ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ರಾಜ್ಯಪಾಲರಾದ ರಾಮ್ ನಾಯಕ್ ಅವರಿಗೆ ಪತ್ರ ಬರೆದಿದ್ದು, ತಕ್ಷಣದಿಂದ ಜಾರಿ ಆಗುವಂತೆ ತಮ್ಮ ಸಚಿವ ಸಂಪುಟದಿಂದ ಓಂ ಪ್ರಕಾಶ್ ರಾಜ್ ಭರ್ ಅವರನ್ನು ಕೈ ಬಿಡುತ್ತಿರುವುದಾಗಿ ತಿಳಿಸಿದ್ದಾರೆ.
ಸುಹೇಲ್‍ದೇವ್ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ರಾಜ್ ಭರ್ ಅವರು ಅವರು ಆದಿತ್ಯನಾಥ್ ಅವರ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಸಚಿವರಾಗಿದ್ದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರದ ವಿರುದ್ಧವೇ ರೆಬೆಲ್ ಆದ ಒಂದು ದಿನದ ಬಳಿಕ ಸಿಎಂ ಯೋಗಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.
ಮೇ 19 ರಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ರಾಜ್ ಭರ್ ಅವರು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ಲಭಿಸಲಿದೆ. ಎಸ್‍ಪಿ ಹಾಗೂ ಬಿಎಸ್‍ಪಿ ಮೈತ್ರಿಗೆ ಹೆಚ್ಚಿನ ಸ್ಥಾನಗಳಿಸಲಿದೆ. ಬಿಜೆಪಿ ವಿರುದ್ಧ ತಾವು ರೆಬೆಲ್ ಆಗಿರುವುದಕ್ಕೆ ಈ ಫಲಿತಾಂಶ ಬರಲಿದೆ ಎಂದು ಭವಿಷ್ಯ ನುಡಿದಿದ್ದರು.
ಬಿಜೆಪಿ ಚಿಹ್ನೆ ಮೂಲಕ ತಮ್ಮ ಸ್ಪರ್ಧೆಗೆ ಬಿಜೆಪಿ ನಿರಾಕರಿಸಿದ್ದರಿಂದ ಅವರು ಮೈತ್ರಿ ವಿರುದ್ಧ ರೆಬೆಲ್ ಆಗಲು ಕಾರಣವಾಗಿತ್ತು. ಬಿಜೆಪಿ ನಾಯಕರು ರಾಜ್ ಭರ್ ಅವರ ಭಾರತೀಯ ಸಮಾಜ ಪಕ್ಷದ ಚಿಹ್ನೆ ಮೂಲಕವೇ ಸ್ಪರ್ಧೆ ಮಾಡಲು ಸೂಚನೆ ನೀಡಿದ್ದರು. ಇತ್ತ ರಾಜ್ ಭರ್ ಅವರು ತಮ್ಮ ಪಕ್ಷದಿಂದ 40 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಕಣಕ್ಕೆ ಇಳಿದ ಎಲ್ಲಾ ಅಭ್ಯರ್ಥಿಗಳು ಒಬಿಸಿ ಅಭ್ಯರ್ಥಿಗಳೇ ಆಗಿದ್ದರು. ಅಲ್ಲದೇ ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದರು. ಅಲ್ಲದೇ 2022ರ ಚುನಾವಣೆಗೆ ತಮ್ಮ ಪಕ್ಷವನ್ನು ಸ್ವತಂತ್ರ್ಯವಾಗಿ ಕಣಕ್ಕೆ ಇಳಿಸಲು ಕಾರ್ಯನಿರ್ವಹಿಸುವುದಾಗಿ ಹೇಳಿದ್ದರು.
UP CM Office says “CM has requested Governor to dismiss Suheldev Bhartiya Samaj Party chief OM Prakash Rajbhar from UP cabinet with immediate effect.” Rajbhar, a minister for backward class welfare&’divyangjan’ empowerment, had earlier resigned from cabinet but it wasn’t accepted pic.twitter.com/22BJ7D41N5
ಕೊನೆಯ ಹಂತದ ಮತದಾನದ ವೇಳೆ ಸಾರ್ವಜನಿಕವಾಗಿಯೇ ಹೇಳಿಕೆ ನೀಡಿದ್ದ ರಾಜ್ ಭರ್, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವಂತೆಯೂ ಹೇಳಿಕೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಅವರ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ಇತ್ತ ಯೋಗಿ ಆದಿತ್ಯನಾಥ್ ಅವರು ನೀಡಿರುವ ಪತ್ರಕ್ಕೆ ಗವರ್ನರ್ ಅವರು ಒಪ್ಪಿಗೆ ನೀಡಿದ್ದು, ಸಚಿವ ಸ್ಥಾನದಿಂದ ಕೈಬಿಟ್ಟಿದ್ದಾರೆ.
ಲಕ್ನೋ: ಇಬ್ಬರು ದುಷ್ಕರ್ಮಿಗಳು ತಮ್ಮ ಸಹೋದರಿಯನ್ನು ಕಾರಿನಿಂದ ಹೊರ ತಳ್ಳಿ ಆ್ಯಸಿಡ್ ದಾಳಿ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಸಂತ್ರಸ್ತೆಯು 22 ವರ್ಷದವಳಾಗಿದ್ದು, ಬುಲಂದರ್ ಶಹರ್ ಜಿಲ್ಲೆಯ ಗುಲೋತಿ ಗ್ರಾಮದ ನಿವಾಸಿಯಾಗಿದ್ದಾರೆ. ಗುರುವಾರ ಘಟನೆ ನಡೆದಿದ್ದು, ಯುವತಿಯು ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾಳೆ.
ಇಬ್ಬರು ಸಹೋದರರು ನನ್ನನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ಬಳಿಕ ಕೋಟ್ ಗ್ರಾಮದ ಹೊರ ವಲಯದಲ್ಲಿ ಕಾರಿನಿಂದ ನನ್ನನ್ನು ಹೊರ ತಳ್ಳಿ ಆ್ಯಸಿಡ್ ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕೊಲೆ ಮಾಡಲು ಯತ್ನಿಸಿದ್ದರು ಅಂತ ಯುವತಿ ದೂರು ನೀಡಿದ್ದಾಳೆ ಎಂದು ದಾದ್ರಿ ಪೊಲೀಸ್ ಠಾಣೆಯ ಅಧಿಕಾರಿ ನೀರಜ್ ಮಲಿಕ್ ತಿಳಿಸಿದ್ದಾರೆ.
ದುಷ್ಕರ್ಮಿಗಳು ಆ್ಯಸಿಡ್ ದಾಳಿ ಮಾಡಿ ಪರಾರಿಯಾದ ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ್ಯಸಿಡ್ ದಾಳಿಯಿಂದಾಗಿ ಯುವತಿಯ ದೇಹದ ಮೇಲೆ ಶೇ.50ರಷ್ಟು ಸುಟ್ಟ ಗಾಯಗಳಾಗಿವೆ. ಅಷ್ಟೇ ಅಲ್ಲದೆ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾಳೆ.
ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 326 (ಆ್ಯಸಿಡ್ ದಾಳಿ) ಹಾಗೂ 307 (ಕೊಲೆಗೆ ಯತ್ನ) ಅಡಿ ಪ್ರಕರಣ ದಾಖಲಾಗಿದೆ. ಆ್ಯಸಿಡ್ ದಾಳಿಗೆ ನಿಖರ ಕಾರಣ ವರದಿಯಾಗಿಲ್ಲ.
ಮೈಸೂರು: ಉತ್ತರ ಪ್ರದೇಶಕ್ಕೆ ಚುನಾವಣಾ ಕರ್ತವ್ಯಕ್ಕೆಂದು ಹೋಗಿದ್ದ ಮೈಸೂರಿನ ಸಿಐಎಸ್‍ಎಫ್ ಯೋಧ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಜಿಲ್ಲೆಯ ಹುಣಸೂರಿನ ಮಂಜುನಾಥ ಬಡಾವಣೆ ನಿವಾಸಿ ಆರ್.ಕೆ.ಪ್ರಕಾಶ್ ಮೃತಪಟ್ಟ ಯೋಧ. ಮೈಸೂರಿನ ಆರ್‌ಬಿಐ ನಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಅವರು, ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಇಂದು ಬೆಳಗ್ಗೆ ರಾಯ್ ಬರೇಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಪ್ರಕಾಶ್ ಅವರ ಪಾರ್ಥಿವಾ ಶರೀರ ಸ್ವಗ್ರಾಮಕ್ಕೆ ರವಾನೆಯಾಗಿದ್ದು, ಹುಟ್ಟೂರು ಪಿರಿಯಾಪಟ್ಟಣದಲ್ಲಿ ಅಂತ್ಯ ಸಂಸ್ಕಾರದ ಸಿದ್ಧತೆಗಳು ನಡೆದಿವೆ.
ಅರುಣ್ ಬಡಿಗೇರ್ ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಾರಣಾಸಿ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಕಳೆದ ಬಾರಿ ಗುಜರಾತಿನ ವಡೋದರದಿಂದ ಸ್ಪರ್ಧಿಸಿದ್ದ ಮೋದಿ ಈ ಬಾರಿ ವಾರಣಾಸಿಯಿಂದ ಮಾತ್ರ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಕಳೆದ 5 ವರ್ಷದಲ್ಲಿ ಮೋದಿ ಆಡಳಿತದಲ್ಲಿ ಕಾಶಿಯಲ್ಲಿ ಏನು ಬದಲಾಗಿದೆ? ಗಂಗಾ ನದಿ ಎಷ್ಟು ಸ್ವಚ್ಛವಾಗಿದೆ ಎನ್ನುವ ಪ್ರಶ್ನೆ ಏಳುವುದು ಸಹಜ. ಈ ಪ್ರಶ್ನೆಗೆ ಬುಲೆಟ್ ರಿಪೋರ್ಟರ್ ನಲ್ಲಿ ಉತ್ತರ ಸಿಕ್ಕಿದೆ. ಜನ ಹೇಳಿದ್ದು ಏನು? ಏನು ಆಗಬೇಕಿದೆ? ಜನ ಮತ್ತೆ ಮೋದಿಗೆ ವೋಟ್ ಹಾಕ್ತಾರಾ ಈ ಎಲ್ಲ ಪ್ರಶ್ನೆಗಳಿಗೆ ಜನ ನೀಡಿದ ಉತ್ತರ ಇಲ್ಲಿದೆ.
ವಾರಣಾಸಿ ಹೆಸರು ಬಂದಿದ್ದು ಹೇಗೆ?
‘ವರುಣಾ’ ಮತ್ತು ‘ಅಸ್ಸಿ’ ನದಿಗಳ ಮಧ್ಯ ಭಾಗದಲ್ಲಿರುವುದರಿಂದ ಈ ಪ್ರದೇಶಕ್ಕೆ ವಾರಣಾಸಿ ಹೆಸರು ಬಂದಿದೆ. ಆರಂಭದಲ್ಲಿ ಇದನ್ನ ವರುಣಾಆಸಿ ಎಂದು ಕರೆಯಲಾಗುತಿತ್ತು. ಕಾಲ ಕ್ರಮೇಣ ಅದು ವಾರಣಾಸಿ ಆಗಿ ಬದಲಾಯ್ತು. ಹಾಗೆಯೇ ಬನಾರಸ್ ಹೆಸರು ಬರಲು ಹಿನ್ನೆಲೆಯಿದೆ. ‘ಬನಾ’ ಅಂದ್ರೆ ಹಿಂದಿಯಲ್ಲಿ ‘ತಯಾರಿದೆ’, ‘ರಸ’ ಅಂದ್ರೆ ‘ನವರಸ’ಗಳು. ಇಲ್ಲಿಗೆ ಬರುವವರಿಗೆ 9 ನವರಸಗಳು ಸಿದ್ಧವಾಗಿ ಸಿಗುತ್ತದೆ ಎನ್ನುವುದಕ್ಕೆ ಬನಾರಸ್ ಅಂತಾ ಕರೆಯುತ್ತಾರೆ.
ಈ ಕ್ಷೇತ್ರ ಕಾಶಿ ವಿಶ್ವನಾಥನ ಸ್ಥಳ, ಶಿವನ ನಗರಿ ಎಂದು ಕರೆಯಲಾಗುತ್ತದೆ. 3500 ವರ್ಷಗಳ ಲಿಖಿತ ದಾಖಲೆ ಹೊಂದಿರೋ ಪುರಾತನ ನಗರಿ ಎಂದೇ ಕರೆಸಿಕೊಂಡಿದೆ. ಇಲ್ಲಿಗೆ 5,000ಕ್ಕೂ ಹೆಚ್ಚು ಪ್ರವಾಸಿಗರು ಪ್ರತಿ ನಿತ್ಯ ಬಂದು ಹೋಗುತ್ತಾರೆ.
ಎಲ್ಲೆಂದರಲ್ಲಿ ಜೋತು ಬಿದ್ದ ವೈರ್‍ಗಳು, ಎಲ್ಲೆಂದರಲ್ಲಿ ಎಸೆಯುತ್ತಿದ್ದ ಪ್ಲಾಸ್ಟಿಕ್ ಚೀಲಗಳು, ಗಂಗಾ ನದಿಯ ತಟದಲ್ಲಂತೂ ನಿಲ್ಲಲು ಅಸಾಧ್ಯವಾಗುವ ರೀತಿಯಲ್ಲಿ ನೈರ್ಮಲ್ಯ, ವಾಸನೆಯಿಂದ ತುಂಬಿರುತ್ತಿತ್ತು. ಆದರೆ ಈಗ ಕಾಶಿ ಬದಲಾಗಿದೆ. ಈ ಕ್ಷೇತ್ರದಲ್ಲಿ ಈಗ ಅಭಿವೃದ್ಧಿಯ ಮಾತುಗಳು ಕೇಳಿ ಬರುತ್ತಿವೆ.
ಘಾಟ್‍ಗಳ ಸ್ವಚ್ಛತೆ ಆಗಿದ್ಯಾ?
ಎಲ್ಲರೂ ಹೇಳುವ ಹಾಗೆ ಘಾಟ್‍ಗಳಲ್ಲಿ ಸ್ವಚ್ಛತೆ ಕಾಣಿಸುತ್ತಿದೆ. 2014ರಲ್ಲಿದ್ದ ಘಾಟ್‍ಗಳಿಗೂ ಈಗಿರುವ ಘಾಟ್‍ಗಳಿಗೂ ತುಂಬಾ ವ್ಯತ್ಯಾಸವಿದೆ. ಘಾಟ್‍ಗಳಲ್ಲಿ ಪ್ರತಿ 4 ಗಂಟೆಗಳಿಗೊಮ್ಮೆ ಕಸವನ್ನು ಗುಡಿಸಲಾಗುತ್ತದೆ. ಗಂಗಾ ನದಿಯಲ್ಲಿ ಎಸೆಯುವ ಹೂ, ತೆಂಗಿನಕಾಯಿ, ಪ್ಲಾಸ್ಟಿಕ್ ಕಸವನ್ನು ಬೋಟ್‍ನಲ್ಲಿ ಹೋಗಿ ಸ್ವಚ್ಛಗೊಳಿಸಲಾಗುತ್ತದೆ. ಇನ್ನು ಪ್ರತಿ ಘಾಟ್‍ಗಳಲ್ಲೂ ಎರಡೆರಡು ಕಸದ ಡಬ್ಬಿಗಳನ್ನ ಇಡಲಾಗಿದೆ. ಜೊತೆಗೆ ಘಾಟ್‍ನಲ್ಲಿರುವ ಅರ್ಚಕರು, ನಾವಿಕರು, ಪ್ರವಾಸಿಗರಿಗೆ ಸೂಚನೆ ನೀಡಲಾಗುತ್ತದೆ. ಆದರೂ ಕೆಲ ಜನರು ಸಿಕ್ಕ ಸಿಕ್ಕ ಕಡೆ ಹೂವು, ತೆಂಗಿನಕಾಯಿ, ಪ್ಲಾಸ್ಟಿಕ್ ಚೀಲ ಎಸೆದು ಹೋಗುವ ದೃಶ್ಯ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ.
ಗಂಗಾ ನದಿ ಸ್ವಚ್ಛವಾಗಿದ್ಯಾ?
ಘಾಟ್‍ಗಳಲ್ಲಿ ಸ್ವಚ್ಛತಾ ಕಾರ್ಯವೆಲ್ಲ ನಡೆಯುತ್ತಿದೆ. ಆದ್ರೆ, ವಾರಣಾಸಿಯಲ್ಲಿನ ಚರಂಡಿ ನೀರು ಇನ್ನೂ ಗಂಗಾ ನದಿಯನ್ನು ಸೇರುತ್ತಿದೆ. ಸುಮಾರು 175 ಕಡೆ ಇಂತಹ ಚರಂಡಿ ನೀರನ್ನು ಗಂಗಾ ನದಿಗೆ ಬಿಡುವ ಜಾಗಗಳಿವೆ. ಇದರಲ್ಲಿ ಪ್ರಮುಖ ಘಾಟ್‍ಗಳಲ್ಲಿನ ಈ ಮೋರಿ ನೀರನ್ನು ಬಿಡುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಆದರೆ ಆ ಎಲ್ಲ ಮೋರಿ ನೀರು ಘಾಟ್‍ಗಳನ್ನು ದಾಟಿ ಮುಂದೆ ಹೋದ ನಂತರ ಗಂಗಾ ನದಿಗೆ ದೊಡ್ಡ ಪ್ರಮಾಣದಲ್ಲಿ ಚರಂಡಿ ನೀರನ್ನು ಬಿಡಲಾಗುತ್ತದೆ. ಬಳಿಕ ಇದೇ ಗಂಗಾ ನದಿಯ ನೀರನ್ನ ಶುದ್ಧೀಕರಿಸಿ ವಾರಣಾಸಿಯ ಜನತೆ ಕುಡಿಯುವ ನೀರನ್ನಾಗಿ ಸರಬರಾಜು ಮಾಡಲಾಗುತ್ತದೆ.
ಮೋದಿ ಬಂದ ನಂತರ ಘಾಟ್‍ಗಳಿಗೆ ಬೆಳಕಿನ ಅಲಂಕಾರ ಮಾಡಿಸಿದ್ರು, ಘಾಟ್‍ಗಳ ಸ್ವಚ್ಛತೆ ಮಾಡಿಸಿದ್ರು, ಆದ್ರೆ, ಘಾಟ್‍ಗಳಲ್ಲಿ ಕುಡಿಯುವ ನೀರಿಗಾಗಿ ಮಾಡಿಸಿದ ಟ್ಯಾಂಕ್‍ಗಳನ್ನು ಹಾಗೆ ಬಿಟ್ಟರು. ಪ್ರತಿ ಟ್ಯಾಂಕ್‍ಗಳಿಗೆ 5 ಲಕ್ಷ ಖರ್ಚಾಗಿದೆ. ಇನ್ನೂ ಗಂಗಾ ನದಿಗೆ ಬಿಡುವ ಕಲ್ಮಶ ನೀರನ್ನು ಮೊದಲು ನಿಲ್ಲಿಸಿ ಎನ್ನುವ ಮಾತನ್ನು ಇಲ್ಲಿನ ಸಾರ್ವಜನಿಕರು ಹೇಳುತ್ತಾರೆ. ನೋಡಲು ಚೆನ್ನಾಗಿದ್ದರೆ ಸಾಲದು, ಗಂಗಾ ನದಿಯೂ ಸ್ವಚ್ಛವಾಗಬೇಕು ಎನ್ನುವುದು ಜನರ ಕೂಗು.
ವಿದ್ಯುತ್ ತಂತಿಗಳು
ವಾರಣಾಸಿ ಗಲ್ಲಿ ಗಲ್ಲಿಗಳಿಂದ ಕೂಡಿದ ಜಾಗ. ಇಲ್ಲಿ ಒಂದು ಗಲ್ಲಿಯೊಳಗೆ ನುಗ್ಗಿದರೆ ಸಾಕು ಅದು ಇನ್ನೊಂದು ಜಾಗಕ್ಕೆ ತುಂಬಾ ಬೇಗನೆ ಮುಟ್ಟಿಸುತ್ತೆ, ಆದ್ರೆ ಸಿಕ್ಕಾಪಟ್ಟೆ ಇಕ್ಕಟ್ಟು ಇರುತ್ತೆ. ಇಂತಹ ಜಾಗದಲ್ಲೇ ಇಲ್ಲಿನ ಜನ ಬೈಕ್‍ನಲ್ಲಿ ಸವಾರಿ ಮಾಡ್ತಾರೆ. ಇಂತಹ ಜಾಗದಲ್ಲೇ ತರಕಾರಿ ಮಾರಲು ತಳ್ಳು ಗಾಡಿಯಲ್ಲಿ ಬರ್ತಾರೆ. ಈ ಜಾಗದಲ್ಲಿ ಸಂಚರಿಸುವುದೇ ಒಂದು ರೀತಿ ಚೆಂದ. ಇಂತಹ ಜಾಗದಲ್ಲಿ ಈ ಹಿಂದೆ ವಿದ್ಯುತ್ ಸಂಪರ್ಕಿಸುವ ತಂತಿಗಳು ಎಲ್ಲೆಂದರೆಲ್ಲಿ ತೂಗಾಡುತ್ತಿದ್ದವು, ಆದ್ರೆ ಇದೆಲ್ಲ ಈಗ ಬದಲಾಗಿದೆ. ಜೊತೆಗೆ ಕಾಶಿ ವಿಶ್ವನಾಥನ ಮಂದಿರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲೂ ಎಲ್ಲೆಂದರಲ್ಲಿ ಜೋತಾಡುತ್ತಿದ್ದ ವೈರ್‍ಗಳು ಈಗ ಭೂಮಿಯಡಿಯಲ್ಲಿ ಹೋಗಿವೆ. ಭೂಮಿಯ ಮೇಲ್ಭಾಗದಲ್ಲಿ ವಿದ್ಯುತ್ ದೀಪಗಳು ರಾರಾಜಿಸುತ್ತಿವೆ. ಇದು ಇಲ್ಲಿನ ಜನರ ಮನ ಸೆಳೆದಿದೆ. ಮಳೆಗಾಲ ಬಂದಾಗ ಯಾವಾಗ ಕೇಬಲ್‍ಗಳು ತುಂಡಾಗಿ ಬೀಳುತ್ತದೋ ಯಾವಾಗ ಶಾಕ್ ಹೊಡೆಯುತ್ತದೋ ಎನ್ನುವ ಭಯದಲ್ಲಿ ವಾಸಿಸುತ್ತಿದ್ದರಂತೆ. ಈಗ ಇದೆಲ್ಲ ಬದಲಾವಣೆ ನೋಡಿ ನಮಗೆ ತುಂಬ ಖುಷಿಯಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ವಿದ್ಯುತ್ ವ್ಯತ್ಯಯ ಇಲ್ಲ
ಇಲ್ಲಿನ ಜನರು ಮೋದಿ ಮತ್ತು ಯೋಗಿ ಆದಿತ್ಯನಾಥ ಬಗ್ಗೆ ಇಷ್ಟೊಂದು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಲು ಕಾರಣ ಏನಂದ್ರೆ, ಅದು 24 ಗಂಟೆ ವಿದ್ಯುತ್ ಪೂರೈಕೆ. ಮುಂಚೆ ಇಲ್ಲಿ ದಿನಕ್ಕೆ 8 ರಿಂದ 10 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿತ್ತು. ಆದ್ರೆ, ಈಗ ಇಲ್ಲಿ ವಿದ್ಯುತ್ ವ್ಯತ್ಯಯ ಇಲ್ಲದಿರೋದು ಜನರಿಗೆ ಮತ್ತಷ್ಟು ಮೋದಿ ಮೋದಿ ಅನ್ನುವಂತೆ ಮಾಡಿದೆ. ಆದರು ಇಲ್ಲಿ ಅಪರೂಪಕ್ಕೆ ಈಗ ದಿನಕ್ಕೆ ಒಂದೆರಡು ಗಂಟೆ ಕರೆಂಟ್ ಹೋಗುತ್ತದೆ. ಬೇಸಿಗೆಯಲ್ಲಿ ಇಲ್ಲಿನ 44-45 ಡಿಗ್ರಿ ಬಿಸಿಲನ್ನ ತಡೆದುಕೊಳ್ಳಲು ಫ್ಯಾನ್, ಕೂಲರ್, ಎಸಿ ಬೇಕಾಗುತ್ತದೆ. ಹಾಗಾಗಿ ಕರೆಂಟ್ ಇಲ್ಲದೆ ಇದ್ರೆ ಇಲ್ಲಿನ ಜನರ ಪಾಡು ಹೇಳೋ ಹಾಗೆ ಇಲ್ಲ. ಇನ್ನೂ ಅತೀ ಹೆಚ್ಚಾಗಿ ಇಲ್ಲಿ ಬಡವರ ಫ್ರಿಡ್ಜ್ ಮಡಿಕೆಯನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ.
ಗುಂಡಿಗಳಿಂದ ಮುಕ್ತಿ ಕಂಡ ರಸ್ತೆಗಳು
ನರೇಂದ್ರ ಮೋದಿ ಪ್ರಧಾನಿ ಅಂತಾ ವಾರಣಾಸಿ ಜನ ಮೋದಿ ಮೋದಿ ಅಂತಾ ಘೋಷಣೆ ಹಾಕುತ್ತಿಲ್ಲ. ಬದಲಾಗಿ ವಾರಣಾಸಿಯಲ್ಲಿ ಅಭಿವೃದ್ಧಿ ಆಗುತ್ತಿರುವುದರಿಂದ ಜನ ಮೋದಿಯನ್ನ ಪ್ರೀತಿಸೋಕೆ ಶುರು ಮಾಡಿದ್ದಾರೆ. ಮುಂಚೆ ಇಲ್ಲಿ ಗುಂಡಿಗಳಿಂದಲೇ ತುಂಬಿರುತ್ತಿದ್ದ ರಸ್ತೆಗಳು ಈಗ ನಯವಾಗಿ ಓಡುಡುವಂತಾಗಿವೆ. ವಿಮಾನ ನಿಲ್ದಾಣದಿಂದ ವಾರಣಾಸಿ ತಲುಪಲು ಸುಮಾರು 1 ಗಂಟೆ 45 ನಿಮಿಷ ಸಮಯ ತೆಗೆದುಕೊಳ್ಳುತ್ತಿತ್ತು. ಈಗ ಕೇವಲ 45 ನಿಮಿಷದಲ್ಲಿ ವಾರಣಾಸಿ ತಲುಪಬಹದು. ಇದಕ್ಕಾಗಿ ಫ್ಲೈ ಓವರ್ ನಿರ್ಮಾಣ ಮಾಡಲಾಗಿದೆ. ಇದರಿಂದ ಟ್ಯಾಕ್ಸಿ ಚಾಲಕರು, ಆಟೋ ಚಾಲಕರು, ಸೈಕಲ್ ಸವಾರರು, ಪ್ರಯಾಣಿಕರು ತುಂಬ ಸಂತಸ ವ್ಯಕ್ತಪಡಿಸುತ್ತಾರೆ.
ಶೌಚಾಲಯಗಳ ನಿರ್ಮಾಣ:
ಹಿಂದೆ ವಾರಣಾಸಿಯಲ್ಲಿ ಎಲ್ಲಿ ಬೇಕೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಅಭ್ಯಾಸವಾಗಿತ್ತು. ಇದರಿಂದ ಇಲ್ಲಿನ ಜನರು ಸೇರಿದಂತೆ ವ್ಯಾಪಾರಸ್ಥರು, ಪ್ರವಾಸಿಗರು ತುಂಬಾ ರೋಸಿ ಹೋಗಿದ್ದರು. ರಸ್ತೆ ಪಕ್ಕದಲ್ಲಿ ಓಡಾಡಬೇಕಾದರೂ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇತ್ತು. ಆದ್ರೆ ಈಗ ಪ್ರತಿ ಸರ್ಕಲ್‍ನಲ್ಲೊಂದು ಶೌಚಾಲಯಗಳನ್ನ ನಿರ್ಮಿಸಲಾಗಿದೆ. ಎಲ್ಲರಿಗೂ ಶೌಚಾಲಯ ಬಳಕೆಯ ಅರಿವು ಮೂಡಿದೆ. ಈ ಬೆಳವಣಿಗೆಯಿಂದ ಮೋದಿ ಜನರ ಮನಸ್ಸನ್ನು ಗೆದ್ದಿದ್ದಾರೆ.
ಬದಲಾಗುತ್ತಿದ್ದಾರೆ ಜನ:
ಕೇವಲ ಕಾಶಿ ಬದಲಾಗುತ್ತಿಲ್ಲ, ಕೇವಲ ವಾರಣಾಸಿ ಅಭಿವೃದ್ಧಿ ಕಾಣುತ್ತಿಲ್ಲ. ಇಲ್ಲಿನ ಜನರು ಬದಲಾಗುತ್ತಿದ್ದಾರೆ, ಅಭಿವೃದ್ಧಿ ಆಗುತ್ತಿದ್ದಾರೆ. ಮೊದಲು ಇಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದರು. ಆದ್ರೆ ಈಗ ಪ್ರತಿ ಅಂಗಡಿಯ ಮುಂಭಾಗದಲ್ಲಿ ಸ್ವತಃ ಅಂಗಡಿ ಮಾಲೀಕರೇ ಕಸದ ಡಬ್ಬಿಯನ್ನ ಇಟ್ಟಿರುತ್ತಾರೆ. ಎಲ್ಲೆಂದರಲ್ಲಿ ಬಿಸಾಕಿದರೆ ಅವರೇ ಬುದ್ಧಿ ಹೇಳುತ್ತಾರೆ. ಕಾರಿನಿಂದ ಗುಟ್ಕಾ ತಿಂದು ರ್ಯಾಪರ್ ಬಿಸಾಕುತ್ತಿದ್ದ ಚಾಲಕರು ಈಗ ಕಾರಿನಲ್ಲೇ ಗುಟಕಾ ರ್ಯಾಪರ್‍ಗಳನ್ನ ಇಟ್ಟುಕೊಳ್ಳುತ್ತಾರೆ, ಕಸದ ಡಬ್ಬಿ ಸಿಕ್ಕಾಗ ಅಲ್ಲಿ ಹಾಕುತ್ತಾರೆ. ಸ್ವಚ್ಛತೆಯನ್ನ ನೋಡಿ ಈಗ ತಾವು ಕೂಡ ಸ್ವಚ್ಛತೆ ಕಾಪಾಡೋದ್ರಲ್ಲಿ ನಿರತರಾಗಿದ್ದಾರೆ.
ಟ್ರಾಫಿಕ್ ಜಾಮ್:
ವಾರಣಾಸಿಯಲ್ಲಿನ ಟ್ರಾಫಿಕ್ ಜಾಮ್ ಬೆಂಗಳೂರನ್ನೂ ಮೀರಿಸುವಂತಿದೆ. ಬೆಂಗಳೂರಲ್ಲಿ ಕಾರುಗಳ ದರ್ಬಾರ್ ಇದ್ದರೆ ಇಲ್ಲಿ ಸೈಕಲ್ ರಿಕ್ಷಾ, ಆಟೋ, ಬ್ಯಾಟರಿ ಆಟೋ, ಬೈಕ್‍ಗಳು, ಕಾರುಗಳ ದರ್ಬಾರ್. ಇದರಲ್ಲಿ ಅತೀ ಮುಖ್ಯವಾಗಿ ಇಲ್ಲಿರುವ ಜನರಿಗೆ ಶಬ್ದಮಾಲಿನ್ಯದ ಅರಿವೇ ಇಲ್ಲದಂತಿದ್ದಾರೆ. ಒಂದು ಸಲ ರಸ್ತೆಗೆ ಹೋಗಿ ಬರುವಷ್ಟರಲ್ಲಿ ಕಿವಿ ಗುಂಯ್ ಅನ್ನೋದಂತೂ ಸತ್ಯ. ಹಾರ್ನ್ ಬಗ್ಗೆ ಇಲ್ಲಿರುವ ಜನರಿಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ. ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ.
ಲಕ್ನೋ: ಚುನಾವಣಾ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿರುವ ಉತ್ತರ ಪ್ರದೇಶ ಪೂರ್ವ ಭಾಗದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಹಾವು ಹಿಡಿದು ಎತ್ತಿ ಆಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರಿಯಾಂಕ ಗಾಂಧಿ ಅವರು ಉತ್ತರ ಪ್ರದೇಶದ ರಾಯ್‍ಬರೇಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ತಾಯಿ ಸೋನಿಯಾ ಗಾಂಧಿ ಪರ ಇಂದು ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಹಾವಾಡಿಗರನ್ನು ನೋಡಿದ ಅಲ್ಲಿಗೆ ಬಂದು ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಅನೇಕರು ತಮ್ಮ ಮೊಬೈಲ್ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ವಿಡಿಯೋದಲ್ಲಿ ಏನಿದೆ?:
ಹಾವಾಡಿಗರ ಬಳಿ ಬಂದ ಪ್ರಿಯಾಂಕ ಅವರು ಕುರ್ಚಿ ಒಂದರ ಮೇಲೆ ಕುಳಿತ್ತಿದ್ದಾರೆ. ಅವರ ಕಾಲಿನ ಸಮೀಪದಲ್ಲಿಯೇ ನಾಗರ ಹಾವು ಇತ್ತು. ಅದನ್ನು ಎತ್ತಿ ಪಕ್ಕಕ್ಕೆ ಸರಿಸಿದರು. ಈ ವೇಳೆ ಹಿಂದೆ ನಿಂತಿದ್ದ ವ್ಯಕ್ತಿಯೊಬ್ಬರು ನಾವು ಮುಟ್ಟಬೇಡಿ, ಕಚ್ಚುತ್ತೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ ಅವರು, ಏನು ಮಾಡಲ್ಲ ಎಂದು ಪುನರುಚ್ಚರಿಸಿದರು.
ನಾಗರ ಹಾವನ್ನು ಎತ್ತಿಕೊಂಡು ಬಾಕ್ಸ್‍ನಲ್ಲಿ ಹಾಕಿದರು. ಬಳಿಕ ಮತ್ತೊಂದು ಬಾಕ್ಸ್ ನಲ್ಲಿದ್ದ ಚಿಕ್ಕ ಹಾವನ್ನು ಎತ್ತಿಕೊಂಡು ಕೈಯಲ್ಲಿ ಹಿಡಿದರು. ಈ ವೇಳೆ ಹಾವಾಡಿಗರು ತಮ್ಮ ಸಮಸ್ಯೆಗಳನ್ನು ಪ್ರಿಯಾಂಕ ಗಾಂಧಿ ಅವರ ಬಳಿ ಹೇಳಿಕೊಂಡಿದ್ದಾರೆ.
#WATCH Priyanka Gandhi Vadra, Congress General Secretary for Uttar Pradesh (East) meets snake charmers in Raebareli, holds snakes in hands. pic.twitter.com/uTY0R2BtEP
ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ 5 ಬಾರಿ ಶಾಸಕರಾಗಿದ್ದ ಅಜಯ್ ರಾಯ್ ಅವರನ್ನು ಕಣಕ್ಕೆ ಇಳಿಸಲಾಗಿದೆ. ಪ್ರಿಯಾಂಕ ಗಾಂಧಿ ಅವರು ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸಹೋದರ ರಾಹುಲ್ ಗಾಂಧಿ, ರಾಯ್‍ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿರುವ ತಾಯಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.
ಲಕ್ನೋ: ಉತ್ತರ ಪ್ರದೇಶದ ಮುಸ್ಲಿಂ ಕುಟುಂಬವೊಂದು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ರಾಮ-ಸೀತಾ ಚಿತ್ರವನ್ನು ಮುದ್ರಿಸುವ ಮೂಲಕ ಕೋಮು ಸೌಹಾರ್ದತೆ ಮೆರೆದಿದೆ.
ಷಹಜಹಾನ್ಪರ್ ಜಿಲ್ಲೆಯ ಚಿಲೌವಾ ಹಳ್ಳಿಯ ಮುಸ್ಲಿಂ ಮಹಿಳೆ ಬೇಬಿ ಅವರು ತಮ್ಮ ಮಗಳು ರುಕ್ಷಾರ್ ಮದುವೆಗೆ ಇಂತಹ ವಿಶೇಷ ಆಮಂತ್ರಣ ಪತ್ರಿಕೆ ಮುದ್ರಿಸಿದ್ದು, ಗ್ರಾಮಸ್ಥರಿಗೆ ಹಾಗೂ ಸಂಬಂಧಿಕರಿಗೆ ನೀಡಿದ್ದಾರೆ. ನಮ್ಮ ಗ್ರಾಮದಲ್ಲಿ ಕೋಮು ಸಾಮರಸ್ಯ ಸಾರಲು ನಮ್ಮದೊಂದು ಪುಟ್ಟ ಹೆಜ್ಜೆ ಇಟ್ಟಿದ್ದೇವೆ ಎಂದು ಕುಟುಂಬದವರು ತಿಳಿಸಿದ್ದಾರೆ.
Shahjahanpur: A Muslim family in Chilauwa village has printed image of lord Ram&Sita on wedding invitation cards of their daughter Rukhsar Bano. Her mother, Baby, says "We wanted to give a message that we have love for God as well as Allah. Everyone is a part of our family"(24.4) pic.twitter.com/sG2iRnL6hd
ನಮ್ಮ ಹಳ್ಳಿಯಲ್ಲಿ ಹಿಂದೂ ಹಾಗೂ ಮುಸ್ಲಿಂ ಕುಟುಂಬಗಳು ಒಟ್ಟಾಗಿ ಬಾಳುತ್ತಿವೆ. ಅವರಲ್ಲಿ ಕೋಮು ಸೌಹಾರ್ದತೆ ತರಬೇಕು ಎನ್ನುವುದು ನಮ್ಮ ಇಚ್ಛೆಯಾಗಿದೆ. ಧರ್ಮದ ಆಧಾರದ ಮೇಲೆ ಯಾರನ್ನೂ ಪ್ರತ್ಯೇಕವಾಗಿ ಕಾಣಬಾರದು. ಹೀಗಾಗಿ ಆಮಂತ್ರಣ ಪತ್ರಿಕೆಯಲ್ಲಿ ರಾಮ-ಸೀತಾ ಚಿತ್ರವನ್ನು ಮುದ್ರಿಸಲಾಗಿದೆ ಎಂದು ಬೇಬಿ ಹೇಳಿದ್ದಾರೆ.
ಇಲ್ಲಿನ ಪ್ರತಿಯೊಬ್ಬರೂ ಸಹೋದರಿ ರುಕ್ಷಾರ್ ಮದುವೆಯ ಆಮಂತ್ರಣ ಪತ್ರಿಕೆಯನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. ಇದು ನಮಗೂ ಖುಷಿ ತಂದಿದೆ ಎಂದು ಮೊಮ್ಮದ್ ಉಮರ್ ಸಂತ ವ್ಯಕ್ತಪಡಿಸಿದ್ದಾರೆ.
ಈ ವಿಶೇಷ ಮದುವೆ ಆಮಂತ್ರಣವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಚಿಲೌವಾ ಹಳ್ಳಿಯು ದೆಹಲಿಯಿಂದ 250 ಕಿ.ಮೀ. ದೂರದಲ್ಲಿದೆ.
ಲಕ್ನೋ: ಇವಿಎಂನಲ್ಲಿ ಸಮಾಜವಾದಿ ಪಕ್ಷದ (ಎಸ್‍ಪಿ) ಚಿಹ್ನೆ ಸೈಕಲ್ ಬಟನ್ ಒತ್ತುವಂತೆ ಮತದಾರರಿಗೆ ಹೇಳುತ್ತಿದ್ದ ಚುನಾವಣಾ ಅಧಿಕಾರಿಯನ್ನು ಬಿಜೆಪಿ ಕಾರ್ಯಕರ್ತರು ಥಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮೊರಾದಾಬಾದ್ ಲೋಕಸಭಾ ಕ್ಷೇತ್ರದ ಬಿಲಾರಿ ಮತಗಟ್ಟೆ ಸಂಖ್ಯೆ 231ರ ಬೂತ್‍ನ ಮೊಹಮ್ಮದ್ ಜುಬೇದ್ ಥಳಿಕ್ಕೆ ಒಳಗಾಗದ ಅಧಿಕಾರಿ. ಜುಬೇದ್ ಅವರು ಸೈಕಲ್ ಚಿಹ್ನೆಯ ಬಟನ್ ಒತ್ತುವಂತೆ ಮಹಿಳಾ ಮತದಾರರಿಗೆ ಹೇಳುತ್ತಿದ್ದರು. ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಥಳಿಸಿದ್ದಾರೆ.
#WATCH Moradabad: BJP workers beat an Election Official at booth number 231 alleging he was asking voters to press the 'cycle' symbol of Samajwadi party pic.twitter.com/FokdXCAJ1z
ಸೈಕಲ್ ಚಿಹ್ನೆಯ ಬಟನ್ ಒತ್ತಿ ಅಂತ ಮೋಹದ್ ಜುಬೇದ್ ನಮಗೆ ಹೇಳಿದ್ದರು ಎಂದು ಕೆಲ ಮಹಿಳೆಯರು ಆರೋಪಿದ್ದರು. ಇದರಿಂದಾಗಿ ಮತಗಟ್ಟೆಗೆ ಬಂದ ಬಿಜೆಪಿ ಕಾರ್ಯಕರ್ತರು ಮೋಹದ್ ಜುಬೇದ್ ಅವರನ್ನು ಹೊರಗೆ ಎಳೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೊಹಮ್ಮದ್ ಜುಬೇದ್ ಅವರನ್ನು ಚುನಾವಣಾ ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ನಡೆಯುತ್ತಿದೆ. 13 ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 117 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 18 ಕೋಟಿ 85 ಲಕ್ಷ ಜನರು ಇಂದು 1,640 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಮೊರಾದಾಬಾದ್ ಸೇರಿದಂತೆ ಉತ್ತರ ಪ್ರದೇಶದ 10 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.
ನವದೆಹಲಿ: ಉತ್ತರ ಪ್ರದೇಶದ ಅಮೇಥಿಯ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು ಸಲ್ಲಿಕೆ ಮಾಡಿದ್ದ ನಾಮಪತ್ರ ಅಂಗಿಕೃತವಾಗಿದ್ದು, ಈ ಕುರಿತು ಚುನಾವಣಾ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ರಾಹುಲ್ ನಾಮಪತ್ರ ಸಲ್ಲಿಕೆ ಬಳಿಕ ಪಕ್ಷೇತರ ಅಭ್ಯರ್ಥಿ ದ್ರುವಲಾಲ್ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ರಾಹುಲ್ ಗಾಂಧಿ ಶಿಕ್ಷಣ, ದಾಖಲೆಗಳು, ರಾಷ್ಟ್ರೀಯತೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಿದ್ದರು.
ರಾಹುಲ್ ಗಾಂಧಿ ಅವರು ಇಂಗ್ಲೆಂಡ್ ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಮಾಣ ಪತ್ರ ಹಾಗೂ ಯುಕೆ ಕಂಪನಿಯ ಪ್ರಮಾಣ ಪತ್ರದಲ್ಲಿ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದಾರೆ. ಭಾರತೀಯರಲ್ಲದವರಿಗೆ ದೇಶದ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶವಿಲ್ಲ. ಆದ್ದರಿಂದ ಅವರ ನಾಮಪತ್ರವನ್ನು ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಪರಿಶೀಲನೆ ನಡೆಸಬೇಕು ಎಂದು ದೂರಿನಲ್ಲಿ ದ್ರುವಲಾಲ್ ಮನವಿ ಮಾಡಿದ್ದರು.
ರಾಹುಲ್ ಗಾಂಧಿ ಅವರ ವಿರುದ್ಧ ಆರೋಪಗಳು ಕೇಳಿ ಬರುತ್ತಿದಂತೆ ಚುನಾವಣಾ ಅಧಿಕಾರಿ ರಾಮ್ ಮನೋಹರ್ ಮಿಶ್ರಾ ಅವರು ನಾಮಪತ್ರ ಪರಿಶೀಲನೆ ದಿನಾಂಕವನ್ನು ಏ.22ಕ್ಕೆ ಮುಂದೂಡಿದ್ದರು.
ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ಅವರು ಕೂಡ ರಾಹುಲ್ ಹೆಸರು ಪ್ರಸ್ತಾಪ ಮಾಡಿ ಕಾಲೆಳೆದಿದ್ದರು. ರಾಹುಲ್ ಗಾಂಧಿ ಅವರ ಮೂಲ ಹೆಸರು ರಾಹುಲ್ ವಿಂಚಿ ಎಂಬುವುದು ಎಲ್ಲರ ಕಾಂಗ್ರೆಸ್ ನಾಯಕರಿಗೂ ತಿಳಿದಿದೆ. ಅದ್ದರಿಂದ ಜನರ ಮುಂದೇ ಬರುವ ಮೊದಲು ರಾಹುಲ್, ಪ್ರಿಯಾಂಕ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕಿಡಿಕಾರಿದ್ದರು.
ಸದ್ಯ ರಾಹುಲ್ ಗಾಂಧಿ ಅವರ ನಾಮಪತ್ರ ಅಮೇಥಿಯಲ್ಲಿ ಸಿಂಧು ಆಗಿರುವ ಪರಿಣಾಮ ವಯನಾಡಿನಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎನ್ನಲಾಗಿದೆ. ರಾಹುಲ್ ನಾಮಪತ್ರಕ್ಕೂ ಮುನ್ನ ಅಮೇಥಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಸಲ್ಲಿಸಿದ್ದ ಶೈಕ್ಷಣಿಕ ದಾಖಲೆ ಬಗ್ಗೆಯೂ ದೂರು ಬಂದಿತ್ತು. ಆದರೆ ಶಿಕ್ಷಣದ ಕುರಿತು ಸಲ್ಲಿಕೆ ಮಾಡಿರುವ ದಾಖಲೆಗಳ ಅಡಿ ಅವರ ನಾಮಪತ್ರ ತಿರಸ್ಕರಗೊಳಿಸಲು ಸಾಧ್ಯವಿಲ್ಲ ಎಂದು ಆಯೋಗ ತಿಳಿಸಿತ್ತು. ರಾಹುಲ್ ಗಾಂಧಿ ಅವರ ಸ್ವಕ್ಷೇತ್ರ ಅಮೇಥಿಯಾಗಿದ್ದು, ಮೇ 6 ರಂದು ಮತದಾನ ನಡೆಯಲಿದೆ. ಮೇ 23ಕ್ಕೆ ಲೋಕಸಭಾ ಫಲಿತಾಂಶ ಪ್ರಕಟವಾಗಲಿದೆ.
ಲಕ್ನೋ: ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ವೃದ್ಧನನ್ನು ರೈಲ್ವೇ ಪೊಲೀಸರೊಬ್ಬರು ಕೆಲವೇ ಸೆಕೆಂಡ್‍ನಲ್ಲಿ ಪಾರು ಮಾಡಿದ ಘಟನೆ ಉತ್ತರ ಪ್ರದೇಶದ ದೀನ ದಯಾಳ್ ಉಪಾಧ್ಯಾಯ ಜಂಕ್ಷನ್‍ನಲ್ಲಿ ನಡೆದಿದೆ.
ರೈಲ್ವೇ ಪೊಲೀಸ್ ಅಭಿಷೇಕ್ ಪಾಂಡೆ ಅವರು 70 ವರ್ಷದ ವೃದ್ಧನನ್ನು ಪ್ರಾಣಾಪಾಯದಿಂದ ಪಾರು ಮಾಡಿದ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯು ಶನಿವಾರ ರಾತ್ರಿ ನಡೆದಿದ್ದು, ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ ತೋರಿದ ಅಭಿಷೇಕ್ ಪಾಂಡೆ ಅವರಿಗೆ ಪುರಸ್ಕಾರ ನೀಡಬೇಕು ಎಂದು ಉನ್ನತ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ.
ವಿಡಿಯೋದಲ್ಲಿ ಏನಿದೇ?:
ವೃದ್ಧನೊಬ್ಬ ದೀನ ದಯಾಳ್ ಉಪಾಧ್ಯಾಯ ಜಂಕ್ಷನಿನ 6ನೇ ಪ್ಲಾಟ್‍ಫಾರಂ ಮೇಲೆ ಕುಳಿತಿದ್ದ. ಈ ವೇಳೆ ಹೌರಾದಿಂದ ಜಮ್ಮು ಕಡೆಗೆ ಹೊರಟಿದ್ದ ಹೌರಾ-ಜಮ್ಮು ಎಕ್ಸ್‍ಪ್ರೆಸ್ ರೈಲು ಅದೇ ಪ್ಲಾಟ್‍ಫಾರಂ ಕಡೆಗೆ ಬರುತ್ತಿತ್ತು. ಆದರೆ ಇದನ್ನು ಗಮನಿಸದ ವೃದ್ಧ ಅಲ್ಲಿಯೇ ಕುಳಿತ್ತಿದ್ದ. ಇದನ್ನು ನೋಡಿ ಅಭಿಷೇಕ್ ಪಾಂಡೆ ಅವರು ತಕ್ಷಣವೇ ಆತನನ್ನು ರಕ್ಷಿಸಿದ್ದಾರೆ.
ಅಭಿಷೇಕ್ ಪಾಂಡೆ ಅವರ ಸಮಯ ಪ್ರಜ್ಞೆಯಿಂದ ಕೆಲವೇ ಸೆಕೆಂಡ್‍ನಲ್ಲಿ ಭಾರೀ ಅನಾಹುತ ತಪ್ಪಿದ್ದು, ವೃದ್ಧ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ದೃಶ್ಯವನ್ನು ಗಮನಿಸಿದ ಪ್ರಯಾಣಿಕರು ಅಭಿಷೇಕ್ ಪಾಂಡೆ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲಹಾಬಾದ್: 22 ವರ್ಷ ಹಿಂದೆ ನಡೆದಿದ್ದ ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಶುಕ್ರವಾರದಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಬಿಜೆಪಿ ಶಾಸಕ ಸೇರಿ ಒಟ್ಟು 9 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅಶೋಕ್ ಸಿಂಗ್ ಚಂದೇಲ್ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಶಿಕ್ಷೆ ವಿಧಿಸಿದೆ.
1997 ಜನವರಿ 26ರಂದು ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಶೂಟೌಟ್ ನಡೆದಿತ್ತು. ಬಿಜೆಪಿ ನಾಯಕರಾದ ರಾಜೀವ್ ಶುಕ್ಲಾ ಮತ್ತು ಅವರ ಇಬ್ಬರು ಸಹೋದರರಾದ ರಾಕೇಶ್ ಮತ್ತು ರಾಜೇಶ್, 9 ವರ್ಷದ ಸಹೋದರಿಯ ಮಗು ಅಂಬುಜ್, ವೇದ್ ನಾಯಕ್ ಮತ್ತು ಶ್ರೀಕಾಂತ್ ಪಾಂಡೆ ಅವರ ಹತ್ಯೆ ನಡೆದಿತ್ತು. ಇಬ್ಬರು ಮಕ್ಕಳು ಸೇರಿದಂತೆ ಐವರು ರಾಜಕೀಯ ದ್ವೇಷಕ್ಕೆ ಬಲಿಯಾಗಿದ್ದರು.
ಈ ಐದು ಮಂದಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಬಿಜೆಪಿ ಹಾಲಿ ಎಂಎಲ್‍ಎ ಅಶೋಕ್ ಚಂದೇಲ್ ಸೇರಿದಂತೆ 10 ಮಂದಿ ಭಾಗಿಯಾಗಿದ್ದರು ಎಂದು ಆರೋಪ ಕೇಳಿಬಂದಿತ್ತು. ಆದರೆ 22 ವರ್ಷಗಳ ಕಾಲ ವಿವಿಧ ನ್ಯಾಯಲಯಗಳಲ್ಲಿ ಸುದೀರ್ಘ ವಿಚಾರಣೆ ನಡೆದ ಬಳಿಕ ಶುಕ್ರವಾರ ತೀರ್ಪು ಹೊರಬಿದ್ದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಶೋಕ್ ಚಂದೇಲ್, ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಗೌರವಿಸುತ್ತೇನೆ. ನ್ಯಾಯಕ್ಕಾಗಿ ಹೋರಾಡುತ್ತೇನೆ. ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.
ಮಾಜಿ ಸಂಸದ ಚಂದೇಲ್ ಹಮೀರ್‌ಪುರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಇವರು 1989ರಲ್ಲಿ ಸ್ವತಂತ್ರ ಶಾಸಕರಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದರು. 1999 ರಲ್ಲಿ ಬಿಎಸ್‍ಪಿ ಟಿಕೆಟ್ ನಲ್ಲಿ ಹಮೀರ್‌ಪುರದ ಎಂಪಿ ಆಗಿದ್ದರು. ಪ್ರಸ್ತುತ ಅವರು ಬಿಜೆಪಿ ಪಕ್ಷದಿಂದ ಶಾಸಕರಾಗಿದ್ದಾರೆ.