Tag: uttar pradesh

  • ಅಯೋಧ್ಯೆ ರಾಮ ಮಂದಿರದಲ್ಲಿ ವಿಶೇಷತೆ ಏನು? ಹೇಗಿರಲಿದೆ ದೇವಾಲಯ?

    ಅಯೋಧ್ಯೆ ರಾಮ ಮಂದಿರದಲ್ಲಿ ವಿಶೇಷತೆ ಏನು? ಹೇಗಿರಲಿದೆ ದೇವಾಲಯ?

    ನವದೆಹಲಿ: ಹಿಂದೂಗಳ ಪರವಾಗಿ ಅಯೋಧ್ಯೆ ತೀರ್ಪು ಬಂದಾಗಿದ್ದು, ಇನ್ನಿರುವುದು ರಾಮಮಂದಿರ ನಿರ್ಮಾಣ. ಮಂದಿರ ನಿರ್ಮಾಣಕ್ಕೆ ಈಗಾಗಲೇ ನೀಲಿನಕ್ಷೆ, ಮಾದರಿ ಸಜ್ಜಾಗಿದೆ. ಜೊತೆಗೆ ಸ್ತಂಭ-ಸ್ತೂಪಗಳು, ಗೋಪುರಗಳನ್ನು ಈಗಾಗಲೇ ಸಿದ್ಧಗೊಂಡಿವೆ.

    ರಾಮ ಜನ್ಮ ಭೂಮಿಯಿಂದ 3 ಕಿ.ಮೀ ದೂರದಲ್ಲಿರುವ ಕರಸೇವಕಪುರಂನ ಕಾರ್ಯ ಶಾಲೆಯಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಶಿಲ್ಪ ಕೆತ್ತನೆ ನಡೆಯುತ್ತಿದೆ. 1990ರಿಂದಲೇ ಕಾರ್ಯಶಾಲೆಯಲ್ಲಿ ಕೆತ್ತನೆ ಕಾರ್ಯ ಆರಂಭವಾಗಿದ್ದು, ನಿರಂತರವಾಗಿ ನಡೆದುಕೊಂಡು ಬಂದಿದೆ.

    ರಾಮಮಂದಿರ ವಿನ್ಯಾಸ ಹೇಗಿದೆ?:
    ಮಂದಿರದ ಪ್ರಮುಖ ಆಕರ್ಷಣೆಯಾಗಿ 221 ಅಡಿ ಎತ್ತರದ ಬಿಲ್ಲು-ಬಾಣ ಹಿಡಿದಿರುವ ಶ್ರೀರಾಮನ ಪ್ರತಿಮೆಯನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊಂದಿದೆ. ಒಂದು ಮಹಡಿಯ ರಾಮ ಮಂದಿರ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧವಾಗಿದೆ. ಅದರಂತೆ ನೆಲ ಮಹಡಿಯಲ್ಲಿ 106 ಕಂಬಗಳ ನಿರ್ಮಾಣವಾಗಲಿದ್ದು, ಒಂದೊಂದು ಕಂಬವು 15.6 ಅಡಿ ಉದ್ದ ಇರಲಿವೆ. ಅದೇ ರೀತಿ ಮೊದಲ ಮಹಡಿಯಲ್ಲೂ 14.6 ಅಡಿ ಉದ್ದದ 106 ಕಂಬಗಳ ನಿರ್ಮಾಣವಾಗಲಿವೆ. ಪ್ರತಿಕಂಬದಲ್ಲಿ 16 ಮೂರ್ತಿಗಳ ಕೆತ್ತನೆ ಇರಲಿದೆ.

    ನೆಲಮಹಡಿಯ ಒಂದು ಭಾಗದಲ್ಲಿ ರಾಮಲಲ್ಲಾ (ಬಾಲರಾಮ) ಮೂರ್ತಿ ನಿರ್ಮಾಣ ಹಾಗೂ ಮೊದಲ ಮಹಡಿಯಲ್ಲಿ ರಾಮನ ದರ್ಬಾರ್ ಮೂರ್ತಿ (ರಾಮ-ಸೀತೆ-ಲಕ್ಷಣ ಮತ್ತು ಹನುಮಂತ) ನಿರ್ಮಿಸಲಾಗುತ್ತದೆ. ಮೊದಲ ಮಹಡಿಯ ಎದುರಿನ ಭಾಗ 140 ಅಡಿ ಹಾಗೂ ಬಲಭಾಗ 268 ಅಡಿ ಇರಲಿದೆ. ಹಿಂದಿನ ಭಾಗದ ನೆಲ ಮಹಡಿ 18 ಅಡಿ ಮತ್ತು ಮೊದಲ ಮಹಡಿಯ ಒಂದು ಭಾಗ 15.9 ಅಡಿ ಇರಲಿದೆ. ರಾಮ ಮಂದಿರಕ್ಕೆ ಒಟ್ಟು 24 ಬಾಗಿಲುಗಳಿವೆ.

    ಮೊದಲ ಮಹಡಿಯ ಹಾಸಿನಿಂದ ಧ್ವಜಸ್ತಂಭದವರೆಗೆ 65.3 ಅಡಿ ಗೋಪುರವಿದೆ. ಮತ್ತೊಂದು ಗೋಪುರವು 128 ಅಡಿ ನೆಲದಿಂದ ಗೋಪುರದ ತುತ್ತತುದಿವರೆಗೆ ಇದೆ. ಮಂದಿರದಲ್ಲಿ 6 ಭಾಗದಲ್ಲಿ ಸಿಂಹದ್ವಾರ, ಕೋಲಿ, ನೃತ್ಯ ಮಂಟಪ, ಗರ್ಭಗುಡಿ, ರಂಗಮಂಟಪ ಇರಲಿದೆ.

    ದೇವಾಲಯದ ಜೊತೆಗೆ ವಸ್ತುಪ್ರದರ್ಶನ, ಐತಿಹಾಸಿಕ ಕೇಂದ್ರವನ್ನೂ ನಿರ್ಮಾಣ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ವಿಷ್ಣುವಿನ ದಶಾವತಾರ ಪ್ರದರ್ಶನಕ್ಕೆ ಏರ್ಪಾಟು ಮಾಡಲಾಗುತ್ತದೆ. ಈ ಅಂಶಗಳೆಲ್ಲವೂ ನೀಲಿನಲ್ಲಿದ್ದು, ಶಿಲ್ಪ ಕೆತ್ತನೆ ಕೆಲಸ ಭರದಿಂದ ಸಾಗಿದೆ.

    ಕಾರ್ಯಶಾಲೆ ಇತಿಹಾಸ:
    ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ 1989ರ ನವೆಂಬರ್ 10ರಂದೇ ನಡೆದಿತ್ತು. ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದಾಗ ಅಂದರೆ 1990ರಿಂದಲೇ ಕಾರ್ಯಶಾಲೆಯಲ್ಲಿ ಕೆತ್ತನೆ ಕಾರ್ಯ ಆರಂಭವಾಗಿತ್ತು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸದಿಂದಾಗಿ ಆರ್‍ಎಸ್‍ಎಸ್, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಕೆಲ ಸಂಘಟನೆಗಳ ನಾಯಕರ ಮೇಲೆ ಪ್ರಕರಣ ದಾಖಲಾಗಿದ್ದರೂ ಕೆತ್ತನೆ ಕಾರ್ಯ ಮುಂದುವರಿದಿತ್ತು.

    ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸಿಎಂ ಆಗಿದ್ದಾಗಲೂ ರಾಜಸ್ಥಾನ ಮತ್ತು ಗುಜರಾತ್‍ಗಳಿಂದ ಕಲ್ಲುಗಳನ್ನು ಆಮದು ಮಾಡಿಕೊಳ್ಳಲಾಗಿದ್ದು, ಕೆತ್ತನೆ ಕಾರ್ಯ ಮುಂದುವರಿದಿತ್ತು. ಆದರೆ ಇತ್ತೀಚೆಗೆ ಕಾರ್ಯಶಾಲೆಯ ಪ್ರಧಾನ ಶಿಲ್ಪಿ ನಿಧನರಾದ ಬಳಿಕ ಕಾರ್ಯಗಳು ಸ್ಥಗಿತವಾಗಿದ್ದವು. ಈಗಾಗಲೇ ಶೇ.65ರಷ್ಟು ಕಾರ್ಯವು ಪೂರ್ಣಗೊಂಡಿದೆ.

    ಈಗಾಗಲೇ ಉತ್ತರ ಹಾಗೂ ದಕ್ಷಿಣ ಭಾರತದ ಸಾವಿರಾರು ಜನರು ರಾಮ ಮಂದಿರ ನಿರ್ಮಾಣಕ್ಕೆ ಇಟ್ಟಿಗೆಗಳನ್ನು ನೀಡಿದ್ದಾರೆ. ಅವುಗಳಿಗೆ ಮೇಲೆ ಜೈ ಶ್ರೀರಾಮ್ ಎಂದು ಬರೆಯಲಾಗಿದೆ. ಈ ಮೂಲಕ ನೆಲ ಮಹಡಿಯ ನಿರ್ಮಾಣಕ್ಕೆ ಬೇಕಾದ ಕಂಬಗಳು, ಇಟ್ಟಿಗೆ ಎಲ್ಲವೂ ಈಗಲೇ ಸಿದ್ಧವಾಗಿದೆ.

  • ಟೀ ಮಾರಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾದ ವ್ಯಾಪಾರಿ

    ಟೀ ಮಾರಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾದ ವ್ಯಾಪಾರಿ

    – ಸಲಾಂ ಎಂದ ವಿವಿಎಸ್ ಲಕ್ಷ್ಮಣ್

    ಲಕ್ನೋ: ಉತ್ತರ ಪ್ರದೇಶದ ಚಹಾ ವ್ಯಾಪಾರಿಯೋಬ್ಬರು ಚಹಾ ಮಾರಾಟದಲ್ಲಿ ಬಂದ ಶೇ. 80ರಷ್ಟು ಲಾಭವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಕಾನ್ಪುರದ ಚಹಾ ವ್ಯಾಪಾರಿ ಮೊಹಮದ್ ಮೆಹಬೂಬ್ ಮಲಿಕ್(45) ಅನೇಕ ವರ್ಷಗಳಿಂದ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಸುಮಾರು 40 ಮಂದಿ ಮಕ್ಕಳಿಗೆ ಉಚಿತ ಶಿಕ್ಷಣ, ಪಠ್ಯ-ಪುಸ್ತಕ ಹಾಗೂ ಓದಲು ಬೇಕಾಗುವ ವಸ್ತುಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ. ಚಹಾ ಮಾರಾಟದಲ್ಲಿ ಸಿಗುವ ಲಾಭದಲ್ಲಿ ಶೇ.80ರಷ್ಟು ಭಾಗ ಬಡಮಕ್ಕಳ ಶಿಕ್ಷಣಕ್ಕೆ ಮಲಿಕ್ ನೀಡುತ್ತಿದ್ದಾರೆ. ಈ ಬಗ್ಗೆ ತಿಳಿದು ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಮಲಿಕ್ ಕಾರ್ಯವನ್ನು ಹೊಗಳಿ, ಎಂಥಹ ಪ್ರೇರಣೆ ಎಂದು ಬರೆದು ಟ್ವೀಟ್ ಮಾಡಿ ಮಲಿಕ್‍ಗೆ ಸಲಾಂ ಎಂದಿದ್ದಾರೆ.

    ಬಡ ಕುಟುಂಬದಲ್ಲಿ ಬೆಳೆದ ಮಲಿಕ್ ಅವರಿಗೆ ಪ್ರೌಢಶಾಲೆ ಬಳಿಕ ಓದಲು ಸಾಧ್ಯವಾಗಲಿಲ್ಲ. ಕುಟುಂಬದ ಆರ್ಥಿತ ಪರಿಸ್ಥಿತಿಯಿಂದ ಹೆಚ್ಚಿನ ಶಿಕ್ಷಣ ಪಡೆಯಲು ಆಗಲಿಲ್ಲ. ಆದ್ದರಿಂದ ಶಿಕ್ಷಣದಿಂದ ವಂಚಿತರಾಗಿ ಬಡ ಮಕ್ಕಳು ಕೆಲಸಕ್ಕೆ ಹೋಗುವುದನ್ನ ನೋಡಿದರೆ ನನಗೆ ನನ್ನ ಬಾಲ್ಯ ನೆನಪಾಗುತ್ತೆ. ನನ್ನ ರೀತಿ ಈ ಮಕ್ಕಳು ಶಿಕ್ಷಣ ಪಡೆಯಲಾಗದೆ ಕೊರಗಬಾರದು. ಹೀಗಾಗಿ ನನ್ನ ಸಂಪಾದನೆಯಲ್ಲಿ ಈ 40 ಮಕ್ಕಳಿಕೆ ಶಿಕ್ಷಣ ಕೊಡಿಸುತ್ತಿದ್ದೇನೆ. ಇದರಲ್ಲಿ ನನಗೆ ಖುಷಿ ಸಿಗುತ್ತಿದೆ ಎಂದು ಮಲಿಕ್ ತಿಳಿಸಿದ್ದಾರೆ.

    2017ರಲ್ಲಿ ‘ಮಾ ತುಜೆ ಸಲಾಂ’ ಹೆಸರಿನಲ್ಲಿ ಎನ್‍ಜಿಓ ಆರಂಭಿಸಿದೆ. ಚಹಾ ಮಾರಾಟ ಮಾಡಿ ಬರುವ ಲಾಭದ ಶೇ.80ರಷ್ಟು ಹಣವನ್ನು ನಾನು 40 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡುವ ಶಾಲೆಗೆ ಖರ್ಚು ಮಾಡುತ್ತಿದ್ದೇನೆ. ಮಕ್ಕಳಿಗಾಗಿ ತಿಂಗಳಿಗೆ ಸುಮಾರು 20 ಸಾವಿರ ಹಣ ಬೇಕಾಗುತ್ತದೆ ಎಂದು ಹೇಳಿದ್ದಾರೆ.

    ಕಾನ್ಪುರದ ಚಹಾ ವ್ಯಾಪಾರಿ ಮೊಹಮದ್ ಮೆಹಬೂಬ್ ಮಲಿಕ್ 40 ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಅವರು ಚಿಕ್ಕ ಚಹಾ ಅಂಗಡಿ ಇಟ್ಟುಕೊಂಡಿದ್ದಾರೆ. ಅದರಿಂದ ಬಂದ ಶೇ. 80ರಷ್ಟು ಲಾಭವನ್ನು ಈ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುತ್ತಾರೆ, ಎಂಥಹ ಪ್ರೇರಣೆ! ಎಂದು ಬರೆದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ ಮಲಿಕ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇತ್ತ ನೆಟ್ಟಿಗರು ಕೂಡ ಮಲಿಕ್ ಕಾರ್ಯಕ್ಕೆ ಮನ ಸೋತಿದ್ದಾರೆ.

  • ಅಯೋಧ್ಯೆಯಲ್ಲಿ ಸರ್ಪಗಾವಲು – ಇಂಟರ್‌ನೆಟ್ ಸ್ಥಗಿತ, 8 ತಾತ್ಕಾಲಿಕ ಜೈಲು ಸ್ಥಾಪನೆ

    ಅಯೋಧ್ಯೆಯಲ್ಲಿ ಸರ್ಪಗಾವಲು – ಇಂಟರ್‌ನೆಟ್ ಸ್ಥಗಿತ, 8 ತಾತ್ಕಾಲಿಕ ಜೈಲು ಸ್ಥಾಪನೆ

    – ಉತ್ತರಪ್ರದೇಶಲ್ಲಿ ಸೋಮವಾರದವರೆಗೆ ಶಾಲಾ ಕಾಲೇಜುಗಳಿಗೆ ರಜೆ
    – 4 ಸಾವಿರ ಯೋಧರ ಅರೆಸೇನಾ ಪಡೆ ನಿಯೋಜನೆ

    ಲಕ್ನೋ: ಇಂದು ಅಯೋಧ್ಯೆ ಪ್ರಕರಣದ ಸಂಬಂಧ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಮುಗಿದು ತೀರ್ಪು ನಿಗದಿ ಆದ ಬಳಿಕ ಅಯೋಧ್ಯೆಯಲ್ಲಿ ಕಂಡುಕೇಳರಿಯದ ಕಟ್ಟೆಚ್ಚರ ವಹಿಸಲಾಗಿದೆ. ಉತ್ತರಪ್ರದೇಶದ್ಯಾಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, 4 ಸಾವಿರ ಅರೆಸೇನಾ ಪಡೆ ಯೋಧರನ್ನ ನಿಯೋಜಿಸಲಾಗಿದೆ.

    ತೀರ್ಪು ಹೊರಬರುವ ಮುನ್ನವೇ ಶುಕ್ರವಾರ ಅಚ್ಚರಿಯ ರೀತಿಯಲ್ಲಿ ಸಿಜೆಐ ರಂಜನ್ ಗೋಗೋಯ್, ನ್ಯಾ. ಎಸ್ ಎ ಬೋಬ್ಡೆ, ನ್ಯಾ. ಅಶೋಕ್ ಭೂಷಣ್ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಇಲಾಖೆ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಕೈಗೊಂಡಿರುವ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

    ಅಯೋಧ್ಯೆಯಲ್ಲಿ ಸರ್ಪಗಾವಲು:

    ಅಯೋಧ್ಯೆಯಲ್ಲಿ ಬಹುಹಂತಗಳ ರಕ್ಷಣಾ ವ್ಯವಸ್ಥೆ ಮಾಡಲಾಗಿದ್ದು, ಪರಿಸ್ಥಿತಿ ಅವಲೋಕಿಸಲು ಡ್ರೋಣ್‍ಗಳ ಬಳಕೆ ಕೂಡ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಭಯೋತ್ಪಾದಕ ನಿಗ್ರಹ, ಬಾಂಬ್ ನಿಷ್ಕ್ರೀಯ ದಳ, ಕ್ಷಿಪ್ರ ಕಾರ್ಯಪಡೆಯನ್ನು ನಗರದಲ್ಲಿ ನಿಯೋಜಿಸಲಾಗಿದೆ. ತುರ್ತು ಸ್ಥಿತಿಯಲ್ಲಿ ಬಳಿಸಲು 2 ಹೆಲಿಕಾಪ್ಟರ್ ಗಳ ವ್ಯವಸ್ಥೆ ಕೂಡ ಮಾಡಿಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ಹೆಜ್ಜೆ ಹೆಜ್ಜೆಗೂ ಸೇನಾಪಡೆಗಳ ಕಾರ್ಯನಿರ್ವಹಿಸುತ್ತಿದೆ.

    ಅಷ್ಟೇ ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಪ್ರಚೋದನಕಾರಿ ಪೋಸ್ಟ್, ಸಂದೇಶ ಹರಬಾರದೆಂದು ಸಾಮಾಜಿಕ ಜಾಲತಾಣಗಳ ಮೇಲೂ ತೀವ್ರ ನಿಗಾವಹಿಸಲಾಗಿದೆ. ಹೊರ ರಾಜ್ಯಗಳಿಂದ ಬರುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಗಲಭೆಗಳಾದರೆ ಬಂಧಿತರನ್ನು ಇಡಲು ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿ 8 ತಾತ್ಕಾಲಿಕ ಜೈಲುಗಳ ನಿರ್ಮಾಣವಾಗಿದೆ.

    ಸಂಭಾವ್ಯ ಪರಿಸ್ಥಿತಿ ಎದುರಿಸಲು ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ನ. 30ರವರೆಗೆ ಅಧಿಕಾರಿಗಳ ರಜೆ ರದ್ದುಗೊಳಿಸಲಾಗಿದೆ. ಸೋಮವಾರದವರೆಗೆ ಉತ್ತರ ಪ್ರದೇಶದ ಶಾಲಾ-ಕಾಲೇಜಿಗೆ ರಜೆ ಘೋಷಣೆಯಾಗಿದ್ದು, ಧಾರ್ಮಿಕ ಸ್ಥಳದಲ್ಲಿರೋ ರೈಲ್ವೆ ನಿಲ್ದಾಣಗಳಲ್ಲಿ ಬಿಗಿಭದ್ರತೆ ಒದಗಿಸಲಾಗಿದೆ.

    ಕರ್ನಾಟಕದಲ್ಲೂ ಕಟ್ಟೆಚ್ಚರ:
    ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದು ನಡೆಯಬೇಕಿದ್ದ ಎಲ್ಲಾ ವಿವಿಗಳ ಪರೀಕ್ಷೆಗಳು ಮುಂದೂಡಲಾಗಿದೆ. ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ. ಆದರೆ ಸರ್ಕಾರಿ ಬಸ್ ಮತ್ತು ಖಾಸಗಿ ಬಸ್‍ಗಳು, ಕ್ಯಾಬ್, ಟ್ಯಾಕ್ಸಿ, ಆಟೋಗಳ ಓಡಾಟದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.

  • ಅಯೋಧ್ಯೆ ತೀರ್ಪಿಗೂ ಮುನ್ನವೇ 500 ಮಂದಿ ಅರೆಸ್ಟ್

    ಅಯೋಧ್ಯೆ ತೀರ್ಪಿಗೂ ಮುನ್ನವೇ 500 ಮಂದಿ ಅರೆಸ್ಟ್

    – 12 ಸಾವಿರ ಮಂದಿ ಮೇಲೆ ಹದ್ದಿನ ಕಣ್ಣು
    – ಪ್ರಚೋದನಕಾರಿ ಪೋಸ್ಟ್ ಪ್ರಕಟಿಸಬೇಡಿ

    ಲಕ್ನೋ: ಇಡೀ ದೇಶವೇ ಎದುರು ನೋಡುತ್ತಿರುವ ಮಹತ್ವದ ಅಯೋಧ್ಯೆ ತೀರ್ಪು ಶೀಘ್ರವೇ ಹೊರಬೀಳಲಿದ್ದು, ರಾಜ್ಯದಲ್ಲಿ ಶಾಂತಿ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ತೀರ್ಪಿಗೂ ಮುನ್ನವೇ 500 ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ 12 ಸಾವಿರ ಮಂದಿ ಮೇಲೆ ಕಣ್ಣಿಟ್ಟಿದ್ದಾರೆ.

    ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನವೆಂಬರ್ 17ರಂದು ನಿವೃತ್ತಿಹೊಂದಲಿದ್ದಾರೆ. ಅವರ ಅಧಿಕಾರಾವಧಿ ಮುಗಿಯುವ ಮುನ್ನ ಅಯೋಧ್ಯೆ ತೀರ್ಪು ಹೊರಬರಲಿದೆ. ಈ ಹಿನ್ನೆಲೆ ಯಾವುದೇ ಹಿಂಸಾಚಾರ ನಡೆಬಾರದೆಂದು ಉತ್ತರ ಪ್ರದೇಶ ಪೊಲೀಸರು ಸಾಕಷ್ಟು ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಅಯೋಧ್ಯೆ ತೀರ್ಪಿಗಾಗಿ ದೇಶಾದ್ಯಂತ ಕಟ್ಟೆಚ್ಚರ

    ಈ ಸಂಬಂಧ ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ ಒಪಿ ಸಿಂಗ್ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಯೋಧ್ಯೆ ತೀರ್ಪಿನ ಬಗ್ಗೆ ಕೋಮುಗಲಭೆ ಎಬ್ಬಿಸುವಂತಹ ಪ್ರಚೋದಕಾರಿ ಕಮೆಂಟ್‍ಗಳು, ಟ್ರೋಲ್‍ಗಳು ಹಾಗೂ ಪೋಸ್ಟ್‌ಗಳು ಹರಿದಾಡದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.

    ಈಗಾಗಲೇ ಸುಮಾರು 10 ಸಾವಿರ ಸಾಮಾಜಿಕ ವಿರೋಧಿ ಅಂಶಗಳನ್ನು ಪತ್ತೆಹಚ್ಚಿದ್ದೇವೆ. ಹಾಗೆಯೇ ಸಿಆರ್‌ಪಿಸಿ(ಕ್ರಿಮಿನಲ್ ಪ್ರೊಸಿಜರ್ ಕೋಡ್) ನಿಯಮದ ಅನುಸಾರ 450ರಿಂದ 500 ಮಂದಿಯನ್ನು ಬಂಧಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹರಿಬಿಡುವುದಿಲ್ಲ ಎಂದು 593 ಮಂದಿಯಿಂದ ಸಿಆರ್‍ಪಿಸಿ ಬಾಂಡ್ ಅಡಿಯಲ್ಲಿ ಪೊಲೀಸರು ಸಹಿ ಹಾಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಪ್ರಚೋದನಕಾರಿ ಪೋಸ್ಟ್, ಕಮೆಂಟ್ ಮಾಡುವ ಸಾಧ್ಯತೆಯಿರುವ 1,659 ಮಂದಿ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಈ ಹಿಂದೆ ಕೂಡ ಅಯೋಧ್ಯೆ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಕಮೆಂಟ್, ಪೋಸ್ಟ್ ಮಾಡಿದ 70 ಮಂದಿಯನ್ನು ಬಂಧಿಸಲಾಗಿತ್ತು ಎಂದರು.

    ಅಯೋಧ್ಯೆ ಸೇರಿ ಹಲವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದೇವೆ. ಒಂದು ವೇಳೆ ಅಗತ್ಯವಿದ್ದರೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ, ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸುವ ಅಧಿಕಾರವಿದೆ. ಆದರೆ ನಾವು ಪರಿಸ್ಥಿತಿಯನ್ನು ಈ ರೀತಿ ನಿಷೇಧಗಳನ್ನು ಒಡ್ಡಿ ನಿಯಂತ್ರಿಸುವ ಬದಲು ಜನರು ಗುಂಪು, ಗುಂಪಾಗಿ ನಿಂತು ಅಯೋಧ್ಯೆ ತೀರ್ಪಿನ ಬಗ್ಗೆ ಚರ್ಚೆ ನಡೆಸುವುದು ಹಾಗೂ ಎಲ್ಲೆಡೆ ಪ್ರಚೋದನಕಾರಿ ಹೇಳಿಕೆಗಳನ್ನು ಹರಡುವುದನ್ನು ನಿಲ್ಲಿಸುವುದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.

    ಈಗಾಗಲೇ ಅಯೋಧ್ಯೆ ನಗರದಲ್ಲಿ 40 ಪ್ಯಾರಾಮಿಲಿಟರಿ ತಂಡ ಕಾರ್ಯನಿರ್ವಹಿಸುತ್ತಿದೆ. ಇನ್ನೂ 70 ತಂಡದ ಅವಶ್ಯಕತೆಯಿದೆ, ಈ ಪ್ಯಾರಾಮಿಲಿಟರಿ ತಂಡಗಳು ಕೂಡ ಶೀಘ್ರದಲ್ಲೇ ನಗರಕ್ಕೆ ಬರಲಿದೆ.

    ಮುಂದಿನ ವಾರ ಅಯೋಧ್ಯೆಯಲ್ಲಿ ಸಾಲು ಸಾಲಾಗಿ ಹಬ್ಬಗಳು ನಡೆಯಲಿವೆ. ನ.10 ರಂದು ಈದ್-ಇ-ಮಿಲಾದ್ ಆಚರಿಸಲಾಗುತ್ತದೆ. ನ. 11ರಿಂದ 13ರವರೆಗೆ ಕಾರ್ತಿಕ ಪೂರ್ಣಿಮೆ ಮೇಳ ನಡೆಯುತ್ತದೆ. ಈ ಆಚರಣೆಗಳು ಶಾಂತಿಯುತವಾಗಿ ನೆರವೇರಬೇಕು. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

  • ಕ್ರಿಕೆಟ್ ನೋಡಲು ಲಕ್ನೋಗೆ ಬಂದು ರೂಮ್ ಸಿಗದೆ ಪರದಾಡಿದ ಅಫ್ಘಾನ್ ಕ್ರೀಡಾಭಿಮಾನಿ

    ಕ್ರಿಕೆಟ್ ನೋಡಲು ಲಕ್ನೋಗೆ ಬಂದು ರೂಮ್ ಸಿಗದೆ ಪರದಾಡಿದ ಅಫ್ಘಾನ್ ಕ್ರೀಡಾಭಿಮಾನಿ

    ಲಕ್ನೋ: ಕ್ರಿಕೆಟ್ ನೋಡಲು ಲಕ್ನೋಗೆ ಬಂದ ಅಫ್ಘಾನಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬರು ಉಳಿದುಕೊಳ್ಳಲು ಹೋಟೆಲ್ ರೂಮ್ ಸಿಗದೆ ಪರದಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಲಕ್ನೋದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯನ್ನು ವೀಕ್ಷಿಸಲು ಅಫ್ಘಾನಿಸ್ತಾದಿಂದ ಶೇರ್ ಖಾನ್ ಬಂದಿದ್ದಾರೆ. ಇವರ ಎತ್ತರ 8 ಅಡಿ 2 ಇಂಚು ಇರುವ ಕಾರಣ ಅವರಿಗೆ ಹೋಟೆಲಿನವರು ರೂಮ್ ನೀಡಿರಲಿಲ್ಲ.

    ಕ್ರಿಕೆಟ್ ನೋಡಲು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದು ಹಲವಾರು ಹೋಟೆಲ್‍ಗೆ ತೆರಳಿ ರೂಮ್ ಕೇಳಿದ್ದಾರೆ. ಆದರೆ ಅವರ ಎತ್ತರ ನೋಡಿ ಯಾವ ಹೋಟೆಲ್ ಮಾಲೀಕನು ಉಳಿದುಕೊಳ್ಳಲು ರೂಮ್ ನೀಡಿಲ್ಲ. ಇದರಿಂದ ಬೇಸತ್ತ ಶೇರ್ ಖಾನ್ ನೆರವು ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಶೇರ್ ಖಾನ್ ನೆರೆವಿಗೆ ಬಂದ ಪೊಲೀಸರು ನಂತರ ನಾಕಾ ಪ್ರದೇಶದಲ್ಲಿ ರೂಮ್ ಮಾಡಿಕೊಟ್ಟು ತಂಗಲು ವ್ಯವಸ್ಥೆ ಮಾಡಿದ್ದಾರೆ.

    ಈ ವೇಳೆ ಈ ಹೋಟೆಲ್‍ನಲ್ಲಿ ಎಂಟು ಆಡಿ ಎತ್ತರದ ಮನುಷ್ಯ ಬಂದಿದ್ದಾನೆ ಎಂದು ತಿಳಿದು ಹೋಟೆಲ್‍ಗೆ ಜನರು ತಂಡ ತಂಡವಾಗಿ ಬಂದು ಅವರನ್ನು ನೋಡಿಕೊಂಡು ಹೋಗಿದ್ದಾರೆ. ಒಂದು ರಾತ್ರಿ ಅಲ್ಲೇ ತಂಗಿದ್ದ ಶೇರ್ ಖಾನ್ ಅನ್ನು ನೋಡಲು ಬೆಳಗ್ಗೆ ಸಮಯದಲ್ಲಿ ಸುಮಾರು 200 ಜನ ಹೋಟೆಲ್ ಬಳಿ ಬಂದಿದ್ದರು. ಹೀಗೆ ಜನ ಬಂದಿದ್ದರಿಂದ ನಮಗೆ ಬಹಳ ಕಷ್ಟವಾಯಿತು ಎಂದು ಹೋಟೆಲ್ ಮಾಲೀಕ ರಾನು ಹೇಳಿದ್ದಾರೆ.

    ಹೋಟೆಲ್ ಬಳಿ ಶೇರ್ ಖಾನ್ ನೋಡಲು ಜನ ಬರುತ್ತಿದ್ದಾರೆ ಎಂದು ತಿಳಿದ ಪೊಲೀಸರು ತಕ್ಷಣ ಹೋಟೆಲ್ ಬಳಿ ಬಂದು ಅವರನ್ನು ಕರೆದುಕೊಂಡು ಹೋಗಿ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ಪಂದ್ಯ ನಡೆಯುತ್ತಿದ್ದ ಎಕಾನಾ ಮೈದಾನಕ್ಕೆ ಬಿಟ್ಟು ಬಂದಿದ್ದಾರೆ. ಶೇನ್ ಖಾನ್ ನಾನು ಇನ್ನೂ ನಾಲ್ಕೈದು ದಿನ ಭಾರತದಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ.

  • ಕಚೇರಿಯಲ್ಲೂ ಹೆಲ್ಮೆಟ್ ಕಡ್ಡಾಯ – ಸರ್ಕಾರಿ ನೌಕರರ ಫೋಟೋ ವೈರಲ್

    ಕಚೇರಿಯಲ್ಲೂ ಹೆಲ್ಮೆಟ್ ಕಡ್ಡಾಯ – ಸರ್ಕಾರಿ ನೌಕರರ ಫೋಟೋ ವೈರಲ್

    ಲಕ್ನೋ: ಉತ್ತರ ಪ್ರದೇಶದ ಬಾಂಡಾದಲ್ಲಿನ ವಿದ್ಯುತ್ ವಿಭಾಗದ ನೌಕರರು ತಮ್ಮ ಕಚೇರಿ ಕಟ್ಟಡದಲ್ಲೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಕುಳಿತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

    ದೇಶದಲ್ಲಿ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ. ಆದರೆ ಈ ಕಚೇರಿಯಲ್ಲಿ ಮೇಲ್ಛಾವಣಿಯಿಂದ ಉದುರುವ ಸಿಮೆಂಟ್‌ನಿಂದ ತಲೆಯನ್ನು ಸುರಕ್ಷಿತವಾಗಿ ಇಟ್ಟಿಕೊಳ್ಳಲು ವಿದ್ಯುತ್ ವಿಭಾಗದ ನೌಕರರು ಕಚೇರಿಯೊಳಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುತ್ತಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಅಲ್ಲಿನ ಅಧಿಕಾರಿಯೊಬ್ಬರು, ಕಚೇರಿಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಇದನ್ನು ದುರಸ್ತಿಗೊಳಿಸಿ ಎಂದು ಮನವಿ ಮಾಡಿದ್ದರೂ ಈ ಬಗ್ಗೆ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಮೇಲ್ಛಾವಣಿಯಿಂದ ಸಿಮೆಂಟ್ ತುಣುಕುಗಳು ಉದುರಿ ಒಂದಷ್ಟು ಸಿಬ್ಬಂದಿ ತಲೆಗೆ ಗಂಭೀರ ಗಾಯಗಳಾಗಿವೆ. ಇದಾದ ನಂತರದಲ್ಲಿ ಎಚ್ಚೆತ್ತುಕೊಂಡಿರುವ ನೌಕರರು ಕಚೇರಿಯಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ಕಚೇರಿಯಲ್ಲಿ ದಾಖಲೆಯನ್ನು ಇಟ್ಟುಕೊಳ್ಳಲು ಕೂಡ ಸ್ಥಳವಿಲ್ಲ. ಒಂದು ಬೀರಿನ ವ್ಯವಸ್ಥೆಯಿಲ್ಲ. ಫೈಲ್‌ಗಳು ಮಳೆ ಬಂದು ನೆನೆಯಬಾರದು ಎಂದು ಸಿಬ್ಬಂದಿ ರಟ್ಟನ್ನು ಸುತ್ತಿ ಇಟ್ಟುಹೋಗುತ್ತಿದ್ದಾರೆ. ಕಟ್ಟಡ ಯಾವಾಗ ಬೀಳುತ್ತೆ ಎಂಬುದು ಗೊತ್ತಿಲ್ಲ. ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಅಲ್ಲಿನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

    ನಾನೂ ಎರಡು ವರ್ಷದ ಹಿಂದೆ ಈ ಕಚೇರಿಗೆ ವರ್ಗಾವಣೆ ಆಗಿ ಬಂದ ದಿನದಿಂದಲೂ ಈ ಕಚೇರಿಯಲ್ಲಿ ಇದೇ ಪರಿಸ್ಥಿತಿ ಇದೆ. ಈ ವಿಚಾರದ ಬಗ್ಗೆ ಮೇಲಿನ ಅಧಿಕಾರಿಗಳಿಗೆ ನಾವು ನಿರಂತರವಾಗಿ ದೂರು ನೀಡುತ್ತಿದ್ದೇವೆ. ಆದರೆ ಅಧಿಕಾರಿಗಳು ಈ ವಿಚಾರದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿನ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

  • ಪತ್ನಿಯನ್ನು ಕೊಡಲಿಯಿಂದ ಕೊಂದ – ರೊಚ್ಚಿಗೆದ್ದು ಪತಿಯನ್ನು ಥಳಿಸಿ ಹತ್ಯೆಗೈದ ಗ್ರಾಮಸ್ಥರು

    ಪತ್ನಿಯನ್ನು ಕೊಡಲಿಯಿಂದ ಕೊಂದ – ರೊಚ್ಚಿಗೆದ್ದು ಪತಿಯನ್ನು ಥಳಿಸಿ ಹತ್ಯೆಗೈದ ಗ್ರಾಮಸ್ಥರು

    ಲಕ್ನೋ: ಪತ್ನಿಯನ್ನು ಕೊಂದು ಪರಾರಿಯಾಗುತ್ತಿದ್ದಾಗ 40 ವರ್ಷದ ಪತಿಯನ್ನು ಹಿಡಿದು ಸ್ಥಳೀಯರು ಥಳಿಸಿದ್ದು ವ್ಯಕ್ತಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ.

    ತನ್ನ ಅಳಿಯಂದಿರ ಮನೆಯಲ್ಲಿದ್ದ ಪತ್ನಿ ಅಫ್ಸಾರಿ(35) ಅವರನ್ನು ಮನೆಗೆ ಕರೆದೊಯ್ಯಲು ನಜೀರ್ ಖುರೇಷಿ ಘಾಜಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಿಮೌರ್ ಗ್ರಾಮಕ್ಕೆ ಆಗಮಿಸಿದ್ದ. ಈ ವೇಳೆ ಸಣ್ಣ ಪುಟ್ಟ ವಿಷಯಕ್ಕೆ ವಾಗ್ವಾದ ನಡೆದಿದೆ. ಆಗ ಪತಿ ಕೊಡಲಿಯಿಂದ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಎಸ್‍ಪಿ ರಮೇಶ್ ಮಾಹಿತಿ ನೀಡಿದ್ದಾರೆ.

    ವಾಗ್ವಾದದ ವೇಳೆ ಖುರೇಷಿ ತನ್ನ ಹೆಂಡತಿಯನ್ನು ಕೊಡಲಿಯಿಂದ ಹಲ್ಲೆ ಮಾಡಿ, ಸ್ಥಳದಲ್ಲೇ ಕೊಂದು ಹಾಕಿದ್ದಾನೆ. ಅಫ್ಸಾರಿಯನ್ನು ಬಿಡಿಸಿಕೊಳ್ಳುವ ವೇಳೆ ಅವರ ತಾಯಿ ಹಾಗೂ ಸಹೋದರಿಗೂ ಸಹ ಗಾಯಗಳಾಗಿದ್ದವು. ಈ ವೇಳೆ ಸ್ಥಳೀಯರು ಎಚ್ಚರಿಕೆ ನೀಡಿದರೂ ಸಹ ಆತ ಬಿಟ್ಟಿಲ್ಲ. ಕೊಲೆ ಮಾಡಿ ಪಲಾಯನ ಮಾಡುತ್ತಿದ್ದ ಖುರೇಷಿಯನ್ನು ಸ್ಥಳೀಯರು ಹಿಡಿದು ಮನಬಂದಂತೆ ಥಳಿಸಿದ್ದಾರೆ. ಸ್ಥಳೀಯರು ಕೋಲು ಹಾಗೂ ಇತರೆ ವಸ್ತುಗಳಿಂದ ಹಲ್ಲೆ ಮಾಡಿದ್ದಕ್ಕೆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

    ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಖುರೇಷಿ ಮೇಲೆ ಹಲ್ಲೆ ಮಾಡಿದ ಸ್ಥಳೀಯರ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ. ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ ಎಂದು ಎಸ್‍ಪಿ ತಿಳಿಸಿದರು.

  • ಉತ್ತರ ಪ್ರದೇಶ ಉಪಚುನಾವಣಾ ಫಲಿತಾಂಶ – ಕಮಲ ಕಿಲಕಿಲ

    ಉತ್ತರ ಪ್ರದೇಶ ಉಪಚುನಾವಣಾ ಫಲಿತಾಂಶ – ಕಮಲ ಕಿಲಕಿಲ

    -11ರಲ್ಲಿ ಬಿಎಸ್‍ಪಿ, ಕಾಂಗ್ರೆಸ್ ಶೂನ್ಯ

    ಲಕ್ನೋ: ಈ ಬಾರಿಯ ಉಪಚುನಾವಣೆ ಆಡಳಿತಾ ರೂಢ ಬಿಜೆಪಿ ಸರ್ಕಾರಕ್ಕೆ ಪ್ರತಿಷ್ಠೆಯ ಕಣವಾಗಿತ್ತು. ಇತ್ತ ಪ್ರಾದೇಶಿಕ ಪಕ್ಷಗಳಾದ ಸಮಾಜವಾದಿ ಪಾರ್ಟಿ (ಎಸ್‍ಪಿ) ಮತ್ತು ಬಹುಜನ ಸಮಾಜ ಪಾರ್ಟಿ (ಬಿಎಸ್‍ಪಿ) ಗೆ 2022ರ ಚುನಾವಣೆಗೆ ದಿಕ್ಸೂಚಿಯಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್‍ಗೆ ಅಳಿವು-ಉಳಿವಿನ ಪ್ರಶ್ನೆಯಾಗಿತ್ತು. ನಾನಾ ಕಾರಣಗಳಿಂದ ತೆರವಾದ ಉತ್ತರ ಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21 ರಂದು ಚುನಾವಣೆ ನಡೆದಿತ್ತು. ಇಂದು ಫಲಿತಾಂಶ ಹೊರ ಬಂದಿದ್ದು, 11 ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.

    ಒಟ್ಟು 11 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. 7 ಬಿಜೆಪಿ, ಮೂರರಲ್ಲಿ ಸಮಾಜವಾದಿ ಪಾರ್ಟಿ ಮತ್ತು ಒಂದರಲ್ಲಿ ಅಪನಾ ದಳ ಗೆಲುವಿನ ನಗೆ ಬೀರಿದೆ. ಬಿಎಸ್‍ಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.

    ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಅಪ್ನಾ ದಳದೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿದ್ದು, ಉತ್ತರ ಪ್ರದೇಶದ ಮಿಂಚಿನಂತೆ ಪಕ್ಷ ಸಂಘಟನೆಗೆ ಮುಂದಾಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರಿಗೆ ಮುಖಭಂಗವಾಗಿದೆ. ಆಡಳಿತರೂಢ ಬಿಜೆಪಿ ಸರ್ಕಾರದ ಪ್ರಬಲ ಪೈಪೋಟಿಯ ನಡುವೆ ಪ್ರಾದೇಶಿಕ ಪಕ್ಷಗಳಾದ ಎಸ್‍ಪಿ ಮತ್ತು ಬಿಎಸ್‍ಪಿ ನೆಮ್ಮದಿಯ ಉಸಿರು ಬಿಡುವಂತಾಗಿದೆ. 11ರಲ್ಲಿ 8 ಕ್ಷೇತ್ರಗಳಲ್ಲಿ ಈ ಹಿಂದೆ ಬಿಜೆಪಿ ಶಾಸಕರಿದ್ದರು. ಎರಡರಲ್ಲಿ ಬಿಎಸ್‍ಪಿ, ಎಸ್‍ಪಿ ಮತ್ತು ಅಕಾಲಿದಳ ಒಂದರಲ್ಲಿತ್ತು.

    1. ಗಂಗೋಹ: ಗೆಲುವು-ಬಿಜೆಪಿ
    ಬಿಜೆಪಿ: ಕೀರ್ತನಪಾಲ್ ಸಿಂಗ್
    ಎಸ್‍ಪಿ: ಇಂದ್ರಸೇನ್
    ಬಿಎಸ್‍ಪಿ: ಇರ್ಶಾದ್ ಚೌಧರಿ
    ಕಾಂಗ್ರೆಸ್: ನೋಮಾನ್ ಮಸೂದ್
    ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು.

    2. ರಾಮಪುರ: ಗೆಲುವು- ಎಸ್‍ಪಿ
    ಬಿಜೆಪಿ: ಭಾರತ್ ಭೂಷಣ್ ಗುಪ್ತಾ
    ಎಸ್‍ಪಿ: ಡಾ.ತಂಜೀನ್ ಫಾತೀಮಾ
    ಬಿಎಸ್‍ಪಿ: ಜುಬೇರ್ ಮಸೂದ್ ಖಾನ್
    ಕಾಂಗ್ರೆಸ್: ಅರ್ಷದ್ ಅಲಿ ಖಾನ್
    ಈ ಹಿಂದೆ ಎಸ್‍ಪಿ ಗೆಲುವು ಕಂಡಿತ್ತು

    3. ಇಗ್ಲಾಸ್: ಗೆಲುವು-ಬಿಜೆಪಿ
    ಬಿಜೆಪಿ: ರಾಜಕುಮಾರ್ ಸಹಯೋಗಿ
    ಎಸ್‍ಪಿ: ಸುಮನ್ ದಿವಾಕರ್ (ರಾಷ್ಟ್ರೀಯ ಲೋಕದಳ)
    ಬಿಎಸ್‍ಪಿ: ಅಕ್ಷಯ್ ಕುಮಾರ್
    ಕಾಂಗ್ರೆಸ್: ಉಮೇಶ್ ಕುಮಾರ್
    ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು

    4. ಲಖ್ನೌ ಕೈಂಟ್: ಗೆಲುವು-ಬಿಜೆಪಿ
    ಬಿಜೆಪಿ: ಸುರೇಶ್ ತಿವಾರಿ
    ಎಸ್‍ಪಿ: ಮೇಜರ್ ಆಶೀಷ್ ಚತುರ್ವೇದಿ
    ಬಿಎಸ್‍ಪಿ: ಅರುಣ್ ದ್ವಿವೇದಿ
    ಕಾಂಗ್ರೆಸ್: ದಿಲ್‍ಪ್ರೀತ್ ಸಿಂಗ್
    ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು

    5. ಗೋವಿಂದನಗರ: ಗೆಲುವು-ಬಿಜೆಪಿ
    ಬಿಜೆಪಿ: ಸುರೇಂದ್ರ ಮೈಥಾನಿ
    ಎಸ್‍ಪಿ: ಸಾಮ್ರಾಟ್ ವಿಕಾಸ್
    ಬಿಎಸ್‍ಪಿ: ದೇವಿ ಪ್ರಸಾದ್ ತಿವಾರಿ
    ಕಾಂಗ್ರೆಸ್: ಕರಿಶ್ಮಾ ಠಾಕೂರ್
    ಈ ಹಿಂದೆ ಬಿಜೆಪಿ ಅಧಿಕಾರದಲ್ಲಿತ್ತು

    6. ಮಾನಿಕಪುರ: ಗೆಲುವು-ಬಿಜೆಪಿ
    ಬಿಜೆಪಿ: ಆನಂದ ಶುಕ್ಲಾ
    ಎಸ್‍ಪಿ: ನಿರ್ಭಯ್ ಸಿಂಗ್ ಪಟೇಲ್
    ಬಿಎಸ್‍ಪಿ: ರಾಜನಾರಾಯಣ್
    ಕಾಂಗ್ರೆಸ್: ರಂಹನಾ ಪಾಂಡೆ
    ಈ ಹಿಂದೆ ಬಿಜೆಪಿ ಇತ್ತು

    7. ಜೋಧಪುರ: ಗೆಲುವು-ಎಸ್‍ಪಿ
    ಬಿಜೆಪಿ: ಅಂಬರೀಶ್ ರಾವತ್
    ಎಸ್‍ಪಿ: ಗೌರವ್ ಕುಮಾರ್ ರಾವತ್
    ಬಿಎಸ್‍ಪಿ: ಅಖಿಲೇಶ್ ಕುಮಾರ್ ಅಂಬೇಡ್ಕರ್
    ಕಾಂಗ್ರೆಸ್: ತನುಜ್ ಪುನಿಯಾ
    ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು

    8. ಜಲಾಲ್ಪುರ: ಗೆಲುವು-ಎಸ್‍ಪಿ
    ಬಿಜೆಪಿ: ರಾಜೇಶ್ ಸಿಂಗ್
    ಎಸ್‍ಪಿ: ಸುಭಾಷ್ ರಾಯ್
    ಬಿಎಸ್‍ಪಿ: ಡಾ.ಛಾಯಾ ವರ್ಮಾ
    ಕಾಂಗ್ರೆಸ್: ಸುನಿಲ್ ಮಿಶ್ರಾ
    ಈ ಹಿಂದೆ ಬಿಎಸ್‍ಪಿ ಗೆಲುವು ಕಂಡಿತ್ತು

    8. ಬಾಲ್ಹಾ: ಗೆಲುವು-ಬಿಜೆಪಿ
    ಬಿಜೆಪಿ: ಸರೋಜ್ ಸೋನಕರ್
    ಎಸ್‍ಪಿ: ಕಿರಣ್ ಭಾರತಿ
    ಬಿಎಸ್‍ಪಿ: ರಮೇಶ್ ಚಂದ್ರ
    ಕಾಂಗ್ರೆಸ್: ಮನ್ನಾ ದೇವಿ
    ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು

    9. ಘೋಸಿ: ಗೆಲುವು: ಬಿಜೆಪಿ
    ಬಿಜೆಪಿ: ವಿಜಯ್ ರಾಜಭರ್
    ಎಸ್‍ಪಿ: ಸುಧಾಕರ್ ಸಿಂಗ್
    ಬಿಎಸ್‍ಪಿ: ಅಬ್ದುಲ್ ಕಯೂಮ್
    ಕಾಂಗ್ರೆಸ್: ರಾಜಮಂಗಲ್ ಯಾದವ್
    ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು

    10. ಪ್ರತಾಪ್‍ಗಢ: ಗೆಲುವು; ಅಪನಾ ದಳ
    ಬಿಜೆಪಿ: ರಾಜಕುಮಾರ್ ಪಾಲ್ (ಅಪನಾ ದಳ)
    ಎಸ್‍ಪಿ: ಬೃಜೇಶ್ ಸಿಂಗ್ ಪಟೇಲ್
    ಬಿಎಸ್‍ಪಿ: ರಂಜಿತ್ ಸಿಂಗ್ ಪಟೇಲ್
    ಕಾಂಗ್ರೆಸ್: ನೀರಜ್ ತ್ರಿಪಾಠಿ
    ಈ ಹಿಂದೆ ಅಪನಾ ದಳ ಗೆಲುವು ಕಂಡಿತ್ತು

  • ಕಮಲೇಶ್ ತಿವಾರಿ ಹತ್ಯೆ – ಹುಬ್ಬಳ್ಳಿ ಮೂಲದ ವ್ಯಕ್ತಿಯ ಬಂಧನ

    ಕಮಲೇಶ್ ತಿವಾರಿ ಹತ್ಯೆ – ಹುಬ್ಬಳ್ಳಿ ಮೂಲದ ವ್ಯಕ್ತಿಯ ಬಂಧನ

    ಹುಬ್ಬಳ್ಳಿ: ಉತ್ತರ ಪ್ರದೇಶದ ಹಿಂದೂ ಮುಖಂಡ ಕಮಲೇಶ್ ತಿವಾರಿಯ ಕೊಲೆ ಪ್ರಕರಣ ಸಂಬಂಧ ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಹಳೆ ಹುಬ್ಬಳ್ಳಿಯ ಅರವಿಂದ ನಗರದ ಮೊಹಮ್ಮದ್ ಜಾಫರ್ ಸಾಧೀಕ್ ಎಂದು ಗುರುತಿಸಲಾಗಿದೆ. ರೈಲ್ವೆ ಇಲಾಖೆಯ ಕಾರ್ಯಾಗಾರದಲ್ಲಿ ನೌಕರನಾಗಿದ್ದ ಮೊಹಮ್ಮದ್ ನನ್ನು ತಿವಾರಿ ಹತ್ಯೆಯ ವಿಚಾರವಾಗಿ ಹಳೆ ಹುಬ್ಬಳ್ಳಿ ಪೊಲೀಸರು ಇಂದು ಬಂಧಿಸಿದ್ದಾರೆ.

    ರೈಲ್ವೆ ಇಲಾಖೆಯ ಕಾರ್ಯಾಗಾರದಲ್ಲಿ ನೌಕರನಾಗಿದ್ದ ಮೊಹಮ್ಮದ್, ಕೆಲ ವರ್ಷಗಳಿಂದ ಸಿಮಿ ಸೇರಿದಂತೆ ಹಲವು ಉಗ್ರ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದನು ಎನ್ನಲಾಗಿದೆ. ಈತ ಉತ್ತರ ಪ್ರದೇಶದ ಹಿಂದೂ ಮುಖಂಡ ಕಮಲೇಶ್ ತಿವಾರಿ ಹತ್ಯೆ ಪ್ರಕರಣದಲ್ಲಿ ಆಂತರಿಕ ಭದ್ರತಾ ವಿಭಾಗ (ಐ.ಎಸ್.ಡಿ) ಪೊಲೀಸರಿಗೆ ಬೇಕಾಗಿದ್ದನು. ಆದ್ದರಿಂದ ಇಂದು ಹಳೆ ಹುಬ್ಬಳ್ಳಿ ಪೊಲೀಸರು ಬಂಧಿಸಿ ಬಳಿಕ ಆರೋಪಿಯನ್ನು ಆಂತರಿಕ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಐ.ಎಸ್.ಡಿ ಯ ವಿಚಾರಣೆ ಬಳಿಕ ರಾಷ್ಟ್ರೀಯ ಭದ್ರತಾ ತಂಡದ ವಶಕ್ಕೆ ಆರೋಪಿಯನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

    ಕಮಲೇಶ್ ತಿವಾರಿ ಅವರು ಹಿಂದೂ ಸಮಾಜ ಪಾರ್ಟಿಯ ಮುಖ್ಯಸ್ಥರು ಹಾಗೂ ಹಿಂದೂ ಮಹಾಸಭಾ ಮಾಜಿ ನಾಯಕರಾಗಿದ್ದು, ಶುಕ್ರವಾರ ಲಕ್ನೋದಲ್ಲಿ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆಗೆ ಎಸ್‍ಐಟಿ ತಂಡ ರಚಿಸಲಾಗಿತ್ತು. ಘಟನೆ ನಡೆದ 24 ಗಂಟೆಯೊಳಗೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

    ಕಮಲೇಶ್ ತಿವಾರಿ 2015ರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳು ಕೊಲೆಗೈದಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ.

  • 120 ರೂ. ಸಲುವಾಗಿ ಸ್ನೇಹಿತನನ್ನೇ ಥಳಿಸಿ ಕೊಂದ

    120 ರೂ. ಸಲುವಾಗಿ ಸ್ನೇಹಿತನನ್ನೇ ಥಳಿಸಿ ಕೊಂದ

    ಲಕ್ನೋ: 120 ರೂ. ಸಲುವಾಗಿ ನಡೆದ ಸ್ನೇಹಿತರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಸ್ನೇಹಿತ 120 ರೂ. ಮರಳಿ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

    ಸ್ನೇಹಿತ 120 ರೂ.ಗಳನ್ನು ಮರಳಿ ನೀಡಿಲ್ಲ ಎಂದು ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ತನ್ನ ಸ್ನೇಹಿತನಿಗೇ ವ್ಯಕ್ತಿ ಮನಬಂದಂತೆ ಥಳಿಸಿದ್ದು, ಸಾವನ್ನಪ್ಪಿದ್ದಾನೆ. ಮೃತನನ್ನು ರಾಮು ಎಂದು ಗುರುತಿಸಲಾಗಿದೆ. ಆರೋಪಿ ಬಿರ್ಜು ಕುಮಾರ್‍ನನ್ನು ಬಂಧಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ರಾಮು ಅವರ ಮಗ ದಿಲೀಪ್ ಈ ಕುರಿತು ಪ್ರತಿಕ್ರಿಯಿಸಿದ್ದು, ಬಿರ್ಜು ಕುಮಾರ್ ರಾಮು ಅವರಿಂದ ಸಾಲ ಪಡೆದಿದ್ದ. ನಂತರ ಹಣ ಮರಳಿ ನೀಡುವಂತೆ ರಾಮು ಕೇಳಿದಾಗ ಬಿರ್ಜು ನಿಂದಿಸಲು ಪ್ರಾರಂಭಿಸಿದನು. ಇದಕ್ಕೆ ರಾಮು ಆಕ್ಷೇಪ ವ್ಯಕ್ತಪಡಿಸಿದಾಗ ಬಿರ್ಜು ಕುಮಾರ್ ರಾಮು ಅವರನ್ನು ಕೋಲಿನಿಂದ ಮನಬಂದಂತೆ ಥಳಿಸಿದ್ದಾನೆ ಎಂದು ಆರೋಪಿಸಿದ್ದಾರೆ.

    ರಾಮು ತಲೆಗೆ ಗಂಭೀರ ಗಾಯಗಳಾಗಿದ್ದು, ಅವರ ಮಗ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಚಿಕಿತ್ಸೆ ಫಲಕಾರಿಯಾಗದೇ ರಾಮು ಸಾವನ್ನಪ್ಪಿದ್ದಾರೆ. ದಿಲೀಪ್ ನೀಡಿದ ಹೇಳಿಕೆಯನ್ನಾಧರಿಸಿ ಪೊಲೀಸರು ಸೆಕ್ಷನ್ 304 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಕುರಿತು ಇನ್ಸ್‍ಪೆಕ್ಟರ್ ಅಜಯ್ ಮಿಶ್ರಾ ಮಾತನಾಡಿ, ಆರೋಪಿಯನ್ನು ಬಂಧಿಸಲಾಗಿದ್ದು, ಲಖಿಂಪುರ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಎಸ್‍ಡಿಎಂ(ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್) ಸುನಂದು ಸುಧಾಕರನ್ ಈ ಕುರಿತು ಮಹಿತಿ ನೀಡಿ, ಈ ಪ್ರದೇಶದ ಬಹುತೇಕರು ಬಡತನ ರೇಖೆಗಿಂತ ಕೆಳಗಿರುವವರು ಎಂದು ನಾನು ಗಮನಿಸಿದ್ದೇನೆ. ಹೀಗಾಗಿ ಸರ್ಕಾರಿ ಯೋಜನೆಗಳು ಅಗತ್ಯವಿರುವ ಜನರನ್ನು ತಲುಪುತ್ತಿವೆಯೇ ಎಂಬುದನ್ನು ಗುರುತಿಸಲು ಅಭಿಯಾನ ಪ್ರಾರಂಭಿಸಲು ನಿರ್ಧರಿಸಿದ್ದೇನೆ. ಗ್ರಾಮ ಸಮಾಜದ ಭೂಮಿ ಸ್ಕ್ವಾಟರ್ ಗಳಿಂದ ಮುಕ್ತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಭಿಯಾನ ನಡೆಸುತ್ತೇವೆ. ಕೃಷಿ ಭೂಮಿ ಇಲ್ಲದ ರೈತರಿಗೆ ಈ ಭೂಮಿಯನ್ನು ನೀಡಿ ಕೆಲಸದಲ್ಲಿ ತೊಡಗುವಂತೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.