Tag: uttar pradesh

  • ಉದ್ಯಮಿಯನ್ನು ಪ್ರಜ್ಞೆ ತಪ್ಪಿಸಿ ದರೋಡೆಗೈದ ಸಹೋದರಿಯರು

    ಉದ್ಯಮಿಯನ್ನು ಪ್ರಜ್ಞೆ ತಪ್ಪಿಸಿ ದರೋಡೆಗೈದ ಸಹೋದರಿಯರು

    ಲಕ್ನೋ: ಉದ್ಯಮಿಯೊಬ್ಬರನ್ನು ಪ್ರಜ್ಞೆ ತಪ್ಪಿಸಿ ನಂತರ ಮೂವರು ಸಹೋದರಿಯರು ಸೇರಿ ಅವನ ಹತ್ತಿರ ಇದ್ದ ದುಡ್ಡು ಮತ್ತು ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

    ಈ ಘಟನೆ ಶನಿವಾರ ನಡೆದಿದ್ದು, ಮೂರು ಜನ ಸಹೋದರಿಯರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಸಹೋದರಿಯರನ್ನು, ರಾಜಸ್ಥಾನದ ಬಿಕಾನೆರ್ ಮೂಲದ 25 ವರ್ಷದ ವಿಜಯಲಕ್ಷ್ಮಿ ಮತ್ತು ಅವಳ ಸಹೋದರಿ 21 ವರ್ಷದ ಕೃಷ್ಣ ಮತ್ತು ಇವರ ಸೋದರಸಂಬಂಧಿ ಬುಲಂದ್‍ಶಹರ್‍ ನ 27 ವರ್ಷದ ಸುನೀತಾ ಎಂದು ಗುರುತಿಸಲಾಗಿದೆ. ಇದರಲ್ಲಿ ಸುನೀತಾ ವಿಧವೆಯಾಗಿದ್ದು, ಈ ಹಿಂದೆ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಉಳಿದ ಇಬ್ಬರು ಆರೋಪಿಗಳು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

    ಪೊಲೀಸರು ಹೇಳುವ ಪ್ರಕಾರ, ಮಹಿಳೆಯರು ಮೊದಲು ಉದ್ಯಮಿಯೊಂದಿಗೆ ಸ್ನೇಹ ಬೆಳೆಸಿ ನಂತರ ಅವನನ್ನು ಹೋಟೆಲ್‍ಗೆ ಎಂದು ಕರೆದುಕೊಂಡು ಹೋಗಿ, ನಂತರ ಉದ್ಯಮಿಗೆ ಜಾಸ್ತಿ ಮದ್ಯಪಾನ ಮಾಡಿಸಿ ಪ್ರಜ್ಞೆ ತಪ್ಪಿಸಿ ನಂತರ ಅವನ ಹತ್ತಿರ ಇರುವ ಎಲ್ಲಾ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂದು ಹೇಳಿದ್ದಾರೆ. ಬಂಧಿತ ಆರೋಪಿಗಳಿಂದ ಎರಡು ಮೊಬೈಲ್‍ಗಳು, ಎರಡು ವಾಚ್‍ಗಳು ಮತ್ತು ಉದ್ಯಮಿಯ ಕಾರಿನ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಈ ವೇಳೆ ಪೊಲೀಸ್ ವಿಚಾರಣೆಯಲ್ಲಿ ನಡೆದ ಘಟನೆಯನ್ನು ಒಪ್ಪಿಕೊಂಡಿರುವ ಸಹೋದರಿಯರು, ಉದ್ಯಮಿಯ ಕ್ರೆಡಿಟ್ ಕಾರ್ಡ್ ಬಳಸಿ 15,000 ರೂಪಾಯಿ ಹಣವನ್ನು ಎರಡು ಬಾರಿ ಡ್ರಾ ಮಾಡಿರುವುದಾಗಿ ಮತ್ತು ಅವರ ಡೆಬಿಟ್ ಕಾರ್ಡ್ ಬಳಸಿ 4,500 ರೂಗಳನ್ನು ಡ್ರಾ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

    ಉದ್ಯಮಿಯೂ ಮದ್ಯಪಾನ ಮಾಡಿ ಪ್ರಜ್ಞಾಹೀನನಾಗಿದ್ದಾಗ, ನಾವು ಅವನ ಮೊಬೈಲ್ ಪಿನ್ ಪಡೆದುಕೊಂಡು ನಂತರ ಅವನ ಪೇಟಿಎಂ ಮೂಲಕ 26,000 ರೂಗಳನ್ನು ವಿವಿಧ ಮೂರು ನಂಬರ್ ಗೆ ವರ್ಗಾಯಿಸಿದ್ದೇವೆ. ನಂತರ ನಾವು ಕ್ಯಾಬ್ ಮಾಡಿಕೊಂಡು ಮನೆಗೆ ಹೋದೆವು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.

    ಈ ಹಿಂದೆಯೂ ಈ ಮೂವರು ಸಹೋದರಿಯರು ನಕಲಿ ಗುರುತಿನ ಚೀಟಿಗಳನ್ನು ತೋರಿಸುವ ಮೂಲಕ ಪ್ರವೇಶ ಶುಲ್ಕವಿಲ್ಲದೆ ಪಬ್‍ಗಳಿಗೆ ಹೋಗಿದ್ದ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಈ ಹಿಂದೆ ಈ ಮೂವರು ಸಹೋದರಿಯರು ಸೇರಿ ಹಲವಾರು ಪುರುಷರನ್ನು ಈ ರೀತಿಯಲ್ಲೇ ವಂಚನೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ದಲಿತರಿಗೆ ಅಂಗಡಿ ಪ್ರವೇಶ ನಿರ್ಬಂಧಿಸಿದ ಮುಸ್ಲಿಂ ಕ್ಷೌರಿಕರು

    ದಲಿತರಿಗೆ ಅಂಗಡಿ ಪ್ರವೇಶ ನಿರ್ಬಂಧಿಸಿದ ಮುಸ್ಲಿಂ ಕ್ಷೌರಿಕರು

    ಲಕ್ನೋ: ಉತ್ತರ ಪ್ರದೇಶದ ಒಂದು ಹಳ್ಳಿಯಲ್ಲಿ ದಲಿತರಿಗೆ ಪ್ರವೇಶ ನಿರಾಕಾರಿಸಿದ ಮುಸ್ಲಿಂ ಕ್ಷೌರಿಕರ ಮೇಲೆ ಗ್ರಾಮದ ದಲಿತ ಯುವಕರು ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಭೋಜಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಪೀಪಲ್ಸಾನ ಎಂಬ ಗ್ರಾಮದಲ್ಲಿ. ಮುಸ್ಲಿಂ ಸಮುದಾಯವೇ ಹೆಚ್ಚು ಇರುವ ಈ ಗ್ರಾಮದಲ್ಲಿ ದಲಿತರಿಗೆ ಕ್ಷೌರದ ಅಂಗಡಿಗೆ ಪ್ರವೇಶ ನೀಡುತ್ತಿಲ್ಲ ಮತ್ತು ನಮಗೆ ಹೇರ್ ಕಟ್ ಮಾಡುತ್ತಿಲ್ಲ ಎಂದು ದಲಿತರು ಪೊಲೀಸರಿಗೆ ದೂರು ನೀಡಿದ್ದಾರೆ.

    ಪೀಪಲ್ಸಾನ ಗ್ರಾಮದ ದಲಿತರು ನಮ್ಮ ಗ್ರಾಮದಲ್ಲಿ ಮುಸ್ಲಿಂ ಕ್ಷೌರಿಕರು ಜಾತಿ ಆಧಾರಿತ ತಾರತಮ್ಯವನ್ನು ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನ ವಿರುದ್ಧ ತಮ್ಮ ಕ್ಷೌರದ ಅಂಗಡಿಯನ್ನು ಮುಚ್ಚಿ ಪ್ರತಿಭಟನೆ ಮಾಡಿರುವ ಮುಸ್ಲಿಂರು ನಾವು ದಲಿತರಿಗೆ ನಮ್ಮ ಅಂಗಡಿಯಲ್ಲಿ ಹೇರ್ ಕಟ್ ಮಾಡಿದರೆ, ನಮ್ಮ ಸಮಾಜದವರು ಅಂಗಡಿಗೆ ಬರುವುದಿಲ್ಲ ಎಂದು ವಾದಿಸಿದ್ದಾರೆ.

    ನಾವು ನಮ್ಮ ಜೀವನ ಪೂರ್ತಿ ಈ ಜಾತಿ ಆಧಾರಿತ ತಾರತಮ್ಯವನ್ನು ಅನುಭವಿಸಿದ್ದೇವೆ. ಆದರೆ ನಮ್ಮ ಸಮಾಜದ ಮುಂದಿನ ಪೀಳಿಗೆ ಈ ತಾರತಮ್ಯವನ್ನು ಅನುಭವಿಸಬಾರದು. ಈ ಜಾತಿ ಆಧಾರಿತ ತಾರತಮ್ಯ ನಮ್ಮ ಕಾಲಕ್ಕೆ ಕೊನೆಗೊಳ್ಳಬೇಕು. ಆದರೆ ಮುಸ್ಲಿಮರು ನಡೆಸುವ ಸಲೂನ್‍ಗಳಿಗೆ ನಮ್ಮ ಮಕ್ಕಳು ಭೇಟಿ ನೀಡಿದಾಗ ತಾರತಮ್ಯಕ್ಕೊಳಗಾಗುತ್ತಾರೆ ಎಂದು ಗ್ರಾಮದ ದಲಿತರು ಹೇಳಿದ್ದಾರೆ.

    ತಮ್ಮ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಮತ್ತು ಬದಲಾಗುತ್ತಿರುವ ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಘನತೆಯಿಂದ ಬದುಕಲು ಅವಕಾಶ ನೀಡಬೇಕು. ಈ ವಿಷಯವನ್ನು ಬಗೆಹರಿಸಲಾಗುವುದು ಎಂದು ಪೊಲೀಸರು ಮತ್ತು ಜಿಲ್ಲಾಡಳಿತ ಭರವಸೆ ನೀಡಿದೆ ಎಂದು ದಲಿತರು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಮುಸ್ಲಿಂರನ್ನು ಕೇಳಿದರೆ ಅವರೇ ಬೇರೆ ರೀತಿ ಹೇಳುತ್ತಾರೆ. ದಲಿತರು ಎಂದಿಗೂ ನಮ್ಮ ಕ್ಷೌರಿಕರ ಅಂಗಡಿಗಳಿಗೆ ಹೇರ್ ಕಟ್ ಮಾಡಿಸಲು ಬರುತ್ತಿರಲಿಲ್ಲ. ಅವರು ಭೋಜ್‍ಪುರದಲ್ಲಿ ದಲಿತರು ನಡೆಸುವ ಕ್ಷೌರಿಕನ ಅಂಗಡಿಗೆ ಹೋಗುತ್ತಿದ್ದರು. ಆದರೆ ಈಗ ಅವರು ಇಲ್ಲಿ ಹೇರ್ ಕಟ್ ಮಾಡಿಸಲು ಬಯಸುತ್ತಾರೆ. ಇದರ ಜೊತೆಗೆ ಪೊಲೀಸರು ನಮ್ಮ ಕ್ಷೌರಿಕರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈಗ ಕ್ಷೌರಿಕರ ಕುಟುಂಬದವರು ತುಂಬ ಆತಂಕಕ್ಕೊಳಗಾಗಿದ್ದಾರೆ. ಇದ್ದ ಒಂದು ಕ್ಷೌರದ ಅಂಗಡಿಯು ಮುಚ್ಚಿದೆ ಈಗ ಮನೆಗೆ ಆದಾಯದ ಮೂಲವೇ ಇಲ್ಲವಾಗಿದೆ ಎಂದು ಕ್ಷೌರಿಕ ಕುಟುಂಬಸ್ಥರು ಹೇಳುತ್ತಾರೆ.

    ಈ ಗ್ರಾಮದಲ್ಲಿ ಶೇ.95 ರಷ್ಟು ಮುಸ್ಲಿಂ ಸಮುದಾಯದ ಜನಗಳಿದ್ದಾರೆ. ಇಂದು ದಲಿತರು ನಮ್ಮ ಅಂಗಡಿಗಳ ಪ್ರವೇಶಕ್ಕೆ ಒತ್ತಾಯಿಸುತ್ತಿದ್ದಾರೆ. ನಾಳೆ ಅವರು ಸಮುದಾಯದ ಮದುವೆಗೆ ನಮ್ಮ ಮಂಟಪಗಳನ್ನು ಬುಕ್ ಮಾಡಲು ಪ್ರಾರಂಭಿಸುತ್ತಾರೆ. ಈ ಗ್ರಾಮ ಹಲವಾರು ವರ್ಷಗಳಿಂದ ಶಾಂತಿಯಾಗಿದೆ. ಇಲ್ಲಿ ಕೆಲವರು ಅ ಶಾಂತಿಯನ್ನು ಹಾಳು ಮಾಡಿ ಅವ್ಯವಸ್ಥೆ ಸೃಷ್ಟಿಸಲು ಬಯಸುತ್ತಿದ್ದಾರೆ ಎಂದು ಮುಸ್ಲಿಂ ಮುಖಂಡರು ಆರೋಪಿಸಿದ್ದಾರೆ.

    ದೂರನ್ನು ಪಡೆದಿರುವ ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದು, ದಲಿತರು ಮಾಡಿರುವ ಆರೋಪ ನಿಜವೆಂದು ಕಂಡುಬಂದಲ್ಲಿ, ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ಕಾನೂನುಗಳ ಅಡಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

  • ಸೋನಾಕ್ಷಿಯಿಂದ ವಂಚನೆ – ನಟಿಯ ಮನೆಗೆ ಭೇಟಿಕೊಟ್ಟ ಯುಪಿ ಪೊಲೀಸರು

    ಸೋನಾಕ್ಷಿಯಿಂದ ವಂಚನೆ – ನಟಿಯ ಮನೆಗೆ ಭೇಟಿಕೊಟ್ಟ ಯುಪಿ ಪೊಲೀಸರು

    ಲಕ್ನೋ: ವಂಚನೆ ಆರೋಪ ಎದುರಿಸುತ್ತಿರುವ ಬಾಲಿವುಡ್‍ನ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಮನೆಗೆ ಉತ್ತರ ಪ್ರದೇಶ ಪೊಲೀಸರ ತಂಡ ಭೇಟಿ ನೀಡಿದೆ.

    ಹಣ ಕೊಟ್ಟಿದ್ದರೂ ನಟಿ ಸೋನಾಕ್ಷಿ ಸಿನ್ಹಾ ದೆಹಲಿಯಲ್ಲಿ ಕಾರ್ಯಕ್ರಮ ನೀಡದೆ ವಂಚಿಸಿದ್ದಾರೆ ಎಂದು ಆಯೋಜಕರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಹಾಗೂ ಶುಕ್ರವಾರ ಉತ್ತರ ಪ್ರದೇಶ ಪೊಲೀಸರು ಸೋನಾಕ್ಷಿ ಸಿನ್ಹಾ ಅವರ ಮನೆ ಬಾಗಿಲನ್ನು ತಟ್ಟಿದ್ದಾರೆ.

    ಏನಿದು ಪ್ರಕರಣ?:
    ದೆಹಲಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸೋನಾಕ್ಷಿ ಸಿನ್ಹಾ 24 ಲಕ್ಷ ರೂ. ಹಣವನ್ನು ಮುಂಗಡವಾಗಿ ಪಡೆದಿದ್ದರು. ಆದರೆ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಇದರಿಂದ ಕೋಪಗೊಂಡು ಕಾರ್ಯಕ್ರಮ ಆಯೋಜಿಸಿದ್ದ ವ್ಯಕ್ತಿ ಸೋನಾಕ್ಷಿ ವಿರುದ್ಧ ದೂರು ನೀಡಿದ್ದರು. ಈ ಕುರಿತು ಉತ್ತರ ಪ್ರದೇಶದ ಮೊರಾದಾಬಾದ್ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    ನಟಿ ಆರೋಪಿ ಆಗಿರುವ ಕಾರಣ ಹೇಳಿಕೆ ಪಡೆಯಲು ಉತ್ತರ ಪ್ರದೇಶದ ಪೊಲೀಸರು ಮುಂಬೈನ ಜುಹು ಪೊಲೀಸ್ ಠಾಣೆಯ ಅಧಿಕಾರಿಗಳ ನೆರವಿನೊಂದಿಗೆ ಗುರುವಾರ ಸೋನಾಕ್ಷಿ ಮನೆಗೆ ಭೇಟಿ ನೀಡಿದ್ದರು. ಆದರೆ ಪೊಲೀಸರು ಮನೆಗೆ ಬಂದಾಗ ಸೋನಾಕ್ಷಿ ಸಿನ್ಹಾ ಇರಲಿಲ್ಲ. ಹೀಗಾಗಿ ಕೆಲ ನಿಮಿಷಗಳು ಕಾದು ಮರಳಿದ್ದ ಪೊಲೀಸರು ಶುಕ್ರವಾರ ಮತ್ತೆ ಆಗಮಿಸಿದ್ದರು.

    ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ನಟಿ ಸೋನಾಕ್ಷಿ ಸಿನ್ಹಾ, ಇಂತಹ ಆರೋಪಗಳ ಮೂಲಕ ಮಾಧ್ಯಮಗಳಲ್ಲಿ ನನ್ನ ಹೆಸರಿಗೆ ಮಸಿ ಬಳಿಯಬಹುದೆಂದು ಕಾರ್ಯಕ್ರಮದ ಆಯೋಜಕರು ಯೋಚಿಸಿದ್ದಾರೆ. ಈ ಸಂಬಂಧ ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ಈ ಸುದ್ದಿಯನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಬೇಡಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.

    ಸೋನಾಕ್ಷಿ ಸಿನ್ಹಾರ ವಕ್ತಾರ ಆರೋಪವನ್ನು ತಳ್ಳಿ ಹಾಕಿದ್ದು, ಇದೆಲ್ಲವೂ ಸೋನಾಕ್ಷಿ ಸಿನ್ಹಾ ಅವರ ಹೆಸರಿಗೆ ಮಸಿ ಬಳಿಯಲು ಮಾಡಲಾಗಿದೆ ಎಂದು ಹೇಳಿದ್ದಾರೆ.

    https://twitter.com/sonakshisinha/status/1149584715927584770

  • ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಗೂಂಡಾಗಳನ್ನು ಛೂಬಿಟ್ಟ ಬಿಜೆಪಿ ಶಾಸಕ: ಪುತ್ರಿ ಆರೋಪ

    ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಗೂಂಡಾಗಳನ್ನು ಛೂಬಿಟ್ಟ ಬಿಜೆಪಿ ಶಾಸಕ: ಪುತ್ರಿ ಆರೋಪ

    – ಗೂಂಡಾಗಳು ನಮ್ಮನ್ನು ಖಂಡಿತ ಕೊಲೆ ಮಾಡ್ತಾರೆ
    – ಬಿಜೆಪಿ ಶಾಸಕನ ಮಗಳ ವಿಡಿಯೋ ವೈರಲ್

    ಲಕ್ನೋ: ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಮಗಳು-ಅಳಿಯನ ಮೇಲೆ ಗೂಂಡಾಗಳನ್ನು ಛೂಬಿಟ್ಟ ಆರೋಪ ಬಿಜೆಪಿ ಶಾಸಕರ ಮೇಲೆ ಕೇಳಿ ಬಂದಿದೆ.

    ‘ಪೋಷಕರಿಗೆ ಇಷ್ಟವಿಲ್ಲದ ಮದುವೆ ಮಾಡಿಕೊಂಡಿದ್ದೇನೆ. ಹೀಗಾಗಿ ಗೂಂಡಾಗಳು ನಮ್ಮನ್ನು ಖಂಡಿತ ಕೊಲೆ ಮಾಡುತ್ತಾರೆ ಎಂದು ಉತ್ತರ ಪ್ರದೇಶದ ಶಾಸಕ ರಾಜೇಶ್ ಮಿಶ್ರಾ ಪುತ್ರಿ ಸಾಕ್ಷಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿದೆ.

    23 ವರ್ಷದ ಸಾಕ್ಷಿ ಮಿಶ್ರಾ ವಿಡಿಯೋದಲ್ಲಿ ತಂದೆ ಹಾಗೂ ಸಹೋದರನನ್ನು ಅಡ್ಡ ಹೆಸರಿನಿಂದ ಪಪ್ಪು ಭರ್ತೌಲ್ ಮತ್ತು ವಿಕ್ಕಿ ಭರ್ತೌಲ್ ಎಂದು ಉಲ್ಲೇಖಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ಪಪ್ಪು ಭರ್ತೌಲ್ ಜಿ ಹಾಗೂ ವಿಕ್ಕಿ ಭರ್ತೌಲ್ ಜಿ, ದಯವಿಟ್ಟು ನೀವೂ ಬದುಕಿ. ನಮ್ಮನ್ನೂ ಶಾಂತಿಯಿಂದ ಬದುಕಲು ಬಿಡಿ. ನನಗೆ ನಿಜವಾಗಿಯೂ ಮದುವೆಯಾಗಿದೆ. ಫ್ಯಾಶನ್‍ಗಾಗಿ ನಾನು ಸಿಂಧೂರ (ಕುಂಕುಮ) ಹಚ್ಚಿಕೊಂಡಿಲ್ಲ ಎಂದು ಸಾಕ್ಷಿ ತಂದೆಗೆ ಮನವಿ ಮಾಡಿಕೊಂಡಿದ್ದಾರೆ.

    ಪಾಪಾ, ನೀವು ರಾಜೀವ್ ರಾಣಾ ಅವರಂತಯೇ ನಮ್ಮ ಹಿಂದೆ ನಿಮ್ಮ ನಾಯಿ (ಗೂಂಡಾಗಳನ್ನು) ಕಳುಹಿಸಿದ್ದೀರಿ. ನಿಮ್ಮ ಈ ವರ್ತನೆಯಿಂದ ಬೇಸತ್ತು ಹೋಗಿದ್ದೇನೆ. ನನಗೆ ಏನದರೂ ಆದರೆ ನಿಮ್ಮ ಕುಟುಂಬದ ಪ್ರತಿಯೊಬ್ಬರೂ ಜೈಲಿಗೆ ಹೋಗಬೇಕಾಗುತ್ತದೆ. ಅಡಗಿ ಕುಳಿತು ಕಾಲ ಕಳೆಯಲು ನನ್ನಿಂದ ಆಗುತ್ತಿಲ್ಲ ಎಂದು ಹೇಳಿದ್ದಾರೆ.

    ಪತಿ ಅಭಿತೇಜ್ ಕುಟುಂಬದವರ ತಪ್ಪು ಏನೂ ಇಲ್ಲ. ಅವರಿಗೆ ಕಿರುಕುಳ ಕೊಡಬೇಡಿ. ನೀವು ಶಾಂತಿಯಿಂದ ಬದುಕಿದರೆ ನಾನು ಖುಷಿಯಿಂದ ಬದುಕಲು ಸಾಧ್ಯವಾಗುತ್ತದೆ. ನನಗೆ ಹಾಗೂ ಪತಿ ಅಭಿಗೆ ಏನಾದರೂ ಆದರೆ ಅದಕ್ಕೆ ಸಂಪೂರ್ಣ ಕಾರಣ ಪಾಪಾ ಮತ್ತು ವಿಕ್ಕಿ ಅಂತ ಈ ವಿಡಿಯೋ ಮೂಲಕ ಹೇಳುತ್ತಿರುವೆ ಎಂದು ತಿಳಿಸಿದ್ದಾರೆ.

    ನಮ್ಮ ತಂದೆ ರಾಜೇಶ್ ಮಿಶ್ರಾ ಅವರಿಗೆ ಯಾವುದೇ ರೀತಿಯ ಸಹಕಾರ ನೀಡಬೇಡಿ. ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ನಮಗೆ ಕಿರುಕುಳ ನೀಡುತ್ತಿದ್ದಾರೆ. ದಯವಿಟ್ಟು ನಮಗೆ ರಕ್ಷಣೆ ಒದಗಿಸಿ ಎಂದು ಸಾಕ್ಷಿ, ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ರಾಜೇಶ್ ಮಿಶ್ರಾ ಅವರು ಪುತ್ರಿಯ ಆರೋಪವನ್ನು ತಳ್ಳಿ ಹಾಕಿದ್ದಾರೆ. ನನ್ನ ಪುತ್ರಿ ಸ್ವತಂತ್ರಳಾಗಿದ್ದಾಳೆ. ಅವಳು ತನ್ನ ತೀರ್ಮಾನವನ್ನು ತೆಗೆದುಕೊಳ್ಳಬಹುದು. ನಾನು ಯಾವುದೇ ರೀತಿಯ ಬೆದರಿಕೆ ಹಾಕಿಲ್ಲ. ಪುತ್ರಿಯನ್ನು ಕೊಲೆ ಮಾಡಲು, ಬೆದರಿಕೆ ಹಾಕಲು ಯಾರನ್ನೂ ಕಳುಹಿಸಿಲ್ಲ ಎಂದು ಹೇಳಿದ್ದಾರೆ.

    ಪ್ರೇಮಿಗಳು ಎಲ್ಲಿದ್ದಾರೆ ಎನ್ನುವುದು ನಮಗೆ ತಿಳಿದುಬಂದಿಲ್ಲ. ಅವರಿಗೆ ರಕ್ಷಣೆ ಒದಗಿಸುತ್ತೇವೆ. ಈಗಾಗಲೇ ಅಭಿತೇಜ್ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮುನಿರಾಜ್ ಜಿ ತಿಳಿಸಿದ್ದಾರೆ.

  • 135 ಪುಸ್ತಕ ಬರೆದು, 4 ವಿಶ್ವದಾಖಲೆ ನಿರ್ಮಿಸಿದ 13ರ ಪೋರ

    135 ಪುಸ್ತಕ ಬರೆದು, 4 ವಿಶ್ವದಾಖಲೆ ನಿರ್ಮಿಸಿದ 13ರ ಪೋರ

    ಅಯೋಧ್ಯೆ: ಉತ್ತರ ಪ್ರದೇಶದ 13 ವರ್ಷದ ಬಾಲಕನೊಬ್ಬ ಧರ್ಮ ಹಾಗೂ ಗಣ್ಯರ ಜೀವನಚರಿತ್ರೆ ಕುರಿತು ಸುಮಾರು 135 ಪುಸ್ತಕಗಳನ್ನು ಬರೆದು, 4 ವಿಶ್ವದಾಖಲೆಗಳನ್ನು ಮಾಡಿ ಚಿಕ್ಕ ವಯಸ್ಸಿನಲ್ಲೇ ಅದ್ವಿತೀಯ ಸಾಧನೆಗೈದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

    ಈ ಅಪರೂಪದ ಸಾಧನೆಗೈದ ಬಾಲಕನ ಹೆಸರು ಮೃಗೇಂದ್ರ ರಾಜ್. ಈತ ತನ್ನ 6ನೇ ವಯಸ್ಸಿನಲ್ಲೇ ಪುಸ್ತಕ ಬರೆಯುವ ಹವ್ಯಾಸ ಆರಂಭಿಸಿದ್ದ ಈತ ಮೊದಲು ಕವನ ಸಂಕಲನವನ್ನು ಬರೆದಿದ್ದನು. ಆ ನಂತರ ಕಾಲ ಕಳೆಯುತ್ತಿದ್ದಂತೆ ಬಾಲಕನ ಜೊತೆ ಆತನ ಪುಸ್ತಕ ಬರೆಯುವ ಆಸಕ್ತಿ ಕೂಡ ಹೆಚ್ಚಾಗುತ್ತಾ ಬಂತು. ಈವರೆಗೆ ಮೃಗೇಂದ್ರ ಬರೋಬ್ಬರಿ 135 ಪುಸ್ತಕಗಳನ್ನು ಬರೆದಿದ್ದಾನೆ. `ಆಜ್ ಕಾ ಅಭಿಮನ್ಯು’ ಎಂಬ ಕಾವ್ಯನಾಮದಲ್ಲಿ ಮೃಗೇಂದ್ರ ಪುಸ್ತಕಗಳನ್ನು ಬರೆಯುತ್ತಿದ್ದಾನೆ.

    ಮೃಗೇಂದ್ರನ ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ತಮ್ಮ ಮಗ ಪುಸ್ತಕಗಳನ್ನು ಬರೆಯುವ ಬಗ್ಗೆ ತೋರಿಸುತ್ತಿದ್ದ ಆಸಕ್ತಿಯನ್ನು ಗುರುತಿಸಿ ಆತನನ್ನು ಬೆಂಬಲಿಸಿದ್ದಾರೆ. ಜೊತೆಗೆ ಆತನ ತಂದೆ ರಾಜ್ಯ ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.

    ಈ ಬಗ್ಗೆ ಮಾತನಾಡಿದ ಬಾಲಕ, ನಾನು ರಾಮಾಯಣದಲ್ಲಿರುವ 51 ಪಾತ್ರಗಳ ಬಗ್ಗೆ ವಿಶ್ಲೇಷಿಸಿ ಪುಸ್ತಕಗಳನ್ನು ಬರೆದಿದ್ದೇನೆ. ನಾನು ಬರೆದ ಎಲ್ಲಾ ಪುಸ್ತಕಗಳು 25 ರಿಂದ 100 ಪುಟಗಳನ್ನು ಹೊಂದಿದೆ. ನನ್ನ ಈ ಪ್ರತಿಭೆಯನ್ನು ಮೆಚ್ಚಿ ಡಾಕ್ಟರೇಟ್ ಪದವಿ ನೀಡುವುದಾಗಿ ಲಂಡನ್ ವರ್ಲ್ಡ್ ಯೂನಿವರ್ಸಿಟಿ ಆಫ್ ರೆಕಾರ್ಡ್ಸ್ ಆಫರ್ ನೀಡಿತ್ತು ಎಂದು ತಿಳಿಸಿದ್ದಾನೆ.

    ದೊಡ್ಡವನಾದ ಮೇಲೆ ನಾನು ಬರಹಗಾರನಾಗಲು ಇಷ್ಟಪಡುತ್ತೇನೆ. ವಿವಿಧ ವಿಷಯಗಳ ಬಗ್ಗೆ, ಬೇರೆ ಬೇರೆ ಆಯಾಮದಲ್ಲಿ ಇನ್ನೂ ಹಲವಾರು ಪುಸ್ತಕಗಳನ್ನು ಬರೆಯಲು ಬಯಸುತ್ತೇನೆ ಎಂದಿದ್ದಾನೆ.

    ಉತ್ತರ ಪ್ರದೇಶ ಸಿಎಂ ಯೋಗಿ ಆಧಿತ್ಯನಾಥ್ ಸೇರಿದಂತೆ ಹಲವು ಗಣ್ಯರ ಬಗ್ಗೆ ಈ ಪೋರ ಪುಸ್ತಕ ಬರೆದಿದ್ದು, ಚಿಕ್ಕವಯಸ್ಸಿನಲ್ಲೇ ಈ ಮಟ್ಟಿಗೆ ಸಾಧನೆ ಮಾಡಿರುವುದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

  • ಯುಪಿ ಬಸ್ ದುರಂತದಲ್ಲಿ ಮೈಸೂರಿನ ರಂಗಕರ್ಮಿ ದಂಪತಿ ಸಾವು

    ಯುಪಿ ಬಸ್ ದುರಂತದಲ್ಲಿ ಮೈಸೂರಿನ ರಂಗಕರ್ಮಿ ದಂಪತಿ ಸಾವು

    ಲಕ್ನೋ: ಉತ್ತರ ಪ್ರದೇಶದ ಆಗ್ರಾದಲ್ಲಿ ಸೋಮವಾರ ಬೆಳಗ್ಗಿನ ಜಾವ ನಡೆದ ರಸ್ತೆ ಅಪಘಾತದಲ್ಲಿ ಮೈಸೂರಿನ ರಂಗಕರ್ಮಿ ಕೆ. ಮುದ್ದುಕೃಷ್ಣ ದಂಪತಿ ಮೃತಪಟ್ಟಿದ್ದಾರೆ.

    ಅಪಘಾತದಲ್ಲಿ ಮುದ್ದುಕೃಷ್ಣ ಹಾಗೂ ಪತ್ನಿ ಇಂದ್ರಾಣಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಇಂದ್ರಾಣಿ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಇತ್ತ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದ ಮುದ್ದುಕೃಷ್ಣ ಅವರು ಪತ್ನಿ ಸಾವಿನ ಸುದ್ದಿ ಕೇಳಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ವಿಪರ್ಯಾಸವೆಂದರೆ ಸೋಮವಾರ ಇಂದ್ರಾಣಿ ಅವರ ಜನ್ಮದಿನವಾಗಿದ್ದು, ಇಂದೇ ದಂಪತಿ ಪ್ರಾಣಬಿಟ್ಟಿದ್ದಾರೆ.

    ಈ ಕುರಿತು ಸಿಎಂ ಕಚೇರಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದೆ. ದಂಪತಿಯ ಸ್ನೇಹ ಬಳಗ ಹಾಗೂ ವಿದ್ಯಾರ್ಥಿಗಳು ಫೇಸ್‍ಬುಕ್‍ನಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

    ಆಗಿದ್ದೇನು?:
    ಯಮುನಾ ಎಕ್ಸ್‍ಪ್ರೆಸ್ ಹೈವೇನಲ್ಲಿ ಸೋಮವಾರ ಬೆಳಗ್ಗಿನ ಜಾವ ಈ ದುರಂತ ಸಂಭವಿಸಿದೆ. 165 ಕಿ.ಮೀ ಉದ್ದದ ಎಕ್ಸ್‍ಪ್ರೆಸ್‍ವೇ ಉತ್ತರ ಪ್ರದೇಶದ ಆಗ್ರಾ ಮತ್ತು ನೊಯ್ಡಾವನ್ನು ಸಂಪರ್ಕಿಸುತ್ತದೆ. ಇದೊಂದು ಡಬಲ್ ಡೆಕ್ಕರ್ ಬಸ್ಸಾಗಿದ್ದು, ಈ ಬಸ್ ಸುಮಾರು 50 ಮಂದಿ ಪ್ರಯಾಣಿಕರನ್ನು ಲಕ್ನೋದಿಂದ ದೆಹಲಿಗೆ ಕರೆದುಕೊಂಡು ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಚಾಲಕ ನಿದ್ದೆ ಮಂಪರಿನಲ್ಲಿದ್ದನು. ಹೀಗಾಗಿ ಬಸ್ ಸ್ಕಿಡ್ ಆಗಿ ಆಗ್ರಾ ಎಕ್ಸ್‍ಪ್ರೆಸ್‍ವೇ ಬಳಿ ನಿಯಂತ್ರಣ ತಪ್ಪಿ 50 ಅಡಿ ಆಳದ ಚರಂಡಿಗೆ ಬಿದ್ದಿದೆ. ಪರಿಣಾಮ 29 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 17 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ಪಡೆದ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದರು.

    ಅಪಘಾತವಾದ ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡ ಚರಂಡಿಗೆ ಇಳಿದು ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಬಸ್ಸಿನಲ್ಲಿರುವ ಮೃತದೇಹವನ್ನು ಹೊರತೆಗೆಯಲಾಗುತ್ತಿದ್ದು, ಮೃತರ ಗುರುತನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಸ್ ದುರಂತಕ್ಕೆ ಸಂತಾಪ ಸೂಚಿಸಿದ್ದು, ಗಾಯಗೊಂಡವರಿಗೆ ಮತ್ತು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಎಲ್ಲ ರೀತಿಯ ಸಹಾಯವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಸರ್ಕಾರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಫೋಷಿಸಿದೆ.

  • ಅವಮಾನ ಮಾಡಿದ್ದಕ್ಕೆ ಮೂರು ಮಕ್ಕಳು, ಪತ್ನಿಯನ್ನು ಕೊಂದು ನೇಣಿಗೆ ಶರಣಾದ ಪತಿ

    ಅವಮಾನ ಮಾಡಿದ್ದಕ್ಕೆ ಮೂರು ಮಕ್ಕಳು, ಪತ್ನಿಯನ್ನು ಕೊಂದು ನೇಣಿಗೆ ಶರಣಾದ ಪತಿ

    ಲಕ್ನೋ: ತನ್ನ ಮೂರು ಚಿಕ್ಕ ಮಕ್ಕಳು ಮತ್ತು ತನ್ನ ಹೆಂಡತಿಯನ್ನು ಕೊಂದು ಪತಿಯೂ ನೇಣಿಗೆ ಶರಣಾದ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್‍ನ ಮಸೂರಿ ಎಂಬ ಗ್ರಾಮದಲ್ಲಿ ನಡೆದಿದೆ.

    ಪತ್ನಿ ಮತ್ತು ಮಕ್ಕಳನ್ನು ಕೊಂದು ನೇಣು ಹಾಕಿಕೊಂಡ ಪತಿಯನ್ನು 37 ವರ್ಷದ ಪ್ರದೀಪ್ ಎಂದು ಗುರುತಿಸಲಾಗಿದೆ. ಇನ್ನು ಕೊಲೆಯದ ಪತ್ನಿಯೂ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು ಎನ್ನಲಾಗಿದೆ. ಈ ಘಟನೆಯಲ್ಲಿ ಎಂಟು ವರ್ಷ, ಐದು ವರ್ಷ ಮತ್ತು ಮೂರು ವರ್ಷದ ಮಕ್ಕಳನ್ನು ಹತ್ಯೆ ಮಾಡಿದ್ದಾನೆ.

    ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ಘಟನೆಯಲ್ಲಿ ಪ್ರದೀಪ್ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಆದರೆ ಶುಕ್ರವಾರ ಬೆಳಗ್ಗೆ ಪತ್ನಿ ಮತ್ತು ಮೂರನೇ ಮಗು ತೀವ್ರವಾಗಿ ಗಾಯಗೊಂಡು ಅಳುತ್ತಿದ್ದನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಕೃತ್ಯ ನಡೆದ ಸ್ಥಳದಲ್ಲಿ ಒಂದು ಡೆತ್ ನೋಟ್ ಸಿಕ್ಕಿದ್ದು, ತನ್ನ ಹೆಂಡತಿ ತನ್ನನ್ನು ಅನುಮಾನಿಸಿದ್ದಕ್ಕೆ ಈ ರೀತಿ ಮಾಡಿದ್ದೇನೆ ಎಂದು ಬರೆಯಲಾಗಿದೆ. ಇನ್ನೂ ಕೊಲ್ಲುವಾಗ ಮಕ್ಕಳು ಕಿರುಚಬಾರದು ಎಂದು ಮಕ್ಕಳ ಬಾಯಿಗೆ ಟೇಪ್ ಹಾಕಿ ಕೊಲೆ ಮಾಡಿದ್ದಾನೆ ಎಂದು ಘಜಿಯಾಬಾದ್‍ನ ಪೊಲೀಸ್ ಅಧಿಕಾರಿ ಸುಧೀರ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ.

    ಎಲ್ಲಾ ಮೃತ ದೇಹಗಳು ಮನೆಯಲ್ಲಿ ಇದ್ದು ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ಈ ಘಟನೆ ಮಸೂರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾತಬ್ದಿ ಪುರಂನಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿದೆ.

  • ಕನ್ವರ್ ಯಾತ್ರೆಯ ಡಿಜೆಯಲ್ಲಿ ಭಜನೆಯ ಹಾಡು ಮಾತ್ರ ಹಾಕ್ಬೇಕು: ಯೋಗಿ ಆದೇಶ

    ಕನ್ವರ್ ಯಾತ್ರೆಯ ಡಿಜೆಯಲ್ಲಿ ಭಜನೆಯ ಹಾಡು ಮಾತ್ರ ಹಾಕ್ಬೇಕು: ಯೋಗಿ ಆದೇಶ

    ಲಕ್ನೋ: ಕನ್ವರ್ ಯಾತ್ರೆ ಸಂದರ್ಭದಲ್ಲಿ ಡಿಜೆಗಳ ಮೇಲೆ ಯಾವುದೇ ನಿಷೇಧವಿಲ್ಲ. ಆದರೆ ಭಜನೆಯ ಹಾಡುಗಳನ್ನು ಮಾತ್ರ ಹಾಕಬೇಕು. ಸಿನಿಮಾ ಹಾಡುಗಳಿಗೆ ಅವಕಾಶ ಕೊಡಬೇಡಿ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಪೊಲೀಸರಿಗೆ ಆದೇಶ ಹೊರಡಿಸಿದ್ದಾರೆ.

    ಸಿಎಂ ಯೋಗಿ ಆದಿತ್ಯ ಅವರು ಲಕ್ನೋದ ಲೋಕ್‍ಭವನದಲ್ಲಿ ಬುಧವಾರ ಕನ್ವರ್ ಯಾತ್ರೆಯ ಕುರಿತು ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ವೇಳೆ ಭದ್ರತೆ, ಮೂಲ ಸೌಕರ್ಯಗಳ ಪೂರೈಕೆ ಸಂಬಂಧ ಅಧಿಕಾರಿಗಳಿಗೆ ಅನೇಕ ಆದೇಶಗಳನ್ನು ನೀಡಿದ್ದಾರೆ.

    ಯಾತ್ರಾ ಮಾರ್ಗದಲ್ಲಿ ಬರುವ ಶಿವನ ದೇವಾಲಯಗಳನ್ನು ಸ್ವಚ್ಛವಾಗಿಡಬೇಕು. ಯಾತ್ರೆಯ ಸಮಯದಲ್ಲಿ ಭಕ್ತರಿಗೆ ವಿದ್ಯುತ್, ನೀರು ಹಾಗೂ ಭದ್ರತೆಯನ್ನು ಒದಗಿಸಬೇಕು. ಕನ್ವರ್ ಹಬ್ಬದ ಅವಧಿಯಲ್ಲಿ ನಿಷೇಧಿತ ಪ್ರಾಣಿಗಳನ್ನು ಹತ್ಯೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೂ ಸಿಎಂ ಸೂಚನೆ ನೀಡಿದ್ದಾರೆ.

    ಕನ್ವರ್ ಯಾತ್ರೆಯ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದ್ದು, ಶಿವನ ಲಕ್ಷಾಂತರ ಭಕ್ತರು ಹೆಚ್ಚಾಗಿ ಕಾಲ್ನಡಿಗೆಯ ಮೂಲಕ ಉತ್ತರಾಖಂಡದ ಹರಿದ್ವಾರ, ಗೌಮುಖ್ ಮತ್ತು ಗಂಗೋತ್ರಿಗೆ ಆಗಮಿಸುತ್ತಾರೆ. ಕೆಲವರು ಗಂಗಾ ನದಿಯ ಪವಿತ್ರ ನೀರನ್ನು ತರಲು ಬಿಹಾರದ ಸುಲ್ತಂಗಂಜ್‍ಗೆ ಪ್ರಯಾಣಿಸುತ್ತಾರೆ.

  • ಋತುಮತಿ ಆಗಿದ್ದ ಅಪ್ರಾಪ್ತೆ ಮೇಲೆ ಸಂಬಂಧಿಯಿಂದಲೇ ರೇಪ್

    ಋತುಮತಿ ಆಗಿದ್ದ ಅಪ್ರಾಪ್ತೆ ಮೇಲೆ ಸಂಬಂಧಿಯಿಂದಲೇ ರೇಪ್

    ಲಕ್ನೋ: ಋತು ಅವಧಿಯಲ್ಲಿದ್ದ ಅಪ್ರಾಪ್ತೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದಿದೆ.

    ಲಕ್ನೋದ ಕೃಷ್ಣಾ ನಗರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಸಂತ್ರಸ್ತೆಯ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆಯೂ ಬಾಲಕಿ ಪೋಷಕರ ಜೊತೆಗೆ ಕೃಷ್ಣಾ ನಗರ ವಾಸಿಸುತ್ತಿದ್ದಳು. ಆರೋಪಿ ಕೂಡ ಅದೇ ಪ್ರದೇಶದಲ್ಲಿ ವಾಸವಿದ್ದ. ಮನೆಯಲ್ಲಿ ಯಾರು ಇಲ್ಲದಿದ್ದಾಗ ಆರೋಪಿ ಋತು ಅವಧಿಯಲ್ಲಿದ್ದ ಬಾಲಕಿಯ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ.

    ಈ ಸಂಬಂಧ ಸಂತ್ರಸ್ತೆಯ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರ ನಡೆಸುತ್ತಿದ್ದಾರೆ. ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಉತ್ತರ ಪ್ರದೇಶದ ಸೀತಾಪುರದಲ್ಲಿ ಶಾಲೆಯ ಆವರಣದಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಲಕ್ನೋ ಘಟನೆ ಬೆಳಕಿಗೆ ಬಂದಿದೆ. ಸಹೋದರಿ ತಮಗಿಂತ ಚನ್ನಾಗಿ ಓದುತ್ತಿದ್ದಾಳೆ ಎಂಬ ಮತ್ಸರದಿಂದ 8ನೇ ತರಗತಿಯ ವಿದ್ಯಾರ್ಥಿನಿ ಮೇಲೆ ನಾಲ್ವರು ಸಹೋದರರು ಶಿಕ್ಷಕನ ಜೊತೆಗೆ ಸೇರಿ ಅತ್ಯಾಚಾರ ಎಸಗಿದ್ದರು. ಕಳೆದ ಎರಡು ವರ್ಷಗಳಿಂದ ಬಾಲಕಿಯ ಮೇಲೆ ಕಾಮುಕರು ಅತ್ಯಾಚಾರ ಎಸಗುತ್ತಿದ್ದರು. ಅತ್ಯಾಚಾರ ಎಸಗುತ್ತಿದ್ದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ ಆರೋಪಿಗಳು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಪೋಷಕರ ಗಮನಕ್ಕೆ ಬಂದ ಮೇಲೆ ಪ್ರಕರಣ ಬೆಳಕಿಗೆ ಬಂದಿತ್ತು.

  • ಯುಪಿ ಪೊಲೀಸರಿಂದ ಒಂದೇ ತಿಂಗಳಲ್ಲಿ 30 ಎನ್‍ಕೌಂಟರ್, ಮೂವರ ಹತ್ಯೆ

    ಯುಪಿ ಪೊಲೀಸರಿಂದ ಒಂದೇ ತಿಂಗಳಲ್ಲಿ 30 ಎನ್‍ಕೌಂಟರ್, ಮೂವರ ಹತ್ಯೆ

    ಲಕ್ನೋ: ಉತ್ತರ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ನಿಶ್ಯಬ್ಧವಾಗಿದ್ದ ಪೊಲೀಸರ ಬಂದೂಕುಗಳು ಸದ್ದು ಮಾಡಿದ್ದು, ಒಂದೇ ತಿಂಗಳಲ್ಲಿ 30 ಎನ್‍ಕೌಂಟರ್ ನಡೆದಿವೆ.

    ವಿವಿಧ ಪ್ರಕರಣಗಳ ಬೇಕಾಗಿದ್ದ ಆರೋಪಿಗಳ ಮೇಲೆ ಜೂನ್ ತಿಂಗಳಲ್ಲಿಯೇ 30 ಎನ್‍ಕೌಂಟರ್ ನಡೆಸಲಾಗಿದೆ. ಇದರಲ್ಲಿ 15 ಎನ್‍ಕಂಟರ್ ಗಳು ಕಳೆದ ನಾಲ್ಕು ದಿನಗಳಲ್ಲಿ ನಡೆದಿದ್ದು, ಮೂವರು ಹತ್ಯೆಯಾಗಿದ್ದಾರೆ. ಉಳಿದಂತೆ 12ಕ್ಕೂ ಹೆಚ್ಚು ಆರೋಪಿಗಳನ್ನು ಗಾಯಗೊಂಡಿದ್ದು, ಇಬ್ಬರು ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ 77 ಆರೋಪಿಗಳು ಎನ್‍ಕೌಂಟರ್ ಗೆ ಬಲಿಯಾಗಿದ್ದಾರೆ. ಅಷ್ಟೇ ಅಲ್ಲದೆ 1,100 ಜನರು ಗಾಯಗೊಂಡಿದ್ದಾರೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಸರ್ಕಾರವು ಕಳೆದ ಮಾರ್ಚ್ ಗೆ ಎರಡು ವರ್ಷ ಪೂರೈಸಿತ್ತು. ಈ ಹಿನ್ನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆದಿತ್ಯನಾಥ್ ಅವರು, ನಮ್ಮ ಅಧಿಕಾರವಧಿಯಲ್ಲಿ 3,500ಕ್ಕೂ ಹೆಚ್ಚು ಎನ್‍ಕೌಂಟರ್ ಮಾಡಲಾಗಿದೆ. ಈ ಮೂಲಕ ಎಂಟು ಸಾವಿರ ಆರೋಪಿಗಳನ್ನು ಬಂಧಿಸಲಾಗಿದ್ದು, ಒಂದು ಸಾವಿರ ಕ್ರಿಮಿನಲ್‍ಗಳು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದರು.

    ಕ್ರಿಮಿನಲ್‍ಗಳ ಬಂಧನ ಹಾಗೂ ಎನ್‍ಕೌಂಟರ್ ಪ್ರಕರಣಗಳು ದಿಢೀರ್ ಹೆಚ್ಚಾಗಿವೆ ಎಂಬ ಆರೋಪವನ್ನು ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಪಿ.ವಿ.ರಾಮಶಾಸ್ತ್ರಿ ತಳ್ಳಿಹಾಕಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಎನ್‍ಕೌಂಟರ್ ಗಳು ಯೋಜಿತವಾಗಿದ್ದಲ್ಲ. ಆರೋಪಿಗಳು ಬಂಧನವನ್ನು ವಿರೋಧಿಸುತ್ತಾರೆ. ಈ ವೇಳೆ ನಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಕಾನೂನಿನ ಪ್ರಕಾರ ಮುಂಜಾಗ್ರತಾ ಕ್ರಮವಾಗಿ ಬಲ ಪ್ರಯೋಗ (ಎನ್‍ಕೌಂಟರ್) ಮಾಡುವ ಅವಕಾಶವಿದೆ. ರಾಜ್ಯದಲ್ಲಿ ಏಕಾಏಕಿ ಎನ್‍ಕೌಂಟರ್ ಗಳು ಹೆಚ್ಚಾಗಿವೆ ಎಂಬ ಆರೋಪಕ್ಕೆ ಸೂಕ್ತ ಆಧಾರಗಳಿಲ್ಲ ಎಂದು ತಿಳಿಸಿದ್ದಾರೆ.

    ಬರಾಬಂಕಿ ಪ್ರದೇಶದಲ್ಲಿ ಇಬ್ಬರು ಆರೋಪಿಗಳು ತಮ್ಮ ಬಂಧನ ವಿರೋಧಿಸಿ, ಪೊಲೀಸರು ನಿರ್ಮಿಸಿದ್ದ ತಡೆಗೋಡೆ ಹಾರಿದ್ದರು. ಬಳಿಕ ಆರೋಪಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಹೀಗಾಗಿ ಆ ಇಬ್ಬರು ಆರೋಪಿಗಳು ಎನ್‍ಕೌಂಟರ್ ಗೆ ಬಲಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಜುಬೆರ್ ಹಾಗೂ ಜೋಮಸ್ ಎನ್‍ಕೌಂಟರ್ ಗೆ ಬಲಿಯಾದ ಆರೋಪಿಗಳು. ಜುಬೆರ್ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ 50ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿವೆ. ಜುಬೆರ್ ಸುಳಿವು ನೀಡಿದವರಿಗೆ 75 ಸಾವಿರ ರೂ. ಘೋಷಣೆ ಮಾಡಲಾಗಿತ್ತು. ಜೋಮನ್ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ 45ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದವು. ಈತನ ಸುಳಿವು ನೀಡಿದವರಿಗೆ 25 ಸಾವಿರ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು ಎಂದು ಪ್ರಕಟಣೆಯಲ್ಲಿ ಪೊಲೀಸರು ತಿಳಿಸಿದ್ದಾರೆ.