Tag: uttar pradesh

  • ಹಾಸ್ಟೆಲ್ ಖಾಲಿ ಮಾಡುವಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಗಳಿಂದ ವಾಹನಗಳಿಗೆ ಬೆಂಕಿ! ಪರಿಸ್ಥಿತಿ ಉದ್ವಿಗ್ನ

    ಹಾಸ್ಟೆಲ್ ಖಾಲಿ ಮಾಡುವಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಗಳಿಂದ ವಾಹನಗಳಿಗೆ ಬೆಂಕಿ! ಪರಿಸ್ಥಿತಿ ಉದ್ವಿಗ್ನ

    ಲಕ್ನೋ: ಬೇಸಿಗೆ ರಜೆ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಲಯ ಖಾಲಿ ಮಾಡುವಂತೆ ಹೇಳಿದ್ದಕ್ಕೆ, ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನೆ ವಿಕೋಪಕ್ಕೆ ತಿರುಗಿ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಅಲಹಾಬಾದ್‍ನ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದಿದೆ.

    sಅಲಹಾಬಾದ್ ವಿಶ್ವವಿದ್ಯಾನಿಲಯದ ಅಧಿಕಾರಿ ರಾಮ್ ಸೇವಕ್ ಸುಬೇರವರು ಹಾಸ್ಟೆಲ್‍ನ ವಿದ್ಯಾರ್ಥಿಗಳಿಗೆ ತಮ್ಮ ಕೊಠಡಿಗಳನ್ನು ಖಾಲಿ ಮಾಡುವಂತೆ ಸೋಮವಾರ ತಿಳಿಸಿದ್ದರು. ಒಂದು ವಾರದೊಳಗೆ ತಮ್ಮ ಎಲ್ಲಾ ವಸ್ತುಗಳ ಸಮೇತ ಖಾಲಿ ಮಾಡಬೇಕು, ಇಲ್ಲವಾದಲ್ಲಿ ಪೊಲೀಸರ ಸಹಾಯದಿಂದ ಜೂನ್ 12ರಂದು ಹೊರಹಾಕಲಾಗುತ್ತದೆ ಎಂದು ಹೇಳಿದ್ದರು.

    ಈ ಹೇಳಿಕೆಗೆ ಹಾಸ್ಟೆಲ್‍ನ ವಿದ್ಯಾರ್ಥಿಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಮಂಗಳವಾರ ಮಧ್ಯಾಹ್ನ ಯೂನಿಯನ್ ಆವರಣದ ಬಳಿ ವಿಶ್ವವಿದ್ಯಾನಿಲಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನೆ ಹಿಂಸಾರೂಪಕ್ಕೆ ತೆರಳಿದೆ. ಆವರಣದಿಂದ ಹೊರಗಡೆ ಬಂದ ಪ್ರತಿಭಟನಾಕಾರರು ಏಕಾಏಕಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

    ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸಶಸ್ತ್ರ ಮೀಸಲು ಪಡೆ ತಂಡ ಮತ್ತು ಹೆಚ್ಚಿನ ಸಂಖ್ಯೆಯ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸ್ಥಳಕ್ಕೆ ಬಂದ ಇವರು ಪ್ರತಿಭಟನಾಕಾರನ್ನು ಬೆನ್ನಟ್ಟಿ ಚದುರಿಹೋಗುವಂತೆ ಮಾಡಿದ್ದಾರೆ. ಅಲ್ಲದೇ ಹಾಸ್ಟೆಲ್‍ನಲ್ಲಿ ಹುಡುಕಾಟ ಮುಂದುವರಿಸಿದ್ದಾರೆ. ಪ್ರತಿಭಟನೆ ನಡೆಸಿದ ಎಲ್ಲಾ ವಿದ್ಯಾರ್ಥಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

    ಈ ವೇಳೆ ಮಾತನಾಡಿದ ಅಲಹಾಬಾದ್ ಎಸ್ಪಿ ಬ್ರಿಜೇಶ್ ಶ್ರೀವತ್ಸವ್‍ರವರು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಶೀಘ್ರವೇ ಬಂಧಿಸಲಾಗುವುದೆಂದು ತಿಳಿಸಿದ್ದಾರೆ. ಈ ಗಲಭೆಯಲ್ಲಿ ಉತ್ತರ ಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಸಂಪೂರ್ಣ ಜಖಂಗೊಂಡಿದ್ದು, ಪೊಲೀಸ್ ಜೀಪ್ ಮತ್ತು ಬೈಕ್‍ಗಳು ಸುಟ್ಟು ಕರಕಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

    ಕಳೆದ ವರ್ಷ ವಿಶ್ವವಿದ್ಯಾನಿಲಯವು ಅಲಹಾಬಾದ್ ಹೈಕೋರ್ಟ್ ನಿರ್ದೇಶನದಂತೆ ಹಲವು ವಿದ್ಯಾರ್ಥಿಗಳನ್ನು ಹಾಸ್ಟೆಲ್‍ನಿಂದ ಹೊರಹಾಕಿತ್ತು. ಈ ವೇಳೆ ವಿದ್ಯಾರ್ಥಿಗಳು ಹಾಸ್ಟೆಲ್ ಸೇರಿದ ವಸ್ತುಗಳಿಗೆ ಹಾನಿಮಾಡಿ ಹೋಗಿದ್ದರು. ಈ ವರ್ಷ ಪುನಃ ಅದೇ ರೀತಿ ತೊಂದರೆ ಆದರೆ ಕ್ರಮ ಕೈಗೊಳ್ಳಲಾಗುತ್ತದೆ ವಿವಿ ತಿಳಿಸಿತ್ತು ಎಂದು ತಿಳಿದು ಬಂದಿದೆ.

  • ದೇಶದಲ್ಲೇ ಮೊದಲು-ಯುಪಿ ವಿಮಾನನಿಲ್ದಾಣದ ರನ್‍ವೇ ಕೆಳಗಡೆ ಹೈವೇ!

    ದೇಶದಲ್ಲೇ ಮೊದಲು-ಯುಪಿ ವಿಮಾನನಿಲ್ದಾಣದ ರನ್‍ವೇ ಕೆಳಗಡೆ ಹೈವೇ!

    ವಾರಣಾಸಿ: ವಾರಣಾಸಿಯಿಂದ 26 ಕಿ.ಮಿ ದೂರದಲ್ಲಿರುವ ಬಾಬತ್‍ಪುರದ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನು ಕೆಲವೇ ದಿನಗಳಲ್ಲಿ ತನ್ನ ರನ್‍ವೇ ಕೆಳಗಡೆ ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಲಿದೆ.

    ಈ ಮೂಲಕ ರನ್‍ವೇ ಕೆಳಗೆ ಅಂಡರ್ ಪಾಸ್ ಹೈವೇ ಹೊಂದಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಕೀರ್ತಿಗೆ ಈ ವಿಮಾನ ನಿಲ್ದಾಣ ಪಾತ್ರವಾಗಲಿದೆ. ಅಂಡರ್‍ಪಾಸ್ ರಸ್ತೆ ನಿರ್ಮಾಣವು ವಿಮಾನಗಳ ರನ್‍ವೇಯನ್ನು, ವಿಮಾನಗಳ ನಿಲ್ದಾಣ ಪಥ ಹಾಗು ಹೆದ್ದಾರಿಯನ್ನು ನಾಲ್ಕು ರಸ್ತೆಗಳಾಗಿ ಪರಿವರ್ತಿಸುತ್ತದೆ.

    ಅಂಡರ್‍ಪಾಸ್ ರಸ್ತೆಗಳ ನಿರ್ಮಾಣ ಹಾಗೂ ವಿಮಾನಗಳ ರನ್‍ವೇ ವಿಸ್ತರಣೆ ಕಾರ್ಯ ವಾರಣಾಸಿ-ಲಖ್ನೋ ರಾಷ್ಟ್ರೀಯ ಹೆದ್ದಾರಿ 56 ರೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಈ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದೆ. ಈಗಿರುವ ರನ್‍ವೇ 2750 ಮೀ. ಗಳಾಗಿದ್ದು ಸರಕು ಸಾಗಾಣಿಕೆ ಹಾಗೂ ಬೋಯಿಂಗ್ ವಿಮಾನಗಳನ್ನು ಇಳಿಸಲು ಅನುಕೂಲವಾಗುವಂತೆ 4075ಮೀ ಗೆ ವಿಸ್ತರಿಸಬೇಕೆಂದು ಪ್ರಸ್ತಾಪಿಸಿದೆ. ಅದರಂತೆಯೇ ಈ ರನ್‍ವೇ ಹಾಗೂ ಅಂಡರ್‍ಪಾಸ್ ಕಾಮಗಾರಿಗಳೆರೆಡೂ ಏಕಕಾಲಕ್ಕೆ ಪ್ರಾರಂಭವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಪ್ರಕ್ರಿಯೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಕುರಿತಂತೆ ಇರುವ ದೀರ್ಘಾವಧಿ ಸಮಸ್ಯೆಗಳು ಪರಿಹಾರವಾಗಲಿವೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಇರುವ ಹೆದ್ದಾರಿಗಳನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಸ್.ಬಿ ಸಿಂಗ್ ಹೇಳಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ 56 ನ್ನು ನಾಲ್ಕು ಪಥದ ರಸ್ತೆಯನ್ನಾಗಿ ಮಾಡಲು ಉತ್ತರ ಪ್ರದೇಶ ಸರಕಾರ 2013 ರಲ್ಲಿ ಅನುಮತಿ ನೀಡಿದ್ದರೂ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಹೆದ್ದಾರಿ ಪ್ರಾಧಿಕಾರವೂ ವಾರಣಾಸಿ- ಸುಲ್ತಾನ್‍ಪುರ ಗಳಲ್ಲಿ ಕಾಮಗಾರಿ ಪ್ರಾರಂಭಿಸಿತ್ತಾದರೂ ಪೂರ್ಣಗೊಳಿಸಲಾಗಲಿಲ್ಲ.  2014ರಲ್ಲಿ ಕೇಂದ್ರದಲ್ಲಾದ ಸಿಬ್ಬಂದಿ ಬದಲಾವಣೆ, ಭೂಸ್ವಾಧೀನ ಪ್ರಕ್ರಿಯೆಗಳಿಂದಾಗಿ ಕಾಮಗಾರಿ ಭರದಿಂದ ಸಾಗಿದೆ.

    2014ರ ಮಾರ್ಚ್ 27 ರಂದು ನಾಗರಿಕ ವಿಮಾನಯಾನ ನಿರ್ದೇಶಕರು ಉತ್ತರ ಪ್ರದೇಶ ಸರಕಾರಕ್ಕೆ ಈ ಕುರಿತು ಪತ್ರವೊಂದನ್ನು ಕಳುಹಿಸಿದ್ದರು. ಆದರೆ ಅದನ್ನು ನಿರ್ಲಕ್ಷಿಸಲಾಗಿತ್ತು. 2017 ರಲ್ಲಿ ಪ್ರಾಧಿಕಾರವು ಕಾಮಗಾರಿಗೆ ಅಗತ್ಯ ಭೂಮಿಯನ್ನು ಗುರುತಿಸಿದ ನಂತರ ಈಗ ಕಾಮಗಾರಿ ವೇಗವನ್ನು ಪಡೆದಿದೆ.

  • ಲೋಕಸಭಾ ಉಪ ಚುನಾವಣೆಯಲ್ಲಿ ಯಾರಿಗೆ ಗೆಲುವು – ಮಹಾಮೈತ್ರಿ ಕೂಟದ ಅಳಿವು-ಉಳಿವಿನ ಸುಳಿವು

    ಲೋಕಸಭಾ ಉಪ ಚುನಾವಣೆಯಲ್ಲಿ ಯಾರಿಗೆ ಗೆಲುವು – ಮಹಾಮೈತ್ರಿ ಕೂಟದ ಅಳಿವು-ಉಳಿವಿನ ಸುಳಿವು

    ಬೆಂಗಳೂರು: ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಕರೆಯಲಾಗಿರುವ, ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ನಡೆದಿರೋ ಉಪ ಚುನಾವಣೆಯ ಫಲಿತಾಂಶ ಕೂಡಾ ಇವತ್ತೇ ಹೊರಬೀಳಲಿದೆ. ಇದು ಮಹಾಮೈತ್ರಿಕೂಟದ ಸಾಧ್ಯಸಾಧ್ಯತೆಗಳ ಶಕುನ ನುಡಿಯಲಿದೆ.

    ಉತ್ತರ ಪ್ರದೇಶದ ಕೈರನಾ, ಮಹಾರಾಷ್ಟ್ರದ ಪಾಲ್ಘಾರ್, ಭಂಡಾರಾ-ಗೊಂಡಿಯಾ ಮತ್ತು ನಾಗಾಲ್ಯಾಂಡ್ ಒಟ್ಟು ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಮೇ 28ರಂದು ಚುನಾವಣೆ ನಡೆದಿತ್ತು. ಇಂದು ಎಲ್ಲ ಲೋಕಸಭಾ ಕ್ಷೇತ್ರಗಳ ಫಲಿತಾಂಶ ಹೊರ ಬರಲಿದೆ.

    ಕೈರನಾ: ಉತ್ತರಪ್ರದೇಶದ ಕೈರಾನಾ ಸಂಸದೀಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮ್ರಿಗಾಂಕಾ ಸಿಂಗ್ ಮತ್ತು ರಾಷ್ಟ್ರೀಯ ಲೋಕದಳದಿಂದ ತಬ್ಸಂ ಸಿಂಗ್ ನಡುವೆ ನೇರ ಸ್ಪರ್ಧೆ ಇದೆ. ಆರ್‍ಎಲ್‍ಡಿ ಅಭ್ಯರ್ಥಿಗೆ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಬಹುಜನಸಮಾಜವಾದಿ ಪಾರ್ಟಿ ಬೆಂಬಲ ನೀಡಿವೆ. ಕ್ಷೇತ್ರದಲ್ಲಿ 16 ಲಕ್ಷ ಮತದಾರರಿದ್ದು ಇವರಲ್ಲಿ ಐದೂವರೆ ಲಕ್ಷ ಮುಸ್ಲಿಂ, ಎರಡೂವರೆ ಲಕ್ಷ ದಲಿತ ಮತ್ತು 2 ಲಕ್ಷ ಜಾಟ್ ಸಮುದಾಯದ ಮತಗಳಿವೆ. 2014ರಲ್ಲಿ ಕ್ಷೇತ್ರದಲ್ಲಿ ಬಿಜೆಪಿಯಿಂದ ದಿವಂಗತ ಹುಕುಂಸಿಂಗ್ ಆಯ್ಕೆ ಆಗಿದ್ದರು.

     

    ಪಾಲ್ಘಾರ್: ಮಹಾರಾಷ್ಟ್ರದ ಪಾಲ್ಘಾರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಂದ್ರ ಗವಿತೆ ಮತ್ತು ಮಿತ್ರಪಕ್ಷ ಶಿವಸೇನೆ ಶ್ರೀನಿವಾಸ್ ವನಗಾ ನಡುವೆ ನೇರ ಹಣಾಹಣಿ ಇದೆ. ಕಾಂಗ್ರೆಸ್‍ನಿಂದ ದಾಮೋದರ್ ಸಿಂಗ್ದಾಗೆ ಎನ್‍ಸಿಪಿ ಬೆಂಬಲವೂ ಇದೆ. 2019ರಲ್ಲಿ ಸ್ವತಂತ್ರವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸೋದಾಗಿ ಶಿವಸೇನೆ ಈಗಾಗ್ಲೇ ಘೋಷಿಸಿದ್ದು, ಆ ನಿರ್ಧಾರದ ಉಪ ಚುನಾವಣಾ ಫಲಿತಾಂಶ ಪರಿಣಾಮ ಬೀರಲಿದೆ.

    ಭಂಡಾರಾ-ಗೊಂಡಿಯಾ: ಮಹಾರಾಷ್ಟ್ರದ ಭಂಡಾರಾ-ಗೊಂಡಿಯಾದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಹೇಮಂತ್ ಪಟೇಲ್ ಮತ್ತು ಎನ್‍ಸಿಪಿಯ ಮಧುಕರ್ ಕುಡ್ಕೆ ನಡುವೆ ಸ್ಪರ್ಧೆ ಇದೆ. ಎನ್‍ಸಿಪಿಗೆ ಕಾಂಗ್ರೆಸ್, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಬೆಂಬಲಿಸಿದೆ. 2014ರಲ್ಲಿ ಪ್ರಫುಲ್ ಪಟೇಲ್ ವಿರುದ್ಧ ಗೆದ್ದಿದ್ದ ನಾನಾ ಪಟೋಲೆ ಪ್ರಧಾನಿ ಮೋದಿ ವಿರುದ್ಧ ಸಿಟ್ಟೆದ್ದು ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಿದ್ದರು.

    ನಾಗಲ್ಯಾಂಡ್: ನಾಗಲ್ಯಾಂಡ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಎನ್‍ಡಿಪಿಪಿವುಳ್ಳ ಪಿಡಿಎ ಮೈತ್ರಿಕೂಟದ ಅಭ್ಯರ್ಥಿ ಟೊಖೆಹೋ ಯೆಪ್ತೋಮಿ ಮತ್ತು ನಾಗಾ ಪೀಪಲ್ಸ್ ಫ್ರಂಟ್‍ನ ಅಶೋಕ್ ಜಮೀರ್ ನಡುವೆ ನೇರ ಹಣಾಹಣಿ ಇದೆ. ಎನ್‍ಪಿಎಫ್‍ಗೆ ಕಾಂಗ್ರೆಸ್ ಬೆಂಬಲ ಕೊಟ್ಟಿದೆ. ನಾಗಾಲ್ಯಾಂಡ್ ಸಿಎಂ ಮತ್ತು ಎನ್‍ಡಿಪಿಪಿ ನಾಯಕ ನೆಪಿಹ್ಯೂ ರಿಯೋ ರಾಜೀನಾಮೆಯಿಂದಾಗಿ ಉಪ ಚುನಾವಣೆ ಅನಿವಾರ್ಯವಾಯ್ತು.

  • ಪಾಕ್‍ನಲ್ಲಿ ಅಡುಗೆ ಕೆಲಸ ಮಾಡಿ ಭಾರತದ ರಹಸ್ಯವನ್ನು ಐಎಸ್‍ಐಗೆ ತಿಳಿಸಿದ!

    ಪಾಕ್‍ನಲ್ಲಿ ಅಡುಗೆ ಕೆಲಸ ಮಾಡಿ ಭಾರತದ ರಹಸ್ಯವನ್ನು ಐಎಸ್‍ಐಗೆ ತಿಳಿಸಿದ!

    ಡೆಹ್ರಾಡೂನ್: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಉತ್ತರಪ್ರದೇಶದ ಭಯೋತ್ಪಾದನ ನಿಗ್ರಹ ದಳ(ಎಟಿಎಸ್) ಬಂಧಿಸಿದೆ.

    ಆರೋಪಿಯನ್ನು ಉತ್ತರಾಖಂಡದ ಪಿತ್ತೋರ್‍ಗಢ ಜಿಲ್ಲೆಯ ಕಿರೊಲಾ ಗ್ರಾಮದ ರಮೇಶ್ ಸಿಂಗ್ ಕನ್ಯಾಲ್ (43) ಎಂದು ಗುರುತಿಸಲಾಗಿದೆ. ಅವನು ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟೆಲಿಜೆನ್ಸ್‍ಗೆ (ಐಎಸ್‍ಐ)ಗೆ ರಾಷ್ಟ್ರೀಯ ಭದ್ರತಾ ಮಾಹಿತಿಯನ್ನು ನೀಡುತ್ತಿದ್ದ ಎಂದು ವರದಿಯಾಗಿದೆ.

    ಉತ್ತರ ಪ್ರದೇಶದ ಎಟಿಎಸ್‍ನ ಐದು ಜನರ ತಂಡವು ಆರೋಪಿಯನ್ನು ಆತನ ಮನೆಗೆ ತೆರಳಿ ಬಂಧಿಸಿದೆ. ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ ಹೆಚ್ಚಿನ ವಿಚಾರಣೆಗೆ ಎಟಿಎಸ್ ಕಸ್ಟಡಿಗೆ ನೀಡಿದೆ.

    ಬೇಹುಗಾರಿಕೆ ನಡೆಸುತ್ತಿದ್ದ ಅನುಮಾನದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ಎಟಿಎಸ್‍ನ ಜನರಲ್ ಇನ್ಸ್ ಪೆಕ್ಟರ್ ಆಸೀಂ ಅರುಣ್ ತಿಳಿಸಿದ್ದಾರೆ. ಈ ಹಿಂದೆ ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಭಾರತದ ರಾಯಭಾರಿಯ ನಿವಾಸದಲ್ಲಿ ಅಡುಗೆ ಕೆಲಸಕ್ಕಾಗಿ ಆರೋಪಿಯನ್ನು ನಿಯೋಜಿಸಲಾಗಿತ್ತು. 2015 ರಿಂದ 2017ರ ವರೆಗೆ ಅಲ್ಲಿ ಕೆಲಸ ಮಾಡುತ್ತಿದ್ದಾಗ ಐಎಸ್‍ಐ ಈತನನ್ನು ಸಂಪರ್ಕಿಸಿ ಹಣದ ಆಸೆ ತೋರಿಸಿದೆ. ಈ ಆಸೆಗೆ ಬಲಿಯಾದ ಈತ ಭಾರತದ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಐಎಸ್‍ಐಗೆ ನೀಡುತ್ತಿದ್ದಾನೆ ಎನ್ನುವ ಖಚಿತ ಮಾಹಿತಿ ಪಿತ್ತೋರ್‍ಗಢ ಜಿಲ್ಲಾ ಪೊಲೀಸರಿಗೆ ಸಿಕ್ಕಿತ್ತು.

    ಸೇನೆಯ ಗುಪ್ತಚರ ಇಲಾಖೆ ಈತನ ಚಟುವಟಿಕೆಯ ಮೇಲೆ ಕಣ್ಣಿಟ್ಟ ಬಳಿಕ ಎಟಿಎಸ್‍ಗೆ ತಿಳಿಸಿತ್ತು. ಈಗ ಎಟಿಎಸ್ ರಮೇಶ್ ಸಿಂಗ್ ಕನ್ಯಾಲ್ ಬಳಿಯಿದ್ದ ಪಾಕಿಸ್ತಾನದ ಸಿಮ್ ಕಾರ್ಡ್ ಹಾಗೂ ಮೊಬೈಲ್‍ನ್ನು ವಶಪಡಿಸಿಕೊಂಡಿದೆ.

    ಆರೋಪಿ ಸಹೋದರ ಕೂಡ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕನ್ಯಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಿಂಚಣಿ ಹಣಕ್ಕಾಗಿ ತಾಯಿಯ ಮೃತ ದೇಹವನ್ನು ಐದು ತಿಂಗಳು ಬಚ್ಚಿಟ್ಟರು!

    ಪಿಂಚಣಿ ಹಣಕ್ಕಾಗಿ ತಾಯಿಯ ಮೃತ ದೇಹವನ್ನು ಐದು ತಿಂಗಳು ಬಚ್ಚಿಟ್ಟರು!

    ಲಕ್ನೋ: ತಂದೆಯ ಪಿಂಚಣಿ ಹಣಕ್ಕಾಗಿ ತಾಯಿಯ ಮೃತ ದೇಹವನ್ನು ಮಕ್ಕಳೇ ಐದು ತಿಂಗಳ ಕಾಲ ಬಚ್ಚಿಟ್ಟಿದ್ದ ಅಮಾನವೀಯ ಕೃತ್ಯವೊಂದು ಉತ್ತರಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ವಾರಣಾಸಿಯ ಕಬೀರ್ ನಗರದ ಅಮರಾವತಿ ದೇವಿ (70) ಮೃತಪಟ್ಟಿದ್ದರು. ತಾಯಿಯೇ ಮೃತಪಟ್ಟರೂ ನಾಲ್ವರು ಪುತ್ರರು ಹಾಗೂ ಅವರ ಪತ್ನಿಯರು ಪಿಂಚಣಿ ಹಣ ಪಡೆಯುವುದಕ್ಕಾಗಿ ಈ ಕೃತ್ಯ ಎಸಗಿದ್ದಾರೆ.

    ವ್ಯಕ್ತಿಯೊಬ್ಬರು 100 ನಂಬರ್ ಗೆ ಕರೆ ಮಾಡಿ, ಅಮರಾವತಿ ದೇವಿ ಅವರು ಇದೇ ವರ್ಷ ಜನವರಿ 12ರಂದು ಸಾವನ್ನಪ್ಪಿದ್ದಾರೆ. ಆದರೆ, ಮನೆಯವರು ನೆರೆಹೊರೆಯವರಿಗೆ ಅನುಮಾನ ಬಾರದಂತೆ ಮೃತ ದೇಹವನ್ನು ಬಚ್ಚಿಟ್ಟಿದ್ದಾರೆ ಎನ್ನುವ ಮಾಹಿತಿ ನೀಡಿದ್ದರು. ನಂತರ ತನಿಖೆ ಕೈಗೊಂಡಿದ್ದರಿಂದ ಪ್ರಕರಣದ ಬೆಳಕಿಗೆ ಬಂದಿದೆ ಎಂದು ಭುಲ್ಪುರ್ ಸಂಚಾರ ಪೊಲೀಸ್ ಅಧಿಕಾರಿ ಎ.ಪಿ.ಸಿಂಗ್ ತಿಳಿಸಿದ್ದಾರೆ.

    ಮೃತರ ಪತಿ ಕಸ್ಟಮ್ಸ್ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರಿಂದ ಅಮರಾವತಿ ಅವರಿಗೆ ಪ್ರತಿ ತಿಂಗಳು 13,000 ಪಿಂಚಣಿ ಬರುತ್ತಿತ್ತು. ಇದನ್ನು ಪಡೆಯಲು ಅವರ ನಾಲ್ಕು ಜನ ಪುತ್ರರು ಮೃತ ದೇಹವನ್ನು ಇಟ್ಟುಕೊಂಡು, ಐದು ಖಾಲಿ ಚೆಕ್‍ಗಳಿಗೆ ಸಹಿ ಮಾಡಿಸಿಕೊಂಡಿದ್ದರು ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ನಡೆದಿದ್ದು ಏನು:
    ಅಮರಾವತಿಯವರಿಗೆ ಐದು ಜನ ಪುತ್ರರು, ಓರ್ವ ಪುತ್ರಿ ಇದ್ದು, ನಾಲ್ವರು ಪುತ್ರರ ಜೊತೆ ವಾಸವಾಗಿದ್ದರು. ಕೊನೆಯ ಮಗ ಜ್ಯೋತಿ ಪ್ರಕಾಶ್ ಪ್ರತ್ಯೇಕ ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದಾರೆ.

    ಈ ವರ್ಷ ಜನವರಿಯಲ್ಲಿ ಅಮರಾವತಿ ಅವರು ಅನಾರೋಗ್ಯ ಒಳಗಾಗಿದ್ದರು. ಹೀಗಾಗಿ ಅವರನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸುಂದರ್ಲಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಆಸ್ಪತ್ರೆಯಲ್ಲಿ ಅಮರಾವತಿ ಅವರ ಆರೋಗ್ಯ ಸ್ವಲ್ಪ ಸುಧಾರಣೆ ಆಗುತ್ತಿದ್ದಂತೆ ಮಕ್ಕಳು ಮನೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಅವರು ಮೃತಪಟ್ಟಿದ್ದಾರೆ. ಮೃತಪಡುವ ಮೊದಲೇ 5 ಖಾಲಿ ಚೆಕ್‍ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ದೇಹ ಕೊಳೆಯದಂತೆ ರಾಸಾಯನಿಕವನ್ನು ಸಿಂಪಡಿಸಿದ್ದಾರೆ. ಅಲ್ಲದೇ ನೆರೆಹೊರೆಯವರಿಗೆ ವಾಸನೆ ಬಾರದಂತೆ ಮನೆಯಲ್ಲಿ ಲೋಬಾನ ಹಾಕುತ್ತಿದ್ದರು. ಆರೋಪಿಗಳಿಗೆ ಅವರ ಪತ್ನಿಯರು ಸಾಥ್ ನೀಡಿದ್ದರು ಎಂದು ತನಿಖೆಯ ವೇಳೆ ತಿಳಿದುಬಂದಿದೆ.

    ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಗಾಗಿ ನಾವು ಕಾಯುತ್ತಿದ್ದೇವೆ. ವರದಿ ಬಂದ ಮೇಲೆ ನಿಗದಿತ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    https://youtu.be/jGIGG6iAd0Y

  • ದೆವ್ವದ ವೇಷ ಧರಿಸಿ ವಿದ್ಯಾರ್ಥಿನಿಯರಿಗೆ ವಾರ್ಡನ್ ನಿಂದ ಲೈಂಗಿಕ ಕಿರುಕುಳ

    ದೆವ್ವದ ವೇಷ ಧರಿಸಿ ವಿದ್ಯಾರ್ಥಿನಿಯರಿಗೆ ವಾರ್ಡನ್ ನಿಂದ ಲೈಂಗಿಕ ಕಿರುಕುಳ

    ಲಕ್ನೋ: ವಸತಿ ಶಾಲೆಯೊಂದರಲ್ಲಿ ಮಧ್ಯರಾತ್ರಿ ವಾರ್ಡನ್ ಒಬ್ಬಳು ದೆವ್ವದ ವೇಷ ಧರಿಸಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಘಟನೆ ಉತ್ತರಪ್ರದೇಶದ ಮೀರತ್‍ನಲ್ಲಿ ನಡೆದಿದೆ.

    ಕಸ್ತೂರಬಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿಯರೇ ಶೋಷಣೆಗೆ ಒಳಗಾದವರು. ಈ ಶಾಲೆಯ 8 ವಿದ್ಯಾರ್ಥಿನಿಯರು ತಾವು ಮಧ್ಯರಾತ್ರಿ ಅನುಭವಿಸುವ ತೊಂದರೆಗಳ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ತಕ್ಷಣವೇ ತನಿಖೆ ಕೈಗೊಂಡ ಪರಿಣಾಮ ಪ್ರಕರಣ ಬೆಳಕಿಗೆ ಬಂದಿದೆ.

    ಮಧ್ಯರಾತ್ರಿ ಆಗುತ್ತಿದಂತೆ ವಾರ್ಡನ್ ದೆವ್ವದ ವೇಷ ಧರಿಸಿ, ಮುಖವನ್ನು ಮುಚ್ಚಿಕೊಂಡು ಶಾಲಾ ಆವರಣದಲ್ಲಿ ಓಡಾಡುತ್ತಾಳೆ. ಕೈಯಲ್ಲಿ ಸುಗಂಧ ದ್ರವ್ಯ ಹಿಡಿದು, ಅದನ್ನು ಕೆಲವು ಹುಡುಗಿಯರ ಮೈಮೇಲೆ ಸಿಂಪಡಿಸುತ್ತಾಳೆ. ಏನನ್ನೋ ಪಿಸುಗುಟ್ಟಿ ಹುಡುಗಿಯರನ್ನು ಮಾತನಾಡಿಸಲು ಪ್ರಯತ್ನಿಸುತ್ತಾಳೆ. ನಮ್ಮ ಬಟ್ಟೆಗಳನ್ನು ಎಳೆಯುತ್ತಾಳೆ. ಭಯದಿಂದಾಗಿ ಅವಳು ಏನು ಮಾಡಿದರೂ ನಾವು ಕಣ್ಣು ತೆರೆಯುವುದಿಲ್ಲ ಎಂದು 6ನೇ ತರಗತಿ ವಿದ್ಯಾರ್ಥಿನಿ ಪತ್ರದಲ್ಲಿ ಬರೆದಿದ್ದಾಳೆ.

    ಕೆಲವು ಬಾರಿ ಮಧ್ಯರಾತ್ರಿ ನಮ್ಮ ವಾರ್ಡನ್ ಒಂದಿಷ್ಟು ಹುಡುಗಿಯರನ್ನು ವಸತಿ ಶಾಲೆಯ ಆವರಣದಿಂದ ಹೊರಗೆ ಕರೆದಿಕೊಂಡು ಹೋಗಿದ್ದಾಳೆ. ನನ್ನ ಕೋಣೆಗೂ ಬಂದು ಅಸಭ್ಯವಾಗಿ ಸ್ಪರ್ಶಿಸುತ್ತಾಳೆ. ಆದರೆ, ನಾನು ನಿದ್ದೆಗೆ ಜಾರಿದಂತೆ ನಟಿಸುತ್ತೇನೆ ಎಂದು 8ನೇ ತರಗತಿಯ ವಿದ್ಯಾರ್ಥಿನಿ ಪತ್ರದಲ್ಲಿ ವಿವರಿಸಿದ್ದಾಳೆ.

    ಈ ಹಿಂದೆ ಕೆಲವು ವಿದ್ಯಾರ್ಥಿನಿಯರ ಪೋಷಕರು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಆದರೆ ಪೊಲೀಸರು ಎಫ್‍ಐಆರ್ ಅನ್ನು ದಾಖಲಿಸಿಕೊಂಡಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಈ ಶಾಲೆಯಲ್ಲಿ 6, 7, 8ನೇ ತರಗತಿಯ ಒಟ್ಟು 100 ವಿದ್ಯಾರ್ಥಿನಿಯರಿದ್ದು, ಇಬ್ಬರು ಶಿಕ್ಷಕರು ಹಾಗೂ ಒಬ್ಬ ವಾರ್ಡನ್ ಇದ್ದಾರೆ. ವಸತಿ ಶಾಲೆಯಲ್ಲಿ ಮೂರು ವಿಶಾಲ ಕೋಣೆಗಳಿದ್ದು, ಪ್ರತಿ ಕೋಣೆಯಲ್ಲಿ 20 ಹಾಸಿಗೆಗಳಿವೆ. ಒಂದು ಬೆಡ್ ಮೇಲೆ ಇಬ್ಬರು ವಿದ್ಯಾರ್ಥಿನಿಯರು ಮಲಗುತ್ತಾರೆ. ನಿಯಮಾವಳಿಗಳ ಪ್ರಕಾರ, ಪ್ರತಿ ಕೋಣೆಯಲ್ಲಿ ವಿದ್ಯಾರ್ಥಿನಿಯರ ಜೊತೆಗೆ ಒಬ್ಬ ಶಿಕ್ಷಕಿ ಮಲಗಬೇಕು. ಆದರೆ ಇಲ್ಲಿ ಈ ನಿಯಮವನ್ನು ಉಲ್ಲಂಘಿಸಲಾಗಿದೆ.

    ಮೊದಲ ಬಾರಿ ಇಂತಹ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಕಸ್ತೂರಬಾ ವಸತಿ ಶಾಲೆಯ ಜಿಲ್ಲಾ ಸಂಯೋಜಕರು ಹಾಗೂ ಬ್ಲಾಕ್ ಶಿಕ್ಷಣ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ವರದಿ ಸಲ್ಲಿಸಿದ ತಕ್ಷಣ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸತೇಂದ್ರ ಕುಮಾರ್ ಹೇಳಿದ್ದಾರೆ.

  • ಕರ್ತವ್ಯನಿರತ ಎಸ್‍ಪಿಗೆ ಅವಾಜ್ ಹಾಕಿದ ಬಿಜೆಪಿ ಎಂಎಲ್‍ಎ

    ಕರ್ತವ್ಯನಿರತ ಎಸ್‍ಪಿಗೆ ಅವಾಜ್ ಹಾಕಿದ ಬಿಜೆಪಿ ಎಂಎಲ್‍ಎ

    ಲಕ್ನೋ: ಉತ್ತರಪ್ರದೇಶ ರಾಜ್ಯದ ಬಿಜೆಪಿ ಶಾಸಕ ಹರ್ಷವರ್ಧನ್ ಬಾಜಪೇಯಿ ಕರ್ತವ್ಯ ನಿರತ ಎಸ್‍ಪಿಗೆ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಪೊಲೀಸ್ ಅಧಿಕಾರಿ ಶಾಸಕರನ್ನು ಗುರುತಿಸಲು ವಿಫಲವಾಗಿದ್ದರಿಂದ ಸಿಎಂ ಯೋಗಿ ಆದಿತ್ಯನಾಥ್‍ರ ನಿವಾಸ ಪ್ರವೇಶಕ್ಕೆ ನಿರ್ಬಂಧ ಹಾಕಿದ್ರು. ಇದರಿಂದ ಕೋಪಗೊಂಡ ಶಾಸಕ ಹರ್ಷವರ್ಧನ್ ‘ತುಮ್ ಲಾತೋ ಕೆ ಭೂತ್ ಹೋ, ಲಾತೋಂ ಸೇ ಹಿ ಮಾನತೇ ಹೈ’ (ಕೇವಲ ಅಹಿಂಸೆಯ ಮಾತುಗಳು ಮಾತ್ರ ನಿಮಗೆ ಅರ್ಥವಾಗುತ್ತದೆ) ಎಂದು ನಿಂದಿಸುವ ಮೂಲಕ ಅವಾಜ್ ಹಾಕಿದ್ದಾರೆ.

    ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್ (ಉತ್ತರ) ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಹರ್ಷವರ್ಧನ್ ಬಾಜಪೇಯಿ ಪೊಲೀಸ್ ಅಧಿಕಾರಿ ವಿರುದ್ಧ ಗರಂ ಆಗಿದ್ದಾರೆ. ಗೇಟ್ ಬಳಿಯೇ ತಮ್ಮನ್ನು ತಡೆದಿದ್ದರಿಂದ ಕೋಪಗೊಂಡ ಶಾಸಕರು ಸಾರ್ವಜನಿಕವಾಗಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ನಿಂದಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

  • ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಭಾಗಿ: ಸಿಬಿಐ

    ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಭಾಗಿ: ಸಿಬಿಐ

    ದೆಹಲಿ: ಉನ್ನಾವೋದ 17 ವರ್ಷದ ಬಾಲಕಿ ಮೇಲೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅತ್ಯಾಚಾರ ಎಸಗಿದ್ದಾನೆ ಎಂದು ಬಂಧನಕ್ಕೆ ಒಳಗಾದ ಸಹಾಯಕ ತಿಳಿಸಿದ್ದಾನೆ ಎಂದು ಸಿಬಿಐ ತಿಳಿಸಿದೆ.

    ಮುಂದೆ ಉದ್ಯೋಗ ನೀಡುತ್ತೇನೆ ಎಂದು ಆಶ್ವಾಸನೆ ನೀಡಿ ಕುಲದೀಪ್ ಸಿಂಗ್ ಸೆಂಗಾರ್ ಮತ್ತು ಸಂಗಡಿಗರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸಿಬಿಐ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.

    ಈ ಸಂಬಂಧ ಕುಲದೀಪ್ ಸಹಾಯಕನನ್ನು ಸಿಬಿಐ ವಶಕ್ಕೆ ಪಡೆದಿತ್ತು. ತೀವ್ರ ತನಿಖೆ ನಡೆಸಿದ ವೇಳೆ ಆರೋಪಿ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    2017ರ ಜೂ.4ರಂದು ಉತ್ತರಪ್ರದೇಶದ ಮಖಿ ಗ್ರಾಮದಲ್ಲಿನ ಮನೆಯೊಂದರಲ್ಲಿ ಕುಲದೀಪ್ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ಈ ವೇಳೆ ತಾನು ಬಾಗಿಲು ಕಾಯುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಶಾಸಕನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಬಾಲಕಿಯನ್ನು ಮತ್ತೆ ಜೂ.11 ರಂದು ಶುಭಾಸಿಂಗ್ ಅವಧ್ ನಾರಾಯಣ ಹಾಗೂ ಬ್ರಿಜೇಶ್ ಯಾದವ್ ಅಪಹರಿಸಿದ್ದು, ಜೂ. 19ರ ವರೆಗೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿರುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಬಾಲಕಿ ಜೂ.20 ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಶಾಸಕ ಕುಲದೀಪ್ ಸಿಂಗ್ ವಿರುದ್ಧ ಎಫ್‍ಐಆರ್ ದಾಖಲು ಮಾಡಿಕೊಂಡಿರಲಿಲ್ಲ. ಅಲ್ಲದೇ, ಸ್ಥಳೀಯ ಪೊಲೀಸರು ನಡೆಸಿದ ತನಿಖೆಯ ಬಳಿಕ ಸಲ್ಲಿಸಿದ ಆರೋಪ ಪಟ್ಟಿಯಲ್ಲಿಯೂ ಕುಲದೀಪ್ ಹೆಸರಿರಲಿಲ್ಲ. ಈ ಪ್ರಕರಣ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾದ ಸರ್ಕಾರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ನಂತರ ಸಿಬಿಐ ಶಾಸಕನ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಿತ್ತು.

    ಕುಲದೀಪ್ ಪ್ರಭಾವಿ ವ್ಯಕ್ತಿಯಾಗಿದ್ದರಿಂದ, ಬಾಲಕಿ ವೈದ್ಯಕೀಯ ತಪಾಸಣೆ ನಡೆಸುವಲ್ಲಿ ಉದ್ದೇಶಪೂರ್ವಕವಾಗಿ ತಡ ಮಾಡಲಾಗಿದೆ. ಅಲ್ಲದೇ, ಯುವತಿ ಧರಿಸಿದ್ದ ಉಡುಗೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಲ್ಲ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮೂರು ಎಫ್‍ಐಆರ್ ದಾಖಲು ಮಾಡಿದೆ. ಕುಲದೀಪ್ ಹಾಗೂ ಆತನ ಸಹಚರನ ವಿರುದ್ಧ ಒಂದು ಎಫ್‍ಐಆರ್ ದಾಖಲಾಗಿದ್ದರೆ, ಸಂತ್ರಸ್ತೆಯ ಕುಟುಂಬ ಯೋಗಿ ಆದಿತ್ಯನಾಥ್ ನಿವಾಸದ ಮುಂದೆ ಪ್ರತಿಭಟನೆ ನಡೆಸುವ ವೇಳೆ ನಡೆದ ಗಲಾಟೆಯ ಸಂಬಂಧಿಸಿದಂತೆ ಸ್ಥಳೀಯರ ವಿರುದ್ಧ ಎರಡನೇ ಎಫ್‍ಐಆರ್ ದಾಖಲಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದ ಸಂತ್ರಸ್ತೆಯ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಮೂರನೇ ಎಫ್‍ಐಆರ್ ದಾಖಲಾಗಿದೆ.

  • ಮತ್ತೆ ಯಾವ ಅಪರಾಧ ಮಾಡಲ್ಲ, ಪ್ಲೀಸ್ ನನ್ನನ್ನು ಶೂಟ್ ಮಾಡ್ಬೇಡಿ: ಸಿನಿ ಮಾದರಿಯಲ್ಲಿ ಪೊಲೀಸರಿಗೆ ಶರಣಾದ ಯುಪಿ ಪಾತಕಿ

    ಮತ್ತೆ ಯಾವ ಅಪರಾಧ ಮಾಡಲ್ಲ, ಪ್ಲೀಸ್ ನನ್ನನ್ನು ಶೂಟ್ ಮಾಡ್ಬೇಡಿ: ಸಿನಿ ಮಾದರಿಯಲ್ಲಿ ಪೊಲೀಸರಿಗೆ ಶರಣಾದ ಯುಪಿ ಪಾತಕಿ

    ಲಕ್ನೋ: ದಯವಿಟ್ಟು ನನ್ನನ್ನು ಕೊಲ್ಲಬೇಡಿ, ನಾನು ಇನ್ನು ಮುಂದೆ ಯಾವುದೇ ಅಪರಾಧ ಮಾಡಲ್ಲ ಎಂದು ಉತ್ತರ ಪ್ರದೇಶದ ಪಾತಕಿ ಖನ್ನಾ ಉತ್ತರಪ್ರದೇಶದ ಆಮ್‍ರೋಹಾ ಜಿಲ್ಲೆಯ ಪೊಲೀಸರಿಗೆ ಬುಧವಾರ ಶರಣಾಗಿದ್ದಾನೆ.

    ತನ್ನ ಕತ್ತಿಗೆ ಫಲಕವನ್ನು ನೇತು ಹಾಕಿಕೊಂಡು ಬಂದ ಆತ ಅದರಲ್ಲಿ ದಯವಿಟ್ಟು ನನ್ನನ್ನು ಕೊಲ್ಲಬೇಡಿ, ನಾನು ಇನ್ನು ಮುಂದೆ ಯಾವುದೇ ಅಪರಾಧ ಮಾಡಲ್ಲ ಎಂದು ಬರೆದುಕೊಂಡಿದ್ದಾನೆ. ಇದನ್ನೂ ಓದಿ:ಜಾಮೀನು ಸಿಕ್ಕರೂ 5,500 ಕ್ರಿಮಿನಲ್‍ಗಳು ಯುಪಿ ಜೈಲಿನಿಂದ ಹೊರಬರುತ್ತಿಲ್ಲ!

    ಫಲಕ ಹಾಕಿಕೊಂಡು ಶರಣಾದ ಆರೋಪಿಯು ಫೈಜಾನ್ ಅಹ್ಮದ್ ಅಲಿಯಾಸ್ ಖನ್ನಾ ಸಂಭಾಲ್ ಜಿಲ್ಲೆಯ ನಖಾನಾ ಪೊಲೀಸ್ ಠಾಣೆ ವ್ಯಾಪ್ತಿಯ ದೀಪ್ ಸರಾಯ್ ಗ್ರಾಮದ ನಿವಾಸಿ. ಇವನ ವಿರುದ್ಧ ಕೊಲೆ ಮತ್ತು ದರೋಡೆ ಯತ್ನ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದವು. 2014 ರಿಂದಲೂ ತಲೆಮರೆಸಿಕೊಂಡು ಪೊಲೀಸರಿಂದ ಬಜಾವ್ ಆಗಿದ್ದ ಇವನ ತಲೆಗೆ 12 ಸಾವಿರ ರೂ. ಬಹುಮಾನ ಘೋಷಣೆಯಾಗಿತ್ತು. ಇದನ್ನೂ ಓದಿ: ಯೋಗಿ ಸರ್ಕಾರದ ಎನ್‍ಕೌಂಟರ್ ಎಫೆಕ್ಟ್- ಸೈಕಲ್ ಶಾಪ್, ಹಣ್ಣಿನ ವ್ಯಾಪಾರ, ರಿಕ್ಷಾ ಚಾಲನೆ ಆರಂಭಿಸಿದ ರೌಡಿಶೀಟರ್ ಗಳು

    ಸದ್ಯ ಈತ ತನ್ನನ್ನು ಪೊಲೀಸರು ಎನ್‍ಕೌಂಟರ್ ಮಾಡುತ್ತಾರೆ ಎಂಬ ಭಯದಿಂದಾಗಿ ಹೀಗೆ ಮಾಡಿದ್ದಾನೆ ಎನ್ನಲಾಗಿದೆ. ಶರಣಾಗುವ ಮುನ್ನ ಅವನು ಮಾಧ್ಯಮಗಳೊಂದಿಗೆ ಮಾತನಾಡಿ ನಾನು ಪೊಲೀಸರಿಗೆ ಶರಣಾಗುವುದಾಗಿ ತಿಳಿಸಿದ್ದ. ಪೊಲೀಸರು ಆತನನ್ನು ಬಂಧಿಸಿ ಈಗ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು

  • ಮದ್ವೆಯಾದ ಹತ್ತೇ ದಿನಕ್ಕೆ ಪತ್ನಿಗೆ ಗುಂಡಿಟ್ಟು, 100ಗೆ ಕಾಲ್ ಮಾಡ್ದ!

    ಮದ್ವೆಯಾದ ಹತ್ತೇ ದಿನಕ್ಕೆ ಪತ್ನಿಗೆ ಗುಂಡಿಟ್ಟು, 100ಗೆ ಕಾಲ್ ಮಾಡ್ದ!

    ಲಕ್ನೋ: ಹತ್ತು ದಿನಗಳ ಹಿಂದೆ ಮದುವೆಯಾಗಿದ್ದ ವ್ಯಕ್ತಿಯೊಬ್ಬ ವರದಕ್ಷಿಣೆಗಾಗಿ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ದಾರುಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಪಿಂಕಿ ಗಂಡನಿಂದಲೇ ಕೊಲೆಯಾದ ಪತ್ನಿ. ಆರೋಪಿ ಪತಿ ರವಿಕಾಂತ್ ಗಿರಿ ಉತ್ತರಪ್ರದೇಶದ ದಕ್ಷಿಣ ಭಾಗದ ಬುಲಂದಷಹಾರ್ ನಗರದ ವ್ಯಾಪಾರಿಯಾಗಿದ್ದಾನೆ. ಮದುವೆ ಬಳಿಕ ಪತ್ನಿಗೆ ತವರು ಮನೆಯಿಂದ 15 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದನು. ಹೀಗಾಗಿ ಆತನೇ ನಮ್ಮ ಮಗಳನ್ನು ಕೊಲೆ ಮಾಡಿದ್ದಾನೆ ಅಂತಾ ಪಿಂಕಿ ಪೋಷಕರು ಆರೋಪಿಸಿದ್ದಾರೆ.

    ಕೊಲೆಗೈದು 100ಗೆ ಕಾಲ್ ಮಾಡಿದ್ದ: ತಡರಾತ್ರಿ ದೇವಸ್ಥಾನದಿಂದ ಹಿಂದಿರುಗುವಾಗ ದರೋಡೆಕೋರರು ನಮ್ಮ ಕಾರ್ ಅಡ್ಡಗಟ್ಟಿದ್ರು. ಆದ್ರೆ ಪತ್ನಿ ದರೋಡೆಕೋರರ ವಿರುದ್ಧ ವಾಗ್ವಾದಕ್ಕೆ ಇಳಿದಿದ್ದಳು. ಇದ್ರಿಂದ ಕೋಪಗೊಂಡ ದರೋಡೆಕೋರರು ಪತ್ನಿಗೆ ಗುಂಡಿಟ್ಟು ಕೊಲೆಗೈದು ಪರಾರಿಯಾದ್ರು. ನಂತರ ನಾನು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ ಅಂತಾ ರವಿಕಾಂತ್ ಕುಟುಂಬಸ್ಥರ ಮುಂದೆ ಹೇಳಿದ್ದನು.

    ಘಟನೆ ಸಂಬಂಧ ಪೊಲೀಸರು ಪತಿಯನ್ನು ವಶಪಡಿಸಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯಲ್ಲಿ ಪತಿ ತಾನೇ ಪತ್ನಿಯನ್ನು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ ಅಂತಾ ಬುಲಂದಷಹಾರ್ ಠಾಣೆಯ ಪೊಲೀಸ್ ಅಧಿಕಾರಿ ಪ್ರವೀಣ್ ರಂಜನ್ ಸಿಂಗ್ ಹೇಳಿದ್ದಾರೆ.

    ಮೃತ ಪಿಂಕಿ ಮೂಲತಃ ದೆಹಲಿಯವರು. ಪಿಂಕಿ ಮದುವೆಗಾಗಿ ಆಕೆಯ ಕುಟುಂಬ 20 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಮದುವೆಯಾದ ಎರಡು ದಿನಗಳ ನಂತರ ಆರೋಪಿ ರವಿಕಾಂತ್ 15 ಲಕ್ಷ ರೂಪಾಯಿ ವರದಕ್ಷಿಣೆ ನೀಡುವಂತೆ ಒತ್ತಾಯಿಸುತ್ತಿದ್ದನು. ಈ ವಿಚಾರಕ್ಕೆ ಆಕೆಯನ್ನು ಕೊಲೆಗೈದಿದ್ದಾನೆ ಎಂಬುದಾಗಿ ವರದಿಯಾಗಿದೆ.