Tag: Uttarakhand Flood

  • ಹೇಗಿತ್ತು.. ಹೇಗಾಯ್ತು!?- ಉತ್ತರಾಖಂಡದಲ್ಲಿ ಭೀಕರ ಪ್ರವಾಹದ ಸ್ಯಾಟಲೈಟ್‌ ದೃಶ್ಯ ಹಂಚಿಕೊಂಡ ಇಸ್ರೋ

    ಹೇಗಿತ್ತು.. ಹೇಗಾಯ್ತು!?- ಉತ್ತರಾಖಂಡದಲ್ಲಿ ಭೀಕರ ಪ್ರವಾಹದ ಸ್ಯಾಟಲೈಟ್‌ ದೃಶ್ಯ ಹಂಚಿಕೊಂಡ ಇಸ್ರೋ

    ನವದೆಹಲಿ: ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarakashi) ಸಂಭವಿಸಿದ ಭೀಕರ ಪ್ರವಾಹದಿಂದ ಉಂಟಾದ ವಿನಾಶದ ಪ್ರಮಾಣದ ಚಿತ್ರಣಗಳನ್ನು ಇಸ್ರೋ (ISRO) ಬಹಿರಂಗಪಡಿಸಿದೆ.

    ಆ.5 ರಂದು ಸಂಭವಿಸಿದ ಈ ದುರಂತದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ. 50 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಹಿಮನದಿಯ ಕೊಳ ಸ್ಫೋಟವೇ ಪ್ರವಾಹಕ್ಕೆ ಕಾರಣ ಎಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರಕಾಶಿಯಲ್ಲಿ ಮೇಘಸ್ಫೋಟ – ಈವರೆಗೆ 274 ಮಂದಿ ರಕ್ಷಣೆ, ಪತ್ತೆಯಾಗದ 59 ಜನರು

    ಪ್ರವಾಹದ ಎರಡು ದಿನಗಳ ನಂತರ ಇಸ್ರೋದ ಕಾರ್ಟೊಸ್ಯಾಟ್-2S ಉಪಗ್ರಹವು, ಪ್ರವಾಹ ಪೀಡಿತ ವಲಯದ ಚಿತ್ರಗಳನ್ನು ಸೆರೆಹಿಡಿದಿದೆ. ಆ.7 ರಂದು ತೆಗೆದ ಈ ಚಿತ್ರಗಳು, ಖೀರ್ ಗಡ್ ಹೊಳೆ ಭಾಗೀರಥಿ ನದಿಯನ್ನು ಸೇರುವ ಧರಾಲಿ ಗ್ರಾಮದಲ್ಲಿ ಮಣ್ಣು ಮತ್ತು ಕಲ್ಲಿನ ರಾಶಿ ಸುಮಾರು 20 ಹೆಕ್ಟೇರ್‌ಗಳನ್ನು ಆವರಿಸುವುದನ್ನು ತೋರಿಸಿವೆ.

    ಈ ಚಿತ್ರಗಳು, ರಕ್ಷಣಾ ಕಾರ್ಯಾಚರಣೆ, ಪ್ರವಾಹದಲ್ಲಿ ಮುಳುಗಿರುವ ಪ್ರದೇಶಗಳು, ಸಂಪರ್ಕ ಕಡಿತಗೊಂಡ ಹಳ್ಳಿಗಳ ಸಂಪರ್ಕ ಪುನಃಸ್ಥಾಪಿಸಲು ಅಧಿಕಾರಿಗಳಿಗೆ ಸಹಾಯ ಮಾಡುತ್ತಿವೆ ಎಂದು ಇಸ್ರೋ ತಿಳಿಸಿದೆ. ಇದನ್ನೂ ಓದಿ: ಅಪ್ಪಾ.. ನಾವು ಬದುಕುಳಿಯಲ್ಲ, ಇಲ್ಲಿ ನೀರು ತುಂಬಿದೆ: ಉತ್ತರಾಖಂಡ ಪ್ರವಾಹದಲ್ಲಿ ಮಗನ ಕೊನೆ ಮಾತು ನೆನೆದು ತಂದೆ ಕಣ್ಣೀರು

    ಕಾಲುವೆ ಹೊಳೆಯಂತೆ ಹರಿದಿರುವುದು, ಮೂಲಸೌಕರ್ಯಗಳ ನಾಶ, ಹಲವಾರು ಮನೆಗಳ ಕಣ್ಮರೆ, ರಸ್ತೆ-ತೋಟ-ಸೇತುವೆಗಳು ನಾಶವಾಗಿರುವುದನ್ನು ಈ ಚಿತ್ರಗಳಲ್ಲಿ ಕಾಣಬಹುದಾಗಿದೆ. ಮನೆಗಳು ಮಣ್ಣು ಮತ್ತು ಅವಶೇಷಗಳಡಿ ಕೊಚ್ಚಿ ಹೋಗಿವೆ. ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ.

    ಪ್ರವಾಹಕ್ಕೂ ಹಿಂದಿನ ಚಿತ್ರಣ ಹಾಗೂ ಪ್ರವಾಹ ನಂತರದ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಧರಾಲಿ ಮತ್ತು ಭಾಗೀರಥಿ ನದಿಯ 2024 ರ ಜೂನ್‌ ತಿಂಗಳಲ್ಲಿ ತೆಗೆದ ಚಿತ್ರ ಇದರಲ್ಲಿದೆ. ನದಿಯ ದಡದಲ್ಲಿ ಮನೆಗಳು ಸಾಲಾಗಿ ನಿಂತಿವೆ. ಆದರೆ, ಈಗಿನ ಚಿತ್ರಗಳು ಪ್ರವಾಹದಿಂದಾಗಿ ಎಲ್ಲೆಡೆ ಮಣ್ಣು ಮತ್ತು ಕಲ್ಲಿನ ರಾಶಿ ತುಂಬಿರುವುದು ಕಾಣುತ್ತದೆ. ಜನವಸತಿ ಪ್ರವಾಹಕ್ಕೆ ಸಿಲುಕಿ ನಾಶವಾಗಿವೆ. ಇದನ್ನೂ ಓದಿ: ಮೇಘಸ್ಫೋಟವಲ್ಲ ಉತ್ತರಾಖಂಡದಲ್ಲಿ ಸಂಭವಿಸಿದ್ದು ಹಿಮಕೊಳ ಸ್ಫೋಟ!

  • ಉತ್ತರಾಖಂಡ್ ಪ್ರವಾಹಪೀಡಿತ ಭಾಗದಲ್ಲಿ 10 ಕನ್ನಡಿಗರಿಗೆ ಸಂಕಷ್ಟ

    ಉತ್ತರಾಖಂಡ್ ಪ್ರವಾಹಪೀಡಿತ ಭಾಗದಲ್ಲಿ 10 ಕನ್ನಡಿಗರಿಗೆ ಸಂಕಷ್ಟ

    ಬೆಂಗಳೂರು: ಉತ್ತರಾಖಂಡ್ ರಾಜ್ಯದಲ್ಲಿ ಮೇಘಸ್ಫೋಟದಿಂದ ಭಾರೀ ಪ್ರವಾಹ ಸೃಷ್ಟಿಯಾಗಿದ್ದು, ಪ್ರವಾಸಕ್ಕೆ ಹೋಗಿದ್ದ 10 ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

    10 ಕನ್ನಡಿಗರು ಪ್ರವಾಹಪೀಡಿತ ಸ್ಥಳದಲ್ಲಿ ಸಿಲುಕಿಕೊಂಡಿದ್ದಾರೆ. ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರು ನೆರವು ಕೋರಿ ಸಹಾಯವಾಣಿಗೆ ಸಂಪರ್ಕ ಮಾಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಕೋಮುಗಲಭೆ – ಇಸ್ಕಾನ್ ದೇವಾಲಯದ ಟ್ವಿಟ್ಟರ್ ಖಾತೆ ಬ್ಲಾಕ್

    ಉತ್ತರಾಖಂಡ್‍ದ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರಲ್ಲಿ 4 ಜನ ಬೆಂಗಳೂರಿನವರಾಗಿದ್ದು, ಅದರಲ್ಲಿ ಇಬ್ಬರು ಯಲಹಂಕ ಮೂಲದವರಾಗಿದ್ದು, ಇನ್ನೊಬ್ಬರು ಬಸವೇಶ್ವರನಗರ, ಆರ್‍ಟಿನಗರ ನಿವಾಸಿಗಳಾಗಿದ್ದಾರೆ. ನಾಲ್ವರು ಈಗ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಗಂಗಾಭಟ್, ರಿತೀಶ್ ಭಟ್(ಯಲಹಂಕ), ಗಣೇಶ್(ಬಸವೇಶ್ವರನಗರ), ಅಶ್ವಥ್ ನಾರಾಯಣ್(ಆರ್‌ಟಿ ನಗರ) ಬೆಂಗಳೂರು ಮೂಲದವರಾಗಿದ್ದಾರೆ. ಬೆಂಗಳೂರಿಗರಲ್ಲದೇ ಉಡುಪಿಯ ಒಬ್ಬರು ಕೂಡ ಪ್ರವಾಹದಲ್ಲಿ ಪರದಾಡುತ್ತಿದ್ದಾರೆ. ಉಡುಪಿ ಮೂಲದ ಮಹಿಳೆ ರೇಖಾ, ಸಿಂದಗಿಯ ವೈದ್ಯೆ ಡಾ.ರೇಖಾ ಮತ್ತು ಮಿಲಿಟರಿ ವೈದ್ಯ ಡಾ.ಅನಿತಾ ಪಂಪಣ್ಣನವರ್ ಪ್ರವಾಹದಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ:  ಇಂದು ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಭವಿಷ್ಯ ನಿರ್ಧಾರ

    ಉತ್ತರಾಖಂಡ್‍ನಲ್ಲಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ಒಂದೆರಡು ದಿನಗಳಲ್ಲಿ ಕನ್ನಡಿಗರನ್ನು ಕರೆತರುತ್ತೇವೆ. ಮಳೆಯಿಂದ ರಸ್ತೆ ಕಡಿತವಾಗಿರೋದ್ರಿಂದ ಸಂಕಷ್ಟ ಎದುರಾಗಿದೆ. ಪ್ರವಾಹಪೀಡಿತ ಭಾಗಗಳಲ್ಲಿ ಸಿಲುಕಿರುವವರ ಕುಟುಂಬವನ್ನು ಸಂಪರ್ಕಿದ್ದೇವೆ ಎಂದು ಪಬ್ಲಿಕ್ ಟಿವಿಗೆ ನೋಡಲ್ ಅಧಿಕಾರಿ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದಾರೆ.