Tag: uttar pradesh

  • ಬನ್ಸಾಲಿ ತಲೆಗೆ ಬಹುಮಾನ ಘೋಷಿಸಿದವರ ವಿರುದ್ಧ ಕ್ರಮ: ಯೋಗಿ

    ಬನ್ಸಾಲಿ ತಲೆಗೆ ಬಹುಮಾನ ಘೋಷಿಸಿದವರ ವಿರುದ್ಧ ಕ್ರಮ: ಯೋಗಿ

    ಲಕ್ನೋ: ಪದ್ಮಾವತಿ ಚಿತ್ರದ ನಿರ್ದೇಶಕ ಸಜಯ್ ಲೀಲಾ ಬನ್ಸಾಲಿ ತಲೆಗೆ ಬಹುಮಾನ ಘೋಷಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಪದ್ಮಾವತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಬನ್ಸಾಲಿ ತಲೆಗೆ ಬಹುಮಾನ ಘೋಷಿಸಿದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳುವುದರ ಜೊತೆಗೆ ಜನರ ಭಾವನೆಗಳ ಜೊತೆ ಆಟವಾಡಿರುವ ನಿರ್ದೇಶಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

    ಈಗಾಗಲೇ ಚಿತ್ರದಲ್ಲಿ ಇರುವ ಆಕ್ಷೇಪಗಳ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದ್ದು, ಸಲಹೆ ನೀಡುವಂತೆ ಕೇಳಿಕೊಂಡಿದ್ದೇವೆ. ಜನರ ಭಾವನೆಗಳ ಜೊತೆ ಆಟವಾಡಲು ಯಾರನ್ನು ಬಿಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಬಿಡುಗಡೆಗೂ ಮುನ್ನ ಭಾರೀ ವಿವಾದಗಳನ್ನು ಸೃಷ್ಟಿಸಿರುವ ಪದ್ಮಾವತಿ ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಹಾಗೂ ರಾಣಿ ಪದ್ಮಾವತಿ ನಡುವೆ ರೊಮ್ಯಾಂಟಿಕ್ ಸೀನ್‍ಗಳಿವೆ ಎಂದು ಆರೋಪಿಸಿ ಚಿತ್ರದ ಬಿಡುಗಡೆಗೆ ರಾಜಪುತ ಸಂಘಟನೆಗಳು ಪ್ರತಿಭಟಿಸಿದ್ದವು.

    ರಾಜಪೂತ ಕರ್ನಿಸೇನಾ ಸಂಘಟನೆಯ ನಾಯಕರು ಸಹ ಚಿತ್ರ ಬಿಡುಗಡೆ ಕುರಿತು ನಿರ್ದೇಶಕರಿಗೆ ಬೆದರಿಕೆ ಹಾಕಿದ್ದರು. ಆರಂಭದಲ್ಲಿ ಚಿತ್ರೀಕರಣದ ವೇಳೆ ರಜಪೂತ್ ಕರ್ಣಿ ಸೇನಾದ ಸದಸ್ಯನೋರ್ವ ಬನ್ಸಾಲಿ ಅವರ ಕಪಾಳಕ್ಕೆ ಹೊಡೆದಿದ್ದನು. ಇನ್ನೂ ಮಹಾರಾಷ್ಟ್ರದ ಕೋಲಾಪುರದಲ್ಲಿ ಚಿತ್ರೀಕರಣದ ಸೆಟ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಘಟನೆ ವೇಳೆ ಯಾರಿಗೂ ಯಾವುದೇ ಅಪಾಯವಾಗಿರಲಿಲ್ಲ.

     

    ಹರ್ಯಾಣದ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಸೂರಜ್ ಪಾಲ್ ಅಮು, ಪದ್ಮಾವತಿ ಚಿತ್ರದ ನಟಿ ದೀಪಿಕಾ ಅವರ ಹಾಗೂ ನಿರ್ದೇಶಕ ಬನ್ಸಾಲಿ ಅವರ ಶಿರಚ್ಛೇದ ಮಾಡಿವರಿಗೆ 10 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು. ಅಲ್ಲದೇ ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರವನ್ನು ಮಾಡಿರುವ ರಣವೀರ್ ಸಿಂಗ್ ರ ಕಾಲು ಮುರಿಯುತ್ತೇವೆ ಎಂದು ಬೆದರಿಕೆ ಹಾಕಿದ್ದರು.

    ಬಿಜೆಪಿ ಆಡಳಿತ ಇರುವ ರಾಜಸ್ಥಾನ, ಮಧ್ಯಪ್ರದೇಶ ಜೊತೆ ಕಾಂಗ್ರೆಸ್ ಆಡಳಿತ ಇರುವ ಪಂಜಾಬ್ ಸರ್ಕಾರ ಪದ್ಮಾವತಿಯನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿವೆ.

     

     

     

     

    https://twitter.com/deepikapadukone/status/910668862336544768

    https://twitter.com/deepikapadukone/status/910673498376364033

  • ಮದುವೆ ಮಂಟಪಕ್ಕೆ ಹೆಲಿಕಾಪ್ಟರ್ ಏರಿ ಬಂದ ಮದುಮಗ!

    ಮದುವೆ ಮಂಟಪಕ್ಕೆ ಹೆಲಿಕಾಪ್ಟರ್ ಏರಿ ಬಂದ ಮದುಮಗ!

    ಲಕ್ನೋ: ಮದುವೆಯಾಗುವ ವೇಳೆ ವರ ಕುದುರೆ, ಬೈಕ್ ಅಥವಾ ಐಶಾರಾಮಿ ಕಾರುಗಳಲ್ಲಿ ಬರುವುನ್ನು ನೋಡಿರುತ್ತಿರಿ ಆದರೆ ಇಲ್ಲೊಬ್ಬ ವರ ತನ್ನ ಮದುವೆ ನಡೆಯುವ ಕಲ್ಯಾಣ ಮಂಟಪಕ್ಕೆ ಹೆಲಿಕಾಪ್ಟರ್ ಏರಿ ಬಂದಿದ್ದಾರೆ.

    ಮೂಲತಃ ರಾಜಸ್ಥಾನದ ಜೈಪುರದ ನಿವಾಸಿಯಾಗಿರುವ ಶಾರೂಖ್ ಖಾನ್ ಎಂಬ ಮದುಮಗನನೇ ತನ್ನ ಮದುವೆಗೆ ಹೆಲಿಪಾಪ್ಟರ್ ಏರಿ ಬಂದಿದ್ದು, ಉತ್ತರಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ.

    ಇದನ್ನೂ ಓದಿ: ಮದುವೆ ದಿನ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟ ವಧು- ಫೋಟೋ ವೈರಲ್

    ಈ ಕುರಿತು ಮಾತನಾಡಿರುವ ಶಾರುಕ್ ಖಾನ್ ತನಗೇ ಚಿಕ್ಕವನಿಂದಾಗಿನಿಂದಲೂ ಮದುವೆಯಾಗುವಾಗ ಹೆಲಿಕಾಪ್ಟರ್‍ನಲ್ಲಿ ಬರಬೇಕು ಎಂದು ಕನಸು ಕಂಡಿದ್ದೆ. ಆದರಂತೆ ಇಂದು ಹೆಲಿಪಾಪ್ಟರ್‍ನಲ್ಲಿ ಬಂದಿದ್ದೇನೆ, ನನ್ನ ಕನಸು ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ವರ ಶಾರುಕ್ ಖಾನ್ ಹಿರಿಯ ಸಹೋದರನ ಮದುವೆ ಸಮಾರಂಭದಲ್ಲಿ ಇದೇ ರೀತಿ ಬರಲು ಪ್ಲಾನ್ ಮಾಡಿದರಂತೆ, ಆದರೆ ಅಧಿಕಾರಿಗಳಿಂದ ಅನುಮತಿ ಪಡೆಯಲು ಸಾಧ್ಯವಾಗದೆ ಅದನ್ನು ಕೈಬಿಟ್ಟಿದ್ದೇವು ಎಂದು ಹೇಳಿದ್ದಾರೆ.

    ಭಾವಿ ಪತಿ ಕನಸು ಕುರಿತು ಮಾತನಾಡಿದ ವಧು, ಗಂಡನ ಕನಸು ನನಸಾಗಿದ್ದು, ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.

     

    https://www.youtube.com/watch?v=E6REmaOxs30

  • ಮಹಿಳಾ ಡ್ಯಾನ್ಸರ್ ಮೇಲೆ ನೋಟಿನ ಸುರಿಮಳೆಗೈದ ಪೊಲೀಸ್ ಪೇದೆ ಅಮಾನತು- ವಿಡಿಯೋ ವೈರಲ್

    ಮಹಿಳಾ ಡ್ಯಾನ್ಸರ್ ಮೇಲೆ ನೋಟಿನ ಸುರಿಮಳೆಗೈದ ಪೊಲೀಸ್ ಪೇದೆ ಅಮಾನತು- ವಿಡಿಯೋ ವೈರಲ್

    ಲಕ್ನೋ: ಸಾರ್ವಜನಿಕ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಮಹಿಳಾ ಡ್ಯಾನ್ಸರ್ ಮೇಲೆ ಪೊಲೀಸ್ ಪೇದೆಯೊಬ್ಬ ಹಣ ತೂರಿರುವ ಘಟನೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿದೆ.

    ನವೆಂಬರ್ 13 ರಂದು ಈ ಘಟನೆ ನಡೆದಿದ್ದು, ಬುಧವಾರ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಲಾಗಿತ್ತು. ಇದೀಗ ಈ ವಿಡಿಯೋ ಹೆಚ್ಚು ವೈರಲ್ ಆಗಿದೆ.

    ವಿಡಿಯೋದಲ್ಲಿ ಇರುವ ಪೊಲೀಸ್ ಪೇದೆ ಉತ್ತರ ಪ್ರದೇಶದ ಧನೇಪೂರ್ ಪ್ರದೇಶದಲ್ಲಿ ಸೇವೆಗೆ ನಿಯೋಜನೆ ಗೊಂಡಿರುವ ಚಂದ್ರಶೇಖರ್ ಬಾಸ್ಕರ್ ಎಂದು ತಿಳಿದು ಬಂದಿದೆ.

    ಮಹಿಳಾ ಡ್ಯಾನ್ಸರ್ ಮೇಲೆ ಹಣ ತೂರಿದ ಪೊಲೀಸ್ ಪೇದೆ ಚಂದ್ರಶೇಖರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಗೊಂಡಾ ಎಸ್ಪಿ ಉಮೇಶ್ ಕುಮಾರ್ ಪೇದೆಯನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದ್ದಾರೆ.

    ವಿಡಿಯೋದಲ್ಲೇನಿದೆ: ಪೊಲೀಸ್ ಪೇದೆ ಚಂದ್ರಶೇಖರ್ ಸಮವಸ್ತ್ರ ಧರಿಸಿ ಮಹಿಳಾ ಡ್ಯಾನ್ಸರ್ ಮೇಲೆ ನೋಟಿನ ಸುರಿಮಳೆ ಮಾಡಿದ್ದಾರೆ. ಪೇದೆ ಸುರಿದ ನೋಟುಗಳನ್ನು ಪಕ್ಕದಲ್ಲೇ ವ್ಯಕ್ತಿಯೊಬ್ಬರು ತೆಗೆದುಕೊಳ್ಳುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

  • ರಣಜಿ ವೇಳೆ ಕ್ರಿಕೆಟ್ ಮೈದಾನಕ್ಕೆ ದಿಢೀರ್ ಎಂಟ್ರಿ ಕೊಟ್ಟ ವ್ಯಾಗನ್ ಆರ್ ಕಾರು

    ರಣಜಿ ವೇಳೆ ಕ್ರಿಕೆಟ್ ಮೈದಾನಕ್ಕೆ ದಿಢೀರ್ ಎಂಟ್ರಿ ಕೊಟ್ಟ ವ್ಯಾಗನ್ ಆರ್ ಕಾರು

    ನವದೆಹಲಿ: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ರಣಜಿ ಪಂದ್ಯ ನಡೆಯುವ ವೇಳೆ ಮೈದಾನದಲ್ಲಿ ಕಾರು ಚಾಲನೆ ಮಾಡಿರುವ ಘಟನೆ ದೆಹಲಿಯ ಏರ್ ಫೋರ್ಸ್ ಕ್ರೀಡಾಂಗಣದಲ್ಲಿ ನಡೆದಿದೆ.

    ದೆಹಲಿ ಹಾಗೂ ಉತ್ತರ ಪ್ರದೇಶದ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದ ಮೂರನೇ ದಿನದಾಟದ ವೇಳೆ ಘಟನೆ ಸಂಭವಿಸಿದ್ದು, ಸಂಜೆ ಸುಮಾರು 4.40 ಸಮಯದಲ್ಲಿ ವ್ಯಾಗನ್ ಆರ್ ಕಾರು ಇದಕ್ಕಿದ್ದಂತೆ ಮೈದಾನವನ್ನು ಪ್ರವೇಶಿಸಿ ಆಟಗಾರರಲ್ಲಿ ಅತಂಕವನ್ನು ಸೃಷ್ಟಿಸಿತ್ತು. ಈ ವೇಳೆ ಟೀಂ ಇಂಡಿಯಾದ ಅಂತರಾಷ್ಟ್ರೀಯ ಆಟಗಾರರಾದ ಗೌತಮ್ ಗಂಭೀರ್, ಇಶಾಂತ್ ಶರ್ಮಾ, ರಿಷಬ್ ಪಂತ್ ಮೈದಾನದಲ್ಲಿದ್ದರು.

    ಕುಡಿದು ಮೈದಾನಕ್ಕೆ ಕಾರು ನುಗ್ಗಿಸಿದ ವ್ಯಕ್ತಿ ಗಿರೀಶ್ ಶರ್ಮಾ ಎಂದು ತಿಳಿದು ಬಂದಿದ್ದು, ಸದ್ಯ ಏರ್ ಫೋರ್ಸ್ ಕ್ರೀಡಾಂಗಣದ ಭದ್ರತಾ ಸಿಬ್ಬಂದಿ ಈತನನ್ನು ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

    ಕ್ರೀಡಾಂಗಣದ ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದ್ದು, ಕ್ರೀಡಾಂಗಣಕ್ಕೆ ಕಾರು ಪ್ರವೇಶಿಸಬೇಕಾದರೆ ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಲಾಗುತ್ತದೆ. ಆದರೆ ಕುಡಿದು ಚಾಲನೆ ಮಾಡುತ್ತಿದ್ದ ಗಿರೀಶ್ ಶರ್ಮಾ ಕಾರನ್ನು ಪರಿಶೀಲನೆ ನಡೆಸಿರಲಿಲ್ಲ. ಈ ವೇಳೆ ಪಾರ್ಕಿಂಗ್‍ಗೆ ತೆರಳಬೇಕಿದ್ದ ಕಾರು ನೇರ ಮೈದಾನವನ್ನು ಪ್ರವೇಶಿಸಿದೆ.

    ಮೂರನೇ ದಿನದಾಟದ ಅಂತ್ಯದ ವೇಳೆಗೆ ಸುರೇಶ್ ರೈನಾ ನಾಯಕತ್ವದ ಉತ್ತರ ಪ್ರದೇಶ ತಂಡ ಎರಡನೇ ಇನಿಂಗ್ಸ್ ನಲ್ಲಿ 224 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದ್ದು, 246 ರನ್ ಗಳ ಮುನ್ನಡೆ ಸಾಧಿಸಿದೆ. ಉತ್ತರ ಪ್ರದೇಶ ಪರ ಅಕ್ಷ ದೀಪ್ ನಾಥ್ ಔಟಗಾದೆ 110 ರನ್ ಗಳಿಸಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ಉತ್ತರ ಪ್ರದೇಶ 291 ರನ್ ಗಳಿಸಿತ್ತು.

    ಇನ್ನುಳಿದಂತೆ ದೆಹಲಿ ತಂಡವು ಮೊದಲ ಇನಿಂಗ್ಸ್‍ ನಲ್ಲಿ ಧ್ರುವ ಶೊರೆ(98) ಗಂಭೀರ್(86) ಆಟದ ನೆರವಿನಿಂದ 269 ರನ್ ಗಳಿಸಿತ್ತು.

  • ಬಿಸ್ಕೆಟ್ ತಿಂದು 100 ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

    ಬಿಸ್ಕೆಟ್ ತಿಂದು 100 ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

    ಲಕ್ನೋ: ಶಾಲೆಯಲ್ಲಿ ಬಿಸ್ಕೆಟ್ ತಿಂದು ಸುಮಾರು 100 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಜಿಲ್ಲೆಯ ಉತ್ತರ ಪ್ರದೇಶದ ರಾಯಾ ಪ್ರದೇಶದಲ್ಲಿ ಬುಧವಾರ ನಡೆದಿದೆ.

    ಅಸ್ವಸ್ಥಗೊಂಡ ಮಕ್ಕಳು ರಾಯಾ ಪ್ರದೇಶದ ದೀನ್‍ದಯಾಳ್ ಸರ್ಕಾರಿ ವಸತಿ ಶಾಲೆಗೆ ಸೇರಿದವರಾಗಿದ್ದು, ಬುಧವಾರ ಸಂಜೆ ಮಕ್ಕಳಿಗೆ ಬಿಸ್ಕೆಟ್ ನೀಡಲಾಗಿದೆ. ಮಕ್ಕಳು ಬಿಸ್ಕೆಟ್ ತಿಂದು ಕೆಲವೇ ನಿಮಿಷಗಳಲ್ಲಿ ಮಕ್ಕಳಿಗೆ ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ. ತಕ್ಷಣ ಮಕ್ಕಳನ್ನು ಸಮೀಪದ ಆಸ್ಪತ್ರೆಗೆ ಶಾಲಾ ಸಿಬ್ಬಂದಿ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆಸ್ಪತ್ರೆಗೆ ದಾಖಲಾಗಿರುವ ಎಲ್ಲಾ ಮಕ್ಕಳೂ 10-14 ವರ್ಷದೊಳಗಿನವರಾಗಿದ್ದು, 100 ಮಕ್ಕಳ ಪೈಕಿ 45 ಮಕ್ಕಳ ಸ್ಥಿತಿ ಗಂಭೀರವಾಗಿದೆ. ಇನ್ನುಳಿದ 55 ಮಕ್ಕಳನ್ನು ಪರೀಕ್ಷಿಸಲಾಗುತ್ತಿದೆ ಎಂದು ವೈದ್ಯಕೀಯ ಅಧಿಕಾರಿ ಸತೀಶ್ ಸಿಂಗ್ ಅವರು ಹೇಳಿದ್ದಾರೆ.

    ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದು ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಈ ಘಟನೆಗೆ ಖಚಿತ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ ಎಂದು ಜಿಲ್ಲಾಧಿಕಾರಿ ವಿಶಾಕ್ ಜಿ ಹೇಳಿದ್ದಾರೆ.

  • ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಪತ್ನಿಯ ಗುಪ್ತಾಂಗಕ್ಕೆ ಆಸಿಡ್ ಹಾಕ್ದ!

    ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಪತ್ನಿಯ ಗುಪ್ತಾಂಗಕ್ಕೆ ಆಸಿಡ್ ಹಾಕ್ದ!

    ಲಕ್ನೋ: ಪತ್ನಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದಕ್ಕೆ ಕೋಪಗೊಂಡ ಪತಿ ಆಕೆಯ ಗುಪ್ತಾಂಗದ ಮೇಲೆ ಆಸಿಡ್ ಎರಚಿರುವ ಹೀನಾಯ ಕೃತ್ಯ ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ನಡೆದಿದೆ.

    ಪತಿ ಲೈಂಗಿಕ ಕ್ರಿಯೆಗೆ ಪತ್ನಿಯನ್ನು ಕರೆದಿದ್ದಾನೆ. ಆದರೆ ಹೆಂಡತಿ ನಿರಾಕರಿಸಿದ್ದಾರೆ. ಮತ್ತೆ ಆರೋಪಿ ಗಂಡ ಆಕೆಯನ್ನು ಬಲವಂತಪಡಿದ್ದಾನೆ. ಆದರೆ ಇದ್ಯಾವುದಕ್ಕೂ ಒಪ್ಪದ ಪತ್ನಿಯ ಮೇಲೆ ಆಕ್ರೋಶಗೊಂಡು ಆಕೆಯ ಗುಪ್ತಾಂಗದ ಮೇಲೆ ಆಸಿಡ್ ಎರಚಿದ್ದಾನೆ. ನಂತರ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಾಗಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ.

    ಮೂಲತಃ ಕೊಟ್ವಾಲಿ ಜಿಲ್ಲೆಯ ಬೆಹ್ರಿನ್ ಗ್ರಾಮದ ಸಂತ್ರಸ್ತೆ ಕಳೆದ 6 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಈ ದಂಪತಿಯ ಮಧ್ಯೆ ಆಗಾಗ ಕೌಟುಂಬಿಕ ಕಲಹಗಳು ನಡೆಯುತ್ತಿತ್ತು.

    ಸಂತ್ರಸ್ತೆಯ ಕುಟುಂಬಸ್ಥರಿಗೆ ನೆರೆಹೊರೆಯವರು ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ತಕ್ಷಣ ಕುಟುಂಸ್ಥರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂತ್ರಸ್ತೆಯ ತಂದೆ ಆರೋಪಿ ಮತ್ತು ಇತರೆ ಮೂವರು ಜನರ ಮೇಲೆ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದೇವೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೊಬ್ಬ ಆರೋಪಿಯನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

  • RSS ಕಾರ್ಯಕರ್ತನನ್ನು ಗುಂಡಿಕ್ಕಿ ಕೊಲೆಗೈದ ದುಷ್ಕರ್ಮಿಗಳು

    RSS ಕಾರ್ಯಕರ್ತನನ್ನು ಗುಂಡಿಕ್ಕಿ ಕೊಲೆಗೈದ ದುಷ್ಕರ್ಮಿಗಳು

    ಲಕ್ನೋ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರೊಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆಗೈದಿರುವ ಘಟನೆ ಉತ್ತರಪ್ರದೇಶದ ಘಾಜಿಪುರ ಜಿಲ್ಲೆಯ ಕರಂದಾ ಎಂಬಲ್ಲಿ ನಡೆದಿದೆ.

    ರಾಜೇಶ್ ಮಿಶ್ರಾ ಕೊಲೆಯಾದ ಆರ್‍ಎಸ್‍ಎಸ್ ಕಾರ್ಯಕರ್ತ. ರಾಜೇಶ್ ಪತ್ರಕರ್ತರೂ ಆಗಿದ್ದು, ಕರಂದ ಪಟ್ಟಣದಲ್ಲಿ ಸಣ್ಣದಾದ ದಿನಸಿ ಅಂಗಡಿಯನ್ನು ಹೊಂದಿದ್ದರು. ಮುಖವನ್ನು ಮುಚ್ಚಿಕೊಂಡು ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಾಜೇಶ್‍ಗೆ ಹತ್ತಿರದಿಂದಲೇ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಈ ವೇಳೆ ರಾಜೇಶ್ ಪಕ್ಕದಲ್ಲಿದ್ದ ಅವರ ಸಹೋದರ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗುಂಡು ಬಿದ್ದ ತಕ್ಷಣವೇ ರಾಜೇಶ್ ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

    ರಾಜೇಶ್ ಈ ಪ್ರದೇಶದಲ್ಲಿ ಆರ್‍ಎಸ್‍ಎಸ್ ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಳೆದ ವಾರವಷ್ಟೇ ಪಂಜಾಬ್‍ನ ಲೂಧಿಯಾನದಲ್ಲಿ ಆರ್‍ಎಸ್‍ಎಸ್ ಮುಖ್ಯ ಶಿಕ್ಷಕ ರವೀಂದರ್ ಗೋಸಿಯಾನ್ ಎಂಬವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆಗೈದಿದ್ದರು. ರವೀಂದರ್ ಹತ್ಯೆಯ ಪ್ರಕರಣವನ್ನ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ತನಿಖೆ ಮಾಡುತ್ತಿದೆ.

  • ಭಾರತೀಯ ಕಾರ್ಮಿಕರು ರಕ್ತ ಮತ್ತು ಬೆವರು ಹರಿಸಿ ತಾಜ್ ಮಹಲ್ ಕಟ್ಟಿದ್ದಾರೆ: ಯೋಗಿ ಆದಿತ್ಯನಾಥ್

    ಭಾರತೀಯ ಕಾರ್ಮಿಕರು ರಕ್ತ ಮತ್ತು ಬೆವರು ಹರಿಸಿ ತಾಜ್ ಮಹಲ್ ಕಟ್ಟಿದ್ದಾರೆ: ಯೋಗಿ ಆದಿತ್ಯನಾಥ್

    ಲಕ್ನೋ: ತಾಜ್ ಮಹಲ್ ಅನ್ನು ಭಾರತೀಯ ಕಾರ್ಮಿಕರು ರಕ್ತ ಮತ್ತು ಬೆವರು ಹರಿಸಿ ಕಟ್ಟಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಉತ್ತರ ಪ್ರದೇಶ ಬಿಜೆಪಿ ಶಾಸಕ ಸಂಗೀತ್ ಸೋಮ್ ಭಾರತೀಯ ಸಂಸ್ಕೃತಿಯಲ್ಲಿ ತಾಜ್ ಮಹಲ್ ಒಂದು ಕಪ್ಪು ಚುಕ್ಕೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.

    ತಾಜ್ ಮಹಲ್ ಯಾರು ಕಟ್ಟಿಸಿದ್ದು, ಯಾಕೆ ಕಟ್ಟಿಸಿದ್ದು ಎನ್ನುವುದು ಮುಖ್ಯವಲ್ಲ. ಆದರೆ ಈ ಶ್ರಮದ ಹಿಂದೆ ಭಾರತ ಮಾತೆಯ ಪುತ್ರರಿದ್ದಾರೆ ಎಂದು ತಿಳಿಸುವ ಮೂಲಕ ವಿವಾದವನ್ನು ತಣ್ಣಗೆ ಮಾಡಲು ಮುಂದಾಗಿದ್ದಾರೆ.

    ಯೋಗಿ ಆದಿತ್ಯನಾಥ್ ಅವರು ಅಕ್ಟೋಬರ್ 25ರಂದು ಆಗ್ರಾಕ್ಕೆ ಭೇಟಿ ನೀಡಲಿದ್ದು, ಆ ಸಂದರ್ಭ ತಾಜ್ ಮಹಲ್ ಸೇರಿ ಇತರ ಸ್ಮಾರಕಗಳಿಗೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಮಾಧ್ಯಗಳು ವರದಿ ಮಾಡಿವೆ.

    ಪ್ರವಾಸೋದ್ಯಮದ ನಿಟ್ಟಿನಲ್ಲಿ ತಾಜ್ ಮಹಲ್ ಒಂದು ಪ್ರಮುಖ ಸ್ಮಾರಕವಾಗಿದ್ದು, ಇದನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯ ನೀಡಿ ಭದ್ರತೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.

    ಇದನ್ನೂ ಓದಿ: ತಾಜ್‍ಮಹಲ್ ಜೊತೆ ಗುಲಾಮಗಿರಿಯ ಸಂಕೇತವಾಗಿರೋ ರಾಷ್ಟ್ರಪತಿ ಭವನವನ್ನು ಕೆಡವಿ: ಅಜಂ ಖಾನ್

  • ಕೇಂದ್ರ, ರಾಜ್ಯ ಸರ್ಕಾರಗಳಿಗೆ ಗಂಗಾ ನದಿ ಸ್ಪಚ್ಛತೆಯ ವರದಿ ಕೇಳಿದ ಎನ್‍ಜಿಟಿ

    ಕೇಂದ್ರ, ರಾಜ್ಯ ಸರ್ಕಾರಗಳಿಗೆ ಗಂಗಾ ನದಿ ಸ್ಪಚ್ಛತೆಯ ವರದಿ ಕೇಳಿದ ಎನ್‍ಜಿಟಿ

    ನವದೆಹಲಿ: ಮೋದಿ ನೇತೃತ್ವದ ಕೇಂದ್ರ ಹಾಗೂ ಉತ್ತರ ಪ್ರದೇಶ ಯೋಗಿ ಸರ್ಕಾರವನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠವು ಗಂಗಾ ನದಿ ಸ್ಪಚ್ಛತೆಯನ್ನು ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿಯನ್ನು ಕೇಳಿದೆ.

    ಈ ಹಿಂದೆ ಎನ್‍ಜಿಟಿ ಕೇಂದ್ರಕ್ಕೆ ಗಂಗಾ ನದಿಯ ಗೋಮುಖ ದಿಂದ ಉನ್ನೋ ಪ್ರದೇಶದ ಸ್ಪಚ್ಛತ ಕಾರ್ಯವನ್ನು ಕೈಗೊಳ್ಳಲು ಸೂಚನೆಯನ್ನು ನೀಡಿತ್ತು. ಗಂಗಾ ನದಿಯ ಹರಿಯುವ ಪ್ರದೇಶದ ಸುತ್ತಲಿನ 100 ಮೀ ಅಂತರವನ್ನು ಹಸಿರು ಪೀಠವು `ನೋ ಡೆವಲಪ್‍ಮೆಂಟ್ ಜೋನ್’ ಎಂದು ಘೋಷಣೆ ಮಾಡಿತ್ತು. ಅಲ್ಲದೇ ನದಿಯ ದಡಗಳಲ್ಲಿ 500 ಮೀ ಒಳಗೆ ಯಾವುದೇ ರೀತಿಯ ಕಸವನ್ನು ಎಸೆದಂತೆ ಸೂಚನೆಯನ್ನು ನೀಡಿತ್ತು.

    ಎನ್‍ಜಿಟಿಯ ನ್ಯಾಯಪೀಠದ ಅಧ್ಯಕ್ಷ ನ್ಯಾ. ಸ್ವತಂತರ್ ಕುಮಾರ್ ಗಂಗಾ ನದಿಯ ಉತ್ತರ ಪ್ರದೇಶದಿಂದ ಕಾನ್ಪುರ ವರೆಗಿನ ಫೇಸ್-2 ಸ್ಪಚ್ಛತಾ ಯೋಜನೆ ಆರಂಭಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿವಂತೆ ತಿಳಿಸಿದ್ದಾರೆ.

    ಗಂಗಾ ನದಿ ಸ್ಪಚ್ಛತೆಯ ಕುರಿತು ನ್ಯಾಯಧೀಕರಣ ನೀಡಿರುವ ಸೂಚನೆಗಳ ಮೇಲೆ ಆರಂಭಿಸಲಾಗಿರುವ ಯೋಜನೆಗಳು ಪೂರ್ಣಗೊಂಡಿಲ್ಲ. ಈ ಕುರಿತ ವರದಿಗಳನ್ನು ಉತ್ತರಾಖಂಡ ಹಾಗೂ ಉತ್ತರ ಪ್ರದೇಶ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ನೀಡಬೇಕು ಎಂದು ನ್ಯಾಯ ಪೀಠ ಸೂಚಿಸಿದೆ.

    ಅಲ್ಲದೇ ನ್ಯಾಯಧಿಕರಣದ ನೀಡಿರುವ ನಿರ್ದೇಶಗಳ ಪ್ರತಿಯನ್ನು ಕೇಂದ್ರದ ಗಂಗಾ ನದಿಯ ಸ್ಪಚ್ಛತಾ ಸಮಿತಿಯ ಕಾರ್ಯದರ್ಶಿ ಹಾಗೂ ರಾಜ್ಯ ಸರ್ಕಾರದ ಜಲ ಸಂಪನ್ಮೂಲ ಸಚಿವಾಲಯ ಹಾಗೂ ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಇಲಾಖೆಗೆ ಈ ನಿರ್ದೇಶನಗಳನ್ನು ಕಳುಹಿಸಿಕೊಡಬೇಕು ಎಂದು ಪೀಠವು ಆದೇಶಿಸಿದೆ.

    ಅಕ್ಟೋಬರ್ 24 ರಂದು ಗಂಗಾ ನದಿ ಸ್ಪಚ್ಛತೆಯ ಕುರಿತು ನಡೆಯುವ ಮುಂದಿನ ವಿಚಾರಣೆಯ ಒಳಗೆ ಮಾಹಿತಿಯನ್ನು ನೀಡಬೇಕು ಎಂದು ಸೂಚಿಸಿದೆ.

    ನ್ಯಾಯ ಪೀಠವು ಈ ಹಿಂದೆ ನಡೆಸಿದ ವಿಚಾರಣೆ ಸಂದರ್ಭದಲ್ಲಿ ಸರ್ಕಾರವು ಸುಮಾರು 7 ಸಾವಿರ ಕೋಟಿ ರೂ.ಗಳನ್ನು ಎರಡು ವರ್ಷಗಲ್ಲಿ ಗಂಗಾ ನದಿಯ ಸ್ಪಚ್ಚತೆಗೆ ಖರ್ಚು ಮಾಡಿದ್ದಾಗಿ ಮಾಹಿತಿಯನ್ನು ನೀಡಿತ್ತು. ಆದರೆ ಇಂದಿಗೂ ಗಂಗಾ ನದಿಯ ದಡಗಳಲ್ಲಿ ಸ್ವಚ್ಛತೆ ಕಾಣುತ್ತಿಲ್ಲ.

    ನ್ಯಾಯ ಪೀಠವು ನೀಡುವ 543 ಪುಟಗಳ ಆದೇಶ ಪ್ರತಿಯಲ್ಲಿ ಉತ್ತರ ಪ್ರದೇಶದ ಹರಿದ್ವಾರ ದಿಂದ ಉನ್ನೋ ಪ್ರದೇಶದ ನದಿ ದಡಗಳ 100 ಮೀ ಪ್ರದೇಶದಲ್ಲಿ ಯಾವುದೇ ವಾಣಿಜ್ಯ ಹಾಗೂ ವಸತಿ ಕಟ್ಟಡಗಳನ್ನು ನಿರ್ಮಿಸದಂತೆ ನಿರ್ಬಂಧವನ್ನು ವಿಧಿಸಿದೆ. ಅಲ್ಲದೆ ನದಿಗೆ ಯಾವುದೇ ರೀತಿಯ ಕಟ್ಟಡ ತ್ಯಾಜ್ಯ, ಇ-ತ್ಯಾಜ್ಯ ಅಥವಾ ಜೈವಿಕ ವೈದ್ಯಕೀಯ ತ್ಯಾಜ್ಯಗಳನ್ನು ತಂದು ಸುರಿಯದಂತೆ ಸೂಚನೆಯನ್ನು ನೀಡಿದೆ.

    ಗಂಗಾ ನದಿಯಲ್ಲಿ ಯಂತ್ರಗಳ ಸಹಾಯ ಮಾಡುವ ಗಣಿಗಾರಿಕೆಯನ್ನು ನಿಷೇಧಿಸಿ ಆದೇಶವನ್ನು ನೀಡಿತ್ತು.

  • ಶಾಲೆಯ ಊಟದಲ್ಲಿ ಹಲ್ಲಿಯ ಬಾಲ ಪತ್ತೆ- 90 ಮಕ್ಕಳು ಆಸ್ಪತ್ರೆಗೆ ದಾಖಲು

    ಶಾಲೆಯ ಊಟದಲ್ಲಿ ಹಲ್ಲಿಯ ಬಾಲ ಪತ್ತೆ- 90 ಮಕ್ಕಳು ಆಸ್ಪತ್ರೆಗೆ ದಾಖಲು

    ಮಿರ್ಜಾಪುರ: ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ ಸುಮಾರು 90 ಶಾಲಾ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ನಡೆದಿದೆ.

    ಮಧ್ಯಾಹ್ನದ ಊಟ ಮಾಡಿದ ಬಳಿಕ ಮಕ್ಕಳಿಗೆ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ವಿದ್ಯಾಚಲ್ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

    ಸುಮಾರು 40 ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಬೇರೆ ಆಸ್ಪತ್ರೆಗೆ ರವಾನಿಸಿದ್ದೇವೆ. ಕೆಲವು ಮಕ್ಕಳು ಹೊಟ್ಟೆ ನೋವು ಹಾಗೂ ವಾಂತಿಯಾಗುತ್ತಿರುವುದನ್ನು ನಮಗೆ ತಿಳಿಸಿದರು. ನಂತರ ನಾವು ಊಟವನ್ನು ಪರೀಕ್ಷಿಸಿದಾಗ ಅದರಲ್ಲಿ ಹಲ್ಲಿಯ ಬಾಲ ಕಾಣಿಸಿಕೊಂಡಿದೆ ಎಂದು ಶಾಲೆಯ ಪ್ರಿನ್ಸಿಪಾಲ್ ಜೈ ಸಿಂಗ್ ತಿಳಿಸಿದ್ದಾರೆ.

    ಈ ಶಾಲೆ ವಿದ್ಯಾಚಲ್‍ನ ಪರ್ಷಿಯಾ ಧುವಾ ಗ್ರಾಮದಲ್ಲಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ವರದಿಯಾಗಿದೆ.