Tag: uttar pradesh

  • ನನ್ನ ಮಗನನ್ನ ನೋಡಿದ್ರಾ..?- ನಾಪತ್ತೆಯಾಗಿರೋ ಮಗನಿಗಾಗಿ ಹುಡುಕುತ್ತಾ 5 ತಿಂಗಳಿಂದ 1500 ಕಿ.ಮೀ ಸೈಕಲ್ ಓಡಿಸಿರೋ ತಂದೆ

    ನನ್ನ ಮಗನನ್ನ ನೋಡಿದ್ರಾ..?- ನಾಪತ್ತೆಯಾಗಿರೋ ಮಗನಿಗಾಗಿ ಹುಡುಕುತ್ತಾ 5 ತಿಂಗಳಿಂದ 1500 ಕಿ.ಮೀ ಸೈಕಲ್ ಓಡಿಸಿರೋ ತಂದೆ

    ಲಕ್ನೋ: ನಾಪತ್ತೆಯಾಗಿರುವ ಮಗನನ್ನು ಹುಡುಕುತ್ತಾ ತಂದೆಯೊಬ್ಬರು 5 ತಿಂಗಳಿಂದ ಸುಮಾರು 1500 ಕಿಮೀ ದೂರು ಸೈಕಲ್ ತುಳಿದಿರೋ ಮನಕಲಕುವ ಘಟನೆಯಯೊಂದು ವರದಿಯಾಗಿದೆ.

    ಮೂಲತಃ ಉತ್ತರ ಪ್ರದೇಶದ ಹಾತ್ರಾಸ್ ಜಿಲ್ಲೆಯ ನಿವಾಸಿಯಾಗಿರುವ 48 ವರ್ಷದ ಸತೀಶ್ ಚಂದಾ ಒಬ್ಬ ರೈತರಾಗಿದ್ದು, ಮಗನ ಹುಡುಕಾಟದಲ್ಲಿದ್ದಾರೆ. 6 ತಿಂಗಳ ಹಿಂದೆ ಇವರ 11 ವರ್ಷದ ಮಾನಸಿಕ ಅಸ್ವಸ್ಥ ಮಗ ನಾಪತ್ತೆಯಾಗಿದ್ದಾನೆ. ಅಂದಿನಿಂದಲು ಪೊಲೀಸರ ಸಹಾಯವನ್ನು ತೆಗೆದುಕೊಳ್ಳದೆ ಸೈಕಲ್ ತುಳಿಯುತ್ತ ಊರೂರು ಅಲೆಯುತ್ತಾ ಮಗನಿಗಾಗಿ ಹುಡುಕುತ್ತಿದ್ದಾರೆ.

    ಶಾಲೆಗೆ ಹೋದವನು ವಾಪಸ್ ಬರಲಿಲ್ಲ: ಚಂದಾ ಅವರು ಈಗಾಗಲೇ ದೆಹಲಿ ಮತ್ತು ಹರಿಯಾಣ ದಲ್ಲಿ ಹುಡುಕಾಡಿ ಈಗ ಆಗ್ರಾ ಸಮೀಪದ ಎಟ್ಮಾದ್ಪುರ ತಲುಪಿದ್ದಾರೆ. ನಾನು ಹತ್ರಾಸ್ ಜಿಲ್ಲೆಯ ದ್ವಾರಿಕಾಪುರ್ ಗ್ರಾಮದವನು, ಜೂನ್ 24 ರಂದು ನನ್ನ ಮಗ ಗೋದ್ನಾ ಶಾಲೆಗೆಂದು ಮನೆಯಿಂದ ಹೋಗಿ ಮತ್ತೆ ಸಂಜೆ ಮನೆಗೆ ವಾಪಸ್ ಬರಲಿಲ್ಲ. ಶಾಲೆಯಲ್ಲಿ ಸ್ನೇಹಿತರ ಬಳಿ ವಿಚಾರಿಸಿದಾಗ ಕೆಲವರು ಸಸ್ನಿ ರೈಲ್ವೇ ನಿಲ್ದಾಣದ ಬಳಿ ನೋಡಿದೆವು ಎಂದು ಹೇಳಿದರು. ಅಲ್ಲಿಗೂ ಹೋಗಿ ಹುಡುಕಾಡಿದೆವು. ಆದರೆ ಅಲ್ಲೂ ಸಿಗಲಿಲ್ಲ ಎಂದರು.

    ಕೊನೆಗೆ ನಾಲ್ಕು ದಿನ ಕಾದು ಜೂನ್ 28 ರಂದು ಪೊಲೀಸರಿಗೆ ದೂರು ನೀಡಿದೆ. ಆದರೆ ಅವರು ದೂರು ದಾಖಲಿಸಲು ನಿರಾಕರಿಸಿದರು. ನಾನು ಮತ್ತೆ ಮತ್ತೆ ಮನವಿ ಮಾಡಿದಾಗ ದೂರಿನ ಪ್ರತಿ ಮೇಲೆ ಸ್ಟ್ಯಾಂಪ್ ಒತ್ತಿ, ಸರಿ ಹೋಗು ಎಂದರು. ಬಳಿಕ ನಾನೇ ಸೈಕಲ್ ತೆಗೆದುಕೊಂಡು ಮಗನಿಗಾಗಿ ಹುಡುಕಾಟ ಆರಂಭಿಸಿದೆ. ನನ್ನಲ್ಲಿ ಹಣವಿಲ್ಲ, ಅಧಿಕಾರ ಇಲ್ಲ, ನನಗೆ ಯಾರು ಸಹಾಯ ಮಾಡುತ್ತಾರೆ? ಎಂದು ಸತೀಶ್ ಚಂದ್ ಅಲವತ್ತುಕೊಂಡಿದ್ದಾರೆ.

    ನನ್ನ ಮಗನನ್ನು ನೋಡಿದ್ರಾ?: ಇಲ್ಲಿವರೆಗೂ ದೆಹಲಿ, ಕಾನ್ಪುರ, ರೆವತಿ, ಹರಿಯಾಣ ಸೇರಿದಂತೆ ಸುಮಾರು 1,500 ಕಿ.ಮೀ ದೂರವನ್ನು ಸೈಕಲ್ ಮೂಲಕ ಕ್ರಮಿಸಿದ್ದಾರೆ. 100 ಗ್ರಾಮಗಳಿಗೆ ತಲುಪಿ ಸಾವಿರಾರು ಜನರಿಗೆ ಮಗನ ಫೋಟೋ ತೋರಿಸಿ, ನಮ್ಮ ಹುಡುಗನನ್ನ ನೋಡಿದ್ರಾ? ಎಂದು ಕೇಳುತ್ತಾ ಹುಡುಕುತ್ತಿದ್ದಾರೆ. ಪ್ರಸ್ತುತ ಎತ್‍ಮದ್‍ಪುರದ ಬ್ರಹ್ಮನ್ ಗ್ರಾಮದಲ್ಲಿ ಇದ್ದಾರೆ. ಇವರ ಬಗ್ಗೆ ತಿಳಿದ ಆಗ್ರಾದ ಮಕ್ಕಳ ಹಕ್ಕುಗಳ ಕಾರ್ಯಕರ್ತ ನರೇಶ್ ಪರಸ್, ಉತ್ತರಪ್ರದೇಶ ಪೊಲೀಸರಿಗೆ ಟ್ವೀಟ್ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪೊಲೀಸರಷ್ಟೇ ಅಲ್ಲದೆ ಸಾರ್ವಜನಿಕರ ಕುಂದು ಕೊರತೆ ಆಲಿಸುವ ಮುಖ್ಯಮಂತ್ರಿಗಳ ಜನ್‍ಸುನ್ವಾಯಿ ಪೋರ್ಟಲ್‍ಗೂ ನರೇಶ್ ಪರಸ್ ಪೋಸ್ಟ್ ಮಾಡಿದ್ದಾರೆ.

    ಇಬ್ಬರು ಮಕ್ಕಳನ್ನ ಕಳೆದುಕೊಂಡಿದ್ದ ಪೋಷಕರು: ಸತೀಶ್ ಚಂದ್ ಪತ್ನಿ ಅರ್ಚನಾ ಕೂಡ ಮಗ ವಾಪಸ್ ಬರುತ್ತಾನೆಂಬ ಭರವಸೆಯಲ್ಲಿದ್ದಾರೆ. ಇವರ ಹಿರಿಯ ಮಗಳು ಸರಿತಾ 2005ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದು, ನಂತರ 2011ರಲ್ಲಿ 9 ವರ್ಷದ ಮಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಈಗ ಮತ್ತೋರ್ವ ಮಗನೂ ಕಾಣೆಯಾಗಿದ್ದು, ಪೋಷಕರಿಗೆ ದಿಕ್ಕು ತೋಚದಂತಾಗಿದೆ.

    ಇವರು ಸುತ್ತಾಡಿದ ಜಿಲ್ಲೆಗಳಲ್ಲಿ ವ್ಯಾಪಾರಿಗಳು, ಅಂಗಡಿ ಮಾಲೀಕರು, ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣದ ಹಲವರ ಫೋನ್ ನಂಬರ್ ತೆಗೆದುಕೊಂಡಿದ್ದಾರೆ. ನನ್ನ ಮಗ ಒಂದಲ್ಲಾ ಒಂದು ದಿನ ಸಿಕ್ಕರೆ ಅವರು ನಮಗೆ ವಿಷಯ ತಿಳಿಸುತ್ತಾರೆ ಅಂತ ನಂಬಿದ್ದಾರೆ.

  • ರಾಹುಲ್ ಜಯಗಳಿಸಿರೋ ಅಮೇಥಿ ಕಾಂಗ್ರೆಸ್ಸಿನ ಭದ್ರಕೋಟೆ ಯಾಕೆ?

    ರಾಹುಲ್ ಜಯಗಳಿಸಿರೋ ಅಮೇಥಿ ಕಾಂಗ್ರೆಸ್ಸಿನ ಭದ್ರಕೋಟೆ ಯಾಕೆ?

    ಲಕ್ನೋ: ಗುಜರಾತ್ ವಿಧಾನಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಪರಿಗಣಿತವಾದ ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿದೆ. ಆಡಳಿತರೂಢ ಬಿಜೆಪಿ ಎದುರು ಕಾಂಗ್ರೆಸ್ ಧೂಳೀಪಟವಾಗಿದೆ.

    ಕಾಂಗ್ರೆಸ್ ಮುಕ್ತ ಭಾರತಕ್ಕೆ ಹೊರಟಿರುವ ಬಿಜೆಪಿ, ಇದೀಗ ಕಾಂಗ್ರೆಸ್ಸಿನ ಭದ್ರಕೋಟೆ ಅಮೇಥಿಗೆ ಲಗ್ಗೆ ಇಟ್ಟಿದೆ. ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿ ನಗರ ಪಂಚಾಯ್ತಿಯ 16 ಕ್ಷೇತ್ರಗಳ ಪೈಕಿ, 14ರಲ್ಲಿ ಬಿಜೆಪಿ ಜಯ ಸಾಧಿಸಿ, ವಿಜಯೋತ್ಸವ ಆಚರಿಸಿದೆ.

    ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಮೇಥಿ ಯಾಗ ವಿಫಲವಾಗಿದ್ದು, ಬಿಜೆಪಿ ವಶವಾಗಿರೋದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಘಾತ ಮೂಡಿಸಿದೆ. ಅಮೇಥಿಯಲ್ಲದೆ, ಕಾಂಗ್ರೆಸ್ ಅಧ್ಯಕ್ಷೆ ಪ್ರತಿನಿಧಿಸುವ ರಾಯ್ ಬರೇಲಿ ಕ್ಷೇತ್ರದಲ್ಲೂ ಕಮಲ ಅರಳಿದೆ.

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಪ್ರತಿನಿಧಿಸುವ ಗೋರಖ್‍ಪುರದಲ್ಲಿಯೂ ಕೇಸರಿ ಪತಾಕೆ ಹಾರಿದೆ. ಮುಖ್ಯಮಂತ್ರಿಯಾದ ಮೊದಲ ವರ್ಷದಲ್ಲೇ ಯೋಗಿ ಆದಿತ್ಯಾನಾಥ್ ಗೆದ್ದಿದ್ದಾರೆ. ಬಿಜೆಪಿ ಮೊದಲ ಸ್ಥಾನದಲ್ಲಿದ್ರೆ ಬಿಎಸ್‍ಪಿ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಎಸ್ಪಿ ಇದೆ.

    ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸಿಎಂ ಯೋಗಿ ಆದಿತ್ಯನಾಥ್, ಇದು ಪ್ರಧಾನಿ ಮೋದಿ ಅಭಿವೃದ್ಧಿ ಕೆಲಸಗಳಿಗೆ ಸಿಕ್ಕ ಜಯ ಎಂದಿದ್ದಾರೆ. ಈ ಫಲಿತಾಂಶ ನೋಡಿದ್ರೆ ಗುಜರಾತ್ ಫಲಿತಾಂಶ ಊಹಿಸಬಹುದು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಕ್ಷೇತ್ರಗಳನ್ನ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

    ಅಮೇಥಿ ಭದ್ರಕೋಟೆ ಯಾಕೆ?ಅಮೇಥಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆಯೆಂದೇ ಪರಿಗಣಿಸಲಾಗಿದೆ. ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿಯಿಂದ ಹಿಡಿದು ಈಗಿನ ತಲೆಮಾರಿನ ರಾಹುಲ್ ಗಾಂಧಿವರೆಗೆ ರಾಜಕೀಯ ಪುರ್ನಜನ್ಮ ನೀಡಿದ ಕ್ಷೇತ್ರವೇ ಅಮೇಥಿ. ಜನತಾ ಪಾರ್ಟಿ ಹಾಗೂ ಬಿಜೆಪಿ ಒಂದೊಂದು ಬಾರಿ ಗೆದ್ದಿದ್ದು ಬಿಟ್ಟರೆ, ಕಾಂಗ್ರೆಸ್ ಹಿಡಿತದಲ್ಲೇ ಇರೋ ಲೋಕಸಭಾ ಕ್ಷೇತ್ರವೇ ಅಮೇಥಿ. (ಇದನ್ನೂ ಓದಿ:ಕಾಂಗ್ರೆಸ್‍ಗೆ ಮತ್ತೆ ಮತ್ತೆ ಸೋಲು: ಅಮೇಥಿಯಲ್ಲಿ ರಾಹುಲ್‍ಗೆ ಭಾರೀ ಮುಖಭಂಗ)

     

     

  • ಕಾಂಗ್ರೆಸ್‍ಗೆ ಮತ್ತೆ ಮತ್ತೆ ಸೋಲು: ಅಮೇಥಿಯಲ್ಲಿ ರಾಹುಲ್‍ಗೆ ಭಾರೀ ಮುಖಭಂಗ

    ಕಾಂಗ್ರೆಸ್‍ಗೆ ಮತ್ತೆ ಮತ್ತೆ ಸೋಲು: ಅಮೇಥಿಯಲ್ಲಿ ರಾಹುಲ್‍ಗೆ ಭಾರೀ ಮುಖಭಂಗ

    ಲಕ್ನೋ: ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಭಾರೀ ಮುಖಭಂಗವಾಗಿದ್ದು, 16 ಮೇಯರ್ ಸ್ಥಾನಗಳ ಪೈಕಿ 14 ಬಿಜೆಪಿ ಪಾಲಾಗಿದೆ.

    ಆಡಳಿತರೂಢ ಬಿಜೆಪಿಗೆ 14 ಸ್ಥಾನ ಸಿಕ್ಕಿದರೆ, ಅಚ್ಚರಿ ಫಲಿತಾಂಶ ಎಂಬಂತೆ ಬಹುಜನ ಸಮಾಜವಾದಿ ಪಕ್ಷ ಎರಡು ಸ್ಥಾನಗಳಲ್ಲಿ ಜಯಗಳಿಸಿದೆ. ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಖಾತೆ ತೆರೆಯಲು ವಿಫಲವಾಗಿದೆ.

    ಉತ್ತರ ಪ್ರದೇಶದ 652 ಸ್ಥಳೀಯ ಸಂಸ್ಥೆಗಳ ಚುನಾವಣೆ ನವೆಂಬರ್ 22, 26 ಮತ್ತು 29ರಂದು ಮೂರು ಹಂತಗಳಲ್ಲಿ ನಡೆದಿದ್ದು, ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಯಿತು. ಕಳೆದ 7 ತಿಂಗಳ ಯೋಗಿ ಸರ್ಕಾರದ ಆಡಳಿತಕ್ಕೆ ಜನರು ನೀಡಿದ ಜನಾದೇಶವೆಂದು ಈ ಫಲಿತಾಂಶವನ್ನು ಪರಿಗಣಿಸಲಾಗುತ್ತಿದೆ.

    ಇನ್ನು ಕಾಂಗ್ರೆಸ್ ಭದ್ರಕೋಟೆ ಎಂದು ಕರೆಯಲಾಗುತ್ತಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗೆ ಸೋಲಾಗಿದ್ದು, ಬಿಜೆಪಿ ಗೆಲುವು ಕಂಡಿದೆ.

    ಫಲಿತಾಂಶವನ್ನು ನೋಡಿ ಸಿಎಂ ಯೋಗಿ ಅದಿತ್ಯನಾಥ್ ಹರ್ಷ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ಅವರ ಅಭಿವೃದ್ಧಿ ಪರ ಯೋಜನೆಗಳು ಪಕ್ಷದ ಗೆಲುವುವಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಅವರನ್ನು ಟಾರ್ಗೆಟ್ ಮಾಡಿದ ಸಿಎಂ ಯೋಗಿ ಅದಿತ್ಯನಾಥ್ ಗುಜರಾತ್ ಚುನಾವಣೆಗಳ ಕುರಿತು ಮಾತನಾಡುತ್ತಿರುವವರು ಅಮೇಥಿಯಲ್ಲಿ ಖಾತೆ ತೆರೆಯಲು ವಿಫಲರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    ಉತ್ತರ ಪ್ರದೇಶದ ಚುನಾವಣೆಯಲ್ಲಿ ಸರ್ಕಾರ ಮಾಡಿರುವ ಸಾಧನೆಗೆ ಸಿಎಂ ಯೋಗಿ ಅದಿತ್ಯನಾಥ್ ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

    ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶ ಸ್ಥಳೀಯ ಚುನಾವಣೆಯಲ್ಲಿ ಗೆಲವು ಪಡೆಯಲು ಸಾಧ್ಯವಾಗಲಿಲ್ಲ. ಇನ್ನು ದೇಶದ ಲೋಕಸಭಾ ಚುನಾವಣೆಯಲ್ಲಿ ಹೇಗೆ ಗೆಲುವು ಪಡೆಯುತ್ತಾರೆ ಎಂದು 2014ರಲ್ಲಿ ಅಮೇಥಿಯಲ್ಲಿ ರಾಹುಲ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ  ಪ್ರಶ್ನಿಸಿದ್ದಾರೆ.

    ಅಮೇಥಿ, ವಾರಾಣಾಸಿ, ಗೋರಖ್‍ಪುರ, ಕಾನ್ಪುರ್, ಘಜಿಯಾಬಾದ್, ಅಲಹಾಬಾದ್, ಲಕ್ನೋ, ಫಿರೋಜಾಬಾದ್, ಅಯೋಧ್ಯಾ, ಮಥುರಾ, ಸಹರಾಣ್‍ಪುರ್ ಮತ್ತು ಮೊರಾದಾಬಾದ್‍ನಲ್ಲಿ ಬಿಜೆಪಿಯ ಮೇಯರ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಆಲಿಘಡ್‍ನಲ್ಲಿ ಬಿಎಸ್‍ಪಿ ಅಭ್ಯರ್ಥಿ ಗೆಲುವು ಪಡೆದಿದ್ದಾರೆ.

    ಸಿಎಂ ಯೋಗಿ ಅದಿತ್ಯನಾಥ್ ಕ್ಷೇತ್ರವಾದ ಗೋರಖ್‍ಪುರದ ಗೋರಖ್‍ನಾಥ್ ದೇವಾಲಯ ವಾರ್ಡ್ ನಂ.68 ರಲ್ಲಿ ಪಕ್ಷೇತರ ಅಭ್ಯರ್ಥಿ ನಾಡಿರಾ ಅವರು ಗೆಲುವು ಪಡೆದಿದ್ದು, ಬಿಜೆಪಿ ಅಭ್ಯರ್ಥಿಗೆ ಸೋಲಾಗಿದೆ.

    2012ರ ಮೇಯರ್ ಚುನಾವಣೆಯಲ್ಲಿ ಒಟ್ಟು 13 ಸ್ಥಾನಗಳ ಪೈಕಿ 11ರಲ್ಲಿ ಬಿಜೆಪಿ ಜಯಗಳಿಸಿತ್ತು. ನೋಟ್ ನಿಷೇಧ, ಜಿಎಸ್‍ಟಿಯಿಂದಾಗಿ ಈ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಜನರು ಮತ್ತೊಮ್ಮೆ ಕಮಲದ ಕೈ ಹಿಡಿದಿದ್ದಾರೆ.

    2014ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 80 ಸ್ಥಾನಗಳ ಪೈಕಿ 71ರಲ್ಲಿ ಬಿಜೆಪಿ ಜಯಭೇರಿ ಭಾರಿಸಿತ್ತು. 2017ರ ವಿಧಾನಸಭಾ ಚುನಾವಣೆಯ ಒಟ್ಟು 403 ಸ್ಥಾನಗಳ ಪೈಕಿ 302ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಕಂಡಿದ್ದರು.

     

  • ಲವ್ವರ್ ಜೊತೆ ಓಡಿ ಹೋಗಿದ್ದಕ್ಕೆ ಅಪ್ರಾಪ್ತೆಯ ಮೇಲೆ ತಂದೆ, ಅಣ್ಣ, ಕುಟುಂಬಸ್ಥರಿಂದ ಗ್ಯಾಂಗ್‍ರೇಪ್!

    ಲವ್ವರ್ ಜೊತೆ ಓಡಿ ಹೋಗಿದ್ದಕ್ಕೆ ಅಪ್ರಾಪ್ತೆಯ ಮೇಲೆ ತಂದೆ, ಅಣ್ಣ, ಕುಟುಂಬಸ್ಥರಿಂದ ಗ್ಯಾಂಗ್‍ರೇಪ್!

    ಲಕ್ನೋ: ಪ್ರೀತಿಸಿದ ಹುಡುಗನ ಜೊತೆ ಮನೆ ಬಿಟ್ಟು ಓಡಿಹೋಗಿದ್ದಕ್ಕೆ 17 ವರ್ಷದ ಹುಡುಗಿಯ ಮೇಲೆ ಕುಟುಂಬಸ್ಥರೇ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಮುಜಫರ್ ನಗರದ ದಂಧೇಡಾ ಗ್ರಾಮದಲ್ಲಿ ನಡೆದಿದೆ.

    ನಾನು ಪ್ರಿಯಕರನ ಜೊತೆ ಓಡಿ ಹೋಗಿದ್ದಕ್ಕೆ ಕುಟುಂಬದವರೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ. ಈ ದೂರಿನ ಅನ್ವಯ ಆಕೆಯ ಅಪ್ಪ, ಅಣ್ಣ ಮತ್ತು ಇಬ್ಬರು ಚಿಕ್ಕಪ್ಪಂದಿರನ್ನು ಪೊಲೀಸರು ಬಂಧಿಸಿದ್ದಾರೆ.

     ಏನಿದು ಪ್ರಕರಣ?
    ಅದೇ ಗ್ರಾಮದ ಮೂರು ಮಕ್ಕಳ ತಂದೆಯಾಗಿರುವ, 32 ವರ್ಷದ ವ್ಯಕ್ತಿಯ ಜೊತೆ ಇದೇ ವರ್ಷದ ಜುಲೈ ಮತ್ತು ಅಕ್ಟೋಬರ್ ನಲ್ಲಿ ಎರಡು ಬಾರಿ ಯುವತಿ ಓಡಿ ಹೋಗಿದ್ದಳು. ಈ ವೇಳೆ ಪೋಷಕರು ತನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

    ಈ ದೂರಿನ ಆಧಾರದಲ್ಲಿ ಸಂತ್ರಸ್ತೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದರು. ಈ ಸಂದರ್ಭದಲ್ಲಿ ಸಂತ್ರಸ್ತೆ ನಾನೇ ಇಷ್ಟ ಪಟ್ಟು ಆತನ ಹಿಂದೆ ಓಡಿ ಹೋಗಿದ್ದೆ ಎಂದು ಹೇಳಿದ ಮೇಲೆ ಆತನನ್ನು ಬಿಟ್ಟು ಕಳುಹಿಸಿದ್ದರು.

    ಮನೆಯವರು ಎರಡನೇ ಬಾರಿ ಆರೋಪಿ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದಾಗ, ಆಕೆ ಅಲಹಾಬಾದ್ ಹೈಕೋರ್ಟ್‍ಗೆ ನವೆಂಬರ್ 2 ರಂದು ಅರ್ಜಿ ಸಲ್ಲಿಸಿ ನರ್ಸಿಂಗ್ ಹೋಮ್ ಒಂದರಲ್ಲಿ ತನ್ನ ಮನೆಯವರೇ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಬಲವಂತದಿಂದ ಗರ್ಭಪಾತ ಮಾಡಿಸಲು ಮುಂದಾಗಿದ್ದರು ಎಂದು ತಿಳಿಸಿದ್ದಳು.

    ಈಗ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376ಡಿ ಮತ್ತು 313 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಸಂತ್ರಸ್ತೆಯ ತಾಯಿ ಮತ್ತು ಅತ್ತಿಗೆ ಪ್ರತಿಕ್ರಿಯಿಸಿ, ತಮ್ಮ ಮನೆಯವರ ವಿರುದ್ಧ ಮಾಡಲಾಗಿರುವ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.

     

  • 7 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡ್ದ

    7 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡ್ದ

    ಲಕ್ನೋ: ತಂದೆಯೇ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಈ ಘಟನೆ ಎಟಿಮಾದ್ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ನವೆಂಬರ್ 25 ರಂದು ಬಾಲಕಿಯ ಶವ ಆಗ್ರಾದ ಶಾಲೆಯೊಂದರ ಆವರಣದಲ್ಲಿ ಪತ್ತೆಯಾಗಿತ್ತು. ನಂತರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ನಡೆದು ನಂತರ ಕೊಲೆ ಮಾಡಿರುವುದಾಗಿ ವರದಿ ಬಂದಿದೆ.

    ಸಹೋದರ ಮತ್ತು ಅಪ್ಪನ ಜೊತೆ ಶಾಲೆಯ ಸಮೀಪದ ಒಂದು ಗುಡಿಸಲಿನಲ್ಲಿ ಬಾಲಕಿ ವಾಸಿಸುತ್ತಿದ್ದಳು. ಆಕೆಯ ತಾಯಿ 6 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಆದರೆ ತಂದೆ ಕುಡಿತ ಮತ್ತು ಡ್ರಗ್ಸ್ ಗೆ ದಾಸನಾಗಿದ್ದ. ನವೆಂಬರ್ 25 ರಂದು ರಾತ್ರಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ನಂತರ ಯಾರಿಗೂ ಅನುಮಾನ ಬರಬಾರದೆಂದು ಶವವನ್ನು ಶಾಲೆಯ ಆವರಣದಲ್ಲಿ ಬಿಸಾಡಿದ್ದನು.

    ಪೊಲೀಸರು ಅನುಮಾನದ ಮೇಲೆ ಆರೋಪಿ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಅಷ್ಟೇ ಅಲ್ಲದೇ ಆತ ಮಗನ ಮೇಲೆಯೂ ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಸ್ಥಳೀಯರು ಮಕ್ಕಳ ಮೇಲೆ ದೌರ್ಜನ್ಯ ಮಾಡಬಾರದು, ಮತ್ತೆ ಈ ರೀತಿ ಮಾಡಿದರೆ ಪೊಲೀಸರಿಗೆ ತಿಳಿಸುವುದಾಗಿ ಎಚ್ಚರಿಕೆ ನೀಡಿದ್ದರು. ಬಾಲಕಿ ಕೊಲೆಯಾದ ದಿನ ಕಿರುಚಾಡುತ್ತಿದ್ದಳು ಎಂದು ಆಕೆಯ ಸಹೋದರ ಹೇಳಿದ್ದಾನೆ.

  • ಮುಂಬೈ ಸ್ಫೋಟದ ರೂವಾರಿ ಹಫೀಜ್ ಸಯೀದ್ ಬಿಡುಗಡೆ-ಉತ್ತರ ಪ್ರದೇಶದಲ್ಲಿ ಸಂಭ್ರಮಾಚರಣೆ

    ಮುಂಬೈ ಸ್ಫೋಟದ ರೂವಾರಿ ಹಫೀಜ್ ಸಯೀದ್ ಬಿಡುಗಡೆ-ಉತ್ತರ ಪ್ರದೇಶದಲ್ಲಿ ಸಂಭ್ರಮಾಚರಣೆ

    ಲಕ್ನೋ: ಮುಂಬೈ ಸ್ಫೋಟದ ರೂವಾರಿ ಹಾಗೂ ಲಷ್ಕರ್ ಎ ತೊಯಿಬಾ ಸಂಘಟನೆಯ ಸಂಸ್ಥಾಪಕ ಮುಖಂಡನಾದ ಹಫೀಜ್ ಸಯೀದ್ ಬಿಡುಗಡೆ ಭಾಗ್ಯ ಸಿಕ್ಕಿದ ಬೆನ್ನಲ್ಲೇ ಉತ್ತರ ಪ್ರದೇಶದ ಯುವಕರ ಗುಂಪೊಂದು ಸಯೀದ್ ಬಿಡುಗಡೆಯಾಗಿದ್ದಕ್ಕೆ ಸಂಭ್ರಮಾಚರಣೆ ನಡೆಸಿರುವ ಕುರಿತು ಮಾಧ್ಯಮವೊಂದು ವರದಿ ಮಾಡಿದೆ.

    ಉತ್ತರ ಪ್ರದೇಶದ ಲಖೀಂಪುರ್ ಬೇಗಂ ಬಗ್ ಕಾಲೋನಿ ಪ್ರದೇಶದಲ್ಲಿ ನೆಲೆಸಿರುವ ಸಮುದಾಯವೊಂದರ ಯುವಕರ ಗುಂಪು ಸಂಭ್ರಮಾಚರಣೆ ಮಾಡಿದೆ. ಈಗಾಗಲೇ ಈ ಸಮುದಾಯದ ಯುವಕರು ತಮ್ಮ ಮನೆಯನ್ನು ಹಸಿರು ಧ್ವಜಗಳ ಮೂಲಕ ಅಲಂಕಾರ ಮಾಡಿದ್ದು, ಸಂಭ್ರಮಾಚರಣೆ ವೇಳೆ “ಪಾಕಿಸ್ತಾನ್ ಜಿಂದಾಬಾದ್, ಹಫೀಜ್ ಜಿಂದಾಬಾದ್” ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಘಟನೆ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ವಿಷಯ ತಿಳಿದ ತಕ್ಷಣ ಪೊಲೀಸರು ಘಟನಾ ಪ್ರದೇಶ ದೌಡಾಯಿಸಿದ್ದಾರೆ.

    ಹಫೀಜ್ ಬಿಡುಗಡೆಯ ಸಂಭ್ರಮಾಚರಣೆ ಸುದ್ದಿ ತಿಳಿದ ನಂತರ ಮತ್ತೊಂದು ಸಮುದಾಯದ ಜನ ಸ್ಥಳದಲ್ಲಿ ಜಮಾವಣೆಯಾಗಲು ಪ್ರಾರಂಭಿಸಿದ್ದಾರೆ. ಆದರೆ ಘಟನಾ ಸ್ಥಳದಲ್ಲಿ ಶಾಂತಿ ಕಾಯ್ದಕೊಳ್ಳುವ ಉದ್ದೇಶದಿಂದ ಜಿಲ್ಲಾಧಿಕಾರಿ ಆಕಾಶ್ ದೀಪ್ ಪೊಲೀಸರಿಗೆ ಘಟನೆ ಕುರಿತು ತನಿಖೆ ನಡೆಸಲು ಆದೇಶ ನೀಡಿರುವುದಾಗಿ ತಿಳಿಸಿದ್ದಾರೆ.

    ಶುಕ್ರವಾರ ಬೆಳಗ್ಗೆ 20 ರಿಂದ 25 ಜನರ ಯುವರ ಗುಂಪು ಹಫೀಜ್ ಬಿಡುಗಡೆಯ ಕುರಿತು ಸಂಭ್ರಮಾಚರಣೆ ಮಾಡುತ್ತಿರುವ ಕುರಿತು ಕೋಟ್ವಾಲಿ ಪ್ರದೇಶದ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆದರೆ ಪೊಲೀಸರು ಈ ಕುರಿತು ನಿರ್ಲಕ್ಷ್ಯ ವಹಿಸಿದ್ದಾರೆ. ನಂತರ ಘಟನೆ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ಪಡೆದು ತನಿಖೆ ನಡೆಸಲು ಆದೇಶ ನೀಡಿದ ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕೊತ್ವಾಲಿ ಪೊಲೀಸ್ ಅಧಿಕಾರಿ ಪ್ರದೀಪ್ ಶುಕ್ಲಾ ಘಟನಾ ಸ್ಥಳದಲ್ಲಿನ ಹಸಿರು ಬಣ್ಣದ ಧ್ವಜಗಳನ್ನು ತೆರವುಗೊಳಿಸಿರುದಾಗಿ ಹಾಗೂ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

    ಸಂಭ್ರಮಾಚರಣೆ ನಡೆಸಿರುವ ಕುರಿತು ವಿಡಿಯೋ ದಲ್ಲಿ ಹಸಿರು ಧ್ವಜ ಹಾರಾಟ ನಡೆಸಿ, ಪಾಕ್ ಹಾಗೂ ಉಗ್ರ ಹಫೀಜ್ ಪರ ಘೋಷಣೆ ಮಾಡಿರುವ ದೃಶ್ಯಗಳು ಲಭಿಸಿದೆ ಎಂದು ಲಖೀಂಪುರ್ ಪ್ರದೇಶದ ಬಲಪಂಥೀಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

    ಘಟನೆ ಕುರಿತು ಹೇಳಿಕೆ ನೀಡಿರುವ ಲಖೀಂಪುರ್ ನಿವಾಸಿ ಅಶ್ಫಾಕ್ ಖಾದ್ರಿ, ನನಗೆ ದೇಶ ವಿರೋಧಿ ಘೋಷಣೆಗಳು ಕೂಗಿರುವ ಕುರಿತು ಮಾಹಿತಿ ಇಲ್ಲ. ಇಲ್ಲಿ ಡಿಸೆಂಬರ್ 02 ರಂದು ನಡೆಯುವ ಜುಲೋಸ್ ಎ ಮೊಹಮ್ಮದಿ ಮೆರವಣಿಗೆ ಕುರಿತ ಸಂಭ್ರಮಾಚರಣೆ ನಡೆಯುತ್ತಿತ್ತು. ಪಾಕಿಸ್ತಾನ್ ಹಾಗೂ ಹಫೀಜ್ ಸಯೀದ್ ಬಗ್ಗೆ ಇಲ್ಲಿ ಯಾರು ಘೋಷಣೆ ಕೂಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಜನವರಿಯಿಂದ ಗೃಹಬಂಧನದಲ್ಲಿದ್ದ ಸಯೀದ್ ಬಂಧನದ ಅವಧಿಯನ್ನು ಮತ್ತೆ 3 ತಿಂಗಳು ವಿಸ್ತರಿಸುವಂತೆ ಪಾಕಿಸ್ತಾನದ ಪಂಜಾಬ್ ಪ್ರಾಂತ ಸರ್ಕಾರದ ಅರ್ಜಿಯನ್ನು ಲಾಹೋರ್ ಹೈಕೋರ್ಟ್ ನ್ಯಾಯಾಧೀಶರುಗಳನ್ನೊಳಗೊಂಡ ನ್ಯಾಯಾಂಗ ವಿಮರ್ಶಾ ಮಂಡಳಿ ಬುಧವಾರ ತಳ್ಳಿಹಾಕಿತ್ತು. ಯಾವುದೇ ಪ್ರಕರಣದಲ್ಲಿ ಸಯೀದ್ ವಿಚಾರಣೆ ಬಾಕಿ ಇಲ್ಲದೇ ಹೋದಲ್ಲಿ ಆತನನ್ನು ಬಿಡುಗಡೆಗೊಳಿಸುವಂತೆ ಸರಕಾರ ಆದೇಶ ನೀಡಿದೆ ಎಂದು ಮಂಡಳಿ ಹೇಳಿತ್ತು.

    2008ರ ನವೆಂಬರ್ 26ರಂದು ದಕ್ಷಿಣ ಮುಂಬೈ 8 ಸ್ಥಳಗಳ ಮೇಲೆ 9 ಮಂದಿ ಉಗ್ರರು ದಾಳಿ ನಡೆಸಿ 166 ಮಂದಿಯನ್ನು ಹತ್ಯೆ ಮಾಡಿದ್ದರು. ಈ ಘಟನೆಗೆ 9 ವರ್ಷ ತುಂಬುತ್ತಿರುವಾಗ ಹಫೀಸ್ ಬಿಡುಗಡೆಯಾಗಿದ್ದಕ್ಕೆ ಹಲವು ಪ್ರಶ್ನೆ ಎದ್ದಿದ್ದು, ಮುಂಬೈ ದಾಳಿಯ ಸಂಭ್ರಮ ಆಚರಿಸಲು ಆತನಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

  • ದೂರು ಕೊಡಲು ಹೋಗಿ ಪೊಲೀಸ್ ಠಾಣೆಯಲ್ಲಿಯೇ ಮದುವೆಯಾದ ಜೋಡಿ!

    ದೂರು ಕೊಡಲು ಹೋಗಿ ಪೊಲೀಸ್ ಠಾಣೆಯಲ್ಲಿಯೇ ಮದುವೆಯಾದ ಜೋಡಿ!

    ಕನೌಜ್: ಮದುವೆ ಮನೆಯಲ್ಲಿ ಗಲಾಟೆ ಆಯಿತೆಂದು ದೂರು ಕೊಡಲು ಪೊಲೀಸ್ ಠಾಣೆಗೆ ಹೋದ ವಧು ವರ ಕೊನೆಗೆ ಠಾಣೆಯಲ್ಲೇ ಮದುವೆಯಾದ ಘಟನೆ ಉತ್ತರಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

    ಪೊಲೀಸರೇ ಮುಂದೆ ನಿಂತು ಜೋಡಿಗಳಿಗೆ ಮದುವೆ ಮಾಡಿಸಿದ್ದು, ಇದರ ವಿಡಿಯೋ ಈಗ ಸಾಮಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿವಾಹದ ಸಂದರ್ಭದಲ್ಲಿ ವಧುವಿನ ಕುಟುಂಬ ಸದಸ್ಯರೊಬ್ಬರಿಗೆ ಯಾರೋ ಕಪಾಳ ಮೋಕ್ಷ ಮಾಡಿದ್ದು, ಜಗಳ ಉಂಟಾಗಿದೆ. ನಂತರ ವಧು-ವರ ಇಬ್ಬರೂ ಈ ಬಗ್ಗೆ ದೂರು ನೀಡಲು ಕನೌಜ್ ಪೊಲೀಸ್ ಠಾಣೆಗೆ ಹೋಗಿದ್ದಾರೆ. ನಂತರ ಪೊಲೀಸರು ಇವರ ಸಮಸ್ಯೆ ಬಗೆಹರಿಸಿದ್ದು, ಜೋಡಿ ಪೊಲೀಸ್ ಸಿಬ್ಬಂದಿ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿಯೇ ಹಾರ ಬದಲಿಸಿಕೊಂಡಿದ್ದಾರೆ.

    ಪೊಲೀಸ್ ಠಾಣೆಯಲ್ಲಿ ನಡೆದ ಮದುವೆ ವಿಡಿಯೋವನ್ನ ಸುದ್ದಿ ಸಂಸ್ಥೆ ಹಂಚಿಕೊಂಡಿದೆ. ವಿಡಿಯೋ ನೋಡಿದವರು ವಿವಿಧ ರೀತಿಯ ಕಮೆಂಟ್ ಮಾಡಿದ್ದಾರೆ.

    ಕಾನೌಜ್ ಪೊಲೀಸ್ ಠಾಣೆಯ ಉತ್ತಮ ಕೆಲಸವನ್ನ ಪ್ರಶಂಸಿಸುತ್ತೇನೆ ಎಂದು ಹೇಳಿ ನವ ಜೋಡಿಗಳಿಗೆ ಶುಭಾಶಯ ಕೋರಿ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು ದೂರು ಕೊಡಲು ಪೊಲೀಸ್ ಠಾಣೆಗೆ ಹೋಗೋಕೆ ಬೇರೆ ಯಾರೂ ಇರಲಿಲ್ವಾ? ವಧು ವರರೇ ಹೋಗಿದ್ದಾರಲ್ಲ ಅಂತ ಕಮೆಂಟ್ ಮಾಡಿದ್ದಾರೆ.

    https://www.youtube.com/watch?v=d44kqfp7Ol8

     

  • ಫ್ಲೈ ಓವರ್ ನಿಂದ ಕೆಳಗೆ ಬಿದ್ದ ಬಸ್- ಇಬ್ಬರ ಸಾವು, 31 ಮಂದಿಗೆ ಗಾಯ

    ಫ್ಲೈ ಓವರ್ ನಿಂದ ಕೆಳಗೆ ಬಿದ್ದ ಬಸ್- ಇಬ್ಬರ ಸಾವು, 31 ಮಂದಿಗೆ ಗಾಯ

    ಲಕ್ನೋ: ಖಾಸಗಿ ಬಸ್‍ವೊಂದು ಫ್ಲೈ ಓವರ್‍ನಿಂದ ಕೆಳಗೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 31 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಹಾರ್ದೊಯ್ ಜಿಲ್ಲೆಯಲ್ಲಿ ನಡೆದಿದೆ.

    ಗೋಪಾಮುವಿನಿಂದ ಬರುತ್ತಿದ್ದ ಈ ಖಾಸಗಿ ಬಸ್ ನಲ್ಲಿ 35 ಪ್ರಯಾಣಿಕರಿದ್ದರು ಎಂದು ವರದಿಯಾಗಿದೆ. ನಗರದ ರೈಲ್ವೆಗಂಜ್ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ಬಸ್ ಫ್ಲೈ ಓವರ್‍ನಿಂದ ಕೆಳಗೆ ಬಿದ್ದಿದೆ.

    ಬಸ್ ಕೆಳಗೆ ಬಿದ್ದ ತಕ್ಷಣ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನುಳಿದ ಪ್ರಯಾಣಿಕರು ಅಡ್ಡಲಾಗಿ ಬಿದ್ದಿದ್ದ ಬಸ್‍ನ ಬಾಗಿಲಿನಿಂದ ಹೊರಬರುತ್ತಿದ್ದು, ಸಾರ್ವಜನಿಕರು ಅವರಿಗೆ ಸಹಾಯ ಮಾಡಿದ್ದಾರೆ.

    ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಬಂದು ಗಾಯಗೊಂಡಿದ್ದ ಪ್ರಯಾಣಿಕರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

  • ಹಳಿ ತಪ್ಪಿದ ವಾಸ್ಕೋಡಗಾಮಾ-ಪಾಟ್ನಾ ಎಕ್ಸ್ ಪ್ರೆಸ್- ಮೂವರ ಸಾವು, 8 ಮಂದಿಗೆ ಗಂಭೀರ ಗಾಯ

    ಹಳಿ ತಪ್ಪಿದ ವಾಸ್ಕೋಡಗಾಮಾ-ಪಾಟ್ನಾ ಎಕ್ಸ್ ಪ್ರೆಸ್- ಮೂವರ ಸಾವು, 8 ಮಂದಿಗೆ ಗಂಭೀರ ಗಾಯ

    ಲಕ್ನೋ: ಇಂದು ನಸುಕಿನ ಜಾವ ಉತ್ತರಪ್ರದೇಶದ ಮಾಣಿಕ್‍ಪುರ್ ರೈಲ್ವೆ ನಿಲ್ದಾಣದ ಬಳಿ ವಾಸ್ಕೋಡಗಾಮಾ-ಪಾಟ್ನಾ ಎಕ್ಸ್ ಪ್ರೆಸ್ ರೈಲಿನ 13 ಬೋಗಿಗಳು ಹಳಿ ತಪ್ಪಿದ ಪರಿಣಾಮ ಮೂವರು ಮೃತಪಟ್ಟಿದ್ದು, 8 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ

    ಇಂದು ಬೆಳಗ್ಗೆ 4.18 ರ ಸಮಯದಲ್ಲಿ ಬಿಹಾರದ ಪಾಟ್ನಾಗೆ ತೆರಳುತ್ತಿದ್ದ ರೈಲಿನ 13 ಬೋಗಿಗಳು ಹಳಿ ತಪ್ಪಿವೆ. ಇದಕ್ಕೂ ಮುಂಚೆ ಕಳೆದ ದಿನ ಲಕ್ನೋ ಬಳಿ ಪ್ಯಾಸೆಂಜರ್ ರೈಲಿಗೆ ಬೊಲೆರೊ ಡಿಕ್ಕಿಯಾಗಿ ನಾಲ್ವರು ಮೃತಪಟ್ಟು ಇಬ್ಬರು ಗಾಯಗೊಂಡಿದ್ದರು.

    ರೈಲ್ವೆ ಸಚಿವರಾದ ಪಿಯೂಶ್ ಗೋಯಲ್ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ., ತೀವ್ರವಾಗಿ ಗಾಯಗೊಂಡವರಿಗೆ 1 ಲಕ್ಷ ರೂ. ಹಾಗೂ ಸಣ್ಣ ಪುಟ್ಟ ಗಾಯಗಳಾಗಿರುವವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

    ರೈಲು ಅಪಘಾತದಲ್ಲಿ 8 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಬಿಹಾರದ ಬೆಟ್ಟಿಹಾ ಜಿಲ್ಲೆಯ ತಂದೆ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಚಿತ್ರಕೂಟ ಎಸ್‍ಪಿ ಪ್ರತಾಪ್ ಗೋಪೇಂದ್ರ ಸಿಂಗ್ ತಿಳಿಸಿದ್ದಾರೆ.

    ಅಪಘಾತದಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಉತ್ತರ ಮಧ್ಯ ರೈಲ್ವೇ ಸಾರ್ವಜನಿಕ ಸಂಪರ್ಕಾಧಿಕಾರಿ ಅಮಿತ್ ಮಾಳ್ವೀಯಾ ತಿಳಿಸಿದ್ದಾರೆ.

    ಅಪಘಾತ ನಡೆದ ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು ಈಗಾಗಲೇ ಹೋಗಿದ್ದು, ಅಪಘಾತಕ್ಕೆ ಕಾರಣ ಏನೆಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ. ರೈಲಿನ ಟ್ರ್ಯಾಕ್ ಮುರಿದಿದ್ದರಿಂದ ಈ ಅಪಘಾತ ಸಂಭವಿಸಿರಬಹುದು ಎಂದು ಅಡಿಷನಲ್ ಡೈರೆಕ್ಟರ್ ಜನರಲ್ ಆನಂದ್ ಕುಮಾರ್ ಹೇಳಿದ್ದಾರೆ.

    ಗಾಯಗೊಂಡವರನ್ನು ಮಣಿಕ್‍ಪುರ ಮತ್ತು ಚಿತ್ರಕೂಟ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ರೈಲ್ವೇ ಮಂಡಳಿಯ ಅಧ್ಯಕ್ಷರನ್ನು ಸ್ಥಳಕ್ಕೆ ಬರುವಂತೆ ಸೂಚಿಸಿದ್ದೇವೆ. ಈ ಅಪಘಾತದಿಂದ ಪಾಟ್ನಾ -ಅಲಹಬಾದ್ ರೈಲು ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯವಾಗಿದೆ ಎಂದು ರೈಲ್ವೆ ವಕ್ತಾರರಾದ ಅನಿಲ್ ಸಕ್ಸೇನಾ ತಿಳಿಸಿದರು.

     

  • ಸಿಎಂ ಯೋಗಿ ಭಾಷಣ ಕೇಳಲು ಬಂದ ಮುಸ್ಲಿಂ ಮಹಿಳೆಯ ಬುರ್ಖಾ ತೆಗೆಸಿದ ಪೊಲೀಸರು!

    ಸಿಎಂ ಯೋಗಿ ಭಾಷಣ ಕೇಳಲು ಬಂದ ಮುಸ್ಲಿಂ ಮಹಿಳೆಯ ಬುರ್ಖಾ ತೆಗೆಸಿದ ಪೊಲೀಸರು!

    ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮಾವೇಶದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಬುರ್ಖಾ ಧರಿಸಿ ಭಾಗಿಯಾಗಿದ್ದರು. ಈ ವೇಳೆ ಮೂವರು ಮಹಿಳಾ ಪೊಲೀಸ್ ಅಧಿಕಾರಿಗಳು ಸಾರ್ವಜನಿಕವಾಗಿ ಮಹಿಳೆಯ ಬುರ್ಖಾವನ್ನು ತೆಗೆಸಿದ್ದಾರೆ.

    ಮಂಗಳವಾರ ಬಲಿಯಾ ಎಂಬಲ್ಲಿ ಸ್ಥಳೀಯ ಚುನಾವಣೆ ಪ್ರಯುಕ್ತ ಬಿಜೆಪಿ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಿತ್ತು. ಬಿಜೆಪಿ ಕಾರ್ಯಕರ್ತೆಯಾಗಿರುವ ಮುಸ್ಲಿಂ ಮಹಿಳೆಯೂ ಸಮಾವೇಶದಲ್ಲಿ ಕಪ್ಪು ಬಣ್ಣದ ಬುರ್ಖಾ ಧರಿಸಿ ಭಾಗಿಯಾಗಿದ್ದರು.

    ನನ್ನ ಬಳಿ ಬಂದ ಮಹಿಳಾ ಪೊಲೀಸ್ ಅಧಿಕಾರಿಗಳು ಬುರ್ಖಾ ತೆಗೆಯುವಂತೆ ಹೇಳಿದರು. ಆದರೆ ಯಾವ ಕಾರಣಕ್ಕೆ ಎಂದು ತಿಳಿಸಲಿಲ್ಲ. ಕೊನೆಗೆ ನಾನು ಸಾರ್ವಜನಿಕವಾಗಿ ಬುರ್ಖಾ ತೆಗೆದೆ ಎಂದು ಮುಸ್ಲಿಂ ಮಹಿಳೆ ತಿಳಿಸಿದ್ದಾರೆ. ಮಹಿಳೆ ಈ ವಿಷಯದ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿಲ್ಲ. ದಿಢೀರ್ ಅಂತಾ ಎಲ್ಲರೆದರು ಬುರ್ಖಾ ತೆಗೆಸಿದಕ್ಕೆ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.

    ಈ ಘಟನೆ ಬಗ್ಗೆ ನನಗೆ ಇದೂವರೆಗೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಮುಖ್ಯಮಂತ್ರಿಗಳು ಭಾಗಿಯಾಗುವ ಸಮಾವೇಶದಲ್ಲಿ ಯಾರು ಕಪ್ಪು ಬಟ್ಟೆಯನ್ನು ತೋರಿಸದಂತೆ ನಮಗೆ ಆದೇಶಿಸಲಾಗಿತ್ತು. ಈ ಘಟನೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬಲಿಯಾ ಎಸ್‍ಪಿ ಅನಿಲ್ ಕುಮಾರ್ ಹೇಳಿದ್ದಾರೆ.

    ಮುಖ್ಯಮಂತ್ರಿಗಳು ಶನಿವಾರ ಮೀರತ್ ನಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಿಎಂ ಭಾಷಣ ಮಧ್ಯದಲ್ಲಿ ಕೆಲವರು ಎದ್ದು ನಿಂತು ಕಪ್ಪು ಬಾವುಟ ತೋರಿಸುವ ಮೂಲಕ ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಅವರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಸಮಾವೇಶದಲ್ಲಿ ಸಿಎಂ ಬರುವ ಮುನ್ನ ಪೊಲೀಸ್ ಅಧಿಕಾರಿಗಳು ಭದ್ರತಾ ದೃಷ್ಟಿಯಿಂದ ಮಹಿಳೆ ಧರಿಸಿದ್ದ ಬುರ್ಖಾ ತೆಗೆಸಿದ್ದಾರೆ ಎಂದು ಹೇಳಲಾಗಿದೆ.

    https://twitter.com/MuslimWomanNews/status/933234110171987969