Tag: uttar pradesh

  • ಉನ್ನತ ಶಿಕ್ಷಣ ಪಡೆಯುವಲ್ಲಿ ಯುವಕರನ್ನ ಹಿಂದಿಕ್ಕಿದ ಯುವತಿಯರು

    ಉನ್ನತ ಶಿಕ್ಷಣ ಪಡೆಯುವಲ್ಲಿ ಯುವಕರನ್ನ ಹಿಂದಿಕ್ಕಿದ ಯುವತಿಯರು

    ಬೆಂಗಳೂರು: ಸಮಾಜದಲ್ಲಿ ಮಹಿಳೆಗೂ ಸಹ ಪುರುಷರಷ್ಟೇ ಗೌರವ ಸ್ಥಾನಮಾನ ನೀಡಬೇಕೆಂಬ ಮಾತು ಇದೆ. ಮಹಿಳೆಯರು ಪುರಷರಿಗಿಂತ ಯಾವುದರಲ್ಲಿ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ಇದೀಗ ಉನ್ನತ ಶಿಕ್ಷಣ ಪಡೆಯುವಲ್ಲಿಯೂ ಯುವಕರನ್ನು ಕರ್ನಾಟಕದ ಯುವತಿಯರು ಹಿಂದಿಕ್ಕಿದ್ದಾರೆ.

    ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಬಳಿಯ ವಿದ್ಯಾರ್ಥಿನಿಯರು ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಉನ್ನತ ಶಿಕ್ಷಣ ಪಡೆಯಲು ಬೇರೆ ನಗರಗಳಿಗೆ ತೆರಳಲು ಹಿಂದೇಟು ಹಾಕುವುದುಂಟು. ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ರೆ ಸಾಕಪ್ಪ ಅನ್ನೊ ಪೋಷಕರು ಪಿಯು ಮುಗಿದ ಕೂಡಲೇ ಸಂಸಾರ ಎಂಬ ನೌಕೆಗೆ ತಳ್ಳಿ ಬಿಡುತ್ತಾರೆ. ಸಹಜವಾಗಿ ಫಲಿತಾಂಶದಲ್ಲಿ ಮುಂದೆ ಇರುವ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣದತ್ತ ಒಲವು ತೋರುತ್ತಿದ್ದಾರೆ.

    ಕರ್ನಾಟಕ ಮತ್ತು ಉತ್ತರ ಪ್ರದೇಶದ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆಯುವರ ಪೈಕಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದೆ ಎಂದು ಆಲ್ ಇಂಡಿಯಾ ಸರ್ವೇ ಆನ್ ಹೈಯರ್ ಎಜುಕೇಷನ್ (ಎಐಎಸ್‍ಹೆಚ್‍ಇ) ಹೇಳಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಎಐಎಸ್‍ಹೆಚ್‍ಇ ಸಮೀಕ್ಷೆಗಳನ್ನು ನಡೆಸಿ ವರದಿ ನೀಡುತ್ತದೆ. 18-23ರ ವರ್ಷದೊಳಗಿನ ಯುವತಿಯರು ಉನ್ನತ ಶಿಕ್ಷಣ ಪಡೆಯಲು ಆಸಕ್ತಿ ತೋರುತ್ತಿದ್ದಾರೆ. ಕಳೆದ ವರ್ಷ ಉತ್ತರ ಪ್ರದೇಶದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರಿಗಿಂತ ವಿದ್ಯಾರ್ಥಿ 1.91 ಲಕ್ಷದಷ್ಟು ಹೆಚ್ಚು ಜನ ಪ್ರವೇಶ ಪಡೆದುಕೊಂಡಿದ್ದರು. ಇದೀಗ ಯುವಕರಗಿಂತ 90 ಸಾವಿರ ವಿದ್ಯಾರ್ಥಿನಿಯರು ಪ್ರವೇಶ ಪಡೆದುಕೊಂಡಿದ್ದಾರೆ.

    ಉತ್ತರ ಪ್ರದೇಶದಂತೆ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಅಂತರವಿಲ್ಲ. ಯುವಕರಿಗಿಂತ 1,600 ಹೆಚ್ಚು ಯುವತಿಯರು ಉನ್ನತ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ ಎಂದು ಎಐಎಸ್‍ಹೆಚ್‍ಇ ಹೇಳಿದೆ. 47.6% ರಷ್ಟಿದ್ದ ದಾಖಲಾತಿ 2017-18ನೇ ಸಾಲಿನಲ್ಲಿ 48.6% ರಷ್ಟು ಏರಿಕೆ ಕಂಡಿದೆ.

    ದಾಖಲಾತಿಯಲ್ಲಿ ಏರಿಕೆ:
    ಸಮೀಕ್ಷೆ ಪ್ರಕಾರ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. 2017-18ರಲ್ಲಿ 25.8% ರಷ್ಟಿತ್ತು. 2018-19ಕ್ಕೆ 26.3% ರಷ್ಟಾಗಿದೆ. ಅದೇ ರೀತಿ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುವರ ಸಂಖ್ಯೆಯೂ ಸಹ ಏರಿಕೆ ಕಾಣುತ್ತಿದೆ. 903 (2017-18)ದಿಂದ 993 (2018-19) ಎಷ್ಟು ಏರಿಕೆ ಆಗಿದೆ. ಉನ್ನತ ಶಿಕ್ಷಣ ನೀಡುವ ಸಂಸ್ಥೆಗಳ ಸಂಖ್ಯೆಯಲ್ಲಿ ಗಣನೀಯವಾದ ಏರಿಕೆ ಕಂಡಿದೆ. 49,964 ರಷ್ಟಿದ್ದ ಶಿಕ್ಷಣ ಸಂಸ್ಥೆಗಳು ಸದ್ಯ 51,649 ರಷ್ಟು ಏರಿಕೆ ಆಗಿವೆ. 13.88 ರಷ್ಟಿದ್ದ ಸಿಬ್ಬಂದಿ ಸಂಖ್ಯೆ 14.16 ರಷ್ಟು ಹೆಚ್ಚಳವಾಗಿದೆ.

  • ವಿದ್ಯಾರ್ಥಿನಿಯನ್ನು ಮಸಾಜ್ ಮಾಡಲು ಬಾ ಎಂದಿದ್ದು ನಿಜ – ತಪ್ಪೊಪ್ಪಿಕೊಂಡ ಚಿನ್ಮಯಾನಂದ

    ವಿದ್ಯಾರ್ಥಿನಿಯನ್ನು ಮಸಾಜ್ ಮಾಡಲು ಬಾ ಎಂದಿದ್ದು ನಿಜ – ತಪ್ಪೊಪ್ಪಿಕೊಂಡ ಚಿನ್ಮಯಾನಂದ

    ಲಕ್ನೋ: ಆತ್ಯಾಚಾರ ಪ್ರಕರಣದಲ್ಲಿ ಇಂದು ಬೆಳಗ್ಗೆ ಅರೆಸ್ಟ್ ಆಗಿದ್ದ, ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಅವರು ನಾನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದು ನಿಜ ಎಂದು ತಪ್ಪೊಪ್ಪಿಕೊಂಡಿದ್ದಾರೆ.

    ಇಂದು ಬೆಳಗ್ಗೆ ಬಂಧನಕ್ಕೊಳಗಾಗಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದ ಚಿನ್ಮಯಾನಂದ ನಾನು ಕಾನೂನು ವಿದ್ಯಾರ್ಥಿನಿಗೆ ಮಸಾಜ್ ಮಾಡಲು ಬಾ ಎಂದು ಕರೆದಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಈ ಕೃತ್ಯ ಎಸಗಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದು ಚಿನ್ಮಯಾನಂದ ಹೇಳಿದ್ದಾರೆ ಎಂದು ತನಿಖಾ ತಂಡ ಹೇಳಿದೆ.

    ಈ ವಿಚಾರದ ಬಗ್ಗೆ ಮಾತನಾಡಿದ ವಿಶೇಷ ತನಿಖಾ ತಂಡದ ಮುಖ್ಯಸ್ಥ ನವೀನ್ ಅರೋರಾ, ಸ್ವಾಮಿ ಚಿನ್ಮಯಾನಂದ ಅವರು ತಮ್ಮ ವಿರುದ್ಧ ಕೇಳಿಬಂದಿರುವ ಲೈಂಗಿಕ ಸಂಭಾಷಣೆ ಮತ್ತು ಬಾಡಿ ಮಸಾಜ್ ಸೇರಿದಂತೆ ಬಹುತೇಕ ಎಲ್ಲ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. ಸಾಂದರ್ಭಿಕ ಸಾಕ್ಷ್ಯಗಳನ್ನು ಸಹ ಪರಿಶೀಲನೆ ಮಾಡಲಾಗುತ್ತಿದೆ. ತಾನು ಮಾಡಿರುವ ಕೆಲಸದ ಬಗ್ಗೆ ತಾನೇ ಬೇಸರ ವ್ಯಕ್ತಪಡಿಸಿರುವ ಚಿನ್ಮಯಾನಂದ ಅವರು, ಈ ವಿಚಾರದ ಬಗ್ಗೆ ಹೆಚ್ಚಿಗೆ ಹೇಳುವುದಿಲ್ಲ ಎಂದು ಹೇಳಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ನನ್ನ ಮೇಲೆ ಬಿಜೆಪಿ ನಾಯಕರೊಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಮಸಾಜ್ ಮಾಡಲು ಬಾ ಎಂದು ಕರೆಯುತ್ತಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬಳು ವಿಡಿಯೋ ಮಾಡಿದ್ದಳು ಅದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ನಂತರ ಈ ವಿಚಾರಕ್ಕೆ ಸಂಬಂಧಪಟ್ಟ ವಿಡಿಯೋವನ್ನು ವಿದ್ಯಾರ್ಥಿನಿ ಕುಟುಂಬದವರು ತನಿಖಾ ತಂಡಕ್ಕೆ ನೀಡಿದ್ದರು.

    ವಿದ್ಯಾರ್ಥಿನಿ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ, ಚಿನ್ಮಯಾನಂದ ಅವರ ವಕೀಲ ಓಂ ಸಿಂಗ್ ಈ ವಿಡಿಯೋ ಮೂಲಕ ತನ್ನ ಕಕ್ಷಿದಾರನನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದರು ಮತ್ತು ಓಂ ಸಿಂಗ್ ತನ್ನ ಬಳಿ ಹುಡುಗಿ ಮತ್ತು ಅವರ ಸ್ನೇಹಿತರ ವಿಡಿಯೋ ಇದ್ದು, ಅದು ಚಿನ್ಮಯಾನಂದ್ ಅವರ ಮೇಲೆ ಸುಳ್ಳು ಆರೋಪ ಮಾಡಲು ಸಂಚು ರೂಪಿಸಿರುವುದನ್ನು ತೋರುತ್ತದೆ ಎಂದು ಹೇಳಿದ್ದರು.

    ಈ ಹಿಂದೆ ಈ ವಿಚಾರದ ಬಗ್ಗೆ ಮಾತನಾಡಿದ್ದ ಉತ್ತರ ಪ್ರದೇಶದ ಡಿಜಿಪಿ ಒಪಿ ಸಿಂಗ್ ಅವರು, ಚಿನ್ಮಯಾನಂದ ಪ್ರಕರಣದಲ್ಲಿ ಯಾವುದೇ ವಿಳಂಬ ಮಾಡುವುದಿಲ್ಲ. ಈ ಪ್ರಕರಣದಲ್ಲಿ ಚಿನ್ಮಯಾನಂದ ಅವರ ಪರವಾಗಿ ಬೆದರಿಕೆ ಹಾಕಿದ ಇನ್ನೂ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದರು.

  • ಅತ್ಯಾಚಾರ ಪ್ರಕರಣದಲ್ಲಿ ಚಿನ್ಮಯಾನಂದ ಅರೆಸ್ಟ್ – 14 ದಿನ ನ್ಯಾಯಾಂಗ ಬಂಧನ

    ಅತ್ಯಾಚಾರ ಪ್ರಕರಣದಲ್ಲಿ ಚಿನ್ಮಯಾನಂದ ಅರೆಸ್ಟ್ – 14 ದಿನ ನ್ಯಾಯಾಂಗ ಬಂಧನ

    ಲಕ್ನೋ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಅವರನ್ನು ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

    ಕಾನೂನು ವಿದ್ಯಾರ್ಥಿ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಚಿನ್ಮಯಾನಂದ ಅವರನ್ನು ಉತ್ತರ ಪ್ರದೇಶದ ವಿಶೇಷ ತನಿಖಾ ತಂಡ (ಎಸ್‍ಐಟಿ) ಇಂದು ಬೆಳಗ್ಗೆ 9 ಗಂಟೆಯ ವೇಳೆಗೆ ಅವರ ನಿವಾಸ ದಿವ್ಯಾ ಧಾಮ್‍ನಲ್ಲಿ ಬಂಧಿಸಿದ್ದಾರೆ.

    ಬೆಳಗ್ಗೆ ಚಿನ್ಮಯಾನಂದ ಅವರನ್ನು ಅರೆಸ್ಟ್ ಮಾಡಿದ ಎಸ್‍ಐಟಿ ಅಧಿಕಾರಿಗಳು ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದರು. ನಂತರ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಜಡ್ಜ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

    ಈ ವಿಚಾರದಲ್ಲಿ ಚಿನ್ಮಯಾನಂದವರನ್ನು ಅರೆಸ್ಟ್ ಮಾಡದೇ ಹೋದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಿದ್ಯಾರ್ಥಿ ಬುಧವಾರ ಬೆದರಿಕೆ ಸಹ ಹಾಕಿದ್ದಳು. ಇದನ್ನು ಓದಿ: ಸ್ವಾಮಿ ಚಿನ್ಮಯಾನಂದ ಪ್ರಕರಣ -ಯೋಗಿ ಸರ್ಕಾರದ ವಿರುದ್ಧ ಗುಡುಗಿದ ಪ್ರಿಯಾಂಕ ಗಾಂಧಿ

    ಈ ವಿಚಾರವಾಗಿ ಮಾತನಾಡಿರುವ ಉತ್ತರ ಪ್ರದೇಶದ ಡಿಜಿಪಿ ಒಪಿ ಸಿಂಗ್ ಅವರು, ಚಿನ್ಮಯಾನಂದ ಪ್ರಕರಣದಲ್ಲಿ ಯಾವುದೇ ವಿಳಂಬ ಮಾಡುವುದಿಲ್ಲ. ಈ ಪ್ರಕರಣದಲ್ಲಿ ಚಿನ್ಮಯಾನಂದ ಅವರ ಪರವಾಗಿ ಬೆದರಿಕೆ ಹಾಕಿದ ಇನ್ನೂ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

    ಏನಿದು ಪ್ರಕರಣ?
    ಮಾಜಿ ಕೇಂದ್ರ ಸಚಿವರೊಬ್ಬರು ಕಿರುಕುಳ ನೀಡುತ್ತಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ ವಿದ್ಯಾರ್ಥಿನಿ ಒಂದು ದಿನದ ನಂತರ, ಆಗಸ್ಟ್ 24 ರಿಂದ ಚಿನ್ಮಯಾನಂದ ಅವರ ಟ್ರಸ್ಟ್ ನಡೆಸುತ್ತಿರುವ ಕಾಲೇಜಿನಿಂದ ಕಾಣೆಯಾಗಿದ್ದಳು. ಆದರೆ ವಿಡಿಯೋದಲ್ಲಿ ಎಲ್ಲೂ ಸ್ವಾಮಿ ಚಿನ್ಮಯಾನಂದ್ ಅವರ ಹೆಸರನ್ನು ಹೇಳದ ವಿದ್ಯಾರ್ಥಿ ಕೇವಲ ಸಂತ ಸಮುದಾಯದ ಹಿರಿಯ ನಾಯಕ ಎಂದು ಮಾತ್ರ ಹೇಳಿದ್ದಳು. ಇದನ್ನು ಓದಿ: ಚಿನ್ಮಯಾನಂದ ಕೇಸ್: ಕಾಣೆಯಾಗಿದ್ದ ವಿದ್ಯಾರ್ಥಿನಿ ರಾಜಸ್ಥಾನದಲ್ಲಿ ಪತ್ತೆ

    ಆದರೆ ವಿದ್ಯಾರ್ಥಿ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ನಂತರ ಆಕೆಯ ವಿಡಿಯೋ ಆಧರಿಸಿ, ಆಕೆಯ ತಂದೆ ಅವಳು ಅಧ್ಯಯನ ಮಾಡುತ್ತಿದ್ದ ಕಾಲೇಜಿನ ಮುಖ್ಯಸ್ಥರಾಗಿರುವ ಮಾಜಿ ಕೇಂದ್ರ ಸಚಿವರಾದ ಚಿನ್ಮಯಾನಂದ್ ಅವರ ವಿರುದ್ಧ ಆಗಸ್ಟ್ 27 ರಂದು ದೂರು ನೀಡಿದ್ದರು. ಇದಾದ ನಂತರ ಆಗಸ್ಟ್ 30 ರಂದು ವಿದ್ಯಾರ್ಥಿನಿ ರಾಜಸ್ಥಾನದಲ್ಲಿ ಪತ್ತೆಯಾಗಿದ್ದಳು.

  • ಜೂಜಾಟದಲ್ಲಿ ಸೋತ ಪತಿ – ಪತ್ನಿಯ ಬಟ್ಟೆ ಹರಿದ ಸ್ನೇಹಿತರು

    ಜೂಜಾಟದಲ್ಲಿ ಸೋತ ಪತಿ – ಪತ್ನಿಯ ಬಟ್ಟೆ ಹರಿದ ಸ್ನೇಹಿತರು

    ಲಕ್ನೋ: ವ್ಯಕ್ತಿಯೋರ್ವ ಜೂಜಾಟದಲ್ಲಿ ತನ್ನ ಪತ್ನಿಯನ್ನೇ ಪಣಕ್ಕಿಟ್ಟು ಸೋತಿದಕ್ಕೆ ಆತನ ಸ್ನೇಹಿತರು ಆಕೆಯ ಬಟ್ಟೆ ಹರಿದು, ಅತ್ಯಾಚಾರಕ್ಕೆ ಯತ್ನಿಸಿ ದುಷ್ಟತನ ಮರೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸೆ. 15ರಂದು ಕಾನ್ಪುರದಲ್ಲಿ ಈ ಘಟನೆ ನಡೆದಿದೆ. ನಶೆಯಲ್ಲಿದ್ದ ಪತಿ ಮನೆಯಲ್ಲೇ ನಾಲ್ವರು ಸ್ನೇಹಿತರ ಜೊತೆ ಜೂಜಾಟ ಆಡುತ್ತಿದ್ದನು. ಈ ವೇಳೆ ಹಣ ಖಾಲಿಯಾದ ಮೇಲೆ ಪತ್ನಿಯನ್ನು ಆಟದಲ್ಲಿ ಪಣಕಿಟ್ಟಿದ್ದನು. ಆದರೆ ಆಟದಲ್ಲಿ ಸೋತ ಮೇಲೆ ಪತ್ನಿಯನ್ನು ಸ್ನೇಹಿತರಿಗೆ ಬಿಟ್ಟುಕೊಟ್ಟಿದ್ದನು. ಆಗ ಆತನ ಸ್ನೇಹಿತರು ಪತಿಯ ಮುಂದೆಯೇ ಮಹಿಳೆಯ ಬಟ್ಟೆ ಹರಿದು, ಅತ್ಯಾಚಾರ ಎಸಗಲು ಯತ್ನಿಸಿದಾಗ ಅವರಿಂದ ಮಹಿಳೆ ತಪ್ಪಿಸಿಕೊಂಡು ಅಡಿಗೆ ಕೋಣೆಗೆ ಹೋಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ.

    ಮಾಹಿತಿ ತಿಳಿದ ಬಳಿಕ ಮನೆಗೆ ಬಂದ ಪೊಲೀಸರು ಪತಿಯ ಜೊತೆಗೆ ನಾಲ್ವರು ಸ್ನೇಹಿತರನ್ನು ಹಾಗೂ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಆದರೆ ಠಾಣೆಯಲ್ಲಿ ಆರೋಪಿಗಳಿಂದ ಹಣ ಪಡೆದು ಅವರನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಅಲ್ಲದೆ ಇದು ಪತಿ-ಪತ್ನಿ ಜಗಳವೆಂದು ಎಫ್‍ಐಆರ್ ದಾಖಲಿಸಿಕೊಂಡು ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ.

    ಈ ಬಗ್ಗೆ ಮಹಿಳೆ ಹಿರಿಯ ಅಧಿಕಾರಿಗಳ ಬಳಿ ದೂರು ನೀಡಿದಾಗ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಗುತ್ತದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

  • ಬಸ್ ಟಾಪ್ ಮೇಲೆ ವಿದ್ಯಾರ್ಥಿಗಳು – ಮಾಲೀಕ, ಚಾಲಕನ ಮೇಲೆ ಎಫ್‍ಐಆರ್

    ಬಸ್ ಟಾಪ್ ಮೇಲೆ ವಿದ್ಯಾರ್ಥಿಗಳು – ಮಾಲೀಕ, ಚಾಲಕನ ಮೇಲೆ ಎಫ್‍ಐಆರ್

    ಲಕ್ನೋ: ಬಸ್ಸಲ್ಲಿ ಜನ ತುಂಬಿ ತುಳುಕುತ್ತಿದ್ದರೂ, ಅಪಾಯವಿದೆ ಎಂದು ಗೊತ್ತಿದ್ದರೂ ಟಾಪ್, ಹಿಂಬದಿಯ ಏಣಿಯ ಮೇಲೆ, ಬಾಗಿಲ ಫುಟ್ ರೆಸ್ಟ್ ಮೇಲೆ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗಿದ್ದಕ್ಕೆ ಬಸ್ ಮಾಲೀಕ, ಚಾಲಕನ ಮೇಲೆ ಎಫ್‍ಐಆರ್ ದಾಖಲಾಗಿದೆ.

    ವಸ್ತುಗಳನ್ನು ತುರುಕಿ ವಾಹನದಲ್ಲಿ ಲೋಡ್ ಮಾಡುವ ರೀತಿ ವಿದ್ಯಾರ್ಥಿಗಳು ಬಸ್ ಮೇಲೆ, ಬಾಗಿಲ ಬಳಿ ನೇತಾಡಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ. ಪ್ರತಿ ನಿತ್ಯ ಮುಜಾಫರ್‌ನಗರದಿಂದ ಮೀರಾಪುರ ಮಾರ್ಗವಾಗಿ ಹೋಗುವ ಬಸ್ಸಿನಲ್ಲಿ ಹೀಗೆ ವಿದ್ಯಾರ್ಥಿಗಳು ನೇತಾಡುತ್ತಾ ಹೋಗಿದ್ದಾರೆ. ಪ್ರತಿನಿತ್ಯ ಈ ಭಾಗದಲ್ಲಿ ಹೀಗೆ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಚಾಲಕ, ನಿರ್ವಾಹಕ ಹೋಗುತ್ತಾರೆ.

    ಆದರೆ ಶುಕ್ರವಾರದಂದು ಹೀಗೆ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಬಸ್ ಸಾಗುತ್ತಿದ್ದ ವೇಳೆ ಹಿಂದಿನಿಂದ ಬರುತ್ತಿದ್ದ ವಾಹನದ್ದಲ್ಲಿದ್ದವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಜವಾಬ್ದಾರಿಯಿಲ್ಲದೆ ವಿದ್ಯಾರ್ಥಿಗಳನ್ನು ಬೇಕಾಬಿಟ್ಟಿ ಬಸ್ಸಿನಲ್ಲಿ ತುಂಬಿಸಿಕೊಂಡು ಅವರ ಜೀವದೊಂದಿಗೆ ಚೆಲ್ಲಾಟ ಆಡಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

    ಈ ವಿಡಿಯೋಗೆ ನೆಟ್ಟಿಗರು ಭಾರಿ ವಿರೋಧ ವ್ಯಕ್ತಪಡಿಸಿ, ಪೊಲೀಸರು ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಕೇಳಿಬಂದಿತ್ತು. ಈ ವಿಡಿಯೋ ನೋಡಿ ಎಚ್ಚೆತ್ತ ಪೊಲೀಸರು ಕೊನೆಗೆ ಆ ಬಸ್ ಯಾವುದು? ಯಾವ ಮಾರ್ಗದಿಂದ ಸಂಚರಿಸುತ್ತೆ? ಹೀಗೆ ಎಲ್ಲಾ ಮಾಹಿತಿಗಳನ್ನು ಪತ್ತೆ ಮಾಡಿ, ಬಸ್ ಮಾಲೀಕ ಹಾಗೂ ಚಾಲಕನ ಮೇಲೆ ಕೇಸ್ ಹಾಕಿದ್ದಾರೆ.

    ಇನ್ನಾದರೂ ಬಸ್ ಮಾಲೀಕರು ಹಾಗೂ ಚಾಲಕರು ಎಚ್ಚೆತ್ತುಕೊಂಡು ದುಡ್ಡಿನ ಆಸೆಗೆ ಹೀಗೆ ಪ್ರಯಾಣಿಕರನ್ನು ಬೇಕಾಬಿಟ್ಟಿ ಹತ್ತಿಸಿಕೊಳ್ಳುವುದನ್ನು ಬಿಡಬೇಕು. ಈ ರೀತಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಅವರ ಜೀವಕ್ಕೆ ಕುತ್ತು ಬಾರದಂತೆ ನೋಡಿಕೊಂಡು ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದು ಜನ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  • ಮೇಕೆ ಕಳ್ಳತನ – ಸಂಸದ ಅಜಂ ಖಾನ್ ವಿರುದ್ಧ ಎಫ್‍ಐಆರ್

    ಮೇಕೆ ಕಳ್ಳತನ – ಸಂಸದ ಅಜಂ ಖಾನ್ ವಿರುದ್ಧ ಎಫ್‍ಐಆರ್

    ಲಕ್ನೋ: ಪುಸ್ತಕ ಹಾಗೂ ಎಮ್ಮೆ ಕಳ್ಳತನದ ಆರೋಪದ ನಂತರ ಇದೀಗ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ವಿರುದ್ಧ ಮೇಕೆ ಕಳ್ಳತನದ ಕುರಿತು ದೂರು ದಾಖಲಾಗಿದೆ.

    ರಾಂಪುರ ಪಬ್ಲಿಕ್ ಗೇಟ್‍ನ ಯತೀಮ್ ಖಾನ್ ಸರಾಯ್ ಗೇಟ್ ನಿವಾಸಿ ನಸೀಮಾ ಖಾತೂನ್(50) ಅಕ್ಟೋಬರ್ 2016ರಂದು ನೀಡಿದ ದೂರಿನ ಮೇರೆಗೆ ಅಜಂ ಖಾನ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಅಕ್ಟೋಬರ್ 15, 2016ರಂದು ಅಜಂ ಖಾನ್, ಏಳು ಸಹೋದ್ಯೋಗಿಗಳು ಹಾಗೂ 25 ಜನ ಅಪರಿಚಿತರು ನಮ್ಮ ಮನೆಗೆ ನುಗ್ಗಿ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಮನೆಯಲ್ಲಿದ್ದ ಆಭರಣಗಳು, ಮೂರು ಎಮ್ಮೆ, ಒಂದು ಹಸು ಹಾಗೂ ನಾಲ್ಕು ಮೇಕೆಗಳನ್ನು ಕದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಕಳೆದೆರಡು ದಶಕಗಳಿಂದ ವಕ್ಫ್ ಮಂಡಳಿಯ ಆಸ್ತಿಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದೇನೆ. ಶಾಲೆಗೆ ಭೂಮಿ ಅಗತ್ಯವಿರುವುದರಿಂದ ಖಾನ್ ಹಾಗೂ ಅವರ ತಂಡದ ಸದಸ್ಯರು ಆ ಜಾಗವನ್ನು ಖಾಲಿ ಮಾಡುವಂತೆ ಕೇಳಿಕೊಂಡರು. ನಾವು ಖಾಲಿ ಮಾಡದ ಹಿನ್ನೆಲೆ ಮನೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಎಫ್‍ಐಆರ್‍ನಲ್ಲಿ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷ ವಸೀಮ್ ರಿಜ್ವಿ, ಸುನ್ನಿ ಕೇಂದ್ರ ವಕ್ಫ್ ಮಂಡಳಿಯ ಅಧ್ಯಕ್ಷ ಜುಫರ್ ಅಹ್ಮದ್ ಫಾರೂಕಿ ಹಾಗೂ ಮಾಜಿ ವಲಯಾಧಿಕಾರಿ ಆಲಿ ಹಸನ್ ಹೆಸರು ಸಹ ಉಲ್ಲೇಖಿಸಲಾಗಿದೆ. ವಿದ್ಯುತ್ ಕಳ್ಳತನ ಮಾಡಿರುವ ಆರೋಪದ ಮೇಲೆ ಸಂಸದ ಅಜಂ ಖಾನ್ ಪತ್ನಿ ತಂಜೀನ್ ಫಾತಿಮಾ ವಿರುದ್ಧ ಸಹ ಎಫ್‍ಐಆರ್ ದಾಖಲಿಸಲಾಗಿದೆ.

    ಅಜಂ ಖಾನ್ ವಿರುದ್ಧ ರಾಜ್ಯ ಸರ್ಕಾರ ‘ಲ್ಯಾಂಡ್ ಮಾಫಿಯಾ’ ಆರೋಪ ಹೊರಿಸಿದ್ದು, ಈ ಮೂಲಕ ಅವರ ಮೇಲೆ ಒಟ್ಟು 82 ಪ್ರಕರಣಗಳು ದಾಖಲಾದಂತಾಗಿದೆ. ಅವುಗಳಲ್ಲಿ 50 ಪ್ರಕರಣಗಳು ಭೂ ಕಬಳಿಕೆಗೆ ಸಂಬಂಧಿಸಿವೆ. ಅಲಿಯಗಂಜ್ ರೈತರ ದೂರಿನ ಮೇರೆಗೆ ಅಜಂ ಖಾನ್ ವಿರುದ್ಧ ಇನ್ನೂ 28 ಪ್ರಕರಣಗಳು ದಾಖಲಾಗಿವೆ. ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಸ್ಥಳೀಯ ಕೋರ್ಟ್‍ನಿಂದ ಅಜಂ ಖಾನ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ಸಹ ತಿರಸ್ಕೃತಗೊಂಡಿದೆ.

  • ಬುರ್ಖಾ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ವಾಪಸ್ ಕಳುಹಿಸಿದ ಸಿಬ್ಬಂದಿ

    ಬುರ್ಖಾ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ವಾಪಸ್ ಕಳುಹಿಸಿದ ಸಿಬ್ಬಂದಿ

    ಲಕ್ನೊ: ಬುರ್ಖಾ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಯರಿಗೆ ತರಗತಿಯೊಳಗೆ ಪ್ರವೇಶಿಸಲು ನಿರಾಕರಿಸಿ ಕಾಲೇಜಿನ ಸಿಬ್ಬಂದಿ ವಾಪಸ್ ಕಳುಹಿಸಿದ ಘಟನೆ ಉತ್ತರ ಪ್ರದೇಶದ ಫಿರ್ಜೋಬಾದಿನಲ್ಲಿ ನಡೆದಿದೆ.

    ಫಿರ್ಜೋಬಾದಿನ ಎಸ್‌ಆರ್‌ಕೆ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಬುರ್ಖಾ ಧರಿಸಿ ಬಂದಿದ್ದರು. ಈ ವೇಳೆ ಅವರನ್ನು ಗಮನಿಸಿದ ಕಾಲೇಜು ಸಿಬ್ಬಂದಿ ವಿದ್ಯಾರ್ಥಿನಿಯರನ್ನು ತಡೆದು ಬುರ್ಖಾ ಧರಿಸಿ ಕಾಲೇಜಿಗೆ ಬರುವಂತಿಲ್ಲ, ತರಗತಿ ಪ್ರವೇಶವಿಲ್ಲ ಎಂದು ಹೇಳಿದ್ದಾರೆ.

    ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಪ್ರತಿಕ್ರಿಯಿಸಿ, ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯ. ಬುರ್ಖಾ ಕಾಲೇಜಿನ ಸಮವಸ್ತ್ರದ ಭಾಗವಲ್ಲ. ಆದ್ದರಿಂದ ಬುರ್ಖಾವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ ಕಾಲೇಜಿಗೆ ಬರುವಾಗ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ, ಕಾಲೇಜಿನ ಐಡಿ ಕಾರ್ಡಿನೊಂದಿಗೆ ಬರಬೇಕೆಂಬುದು ಹಿಂದಿನಿಂದಲೂ ನಿಯಮವಿದೆ. ಆದರೆ ಕಾಲೇಜಿನಲ್ಲಿ ಪ್ರವೇಶ ಪ್ರಕ್ರಿಯೆ ನಡೆಯುತ್ತಿರುವ ಕಾರಣಕ್ಕೆ ಇದನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಅನುಸರಿಸುತ್ತಿರಲಿಲ್ಲ. ಈಗ ಪ್ರವೇಶ ಪ್ರಕ್ರಿಯೆ ಮುಗಿದಿದೆ. ಆದ್ದರಿಂದ ನಿಯಮವನ್ನು ಕಡ್ಡಾಯ ಮಾಡಿದ್ದೇವೆ ಎಂದು ಹೇಳಿದೆ.

    ಕಾಲೇಜಿನ ಪ್ರಾಂಶುಪಾಲ ಪ್ರಭಾಕರ್ ರೈ ಮಾತನಾಡಿ, ಸೆಪ್ಟೆಂಬರ್ 11ರ ನಂತರ ಸಮವಸ್ತ್ರ ಮತ್ತು ಐಡಿ ಕಾರ್ಡ್ ಇಲ್ಲದ ವಿದ್ಯಾರ್ಥಿಗಳನ್ನು ಕಾಲೇಜಿನೊಳಗೆ ಬಿಡುತ್ತಿಲ್ಲ. ಕಾಲೇಜಿನ ಡ್ರೆಸ್ ಕೋಡ್‍ನಲ್ಲಿ ಬುರ್ಖಾ ಸೇರಲ್ಲ. ಅಲ್ಲದೆ ಕಾಲೇಜಿನ ನಿಯಮದಂತೆ ಆಡಳಿತ ಮಂಡಳಿ ನಿರ್ಧರಿಸಿದ ಸಮವಸ್ತ್ರದಲ್ಲಿಯೇ ವಿದ್ಯಾರ್ಥಿಗಳು ತರಗತಿಗೆ ಬರಬೇಕಾಗುತ್ತದೆ ಎಂದು ತಿಳಿಸಿದರು.

    ಆದರೆ ಬುರ್ಖಾ ಧರಿಸಿ ಕಾಲೇಜಿನೊಳಗೆ ಬಂದಿದ್ದ ವಿದ್ಯಾರ್ಥಿನಿಯರು ಹೇಳುವುದೇ ಬೇರೆಯಾಗಿದೆ. ಈ ಹಿಂದೆ ಹೀಗೆ ಇರಲಿಲ್ಲ. ಈ ನಿಯಮ ಕಡ್ಡಾಯ ಇರಲಿಲ್ಲ, ಇದ್ದಕ್ಕಿದ್ದ ಹಾಗೆ ಕಾಲೇಜಿಗೆ ಬಂದವರನ್ನು ತರಗತಿಗೆ ಬಿಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕೆಲ ವಿದ್ಯಾರ್ಥಿನಿಯರು ನಮಗೆ ಬುರ್ಖಾ ತೆಗೆಯುವಂತೆ ಹೇಳಿದರು ಎಂದು ಆರೋಪಿಸಿದ್ದಾರೆ.

    ಈ ಸಂಬಂಧ ಜಿಲ್ಲಾಧಿಕಾರಿ ಚಂದ್ರ ವಿಜಯ್ ಸಿಂಗ್ ಅವರು ಮಾತನಾಡಿ, ಇದು ಕಾಲೇಜಿನ ಆಂತರಿಕ ವಿಚಾರ. ಘಟನೆ ನಡೆದಿದ್ದು ನನ್ನ ಗಮನಕ್ಕೆ ಬಂದಿದೆ. ಕಾಲೇಜಿನ ನಿಯಮದಂತೆ ಸಮವಸ್ತ್ರ, ಐಡಿ ಕಾರ್ಡ್ ಕಡ್ಡಾಯ, ಆದ್ದರಿಂದ ಸಿಬ್ಬಂದಿ ಬುರ್ಖಾ ಧರಿಸಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ್ದಾರೆ. ಅವರಿಗೆ ಬುರ್ಖಾ ತೆಗೆಯಿರಿ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿಲ್ಲ. ನೀವು ಬುರ್ಖಾ ಧರಿಸಿ ಬರಬಾರದು, ಕಾಲೇಜಿನ ಸಮವಸ್ತ್ರದಲ್ಲಿ ಬರಬೇಕೆಂದು ತಿಳಿಸಿದ್ದಾರೆ ಅಷ್ಟೇ ಎಂದು ಸಿಬ್ಬಂದಿ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ.

  • ಫೋನ್‍ನಲ್ಲಿ ಮಾತನಾಡುತ್ತಾ ಬೆಡ್ ಮೇಲಿದ್ದ ಜೋಡಿ ಹಾವಿನ ಮೇಲೆ ಕುಳಿತ ಮಹಿಳೆ ಸಾವು

    ಫೋನ್‍ನಲ್ಲಿ ಮಾತನಾಡುತ್ತಾ ಬೆಡ್ ಮೇಲಿದ್ದ ಜೋಡಿ ಹಾವಿನ ಮೇಲೆ ಕುಳಿತ ಮಹಿಳೆ ಸಾವು

    ಲಕ್ನೋ: ಫೋನ್‍ನಲ್ಲಿ ಮಾತನಾಡುತ್ತಾ ಬೆಡ್ ಮೇಲಿದ್ದ ಜೋಡಿ ಹಾವುಗಳ ಮೇಲೆ ಕುಳಿತ ಮಹಿಳೆ ಸಾವನ್ನಪ್ಪಿರುವ ಭಯಾನಕ ಘಟನೆ ಗೋರಖ್‍ಪುರದ ರಿಯಾನವ್ ಗ್ರಾಮದಲ್ಲಿ ನಡೆದಿದೆ.

    ಥೈಲ್ಯಾಂಡ್‍ನಲ್ಲಿ ಕೆಲಸ ಮಾಡುತ್ತಿರುವ ಜೈ ಸಿಂಗ್ ಯಾದವ್ ಅವರ ಪತ್ನಿ ಗೀತಾ ತನ್ನ ಪತಿಯೊಂದಿಗೆ ಫೋನ್‍ನಲ್ಲಿ ಮಾತನಾಡುತ್ತಿದ್ದರು. ಜೋಡಿ ಹಾವುಗಳು ಮನೆಯೊಳಗೆ ಪ್ರವೇಶಿಸಿ ತನ್ನ ಬೆಡ್ ರೂಂನ ಬೆಡ್ ಕವರ್ ಒಳಗಡೆ ಸೇರಿಕೊಂಡಿರುವುದನ್ನು ಅರಿಯದ ಗೀತಾ ತನ್ನ ಗಂಡನೊಂದಿಗೆ ಫೋನ್‍ನಲ್ಲಿ ಮಾತನಾಡುತ್ತಾ ತನ್ನ ರೂಂಗೆ ತೆರಳಿ ಬೆಡ್ ಮೇಲೆ ಕುಳಿತಿದ್ದಾರೆ.

    ತಕ್ಷಣವೇ ಗೀತಾ ಅವರನ್ನು ಕಚ್ಚಿದೆ. ಹಾವು ಕಚ್ಚುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಗೀತಾ ಪ್ರಜ್ಞಾಹೀನರಾಗಿ ರೂಂನಲ್ಲಿ ಬಿದ್ದಿದ್ದಾರೆ.

    ಮನೆಯಲ್ಲಿದ್ದ ಕುಟುಂಬದ ಸದಸ್ಯರು ತಕ್ಷಣವೇ ಗೀತಾರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ವೇಳೆ ಗೀತಾ ಸಾವನ್ನಪ್ಪಿದ್ದಾರೆ. ಕುಟುಂಬದ ಸದಸ್ಯರು ಹಾಗೂ ಪಕ್ಕದ ಮನೆಯವರು ಗೀತಾ ಅವರ ಬೆಡ್ ರೂಂಗೆ ತೆರಳಿ ಗಮನಿಸಿದಾಗ ಬೆಡ್ ಮೇಲೆ ಜೋಡಿ ಹಾವುಗಳು ಇರುವುದನ್ನು ನೋಡಿದ್ದಾರೆ. ಕೋಪಗೊಂಡ ಸ್ಥಳೀಯರು ಹಾವುಗಳನ್ನು ಹೊಡೆದು ಸಾಯಿಸಿದ್ದಾರೆ.

    ಸಾಧಾರಣವಾಗಿ ಹಾವುಗಳು ಮಿಲನ ಕ್ರಿಯೆ ನಡೆಸುತ್ತಿದ್ದಾಗ ಮಾತ್ರ ಒಟ್ಟಾಗಿ ಕಾಣುತ್ತದೆ. ಮಿಲನ ಕ್ರಿಯೆ ನಡೆಸುತ್ತಿದ್ದಾಗ ಗೀತಾ ಕುಳಿತ್ತಿದ್ದರಿಂದ ಸಿಟ್ಟಿಗೆದ್ದು ಹಾವುಗಳು ಕಚ್ಚಿರಬಹುದು ಎಂದು ಪಶುವೈದ್ಯಕೀಯ ತಜ್ಞರು ಶಂಕಿಸಿದ್ದಾರೆ.

  • ಓಂ, ಗೋವು ಪದ ಕೇಳಿದರೆ ಕೆಲವರು ಅಘಾತಗೊಳ್ಳುತ್ತಾರೆ: ಮೋದಿ

    ಓಂ, ಗೋವು ಪದ ಕೇಳಿದರೆ ಕೆಲವರು ಅಘಾತಗೊಳ್ಳುತ್ತಾರೆ: ಮೋದಿ

    ಲಕ್ನೋ: ‘ಹಸು’ ಮತ್ತು ‘ಓಂ’ ನಂತಹ ಪದಗಳನ್ನು ಕೇಳಿದ ಕೆಲವರು ಆಘಾತಕ್ಕೊಳಗಾಗುತ್ತಾರೆ. ಇದು ನಮ್ಮ ದೇಶದಲ್ಲಿ ದುರದೃಷ್ಟಕರ ವಿಷಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

    ಇಂದು ಉತ್ತರ ಪ್ರದೇಶದ ಮಥುರಾದಲ್ಲಿ ನಡೆದ ಜಾನುವಾರುಗಳಿಗೆ ರೋಗ ತಡೆಗಟ್ಟುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಗೋವು ಮತ್ತು ಓಂ ಪದಗಳನ್ನು ಕೇಳಿದರೆ ಕೆಲವರಿಗೆ ಆಗುವುದಿಲ್ಲ. ಈ ಪದಗಳನ್ನು ಕೇಳಿದರೆ ಅವರು ನಮ್ಮ ದೇಶ 16ನೇ ಶತಮಾನಕ್ಕೆ ಹೋಗಿದೆ ಎಂದು ಭಾವಿಸುತ್ತಾರೆ ಎಂದು ಹೇಳಿದ್ದಾರೆ.

    ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮವನ್ನು (ಎನ್‍ಎಡಿಸಿಪಿ) ಮತ್ತು ರೈತರಿಗಾಗಿ ಇತರ ಯೋಜನೆಗಳೊಂದಿಗೆ ಪ್ರಾರಂಭಿಸಿದ ಮೋದಿ ಅವರು, ನಮ್ಮ ದೇಶದ ಗ್ರಾಮೀಣ ಅರ್ಥಿಕತೆಯ ಬಗ್ಗೆ ಪ್ರಾಣಿಗಳಿಲ್ಲದೆ ಮಾತನಾಡಲು ಸಾಧ್ಯವೆ. ಪರಿಸರ ಮತ್ತು ಪ್ರಾಣಿಗಳು ಭಾರತದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾವು ಪ್ರಕೃತಿ ಮತ್ತು ಆರ್ಥಿಕ ಪ್ರಗತಿಯ ಬಗ್ಗೆ ಸಮತೋಲನವನ್ನು ಕಾಪಾಡಿಕೊಂಡು ಸಬಲೀಕೃತ ಭಾರತದತ್ತ ಸಾಗಬೇಕು ಎಂದು ಹೇಳಿದರು.

    ನಮ್ಮ ಕೇಂದ್ರ ಸರ್ಕಾರ 2024ರ ಅವಧಿಯಲ್ಲಿ 12,652 ಕೋಟಿ ರೂ. ವೆಚ್ಚದಲ್ಲಿ ಒಂದು ಯೋಜನೆಯನ್ನು ಮಾಡಿದ್ದು, ಇದರ ಪ್ರಕಾರ ಕಾಲುಬಾಯಿ ರೋಗಕ್ಕೆ ತುತ್ತಾಗುವ ದನ, ಎಮ್ಮೆ, ಕುರಿ, ಮೇಕೆ ಮತ್ತು ಹಂದಿಗಳು ಸೇರಿದಂತೆ 500 ದಶಲಕ್ಷಕ್ಕೂ ಹೆಚ್ಚು ಪ್ರಾಣಿಗಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಭಾಗಿಯಾಗಿದ್ದರು.

    ಈ ಯೋಜನೆಯಲ್ಲಿ ಬ್ರೂಸೆಲೋಸಿಸ್ ಕಾಯಿಲೆಯ ವಿರುದ್ಧ ಹಸುಗಳಿಗೆ ಲಸಿಕೆ ಹಾಕುವ ಗುರಿಯನ್ನು ಕೂಡ ಹೊಂದಿದ್ದೇವೆ ಎಂದು ಮೋದಿ ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಪಿಎಂ ಮೋದಿ ಅವರು ರೈತರು, ಪಶುವೈದ್ಯಕೀಯ ವೈದ್ಯರು ಮತ್ತು ಪ್ಲಾಸ್ಟಿಕ್ ತ್ಯಾಜ್ಯ ವಿಭಜಕರೊಂದಿಗೆ ವೈಯಕ್ತಿಕವಾಗಿ ಸಂವಹನ ನಡೆಸಿದರು. ಇದರ ಜೊತೆಗೆ ಅವರು ಕಸದಿಂದ ಪ್ಲಾಸ್ಟಿಕ್ ಅನ್ನು ಬೇರ್ಪಡಿಸುವ ಮಹಿಳೆಯರೊಂದಿಗೆ ಕುಳಿತು ಅದರ ಮಹತ್ವವನ್ನು ವಿವರಿಸಿದರು.

  • ಮಹಿಳೆಯರೊಂದಿಗೆ ಕಸದಿಂದ ಪ್ಲಾಸ್ಟಿಕ್ ಹೆಕ್ಕಿದ ಪ್ರಧಾನಿ

    ಮಹಿಳೆಯರೊಂದಿಗೆ ಕಸದಿಂದ ಪ್ಲಾಸ್ಟಿಕ್ ಹೆಕ್ಕಿದ ಪ್ರಧಾನಿ

    ಮಥುರಾ: ಪ್ಲಾಸ್ಟಿಕ್ ಬಳಕೆಯ ವಿರುದ್ಧ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ಲಾಸ್ಟಿಕ್ ಬೇರ್ಪಡಿಸುವ ಮಹಿಳೆಯರೊಂದಿಗೆ ಕುಳಿತು ಕಸದಿಂದ ಪ್ಲಾಸ್ಟಿಕ್ ವಸ್ತುಗಳನ್ನು ಬೇರ್ಪಡಿಸಿದರು.

    ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಇಂದು ಪ್ರಧಾನಿಗಳು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಥುರಾದಲ್ಲಿ ಕಸದಿಂದ ಪ್ಲಾಸ್ಟಿಕ್ ಬೇರ್ಪಡಿಸುವ ಮಹಿಳೆಯರನ್ನು ಕಂಡು ಅವರಿಗೆ ಸಹಾಯವನ್ನು ಮಾಡಿದ್ದಾರೆ. ಆ ಮೂಲಕ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ (ಸಿಂಗಲ್ ಯೂಸ್ ಪ್ಲಾಸ್ಟಿಕ್) ಬಳಕೆಯನ್ನು ನಿಲ್ಲಿಸಲು ಸಂದೇಶ ನೀಡಿದ್ದಾರೆ.

    ಮಹಿಳೆಯರೊಂದಿಗೆ ನೆಲದ ಮೇಲೆ ಕುಳಿತು ಪ್ರಧಾನಿ ನರೇಂದ್ರ ಮೋದಿ ಅವರು ಪ್ಲಾಸ್ಟಿಕ್ ವಸ್ತುಗಳನ್ನು ಕಸದಿಂದ ಬೇರ್ಪಡಿಸುತ್ತಿರುವ ಫೋಟೋ ಕಾಣಬಹುದಾಗಿದೆ. ಸುಮಾರು 25ಕ್ಕೂ ಹೆಚ್ಚು ಮಹಿಳೆಯರು ಈ ಸಂದರ್ಭದಲ್ಲಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಮೋದಿ ಅವರು ತಮ್ಮನ್ನು ಭೇಟಿ ಮಾಡಿದ್ದ ಮಹಿಳೆಯರಿಂದ ಅವರು ಎದುರಿಸುವಂತಹ ಸಮಸ್ಯೆಗಳು ಸೇರಿದಂತೆ ಇತರೇ ಅಂಶಗಳ ಬಗ್ಗೆ ಪ್ರಶ್ನಿಸಿ ಮಾಹಿತಿ ಪಡೆದಿದ್ದಾರೆ. ಆ ಬಳಿಕ 25 ಮಹಿಳೆಯರಿಗೆ ಪುರಸ್ಕಾರ ನೀಡಿದ್ದಾರೆ.

    ಸೋಮವಾರವಷ್ಟೇ ದೇಶದಲ್ಲಿ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳನ್ನು ಬ್ಯಾನ್ ಮಾಡುವ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದ್ದರು. ಅಲ್ಲದೇ ಪ್ಲಾಸ್ಟಿಕ್ ಬದಲಾಗಿ ಪರಿಸರ ಸ್ನೇಹಿ ಬದಲಿ ಉತ್ಪನ್ನಗಳ ಅಭಿವೃದ್ಧಿಗೆ ಪರಿಣಾಮ ಕ್ರಮಕೈಗೊಳ್ಳು ಬದ್ಧರಾಗಿದ್ದೇವೆ ಎಂದು ಹೇಳಿದ್ದರು.

    73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ಲಾಸ್ಟಿಕ್ ವಿರುದ್ಧ ಸಮರಕ್ಕೆ ಕರೆ ನೀಡಿದ್ರು. ಪ್ಲಾಸ್ಟಿಕ್ ಬದಲು ಬಟ್ಟೆಯಿಂದ ತಯಾರಿಸಿದ ಬ್ಯಾಗ್ ಬಳಕೆ ಮಾಡುವ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದ್ದರು. ಇದೀಗ ಈ ಆಶಯದ ಭಾಗವಾಗಿ ಅಕ್ಟೋಬರ್ 2 ರಿಂದ 6 ಬಗೆಯ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧ ಮಾಡಿದ್ದಾರೆ. ಈಗಾಗಲೇ ವಿಶ್ವದ 127 ರಾಷ್ಟ್ರಗಳು ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಿವೆ.