Tag: uttar pradesh

  • ತಾಂತ್ರಿಕನ ಮಾತು ಕೇಳಿ ಪತಿಗೆ ಬರೀ ಲಾಡು ನೀಡ್ತಿದ್ದ ಪತ್ನಿ

    ತಾಂತ್ರಿಕನ ಮಾತು ಕೇಳಿ ಪತಿಗೆ ಬರೀ ಲಾಡು ನೀಡ್ತಿದ್ದ ಪತ್ನಿ

    -ಮನನೊಂದು ನ್ಯಾಯಕ್ಕಾಗಿ ಮೊರೆಹೋದ ಪತಿ

    ಲಕ್ನೋ: ಮೂಢನಂಬಿಕೆಗೆ ಕಟ್ಟುಬಿದ್ದು, ತಾಂತ್ರಿಕನ ಮಾತು ಕೇಳಿ ಪತ್ನಿಯೊಬ್ಬಳು ತನ್ನ ಪತಿಗೆ ತಿನ್ನಲು ಮೂರು ಹೊತ್ತು ಬರೀ ಲಾಡು ನೀಡುತ್ತಿದ್ದಳು. ಇದರಿಂದ ಬೇಸತ್ತ ಪತಿ ನ್ಯಾಯಕೊಡಿಸಿ ಎಂದು ಮೊರೆಯಿಟ್ಟ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದಿದೆ.

    ಮೀರತ್‍ನ ಕುಟುಂಬ ಸಮಾಲೋಚನಾ ಕೇಂದ್ರದಲ್ಲಿ ಇಂತಹದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ದೌರಾಲಾ ನಿವಾಸಿಯೊಬ್ಬ ತನ್ನ ಪತ್ನಿ ವಿರುದ್ಧ ವಿಚಿತ್ರ ಆರೋಪ ಮಾಡಿದ್ದಾನೆ. ತಾಂತ್ರಿಕನ ಸಲಹೆ ಮೇರೆಗೆ ತನ್ನ ಪತ್ನಿ, ತನಗೆ ತಿನ್ನಲು ಕೇವಲ ಲಾಡು ನೀಡುತ್ತಾಳೆ. ಇದರಿಂದ ಬಹಳ ತೊಂದರೆ ಆಗುತ್ತಿದೆ ಎಂದು ಪತಿ ನ್ಯಾಯಾಕ್ಕಾಗಿ ಕುಟುಂಬ ಸಮಾಲೋಚನಾ ಕೇಂದ್ರದ ಮೊರೆ ಹೋಗಿದ್ದಾನೆ. ಇದನ್ನೂ ಓದಿ:ಚಿನ್ನದ ಆಭರಣ ಧರಿಸಲು ಬಿಡದ ಪತಿ ವಿರುದ್ಧ ಪತ್ನಿ ದೂರು

    ಕೆಲ ದಿನಗಳ ಹಿಂದೆ ಪತಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಪತ್ನಿ, ತಾಂತ್ರಿಕನ ಮೊರೆ ಹೋಗಿದ್ದಳು. ಆಗ ತಾಂತ್ರಿಕ ಪತಿಗೆ ಲಾಡು ಮಾತ್ರ ಆಹಾರ ರೂಪದಲ್ಲಿ ನೀಡಬೇಕು. ಬೆಳಗ್ಗೆಯಿಂದ ಸಂಜೆಯವರೆಗೂ ಕೇವಲ ಲಾಡು ಮಾತ್ರ ಕೊಡು, ಆಗ ನಿನ್ನ ಪತಿಯ ಆರೋಗ್ಯ ಸರಿಹೋಗುತ್ತೆ ಎಂದು ಸಲಹೆ ನೀಡಿದ್ದನು. ಇದನ್ನು ನಂಬಿದ ಪತ್ನಿ ಪತಿಗೆ ಕೇವಲ ಲಾಡು ಮಾತ್ರ ನೀಡುತ್ತಿದ್ದಳು. ಬೇರೆ ಆಹಾರವನ್ನು ಪತಿ ಕೇಳಿದರೆ ಕೊಡುತ್ತಿರಲಿಲ್ಲ. ಪತ್ನಿಯ ಮೂಢನಂಬಿಕೆ ಪತಿಗೆ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿ ಪತ್ನಿಯ ವರ್ತನೆಗೆ ಬೇಸತ್ತ ಪತಿ ನ್ಯಾಯಕೊಡಿಸಿ, ಇದರಿಂದ ಪಾರುಮಾಡಿ ಎಂದು ಕುಟುಂಬ ಸಮಾಲೋಚನಾ ಕೇಂದ್ರಕ್ಕೆ ದೂರು ನೀಡಿದ್ದಾನೆ.

    ಸಮಾಲೋಚನಾ ಕೇಂದ್ರದಲ್ಲಿ ಪತಿಯ ದೂರು ಆಲಿಸಿದ ಕೌನ್ಸಿಲರ್ ದಂಗಾಗಿದ್ದಾರೆ. ಈ ರೀತಿ ಘಟನೆಯನ್ನು ನಾವು ನೋಡಿಲ್ಲ ಎಂದು ಅಚ್ಚರಿಪಟ್ಟಿದ್ದಾರೆ. ಸದ್ಯ ಈ ಬಗ್ಗೆ ಅಧಿಕಾರಿಗಳು ದಂಪತಿಯ ಕೌನ್ಸಿಲಿಂಗ್ ನಡೆಸುತ್ತಿದ್ದು, ಅವರನ್ನು ಒಂದು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

  • 2ನೇ ಮದ್ವೆಗೆ ಒಪ್ಪದ ಕುಟುಂಬಸ್ಥರು- ಆತ್ಮಹತ್ಯೆ ಮಾಡಿಕೊಂಡ 75ರ ವೃದ್ಧ

    2ನೇ ಮದ್ವೆಗೆ ಒಪ್ಪದ ಕುಟುಂಬಸ್ಥರು- ಆತ್ಮಹತ್ಯೆ ಮಾಡಿಕೊಂಡ 75ರ ವೃದ್ಧ

    ಲಕ್ನೋ: 75 ವರ್ಷದ ವೃದ್ಧರೊಬ್ಬರು ಎರಡನೇ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಆ ಮದುವೆಗೆ ಅವರ ಕುಟುಂಬಸ್ಥರು ನಿರಾಕರಿಸಿದ್ದಕ್ಕೆ ಮನನೊಂದು ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ವೃದ್ಧ ಅರ್ಷದ್(75) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅರ್ಷದ್ ಅವರ ಪತ್ನಿ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅರ್ಷದ್ ಅವರಿಗೆ ಒಟ್ಟು 8 ಮಂದಿ ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆಯಾಗಿ ಮಕ್ಕಳಿವೆ. ಆದರೆ ಮೊಮ್ಮಕ್ಕಳನ್ನು ಆಡಿಸುವ ವಯಸ್ಸಿನಲ್ಲಿ ಅರ್ಷದ್‍ರಿಗೆ ಎರಡನೇ ಮದುವೆಯಾಗುವ ಆಸೆ ಬಂದಿತ್ತು. ಈ ವಯಸ್ಸಿನಲ್ಲಿ ಮದುವೆ ಏಕೆ ಎಂದು ಕುಟುಂಬಸ್ಥರು ಪ್ರಶ್ನೆ ಮಾಡಿ, ಮದುವೆಗೆ ವಿರೋಧಿಸಿದ್ದರು.

    ಜೊತೆಗೆ ನಿಧಾನವಾಗಿ ತಂದೆಗೆ ಮಕ್ಕಳು ತಿಳಿ ಹೇಳುವ ಪ್ರಯತ್ನವೂ ಮಾಡಿದ್ದರು. ಆದರೆ ಗುರುವಾರ ಈ ಗಲಾಟೆ ಜೋರಾಗಿ ತಂದೆ ಮಕ್ಕಳ ನಡುವೆ ಜಗಳ ಕೂಡ ನಡೆದಿತ್ತು. ಇದರಿಂದ ಕೋಪಗೊಂಡು ವೃದ್ಧ ಅಂದು ರಾತ್ರಿಯೇ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಪ್ರಾಣಬಿಟ್ಟಿದ್ದಾರೆ.

    ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಈಗಾಗಲೇ ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಅದರಲ್ಲಿ ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಬೀತಾಗಿದೆ.

  • 8 ಲಕ್ಷಕ್ಕೆ ಮಾರಾಟವಾದ ಸಲ್ಮಾನ್- ಮೇಕೆಯ ವಿಶೇಷತೆಯೇನು?

    8 ಲಕ್ಷಕ್ಕೆ ಮಾರಾಟವಾದ ಸಲ್ಮಾನ್- ಮೇಕೆಯ ವಿಶೇಷತೆಯೇನು?

    ಲಕ್ನೋ: ಇಂದು ದೇಶಾದ್ಯಂತ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಹೀಗಾಗಿ ಹಬ್ಬದ ವಿಶೇಷವಾಗಿ ಸಲ್ಮಾನ್ ಎಂಬ ಹೆಸರಿನ ಮೇಕೆ ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಬರೋಬ್ಬರಿ 8 ಲಕ್ಷಕ್ಕೆ ಮಾರಾಟವಾಗಿದೆ.

    ಮೇಕೆಯನ್ನು ದಷ್ಟಪುಷ್ಟವಾಗಿ ಸಾಕಿರುವ ಮಾಲೀಕ ಮೊಹಮ್ಮದ್ ನಿಜಾಮುದ್ದೀನ್, ಇದನ್ನು 8 ಲಕ್ಷ ಮಾರಾಟ ಮಾಡುವುದಾಗಿ ಹೇಳಿದ್ದಾರೆ. ತ್ಯಾಗ ಹಾಗೂ ಬಲಿದಾನದ ಅಂಗವಾಗಿ ಅಚರಿಸುವ ಈ ಬಕ್ರೀದ್ ಹಬ್ಬದಲ್ಲಿ ಕುರಿ ಮೇಕೆಗಳು ಅಪಾರ ಪ್ರಮಾಣದಲ್ಲಿ ಮಾರಾಟವಾಗುತ್ತವೆ.

    ಸಲ್ಮಾನ್ ಮೇಕೆಯ ವಿಶೇಷತೆಯ ಬಗ್ಗೆ ಹೇಳಿರುವ ಮಾಲೀಕ ಮೊಹಮ್ಮದ್ ನಿಜಾಮುದ್ದೀನ್, ಇದಕ್ಕೆ ಈ ಪ್ರಮಾಣದ ಬೆಲೆ ಬರಲು ಆದರ ಮೈ ಮೇಲೆ ಇರುವ ಕಪ್ಪು ಚುಕ್ಕಿಗಳು ಕಾರಣವಾಗಿದೆ. ಏಕೆಂದರೆ ಈ ಕಪ್ಪು ಚುಕ್ಕೆಗಳನ್ನು ಕೂಡಿಸಿದರೆ, ಅರೇಬಿಕ್ ಭಾಷೆಯಲ್ಲಿ `ಅಲ್ಲಾಹ್’ ಎಂಬ ಅರ್ಥ ಬರತ್ತದೆ. ಹೀಗಾಗಿ ಸಲ್ಮಾನ್ ಮೇಕೆಯನ್ನು 8 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದೇನೆ ಎಂದಿದ್ದಾರೆ.

    ಇದರ ಜೊತೆಗೆ ಮೇಕೆಯನ್ನು ಸಾಕಲು ದಿನಕ್ಕೆ 700ರಿಂದ 800 ರೂ. ಖರ್ಚು ಮಾಡಿದ್ದೇನೆ. ಇಷ್ಟು ದಿನ ಇದು ನಮ್ಮ ಮನೆಯ ಸದಸ್ಯನಾಗಿತ್ತು, ನಮ್ಮ ಜೊತೆಯಲ್ಲೇ ಮಲಗುತ್ತಿತ್ತು. ನಾವು ತಿನ್ನುವ ಆಹಾರವನ್ನೇ ಅದೂ ತಿನ್ನುತ್ತಿತ್ತು. ಬೇರೆ ಮೇಕೆಗಳ ಹಾಗೇ ನಾವು ಇದಕ್ಕೆ ಹುಲ್ಲು, ಎಲೆ ಮತ್ತು ಸೊಪ್ಪು ಹಾಕಿ ಬೆಳೆಸಿಲ್ಲ ಅದರ ಬದಲು ನಾವು ತಿನ್ನುವ ಚಿಪ್ಸ್, ಹಣ್ಣುಗಳು, ಊಟ ತಿನ್ನಿಸಿ ತುಂಬಾ ಚೆನ್ನಾಗಿ ಬೆಳೆಸಿದ್ದೇವೆ. ಈಗ ಇದರ ತೂಕ ಬರೊಬ್ಬರಿ 95 ಕೆ.ಜಿ ಇದೆ ಎಂದು ಮಾಲೀಕ ನಿಜಾಮುದ್ದೀನ್ ಹೇಳಿದ್ದಾರೆ.

    ಈ ಮೇಕೆಗೆ ಇಷ್ಟೊಂದು ಬೆಲೆ ಬರಲು ಅದಕ್ಕೆ ಇಟ್ಟಿರುವ ಹೆಸರು ಕೂಡ ಕಾರಣ ಎಂದು ಹೇಳಲಾಗುತ್ತಿದೆ. ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಹೆಸರು ಮೇಕೆಗೆ ಇಟ್ಟಿರುವ ಕಾರಣ ಸಲ್ಲು ಅಭಿಮಾನಿಗಳು ಇದಕ್ಕೆ ಜಾಸ್ತಿ ಬೆಲೆ ಕೊಟ್ಟು ಖರೀದಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.

    ಸಾಂಪ್ರದಾಯಿಕವಾಗಿ, ಹಜ್ ತೀರ್ಥ ಯಾತ್ರೆ ಪ್ರಾರಂಭವಾದ ಎರಡು ದಿನಗಳ ನಂತರ ಈದ್ ಅಲ್-ಅಧಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಪ್ರಾರಂಭದ ದಿನಾಂಕವು ಹೊಸ ಅರ್ಧಚಂದ್ರವನ್ನು ನೋಡುವುದರ ಮೇಲೆ ಅವಲಂಬಿತವಾಗಿರುತ್ತದೆ. ಇದು ಇಸ್ಲಾಂ ಕ್ಯಾಲೆಂಡರ್‍ನಲ್ಲಿ ಪವಿತ್ರ ತಿಂಗಳುಗಳ 10 ನೇ ದಿನದಂದು ಪ್ರಾರಂಭವಾಗುತ್ತದೆ.

  • ಇನ್ಮೇಲೆ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನ ಮದ್ವೆ ಆಗಬಹುದು: ಬಿಜೆಪಿ ಶಾಸಕ

    ಇನ್ಮೇಲೆ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನ ಮದ್ವೆ ಆಗಬಹುದು: ಬಿಜೆಪಿ ಶಾಸಕ

    ಲಕ್ನೋ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370 ರದ್ದು ಮಾಡಿದ್ದರಿಂದ ಆಗುವ ಪ್ರಯೋಜನವೇನು ಅಂತ ತಿಳಿಸಲು ಹೋಗಿ ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮುಜಾಫರ್ ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವಿಕ್ರಮ್ ಸೈನಿ ಅವರು, ಇನ್ನುಮುಂದೆ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನ ಮದುವೆ ಆಗಬಹುದು ಎಂದು ಹೇಳಿದ್ದಾರೆ. ಶಾಸಕರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

    ಕೇಂದ್ರ ಸರ್ಕಾರವು ಕಾಶ್ಮೀರದ ವಿಚಾರವಾಗಿ ತೆಗೆದುಕೊಂಡ ನಿರ್ಧಾರದಿಂದ ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ಹೋಗಿ ಜಮೀನು, ಆಸ್ತಿ ಖರೀದಿಸಬಹುದು. ಅಲ್ಲಿಯವರನ್ನು ಮದುವೆ ಕೂಡ ಆಗಬಹುದು. ಇನ್ನುಮುಂದೆ ಕಾಶ್ಮೀರದಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಅಲ್ಲಿನ ಯುವತಿಯರ ಮೇಲೆ ತುಂಬಾ ದಬ್ಬಾಳಿಕೆ ನಡೆಯುತಿತ್ತು. ಕಾಶ್ಮೀರ ಯುವತಿ ಉತ್ತರ ಪ್ರದೇಶದ ಯುವಕನನ್ನು ಮದುವೆ ಆಗುವಂತಿರಲಿಲ್ಲ. ಒಂದು ವೇಳೆ ಮದುವೆಯಾದರೆ ಆಕೆಯ ಪೌರತ್ವ ರದ್ದು ಮಾಡುತ್ತಿದ್ದರು. ಭಾರತಕ್ಕೆ ಹಾಗೂ ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಪೌರತ್ವವಿತ್ತು ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರದ ನಿರ್ಧಾರವನ್ನು ಮುಸ್ಲಿಂ ಕಾರ್ಯಕರ್ತರು ಸಂಭ್ರಮಿಸಬೇಕು. ಏಕೆಂದರೆ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನು ಮದುವೆ ಆಗಬಹುದು. ಹಿಂದೂ-ಮುಸ್ಲಿಂ ಸೇರಿದಂತೆ ದೇಶದ ಎಲ್ಲರೂ ಕೇಂದ್ರದ ನಿರ್ಧಾರವನ್ನು ಸಂಭ್ರಮಿಸಬೇಕು ಎಂದು ಶಾಸಕ ವಿಕ್ರಮ್ ಸೈನಿ ಹೇಳಿಕೆ ನೀಡಿದ್ದಾರೆ.

    ಈ ವಿವಾದಾತ್ಮಕ ಹೇಳಿಕೆ ಕುರಿತು ಮಾಧ್ಯಮಗಳು ಪ್ರಶ್ನೆ ಮಾಡಿದ್ದಕ್ಕೆ ವಿಕ್ರಮ್ ಸೈನಿ ಅವರು ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಯಾವುದೇ ಸಮಸ್ಯೆ ಇಲ್ಲದೆ ಯಾರು ಬೇಕಾದರೂ ಕಾಶ್ಮೀರ ಯುವತಿಯರನ್ನು ಮದುವೆ ಆಗಬಹುದು ಅಂತ ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? ಮೋದಿ ಜೀ ನಮ್ಮ ಕನಸನ್ನು ನನಸು ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ವಿಕ್ರಮ್ ಸೈನಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು ಇದೇ ಮೊದಲೇನಲ್ಲ. 2019 ಜನವರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಭಾರತದಲ್ಲಿ ಆತಂಕವಿದೆ ಎಂದು ಹೇಳಿವವರು ದೇಶದ್ರೋಹಿಗಳು. ಭಾರತದಲ್ಲಿ ವಾಸಿಸಲು ಆತಂಕವಿದೆ ಅಂತ ಹೇಳಿದವರಿಗೆ ಬಾಂಬ್ ಹಾಕಿ ಕೊಲ್ಲಬೇಕು, ಯಾರೊಬ್ಬರನ್ನೂ ಬಿಡುವುದಿಲ್ಲ. ಭದ್ರತೆ ಎಂಬುದು ನನ್ನ ಅಂತರ್ಗತ ಭಾವನೆ. ನನಗೆ ಖಾತೆ ಕೊಡಿ ಇಂತಹವರನ್ನು ನಾನು ಬಾಂಬ್ ಇಟ್ಟು ಉಡಾಯಿಸುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.

  • 8 ವರ್ಷಗಳಿಂದ ವಂಚನೆ- ನಕಲಿ ಐಪಿಎಸ್, ಐಎಎಸ್ ಅಧಿಕಾರಿಗಳು ಕೊನೆಗೂ ಅಂದರ್

    8 ವರ್ಷಗಳಿಂದ ವಂಚನೆ- ನಕಲಿ ಐಪಿಎಸ್, ಐಎಎಸ್ ಅಧಿಕಾರಿಗಳು ಕೊನೆಗೂ ಅಂದರ್

    ಲಕ್ನೋ: 8 ವರ್ಷಗಳಿಂದ ಐಪಿಎಸ್, ಐಎಎಸ್ ಅಧಿಕಾರಿಗಳೆಂದು ಜನರನ್ನು ವಂಚಿಸುತ್ತ ಬಂದಿದ್ದ ಇಬ್ಬರು ವ್ಯಕ್ತಿಗಳನ್ನು ಉತ್ತರಪ್ರದೇಶದ ನೋಯ್ಡಾ ಪೊಲೀಸರು ಸೆರೆಹಿಡಿದಿದ್ದಾರೆ.

    ಆರೋಪಿಗಳನ್ನು ಗೌರವ್ ಮಿಶ್ರಾ ಹಾಗೂ ಆಶುತೋಶ್ ರಾತಿ ಎಂದು ಗುರುತಿಸಲಾಗಿದೆ. ಕಳೆದ 8 ವರ್ಷಗಳಿಂದ ಈ ಇಬ್ಬರು ಆರೋಪಿಗಳು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಾಗಿ ಬೆದರಿಸಿ, ಅವರ ಬಳಿ ಹಣ ಪಡೆಯುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಐಪಿಎಸ್, ಐಎಎಸ್ ಹೆಸರು ಬಳಸಿಕೊಂಡು ಹಣಕ್ಕಾಗಿ ಜನರನ್ನೂ ಕೂಡ ವಂಚಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

    ಈ ನಕಲಿ ಅಧಿಕಾರಿಗಳ ಬಳಿ ಪೊಲೀಸರ ಖಾಕಿ ಸಮವಸ್ತ್ರ, ನಕಲಿ ಐಡಿ ಕಾರ್ಡ್ ಹಾಗೂ ಐಪಿಎಸ್, ಐಎಎಸ್ ಬ್ಯಾಡ್ಜ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳ ಮೇಲೆ ಪ್ರಕರಣ ಕೂಡ ದಾಖಲಿಸಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ನೀಡಿದ ದೂರಿನಿಂದಾಗಿ ಆರೋಪಿಗಳ ನಿಜ ಬಣ್ಣ ಬೆಳಕಿಗೆ ಬಂದಿದೆ.

    ಈ ಹಿಂದೆ ಕೂಡ ರಾಷ್ಟ್ರ ರಾಜಧಾನಿಯಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿತ್ತು. ಘಾಜಿಯಾಬಾದಿನ ನಿವಾಸಿ ಆಶೀಷ್ ಚೌಧರಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಆಶೀಷ್ ದೆಹಲಿ ಪೊಲೀಸ್ ಪರೀಕ್ಷೆಯನ್ನು ಅನುತ್ತೀರ್ಣನಾಗಿದ್ದನು. ಆದರೆ ಈ ಬಗ್ಗೆ ತನ್ನ ಕುಟುಂಬಕ್ಕೆ ಹಾಗೂ ತಾನು ಮದುವೆಯಾಗಬೇಕಿದ್ದ ಹುಡುಗಿಗೆ ತಿಳಿಸಲು ಹೆದರಿ ಪೊಲೀಸ್ ಆಗಿದ್ದೇನೆ ಎಂದು ಸುಳ್ಳು ಹೇಳಿ ನಂಬಿಸಿದ್ದನು. ಅಲ್ಲದೆ ನಕಲಿ ಪೊಲೀಸ್ ಆಗಿ ಜನರಿಂದ ಹಣ ಪಡೆದು ಹತ್ತಿರದ ಪೊಲೀಸ್ ಠಾಣೆಯ ಹೆಸರು ಹೇಳಿ ವಂಚಿಸುತ್ತಿದ್ದನು. ಈ ಖತರ್ನಾಕ್ ವಂಚಕನನ್ನು ಇದೇ ಜುಲೈನಲ್ಲಿ ಬಂಧಿಸಲಾಗಿತ್ತು.

    ಹಾಗೆಯೇ ಜೂನ್‍ನಲ್ಲಿ ಐಪಿಎಸ್ ಅಧಿಕಾರಿಯೆಂದು ತಿರುಗಾಡುತ್ತಿದ್ದ ಆರೋಪಿ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದರು. ನೋಯ್ಡಾದ ಆದಿತ್ಯ ದೀಕ್ಷಿತ್ ಹಾಗೂ ಆತನ ಸ್ನೇಹಿತ ಅಖಿಲೇಶ್ ಯಾದವ್‍ನನ್ನು ಪೊಲೀಸರು ಸೆರೆಹಿಡಿದಿದ್ದರು.

    ಗೃಹ ಸಚಿವಾಲಯದ ಸೈಬರ್ ಕ್ರೈಂ ಅಧಿಕಾರಿಯೆಂದು ಇಬ್ಬರು ಆರೋಪಿಗಳು ಹೋಟೆಲ್‍ವೊಂದರಲ್ಲಿ ತಂಗಿದ್ದರು. ಅಲ್ಲದೆ ಹೋಟೆಲ್‍ಗೆ ಒಂದು ರೂ. ಕೂಡ ಹಣ ತುಂಬದೆ ಮಜಾ ಮಾಡಿದ್ದರು. ಆದರೆ ಈ ವೇಳೆ ಹೋಟೆಲ್ ಸಿಬ್ಬಂದಿಗೆ ಅನುಮಾನ ಮೂಡಿ ಪೊಲೀಸರಿಗೆ ಮಾಹಿತಿ ನೀಡಿದಾಗ ಆರೋಪಿಗಳ ಸತ್ಯಾಂಶ ಹೊರಬಿದ್ದಿತ್ತು. ಬಳಿಕ ಇಬ್ಬರನ್ನೂ ಬಂಧಿಸಿ, ಐಪಿಸಿ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದರು.

  • ಕಣ್ಣಾಮುಚ್ಚಾಲೆ ಆಟ – ಐಸ್‍ಕ್ರೀಂ ಟ್ರಾಲಿಯಲ್ಲಿ ಅಡಗಿದ್ದ ಬಾಲಕ ಹೆಣವಾಗಿ ಪತ್ತೆ

    ಕಣ್ಣಾಮುಚ್ಚಾಲೆ ಆಟ – ಐಸ್‍ಕ್ರೀಂ ಟ್ರಾಲಿಯಲ್ಲಿ ಅಡಗಿದ್ದ ಬಾಲಕ ಹೆಣವಾಗಿ ಪತ್ತೆ

    ಲಕ್ನೋ: ಸ್ನೇಹಿತರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ 5 ವರ್ಷದ ಬಾಲಕನೋರ್ವ ಐಸ್‍ಕ್ರೀಮ್ ಟ್ರಾಲಿಯಲ್ಲಿ ಅಡಗಿ ಕುಳಿತು ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಕಾಳಿನಗರ ಪಟ್ಟಣದಲ್ಲಿ ನಡೆದಿದೆ.

    ಅಥರ್ವ್ ಗುಪ್ತ(5) ಸಾವನ್ನಪಿರುವ ಬಾಲಕ. ಸೋಮವಾರದಂದು ಮನೆಯ ಬಳಿ ಸ್ನೇಹಿತರೊಂದಿಗೆ ಬಾಲಕ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆಟವಾಡುತ್ತಾ ಐಸ್‍ಕ್ರೀಮ್ ಟ್ರಾಲಿಯಲ್ಲಿ ಬಾಲಕ ಅಡಗಿದ್ದ. ಈ ವೇಳೆ ಟ್ರಾಲಿಯ ಬಾಗಿಲು ಲಾಕ್ ಆಗಿ ಒಳಗಡೆ ಉಸಿರುಗಟ್ಟಿ ಬಾಲಕ ಸಾವನ್ನಪ್ಪಿದ್ದಾನೆ.

    ಬಹಳ ಸಮಯವಾದರೂ ಮನೆಗೆ ಬಾಲಕ ಮರಳದೇ ಇದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಆದರೆ ಬಾಲಕನ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಆಗ ಅನುಮಾನದಿಂದ ಮನೆಯ ಮುಂದೆ ನಿಲ್ಲಿಸಿದ್ದ ಐಸ್‍ಕ್ರೀಮ್ ಟ್ರಾಲಿ ತೆಗೆದು ನೋಡಿದಾಗ ಬಾಲಕನ ಶವ ಪತ್ತೆಯಾಗಿದೆ.

    ಭಾನುವಾರ ಬಾಲಕನಿಗೆ ಕೊಂಚ ಪೆಟ್ಟಾಗಿತ್ತು ಆದ್ದರಿಂದ ಆವನನ್ನು ಪೋಷಕರು ಸೋಮವಾರ ಶಾಲೆಗೆ ಕಳುಹಿಸಿರಲಿಲ್ಲ. ಹೀಗಾಗಿ ಮನೆ ಹತ್ತಿರವಿದ್ದ ಮಕ್ಕಳ ಜೊತೆ ತಮ್ಮ ಮಗ ಆಟವಾಡಲು ಹೋಗಿದ್ದನು ಎಂದು ಬಾಲಕನ ತಂದೆ ತಿಳಿಸಿದ್ದಾರೆ.

    ಆಟವಾಡಲು ಹೋಗಿದ್ದವನು ಹೆಣವಾಗಿ ವಾಪಸ್ ಸಿಕ್ಕಿದ್ದಾನೆ. ಈ ಬಗ್ಗೆ ಪೋಷಕರು ಯಾವುದೇ ದೂರು ದಾಖಲಿಸಿಲ್ಲ. ಅಲ್ಲದೆ ಬಾಲಕ ವೈದ್ಯಕೀಯ ಪರೀಕ್ಷೆಯನ್ನೂ ಕೂಡ ಮಾಡಿಸಲಿಲ್ಲ.

  • ಹಾವು ಕಚ್ಚಿದ್ದಕ್ಕೆ ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ

    ಹಾವು ಕಚ್ಚಿದ್ದಕ್ಕೆ ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ

    ಲಕ್ನೋ: ಕುಡಿದ ನಶೆಯಲ್ಲಿದ್ದ ವ್ಯಕ್ತಿಯೋರ್ವ ಹಾವು ಕಚ್ಚಿದ್ದಕ್ಕೆ ಅದನ್ನು ಹಿಡಿದು ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಎತಾಹ್ ಜಿಲ್ಲೆಯ ಗ್ರಾಮವೊಂದರ ನಿವಾಸಿ ರಾಜ್ ಕುಮಾರ್ ಹಾವಿಗೆ ತಿರುಗಿ ಕಚ್ಚಿರುವ ವ್ಯಕ್ತಿಯಾಗಿದ್ದಾನೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಮನೆಗೆ ರಾಜ್ ಕುಡಿದು ಬಂದಿದ್ದನು. ಈ ವೇಳೆ ಮನೆಗೆ ನುಗ್ಗಿದ್ದ ಹಾವೊಂದು ಆತನಿಗೆ ಕಚ್ಚಿದೆ. ಆಗ ಕುಡಿದ ನಶೆಯಲ್ಲಿ ರಾಜ್ ಕೋಪಗೊಂಡು ಹಾವನ್ನು ಹಿಡಿದು ತಿರುಗಿ ಅದಕ್ಕೇ ಕಚ್ಚಿ, ತುಂಡು ತುಂಡಾಗಿಸಿದ್ದಾನೆ.

    ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ರಾಜ್ ತಂದೆ ಬಾಬು ರಾಮ್ ಪ್ರತಿಕ್ರಿಯಿಸಿ, ಈ ಘಟನೆ ನಡೆದ ಸಂದರ್ಭದಲ್ಲಿ ನನ್ನ ಮಗ ಕುಡಿದಿದ್ದನು. ನಮ್ಮ ಮನೆಗೆ ನುಗ್ಗಿದ್ದ ಹಾವು ಆತನಿಗೆ ಕಚ್ಚಿತ್ತು. ಆಗ ರಾಜ್ ಹಾವನ್ನು ಹಿಡಿದು ಕಚ್ಚಿ ತುಂಡರಿಸಿದನು. ಸದ್ಯ ಆತನ ಪರಿಸ್ಥಿತಿ ಗಂಭೀರವಾಗಿದೆ. ಆತನ ಚಿಕಿತ್ಸೆ ಖರ್ಚನ್ನು ಕಟ್ಟುವಷ್ಟು ಶಕ್ತಿ ನಮಗಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

    ಈ ಬಗ್ಗೆ ರಾಜ್ ಕುಮಾರ್‍ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾತನಾಡಿ, ರೋಗಿಯೊಬ್ಬ ನಮ್ಮ ಬಳಿ ಬಂದು ನಾನು ಹಾವನ್ನು ಕಚ್ಚಿದ್ದೇನೆ ಎಂದನು. ಆಗ ನಾವು ಹಾವು ಆತನಿಗೆ ಕಚ್ಚಿತ್ತು ಎಂದು ತಪ್ಪಾಗಿ ತಿಳಿದುಕೊಂಡಿದ್ದೆವು. ನಂತರ ನಿಜ ಸಂಗತಿ ತಿಳಿಯಿತು. ಆತನ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಆತನನ್ನು ಬೇರೆ ಆಸ್ಪತ್ರೆಗೆ ರವಾನಿಸಿ ಎಂದು ಕುಟುಂಬಸ್ಥರಿಗೆ ಸೂಚಿಸಿದ್ದೆವು ಎಂದರು.

    ಘಟನೆ ನಡೆದ ಬಳಿಕ ರಾಜ್ ಕುಮಾರ್ ಕುಟುಂಬಸ್ಥರು ಸೇರಿ ಸಾವನ್ನಪ್ಪಿದ್ದ ಹಾವಿನ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ವರದಿಯಾಗಿದೆ.

  • ಯೋಗಿ ಸರ್ಕಾರದ ವಿರುದ್ಧ ಪ್ರಿಯಾಂಕ ಗಾಂಧಿ ವಾಗ್ದಾಳಿ

    ಯೋಗಿ ಸರ್ಕಾರದ ವಿರುದ್ಧ ಪ್ರಿಯಾಂಕ ಗಾಂಧಿ ವಾಗ್ದಾಳಿ

    ಲಕ್ನೋ: ರೈತರ ಆತ್ಮಹತ್ಯೆ ವಿಚಾರವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ಉತ್ತರ ಪ್ರದೇಶದ ಪೂರ್ವ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

    ಬುಂದೇಲ್‍ಖಂಡ್‍ನ ಬಂಡಾದಲ್ಲಿ ಐದು ದಿನಗಳಲ್ಲಿ ಒಟ್ಟು ಐವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಜುಲೈ 18ರಂದು ಮಾಧ್ಯಮವೊಂದು ವರದಿ ಪ್ರಸಾರ ಮಾಡಿತ್ತು. ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಪ್ರಿಯಾಂಕ ಗಾಂಧಿ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ರೈತರು ಬೆಳೆ ಬೆಳೆಯುತ್ತಾರೆ ಆದರೆ ಅದಕ್ಕೆ ಸೂಕ್ತ ಬೆಲೆ ಸಿಗುವುದಿಲ್ಲ. ಬರಗಾಲ ಉಂಟಾದರೆ ಪರಿಹಾರ ಸಿಗುವುದಿಲ್ಲ. ಸಾಲ ಪಾವತಿ ಮಾಡುವಂತೆ ನಿತ್ಯವೂ ಬುಂದೇಲ್‍ಖಂಡ್ ರೈತರಿಗೆ ಬೆದರಿಕೆ ಬರುತ್ತಿದೆ. ಇದು ಯಾವ ರೀತಿ ರೈತ ಪರ ಹಾಗೂ ಸಾಲಮನ್ನಾ ನೀತಿ ಎಂದು ಟ್ವೀಟ್ ಮೂಲಕ ಪ್ರಿಯಾಂಕ ಗಾಂಧಿ ಗುಡುಗಿದ್ದಾರೆ.

    ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಯೋಗಿ ಆದಿತ್ಯವಾಥ್ ನೇತೃತ್ವದ ಸರ್ಕಾರವು ರಾಜ್ಯದ ರೈತರ ಸಾಲಮನ್ನಾ ಯೋಜನೆ ಕೈಗೆತ್ತಿಕೊಂಡಿದೆ. 2016ರ ಮಾರ್ಚ್ 31ರ ಅಂತ್ಯಕ್ಕೆ ಬ್ಯಾಂಕ್‍ಗಳಿಂದ ಪಡೆದ ಗರಿಷ್ಠ 1 ಲಕ್ಷ ರೂ.ವರೆಗಿನ ರೈತರ ಬೆಳೆ ಸಾಲವನ್ನು ಹಂತ ಹಂತವಾಗಿ ಮನ್ನಾ ಮಾಡುವ 32,000 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಈ ಸಂಬಂಧ 2017 ಸೆಪ್ಟೆಂಬರ್ ತಿಂಗಳು ಮೊದಲ ಹಂತದ 7,371 ಕೋಟಿ ಸರ್ಕಾರ ಬಿಡುಗಡೆ ಮಾಡಿತ್ತು.

    ಕೆಲ ರೈತರಿಗೆ ಸಾಲಮನ್ನಾ ಯೋಜನೆ ಇನ್ನು ತಲುಪಿಲ್ಲ. ಇತ್ತ ಬ್ಯಾಂಕ್‍ನಿಂದ ನೋಟಿಸ್ ಬರುತ್ತಿರುವುದರಿಂದ ಬೇಸತ್ತ ಐವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

  • 9 ಜನರ ಮೇಲೆ ದಾಳಿ ಮಾಡಿದ್ದ ಹೆಣ್ಣು ಹುಲಿಯನ್ನು ಹೊಡೆದು ಕೊಂದ ಗ್ರಾಮಸ್ಥರು

    9 ಜನರ ಮೇಲೆ ದಾಳಿ ಮಾಡಿದ್ದ ಹೆಣ್ಣು ಹುಲಿಯನ್ನು ಹೊಡೆದು ಕೊಂದ ಗ್ರಾಮಸ್ಥರು

    ಲಕ್ನೋ: 9 ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದ ಹೆಣ್ಣು ಹುಲಿಯನ್ನು ಗ್ರಾಮಸ್ಥರು ಹೊಡೆದು ಕೊಂದ ಘಟನೆ ಉತ್ತರ ಪ್ರದೇಶ ಫಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.

    ಹತ್ಯೆಯಾದ ಹೆಣ್ಣು ಹುಲಿ ಸುಮಾರು 5ರಿಂದ 6 ವರ್ಷದ್ದಾಗಿದೆ. ಈ ಹುಲಿ ಫಿಲಿಭಿತ್ ಜಿಲ್ಲೆಯ ಮಟೈನಾ ಗ್ರಾಮದಲ್ಲಿ ಕಳೆದ ಬುಧವಾರ 9 ಜನರ ಮೇಲೆ ದಾಳಿ ಮಾಡಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟೇ ಅಲ್ಲದೆ ಗುರುವಾರವೂ 19 ವರ್ಷ ಶ್ಯಾಮ ಮೊಹನ್ ಮೇಲೆ ದಾಳಿ ಮಾಡಿತ್ತು.

    ಹುಲಿಯ ನಿರಂತರ ದಾಳಿಯಿಂದ ಬೇಸತ್ತ ಗ್ರಾಮಸ್ಥರು ಅದನ್ನು ಕೊಲೆ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಗುರುವಾರ ಅರಣ್ಯ ಪ್ರದೇಶವನ್ನು ಸುತ್ತುವರಿದ ಗ್ರಾಮಸ್ಥರು ಹುಲಿಗಾಗಿ ಹುಡುಕಾಟ ನಡೆಸಿದ್ದರು. ದುರಾದೃಷ್ಟವಶಾತ್ ಹುಲಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಗಂಭೀರವಾಗಿ ಗಾಯಗೊಂಡಿತ್ತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದಂತೆ ಹುಲಿ ಪ್ರಾಣ ಬಿಟ್ಟಿತ್ತು.

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅರಣ್ಯಾಧಿಕಾರಿ ರಾಜಮೋಹನ್ ಅವರು, ಗ್ರಾಮಸ್ಥರು ಈಟಿಗಳಿಂದ ತಿವಿದಿದ್ದರಿಂದ ಹುಲಿ ಗಂಭೀರವಾಗಿ ಗಾಯಗೊಂಡಿತ್ತು. ಜೊತೆಗೆ ಬಲವಾದ ಹೊಡೆತ ಬಿದ್ದಿದ್ದರಿಂದ ಪಕ್ಕೆಲುಬು ಮುರಿದಿದ್ದವು. ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಹುಲಿ ಸಾವನ್ನಪ್ಪಿತ್ತು. ಹೀಗಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಅಂತ್ಯಕ್ರಿಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

  • ದೂರು ನೀಡಲು ಬಂದ ಬಾಲಕಿಯನ್ನು ಅವಮಾನಿಸಿದ ಪೊಲೀಸ್: ವಿಡಿಯೋ ವೈರಲ್

    ದೂರು ನೀಡಲು ಬಂದ ಬಾಲಕಿಯನ್ನು ಅವಮಾನಿಸಿದ ಪೊಲೀಸ್: ವಿಡಿಯೋ ವೈರಲ್

    – ಪೊಲೀಸ್ ವಿರುದ್ಧ ಪ್ರಿಯಾಂಕ ಗಾಂಧಿ ಕಿಡಿ

    ಲಕ್ನೋ: ಹಿರಿಯ ಪೊಲೀಸ್ ಪೇದೆಯೊಬ್ಬ ದೂರು ನೀಡಲು ಬಂದ ಬಾಲಕಿಯನ್ನು ಅವಮಾನಿಸಿದ ಘಟನೆ ಉತ್ತರ ಪ್ರದೇಶದ ಕಾನ್ಪೂರ್ ಜಿಲ್ಲೆಯಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

    ಬಾಲಕಿ ಕಿರುಕುಳ ಸಂಬಂಧ ದೂರು ನೀಡಲು ನಜೀರಾಬಾದ್ ಪೊಲೀಸ್ ಠಾಣೆಗೆ ಹೋಗಿದ್ದಳು. ಈ ವೇಳೆ ಬಾಲಕಿಯನ್ನು ಕರೆದ ಹಿರಿಯ ಪೇದೆ ಏನಾಯಿತು ಎಂದು ಕೇಳಿದ್ದಾನೆ. ಆಗ ಬಾಲಕಿ, ನಾನು ನೀರು ತರಲು ಹೋಗಿದ್ದಾಗ ವಿಕ್ಕಿ ಲಂಗಡಾ, ಆಶಿಕ್ ಹಾಗೂ ಅಮರ್ ತಿವಾರಿ ಎಂಬವರು ನನಗೆ ಕಿರುಕುಳ ನೀಡಿದರು. ಇದನ್ನು ಪ್ರಶ್ನಿಸಿದ್ದಕ್ಕೆ ಸಹೋದರಿಗೂ ಮೂವರು ಸೇರಿ ಹೊಡೆದರು ಎಂದು ಅಳಲು ತೋಡಿಕೊಂಡಿದ್ದಾಳೆ.

    ಈ ವೇಳೆ ಹಿರಿಯ ಪೊಲೀಸ್ ಪೇದೆ ದೂರು ದಾಖಲಿಸಿಕೊಳ್ಳದೇ, ನೀನು ಯಾಕೆ ಉಂಗುರ, ಬಳೆಗಳನ್ನು ಹಾಗೂ ಲಾಕೆಟ್ ಹಾಕಿಕೊಂಡಿರುವೇ? ಯಾರಿಗಾಗಿ ಇವುಗಳನ್ನು ಧರಿಸಿರುವೇ? ನೀನು ಶಾಲೆಗೆ ಹೋಗುತ್ತೀಯಾ ಎಂದು ಪ್ರಶ್ನಿಸಿದಾಗ, ಬಾಲಕಿ ಶಾಲೆಗೆ ಹೋಗುವುದಿಲ್ಲವೆಂದು ಉತ್ತರಿಸಿದ್ದಾಳೆ. ಆಗ ಪೊಲೀಸ್ ಪೇದೆ, ಇವೆಲ್ಲವೂ ನೀನು ಏನು ಎನ್ನುವುದನ್ನು ತೋರಿಸುತ್ತದೆ ಎಂದು ಅಸಭ್ಯವಾಗಿ ಮಾತನಾಡಿದ್ದಾನೆ.

    ಹಿರಿಯ ಪೊಲೀಸ್ ಪೇದೆ ಬಾಲಕಿಗೆ ಅಸಭ್ಯವಾಗಿ ಪ್ರಶ್ನಿಸಿದ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ. ಪೊಲೀಸ್ ವರ್ತನೆಯ ಬಗ್ಗೆ ನೆಟ್ಟಿಗರು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ.

    ಉತ್ತರ ಪ್ರದೇಶದ ಪೂರ್ವ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕ ಗಾಂಧಿ ಟ್ವೀಟ್ ಮೂಲಕ ಪೊಲೀಸ್ ವಿರುದ್ಧ ಕಿಡಿಕಾರಿದ್ದಾರೆ. ಕಿರುಕುಳ ದೂರು ನೀಡಲು ಬಂದ ಬಾಲಕಿಯ ಜೊತೆಗೆ ಪೊಲೀಸ್ ಪೇದೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಒಂದೆಡೆ ಉತ್ತರ ಪ್ರದೇಶದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧಗಳು ಕಡಿಮೆಯಾಗುತ್ತಿಲ್ಲ. ಮತ್ತೊಂದು ಕಡೆ ಕಾನೂನು ಪಾಲಕರು ಇಂತಹ ವರ್ತನೆ ತೋರುತ್ತಿದ್ದಾರೆ. ಮಹಿಳೆಗೆ ನ್ಯಾಯ ಒದಗಿಸಿಕೊಡುವುದಕ್ಕೂ ಮೊದಲು ಆಕೆಯ ಮಾತನ್ನು ಕೇಳಬೇಕು ಎಂದು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.