Tag: uttar pradesh

  • ಕೊರೊನಾ ಭೀತಿ ನಡುವೆ ಜನಿಸಿದ ಮಗುವಿಗೆ ‘ಲಾಕ್‍ಡೌನ್’ ಎಂದು ಹೆಸರಿಟ್ಟ ದಂಪತಿ

    ಕೊರೊನಾ ಭೀತಿ ನಡುವೆ ಜನಿಸಿದ ಮಗುವಿಗೆ ‘ಲಾಕ್‍ಡೌನ್’ ಎಂದು ಹೆಸರಿಟ್ಟ ದಂಪತಿ

    – ರಾಷ್ಟ್ರೀಯ ಹಿತಾಸಕ್ತಿ ಸಂಕೇತವಾಗಿ ಹೆಸರು
    – ಕೇಂದ್ರ ಸರ್ಕಾರ, ಪ್ರಧಾನಿ ನಿರ್ಧಾರಕ್ಕೆ ಶ್ಲಾಘನೆ

    ಲಕ್ನೋ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿದೆ. ಆದರೆ ಉತ್ತರ ಪ್ರದೇಶದ ದಂಪತಿ ಲಾಕ್‍ಡೌನ್‍ನಲ್ಲಿ ಮಗು ಜನಿಸಿದ್ದಕ್ಕೆ ಮಗನಿಗೆ ‘ಲಾಕ್‍ಡೌನ್’ ಅಂತಲೇ ಹೆಸರಿಟ್ಟಿದ್ದಾರೆ.

    ಇತ್ತೀಚೆಗೆ ಹೆಣ್ಣು ಮಗುವೊಂದಕ್ಕೆ ‘ಕೊರೊನಾ’ ಎಂದು ನಾಮಕರಣ ಮಾಡಿದ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ಇದೇ ಬೆನ್ನಲ್ಲೇ ಈಗ ಗಂಡು ಮಗುವಿಗೆ ‘ಲಾಕ್‍ಡೌನ್’ ಎಂದು ನಾಮಕರಣ ಮಾಡಿ ಉತ್ತರ ಪ್ರದೇಶ ದಂಪತಿ ಸುದ್ದಿಯಾಗಿದ್ದಾರೆ.

    ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಖುಖುಂಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಖುಖುಂಡು ಗ್ರಾಮದ ನಿವಾಸಿ ಪವನ್ ಅವರು ತಮ್ಮ ಮಗನಿಗೆ ಸೋಮವಾರದಂದು ‘ಲಾಕ್‍ಡೌನ್’ ಎಂದು ನಾಮಕರಣ ಮಾಡಿದ್ದಾರೆ.

    ನನ್ನ ಮಗ ಲಾಕ್‍ಡೌನ್ ಸಮಯದಲ್ಲಿ ಜನಿಸಿದ್ದಾನೆ. ಇಡೀ ವಿಶ್ವವನ್ನೇ ಕೊರೊನಾ ವೈರಸ್ ಕಾಡುತ್ತಿದೆ. ಭಾರತದಲ್ಲೂ ಅಟ್ಟಹಾಸ ಮೆರೆಯುತ್ತಿರುವ ಮಾಹಾಮಾರಿ ಕೊರೊನಾ ಹರಡದಂತೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದಾರೆ. ಇದು ಒಳ್ಳೆಯ ನಿರ್ಧಾರ, ಸಾರ್ವಜನಿಕರ ಜೀವ ಉಳಿಸಲು ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು, ಕ್ರಮಗಳು ನಿಜಕ್ಕೂ ಶ್ಲಾಘನೀಯ. ರಾಷ್ಟ್ರೀಯ ಹಿತಾಸಕ್ತಿಯಿಂದ ಲಾಕ್‍ಡೌನ್ ಮಾಡಲಾಗಿದೆ. ಹೀಗಾಗಿ ಈ ಸಮಯದಲ್ಲಿ ಜನಿಸಿದ ನನ್ನ ಮಗನಿಗೆ ‘ಲಾಕ್‍ಡೌನ್’ ಎಂದೇ ಹೆಸರಿಟ್ಟಿದ್ದೇವೆ ಎಂದು ಪವನ್ ಅವರು ತಿಳಿಸಿದ್ದಾರೆ.

    ನನ್ನ ಮಗನ ಹೆಸರು ಕೇಳಿದ ತಕ್ಷಣ ಸ್ವಹಿತಾಸಕ್ತಿಗಿಂತ ರಾಷ್ಟ್ರೀಯ ಹಿತಾಸಕ್ತಿ ಮುಖ್ಯ ಎನ್ನುವುದು ಎಲ್ಲರಿಗೂ ತಿಳಿಯಬೇಕು. ನಾವಂತೂ ಲಾಕ್‍ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇವೆ. ಹೀಗಾಗಿ ಸದ್ಯ ಯಾವುದೇ ಧಾರ್ಮಿಕ ಕಾರ್ಯಕ್ರಮ, ಸಮಾರಂಭಗಳನ್ನು ಮಾಡುತ್ತಿಲ್ಲ. ದಯವಿಟ್ಟು ಈಗ ಯಾರೂ ಮಗುವನ್ನು ನೋಡಲು ಮನೆಗೆ ಬರಬೇಡಿ ಎಂದು ಸಂಬಂಧಿಕರಿಗೆ ಪವನ್ ಅವರು ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ಗೋರಖ್‍ಪುರದಲ್ಲಿ ಮಾರ್ಚ್ 22ರಂದು ಜನತಾ ಕರ್ಫ್ಯೂ ದಿನದಂದು ಹೆಣ್ಣು ಮಗು ಜನಿಸಿದ್ದು, ಆ ಮಗುವಿಗೆ ‘ಕೊರೊನಾ’ ಎಂದು ಹೆಸರಿಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಗುವಿನ ಕುಟುಂಬ, ಕೊರೊನಾ ವೈರಸ್ ಅಪಾಯಕಾರಿ, ಜೀವವನ್ನು ತೆಗೆಯುತ್ತದೆ ಎಂದು ತಿಳಿದಿದೆ. ಆದರೆ ಅದು ಜಗತ್ತನ್ನು ಒಂದು ಮಾಡುವ ಒಳ್ಳೆಯ ಕೆಲಸವನ್ನೂ ಮಾಡಿದೆ. ಹೀಗಾಗಿ ಜನರ ಒಗ್ಗಟ್ಟಿನ ಸಂಕೇತವಾಗಿ ಮಗುವಿಗೆ ‘ಕೊರೊನಾ’ ಎಂದು ಹೆಸರಿಟ್ಟಿದ್ದೇವೆ ಎಂದು ತಿಳಿಸಿತ್ತು.

  • ಕೊರೊನಾ ಎಫೆಕ್ಟ್ – ಸ್ವಗ್ರಾಮಕ್ಕೆ ಬಂದ ಕಾರ್ಮಿಕರ ಮೇಲೆ ರಾಸಾಯನಿಕ ಸಿಂಪಡಣೆ

    ಕೊರೊನಾ ಎಫೆಕ್ಟ್ – ಸ್ವಗ್ರಾಮಕ್ಕೆ ಬಂದ ಕಾರ್ಮಿಕರ ಮೇಲೆ ರಾಸಾಯನಿಕ ಸಿಂಪಡಣೆ

    ಲಕ್ನೋ: ದೇಶಾದ್ಯಂತ ಲಾಕ್‍ಡೌನ್ ಹಿನ್ನೆಲೆ ಸ್ವಗ್ರಾಮಗಳಿಗೆ ತೆರಳಿದ್ದ ಕೂಲಿ ಕಾರ್ಮಿಕರ ಮೇಲೆ ಅಗ್ನಿಶಾಮಕದಳ ಸಿಬ್ಬಂದಿ ರಾಸಾಯನಿಕ ಸಿಂಪಡಿಸಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.

    ದೆಹಲಿ, ಮುಂಬೈ ಸೇರಿದಂತೆ ಹಲವು ಮಹಾನಗರಗಳಿಂದ ಸ್ವಗ್ರಾಮಗಳಿಗೆ ತೆರಳಿದ್ದ ಕಾರ್ಮಿಕರ ಮೇಲೆ ಅಗ್ನಿ ಶಾಮಕ ದಳದ ಸಿಬ್ಬಂದಿ ರಾಸಾಯನಿಕಯುಕ್ತ ನೀರನ್ನು ಸಿಂಪಡಿಸಿದ್ದಾರೆ ಎಂದು ವರದಿಯಾಗಿದೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದೆ. ಈ ವಿಡಿಯೋವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಕೊರೊನಾ ವಿರುದ್ಧ ನಾವೆಲ್ಲರೂ ಜೊತೆಯಾಗಿ ಹೋರಾಡುತ್ತಿದ್ದೇವೆ ಎಂದು ಉತ್ತರಪ್ರದೇಶ ಸರ್ಕಾರ ಹೇಳಿದೆ. ಆದರೆ ದಯವಿಟ್ಟು ಇಂತಹ ಅಮಾನವೀಯ ಕೆಲಸಗಳನ್ನು ಮಾಡಬೇಡಿ. ವಲಸೆ ಕಾರ್ಮಿಕರು ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರ ಮೇಲೆ ರಾಸಾಯನಿಕ ಸಿಂಪಡಿಸುವ ಮೂಲಕ ಅವರನ್ನು ಈ ರೀತಿ ನಡೆಸಿಕೊಳ್ಳಬೇಡಿ. ಇದು ಅವರನ್ನು ರಕ್ಷಿಸುವುದಿಲ್ಲ ಬದಲಿಗೆ ಅವರ ಆರೋಗ್ಯಕ್ಕೆ ಹೆಚ್ಚಿನ ಹಾನಿ ಉಂಟು ಮಾಡುತ್ತದೆ ಎಂದು ಪ್ರಿಯಾಂಕಾ ಉಲ್ಲೇಖಿಸಿದ್ದಾರೆ.

    ವಿಡಿಯೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಬರೇಲಿ ಪುರಸಭೆ ತಹಶಿಲ್ದಾರ್ ಪ್ರಕರಣದ ತನಿಖೆಗೆ ಆದೇಶಿಸಿದ್ದು, ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಅವರು, ಬಸ್‍ಗಳನ್ನು ಸ್ಯಾಜಿಟೈಜ್ ಮಾಡಲು ಹೇಳಿದ್ದೆವು ಆದರೆ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಮಿಕರ ಮೇಲೆ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

  • ಗ್ರಾಮದ ಹೆಸರು ಕೇಳಿದ್ರೆ ಓಡಿ ಹೋಗ್ತಾರೆ

    ಗ್ರಾಮದ ಹೆಸರು ಕೇಳಿದ್ರೆ ಓಡಿ ಹೋಗ್ತಾರೆ

    -ಗ್ರಾಮಸ್ಥರಿಂದ ಅಂತರ
    -ಮೀನು, ಮದ್ಯ, ಹೋಟೆಲ್ ಬಳಿಕ ಊರು

    ಲಕ್ನೊ: ಉತ್ತರ ಪ್ರದೇಶದಲ್ಲಿ ಜನರು ಕೊರೊನಾ ಗ್ರಾಮದ ಹೆಸರು ಕೇಳಿದ್ರೆ ಓಡಿ ಹೋಗುತ್ತಿದ್ದಾರೆ. ಮತ್ತೆ ಕೆಲವರು ಕೊರೊನಾ ಗ್ರಾಮಸ್ಥರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

    ಕೊರೊನಾ ವೈರಸ್ ತಡೆಗೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ನಡುವೆ ಕೊರೊನಾ ಹೆಸರಿನ ಮೀನು, ಹೋಟೆಲ್, ಮದ್ಯದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಕೊರೊನಾ ಹೆಸರಿನ ಗ್ರಾಮವೊಂದಿದೆ. ಈ ಗ್ರಾಮದ ಜನರು ಬೇರೆ ಊರುಗಳಲ್ಲಿ ತಾವು ಕೊರೊನಾದಿಂದ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಆತಂಕಕ್ಕೊಳಗಾಗುತ್ತಿದ್ದಾರೆ.

     

    ಸೀತಾಪುರ ಜಿಲ್ಲೆಯ ತಹ್ಸಿಲ್ ಇಲಾಖೆಯಲ್ಲಿ ಕೊರೊನಾ ಗ್ರಾಮವಿದೆ. ಸುಮಾರು 8 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಬ್ರಾಹ್ಮಣ ಮತ್ತು ಯಾದವ ಕುಲದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಕೊರೊನಾ ಗ್ರಾಮಸ್ಥರು ಕೃಷಿಕರಾಗಿದ್ದು, ಗ್ರಾಮ ಧರ್ಮ ಮತ್ತು ಸಂಸ್ಕೃತಿಯಲ್ಲಿ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.

  • ಪ್ರಧಾನಿ ಮೋದಿ ಲಾಕ್‍ಡೌನ್ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಅಯೋಧ್ಯೆಗೆ ತೆರಳಿದ ಯೋಗಿ

    ಪ್ರಧಾನಿ ಮೋದಿ ಲಾಕ್‍ಡೌನ್ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಅಯೋಧ್ಯೆಗೆ ತೆರಳಿದ ಯೋಗಿ

    ಲಕ್ನೋ: ದೇಶದಲ್ಲಿ ಕೊರೊನಾ ಸೋಂಕಿತರ ಹಾಗೂ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದಾರೆ. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಾಕ್‍ಡೌನ್ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಟೆಂಪಲ್ ರನ್ ನಡೆಸಿದ್ದಾರೆ.

    ಯೋಗಿ ಆದಿತ್ಯನಾಥ್ ಅವರು ಮಂಗಳವಾರ ತಡರಾತ್ರಿ ಅಯೋಧ್ಯೆಗೆ ತಲುಪಿದ್ದರು. ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುವ ಹಿನ್ನೆಲೆಯಲ್ಲಿ ಯೋಗಿ ಅವರು ಇಂದು ಬೆಳಗ್ಗೆ ಶ್ರೀರಾಮನ ವಿಗ್ರಹವನ್ನು ತಾತ್ಕಾಲಿಕವಾಗಿ ನಿರ್ಮಿಸಿದ ದೇವಾಲಯಕ್ಕೆ ಸ್ಥಳಾಂತರಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು ಇಪ್ಪತ್ತರಿಂದ ಮೂವತ್ತು ಜನರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

    ಈ ಕಾರ್ಯಕ್ರಮದ ವೇಳೆ ಯಾವುದೇ ಮಾಧ್ಯಮಗಳಿಗೆ ಅವಕಾಶ ನೀಡಿರಲಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಡಿಯೋ ಹಾಗೂ ಫೋಟೋಗಳು ಹರಿದಾಡುತ್ತಿವೆ. ಅಷ್ಟೇ ಅಲ್ಲದೆ ಸಿಎಂ ಕೆಲವು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಜೊತೆಗೆ ಅಯೋಧ್ಯೆಯ ಜಿಲ್ಲಾಧಿಕಾರಿ, ಪೊಲೀಸ್ ಮುಖ್ಯಸ್ಥರು ಸೇರಿದಂತೆ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು. ಆದರೆ ಯೋಗಿ ಆದಿತ್ಯನಾಥ್ ಸೇರಿದಂತೆ ಕೆಲವರು ಮಾಸ್ಕ್ ಕೂಡ ಧರಿಸಿರಲಿಲ್ಲ.

    ಪ್ರಧಾನಿ ಮೋದಿ ಅವರ ಸೂಚನೆ, ಮನವಿಯನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಗಾಳಿ ತೂರಿಬಿಡ್ರಾ? ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಶ್ರೀರಾಮನ ಮೂರ್ತಿಯನ್ನು ಸ್ಥಳಾಂತರಿಸವುದು ಅಗತ್ಯವಿತ್ತೇ ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

    ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕುರಿತು ಏಪ್ರಿಲ್ ತಿಂಗಳ ಮೊದಲ ವಾರದಂದು ಮೊದಲ ಸಭೆ ಕರೆಯಲಾಗಿದೆ. ಈ ಸಭೆಯನ್ನು ದೇವಸ್ಥಾನ ನಿರ್ಮಾಣ ಸಮಿತಿ ಮುಂದೂಡುತ್ತೋ, ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಿಎಂ ಯೋಗಿ ಆದಿತ್ಯನಾಥ್ ಅವರ ಇಂದಿನ ನಡೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

  • ಹೆಣ್ಣು ಶಿಶುವಿಗೆ ಕೊರೊನಾ ಎಂದ ಹೆಸರಿಟ್ಟ ಚಿಕ್ಕಪ್ಪ

    ಹೆಣ್ಣು ಶಿಶುವಿಗೆ ಕೊರೊನಾ ಎಂದ ಹೆಸರಿಟ್ಟ ಚಿಕ್ಕಪ್ಪ

    ಲಕ್ನೋ: ಮಹಾಮಾರಿ ಕೊರೊನಾ ವೈರಸ್‍ಗೆ ಇಡೀ ದೇಶವೇ ತಲ್ಲಣಗೊಂಡಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿವೆ. ಈ ಮಧ್ಯೆ ವೈರಸ್ ಹೆಸರನ್ನು ಉತ್ತರ ಪ್ರದೇಶದಲ್ಲಿ ನವಜಾತ ಹೆಣ್ಣು ಶಿಶುವೊಂದಕ್ಕೆ ನಾಮಕರಣ ಮಾಡಲಾಗಿದೆ.

    ಜನತಾ ಕರ್ಫ್ಯೂ ದಿನಕ್ಕೂ ಕೆಲವೇ ಗಂಟೆಗಳಿಗೂ ಮುನ್ನ ಅಂದ್ರೆ ಭಾನುವಾರ ಗೋರಖಪುರದ ಸೊಹಗೌರಾ ಗ್ರಾಮದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಆ ಬಳಿಕ ಮಗುವಿನ ಚಿಕ್ಕಪ್ಪ ಕೊರೊನಾ ಎಂದು ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಂಭವಾಗಿದೆ.

    ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿರುವ ಚಿಕ್ಕಪ್ಪ ನಿತೇಶ್ ತ್ರಿಪಾಠಿ, ಕೊರೊನಾ ಸೋಂಕು ಭಯಾನಕವಾಗಿದೆ ಎನ್ನುವುದರಲಿ ಯಾವುದೇ ಸಂದೇಹವೇ ಇಲ್ಲ. ಅಷ್ಟೇ ಅಲ್ಲದೆ ಜಗತ್ತಿನಾದ್ಯಂತ ಅನೇಕ ಜನರನ್ನು ಬಲಿ ಪಡೆದುಕೊಂಡಿದೆ. ಆದರೆ ಇದರಿಂದ ಅನುಕೂಲವೂ ಆಗಿದೆ. ಕೊರೊನಾ ವೈರಸ್‍ನಿಂದಾಗಿ ಕೆಲವು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡಿದ್ದೇವೆ, ಜತ್ತಿನ ಎಲ್ಲಾ ದೇಶಗಳು ಒಂದಾಗಿ ಹೋರಾಡುತ್ತಿವೆ. ಹೀಗಾಗಿ ಈ ಮಗು ದುಷ್ಟರ ವಿರುದ್ಧ ಹೋರಾಡಲು ಜನರ ಒಗ್ಗಟ್ಟಿನ ಸಂಕೇತವಾಗಿರುತ್ತದೆ ಎಂದು ತಿಳಿಸಿದ್ದಾರೆ.

    ಮಗುವಿನ ತಾಯಿ ರಜಿನಿ ತ್ರಿಪಾಠಿ ಹಾಗೂ ಪೋಷಕರ ಒಪ್ಪಿಗೆ ಪಡೆದೇ ಕೊರೊನಾ ಅಂತ ನಾಮಕರಣ ಮಾಡಲಾಗಿದೆ ಎಂದು ನಿತೇಶ್ ತ್ರಿಪಾಠಿ ಹೇಳಿದ್ದಾರೆ.

  • ಪಕ್ಕದ ಮನೆಯ ಯುವತಿ ಮೇಲೆ ಅತ್ಯಾಚಾರ ಎಸಗಿದ ಯುವಕ

    ಪಕ್ಕದ ಮನೆಯ ಯುವತಿ ಮೇಲೆ ಅತ್ಯಾಚಾರ ಎಸಗಿದ ಯುವಕ

    ಲಕ್ನೋ: ಯುವಕನೊಬ್ಬ ತನ್ನ ಪಕ್ಕದ ಮನೆಯ 22 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ನಡೆದಿದೆ.

    ಸಂತ್ರಸ್ತೆ ಹಾಗೂ ಆರೋಪಿ ಯುವಕ ಮುಜಾಫರ್‌ನಗರ ಜಿಲ್ಲೆಯ ಸಂಜಾಕ್ ಗ್ರಾಮದ ಸಂಜಾಕ್ ಗ್ರಾಮದ ನಿವಾಸಿಗಳಾಗಿದ್ದಾರೆ. ಘಟನೆ ನಡೆದು ತಿಂಗಳು ಕಳೆದಿದ್ದರೂ ಯುವತಿ ಯಾರ ಮುಂದೆ ಹೇಳಿಕೊಂಡಿರಲಿಲ್ಲ. ಆದರೆ ಆರೋಪಿಯ ಕಿರುಕುಳ ಹೆಚ್ಚಾಗಿದ್ದರಿಂದ ಯುವತಿ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದರಿಂದ ಪ್ರಕರಣ ಬೆಳೆಕಿಗೆ ಬಂದಿದೆ.

    ಕಳೆದ ತಿಂಗಳು ಯುವತಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವಕ ಬಂದಿದ್ದ. ಬಳಿಕ ಯುವತಿಯ ಮೇಲೆ ಅತ್ಯಾಚಾರ ಎಸಗಿ, ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲದೆ ಆಗಾಗ ಕಿರಕುಳ ಕೊಡಲು ಆರಂಭಿಸಿದ್ದ. ಇದರಿಂದ ಭಯಗೊಂಡ ಸಂತ್ರಸ್ತೆ ಪೋಷಕರ ಬಳಿ ತನ್ನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಹೇಳಿಕೊಂಡಿದ್ದಳು.

    ಈ ಸಂಬಂಧ ಯುವತಿಯ ತಂದೆ ಶಾಹಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಬಾಲಿವುಡ್‍ನ ಖ್ಯಾತ ಗಾಯಕಿಗೆ ಕೊರೊನಾ ಪಾಸಿಟಿವ್

    ಬಾಲಿವುಡ್‍ನ ಖ್ಯಾತ ಗಾಯಕಿಗೆ ಕೊರೊನಾ ಪಾಸಿಟಿವ್

    ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಶುಕ್ರವಾರ ನಾಲ್ಕು ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಬಾಲಿವುಡ್‍ನ ಪ್ರಸಿದ್ಧ ಗಾಯಕಿ ಕನ್ನಿಕಾ ಕಪೂರ್ ಕೂಡ ಇದ್ದಾರೆ.

    ಗಾಯಕಿ ಕನ್ನಿಕಾ ಅವರನ್ನು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯ (ಕೆಜಿಎಂಯು)ನ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಕನ್ನಿಕಾ ಮಾರ್ಚ್ 15ರಂದು ಲಂಡನ್‍ನಿಂದ ಲಕ್ನೋಗೆ ಮರಳಿದ್ದರು. ಬಳಿಕ ಅವರು ಅಪಾರ್ಟ್ ಮೆಂಟ್‍ನಲ್ಲಿ ಉಳಿದುಕೊಂಡು, ಹೋಟೆಲ್‍ವೊಂದರಲ್ಲಿ ಪಾರ್ಟಿ ನೀಡಿದ್ದರು. ಈ ಪಾರ್ಟಿಯಲ್ಲಿ ಸುಮಾರು 500 ಜನರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

    ಕನ್ನಿಕಾ ಅವರೊಂದಿಗೆ ನೇರ ಸಂಭಾಷಣೆ ನಡೆಸಿದ, ಪಾರ್ಟಿಯಲ್ಲಿ ಭಾಗವಹಿಸಿದ್ದ ಜನರಿಗಾಗಿ ಈಗ ಆರೋಗ್ಯ ಇಲಾಖೆ ಹುಡುಕಾಟ ನಡೆಸಿದೆ. ಈ ಮೂಲಕ ಅವರನ್ನು ತಪಾಸಣೆ ನಡೆಸು ಸಿದ್ಧತೆ ನಡೆದಿದೆ. ಒಂದು ವೇಳೆ ಅವರಲ್ಲಿ ಕೊರೊನಾದ ಲಕ್ಷಣಗಳು ಕಂಡು ಬಂದರೆ ವೀಕ್ಷಣೆಗೆ ಇರಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

    ಶುಕ್ರವಾರ ಮಧ್ಯಾಹ್ನ 2 ಗಂಟೆಯವರೆಗಿನ ಮಾಹಿತಿ ಪ್ರಕಾರ ಭಾರತದಲ್ಲಿ 194 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಪೈಕಿ 20 ಜನರು ಗುಣಮುಖರಾಗಿದ್ದು, 170 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ನಾಲ್ವರು ಮೃತಪಟ್ಟಿದ್ದಾರೆ.

  • ಟಿಕ್‍ಟಾಕ್ ಹುಚ್ಚಿಗೆ ಬಲಿಯಾದ ನವವಿವಾಹಿತ – ಟ್ರ್ಯಾಕ್ಟರ್ ಸ್ಟಂಟ್ ಮಾಡಲು ಹೋಗಿ ಅಪ್ಪಚ್ಚಿಯಾಯ್ತು ದೇಹ

    ಟಿಕ್‍ಟಾಕ್ ಹುಚ್ಚಿಗೆ ಬಲಿಯಾದ ನವವಿವಾಹಿತ – ಟ್ರ್ಯಾಕ್ಟರ್ ಸ್ಟಂಟ್ ಮಾಡಲು ಹೋಗಿ ಅಪ್ಪಚ್ಚಿಯಾಯ್ತು ದೇಹ

    – ಹೋಳಿ ಹಬ್ಬದಂದೇ ಹರಿದ ರಕ್ತದೋಕುಳಿ
    – ವಿಡಿಯೋ ಮಾಡುವಾಗ್ಲೆ ಸಂಭವಿಸಿದ ಅಪಘಾತ

    ಲಕ್ನೋ: ಇತ್ತೀಚೆಗೆ ಟಿಕ್‍ಟಾಕ್ ಯುವಪೀಳಿಗೆಗೆ ಮಾರಕವಾಗುತ್ತಿದ್ದು, ಟಿಕ್‍ಟಾಕ್ ವಿಡಿಯೋ ಮಾಡುವ ಹುಚ್ಚಿಗೆ ಬಿದ್ದ ಬಳಕೆದಾರರು ತಮ್ಮ ಜೀವಕ್ಕೆ ಕಂಟಕ ತಂದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗೆ ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ನವವಿವಾಹಿತನೋರ್ವ ಜೀವ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಖಿಂಡೀದಿಯಾ ಗ್ರಾಮದ ನಿವಾಸಿ ಕಪಿಲ್(23) ಎಂದು ಗುರುತಿಸಲಾಗಿದೆ. ಬುಧವಾರ ಹೋಳಿ ಹಬ್ಬದ ಹಿನ್ನೆಲೆ ಗ್ರಾಮದಲ್ಲಿ ಸಂಭ್ರಮದಿಂದ ಬಣ್ಣದ ಹಬ್ಬವನ್ನು ಆಚರಿಸಲಾಗುತ್ತಿತ್ತು. ಈ ವೇಳೆ ಟಿಕ್‍ಟಾಕ್ ವಿಡಿಯೋ ಮಾಡಲು ಕಪಿಲ್ ಹಾಗೂ ಆತನ ಸ್ನೇಹಿತರು ಮುಂದಾದರು. ಟಿಕ್‍ಟಾಕ್ ವಿಡಿಯೋಗಾಗಿ ಟ್ರ್ಯಾಕ್ಟರ್ ನಲ್ಲಿ ಸ್ಟಂಟ್ ಮಾಡಿ ಹೆಚ್ಚು ಲೈಕ್ಸ್ ಪಡೆಯಲು ಹೋಗಿ ಕಪಿಲ್ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಸ್ಟಂಟ್ ಮಾಡುವಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಕಪಿಲ್ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಪತ್ನಿಯ ಟಿಕ್‍ಟಾಕ್ ವಿಚಾರ ಕೇಳಿ ವಿದೇಶದಿಂದ ಓಡಿ ಬಂದ ಪತಿ

    ಏಕಾಏಕಿ ವಾಹನ ಪಲ್ಟಿಯಾದ ಪರಿಣಾಮ ಕಪಿಲ್ ದೇಹ ಟ್ರ್ಯಾಕ್ಟರ್ ಅಡಿಕೆ ಸಿಲುಕಿ ಅಪ್ಪಚ್ಚಿಯಾಗಿದೆ. ಕಪಿಲ್ ಮಾಡುತ್ತಿದ್ದ ಸ್ಟಂಟ್‍ಗಳನ್ನು ವಿಡಿಯೋ ಮಾಡುತ್ತಿದ್ದ ಸ್ನೇಹಿತ ಆತನ ಸಹಾಯಕ್ಕೆ ಬರುವ ಮುನ್ನವೇ ಕಪಿಲ್ ಸಾವನ್ನಪ್ಪಿದ್ದನು. ಇದನ್ನೂ ಓದಿ: ಹೆಚ್ಚು ಲೈಕ್ಸಿಗೆ ಹುಚ್ಚು ಸಾಹಸ – ಸ್ನೇಹಿತರೆದುರೇ ಜೀವಬಿಟ್ಟ ಟಿಕ್‍ಟಾಕ್ ಸ್ಟಾರ್

    ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕಪಿಲ್ ಮದುವೆಯಾಗಿತ್ತು. ಹೊಸ ಬಾಳನ್ನು ಆರಂಭಿಸಿದ ಕೆಲವೇ ದಿನಗಳಲ್ಲಿ ಕಪಿಲ್ ಟಿಕ್‍ಟಾಕ್ ಹುಚ್ಚಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಟ್ರ್ಯಾಕ್ಟರ್ ಚಲಾಯಿಸುತ್ತಾ ಅದರ ಮುಂದಿನ ಎರಡು ಟೈರ್ ಗಳನ್ನು ಎತ್ತಿ ಸ್ಟಂಟ್ ಮಾಡಲು ಕಪಿಲ್ ಮುಂದಾದಾಗ ಈ ಅನಾಹುತ ಸಂಭವಿಸಿದೆ.

    ಕಪಿಲ್ ಸಾವನ್ನಪ್ಪಿದ ಬಳಿಕ ಕುಟುಂಬಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಆತನ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದಾರೆ. ಹೀಗಾಗಿ ಈ ಬಗ್ಗೆ ಪೊಲೀಸರಿಗೆ ಕೇಳಿದರೆ ನಮಗೆ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಿಕ್‍ಟಾಕ್‍ನಿಂದ ಪತಿಯ 2ನೇ ಮದುವೆ ರಹಸ್ಯ ಬಯಲು

    ಈ ಹಿಂದೆ ಫೆ. 18ರಂದು ಮೀರತ್‍ನಲ್ಲಿ ಇದೇ ರೀತಿ ಪ್ರಕರಣ ಬೆಳಕಿಗೆ ಬಂದಿತ್ತು. 18 ವರ್ಷದ ಯುವಕನೋರ್ವ ಕಾಲುವೆಯಲ್ಲಿ ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದನು.

  • ಹಣ ಕೊಡದಕ್ಕೆ ಟಿಕ್‍ಟಾಕ್ ಸ್ನೇಹಿತೆಯನ್ನು ಕೊಂದ ಯುವಕ

    ಹಣ ಕೊಡದಕ್ಕೆ ಟಿಕ್‍ಟಾಕ್ ಸ್ನೇಹಿತೆಯನ್ನು ಕೊಂದ ಯುವಕ

    – 25 ವರ್ಷದ ಯುವಕನಿಂದ 50 ವರ್ಷದ ಗೃಹಿಣಿ ಕೊಲೆ

    ಲಕ್ನೋ: ಕೇಳಿದಾಗ ಹಣ ಕೊಡಲಿಲ್ಲ ಎಂದು ಯುವಕನೋರ್ವ ತನ್ನ ಟಿಕ್‍ಟಾಕ್‍ನಲ್ಲಿ ಸ್ನೇಹಿತೆಯಾಗಿದ್ದ ಗೃಹಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    29 ವರ್ಷದ ರಾಘವ್ ಕುಮಾರ್ ತನ್ನ ಟಿಕ್‍ಟಾಕ್ ಸ್ನೇಹಿತೆ 50 ವರ್ಷದ ನೀರ್ಜಾ ಚೌಹಾನ್ ಅವರನ್ನು ಆಕೆಯ ನಿವಾಸದಲ್ಲೇ ಕೊಲೆ ಮಾಡಿದ್ದಾನೆ. ಗೃಹಿಣಿಯಾಗಿರುವ ನೀರ್ಜಾ ಅವರು ಟಿಕ್‍ಟಾಕ್ ಮತ್ತು ಲೈಕಿ ಎಂಬ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇದ್ದರು. ಜೊತೆಗೆ ಹಲವಾರು ಜನ ಫಾಲೋವರ್ಸ್ ಗಳನ್ನು ಕೂಡ ಹೊಂದಿದ್ದರು.

    ರಾಘವ್ ಕೂಡ ಟಿಕ್‍ಟಾಕ್‍ನಲ್ಲಿ ನೀರ್ಜಾ ಅವರನ್ನು ಫಾಲೋ ಮಾಡಿ ಪರಿಚಯ ಮಾಡಿಕೊಂಡು, ಗೃಹಿಣಿಯ ಜೊತೆ ಸ್ನೇಹ ಬೆಳಸಿಕೊಂಡಿದ್ದ. ನೀರ್ಜಾ ಅವರ ಪತಿ ಬೇರೆ ರಾಜ್ಯದಲ್ಲಿ ಉದ್ಯೋಗಿ ಆಗಿದ್ದು, ನೀರ್ಜಾ ತನ್ನ ಮಗನ ಜೊತೆ ವಾಸವಿದ್ದರು. ಹೀಗೆ ಸ್ನೇಹಿತನಾಗಿದ್ದ ರಾಘವ್ ಒಂದು ದಿನ ನೀರ್ಜಾ ಅವರ ಮನೆಗೆ ಬಂದು ಹಣ ಕೇಳಿದ್ದಾನೆ. ಆದರೆ ಅವರು ಹಣ ಕೊಟ್ಟಿಲ್ಲ. ಈ ಕಾರಣಕ್ಕೆ ಅವರನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.

    ರಾಘವ್ ಬೆಳಗ್ಗೆ 11.30 ಸುಮಾರಿಗೆ ಆಕೆಯನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ನಂತರ ನೀರ್ಜಾ ಅವರ ಮಗ ತಾಯಿ ಊಟ ಮಾಡಿದ್ದರಾ ಎಂದು ವಿಚಾರಿಸಲು ಫೋನ್ ಮಾಡಿದ್ದಾರೆ. ಆದರೆ ತಾಯಿ ಫೋನ್ ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಮಗ ಸಂಜೆ 5 ಗಂಟೆಗೆ ಮನೆಗೆ ಬಂದು ಬಾಗಿಲನ್ನು ಬಡಿದಾಗ ಡೋರ್ ಓಪನ್ ಮಾಡಿಲ್ಲ. ಬಾಗಿಲು ಮುರಿದು ಒಳಗೆ ಹೊಗಿ ನೋಡಿದಾಗ ತಾಯಿ ಸಾವನ್ನಪ್ಪಿರುವ ಗೊತ್ತಾಗಿದೆ.

    ನೀರ್ಜಾ ಅವರ ಪುತ್ರ ತಕ್ಷಣ ಇದನ್ನು ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು, ಹತ್ತಿರದಲ್ಲಿ ಇದ್ದ ಸಿಸಿಟಿವಿಯನ್ನು ಚೆಕ್ ಮಾಡಿದಾಗ ರಾಘವ್ ಮನೆಗೆ ಬಂದು ಹೋಗಿರುವುದು ತಿಳಿದುಬಂದಿದೆ. ಆಗ ಆತನನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗ, ಆತನೇ ಕೊಲೆ ಮಾಡಿರುವುದು ದೃಢಪಟ್ಟಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಆರೋಪಿ ರಾಘವ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

  • ಮಗಳನ್ನು ಹಿಂಬಾಲಿಸಿದ ಮಾಜಿ ಪ್ರೇಮಿಯನ್ನು ಕೊಂದು ಹೂತು ಹಾಕಿದ ತಾಯಿ

    ಮಗಳನ್ನು ಹಿಂಬಾಲಿಸಿದ ಮಾಜಿ ಪ್ರೇಮಿಯನ್ನು ಕೊಂದು ಹೂತು ಹಾಕಿದ ತಾಯಿ

    ಲಕ್ನೋ: ಮಗಳನ್ನು ಹಿಂಬಾಲಿಸುತ್ತಿದ್ದ ಆಕೆಯ ಮಾಜಿ ಪ್ರೇಮಿಯನ್ನು ತಾಯಿಯೊಬ್ಬಳು ಮಗನ ಸಹಾಯದಿಂದ ಕತ್ತು ಹಿಸುಕಿ ಕೊಂದು ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ಆಶಿಶ್ ಶರ್ಮಾ (45) ಎಂದು ಗುರುತಿಸಲಾಗಿದೆ. ತನ್ನನ್ನು ಬಿಟ್ಟು ಹೋಗಿ ಬೇರೆಯವರನ್ನು ಮದುವೆಯಾದರು ತನ್ನ ಮಾಜಿ ಪ್ರಿಯತಮೆಯನ್ನು ಮರೆಯದ ಆಶಿಶ್ ಅವಳ ಹಿಂದೆ ಸುತ್ತುತ್ತಿದ್ದ. ಇದರಿಂದ ಕೋಪಗೊಂಡ ಪ್ರಿಯತಮೆ ತಾಯಿ ಆತನನ್ನು ಕೊಂದು ತಮ್ಮ ಮನೆಯ ಹಿತ್ತಲಿನಲ್ಲಿ ಹೂತು ಹಾಕಿದ್ದಾಳೆ.

    ಆಶಿಶ್ ಫೆಬ್ರವರಿ 29 ರಂದು ಕಾಣೆಯಾಗಿದ್ದನು. ಆತನ ಶವ ಬರೇಲಿ ಜಿಲ್ಲೆಯ ನಕಾಟಿಯಾ ಎಂಬ ಪ್ರದೇಶದಲ್ಲಿರುವ ಒಂದು ಮನೆಯ ಹಿತ್ತಲಿನಲ್ಲಿ ಹೂತು ಹಾಕಲಾಗಿತ್ತು. ಈ ಪ್ರಕರಣವನ್ನು ಭೇದಿಸಲು ಹೊರಟ ಪೊಲೀಸರಿಗೆ, ಆತನ ಮಾಜಿ ಪ್ರಿಯತಮೆಯ ಅಮ್ಮ ಮತ್ತು ಸಹೋದರ ಸೇರಿ ಕತ್ತು ಹಿಸುಕಿ ಕೊಂದು ನಂತರ ಅವರ ಮನೆಯ ಹಿತ್ತಲಿನಲ್ಲೇ ಹೂತು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

    ಪ್ರಿಯತಮೆಯ ನಂಬರ್ ಗಾಗಿ ಪ್ರಾಣ ಬಿಟ್ಟ
    ಆಶಿಶ್ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಅವರ ಮಧ್ಯೆ ಜಗಳವಾಗಿ ಆಕೆ ಆಶಿಶ್ ಅನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದಳು. ಆದರೂ ಆಕೆಯ ಮೇಲೆ ಮೋಹವನ್ನು ಬಿಡದ ಆಶಿಶ್ ಯಾವಾಗಲೂ ಆಕೆಯ ಹಿಂದೆ ಹೋಗುತ್ತಿದ್ದ. ಆಶಿಶ್‍ನ ಕಾಟ ಸಹಿಸಲಾರದೆ ಪ್ರಿಯತಮೆಯ ಕುಟುಂಬದವರು ಮನೆಯನ್ನು ಬದಲಿಸಿದ್ದರೂ ಆ ಮನೆಯನ್ನು ಕಂಡುಹಿಡಿದ ಆಶಿಶ್ ಮತ್ತೆ ಹಿಂದೆ ಬಿದ್ದಿದ್ದ.

    ಈ ನಡುವೆ ಫೆಬ್ರವರಿ 29 ರಂದು ಯುವತಿಯ ಬಳಿ ಬಂದ ಆಶಿಶ್ ನೀನು ಹೊಸ ಫೋನ್ ನಂಬರ್ ಬಳಸುತ್ತಿರುವುದು ನನಗೆ ಗೊತ್ತು. ಆ ನಂಬರ್ ಅನ್ನು ನನಗೆ ಕೊಡು ಎಂದು ಪೀಡಿಸುತ್ತಿದ್ದ. ಈ ವೇಳೆ ಅಲ್ಲಿಗೆ ಯುವತಿಯ ಅಮ್ಮ ಮತ್ತು ಸಹೋದರ ಬಂದಿದ್ದಾರೆ. ಆಗ ಆಶಿಶ್ ಮತ್ತು ಆಕೆಯ ತಾಯಿ ಜಗಳಕ್ಕೆ ಬಿದ್ದಿದ್ದಾರೆ. ಈ ಗಲಾಟೆಯಲ್ಲಿ ಆಶಿಶ್ ಪ್ರಿಯತಮೆಯ ತಾಯಿಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಆಕೆಯ ತಾಯಿ ಮತ್ತು ಸಹೋದರ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮೃತದೇಹವನ್ನು ತಮ್ಮ ಮನೆಯ ಹಿತ್ತಲಿನಲ್ಲಿ ಹೂತು ಹಾಕಿದ್ದಾರೆ.

    ಪೊಲೀಸರು ಈಗ ಆರೋಪಿಗಳಾದ ತಾಯಿ ಮತ್ತು ಸಹೋದರನನ್ನು ಅರೆಸ್ಟ್ ಮಾಡಿದ್ದಾರೆ. ಆದರೆ ಅವರು ನಾವು ಬೇಕು ಎಂದು ಕೊಲೆ ಮಾಡಲಿಲ್ಲ. ಆತ ನಮ್ಮನ್ನು ಕೊಲ್ಲಲು ಬಂದ ಹಾಗಾಗಿ ನಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಆತನನ್ನು ಕೊಲೆ ಮಾಡಬೇಕಾಗಿ ಬಂತು ಎಂದು ಹೇಳಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬರೇಲಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.