Tag: uttar pradesh

  • ತಮ್ಮನ ಕೊಲೆ ಸೇಡಿಗೆ ಬಿಸಿಯೂಟಕ್ಕೆ ವಿಷ ಬೆರೆಸಿದ 7ನೇ ತರಗತಿ ವಿದ್ಯಾರ್ಥಿನಿ !

    ತಮ್ಮನ ಕೊಲೆ ಸೇಡಿಗೆ ಬಿಸಿಯೂಟಕ್ಕೆ ವಿಷ ಬೆರೆಸಿದ 7ನೇ ತರಗತಿ ವಿದ್ಯಾರ್ಥಿನಿ !

    ಲಕ್ನೋ: ತಮ್ಮನನ್ನು ಕೊಲೆ ಮಾಡಿದರು ಅಂತಾ 7ನೇ ತರಗತಿ ಬಾಲಕಿಯೊಬ್ಬಳು ಬಿಸಿಯೂಟದಲ್ಲಿ ವಿಷ ಬೆರೆಸಿ ಎಲ್ಲ ವಿದ್ಯಾರ್ಥಿಗಳನ್ನು ಕೊಲೆ ಮಾಡಲು ಹೋಗಿ ಸಿಕ್ಕಿಬಿದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಬಂಕಟ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯಲ್ಲಿ ಪ್ರಕರಣ ನಡೆದಿದ್ದು, ಬಾಲಕಿ ಹಾಗೂ ಆಕೆಯ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ನಡೆದದ್ದು ಏನು?
    ಇದೇ ಶಾಲೆಯಲ್ಲಿ ಬಾಲಕಿ 7ನೇ ತರಗತಿ ಹಾಗೂ ಆಕೆಯ ತಮ್ಮ 3ನೇ ತರಗತಿ ಓದುತ್ತಿದ್ದರು. 2018ರ ಏಪ್ರಿಲ್‍ನಲ್ಲಿ ಬಾಲಕಿಯ ತಮ್ಮನನ್ನು 5ನೇ ತರಗತಿ ವಿದ್ಯಾರ್ಥಿಯೊಬ್ಬ ಕೊಲೆ ಮಾಡಿದ್ದ. ಕೊಲೆ ಮಾಡಿದ್ದ ಆರೋಪಿ ಬಾಲಾಪರಾಧಿ ಕಾರಾಗೃಹದಲ್ಲಿ ಇದ್ದಾನೆ. ಆದರೆ ತಮ್ಮನ ಕೊಲೆಯಿಂದ ಮನನೊಂದ ಬಾಲಕಿ ಶಾಲೆಯ ಎಲ್ಲ ಮಕ್ಕಳ ಮೇಲೆ ದ್ವೇಷ ಸಾಧಿಸಲು ಕೊಲೆಗೆ ಯತ್ನಿಸಿದ್ದಾಳೆ ಎಂದು ವರದಿಯಾಗಿದೆ.

    ಮಂಗಳವಾರ ಶಾಲೆಯ ಬಿಸಿಯೂಟದ ಮನೆಯಿಂದ ಬಾಲಕಿ ಹೊರಬಂದಿದ್ದಳು. ಬಾಲಕಿಯ ಕೈಗಳಿಂದ ವಿಷದ ವಾಸನೆ ಬರುತ್ತಿದ್ದು, ಬೇಳೆ ಸಾರಿನ ಪಾತ್ರೆ ತೆರೆದಿದ್ದರಿಂದ ಶಂಕೆ ವ್ಯಕ್ತಪಡಿಸಿದ ಅಡುಗೆ ಸಹಾಯಕಿ ಶಾಲೆಯ ಪ್ರಾಚಾರ್ಯ ಭ್ರಿಗುನಾಥ್ ಪ್ರಸಾದ್ ಅವರಿಗೆ ದೂರು ನೀಡಿದ್ದರು. ಅದೃಷ್ಟವಶಾತ್ ಯಾವುದೇ ಮಕ್ಕಳು ಊಟ ಮಾಡದಿರಲಿಲ್ಲ. ಹೀಗಾಗಿ ಭಾರೀ ಅನಾಹುತ ತಪ್ಪಿದೆ.

    ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ಬಂದು ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ಬಾಲಕಿ ಹಾಗೂ ಆಕೆಯ ತಾಯಿಯನ್ನು ಸುತ್ತುವರೆದು ಥಳಿಸಿ, ಕೂಡಿ ಹಾಕಿದ್ದರು. ಸ್ಥಳಕ್ಕೆ ಬಂದ ಪೊಲೀಸರು ತಾಯಿ ಹಾಗೂ ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಆಹಾರವನ್ನು ವಿಷ ಪರೀಕ್ಷೆಗೆ ಕಳುಹಿಸಲಾಗಿದ್ದು, ಮೂರು ದಿನಗಳ ನಂತರ ವರದಿ ಬರಲಿದ್ದು, ಅಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳಲು ಬರುವುದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

  • ಪತ್ನಿಯ ಚುನಾವಣಾ ವೆಚ್ಚ ಭರಿಸಲು ಕಳ್ಳತನಕ್ಕೆ ಇಳಿದಿದ್ದ ಪತಿ ಅರೆಸ್ಟ್!

    ಪತ್ನಿಯ ಚುನಾವಣಾ ವೆಚ್ಚ ಭರಿಸಲು ಕಳ್ಳತನಕ್ಕೆ ಇಳಿದಿದ್ದ ಪತಿ ಅರೆಸ್ಟ್!

    ಅಲಹಾಬಾದ್: ಪತ್ನಿಯ ಗ್ರಾಮ ಪಂಚಾಯತ್ ಚುನಾವಣೆಯ ಖರ್ಚುಗಳನ್ನು ಭರಿಸಲು ಪತಿಯೊಬ್ಬ ಕಳ್ಳತನಕ್ಕೆ ಇಳಿದ್ದಿದ್ದ ಪ್ರಕರಣವೊಂದು ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

    ಪಂಚ್‍ಲಾಲ್ ವರ್ಮ ಎಂಬಾತ ಎರಡು ಜನರ ತಂಡವನ್ನು ಕಟ್ಟಿಕೊಂಡು 65 ಕಳ್ಳತನ ಎಸಗಿದ್ದ. ಪ್ರತಾಪ್‍ಗಡ ಠಾಣಾ ವ್ಯಾಪ್ತಿಯಲ್ಲಿನ ರಾಜಕೀಯ ನಾಯಕರು, ಸರ್ಕಾರಿ ಅಧಿಕಾರಿಗಳು, ಅವರ ಸಂಬಂಧಿಕರ ಮನೆಗಳಲ್ಲಿ ಪಂಚ್‍ಲಾಲ್ ವರ್ಮನ ಗ್ಯಾಂಗ್ ಕಳ್ಳತನ ಎಸಗಿದೆ.

    ಪ್ರತಾಪ್‍ಗಡ ಜಿಲ್ಲೆಯ ಲಾಲ್‍ಗಂಜ್ ಬ್ಲಾಕ್‍ನ ಮಧವ ಗ್ರಾಮದಲ್ಲಿ ಗ್ರಾಮ ಪ್ರಧಾನ್ ಚುನಾವಣೆಗೆ ನನ್ನ ಪತ್ನಿ ನಿಂತಿದ್ದಳು. ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಯೋಜಿಸಿದ್ದೆ. ಚುನಾವಣಾ ಖರ್ಚು ಮತ್ತು ವಿಜಯೋತ್ಸವಕ್ಕೆ ನಾನು ಆಪ್ತರ ಬಳಿ 25 ಲಕ್ಷ ರೂ. ಸಾಲ ಮಾಡಿದ್ದೆ. ಈ ಸಾಲವನ್ನು ತೀರಿಸಲು ಕಳ್ಳತನ ಕೃತ್ಯಕ್ಕೆ ಇಳಿದೆ ಎಂದ ವಿಚಾರಣೆ ವೇಳೆ ಪಂಚ್‍ಲಾಲ್ ವರ್ಮ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    44 ಗ್ರಾಂ ಚಿನ್ನ, 1.278 ಕೆಜಿ ಬೆಳ್ಳಿ, 12,100 ರೂ. ನಗದು, 315 ರೈಫಲ್ ಹಾಗೂ ಒಂದು ಕಂಟ್ರಿ ಪಿಸ್ತೂಲ್ ಹಾಗೂ ಗುಂಡುಗಳನ್ನು ಪಂಚ್‍ಲಾಲ್ ವರ್ಮ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ. ಕದ್ದ ಕದ್ದ ಚಿನ್ನಾಭರಣಗಳನ್ನು ಸ್ಥಳೀಯ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರು. ಚಿನ್ನದ ಬೆಲೆಯ 60% ರಷ್ಟು ಬೆಲೆಗೆ ವ್ಯಾಪಾರಿಗಳನ್ನು ಚಿನ್ನವನ್ನು ಖರೀದಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ತಲಾಖ್ ನೀಡಿದ್ದಕ್ಕೆ ಅನ್ನ, ನೀರು ಕೊಡದೇ ಪತಿಯಿಂದಲೇ ಪತ್ನಿ ಕೊಲೆ!

    ತಲಾಖ್ ನೀಡಿದ್ದಕ್ಕೆ ಅನ್ನ, ನೀರು ಕೊಡದೇ ಪತಿಯಿಂದಲೇ ಪತ್ನಿ ಕೊಲೆ!

    ಲಕ್ನೋ: ತಲಾಖ್ ನೀಡಿದ್ದಕ್ಕೆ ರೊಚ್ಚಿಗೆದ್ದ ಪತಿ ಅನ್ನ ನೀರು ನೀಡದೇ ಪತ್ನಿಯನ್ನು ಕೊಲೆ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ರಜೀಯಾ ಮೃತ ದುರ್ದೈವಿ ನಹಿಮ್ ಕೂಡಿ ಹಾಕಿದ್ದ ಪತಿ. ದಂಪತಿಗೆ 6 ವರ್ಷದ ಮಗುವಿದೆ. ರಜೀಯಾ ಅವರನ್ನು ಕೂಡಿ ಹಾಕಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ರಕ್ಷಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಜೀಯಾ ಅವರು ಮಂಗಳವಾರ ಮೃತ ಪಟ್ಟಿದ್ದಾರೆ.

    ರಜೀಯಾ ಅವರ ಪತಿ ನಹಿಮ್ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಪತಿಯ ವರ್ತನೆಯಿಂದ ಬೇಸತ್ತ ರಜೀಯಾ ತ್ರಿವಳಿ ತಲಾಖ್ ನೀಡಿದ್ದರು. ಇದರಿಂದ ಕೋಪಗೊಂಡ ನಹಿಮ್ ರಜೀಯಾ ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದ. ಅಷ್ಟೇ ಅಲ್ಲದೆ ಆಕೆಗೆ ಅನ್ನ ನೀರು ಕೊಡುತ್ತಿರಲಿಲ್ಲ ಎಂದು ರಜೀಯಾ ಸಹೋದರಿ ದೂರಿದ್ದಾರೆ.

    ರಜೀಯಾ ಅವರನ್ನು ನೋಡಲು ಮನೆಗೆ ಹೋದಾಗ ಪತಿಯ ಕೃತ್ಯ ಬೆಳಕಿಗೆ ಬಂದಿದ್ದು, ತಕ್ಷಣವೇ ರಜೀಯಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ನಹಿಮ್ ವಿರುದ್ಧ ಪ್ರಕರಣ ದಾಖಲಿಸಲು ಠಾಣೆಗೆ ಹೋಗಿದ್ದೇವು. ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಅವರು ಆರೋಪಿಸಿದರು.

    ನಹಿಮ್ ತನ್ನ ಮೊದಲ ಪತ್ನಿಗೂ ವರದಕ್ಷಣೆ ತರುವಂತೆ ಕಿರುಕುಳ ನೀಡುತ್ತಿದ್ದ. ಇದರಿಂದಾಗಿ ಅವರು ವಿಚ್ಛೇದನ ಪಡೆದು ಬೆರೆಯಾಗಿದ್ದರು ಎಂದು ಮೇರಾ ಹಕ್ ಎನ್‍ಜಿಓ ಸಂಸ್ಥಾಪಕಿ ಫರ್ಹಾತ್ ನಖ್ವಿ ತಿಳಿಸಿದರು.

    ರಜೀಯಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದರಿಂದ ಲಕ್ನೋಗೆ ಕಳುಹಿಸಲಾಗಿತ್ತು. ಆದರೆ ರಜೀಯಾ ಅವರ ಸ್ಥಿತಿ ಗಂಭೀರವಾಗಿತ್ತು ಹೀಗಾಗಿ ಮೃತಪಟ್ಟಿದ್ದಾರೆ ಎಂದು ಫರ್ಹಾತ್ ನಖ್ವಿ ವಿವರಿಸಿದರು.

  • ಜುಲೈ 15 ರಿಂದ ಉತ್ತರ ಪ್ರದೇಶದಲ್ಲಿ ಪ್ಲಾಸ್ಟಿಕ್ ಬ್ಯಾನ್ : ಯೋಗಿ ಆದಿತ್ಯನಾಥ್

    ಜುಲೈ 15 ರಿಂದ ಉತ್ತರ ಪ್ರದೇಶದಲ್ಲಿ ಪ್ಲಾಸ್ಟಿಕ್ ಬ್ಯಾನ್ : ಯೋಗಿ ಆದಿತ್ಯನಾಥ್

    ಲಕ್ನೋ: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಹಾರಾಷ್ಟ್ರ ಸರ್ಕಾರ ಪ್ಲಾಸ್ಟಿಕ್ ಮೇಲೆ ನಿಷೇಧ ವಿಧಿಸಿದ ಬೆನ್ನಲ್ಲೇ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಹ ರಾಜ್ಯದಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡುವುದಾಗಿ ತಿಳಿಸಿದ್ದಾರೆ.

    ಈ ಕುರಿತು ಶುಕ್ರವಾರ ಮಾಹಿತಿ ನೀಡಿದ ಸಿಎಂ ಯೋಗಿ ಆದಿತ್ಯನಾಥ್, ಪ್ಲಾಸ್ಟಿಕ್ ಬ್ಯಾನ್ ಮಾಡುವ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದ ಜನರಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಿರಲು ನಾನು ಮನವಿ ಮಾಡುತ್ತಿದ್ದು, ಕಪ್, ಗ್ಲಾಸ್, ಪಾಲಿಥಿನ್ ವಸ್ತುಗಳನ್ನು ಬಳಕೆ ಮಾಡುವುದರಿಂದ ದೂರ ಮಾಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಜೂನ್ 15 ರಿಂದ ಹೊಸ ನಿಯಮಗಳು ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಮಹಾರಾಷ್ಟ್ರ ಸರ್ಕಾರ ಜೂನ್ 23 ರಂದು ಪ್ಲಾಸ್ಟಿಕ್ ಬ್ಯಾನ್ ಮಾಡುವ ಐತಿಹಾಸಿಕ ನಿರ್ಣಯವನ್ನು ಘೋಷಿಸಿತ್ತು. ಆದರೆ ಬಳಿಕ ಉದ್ಯಮಿಗಳ ಒತ್ತಡಕ್ಕೆ ಮಣಿದ ಸರ್ಕಾರ ಇ-ಕಾಮರ್ಸ್ ಸಂಸ್ಥೆಗಳು ತಮ್ಮ ಪ್ಯಾಕಿಂಗ್ ನಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲು 3 ತಿಂಗಳ ಅವಧಿಯನ್ನು ನೀಡಿತ್ತು.

    ಪ್ರಧಾನಿ ಮೋದಿ ಅವರು 2022 ರ ವೇಳೆ ದೇಶವನ್ನು ಒಮ್ಮೆ ಬಳಸಿ ಬೀಸಾಡುವ ಪ್ಲಾಸ್ಟಿಕ್ ಬಳಕೆ ಮುಕ್ತ ರಾಷ್ಟ್ರವಾಗಿ ಮಾಡುವ ಗುರಿಯನ್ನು ಹೊಂದಿದ್ದು, ಇದರ ಹಿನ್ನೆಲೆಯಲ್ಲಿ ಸಾಧ್ಯ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಲಾಗುತ್ತಿದೆ.

  • ಕೇಸ್ ಫೈಟ್ ಮಾಡಲು ಹಣ ಇಲ್ಲ, ಕಿಡ್ನಿ ಮಾರಲು ಅನುಮತಿ ನೀಡಿ – ಮೋದಿಗೆ ಕೈದಿ ಪತ್ರ

    ಕೇಸ್ ಫೈಟ್ ಮಾಡಲು ಹಣ ಇಲ್ಲ, ಕಿಡ್ನಿ ಮಾರಲು ಅನುಮತಿ ನೀಡಿ – ಮೋದಿಗೆ ಕೈದಿ ಪತ್ರ

    ಲಖ್ನೌ: ಕೈದಿಯೋರ್ವ ತನ್ನ ಮೇಲಿರುವ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲು ಹಣದ ಅವಶ್ಯಕತೆ ಇದ್ದು, ತನ್ನ ಕಿಡ್ನಿ ಮಾರಲು ಅನುಮತಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾನೆ.

    ಲಸ್ಕರ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ರಾಜು (30) ಅಲಿಯಾಸ್ ಮದನ್ ಈ ಪತ್ರವನ್ನು ಬರೆದಿದ್ದಾನೆ. ಮಹಿಳೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಯತ್ನ ಕೇಸಿಗೆ ಸಂಬಂಧಪಟ್ಟಂತೆ 2014 ರಲ್ಲಿ ಜೈಲು ಸೇರಿದ್ದ ಈತ ಈಗಲೂ ನ್ಯಾಯಾಂಗ ಬಂಧನದಲ್ಲೇ ಇದ್ದಾನೆ.

    ಈ ಕೊಲೆಗೂ ತನಗೂ ಯಾವುದೇ ಸಂಬಂಧವಿಲ್ಲ, ಆದರೂ ನನ್ನನ್ನು ಕೇಸ್ ನಲ್ಲಿ ಜೈಲಿಗೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮೋದಿ ಅವರಿಗೆ ಪತ್ರದಲ್ಲಿ ದೂರು ನೀಡಿದ್ದಾನೆ.

    ಸದ್ಯ ನಾನು ಬಡವ ಹಾಗೂ ಅಸಹಾಯಕನಾಗಿದ್ದೇನೆ. ಈ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸಲು ನನ್ನ ಹತ್ತಿರ ಹಣ ಇಲ್ಲ. ಅದ್ದರಿಂದ ನನ್ನ ಕಿಡ್ನಿ ಮಾರಿ ಬಂದ ಹಣದಲ್ಲಿ ನ್ಯಾಯಕ್ಕಾಗಿ ಕಾನೂನು ರೀತಿಯಲ್ಲಿ ಹೋರಾಡಬೇಕು. ಅಲ್ಲದೇ ಯಾರಿಂದಲೂ ನನಗೆ ನೈತಿಕ ಸಹಾಯ ಇಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುಕ್ಕಿಂತ ನನ್ನ ಕಿಡ್ನಿ ಮಾರಿ ಬಂದ ಹಣದಲ್ಲಿ ಕಾನೂನು ಹೋರಾಟ ನಡೆಸುವುದೇ ಉಳಿದಿರುವ ದಾರಿ ಎಂಬುದಾಗಿ ಪತ್ರ ಬರೆದಿದ್ದಾನೆ.

    ರಾಜು ತನ್ನ ಕಿಡ್ನಿ ಮಾರಲು ಸಹಾಯ ಮಾಡುವಂತೆ ಜೈಲು ಅಧಿಕಾರಿಗಳನ್ನು ಕೇಳಿಕೊಂಡಿದ್ದಾನೆ. ಆದರೆ ಪತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ಜೈಲಿನ ಮುಖ್ಯ ಅಧಿಕಾರಿ, ನನಗೆ ರಾಜು ಪ್ರಧಾನಿಯವರಿಗೆ ಪತ್ರ ಬರೆದಿರುವ ವಿಷಯ ತಿಳಿದಿಲ್ಲ, ಅದಾಗಿಯೂ ಈ ಕುರಿತಂತೆ ಪರಿಶೀಲಿಸುವುದಾಗಿ ಹೇಳಿದ್ದಾರೆ. ಅಂದಹಾಗೆ ಕೈದಿ ರಾಜು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾನೆ.

    ಈ ಕುರಿತಂತೆ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ವಕೀಲರಾದ ಸುರಜ್ಪೂರ್ ಮಾತನಾಡಿ, ರಾಜು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆತನ ಪರವಾಗಿ ಉಚಿತವಾಗಿ ವಾದ ಮಂಡಿಸುವುದಾಗಿ ತಿಳಿಸಿದ್ದಾಗಿ ವರದಿಯಾಗಿದೆ.

  • ತಾಜ್ ಮಹಲ್ ಶಿವನ ಮಂದಿರವೇ ಆಗಿದ್ದರೆ 20 ಸಾವಿರ ಮುಸ್ಲಿಮರಿಂದ ಅದನ್ನು ಕೆಡವೋಣ – ಅಜಂ ಖಾನ್ ವ್ಯಂಗ್ಯ

    ತಾಜ್ ಮಹಲ್ ಶಿವನ ಮಂದಿರವೇ ಆಗಿದ್ದರೆ 20 ಸಾವಿರ ಮುಸ್ಲಿಮರಿಂದ ಅದನ್ನು ಕೆಡವೋಣ – ಅಜಂ ಖಾನ್ ವ್ಯಂಗ್ಯ

    ಲಕ್ನೋ: ವಿವಾದತ್ಮಾಕ ಹೇಳಿಕೆಗಳಿಂದ ಸುದ್ದಿಯಾಗುವ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಮತ್ತೊಮ್ಮೆ ವಿವಾದತ್ಮಾಕ ಹೇಳಿಕೆ ನೀಡಿದ್ದು, ತಾಜ್ ಮಹಲ್ ಶಿವನ ಮಂದಿರವಾಗಿದ್ದರೆ ಅದನ್ನು 20 ಸಾವಿರ ಮುಸ್ಲಿಮರಿಂದ ಕೆಡವೋಣ, ಗುಲಾಮಗಿರಿಯ ಗುರುತು ಇರಬಾರದು ಎಂದು ವ್ಯಂಗ್ಯವಾಡಿದ್ದಾರೆ.

    ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಾಜ್‍ಮಹಲ್ ಕಟ್ಟಡ ಕೆಡವಲು ಮುಂದಾಗಬೇಕು. ಬಳಿಕ ನಾನು ಹಾಗೂ ನನ್ನೊಂದಿಗೆ ಹಲವರು ಕೈ ಜೋಡಿಸಲಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ತಾಜ್ ಮಹಲ್ ಶಿವನ ಮಂದಿರವಾಗಿತ್ತು ಎಂಬ ಯೋಗಿ ಆದಿತ್ಯಾನಾಥ್ ವಾದಕ್ಕೆ ತಿರುಗೇಟು ನೀಡಿದ್ದಾರೆ.

    ಇದೇ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಅವರ ವಾದವನ್ನು ಒಪ್ಪುತ್ತೇನೆ ಎಂದು ಹೇಳಿರುವ ಅವರು, ಅದ್ದರಿಂದಲೇ ಅವರೇ ಮೊದಲು ಈ ಕಾರ್ಯ ಆರಂಭಿಸಬೇಕು. ಬಳಿಕ ನಮ್ಮ ಮುಸ್ಲಿಂ ಸಮುದಾಯದ 20 ಸಾವಿರ ಮಂದಿ ಈ ಕಾರ್ಯದಲ್ಲಿ ತೊಡಗುತ್ತಾರೆ ಎಂದಿದ್ದಾರೆ.

    ಸದ್ಯ ಅಜಂ ಖಾನ್ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಹೇಳಿಕೆ ಪರ ಹಾಗೂ ವಿರೋಧದ ಚರ್ಚೆಗಳು ಆರಂಭವಾಗಿದೆ. ಕೆಲ ದಿನಗಳ ಹಿಂದೆ ತಾಜ್‍ಮಹಲ್ ಗೆ ಭೇಟಿ ನೀಡಿದ್ದ ಕೆಲವರು ಶಿವ ಚಾಲಿಸಾ ಪಠಿಸಿದಕ್ಕೆ ಅರೆಸ್ಟ್ ಆಗಿದ್ದರು.

    ಅಜಂ ಖಾನ್ ಈ ರೀತಿಯ ಹೇಳಿಕೆ ನೀಡುವುದು ಇದೇ ಹೊಸದೆನಲ್ಲ. ಈ ಹಿಂದೆ ದೆಹಲಿ ಕೆಂಪುಕೋಟೆ, ರಾಷ್ಟ್ರಪತಿ ಭವನ, ಸಂಸತ್ ಭವನ ಗುಲಾಮಗಿರಿಯ ಸಂಕೇತವಾಗಿದ್ದು, ಇದನ್ನು ಕೆಡವಬೇಕು ಎಂದು ಹೇಳಿದ್ದರು.

  • ಪಕ್ಷದ ವಕ್ತಾರರಾಗಲು ಬಯಸಿದ್ದ ಅಭ್ಯರ್ಥಿಗಳಿಗೆ ಸರ್ಪ್ರೈಸ್ ಕೊಟ್ಟ ಯುಪಿ ಕಾಂಗ್ರೆಸ್!

    ಪಕ್ಷದ ವಕ್ತಾರರಾಗಲು ಬಯಸಿದ್ದ ಅಭ್ಯರ್ಥಿಗಳಿಗೆ ಸರ್ಪ್ರೈಸ್ ಕೊಟ್ಟ ಯುಪಿ ಕಾಂಗ್ರೆಸ್!

    ಲಕ್ನೋ: 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಹೀನಾಯವಾಗಿ ಸೋತಿದ್ದ ಕಾಂಗ್ರೆಸ್ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದು ಈಗಿನಿಂದಲೇ ಕಾರ್ಯತಂತ್ರ ನಡೆಸುತ್ತಿದೆ. ಇದಕ್ಕೆ ಪೂರಕ ಎಂಬಂತೆ ಉತ್ತರ ಪ್ರದೇಶ್ ಕಾಂಗ್ರೆಸ್ ಕಮೀಟಿ(ಯುಪಿಸಿಸಿ) ವಕ್ತಾರರ ಹುದ್ದೆಯನ್ನು ಬಯಸುವ ಮಂದಿಗೆ ದಿಢೀರ್ ಆಗಿ ಪರೀಕ್ಷೆ ನಡೆಸಿ ಅವರ ರಾಜಕೀಯ ಜ್ಞಾನವನ್ನು ಪತ್ತೆ ಹಚ್ಚಿದೆ.

    ಗುರುವಾರ ನನ್ನ ರಕ್ತ, ಡಿಎನ್‍ಎಯಲ್ಲಿ ಕಾಂಗ್ರೆಸ್ ಇದೆ ಎಂದು ಹೇಳುತ್ತಿದ್ದವರು ಸೇರಿ ಒಟ್ಟು 70 ಮಂದಿ ಸ್ಥಳೀಯ ನಾಯಕರಿಗೆ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಮತ್ತು ರಾಷ್ಟ್ರಿಯ ಮಾಧ್ಯಮ ಸಂಯೋಜಕ ರಾಹುಲ್ ಗುಪ್ತಾ ಅವರ ಉಪಸ್ಥಿತಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ನಡೆಸುವ ಕುರಿತು ಯಾವುದೇ ಪೂರ್ವ ಮಾಹಿತಿಯನ್ನು ನೀಡಿದ ನಾಯಕರು ಆಶ್ಚರ್ಯಕರವಾಗಿ 14 ಪ್ರಶ್ನೆಗಳನ್ನು ನೀಡಿ ಪರೀಕ್ಷೆಯನ್ನು ನೀಡಿದ್ದಾರೆ.

    ಪ್ರಮುಖವಾಗಿ ಪರೀಕ್ಷೆಯಲ್ಲಿ ಮೋದಿ ಸರ್ಕಾರದ ವೈಫಲ್ಯಗಳು ಯಾವುವು? ಮನಮೋಹನ್ ಸಿಂಗ್ ಸರ್ಕಾರದ ಸಾಧನೆಗಳು ಯಾವುವು? ಉತ್ತರ ಪ್ರದೇಶ ರಾಜ್ಯದಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಿದೆ? ಅಲ್ಲದೇ ಎಷ್ಟು ವಿಭಾಗಗಳಾಗಿ ರಾಜ್ಯವನ್ನು ವಿಂಗಡಿಸಲಾಗಿತ್ತು ಎಂಬ ಪ್ರಶ್ನೆಗಳನ್ನು ನೀಡಲಾಗಿದೆ.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಯುವ ನಾಯಕರು ಹಾಗೂ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವ ಉದ್ದೇಶ ಹೊಂದಿದ್ದು. ಅಲ್ಲದೇ 2019 ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆಯುಲು ಸಿದ್ಧತೆ ನಡೆಸುವ ಕುರಿತ ಪೂರ್ವಭಾವಿಯಾಗಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ಬಳಿಕ ಮಹತ್ವದ ಬೆಳವಣಿಗೆ ಎಂಬಂತೆ ಪಕ್ಷದ ಹಿರಿಯ ನಾಯಕರು ಸಭೆ ನಡೆಸಿ ಚರ್ಚೆ ನಡೆಸಿದ್ದಾಗಿ ಯುಪಿಸಿಸಿ ಅಧ್ಯಕ್ಷ ರಾಜ್ ಬಬ್ಬರ್ ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ಪ್ರಿಯಾಂಕಾ ಚತುರ್ವೇದಿ, ಪಕ್ಷದಲ್ಲಿ ಇಂತಹ ಪರೀಕ್ಷೆಗಳು ಹೊಸದೇನು ಅಲ್ಲ. ಈ ಹಿಂದೆಯೂ ಇಂತಹ ಕಾರ್ಯಗಳನ್ನು ಕಾಂಗ್ರೆಸ್ ನಡೆಸಿದೆ. ಈಗ ನಾವು ಉತ್ತರ ಪ್ರದೇಶದಲ್ಲಿಯೂ ಸಹ ನಡೆಸಲಾಗಿದೆ. ಪರೀಕ್ಷೆಯಲ್ಲಿ ಕಠಿಣ ಪ್ರಶ್ನೆಗಳನ್ನು ಕೇಳಲಾಗಿದೆಯೆಂದು ಹೇಳುವುದು ತಪ್ಪು. ವಕ್ತಾರರು ಉತ್ತರಿಸಲು ಸಾಧ್ಯವಾಗುವಂತಹ ಮೂಲಭೂತ ಪ್ರಶ್ನೆಗಳನ್ನು ಮಾತ್ರ ಕೇಳಲಾಗಿದೆ ಎಂದು ತಿಳಿಸಿದರು.

    ಯಾವೆಲ್ಲಾ ಪ್ರಶ್ನೆ ಕೇಳಲಾಗಿತ್ತು?
    – ಉತ್ತರ ಪ್ರದೇಶದಲ್ಲಿ ಎಷ್ಟು ಬ್ಲಾಕ್ ಗಳು ಮತ್ತು ವಲಯಗಳು ಇವೆ?
    – ಲೋಕಸಭಾ ಚುನಾವಣೆಯಲ್ಲಿ ಯುಪಿ ಯಲ್ಲಿ ಎಷ್ಟು ಸ್ಥಾನಗಳನ್ನು ಹೊಂದಿದೆ.
    – 2004 ಚುನಾವಣೆಯಲ್ಲಿ ಕಾಂಗ್ರೆಸ್ ಸರಾಸರಿ ಎಷ್ಟು ಮತ ಪಡೆದಿತ್ತು?
    – ನೀವು ಪಕ್ಷದ ವಕ್ತಾರರಾಗಲು ಏಕೆ ಬಯಸುತ್ತೀರಿ?
    – ಯೋಗಿ ಆದಿತ್ಯನಾಥ ಸರ್ಕಾರದ ವೈಫಲ್ಯಗಳು ಯಾವುವು?
    – ಉತ್ತರ ಪ್ರದೇಶದಲ್ಲಿ ಎಷ್ಟು ವಿಧಾನಸಭಾ ಸ್ಥಾನಗಳಿದೆ?

    ಪಕ್ಷದ ನಾಯಕರಿಗೆ ಕೇವಲ ಪ್ರಶ್ನೆಗಳು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ಕುರಿತು ಮಾಹಿತಿಯನ್ನು ಪಡೆಯಲಾಗಿದ್ದು, ಟ್ವಿಟ್ಟರ್ ಖಾತೆಯನ್ನು ಹೊಂದಿದ್ದರಾ? ಹೊಂದಿಲ್ಲದಿದ್ದರೆ ಬಹುಬೇಗ ಖಾತೆ ತೆರೆಯಲು ಸಲಹೆಯನ್ನು ನೀಡಿದ್ದಾರೆ. ಪರೀಕ್ಷೆಯ ಕುರಿತು ಕೆಲ ಹಿರಿಯ ಮುಖಂಡರು ಪಕ್ಷದ ನಾಯಕರಿಗೆ ಮರು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದ್ದು. ಶಾಲೆಯ ಪರೀಕ್ಷಾ ವ್ಯವಸ್ಥೆಯ ಅಗತ್ಯತೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವೇ ಮಹಿಳಾ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ.

    ಕಳೆದ ಕೆಲ ಹಿಂದೆಯಷ್ಟೇ ಉತ್ತರ ಪ್ರದೇಶ ಕಾಂಗ್ರೆಸ್ ತನ್ನ ಮಾಧ್ಯಮ ವಿಭಾಗ ಮತ್ತು ಅದಕ್ಕೆ ಸಂಬಂಧಿಸಿದ ಮೂರು ವಿಭಾಗವನ್ನು ವಿಸರ್ಜಿಸಿತ್ತು. 2014 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಲೋಕಾಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ 22.3% ಮತ ಪಡೆದು ಕೇವಲ 2 ಸ್ಥಾನಗಳನ್ನು ಗೆದ್ದಿದ್ದರೆ. ಬಿಜೆಪಿ 42.6% ಮತ ಪಡೆದು 71 ಸ್ಥಾನ ಪಡೆದಿತ್ತು. ಉಳಿದಂತೆ ಸಮಾಜವಾದಿ ಪಕ್ಷ 2 ಸ್ಥಾನ ಪಡೆದರೆ, ಮತ್ತೊಂದು ಸ್ಥಾನವನ್ನು ಇತರೇ ಅಭ್ಯರ್ಥಿ ಗೆಲುವು ಪಡೆದಿದ್ದರು.

  • ಮುಸ್ಲಿಂ ಟೋಪಿ ಧರಿಸಲು ನಿರಕಾರಿಸಿದ ಸಿಎಂ ಯೋಗಿ ಅದಿತ್ಯನಾಥ್ – ವಿಡಿಯೋ ವೈರಲ್

    ಮುಸ್ಲಿಂ ಟೋಪಿ ಧರಿಸಲು ನಿರಕಾರಿಸಿದ ಸಿಎಂ ಯೋಗಿ ಅದಿತ್ಯನಾಥ್ – ವಿಡಿಯೋ ವೈರಲ್

    ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ಮುಸ್ಲಿಂ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಧಾರ್ಮಿಕ ಟೋಪಿಯನ್ನು ಧರಿಸಲು ನಿರಾಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬಿಜೆಪಿ ಫೈರ್ ಬ್ರಾಂಡ್ ಸಿಎಂ ಯೋಗಿ ಅದಿತ್ಯನಾಥ್ ಅವರು ಸಂತ ಕಬೀರ್ ಅವರ ಸ್ಮಾರಕ ಭವನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ಮಾರಕದ ಉಸ್ತುವಾರಿ ವಹಿಸಿದ್ದ ಧಾರ್ಮಿಕ ಮುಖಂಡರು ಯೋಗಿ ಅವರಿಗೆ ಟೋಪಿ ಧರಿಸಲು ಮುಂದಾಗಿದ್ದರು. ಆದರೆ ಈ ವೇಳೆ ಯೋಗಿ ಅವರು ಟೋಪಿ ಧರಿಸಲು ನಿರಾಕರಿಸಿ ಬಳಿಕ ಅಲ್ಲಿಂದ ತೆರಳಿದ್ದರು.

    https://twitter.com/ANINewsUP/status/1012204968831520769?

    ಸದ್ಯ ಸಿಎಂ ಯೋಗಿ ಅದಿತ್ಯನಾಥ್ ಧಾರ್ಮಿಕ ಟೋಪಿ ಧರಿಸಲು ನಿರಾಕರಿಸಿರುವ ದೃಶ್ಯಗಳು ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂತ ಕಬೀರ್ ಅವರ 500 ನೇ ಪುಣ್ಯಸ್ಮರಣೆ ಪ್ರಯುಕ್ತ ಪ್ರಧಾನಿ ಮೋದಿ ಅವರು ಗುರುವಾರ ಭೇಟಿ ನೀಡಿದ್ದರು. ಪ್ರಧಾನಿ ಆಗಮನ ಹಿನ್ನೆಲೆ ಸಿಎಂ ಯೋಗಿ ಅದಿತ್ಯನಾಥ್ ಬುಧವಾರ ಸಿದ್ಧತೆಗಳ ಪರಿಶೀಲನೆಗೆ ತೆರಳಿದ್ದರು.

    ಇದೇ ಮೊದಲಲ್ಲ: 2019 ರ ಲೋಕಾಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಆದರೆ ಪ್ರಧಾನಿ ಮೋದಿ ಸೇರಿದಂತೆ, ಸಿಎಂ ಯೋಗಿ ಅದಿತ್ಯನಾಥ್ ಈ ಹಿಂದೆಯೂ ಧಾರ್ಮಿಕ ಟೋಪಿ ಧರಿಸಲು ನಿರಾಕರಿಸಿದ್ದರು. ಸದ್ಯ ಯೋಗಿ ಅದಿತ್ಯನಾಥ್ ಅವರ ನಡೆಯನ್ನು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಮುಖಂಡರು ಟೀಕಿಸಿ ವಾಗ್ದಾಳಿ ನಡೆಸಿದ್ದಾರೆ. ಆದರೆ ಇತ್ತೀಚೆಗೆ ಎಐಸಿಸಿ ರಾಹುಲ್ ಗಾಂಧಿ ಅವರು ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು ನೀಡಿದ ಟೋಪಿಯನ್ನು ಧರಿಸಲು ರಾಹುಲ್ ಗಾಂಧಿ ನಿರಾಕರಿಸಿದ್ದರು. ಈ ವೇಳೆ ಬಿಜೆಪಿ ಕೆಲ ನಾಯಕರು ಸಹ ರಾಹುಲ್ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು.

  • ಮುಸ್ಲಿಮರು ಮುಸ್ಲಿಮರಿಗೆ ಮತ ಹಾಕ್ಬೇಕು: ಅಸಾದುದ್ದಿನ್ ಓವೈಸಿ

    ಮುಸ್ಲಿಮರು ಮುಸ್ಲಿಮರಿಗೆ ಮತ ಹಾಕ್ಬೇಕು: ಅಸಾದುದ್ದಿನ್ ಓವೈಸಿ

    ಹೈದರಾಬಾದ್: ಮುಸ್ಲಿಮ್ ಸಮುದಾಯದವರು ಮುಸ್ಲಿಮ್ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಅಧ್ಯಕ್ಷ, ಹೈದರಬಾದಿನ ಸಂಸದ ಅಸಾದುದ್ದಿನ್ ಓವೈಸಿ ಹೇಳಿಕೆಯೊಂದನ್ನು ನೀಡಿದ್ದು ಈಗ ವಿವಾದಕ್ಕೆ ಗುರಿಯಾಗಿದೆ.

    ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಸಮುದಾಯದ ಸದಸ್ಯರಿಗೆ ಒತ್ತಾಯ ಮಾಡಿದ್ದಾರೆ.

    ಹಪೂರ್ ನಲ್ಲಿ ನಡೆದ ಕಾಸಿಂ ಹತ್ಯೆ ನಮ್ಮನ್ನು ಚಿಂತೆಗೀಡುಮಾಡಿದೆ. ಆದರೆ ನಾನು ನಿಮಗೆ ಈ ವಿಚಾರಕ್ಕೆ ಕಣ್ಣೀರು ಸುರಿಸಿ ಎಂದು ಹೇಳುತ್ತಿಲ್ಲ. ಆದರೆ ನಿಮ್ಮ ಆತ್ಮಸಾಕ್ಷಿ ಅನುಗುಣವಾಗಿ ನಡೆಯುವಂತೆ ಎಚ್ಚರಿಸುತ್ತಿದ್ದೇನೆ. ಜಾತ್ಯಾತೀತತೆಯ ಕುರಿತು ಮಾತನಾಡುತ್ತಿರುವ ಜನರು ದೊಡ್ಡ ಡಕಾಯಿತರು ಮತ್ತು ಅವಕಾಶವಾದಿಗಳಾಗಿದ್ದಾರೆ. ಅವರು ಮುಸ್ಲಿಮರನ್ನು 70 ವರ್ಷಗಳಿಂದ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ನಮಗೆ ಬೆದರಿಕೆ ಹಾಕಿ ನಮ್ಮನ್ನು ಸುಮ್ಮನಿರುವಂತೆ ಮಾಡಿದ್ದಾರೆ ಎಂದು ದೂರಿದರು.

    ಈಗ ಮುಸ್ಲಿಮರು ಅವರ ಹಕ್ಕಿಗಾಗಿ ಹೋರಾಡಬೇಕಿದೆ. ನೀವು ಜ್ಯಾತ್ಯಾತೀತೆಯನ್ನು ಬದುಕಿಸಬೇಕೆಂದಿದ್ದರೆ ನಿಮಗಾಗಿ ಹೋರಾಡಿ. ಅದನ್ನು ತಿಳಿಯಲು ರಾಜಕೀಯ ಶಕ್ತಿಯಾಗಿ ಮುಸ್ಲಿಮ್ ನಾಯಕರು ಗೆಲ್ಲುವಂತೆ ಮಾಡಿ ಎಂದಿದ್ದಾರೆ.

    ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಓವೈಸಿ ಹಪೂರ್ ಘಟನೆ ಸಂಬಂಧಿಸಿದಂತೆ ಅವಾಚ್ಯ ಶಬ್ಧಗಳನ್ನ ಬಳಸಿದ್ದಾರೆ. ಅಲ್ಲದೇ ಎಷ್ಟೋ ಮುಸ್ಲಿರನ್ನು ಬಂಧಿಸಲಾಗಿದೆ. ಇದೇನಾ ನಿಮ್ಮ ಸಬ್ ಕಿ ಸಾಥ್, ಸಬ್ ಕಿ ವಿಕಾಸ್ ಎಂದು ಮೋದಿಯವರ ವಿರುದ್ಧ ಹರಿಹಾಯ್ದಿದರು.

    ಭಾರತೀಯ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಹಿಂದೂ ಮತ ಬ್ಯಾಂಕ್ ಗಾಗಿ ಹಾತೊರೆಯುತ್ತಿವೆ. ಆದರೆ ಮುಸ್ಲಿಂರನ್ನು ಮತಬ್ಯಾಂಕ್ ಎಂದು ಹೇಳುತ್ತ ಎರಡೂ ಪಕ್ಷಗಳು ವಂಚಿಸುತ್ತಿವೆ ಎಂದು ದೂರಿದರು.

    ಉತ್ತರಪ್ರದೇಶದ ಹಪೂರ್ ದಲ್ಲಿ ಹಸು ಕಳ್ಳಸಾಗಾಣಿಗೆ ಶಂಕೆಯ ಹಿನ್ನೆಲೆಯಲ್ಲಿ ಗುಂಪೊಂದು ಕಾಸೀಂ(38) ಹತ್ಯೆಗೈದರೆ, ಶಾಮಿಯುದ್ದೀನ್(65) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು.

  • ರೋಗಿಗೆ ತಿಳಿಸದೇ ಕಿಡ್ನಿಯನ್ನೇ ತೆಗೆದ ವೈದ್ಯ!

    ರೋಗಿಗೆ ತಿಳಿಸದೇ ಕಿಡ್ನಿಯನ್ನೇ ತೆಗೆದ ವೈದ್ಯ!

    ಲಕ್ನೋ: ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ರೋಗಿಯ ಕಿಡ್ನಿಯನ್ನು ಉತ್ತರ ಪ್ರದೇಶದ ಮುಜಾಫರ್ ನಗರದ ವೈದ್ಯ ಮಹಾಶಯನೊಬ್ಬ ತೆಗೆದಿದ್ದಾನೆ.

    60 ವರ್ಷದ ಇಕ್ಬಾಲ್ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆಯಿಂದ ಅಲ್ಲಿನ ಡಾ. ವಿಭು ಗಾರ್ಗ್ ರವರ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ವೈದ್ಯರು ಮೂತ್ರ ಪಿಂಡಕ್ಕೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಹೇಳಿದ್ದರು. ಆದರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡವ ನೆಪದಲ್ಲಿ ಈಗ ಮೂತ್ರಪಿಂಡವನ್ನೇ ತೆಗೆದುಹಾಕಿದ್ದಾರೆ ಎಂದು ರೋಗಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

    ರೋಗಿ ಇಕ್ಬಾಲ್ ರ ಮಗ ಇಮ್ರಾನ್ ಮೂತ್ರಪಿಂಡ ತೆಗೆದುಹಾಕುವ ಕುರಿತು ಶಸ್ತ್ರಚಿಕಿತ್ಸೆಯ ಮೊದಲು ವೈದ್ಯರು ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.

    ಶಸ್ತ್ರಚಿಕಿತ್ಸೆ ನಂತರ ಆಸ್ಪತ್ರೆಯಲ್ಲೇ ರೋಗಿಯ ಚರ್ಮ ಮುದುಡಲಾರಂಭಿಸಿತು. ಆಗ ಇಕ್ಬಾಲ್ ರ ಪತ್ನಿ ಉಮೇದ್ ಜಹಾನ್ ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರೊಂದನ್ನು ದಾಖಲಿಸಿದರು. ಅದರಂತೆ ಭಾರತೀಯ ದಂಡ ಸಂಹಿತೆ 338ರ ಪ್ರಕಾರ ಡಾ. ಗಾರ್ಗ್ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆಸಿದ ವೈದ್ಯ ಗಾರ್ಗ್ ಈ ಮೊದಲೇ ರೋಗಿಯ ಕುಟುಂಬದವರೊಂದಿಗೆ ಕಿಡ್ನಿ ತೆಗೆಯುವ ಕುರಿತು ಮಾಹಿತಿ ನೀಡಿದ್ದೆ ಎಂದು ತಿಳಿಸಿದ್ದಾರೆ.

    ಶಸ್ತ್ರಚಿಕಿತ್ಸೆ ಒಂದು ಗಂಟೆಯಲ್ಲಿ ಮುಗಿಯುತ್ತದೆ ಎಂದು ಹೇಳಿದ್ದರು. ಆದರೆ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಈ ಸಂದರ್ಭದಲ್ಲಿ ಎರಡು ಯೂನಿಟ್ ರಕ್ತವನ್ನೂ ಕೂಡ ನೀಡಲಾಗಿದೆ. ಕಿಡ್ನಿ ತೆಗೆದು ಐಸ್ ಬಾಕ್ಸ್ ನಲ್ಲಿ ಇಡಲಾಗಿದೆ. ಈ ಕುರಿತಾಗಿ ಕೇಳಿದರೆ ವೈದ್ಯರು ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ರೋಗಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

    ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಇಕ್ಬಾಲ್ ಸಂಬಂಧಿಗಳು ಆಸ್ಪತ್ರೆಗೆ ಬಂದು ದಾಂಧಲೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ನ್ಯೂ ಮಾಂದಿ ಸರ್ಕಲ್ ಇನ್ಸ್ ಪೆಕ್ಟರ್ ಯೋಗೇಂದ್ರ ಸಿಂಗ್ ಹಾಗೂ ಸಿಬ್ಬಂದಿ ರೋಗಿಯ ಸಂಬಂಧಿಯನ್ನು ಶಾಂತಗೊಳಿಸಿದ್ದಾರೆ.