Tag: uttar pradesh

  • ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ

    ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ

    ಲಕ್ನೋ: ತ್ರಿವಳಿ ತಲಾಖ್ ನಿಷೇಧಿಸಿ ಎಂದು ಉತ್ತರ ಪ್ರದೇಶದ ಮೂರು ತಿಂಗಳ ಗರ್ಭಿಣಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

    ತ್ರಿವಳಿ ತಲಾಖ್ ನಿಷೇಧಿಸಲು ನೀವು ಮುಂದಾಗಿದ್ದಕ್ಕೆ ನಾನು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮತವನ್ನು ಹಾಕಿದ್ದೇನೆ. ಹೀಗಾಗಿ ತ್ರಿವಳಿ ತಲಾಖ್ ನಿಷೇಧಿಸಿ ಎಂದು ತ್ರಿವಳಿ ತಲಾಖ್ ಸಂತ್ರಸ್ತೆ ಎರಡು ಹೆಣ್ಣುಮಕ್ಕಳ ತಾಯಿ ಆಗಿರುವ ಶಗುಫ್ತಾ ಮೋದಿಗೆ ಪತ್ರ ಬರೆದಿದ್ದಾರೆ.

    ಈ ಪತ್ರದ ಪ್ರತಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕಳುಹಿಸಿದ್ದಾರೆ.

    ಶಹನ್ ಪುರ ನಿವಾಸಿ ಶಗುಫ್ತಾ ಮತ್ತು ಶಂಶದ್ ನಡುವೆ 5 ವರ್ಷದ ಹಿಂದೆ ಮದುವೆಯಾಗಿದ್ದು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರನೇ ಮಗು ಹೆಣ್ಣಾಗಲಿದೆ ಎಂದು ತಿಳಿದು ಪತಿ ಗರ್ಭಪಾತಕ್ಕೆ ಒತ್ತಾಯಿಸಿದ್ದಾನೆ. ಆದರೆ ಶಗುಫ್ತಾ ಪತಿಯ ಮಾತನ್ನು ವಿರೋಧಿಸಿದ್ದಾರೆ. ಇದಕ್ಕೆ ಸಿಟ್ಟಾದ ಶಂಶದ್ ತನ್ನ ಸಹೋದರರ ಜೊತೆಗೂಡಿ ಮನಬಂದಂತೆ ಥಳಿಸಿದ್ದಾನೆ. ಮಗುವನ್ನು ಭ್ರೂಣದಲ್ಲಿ ಹತ್ಯೆ ಮಾಡಲು ಹೊಟ್ಟೆಗೆ ಹೊಡೆದಿದ್ದಾನೆ. ಅಷ್ಟೇ ಅಲ್ಲದೇ ಮೂರು ಬಾರಿ ತಲಾಖ್ ಹೇಳಿ ಈಗ ಮನೆಯಿಂದ ಹೊರಗೆ ಹಾಕಿದ್ದಾನೆ.

    ಈ ಸಂಬಂಧ ಶಂಶದ್ ಮತ್ತು ಸಹೋದರನ ವಿರುದ್ಧ ಐಪಿಸಿ ಸೆಕ್ಷನ್ 315ರ ಅಡಿ(ಭ್ರೂಣ ಹತ್ಯೆ) ಮಾರ್ಚ್ 24ರಂದು ಪ್ರಕರಣ ದಾಖಲಾಗಿದೆ.

    ಜೀವಂತವಾಗಿ ಜನಿಸುವುದನ್ನು ತಡೆಯುವ ಉದ್ದೇಶ ಅಥವಾ ಹುಟ್ಟಿನ ನಂತರ ಮಗುವಿನ ಸಾವಿಗೆ ಕಾರಣವಾಗುವ ಈ ಆರೋಪ ಸಾಬೀತಾದರೆ ಐಪಿಸಿಯ ಸೆಕ್ಷನ್ 315ರ ಅನ್ವಯ 10 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.

  • ಬೆಂಗಳೂರು ಐಟಿ ಉದ್ಯಮಿಯ ಮೊಬೈಲ್ ನಂಬರ್‍ನಲ್ಲಿ ಆಯೋಧ್ಯೆ ಫೇಕ್ ವೆಬ್‍ಸೈಟ್ ಓಪನ್!

    ಬೆಂಗಳೂರು ಐಟಿ ಉದ್ಯಮಿಯ ಮೊಬೈಲ್ ನಂಬರ್‍ನಲ್ಲಿ ಆಯೋಧ್ಯೆ ಫೇಕ್ ವೆಬ್‍ಸೈಟ್ ಓಪನ್!

    ಲಕ್ನೋ: “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕಾ? ಮಸೀದಿ ನಿರ್ಮಾಣವಾಗಬೇಕಾ? ನಿಮ್ಮ ಅಭಿಪ್ರಾಯ ಏನು? www.ayodhya-issue.gov-up.in ವೆಬ್‍ಸೈಟ್‍ನಲ್ಲಿ ನೀವು ಅಭಿಪ್ರಾಯವನ್ನು ತಿಳಿಸಿ ಉತ್ತರಪ್ರದೇಶ ಸರ್ಕಾರಕ್ಕೆ ಸಹಕಾರ ನೀಡಿ” ಎನ್ನುವ ಸಂದೇಶ ನಿಮ್ಮ ವಾಟ್ಸಪ್‍ಗೆ ಬಂದಿದೆಯೇ?

    ಈ ರೀತಿಯ ಮೆಸೇಜ್ ನಿಮ್ಮ ವಾಟ್ಸಪ್‍ಗೆ ಬಂದಿದ್ದರೆ ದಯವಿಟ್ಟು ವೆಬ್‍ಸೈಟ್‍ಗೆ ಹೋಗಿ ನೀವು ಅಭಿಪ್ರಾಯವನ್ನು ದಾಖಲಿಸಬೇಡಿ. ಆಯೋಧ್ಯೆ ರಾಮಮಂದಿರ, ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಜನರಿಂದ ಅಭಿಪ್ರಾಯವನ್ನು ಸ್ವೀಕರಿಸಲು ಉತ್ತರಪ್ರದೇಶ ಸರ್ಕಾರ ಯಾವುದೇ ವೆಬ್‍ಸೈಟ್ ಆರಂಭಿಸಿಲ್ಲ. ಯಾರೋ ವ್ಯಕ್ತಿಗಳು ಈ ವೆಬ್‍ಸೈಟನ್ನು ಆರಂಭಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಆರಂಭಿಸಿದವರು ಯಾರು?
    ಈ ವೆಬ್‍ಸೈಟ್ ಯುಆರ್‍ಎಲ್ ಆಧಾರಿಸಿ ಪತ್ತೆ ಮಾಡಿದಾಗ ಈ ವೆಬ್‍ಸೈಟ್ ದೆಹಲಿಯ ತರುಣ್ ಚೌಧರಿಯ ಹೆಸರಿನಲ್ಲಿ ನೋಂದಣಿ ಆಗಿರುವುದು ಬೆಳಕಿಗೆ ಬಂದಿದೆ. ಆದರೆ ಈ ವೆಬ್‍ಸೈಟನ್ನು ಬೆಂಗಳೂರು ಮೂಲದ ಐಟಿ ಉದ್ಯಮಿಯವರ ಮೊಬೈಲ್ ನಂಬರ್ ನೀಡಿ ನೋಂದಣಿ ಮಾಡಲಾಗಿದೆ.

    ಉದ್ಯಮಿ ಅಕ್ತರ್ ಅಲಿಯವರ ಮೊಬೈಲ್ ನಂಬರನ್ನು ನೀಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರೋ ದುಷ್ಕರ್ಮಿಗಳು ನನ್ನ ನಂಬರನ್ನು ಬಳಸಿ ಈ ವೆಬ್‍ಸೈಟನ್ನು ತೆರೆದಿದ್ದಾರೆ. ಈ ವಿಚಾರ ನನಗೆ ಈಗಷ್ಟೇ ತಿಳಿದಿದೆ. ಪೊಲೀಸರಿಗೆ ಈ ವಿಚಾರವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.

    ವೆಬ್‍ಸೈಟ್ ಬೆಳಕಿಗೆ ಬಂದಿದ್ದು ಯಾವಾಗ?
    ಭೂ ವಿವಾದವನ್ನು ಎರಡು ಪಾರ್ಟಿಗಳು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದ ಬಳಿಕ ಈ ವೆಬ್‍ಸೈಟ್ ಕುರಿತಾಗಿರುವ ಮೆಸೇಜ್ ವಾಟ್ಸಪ್ ನಲ್ಲಿ ಹರಿದಾಡಲು ಆರಂಭವಾಗಿತ್ತು.

    ವೆಬ್‍ಸೈಟಿನಲ್ಲಿದ್ದ ನಾಲ್ಕು ಪ್ರಶ್ನೆಗಳು
    ಅಯೋಧ್ಯೆಯಲ್ಲಿ ರಾಮಮಂದಿರವನ್ನೇ ನಿರ್ಮಿಸಿ, ಮಸೀದಿಯನ್ನು ಬೇರೆಡೆ ನಿರ್ಮಿಸಬೇಕು, ಎರಡನೇಯದು ರಾಮಮಂದಿರ ಮತ್ತು ಮಸೀದಿಯನ್ನು ಹತ್ತಿರದಲ್ಲೇ ನಿರ್ಮಿಸಬೇಕು, ಮೂರನೆಯದಾಗಿ ಮೂಲಸ್ಥಾನದಲ್ಲಿ ಬಾಬ್ರಿ ಮಸೀದಿ ನಿರ್ಮಿಸಿ, ಪಕ್ಕದಲ್ಲಿ ರಾಮಮಂದಿರ ನಿರ್ಮಿಸಬೇಕು. ನಾಲ್ಕನೆಯದಾಗಿ ಜನರ ಭಾವನೆಗಳನ್ನು ಆಧರಿಸಿ ಕಾನೂನು ಪ್ರಕಾರವಾಗಿ ಸುಪ್ರೀಂಕೋರ್ಟ್ ವಿವಾದ ಇತ್ಯರ್ಥಗೊಳಿಸಬೇಕು ಎನ್ನುವ ಪ್ರಶ್ನೆಯನ್ನು ಕೇಳಿ ಪೋಲ್ ಆಯ್ಕೆಯನ್ನು ನೀಡಲಾಗಿತ್ತು.

    ಜನ ನಂಬಿದ್ದು ಯಾಕೆ?
    ಈ ವೆಬ್‍ಸೈಟ್‍ನಲ್ಲಿರುವ ಮಾಹಿತಿಯ ಜೊತೆಗೆ ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೋವನ್ನು ಅಪ್ಲೋಡ್ ಮಾಡಲಾಗಿತ್ತು. ಹೀಗಾಗಿ ಉತ್ತರ ಪ್ರದೇಶ ಸರ್ಕಾರವೇ ಈ ವೆಬ್‍ಸೈಟನ್ನು ಆರಂಭಿಸಿದೆ ಎಂದು ಜನ ನಂಬಿದ್ದರು.

    ಇದು ಸರ್ಕಾರಿ ವೆಬ್‍ಸೈಟ್ ಎಂದು ತಿಳಿಯುವುದು ಹೇಗೆ?
    ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಬಹುತೇಕ ವೆಬ್‍ಸೈಟ್‍ಗಳನ್ನು ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್(ಎನ್‍ಐಸಿ) ಸಿದ್ಧಪಡಿಸುತ್ತದೆ. ಎನ್‍ಐಸಿ ಸಿದ್ಧಪಡಿಸಿ ವೆಬ್‍ಸೈಟ್‍ಗಳ ಯೂನಿಫಾರ್ಮ್ ರಿಸೋರ್ಸ್ ಲೋಕೆಟರ್(ಯುಆರ್‍ಎಲ್)ಗಳು www.pib.nic.in, www.kar.nic.in ಈ ರೀತಿ ಇರುತ್ತದೆ. ಆದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಎಲ್ಲ ವೆಬ್‍ಸೈಟ್‍ಗಳನ್ನು ಎನ್‍ಐಸಿಯೇ ಸಿದ್ಧಪಡಿಸುವುದಿಲ್ಲ. ಹೀಗಾಗಿ ಅವುಗಳ ಒಳಗಡೆ ಇರುವ ಮಾಹಿತಿ, ವೆಬ್‍ಸೈಟಿಗೆ ಲಿಂಕ್ ಆಗಿರುವ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ನೋಡಿದ ಬಳಿಕವಷ್ಟೇ ಇದು ಸರ್ಕಾರಿ ವೆಬ್‍ಸೈಟ್ ಎಂದು ಖಚಿತಪಡಿಸಿಕೊಳ್ಳಬಹುದು.

  • ಮಠಾಧೀಶರೊಬ್ಬರು 30 ಕೋಟಿ ಜನಸಂಖ್ಯೆ ರಾಜ್ಯವನ್ನ ಆಳುತ್ತಿದ್ದಾರೆ, ಎಲ್ಲಿಗೆ ಬಂತು ದೇಶ: ಎಚ್‍ಡಿಡಿ ಪ್ರಶ್ನೆ

    ಮಠಾಧೀಶರೊಬ್ಬರು 30 ಕೋಟಿ ಜನಸಂಖ್ಯೆ ರಾಜ್ಯವನ್ನ ಆಳುತ್ತಿದ್ದಾರೆ, ಎಲ್ಲಿಗೆ ಬಂತು ದೇಶ: ಎಚ್‍ಡಿಡಿ ಪ್ರಶ್ನೆ

    ಬೆಂಗಳೂರು: 2018ರ ವಿಧಾನಸಭೆ ಚುನಾವಣೆಗೆ ರಣಕಹಳೆ ಊದಿರುವ ಜೆಡಿಎಸ್ ಇಂದು ಸ್ವಾಭಿಮಾನಿ ಸಮಾನತೆ ಸಮಾವೇಶ ನಡೆಸಿತು. ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಎಚ್‍ಡಿ ರೇವಣ್ಣ ಸೇರಿದಂತೆ ಜೆಡಿಎಸ್ ಪಕ್ಷ ಮುಖಂಡರು ಭಾಗವಹಿಸಿದ್ದರು.

    ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಜೆಡಿಎಸ್ ಕಚೇರಿಗೆ ಜೆಪಿ ಭವನ ಅಂತ ನಾಮಕರಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರುವ ರಾಜಕೀಯ ನಿರ್ಣಯ ಅಂಗೀಕಾರ ಮಾಡಲಾಯ್ತು.

    ಈ ವೇಳೆ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ, ಒಂದೇ ವರ್ಷದಲ್ಲಿ ಜೆಪಿ ಭವನ ನಿರ್ಮಾಣ ಮಾಡಿದ್ದೇವೆ, ಮಹಾತ್ಮಾ ಗಾಂಧಿ ಬಿಟ್ಟರೆ, ನಾನು ಜಯಪ್ರಕಾಶ್ ನಾರಾಯಣ ಅವರನ್ನು ಒಪ್ಪಿದ್ದೇನೆ. ಹೀಗಾಗಿ ಅವ್ರ ಹೆಸ್ರನ್ನ ಕಚೇರಿಗೆ ಇಟ್ಟಿದ್ದೇನೆ ಎಂದರು.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಹೆಸರನ್ನು ಹೇಳದೇ ಪರೋಕ್ಷ ವಾಗ್ದಾಳಿ ನಡೆಸಿದ ದೇವೇಗೌಡರು, ಮಠಾಧೀಶರೊಬ್ಬರು 30 ಕೋಟಿ ಜನ ಸಂಖ್ಯೆ ರಾಜ್ಯವನ್ನ ಆಳುತ್ತಿದ್ದಾರೆ. ಮುಂದೆ ಏನಾಗುತ್ತೋ ಈ ದೇಶ? ನಾನು 10 ತಿಂಗಳು ದೇಶದ ಅಧಿಕಾರ ನಡೆಸಿದ್ದೇನೆ. ಎಲ್ಲರಿಗೂ ಸಮಾನ ಅವಕಾಶ ನೀಡಿದ್ದೇನೆ ಎಂದರು.

    ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಬೇಕೇ? ಬೇಡವೋ ಎಂಬುದನ್ನು ರಾಜ್ಯದ 6 ಕೋಟಿ ಜನ ತೀರ್ಮಾನ ಮಾಡಬೇಕು. ದೇಶದಲ್ಲಿ ಜನತಾ ಪರಿವಾರ ಒಂದೂಗೂಡಿಸುವ ಮೊದಲು ರಾಜ್ಯದಲ್ಲಿ ಒಂದಾಗಬೇಕು. ಆ ಕೆಲಸವನ್ನು ನಾನೇ ಮಾಡುತ್ತೇನೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಶಿರಾದ ಕಲಾವಿದರೊಬ್ಬರು ಕುಮಾರಸ್ವಾಮಿ ಅವಧಿಯಲ್ಲಿ ಆದ ಕೆಲಸ ಕುರಿತು ಗೀತೆ ರಚಿಸಿ ಪ್ರಸಾರ ಮಾಡಲಾಯಿತು. ಈ ಹಾಡಿಗೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ರು.

    ಇದನ್ನೂ ಓದಿ: ಬಿಜೆಪಿ ಎಲೆಕ್ಷನ್‍ಗೆ ಜನಾರ್ದನ ರೆಡ್ಡಿಯಿಂದ 500 ಕೋಟಿ ಹಣ:ಎಚ್‍ಡಿಕೆ ಬಾಂಬ್

     

  • ಪ್ರಶಾಂತ್ ಕಿಶೋರ್ ಹುಡುಕಿಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ!

    ಪ್ರಶಾಂತ್ ಕಿಶೋರ್ ಹುಡುಕಿಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ!

    – ಕಟೌಟ್ ಹಾಕಿಸಿದ ಕೈ ನಾಯಕ ಅಮಾನತು

    ಲಕ್ನೋ: ರಾಜಕೀಯ ತಂತ್ರಗಾರ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲಲು ಯೋಜನೆ ರೂಪಿಸಿದ್ದ ಪ್ರಶಾಂತ್ ಕಿಶೋರ್ ಅವರನ್ನು ಹುಡುಕಿಕೊಟ್ಟರೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಪೋಸ್ಟರ್ ಪ್ರಕಟಿಸಿದ್ದಕ್ಕೆ ಉತ್ತರ ಪ್ರದೇಶ ಕಾಂಗ್ರೆಸ್ ನಾಯಕರೊಬ್ಬರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

    ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ಕಾಣಲು ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆಯೇ ಕಾರಣ. ಫಲಿತಾಂಶ ಬಳಿಕ ಅವರು ನಾಪತ್ತೆಯಾಗಿದ್ದು ಅವರನ್ನು ಹುಡುಕಿಕೊಟ್ಟವರಿಗೆ ಐದು ಲಕ್ಷ ರೂ. ಬಹುಮಾನವನ್ನು ನೀಡಲಾಗುವುದು ಎಂದು ಬರೆದಿರುವ ಕಟೌಟನ್ನು ರಾಜೇಶ್ ಸಿಂಗ್ ಎಂಬವರು ಲಕ್ನೋದಲ್ಲಿರುವ ಕಚೇರಿಯ ಮುಂದುಗಡೆ ಹಾಕಿದ್ದರು.

    ಈ ವಿಚಾರ ಪಕ್ಷದ ನಾಯಕರಿಗೆ ತಿಳಿದ ಕೂಡಲೇ ಶನಿವಾರ ಕಟೌಟನ್ನು ತೆಗೆಯಲಾಗಿತ್ತು. ಈಗ ಈ ಕಟೌಟ್ ಹಾಕಿ ಪ್ರಶಾಂತ್ ಕಿಶೋರ್‍ಗೆ ಅವಮಾನ ಮಾಡಿದ್ದಕ್ಕೆ ಪಕ್ಷದಿಂದ ರಾಜೇಶ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ.

    “ನಾನು ಏನು ಮಾಡಿದ್ದೇನೋ ಅದಕ್ಕೆ ನಾನು ಬದ್ಧನಾಗಿದ್ದೇನೆ. ನಮ್ಮ ಕಾರ್ಯಕರ್ತರು ನಿಯತ್ತಿನಿಂಂದ ಕೆಲಸ ಮಾಡಿ ಪಕ್ಷವನ್ನು ಕಟ್ಟಿದ್ದರು. ಆದರೆ ನಮ್ಮ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ನಿರ್ಲಕ್ಷಿಸಲಾಯಿತು. ಪ್ರಶಾಂತ್ ಕಿಶೋರ್ ನಂತಹ ಕನ್ಸಲ್ಟೆಂಟ್ ವ್ಯಕ್ತಿಯನ್ನು ಉತ್ತರಪ್ರದೇಶಕ್ಕೆ ತಂದ ಕಾರಣ ಕಾಂಗ್ರೆಸ್ ಭಾರೀ ಸೋಲಾಗಿದೆ” ಎಂದು ರಾಜೇಶ್ ಸಿಂಗ್ ಪ್ರಶಾಂತ್ ಕಿಶೋರ್ ವಿರುದ್ಧ ಕಿಡಿಕಾರಿದ್ದಾರೆ.

    2 ದಶಕಗಳ ಉತ್ತರಪ್ರದೇಶ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದ ರಾಜೇಶ್ ಸಿಂಗ್ 4 ಬಾರಿ ಪಕ್ಷದ ಕಾರ್ಯದರ್ಶಿ ಹುದ್ದೆಯನ್ನು ನಿರ್ವಹಿಸಿದ್ದರು. ಆದರೆ ಮತ್ತೊಂದು ಕಡೆ ಪ್ರಶಾಂತ್ ಕಿಶೋರ್ ಅವರನ್ನು ಪಂಜಾಬ್ ಸಿಎಂ ಹೊಗಳಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಸಿಂಗ್, ನಮ್ಮ ಗೆಲುವಿನಲ್ಲಿ ಪ್ರಶಾಂತ್ ಕಿಶೋರ್ ಪಾತ್ರ ದೊಡ್ಡದು ಇದೆ ಎಂದು ಹೇಳಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಮೋದಿ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ನಂತರ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡು ಗೆಲುವಿನ ರೂವಾರಿಯಾಗಿದ್ದರು. ಈ ಕಾರಣಕ್ಕಾಗಿ ಪ್ರಶಾಂತ್ ಕಿಶೋರ್ ಅವರಿಗೆ ರಾಹುಲ್ ಗಾಂಧಿ ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ವಹಿಸಿದ್ದರು.

    ಪ್ರಶಾಂತ್ ಕಿಶೋರ್ ಅವರನ್ನು ನೇಮಿಸಿದ್ದಕ್ಕೆ ಆರಂಭದಲ್ಲೇ ಪಕ್ಷದ ಹಿರಿಯ ನಾಯಕರು ಅಪಸ್ವರ ಎತ್ತಿದ್ದರು. ನಮ್ಮ ಮಾತಿಗೆ ಬೆಲೆ ನೀಡದೇ ಪ್ರಶಾಂತ್ ಕಿಶೋರ್ ಮಾತಿಗೆ ಹೈಕಮಾಂಡ್ ಬೆಲೆ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

    ಹಿರಿಯ ನಾಯಕರೇ ಅಸಮಾಧಾನ ಹೊರ ಹಾಕಿದ್ದರೂ ಎಸ್‍ಪಿ, ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರಲು ಪ್ರಶಾಂತ್ ಕಿಶೋರ್ ಸಾಕಷ್ಟು ಕಸರತ್ತು ನಡೆಸಿದ್ದರು. ಆದರೆ ಮೋದಿ ಅಲೆಯಲ್ಲಿ ಎಸ್‍ಪಿ ಮತ್ತು ಕಾಂಗ್ರೆಸ್ ಕೊಚ್ಚಿಕೊಂಡು ಹೋಗಿತ್ತು. ಈ ಮೂಲಕ ಎರಡು ಚುನಾವಣೆಯಲ್ಲಿ ಯಶಸ್ವಿಯಾಗಿದ್ದ ಪ್ರಶಾಂತ್ ಕಿಶೋರ್‍ಗೆ ಮೂರನೇ ಚುನಾವಣೆಯಲ್ಲಿ ಸೋಲಾಗಿದೆ.

    ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶ ಮತ್ತು ಕಾಂಗ್ರೆಸ್ ಯಾವಾಗಲೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪಕ್ಷ ಎನ್ನುವ ಕಲ್ಪನೆಯಿಂದ ಹೊರಬರಲು ಪ್ರಶಾಂತ್ ಕಿಶೋರ್ ಅವರು ಈ ಬಾರಿ ಬ್ರಾಹ್ಮಣ ಸಮುದಾಯ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು ಶೀಲಾ ದೀಕ್ಷಿತ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಸಲಹೆ ನೀಡಿದ್ದರು. ಈ ಸಲಹೆಗೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು.

    ಲೋಕಸಭಾ ಚುನಾವಣೆಯ ವೇಳೆ ಪ್ರಶಾಂತ್ ಕಿಶೋರ್ ಸಲಹೆಯಂತೆ ಚಾಯ್‍ಪೇ ಚರ್ಚಾ ಬಿಜೆಪಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಬಿಹಾರದಲ್ಲಿ ಮಹಾಘಟ್‍ಬಂಧನ್ ಮೈತ್ರಿಕೂಟ ನಡೆಸಿ ನಿತೀಶ್ ಕುಮಾರ್ ಅವರನ್ನು ಪ್ರಶಾಂತ್ ಕಿಶೋರ್ ಗೆಲ್ಲಿಸಿದ್ದರು.

     

  • ಉತ್ತರ ಪ್ರದೇಶದ ಸಿಎಂ ಆಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ

    ಉತ್ತರ ಪ್ರದೇಶದ ಸಿಎಂ ಆಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ

    ಲಕ್ನೋ: ಉತ್ತರಪ್ರದೇಶದ 21 ನೇ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾನ್ಶಿರಾಮ್ ಸ್ಮೃತಿ  ಭವನದ ಎದುರು ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ರಾಮ್ ನಾಯ್ಕ್ ಯೋಗಿ ಆದಿತ್ಯನಾಥ್ ಅವರಿಗೆ ಪ್ರಮಾಣವಚನ ಬೋಧಿಸಿದರು.

    ಸಮಾರಂಭದಲ್ಲಿ ಕೇಶವ ಪ್ರಸಾದ್ ಮೌರ್ಯ ಹಾಗೂ ದಿನೇಶ್ ಶರ್ಮಾ ಉಪ ಮುಖ್ಯಮಂತ್ರಿಯಾಗಿ ಹಾಗೂ 43 ಮಂದಿ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದರು.

    2ನೇ ಕಿರಿಯ ಸಿಎಂ: ಪ್ರಸ್ತುತ ಈಗ ಇರುವ ಮುಖ್ಯಮಂತ್ರಿಗಳಲ್ಲಿ 37 ವರ್ಷದ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿದ್ದರೆ, 44 ವರ್ಷದ ಯೋಗಿ ಆದಿತ್ಯನಾಥ್ ಅವರು 2ನೇ ಅತಿ ಕಿರಿಯ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.

    ಗಣ್ಯರ ಉಪಸ್ಥಿತಿ: ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಗೃಹ ಸಚಿವ ರಾಜನಾಥ ಸಿಂಗ್, ಸಾರಿಗೆ ಸಚಿವ ನಿತಿನ್ ಗಡ್ಕರಿ, ಮುಲಾಯಂ ಸಿಂಗ್ ಯಾದವ್, ಮುರಳಿ ಮನೋಹರ್ ಜೋಶಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್, ಮಾಜಿ ಸಿಎಂ ಅಖಿಲೇಶ್ ಯಾದವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

    ಯಾರು ಈ ಯೋಗಿ ಆದಿತ್ಯನಾಥ್?
    ಉತ್ತರಾಖಂಡದ ಪಂಚೂರು ಮೂಲದ ಯೋಗಿ ಆದಿತ್ಯನಾಥ್, ಬಿಎಸ್‍ಸ್ಸಿ ಪದವಿ ಓದಿದ್ದಾರೆ. ಪದವಿ ಪಡೆದ ಬಳಿಕ ಅವರು ಸನ್ಯಾಸ ಸ್ವೀಕರಿಸಿ ಉತ್ತರಪ್ರದೇಶದ ನೇಪಾಳ ಗಡಿಯಲ್ಲಿರುವ ಪ್ರಭಾವಿ ಗೋರಖನಾಥ ಮಠ ಸೇರಿ ಕೊಂಡಿದ್ದರು. 2014ರಿಂದ ಆ ಮಠದ ಮುಖ್ಯಸ್ಥರೂ ಆಗಿದ್ದಾರೆ. ಪಕ್ಕಾ ಹಿಂದುತ್ವವಾದಿ, ಕರ್ಮಠ ಯೋಗಿ, ಕೇಸರಿ ಕೆಂಡ ಯೋಗಿ ಆದಿತ್ಯನಾಥ್ ಹಿಂದೂ ಮಹಾಸಭಾ, ಹಿಂದೂ ಯುವ ವಾಹಿನಿಯ ಅಧ್ಯಕ್ಷರೂ ಆಗಿದ್ದಾರೆ.

    ಸದಾ ಮುಸ್ಲಿಂ ವಿರುದ್ಧದ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಯೋಗಿ ಆದಿತ್ಯನಾಥ್ ಘರ್‍ವಾಪ್ಸಿ ಕಾರ್ಯಕ್ರಮದೊಂದಿಗೆ ದೇಶಾದ್ಯಂತ ದೊಡ್ಡ ಆಂದೋಲನ ಸೃಷ್ಟಿಸಿದ್ದರು. ಉತ್ತರ ಪ್ರದೇಶದ ಹಲವೆಡೆ ಬೃಹತ್ ಗೋ ರಕ್ಷಣಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

    ಸೋಲಿಲ್ಲದ ಸರದಾರ: 1998ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ಆಗ ಅವರು 26 ವರ್ಷದ ಅವರು 12ನೇ ಲೋಕಸಭೆಯ ಅತಿ ಕಿರಿಯ ಎನಿಸಿದ್ದರು. ಆದಿತ್ಯನಾಥ್ ಲೋಕಸಭೆ ಚುನಾವಣೆ ಅಖಾಡದಲ್ಲಿ 1998 ರಿಂದ 2014ರವರೆಗೂ ಸೋಲಿಲ್ಲದ ಸರದಾರನಾಗಿ ಐದು ಬಾರಿ ಸಂಸದರಾಗಿ ಗೋರಖ್‍ಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಪದವೀಧರರಾಗಿರುವ ಯೋಗಿ ರಫ್ತಿ ನದಿಯ ದಡದಲ್ಲಿರುವ ಗೋರಖ್‍ನಾಥ್ ಮಠದ ಪೀಠಾಧಿಪತಿಯೂ ಆಗಿದ್ದಾರೆ.

    ಮಂತ್ರಿಯಾಗಲ್ಲ  ಎಂದಿದ್ರು: ಹೆಸರಿನಲ್ಲಿಯೇ ಯೋಗ ಪಡೆದಿರುವ ಯೋಗಿ ಆದಿತ್ಯನಾಥ್‍ಗೆ 2014ರಲ್ಲಿ ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದಾಗ ಕೇಂದ್ರ ಸಚಿವರಾಗುವಂತೆ ಸ್ವತಃ ಪ್ರಧಾನಿ ಮೋದಿ ಆಹ್ವಾನಿಸಿದಾಗ ನನಗೆ ನನ್ನ ಕ್ಷೇತ್ರದಲ್ಲಿ ಕೆಲಸ ಇದೆ ಎಂದು ಹೇಳಿ ನಯವಾಗಿ ನಿರಾಕರಿಸಿದ್ದರು. ಹೈಕಮಾಂಡ್‍ನ ಕಮಾಂಡ್‍ಗಳನ್ನ ಚಾಚೂ ತಪ್ಪದೆ ಪಾಲಿಸುವ ಯೋಗಿ ಹಲವು ಬಾರಿ ವಿವಾದ್ಮಕ ಹೇಳಿಕೆ ನೀಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ರು.

    ಆದಿತ್ಯನಾಥ್ ಆಯ್ಕೆಗೆ ಕಾರಣಗಳೇನು..?
    ಅಖಿಲೇಶ್ ಯಾದವ್ ಮತ್ತು ಮಾಯಾವತಿಯನ್ನ ಎದುರಿಸುವ ಮಾಸ್ ಲೀಡರ್ ಆಗಿದ್ದು ಹಿಂದೂಗಳ ಜೊತೆಗೆ ಯಾದವ, ದಲಿತರನ್ನ ಓಲೈಕೆ ಮಾಡುವ ಚಾಣಕ್ಷತೆಯನ್ನು ಯೋಗಿ ಹೊಂದಿದ್ದಾರೆ.

    ಈಗಿನ ಹಿಂದೂ ಮತಗಳ ವೋಟ್ ಬ್ಯಾಂಕ್ ಭದ್ರಪಡಿಸಿ ಮತ್ತಷ್ಟು ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಯೋಗಿ ಬಳಿ ಇದ್ದು ಬಿಜೆಪಿಯಲ್ಲೇ ಉತ್ತಮ ಸಂಘಟನಾಕಾರ, ಕಾರ್ಯಚತುರಗಾರನಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಬಿಟ್ಟಿದ್ದ ಬಿಜೆಪಿ ನಾಯಕರನ್ನು ಯೋಗಿ ಒಗ್ಗುಡಿಸಿ ಪಕ್ಷವನ್ನು ಬಲ ಪಡಿಸಿದ್ದರು.

    ಬಾಬ್ರಿ ಮಸೀದಿ ಧ್ವಂಸ ಬಳಿಕ ತೀವ್ರವಾಗಿ ಹಿಂದೂತ್ವ ಪ್ರತಿಪಾದನೆ ಮಾಡುತ್ತಾ ಬಂದಿರುವ ಇವರು ಉತ್ತರ ಪ್ರದೇಶದ ಪೂರ್ವಾಂಚಲ ಹಾಗೂ ಪಶ್ಚಿಮ ಭಾಗದಲ್ಲಿ ಬಿಗಿ ಹಿಡಿತವನ್ನು ಹೊಂದಿದ್ದಾರೆ. ಬಿಜೆಪಿಯ ಪ್ರಣಾಳಿಕೆಯ ಮುಖ್ಯ ಅಂಶ ರಾಮಮಂದಿರ ನಿರ್ಮಾಣಕ್ಕೆ ಹಿಂದಿನಿಂದ ಆಗ್ರಹಿಸುತ್ತಾ ಬಂದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಎಲ್ಲ 80 ಕ್ಷೇತ್ರವನ್ನು ಜಯಿಸಲು ಭದ್ರಬುನಾದಿಯ ಲೆಕ್ಕಾಚಾರ ಹಾಕಿ ಬಿಜೆಪಿ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

    ಯೋಗಿ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಚುನಾವಣೆ ವೇಳೆ ಪ್ರಧಾನಿ ಮೋದಿ, ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಜನಾಥ್ ಸಿಂಗ್ ಬಳಿಕ ಹೆಚ್ಚು ಪ್ರಚಾರವನ್ನು ಕೈಗೊಂಡಿದ್ದರು. 2014ರ ಸಾರ್ವತ್ರಿಕ ಚುನಾವಣೆ ವೇಳೆ ಮೋದಿಯನ್ನ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಆಗ್ರಹಿಸಿದ್ದ ಪ್ರಮುಖ ನಾಯಕರ ಪೈಕಿ ಯೋಗಿಯೂ ಒಬ್ಬರಾಗಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಜೊತೆ ನೇರ ಸಂಪರ್ಕ ಹೊಂದಿರುವ ಕಾರಣ ಈಗ ಯೋಗಿಗೆ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿದೆ.

    ಕಳೆದ 5 ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಪಡೆದ ಪತಗಳು

  • ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ನೂತನ ಸಿಎಂ – ಯುಪಿಗೆ ಇಬ್ಬರು ಡಿಸಿಎಂಗಳು

    ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ನೂತನ ಸಿಎಂ – ಯುಪಿಗೆ ಇಬ್ಬರು ಡಿಸಿಎಂಗಳು

    ಲಖ್ನೋ: ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶ ರಾಜ್ಯದ ನೂತನ ಸಿಎಂ ಆಗಿ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ಅಲ್ಲದೆ ಉತ್ತರ ಪ್ರದೇಶಕ್ಕೆ ಇಬ್ಬರು ಡಿಸಿಎಂಗಳನ್ನೂ ಆಯ್ಕೆ ಮಾಡಲಾಗಿದೆ. 5 ಬಾರಿ ಸಂಸದರಾಗಿ ಆಯ್ಕೆ ಆಗಿರುವ 44 ವರ್ಷದ ಆದಿತ್ಯನಾಥ್ ಅವರು ಮುಂದಿನ ಸಿಎಂ ಎಂದು ಬಿಜೆಪಿ ಅಧಿಕೃತವಾಗಿ ಘೋಷಣೆ ಮಾಡಿದೆ. ನಾಳೆ (ಭಾನುವಾರ) ಮಧ್ಯಾಹ್ನ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಗೋರಖ್‍ಪುರ ಕ್ಷೇತ್ರದ ಸಂಸದರಾಗಿರುವ ಯೋಗಿ ಆದಿತ್ಯನಾಥ್ ಹಿಂದೂ ಯುವ ವಾಹಿನಿಯ ಸಂಸ್ಥಾಪಕರಾಗಿದ್ದಾರೆ. ಪಕ್ಕಾ ಸನ್ಯಾಸಿ ಆಗಿರುವ ಆದಿತ್ಯನಾಥ್ ಹೈಕಮಾಂಡ್ ತುಂಬಾ ಹತ್ತಿರವಾದ ವ್ಯಕ್ತಿ. ಗೋರಖ್‍ಪುರದ ಗೋರಖ್‍ನಾಥ್ ಮಠದ ಪೀಠಾಧಿಪತಿಗಳು.

    ಉತ್ತರ ಪ್ರದೇಶದಲ್ಲಿ ಪ್ರಚಂಡ ಬಹುಮತಗಳಿಂದ ಗೆಲವು ಕಂಡಿದ್ದ ಬಿಜೆಪಿಗೆ ಸಿಎಂ ಆಯ್ಕೆ ವಿಚಾರ ಕಗ್ಗಂಟಾಗಿತ್ತು. ಇಂದು ಮಧ್ಯಾಹ್ನದವರೆಗೆ ಉತ್ತರ ಪ್ರದೇಶ ಸಿಎಂ ಪಟ್ಟಕ್ಕೆ ಮನೋಜ್ ಸಿನ್ಹಾ, ರಾಜನಾಥ್ ಸಿಂಗ್ ಮುಂತಾದ ಮುಖಂಡರ ಹೆಸರುಗಳು ಕೇಳಿಬಂದಿದ್ದವು.

    ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ 403 ಸೀಟ್‍ಗಳಲ್ಲಿ 312 ಸೀಟ್‍ಗಳನ್ನು ಗೆಲ್ಲುವ ಮೂಲಕ ವಿಜಯಪತಾಕೆ ಹಾರಿಸಿದೆ.

    ನಾಳೆ ಮಧ್ಯಾಹ್ನ 2.15ಕ್ಕೆ ಲಖ್ನೋದಲ್ಲಿರುವ ಸ್ಮøತಿ ಉಪವನ ಕಾಂಪ್ಲೆಕ್ಸ್‍ನಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ. ಇಂದು ಸಂಜೆ ನಡೆದ ಸಭೆಯಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನೂ ಆರಿಸಲಾಗಿದೆ. ಲಖ್ನೋ ಮೇಯರ್ ದಿನೇಶ್ ಶರ್ಮಾ ಹಾಗೂ ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಕೇಶವ ಪ್ರಸಾದ್ ಮೌರ್ಯ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ.

  • ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ 11ರ ಪಾಕ್ ಬಾಲಕಿಯಿಂದ ಮೋದಿಗೆ ಶುಭಾಶಯ!

    ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ 11ರ ಪಾಕ್ ಬಾಲಕಿಯಿಂದ ಮೋದಿಗೆ ಶುಭಾಶಯ!

    ಇಸ್ಲಾಮಾಬಾದ್: ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿರೋದಕ್ಕೆ ಪಾಕಿಸ್ತಾನದ 11ರ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭ ಕೋರಿದ್ದಾಳೆ.

    ಪಾಕಿಸ್ತಾನದ 11ರ ಹರೆಯದ ಅಖೀದತ್ ನವೀದ್ ಎಂಬಾಕೆ ಪತ್ರದ ಮೂಲಕ ಪ್ರಧಾನಿಗೆ ವಿಶ್ ಮಾಡಿದ್ದಾಳೆ. ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಶಾಂತಿಯ ಅಗತ್ಯವಿದ್ದು, ಮೋದಿ ಅವರಿಂದ ಈ ಕೆಲಸ ಶೀಘ್ರವಾಗಿ ಆಗುತ್ತದೆ ಎಂದು ಹೇಳಿದ್ದಾಳೆ.

    ಪತ್ರದಲ್ಲೇನಿದೆ?: `ಜನರ ಮನಸ್ಸನ್ನು ಗೆಲ್ಲುವುದು ಅದ್ಭುತವಾದ ಕೆಲಸ ಎಂದು ನನ್ನ ತಂದೆ ಹೇಳುತ್ತಿದ್ದರು. ಅಂತೆಯೇ ನೀವು ಈಗಾಗಲೇ ಭಾರತೀಯರ ಮನ ಗೆದ್ದಿದ್ದೀರಿ. ಹೀಗಾಗಿ ನೀವು ಉತ್ತರಪ್ರದೇಶದಲ್ಲಿ ಭರ್ಜರಿ ಜಯ ಗಳಿಸಿದ್ದೀರಿ. ಅಂತೆಯೇ ಮತ್ತಷ್ಟು ಭಾರತೀಯರು ಹಾಗೂ ಪಾಕಿಸ್ತಾನ ಜನತೆಯ ಹೃದಯಗಳನ್ನು ಗೆಲ್ಲಬೇಕಾದರೆ, ಉಭಯ ರಾಷ್ಟ್ರಗಳ ನಡುವೆ ಸ್ನೇಹ ಮತ್ತು ಶಾಂತಿಯನ್ನು ಕಾಪಾಡಬೇಕು. ಈ ಎರಡೂ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿಯ ಸೇತುವೆಯನ್ನು ನಿರ್ಮಾಣ ಮಾಡಿ. ನಾವು ಬುಲೆಟ್‍ಗಳನ್ನು ಖರೀದಿ ಮಾಡುವ ಬದಲಾಗಿ ಪುಸ್ತಕಗಳನ್ನು ಖರೀದಿ ಮಾಡಲು ನಿರ್ಧರಿಸೋಣ. ಪಿಸ್ತೂಲ್‍ಗಳನ್ನು ಖರೀದಿ ಮಾಡೋ ಬದಲು ಬಡವರಿಗಾಗಿ ಔಷಧಿಗಳನ್ನು ಖರೀದಿ ಮಾಡೋಣವೆಂದು ನಿರ್ಧಾರ ಕೈಗೊಳ್ಳೋಣ ಅಂತಾ ಅಖೀದತ್ ಪ್ರಧಾನಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾಳೆ.

    ಪತ್ರದ ಕೊನೆಯಲ್ಲಿ ಶಾಂತಿ ಮತ್ತು ಸಂಘರ್ಷ ಯಾವುದು ಬೇಕು ಎಂಬ ಆಯ್ಕೆ ಎರಡೂ ರಾಷ್ಟ್ರಗಳ ಕೈಯಲ್ಲಿದೆ ಎಂದು ಹೇಳಿದ್ದು, ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಪ್ರಧಾನಿಗೆ ಶುಭಾಶಯ ತಿಳಿಸಿದ್ದಾಳೆ.

     

  • ಇಂದು ಸಂಜೆ ದೆಹಲಿಯಲ್ಲಿ ಮೋದಿ ರೋಡ್ ಶೋ, ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ

    ಇಂದು ಸಂಜೆ ದೆಹಲಿಯಲ್ಲಿ ಮೋದಿ ರೋಡ್ ಶೋ, ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ

    ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಬಳಿಕ ಪ್ರಧಾನಿ ಮೋದಿ ಭಾನುವಾರ ಸಂಜೆ ದೆಹಲಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ.

    ಸಂಜೆ 4.30ರ ವೇಳೆಗೆ ದೆಹಲಿಯ ಲಿ ಮೆರಿಡಿಯನ್ ಹೋಟೆಲ್‍ನಿಂದ ಪಕ್ಷದ ಕಚೇರಿಯವರೆಗ ರೋಡ್ ಶೋ ನಡೆಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ರೋಡ್ ಶೋ ನಡೆಸಿದ ಬಳಿಕ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಭಾಷಣ ಮಾಡುವ ಸಾಧ್ಯತೆಯಿದೆ.

    ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಬಗ್ಗೆ ಇಂದು ಮಧ್ಯಾಹ್ನ ಪಕ್ಷದ ಹಿರಿಯ ನಾಯಕರು ಸಭೆ ನಡೆಸಲಿದ್ದು, ಈ ವೇಳೆ ಉತ್ತರ ಪ್ರದೇಶದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.

    ಶನಿವಾರ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದರು.

  • ಉತ್ತರಪ್ರದೇಶ, ಉತ್ತರಾಖಂಡ್‍ನಲ್ಲಿ ಮೋದಿ ಸುನಾಮಿ – ಪಂಜಾಬ್‍ನಲ್ಲಿ ಮಾನ ಉಳಿಸಿಕೊಂಡ ಕಾಂಗ್ರೆಸ್

    ಉತ್ತರಪ್ರದೇಶ, ಉತ್ತರಾಖಂಡ್‍ನಲ್ಲಿ ಮೋದಿ ಸುನಾಮಿ – ಪಂಜಾಬ್‍ನಲ್ಲಿ ಮಾನ ಉಳಿಸಿಕೊಂಡ ಕಾಂಗ್ರೆಸ್

    – ಇಂದೇ ಹೋಳಿಯಲ್ಲಿ ಮುಳುಗೆದ್ದ ಕೇಸರಿ ಕಾರ್ಯಕರ್ತರು
    – ಅಮೇಥಿ, ರಾಯಬರೇಲಿಯಲ್ಲಿ ಕಾಂಗ್ರೆಸ್ ಅಲ್ಲೋಲ ಕಲ್ಲೋಲ
    – ಪ್ರಾದೇಶಿಕ ಪಕ್ಷಗಳಿಗೆ ಎದುರಾಯ್ತು ಕಷ್ಟಕಾಲ
    – ಮಣಿಪುರ, ಗೋವಾ ಅಸೆಂಬ್ಲಿ ಅತಂತ್ರ

    ನವದೆಹಲಿ: ದೇಶದ ರಾಜಕೀಯ ದಿಕ್ಸೂಚಿ ಅಂತ ಕುತೂಹಲ ಕೆರಳಿಸಿದ್ದ ಪಂಚರಾಜ್ಯ ಫಲಿತಾಂಶ ಪ್ರಕಟವಾಗಿದೆ. ಉತ್ತರ ಪ್ರದೇಶ, ಉತ್ತರಾಖಂಡ್‍ನಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಉತ್ತರ ಪ್ರದೇಶದಲ್ಲಿ ಮೋದಿ ಸುನಾಮಿಗೆ ಪ್ರತಿಪಕ್ಷಗಳು ತರಗೆಲೆಗಳಂತೆ ತೂರಿ ಹೋಗಿವೆ.

    403 ಕ್ಷೇತ್ರಗಳಲ್ಲಿ 300ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಕಮಲ ಅರಳಿದೆ. ಉತ್ತರ ಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಯಲ್ಲಿ ಸಂಪೂರ್ಣ ಕೇಸರೀಮಯವಾಗಿದ್ದು ಒಂದು ರೀತಿ `ಕಮಲೇ ಕಮಲೋತ್ಪತ್ತಿಃ’ ಎನ್ನುವಂತಾಗಿದೆ. ಅಲ್ಲದೆ, ಕಾಂಗ್ರೆಸ್‍ಗೆ ಅಕ್ಷರಶಃ ಭೂಕಂಪನದ ಅನುಭವವಾದ್ರೆ, ಪ್ರಾದೇಶಿಕ ಪಕ್ಷಗಳಾದ ಎಸ್‍ಪಿ, ಬಿಎಸ್‍ಪಿಗಳ ಭವಿಷ್ಯಕ್ಕೆ ಮಂಕುಬಡಿದಂತಾಗಿದೆ.

    ಪಂಜಾಬ್‍ನಲ್ಲಿ ಕಾಂಗ್ರೆಸ್‍ನ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಮಾಲ್ ಮಾಡಿದ್ದಾರೆ. ಬಾದಲ್ ಕುಟುಂಬ ರಾಜಕಾರಣ ಹೀನಾಯ ಸೋಲು ಕಂಡಿದೆ. ಇದ್ರಿಂದ ಮೈತ್ರಿ ಬೆಳೆಸಿಕೊಂಡಿದ್ದ ಬಿಜೆಪಿಗೂ ಮುಖಭಂಗವಾಗಿದೆ. ಇದರ ಮಧ್ಯೆ, ಮಣಿಪುರ ಹಾಗೂ ಗೋವಾದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೆಕ್ ಟು ನೆಕ್ ಫೈಟ್ ನಡೀತು.

    ಪಕ್ಷದ ವಿಜಯಯಾತ್ರೆ ಬಿಜೆಪಿ ನಾಯಕರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ್ರೆ, ಕಾರ್ಯಕರ್ತರು ನಾಳಿನ ಹೋಳಿಯನ್ನ ಇಂದೇ ಆಚರಿಸುವ ಮೂಲಕ ಸಂಭ್ರಮವನ್ನ ಇಮ್ಮಡಿಗೊಳಿಸಿಕೊಂಡ್ರು. ಈ ಮಧ್ಯೆ, ಜನಾದೇಶವನ್ನ ಎಸ್‍ಪಿ, ಕಾಂಗ್ರೆಸ್, ಆಪ್ ಸ್ವಾಗತಿಸಿದ್ರೆ ಬಿಎಸ್‍ಪಿ ಮಾತ್ರ ಮತಯಂತ್ರದಲ್ಲಿ ಏನೋ ಮಸಲತ್ತು ನಡೆದಿದೆ ಗುಮಾನಿ ವ್ಯಕ್ತಪಡಿಸಿದೆ. ಆದ್ರೆ, ಆರೋಪದಲ್ಲಿ ಹುರುಳಿಲ್ಲ ಅಂತ ಚುನಾವಣಾ ಆಯೋಗ ಹೇಳಿದೆ.

    ಚುನಾವಣೆಯಲ್ಲಿದ್ದ ಪ್ರಮುಖ ನಾಯಕರ ಭವಿಷ್ಯ ಏನಾಯ್ತು..?

    1. ಪಂಕಜ್ ಸಿಂಗ್ – ಬಿಜೆಪಿ – ನೋಯ್ಡಾ – ಗೆಲುವು
    2. ರೀಟಾ ಬಹುಗುಣ ಜೋಶಿ – ಬಿಜೆಪಿ – ಲಖನೌ ಕಂಟೋನ್ಮೆಂಟ್ – ಗೆಲುವು
    3. ಗರೀಮಾ ಸಿಂಗ್ – ಬಿಜೆಪಿ – ಅಮೇಥಿ – ಗೆಲುವು
    4. ಸಿದ್ಧಾರ್ಥ್ ನಾಥ್ ಸಿಂಗ್ – ಬಿಜೆಪಿ – ಅಲಹಾಬಾದ್ ಪಶ್ಚಿಮ – ಗೆಲುವು (ಲಾಲ್‍ಬಹದ್ದೂರ್‍ಶಾಸ್ತ್ರಿ ಮೊಮ್ಮಗ )
    5. ಅಪರ್ಣಾ ಯಾದವ್ – ಎಸ್‍ಪಿ – ಲಖನೌ ಕಂಟೋನ್ಮೆಂಟ್ – ಸೋಲು
    6. ಶಿವಪಾಲ್ ಸಿಂಗ್ – ಎಸ್‍ಪಿ – ಜಸ್ವಂತ್‍ನಗರ್ – ಗೆಲುವು
    7. ಅಜಂ ಖಾನ್ – ಎಸ್‍ಪಿ – ರಾಮ್‍ಪುರ್ – ಗೆಲುವು
    8. ಅಂಬಿಕಾ ಚೌಧರಿ – ಬಿಎಸ್‍ಪಿ – ಫೆಫಾನ – ಸೋಲು
    9. ಜಿತಿನ್ ಪ್ರಸಾದ್ – ಕಾಂಗ್ರೆಸ್- ತಿಹಾರ್ – ಸೋಲು

    ಮುಖ್ಯಮಂತ್ರಿ ಯಾರು ಅನ್ನೋದನ್ನು ಘೊಷಿಸದೇ ಕಣಕ್ಕಿಳಿಯೋದು ಬಿಜೆಪಿ ಜಾಯಮಾನ.. ಅದೇ ರೀತಿ ಉತ್ತರ ಪ್ರದೇಶದಲ್ಲಿ ಕಣಕ್ಕಿಳಿದ ಬಿಜೆಪಿ, ಮೋದಿ ಅಲೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದು ಪ್ರಶ್ನೆ. ರೇಸ್‍ನಲ್ಲಿ ಯಾರ್ಯಾರಿದ್ದಾರೆ..? ಅವರ ಹಿನ್ನೆಲೆ ಏನು ಅನ್ನೋದನ್ನ ನೋಡೋದಾದ್ರೆ..

    ಯಾರಾಗ್ತಾರೆ ಮುಖ್ಯಮಂತ್ರಿ..?
    1. ರಾಜನಾಥ್ ಸಿಂಗ್
    * ಸಿಎಂ ರೇಸ್‍ನಲ್ಲಿ ಕೇಳಿಬರುವ ಮೊದಲ ಹೆಸರು
    * ಕೇಂದ್ರ ಗೃಹ ಸಚಿವ. ಆದ್ರೆ, ಮೋದಿ ತಮ್ಮ ಕ್ಯಾಬಿನೆಟ್‍ನಿಂದ ಬಿಡುವ ಬಗ್ಗೆ ಸ್ಪಷ್ಟತೆ ಇಲ್ಲ

    2. ಕೇಶವ್ ಪ್ರಸಾದ್ ಮೌರ್ಯ
    * ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ
    * ಓಬಿಸಿಯ ಎಂಬಿಸಿ ಮುಖಂಡ, ವಿಹೆಚ್‍ಪಿ, ಆರ್‍ಎಸ್‍ಎಸ್ ನಾಯಕ
    * ಪೂರ್ವಾಂಚಲದಿಂದ ಸಿಎಂ ಆದ ಮೊದಲಿಗರು ಎಂಬ ಹೆಗ್ಗಳಿಕೆ

    3. ಸಂತೋಷ್ ಗಂಗ್ವಾರ್
    * ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ
    * 1989ರಿಂದಲೂ ಕಮಲದ ಕಟ್ಟಾಳು
    * ಕುರ್ಮಿ ಸಮುದಾಯದ ಪ್ರಭಾವಿ, ಮೃದು ಸ್ವಭಾವ
    * ರೋಹಿಲ್‍ಖಂಡ್ ಪ್ರಾಂತ್ಯದಲ್ಲಿ ಬಿಜೆಪಿ ಗೆಲುವಿಗೆ ಪ್ರಮುಖ ಕಾರಣ

    4. ಮಹೇಶ್ ಶರ್ಮಾ
    * ಕೇಂದ್ರ ಸಾಂಸ್ಕೃತಿಕ ಖಾತೆ ಸಚಿವ
    * ಸಂಘ ಪರಿವಾರದ ಜೊತೆ ಉತ್ತಮ ಸಂಬಂಧ
    * ಆದರೆ, ಹಲವು ಆರೋಪಗಳಿವೆ

    5. ಮನೋಜ್ ಸಿನ್ಹಾ
    * ಕೇಂದ್ರ ಟೆಲಿಕಾಂ ಸಚಿವ
    * ಭೂಮಿಹಾರ್ ಸಮುದಾಯದ ನಾಯಕ
    * ಬನಾರಸ್ ಹಿಂದೂ ವಿವಿಯ ಪದವೀಧರ
    ಇವರ ಜೊತೆ ಯೋಗಿ ಆದಿತ್ಯನಾಥ್, ಉಮಾಭಾರತಿ, ಕಲ್‍ರಾಜ್ ಮಿಶ್ರಾ ಹೆಸರು ಕೂಡ ಕೇಳಿಬರುತ್ತಿದೆ.
    ============
    ಉತ್ತರ ಪ್ರದೇಶದಲ್ಲಿ ಬಿಜೆಪಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೆಲ್ಲೋದಿಕ್ಕೆ ಕಾರಣಗಳೇನು..?
    * ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅಲೆ
    * ನೋಟ್ ಬ್ಯಾನ್ ಮೂಲಕ ತಾವು ಬಡವರ ಪರ ಎಂದು ನಿರೂಪಿಸಿಕೊಂಡಿದ್ದು
    * ಬಿಜೆಪಿಗೆ ವರವಾದ ಎಸ್‍ಪಿ, ಬಿಎಸ್‍ಪಿಯ ತಪ್ಪು ಲೆಕ್ಕಾಚಾರಗಳು
    * ಮುಸ್ಲಿಂ, ದಲಿತ, ಜಾಟ್ ಮತಗಳ ಮತಗಳ ವಿಭಜನೆ
    (ಎಂಐಎಂ ಸ್ಪರ್ಧೆ, ವರ್ಕ್ ಆಗದ ಮಾಯಾವತಿ ದಲಿತ್ ಕಾರ್ಡ್, ಫಲಿಸದ ಎನ್‍ಆರ್‍ಎಲ್‍ಡಿಯ ಅಜಿತ್ ಸಿಂಗ್ ಲೆಕ್ಕ)
    * ಯಾದವೇತರ ಓಬಿಸಿ, ಜಾಟ್‍ವೇತರ ದಲಿತ ವರ್ಗ, ಮೇಲ್ವರ್ಗದ ಸಮುದಾಯಗಳ ಮೇಲೆ ಕಣ್ಣು
    (ಈ ಸಮುದಾಯಗಳ ಒಟ್ಟು ಮತ ಪ್ರಮಾಣ ಶೇ. 55-60)
    * ಒಬ್ಬ ಮುಸ್ಲಿಂರಿಗೂ ಟಿಕೆಟ್ ಕೊಡದೇ ಬಿಜೆಪಿ `ಧರ್ಮ ರಾಜಕೀಯ’
    (ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ದುರ್ಬಲ ಅಭ್ಯರ್ಥಿ ಹಾಕಿ ಬಿಎಸ್‍ಪಿ ಗೆಲ್ಲುವಂತೆ ಮಾಡಿದ್ದು)
    * ತಲಾಕ್ ವಿಚಾರದಲ್ಲಿ ಮುಸ್ಲಿಮ್ ಮಹಿಳೆಯರಿಂದ ಬಿಜೆಪಿಗೆ ಮತ
    * ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷ ಸಂಘಟನೆ
    * ಗೆಲ್ಲುವ ಕುದುರೆಗಳಿಗೆ ಮಾತ್ರ ಟಿಕೆಟ್
    * ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಚುನಾವಣಾ ಚಾಣಾಕ್ಯ ಸುನಿಲ್ ಬನ್ಸಾಲ್ ತಂತ್ರ ವರ್ಕೌಟ್
    * ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ
    ============

    ಯಾವ ರಾಜ್ಯದಲ್ಲಿ ಈಗ ಯಾರ ಆಳ್ವಿಕೆ?

    ಬಿಜೆಪಿ: ಉತ್ತರ ಪ್ರದೇಶ, ಮಧ್ಯ ಪ್ರದೇಶ, ಅರುಣಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಅಸ್ಸಾಂ, ಛತ್ತೀಸ್‍ಘಡ, ಹರಿಯಾಣ, ಜಾರ್ಖಂಡ್, ಉತ್ತರಾಖಂಡ್

    ಬಿಜೆಪಿ ಮೈತ್ರಿ : ಜಮ್ಮು ಕಾಶ್ಮೀರ, ಆಂಧ್ರಪ್ರದೇಶ

    ಕಾಂಗ್ರೆಸ್: ಪಂಜಾಬ್, ಕರ್ನಾಟಕ, ಹಿಮಾಚಲ ಪ್ರದೇಶ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಾಂಡಿಚೆರಿ,

    ಇತರೆ: ದೆಹಲಿ, ಬಿಹಾರ್, ಒಡಿಶಾ, ಸಿಕ್ಕಿಂ, ತ್ರಿಪುರಾ, ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಕೇರಳ, ತೆಲಂಗಾಣ.

    ಅತಂತ್ರ – ಮಣಿಪುರ, ಗೋವಾ
    ============

    ಕರ್ನಾಟಕದ ಮೇಲೆ ಏನ್ ಪರಿಣಾಮ ಬೀರುತ್ತೆ?
    * ರಾಜ್ಯ ಬಿಜೆಪಿಗೆ ಚೈತನ್ಯ ತಂದಿರುವ ಗೆಲುವು
    * ಮೋದಿ, ಅಮಿತ್ ಶಾ ನೆಕ್ಸ್ಟ್ ಟಾರ್ಗೆಟ್ ಕರ್ನಾಟಕ
    * ರಾಜ್ಯದಲ್ಲೂ ಚಾಣಕ್ಯರ ತಂತ್ರಗಳ ಶುರುವಾಗಲಿದೆ
    * ಮೇನಿಂದ ರಾಜ್ಯದಲ್ಲಿ ಶಾ ಮಾಸ್ಟರ್ ಪ್ಲಾನ್
    * ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯ ಮೇಲೂ ಪರಿಣಾಮ
    * ಆಡಳಿತರೂಢ ಕಾಂಗ್ರೆಸ್‍ನ ಉತ್ಸಾಹಕ್ಕೆ ಬ್ರೇಕ್
    * ರಾಜ್ಯದಲ್ಲಿ ರಾಹುಲ್‍ಗಾಂಧಿ ಸಾಹಸಕ್ಕೆ ಹಿನ್ನಡೆ
    * ಚುನಾವಣಾ ಪೂರ್ವದಲ್ಲೇ ಜೆಡಿಎಸ್ ಜತೆ ಮೈತ್ರಿ ಜಪ ಮಾಡಬಹುದು
    * ನೋಟ್‍ಬ್ಯಾನ್ ವಿಚಾರವನ್ನೇ ಬಿಜೆಪಿ ಅಸ್ತ್ರವನ್ನಾಗಿ ಬಳಸಬಹುದು
    * ಐಟಿದಾಳಿ, ಡೈರಿ ವಿಚಾರಗಳನ್ನೇ ಅಸ್ತ್ರವನ್ನಾಗಿ ಬಳಸುವ ಸಾಧ್ಯತೆ
    * ಮಹಾದಾಯಿ ವಿವಾದಕ್ಕೆ ಮುಲಾಮು ಹಚ್ಚುವ ಸಾಧ್ಯತೆ
    ============

    ಶಿರೋಮಣಿ ಅಖಾಲಿದಳ, ಬಿಜೆಪಿ ಮೈತ್ರಿಗೆ ಮುಖಭಂಗ:
    ಆಡಳಿತರೂಢ ಶಿರೋಮಣಿ ಅಖಾಲಿದಳ ಮತ್ತು ಬಿಜೆಪಿ ಮೈತ್ರಿಗೆ ಭಾರೀ ಮುಖಭಂಗವಾಗಿದೆ. ಬಾದಲ್ ಕುಟುಂಬ ರಾಜಕಾರಣಕ್ಕೆ ರೋಸಿಹೋದ ಜನ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ನಾಯಕತ್ವಕ್ಕೆ ಮಣೆ ಹಾಕಿದೆ. ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್-ಆಪ್ ಮಧ್ಯೆ ನೆಕ್ ಟು ನೆಕ್ ಫೈಟ್ ಇರುತ್ತೆ ಅಂತ ಹೇಳಿದ್ವು. ಆದ್ರೆ, ಈಗ ಅದು ಬುಡಮೇಲಾಗಿದೆ. 117 ಕ್ಷೇತ್ರಗಳ ವಿಧಾನಸಭೆಯಲ್ಲಿ ಸರಳ ಬಹುಮತ 59 ಸ್ಥಾನಗಳು ಬೇಕಿದ್ದು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.

    ============

    ಪಂಜಾಬ್ ಸಿಎಂ: ಪಂಜಾಬ್‍ನಲ್ಲಿ ಕಾಂಗ್ರೆಸ್ ಗೆದ್ದಿರೋ ಕಾರಣ ಮಾಜಿ ಸಿಎಂ, ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರೇ ಮುಂದಿನ ಸಿಎಂ ಆಗಲಿದ್ದಾರೆ.

    1. ಅಮರಿಂದರ್ ಸಿಂಗ್ – ಕಾಂಗ್ರೆಸ್ – ಪಟಿಯಾಲ – ಗೆಲುವು (ಲಂಬಿ -ಸೋಲು)
    2. ನವಜೋತ್ ಸಿಂಗ್ ಸಿದು – ಕಾಂಗ್ರೆಸ್ – ಪೂರ್ವ ಅಮೃತಸರ – ಗೆಲುವು
    3. ಪ್ರಕಾಶ್ ಸಿಂಗ್ ಬಾದಲ್ – ಎಸ್‍ಎಡಿ – ಲಂಬಿ – ಗೆಲುವು
    4. ಸುಖ್‍ಬೀರ್ ಸಿಂಗ್ ಬಾದಲ್ – ಎಸ್‍ಡಿಎ – ಜಲಲಾಬಾದ್ – ಗೆಲುವು
    5. ಪರಗತ್ ಸಿಂಗ್ – ಕಾಂಗ್ರೆಸ್ – ಜಲಂಧರ್ – ಗೆಲುವು (ಹಾಕಿ ತಂಡದ ಮಾಜಿ ನಾಯಕ)
    6. ಭಗವಂತ್ ಮನ್ – ಎಎಪಿ – ಜಲಲಾಬಾದ್ – ಸೋಲು
    ============
    ಅಮರೀಂದರ್ ಸಿಂಗ್ ಗೆಲುವಿಗೆ ಕಾರಣಗಳು ಏನು?
    * ಬಾದಲ್ ಕುಟುಂಬ, ಸ್ವಜನಪಕ್ಷಪಾತ ವಿರೋಧಿ ಅಲೆ
    * ಕೃಷಿ ಆಧರಿತ ರೈತರಿಗೆ ನೋಟ್‍ಬ್ಯಾನ್ ನೋವು
    * ಕ್ಯಾ.ಅಮರೀಂದರ್ ಸಿಂಗ್ ಸಿಎಂ ಅಭ್ಯರ್ಥಿ ಅಂತ ಘೋಷಣೆ
    * ಡ್ರಗ್ಸ್ ಮಾಫಿಯಾ ವಿರೋಧಿ, ರೈತರ ಪರ ಪ್ರಣಾಳಿಕೆ ಹೊರಡಿಸಿದ್ದ ಅಮರೀಂದರ್
    * ಬಿಜೆಪಿಯಿಂದ ಕಾಂಗ್ರೆಸ್‍ಗೆ ಜಂಪ್ ಆದ ನವಜೋತ್ ಸಿಂಗ್ ಸಿದು
    * ಆಪ್ ಎಂಟ್ರಿಯಿಂದ ಮತಗಳ ವಿಭಜನೆ
    ============

    ಉತ್ತರಾಖಂಡ್‍ನಲ್ಲಿ ಅರಳಿದ ಕಮಲ:
    ಉತ್ತರ ಪ್ರದೇಶ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಉತ್ತರಾಖಂಡ್‍ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್‍ನ ಹರೀಶ್ ರಾವತ್  ಸರ್ಕಾರ ಬಿದ್ದಿದೆ.

    ಉತ್ತರಾಖಂಡ್‍ನಲ್ಲಿ ಮುಂದಿನ ಸಿಎಂ ಯಾರಾಗಬಹುದು?
    1. ರಮೇಶ್ ಪೊಖ್ರಿಯಾಲ್, ಮಾಜಿ ಸಿಎಂ
    2. ಬಿ.ಸಿ. ಖಂಡೂರಿ, ಮಾಜಿ ಸಿಎಂ
    3. ಅಜಯ್ ಭಟ್, ಬಿಜೆಪಿ ರಾಜ್ಯಾಧ್ಯಕ್ಷ
    4. ಭಗತ್ ಸಿಂಗ್ ಕೊಸ್ಯಾರಿ, ಪ್ರಮುಖ ನಾಯಕ
    5. ವಿಜಯ್ ಬಹುಗುಣ, ಮಾಜಿ ಸಿಎಂ (ಕಾಂಗ್ರೆಸ್‍ನಲ್ಲಿದ್ದಾಗ ಸಿಎಂ ಆಗಿದ್ದರು)
    ============

    ಗೆದ್ದ ಸೋತ ಪ್ರಮುಖ ಅಭ್ಯರ್ಥಿಗಳು
    ಹರೀಶ್ ರಾವತ್ – ಕಾಂಗ್ರೆಸ್ – ಹರಿದ್ವಾರ ಗ್ರಾಮೀಣ, ಕಿಚ್ಛ – ಸೋಲು
    ಅಜಯ್ ಭಟ್ – ಬಿಜೆಪಿ – ರಾಣಿಕೇಟ್ – ಸೋಲು
    ರೀತು ಖಂಡೂರಿ ಭೂಷಣ್ – ಬಿಜೆಪಿ – ಯಮಕೇಶ್ವರ – ಗೆಲುವು
    ಸತ್ಪಾಲ್ ಮಹಾರಾಜ್ – ಬಿಜೆಪಿ – ಚೌಬಟ್ಟಖಾಲ್ – ಗೆಲುವು
    ಕಿಶೋರ್ ಉಪಾಧ್ಯಾಯ – ಕಾಂಗ್ರೆಸ್ – ಶಹಾಪುರ – ಸೋಲು
    ============

    ಮಣಿಪುರದಲ್ಲಿ ಅತಂತ್ರ ವಿಧಾನಸಭೆ:
    ಮಣಿಪುರದಲ್ಲಿ ನೆಕ್ ಟು ನೆಕ್ ಫೈಟ್ ನಡೆದಿದ್ದು, ಕಾಂಗ್ರೆಸ್ ದೊಡ್ಡ ಪಕ್ಷವಾದರೂ ಅತಂತ್ರ ಅಸೆಂಬ್ಲಿ ನಿರ್ಮಾಣವಾಗಿದೆ. ಪಕ್ಷೇತರರು ನಿರ್ಣಾಯಕವಾಗಿದೆ

    ಪ್ರಮುಖ ಅಭ್ಯರ್ಥಿಗಳು:
    1. ಓಕ್ರಮ್ ಇಬೋಬಿ ಸಿಂಗ್ – ಕಾಂಗ್ರೆಸ್ – ಥೌಬಾಲ್ – ಗೆಲುವು
    2. ಇರೋಮ್ ಶರ್ಮಿಳಾ – ಪಿಆರ್‍ಜೆಎ – ಥೌಬಾಲ್ – ಸೋಲು (90 ಮತ ಅಷ್ಟೇ)
    3. ಎನ್. ಬಿರೇನ್ – ಬಿಜೆಪಿ – ಹೇನ್‍ಗಂಗ್ – ಗೆಲುವು

    ಗೋವಾದಲ್ಲಿ ಅತಂತ್ರ:
    ಗೋವಾದಲ್ಲಿ ಜನರು ಯಾರಿಗೂ ಸ್ಪಷ್ಟ ಬಹುಮತ ನೀಡದ ಕಾರಣ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

    ಪ್ರಮುಖ ನಾಯಕರ ಭವಿಷ್ಯ ಏನಾಯ್ತು ?

    1. ಲಕ್ಷ್ಮಿಕಾಂತ್ ಪರ್ಸೇಕರ್ – ಬಿಜೆಪಿ – ಮಂಡ್ರೇಮ್ – ಸೋಲು
    2. ದಿಗಂಬರ್ ಕಾಮತ್ – ಕಾಂಗ್ರೆಸ್ – ಮರ್ಗೋವಾ – ಗೆಲುವು
    3. ಎಲ್ವಿಸ್ ಗೋಮ್ಸ್ – ಎಎಪಿ – ಕನ್ಸೊಲಿಮ್ – ಸೋಲು

  • ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ: ಅಮಿತ್ ಶಾ

    ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ: ಅಮಿತ್ ಶಾ

    ನವದೆಹಲಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ನಮಗೆ ತೃಪ್ತಿ ತಂದಿದ್ದು, ನಾಲ್ಕು ರಾಜ್ಯಗಳಲ್ಲಿ ನಾವು ಸರ್ಕಾರ ನಡೆಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಗೋವಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪಂಜಾಬ್‍ನಲ್ಲಿ ಬಿಜೆಪಿ ಶೇಖಡಾವಾರು ಹೆಚ್ಚು ಮತಗಳನ್ನು ಗಳಿಸಿದೆ ಎಂದು ತಿಳಿಸಿದರು.

    ಉತ್ತರ ಪ್ರದೇಶ ಜನತೆ ನೀಡಿದ ಭರವಸೆಯನ್ನು ನಾವು ಈಡೇರಿಸುತ್ತೇವೆ.ಪಂಜಾಬ್‍ನಲ್ಲಿ ನಾವು ಸೋಲನ್ನು ಸ್ವೀಕರಿಸಿದ್ದೇವೆ. ಸೋತಿದ್ದು ಯಾಕೆ ಎನ್ನುವುದನ್ನು ಅಧ್ಯಯನ ನಡೆಸುತ್ತೇವೆ ಎಂದು ಹೇಳಿದರು.

    ಬಡವನಿಂದ ಹಿಡಿದು ಇಡೀ ದೇಶದ ಜನತೆ ಬಿಜೆಪಿಯ ಜೊತೆಗಿದ್ದಾರೆ. ನರೇಂದ್ರ ಮೋದಿ ವಿರುದ್ಧ ಪ್ರಚಾರ ನಡೆಸುತ್ತಿರುವ ವಿರೋಧ ಪಕ್ಷಗಳಿಗೆ ಜನರು ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದು ತಿಳಿಸಿದರು.

    ಈ ಜಯಕ್ಕೆ ಕಾರಣರಾದ ದೇಶದ ಎಲ್ಲ ಕಾರ್ಯಕರ್ತರಿಗೆ ಧನ್ಯವಾದಗಳು. ಬಿಜೆಪಿಯ ಈ ಜಯ ಜನರ ಜಯ ಮತ್ತು ಮೋದಿಯವರ ಆಡಳಿತಕ್ಕೆ ಸಿಕ್ಕಿದ ಜಯ ಎಂದು ಅಮಿತ್ ಶಾ ಬಣ್ಣಿಸಿದರು.