Tag: Uttarakhand Avalanche

  • ಉತ್ತರಾಖಂಡದ ಚಮೋಲಿಯಲ್ಲಿ ಹಿಮಕುಸಿತ – ಗಾಯಗೊಂಡಿದ್ದ ನಾಲ್ವರು ಕಾರ್ಮಿಕರು ಸಾವು

    ಉತ್ತರಾಖಂಡದ ಚಮೋಲಿಯಲ್ಲಿ ಹಿಮಕುಸಿತ – ಗಾಯಗೊಂಡಿದ್ದ ನಾಲ್ವರು ಕಾರ್ಮಿಕರು ಸಾವು

    ಡೆಹ್ರಾಡೂನ್: ಉತ್ತರಾಖಂಡದ ಚಮೋಲಿಯಲ್ಲಿ ಹಿಮಕುಸಿತದಿಂದ ಗಾಯಗೊಂಡಿದ್ದ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

    ಗಾಯಗೊಂಡಿದ್ದ ಕಾರ್ಮಿಕರು ಜೋಶಿಮಠದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಿಮದಡಿ ಒಟ್ಟು 55 ಕಾರ್ಮಿಕರು ಸಿಲುಕಿದ್ದರು. ಇದುವರೆಗೆ 50 ಜನರನ್ನು ರಕ್ಷಣೆ ಮಾಡಿದ್ದು, ಬಾಕಿ ಐದು ಜನರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ.

    ಘಟನಾ ಸ್ಥಳದಿಂದ ಆಸ್ಪತ್ರೆಗೆ ಸಾಗಿಸಲು ಆರು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ಸ್ಥಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಾಗಿದೆ. ಸಿಎಂ ಪುಷ್ಕರ್ ಸಿಂಗ್ ಧಾಮಿ ಅಧಿಕಾರಿಗಳ ಸಭೆ ನಡೆಸಿದ್ದಾರೆ.

    ಭಾರತ-ಟಿಬೆಟ್ ಗಡಿಯ ಸಮೀಪವಿರುವ ಮಾನಾ ಗ್ರಾಮ ಪ್ರದೇಶದಲ್ಲಿ ರಾತ್ರಿಯಿಡೀ ಸುಮಾರು ಏಳು ಅಡಿ ವರೆಗೂ ಇದ್ದ ಹಿಮವನ್ನು 65 ಕ್ಕೂ ಹೆಚ್ಚು ಸಿಬ್ಬಂದಿ ತೆರವುಗೊಳಿಸಿದ್ದಾರೆ. ಚಮೋಲಿ ಜಿಲ್ಲೆಯಲ್ಲಿ ರಾಜ್ಯದ ಹವಾಮಾನ ಇಲಾಖೆ ಮಳೆ ಮತ್ತು ಹಿಮಪಾತದ ಎಚ್ಚರಿಕೆ ನೀಡಿದೆ. ಡೆಹ್ರಾಡೂನ್, ಉತ್ತರಕಾಶಿ, ರುದ್ರಪ್ರಯಾಗ, ತೆಹ್ರಿ, ಪೌರಿ, ಪಿಥೋರಗಢ, ಬಾಗೇಶ್ವರ, ಅಲ್ಮೋರಾ, ನೈನಿತಾಲ್ ಮತ್ತು ಚಂಪಾವತ್‌ಗಳಲ್ಲಿಯೂ ಸಹ ಲಘು ಮಳೆಯಾಗುವ ಸಾಧ್ಯತೆಗಳಿವೆ.

  • ಉತ್ತರಾಖಂಡದಲ್ಲಿ ಹಿಮಪಾತ – 50 ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ

    ಉತ್ತರಾಖಂಡದಲ್ಲಿ ಹಿಮಪಾತ – 50 ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ

    ಡೆಹ್ರಾಡೂನ್: ಉತ್ತರಾಖಂಡದ (Uttarakhand Avalanche) ಚಮೋಲಿ ಜಿಲ್ಲೆಯಲ್ಲಿ ಹಿಮಪಾತ ಸಂಭವಿಸಿದ್ದು, ಮಾನಾ ಗ್ರಾಮದಲ್ಲಿ 57 ಕಾರ್ಮಿಕರು‌ ಸಿಲುಕಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

    10 ಕಾರ್ಮಿಕರು ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ – ಜನಜೀವನ ಅಸ್ತವ್ಯಸ್ಥ

    ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಜಿಲ್ಲಾಡಳಿತ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP) ಮತ್ತು ಗಡಿ ರಸ್ತೆ ಸಂಸ್ಥೆ (BRO) ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆಗೆ ಇಳಿದಿವೆ.

    ಫೆಬ್ರವರಿ 28 ರ ತಡರಾತ್ರಿ ವರೆಗೆ ಉತ್ತರಾಖಂಡದಲ್ಲಿ ಅತಿ ಹೆಚ್ಚು ಮಳೆ (20 ಸೆಂ.ಮೀ. ವರೆಗೆ) ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ – ಪ್ರಕರಣದ ವಿಚಾರಣೆಗೆ ನಿರಾಕರಿಸಿದ ಸುಪ್ರೀಂಕೋರ್ಟ್

    ಶುಕ್ರವಾರ ಬೆಳಗ್ಗೆ 07:15 ರ ಸುಮಾರಿಗೆ ಮಾನಾ ಮತ್ತು ಬದರಿನಾಥ್ ನಡುವೆ ಇರುವ BRO ಕಾರ್ಮಿಕ ಶಿಬಿರವು ಹಿಮಪಾತಕ್ಕೆ ತುತ್ತಾಯಿತು. ಎಂಟು ಕಂಟೇನರ್‌ಗಳು ಮತ್ತು ಒಂದು ಶೆಡ್‌ನಲ್ಲಿ 57 ಕಾರ್ಮಿಕರು ಸಿಲುಕಿದ್ದಾರೆ.

    ಐಬೆಕ್ಸ್ ಬ್ರಿಗೇಡ್‌ನ 100 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡ ಭಾರತೀಯ ಸೇನೆಯ ಕ್ಷಿಪ್ರ ಕಾರ್ಯ ತಂಡಗಳನ್ನು ಸಜ್ಜುಗೊಳಿಸಲಾಗಿದೆ. ವೈದ್ಯರು, ಅಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 11:50 ರ ಹೊತ್ತಿಗೆ, ತಂಡಗಳು ಐದು ಕಂಟೇನರ್‌ಗಳನ್ನು ಪತ್ತೆಹಚ್ಚಿವೆ. 10 ಮಂದಿಯನ್ನು ರಕ್ಷಿಸಲಾಗಿದೆ. ಅವರ ಪೈಕಿ ನಾಲ್ವರು ಸಿಬ್ಬಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ. ಸಿಕ್ಕಿಬಿದ್ದವರನ್ನು ರಕ್ಷಿಸುವ ಉದ್ದೇಶದಿಂದ ಉಳಿದ ಮೂರು ಕಂಟೇನರ್‌ಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇದನ್ನೂ ಓದಿ: ಯಮುನಾ ಸ್ವಚ್ಛತೆಗೆ ಮಿಷನ್ ಮೋಡ್; ಮಾಸ್ಟರ್ ಪ್ಲ್ಯಾನ್ ಸಿದ್ಧ

    ಈ ಪ್ರದೇಶದಲ್ಲಿ ಭಾರೀ ಹಿಮಪಾತ ಮುಂದುವರಿದಿದೆ. GREF ಜೋಶಿಮಠ ಮತ್ತು ಮಾನಾ ನಡುವಿನ ರಸ್ತೆಯನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ರಕ್ಷಣಾ ಮತ್ತು ವೈದ್ಯಕೀಯ ಸಹಾಯಕ್ಕಾಗಿ ಜೋಶಿಮಠದಿಂದ ಹೆಚ್ಚುವರಿ ವೈದ್ಯಕೀಯ ಸಂಪನ್ಮೂಲಗಳನ್ನು ಮಾನಾಗೆ ಸಜ್ಜುಗೊಳಿಸಲಾಗಿದೆ.