Tag: uttar kannada

  • ಭಾಷಣದ ವೇಳೆ ಮೋದಿ ಘೋಷ – ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ರಾಹುಲ್

    ಭಾಷಣದ ವೇಳೆ ಮೋದಿ ಘೋಷ – ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ರಾಹುಲ್

    ಹೊನ್ನವಾರ: ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣ ಗಣನೆ ಆರಂಭವಾಗುತ್ತಿದಂತೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೊದಲ ದಿನವೇ ಮುಜುಗರ ಅನುಭವಿಸಿದ್ದಾರೆ.

    ಪ್ರಚಾರಕ್ಕಾಗಿ ಇಂದು ಹೊನ್ನಾವರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ನಗರದ ಶರಾವತಿ ಸರ್ಕಲ್ ಬಳಿ ಭಾಷಣ ಮಾಡುತ್ತಿದ್ದರು. ಈ ವೇಳೆ ಅಲ್ಲಿದ್ದ ಸ್ಥಳೀಯರು “ಮೋದಿ ಮೋದಿ” ಎಂದು ಪ್ರಧಾನಿಗಳ ಪರ ಘೋಷಣೆ ಕೂಗಿದರು.

    ಈ ಸಂದರ್ಭದಲ್ಲಿ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಪರ ಘೋಷಣೆ ಕೂಗಿದರು. ತಮ್ಮ ಭಾಷಣಕ್ಕೆ ಅಡ್ಡಿಯಾಗುತ್ತಿದಂತೆ ರಾಹುಲ್ ಅರ್ಧಕ್ಕೆ ತಮ್ಮ ಮಾತು ನಿಲ್ಲಿಸಿ ಸ್ಥಳದಿಂದ ನಿರ್ಗಮಿಸಿದರು.

    ತಮ್ಮ ಭಾಷಣ ವೇಳೆ ಪ್ರಧಾನಿಗಳ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮೋದಿ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ. ಆದರೆ 9 ಸಾವಿರ ಕೋಟಿ ದೋಚಿ ಹೋದ ನೀರವ್ ಮೋದಿ ಬಗ್ಗೆ ಏನೂ ಹೇಳಲ್ಲ. ಬಿಜೆಪಿಯವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಅವರ ಬೆಂಬಲಿಗರೂ ಹೋಗಿದ್ದಾರೆ. ಇಂತಹವರ ಜೊತೆ ಮೋದಿ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

  • ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆಗೆ ಜೀವ ಬೆದರಿಕೆ ಕರೆ- ಪೊಲೀಸರಿಗೆ ದೂರು

    ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆಗೆ ಜೀವ ಬೆದರಿಕೆ ಕರೆ- ಪೊಲೀಸರಿಗೆ ದೂರು

    ಕಾರವಾರ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರಿಗೆ ಇಂಟರ್ ನೆಟ್ ಮೂಲಕ ಕೊಲೆ ಬೆದರಿಕೆ ಕರೆ ಬಂದಿದೆ.

    ಸಚಿವರ ಮೊಬೈಲ್ ನಂಬರ್ ಹಾಗೂ ಲ್ಯಾಂಡ್ ಲೈನ್ ನಂಬರಿಗೆ ಮೂರು ಬಾರಿ ಕರೆ ಮಾಡಿ ಕೊಲೆ ಬೆದರಿಕೆ ಹಾಕಲಾಗಿದೆ. ಇಂದು ಬೆಳಗಿನ ಜಾವ ಶಿರಸಿಯ ಮನೆಯಲ್ಲಿ ಇರುವಾಗ ಬೆದರಿಕೆ ಹಾಕಲಾಗಿದ್ದು, ಮೊದಲು +04044 ನಂಬರಿನಿಂದ ಸಚಿವರ ಮೊಬೈಲ್ ಗೆ ಕರೆ ಮಾಡಲಾಗಿದೆ. ಆದರೆ ಈ ಕರೆ ಸ್ವೀಕರಿಸದ  ಹಿನ್ನೆಲೆಯಲ್ಲಿ ಮತ್ತೆ 0040440000 ನಂಬರಿನಿಂದ ಕರೆ ಮಾಡಲಾಗಿದೆ.

    ಈ ವೇಳೆ ಕರೆಯನ್ನು ಸಚಿವರ ಪತ್ನಿ ಕರೆ ಸ್ವೀಕರಿಸಿದ್ದರು. ಇದಾದ ನಂತರ ಮತ್ತೆ ಬೆಳಗಿನ ಜಾವ 2 ಘಂಟೆಗೆ ಕರೆ ಮಾಡಿದ್ದು, ಸಚಿವರೇ ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ಕರೆ ಮಾಡಿದ ದುಷ್ಕರ್ಮಿಗಳು ಸಚಿವರಿಗೆ ಬೆದರಿಕೆ ಹಾಕಿದ್ದು, ನೀನು ದೊಡ್ಡ ಲೀಡರಾ? ನಿನ್ನ ತಲೆ ಕಡಿದು ಹಾಕುತ್ತೇನೆ, ದೇಹವನ್ನ ತುಂಡು ಮಾಡುತ್ತೇನೆ ಎಂದು ಬೆದರಿಸಿದ್ದಾರೆ.  ಇದನ್ನೂ ಓದಿ : ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹತ್ಯೆಗೆ ಯತ್ನ !

    ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಸುರೇಶ್ ಶಟ್ಟಿ ಇಂದು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 504 ಹಾಗೂ 507 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.  ಇದನ್ನೂ ಓದಿ : ಅನಂತಕುಮಾರ್ ಹೆಗ್ಡೆ ಪೊಲೀಸ್ ಬೆಂಗಾವಲು ಕಾರಿಗೆ ಡಿಕ್ಕಿ ಹೊಡೆದ ಲಾರಿಯ ಒಡೆತನದ ಬಗ್ಗೆ ಒಂದಿಷ್ಟು ಮಾಹಿತಿ

  • ಹಳಿಯಾಳ ಪಿಎಸ್‍ಐ ಪತ್ನಿ ಆತ್ಮಹತ್ಯೆಗೆ ಶರಣು

    ಹಳಿಯಾಳ ಪಿಎಸ್‍ಐ ಪತ್ನಿ ಆತ್ಮಹತ್ಯೆಗೆ ಶರಣು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಿಎಸ್‍ಐ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಪಿಎಸ್‍ಐ ಮಲ್ಲಪ್ಪ ಎಸ್ ಹೂಗಾರ ಅವರ ಪತ್ನಿ ವಿಜಯಲಕ್ಷ್ಮಿ ಹೂಗಾರ(28) ಆತ್ಮಹತ್ಯೆ ಮಾಡಿಕೊಂಡವರು. ರಾತ್ರಿ ಪಾಳಿ ಮುಗಿಸಿ ಬೆಳಗ್ಗೆ ಪಿಎಸ್‍ಐ ಮನೆಗೆ ವಾಪಾಸ್ಸಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು 7.30ರ ಸಮಯಕ್ಕೆ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಶರಣಾಗಿರಬಹುದೆಂದು ತಿಳಿದುಬಂದಿದೆ.

    ಪಿಎಸ್‍ಐ ಮಲ್ಲಪ್ಪ ಎಸ್ ಹೂಗಾರ ಮತ್ತು ವಿಜಯಲಕ್ಷ್ಮಿ ಅವರಿಗೆ 6 ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮಲ್ಲಪ್ಪ ಅವರಿಗೆ ಮಂಗಳವಾರ ನೈಟ್ ಶಿಫ್ಟ್ ಕೆಲಸ ಇತ್ತು. ಹೀಗಾಗಿ ಅವರು ಇಂದು ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಪತ್ನಿ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದನನ್ನು ಕಂಡ ಪಿಎಸ್‍ಐ ಕಿರುಚಾಡಿದ್ದಾರೆ. ಪಿಎಸ್‍ಐ ಕೂಗುವ ಧ್ವನಿ ಕೇಳಿ ಪಕ್ಕದ ಕ್ವಾಟ್ರಸ್‍ನಲ್ಲಿದ್ದ ಸಿಪಿಐ ಧಾವಿಸಿದ್ದು, ಕೂಡಲೇ ವಿಜಯಲಕ್ಷ್ಮಿ ಅವರನ್ನು ನೇಣಿನಿಂದ ಬಿಡಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಆದರೆ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ. ಸರ್ಕಾರಿ ಆಸ್ಪತ್ರೆಗೆ ವಿಧಾನಪರಿಷತ್ ಸದಸ್ಯ ಎಸ್.ಎಲ್ ಘೋಟ್ನೆಕರ, ಮಾಜಿ ಶಾಸಕ ಸುನೀಲ ಹೆಗಡೆ, ತಹಶೀಲ್ದಾರ ವಿದ್ಯಾಧರ ಗುಳಗುಳೆ ಭೇಟಿ ನೀಡಿದ್ದಾರೆ.

  • ಪರೇಶ್ ಮೇಸ್ತಾ ಸಾವಿನ ಪ್ರಕರಣದ ತನಿಖೆ ಸಿಬಿಐ ಹೆಗಲಿಗೆ

    ಪರೇಶ್ ಮೇಸ್ತಾ ಸಾವಿನ ಪ್ರಕರಣದ ತನಿಖೆ ಸಿಬಿಐ ಹೆಗಲಿಗೆ

    ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಹೊತ್ತಿ ಉರಿದ ಬಳಿಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಹೊನ್ನಾವರದ ಪರೇಶ್ ಮೇಸ್ತಾ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಿದೆ.

    ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಪರೇಶ್ ಕುಟುಂಬದ ಬೇಡಿಕೆಯಂತೆ ಪ್ರಕರಣವನ್ನು ಸಿಬಿಐಗೆ ವಹಿಸುತ್ತಿರೋದಾಗಿ ತಿಳಿಸಿದ್ದಾರೆ. ಬಿಜೆಪಿಯವರ ಒತ್ತಡಕ್ಕೆ ಮಣಿದು ಈ ಪ್ರಕರಣವನ್ನು ಸಿಬಿಐಗೆ ವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ( ಇದನ್ನೂ ಓದಿ: ಪರೇಶ್ ಮೇಸ್ತಾ ಸಾವು: ವೈದ್ಯರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ )

    ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ಪರೇಶ್ ಸಾವಿನ ಪ್ರಕರಣವನ್ನು ಎನ್‍ಐಎಗೆ ವಹಿಸಲು ಕೋರಿ ಭಾರೀ ಪ್ರತಿಭಟನೆ ನಡೆಸಿದ್ದರು. ಅತ್ತ ಪರೇಶ್ ಮೇಸ್ತಾ ಅವರದ್ದು ಸಹಜ ಸಾವೆಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿಸಿದ್ದರೂ, ಪರೇಶ್ ತಂದೆ ಕಮಲಾಕರ ಮೇಸ್ತಾ ಕೊಲೆ ಆರೋಪ ಮಾಡಿದ್ದಾರೆ. ( ಇದನ್ನೂ ಓದಿ: Exclusive: ವಿಷವುಣಿಸಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ – ಪರೇಶ್ ಮೇಸ್ತಾ ತಂದೆ ಹೇಳಿಕೆ )

    ಪರೇಶ್‍ನನ್ನು ಅಪಹರಿಸಿ ಕೊಲೆ ಮಾಡಲಾಗಿದ್ದು, ಆತನ ಕೈಯಲ್ಲಿದ್ದ ಶಿವಾಜಿ ಟ್ಯಾಟುವನ್ನು ದುಷ್ಕರ್ಮಿಗಳು ಚಾಕುವಿನಿಂದ ಹಾಳು ಮಾಡಿದ್ದಾರೆ. ಪೊಲೀಸರು ಹೇಳುವಂತೆ, ಪರೇಶ್ ಮೇಸ್ತಾ ಕಾಲು ಜಾರಿ ಬಿದ್ದಿಲ್ಲ. ಆತನಿಗೆ ಚೆನ್ನಾಗಿಯೇ ಈಜು ಬರುತ್ತಿತ್ತು. ಸತ್ಯಾಸತ್ಯತೆ ಹೊರ ಬರಲು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದರು.

     

     

  • ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ- ಆಸ್ಪತ್ರೆಯ ಬಾಗಿಲಲ್ಲೇ ಪ್ರಾಣಬಿಟ್ಟ ವಿದ್ಯಾರ್ಥಿನಿ

    ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ- ಆಸ್ಪತ್ರೆಯ ಬಾಗಿಲಲ್ಲೇ ಪ್ರಾಣಬಿಟ್ಟ ವಿದ್ಯಾರ್ಥಿನಿ

    ಕಾರವಾರ: ಖಾಸಗಿ ಆಸ್ಪತ್ರೆಯ ವೈದ್ಯರು ಸರ್ಕಾರದ ವಿರುದ್ಧ ಶುಕ್ರವಾರ ಮುಷ್ಕರ ಮಾಡಿದ ಪರಿಣಾಮ ವಿದ್ಯಾರ್ಥಿನಿಯೊಬ್ಬಳು ಬಲಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಗೋರ್ಸಗದ್ದೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ನಿವಾಸಿ 21 ವರ್ಷದ ರಾಜೇಶ್ವರಿ ಮೃತ ದುರ್ದೈವಿ. ರಾಜೇಶ್ವರಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಳು. ಆಕೆಯನ್ನು ಮಂಚಿಕೇರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಚಕ್ಕರ್ ಹಾಕಿ ಆಸ್ಪತ್ರೆಗೆ ಬೀಗ ಜಡಿದಿದ್ದರು. ಖಾಸಗಿ ಆಸ್ಪತ್ರೆಗೆ ಹೋಗೋಣ ಅಂದ್ರೆ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳೂ ಬಂದ್ ಆಗಿದ್ದವು. ಇದರಿಂದ ವಿದ್ಯಾರ್ಥಿನಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಆಸ್ಪತ್ರೆಯ ಬಾಗಿಲಲ್ಲೇ ಜೀವ ಬಿಟ್ಟಿದ್ದಾರೆ.

    ಘಟನೆ ನಡೆದ ಸ್ಥಳಕ್ಕಾಗಮಿಸಿದ ಸಿಬ್ಬಂದಿಯನ್ನು ರಾಜೇಶ್ವರಿ ಸಂಬಂಧಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಕ್ಷಯ ರೋಗಿಗಳಿಗೆ ಮನೆಗೆ ಹೋಗಿ ಚಿಕಿತ್ಸೆ ನೀಡಬೇಕೆಂಬ ನಿಯಮವಿದೆ. ಆದರೆ ಇಲ್ಲಿ ಆಸ್ಪತ್ರೆಗೆ ಹೋದರೂ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

  • ಹಾಲು ತರಲು ಹೋಗಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕ ಬಂಧನ

    ಹಾಲು ತರಲು ಹೋಗಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕ ಬಂಧನ

    ಕಾರವಾರ: ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಗ್ರಾಮದಲ್ಲಿ ಹಾಲು ತರಲು ಹೋಗಿದ್ದ 21 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಸುಬ್ರಹ್ಮಣ್ಯ ರೊಬೆಲ್ ಶೆಟ್ಟಿ (29) ಬಂಧಿತ ಆರೋಪಿ. ಎರಡು ದಿನಗಳ ಹಿಂದೆ ಯುವತಿ ಸುಬ್ರಹ್ಮಣ್ಯನ ಮನೆಗೆ ಹಾಲು ತರಲು ತೆರಳಿದ್ದಳು. ಈ ವೇಳೆ ಆರೋಪಿ ಸುಬ್ರಹ್ಮಣ್ಯ ಯುವತಿ ಮೇಲೆ ಅತ್ಯಾಚಾರ ಎಸೆಗಿ ಬಳಿಕ ಪರಾರಿಯಾಗಿದ್ದ.ಈ ಸಂಬಂಧ ಯುವತಿಯ ತಾಯಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಪ್ರಕರಣ ದಾಖಲಾಗುತ್ತಿದ್ದಂತೆ ಹೊನ್ನಾವರದ ಪಿ.ಎಸ್.ಐ ಆನಂದ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

     

  • ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ 1.30 ಕೋಟಿ ರೂ. ಹಳೇ ನೋಟ್‍ಗಳು ಜಪ್ತಿ- 3 ಮಹಿಳೆಯರು ವಶಕ್ಕೆ

    ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ 1.30 ಕೋಟಿ ರೂ. ಹಳೇ ನೋಟ್‍ಗಳು ಜಪ್ತಿ- 3 ಮಹಿಳೆಯರು ವಶಕ್ಕೆ

    ಉತ್ತರ ಕನ್ನಡ: ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ 30 ಲಕ್ಷ ರೂ. ಮೌಲ್ಯದ ನಿಷೇಧಿತ 500 ಮತ್ತು 1 ಸಾವಿರ ಮುಖಬೆಲೆಯ ನೋಟುಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಹಣ ಸಾಗಿಸುತ್ತಿದ್ದ ಮೂವರು ಮಹಿಳೆಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಮುಂಡಗೋಡು ಮೂಲದ ಜಯಶ್ರೀ ಹನುಮಂತಗೌಳಿ, ಭವಾನಿ ಹಾಗೂ ಮೀನಾಕ್ಷಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದವರು. ಗೋವಾದ ಮಡಗಾಂ ನಿಂದ ಮುಂಡಗೋಡಿಗೆ ಹಣ ಸಾಗಿಸುತ್ತಿರುವಾಗ ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ಚಿತ್ತಾಕುಲ ಪೊಲೀಸರು ಹಣ ಜಪ್ತಿ ಮಾಡಿ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ.

    ಮುಂಡಗೋಡು ಪಟ್ಟಣದ ವಾಣಿ ಪ್ರಭು ಎಂಬ ವೈದ್ಯೆಗೆ ಸೇರಿದ ಹಣವಿದು ಎಂದು ಮಹಿಳೆಯರು ಪೊಲೀಸರಿಗೆ ತಿಳಿಸಿದ್ದಾರೆ. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಬೇರೊಬ್ಬ ಮೌಲ್ವಿಯ ಉಪದೇಶ ಆಲಿಸಿದಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರದ ಫತ್ವಾ

    ಬೇರೊಬ್ಬ ಮೌಲ್ವಿಯ ಉಪದೇಶ ಆಲಿಸಿದಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರದ ಫತ್ವಾ

    ಕಾರವಾರ: ಬೇರೊಬ್ಬ ಮೌಲ್ವಿಯ ಉಪದೇಶವನ್ನು ಆಲಿಸಿದ ಕಾರಣಕ್ಕಾಗಿ ಜಿಲ್ಲೆಯ ಚಿತ್ತಾಕುಲದ ಮಾಲ್ದಾರವಾಡದ ಗ್ರಾಮದಲ್ಲಿ 12 ಮುಸ್ಲಿಂ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ಮೌಲ್ವಿಯೊಬ್ಬರು ಫತ್ವಾ ಹೊರಡಿಸಿದ್ದಾರೆ.

    ಗ್ರಾಮದ ಅನ್ವರ್ ಮಹಮದ್ ಖಾನ್, ಅಬ್ದುಲ್ ಸಲಾಂ ಸೇರಿದಂತೆ 12 ಕುಟುಂಬಗಳು ಆಂಧ್ರಪ್ರದೇಶದ ದಾವಲ್-ಅಲಿ-ಶಾಹಾರ್ ಎಂಬ ಮೌಲ್ವಿಯ ಉಪದೇಶವನ್ನ ಕೇಳಿ ಅವರನ್ನು ಅನುಸರಿಸುತ್ತಿದ್ದರು. ಈ ಕಾರಣದಿಂದಾಗಿ ಚಿತ್ತಾಕುಲದ ಮಸೀದಿ ಹಾಗೂ ಮಸೀದಿಯ ಸಮಿತಿ, 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ಫತ್ವಾ ಹೊರಡಿಸಿದ್ದಾರೆ. ಬಹಿಷ್ಕಾರಗೊಂಡಿರುವ ಕುಟುಂಬಗಳ ಯಾವುದೇ ಕಾರ್ಯಕ್ರಮಗಳಿಗೆ ಸಂಬಂಧಿಕರು ತೆರಳದಂತೆ ಫತ್ವಾ ಹೊರಡಿಸಲಾಗಿದೆ.

    ಇದೇ ತಿಂಗಳ 21 ರಂದು ಅಬ್ದುಲ್ ಸಲಾಂ ಎಂಬ ಯುವಕನ ವಿವಾಹ ಮಹೋತ್ಸವವಿದ್ದು, ಮಸೀದಿಯಿಂದ ಮದುವೆಗೆ ಒಪ್ಪಿಗೆ ಪತ್ರ ನೀಡದ ಹಿನ್ನೆಲೆಯಲ್ಲಿ ಮದುವೆ ಮುರಿದು ಬೀಳುವ ಹಂತಕ್ಕೆ ಬಂದಿದೆ. ಇನ್ನು ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು, ಅವರ ಸೂಚನೆಗಳಿದ್ದರೂ ಮಸೀದಿಯವರು ಮಾತ್ರ ತಮ್ಮ ಫತ್ವಾವನ್ನು ಹಿಂದೆ ತೆಗೆದುಕೊಂಡಿಲ್ಲ. ಆಂಧ್ರ ಮೂಲದ ಮೌಲ್ವಿಯನ್ನು ಅನುಸರಿಸದೇ ತಪ್ಪೋಪ್ಪಿಗೆ ಪತ್ರ ನೀಡಿದಲ್ಲಿ ಮಾತ್ರ ಫತ್ವಾ ಹಿಂಪಡೆಯುವ ಸಂದೇಶ ನೀಡಿದ್ದಾರೆ.

  • ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿಯಿತು ಬೋಟ್!

    ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿಯಿತು ಬೋಟ್!

    ಕಾರವಾರ: ಆಕಸ್ಮಿಕವಾಗಿ ಅರಬಿ ಸಮುದ್ರದಲ್ಲಿದ್ದ ಬೋಟ್‍ಗೆ ಬೆಂಕಿ ತಗುಲಿ ಬೋಟ್ ಹೊತ್ತಿ ಉರಿದಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರದಲ್ಲಿ ಘಟನೆ ನಡೆದಿದೆ.

    ಖಾದರ್ ಸಾಬ್ ಅಬ್ದುಲ್ ರಜಾಕ್ ಎಂಬವರಿಗೆ ಸೇರಿದ ಬೋಟ್ ಇದಾಗಿದ್ದು, ಅಡುಗೆ ತಯಾರಿಸುವ ವೇಳೆ ಬೋಟ್‍ನ ಡಿಸೇಲ್ ಟ್ಯಾಂಕ್‍ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದಾಗಿ ಬೋಟ್‍ನಲ್ಲಿ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಈ ಬೋಟ್‍ನಿಂದ ಅನತಿ ದೂರದಲ್ಲಿದ್ದ ಮತ್ತೊಂದು ಬೋಟ್‍ನಲ್ಲಿದ್ದವರು ಬೆಂಕಿಗಾಹುತಿಯಾಗುತ್ತಿದ್ದ ಬೋಟ್‍ನತ್ತ ಧಾವಿಸಿದ್ದಾರೆ. ಈ ವೇಳೆ ಬೋಟ್‍ನಲ್ಲಿದ್ದ ಇಬ್ಬರನ್ನ ರಕ್ಷಿಸಲಾಗಿದೆ.

    ಅಲ್ಲದೆ ಇನ್ನೊಂದು ಬೋಟ್‍ನ ಸಹಾಯದಿಂದ ಬೆಂಕಿಯನ್ನು ನಂದಿಸುವ ಕಾರ್ಯವನ್ನೂ ಮಾಡಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=vY4lPJ-cl38&feature=youtu.be