Tag: uttar pradesh

  • ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿದ್ದ ಹಿಂದೂ ಮಹಾಸಭಾ ನಾಯಕಿ ಅರೆಸ್ಟ್

    ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿದ್ದ ಹಿಂದೂ ಮಹಾಸಭಾ ನಾಯಕಿ ಅರೆಸ್ಟ್

    ಅಲಿಘಡ: ಮಹಾತ್ಮ ಗಾಂಧೀಜಿಯವರ ಪ್ರತಿಕೃತಿಗೆ ಗುಂಡಿಟ್ಟು ಸಂಭ್ರಮಾಚರಣೆ ನಡೆಸಿದ್ದ ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆರನ್ನು ಪೊಲೀಸರು ಬಂಧಿಸಿದ್ದಾರೆ.

    ಘಟನೆ ನಡೆದ ದಿನದ ಬಳಿಕ ನಾಪತ್ತೆಯಾಗಿದ್ದ ಹಿಂದೂ ಮಹಾಸಭಾ ನಾಯಕಿ ಶಕುನ್ ಪಾಂಡೆಯನ್ನು ಪೊಲೀಸರು ಪತ್ತೆ ಮಾಡಿ ಬಂಧನ ಮಾಡಿದ್ದಾರೆ. ಅಲ್ಲದೇ ಆಕೆಯ ಪತಿ ಅಶೋಕ್ ಪಾಂಡ್ಯರನ್ನು ಕೂಡ ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಜನವರಿ 30 ರಂದು ನಾಥೂರಾವ್ ಗೋಡ್ಸೆ ಗಾಂಧೀಜಿ ಅವರನ್ನು ಹತ್ಯೆ ಮಾಡಿದ್ದ ಸನ್ನಿವೇಶವನ್ನು ಮರು ನಿರ್ಮಿಸಿದ್ದರು, ಅಲ್ಲದೇ ಆಟಿಕೆ ಗನ್ ಮೂಲಕ ಗಾಂಧೀಜಿ ಅವರ ಪ್ರತಿಕೃತಿಗೆ ಗುಂಡಿಟ್ಟು ಪೋಸ್ ಕೊಟ್ಟಿದ್ದರು. ಅಲ್ಲದೇ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು, ದಸರಾ ದಿನದಂದು ರಾವಣನನ್ನು ಸುಟ್ಟು ಸಂಭ್ರಮ ಪಡುವಂತೆ ಇಂದು ಕೂಡ ನಡೆಸಲಾಯಿತು ಎಂದು ತಿಳಿಸಿದ್ದರು. ಈ ವೇಳೆ ಸಂಘಟನೆಯ ಕಾರ್ಯಕರ್ತರಿಗೆ ಗಾಂಧೀಜಿ ಅವರ ಸಾವನ್ನಪ್ಪಿದ ದಿನವನ್ನು ಶೌರ್ಯ ದಿನ ಎಂದು ಆಚರಣೆ ಮಾಡಿ ಸಿಹಿ ಕೂಡ ಹಂಚಿದ್ದರು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು 12 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಲ್ಲದೇ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಮೂವರನ್ನು ಕೂಡಲೇ ವಶಕ್ಕೆ ಪಡೆದಿದ್ದರು.

    ಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಧರಣಿ ನಡೆಸಿ ಪ್ರಜಾಪ್ರಭುತ್ವಕ್ಕೆ ಅವಮಾನ- ದೀದಿಗೆ ಯೋಗಿ ಟಾಂಗ್

    ಧರಣಿ ನಡೆಸಿ ಪ್ರಜಾಪ್ರಭುತ್ವಕ್ಕೆ ಅವಮಾನ- ದೀದಿಗೆ ಯೋಗಿ ಟಾಂಗ್

    – ಟಿಎಂಸಿಯಿಂದ ಭ್ರಷ್ಟ ಅಧಿಕಾರಿಗಳ ರಕ್ಷಣೆ

    ಕೋಲ್ಕತ್ತಾ: ಸಿಎಂ ಸ್ಥಾನದಲ್ಲಿದ್ದು ಧರಣಿ ನಡೆಸುವುದಕ್ಕಿಂತ ಮತ್ತೊಂದು ಅವಮಾನ ಪ್ರಜಾಪ್ರಭುತ್ವದಲ್ಲಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ್ದಾರೆ.

    ಹೆಲಿಕಾಪ್ಟರ್ ಲ್ಯಾಂಡಿಂಗ್‍ಗೆ ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಇಂದು ರಸ್ತೆ ಮಾರ್ಗವಾಗಿ ರ‍್ಯಾಲಿ ನಡೆಯುತ್ತಿದ್ದ ಪುರುಲಿಯಾ ತಲುಪಿದರು. ಅಲ್ಲಿಂದ ಬಂಕುರಾ ಬೃಹತ್ ಸಮಾವೇಶಕ್ಕೂ ರಸ್ತೆ ಮಾರ್ಗವಾಗಿಯೇ ತೆರಳಿದರು. ಈ ಎರಡು ಸಮಾವೇಶದಲ್ಲಿಯೂ ಯೋಗಿ ಆದಿತ್ಯನಾಥ್, ಮಮತಾ ಬ್ಯಾನರ್ಜಿ ಅವರ ವಿರುದ್ಧ ಅಸಮಾಧಾನ ಹೊರಹಾಕಿದರು.

    ಮಮತಾ ಬ್ಯಾನರ್ಜಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಭ್ರಷ್ಟ ಅಧಿಕಾರಿಯನ್ನು ರಕ್ಷಿಸುತ್ತಿದ್ದಾರೆ. ಧರಣಿ ನಡೆಸಿ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಪಾರು ಮಾಡಲು ಮಮತಾ ಬ್ಯಾನರ್ಜಿ ಯತ್ನಿಸುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರವು ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದೆ. ಭ್ರಷ್ಟಾಚಾರಕ್ಕೆ ಬೆಂಬಲ ನೀಡುವ ಸರ್ಕಾರವನ್ನು ಹೊಡೆದು ಹಾಕಲು ಬಿಜೆಪಿಗೆ ಬೆಂಬಲ ನೀಡಿ ಎಂದು ಸಮಾವೇಶದಲ್ಲಿ ಸೇರಿದ್ದ ಜನರಿಗೆ ಯೋಗಿ ಆದಿತ್ಯನಾಥ್ ಕೇಳಿಕೊಂಡರು.

    ಸಿಬಿಐ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಈ ಹಿಂದಿನ ಕಾಂಗ್ರೆಸ್ ಸರ್ಕಾರವೇ ಹೊರತು, ಬಿಜೆಪಿಯಲ್ಲ. ಸಿಬಿಐ ವಿಚಾರಣೆಗೆ ಸಹಕರಿಸಬೇಕು ಅಂತ ಸುಪ್ರೀಂಕೋರ್ಟ್ ರಾಜೀವ್ ಕುಮಾರ್ ಅವರಿಗೆ ಆದೇಶ ನೀಡಿದೆ. ಹೀಗಾಗಿ ಪಶ್ಚಿಮ ಬಂಗಾಳ ಬಿಟ್ಟು ಅಸ್ಸಾಂನಲ್ಲಿ ವಿಚಾರಣೆಗೆ ರಾಜೀವ್ ಕುಮಾರ್ ಒಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

    ಉತ್ತರ ಬಂಗಾಳದ ಬಲೂರ್ಘಾಟ್‍ನಲ್ಲಿ ಫೆಬ್ರವರಿ 3ರಂದು ನಡೆಯುತ್ತಿದ್ದ ರ‍್ಯಾಲಿಯಲ್ಲಿ ಭಾಗವಹಿಸಲು ಯೋಗಿ ಆದಿತ್ಯನಾಥ್ ಅವರು ಹೆಲಿಕಾಪ್ಟರ್ ನಲ್ಲಿ ತೆರಳಲು ಮುಂದಾಗಿದ್ದರು. ಆದರೆ ಯಾವುದೇ ನಿರ್ದಿಷ್ಟ ಕಾರಣ ತಿಳಿಸದೇ ಹೆಲಿಕಾಪ್ಟರ್ ಲ್ಯಾಂಡಿಂಗ್ ಅನುಮತಿಯನ್ನು ಪಶ್ಚಿಮ ಬಂಗಾಳದ ಸರ್ಕಾರ ನಿರಾಕರಿಸಿತ್ತು. ಇದರಿಂದಾಗಿ ಇಂದು ನಡೆದ ಬೃಹತ್ ಸಮಾವೇಶಕ್ಕೆ ಯೋಗಿ ಆದಿತ್ಯನಾಥ್ ಅವರು ರಸ್ತೆ ಮಾರ್ಗವಾಗಿಯೇ ತಲುಪಬೇಕಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮಿತ್ ಶಾ ಬೆನ್ನಲ್ಲೇ ಯುಪಿ ಸಿಎಂ ಯೋಗಿ ಹೆಲಿಕಾಪ್ಟರ್‌ಗೆ ಮಮತಾ ಬ್ರೇಕ್

    ಅಮಿತ್ ಶಾ ಬೆನ್ನಲ್ಲೇ ಯುಪಿ ಸಿಎಂ ಯೋಗಿ ಹೆಲಿಕಾಪ್ಟರ್‌ಗೆ ಮಮತಾ ಬ್ರೇಕ್

    ಕೋಲ್ಕತ್ತಾ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಲ್ಯಾಂಡಿಗ್‍ಗೆ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮತಿ ನಿರಾಕರಿಸಿದೆ.

    ಉತ್ತರ ಬಂಗಾಳದ ಬಲೂರ್ಘಾಟ್‍ನಲ್ಲಿ ಇಂದು ನಡೆಯುತ್ತಿದ್ದ ರ‍್ಯಾಲಿಯಲ್ಲಿ ಭಾಗವಹಿಸಲು ಯೋಗಿ ಆದಿತ್ಯನಾಥ್ ಅವರು ಹೆಲಿಕಾಪ್ಟರ್ ನಲ್ಲಿ ತೆರಳಿದ್ದರು. ಆದರೆ ಯಾವುದೇ ನಿರ್ದಿಷ್ಟ ಕಾರಣ ತಿಳಿಸದೇ ಹೆಲಿಕಾಪ್ಟರ್ ಲ್ಯಾಂಡಿಗ್ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಯೋಗಿ ಆದಿತ್ಯನಾಥ್ ಅವರ ಅಧಿಕಾರಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇದನ್ನು ಓದಿ: ಬಿಜೆಪಿಯಿಂದ ಸಿಬಿಐ ದುರ್ಬಳಕೆ, ಪೊಲೀಸ್ ಅಧಿಕಾರಿ ಪರ ಮಮತಾ ಬ್ಯಾನರ್ಜಿ ಬ್ಯಾಟಿಂಗ್

    ಪಶ್ಚಿಮ ಬಂಗಾಳ ಸರ್ಕಾರದ ಈ ನೀತಿಯು ಯೋಗಿ ಆದಿತ್ಯನಾಥ್ ಅವರಿಗೆ ಇರುವ ಜನಪ್ರಿಯತೆಯನ್ನು ತೋರಿಸುತ್ತದೆ ಎಂದು ಸಿಎಂ ಆತಿತ್ಯನಾಥ್ ಅವರ ಮಾಹಿತಿ ಸಲಹೆಗಾರ ಮೃತುಂಜಯ್ ಕುಮಾರ್ ಹೇಳಿದ್ದಾರೆ.

    ಈ ಮೂಲಕ ಪಶ್ಚಿಮ ಬಂಗಾಳದ ಸರ್ಕಾರವು ಬಿಜೆಪಿಯ ಇಬ್ಬರು ನಾಯಕರ ಹೆಲಿಕಾಪ್ಟರ್ ಲ್ಯಾಂಡಿಂಗ್‍ಗೆ ನಿರಾಕರಿಸಿದೆ. ಈ ಹಿಂದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್‍ಗೂ ಅನುಮತಿ ನೀಡಿರಲಿಲ್ಲ.

    ನಾವು ಹೆಲಿಕಾಪ್ಟರ್ ಲ್ಯಾಂಡಿಂಗ್‍ಗೆ ಅನುಮತಿ ಪಡೆದಿದ್ದರೂ ತಡೆ ಹಿಡಿಯಲಾಗಿದೆ. ಪಶ್ಚಿಮ ಬಂಗಾಳ ಸರ್ಕಾರದ ನೀತಿಯನ್ನು ವಿರೋಧಿಸಿ ನಮ್ಮ ಕಾರ್ಯಕರ್ತರು ಸಿಎಂ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ ಎಂದು ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲಿಪ್ ಘೋಷ್ ತಿಳಿಸಿದ್ದಾರೆ.

    ಈ ಎಲ್ಲ ಬೆಳವಣಿಗೆಯಿಂದ ಯೋಗಿ ಆದಿತ್ಯನಾಥ್ ಅವರ ಹೆಲಿಕಾಪ್ಟರ್ ರಾಯ್‍ಗಂಜ್ ಬಿಎಸ್‍ಎಫ್ ಕ್ಯಾಂಪ್‍ನಲ್ಲಿ ಲ್ಯಾಂಡ್ ಆಗಲಿದೆ. ಅಲ್ಲಿಂದ ರ‍್ಯಾಲಿ ನಡೆಯಲಿರುವ ಬಲೂರ್ಘಾಟ್‍ಗೆ ರಸ್ತೆ ಮಾರ್ಗವಾಗಿ ಯೋಗಿ ಆದಿತ್ಯನಾಥ್ ತೆರಳಲಿದ್ದಾರೆ ಎನ್ನಲಾಗಿದೆ. ಮತ್ತೊಂದು ಮೂಲದ ಪ್ರಕಾರ ಯೋಗಿ ಆದಿತ್ಯನಾಥ್ ಅವರು, ಮೊಬೈಲ್ ಕರೆ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರಾಮಮಂದಿರ ಪ್ರಕರಣ ನಮ್ಗೆ ಕೊಟ್ರೆ, 24 ಗಂಟೆಯಲ್ಲಿ ಬಗೆಹರಿಸುತ್ತೇವೆ: ಯೋಗಿ ಆದಿತ್ಯನಾಥ್

    ರಾಮಮಂದಿರ ಪ್ರಕರಣ ನಮ್ಗೆ ಕೊಟ್ರೆ, 24 ಗಂಟೆಯಲ್ಲಿ ಬಗೆಹರಿಸುತ್ತೇವೆ: ಯೋಗಿ ಆದಿತ್ಯನಾಥ್

    ನವದೆಹಲಿ: ಸುಪ್ರೀಂ ಕೋರ್ಟ್ ರಾಮಮಂದಿರ ಪ್ರಕರಣದಲ್ಲಿ ಬಹುಬೇಗ ಅಂತಿಮ ತೀರ್ಪನ್ನು ಪ್ರಕಟಿಸಬೇಕಿದ್ದು, ಪ್ರಕರಣದಲ್ಲಿ ಅನಗತ್ಯ ವಿಳಂಬ ಆಗುತ್ತಿರುವುದರಿಂದ ಜನರು ನ್ಯಾಯಾಂಗ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಮಾಧ್ಯಮ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್, ನ್ಯಾಯಾಲಯ ಬಹುಬೇಗ ತೀರ್ಪನ್ನು ಪ್ರಕಟಿಸಬೇಕು ಎಂದು ಕೋರುತ್ತೇನೆ. ಒಂದೊಮ್ಮೆ ಅದನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ನಮಗೇ ಪ್ರಕರಣವನ್ನು ನೀಡಲಿ. 24 ಗಂಟೆಯಲ್ಲಿ ಪ್ರಕರಣವನ್ನು ಬಗೆಹರಿಸುತ್ತೇವೆ. 25 ಗಂಟೆ ಕೂಡ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

    ಕೋಟ್ಯಾಂತರ ಜನರ ನಂಬಿಕೆಯನ್ನು ತೃಪ್ತಿಪಡಿಸಲು ನಾವು ನ್ಯಾಯಾಲಯಕ್ಕೆ ಪ್ರಕರಣದ ತೀರ್ಪು ಬಹುಬೇಗ ನೀಡಲು ಮನವಿ ಮಾಡುತ್ತೇವೆ. ಇದು ಜನರ ನಂಬಿಕೆಯ ವಿಚಾರವಾಗಿದೆ. ಅನಗತ್ಯ ವಿಳಂಬ ಮತ್ತಷ್ಟು ವಿವಾದಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಯೋಗಿ, ಕಾಂಗ್ರೆಸ್ ಪಕ್ಷಕ್ಕೆ ರಾಮ ಜನ್ಮ ಭೂಮಿ ವಿವಾದ ಬಗೆಹರಿಯುವುದು ಬೇಡವಾಗಿದೆ. ಅಯೋಧ್ಯೆ ವಿವಾದ ಅಂತ್ಯವಾದರೆ, ತ್ರಿವಳಿ ತಲಾಖ್ ಸೇರಿದಂತೆ ಹಲವು ವಿಷಯಗಳ ರಾಜಕೀಯ ಶಾಶ್ವತವಾಗಿ ಅಂತ್ಯಗೊಳ್ಳುತ್ತದೆ ಎಂಬ ಉದ್ದೇಶ ಹೊಂದಿದೆ ಎಂದು ಕಿಡಿಕಾರಿದ್ದಾರೆ.

    ಇದೇ ವೇಳೆ ಮೈತ್ರಿ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಜಾತಿ ರಾಜಕಾರಣದ ಹೆಸರಿನಲ್ಲಿ ಅವರು ಮತ್ತಷ್ಟು ಕೆಳ ಮಟ್ಟಕ್ಕೆ ಇಳಿದರೂ ಕೂಡ, ಅದು ಶೇ. 70 ಮತ್ತು 30 ರ ನಡುವಿನ ಹೋರಾಟ ಆಗುತ್ತದೆ. ಏಕೆಂದರೆ 70 ಮತದಾರರು ಬಿಜೆಪಿಯ ಪರ ಇದ್ದು, 30 ರಷ್ಟು ಮಂದಿ ಮಾತ್ರ ಮಹಾಘಟಬಂಧನ್ ಪರ ಇದ್ದಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಕಾಂಗ್ರೆಸ್ ಪಕ್ಷ ಪ್ರಿಯಾಂಕ ಗಾಂಧಿ ಅವರನ್ನು ಕರೆತರುವ ಮೂಲಕ ಕುಟುಂಬ ರಾಜಕಾರಣ ಬಿಟ್ಟು ಬೇರೆ ಏನು ಬರುವುದಿಲ್ಲ ಎಂದು ಸಾಬೀತು ಪಡಿಸಿದೆ. 2014 ರಲ್ಲಿ ಪಕ್ಷ ಉತ್ತರ ಪ್ರದೇಶದಲ್ಲಿ ಗೆದ್ದ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ರೀ ಎಂಟ್ರಿ-ಪಕ್ಷಕ್ಕಾಗುವ ಅನುಕೂಲ, ಅನಾನುಕೂಲಗಳು ಹೀಗಿವೆ

    ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ರೀ ಎಂಟ್ರಿ-ಪಕ್ಷಕ್ಕಾಗುವ ಅನುಕೂಲ, ಅನಾನುಕೂಲಗಳು ಹೀಗಿವೆ

    ನವದೆಹಲಿ: ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದ ಪ್ರಿಯಾಂಕ ಗಾಂಧಿ ಮತ್ತೆ ರಾಜಕೀಯ ಜೀವನಕ್ಕೆ ಧುಮುಕಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದು ರಾಯಬರೇಲಿ, ಅಮೇಥಿ ಮತ್ತು ಗೋರಖ್‍ಪುರ ಸೇರಿದಂತೆ ಪ್ರತಿಷ್ಠಿತ ಕ್ಷೇತ್ರಗಳು ಒಳಗೊಂಡಿರುವ ಪೂರ್ವ ಉತ್ತರಪ್ರದೇಶದ ಜವಾಬ್ದಾರಿಯನ್ನು ಹೈಕಮಾಂಡ್ ವಹಿಸಿದೆ.

    ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿರುವ ಕಾಂಗ್ರೆಸ್, ಈ ಮೂಲಕ ಪೂರ್ವ ಉತ್ತರಪ್ರದೇಶ ಹಿಡಿತ ಹೊಂದಿರುವ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಟಾಂಗ್ ಕೊಡಲು ಮೆಗಾ ಪ್ಲಾನ್ ಮಾಡಿದೆ. ಪ್ರಿಯಾಂಕಾ ಗಾಂಧಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಹಿನ್ನೆಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದ್ದು ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ.

    ರಾಬರ್ಟ್ ವಾದ್ರಾ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದ ನಂತರ ಸಾರ್ವಜನಿಕ ಜೀವನದಿಂದ ಪ್ರಿಯಾಂಕಾ ಗಾಂಧಿ ದೂರ ಉಳಿಯಲು ಇಚ್ಛಿಸಿದ್ದರು. 2019ರ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವಾಗ ಸಕ್ರಿಯ ರಾಜಕಾರಣಕ್ಕೆ ಮತ್ತೆ ಪ್ರಿಯಾಂಕಾ ಕಾಲಿಟ್ಟಿದ್ದು ಕಾರ್ಯಕರ್ತರ ಪಡೆಯಲ್ಲಿ ಹೆಚ್ಚಿನ ಬಲ ತಂದಿದೆ. ಇದರ ಜೊತೆಗೆ ಉತ್ತರ ಪ್ರದೇಶ ಪಶ್ಚಿಮಕ್ಕೆ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದು, ಯುವ ನಾಯಕನ ಮೂಲಕ ಉತ್ತರ ಪ್ರದೇಶದಲ್ಲಿ ಪಕ್ಷ ಸಂಘಟನೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒತ್ತು ಕೊಟ್ಟಿದ್ದಾರೆ.

    ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರಿಗೆ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ, ಹಿರಿಯ ನಾಯಕ ಗುಲಾಂ ನಬೀ ಆಜಾದ್ ಅವರನ್ನ ಹರಿಯಾಣ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ.

    ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದಿಂದಾಗುವ ಕಾಂಗ್ರೆಸ್ ಪಕ್ಷಕ್ಕಾಗುವ ಅನುಕೂಲಗಳು:
    * ಇಂದಿರಾ ಗಾಂಧಿ ಹೋಲಿಕೆ ಹೊಂದಿರುವ ಪ್ರಿಯಾಂಕಾ ರಾಜಕೀಯ ಪ್ರವೇಶದಿಂದ ಕಾಂಗ್ರೆಸ್‍ಗೆ ಹೆಚ್ಚಿನ ಬಲ.
    * ಇಂದಿರಾ ಗಾಂಧಿ ರೀತಿಯ ವಾಕ್ ಚಾತುರ್ಯ, ಚರಿಷ್ಮದಿಂದಾಗಿ ಚುನಾವಣಾ ಪ್ರಚಾರದಲ್ಲಿ ಪಕ್ಷಕ್ಕೆ ಲಾಭ.
    * 2014 ಚುನಾವಣಾ ಸೋಲಿನ ಬಳಿಕ ಪ್ರಿಯಾಂಕಾ ರಾಜಕೀಯ ಪ್ರವೇಶ ಕೇಳಿ ಬಂದಿತು, ಅದು ಈಗ ಈಡೇರಿದಂತಾಗಿದ್ದು ಕಾರ್ಯಕರ್ತರಲ್ಲಿ ಖುಷಿ ತಂದಿದೆ.
    * ಸತತ ಸೋಲಿನಿಂದ ಕಂಗೆಟ್ಟಿದ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ಹೊಸ ಟಾನಿಕ್ ಆಗಬಹುದು.
    * ನೇರವಾಗಿ ಜನರ ಬಳಿ ತೆರಳುವ ಹಾಗೂ ಬೆರೆಯುವ ಮನಸ್ಥತಿ ಹೊಂದಿರುವ ನಾಯಕಿ.
    * ಯುವಕರು ಹಾಗೂ ಹಿರಿಯರನ್ನು ಒಟ್ಟಾಗಿ ಕೊಂಡೊಯ್ಯುವ ರಾಜಕೀಯ ಜಾಣ್ಮೆ ಹೊಂದಿರುವ ಪ್ರಿಯಾಂಕಾ.
    * ಪೂರ್ವ ಉತ್ತರ ಪ್ರದೇಶದಲ್ಲಿ ರಾಜಕೀಯ ಪ್ರವೇಶದಿಂದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕಾಂಗ್ರೆಸ್ ಟಾಂಗ್ ಕೊಡುವ ಪ್ರಯತ್ನ.
    * ಸೋನಿಯಾಗಾಂಧಿ ರಾಜಕೀಯ ನಿವೃತ್ತಿ ಸಾಧ್ಯತೆ ಇದ್ದು, ರಾಯಬರೇಲಿಯಿಂದ ಪ್ರಿಯಾಂಕಾ ಸ್ವರ್ಧೆ ಸಾಧ್ಯತೆ.
    * ಈ ಮೂಲಕ ಏಕಾಂಗಿಯಾಗಿ ಸ್ವರ್ಧಿಸಲು ಚಿಂತಿಸಿರುವ ಕಾಂಗ್ರೆಸ್ ಪ್ರಿಯಾಂಕಾ ಶಕ್ತಿಯಾಗಿ ನಿಲ್ಲಲಿದ್ದಾರೆ.

    ಅನಾನುಕೂಲಗಳು:
    * ಭ್ರಷ್ಟಾಚಾರ ಆರೋಪ ಹೊತ್ತಿರುವ ಪತಿ ರಾಬರ್ಟ್ ವಾದ್ರಾರಿಂದ ಪ್ರಿಯಾಂಕ ಗಾಂಧಿಗೆ ರಾಜಕೀಯ ಹಿನ್ನಡೆ ಸಾಧ್ಯತೆ.
    * ವಾದ್ರಾರಿಂದ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‍ಗೆ ಮುಜುಗರ ಉಂಟಾಗಬಹುದು.
    * ಪ್ರಿಯಾಂಕಾಗೆ ಅನುಭವ ಇಲ್ಲದೇ ಇರುವುದರಿಂದ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಬಹುದು.
    * ಪ್ರಿಯಾಂಕ ಗೆದ್ದು ಕಾಂಗ್ರೆಸ್ ಸೋತರೆ ಭವಿಷ್ಯ ಉಜ್ವಲವಾಗದೇ ಇರಬಹುದು.
    * ಸ್ವಸಾಮರ್ಥ್ಯ ಇದ್ದರೂ ರಾಹುಲ್ ಗಾಂಧಿ ನೆರಳಲ್ಲೇ ಕೆಲಸ ಮಾಡಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಯಾಗ್ ಕುಂಭ ಮೇಳದಲ್ಲಿ ಸಿಲಿಂಡರ್ ಸ್ಫೋಟ!

    ಪ್ರಯಾಗ್ ಕುಂಭ ಮೇಳದಲ್ಲಿ ಸಿಲಿಂಡರ್ ಸ್ಫೋಟ!

    ಲಕ್ನೋ: ಕುಂಭಮೇಳ ಆರಂಭದ ಮುನ್ನಾದಿನವೇ ಉತ್ತರ ಪ್ರದೇಶದ ಪ್ರಯಾಗ್‍ನಲ್ಲಿ ಅನಾಹುತವೊಂದು ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.

    ಪ್ರಯಾಗ್‍ನ ದಿಗಂಬರ ಸಾಧುಗಳ ಕ್ಯಾಂಪ್‍ನಲ್ಲಿ ಸುಮಾರು 5 ಕೆ.ಜಿ. ಗ್ಯಾಸ್‍ನ ಸಿಲಿಂಡರ್ ಸ್ಫೋಟಗೊಂಡು ಭಾರೀ ಆತಂಕ ಸೃಷ್ಟಿಸಿತ್ತು. ಸಿಲಿಂಡರ್ ಸ್ಫೋಟದ ಪರಿಣಾಮ ಸುತ್ತಮುತ್ತಲಿನ ಶೀಟ್ ನಿಂದ ನಿರ್ಮಿಸಿದ್ದ ಕ್ಯಾಂಪ್‍ಗಳು ನೆಲಕ್ಕೆ ಉರುಳಿದ್ದವು. ಅದೃಷ್ಟವಶಾತ್ ಯಾರೋಬ್ಬರು ಸ್ಫೋಟ ಸಂಭವಿಸಿದ್ದ ಜಾಗದಲ್ಲಿ ಇರಲಿಲ್ಲ. ಹೀಗಾಗಿ ಅನಾಹುತ ಕೈತಪ್ಪಿದೆ.

    ಕ್ಯಾಂಪ್ ಮುಂದೆ ಹಾಕಿದ್ದ ಶಾಮಿಯಾನ ಹಾಗೂ ಮಳಿಗೆಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಈ ಕುರಿತು ಕೆಲವರು ಮಾಹಿತಿ ನೀಡುತ್ತಿದ್ದ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳವು ಬೆಂಕಿಯನ್ನು ನಂದಿಸಿದೆ. ಇತ್ತ ಆರೋಗ್ಯ ಇಲಾಖೆ ಕೂಡ ಸುಮಾರು 10 ಆಬುಲೆನ್ಸ್ ಗಳನ್ನು ಕಳುಹಿಸಿತ್ತು.

    ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷದಲ್ಲಿ ನಿಯಂತ್ರಣಕ್ಕೆ ತರಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಹಾಗೂ ಗಾಯಗಳಾದ ಪ್ರಕರಣಗಳು ಪತ್ತೆಯಾಗಿಲ್ಲ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪ್ರಯಾಗ್ ಕುಂಭ ಮೇಳದಲ್ಲಿ ದೇಶದ ವಿವಿಧ ಮೂಲೆಗಳಿಂದ ಜನರು ಭಾಗಿಯಾಗುತ್ತಾರೆ. ಸಾಧು, ಸಂತರು, ಜನಸಾಮಾನ್ಯ ಸೇರಿದಂತೆ ಲಕ್ಷಾಂತರ ಜನರು ಕುಂಭ ಮೇಳಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಭಾರೀ ಪ್ರಮಾಣದ ಭದ್ರತೆಯನ್ನು ಒದಗಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಸ್‍ಪಿ, ಬಿಎಸ್‍ಪಿಗೆ ತಿರುಗೇಟು ನೀಡಲು ರಾಹುಲ್ ಗಾಂಧಿ ಮೆಗಾ ಪ್ಲಾನ್!

    ಎಸ್‍ಪಿ, ಬಿಎಸ್‍ಪಿಗೆ ತಿರುಗೇಟು ನೀಡಲು ರಾಹುಲ್ ಗಾಂಧಿ ಮೆಗಾ ಪ್ಲಾನ್!

    – ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಚಿಂತನೆ
    – 13 ಕಡೆಗಳಲ್ಲಿ ಬೃಹತ್ ರ‍್ಯಾಲಿಗೆ ರಾಹುಲ್ ಗಾಂಧಿ ಸಿದ್ಧತೆ

    ಲಕ್ನೋ: ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಹಾಗೂ ಸಮಾಜವಾದಿ ಪಕ್ಷಕ್ಕೆ (ಎಸ್‍ಪಿ) ತಿರುಗೇಟು ನೀಡಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೆಗಾ ಪ್ಲಾನ್ ರೂಪಿಸಿದ್ದಾರೆ.

    ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಈ ನಿಟ್ಟಿನಲ್ಲಿ ಆರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಂದೊಂದರಂತೆ ಒಟ್ಟು 13 ಕಡೆ ಬೃಹತ್ ಬಹಿರಂಗ ರ‍್ಯಾಲಿ ಕೈಗೊಳ್ಳಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಬಹಿರಂಗ ರ‍್ಯಾಲಿ ನಡೆಸುವ ಸಂಬಂಧ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಅಜಾದ್ ಮತ್ತು ಉತ್ತರ ಪ್ರದೇಶದ ಮುಖಂಡ ರಾಜ್ ಬಬ್ಬರ್ ಇಂದು ಸುದೀರ್ಘ ಚರ್ಚೆ ನಡೆಸಿದ್ದಾರೆ. ರಾಜ್ಯದ ಪಶ್ಚಿಮ ಕ್ಷೇತ್ರಗಳಾದ ಹಾಪುರ್, ಮೊರಾದಾಬಾದ್ ಮತ್ತು ಸಹರಾನ್ಪುರ್ ನಿಂದ ರ್ಯಾಲಿ ಆರಂಭಿಸಲು ನಿರ್ಧಾರವನ್ನು ಈ ನಾಯಕರು ಕೈಗೊಂಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ ನಾಯಕಿ ಮಾಯಾವತಿ ಹಾಗೂ ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಶನಿವಾರ ಸುದ್ದಿಗೋಷ್ಠಿ ನಡೆಸಿ ಮೈತ್ರಿ ವಿಚಾರವನ್ನು ತಿಳಿಸಿದ್ದರು. ಈ ಮೈತ್ರಿಯ ಒಪ್ಪಂದದ ಪ್ರಕಾರ ಎರಡೂ ಪಕ್ಷಗಳು ಒಟ್ಟು ತಲಾ 38 ಕ್ಷೇತ್ರಗಳನ್ನು ಹಂಚಿಕೊಂಡು, ಅಮೇಠಿ ಹಾಗೂ ರಾಯ್ ಬರೇಲಿಯನ್ನು ಕಾಂಗ್ರೆಸ್‍ಗೆ, ಉಳಿದ ಎರಡು ಕ್ಷೇತ್ರಗಳನ್ನು ರಾಷ್ಟ್ರೀಯ ಲೋಕದಳಗೆ ಬಿಟ್ಟುಕೊಟ್ಟಿದ್ದರು.

    ಬಿಎಸ್‍ಪಿ ಹಾಗೂ ಎಸ್‍ಪಿ ಕೇವಲ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್‍ಗೆ ಬಿಟ್ಟು ಮೈತ್ರಿ ಮಾಡಿಕೊಂಡ ಬೆನ್ನಲೇ ರಾಹುಲ್ ಗಾಂಧಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಕೇವಲ ಎರಡು ಕ್ಷೇತ್ರ ಬಿಟ್ಟ ಮೈತ್ರಿ ವಿರುದ್ಧ ಗರಂ ಆಗಿರುವ ರಾಹುಲ್ ಗಾಂಧಿ, 80 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ನಿರ್ಧಾರ ಕೈಗೊಂಡಿದ್ದಾರೆ.

    ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢ್‍ನಲ್ಲಿ ಅಧಿಕಾರ ಹೊಂದಿರುವ ಕಾಂಗ್ರೆಸ್ ಈ ರಾಜ್ಯಗಳಲ್ಲಿ ಹೆಚ್ಚು ಕ್ಷೇತ್ರಗಳಿಂದ ಜಯಗಳಿಸುವ ಸಾಧ್ಯತೆಗಳಿವೆ. ಆದರೆ ಮಾಯಾವತಿ ಹಾಗೂ ಅಖಿಲೇಶ್ ಮೈತ್ರಿಯಿಂದಾಗಿ ಉತ್ತರ ಪ್ರದೇಶದಿಂದ ಕಾಂಗ್ರೆಸ್ ಬೆರಳೆಣಿಕೆ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಉತ್ತರ ಪ್ರದೇಶದಲ್ಲಿ 1992ರಂದು ನಡೆದ ಬಾಬ್ರಿ ಮಸೀದಿ ದ್ವಂಸ ಘಟನೆ ಕಾಂಗ್ರೆಸ್ ಮೇಲೆ ಭಾರೀ ಪರಿಣಾಮ ಬೀರಿದೆ. ಈ ಘಟೆಯ ಬಳಿಕ ನಿಧಾನವಾಗಿ ಕಾಂಗ್ರೆಸ್ ಕ್ಷೇತ್ರಗಳನ್ನು ಕಳೆದುಕೊಂಡಿತು. ಇತ್ತ ಬಿಜೆಪಿ ತನ್ನ ಮೇಲುಗೈ ಸಾಧಿಸಿ 2014ರಲ್ಲಿ 71 ಕ್ಷೇತ್ರಗಳಿಂದ ಜಯ ಸಾಧಿಸಿತ್ತು. ಈಗ ಮತದಾರರ ನಿರೀಕ್ಷೆಗಳು ಭಿನ್ನವಾಗಿವೆ. ಯಾದವರು ಹಾಗೂ ದಲಿತರು ಬಿಎಸ್‍ಪಿ ಮತ್ತು ಎಸ್‍ಪಿಗೆ ನೀಡಿದ ಬೆಂಬಲ ಹೇಗಿದೆ ಎನ್ನುವ ಪ್ರಶ್ನೆಗೆ ಮೇ ತಿಂಗಳಿನಲ್ಲಿ ಪ್ರಕಟವಾಗಲಿರುವ ಫಲಿತಾಂಶ ಉತ್ತರ ನೀಡಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 1,000 ಲೀಟರ್ ಮದ್ಯ ಕುಡಿದ ಇಲಿಗಳು!

    1,000 ಲೀಟರ್ ಮದ್ಯ ಕುಡಿದ ಇಲಿಗಳು!

    – ಪೊಲೀಸರ ಆರೋಪಕ್ಕೆ ವ್ಯಂಗ್ಯವಾಡಿದ ನೆಟ್ಟಿಗರು

    ಲಕ್ನೋ: ಕಳ್ಳ ಭಟ್ಟಿ ದಂಧೆಕೋರರಿಂದ ವಶಕ್ಕೆ ಪಡೆದಿದ್ದ ಒಂದು ಸಾವಿರ ಲೀಟರ್ ಮದ್ಯವನ್ನು ಇಲಿಗಳು ಕುಡಿದು ಖಾಲಿ ಮಾಡಿವೆ ಎಂದು ಪೊಲೀಸರು ದೂರಿದ ಪ್ರಸಂಗ ಉತ್ತರ ಪ್ರದೇಶದಲ್ಲಿ ನಡೆದಿದ್ದು, ನೆಟ್ಟಿಗರು ಅಧಿಕಾರಿಗಳ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಉತ್ತರ ಪ್ರದೇಶದ ಬರೇಲಿ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಬುಧವಾರ ಈ ಪ್ರಕರಣ ಬೆಳಕಿಗೆ ಬಂದಿದೆ. ಠಾಣೆಯಲ್ಲಿ ಮದ್ಯ ಖಾಲಿಯಾಗಿ ಕ್ಯಾನ್‍ಗಳು ಮಾತ್ರವೇ ಉಳಿದಿವೆ. ಬಿಹಾರ, ಅಸ್ಸಾಂನಲ್ಲಿಯೂ ಇಂತಹದ್ದೇ ಆರೋಪ ಕೇಳಿ ಬಂದಿತ್ತು. ಈಗ ಬರೇಲಿಯ ಪೊಲೀಸರು ಕೂಡ ಠಾಣೆಯ ಕೊಠಡಿಯಲ್ಲಿ ಇಟ್ಟಿದ್ದ ಮದ್ಯ ಖಾಲಿಯಾಗಲು ಇಲಿಗಳೇ ಕಾರಣ ಎಂದು ಆರೋಪಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‍ಪಿ ಅಭಿನಂದನ್ ಸಿಂಗ್ ಅವರು, ಠಾಣೆಯ ವ್ಯಾಪ್ತಿಯಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿ 1,000 ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿತ್ತು. ಅದನ್ನು ಠಾಣೆಯ ಕೊಠಡಿಯೊಂದರಲ್ಲಿ ಇಡಲಾಗಿತ್ತು. ಠಾಣೆಯ ಮುಖ್ಯ ಕ್ಲರ್ಕ್ ನರೇಶ್ ಪಾಲ್ ಬುಧವಾರ ಕೊಠಡಿ ತೆರೆದು ನೋಡಿದಾಗ ಮದ್ಯ ಖಾಲಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

    ಮದ್ಯ ಖಾಲಿಯಾಗಿ ಕ್ಯಾನ್‍ಗಳು ಮಾತ್ರ ಬಿದ್ದಿದ್ದು ಹಾಗೂ ಅಲ್ಲಿ ಇಲಿಗಳು ಇದ್ದಿರುವುದನ್ನು ನರೇಶ್ ಪಾಲ್ ನೋಡಿದ್ದಾರೆ. ಹೀಗಾಗಿ ಮದ್ಯವನ್ನು ಇಲಿಗಳೇ ಖಾಲಿ ಮಾಡಿವೆ ಎನ್ನುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.

    ಈ ಕುರಿತು ತನಿಖೆ ನಡೆಸಲಾಗುತ್ತದೆ. ಆದರೆ ಮದ್ಯ ವಶಕ್ಕೆ ಪಡೆದ ಬಳಿಕ ಮಾದರಿಯನ್ನು ತನಿಖೆಗೆ ಒಪ್ಪಿಸಿ ಉಳಿದಿರುವುದನ್ನು ನಾಶಪಡಿಸಲಾಗುತ್ತದೆ. ಈ ಸಂಬಂಧ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲವೆಂದು ಮದ್ಯವನ್ನು ಕೊಠಡಿಯಲ್ಲಿಯೇ ಇರಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

    ಬಿಹಾರದಲ್ಲಿ 1,500 ಲೀಟರ್, ಅಸ್ಸಾಂನಲ್ಲಿ 650 ಲೀಟರ್, ಈಗ ಬರೇಲಿಯಲ್ಲಿ 1,000 ಲೀಟರ್! ಇಲಿಗಳು ನಿಜವಾಗಿಯೂ ದೊಡ್ಡಮಟ್ಟದ ಕುಡಿತಕ್ಕೆ ಒಳಗಾಗಿವೆ ಹಾಗೂ ಸ್ವಾದೀನಪಡಿಸಿಕೊಂಡ ಮದ್ಯ ಮಾತ್ರ ಕಾಣೆಯಾಗುತ್ತಿದೆ ಎಂದು ಗಿರೀಶ್ ಜೋಹಾರ್ ಎಂಬವರು ಟ್ವೀಟ್ ಮಾಡಿದ್ದಾರೆ. ಪೊಲೀಸರು ಉತ್ತಮ ಜೋಕ್ ಮಾಡುತ್ತಿದ್ದಾರೆ ಎಂದು ಶಿಲ್ಪಾ ಎಂಬವರು ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಟಾರ್ಟ್ ಆಯ್ತು ಮದ್ಯವನ್ನು ಬಳಸಿ ಆಲೂಗಡ್ಡೆ ಬೆಳೆಸುವ ಟ್ರೆಂಡ್!

    ಸ್ಟಾರ್ಟ್ ಆಯ್ತು ಮದ್ಯವನ್ನು ಬಳಸಿ ಆಲೂಗಡ್ಡೆ ಬೆಳೆಸುವ ಟ್ರೆಂಡ್!

    ಲಕ್ನೋ: ಉತ್ತರ ಪ್ರದೇಶದ ಬುಲಂದರ್‌ಶಹರ್‌ನ ರೈತರು ಆಲೂಗೆಡ್ಡೆ ಕೃಷಿಯಲ್ಲಿ ಮದ್ಯವನ್ನು ಬಳಸಿ ಸುದ್ದಿಯಾಗಿದ್ದಾರೆ.

    ಹೌದು, ಸಾಮಾನ್ಯವಾಗಿ ರೈತರು ಬೆಳೆಗಳನ್ನು ಬೆಳೆಯಲು ನೀರು, ಗೊಬ್ಬರ ಬಳಸುತ್ತಾರೆ. ಆದರೆ ಬುಲಂದರ್‌ಶಹರ್‌ನ ರೈತರು ಮಾತ್ರ ಹೊಸ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಈ ಭಾಗದಲ್ಲಿ ರೈತರು ತಮ್ಮ ಬೆಳೆಗಳು ಹಾನಿಯಾಗಬಾರದೆಂದು ಮದ್ಯವನ್ನು ಔಷಧಿ ರೀತಿ ಬಳಸುತ್ತಿದ್ದಾರೆ.

    ಇದನ್ನು ನೋಡಿದ ಕೃಷಿ ತಜ್ಞರು, ಮದ್ಯವನ್ನು ಬೆಳೆಗಳಿಗೆ ಹಾಕುವ ಬದಲು ಸರಿಯಾದ ಔಷಧಿಗಳನ್ನು ಬಳಸಬೇಕು. ಇದರಿಂದ ಬೆಳೆಗೂ ಒಳ್ಳೆಯದು ಮತ್ತು ಅದನ್ನು ಸೇವಿಸುವವರಿಗೂ ಒಳ್ಳೆಯದು ಎಂದು ಹೇಳಿ ಈ ಹೊಸ ವಿಧಾನವನ್ನು ತಿರಸ್ಕರಿಸಿದ್ದಾರೆ. ಹೀಗೆ ಮದ್ಯವನ್ನು ಬಳಸುವುದರ ಹಿಂದೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಇದು ಹಣವನ್ನು ಹಾಳುಮಾಡುವ ವಿಧಾನ. ಇದರಿಂದ ಏನೂ ಉಪಯೋಗವಿಲ್ಲ ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ.

    ಕೃಷಿ ತಜ್ಞರು ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ತಿಳಿಸಿದರೂ, ನಾವು ಮಾತ್ರ ಮದ್ಯವನ್ನೇ ಬಳಸಿ ಆಲೂಗಡ್ಡೆ ಬೆಳೆಸುತ್ತೇವೆ ಅದರಿಂದ ನಮಗೆ ಹೆಚ್ಚು ಇಳುವರಿ ಸಿಗುತ್ತದೆ ಅಂತ ರೈತರು ಹೇಳುತ್ತಿದ್ದಾರೆ.

    ಅದರಲ್ಲೂ ರೈತರೊಬ್ಬರು ತಮ್ಮ ಜಮೀನಿನಲ್ಲಿ ಆಲೂಗಡ್ಡೆ ಬೆಳೆಗೆ ಮದ್ಯವನ್ನು ಸಿಂಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾವು ಒಮ್ಮೆ ಈ ವಿಧಾನ ಅನುಸರಿಸೋಣ ಎಂದು ಜನರು ಚರ್ಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಲೆಯಿಂದ ಮರಳುತ್ತಿದ್ದ ವಿದ್ಯಾರ್ಥಿನಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

    ಶಾಲೆಯಿಂದ ಮರಳುತ್ತಿದ್ದ ವಿದ್ಯಾರ್ಥಿನಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

    – ಪಿಎಸ್‍ಐ ಕನಸು ಕಂಡಿದ್ದ ಬಾಲಕಿ ಕನಸಾಗಿಯೇ ಉಳಿಯಿತು

    ಲಕ್ನೋ: ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದ 15 ವರ್ಷದ ವಿದ್ಯಾರ್ಥಿನಿಯನ್ನು ತಡೆದು ಬೆಂಕಿ ಹಚ್ಚಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ನುಮೀಲ್ ಗ್ರಾಮದಲ್ಲಿ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

    ನುಮೀಲ್ ಗ್ರಾಮದ ಸಂಜಾಲಿ ಮೃತ ವಿದ್ಯಾರ್ಥಿನಿ. ಸಂಜಾಲಿಯು ಅಶಾರ್ಫಿ ದೇವಿ ಚಿಡ್ಡಾ ಸಿಂಗ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಘಟನೆ ನಡೆದು ನಾಲ್ಕು ದಿನಗಳು ಕಳೆದರೂ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿಲ್ಲ ಎಂದು ವರದಿಯಾಗಿದೆ.

    ಘಟನೆಯ ವಿವರ:
    ವಿದ್ಯಾರ್ಥಿನಿ ಸಂಜಾಲಿ ಎಂದಿನಂತೆ ಮಂಗಳವಾರ ಶಾಲೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಳು. ಈ ವೇಳೆ ಆಕೆಯನ್ನು ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಸುಟ್ಟು ಬಿದ್ದಿದ್ದ ಸಂಜಾಲಿಯನ್ನು ನೋಡಿದ ಕೆಲ ಸ್ಥಳೀಯರು ಆಗ್ರಾದ ಎಸ್‍ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

    ಸಂಜಾಲಿ ಸಾವಿನಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾವ ಕಾರಣಕ್ಕೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ. ದಲಿತರಾಗಿರುವ ನಾವು ನೆರೆಹೊರೆಯವರ ಜೊತೆಗೆ ಜಗಳವಾಡಿಕೊಂಡಿಲ್ಲ, ಯಾರೊಬ್ಬರೊಂದಿಗೂ ವೈರತ್ವ ಹೊಂದಿಲ್ಲ. ನಮ್ಮ ಮಗಳನ್ನು ಕೊಲೆಗೈದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

    ಐಪಿಎಸ್ ಅಧಿಕಾರಿಯಾಗಬೇಕು ಅಂತ ಸಂಜಾಲಿ ಕನಸು ಕಂಡಿದ್ದಳು. ಆದರೆ ದುಷ್ಕರ್ಮಿಗಳು ಆಕೆಯನ್ನು ಬಲಿಪಡೆದು ಕನಸನ್ನು ಕೊಂದು ಹಾಕಿದರು ಎಂದು ಪೋಷಕರು ಮೃತ ಮಗಳನ್ನು ನೆನೆದು ಕಣ್ಣಿರು ಇಟ್ಟಿದ್ದಾರೆ.

    ಉತ್ತರ ಪ್ರದೇಶ ಸರ್ಕಾರವು ಮೃತಳ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಈ ಕುರಿತು ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ಚುರುಕುಗೊಳಿಸಲಾಗಿದೆ. ಸದ್ಯದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಆಗ್ರಾ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv