Tag: Uttar Pradesh Election

  • ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಒಂದೇ ಪಕ್ಷದಿಂದ ಟಿಕೆಟ್‌ಗಾಗಿ ಪತಿ-ಪತ್ನಿ ಫೈಟ್!

    ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಒಂದೇ ಪಕ್ಷದಿಂದ ಟಿಕೆಟ್‌ಗಾಗಿ ಪತಿ-ಪತ್ನಿ ಫೈಟ್!

    ಲಕ್ನೋ: ರಾಜಕೀಯದಲ್ಲಿ ಕುಟುಂಬದ ಸದಸ್ಯರೇ ಪರಸ್ಪರ ಜಿದ್ದಾಜಿದ್ದಿಗಳಿಯುವ ಹಲವಾರು ಪ್ರಸಂಗಗಳನ್ನು ನೋಡಿದ್ದೇವೆ. ಅಂತೆಯೇ ಉತ್ತರ ಪ್ರದೇಶದಲ್ಲೂ ಪತಿ-ಪತ್ನಿ ಒಂದೇ ಪಕ್ಷದಿಂದ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದ ಕುತೂಹಲಕಾರಿ ರಾಜಕೀಯ ಬೆಳವಣಿಗೆ ಈಗ ದೇಶದೆಲ್ಲೆಡೆ ಸುದ್ದಿಯಾಗಿದೆ.

    ಸ್ವಾತಿ ಸಿಂಗ್ ಅವರು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದಲ್ಲಿ ಮಹಿಳಾ ಕಲ್ಯಾಣ ಸಚಿವರಾಗಿದ್ದಾರೆ. ಇವರ ಪತಿ ದಯಾಶಂಕರ್ ಅದೇ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಇಬ್ಬರೂ ಬಿಜೆಪಿಯಿಂದ ಸರೋಜಿನಿ ನಗರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪತಿ-ಪತ್ನಿ ಇಬ್ಬರೂ ಒಂದೇ ಪಕ್ಷದಿಂದ ಒಂದೇ ಕ್ಷೇತ್ರದಿಂದ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ. ಸ್ವಾತಿ ಸಿಂಗ್ ಪ್ರಸ್ತುತ ಸರೋಜಿನಿ ನಗರ ಕ್ಷೇತ್ರದ ಹಾಲಿ ಶಾಸಕಿಯಾಗಿದ್ದಾರೆ. ಇದನ್ನೂ ಓದಿ: Goa Election: ಅಮಿತ್ ಪಾಲೇಕರ್ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ

    ದಯಾಶಂಕರ್ 2016ರಲ್ಲಿ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಇದನ್ನು ಬಿಎಸ್‌ಪಿ ನಾಯಕರು ಪ್ರತಿಭಟಿಸಿದ್ದರಿಂದ ಹಾಗೂ ಮಾಯಾವತಿ ಅವರು ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರಿಂದ, ಬಿಜೆಪಿ ದಯಾಶಂಕರ್ ಅವರನ್ನು ಅಮಾನತುಗೊಳಿಸಿತು. ನಂತರ ಅವರು ಬಂಧನಕ್ಕೊಳಗಾಗಿದ್ದರು.

    ಈ ಘಟನೆಯಾದ ಬಳಿಕ 2017ರ ವಿಧಾನಸಭಾ ಚುನಾವಣೆಯಲ್ಲಿ ಸರೋಜಿನಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ವಾತಿ ಸಿಂಗ್, ಬಿಎಸ್‌ಪಿ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿ ಅಭೂತಪೂರ್ವ ಜಯ ಸಾಧಿಸಿದರು. ಚುನಾವಣೆಯಲ್ಲಿ ಪತ್ನಿಯ ಬೆಂಬಲಕ್ಕೆ ನಿಂತು ಗೆಲುವಿಗೆ ಕಾರಣವಾಗಿದ್ದ ದಯಾಶಂಕರ್ ಅಮಾನತನ್ನು ನಂತರ ಬಿಜೆಪಿ ರದ್ದುಗೊಳಿಸಿತು. ಸ್ವಾತಿ ಸಿಂಗ್ ಅವರನ್ನು ಯೋಗಿ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ಇದನ್ನೂ ಓದಿ: BJP ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಪಕ್ಷದ ಮೊದಲ ಗುರಿ: ಓವೈಸಿ

    ಈಗ ಪತಿ-ಪತ್ನಿ ಇಬ್ಬರೂ ಪೈಪೋಟಿಗೆ ಇಳಿದಿದ್ದಾರೆ. ಬಿಜೆಪಿಯಿಂದ ಸರೋಜಿನಿ ನಗರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದರಿಂದ ಇಕ್ಕಿಟ್ಟಿಗೆ ಸಿಲುಕಿರುವ ಬಿಜೆಪಿ, ಯಾರಿಗೆ ಟಿಕೆಟ್ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

    ಈ ಕುರಿತು ದಯಾಂಶಕರ್ ಪ್ರತಿಕ್ರಿಯಿಸಿದ್ದು, ಪಕ್ಷ ನನಗೆ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ಪಕ್ಷಕ್ಕಾಗಿ ನಾನು ಪರಿಶ್ರಮದಿಂದ ದುಡಿದಿದ್ದೇನೆ ಎಂದು ಹೇಳಿದ್ದಾರೆ.

    ಪತಿಯೇ ತನ್ನ ವಿರುದ್ಧ ಟಿಕೆಟ್ ಆಕಾಂಕ್ಷಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಲು ಸಚಿವೆ ಸ್ವಾತಿ ಸಿಂಗ್ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರು ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

    ಈ ಬಗ್ಗೆ ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದು, ಗೆಲ್ಲುವ ಸಾಮರ್ಥ್ಯದ ಆಧಾರದ ಮೇಲೆ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ. ಸ್ವಾತಿ ಸಿಂಗ್ ಅವರಿಗೆ ಟಿಕೆಟ್ ನಿರಾಕರಿಸಿದರೆ, ಮಹಿಳಾ ಮತದಾರರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

  • ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಸೊಸೆ, ಅಖಿಲೇಶ್ ಯಾದವ್ ನಾದಿನಿ ಬಿಜೆಪಿ ಸೇರ್ಪಡೆ

    ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಸೊಸೆ, ಅಖಿಲೇಶ್ ಯಾದವ್ ನಾದಿನಿ ಬಿಜೆಪಿ ಸೇರ್ಪಡೆ

    ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಸೊಸೆ ಹಾಗೂ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಸಹೋದರನ ಪತ್ನಿ ಅಪರ್ಣಾ ಯಾದವ್ ಬುಧವಾರ ಬಿಜೆಪಿ ಸೇರಿದರು.

    ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಮೂವರು ಹಿಂದುಳಿದ ಸಮುದಾಯದ ನಾಯಕರು ಸೇರಿದಂತೆ ಅನೇಕ ಮುಖಂಡರು ಈಚೆಗೆ ಪಕ್ಷವನ್ನು ತೊರೆದು ಸಮಾಜವಾದಿ ಪಕ್ಷ ಸೇರಿದ್ದಾರೆ. ಈ ಬೆಳವಣಿಗೆ ಮಧ್ಯೆ ಸಮಾಜವಾದಿ ಪಕ್ಷದ ನಾಯಕರ ಮನೆಯ ಮಹಿಳೆಯೇ ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ಇದನ್ನೂ ಓದಿ: ED ದಾಳಿ ಬಿಜೆಪಿಯ ನೆಚ್ಚಿನ ಅಸ್ತ್ರ: ರಾಹುಲ್ ಗಾಂಧಿ

    ಬಿಜೆಪಿ ಮಾಜಿ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ, ಧರ್ಮ ಸಿಂಗ್ ಸೈನಿ, ದರಾ ಸಿಂಗ್ ಚೌಹಾಣ್ ಅವರು ಈಚೆಗೆ ಪಕ್ಷ ತೊರೆದು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಸೇರಿದರು. ಇದರ ಮಧ್ಯೆಯೇ ಅಖಿಲೇಶ್ ಯಾದವ್ ನಾದಿನಿ ಅಪರ್ಣಾ ಯಾದವ್ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅದರಂತೆಯೇ ಇಂದು ಅವರು ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.

    ಅಪರ್ಣಾ ಯಾದವ್ 2017ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಲಕ್ನೋ ಕ್ಯಾಂಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಿತಾ ಬಹುಗುಣ ಜೋಶಿ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು. ಅದಾದ ಬಳಿಕ ಬಿಜೆಪಿ ಪಕ್ಷದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಅಪರ್ಣಾ ಯಾದವ್ ಒಲವು ಹೊಂದಿದ್ದರು. ಕೆಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ್ದರು. ಇದನ್ನೂ ಓದಿ: ಕೇಸ್ ತಾರತಮ್ಯಕ್ಕೆ ಕಾಂಗ್ರೆಸ್ ಚಾಟಿ ಬಳಿಕ ಎಚ್ಚೆತ್ತ ಸರ್ಕಾರ- ಹೈಕಮಾಂಡ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆ

  • ಅಯೋಧ್ಯೆ ಅಲ್ಲ, ಗೋರಖ್‌ಪುರ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ

    ಅಯೋಧ್ಯೆ ಅಲ್ಲ, ಗೋರಖ್‌ಪುರ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಹಾಗೂ ಎರಡನೇ ಹಂತದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರ (ನಗರ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

    ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆ ಅಥವಾ ಮಥುರಾದಿಂದ ಸ್ಪರ್ಧಿಸಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ ಮೊದಲ ಹಂತದ 57 ಹಾಗೂ ಎರಡನೇ ಹಂತದ 38 ಸೀಟುಗಳಲ್ಲಿ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಯೋಗಿ ಆದಿತ್ಯನಾಥ್ ಗೋರಖ್‌ಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಇದನ್ನೂ ಓದಿ: ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ: ಇರ್ಫಾನ್ ಅನ್ಸಾರಿ

    2017ರವರೆಗೆ ಸತತ ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಪ್ರಬಲ ಕ್ಷೇತ್ರದಿಂದಲೇ ಯೋಗಿ ಆದಿತ್ಯನಾಥ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಪಕ್ಷ ಹೇಳುವ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಸಿದ್ಧ ಎಂದು ಯೋಗಿ ಅವರು ಹೇಳಿದ್ದರು.

    ಈ ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಬಿಜೆಪಿ ಯೋಗಿ ಆದಿತ್ಯನಾಥ್ ಅವರನ್ನು ಗೋರಖ್‌ಪುರಕ್ಕೆ ಕಳುಹಿಸಿರುವುದು ನನಗೆ ಇಷ್ಟವಾಗಿದೆ. ಯೋಗಿ ಅಲ್ಲೇ ಉಳಿಯಬೇಕು, ಅಲ್ಲಿಂದ ಬರುವ ಅಗತ್ಯವಿಲ್ಲ ಎಂದು ತಿವಿದಿದ್ದಾರೆ. ಇದನ್ನೂ ಓದಿ: ನೇತಾಜಿ ಜನ್ಮದಿನವಾದ ಜನವರಿ 23 ರಿಂದಲೇ ಗಣರಾಜ್ಯೋತ್ಸವ ಆಚರಣೆ ಪ್ರಾರಂಭ

    ಉತ್ತರ ಪ್ರದೇಶದಲ್ಲಿ ಫೆ.10ರಿಂದ ಮಾ.7ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾ.10ರಂದು ಫಲಿತಾಂಶ ಹೊರಬೀಳಲಿದೆ.

  • ಒಬಿಸಿ ನಾಯಕರಿಂದ ಬಿಜೆಪಿಗೆ ರಾಜೀನಾಮೆ – ದಲಿತರ ಮನೆಯಲ್ಲಿ ಊಟ ಮಾಡಿದ ಯೋಗಿ

    ಒಬಿಸಿ ನಾಯಕರಿಂದ ಬಿಜೆಪಿಗೆ ರಾಜೀನಾಮೆ – ದಲಿತರ ಮನೆಯಲ್ಲಿ ಊಟ ಮಾಡಿದ ಯೋಗಿ

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಿಂದುಳಿದ ಸಮುದಾಯದ ನಾಯಕರು ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರುತ್ತಿದ್ದಾರೆ. ಇದರ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ದಲಿತರ ಮನೆಯಲ್ಲಿ ಊಟ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

    ಬಿಜೆಪಿ ವಿರುದ್ಧ ಬಂಡಾಯ ಎದ್ದ ಇಬ್ಬರು ಮಾಜಿ ಸಚಿವ ಪಕ್ಷಕ್ಕೆ ರಾಜೀನಾಮೆ ನೀಡಿ ಅಖಿಲೇಶ್‌ ಯಾದವ್‌ ಅವರ ಎಸ್‌ಪಿ ಪಕ್ಷ ಸೇರಿದ್ದಾರೆ. ಹಿಂದುಳಿದ ನಾಯಕರೆಲ್ಲ ಬಿಜೆಪಿ ತೊರೆಯುತ್ತಿರುವುದರಿಂದ ಒಬಿಸಿ ಮತದಾರರ ವೋಟುಗಳು ಕೈತಪ್ಪಬಹುದು ಎಂಬ ಆತಂಕ ಬಿಜೆಪಿಯಲ್ಲಿ ಮೂಡಿದೆ. ಈ ಮಧ್ಯೆಯೇ ಯೋಗಿ ಆದಿತ್ಯನಾಥ್‌ ಅವರು ಗೋರಖ್‌ಪುರದಲ್ಲಿ ದಲಿತರ ಮನೆಯಲ್ಲಿ ಊಟ ಮಾಡಿದ್ದಾರೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಮತ್ತೊಂದು ದಿಕ್ಕಿನ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಹೂವಿನ ಮಾರುಕಟ್ಟೆಯಲ್ಲಿ ಇಟ್ಟಿದ್ದ ಬ್ಯಾಗ್‌ನಲ್ಲಿ ಬಾಂಬ್ ಪತ್ತೆ – ಜನರಲ್ಲಿ ಆತಂಕ

    ಈ ಕುರಿತು ಸಿಎಂ ಯೋಗಿ ಆದಿತ್ಯನಾಥ್‌ ಟ್ವಿಟರ್‌ನಲ್ಲಿ, ಸಾಮಾಜಿಕ ಸೌಹಾರ್ದತೆಯ ಗುರಿಯು ಬೆಳೆಯುತ್ತಲೇ ಇದೆ. ಇಂದು ಗೋರಖ್‌ಪುರದ ಜುಂಗಿಯಾದಲ್ಲಿರುವ ಅಮೃತ್‌ ಲಾಲ್‌ ಭಾರತೀಜಿಯವರ ಮನೆಯಲ್ಲಿ ಕಿಚಡಿ ಮತ್ತು ಪ್ರಸಾದ ಸ್ವೀಕರಿಸುವ ಸೌಭಾಗ್ಯ ನನಗೆ ಸಿಕ್ಕಿತು. ತುಂಬಾ ಧನ್ಯವಾದಗಳು ಭಾರತೀಜಿ ಎಂದು ತಿಳಿಸಿದ್ದಾರೆ.

    ಬಿಜೆಪಿ ಸರ್ಕಾರ ಯಾವುದೇ ತಾರತಮ್ಯವಿಲ್ಲದೇ ಸಮಾಜದ ಪ್ರತಿಯೊಂದು ವರ್ಗದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಅಖಿಲೇಶ್‌ ಯಾದವ್‌ ಅವರ ಐದು ವರ್ಷದ ಆಡಳಿತದಲ್ಲಿ ಪಿಎಂ ಆವಾಸ್‌ ಯೋಜನೆಯಡಿ ಕೇವಲ 18,000 ಮನೆಗಳನ್ನು ಮಾತ್ರ ನಿರ್ಮಿಸಿಕೊಟ್ಟಿದ್ದರು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 45 ಲಕ್ಷ ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಎಸ್‌ಪಿ ಅವಧಿಯಲ್ಲಿ ಸಾಮಾಜಿಕ ಶೋಷಣೆಯಾಗಿದೆ, ಸಾಮಾಜಿಕ ನ್ಯಾಯ ಸಿಕ್ಕಿಲ್ಲ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ನೊವಾಕ್ ಜೊಕೊವಿಕ್ ವೀಸಾ 2ನೇ ಬಾರಿ ರದ್ದು – 3 ವರ್ಷ ಆಸ್ಟ್ರೇಲಿಯಾಗೆ ಪ್ರವೇಶವಿಲ್ಲ

    ಸ್ವಾಮಿ ಪ್ರಸಾದ್‌ ಮೌರ್ಯ, ಧರಮ್‌ ಸಿಂಗ್‌ ಸೈನಿ ಅವರು ಬಿಜೆಪಿ ತೊರೆದು ಸಮಾಜವಾದಿ ಪಕ್ಷವನ್ನು ಸೇರಿದ್ದಾರೆ. ಬಿಜೆಪಿ ತೊರೆದ ನಾಯಕರು, ಯೋಗಿ ಆದಿತ್ಯನಾಥ್‌ ನೇತೃತ್ವದ ಆಡಳಿತವು ಉತ್ತರ ಪ್ರದೇಶದ ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಆಲಿಸದೇ ಕಿವುಡಾಗಿದೆ. ಈ ಹಿನ್ನೆಲೆಯಲ್ಲಿ ನಾವು ಪಕ್ಷವನ್ನು ತೊರೆದಿದ್ದೇವೆ ಎಂದು ದೂರಿದ್ದರು.

  • ರೇಷನ್‌ ಕಾರ್ಡ್‌ ಇದೆಯಾ: ಸ್ನಾನ ಮಾಡ್ತಿದ್ದ ವ್ಯಕ್ತಿ ಬಳಿ ಹೋಗಿ ಬಿಜೆಪಿ ಶಾಸಕನ ಪ್ರಶ್ನೆ

    ರೇಷನ್‌ ಕಾರ್ಡ್‌ ಇದೆಯಾ: ಸ್ನಾನ ಮಾಡ್ತಿದ್ದ ವ್ಯಕ್ತಿ ಬಳಿ ಹೋಗಿ ಬಿಜೆಪಿ ಶಾಸಕನ ಪ್ರಶ್ನೆ

    ಲಕ್ನೋ: ಪಂಚ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಕೋವಿಡ್‌ ಹಿನ್ನೆಲೆಯಲ್ಲಿ ಯಾವುದೇ ರ‍್ಯಾಲಿ, ಸಭೆ ಸಮಾರಂಭಗಳನ್ನು ನಡೆಸದಂತೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಈ ನಡುವೆ ಜನಪ್ರತಿನಿಧಿಗಳು ಮತದಾರರನ್ನು ಸೆಳೆಯಲು ಮನೆ ಮನೆಗೆ ತೆರಳಿ ಜನರ ಕುಂದು-ಕೊರತೆಗಳನ್ನು ಆಲಿಸುತ್ತಿದ್ದಾರೆ. ಇಂತಹ ಸನ್ನಿವೇಶವೊಂದರಲ್ಲಿ ವಿನೋದಮಯವಾದ ಪ್ರಸಂಗವೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ವೀಡಿಯೋ ವೈರಲ್‌ ಆಗಿದೆ.

    ಕಾನ್ಪುರದಲ್ಲಿ ಜನಪ್ರತಿನಿಧಿಯೊಬ್ಬರು ಮನೆ-ಮನೆಗೆ ತೆರಳಿ ಪ್ರಚಾರವನ್ನು ಆರಂಭಿಸಿದ್ದಾರೆ. ವ್ಯಕ್ತಿಯೊಬ್ಬ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ತೆರಳಿರುವ ಬಿಜೆಪಿ ಶಾಸಕ, ʻನಿನ್ನ ಬಳಿ ರೇಷನ್‌ ಕಾರ್ಡ್‌ ಇದೆಯಾ?ʼ ಎಂದು ಪ್ರಶ್ನಿಸಿದ್ದಾರೆ. ಈ ಸನ್ನಿವೇಶದ ದೃಶ್ಯ ಸೆರೆಯಾಗಿದ್ದು, ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಲಾಕ್‌ಡೌನ್‌ ಇಲ್ಲವೇ ಇಲ್ಲ: ಸಚಿವ ಸುಧಾಕರ್‌ ಸ್ಪಷ್ಟನೆ

    ಕಾನ್ಪುರದ ಬಿಜೆಪಿ ಶಾಸಕ ಸುರೇಂದ್ರ ಮೈಥಾನಿ ಅವರು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಜನರೊಂದಿಗೆ ಸಂವಹನ ನಡೆಸುತ್ತಿರುವ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ವೈರಲ್ ಆಗಿರುವ ವೀಡಿಯೋದಲ್ಲಿ, ವ್ಯಕ್ತಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲೇ ಶಾಸಕರು ಆತನ ಬಳಿ ಹೋಗಿ ಕುಂದು-ಕೊರತೆ ಆಲಿಸಿದ್ದಾರೆ. ಕೆಲವು ಪ್ರಶ್ನೆಗಳನ್ನು ಸಹ ಕೇಳಿದ್ದಾರೆ.

    ಎಲ್ಲವೂ ಚೆನ್ನಾಗಿದೆಯೇ? ಯಾವುದೇ ವಿಳಂಬವಿಲ್ಲದೇ ಅನುದಾನ ಪಡೆದು ಮನೆ ನಿರ್ಮಿಸಲಾಯಿತೇ? ನಿಮ್ಮ ಬಳಿ ರೇಷನ್‌ ಕಾರ್ಡ್‌ ಇದೆಯೇ ಎಂದು ಸ್ನಾನ ಮಾಡುತ್ತಿದ್ದ ವ್ಯಕ್ತಿಯನ್ನು ಶಾಸಕ ವಿಚಾರಿಸಿದ್ದಾರೆ. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು

    ʻಹೌದು, ಹೌದುʼ ಅಂತ ಆ ವ್ಯಕ್ತಿ ತಲೆಗೆ ಶಾಂಪೂ ಹಚ್ಚಿಕೊಂಡು ಸ್ನಾನ ಮಾಡುತ್ತಲೇ ಶಾಸಕರ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದಾನೆ. ಈ ಸನ್ನಿವೇಶದ ಫೋಟೋವನ್ನು ಸಹ ಶಾಸಕ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಫೋಟೋ ಜೊತೆಗೆ, ವಸತಿ ಯೋಜನೆಯಡಿ ಮನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಫಲಾನುಭವಿಯೊಬ್ಬರ ಮನೆಗೆ ತೆರಳಿ ಅಭಿನಂದಿಸಿದ್ದೇನೆ. ಕಮಲದ ಗುರುತಿಗೆ ಮತ ಹಾಕಿ, ನನ್ನನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದೇನೆ ಎಂದು ಪೋಸ್ಟ್‌ ಮಾಡಿದ್ದಾರೆ.

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಫೆ.10ರಿಂದ ಮಾರ್ಚ್‌ 7 ರವರೆಗೆ ನಡೆಯಲಿದ್ದು, ಏಳು ಹಂತದಲ್ಲಿ ಮತದಾನ ಆಗಲಿದೆ. ಮಾರ್ಚ್‌ 10 ರಂದು ಫಲಿತಾಂಶ ಹೊರಬೀಳಲಿದೆ.

  • UP Election – ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ 50 ಮಹಿಳೆಯರು, ಅತ್ಯಾಚಾರ ಸಂತ್ರಸ್ತೆ ತಾಯಿಯೂ ಅಭ್ಯರ್ಥಿ

    UP Election – ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ 50 ಮಹಿಳೆಯರು, ಅತ್ಯಾಚಾರ ಸಂತ್ರಸ್ತೆ ತಾಯಿಯೂ ಅಭ್ಯರ್ಥಿ

    ನವದೆಹಲಿ: ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. 125 ಅಭ್ಯರ್ಥಿಗಳು ಪಟ್ಟಿಯಲ್ಲಿದ್ದು, ಅವರ ಪೈಕಿ 50 ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ.

    ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗುರುವಾರ ಬಿಡುಗಡೆ ಮಾಡಿದರು. ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಅವರನ್ನು ಕಾಂಗ್ರೆಸ್ ಉನ್ನಾವ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಇದನ್ನೂ ಓದಿ: ಪಂಜಾಬ್ ಸಿಎಂ ಅಭ್ಯರ್ಥಿಯನ್ನು ಜನರೇ ಆಯ್ಕೆ ಮಾಡಲಿ – ನಂಬರ್ ಕೊಟ್ಟ ಕೇಜ್ರಿವಾಲ್

    ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಶೇ.40 ಮಹಿಳೆಯರು ಮತ್ತು ಶೇ.40 ಯುವಜನರಿದ್ದಾರೆ. ಈ ಮೂಲಕ ಪಕ್ಷವು ಹೊಸ ಮತ್ತು ಐತಿಹಾಸಿಕ ಆರಂಭಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ನ್ಯಾಯಕ್ಕಾಗಿ ಹೋರಾಡಿದವರನ್ನು ಅಭ್ಯರ್ಥಿಗಳಾಗಿ ಪಕ್ಷವು ಕಣಕ್ಕಿಳಿಸಿದೆ. ಅವರು ಮುಂಚೂಣಿಗೆ ಬಂದು ರಾಜ್ಯದಲ್ಲಿ ಅಧಿಕಾರದ ಭಾಗವಾಗಬೇಕೆಂದು ಪಕ್ಷವು ಬಯಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಯುಪಿ 3ನೇ ಸಚಿವ ರಾಜೀನಾಮೆ – ರಾಜೀನಾಮೆ ನೀಡಿದ ಶಾಸಕರ ಸಂಖ್ಯೆ 9ಕ್ಕೆ ಏರಿಕೆ

    Priyanka Gandhi

    ನಮ್ಮ ಪಟ್ಟಿಯು ಹೊಸ ಸಂದೇಶವನ್ನು ನೀಡಿದೆ. ಈ ಹಿಂದೆ ತಮ್ಮ ಹಕ್ಕುಗಳಿಗಾಗಿ ಮತ್ತು ನ್ಯಾಯಕ್ಕಾಗಿ ಹೋರಾಡಿದವರಿಗೆ ಈ ಮೂಲಕ ಸಂದೇಶ ನೀಡುತ್ತಿದ್ದೇವೆ. ತಮ್ಮ ಹಕ್ಕುಗಳಿಗಾಗಿ ಹೋರಾಡುವ ಶಕ್ತಿ ಅವರಲ್ಲಿದೆ. ಕಾಂಗ್ರೆಸ್ ಪಕ್ಷವು ಅದಕ್ಕಾಗಿ ಅವಕಾಶ ನೀಡುತ್ತಿದೆ ಎಂದು ಹೇಳಿದ್ದಾರೆ.

    ಈ ಚುನಾವಣೆಯಲ್ಲಿ ಪಕ್ಷವು ನಕಾರಾತ್ಮಕ ಪ್ರಚಾರ ನಡೆಸುವುದಿಲ್ಲ. ಬದಲಿಗೆ ಉತ್ತರ ಪ್ರದೇಶದ ಉಜ್ವಲ ಭವಿಷ್ಯಕ್ಕಾಗಿ ಧನಾತ್ಮಕ ಪ್ರಚಾರವನ್ನು ನಡೆಸುತ್ತದೆ. ಜನರು, ಮಹಿಳೆಯರು ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಿ ತೋರಿಸುತ್ತೇವೆ. ಜನರ ಸಮಸ್ಯೆಗಳನ್ನು ಕೇಂದ್ರದವರೆಗೂ ತೆಗೆದುಕೊಂಡು ಹೋಗುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬ್ರೇಕಪ್ ವಿಚಾರವಾಗಿ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್!

    ಪಂಚ ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಫೆ.10ರಿಂದ ಏಳು ಹಂತದಲ್ಲಿ ಉತ್ತರ ಪ್ರದೇಶದಲ್ಲಿ ಮತದಾನ ನಡೆಯಲಿದೆ.

  • 80 ಮೇಲ್ಪಟ್ಟ ವೃದ್ಧರು, ಅಂಗವಿಕಲರು ಮನೆಯಲ್ಲಿದ್ದೇ ವೋಟು ಹಾಕಬಹುದು: ಚುನಾವಣಾ ಆಯೋಗ

    80 ಮೇಲ್ಪಟ್ಟ ವೃದ್ಧರು, ಅಂಗವಿಕಲರು ಮನೆಯಲ್ಲಿದ್ದೇ ವೋಟು ಹಾಕಬಹುದು: ಚುನಾವಣಾ ಆಯೋಗ

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಹಿತದೃಷ್ಟಿಯಿಂದ ಚುನಾವಣಾ ಆಯೋಗ ಮಹತ್ವ ನಿರ್ಧಾರವೊಂದನ್ನು ಕೈಗೊಂಡಿದೆ. 80 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ಅಂಗವಿಕಲರು ಮನೆಯಲ್ಲೇ ಇದ್ದು ಮತ ಚಲಾಯಿಸಬಹುದು ಎಂದು ಆಯೋಗ ತಿಳಿಸಿದೆ.

    ವೃದ್ಧರು, ಅಂಗವಿಕಲರು, ಕೊರೊನಾ ಸೋಂಕಿಗೆ ಒಳಗಾಗಿರುವವರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮನೆಯಲ್ಲೇ ಇದ್ದು ಅಭ್ಯರ್ಥಿಗಳಿಗೆ ಮತ ಚಲಾಯಿಸುವ ವ್ಯವಸ್ಥೆಯನ್ನು ಅವರಿಗೆ ಮಾಡಿಕೊಡಲಾಗುವುದು ಎಂದು ಆಯೋಗ ಹೇಳಿದೆ. ಇದನ್ನೂ ಓದಿ: RRR ಸಿನಿಮಾ ದೇಹವಾದರೆ ಅಜಯ್ ಆತ್ಮ, ಆಲಿಯಾ ಶಕ್ತಿ: ರಾಜಮೌಳಿ

    VOTE

    ಉತ್ತರ ಪ್ರದೇಶ ಚುನಾವಣೆ ಕುರಿತು ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ ಮಾತನಾಡಿ, ವಿಳಂಬ ಮಾಡದೇ ಕೋವಿಡ್‌ ನಿಯಮಗಳನ್ನು ಪಾಲಿಸಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

    ಉತ್ತರ ಪ್ರದೇಶ ಹಾಲಿ ಸರ್ಕಾರದ ಅವಧಿ ಮೇ 14ಕ್ಕೆ ಮುಗಿಯಲಿದೆ. ಚುನಾವಣೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆಯೋಗವು ಈಗಾಗಲೇ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ಚುನಾವಣೆ ವೇಳೆ ಯಾವುದೇ ಭ್ರಷ್ಟ ಚಟುವಟಿಕೆಗಳು ನಡೆಯದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಫುಲ್ ಹ್ಯಾಪಿ ಮೂಡ್​ನಲ್ಲಿರುವ ವಿರುಷ್ಕಾ!

    ಆರೋಗ್ಯ ಕಾರ್ಯದರ್ಶಿ ಜೊತೆ ಕೂಡ ಚರ್ಚೆ ಮಾಡಿದ್ದೇವೆ. ಚುನಾವಣೆ ದಿನಾಂಕ ಘೋಷಣೆಯಾದಾಗ ಪರಿಸ್ಥಿತಿ ನೋಡಿಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

  • ಉತ್ತರ ಪ್ರದೇಶ ಚುನಾವಣೆ ಮುಂದೂಡಿ, ರ‍್ಯಾಲಿ-ಸಮಾರಂಭ ನಿಲ್ಲಿಸಿ: ಚುನಾವಣಾ ಆಯೋಗ, ಕೇಂದ್ರಕ್ಕೆ ಕೋರ್ಟ್‌ ಒತ್ತಾಯ

    ಉತ್ತರ ಪ್ರದೇಶ ಚುನಾವಣೆ ಮುಂದೂಡಿ, ರ‍್ಯಾಲಿ-ಸಮಾರಂಭ ನಿಲ್ಲಿಸಿ: ಚುನಾವಣಾ ಆಯೋಗ, ಕೇಂದ್ರಕ್ಕೆ ಕೋರ್ಟ್‌ ಒತ್ತಾಯ

    ಲಕ್ನೋ: ದೇಶದಲ್ಲಿ ಕೊರೊನಾ ವೈರಸ್‌ ರೂಪಾಂತರಿ ಓಮಿಕ್ರಾನ್‌ ಹಾವಳಿ ಹೆಚ್ಚುತ್ತಿದೆ. ಈ ನಡುವೆ ಉತ್ತರ ಪ್ರದೇಶ ಚುನಾವಣೆಯೂ ಸಮೀಪಿಸುತ್ತಿದೆ. ಇದರಿಂದ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು. ಚುನಾವಣೆಯನ್ನು ಮುಂದೂಡಿ, ಪ್ರಚಾರಕ್ಕಾಗಿ ನಡೆಸುವ ಸಭೆ-ಸಮಾರಂಭ, ರ‍್ಯಾಲಿಗಳನ್ನು ರದ್ದುಗೊಳಿಸುವಂತೆ ಚುನಾವಣಾ ಆಯೋಗ ಹಾಗೂ ಪ್ರಧಾನಿ ಮೋದಿ ಅವರಿಗೆ ಅಲಹಾಬಾದ್‌ ಹೈಕೋರ್ಟ್‌ ಸಲಹೆ ನೀಡಿದೆ.

    ಒಂದು ವೇಳೆ ರ‍್ಯಾಲಿಗಳನ್ನು ನಿಲ್ಲಿಸದಿದ್ದರೆ, ಕೊರೊನಾ ಎರಡನೇ ಅಲೆಗಿಂತ ಭೀಕರವಾಗಿ ಮೂರನೇ ಅಲೆಯು ವ್ಯಾಪಕವಾಗಿ ಹರಡಿ ಆತಂಕ ಸೃಷ್ಟಿಸಬಹುದು ಎಂದು ಕೋರ್ಟ್‌ ಎಚ್ಚರಿಸಿದೆ. ಇದನ್ನೂ ಓದಿ: ಗೋವು ನಮಗೆ ತಾಯಿ, ಪವಿತ್ರ: ನರೇಂದ್ರ ಮೋದಿ

    ಈಗಾಗಲೇ ಹಲವು ದೇಶಗಳಲ್ಲಿ ಕೊರೊನಾ ಮೂರನೇ ಅಲೆಯ ಪರಿಣಾಮ ಉಂಟಾಗಿದೆ. ಎರಡನೇ ಅಲೆಯ ಸಂದರ್ಭದಲ್ಲಿ ಭಾರತದ ಜನತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಸೋಂಕಿನಿಂದಾಗಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಚೀನಾ, ಜರ್ಮನಿ, ನೆದರ್ಲ್ಯಾಂಡ್‌ನಂಥ ದೇಶಗಳು ಭಾಗಶಃ ಲಾಕ್‌ಡೌನ್‌ ವಿಧಿಸಿವೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

    ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ರ‍್ಯಾಲಿ, ಸಮಾರಂಭಗಳನ್ನು ನಡೆಸಿ ಜನರನ್ನು ಸಜ್ಜುಗೊಳಿಸುತ್ತಿವೆ. ಇಂತಹ ಸಂದರ್ಭಗಳಲ್ಲಿ ಸಾಮಾಜಿಕ ಅಂತರ, ಕೋವಿಡ್‌ ನಿಯಮಗಳು ಪಾಲನೆಯಾಗುವುದೇ ಇಲ್ಲ. ಇದನ್ನು ಸರಿಯಾದ ಸಮಯಕ್ಕೆ ತಡೆಯದಿದ್ದರೆ, ಕೊರೊನಾ ಸಾಂಕ್ರಾಮಿಕವು ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ ಭೀಕರ ಪರಿಣಾಮ ಬೀರಬಹುದು ಎಂದು ಕಳವಳ ವ್ಯಕ್ತಪಡಿಸಿದೆ. ಇದನ್ನೂ ಓದಿ: ಎಲ್ಲಾ ಜಾತಿ-ಧರ್ಮವನ್ನು ಪ್ರೀತಿಸುವವನೇ ನಿಜವಾದ ಹಿಂದೂ : ಮಧು ಬಂಗಾರಪ್ಪ

    ರ‍್ಯಾಲಿ, ಸಮಾವೇಶಗಳನ್ನು ನಡೆಸದಂತೆ ಸೂಚಿಸಿ. ಚುನಾವಣೆ ಪ್ರಚಾರವನ್ನು ದೂರದರ್ಶನ ಮತ್ತು ಸುದ್ದಿಪತ್ರಿಕೆಗಳ ಮೂಲಕ ಮಾಡುವಂತೆ ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಿ. ಸಾಧ್ಯವಾದರೆ ಚುನಾವಣೆಯನ್ನು ಒಂದೆರಡು ತಿಂಗಳು ಮುಂದೂಡಿ ಎಂದು ಚುನಾವಣಾ ಆಯೋಗಕ್ಕೆ ನ್ಯಾಯಾಧೀಶ ಯಾದವ್‌ ತಿಳಿಸಿದ್ದಾರೆ.

  • ಯುಪಿ ಚುನಾವಣಾ ಅಖಾಡಕ್ಕೆ ‘ಆಪ್’ ಎಂಟ್ರಿ

    ಯುಪಿ ಚುನಾವಣಾ ಅಖಾಡಕ್ಕೆ ‘ಆಪ್’ ಎಂಟ್ರಿ

    ನವದೆಹಲಿ: 2022ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

    ಯುಪಿಯ ಜನರು ದೆಹಲಿಗೆ ಬರುತ್ತಿರೋದು ಏಕೆ? ಇಲ್ಲಿ ಸಿಗುವ ಸೌಲಭ್ಯ, ಉದ್ಯೋಗ ಸಿಗದಕ್ಕೆ ಉತ್ತರ ಪ್ರದೇಶದ ಜನ ದೆಹಲಿಗೆ ವಲಸೆ ಬರುತ್ತಿದ್ದಾರೆ. ಅಲ್ಲಿಯ ಕೊಳಕು ರಾಜಕೀಯ ಅಂತ್ಯವಾಗುವರೆಗೂ ಯುಪಿ ಬದಲಾಗಲ್ಲ. ಈ ಬದಲಾವಣೆಗಾಗಿ ಆಪ್ ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲಿದೆ ಎಂದು ಪರೋಕ್ಷವಾಗಿ ಸಿಎಂ ಯೋಗಿ ಸರ್ಕಾರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.

    ಭಾರತದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಸಂಗಮ್ ವಿಹಾರದಲ್ಲಿ ಮೊಹಲ್ಲಾ ಕ್ಲಿನಿಕ್ ಆರಂಭವಾಗುತ್ತೆ ಅಂದ್ರೆ ಲಕ್ನೋದ ಗೋಮತಿನಗರದಲ್ಲಿ ಏಕೆ ಸಾಧ್ಯವಿಲ್ಲ. ಉತ್ತರ ಪ್ರದೇಶದ ಜನತೆಗೆ ಉಚಿತ ನೀರು, ವಿದ್ಯುತ್, ಖಾಸಗಿ ಶಿಕ್ಷಣ ಸಂಸ್ಥೆ ರೀತಿಯಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲವೇಕೆ? ಉತ್ತರ ಪ್ರದೇಶದ ಮೂಲದ ಬಹುತೇಕ ಜನರು ದೆಹಲಿಯಲ್ಲಿ ವಾಸವಾಗಿದ್ದಾರೆ. ಇಲ್ಲಿ ಸಿಗುವ ಸೌಲಭ್ಯಗಳು ಅವರಿಗೆ ಯುಪಿಯಲ್ಲಿ ಸಿಗುವಂತಾಗಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

    ಕೆಲಸ ಮಾಡುವ ಮೂಲಕ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಮೂರನೇ ಬಾರಿ ಸರ್ಕಾರ ರಚಿಸಿದೆ. ದೆಹಲಿಯ ರೀತಿಯ ಉಚಿತ ನೀರು, ವಿದ್ಯುತ್, ಗುಣಮಟ್ಟದ ಶಿಕ್ಷಣ, ವೈದ್ಯಕೀಯ ಸೌಲಭ್ಯ ಲಭ್ಯವಾಗಬೇಕಿದೆ. ಉತ್ತರ ಪ್ರದೇಶದ ಜನತೆಗೆ ಹಳೆಯ ರಾಜಕೀಯ ಪಕ್ಷಗಳಿಂದ ಬೇಸತ್ತಿದ್ದು, ಮುಂದಿನ ದಿನಗಳಲ್ಲಿ ಆಪ್ ಜೊತೆ ನಿಲ್ಲಲ್ಲಿದ್ದಾರೆ ಎಂದು ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.