Tag: uttar pradesh

  • ಉನ್ನಾವೋ ಕೇಸ್ – ಶಾಸಕ ರೇಪ್‍ಗೈದ 1 ವಾರದ ನಂತ್ರ ಅಪ್ರಾಪ್ತೆಯ ಮೇಲೆ ಮೂವರಿಂದ ಗ್ಯಾಂಗ್‍ರೇಪ್

    ಉನ್ನಾವೋ ಕೇಸ್ – ಶಾಸಕ ರೇಪ್‍ಗೈದ 1 ವಾರದ ನಂತ್ರ ಅಪ್ರಾಪ್ತೆಯ ಮೇಲೆ ಮೂವರಿಂದ ಗ್ಯಾಂಗ್‍ರೇಪ್

    – ಸಿಬಿಐನಿಂದ ದೆಹಲಿ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಕೆ
    – ಅ.10 ರಿಂದ ವಿಚಾರಣೆ ಆರಂಭ

    ಲಕ್ನೋ: ಉನ್ನಾವೋ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರಿಯ ತನಿಖಾ ದಳ (ಸಿಬಿಐ) ಗುರುವಾರ ದೆಹಲಿ ಜಿಲ್ಲಾ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದು, ಮೂವರು ಸಂತ್ರಸ್ತೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದೆ.

    ಈ ಚಾರ್ಜ್‍ಶೀಟ್‍ನಲ್ಲಿ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರು ಅತ್ಯಾಚಾರ ಮಾಡಿದ ಒಂದು ವಾರದ ನಂತರ ಅದೇ ಸಂತ್ರಸ್ತೆಯನ್ನು ಇನ್ನೂ ಮೂವರು ಉನ್ನವೋದಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಉಲ್ಲೇಖಿಸಿದೆ.

    ಸಂತ್ರಸ್ತೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಮೂವರನ್ನು ನರೇಶ್ ತಿವಾರಿ, ಬ್ರಿಜೇಶ್ ಯಾದವ್ ಸಿಂಗ್ ಮತ್ತು ಶುಭಮ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಶುಭಂ ಸಿಂಗ್ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಅವರ ಸಹವರ್ತಿ ಶಶಿ ಸಿಂಗ್ ಅವರ ಪುತ್ರನಾಗಿದ್ದು, ಕುಲದೀಪ್ ಯಾದವ್ ಅವರೇ ಇದನ್ನು ಮಾಡಿಸಿದ್ದಾರೆ ಎಂದು ಆರೋಪಿಸಿದೆ.

    ಸಧ್ಯ ಈ ಮೂವರು ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿದ್ದು, ಈ ಮೂವರು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಜೂನ್ 11 2017 ರಂದು ಉನ್ನಾವೊದಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಈ ಪ್ರಕರಣದಲ್ಲಿ ಶಶಿ ಸಿಂಗ್ ಕೂಡ ಸಹ ಆರೋಪಿಯಾಗಿದ್ದಾನೆ. ಶಶಿ ಸಿಂಗ್ ಆಮಿಷವೊಡ್ಡಿ ಕುಲದೀಪ್ ಸಿಂಗ್ ನಿವಾಸಕ್ಕೆ ಸಂತ್ರಸ್ತೆಯನ್ನು ಕರೆ ತಂದ ಬಳಿಕ ಜೂನ್ 4 2017 ರಂದು ಸಂತ್ರಸ್ತೆಯನ್ನು ಕುಲದೀಪ್ ಸಿಂಗ್ ಅತ್ಯಾಚಾರ ಮಾಡಿದ್ದಾರೆ ಎಂದು ಉಲ್ಲೇಖಿಸಿದೆ.

    ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲು ಅ.10ರಂದು ದಿನ ನಿಗದಿ ಮಾಡಿದೆ. ಇನ್ನು 6 ದಿನ ಸಿಕ್ಕಿದ ಹಿನ್ನೆಲೆಯಲ್ಲಿ ಸಿಬಿಐ ನ್ಯಾಯಾಲಯಕ್ಕೆ ಮತ್ತಷ್ಟು ಸಾಕ್ಷ್ಯಗಳನ್ನು ಸಲ್ಲಿಸುವ ಸಾಧ್ಯತೆಯಿದೆ. ರೇಪ್ ಕೇಸ್ ದೇಶಾದ್ಯಂತ ಸುದ್ದಿಯಾದ ಬಳಿಕ ಬಿಜೆಪಿ ಕುಲ್‍ದೀಪ್ ಸಿಂಗ್ ಸೆಂಗಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.

  • ಗಾಂಧಿ ಪುತ್ಥಳಿ ಮುಂದೆ ಗಳಗಳನೆ ಅತ್ತ ಎಸ್‍ಪಿ ನಾಯಕ ಟ್ರೋಲ್- ವಿಡಿಯೋ ವೈರಲ್

    ಗಾಂಧಿ ಪುತ್ಥಳಿ ಮುಂದೆ ಗಳಗಳನೆ ಅತ್ತ ಎಸ್‍ಪಿ ನಾಯಕ ಟ್ರೋಲ್- ವಿಡಿಯೋ ವೈರಲ್

    ಲಕ್ನೋ: ಬುಧವಾರ ಸಮಾಜವಾದಿ ಪಕ್ಷದ ನಾಯಕ ಫಿರೋಜ್ ಖಾನ್ ಮಹಾತ್ಮ ಗಾಂಧೀಜಿಯನ್ನು ನೆನೆದು ಅವರ ಪುತ್ಥಳಿ ಮುಂದೆ ಗಳಗಳನೆ ಅತ್ತ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದ್ಭುತ ನಟನೆ ಅವರಿಗೆ ಆಸ್ಕರ್ ಕೊಡಿ ಎಂದು  ನೆಟ್ಟಿಗರು ಫಿರೋಜ್ ಖಾನ್ ಕಾಲೆಳೆದಿದ್ದಾರೆ.

    ಉತ್ತರಪ್ರದೇಶದ ಸಂಬಲ್ ನಗರದ ಫವಾರ ಚೌಕದಲ್ಲಿರುವ ಗಾಂಧೀಜಿ ಪ್ರತಿಮೆ ಬಳಿ ಫಿರೋಜ್ ಖಾನ್ ಕಣ್ಣೀರು ಹಾಕಿದ್ದಾರೆ. ಇತರೆ ಎಸ್‍ಪಿ ನಾಯಕರು ಅಲ್ಲಿ ಕ್ಯಾಮೆರಾ ಕಂಡ ಕೂಡಲೇ ಅಳಲು ಆರಂಭಿಸಿ ನಾಯಕನಿಗೆ ಸಾಥ್ ಕೊಟ್ಟರು. ಮಹಾತ್ಮ ಗಾಂಧೀಜಿಯ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲು ಫಿರೋಜ್ ಖಾನ್ ಅವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಫಿರೋಜ್ ಖಾನ್ ನಮ್ಮ ಸಮಾಜದ ವಾಸ್ತವ ಸ್ಥಿತಿಯನ್ನು ಗಾಂಧೀಜಿ ಪುತ್ಥಳಿ ಮುಂದೆ ಹೇಳುತ್ತ ಗಳಗಳನೆ ಕಣ್ಣೀರು ಹಾಕಿದ್ದರು. ಫಿರೋಜ್ ಖಾನ್ ಕಣ್ಣೀರು ಹಾಕುತ್ತಿದ್ದಂತೆ ಅವರ ಜೊತೆಗಿದ್ದ ಬೆಂಬಲಿಗರು ಕೂಡ ಅತ್ತು, ಗೋಗರಿದಿದ್ದಾರೆ.

    ಈ ದೇಶಕ್ಕೆ ನೀವು ಸ್ವಾತಂತ್ರ ತಂದುಕೊಟ್ಟು ನಮ್ಮನ್ನೆಲ್ಲ ಬಿಟ್ಟು ಬಾಪು ನಿವೇಕೆ ದೂರ ಹೋದಿರಿ? ನಮ್ಮನ್ನೆಲ್ಲಾ ಅನಾಥರಾಗಿ ಬಿಟ್ಟು ಹೋದಿರಿ. ನಿಮ್ಮ ಎಲ್ಲ ಆದರ್ಶಗಳು ಸಮಯ ಕಳೆದಂತೆ ಮರೆಯಾಗುತ್ತಿದೆ. ಇದನ್ನೆಲ್ಲ ನೋಡಲು ನಾವು ಇನ್ನೂ ಇರಬೇಕಾ ಎಂದು ಹೇಳಿದ ಫಿರೋಜ್ ಖಾನ್ ಜೋರಾಗಿ ಅಳಲು ಆರಂಭಿಸಿದರು. ಈ ವೇಳೆ ಅವರನ್ನು ನೋಡಿದ ಬೆಂಬಲಿಗರು ಕೂಡ ಬಿಕ್ಕಿ ಬಿಕ್ಕಿ ಅತ್ತರು.

    https://twitter.com/AsYouNtWish/status/1179437716221509632

    ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ಫಿರೋಜ್ ಖಾನ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಎಂಥ ಅಭಿನಯ, ಇವರಿಗೆ ಆಸ್ಕರ್ ಪ್ರಶಸ್ತಿ ಕೊಡಿ ಎಂದು ಕಮೆಂಟ್ ಮಾಡಿ ಟೀಕಿಸುತ್ತಿದ್ದಾರೆ.

    ಈ ಬಾರಿಯ ಆಸ್ಕರ್ ಪ್ರಶಸ್ತಿ ಫಿರೋಜ್ ಖಾನ್ ಅವರ ಕೈಸೇರುವುದರಲ್ಲಿ ಅನುಮಾನವೇ ಇಲ್ಲ. ಯಾವ ಸೀರಿಯಲ್ ನೋಡಿ ಬಂದು ಫಿರೋಜ್ ಖಾನ್ ಕಣ್ಣೀರು ಹಾಕಿದರೋ ಗೊತ್ತಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಕೆಲವರು ಈ ಬಾರಿ ಬಿಗ್ ಬಾಸ್ ಮನೆಗೆ ಹೋಗೋ ಪ್ಲಾನ್ ಇದ್ರೆ ಹೇಳಿ, ಸುಮ್ಮನೆ ನಾಟಕ ಯಾಕೆ ಮಾಡುತ್ತೀರಾ? ಎಂದು ಕಿಡಿಕಾರಿದ್ದರೆ, ಇನ್ನೂ ಕೆಲವರು ಕೊನೆಗೂ ನಮ್ಮ ದೇಶಕ್ಕೆ ಒಂದೊಳ್ಳೆ ಪ್ರತಿಭಾವಂತ ನಟ ಸಿಕ್ಕಿದನಲ್ಲ ಅಂತ ಖುಷಿಯಾಯ್ತು ಎಂದೆಲ್ಲ ಸಖತ್ ಟ್ರೋಲ್ ಮಾಡಿ ಗೇಲಿ ಮಾಡುತ್ತಿದ್ದಾರೆ.

  • ಜಿಲ್ಲಾಧಿಕಾರಿಯ ಕಿರುಕುಳ, ಜಾತಿ ನಿಂದನೆಗೆ ಬೇಸತ್ತು ಅಧಿಕಾರಿ ರಾಜೀನಾಮೆ

    ಜಿಲ್ಲಾಧಿಕಾರಿಯ ಕಿರುಕುಳ, ಜಾತಿ ನಿಂದನೆಗೆ ಬೇಸತ್ತು ಅಧಿಕಾರಿ ರಾಜೀನಾಮೆ

    ಲಕ್ನೋ: ಜಿಲ್ಲಾಧಿಕಾರಿ ಜಾತಿ ನಿಂದನೆಯ ಮಾತುಗಳನ್ನಾಡಿ, ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಈ ಕುರಿತು ಜಿಲ್ಲಾಧಿಕಾರಿ ಭವಾನಿ ಸಿಂಗ್ ಖಂಗ್ರಾಟ್ ಪ್ರತಿಕ್ರಿಯಿಸಿ, ನಾನು ಅಧಿಕಾರಿಯೊಂದಿಗೆ ಕೆಟ್ಟದಾಗಿ ವರ್ತಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಅಧಿಕಾರಿಗಳ ಮಾಹಿತಿ ಪ್ರಕಾರ ಕಿರುಕುಳ ಹಾಗೂ ಜಾತಿ ನಿಂದನೆಯೇ ರಾಜೀನಾಮೆ ನೀಡಲು ಕಾರಣ ಎಂದು ತಿಳಿದು ಬಂದಿದೆ.

    ಯುಪಿ ರಾಜ್ಯ ರಸ್ತೆ ಸಾರಿಗೆ ನಿಗಮದ(ಯುಪಿಎಸ್‍ಆರ್ ಟಿಸಿ) ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕ ಬಿಂದು ಪ್ರಸಾದ್ ಅವರು ಸೋಮವಾರ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ನಾನು ದಲಿತ ಹೀಗಾಗಿ ಖಂಗ್ರಾಟ್ ಅವರು ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಅಲ್ಲದೆ ನನ್ನ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

    ಜಿಲ್ಲಾಧಿಕಾರಿಗಳು ಬಲ್ಲಿಯಾ ಜೈಲಿನಲ್ಲಿನ ಖೈದಿಗಳನ್ನು ಸ್ಥಳಾಂತರಿಸಲು 15 ಬಸ್‍ಗಳು ಬೇಕೆಂದು ಬೇಡಿಕೆ ಇಟ್ಟಿದ್ದರು ಎಂದು ಯುಪಿಎಸ್‍ಆರ್‍ಟಿಸಿ ಎಂಡಿಗೆ ಸಲ್ಲಿಸಿದ ಪತ್ರದಲ್ಲಿ ಪ್ರಸಾದ್ ಆರೋಪಿಸಿದ್ದಾರೆ.

    ಎಲ್ಲ ಬಸ್‍ಗಳು ಜೈಲಿಗೆ ತಲುಪಿದ ನಂತರ ಪ್ರಸಾದ್ ಕಚೇರಿಗೆ ಮರಳಿದರು. ಆಗ ಜಿಲ್ಲಾಧಿಕಾರಿಗಳು ಪ್ರಸಾದ್ ಅವರ ಕಾಲರ್ ಹಿಡಿದು ಎಳೆದರು. ಮತ್ತೆ ಅವರನ್ನು ಜಿಲ್ಲೆಯ ಜೈಲಿಗೆ ಕರೆದೊಯ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಯುಪಿಎಸ್‍ಆರ್ ಟಿಸಿ ಎಂಡಿ ರಾಜಶೇಖರ್ ಈ ಕುರಿತು ಪ್ರತಿಕ್ರಿಯಿಸಿ, ಪ್ರಸಾದ್ ಅವರ ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ. ಈ ಬಗ್ಗೆ ವಾಸ್ತವಿಕ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ವರದಿ ಬಂದ ನಂತರ ಈ ಕುರಿತು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.

  • ಉತ್ತರ ಭಾರತದಲ್ಲಿ ಮೇಘಸ್ಫೋಟ – ದಾಖಲೆ ಮಳೆಗೆ ಬಿಹಾರ ತತ್ತರ

    ಉತ್ತರ ಭಾರತದಲ್ಲಿ ಮೇಘಸ್ಫೋಟ – ದಾಖಲೆ ಮಳೆಗೆ ಬಿಹಾರ ತತ್ತರ

    ಪಾಟ್ನಾ: ಕಳೆದ 4 ದಿನಗಳಿಂದ ಆರ್ಭಟಿಸುತ್ತಿರುವ ಮಳೆರಾಯ ಬಿಹಾರ, ಉತ್ತರಪ್ರದೇಶವನ್ನು ಭಾಗಶಃ ಮುಳುಗಿಸಿದ್ದಾನೆ. ಅತ್ತ ಮಹಾರಾಷ್ಟ್ರ, ತೆಲಂಗಾಣದಲ್ಲೂ ಮಳೆ ಸುರಿಯುತ್ತಿದ್ದು, ಉತ್ತರ ಭಾರತದಲ್ಲಿ ವರುಣನ ರೌದ್ರಾವತಾರ ಕಂಡು ಜನರು ಹೈರಾಣಾಗಿದ್ದಾರೆ.

    ಸಾಮಾನ್ಯವಾಗಿ ಜೂನ್ 1ರಿಂದ ಪ್ರಾರಂಭವಾಗುವ ಮುಂಗಾರು ಸೆಪ್ಟೆಂಬರ್ 30ಕ್ಕೆ ಮುಗಿಯಬೇಕು. ಆದರೆ ಈ ಬಾರಿ ಸೆಪ್ಟೆಂಬರ್ ಕಳೆದರೂ ಮುಂಗಾರು ಅಬ್ಬರಿಸುವಂತಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ 29ರವರೆಗೆ 877 ಎಂಎಂನಷ್ಟು ಬರುತ್ತದೆ. ಆದರೆ ಈ ಬಾರಿ ಬರೋಬ್ಬರಿ 956.1 ಎಂಎಂನಷ್ಟು ದಾಖಲೆ ಮಳೆ ಉತ್ತರ ಭಾರತೀಯರನ್ನು ಹೈರಾಣಗಿಸಿದೆ. ಹವಾಮಾನ ಇಲಾಖೆ ಕೂಡ ಇನ್ನೂ 3-4 ದಿನ ಮಳೆ ಆಗಲಿದೆ ಎಂದು ಮುನ್ಸೂಚನೆ ಕೊಟ್ಟಿದೆ.

    ಮಳೆಯಿಂದಾಗಿ ಉತ್ತರ ಪ್ರದೇಶದಲ್ಲಿ 86 ಹಾಗೂ ಬಿಹಾರದಲ್ಲಿ 35ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿದ್ದಾರೆ. ಬಿಹಾರ ರಾಜಧಾನಿ ಪಾಟ್ನಾ ಹಾಗೂ ನೆರೆಯ ಪಾಟಲೀಪುತ್ರ ನಗರಗಳು ದ್ವೀಪಗಳಂತಾಗಿವೆ. 4 ದಿನಗಳಿಂದ ಶಾಲಾ-ಕಾಲೇಜು, ಆಸ್ಪತ್ರೆಗಳ ಐಸಿಯು ಜಲಾವೃತವಾಗಿದೆ. ಮನೆಗೆ ನೀರಿ ನುಗ್ಗಿರುವ ಕಾರಣಕ್ಕೆ ಪ್ರಸಿದ್ಧ ಗಾಯಕಿ ಶ್ರದ್ಧಾ ಸಿಂಗ್ ಮತ್ತು ಕುಟುಂಬ ಪಾಟ್ನಾದಲ್ಲಿರುವ ಮನೆಯಲ್ಲಿ ಸಿಲುಕಿ ಕೊಂಡಿದ್ದರು. ಈ ಬಗ್ಗೆ ಶ್ರದ್ಧಾ ಸಿಂಗ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ಬಳಿಕ ಎನ್‍ಡಿಆರ್‍ಎಫ್ ತಂಡ ಶ್ರದ್ಧಾ ಸಿಂಗ್ ಕುಟುಂಬಸ್ಥರನ್ನು ರಕ್ಷಣೆ ಮಾಡಿದೆ. ಜೊತೆಗೆ ಪಾಟ್ನಾದ ರಾಜೇಂದ್ರ ನಗರದ ನಿವಾಸದಲ್ಲಿ ಸಿಲುಕೊಂಡಿದ್ದ ಡಿಸಿಎಂ ಸುಶೀಲ್ ಮೋದಿ ಮತ್ತವರ ಕುಟುಂಬಸ್ಥರನ್ನು ಕೂಡ ಎನ್‍ಡಿಆರ್‍ಎಫ್ ತಂಡ ರಕ್ಷಿಸಿದೆ.

    ಪ್ರವಾಹ ಹಿನ್ನೆಲೆ ಬಿಹಾರ ಸಿಎಂ ನಿತೀಶ್ ಕುಮಾರ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಪ್ರಧಾನಿ ಮೋದಿ ಕೂಡ ಸಿಎಂ ನಿತೀಶ್ ಜೊತೆ ಮಾತನಾಡಿ, ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಕೇಂದ್ರದಿಂದ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾರೆ. ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಸೂಚಿಸಿದ್ದಾರೆ.

    ಉತ್ತರದಲ್ಲಿ ಆಬ್ಬರಿಸುತ್ತಿರುವ ವರುಣದೇವ 102 ವರ್ಷಗಳ ತನ್ನ ದಾಖಲೆಯನ್ನೇ ಸರಿಗಟ್ಟಿ, ಮತ್ತೊಂದು ಹೊಸ ದಾಖಲೆ ಸೃಷ್ಟಿಸುವತ್ತ ದಾಪುಗಾಲು ಇಟ್ಟಿದ್ದಾನೆ. ಆದರೆ ವರುಣದ ಮುನಿಸಿಗೆ ಸಿಲುಕಿದ ಜನರು ಮಾತ್ರ ಸಾಕಪ್ಪ ಸಾಕು, ನಿಲ್ಲಿಸು ನಿನ್ನ ಪ್ರತಾಪ ಎನ್ನುತ್ತಿದ್ದಾರೆ.

     

  • ಕ್ಷಮಿಸು ಅಮ್ಮ, ನಾನು ಲವ್ ಮಾಡಿಲ್ಲ ಎಂದು ನೇಣಿಗೆ ಶರಣಾದ ಯುವಕ

    ಕ್ಷಮಿಸು ಅಮ್ಮ, ನಾನು ಲವ್ ಮಾಡಿಲ್ಲ ಎಂದು ನೇಣಿಗೆ ಶರಣಾದ ಯುವಕ

    ಲಕ್ನೋ: ಕ್ಷಮಿಸು ಅಮ್ಮ, ನಾನು ಹೋಗುತ್ತಿದ್ದೇನೆ. ನಾನು ಯಾವುದೇ ಯುವತಿಯನ್ನು ಲವ್ ಮಾಡಿಲ್ಲ ಎಂದು ಯುವಕನೊಬ್ಬ ಡೆತ್ ನೋಟ್ ಬರೆದು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಲಕ್ನೋದ ಜನಕಿಪುರಂನಲ್ಲಿ ಈ ಘಟನೆ ನಡೆದಿದ್ದು, ಭಾನು ಪ್ರತಾಪ್ ಸಿಂಗ್(19) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾನು ಯಾವುದೇ ಯುವತಿಯನ್ನು ಪ್ರೀತಿಸಿಲ್ಲ. ನನ್ನನ್ನು ಕ್ಷಮಿಸು ಅಮ್ಮ, ನಾನು ಹೋಗುತ್ತಿದ್ದೇನೆ ಎಂದು ಡೆಡ್ ನೋಟ್ ಬರೆದಿಟ್ಟು ಪ್ರತಾಪ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ:ಡೇಟಿಂಗ್ ಆ್ಯಪ್ ಮೂಲಕ ಗೆಳೆಯನ ಹುಡುಕಾಟದಲ್ಲಿದ್ದಾರೆ 83ರ ವೃದ್ಧೆ

    ಪ್ರತಾಪ್ ಸೀತಾಪುರ ರಸ್ತೆಯ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದನು. ಆದರೆ ಕೆಲದಿನಗಳಿಂದ ಪ್ರತಾಪ್ ಯಾವಾಗಲೂ ಮಂಕಾಗಿ ಇರುತ್ತಿದ್ದನು. ಇದನ್ನು ಗಮನಿಸಿದ ಮನೆಯವರು ಏನಾಯಿತು ಎಂದು ಪ್ರಶ್ನಿಸಿದರು ಆತ ಏನು ಉತ್ತರ ನೀಡುತ್ತಿರಲಿಲ್ಲ. ಹೀಗಾಗಿ ಮನೆಯವರು ಹೆಚ್ಚು ಒತ್ತಾಯ ಮಾಡಿ ಕೇಳಿ ತೊಂದರೆ ಕೋಡೋದು ಬೇಡ ಎಂದು ಸುಮ್ಮನಾಗಿದ್ದರು.

    ಶುಕ್ರವಾರ ಪ್ರತಾಪ್ ಕಾಲೇಜಿಗೆ ಹೋಗದೆ ಮನೆಯಲ್ಲಿಯೇ ಇದ್ದ. ಮಧ್ಯಾಹ್ನವಾದರೂ ತನ್ನ ಕೊಠಡಿಯಿಂದ ಹೊರಬಾರದ ಕಾರಣ ಕುಟುಂಬಸ್ಥರು ಆತಂಕಕ್ಕೀಡಾದರು. ಎಷ್ಟೇ ಬಾಗಿಲು ಬಡಿದರೂ ಪ್ರತಾಪ್ ತೆರೆಯದಿದ್ದಾಗ ಚಿಂತೆಗೀಡಾದರು. ಮೊಬೈಲ್‍ಗೆ ಕರೆ ಮಾಡಿದರೂ ಫೋನ್ ಎತ್ತುತ್ತಿರಲಿಲ್ಲ. ಆಗ ಮನೆಯವರು ಬಾಗಿಲನ್ನು ಮುರಿದು ಕೊಠಡಿಯೊಳಗೆ ಹೋದಾಗ ಪ್ರತಾಪ್ ಮೃತದೇಹ ಕಂಡು ಆಘಾತಗೊಂಡಿದ್ದಾರೆ.

    ಮನನೊಂದಿದ್ದ ಪ್ರತಾಪ್ ಕೊಠಡಿಯಲ್ಲಿದ್ದ ಫ್ಯಾನಿಗೆ ನೇಣು ಹಾಕಿಕೊಂಡು ಜೀವ ಬಿಟ್ಟಿದ್ದನು. ಮರಣೋತ್ತರ ಪರೀಕ್ಷೆಯಲ್ಲೂ ಸಹ ಯುವಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಪೊಲೀಸರಿಗೆ ಡೆತ್ ನೋಟ್ ಪತ್ತೆಯಾಗಿದ್ದು, ನನ್ನನ್ನು ಕ್ಷಮಿಸು ಅಮ್ಮ, ನಾನು ಹೋಗುತ್ತಿದ್ದೇನೆ, ನಾನು ಯಾವ ಹುಡುಗಿಯನ್ನು ಪ್ರೀತಿ ಮಾಡಿಲ್ಲ ಎಂದು ಬರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರತಾಪ್ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

  • ಹಾಲಿವುಡ್ ಸಿನಿಮಾದಿಂದ ಪ್ರೇರಣೆಗೊಂಡು ಏಕಾಂಗಿಯಾಗಿ 3 ಬ್ಯಾಂಕ್ ದೋಚಿದ

    ಹಾಲಿವುಡ್ ಸಿನಿಮಾದಿಂದ ಪ್ರೇರಣೆಗೊಂಡು ಏಕಾಂಗಿಯಾಗಿ 3 ಬ್ಯಾಂಕ್ ದೋಚಿದ

    ಡೆಹ್ರಾಡೂನ್: ಹಾಲಿವುಡ್ ಸಿನಿಮಾದಿಂದ ಪ್ರೇರಿತಗೊಂಡು ಉತ್ತರಾಖಂಡ್‍ನ ಮೂರು ವಿಭಿನ್ನ ಬ್ಯಾಂಕ್‍ಗಳಲ್ಲಿ ಕಳ್ಳತನ ಮಾಡಿದ್ದ ಉತ್ತರ ಪ್ರದೇಶದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧನಕ್ಕೆ ಒಳಗಾದ ವ್ಯಕ್ತಿಯನ್ನು ಉತ್ತರ ಪ್ರದೇಶದ ಬಿಜ್ನೋರ್ ಮೂಲದ ವಿಕುಲ್ ರತಿ (31) ಎಂದು ಗುರುತಿಸಲಾಗಿದೆ. ಈತ ಯೂಟ್ಯೂಬ್‍ನಲ್ಲಿ ಹಾಲಿವುಡ್ ಸಿನಿಮಾ ನೋಡಿ ಆ ಸಿನಿಮಾಗಳ ರೀತಿಯಲ್ಲೇ ಕಳ್ಳತನ ಮಾಡಲು ಹೋಗಿ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ದಿಲೀಪ್ ಸಿಂಗ್ ಕುನ್ವಾರ್ ವಿಕುಲ್ ರತಿ ಯೂಟ್ಯೂಬ್‍ನಲ್ಲಿ ಹಾಲಿವುಡ್ ಸಿನಿಮಾ ನೋಡಿ ಅದೇ ರೀತಿಯಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದಾನೆ. ಅವನ ಯೋಜನೆಯಂತೆ ಬ್ಯಾಂಕ್ ಬೀಗ ಮುರಿದು ಒಳಗೆ ಬಂದಿದ್ದಾನೆ. ಆದರೆ ಹಣ ಇಟ್ಟಿದ್ದ ಸ್ಟ್ರಾಂಗ್ ರೂಮ್ ಬೀಗ ಮುರಿಯಲು ಅವನ ಕೈಯಲ್ಲಿ ಆಗಿರಲಿಲ್ಲ. ನಂತರ ಆತ ಹಣ ದೋಚಲಾಗದೆ ಬ್ಯಾಂಕ್‍ನಲ್ಲಿ ಇದ್ದ ಎರಡು ರೈಫಲ್ ಗಳನ್ನು ಎತ್ತಿಕೊಂಡು ಹೋಗಿದ್ದಾನೆ ಎಂದು ಹೇಳಿದ್ದಾರೆ.

    ಆ ಎರಡು ರೈಫಲ್‍ಗಳು ಬ್ಯಾಂಕಿನ ಭದ್ರತಾ ಸಿಬ್ಬಂದಿಯಾಗಿದ್ದು ಸಿಸಿ ಕ್ಯಾಮೆರಾದಲ್ಲಿ ಈ ಎಲ್ಲಾ ದೃಶ್ಯವು ಸೆರೆಯಾಗಿದೆ. ಈ ಆಧಾರದ ಮೇಲೆ ತನಿಖೆ ನಡೆಸಿದಾಗ ಆರೋಪಿ ಇರುವ ಜಾಗ ಗೊತ್ತಾಗಿದೆ. ಆಗ ನಜೀಬಾಬಾದ್ ಪ್ರದೇಶದಲ್ಲಿ ಇದ್ದ ಆರೋಪಿ ರತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 2 ರೈಫಲ್ ಮತ್ತು ಅವನ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಆರೋಪಿ ರತಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ಮಾಡಿದ್ದಾರೆ ಈ ವೇಳೆ ರತಿ ಅವನ ಸ್ವಗ್ರಾಮವಾದ ಬಿಜ್ನೋರ್ ನಲ್ಲಿ ಇದಕ್ಕೂ ಮುಂಚೆ ಎರಡು ಬ್ಯಾಂಕ್‍ಗಳನ್ನು ಕಳ್ಳತನ ಮಾಡಿದ್ದೆ. ಅದೇ ರೀತಿ ಮಾಡಲು ಈ ಸಲ ಪ್ರಯತ್ನಿಸಿ ವಿಫಲನಾದೆ ಎಂದು ಒಪ್ಪಿಕೊಂಡಿದ್ದಾನೆ. ಇದರ ಜೊತೆಗೆ ಹಾಲಿವುಡ್ ಸಿನಿಮಾ ನೋಡಿ ಆ ರೀತಿಯಲ್ಲೇ ನಾನು ಕಳ್ಳತನ ಮಾಡುತ್ತಿದ್ದೆ ಎಂದು ಹೇಳಿದ್ದಾನೆ.

    ಪೊಲೀಸರು ಹೇಳುವ ಪ್ರಕಾರ, ವಿಕುಲ್ ರತಿ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದು, ಅವನಿಗೆ 20 ಎಕ್ರೆ ಜಮೀನು ಇದೆ. ಆದರೆ ಖಾಸಗಿಯಾಗಿ 20 ಲಕ್ಷ ಸಾಲ ಮಾಡಿದ್ದ ರತಿ ಅದನ್ನು ತೀರಿಸಲು ಬ್ಯಾಂಕ್ ದರೋಡೆ ಮಾಡುತ್ತಿದ್ದ. ಸೆಪ್ಟಂಬರ್ 11 ಮತ್ತು 15 ರಂದು ತನ್ನದೇ ಊರಿನ ಎರಡು ಬ್ಯಾಂಕ್‍ಗಳನ್ನು ಕಳ್ಳತನ ಮಾಡಿದ್ದ ಎಂದು ಹೇಳಿದ್ದಾರೆ.

  • ದೇಶದ ಆರ್ಥಿಕತೆ ದುರ್ಬಲಗೊಳ್ಳಲು ಮೊಘಲರು, ಬ್ರಿಟಿಷರು ಕಾರಣ – ಯೋಗಿ ಆದಿತ್ಯನಾಥ್

    ದೇಶದ ಆರ್ಥಿಕತೆ ದುರ್ಬಲಗೊಳ್ಳಲು ಮೊಘಲರು, ಬ್ರಿಟಿಷರು ಕಾರಣ – ಯೋಗಿ ಆದಿತ್ಯನಾಥ್

    ಮುಂಬೈ: ಭಾರತದ ಆರ್ಥಿಕತೆ ದುರ್ಬಲಗೊಳ್ಳಲು ಮೊಘಲರು ಹಾಗೂ ಬ್ರಿಟಿಷರೇ ಕಾರಣ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.

    ಮುಂಬೈನಲ್ಲಿ ನಡೆದ ವಿಶ್ವ ಹಿಂದೂ ಆರ್ಥಿಕ ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊಘಲರ ಆಗಮನಕ್ಕೂ ಮುನ್ನ ಭಾರತವು ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿತ್ತು. ಆದರೆ ಬ್ರಿಟಿಷರು ದೇಶವನ್ನು ತೊರೆಯುವ ಹೊತ್ತಿಗೆ ಆರ್ಥಿಕತೆಯ ವೈಭವದ ನೆರಳು ಮಾತ್ರ ಉಳಿದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಮೊಘಲರು ಭಾರತದ ಮೇಲೆ ದಾಳಿ ಮಾಡುವುದಕ್ಕೂ ಮೊದಲು ದೇಶವು ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿತ್ತು. ಅಲ್ಲದೆ ಮೊಘಲರು ಭಾರತಕ್ಕೆ ಬರುವ ಹೊತ್ತಿಗೆ ಭಾರತವು ವಿಶ್ವದ ಆರ್ಥಿಕತೆಯ ಮೂರನೇ ಒಂದು ಭಾಗದಷ್ಟು ಪಾಲನ್ನು ಹೊಂದಿತ್ತು ಎಂದು ವಿವರಿಸಿದ್ದಾರೆ.

    ಮೊಘಲರ ಯುಗದಲ್ಲಿ ಭಾರತವು ಶೇ.36ಕ್ಕಿಂತ ಹೆಚ್ಚಿನ ಪಾಲನ್ನು ಹೊಂದುವ ಮೂಲಕ ವಿಶ್ವದ ಆರ್ಥಿಕತೆಯಲ್ಲಿ ಅತಿದೊಡ್ಡ ದೇಶವಾಗಿತ್ತು. ಮೊಘಲರ ಯುಗ ಅಂತ್ಯವಾಗಿ ಬ್ರಿಟಿಷರು ಭಾರತಕ್ಕೆ ಆಗಮಿಸುವ ಹೊತ್ತಿಗೆ ಭಾರತದ ಪಾಲು ಶೇ.20ಕ್ಕೆ ಇಳಿದಿತ್ತು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ತಿಳಿಸಿದ್ದಾರೆ.

    ದೇಶದಲ್ಲಿ ಬ್ರಿಟಿಷರ 200 ವರ್ಷಗಳ ಆಳ್ವಿಕೆಯಲ್ಲಿ, ಭಾರತೀಯ ಆರ್ಥಿಕತೆಯನ್ನು ದುರ್ಬಲಗೊಳಿಸಿದರು. ಬ್ರಿಟಿಷರು ಭಾರತ ಬಿಟ್ಟು ತೊಲಗುವ ಹೊತ್ತಿಗೆ ಕೇವಲ ಶೇ.4ಕ್ಕೆ ಇಳಿದಿತ್ತು ಎಂದು ಒತ್ತಿ ಹೇಳಿದರು.

    ಮುಂಬರುವ ವರ್ಷಗಳಲ್ಲಿ ಉತ್ತರ ಪ್ರದೇಶವನ್ನು 1 ಟ್ರಿಲಿಯನ್ ಆರ್ಥಿಕತೆಯ ರಾಜ್ಯವನ್ನಾಗಿ ಮಾಡಲಾಗುವುದು ಎಂದು ಈ ತಿಂಗಳ ಆರಂಭದಲ್ಲಿ ಯೋಗಿ ಆದಿತ್ಯನಾಥ್ ಹೇಳಿದ್ದರು.

    ನಾವು ಅದ್ಭುತ ಗುರಿ ಹೊಂದಿರುವ ಅಧಿಕಾರಿಗಳು ಹಾಗೂ ಮಂತ್ರಿಗಳನ್ನು ಹೊಂದಿದ್ದೇವೆ. ಅಭಿವೃದ್ಧಿ ಯೋಜನೆಗಳು ರಾಜ್ಯದ ಜನರನ್ನು ತಲುಪುತ್ತಿವೆಯೆ ಎಂಬುದನ್ನು ಅರಿಯಲು ಸಂವಾದಗಳನ್ನು ನಡೆಸುತ್ತಿದ್ದೇವೆ. ನಮ್ಮ ಗುರಿ ಉತ್ತರ ಪ್ರದೇಶವನ್ನು 1 ಟ್ರಿಲಿಯನ್ ಆರ್ಥಿಕತೆಯ ರಾಜ್ಯವನ್ನಾಗಿಸುವುದಾಗಿದೆ ಎಂದು ಒತ್ತಿ ಹೇಳಿದರು.

  • 18 ಸಾವಿರ ದಂಡ ಕಟ್ಟುವ ಚಿಂತೆಯಲ್ಲಿ ಪ್ರಾಣಬಿಟ್ಟ ಆಟೋ ಚಾಲಕ

    18 ಸಾವಿರ ದಂಡ ಕಟ್ಟುವ ಚಿಂತೆಯಲ್ಲಿ ಪ್ರಾಣಬಿಟ್ಟ ಆಟೋ ಚಾಲಕ

    ಲಕ್ನೋ: ಸಂಚಾರಿ ನಿಯಮ ಉಲ್ಲಂಘನೆಗೆ ಪೊಲೀಸರು ಹಾಕಿದ್ದ 18 ಸಾವಿರ ದಂಡವನ್ನು ಕಟ್ಟುವ ಚಿಂತೆಯಿಂದ ಅನಾರೋಗ್ಯಕ್ಕೀಡಾಗಿ ಆಟೋ ಚಾಲಕರೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಜೌನ್ಪುರದಲ್ಲಿ ನಡೆದಿದೆ.

    ಕಲಿಚಾಬಾದಿನ ನಿವಾಸಿ ಗಣೇಶ್ ಅಗರ್ವಾಲ್ ಮೃತ ದುರ್ದೈವಿ. ಗಣೇಶ್ ಆಟೋ ಓಡಿಸಿಕೊಂದು ಜೀವನ ನಡೆಸುತ್ತಿದ್ದರು. ಕಳೆದ ಆಗಸ್ಟ್ 31ರಂದು ಜೌನ್ಪುರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದಕ್ಕೆ ಪೊಲೀಸರು ಗಣೇಶ್ ಅವರಿಗೆ 18 ಸಾವಿರ ರೂಪಾಯಿ ದಂಡ ಹಾಕಿದ್ದರು. ಈ ಭಾರೀ ಮೊತ್ತದ ದಂಡವನ್ನು ಹೇಗೆ ಕಟ್ಟುವುದು ಎಂಬ ಚಿಂತೆಯಲ್ಲಿಯೇ ಗಣೇಶ್ ಅವರು ಅನಾರೋಗ್ಯಕ್ಕಿಡಾಗಿದ್ದರು.

    ಕೆಲದಿನಗಳಿಂದ ಗಣೇಶ್ ಅವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಅವರ ಸ್ಥಿತಿ ಗಂಭೀರವಾದ ಬಳಿಕ ವಾರಣಾಸಿಯ ಖಾಸಗಿ ಆಸ್ಪತ್ರೆಗೆ ಅವರನ್ನು ಸೇರಿಸಲಾಯಿತು. ಆದರೆ ಚಿಕಿತ್ಸೆಗೆ ಗಣೇಶ್ ಅವರು ಸ್ಪಂದಿಸದ ಕಾರಣಕ್ಕೆ ಸೆಪ್ಟೆಂಬರ್ 23ರಂದು ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಗಣೇಶ್ ಅವರ ಸಾವಿಗೆ ಸಂಚಾರಿ ಪೊಲೀಸರು ವಿಧಿಸಿದ ಭಾರೀ ದಂಡವೇ ಕಾರಣ. ಹೇಗೆ ಇಷ್ಟು ಮೆತ್ತದ ದಂಡ ಕಟ್ಟಬೇಕು ಎಂದು ತಿಳಿಯದೆ ಗಣೇಶ್ ಯಾವಾಗಲೂ ಚಿಂತೆಯಲ್ಲಿಯೇ ಇರುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಈ ವಿಚಾರ ಜಿಲ್ಲಾಧಿಕಾರಿವರೆಗೂ ತಲುಪಿದಾಗ, ಡಿಸಿ ಅರವಿಂದ್ ಮಲ್ಲಪ್ಪ ಅವರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ(ಎಆರ್‌ಟಿಒ) ಉದಯ್‍ವೀರ್ ಸಿಂಗ್ ಬಳಿ ಈ ಬಗ್ಗೆ ಮಾಹಿತಿ ಕೇಳಿದರು. ಅವರು ಜೌನ್ಪುರದ ಸಂಚಾರಿ ಪೊಲೀಸರನ್ನು ವಿಚಾರಿಸಿದರು. ಆಗ ಪೊಲೀಸರು, ಆಗಸ್ಟ್ 31ರಂದು ಗಣೇಶ್ ಅವರನ್ನು ತಡೆದು ಪರಿಶೀಲನೆ ನಡೆಸಿದ್ದೆವು. ಆಗ ಅವರು ಆಟೋ ಪರ್ಮಿಟ್ ಹೊಂದಿರಲಿಲ್ಲ. ಹಾಗೆ ಮಾಲಿನ್ಯ ಪ್ರಮಾಣ ಪತ್ರ ಹಾಗೂ ಚಾಲನಾ ಪ್ರಮಾಣಪತ್ರ ಕೂಡ ಅವರ ಬಳಿಯಿರಲಿಲ್ಲ. ಇದಲ್ಲದೆ ಇನ್ನೂ ಮೂರು ತಪ್ಪುಗಳನ್ನು ಮಾಡಿ ಸಂಚಾರಿ ನಿಯಮ ಉಲ್ಲಂಘಿಸಿದಕ್ಕೆ ಎಲ್ಲಾ ಸೇರಿ ಅವರಿಗೆ 18 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು ಎಂದು ತಿಳಿಸಿದ್ದಾರೆ.

    ಹಿರಿಯ ಅಧಿಕಾರಿಗಳು ಈ ಬಗ್ಗೆ ಮಾತನಾಡಿ, ಇದರಲ್ಲಿ ಪೊಲೀಸರ ತಪ್ಪಿಲ್ಲ. ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಮೇಲೆ ದಂಡದ ಪ್ರಮಾಣ ಹೆಚ್ಚಾಗಿದೆ. ಪೊಲೀಸರು ತಮ್ಮ ಕೆಲಸ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

  • ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ವಿದ್ಯಾರ್ಥಿನಿ ಅರೆಸ್ಟ್

    ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ವಿದ್ಯಾರ್ಥಿನಿ ಅರೆಸ್ಟ್

    ಲಕ್ನೋ: ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಅವರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಸ್ನೇಹಿತರ ಜೊತೆಗೂಡಿ ಅತ್ಯಾಚಾರ ಆರೋಪ ಮಾಡಿ ಚಿನ್ಮಯಾನಂದ ಅವರ ಬಳಿ 5 ಕೋಟಿ ರೂ. ಸುಲಿಗೆಗೆ ಯತ್ನಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದ್ದು ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಇಂದು ಬೆಳಗ್ಗೆ ಆಕೆಯನ್ನು ವಿಶೇಷ ತನಿಖಾ ದಳ(ಎಸ್‍ಐಟಿ) ಪೊಲೀಸರು ಬಂಧಿಸಿದ್ದಾರೆ.

    ಮಂಗಳವಾರ ಆಕೆ ಬಂಧನದಿಂದ ರಕ್ಷಣೆ ಕೋರಿ ನ್ಯಾಯಾಲಯಕ್ಕೆ ಮನವಿ ಕೇಳಿದ್ದಳು. ಇದನ್ನು ಗುರುವಾರ ವಿಚಾರಣೆ ಮಾಡುವುದಾಗಿ ಕೋರ್ಟ್ ಒಪ್ಪಿಕೊಂಡಿತ್ತು. ಆದರೆ ಇಂದು ಎಸ್‍ಐಟಿ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿದ್ದು, ಚಪ್ಪಲಿಯನ್ನು ಹಾಕಿಕೊಳ್ಳಲು ಬಿಡದೆ ಬಲವಂತವಾಗಿ ನಮ್ಮ ಮಗಳನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಆಕೆಯ ಕುಟುಂಬದವರು ಆರೋಪ ಮಾಡಿದ್ದಾರೆ.

    ಮನೆಯಿಂದ ಆಕೆಯ ಬಂಧಿಸಿದ ಎಸ್‍ಐಟಿ ಪೊಲೀಸರು, ನಂತರ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿ ನಂತರ ಆಕೆಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ವಿಚಾರವಾಗಿ ಬಂಧಿತರಾಗಿರುವ ಚಿನ್ಮಯಾನಂದ ಅವರು ಬಂಧಿಸಿದ ದಿನದಿಂದ ಅನಾರೋಗ್ಯಕ್ಕೆ ಒಳಗಾಗಿದ್ದು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಂಗಳವಾರ ಈ ವಿಚಾರದ ಬಗ್ಗೆ ಮಾತನಾಡಿದ್ದ ಚಿನ್ಮಯಾನಂದ ಅವರ ವಕೀಲ ಓಂ ಸಿಂಗ್ ಆಕೆ ಅವಳ ಸ್ನೇಹಿತರ ಜೊತೆ ಸೇರಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಚಿನ್ಮಯಾನಂದ ಅವರಿಂದ ದುಡ್ಡು ಸುಲಿಗೆ ಮಾಡವ ಪ್ರಯತ್ನ ಮಾಡಿದ್ದಾಳೆ. ಆದರೆ ಆಕೆ ಇನ್ನೂ ಯಾಕೆ ಅರೆಸ್ಟ್ ಆಗಿಲ್ಲ ಎಂದು ನನಗೆ ಅರ್ಥವಾಗಿಲ್ಲ. ಖಂಡಿತವಾಗಿಯೂ ಆಕೆ ಈ ವಿಚಾರದಲ್ಲಿ ಜೈಲಿಗೆ ಹೋಗುತ್ತಾಳೆ ಎಂದು ಹೇಳಿದ್ದರು.

  • ಪ್ರೇಯಸಿ ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

    ಪ್ರೇಯಸಿ ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

    ಲಕ್ನೋ: ಪ್ರೇಯಸಿ ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು 23 ವರ್ಷದ ಯುವಕನೊಬ್ಬ ಉತ್ತರ ಪ್ರದೇಶದ ಮಹಾರಾಜ್‍ಗಾಂಜ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಘಟನೆ ಶನಿವಾರ ನಡೆದಿದ್ದು, ಬಸಂತ್ಪುರ್ ಗ್ರಾಮದ ನಿವಾಸಿ ಕಿಶನ್ ಆರ್ಯ ಆತ್ಮಹತ್ಯೆ ಮಾಡಿಕೊಂಡ 23 ವರ್ಷದ ಯವಕ. ಈತ ಮಹಾರಾಜ್‍ಗಾಂಜ್‍ನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪೊಲೀಸರು ಹೇಳುವ ಪ್ರಕಾರ ಕಿಶನ್ ಮತ್ತು ಆತನ ಪ್ರೇಯಸಿ ಕೆಲ ದಿನಗಳಿಂದ ಒಂದೇ ಮನೆಯಲ್ಲಿ ವಾಸವಾಗಿದ್ದರು. ಆದರೆ 11 ದಿನಗಳ ಹಿಂದೆ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆ. ಈ ಜಗಳದಿಂದ ಮುನಿಸಿಕೊಂಡ ಯುವತಿ ಕಿಶನ್‍ನನ್ನು ಬಿಟ್ಟು ಫರೆಂಡಾ ರಸ್ತೆಯಾಲ್ಲಿರುವ ತನ್ನ ಮನೆಗೆ ಬಂದಿದ್ದಾಳೆ. ಇದಕ್ಕೆ ಕೋಪಗೊಂಡ ಕಿಶನ್ ಈ ರೀತಿ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಕಿಶನ್ ಅವರ ಕುಟುಂಬಸ್ಥರ ಪ್ರಕಾರ ಯುವತಿಯ ಮನೆಯವರು ತಮ್ಮ ಮಗನನ್ನು ಕೊಲೆ ಮಾಡಿ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದಾರೆ. ಆದರೆ ಯುವತಿಯ ಮನೆಯವರು ನಮ್ಮ ಮನೆಗೆ ಕಿಶನ್ ಶನಿವಾರ ಬಂದು ಅವನ ಜೊತೆ ತಂದಿದ್ದ ಪೆಟ್ರೋಲ್ ಸುರಿದು ಕೊಂಡು ಅವನೇ ಬೆಂಕಿ ಹಚ್ಚಿಕೊಂಡಿದ್ದಾನೆ. ತಡೆಯಲು ಹೋದ ಯುವತಿಯ ತಂದೆಗೂ ಗಾಯವಾಗಿದ್ದು, ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

    ಎರಡು ವರ್ಷದ ಹಿಂದೆ ಕಿಶನ್ ಈ ಯುವತಿಯ ಜೊತೆಯಲ್ಲಿ ಓಡಿಹೋಗಿದ್ದ. ಆದರೆ ಹುಡುಗಿ ಅಪ್ರಾಪ್ತೆಯಾದ ಕಾರಣ ಯುವತಿಯ ತಂದೆ ದೂರು ನೀಡಿದ್ದರಿಂದ ಕಿಶನ್ ಜೈಲಿಗೆ ಹೋಗಿದ್ದನು. ಜೈಲಿನಿಂದ ಹೊರಬಂದ ಕಿಶನ್ ಮತ್ತೆ ಯುವತಿಯ ಜೊತೆ ಓಡಿಹೋಗಿ ಮದುವೆ ಮಾಡಿಕೊಂಡು ಅವಳ ಜೊತೆ ವಾಸವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.