡುವಿನ ಹೋಲಿಕೆ ತಪ್ಪು

    ಡೆಹ್ರಾಡೂನ್: ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು, ನಿಜಾಮುದ್ದೀನ್ ಮರ್ಕಜ್‍ನೊಂದಿಗೆ ಹೋಲಿಕೆ ಮಾಡಬೇಡಿ. ಕುಂಭಮೇಳದಲ್ಲಿ ಗಂಗಾಸ್ಥಾನ ಮಾಡಿದರೆ ಕೊರೊನಾ ಬರುವುದಿಲ್ಲ ಎಂದು ಉತ್ತರಾಖಂಡ ಮುಖ್ಯಮಂತ್ರಿ ತೀರ್ಥ್ ಸಿಂಗ್ ರಾವತ್ ಹೇಳಿಕೆ ನೀಡಿದ್ದಾರೆ.

    ಉತ್ತರಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ ಮತ್ತು ನಿಜಾಮುದ್ದೀನ್ ಮರ್ಕಜ್ ಕುರಿತು ಸ್ಥಳೀಯ ಮಾಧ್ಯಮವೊಂದರ ಪ್ರಶ್ನೆಗೆ ಉತ್ತರಿಸಿದ ತೀರ್ಥ್ ಸಿಂಗ್ ರಾವತ್ ಅವರು, ಕುಂಭಮೇಳ ಮತ್ತು ನಿಜಾಮುದ್ದೀನ್ ಮರ್ಕಜ್ ಎರಡು ಧಾರ್ಮಿಕ ಕಾರ್ಯಕ್ರಮಗಳನ್ನು ಹೋಲಿಕೆ ಮಾಡಬೇಡಿ. ನಿಜಾಮುದ್ದೀನ್ ಮರ್ಕಜ್ ಕಟ್ಟಡದಲ್ಲಿ ನಡೆದರೆ ಕುಂಭಮೇಳ ತೆರೆದ ಜಾಗದಲ್ಲಿ ನಡೆಯುತ್ತದೆ. ಅದಲ್ಲದೆ ನಿಜಾಮುದ್ದೀನ್ ಮರ್ಕಜ್ ಕಾರ್ಯಕ್ರಮಕ್ಕೆ ವಿದೇಶಿಗರು ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.

    ಕುಂಭಮೇಳದಲ್ಲಿ ಹೊರಗಿನಿಂದ ಯಾರು ಬರುವುದಿಲ್ಲ ಎಲ್ಲರು ನಮ್ಮವರೆ ಆಗಿರುತ್ತಾರೆ. ಆದರೆ ನಿಜಾಮುದ್ದೀನ್ ಮರ್ಕಜ್‍ಗೆ ಬೇರೆ ದೇಶಗಳಿಂದ ಜನ ಬರುತ್ತಾರೆ. ಮರ್ಕಜ್ ನಡೆದಾಗ ಕೊರೊನಾ ಕುರಿತು ಹೆಚ್ಚಿನ ಅರಿವು ಇರಲಿಲ್ಲ ಮತ್ತು ಮಾರ್ಗಸೂಚಿಗಳಿರಲಿಲ್ಲ. ಇದರೊಂದಿಗೆ ಮರ್ಕಜ್‍ಗೆ ಆಗಮಿಸಿದವರು ಯಾರು ಎಷ್ಟು ದಿನ ಉಳಿದುಕೊಳ್ಳಲಿದ್ದಾರೆ ಮತ್ತು ಒಟ್ಟು ಜನಸಂಖ್ಯೆಯ ಸರಿಯಾದ ಯೋಜನೆ ಇರಲಿಲ್ಲ ಎಂದಿದ್ದಾರೆ.

    ಆದರೆ ಪ್ರಸ್ತುತ ಕೊರೊನಾ ಕುರಿತು ಹೆಚ್ಚಿನ ಅರಿವು ಮೂಡಿದ್ದು, ಸರಿಯಾದ ಮಾರ್ಗಸೂಚಿಗಳನ್ನು ತೆಗೆದುಕೊಂಡು ಕುಂಭಮೇಳ ನಡೆಸಲಾಗುತ್ತಿದೆ. ಕುಂಭಮೇಳ 12 ವರ್ಷಗಳಿಗೊಮ್ಮೆ ಬರುತ್ತದೆ. ಹಾಗೆ ಕುಂಭಮೇಳ ಲಕ್ಷಾಂತರ ಜನರ ನಂಬಿಕೆ ಮತ್ತು ಭಾವನೆಗಳೊಂದಿಗೆ ನಂಬಿಕೆ ಹೊಂದಿರುತ್ತದೆ ಎಂದು ಅಭಿಪ್ರಾಯಪಟ್ಟರು.

    ಈಗಾಗಲೇ ಕುಂಭಮೇಳಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಕುಂಭಮೇಳವನ್ನು ಯಶಸ್ವಿಯಾಗಿ ನಡೆಸಲು ಕೋವಿಡ್-19ನ ಸವಾಲು ಮುಂದಿದೆ. ಈ ಕುರಿತು ಹೆಚ್ಚಿನ ಗಮನ ಹರಿಸಿ ಜನರ ಆರೋಗ್ಯ ದೃಷ್ಟಿಯಿಂದ ಸರಿಯಾದ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡು ಕುಂಭಮೇಳ ನಡೆಸುವುದಾಗಿ ತಿಳಿಸಿದ್ದಾರೆ.

  • ಮದುವೆಯಲ್ಲಿ ಪಾಲ್ಗೊಳ್ಳಲು 200 ಮಂದಿಗೆ ಅವಕಾಶ – ಉತ್ತರಾಖಂಡ್ ಸರ್ಕಾರ ಹೊಸ ನಿರ್ಧಾರ

    ಮದುವೆಯಲ್ಲಿ ಪಾಲ್ಗೊಳ್ಳಲು 200 ಮಂದಿಗೆ ಅವಕಾಶ – ಉತ್ತರಾಖಂಡ್ ಸರ್ಕಾರ ಹೊಸ ನಿರ್ಧಾರ

    ಡೆಹ್ರಾಡೂನ್: ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಹಲವಾರು ಮುನ್ನೆಚ್ಚರಿಕಾ ಕ್ರಮಗಳ ಮಧ್ಯೆ ಉತ್ತರಾಖಂಡ್ ಸರ್ಕಾರವು ಕೋವಿಡ್-19 ಕಂಟೈನ್ಮೆಂಟ್ ಝೋನ್‍ಗಳಲ್ಲಿ ಜರುಗುವ ಮದುವೆ ಸಮಾರಂಭಗಳಿಗೆ 200 ಮಂದಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದೆ.

    ಉತ್ತರಾಖಂಡ್ ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ್, ಕಂಟೈನ್ಮೆಂಟ್ ಝೋನ್ ಗಳಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು 200 ಮಂದಿಗೆ ಅವಕಾಶ ನೀಡಲಾಗಿದ್ದು, ಅವರು ಕೋವಿಡ್-19 ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

    ಕೋವಿಡ್-19 ತಡೆಗಟ್ಟಲು ರಾತ್ರಿ 10ರಿಂದ ಬೆಳಗ್ಗೆ 5ರವರೆಗೂ ಡೆಹ್ರಾಡೂನ್‍ನಲ್ಲಿ ನೈಟ್ ಕಫ್ರ್ಯೂ ವಿಧಿಸಲಾಗಿದ್ದು, ಏಪ್ರಿಲ್ 30ರವರೆಗೂ ಡೆಹ್ರಾಡೂನ್, ಹಲ್ದ್ವಾನಿ ಮತ್ತು ಹರಿದ್ವಾರದಲ್ಲಿ 1 ರಿಂದ 12 ನೇ ತರಗತಿವರೆಗೂ ಶಾಲೆಗಳನ್ನು ಮುಚ್ಚಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

    ಸೋಮವಾರ ಉತ್ತರಾ ಖಂಡ್‍ನಲ್ಲಿ 1,334 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಒಟ್ಟು 1,10,146 ಕೊರೊನಾ ಪ್ರಕರಣಗಳು ವರದಿಯಾಗಿದೆ.

  • ಕಾಡ್ಗಿಚ್ಚು ನಂದಿಸುತ್ತಿರುವ ಅರಣ್ಯ ಸಚಿವರ ವೀಡಿಯೋ ವೈರಲ್

    ಕಾಡ್ಗಿಚ್ಚು ನಂದಿಸುತ್ತಿರುವ ಅರಣ್ಯ ಸಚಿವರ ವೀಡಿಯೋ ವೈರಲ್

    ಡೆಹ್ರಾಡೂನ್: ಉತ್ತರಾಖಂಡದ ಅರಣ್ಯದ ಹಲವು ಭಾಗಗಳಲ್ಲಿ ಕಾಡ್ಗಿಚ್ಚು ತೀವ್ರಗೊಂಡಿದೆ. ಅರಣ್ಯ ಸಚಿವರಾದ ಹರಾಕ್ ಸಿಂಗ್ ಬೆಂಕಿ ನಂದಿಸಲು ಪ್ರಯತ್ನಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ವೈರಲ್ ವೀಡಿಯೋದಲ್ಲಿ ಏನಿದೆ?
    ಪೌರಿ ಜಿಲ್ಲೆಯಲ್ಲಿ ಕಾಡು ಹೊತ್ತಿ ಉರಿಯುತ್ತಿರುವಾಗ ಗಿಡವೊಂದನ್ನು ಹಿಡಿದು ಅದರ ಮೂಲಕವಾಗಿ ಸಚಿವ ಸಿಂಗ್ ಅವರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. 30 ಸಕೆಂಡ್‍ಗಳ ಈ ವೀಡಿಯೋ ವೈರಲ್ ಆಗಿದೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ವ್ಯಂಗ್ಯಮಾಡಿದ್ದಾರೆ.

    ರಾಜ್ಯದ ಹಲವೆಡೆ ಕಾಡ್ಗಿಚ್ಚು ಮಿತಿ ಮೀರುತ್ತಿದ್ದು, ಬೆಂಕಿ ನಂದಿಸಲು ಭಾರತೀಯ ವಾಯುಪಡೆ ಶ್ರಮಿಸುತ್ತಿದೆ. ಕಳೆದ 6 ತಿಂಗಳಲ್ಲಿ ರಾಜ್ಯದಲ್ಲಿ ಒಂದು ಸಾವಿರದಷ್ಟು ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿವೆ.

  • ಕರ್ತವ್ಯ ನಿರತ ಕೊಡಗಿನ ಯೋಧ ವಿಡಿಯೋ ಮಾಡಿ ಉತ್ತರಾಖಂಡದಲ್ಲಿ ಆತ್ಮಹತ್ಯೆ

    ಕರ್ತವ್ಯ ನಿರತ ಕೊಡಗಿನ ಯೋಧ ವಿಡಿಯೋ ಮಾಡಿ ಉತ್ತರಾಖಂಡದಲ್ಲಿ ಆತ್ಮಹತ್ಯೆ

    ಮಡಿಕೇರಿ: ನನಗೆ ತೀವ್ರ ತೊಂದರೆ ಕೊಡುತ್ತಿದ್ದೀಯಾ, ನನ್ನ ನೆಮ್ಮದಿಯನ್ನು ಹಾಳು ಮಾಡಿದ್ದೀಯ, ನಿನಗೆ ಹಣ ಅಷ್ಟೇ ಮುಖ್ಯವಲ್ಲವೇ ಎಂದು ಸೈನಿಕನೊಬ್ಬ ತನ್ನ ಪತ್ನಿ ವಿರುದ್ಧ ಆರೋಪಿಸಿ 25 ನಿಮಿಷಗಳ ಕಾಲ ವಿಡಿಯೋ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕುಶಾಲನಗರದ ಗೊಂದಿಬಸವನಹಳ್ಳಿ ಗ್ರಾಮದ ನಾಗರಾಜು ಮತ್ತು ಜಗದಾಂಬ ದಂಪತಿ ಮಗ, 16 ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದ ಪ್ರಜು (35) ಉತ್ತರಾಖಂಡದಲ್ಲಿ ಶುಕ್ರವಾರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಪ್ರಜು ಆತ್ಮಹತ್ಯೆಗೂ ಮುನ್ನ ಉತ್ತರಾಖಂಡದಲ್ಲಿ ಕುಳಿತು ನೀನು ಹಣಕ್ಕಾಗಿ ನನ್ನನ್ನು ಪೀಡಿಸುತ್ತಿದ್ದೀಯಾ. ನನ್ನ ನೆಮ್ಮದಿಯನ್ನು ಹಾಳು ಮಾಡಿದ್ದೀಯಾ ಎಂದು ನೊಂದು ನುಡಿಯುತ್ತಾ ತನ್ನ ಪತ್ನಿಗೆ ವಿಡಿಯೋ ಕಳುಹಿಸಿದ್ದಾರೆ. ಈ ವಿಡಿಯೋವನ್ನು ಕುಟುಂಬದ ಸದಸ್ಯರಿಗೂ ಕಳುಹಿಸಿ ಬಳಿಕ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಕುಶಾಲನಗರದ ಸಮೀಪದ ಮುಳ್ಳುಸೋಗೆಯ ನವ್ಯ ಎಂಬುವವರನ್ನು ಕಳೆದ 12 ವರ್ಷಗಳ ಹಿಂದೆ ಪ್ರಜು ವಿವಾಹವಾಗಿದ್ದರು. ಮದುವೆಯಾಗಿ ಮುದ್ದಿನ ಇಬ್ಬರು ಮಕ್ಕಳನ್ನು ಪಡೆದು ಆರೇಳು ವರ್ಷದ ನಂತರ ಪತಿ ಪ್ರಜು ಅವರಿಗೆ ಪತ್ನಿ ನವ್ಯ ಅವರ ಮೇಲೆ ಇನ್ನಿಲ್ಲದ ಅನುಮಾನ ಶುರುವಾಗಿದೆ. ಹೀಗಾಗಿ ನವ್ಯ ಅವರಿಗೆ ಯಾವಾಗ ಫೋನ್ ಮಾಡಿದರೂ ತುಂಬಾ ಟಾರ್ಚರ್ ಕೊಡುತ್ತಿದ್ದರೆಂದು ಪ್ರಜು ಮೇಲೆ ಆರೋಪಿಸಿದ್ದಾರೆ.

    ಜೊತೆಗೆ ಪ್ರಜು ರಜೆ ಮೇಲೆ ಊರಿಗೆ ಬಂದಾಗಲೆಲ್ಲಾ ನವ್ಯ ಅವರಿಗೆ ದೈಹಿಕ ಹಲ್ಲೆ ನಡೆಸುತ್ತಿದ್ದರಿಂದ ಬೇಸತ್ತಿದ್ದ ನವ್ಯ ತನಗೆ ರಕ್ಷಣೆ ಕೊಡುವಂತೆ ಕುಶಾಲನಗರ ಪಟ್ಟಣ ಪೊಲೀಸರ ಮೊರೆ ಹೋಗಿದ್ದರು. ಕಳೆದ ಒಂದು ವರ್ಷದ ಹಿಂದೆ ಬಂದಾಗ ನವ್ಯ ಅವರ ಕೈಯನ್ನು ಬೆಂಕಿಯಿಂದ ಪ್ರಜು ಸುಟ್ಟಿದ್ದರು. ಈ ಘಟನೆ ನಂತರ ನವ್ಯ ತನಗೆ ಪತಿಯೇ ಬೇಡವೆಂಬ ನಿರ್ಧಾರಕ್ಕೆ ಬಂದು ಮಹಿಳಾ ಆಯೋಗಕ್ಕೂ ದೂರು ನೀಡಿದ್ದರು. ನಂತರ ಮನಸ್ಸು ಬದಲಾಯಿಸಿಕೊಂಡ ನವ್ಯ ನೀಡಿದ್ದ ದೂರನ್ನು ವಾಪಸ್ ಪಡೆದು ಮನೆಗೆ ಬರುವಾಗಲೇ ಮಾರ್ಗ ಮಧ್ಯೆ ಪ್ರಜು ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ.

    ಕಳೆದ ತಿಂಗಳಷ್ಟೇ ಊರಿಗೆ ಬಂದಿದ್ದ ಪ್ರಜು ನವ್ಯ ಅವರಿಗೆ ಕೊಲೆ ಬೆದರಿಕೆ ಹಾಕಿದ್ದರು. ನೀನು ಯಾರೊಂದಿಗೆ ಫೋನ್ ನಲ್ಲಿ ತುಂಬಾ ಮಾತನಾಡುತ್ತಿದ್ದೀಯ. ನಿನಗೆ ಆ್ಯಸಿಡ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಹೀಗಾಗಿ 2021 ಫೆಬ್ರವರಿಯಲ್ಲೂ ಪೊಲೀಸರಿಗೆ ಮತ್ತೆ ದೂರು ನೀಡಿದ್ದರು. ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಜು ಅವರು ಇದ್ದಕ್ಕಿದ್ದಂತೆ ನಾನು ಡ್ಯೂಟಿಗೆ ಹೋಗಬೇಕಿದೆ ಎಂದು ಉತ್ತರಖಂಡಕ್ಕೆ ತೆರಳಿದ್ದಾರೆ. ಹೀಗೆ ಹೋದವರು ಉತ್ತರಖಂಡದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ನವ್ಯ ಮಾತ್ರ ನಮ್ಮ ಸಂಸಾರ ಹಾಳಾಗುವುದಕ್ಕೆ ನನ್ನ ಪತಿಯ ಸ್ನೇಹಿತರಾದ ಕೆಲವರು ನೇರ ಕಾರಣ ಎಂದು ಆರೋಪ ಮಾಡಿದ್ದಾರೆ.