Tag: uttara karnataka

  • ಉತ್ತರ ಕರ್ನಾಟಕ ದಸರಾದ ಸಿಹಿ ‘ತರಗ’ ಮಾಡುವ ವಿಧಾನ

    ಉತ್ತರ ಕರ್ನಾಟಕ ದಸರಾದ ಸಿಹಿ ‘ತರಗ’ ಮಾಡುವ ವಿಧಾನ

    ಹಬ್ಬ ಬಂತೆಂದರೆ ಸಾಕು ಮೊದಲು ನೆನಪಾಗುವುದೇ ಸಿಹಿ, ರುಚಿಕರವಾದ ಅಡುಗೆ ಹಾಗೂ ಇನ್ನಿತರ ಖಾದ್ಯಗಳು.

    ಯಾವುದೇ ಹಬ್ಬ ಇರಲಿ, ಸಿಹಿಯಾದ ಅಡುಗೆ ಮಾಡುವುದು ಒಂದು ರೀತಿಯ ಸಂಪ್ರದಾಯವೇ ಹೌದು. ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವ ಹಾಗೆ ಹೋಳಿಗೆ, ಪಾಯಸ ಹೀಗೆ ವಿಭಿನ್ನವಾದ ಸಿಹಿ ಪದಾರ್ಥಗಳನ್ನು ಹಬ್ಬದ ಸಂದರ್ಭದಲ್ಲಿ ಮಾಡಲಾಗುತ್ತದೆ.

    ದಸರಾ ಹಬ್ಬವನ್ನು ರಾಜ್ಯದಲ್ಲಿ ಬೇರೆ ಬೇರೆ ಕಡೆ ವಿಭಿನ್ನವಾಗಿ ಆಚರಿಸಲಾಗುತ್ತದೆ. ದೇವಿಯ ಪೂಜೆ, 9 ದಿನ ಉಪವಾಸ, ಜಂಬೂಸವಾರಿ, ಹೀಗೆ ವಿಭಿನ್ನ ವಿಚಾರಗಳನ್ನು ಒಳಗೊಂಡು ದಸರಾ ಆಚರಿಸಲಾಗುತ್ತದೆ.

    ಕರ್ನಾಟಕದಲ್ಲಿ ಮೈಸೂರು ದಸರಾ, ಮಡಿಕೇರಿ ದಸರಾ, ಮಂಗಳೂರು ದಸರಾ ಹೀಗೆ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಹಾಗೆ ಉತ್ತರ ಕರ್ನಾಟಕದಲ್ಲಿ ದಸರಾ ಆಚರಿಸುವ ರೀತಿ ವಿಭಿನ್ನವಾಗಿದೆ. ನವರಾತ್ರಿಯ ಮೊದಲನೇ ದಿನ ದೇವರ ಮನೆಯಲ್ಲಿ ಘಟಸ್ಥಾಪನೆ ಮಾಡಲಾಗುತ್ತದೆ. ಈ ದಿನವನ್ನು ಘಟಸ್ಥಾಪನೆಯೆಂದೇ ಕರೆಯಲಾಗುತ್ತದೆ. ಈ ಘಟಸ್ಥಾಪನೆ ವೇಳೆ 9 ರೀತಿಯ ದ್ವಿದಳ ಧಾನ್ಯಗಳನ್ನ ಮಣ್ಣಿನಲ್ಲಿ ಹಾಕಿ, ಒಂಬತ್ತು ದಿನಗಳ ಕಾಲ ದೇವರ ಮನೆಯಲ್ಲಿ ಇಡಲಾಗುತ್ತದೆ. ನವರಾತ್ರಿಯ ಕೊನೆಯ ದಿನ ಬನ್ನಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆ ತರಗ (ಸಿಹಿ ಪೂರಿ) ಎಂಬ ಸಿಹಿ ಪದಾರ್ಥವನ್ನು ಮಾಡಲಾಗುತ್ತದೆ. ಈ ತರಗವನ್ನು ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    ಮೈದಾ ಹಿಟ್ಟು
    ಸಕ್ಕರೆ ಅಥವಾ ಬೆಲ್ಲ
    ಅರಿಶಿಣ ಪುಡಿ

    ಮಾಡುವ ವಿಧಾನ:
    ಮೈದಾ ಹಿಟ್ಟಿನಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ, ಅದಕ್ಕೆ ಅರಿಶಿನವನ್ನು ಹಾಕಿ ಪೂರಿ ಮಾಡುವ ಹಿಟ್ಟಿನ ಹದಕ್ಕೆ ತರಲಾಗುತ್ತದೆ. ಬಳಿಕ ಇದನ್ನು ದಿನನಿತ್ಯ ಪೂರಿ ತಯಾರಿಸಿದಂತೆ ಮಾಡಲಾಗುತ್ತದೆ.

    ಕೊನೆಯ ದಿನ ತರಗವನ್ನು ತಯಾರಿಸಿ, ದೇವರ ಮನೆಯಲ್ಲಿ ಕಟ್ಟಿಗೆಯ ʻಪೂಲಾರಿಗೆʼ ಎಂಬುವುದಕ್ಕೆ ತರಗವನ್ನು ಕಟ್ಟಲಾಗುತ್ತದೆ. ಪೂಲಾರಿಗೆ ಎಂದರೆ 3*3 ಎಂಬಂತೆ 9 ಚೌಕಗಳು ಸಿದ್ಧವಾಗುವಂತೆ  ಕಟ್ಟಿಗೆಯಿಂದ ತಯಾರಿಸಲಾಗುತ್ತದೆ. ಅದನ್ನು ದೇವರ ಮನೆಯಲ್ಲಿ ಮೇಲೆ ಕಟ್ಟಲಾಗುತ್ತದೆ. ಅದಕ್ಕೆ ತಯಾರಿಸಿರುವ ತರಗವನ್ನು ದಾರದ ಸಹಾಯದಿಂದ ಕಟ್ಟಲಾಗುತ್ತದೆ. ಅದರ ಜೊತೆಗೆ ತೋರಣವನ್ನು ಕಟ್ಟಲಾಗುತ್ತದೆ. ಈ ತರಗವನ್ನು ಬನ್ನಿ ಕೊಟ್ಟು ಬಳಿಕ ದೇವರ ಮನೆಯಲ್ಲಿ ಕಟ್ಟಲಾದ ಪೂಲಾರಿಗೆಯಿಂದ ಕಿತ್ತು ತೆಗೆದುಕೊಳ್ಳಲಾಗುತ್ತದೆ. ದೇವರಿಗೆ ಬನ್ನಿ ಅರ್ಪಿಸಿ ಇದನ್ನೂ ತಿನ್ನುವ ಸಂಪ್ರದಾಯವಿದೆ.

  • ಉತ್ತರ ಕರ್ನಾಟಕ ರಾಜ್ಯ ನಿರ್ಮಾಣ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಬೊಮ್ಮಾಯಿ

    ಉತ್ತರ ಕರ್ನಾಟಕ ರಾಜ್ಯ ನಿರ್ಮಾಣ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಬೊಮ್ಮಾಯಿ

    ನವದೆಹಲಿ: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಉಮೇಶ್ ಕತ್ತಿ ಹೀಗೆ ಹಲವು ಬಾರಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಅವರನ್ನೇ ಕೇಳಬೇಕು. ಸರ್ಕಾರದ ಮುಂದೆ ಆ ರೀತಿಯಾದ ಯಾವುದೇ ಪ್ರಸ್ತಾಪಗಳಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು – ನಾಳೆ ನಾಮಪತ್ರ ಸಲ್ಲಿಕೆ

    ದೆಹಲಿ ಭೇಟಿ ಕುರಿತು ಮಾತನಾಡಿದ ಅವರು, ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗೆ ಸೂಚಕರಾಗಿ ಸಹಿ ಮಾಡಲು ಆಗಮಿಸಿದ್ದೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದಿಲ್ಲ. ಕೇಂದ್ರ ಸಚಿವರನ್ನೂ ಭೇಟಿ ಮಾಡಲ್ಲ. ನಾಮಪತ್ರ ಸಲ್ಲಿಕೆ ವಿಚಾರವೇ ಹೊರತು ಇನ್ಯಾವುದೇ ರಾಜಕೀಯ ಬೆಳವಣಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಕಳಪೆ ರಸ್ತೆ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಹಾರಿಕೆ ಉತ್ತರ ನೀಡಿದರು. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಿಮ್ಮ ಬಳಿ ದಾಖಲೆಗಳಿದ್ದರೇ ಕೊಡಿ ಪರಿಶೀಲನೆ ನಡೆಸುತ್ತೇನೆ ಎಂದಿದ್ದಾರೆ.

    Live Tv

  • ಅಧಿವೇಶನದಲ್ಲಿ ಉ.ಕ, ಕಲ್ಯಾಣ ಕರ್ನಾಟಕದ ಬಗ್ಗೆ ಚರ್ಚೆ ಆಗಿಲ್ಲ: ಈಶ್ವರ ಖಂಡ್ರೆ

    ಅಧಿವೇಶನದಲ್ಲಿ ಉ.ಕ, ಕಲ್ಯಾಣ ಕರ್ನಾಟಕದ ಬಗ್ಗೆ ಚರ್ಚೆ ಆಗಿಲ್ಲ: ಈಶ್ವರ ಖಂಡ್ರೆ

    ಕಲಬುರಗಿ: ಜನ ವಿರೋಧಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಬಾರಿಗೆ ಬೆಳಗಾವಿಯಲ್ಲಿ ಅಧಿವೇಶನ ಕರೆದಿದ್ದರೂ, ಅಧಿವೇಶನದಲ್ಲಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಜನರಿಗೆ ಮಾರಕವಾದ ವಿಧೇಯಕ (ಮತಾಂತರ ನಿಷೇಧ ಮಸೂದೆ) ತಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ‌.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಉದ್ದೇಶದಿಂದಲೇ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಏರ್ಪಡಿಸಲಾಗಿತ್ತು. ಆದರೆ ಜನ ವಿರೋಧಿ ಬಿಜೆಪಿ ಸರ್ಕಾರವು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶ ನೀಡಲಿಲ್ಲ. ಅಧಿವೇಶನ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದರೂ ಯಾವುದೇ ನಿರ್ಧಾರ ತಿಳಿಸಿಲ್ಲ. ಸರ್ಕಾರದ ವೈಫಲ್ಯಗಳನ್ನು ಮರೆಮಾಚಿ ಜನರ ಗಮನ‌ವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆದಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸದಸ್ಯರ ವರ್ತನೆಯಿಂದ ರಾಜೀನಾಮೆಗೆ ಮುಂದಾಗಿದ್ದೆ: ಹೊರಟ್ಟಿ ಬೇಸರ

    ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿ, ಬಿಜೆಪಿಯಲ್ಲಿ ಅಸ್ಥಿರತೆ ಇದೆ. ಅಲ್ಲಿ ಬಹಳಷ್ಟು ಅತೃಪ್ತಿ ಇದೆ. ಮುಖ್ಯಮಂತ್ರಿ ಬದಲಾವಣೆ ಆಗೋದು ಬಿಡೋದು ಅವರ ಪಕ್ಷಕ್ಕೆ‌ ಬಿಟ್ಟ ವಿಚಾರ. ಬಿಜೆಪಿ ಸರ್ಕಾರ ಇದ್ದೂ ಇಲ್ಲದಂತಿದೆ‌. ಆಡಳಿತ ವೈಫಲ್ಯವಾದ ಮೇಲೆ ಇಂತಹ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು. ಮುಖ್ಯಮಂತ್ರಿ ಬದಲಾವಣೆ ವಿಚಾರ ಬಿಜೆಪಿಯವರ ತೀರ್ಮಾನ ಎಂದು ಮಾತನಾಡಿದ್ದಾರೆ.

    ಎಂಇಎಸ್‌ ಗಲಭೆ ಕುರಿತು ಪ್ರತಿಕ್ರಿಯಿಸಿ, ಗಡಿ ಸಮಸ್ಯೆ ಮುಗಿದು ಹೋಗಿರುವ ವಿಚಾರ. ಇದರಲ್ಲಿ ಎಂಇಎಸ್ ಕೂಡ ಪುಂಡಾಟಿಕೆ ಮಾಡಬಾರದು‌. ನಮ್ಮ ಭಾಷೆ, ನಾಡು-ನುಡಿ ರಕ್ಷಣೆ ಮಾಡುವುದಕ್ಕೆ‌ ನಾವು ಬದ್ಧರಾಗಿದ್ದೇವೆ. ಎಂ‌ಇ‌ಎಸ್ ಪುಂಡಾಟಿಕೆ ಇಲ್ಲಿ ನಡೆಯುವುದಿಲ್ಲ. ಪುಂಡಾಟಿಕೆ ಮಾಡಿದರೆ ಮುಂದೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಕಾನೂನು ಹೋರಾಟಕ್ಕೆ SDPI ನಿರ್ಧಾರ

  • ಉತ್ತರ ಕರ್ನಾಟಕ ದೇವಾಲಯಗಳ ಅಭಿವೃದ್ದಿಗೆ ವಿಶೇಷ ಕಾರ್ಯಸೂಚಿ ರಚಿಸಿ: ಶಶಿಕಲಾ ಜೊಲ್ಲೆ ಸೂಚನೆ

    ಉತ್ತರ ಕರ್ನಾಟಕ ದೇವಾಲಯಗಳ ಅಭಿವೃದ್ದಿಗೆ ವಿಶೇಷ ಕಾರ್ಯಸೂಚಿ ರಚಿಸಿ: ಶಶಿಕಲಾ ಜೊಲ್ಲೆ ಸೂಚನೆ

    – ಪ್ರಪ್ರಥಮ ಬಾರಿಗೆ ಬೆಳಗಾವಿ ಸುವರ್ಣಸೌಧದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆ
    – ಉತ್ತರ ಕರ್ನಾಟಕ ಭಾಗದ ದೇವಸ್ಥಾನಗಳ ಅಭಿವೃದ್ದಿ ಕುರಿತ ವ್ಯಾಪಕ ಚರ್ಚೆ

    ಬೆಳಗಾವಿ: ಪ್ರಪ್ರಥಮ ಬಾರಿಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಉತ್ತರ ಕರ್ನಾಟಕ ದೇವಸ್ಥಾನಗಳ ಅಭಿವೃದ್ದಿಗೆ ವಿಶೇಷ ಕಾರ್ಯಸೂಚಿ ರಚಿಸುವಂತೆ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು ಹಾಗೂ ರಾಜ್ಯ ಧಾರ್ಮಿಕ ಪರಿಷತ್ತಿನ ಅಧ್ಯಕ್ಷೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದರು.

    ಉತ್ತರ ಕರ್ನಾಟಕದ ದೇವಸ್ಥಾನಗಳ ಅಭಿವೃದ್ದಿಯ ಬಗ್ಗೆ ಚರ್ಚಿಸಲು ಪ್ರಪ್ರಥಮ ಬಾರಿಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 3ನೇ ರಾಜ್ಯ ಧಾರ್ಮಿಕ ಪರಿಷತ್ತಿನ 15ನೇ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಉತ್ತರ ಕರ್ನಾಟಕ ಹಾಗೂ ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಇದನ್ನೂ ಓದಿ: ನಮ್ಮ ಭೂಮಿ ಹೋದರೂ ಪರವಾಗಿಲ್ಲ, ಮೇಕೆದಾಟು ಯೋಜನೆ ಬೇಗ ಆರಂಭವಾಗಬೇಕು: ಡಿಕೆಶಿ

    ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ದಿ:
    ಬೆಳಗಾವಿ ಜಿಲ್ಲೆಯಲ್ಲಿರುವ ಪ್ರಮುಖ ಎ ದರ್ಜೆಯ ದೇವಸ್ಥಾನ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಪ್ರತಿವರ್ಷ ಆಗಮಿಸುತ್ತಾರೆ. ಭಕ್ತರಿಗೆ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ದಿಯ ಕುರಿತು ವಿಶೇಷ ಚರ್ಚೆ ನಡೆಸಲಾಯಿತು. ಈಗಾಗಲೇ 3.58 ಕೋಟಿ ವೆಚ್ಚದಲ್ಲಿ ಬಳಿಗಾರ ಕಟ್ಟೆ ರಸ್ತೆಯ ಅಭಿವೃದ್ದಿ ಕಾರ್ಯದ ಬಗ್ಗೆ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. ಇದಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸಚಿವರು ಸೂಚನೆ ನೀಡಿದರು. ದೇವಾಲಯದ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡುವಂತೆ ಸೂಚಿಸಿದ ಸಚಿವರು, ಘನತ್ಯಾಜ್ಯ ಮತ್ತು ದ್ರವತ್ಯಾಜ್ಯ ಸಂಸ್ಕರಣಾ ಯೋಜನೆಯ ಡಿಪಿಆರ್‌ ಅನ್ನು ಶೀಘ್ರವಾಗಿ ಸಿದ್ದಗೊಳಿಸಿ ಅನುಷ್ಠಾನಗೊಳಿಸಲು ಆದೇಶಿದರು.

    ಮಹದೇಶ್ವರ ಬೆಟ್ಟದ ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನದಿಂದ ಸಿ ದರ್ಜೆಯ ದೇವಸ್ಥಾನಗಳ ದತ್ತು:
    ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲೊಂದಾಗಿರುವ ಮಹದೇಶ್ವರ ಬೆಟ್ಟದ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಕಡಿಮೆ ಆದಾಯವಿರುವ ದೇವಸ್ಥಾನಗಳನ್ನು ದತ್ತು ತಗೆದುಕೊಳ್ಳುವಂತೆ ಸೂಚನೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದರಿಂದ ಕಡಿಮೆ ಆದಾಯವಿರುವ ದೇವಸ್ಥಾನಗಳ ಸೂಕ್ತ ನಿರ್ವಹಣೆ ಸಾಧ್ಯವಾಗಲಿದ್ದು, ಈ ಬಗ್ಗೆ ದತ್ತು ತಗೆದುಕೊಳ್ಳಬೇಕಾದ ಸಿ ದರ್ಜೆಯ ದೇವಸ್ಥಾನಗಳ ಪಟ್ಟಿಯನ್ನು ತಯಾರಿಸಿ ಪ್ರಾಧಿಕಾರಕ್ಕೆ ಕಳುಹಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಓಮಿಕ್ರಾನ್ ಆತಂಕ – ಬಂಡೀಪುರದಲ್ಲಿ ನ್ಯೂ ಇಯರ್ ಮೋಜು ಮಸ್ತಿಗೆ ಬ್ರೇಕ್!

    ಸಾಮಾನ್ಯ ಸಂಗ್ರಹಣ ನಿಧಿ ವಂತಿಗೆ ಸಂಗ್ರಹಕ್ಕೆ ಆದ್ಯತೆ:
    ರಾಜ್ಯದ ಎ ಮತ್ತು ಬಿ ದರ್ಜೆಯ ದೇವಸ್ಥಾನಗಳಿಂದ ಸಾಮಾನ್ಯ ಸಂಗ್ರಹಣ ನಿಧಿಗೆ ಪ್ರತಿವರ್ಷ ಶೇಕಡಾ 10 ರಷ್ಟು ವಂತಿಗೆಯನ್ನು ಸಂಗ್ರಹಿಸಲಾಗುತ್ತದೆ. ಇದನ್ನು ಕಡಿಮೆ ಆದಾಯವಿರುವ ದೇವಸ್ಥಾನಗಳ ಅಭಿವೃದ್ದಿಗೆ ಬಳಸಲಾಗುತ್ತದೆ. ಈ ನಿಧಿಗೆ ವಂತಿಗೆ ಸಂಗ್ರಹಕ್ಕೆ ಆದ್ಯತೆ ನೀಡಬೇಕಾಗಿದೆ. ಪ್ರತಿವರ್ಷ ದೇವಸ್ಥಾನದ ಲೆಕ್ಕಪತ್ರ ಪರಿಶೀಲನೆಯಾಗಿ ಜೂನ್‌ ತಿಂಗಳ ಒಳಗಾಗಿ ಆಯುಕ್ತರಿಗೆ ಆಡಿಟ್‌ ವರದಿ ನೀಡದಿದ್ದಲ್ಲಿ ಆಯಾ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಿ ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿದರು.

    ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನದಿಂದ ವಂತಿಗೆ ಸಂಗ್ರಹ:
    ಮಹದೇಶ್ವರ ಬೆಟ್ಟದ ಮಲೈ ಮಹದೇಶ್ವರ ಸ್ವಾಮಿ ದೇವಾಲಯದ ವಾರ್ಷಿಕ ಆದಾಯದಿಂದ ಸಾಮಾನ್ಯ ಸಂಗ್ರಹಣಾ ನಿಧಿಗೆ ವಂತಿಗೆಯನ್ನು ನೀಡಲಾಗುತ್ತಿಲ್ಲ. ಈ ದೇವಸ್ಥಾನದಿಂದಲೂ ವಂತಿಗೆಯನ್ನು ನೀಡುವಂತೆ ಪ್ರಾಧಿಕಾರಕ್ಕೆ ಸೂಚನೆ ನೀಡುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದರು. ಇದನ್ನೂ ಓದಿ: ರಕ್ಷಿಸಬೇಕಾದ ಆರಕ್ಷಕನೇ ಕಳ್ಳನಾದ – ಬೈಕ್ ಕಳ್ಳತನ ಮಾಡಿಸ್ತಿದ್ದ ಕಾನ್‍ಸ್ಟೇಬಲ್ ಅರೆಸ್ಟ್

    ರಾಮದುರ್ಗದ ಗೊಡಚಿ ವೀರಭದ್ರ ದೇವಸ್ಥಾನ, ಬೆಳಗಾವಿಯ ಪಂಥಬಾಳೇಕುಂದ್ರಿ ದತ್ತ ದೇವಸ್ಥಾನ, ಪರಮಾರ್ಥನಿಕೇತನ ಹರಿಮಂದಿರ, ರಾಯಭಾಗದ ಮಹಾಕಾಳಿ (ಮಾಯಕ್ಕ) ದೇವಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳ ಅಭಿವೃದ್ದಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

    ಸಭೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಮುಜರಾಯಿ ಆಯುಕ್ತ ರೋಹಿಣಿ ಸಿಂಧೂರಿ, ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.

  • ಉತ್ತರ ಕರ್ನಾಟಕದ ಏಳು ಅನರ್ಹರಿಗೆ ಬಿಜೆಪಿ ಟಿಕೆಟ್ ಬಹುತೇಕ ಫಿಕ್ಸ್

    ಉತ್ತರ ಕರ್ನಾಟಕದ ಏಳು ಅನರ್ಹರಿಗೆ ಬಿಜೆಪಿ ಟಿಕೆಟ್ ಬಹುತೇಕ ಫಿಕ್ಸ್

    ಹುಬ್ಬಳ್ಳಿ: ಉತ್ತರ ಕರ್ನಾಟಕದ ಏಳು ಜನ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ.

    ನಗರದಲ್ಲಿ ಇಂದು ಬಿಜೆಪಿ ನಾಯಕರ ಸಭೆ ಹಾಗೂ ಕೋರಂ ಕಮೀಟಿ ಸಭೆ ಜರುಗಿತು. ಉತ್ತರ ಕರ್ನಾಟಕದ 7 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ 4 ಪರಿಷತ್ ಕ್ಷೇತ್ರಗಳ ಚುನಾವಣೆ ಬಗ್ಗೆ ಬಿಜೆಪಿ ನಾಯಕರು ಸಾಲು ಸಾಲಾಗಿ ಸಭೆ ನಡೆಸಿ ನಂತರ ಕೋರ ಕಮೀಟಿ ಸಭೆಯಲ್ಲಿ ತೀರ್ಮಾನ ಕೈಗೊಂಡರು.

    ಖಾಸಗಿ ಹೋಟೇಲ್‍ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸಚಿವರು, ನಾಯಕರು ಸಮಾಲೋಚನಾ ಸಭೆ ನಡೆಸಿದರು. ಈ ಸಭೆಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿತ್ತು.

    ಈ ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಏಳು ಅನರ್ಹ ಶಾಸಕರ ಕ್ಷೇತ್ರಗಳ ಉಪಚುನಾವಣೆ, 4 ಪರಿಷತ್ ಕ್ಷೇತ್ರಗಳ ಚುನಾವಣೆ ಬಗ್ಗೆ ಚರ್ಚೆ ನಡೆದಿದೆ. ಅನರ್ಹ ಶಾಸಕರ ಕ್ಷೇತ್ರಗಳ ಮುಖಂಡರು, ಟಿಕೆಟ್ ಆಕಾಂಕ್ಷಿಗಳ ಮಾತುಗಳನ್ನು ಸಿಎಂ ಆಲಿಸಿದ್ದಾರೆ. ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಕಳೆದ ಬಾರಿ ಸ್ಪರ್ಧಿಸಿದ್ದವರ ಮನವೊಲಿಕೆ ಯತ್ನ ನಡೆದಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

    ಪಕ್ಷದ ಪ್ರಮುಖ ನಾಯಕರಿಗೆ ಬಂಡಾಯ ಶಮನದ ಹೊಣೆಯನ್ನು ಸಭೆಯಲ್ಲಿ ನೀಡಲಾಗಿದೆ. ಅನರ್ಹ ಶಾಸಕರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಲಾಗುವುದು. ಏಳಕ್ಕೆ ಏಳು ಕ್ಷೇತ್ರ ಗೆಲ್ಲಬೇಕು. ಎಲ್ಲರೂ ಒಗ್ಗಟ್ಟು ಪ್ರದರ್ಶಿಸುವಂತೆ ಸಿಎಂ ಯಡಿಯೂರಪ್ಪ ನೇತೃತ್ವ ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಈ ಸಭೆಯಲ್ಲಿ ಹೆಚ್ಚಾಗಿ ಚರ್ಚೆಯಾಗಿದ್ದು ಬಳ್ಳಾರಿಯ ಬಂಡಾಯ. ಅನರ್ಹ ಶಾಸಕ ಆನಂದ್ ಸಿಂಗ್ ಅವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆನಂದ್ ಸಿಂಗ್ ಧೈರ್ಯ ಮಾಡಿದ್ದಕ್ಕೆ ಉಳಿದ ಶಾಸಕರು ಮುಂದೆ ಬಂದು ರಾಜೀನಾಮೆ ನೀಡಿದರು ಎಂದು ಸಿಎಂ ಯಡಿಯೂರಪ್ಪ ಸ್ಮರಿಸಿದ್ದಾರೆ. ಈ ವಿಚಾರವಾಗಿ ಸಭೆಯಲ್ಲಿ ಬಳ್ಳಾರಿ ಬಂಡಾಯ ಹೊತ್ತಿ ಉರಿಯಿತು. ಇತ್ತ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಸೋಮಶೇಖರರೆಡ್ಡಿ, ಗವಿಯಪ್ಪ ಸಭೆಯಿಂದ ದೂರ ಉಳಿದಿದ್ದರು ಎಂದು ಮೂಲಗಳಿಂದ ಕೇಳಿ ಬಂದಿದೆ.

  • ಡಿಸಿಎಂ ಹುದ್ದೆ ಬಯಸದೇ ಬಂದ ಭಾಗ್ಯ: ಲಕ್ಷ್ಮಣ ಸವದಿ

    ಡಿಸಿಎಂ ಹುದ್ದೆ ಬಯಸದೇ ಬಂದ ಭಾಗ್ಯ: ಲಕ್ಷ್ಮಣ ಸವದಿ

    ವಿಜಯಪುರ: ಉಪಮುಖ್ಯಮಂತ್ರಿ ಹುದ್ದೆ ನನಗೆ ಬಯಸದೇ ಬಂದ ಭಾಗ್ಯ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನನ್ನನ್ನು ಗುರುತಿಸಿ ಪಕ್ಷ ಸಾರಿಗೆ ಇಲಾಖೆ ಜೊತೆಗೆ ಡಿಸಿಎಂ ಹುದ್ದೆ ನೀಡಿದೆ. 2023ರ ವಿಭಾನಸಭಾ ಚುನಾವಣೆಯಲ್ಲಿ ಬಿಜೆಪಿಯು 150 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ರಾಜ್ಯದ ಜನರ ಅಭಿವೃದ್ಧಿಗೆ ಬಿಜೆಪಿ ಸರ್ಕಾರವು ಶ್ರಮಿಸಲಿದ್ದೇವೆ. ಬಿಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಇನ್ನೂ ಎರಡು ಅಥವಾ ಮೂರು ಜನರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ತಿಳಿಸಿದರು.

    ಮುಂಬರುವ ಉಪಚುನಾವಣೆಯಲ್ಲಿ ಎಲ್ಲ ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ. ಮುಂದಿನ 20 ವರ್ಷ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಿ ಕಲ್ಯಾಣ ಕರ್ನಾಟಕ ಮಾಡುತ್ತೇವೆ. ಉತ್ತರ ಕರ್ನಾಟಕದ ಅಭಿವೃದ್ಧಿ ಉದ್ದೇಶದಿಂದ ನನಗೆ ಹಾಗೂ ಗೋವಿಂದ ಕಾರಜೋಳ ಅವರಿಗೆ ಡಿಸಿಎಂ ಹುದ್ದೆ ನೀಡಲಾಗಿದೆ ಎಂದು ಹೇಳಿದರು.

    ಉತ್ತರ ಕರ್ನಾಟಕದ ಪ್ರವಾಹ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಲಕ್ಷ್ಮಣ ಸವದಿ ಅವರು, ಪ್ರವಾಹದಿಂದ ಸುಮಾರು 30 ಸಾವಿರ ಕೋಟಿ ರೂ. ನಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಇದು ಪ್ರಾಥಮಿಕ ಅಂದಾಜು ಅಷ್ಟೇ. ಕೇಂದ್ರ ಸರ್ಕಾರದ ತಂಡಗಳು ಈಗಾಗಲೇ ಭೇಟಿ ನೀಡಿ ದೆಹಲಿಗೆ ತೆರಳಿವೆ. ಶೇ.90 ರಷ್ಟು ಪ್ರವಾಹ ಸಂತ್ರಸ್ತರಿಗೆ ಈಗಾಗಲೇ ಪ್ರಾಥಮಿಕ ಹಂತದಲ್ಲಿ ಪರಿಹಾರದ ಹಣ ನೀಡಲಾಗಿದೆ. ಬೆಳೆಹಾನಿ ಸಮೀಕ್ಷೆ ಈಗ ಆರಂಭವಾಗಿದೆ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯದ ಬಿಜೆಪಿ ನಾಯಕರು ಭೇಟಿಯಾಗಿ ಹೆಚ್ಚಿನ ಪರಿಹಾರ ಹಣಕ್ಕೆ ಮನವಿ ಸಲ್ಲಿಸುತ್ತೇವೆ. ಆದರೆ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗುವ ಯೋಚನೆ ಇಲ್ಲ ಎಂದರು.

  • ಪ್ರವಾಹ ಪೀಡಿತರಿಗೆ ಮರುಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎಂದ ರಾಘಣ್ಣ

    ಪ್ರವಾಹ ಪೀಡಿತರಿಗೆ ಮರುಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎಂದ ರಾಘಣ್ಣ

    ಬೆಂಗಳೂರು: ರಾಜ್ಯದಲ್ಲಿ ಉಂಟಾದ ಪ್ರವಾಹಕ್ಕೆ ಅದೆಷ್ಟೋ ಜನರ ಬದುಕು ದುಸ್ಥಿತಿಗೆ ಬಂದಿದೆ. ಹೀಗಾಗಿ ನಾನು ಈ ವರ್ಷ ಆಗಸ್ಟ್ 15ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲ್ಲ ಎಂದು ನಟ ರಾಘವೇಂದ್ರ ರಾಜ್‍ಕುಮಾರ್ ಹೇಳಿದ್ದಾರೆ.

    ನಟ ರಾಘವೇಂದ್ರ ರಾಜ್‍ಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಭಾರೀ ಸಿದ್ಧತೆ ನಡೆಸಿದ್ದರು. ಈ ಬೆನ್ನಲ್ಲೇ ರಾಘಣ್ಣ ಅವರು ನೆರೆ ಸಂತ್ರಸ್ತರಿಗೆ ನೆರವು ನೀಡುವಂತೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.

    ಎಲ್ಲರಿಗೂ ನನ್ನ ನಮಸ್ಕಾರ. ನಾನು ನಿಮ್ಮ ರಾಘವೇಂದ್ರ ರಾಜ್‍ಕುಮಾರ್. ಆಗಸ್ಟ್ 15, ಗುರುವಾರ ಸ್ವಾತಂತ್ರ್ಯ ದಿನಾಚರಣೆ. ಅಂದು ನನ್ನ ಹುಟ್ಟುಹಬ್ಬ. ಆದರೆ ಕಾರಣಾಂತರಗಳಿಂದ ನಾನು ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದು ರಾಘಣ್ಣ ತಿಳಿಸಿದ್ದಾರೆ.

    ಮಹಾ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಭಾರೀ ಹಾನಿಯಾಗಿದೆ. ಇಂತಹ ಸಮಯದಲ್ಲಿ ಕೇಕ್ ಕತ್ತರಿಸಿ, ಹೂವಿನ ಹಾರ ಹಾಕಿಕೊಂಡು, ಪಟಾಕಿ ಹೊಡೆದು ಸಂಭ್ರಮಿಸುವುದು ಸಂತ್ರಸ್ತರಿಗೆ ನೋವು ತರುತ್ತದೆ. ಅಷ್ಟೇ ಯಾಕೆ ನನಗೂ ಭಾರೀ ನೋವು ಉಂಟು ಮಾಡುತ್ತದೆ. ಇಂತಹ ಸಮಯದಲ್ಲಿ ನಾವು ಸಂತ್ರಸ್ತರ ಜೊತೆಗೆ ಇರಬೇಕಿದೆ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

    ನೀವು ಏನೇ ತಂದರೂ ಅದನ್ನು ಸಂತ್ರಸ್ತರಿಗೆ ತಲುಪಿಸುವ ಕೆಲಸವನ್ನು ಮಾಡುತ್ತೇವೆ. ನನ್ನ ತಂದೆ ಇದ್ದಿದ್ದರೆ ಇಂತಹ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಣೆ ಮಾಡುತ್ತಿರಲಿಲ್ಲ. ಸಂತ್ರಸ್ತರಲ್ಲಿ ನಮ್ಮ ಅಭಿಮಾನಿಗಳು ಕೂಡ ಇದ್ದಾರೆ. ಅವರೊಂದಿಗೆ ನಾವು ಇದ್ದೇವೆ ಎಂಬ ಪ್ರೀತಿಯನ್ನು ತೋರಿಸಬೇಕಿದೆ ಎಂದು ರಾಘಣ್ಣ ಮಾನವೀಯತೆ ಮೆರೆದಿದ್ದಾರೆ.

    ಎಲ್ಲರೂ ಸೇರಿ ಉತ್ತರ ಕರ್ನಾಟಕದ ಜನರಿಗಾಗಿ ದೇವರಲ್ಲಿ ಪಾರ್ಥನೆ ಮಾಡಿಕೊಳ್ಳೋಣ. ಗುರುವಾರ ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ಬೇರೆ ಊರಿಗೆ ಹೋಗುತ್ತೇನೆ. ನೀವು ಬೇಜಾರು ಮಾಡಿಕೊಳ್ಳಬೇಡಿ. ನಿಮಗೆ ಹೇಳಿ ಹೋಗ ಬೇಕಾಗಿರುವುದು ನನ್ನ ಕರ್ತವ್ಯ. ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾನು ಋಣಿಯಾಗಿ ಇರುತ್ತೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

    https://www.facebook.com/lightnshadowparamesh/videos/2350188035072772/

  • ಪ್ರವಾಹ ಪೀಡಿತ ಜಿಲ್ಲೆಗಳಿಂದ ಬಿಎಸ್‍ವೈ ವಾಪಸ್- ನಾಳೆ ದೆಹಲಿಗೆ ಪ್ರಯಾಣ

    ಪ್ರವಾಹ ಪೀಡಿತ ಜಿಲ್ಲೆಗಳಿಂದ ಬಿಎಸ್‍ವೈ ವಾಪಸ್- ನಾಳೆ ದೆಹಲಿಗೆ ಪ್ರಯಾಣ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರವಾಹ ಪೀಡಿತ ಜಿಲ್ಲೆಗಳಿಂದ ಬೆಂಗಳೂರಿಗೆ ವಾಪಸ್ ಆಗಿದ್ದು, ಶನಿವಾರ ದೆಹಲಿಗೆ ತೆರಳಿ ಸಂಪುಟ ರಚನೆಯ ಬಗ್ಗೆ ಹೈಕಮಾಂಡ್ ಜೊತೆಗೆ ಚರ್ಚೆ ಮಾಡಲಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಯಾವ ಯಾವ ಕ್ಷೇತ್ರಗಳಲ್ಲಿ ಅತಿವೃಷ್ಠಿಯಾಗಿದೆ ಅಂತ ಸರ್ವೇ ಮಾಡಲಾಗಿದೆ. ಶುಕ್ರವಾರ ಮಳೆ ಕಮ್ಮಿಯಾಗಿದ್ದು, ರಕ್ಷಣಾ ಕಾರ್ಯ ನಡೆದಿದೆ. ಜಮೀನು, ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು. ಇದನ್ನು ಓದಿ: ಮೊದಲು ಪ್ರವಾಹ ಪರಿಸ್ಥಿತಿ ನಿಭಾಯಿಸಿ, ಆಮೇಲೆ ಸಂಪುಟ ರಚನೆ ಮಾತು – ಬಿಎಸ್‍ವೈಗೆ ಶಾ ಸೂಚನೆ

    ಪರಿಹಾರ ಕೇಂದ್ರದಲ್ಲಿ ಜನರಿಗೆ ಮೂಲ ಸೌಕರ್ಯ ಒದಗಿಸಲಾಗಿದೆ. ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಶನಿವಾರ ಭೇಟಿ ನೀಡಲಿದ್ದಾರೆ. ಕೊಡಗು ಜಿಲ್ಲೆಗೆ ಭಾನುವಾರ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಾರೆ. ಆದರೆ ನಾನು ಅವರೊಂದಿಗೆ ಕೊಡಗು ಜಿಲ್ಲೆಗೆ ಹೋಗುವುದಿಲ್ಲ ಎಂದು ಸಿಎಂ ಹೇಳಿದರು.

    ಗದಗ್‍ನಲ್ಲಿ ನಿರಾಶ್ರಿತರ ಮೇಲೆ ಲಾಠಿ ಚಾರ್ಜ್ ವಿಚಾರ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಆ ವಿಚಾರ ಗಮನಕ್ಕೆ ಬಂದಿದೆ. ಹಾಗೆ ಮಾಡದಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಅಗತ್ಯ ಬಿದ್ದರೆ ಅವರ ಮೇಲೆ ಕ್ರಮಕೈಗೊಳ್ಳುತ್ತೇನೆ ಎಂದು ತಿಳಿಸಿದರು.

    ಸಿಎಂ ಯಡಿಯೂರಪ್ಪ ಅವರು ಶನಿವಾರ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಬಳಿಕ ಉತ್ತರ ಕನ್ನಡ ಜಿಲ್ಲೆಗೂ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಆಗಲಿಸಲಿದ್ದಾರೆ. ಶನಿವಾರ ರಾತ್ರಿಯೇ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಭಾನುವಾರ ಹಾಗೂ ಸೋಮವಾರ ಹೈಕಮಾಂಡ್ ಭೇಟಿಯಾಗಿ ಸಚಿವರ ಫೈನಲ್ ಲಿಸ್ಟ್ ಹಿಡಿದು ರಾಜ್ಯಕ್ಕೆ ಬರಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • ಉತ್ತರ ಕರ್ನಾಟಕ ಸಂತ್ರಸ್ತರ ನೆರವಿಗೆ ನಿಂತ ಯಶೋಮಾರ್ಗ

    ಉತ್ತರ ಕರ್ನಾಟಕ ಸಂತ್ರಸ್ತರ ನೆರವಿಗೆ ನಿಂತ ಯಶೋಮಾರ್ಗ

    ಬೆಂಗಳೂರು: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅತಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿ ಮೂಲಭೂತ ವಸ್ತುಗಳ ಅಗತ್ಯತೆ ಹೆಚ್ಚಿದ್ದು, ರಾಕಿಂಗ್ ಸ್ಟಾರ್ ಯಶ್ ಅವರು “ಯಶೋಮಾರ್ಗ” ತಂಡದ ಮೂಲಕ ದಿನಬಳಕೆ ವಸ್ತುಗಳನ್ನು ಕಳುಹಿಸಿದ್ದಾರೆ.

    ಭೀಕರ ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಯಶೋಮಾರ್ಗದ ವತಿಯಿಂದ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಕಳುಹಿಸಲಾಗಿದೆ. ಲಾರಿಯಲ್ಲಿ ಆಹಾರ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಬ್ಯಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಈಗಾಗಲೇ ತಂಡ ಕಳುಹಿಸಿದೆ. ಈ ಮೂಲಕ ಯಶ್ ಪ್ರವಾಹ ಪೀಡಿತ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ.

    ಇತ್ತ ರಿಯಲ್ ಸ್ಟಾರ್ ಉಪೇಂದ್ರ ಅವರು ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ಸಹಾಯಧನ ನೀಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರಿನಲ್ಲಿ, “ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂ. ಗಳನ್ನು ದೇಣಿಗೆಯಾಗಿ ನೀಡುತ್ತಿದ್ದೇನೆ. ತಾವುಗಳೂ ಪ್ರವಾಹಕ್ಕೆ ಸಿಲುಕಿರುವ ನಮ್ಮವರಿಗೆ ನಿಮ್ಮ ಇಚ್ಛಾನುಸಾರ ನೆರವಾಗಬೇಕೆಂದು ಕೇಳಿಕೊಳ್ಳುತ್ತೇನೆ” ಎಂದು ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.

    ನಿದೇರ್ಶಕ ಪವನ್ ಒಡೆಯರ್ ಹಾಗೂ ರೇಮೊ ಚಿತ್ರ ತಂಡ ಕೂಡ ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿದ್ದಾರೆ. ಜನರಿಗೆ ಬೇಕಾಗುವ ಆಹಾರ, ಬಟ್ಟೆಗಳು ಹಾಗೂ ಇತರೆ ಅಗತ್ಯ ವಸ್ತುಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ರವಾನಿಸಿದ್ದಾರೆ.

    ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಕೂಡ ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋ ಹಾಕಿದ್ದಾರೆ. ಅಲ್ಲದೆ, “ಉತ್ತರ ಕರ್ನಾಟಕದ ಪ್ರವಾಹದ ದೃಶ್ಯಾವಳಿಗಳು ಕಂಡು ಬೇಜಾರು ಹಾಗೂ ಭಯವಾಯಿತು. ನಿಮ್ಮ ಜೊತೆ ನಾವಿದ್ದೀವಿ ನಿಮ್ಮ ಸಹಾಯಕ್ಕೆ ನಾವೆಲ್ಲರೂ ಕೈ ಜೋಡಿಸ್ತೀವಿ. ನಮ್ಮ ಚಿತ್ರರಂಗದ ಎಲ್ಲ ಕಲಾವಿದರ ಹಾಗೂ ಅಭಿಮಾನಿಗಳು ಜೊತೆಗೂಡಿ ನಿಮಗೆ ಬೇಕಾದ ಅಗತ್ಯತೆಗಳನ್ನು ಕಳುಹಿಸುವ ಪ್ರಯತ್ನ ಮಾಡುತ್ತಿದ್ದೇವೆ. ದಯವಿಟ್ಟು ಕುಗ್ಗಬೇಡಿ ಧೈರ್ಯದಿಂದಿರಿ” ಎಂದು ಟ್ವೀಟ್ ಮಾಡಿದ್ದಾರೆ.

    ಬಾಲಿವುಡ್ ನಟ ಕಬೀರ್ ಸಿಂಗ್ ಅವರು ತಮ್ಮ ಟ್ವಿಟ್ಟರಿನಲ್ಲಿ, ”ಪ್ರವಾಹದಿಂದ ಸಿಲುಕಿರುವ ಉತ್ತರ ಕರ್ನಾಟಕ ಜನರಿಗೆ ದಯವಿಟ್ಟು ಸಹಾಯ ಮಾಡಿ. ಯಾವುದೇ ರೀತಿಯಲ್ಲಿ ಬೇಕಾದರೂ ಸಹಾಯ ಮಾಡಿ” ಎಂದು ಟ್ವೀಟ್ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಕಬೀರ್ ಅವರ ಟ್ವೀಟ್‍ಗೆ ಅಭಿಮಾನಿಗಳು ನಾವು ಅವರ ಜೊತೆ ಇದ್ದೇವೆ ಎಂದು ರೀ-ಟ್ವೀಟ್ ಮಾಡುವ ಮೂಲಕ ಸ್ಪಂದಿಸಿದ್ದಾರೆ.

    ಸ್ಯಾಂಡಲ್‍ವುಡ್ ಕಲಾವಿದರಾದ ದರ್ಶನ್, ಸುದೀಪ್, ಜಗ್ಗೇಶ್, ಶ್ರೀಮುರಳಿ, ಚಂದನ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರು ಉತ್ತರ ಕರ್ನಾಟಕಕ್ಕೆ ಸಹಾಯ ಮಾಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ಉತ್ತರ ಕರ್ನಾಟಕ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ದಾವಣಗೆರೆ ಜನತೆ

    ಉತ್ತರ ಕರ್ನಾಟಕ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ದಾವಣಗೆರೆ ಜನತೆ

    ದಾವಣಗೆರೆ: ಉತ್ತರ ಕರ್ನಾಟದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಸಿಲುಕಿದ ಸಂತ್ರಸ್ತರಿಗೆ ದಾವಣಗೆರೆಯ ಜನತೆ ಸಹಾಯ ಹಸ್ತ ಚಾಚಿದ್ದಾರೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮಸ್ಥರು 5 ಸಾವಿರ ರೊಟ್ಟಿಗಳ ಜೊತೆ ಇತರೆ ಆಹಾರವನ್ನು ತಯಾರಿಸುತ್ತಿದ್ದು, ಅದನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ರವಾನಿಸಲಿದ್ದಾರೆ.

    ವರುಣನ ರೌದ್ರಾವತಾರಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ನಲುಗಿ ಹೋಗಿದೆ. ಪ್ರವಾಹ ಸೃಷ್ಟಿಸಿರುವ ಅವಾಂತರಕ್ಕೆ ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮಸ್ಥರು ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದಾರೆ. ಗ್ರಾಮದ ಮಹಿಳೆಯರೆಲ್ಲಾ ಸೇರಿ ಸಂತ್ರಸ್ತರಿಗೆ ಎರಡು ಕ್ವಿಂಟಲ್ ಜೋಳದಿಂದ 5 ಸಾವಿರಕ್ಕೂ ಹೆಚ್ಚು ರೊಟ್ಟಿಗಳನ್ನು ತಯಾರಿಸುತ್ತಿದ್ದಾರೆ. ಜೊತೆಗೆ ಶೇಂಗಾ ಪುಡಿ, ಕುರಸಾನೇ ಪುಡಿ ಸೇರಿದಂತೆ ರೊಟ್ಟಿ ಜೊತೆ ಇತರೆ ಆಹಾರವನ್ನು ಉತ್ತರ ಕರ್ನಾಟಕಕ್ಕೆ ಕಳುಹಿಸಿಕೊಡಲು ನಿರ್ಧರಿಸಿದ್ದಾರೆ.

    ಗ್ರಾಮದ ಮಹಿಳೆಯರು ರಾತ್ರಿ ಹಗಲು ರೊಟ್ಟಿ ಮತ್ತಿತರ ಪದಾರ್ಥಗಳನ್ನು ತಯಾರಿಸುತ್ತಿದ್ದು, ಗ್ರಾಮಸ್ಥರೆಲ್ಲಾ ಈ ಒಳ್ಳೆಯ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ಗ್ರಾಮದ ಮುಂಭಾಗ ಪಾತ್ರೆಗಳನ್ನು ಇಟ್ಟು ತಮಗೆ ಕೊಡಬೇಕು ಎನಿಸಿದ ಧಾನ್ಯ, ಮತ್ತಿತರ ಸಾಮಾಗ್ರಿಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಹೀಗೆ ಸಂಗ್ರಹಿಸಿದ ಸಾಮಾಗ್ರಿಗಳಿಂದ ಆಹಾರ ಪದಾರ್ಥಗಳನ್ನು ತಯಾರು ಮಾಡಿ ಉತ್ತರ ಕರ್ನಾಟಕಕ್ಕೆ ಕಳುಹಿಸಲು ತಯಾರಿ ಮಾಡುತ್ತಿದ್ದಾರೆ.

    ಶನಿವಾರ ಗ್ರಾಮದ ಕೆಲ ಯುವಕರು ಹಾಗೂ ಮುಖಂಡರು ಬೆಳಗಾವಿಗೆ ಹೋಗಿ ಸಂತ್ರಸ್ತರಿಗೆ ಈ ಆಹಾರವನ್ನು ವಿತರಣೆ ಮಾಡುವ ಯೋಜನೆಯನ್ನು ರೂಪಿಸಿದ್ದಾರೆ.