Tag: Uttar Pradesh Election

  • ಸಮಾಜವಾದಿ ಪಕ್ಷದವರು ಜಿನ್ನಾನ ಆರಾಧಕರು: ಯೋಗಿ ಆದಿತ್ಯನಾಥ್‌ ಟೀಕೆ

    ಸಮಾಜವಾದಿ ಪಕ್ಷದವರು ಜಿನ್ನಾನ ಆರಾಧಕರು: ಯೋಗಿ ಆದಿತ್ಯನಾಥ್‌ ಟೀಕೆ

    ಲಕ್ನೋ: ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿಪಕ್ಷಗಳು ಪರಸ್ಪರ ಟೀಕಾಪ್ರಹಾರ ನಡೆಸುತ್ತಿವೆ. ಸಮಾಜದವಾದಿ ಪಕ್ಷದವರು ಜಿನ್ನಾನ ಆರಾಧಕರು ಎಂದು ಟ್ವೀಟ್‌ ಮಾಡಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಾಗ್ದಾಳಿ ನಡೆಸಿದ್ದಾರೆ.

    ಅವರು (ಎಸ್‌ಪಿ) ಜಿನ್ನಾ ಆರಾಧಕರು, ಆದರೆ ನಾವು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಆರಾಧಕರು. ಪಾಕಿಸ್ತಾನ ಅವರಿಗೆ ಪ್ರಿಯವಾಗಿದೆ. ನಾವು ಭಾರತ ಮಾತೆಗಾಗಿ ನಮ್ಮ ಜೀವನವನ್ನು ತ್ಯಾಗ ಮಾಡುತ್ತೇವೆ ಎಂದು ಪಾಕಿಸ್ತಾನ ನಿರ್ಮಾತೃ ಮೊಹಮ್ಮದ್‌ ಆಲಿ ಜಿನ್ನಾರನ್ನು ಉಲ್ಲೇಖಿಸಿ ಯೋಗಿ ಆದಿತ್ಯನಾಥ್‌ ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: ಅಮಾನತು ಆದೇಶ ರದ್ದು – ಮಹಾರಾಷ್ಟ್ರದ 12 ಬಿಜೆಪಿ ಶಾಸಕರಿಗೆ ಗೆಲುವು

    ಉತ್ತರ ಪ್ರದೇಶದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬರಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ಅವರು ಧ್ರುವೀಕರಣದಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲ ದಿನಗಳ 80 ವರ್ಸಸ್‌ 20 ಅಂದರೆ ಹಿಂದೂ ಮತ್ತು ಮುಸ್ಲಿಂ ಮತದಾರರು ಎಂದು ಯೋಗಿ ಹೇಳಿಕೆ ನೀಡಿದ್ದರು. ಶೇ.80 ಮತದಾರರು ಬಿಜೆಪಿ ಪರವಾಗಿದ್ದಾರೆ ಎಂದಿದ್ದರು.

    ಹಿಂದೆ ಗಾಜಿಯಾಬಾದ್‌ನಲ್ಲಿ ಹಜ್‌ ಗೃಹಗಳನ್ನು ನಿರ್ಮಿಸಲಾಗುತ್ತಿತ್ತು. ನಮ್ಮ ಸರ್ಕಾರ ಕೈಲಾಸ ಮಾನಸ ಸರೋವರ ಭವನವನ್ನು ನಿರ್ಮಿಸಿದೆ ಎಂದು ಕೂಡ ಯೋಗಿ ಧ್ರುವೀಕರಣದ ಮಾತುಗಳನ್ನಾಡಿದ್ದರು. ಇದನ್ನೂ ಓದಿ: ಸ್ಟೂಡೆಂಟ್ ಪೊಲೀಸ್ ಕೆಡೆಟ್‌ನಲ್ಲಿ ಹಿಜಬ್‌ ಧರಿಸಲು ಅವಕಾಶವಿಲ್ಲ: ಕೇರಳ ಸರ್ಕಾರ

    ಫೆ.10ರಿಂದ ವಿವಿಧ ಹಂತಗಳಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಮಾ.10ರಂದು ಫಲಿತಾಂಶ ಹೊರಬೀಳಲಿದೆ.

  • ಎಸ್‌ಪಿ ಗೆದ್ದರೆ ಯುಪಿ ಗೂಂಡಾಗಳ ರಾಜ್ಯವಾಗುತ್ತೆ: ಅಮಿತ್‌ ಶಾ ವಾಗ್ದಾಳಿ

    ಎಸ್‌ಪಿ ಗೆದ್ದರೆ ಯುಪಿ ಗೂಂಡಾಗಳ ರಾಜ್ಯವಾಗುತ್ತೆ: ಅಮಿತ್‌ ಶಾ ವಾಗ್ದಾಳಿ

    ಲಕ್ನೋ: ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ವಿರುದ್ಧ ಹರಿಹಾಯ್ದಿದ್ದಾರೆ. ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು ಅಧಿಕಾರಕ್ಕೆ ತಂದರೆ, ರಾಜ್ಯದಲ್ಲಿ ಗೂಂಡಾಗಳ ರಾಜ್ಯ ಮರುಕಳಿಸುತ್ತದೆ ಎಂದು ಎಚ್ಚರಿಸಿದ್ದಾರೆ.

    ಸಮಾಜವಾದಿ ಪಕ್ಷದ ಮುಖಂಡ ಅಜಮ್‌ ಖಾನ್‌ ಬಂಧನಕ್ಕೊಳಗಾಗಿದ್ದಾರೆ. ಅವರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಇಂತಹ ಸಂದರ್ಭದಲ್ಲಿ ಅಖಿಲೇಶ್‌ ಯಾದವ್‌ ಕಾನೂನಿನ ಬಗ್ಗೆ ಮಾತನಾಡುತ್ತಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಅಮಿತ್‌ ಶಾ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ – ಇದು ನಾಚಿಗೇಡಿನ ಸಂಗತಿ ಎಂದ ಕೇಜ್ರಿವಾಲ್

    ರಾಜ್ಯ ಪೊಲೀಸರು ಭಯಪಡುವಷ್ಟು ಪ್ರಾಬಲ್ಯವನ್ನು ದರೋಡೆಕೋರರು, ಕ್ರಿಮನಲ್‌ಗಳು ಹೊಂದಿದ್ದರು. ಮಹಿಳೆಯರು ಮತ್ತು ಯುವತಿಯರು ಹೊರಗಡೆ ಓಡಾಡಲು ಹೆದರುತ್ತಿದ್ದರು. ಆದರೆ ಅದು ಈಗ ಬದಲಾಗಿದೆ. ದರೋಡೆಕೋರರು, ಅಪರಾಧಿಗಳು ಭಯ ಪಡುತ್ತಿದ್ದಾರೆಂದರೆ, ಸ್ವಯಂಪ್ರೇರಣೆಯಿಂದ ಎಲ್ಲರೂ ಶರಣಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ನಾವು ಕ್ರಿಮಿನಲ್‌ಗಳು ಮತ್ತು ದರೋಡೆಕೋರರನ್ನು ತರಾಟೆಗೆ ತೆಗೆದುಕೊಂಡಿದ್ದೇವೆ. ಅವರನ್ನು ಕಂಬಿ ಹಿಂದೆ ಕಳುಹಸಿದ್ದೇವೆ. ಉತ್ತರ ಪ್ರದೇಶ ಪ್ರಗತಿಯಾಗದ ಹೊರತು ಭಾರತದ ಪ್ರಗತಿ ಸಾಧ್ಯವಿಲ್ಲ. ಯುಪಿ ಇಂದು ಪ್ರಗತಿಯಲ್ಲಿದೆ ಇದು ಭಾರತದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಕೊರೊನಾ ಬಂದಿದೆ – ಇಬ್ರಾಹಿಂ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ

    ಉತ್ತರ ಪ್ರದೇಶ ಚುನಾವಣೆ ಇದೇ ಫೆ.10ರಿಂದ ವಿವಿಧ ಹಂತಗಳಲ್ಲಿ ನಡೆಯಲಿದೆ. ಚುನಾವಣೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು, ಎಸ್‌ಪಿ ವಿರುದ್ಧ ಹರಿಹಾಯ್ದಿದ್ದಾರೆ.

  • ಕಾಂಗ್ರೆಸ್‌ ತಾರಾ ಪ್ರಚಾರಕರಾಗಿದ್ದ ಆರ್‌ಪಿಎನ್‌ ಸಿಂಗ್‌ ಬಿಜೆಪಿ ಸೇರ್ಪಡೆ

    ಲಕ್ನೋ: ಕೇಂದ್ರದ ಮಾಜಿ ಸಚಿವ, ಈ ಬಾರಿ ಚುನಾವಣೆಯ ತಾರಾ ಪ್ರಚಾರಕರಾಗಿದ್ದ ಆರ್‌ಪಿನ್‌ ಸಿಂಗ್‌ ಇಂದು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ.

    ಸಿಂಗ್‌ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ತಮ್ಮ ಭದ್ರಕೋಟೆಯಾದ ಪದ್ರೌನಾದಿಂದ ಯುಪಿ ಚುನಾವಣೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದನ್ನೂ ಓದಿ: UP Election: ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ ಆರ್‌ಪಿಎನ್ ಸಿಂಗ್ – ಬಿಜೆಪಿ ಸೇರ್ಪಡೆ ಸಾಧ್ಯತೆ

    ದೆಹಲಿಯಲ್ಲಿ ಬಿಜೆಪಿ ಸೇರಿದ ಸಿಂಗ್‌, ಕಳೆದ 32 ವರ್ಷಗಳಿಂದ ಒಂದೇ ಪಕ್ಷದಲ್ಲಿ ಇದ್ದೆ. ಆದರೆ ಈಗ ಆ ಪಕ್ಷ (ಕಾಂಗ್ರೆಸ್) ಮೊದಲಿನಂತಿಲ್ಲ.‌ ಈಗ ಎಲ್ಲರಿಗೂ ತಿಳಿದಿರುವಂತೆ ಬಿಜೆಪಿ ಜನಹಿತಕ್ಕಾಗಿ ದುಡಿಯುತ್ತಿದೆ. ರಾಷ್ಟ್ರವನ್ನು ಕಟ್ಟುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

    ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್‌ ಸೋಮವಾರ ಘೋಷಿಸಿದ್ದ ತಾರಾ ಪ್ರಚಾರಕರ ಪಟ್ಟಿಯಲ್ಲಿ ಆರ್‌ಪಿಎನ್‌ ಸಿಂಗ್‌ ಕೂಡ ಸ್ಥಾನ ಪಡೆದುಕೊಂಡಿದ್ದರು. ಆದರೆ ಅವರು ಪಕ್ಷದ ವಿಚಾರವಾಗಿ ಅಸಮಾಧಾನ ಹೊಂದಿದ್ದರು. ಯುಪಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದ ಪ್ರಚಾರದಿಂದ ದೂರ ಉಳಿದಿದ್ದರು. ಇದನ್ನೂ ಓದಿ: ರಾಷ್ಟ್ರೀಯತೆಗಾಗಿ ಬಿಜೆಪಿಯನ್ನು ಸೇರಿದ್ದೇನೆ: ಅಪರ್ಣಾ ಯಾದವ್

  • ನಾನು ರಾಷ್ಟ್ರೀಯತೆಗಾಗಿ ಬಿಜೆಪಿ ಸೇರಿದ್ದೇನೆ: ಅಪರ್ಣಾ ಯಾದವ್

    ನಾನು ರಾಷ್ಟ್ರೀಯತೆಗಾಗಿ ಬಿಜೆಪಿ ಸೇರಿದ್ದೇನೆ: ಅಪರ್ಣಾ ಯಾದವ್

    ಲಕ್ನೋ: ಸಮಾಜವಾದಿ ಪಕ್ಷದಲ್ಲಿ ಟಿಕೆಟ್ ನಿರಾಕರಿಸಿರಿವುದರಿಂದ ಬಿಜೆಪಿಗೆ ಸೇರಿದ್ದೇನೆ ಎಂದು ಕೆಲವರು ನಂಬಿದ್ದಾರೆ. ಆದರೆ ನಾನು ರಾಷ್ಟ್ರೀಯತೆಗಾಗಿ ಬಿಜೆಪಿಯನ್ನು ಸೇರಿದ್ದೇನೆ ಎಂದು ಇತ್ತೀಚೆಗೆ ಬಿಜೆಪಿಗೆ ಸೇರಿದ್ದ ಯಾದವ್ ಕುಟುಂಬದ ಸೊಸೆ ಅಪರ್ಣಾ ಯಾದವ್ ತಿಳಿಸಿದರು.

    ಖಾಸಗಿ ವಾಹಿನಿಗೆ ಸಂದರ್ಶನ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿಂತನೆ ಹಾಗೂ ನೀತಿಗಳಿಂದ ನಾನು ಪ್ರಭಾವಿತನಾಗಿದ್ದೇನೆ. ಇದರಿಂದಾಗಿ ನಾನು ಬಿಜೆಪಿಗೆ ಸೇರಿದ್ದೇನೆ ಎಂದು ಹೇಳಿದರು.

    ಈ ಹಿಂದೆ ಅಪರ್ಣಾ ಯಾದವ್ ಅವರು ಬಿಜೆಪಿಗೆ ಸೇರಿರುವುದರ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಅಖಿಲೇಶ್ ಯಾದವ್ ಅವರು, ನಮಗೆ ಟಿಕೆಟ್ ನೀಡಲು ಸಾಧ್ಯವಾಗದವರಿಗೆ ಬಿಜೆಪಿ ಟಿಕೆಟ್ ನೀಡುತ್ತಿದೆ. ಇದರಿಂದ ಬಿಜೆಪಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ವ್ಯಂಗ್ಯವಾಡಿದ್ದರು.

    ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಸೊಸೆ ಹಾಗೂ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಸಹೋದರನ ಪತ್ನಿ ಅಪರ್ಣಾ ಯಾದವ್ ಅವರು ಇತ್ತೀಚೆಗೆ ಬಿಜೆಪಿ ಸೇರಿದ್ದು, ಉತ್ತರಪ್ರದೇಶ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದನ್ನೂ ಓದಿ: ಸೂಪರ್ ಹೀರೋ ರೂಪತಾಳಿದ ಚರಣ್‍ಜಿತ್ ಸಿಂಗ್ ಚನ್ನಿ

    ಅಪರ್ಣಾ ಯಾದವ್ 2017ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಲಕ್ನೋ ಕ್ಯಾಂಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಿತಾ ಬಹುಗುಣ ಜೋಶಿ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು. ಅದಾದ ಬಳಿಕ ಬಿಜೆಪಿ ಪಕ್ಷದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಅಪರ್ಣಾ ಯಾದವ್ ಒಲವು ಹೊಂದಿದ್ದರು. ಕೆಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ್ದರು. ಇದನ್ನೂ ಓದಿ: ಆತ್ಮನಿರ್ಭರ್ ಭಾರತಕ್ಕೆ ಹೊಸ ರೂಪ ನೀಡಿದ ದೆಹಲಿ ಮೆಟ್ರೋ

  • UP Election: ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ ಆರ್‌ಪಿಎನ್ ಸಿಂಗ್ – ಬಿಜೆಪಿ ಸೇರ್ಪಡೆ ಸಾಧ್ಯತೆ

    UP Election: ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ ಆರ್‌ಪಿಎನ್ ಸಿಂಗ್ – ಬಿಜೆಪಿ ಸೇರ್ಪಡೆ ಸಾಧ್ಯತೆ

    ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊತ್ತಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದ್ದು ಬಿಜೆಪಿ, ಎಸ್ಪಿಯ ಬಳಿಕ ಈಗ ಕಾಂಗ್ರೆಸ್‌ಗೆ ಬಿಗ್ ಶಾಕ್ ಎದುರಾಗಿದೆ. CWC ಸದಸ್ಯ ಮತ್ತು ಎಐಸಿಸಿ ಪದಾಧಿಕಾರಿಯೂ ಆಗಿದ್ದ ಆರ್‌ಪಿಎನ್ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

    ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಗಣರಾಜೋತ್ಸವದ ಆಚರಣೆ ಹೊತ್ತಲ್ಲಿ ನಾನು ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಟ್ವೀಟ್‌ನಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ನೀಡಿದ ರಾಜೀನಾಮೆ ಪತ್ರವನ್ನು ಅವರು ಲಗತ್ತಿಸಿದ್ದಾರೆ. ಮೂಲಗಳ ಪ್ರಕಾರ ಅವರು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಗಳಿವೆ.

    ಚುನಾವಣೆ ದೃಷ್ಟಿಯಿಂದ ಇದು ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರದು ಎನ್ನಲಾಗುತ್ತಿದೆ. ಆರ್‌ಪಿಎನ್ ಸಿಂಗ್ 2009 ರಲ್ಲಿ ಅವರು ಗೋರಖ್‌ಪುರದ ಪಕ್ಕದಲ್ಲಿರುವ ಕುಶಿ ನಗರದಿಂದ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 1996 ರಿಂದ 2009 ರವರೆಗೆ ಮೂರು ಬಾರಿ ಪದ್ರೌನಾ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು‌. ಆದರೆ ಭಾರಿ ಪ್ರಬಲ ನಾಯಕರಲ್ಲದಿದ್ದರೂ ಹೈಕಮಾಂಡ್ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು.

    ಇದನ್ನೂ ಓದಿ: ಪಂಜಾಬ್‍ನಲ್ಲಿ AAP ಅಧಿಕಾರಕ್ಕೆ ಬಂದ್ರೆ ಜನರ ಸಲಹೆ ಮೇರೆಗೆ ಬಜೆಟ್: ಅರವಿಂದ್ ಕೇಜ್ರಿವಾಲ್

    ಆರ್‌ಪಿಎನ್ ಸಿಂಗ್ ರಾಜೀನಾಮೆ ಚುನಾವಣೆಗೆ ನಷ್ಟವಾಗದಿದ್ದರೂ ಪಕ್ಷದ ಮಟ್ಟಿಗೆ ನಷ್ಟ ಎನ್ನಲಾಗಿದೆ. ‌ಅವರು ಯುಪಿಎ 2 ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿದ್ದರು. ರಾಹುಲ್ ಗಾಂಧಿ ಒಡನಾಡಿಯಾಗಿದ್ದ ಹಿನ್ನೆಲೆ ಭವಿಷ್ಯದ ಯುವ ನಾಯಕರ ಪೈಕಿ ಇವರು ಒಬ್ಬರಾಗಿದ್ದರು. ಒಬಿಸಿ ಕುರ್ಮಿ ​​ಸಮುದಾಯಕ್ಕೆ ಸೇರಿದ ಸಿಂಗ್, ಕೆಲ ವರ್ಷಗಳ ಹಿಂದೆ ಜಾರ್ಖಂಡ್‌ನ ಎಐಸಿಸಿ ಉಸ್ತುವಾರಿಯಾಗಿದ್ದರು.

    ಈ ರಾಜೀನಾಮೆಯಿಂದ ಪ್ರಭಾವಿ ಕುಟುಂಬದ ಹಿನ್ನೆಲೆಯ ನಾಯಕನನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಆರ್‌ಪಿಎನ್‌ ಸಿಂಗ್ ತಂದೆ ಕುನ್ವರ್ ಚಂದ್ರ ಪ್ರತಾಪ್ ನಾರಾಯಣ್ ಅವರು ಶಾಸಕರಾಗಿದ್ದರು ಮತ್ತು ಎರಡು ಬಾರಿ ಸಂಸದರಾಗಿದ್ದರು. 1980 ರಲ್ಲಿ ಇಂದಿರಾ ಗಾಂಧಿ ಸರ್ಕಾರದಲ್ಲಿ ಸಚಿವರಾಗಿದ್ದರು.

    ಕಳೆದ ವರ್ಷ ರಾಹುಲ್‌ ಗಾಂಧಿ ಆಪ್ತ ಜಿತಿನ್‌ ಪ್ರಸಾದ್‌ ಅವರನ್ನು ಕಾಂಗ್ರೆಸ್ ಕಳೆದುಕೊಂಡಿತು. ಅವರು ಬಿಜೆಪಿ ಸೇರಿ ನಂತರ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರದ ಸಚಿವರಾದರು. ಇದನ್ನೂ ಓದಿ: ಉತ್ತರಾಖಂಡ ಚುನಾವಣೆ: ರಾಮನಗರದಿಂದ ಮಾಜಿ ಸಿಎಂ ಹರೀಶ್ ರಾವತ್ ಕಣಕ್ಕೆ

  • UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ

    UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ

    ನವದೆಹಲಿ: ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ, ಭಾರತದ ಅತಿ ಎತ್ತರದ ಮನುಷ್ಯ ಧರ್ಮೇಂದ್ರ ಪ್ರತಾಪ್‌ ಸಿಂಗ್‌ ಅವರು ಶನಿವಾರ ಸಮಾಜವಾದಿ ಪಕ್ಷವನ್ನು ಸೇರಿದ್ದಾರೆ.

    ಉತ್ತರ ಪ್ರದೇಶದ ಪ್ರತಾಪಗಢದವರಾದ ಧರ್ಮೇಂದ್ರ ಸಿಂಗ್‌ ಅವರು 8.1 ಅಡಿ (2.4 ಮೀ.) ಎತ್ತರ ಇದ್ದಾರೆ. ಭಾರತದ ಅತಿ ಎತ್ತರದ ಮನುಷ್ಯರಾಗಿರುವ ಇವರು ವಿಶ್ವ ದಾಖಲೆಗೆ ಕೇವಲ 11 ಸೆ.ಮೀ.ನಿಂದ ವಂಚಿತರಾಗಿದ್ದರು. ಇದನ್ನೂ ಓದಿ: ಬಿಜೆಪಿಗೆ ಮತ್ತೊಂದು ಶಾಕ್‌ – ಗೋವಾ ಮಾಜಿ ಸಿಎಂ ಪರ್ಸೇಕರ್‌ ರಾಜೀನಾಮೆ

    ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ನರೇಶ್‌ ಉತ್ತಮ್‌ ಪಟೇಲ್‌ ಈ ಕುರಿತು ಮಾತನಾಡಿ, ಸಿಂಗ್‌ ಅವರು ನಮ್ಮ ಪಕ್ಷಕ್ಕೆ ಸೇರಿದ್ದಾರೆ. ಅವರ ಆಗಮನದಿಂದ ಸದ್ಯದಲ್ಲೇ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗೆ ಪಕ್ಷಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಸಮಾಜವಾದಿ ಪಕ್ಷದ ನೀತಿಗಳು ಮತ್ತು ಅಖಿಲೇಶ್‌ ಯಾದವ್‌ ಅವರ ನಾಯಕತ್ವದಲ್ಲಿ ನಂಬಿಕೆಯಿಟ್ಟು ಪ್ರತಾಪಗಢದ ಧರ್ಮೇಂದ್ರ ಪ್ರತಾಪ್‌ ಸಿಂಗ್‌ ಪಕ್ಷವನ್ನು ಸೇರಿದ್ದಾರೆ. ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶ್ರಮವಹಿಸುವುದಾಗಿಯೂ ಅವರು ತಿಳಿಸಿದ್ದಾರೆ. ಸಿಂಗ್‌ ಅವರಿಗೆ ಅಭಿನಂದನೆಗಳು ಎಂದು ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಹೇಳಿದ್ದಾರೆ. ಇದನ್ನೂ ಓದಿ: ಪಂಚರಾಜ್ಯಗಳಲ್ಲಿ ಚುನಾವಣಾ ರ‍್ಯಾಲಿ, ರೋಡ್ ಶೋ ಗಳಿಗೆ ಜ.31ರ ವರೆಗೆ ನಿರ್ಬಂಧ

    ಎತ್ತರ ಇರುವ ಕಾರಣದಿಂದಾಗಿಯೇ ಸಿಂಗ್‌ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದಾರೆ. ಹೊರಗಡೆ ಓಡಾಡುತ್ತಿದ್ದರೆ ಜನರ ಗಮನ ಅವರ ಕಡೆಗೆ ಇರುತ್ತದೆ. ಎಷ್ಟೋ ಕಡೆ ಜನ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿರುತ್ತಾರಂತೆ.

    ನನ್ನ ಎತ್ತರದ ಕಾರಣಕ್ಕೆ ನಾನು ಜನಪ್ರಿಯನಾಗಿದ್ದೇನೆ. ಜನ ನನ್ನೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಎಷ್ಟೋ ಸಂದರ್ಭಗಳುಂಟು. ಅದನ್ನು ನಾನು ಸೆಲೆಬ್ರಿಟಿಯಂತೆ ಸ್ವೀಕರಿಸಿದ್ದೇನೆ ಎಂದು ಸಿಂಗ್ ಹೇಳಿಕೊಂಡಿದ್ದಾರೆ.‌ ಫೆ.10ರಿಂದ ಮಾರ್ಚ್‌ 7ರವರೆಗೆ ವಿವಿಧ ಹಂತಗಳಲ್ಲಿ ಉತ್ತರ ಪ್ರದೇಶ ಚುನಾವಣೆ ನಡೆಯಲಿದೆ. ಮಾ.10 ರಂದು ಫಲಿತಾಂಶ ಹೊರಬೀಳಲಿದೆ.

  • 93 ಚುನಾವಣೆಗಳಲ್ಲಿ ಸೋತಿರೋ ಈ ವ್ಯಕ್ತಿಗೆ ಸೋಲಿನಲ್ಲೂ ಸೆಂಚುರಿ ಹೊಡೆಯೋ ಆಸೆ!

    93 ಚುನಾವಣೆಗಳಲ್ಲಿ ಸೋತಿರೋ ಈ ವ್ಯಕ್ತಿಗೆ ಸೋಲಿನಲ್ಲೂ ಸೆಂಚುರಿ ಹೊಡೆಯೋ ಆಸೆ!

    ಲಕ್ನೋ: ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಅನೇಕ ಜನರು ಶತಪ್ರಯತ್ನ ನಡೆಸುತ್ತಾರೆ. ಕೆಲವರಂತೂ ಗೆಲ್ಲಲು ಹಣ ಚೆಲ್ಲುತ್ತಾರೆ, ಮನೆ ಮಠವನ್ನೆಲ್ಲ ಮಾರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ 100 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುವ ಬಯಕೆಯನ್ನು ಹೊಂದಿದ್ದಾರೆ ಎನ್ನುವುದು ನಿಮಗೆ ಅಚ್ಚರಿ ಮೂಡಿಸಬಹುದು.

    ಹೌದು, ಉತ್ತರ ಪ್ರದೇಶ ಮೂಲದ ಹಸನೂರಾಮ್ ಅಂಬೇಡ್ಕರ್ ಇಲ್ಲಿಯವರೆಗೆ 93 ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ತಮ್ಮ 94ನೇ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.

    ಉತ್ತರ ಪ್ರದೇಶದ ಆಗ್ರಾದ ಖೇರಗಢ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಹಸನೂರಾಮ್ ಅಂಬೇಡ್ಕರ್ ಸ್ವತಂತ್ರ ಅಭ್ಯರ್ಥಿಯಾಗಿದ್ದಾರೆ. ಮುಂದಿನ ಚುನಾವಣೆಗೂ ಇವರು ಈಗಾಗಲೇ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ತಾಜ್‍ಮಹಲ್‍ಗೆ ನಕಲಿ ಟಿಕೆಟ್ ಮಾರುತ್ತಿದ್ದ ಟೆಕ್ಕಿ ಅರೆಸ್ಟ್

    1985ರಲ್ಲಿ ಹಸನೂರಾಮ್ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ಲೋಕಸಭೆ, ರಾಜ್ಯ ವಿಧಾನಸಭೆ ಮತ್ತು ಪಂಚಾಯತ್ ಚುನಾವಣೆಗಳಲ್ಲಿ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿದ್ದಾರೆ. 1998ರಲ್ಲಿ ರಾಷ್ಟ್ರಪತಿ ಹುದ್ದೆಗೂ ಸ್ಪರ್ಧಿಸಿದ ಇವರು 100 ಬಾರಿ ಚುನಾವಣೆಯಲ್ಲಿ ಸೋಲುವ ನಿರ್ಧಾರ ಮಾಡಿದ್ದರು.

    1985ರಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೇಳಿದಾಗ ಹಲವರು ನನಗೆ ಅಪಹಾಸ್ಯ ಮಾಡಿದ್ದರು. ನನ್ನ ಪತ್ನಿಯೂ ನನಗೆ ಸಹಕಾರ ನೀಡದ ಕಾರಣ ತೀವ್ರವಾಗಿ ಹತಾಶನಾಗಿದ್ದೆ. ಅಂದಿನಿಂದ ನಾನು ಪ್ರತಿ ಚುನಾವಣೆಯಲ್ಲೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಹಸನೂರಾಮ್ ಹೇಳುತ್ತಾರೆ. ಇದನ್ನೂ ಓದಿ: ಚುನಾವಣೆ ಸೋಲಿನ ಬಳಿಕ ವೋಟಿಂಗ್ ಯಂತ್ರ ವಶಪಡಿಸಿಕೊಳ್ಳಲು ಟ್ರಂಪ್ ಆದೇಶ!

  • ಯುಪಿ ಕಾಂಗ್ರೆಸ್‌ ಸಿಎಂ ಅಭ್ಯರ್ಥಿ ನಾನೇ ಎಂಬಂತೆ ಮಾತನಾಡಿಲ್ಲ: ಪ್ರಿಯಾಂಕಾ ಗಾಂಧಿ ಸ್ಪಷ್ಟನೆ

    ಯುಪಿ ಕಾಂಗ್ರೆಸ್‌ ಸಿಎಂ ಅಭ್ಯರ್ಥಿ ನಾನೇ ಎಂಬಂತೆ ಮಾತನಾಡಿಲ್ಲ: ಪ್ರಿಯಾಂಕಾ ಗಾಂಧಿ ಸ್ಪಷ್ಟನೆ

    ನವದೆಹಲಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಸಿಎಂ ಅಭ್ಯರ್ಥಿ ನಾನು ಎನ್ನುವ ಅರ್ಥದಲ್ಲಿ ನಾನು ಮಾತನಾಡಿಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪಷ್ಟಪಡಿಸಿದ್ದಾರೆ.

    ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಸಿಎಂ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕಾ ಗಾಂಧಿ, ನನ್ನ ಮುಖ ಕಾಣಿಸುತ್ತಿಲ್ಲವೇ ಎಂದು ಹೇಳಿದ್ದರು. ಈ ಹೇಳಿಕೆಯಿಂದಾಗಿ ಪ್ರಿಯಾಂಕಾ ಅವರೇ ಯುಪಿ ಕಾಂಗ್ರೆಸ್‌ ಸಿಎಂ ಅಭ್ಯರ್ಥಿ ಎಂದು ಬಿಂಬಿತವಾಯಿತು. ಆದರೆ ತಮ್ಮ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಎಚ್‌.ಡಿ.ದೇವೇಗೌಡರಿಗೆ ಕೊರೊನಾ ದೃಢ

    ಸಿಎಂ ಅಭ್ಯರ್ಥಿಯಾಗಿ ನನ್ನ ಮುಖ ಕಾಣಿಸುತ್ತಿಲ್ಲವೇ ಎಂಬ ಅರ್ಥದಲ್ಲಿ ನಾನು ಮಾತನಾಡಿಲ್ಲ. ಸಿಎಂ ಅಭ್ಯರ್ಥಿ ಕುರಿತು ಪದೇ ಪದೆ ಪ್ರಶ್ನೆಗಳು ಕೇಳಿ ಬರುತ್ತಿದ್ದರಿಂದ, ಎಲ್ಲೆಡೆ ನನ್ನ ಮುಖವನ್ನು ನೀವು ನೋಡಬಹುದು ಎಂದಷ್ಟೇ ಹೇಳಿದ್ದೆ ಎಂದು ತಿಳಿಸಿದ್ದಾರೆ.

    ಯುಪಿಯಲ್ಲಿ ಶೇಕಡಾವಾರು ನಿರುದ್ಯೋಗಿಗಳ ಬಗ್ಗೆ ನಾವು ಏಕೆ ಮಾತನಾಡುತ್ತಿಲ್ಲ? ಸರ್ಕಾರ ಶಿಕ್ಷಣಕ್ಕೆ ಖರ್ಚು ಮಾಡುತ್ತಿರುವ ಬಜೆಟ್‌ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ? ಉತ್ತರಪ್ರದೇಶದ ಪ್ರಗತಿಗೆ ಸಂಬಂಧವಿಲ್ಲದ್ದನ್ನೇ ಏಕೆ ಪರಿಹರಿಸುತ್ತಿದ್ದೇವೆ ಎಂದು ಬಿಜೆಪಿ ಸರ್ಕಾರವನ್ನು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

    ಸಮಾಜವಾದಿ ಪಕ್ಷ ಮತ್ತು ಬಿಜೆಪಿ ಒಂದೇ ಮಾದರಿಯಲ್ಲಿ ರಾಜಕೀಯ ಮಾಡುತ್ತಿವೆ. ಏಕೆಂದರೆ ಆ ಮಾದರಿಯ ರಾಜಕೀಯದಿಂದ ಅವರು ಲಾಭ ಪಡೆಯುತ್ತಿದ್ದಾರೆ. ಕೋಮುವಾದ, ಜಾತಿವಾದದ ಆಧಾರದ ಮೇಲೆ ಮುಂದುವರಿಯುವ ಪಕ್ಷಗಳು ಕೇವಲ ಅಜೆಂಡಾವನ್ನು ಹೊಂದಿವೆ. ಪರಸ್ಪರರು ಈ ರಾಜಕೀಯ ಲಾಭದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿಎಂ ಅಭ್ಯರ್ಥಿಯಾಗಿ ನನ್ನ ಮುಖವನ್ನು ನೋಡಬಹುದು ಅಲ್ಲವೇ: ಪ್ರಿಯಾಂಕಾ ಗಾಂಧಿ

    ಉತ್ತರ ಪ್ರದೇಶದಲ್ಲಿ ಚುನಾವಣೋತ್ತರ ಮೈತ್ರಿ ಕುರಿತು ಮಾತನಾಡಿದ ಅವರು, ಬಿಜೆಪಿಗೆ ಬಾಗಿಲು ಸಂಪೂರ್ಣ ಮುಚ್ಚಿದೆ. ಆದರೆ ಇತರ ಪಕ್ಷಗಳಿಗೆ ಮುಕ್ತವಾಗಿದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

  • UP Election: ಚುಣಾವಣಾ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಶಾಸಕನನ್ನು ಓಡಿಸಿದ ಗ್ರಾಮಸ್ಥರು

    UP Election: ಚುಣಾವಣಾ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಶಾಸಕನನ್ನು ಓಡಿಸಿದ ಗ್ರಾಮಸ್ಥರು

    ಲಕ್ನೋ: ಮುಂದಿನ ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಮುಜಾಫರ್‌ನಗರದಲ್ಲಿ ಪ್ರಚಾರ ತೆರಳಿದ್ದ ಬಿಜೆಪಿ ಶಾಸಕನನ್ನು ಗ್ರಾಮಸ್ಥರು ಓಡಿಸಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ಸೈನಿ ಚುನಾವಣೆಗೆ ಪ್ರಚಾರ ನಡೆಸಲು ಮುನ್ವಾರ್‌ಪುರ ಗ್ರಾಮಕ್ಕೆ ತೆರಳಿದ್ದರು. ಆದರೆ ಶಾಸಕರ ಕಾರನ್ನು ಗ್ರಾಮಸ್ಥರು ಅರ್ಧದಲ್ಲೇ ತಡೆದಿದ್ದಾರೆ. ಅಲ್ಲದೇ ಶಾಸಕರ ವಿರುದ್ಧ ಘೋಷಣೆ ಕೂಗಿ ವಾಪಸ್ ಹೋಗುವಂತೆ ಹೇಳಿದ್ದಾರೆ. ಇದನ್ನೂ ಓದಿ: ಪರಿಕ್ಕರ್ ಪುತ್ರನನ್ನು ಎಎಪಿಗೆ ಆಹ್ವಾನಿಸಿದ ಕೇಜ್ರಿವಾಲ್

    ಗ್ರಾಮಸ್ಥರ ಪ್ರತಿರೋಧದಿಂದಾಗಿ ಶಾಸಕರು ಬೇರೆ ಆಯ್ಕೆಯಿಲ್ಲದೇ ಕಾರು ಹತ್ತಿ ವಾಪಸ್ ಬಂದಿದ್ದಾರೆ. ಈ ಪ್ರಸಂಗದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

    ಈ ಕುರಿತು ಪ್ರತಿಕ್ರಿಯಿಸಿದ ಸೈನಿ, ಗ್ರಾಮಸ್ಥರ ಗುಂಪಿನಲ್ಲಿ ಕೆಲವರು ಮದ್ಯಪಾನ ಮಾಡಿದ್ದರು. ಆದ್ದರಿಂದ ನಾನು ಪ್ರಚಾರ ನಡೆಸದೇ ವಾಪಸ್ ಬಂದಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: UP Election: ಗೋರಖ್‌ಪುರ ಕ್ಷೇತ್ರದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಭೀಮ್ ಆರ್ಮಿ ಮುಖ್ಯಸ್ಥ ಸ್ಪರ್ಧೆ

    ವಿಕ್ರಮ್ ಸೈನಿ ವಿವಾದಾತ್ಮಕ ಹೇಳಿಕೆಗಳಿಂದಲೇ ಫೇಮಸ್ ಆದವರು. ಭಾರತದಲ್ಲಿ ಅಸುರಕ್ಷಿತ ವಾತಾವರಣ ಇದೆ ಎನ್ನುವವರಿಗೆ ಬಾಂಬ್ ಹಾಕುವುದಾಗಿಯೂ, ನಮ್ಮ ದೇಶವನ್ನು ಹಿಂದೂಸ್ತಾನ್ ಎನ್ನಲಾಗುತ್ತೆ. ಇದು ಹಿಂದೂಗಳ ರಾಷ್ಟ್ರ, ಗೋಹತ್ಯೆ ಮಾಡುವವರ ಕೈಕಾಲು ಮುರಿಯಬೇಕು ಎಂದು ಹೇಳಿಕೆಗಳನ್ನು ನೀಡಿದ್ದರು.

  • UP Election: ಗೋರಖ್‌ಪುರ ಕ್ಷೇತ್ರದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಭೀಮ್ ಆರ್ಮಿ ಮುಖ್ಯಸ್ಥ ಸ್ಪರ್ಧೆ

    UP Election: ಗೋರಖ್‌ಪುರ ಕ್ಷೇತ್ರದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಭೀಮ್ ಆರ್ಮಿ ಮುಖ್ಯಸ್ಥ ಸ್ಪರ್ಧೆ

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೋರಖ್‌ಪುರ್ ಕ್ಷೇತ್ರದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸ್ಪರ್ಧಿಸಲಿದ್ದಾರೆ.

    ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ನಡೆಯುವ ಚುನಾವಣೆಯಲ್ಲಿ ಗೋರಖ್‌ಪುರದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸುವುದಾಗಿ ದಲಿತ ನಾಯಕ ಚಂದ್ರಶೇಖರ್ ಆಜಾದ್ ತಿಳಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರದಲ್ಲಿ ಸ್ಪರ್ಧಿಸಲಿದ್ದಾರೆಂದು ಬಿಜೆಪಿ ಘೋಷಿಸಿತ್ತು. ಅದಾದ ಬಳಿಕ ಭೀಮ್ ಆರ್ಮಿ ಪಕ್ಷ ಆಜಾದ್ ಸ್ಪರ್ಧೆ ವಿಚಾರವನ್ನು ತಿಳಿಸಿದೆ. ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ

    ಯೋಗಿ ಆದಿತ್ಯನಾಥ್ ಅವರು ಮೊದಲ ಬಾರಿಗೆ ಶಾಸಕ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಆದರೆ ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ (ಎಸ್‌ಪಿ) ಅಭ್ಯರ್ಥಿಯಾಗಿರುತ್ತಾರೆ. ಆದರೆ ಎಸ್‌ಪಿ ಈ ಕ್ಷೇತ್ರದಲ್ಲಿ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ದಲಿತ ನಾಯಕ ಚಂದ್ರಶೇಖರ್ ಆಜಾದ್‌ಗೂ ಕೂಡ ಇದು ಮೊದಲ ಚುನಾವಣೆಯಾಗಿದೆ.

    34 ವಯಸ್ಸಿನ ಆಜಾದ್, 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿ ಸುದ್ದಿಯಾಗಿದ್ದರು. ನಂತರ ಚುನಾವಣೆಯಿಂದ ಹಿಂದೆ ಸರಿದರು. ಆ ಸಮಯದಲ್ಲಿ ತನಗೆ ಯಾವುದೇ ಪಕ್ಷವಿಲ್ಲದ ಕಾರಣ ಮಾಯಾವತಿ ಅವರ ಬಿಎಸ್‌ಪಿ ಹಾಗೂ ಕಾಂಗ್ರೆಸ್‌ಗೆ ಬೆಂಬಲ ನೀಡುವುದು ಉತ್ತಮ ಎಂದು ತಿಳಿಸಿದ್ದರು. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಚನ್ನಿ ಅಪ್ರಾಮಾಣಿಕ ವ್ಯಕ್ತಿ: ಅರವಿಂದ್ ಕೇಜ್ರಿವಾಲ್

    ಸಿಎಂ ವಿರುದ್ಧ ಗೋರಖ್‌ಪುರದಲ್ಲಿ ಕಣಕ್ಕಿಳಿಯುವ ಸಂಬಂಧ ಪ್ರತಿಕ್ರಿಯಿಸಿರುವ ಆಜಾದ್, ನನಗೆ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಲ್ಲ. ಆದರೆ ಯೋಗಿ ಆದಿತ್ಯನಾಥ್ ಅವರನ್ನು ಸೋಲಿಸುವುದು ಮುಖ್ಯ. ಹೀಗಾಗಿ ಅವರು ಎಲ್ಲೆಲ್ಲಿ ಸ್ಪರ್ಧಿಸುತ್ತಾರೋ ಅಲ್ಲಿ ನಾನೂ ಸ್ಪರ್ಧಿಸುತ್ತೇನೆ ತಿಳಿಸಿದ್ದಾರೆ.

    ಗೋರಖ್‌ಪುರ ಅಥವಾ ಪೂರ್ವ ಉತ್ತರ ಪ್ರದೇಶದಲ್ಲಿ ಭೀಮ್ ಆರ್ಮಿ ಪಕ್ಷ ಯಾವುದೇ ನೆಲೆಯನ್ನು ಹೊಂದಿಲ್ಲ. ಈ ಕ್ಷೇತ್ರ 1989ರಿಂದಲೂ ಬಿಜೆಪಿ ತೆಕ್ಕೆಯಲ್ಲಿದೆ. ಒಮ್ಮೆ ಅಖಿಲ ಭಾರತೀಯ ಹಿಂದೂ ಮಹಾಸಭಾ ಹೊರತುಪಡಿಸಿದರೆ, ಇಲ್ಲಿ ಬಿಜೆಪಿ ಪ್ರಬಲವಾಗಿದೆ.