Tag: uttar pradesh

  • ರೈಲು ಬರುತ್ತಿದ್ದಂತೆ ಕೈ-ಕೈ ಹಿಡಿದುಕೊಂಡು ಜಿಗಿದ ಜೋಡಿ

    ರೈಲು ಬರುತ್ತಿದ್ದಂತೆ ಕೈ-ಕೈ ಹಿಡಿದುಕೊಂಡು ಜಿಗಿದ ಜೋಡಿ

    -ಬೈಕ್ ದಾಖಲಾತಿಗಳಿಂದ ಯುವಕನ ಗುರತು ಪತ್ತೆ

    ಲಕ್ನೋ: ಯುವ ಪ್ರೇಮಿಗಳು ಕೈ-ಕೈ ಹಿಡಿದುಕೊಂಡು ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಮೇಥಿ ಜಿಲ್ಲೆಯ ದೇವಿಪಾಟ್ನಾ ಎಂಬಲ್ಲಿ ನಡೆದಿದೆ. ಇಂದು ಬೆಳಗ್ಗೆ ಯುವಕ-ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಘಟನಾ ಸ್ಥಳದ ಸಮೀಪದಲ್ಲಿ ಬೈಕ್ ಪತ್ತೆಯಾಗಿದೆ. ಅದರಲ್ಲಿ ಕೆಲ ದಾಖಲೆಗಳಿಂದ ಯುವಕನ ಗುರುತು ಪತ್ತೆಯಾಗಿದೆ. ಮೃತ ಯುವಕನನ್ನು ಸಂಗ್ರಮಾಪುರದ ಅರ್ಜುನ್ ಕುಮಾರ್ ಎಂದು ಗುರುತಿಸಲಾಗಿದೆ. ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಜೋಡಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ರೈಲ್ವೇ ಪೊಲೀಸರು ಶಂಕಿಸಿದ್ದಾರೆ.

    ಬೆಳಗ್ಗೆ ಗೌರಿಗಂಜ್ ನಿಂದ ಪ್ರತಾಪಗಢಕ್ಕೆ ಗೂಡ್ಸ್ ರೈಲು ಹೊರಟಿತ್ತು. ರೈಲು ಬರೋವರೆಗೂ ಟ್ರ್ಯಾಕ್ ಪಕ್ಕವೇ ನಿಂತಿದ್ದ ಜೋಡಿ, ಟ್ರೈನ್ ಸಮೀಪಿಸುತ್ತಿದ್ದಂತೆ ಕೈ-ಕೈ ಹಿಡಿದುಕೊಂಡು ಜಿಗಿದರು ಎಂದು ಲೋಕೋಪೈಲಟ್ ಮಾಹಿತಿ ನೀಡಿದ್ದಾರೆ. ಅಮೇಥಿ ರೈಲ್ವೇ ನಿಲ್ದಾಣದ ಸಿಬ್ಬಂದಿಗೆ ಲೋಕೋಪೈಲಟ್ ಮಾಹಿತಿ ನೀಡಿದ್ದಾರೆ.

  • ‘ನಾನಲ್ಲ ದೆವ್ವ ಕೊಲೆ ಮಾಡಿದ್ದು’ – ಮಗನ ಕತ್ತು ಹಿಸುಕಿ ಕೊಂದು ಭೂತಗಳ ಕಥೆ ಕಟ್ಟಿದ ಮಲತಾಯಿ

    ‘ನಾನಲ್ಲ ದೆವ್ವ ಕೊಲೆ ಮಾಡಿದ್ದು’ – ಮಗನ ಕತ್ತು ಹಿಸುಕಿ ಕೊಂದು ಭೂತಗಳ ಕಥೆ ಕಟ್ಟಿದ ಮಲತಾಯಿ

    – ಮಲತಾಯಿ, ತಂದೆಯನ್ನು ಬಂಧಿಸಿದ ಪೊಲೀಸರು

    ಲಕ್ನೋ: 5 ವರ್ಷದ ಬಾಲಕನನ್ನು ಕತ್ತು ಹಿಸುಕಿ ಕೊಂದ ಮಲತಾಯಿ ಪೊಲೀಸರ ಬಳಿ ದೆವ್ವಗಳು ಕೊಲೆ ಮಾಡಿದೆ ಎಂದು ಕಥೆ ಕಟ್ಟಿದ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

    ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಗಿರಿಯಾ ಖಲ್ಸಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೃತ್ಯವೆಸಗಿದ ಮಲತಾಯಿ ಹಾಗೂ ತಂದೆ ಚಂದನ್ ಮೇಹ್ತಾನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನ ಮೃತದೇಹ ಮಹಿಳೆಯ ಕೋಣೆಯಲ್ಲಿ ಪತ್ತೆಯಾಗಿತ್ತು. ಆತನ ದೇಹದ ಮೇಲೆ, ಮುಖದ ಮೇಲೆ ಗಾಯಗಳು ಆಗಿದ್ದವು. ಈ ಬಗ್ಗೆ ವಿಚಾರಣೆ ವೇಳೆ ಮಹಿಳೆಯನ್ನು ಕೇಳಿದರೆ, ನಾನು ಕೊಲೆ ಮಾಡಿಲ್ಲ. ದೆವ್ವ, ಭೂತಗಳು ಬಾಲಕನನ್ನು ಕೊಲೆ ಮಾಡಿದೆ ಎಂದು ಕಥೆ ಕಟ್ಟಿದ್ದಾಳೆ.

    ಮಹಿಳೆಯ ದೆವ್ವದ ಕಥೆ ಕೇಳಿ ಗ್ರಾಮಸ್ಥರು ಭಯಗೊಂಡಿದ್ದಾರೆ. ಈಗಾಗಲೇ ಬಾಲಕನ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

    ಈ ಕೊಲೆ ಬಗ್ಗೆ ಗ್ರಾಮಸ್ಥರನ್ನು ವಿಚಾರಿಸಿದಾಗ, ಕೊಲೆಯಾದ ಬಾಲಕ ಮಹಿಳೆಯ ಎರಡನೇ ಪತಿ ಚಂದನ್ ಮೇಹ್ತಾನ ಮಗ. ಮೊದಲನೇ ಪತಿ ಬಿಟ್ಟುಹೋದ ಬಳಿಕ ಮಹಿಳೆ ಎರಡನೇ ಮದುವೆ ಆಗಿದ್ದಳು. ಚಂದನ್ ಮೇಹ್ತಾನ ಪತ್ನಿ 4 ವರ್ಷದ ಹಿಂದೆ ಮೃತಪಟ್ಟಿದ್ದಳು. ಆತನಿಗೆ 5 ವರ್ಷದ ಮಗ ಹಾಗೂ 7 ವರ್ಷದ ಮಗಳಿದ್ದಳು. ಆತನಿಗೂ ಕೂಡ ಇದು ಎರಡನೇ ಮದುವೆ ಆಗಿದೆ. ಮೊದ ಮೊದಲು ಮಹಿಳೆ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು.

    ಆದರೆ ಸಮಯ ಕಳೆಯುತ್ತಿದ್ದಂತೆ ಆಕೆಯ ವರ್ತನೆ ಬದಲಾಗಿತ್ತು. ಮಕ್ಕಳನ್ನು ಆಕೆ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಬಹುಶಃ ಮಕ್ಕಳನ್ನು ಸಾಕಬೇಕಲ್ಲ ಎಂಬ ಕಾರಣಕ್ಕೆ ಮಹಿಳೆ ಬಾಲಕನನ್ನು ಕೊಲೆ ಮಾಡಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

  • ದೂರು ವಾಪಸ್ ಪಡೆಯಲು ರೇಪ್ ಸಂತ್ರಸ್ತೆ ನಕಾರ – ಆ್ಯಸಿಡ್ ಎರಚಿದ ಕಾಮುಕನ ಕುಟುಂಬ

    ದೂರು ವಾಪಸ್ ಪಡೆಯಲು ರೇಪ್ ಸಂತ್ರಸ್ತೆ ನಕಾರ – ಆ್ಯಸಿಡ್ ಎರಚಿದ ಕಾಮುಕನ ಕುಟುಂಬ

    ಲಕ್ನೋ: ಉತ್ತರಪ್ರದೇಶದಲ್ಲಿ ದೂರು ವಾಪಸ್ ಪಡೆಯದಿದ್ದಕ್ಕೆ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರಿಯ ಕುಟುಂಬಸ್ಥರು ಆ್ಯಸಿಡ್ ದಾಳಿ ನಡೆಸಿದ್ದಾರೆ.

    ಉತ್ತರ ಪ್ರದೇಶದ ಹಾಪುರ್ ನಲ್ಲಿ ಈ ಘಟನೆ ನಡೆದಿದೆ. ಭಾನುವಾರ ಅತ್ಯಾಚಾರ ಸಂತ್ರಸ್ತೆಯ ಮೇಲೆ ಅತ್ಯಾಚಾರಿಯ ಕುಟುಂಬಸ್ಥರು ಆ್ಯಸಿಡ್ ಎರಚಿ, ಆಕೆಯ ಪೋಷಕರ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಎರಚಿದ ಆ್ಯಸಿಡ್ ಬಾಲಕಿಯ ಕಾಲಿನ ಮೇಲೆ ಬಿದ್ದಿದ್ದು, ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

    2019ರ ಸೆಪ್ಟೆಂಬರ್ 2ರಂದು ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ಆ ಬಳಿಕ ಬಾಲಕಿಯ ಕುಟುಂಬಸ್ಥರು ಕಾಮುಕನ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆದರೆ ಆರೋಪಿ ಕುಟುಂಬಸ್ಥರು ಕೊಟ್ಟಿರುವ ದೂರನ್ನು ವಾಪಸ್ ಪಡೆಯುವಂತೆ ಸಂತ್ರಸ್ತೆ ಹಾಗೂ ಆಕೆಯ ಪೋಷಕರಿಗೆ ಕಾಡುತ್ತಿದ್ದರು.

    ಇದೇ ವಿಚಾರಕ್ಕೆ ಭಾನುವಾರ ಕೂಡ ಸಂತ್ರಸ್ತೆ, ಆಕೆಯ ಪೋಷಕರು ಹಾಗೂ ಆರೋಪಿಯ ಕುಟುಂಬಸ್ಥರ ನಡುವೆ ಗಲಾಟೆ ನಡೆದಿತ್ತು. ಇದರಿಂದ ಸಿಟ್ಟಿಗೆದ್ದ ಆರೋಪಿ ಕುಟುಂಬಸ್ಥರು ಸಂತ್ರಸ್ತೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ.

  • ಹಿಂದೂ ನಾಯಕನ ತಲೆಗೆ ಗುಂಡಿಕ್ಕಿ ಬರ್ಬರ ಹತ್ಯೆ

    ಹಿಂದೂ ನಾಯಕನ ತಲೆಗೆ ಗುಂಡಿಕ್ಕಿ ಬರ್ಬರ ಹತ್ಯೆ

    ಲಕ್ನೋ: ಶನಿವಾರ ತಾನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ವಿಶ್ವ ಹಿಂದೂ ಮಹಾಸಭಾ ನಾಯಕನನ್ನು ತಲೆಗೆ ಗುಂಡಿಕ್ಕಿ ಇಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಕೊಲೆಯಾದ ಹಿಂದೂ ನಾಯಕನನ್ನು ರಂಜಿತ್ ಬಚ್ಚನ್ ಎಂದು ಗುರುತಿಸಲಾಗಿದೆ. ಇಂದು ತನ್ನ ಸಂಬಂಧಿ ಅದಿತ್ಯ ಜೊತೆಗೆ ಹೊರಗೆ ಬಂದ ರಂಜಿತ್ ಬಚ್ಚನ್ ಅವರನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ತಲೆಗೆ ಗುಂಡಿಕ್ಕಿ ಕೊಂದು ಹಾಕಿದ್ದಾರೆ. ಈ ಘಟನೆಯಲ್ಲಿ ಅದಿತ್ಯ ಅವರೂ ಕೂಡ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕತ್ಸೆ ಕೊಡಿಸಲಾಗುತ್ತಿದೆ.

    ವಾಕಿಂಗ್ ಮಾಡುತ್ತಿದ್ದ ರಂಜೀತ್ ಬಚ್ಚನ್ ಅವರ ಬಳಿ ಬಂದ ಹಲ್ಲೆ ಮಾಡಿದ ಆರೋಪಿ, ಮೊದಲು ಕರೆ ಮಾಡಲು ಫೋನ್ ಕೇಳಿದ್ದಾನೆ. ಅವರು ಕೊಟ್ಟಿಲ್ಲ. ಇದಾದ ನಂತರ ತನ್ನ ಬಳಿ ಇದ್ದ ಪಿಸ್ತೂಲ್‍ನಿಂದ ರಂಜಿತ್ ಬಚ್ಚನ್ ಅವರ ತಲೆಗೆ ಗುಂಡು ಹಾರಿಸಿದ್ದಾನೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ರಂಜಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಎಸಿಪಿ ಅಭಯ್ ಮಿಶ್ರಾ ಮಾಹಿತಿ ನೀಡಿದ್ದಾರೆ.

    ಈ ವೇಳೆ ಮಾತನಾಡಿದ ರಂಜಿತ್ ಬಚ್ಚನ್ ಅವರ ಸಹೋದರ ಸಂಬಂಧಿ ಮನೋಜ್ ಕುಮಾರ್ ಶರ್ಮಾ, ರಂಜಿತ್ ಅವರು ಶನಿವಾರ ತನ್ನ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇದರ ಜೊತೆಗೆ ಸಿಎಎ ಮತ್ತು ಎನ್.ಆರ್.ಸಿಗೆ ಬೆಂಬಲಿಸುವ ಪಾರ್ಟಿಯನ್ನು ಆಯೋಜಿಸಿದ್ದರು ಎಂದು ತಿಳಿಸಿದ್ದಾರೆ. ರಂಜಿತ್ ಬಚ್ಚನ್ ಅವರ ಸಾವಿನ ಸುದ್ದಿ ತಿಳಿದ ಅವರ ಬೆಂಬಲಿಗರು ಪೊಲೀಸ್ ಠಾಣೆಯ ಮುಂದೆ ಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಹಿಂದೂ ನಾಯಕರ ಸರಣಿ ಹತ್ಯೆ ನಡೆಯುತ್ತಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಇಬ್ಬರು ಹಿಂದೂ ನಾಯಕರನ್ನು ಕೊಲೆ ಮಾಡಲಾಗಿದೆ. ಹೀಗೆ ಕಳೆದ ಆಕ್ಟೋಬರ್ ನಲ್ಲಿ ಹಿಂದೂ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಕಮಲೇಶ್ ತಿವಾರಿ ಅವರನ್ನು ಅವರ ನಿವಾಸದಲ್ಲಿ ಹತ್ಯೆ ಮಾಡಲಾಗಿತ್ತು.

  • ನೀನ್ ನನ್ಗೆ ಬೇಕು ಮದ್ವೆ ಆಗೋಣ ಎಂದ – ನಿರಾಕರಿಸಿದ್ದಕ್ಕೆ ಯುವತಿ ಎದೆಗೆ ಚಾಕು ಇರಿದು, ಕತ್ತು ಸೀಳಿದ

    ನೀನ್ ನನ್ಗೆ ಬೇಕು ಮದ್ವೆ ಆಗೋಣ ಎಂದ – ನಿರಾಕರಿಸಿದ್ದಕ್ಕೆ ಯುವತಿ ಎದೆಗೆ ಚಾಕು ಇರಿದು, ಕತ್ತು ಸೀಳಿದ

    – ಅಕ್ಕನ ಮೈದುನನಿಂದ್ಲೆ ಕೃತ್ಯ
    – ಸಾವು, ಬದುಕಿನ ನಡುವೆ ಹೋರಾಡುತ್ತಿರುವ ಯುವತಿ

    ಲಕ್ನೋ: ಮದುವೆ ಆಗಲು ನಿರಾಕರಿಸಿದ್ದಕ್ಕೆ ಯುವತಿಗೆ ಪಾಗಲ್ ಪ್ರೇಮಿಯೋರ್ವ ನಡುರಸ್ತೆಯಲ್ಲೇ ಎದೆಗೆ ಚಾಕು ಇರಿದು, ಕತ್ತು ಸೀಳಿ ಕೊಲೆಗೆ ಯತ್ನಿಸಿದ ಭಯಾನಕ ಘಟನೆ ಉತ್ತರ ಪ್ರದೇಶ ಘಾಜಿಯಾಬಾದ್‍ನಲ್ಲಿ ನಡೆದಿದೆ.

    21 ವರ್ಷದ ಯುವತಿ ಅಕ್ಕನ ಮೈದುನ ಈ ಕೃತ್ಯವೆಸೆಗಿದ್ದಾನೆ. ಶುಕ್ರವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಾಘಪಟ್ ನಿವಾಸಿ ಸಚಿನ್ ಎಂದು ಗುರುತಿಸಲಾಗಿದೆ. ಈತ ಯುವತಿಯನ್ನು ತುಂಬಾ ಪ್ರೀತಿಸುತ್ತಿದ್ದನು. ಆದರೆ ಯುವತಿ ಸಚಿನ್ ಪ್ರೀತಿಯನ್ನು ಒಪ್ಪಿರಲಿಲ್ಲ. ಆದ್ದರಿಂದ ಸಚಿನ್ ಯಾವಾಗಲೂ ಯುವತಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಹಲವು ಬಾರಿ ನಾವಿಬ್ಬರು ಮದುವೆ ಆಗೋಣ ಎಂದು ಕಾಡಿದ್ದನು.

    ಶುಕ್ರವಾರ ಬೆಳಗ್ಗೆ ಕೂಡ ಸಚಿನ್ ಯುವತಿಯನ್ನು ನಡುರಸ್ತೆಯಲ್ಲಿ ಅಡ್ಡಗಟ್ಟಿ ಮದುವೆಗೆ ಒಪ್ಪಿಕೊಳ್ಳಲು ಪೀಡಿಸಿದ್ದನು. ಆದರೆ ಯುವತಿ ಸಚಿನ್ ಮಾತಿಗೆ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ಆರೋಪಿ ಏಕಾಏಕಿ ಯುವತಿಗೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

    ಯುವತಿಯ ಎದೆಗೆ ಚಾಕು ಇರಿದು, ಆಕೆಯ ಕತ್ತನ್ನು ಸೀಳಿ ಕೊಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ದಾರಿಹೋಕರೊಬ್ಬರು ಕೃತ್ಯವನ್ನು ಕಂಡು ತಕ್ಷಣ ಯುವತಿಯ ಸಹಾಯಕ್ಕೆ ಬಂದಿದ್ದು, ಆರೋಪಿಯಿಂದ ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೆ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಸದ್ಯ ಯುವತಿ ಸ್ಥಿತಿ ಗಂಭಿರವಾಗಿದ್ದು, ಕಳೆದ ಎರಡು ದಿನಗಳಿಂದ ಯುವತಿ ಸಾವು, ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಇತ್ತ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.

  • ವಿಚಿತ್ರವಾಗಿ ಕೊಲ್ಲಲಾದ ಇಬ್ಬರು ಮಹಿಳೆಯರ ಶವ ಪತ್ತೆ

    ವಿಚಿತ್ರವಾಗಿ ಕೊಲ್ಲಲಾದ ಇಬ್ಬರು ಮಹಿಳೆಯರ ಶವ ಪತ್ತೆ

    – ಒಂದು ಗ್ಯಾಂಗ್ ರೇಪ್, ಇನ್ನೊಂದು ಕೊಲೆ ಶಂಕೆ

    ಲಕ್ನೋ: ಉತ್ತರ ಪ್ರದೇಶದ ಎರಡು ಪ್ರತ್ಯೇಕ ಜಿಲ್ಲೆಯಲ್ಲಿ ವಿಚಿತ್ರವಾಗಿ ಕೊಲೆ ಮಾಡಲಾದ ಇಬ್ಬರು ಮಹಿಳೆಯರ ಶವಗಳು ಸಿಕ್ಕಿವೆ. ಒಂದು ಗ್ಯಾಂಗ್ ರೇಪ್ ಹಾಗೂ ಇನ್ನೊಂದು ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಮೊದಲ ಮಹಿಳೆಯ ಶವ ಶುಕ್ರವಾರ ರಾತ್ರಿ ಬಿಜ್ನೋರ್ ಜಿಲ್ಲೆಯ ಗಜ್ರೋಲ ಎಂಬ ಹಳ್ಳಿಯಲ್ಲಿ ಸಿಕ್ಕಿದೆ. ಈ ಪ್ರಕರಣದಲ್ಲಿ ಮಹಿಳೆಯನ್ನು ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಮಂಚವೊಂದಕ್ಕೆ ಕಟ್ಟಿಹಾಕಲಾಗಿದೆ. ನೋಯ್ಡಾದ ನಿವಾಸಿ ಒಡೆತನದಲ್ಲಿ ಇರುವ ಮಾವಿನ ತೋಟದಲ್ಲಿ ಸಂತ್ರಸ್ತೆಯ ಶವ ಸಿಕ್ಕಿದೆ.

    ಈ ಘಟನೆಯ ಬಗ್ಗೆ ಮಾವಿನ ತೋಟಕ್ಕೆ ವಾಚ್‍ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆಗ ಸ್ಥಳಕ್ಕೆ ಬಂದ ಪೊಲೀಸರಿಗೆ ಶವದ ಬಳಿ ಎರಡು ಗುಂಡುಗಳು ಸಿಕ್ಕಿದ್ದು, ಮಹಿಳೆಯನ್ನು ಮಂಚಕ್ಕೆ ಕಟ್ಟಿ ಅವಳನ್ನು ಗುಂಡಿಕ್ಕಿ ಕೊಂದು. ನಂತರ ಅವಳ ಮೃತ ದೇಹವನ್ನು ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಮಹಿಳೆಯ ಶವ ಸಂಪೂರ್ಣ ಸುಟ್ಟು ಹೋಗಿದ್ದು, ಗುರುತಿಸುವುದು ಕಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    ಆ್ಯಸಿಡ್ ಹಾಕಿ ಸುಟ್ಟಿರುವ ಶಂಕೆ:
    ಎರಡನೇ ಮಹಿಳೆ ಶವ ಬೆತ್ತಲಾದ ಸ್ಥಿತಿಯಲ್ಲಿ ಬಹ್ರೇಚ್ ಜಿಲ್ಲೆಯ ನೌಬಾನಾ ಗ್ರಾಮದ ಬಳಿ ಪತ್ತೆಯಾಗಿದೆ. ಮಹಿಳೆಯನ್ನು ಕೊಂದು ಆಕೆಯ ಮುಖದ ಮೇಲೆ ಆ್ಯಸಿಡ್ ಹಾಕಿ ಮುಖವನ್ನು ಸಂಪೂರ್ಣ ಸುಡಲಾಗಿದೆ. ಶನಿವಾರ ಈ ಶವ ದನಗಾಹಿಗಳ ಕಣ್ಣಿಗೆ ಬಿದ್ದಿದ್ದು, ಅವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿರುವ ಪೊಲೀಸರು, ಸಂತ್ರಸ್ತೆಯನ್ನು ಯಾರೋ ಕಿಡಿಗೇಡಿಗಳು ಗ್ಯಾಂಗ್ ರೇಪ್ ಮಾಡಿ ಆ್ಯಸಿಡ್ ಹಾಕಿ ಕೊಲೆಮಾಡಿದ್ದಾರೆ ಎಂದು ಶಂಕಿಸಿದ್ದಾರೆ. ಸಾವನ್ನಪ್ಪಿರುವ ಮಹಿಳೆಯ ಶವವನ್ನು ಗುರುತಿಸಬಹುದು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

  • ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಸಂತ್ರಸ್ತೆಯ ಶವಕ್ಕೆ ಅಂತ್ಯಕ್ರಿಯೆ ನೆರವೇರಿಸಿದ ಪೊಲೀಸ್

    ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಸಂತ್ರಸ್ತೆಯ ಶವಕ್ಕೆ ಅಂತ್ಯಕ್ರಿಯೆ ನೆರವೇರಿಸಿದ ಪೊಲೀಸ್

    – ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಆಗ್ರಾ: ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಅನಾಥ ಮಹಿಳೆಯ ಶವಕ್ಕೆ ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಅತ್ಯಾಚಾರಕ್ಕೊಳಗಾಗಿ ಆಗ್ರಾದ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟ ಮಹಿಳೆಯ ಶವವನ್ನು ತೆಗೆದುಕೊಂಡು ಹೋಗಲು ಯಾರೂ ಬರಲಿಲ್ಲ. ಹೀಗಾಗಿ ಆಗ್ರಾ ಪೊಲೀಸರು ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದರು. ಅಷ್ಟೇ ಅಲ್ಲದೆ ತಿಥಿ ಕೂಡ ಮಾಡಿ, ಅನೇಕರಿಗೆ ಊಟ ಬಡಿಸಿದ್ದಾರೆ. ಆಗ್ರಾ ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‍ಪಿ ರೋಹನ್ ಬಾಟ್ರೆ ಅವರು, ಅತ್ಯಾಚಾರ ಸಂತ್ರಸ್ತೆ ಕೆಲವು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಆದರೆ ಆಕೆಯ ದೇಹವನ್ನು ತೆಗೆದುಕೊಂಡು ಹೋಗಲು ಯಾರೂ ಬರಲಿಲ್ಲ. ಹೀಗಾಗಿ ನಮ್ಮ ಸಿಬ್ಬಂದಿಯೇ ಅಂತ್ಯಕ್ರಿಯೆ ನೆರವೇರಿ, ತಿಥಿ ಕೂಡ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಕಾರ್ಯಕ್ಕೆ ಸ್ಥಳೀಯರು ಕೂಡ ಪೊಲೀಸರನ್ನು ಶ್ಲಾಘಿಸಿದ್ದಾರೆ. ಜೊತೆಗೆ ಇದು ಉತ್ತಮ ಉಪಕ್ರಮ ಎಂದು ಬಣ್ಣಿಸಿದ್ದಾರೆ. ಇಂತಹ ಪ್ರಯತ್ನಗಳು ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಉತ್ತಮ ಸಂಬಂಧವನ್ನು ಸೃಷ್ಟಿಸುತ್ತದೆ ಹಾಗೂ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  • CAA ವಿರೋಧಿಸಿ ಪ್ರತಿಭಟನೆ – ಆರು ವರ್ಷ ಹಿಂದೆ ಮೃತಪಟ್ಟವರಿಗೆ ನೋಟಿಸ್ ನೀಡಿದ ಜಿಲ್ಲಾಡಳಿತ

    CAA ವಿರೋಧಿಸಿ ಪ್ರತಿಭಟನೆ – ಆರು ವರ್ಷ ಹಿಂದೆ ಮೃತಪಟ್ಟವರಿಗೆ ನೋಟಿಸ್ ನೀಡಿದ ಜಿಲ್ಲಾಡಳಿತ

    ಲಕ್ನೋ: ಆರು ವರ್ಷಗಳ ಹಿಂದೆ ಪಿರೋಜಾಬಾದ್ ನಲ್ಲಿ ಮೃತರಾಗಿದ್ದ 87 ವರ್ಷದ ಬನ್ನೆಖಾನ್, ನ್ಯೂಮೋನಿಯಾದಿಂದ ಬಳಲಿ ದೆಹಲಿಯ ಗಂಗಾರಾಮ್ ಆಸ್ಪತ್ರೆಯಿಂದ ವಾಪಸ್ ಆದ 90 ವರ್ಷದ ಸೂಫಿ ಅನ್ಸಾರ್ ಹುಸೇನ್, ತಿಂಗಳುಗಳಿಂದ ಆರೋಗ್ಯ ಹದಗೆಟ್ಟು ಮಲಗಿರುವ ಕೊಟ್ಲಾ ಮೊಹಲ್ಲಾದ 93 ವರ್ಷದ ಫಸಹತ್ ಮೀರ್ ಖಾನ್ ಇವರೆಲ್ಲ ಸದ್ಯ ಜಾಮೀನು ಪಡೆಯಬೇಕಿದೆ.

    ಸಿಎಎ ವಿರೋಧಿಸಿ ಉತ್ತರ ಪ್ರದೇಶದಲ್ಲಿ ಪ್ರತಿಭಟನೆಗಳಾಗುತ್ತಿದ್ದು, ಸಾಕಷ್ಟು ಮಂದಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡುವ ಆತುರದಲ್ಲಿ ಮೃತ ವ್ಯಕ್ತಿಗಳು ಹಾಗೂ ವಯೋವೃದ್ಧರಿಗೂ ನೋಟಿಸ್ ನೀಡಿ ಈಗ ಉತ್ತರ ಪ್ರದೇಶ ಸರ್ಕಾರ ಟೀಕೆಗೆ ಗುರಿಯಾಗಿದೆ. ಈ ರೀತಿಯ ಸುಮಾರು 200 ಹೆಚ್ಚು ಮಂದಿ ಮ್ಯಾಜಿಸ್ಟ್ರೇಟ್ ಮುಂದೆ ಹೋಗಿ ಸಮಾಜದ ಶಾಂತಿ ಕದಡುವುದಿಲ್ಲ ಎಂದು ಜಾಮೀನು ಪಡೆಯಬೇಕಿದೆ.

    ಫಿರೋಜಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವ್ಯಾಪ್ತಿಯಲ್ಲಿ ಫಸಹತ್ ಮೀರ್ ಖಾನ್ ಮತ್ತು ಸೂಫಿ ಅನ್ಸಾರ್ ಹುಸೇನ್ ಇಬ್ಬರೂ ಸ್ಥಳೀಯ ಶಾಂತಿ ಸಮಿತಿಗಳ ಸದಸ್ಯರಾಗಿದ್ದರು. ಕಳೆದ ಎರಡು ವಾರಗಳ ಹಿಂದೆ ಇವರನ್ನು ಭೇಟಿ ಮಾಡಿದ್ದ, ಜಿಲ್ಲಾಧಿಕಾರಿ ಚಂದ್ರ ವಿಜಯ್ ಸಿಂಗ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚೀಂದ್ರ ಪಟೇಲ್ ಈ ಪ್ರದೇಶದಲ್ಲಿ ಶಾಂತಿ ಸಂದೇಶವನ್ನು ಹರಡುವಂತೆ ಮನವಿ ಮಾಡಿದ್ದರು.

    ಫಸಹತ್ ಮೀರ್ ಖಾನ್ ಮತ್ತು ಸೂಫಿ ಅನ್ಸಾರ್ ಹುಸೇನ್ ಅವರ ಮನೆಯಿಂದ ಕೂಗಳತೆ ದೂರದಲ್ಲಿರುವ ಮೃತ ಬನ್ನೆಖಾನ್ ಅವರ ಹಿರಿಯ ಪುತ್ರ ಪರ್ವೇಜ್ ಖಾನ್ ಗೆ ತಂದೆಗೆ ಜಾಮೀನು ಪಡೆಯುವಂತೆ ಸೂಚಿಸಿದೆ. ಮೃತರನ್ನು ಗಮನಿಸದೇ ಜಿಲ್ಲಾಡಳಿತ ನೋಟೀಸ್ ನೀಡಿದ್ದನ್ನು ವಿರೋಧಿಸಿರುವ ಫರ್ವೆಜ್ ಖಾನ್ ಕನಿಷ್ಠ ಪರಿಶೀಲನೆ ನಡೆಸದೆ ನೋಟಿಸ್ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಪತ್ರಿಕೆಯಲ್ಲಿ ನೋಟಿಸ್ ಬಂದಿರುವುದನ್ನು ಗಮನಿಸಿದ್ದೇನೆ 2014 ರಲ್ಲಿ ತಂದೆ ಊಟ ಮಾಡುವಾಗ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಫರ್ವೇಜ್ ಖಾನ್ ಹೇಳಿದ್ದಾರೆ.

    ಡಿಸೆಂಬರ್ 20 ರಂದು ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಹಿಂಸಾಚಾರ ನಡೆದಿತ್ತು ಈ ಹಿನ್ನೆಲೆ ಜಿಲ್ಲಾಡಳಿತವು ಸಿಆರ್ ಪಿಸಿ 107/116 (3) ಸೆಕ್ಷನ್‍ಗಳ ಅಡಿ “ತೊಂದರೆ ಕೊಡುವವರು” ಎಂದು ಪರಿಗಣಿಸಿ ಹಲವರಿಗೆ ನೋಟಿಸ್ ನೀಡಿ ಜಾಮೀನು ಪಡೆಯಲು ಜಿಲ್ಲಾಡಳಿತ ಸೂಚಿಸಿತ್ತು. ಬೀಟ್ ಕಾನ್‍ಸ್ಟೇಬಲ್, ಸಬ್ ಇನ್ ಸ್ಪೆಕ್ಟರ್ ಏರಿಯಾ ಇನ್ ಚಾರ್ಜ್ ಗಳು ಸೇರಿ ಗುಪ್ತಚರ ಇಲಾಖೆ ನೀಡಿದ ಆಧಾರದ ಮೇಲೆ ನೋಟಿಸ್ ನೀಡಲಾಗಿತ್ತು

  • ಗಂಗಾರತಿ ಸ್ಥಳಕ್ಕೆ ವೀಲ್ ಚೇರ್ ಸೌಲಭ್ಯ – ಕಾಶಿಯಾತ್ರಿಗಳಿಗೆ ಇಲ್ಲಿದೆ ನೋಡಿ ಗುಡ್ ನ್ಯೂಸ್

    ಗಂಗಾರತಿ ಸ್ಥಳಕ್ಕೆ ವೀಲ್ ಚೇರ್ ಸೌಲಭ್ಯ – ಕಾಶಿಯಾತ್ರಿಗಳಿಗೆ ಇಲ್ಲಿದೆ ನೋಡಿ ಗುಡ್ ನ್ಯೂಸ್

    ಲಕ್ನೋ: ಜೀವನದಲ್ಲಿ ಒಮ್ಮೆ ಕಾಶಿ ಯಾತ್ರೆ ಮಾಡಬೇಕು ಗಂಗಾರತಿ ನೋಡಬೇಕು ಅನ್ನೋದು ಬಹುತೇಕ ಹಿಂದೂಗಳ ಆಶಯ. ಆದರೆ ಅಂಗವಿಕಲರು ಮತ್ತು ವಿಶೇಷ ಚೇತನರಿಗೆ ಇದು ಕಷ್ಟವಾಗುತ್ತಿತ್ತು. ಆದರೆ ಇನ್ನು ಆ ತೊಂದರೆ ಇಲ್ಲ, ವಾರಾಣಸಿಯ ಪ್ರಮುಖ ಮೂರು ಗಂಗಾನದಿಯ ಘಾಟ್ ಗಳಿಗೆ ವೀಲ್ ಚೇರ್ ರ‍್ಯಾಂಪ್ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ದೇಶದಲ್ಲಿನ ಪುಣ್ಯಕ್ಷೇತ್ರಗಳ ಪೈಕಿ ಮೊದಲ ಬಾರಿ ಇಲ್ಲಿ ವೀಲ್ ಚೇರ್ ರ‍್ಯಾಂಪ್  ನಿರ್ಮಿಸಲಾಗುತ್ತಿದೆ ಎನ್ನಲಾಗಿದೆ.

    ಹೊಸ ವರ್ಷದ ಗಿಫ್ಟ್ ಎನ್ನುವಂತೆ ಗಂಗಾ ನದಿ ತಟದಲ್ಲಿರುವ ಮಣಿಕರ್ಣಿಕ, ಅಸ್ಸಿ ಮತ್ತು ದಶಾಶ್ವಮೇಧ ಘಾಟ್ ನಲ್ಲಿ ವೀಲ್ ಚೇರ್ ರ‍್ಯಾಂಪ್ ನಿರ್ಮಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಮೂರು ಕೋಟಿ ಬಜೆಟ್ ನಲ್ಲಿ ಅರ್ಧವನ್ನು ಉತ್ತರ ಪ್ರದೇಶ ಸರ್ಕಾರ ಬಿಡುಗಡೆ ಮಾಡಿದೆ. ವಾರಾಣಸಿಯ ಘಾಟ್ ಗಳ ಪೈಕಿ ಈ ಮೂರು ಘಾಟ್ ಗಳು ಹೆಚ್ಚು ಜನಸಂದಣಿಯಿಂದ ಕೂಡಿರುತ್ತೆ ಅಲ್ಲದೇ ಇಲ್ಲಿ ನಡೆಯುವ ಗಂಗಾರಾತಿ ನೋಡಲು ಜನರು ಬಯಸುತ್ತಾರೆ. ಆದರೆ ದೊಡ್ಡ ಪ್ರಮಾಣದಲ್ಲಿ ಹೆಚ್ಚು ಮೆಟ್ಟಿಲುಗಳು ಇರುವ ಕಾರಣ ಅಂಗವಿಕಲರಿಗೆ ವಿಶೇಷ ಚೇತನರಿಗೆ ಇದು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡಿರುವ ಸರ್ಕಾರ ಈ ಮೂರು ಘಾಟ್ ಗಳಲ್ಲಿ ಗಂಗಾರತಿ ನಡೆಯುವ ಸ್ಥಳಕ್ಕೆ ವೀಲ್ ಚೇರ್ ರ‍್ಯಾಂಪ್ ನಿರ್ಮಿಸಲು ಚಿಂತಿಸಿದೆ.

    ಸ್ಥಳೀಯ ಬಿಜೆಪಿ ನಾಯಕರ ಪ್ರಕಾರ ವಿಶೇಷ ಚೇತನರು ಗಂಗಾರತಿ ನೋಡಲು ಕಷ್ಟ ಪಡುವುದನ್ನು ಪ್ರಧಾನಿ ನರೇಂದ್ರ ಮೋದಿ ಗಮನಿಸಿದ್ದರಂತೆ. ಬಳಿಕ ವೀಲ್ ಚೇರ್ ರ‍್ಯಾಂಪ್ ನಿರ್ಮಿಸುವ ಈ ಕಾರ್ಯಕ್ಕೆ ಹೆಚ್ಚು ಆಸಕ್ತಿ ವಹಿಸಿದ್ದರು ಎನ್ನಲಾಗಿದ್ದು ಕೇಂದ್ರ ನೆರವಿನಲ್ಲಿ ಈ ಮೂರು ಘಾಟ್ ಗಳನ್ನು ಅಭಿವೃದ್ಧಿ ಪಡಿಸಲು ಸೂಚಿಸಲಾಗಿದೆಯಂತೆ. ಅಲ್ಲದೇ ಕುಡಿಯುವ ನೀರಿನ ಅರವಟಿಕೆ, ಶೌಚಾಲಯಗಳಲ್ಲಿ ಬ್ರೇನ್ ಲಿಪಿ ಅಳವಡಿಸಲು ಸೂಚಿಸಿಲಾಗಿದೆ.

    ವಾರಾಣಸಿಯಲ್ಲಿ ಈ ಮೂರು ಘಾಟ್‍ಗಳು ಅತಿಹೆಚ್ಚು ಜನ ಸಂದಣಿಯಿಂದ ಕೂಡಿದ್ದು, ಇಲ್ಲಿ ಅಂಗವಿಕಲರು ಮತ್ತು ವಿಶೇಷ ಚೇತನರು ಗಂಗಾರತಿ ನೋಡುವುದು ಕಠಿಣ, ಹೆಚ್ಚು ಮೆಟ್ಟಿಲುಗಳಿರುವುದರಿಂದ ವೀಕಲಚೇತನರಿಗೆ ಕಷ್ಟವಾಗುತ್ತಿದೆ ಎಂದು ವರದಿ ನೀಡಲಾಗಿತ್ತು. ಈ ವರದಿ ಆಧರಿಸಿ ಕೇಂದ್ರ ನೆರವಿನಲ್ಲಿ ರಾಜ್ಯ ಸರ್ಕಾರ ಕಾಮಗಾರಿ ಆರಂಭಿಸಲು ಮುಂದಾಗಿದೆ.

  • ಎಲ್ಲ ಭಯೋತ್ಪಾದಕರು ಹಿಂದೂಗಳೆಂಬ  ಹೇಳಿಕೆಯನ್ನು ಒಪ್ಪಿಕೊಳ್ಳುತ್ತೇನೆ- ಎಸ್‍ಡಿಪಿಐ ಮುಖಂಡ

    ಎಲ್ಲ ಭಯೋತ್ಪಾದಕರು ಹಿಂದೂಗಳೆಂಬ ಹೇಳಿಕೆಯನ್ನು ಒಪ್ಪಿಕೊಳ್ಳುತ್ತೇನೆ- ಎಸ್‍ಡಿಪಿಐ ಮುಖಂಡ

    ನವದೆಹಲಿ: ಭಯೋತ್ಪಾದಕರೆಲ್ಲರೂ ಹಿಂದೂಗಳೆಂದು ಹೇಳಿಕೆ ನೀಡಿದ್ದನ್ನು ಒಪ್ಪಿಕೊಳ್ಳುತ್ತೇನೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಮುಖಂಡ ತಸ್ಲೀಮ್ ಅಹ್ಮದ್ ರೆಹ್ಮಾನಿ ಸ್ಪಷ್ಟಪಡಿಸಿದ್ದಾರೆ.

    ಖಾಸಗಿ ವಾಹಿನಿಯೊಂದಿಗೆ ಮಾತನಾಡುವ ವೇಳೆ ಈ ಕುರಿತು ರೆಹ್ಮಾನಿ ಒಪ್ಪಿಕೊಂಡಿದ್ದು, ಕಾಫಿರ್ ಎಂಬ ಬದವನ್ನು ಬಳಸಿದರ ಕುರಿತು ಉತ್ತರಿಸಿದ್ದಾರೆ. ಪ್ರಾರಂಭದಲ್ಲಿ ಕಾಫಿರ್ ಪದವನ್ನು ಬಳಸಿಲ್ಲ. ಕುಫ್ರ್ ಪದವನ್ನು ಬಳಸಿದ್ದೆ ಎಂದು ಹೇಳಿದ್ದರು. ನಂತರ ತಮ್ಮ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ.

    ಎಲ್ಲ ಹಿಂದೂಗಳು ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದಕರೆಲ್ಲರೂ ಹಿಂದೂಗಳು. ಪಿಎಫ್‍ಐಗೆ ಈ ಕುರಿತು ನಾವು ಭರವಸೆ ನೀಡುತ್ತೇವೆ. ನೀವು ಒಂಟಿಯಾಗಿಲ್ಲ. ನಿಮ್ಮ ಜೊತೆ ನಾವಿದ್ದೇವೆ ಎಂದು ನವೆಂಬರ್ 2017ರಲ್ಲಿ ಹೇಳಿದ್ದೆ ಎಂದು ರೆಹ್ಮಾನಿ ಒಪ್ಪಿಕೊಂಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ನಡೆದ ಸಿಎಎ ವಿರುದ್ಧದ ಹಿಂಸಾಚಾರದಲ್ಲಿ ತೊಡಗಿರುವ ಕುರಿತು ಚರ್ಚೆ ನಡೆದಿದ್ದು, ಯುಪಿ ಮುಖ್ಯಸ್ಥ ಹಾಗೂ ಖಜಾಂಚಿ ಸೇರಿದಂತೆ 25 ಪಿಎಫ್‍ಐ ಸದಸ್ಯರನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲೇ ರೆಹ್ಮಾನಿ ಈ ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ನವೆಂಬರ್ 6, 2017ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಕಾರ್ಯಕರ್ತಸನ್ಮಾನ ಕಾರ್ಯಕ್ರಮದಲ್ಲಿ ರೆಹ್ಮಾನಿ ಪ್ರಚೋದಿತ ಹೇಳಿಕೆ ನೀಡಿದ್ದರು. ಅಲ್ಲದೆ ಎಸ್‍ಡಿಪಿಐ ಪಿಎಫ್‍ಐನ ರಾಜಕೀಯ ಸಂಘಟನೆಯಾಗಿದೆ. ಈ ಸಂಘಟನೆಗಳು ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿವೆ ಎಂದು ಆರೋಪಿಸಲಾಗಿದೆ.

    ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಸಂಘಟನೆಯನ್ನು ನಿಷೇಧಿಸುವಂತೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ. ಉತ್ತರ ಪ್ರದೇಶದಲ್ಲಿ ನಡೆದ ಭಾರೀ ಹಿಂಸಾಚಾದಲ್ಲಿ ಸಂಘಟನೆ ಪ್ರಮುಖ ಪಾತ್ರ ವಹಿಸಿದೆ ಎಂದು ಪೊಲೀಸರು ಆರೋಪಿಸಿದ್ದು, ಇದಕ್ಕೆ ಸೂಕ್ತ ದಾಖಲೆಗಳನ್ನು ಸಹ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪಿಎಫ್‍ಐ ಸಂಘಟನೆಯ ಕಾರ್ಯಕರ್ತರು ಹಿಂಸಾಚಾರ ನಡೆಸಿದ್ದಾರೆ. ಈ ಮೂಲಕ ಯುಪಿಯ ಹಿಂಸಾಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಗೆ ಕಾರಣರಾಗಿದ್ದಾರೆ ಎಂದು ಗೃಹ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಅಲ್ಲದೆ ಯುಪಿ ರಾಜಧಾನಿ ಲಕ್ನೋದಲ್ಲಿ ನಡೆದ ಹಿಂಸಾಚಾರದ ಮಾಸ್ಟರ್ ಮೈಂಡ್ ಪಿಎಫ್‍ಐ ಸಂಘಟನೆಯಾಗಿದೆ. ಸಿಎಎ ಕುರಿತು ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದೆ. ಈ ಕುರಿತು ಪಿಎಫ್‍ಐ ಮುಖ್ಯಸ್ಥ ಹಾಗೂ ಖಜಾಂಚಿ ಹಿಂಸಾಚಾರದಲ್ಲಿ ತಮ್ಮ ಪಾತ್ರವಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.