Tag: uttar kannada

  • ಭಟ್ಕಳದಲ್ಲಿ ಹನುಮಾನ್ ಧ್ವಜ ಹಾರಿಸಿದ್ದಕ್ಕೆ ಸಂಸದ ಹೆಗಡೆ ಮೇಲೆ ಕೇಸ್ ದಾಖಲು

    ಭಟ್ಕಳದಲ್ಲಿ ಹನುಮಾನ್ ಧ್ವಜ ಹಾರಿಸಿದ್ದಕ್ಕೆ ಸಂಸದ ಹೆಗಡೆ ಮೇಲೆ ಕೇಸ್ ದಾಖಲು

    ಕಾರವಾರ: ಭಟ್ಕಳದಲ್ಲಿ (Bhatkal) ಸಾವರ್ಕರ್ ನಾಮಫಲಕ ಮತ್ತು ಹನುಮಾನ್ ಧ್ವಜ (Hanuman Flag) ಹಾರಿಸಿದ ಹಿನ್ನೆಲೆ ಸಂಸದ ಅನಂತ್‌ಕುಮಾರ್ ಹೆಗಡೆ (Anantkumar Hegde) ಸೇರಿದಂತೆ ಒಟ್ಟು 21 ಜನರ ಮೇಲೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಭಟ್ಕಳದ ತೆಂಗಿನಗುಂಡಿಯ ಬಂದರು ಆವರಣದಲ್ಲಿ ಸಾವರ್ಕರ್ ನಾಮಫಲಕ ಮತ್ತು ಹನುಮಾನ್ ಧ್ವಜವನ್ನು ಸಂಸದ ಅನಂತಕುಮಾರ್ ಹೆಗಡೆ ಮುಂದಾಳತ್ವದಲ್ಲಿ ಸೋಮವಾರ ಹಾರಿಸಲಾಗಿತ್ತು. ಪರವಾನಿಗೆ ಪಡೆಯಲಿಲ್ಲ ಎಂದು ಕಳೆದ ತಿಂಗಳಲ್ಲಿ ಭಗವಾಧ್ವಜ ಹಾಗೂ ನಾಮಫಲಕ ತೆರವುಗೊಳಿದ್ದ ಗ್ರಾಮಪಂಚಾಯತ್ ಅಧಿಕಾರಿಗಳು ಅನುಮತಿ ಪಡೆದು ಹಾಕುವಂತೆ ತಿಳಿಸಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ನಿಯಮ – ಒಬ್ಬರಿಗೆ ಒಂದೇ ಕ್ಯಾನ್‌ ನೀರು!

    ಈ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿ ವಿವಾದಕ್ಕೆ ಕಾರಣವಾಗಿತ್ತು. ಆದರೆ ಕಳೆದ ಸೋಮವಾರ ಕಾರ್ಯಕರ್ತರ ಮೂಲಕ ಹನುಮಾನ್ ಧ್ವಜ ಹಾರಿಸಿ, ಸಾವರ್ಕರ್ ನಾಮಫಲಕ ಅಳವಡಿಸಿದ್ದ ಸಂಸದ ಅನಂತ್‌ಕುಮಾರ್ ಹೆಗಡೆ ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸವಾಲು ಹಾಕಿದ್ದರು. ಇದನ್ನೂ ಓದಿ: ಆಪರೇಷನ್ ಕಮಲ ಮಾಡಲು ಬಿಜೆಪಿ ಪ್ರಭಾವಿ ವ್ಯಕ್ತಿಯಿಂದ ಆಫರ್: ಬಿ.ಆರ್.ಪಾಟೀಲ್

  • ಫಕೀರರ ವೇಷ ತೊಟ್ಟು ಜನರಿಗೆ ವಂಚನೆ – ಇಬ್ಬರು ವಶ

    ಫಕೀರರ ವೇಷ ತೊಟ್ಟು ಜನರಿಗೆ ವಂಚನೆ – ಇಬ್ಬರು ವಶ

    ಕಾರವಾರ: ಫಕೀರರ ವೇಷ ಧರಿಸಿಕೊಂಡು ಜನರನ್ನು ಮೋಸ ಮಾಡುತ್ತಿದ್ದ ಯುವಕರಿಬ್ಬರನ್ನು ಜನರೇ ಪೊಲೀಸರಿಗೆ (Police) ಹಿಡಿದುಕೊಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಗಾಂಧಿನಗರದಲ್ಲಿ ನಡೆದಿದೆ.

    ಮುಂಬೈ (Mumbai) ಮೂಲದ ಯುವಕರಾದ ಅರುಣ್ ಹಾಗೂ ವಿಷ್ಣು ಫಕೀರರ ವೇಷ ಧರಿಸಿಕೊಂಡು ಮನೆ ಮನೆ ತಿರುಗಾಡುತ್ತಾ ಜನರನ್ನು ಮೋಸ ಮಾಡುತ್ತಿದ್ದರು. ಅಲ್ಲದೇ ಒಂದಿಬ್ಬರು ಇರುತ್ತಿದ್ದ ಮನೆಗಳನ್ನು ಗುರುತು ಮಾಡಿಕೊಂಡು ವಿವಿಧ ಸಮಸ್ಯೆಗಳನ್ನು ಹೇಳಿಕೊಂಡು ಜನರಿಂದ ಹಣ ಕೀಳಲಾರಂಭಿಸಿದ್ದರು.  ಇದನ್ನೂ ಓದಿ: ಭ್ರಷ್ಟಾಚಾರದ ಕರಾಳ ಮುಖ ಬಯಲಾಗಿದೆ, ಅಕ್ರಮ ಸಂಪತ್ತನ್ನು ನೀವೆ ಹಂಚಿಬಿಡಿ – ಸಿಎಂಗೆ ವಿಜಯೇಂದ್ರ ಟಾಂಗ್‌

    ಯುವಕರ ಮೇಲೆ ಸಂಶಯಗೊಂಡ ದಾಂಡೇಲಿಯ ದಾದಾ ಪೀರ್ ನದಿಮುಲ್ಲಾ ಎಂಬುವವರು ಇಬ್ಬರನ್ನೂ ವಿಚಾರಣೆ ನಡೆಸಿದಾಗ ನೈಜ ವಿಚಾರ ಹೊರಕ್ಕೆ ಬಂದಿದೆ. ಕೂಡಲೇ ದಾಂಡೇಲಿ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿಸಿದ್ದಾರೆ.

  • ಒಂದೇ ಕುಟುಂಬದ 18 ಜನ ಕೊರೊನಾದಿಂದ ಗುಣಮುಖ – ಟೇಪ್ ಕತ್ತರಿಸಿ ಸಂಭ್ರಮಾಚರಣೆ

    ಒಂದೇ ಕುಟುಂಬದ 18 ಜನ ಕೊರೊನಾದಿಂದ ಗುಣಮುಖ – ಟೇಪ್ ಕತ್ತರಿಸಿ ಸಂಭ್ರಮಾಚರಣೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕುಳಿ ಗ್ರಾಮದಲ್ಲಿ ಮೂರು ವರ್ಷದ ಮಗುವಿನಿಂದ ಹಿಡಿದು 77 ವರ್ಷದ ವೃದ್ಧನವರೆಗೆ 18 ಜನರಿರುವ ಇಡೀ ಕುಟುಂಬವೇ ಕೊರೊನಾ ಗೆಲ್ಲುವ ಮೂಲಕ ಸಂಭ್ರಮ ಆಚರಿಸಿದ್ದಾರೆ.

    ಚಿಕ್ಕ ಮಕ್ಕಳಿಂದ ಹಿಡಿದು 77 ವರ್ಷದ ವೃದ್ಧ ಸೇರಿದಂತೆ ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಿತ್ತು. ಅವಿಭಕ್ತವಾಗಿರುವ ಈ ಕುಟುಂಬದಲ್ಲಿ ಚಿಕ್ಕ ಮಕ್ಕಳು ಸೇರಿ ಒಟ್ಟು 18 ಜನರಿದ್ದಾರೆ. ಇದರಲ್ಲಿ 77 ವರ್ಷದ ಮನೆಯ ಯಜಮಾನ ಲೋಕೇಶ್ವರ್ ಹೆಗಡೆ ಅವರಿಗೆ ಸೋಂಕು ದೃಡಪಟ್ಟಿತ್ತು. ತಕ್ಷಣ ಇಡೀ ಕುಟುಂಬದ ಸದಸ್ಯರು ಸಹ ತಪಾಸಣೆ ನಡೆಸಿದಾಗ ಎಲ್ಲರಿಗೂ ಪಾಸಿಟಿವ್ ಬಂದಿತ್ತು.

    ವೈದ್ಯರ ಮಾರ್ಗದರ್ಶನದಲ್ಲಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆದು ಇಂದು ಗುಣಮುಖರಾಗಿದ್ದಾರೆ. ಇಡೀ ಕುಟುಂಬದ ಸದಸ್ಯರು ಮನೆಯ ಹೊರ ನಿಂತು ಕುಟುಂಬದ ಯಜಮಾನನ ಮೂಲಕ ಟೇಪ್ ಕಟ್ ಮಾಡಿಸಿ ಸಂಭ್ರಮ ಹಂಚಿಕೊಂಡರು.

  • ಲಾಕ್‍ಡೌನ್‍ನಲ್ಲಿ ಹೆಚ್ಚಾಯ್ತು ಕರಾವಳಿಯ ಪೊಲೀಸರಿಗೆ ಕೊರೊನಾ ಸೋಂಕು!

    ಲಾಕ್‍ಡೌನ್‍ನಲ್ಲಿ ಹೆಚ್ಚಾಯ್ತು ಕರಾವಳಿಯ ಪೊಲೀಸರಿಗೆ ಕೊರೊನಾ ಸೋಂಕು!

    ಕಾರವಾರ: ಒಂದೆಡೆ ಏರುತ್ತಲೇ ಸಾಗಿರುವ ಕೊರೊನಾ ಸೋಂಕಿತರ ಸಂಖ್ಯೆ. ಇನ್ನೊಂದೆಡೆ ದಿನಕ್ಕೊಂದು ಆದೇಶ ಹೊರಡಿಸಿ ಜನ ಸಾಮಾನ್ಯರನ್ನು ಮಾತ್ರವಲ್ಲ ಆಡಳಿತವರ್ಗವನ್ನು ಗೊಂದಲಕ್ಕೆ ಸಿಲುಕಿಸುತ್ತಿರುವ ಸರ್ಕಾರ. ಈ ಎಲ್ಲದರ ನಡುವೆ ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಚೈನ್ ಬ್ರೇಕ್ ಮಾಡುವುದಕ್ಕೋಸ್ಕರ ಹಗಲಿರುಳು ಮನೆ ಕುಟುಂಬವನ್ನು ಬಿಟ್ಟು ಬೀದಿ ಬದಿ ಶ್ರಮಿಸುತ್ತಿರುವ 250 ಕ್ಕೂ ಹೆಚ್ಚು ಪೊಲೀಸರಿಗೇ ಸೋಂಕು ತಗುಲಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಇನ್ನು ಕಡಿಮೆಯಾಗುವ ಲಕ್ಷಣಗಳು ಮಾತ್ರ ಕಂಡುಬರುತ್ತಿಲ್ಲ. ದಿನೇ ದಿನೇ ಸೋಂಕಿತರ ಸಂಖ್ಯೆ ಅಧಿಕವಾಗುತ್ತಲೇ ಇದ್ದು, ಸಾವನ್ನಪ್ಪುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಇನ್ನು ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಪಾಸಿಟಿವಿಟಿ ರೇಟ್ ಇರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪೊಲೀಸರಿಗೂ ಬಿಟ್ಟಿಲ್ಲ. ಈವರೆಗೆ ಜಿಲ್ಲೆಯಲ್ಲಿ ಸುಮಾರು 251 ಪೊಲೀಸರಿಗೆ ಸೋಂಕು ದೃಢಪಟ್ಟಿದ್ದು, ಅದರಲ್ಲಿ 188 ಪೊಲೀಸರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನು 63 ಪೊಲೀಸರೂ ಸದ್ಯ ಹೋಂ ಕ್ವಾರಂಟೈನ್ ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು ಅದೃಷ್ಟವಶಾತ್ ಸೋಂಕಿನಿಂದ ಪೊಲೀಸರಲ್ಲಿ ಯಾವುದೇ ಪ್ರಾಣಾಪಾಯ ಎದುರಾಗಿಲ್ಲ.

    ಲಾಕ್‍ಡೌನ್ ಆಗುವವರೆಗೆ ಜಿಲ್ಲೆಯಲ್ಲಿ ಪೊಲೀಸರಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿತ್ತು. ಲಾಕ್‍ಡೌನ್ ಪ್ರಾರಂಭವಾದ ನಂತರ ಪೊಲೀಸರು 24 ಗಂಟೆಗಳ ಕಾಲ ರಸ್ತೆಯಲ್ಲಿಯೇ ಜನರ ಓಡಾಟಕ್ಕೆ ಬ್ರೇಕ್ ಹಾಕಲು ಕಾರ್ಯನಿರ್ವಹಿಸಿದ ಪರಿಣಾಮ ಸೋಂಕು ಹೆಚ್ಚಾಗಲು ಕಾರಣವಾಗಿದೆ ಎನ್ನಲಾಗಿದೆ. ಜಿಲ್ಲೆಯಲ್ಲಿ 1,803 ಪೊಲೀಸ್ ಸಿಬ್ಬಂದಿ ಲಾಕ್‍ಡೌನ್ ವೇಳೆಯಲ್ಲಿ ಜನರ ಓಡಾಟಕ್ಕೆ ಬ್ರೇಕ್ ಹಾಕಲು, ಆಸ್ಪತ್ರೆ, ಮಾರುಕಟ್ಟೆ ಸೇರಿದಂತೆ ವಿವಿಧ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಾರಿ ಸೋಂಕು ತಗುಲಿದ್ದರು ಪ್ರಾಣಾಪಾಯ ಆಗದೇ ಇರುವುದಕ್ಕೆ ಲಸಿಕೆಯೇ ಮುಖ್ಯ ಕಾರಣವಾಗಿದೆ.

    ಈ ವರೆಗೆ 15,55 ಪೊಲೀಸ್ ಸಿಬ್ಬಂದಿಗೆ ಲಸಿಕೆಯನ್ನು ಹಾಕಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಡ್ಡಾಯವಾಗಿ ಲಸಿಕೆ ಹಾಕಿಸಲೇಬೇಕು ಎಂದು ಪ್ರತಿ ಠಾಣೆಯ ಅಧಿಕಾರಿಗಳಿಗೆ ಆದೇಶ ಮಾಡಿದ ಪರಿಣಾಮ ಎಲ್ಲರೂ ಹಾಕಿಸಿಕೊಂಡಿದ್ದರು.

    ಅನಾರೋಗ್ಯ, ಬಾಣಂತಿ, ಗರ್ಭಿಣಿಯರು ಹೀಗೆ 248 ಜನ ಪೊಲೀಸರು ಲಸಿಕೆ ಪಡೆದಿಲ್ಲ, ಅಲ್ಲದೇ 179 ಜನರು ಮೊದಲ ಡೋಸ್ ಪಡೆದಿದ್ದಾರೆ. ಇಷ್ಟೇ ಅಲ್ಲದೇ ಪೊಲೀಸರ ಆತ್ಮಸ್ಥೈರ್ಯ ತುಂಬಲ ಪ್ರತಿ ಠಾಣೆಯಲ್ಲಿ “ಹಬೆ” ವ್ಯವಸ್ಥೆಯನ್ನು ಸಹ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಮಾಡಿದ ಪರಿಣಾಮ ಅನಾಹುತ ಆಗಿಲ್ಲ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಗಲಿರುಳು ಶ್ರಮಿಸುತ್ತಿದ್ದು, ಜನರು ಅರ್ಥಮಾಡಿಕೊಂಡು ಅನಾವಶ್ಯಕವಾಗಿ ಓಡಾಡುವುದನ್ನು ನಿಲ್ಲಿಸಬೇಕಿದೆ.

    ಸದ್ಯ ಪೊಲೀಸರು ಕೊರೋನಾ ಸೋಂಕಿಗೆ ಹೆಚ್ಚಾಗಿ ತುತ್ತಾಗಬಾರದು ಎಂದು ಎಸ್ ಪಿ ಶಿವಪ್ರಕಾಶ್ ದೇವರಾಜ್ ಪ್ರತಿ ಸಿಬ್ಬಂದಿಯೂ ಕಾರ್ಯನಿರ್ವಹಿಸುವ ವೇಳೆ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ಸುರಕ್ಷತೆಗೆ ಹೆಚ್ಚಿನ ಒತ್ತನ್ನು ಕೊಡಬೇಕು ಎಂದು ಸೂಚಿಸಿದ್ದಾರೆ. ಒಟ್ಟಿನಲ್ಲಿ ಜನರ ಪ್ರಾಣ ಕಾಪಾಡಲು ಉತ್ತರ ಕನ್ನಡ ಜಿಲ್ಲೆಯಲ್ಲಿ ರಸ್ತೆಗಿಳಿದು ದುಡಿಯುವ ಪೊಲೀಸರಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಆವರಿಸಿರುವುದು ಆತಂಕ ಹುಟ್ಟಿಸಿದೆ.

  • ಮಾಜಿ ಸಚಿವ ಪ್ರೇಮಾನಂದ್ ಎಸ್. ಜೈವಂತ್ ನಿಧನ

    ಮಾಜಿ ಸಚಿವ ಪ್ರೇಮಾನಂದ್ ಎಸ್. ಜೈವಂತ್ ನಿಧನ

    ಕಾರವಾರ: ಶಿರಸಿ ಭಾಗದಿಂದ ಆಯ್ಕೆಯಾಗಿ ಅಬಕಾರಿ ಸಚಿವರಾಗಿದ್ದ ಮಾಜಿ ಸಚಿವ ಪ್ರೇಮಾನಂದ್ ಎಸ್. ಜೈವಂತ್ (77) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ

    ಅನಾರೋಗ್ಯದಿಂದ ಬಳಲುತ್ತಿದ್ದ ಪ್ರೇಮಾನಂದ್ ಅವರನ್ನ ಕೆಲ ದಿನಗಳ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿವಂಗತರು ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿಯನ್ನು ಅಗಲಿದ್ದಾರೆ. 1998ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದರು.

    ಜಿಲ್ಲೆಯಲ್ಲಿ ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಅವರು 1994ರಲ್ಲಿ ಮೊದಲ ಬಾರಿಗೆ ಶಿರಸಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರದ ದಿನದಲ್ಲಿ 1999ರಲ್ಲಿ ಪಕ್ಷೇತರರಾಗಿ, 2004ರಲ್ಲಿ ಕಾಂಗ್ರೆಸ್ ನಿಂದ ಹಾಗೂ 2008ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು. ಸತತ ಸೋಲಿನಿಂದ ರಾಜಕೀಯದಿಂದ ದೂರ ಉಳಿದಿದ್ದ ಅವರು ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು.

     

  • ಕರಾವಳಿಯಲ್ಲಿ ಕೆರಳಿ ಕನಲಿದ ನಿಸರ್ಗ ಚಂಡಮಾರುತ

    ಕರಾವಳಿಯಲ್ಲಿ ಕೆರಳಿ ಕನಲಿದ ನಿಸರ್ಗ ಚಂಡಮಾರುತ

    -ದಕ್ಷಿಣ ಕನ್ನಡದಲ್ಲಿ ಆರೆಂಜ್ ಅಲರ್ಟ್ ಮುಂದುವರಿಕೆ

    ಬೆಂಗಳೂರು: ನಿಸರ್ಗ ಚಂಡಮಾರುತದ ಎಫೆಕ್ಟ್ ನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡು ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಜಿಲ್ಲೆಯಲ್ಲಿ ಇಂದು ಸಹ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಮಂಗಳೂರಿಗೆ ಆಗಮಿಸಿದೆ.

    ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ನಿಸರ್ಗ ಚಂಡಮಾರುತದ ಎಫೆಕ್ಟ್ ರಾಜ್ಯದ ಕರಾವಳಿಗೂ ತಟ್ಟಿದೆ. ಸಮುದ್ರದಲ್ಲಿ ಗಂಟೆಗೆ 70ರಿಂದ 80 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿದೆ. ಮಂಗಳೂರಿನ ಸೋಮೇಶ್ವರ ಉಚ್ಚಿಲ, ಉಳ್ಳಾಲ ಮೊಗವೀರ ಪಟ್ನ, ಕೈಕೋ, ಹಿಲರಿಯ ನಗರ ಪ್ರದೇಶಗಳಲ್ಲಿ ಕಡಲಿನ ಅಬ್ಬರ ಜಾಸ್ತಿಯಾಗಿದೆ.

    ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ರು. ಜಿಲ್ಲಾಧಿಕಾರಿ, ಬಂದರು ಇಲಾಖೆ ಎ.ಡಿ.ಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಡೆಗೋಡೆ ಹೇಗೆ ನಿರ್ಮಿಸುವುದು ಮತ್ತು ತುರ್ತಾಗಿ ಯಾವ ಕಾರ್ಯ ಮಾಡಬೇಕುಂಬುದರ ಬಗ್ಗೆ ಗಮನ ಹರಿಸುತ್ತೇವೆ ಎಂದರು.

    ಎನ್‍ಡಿಆರ್‍ಎಫ್ ತಂಡ: ಮುಂದಿನ 24 ಗಂಟೆ ಕರಾವಳಿಯಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮಳೆಗಾಲದಲ್ಲಿ ಸಂಭವಿಸಬಹುದಾದ ದುರಂತಗಳನ್ನು ನಿರ್ವಹಿಸಲು ಎನ್.ಡಿ.ಆರ್.ಎಫ್ ತಂಡ ಮಂಗಳೂರಿಗೆ ಆಗಮಿಸಿದೆ. ಸುಮಾರು 25 ಸದಸ್ಯರ ಎನ್.ಡಿ.ಆರ್.ಎಫ್ ತಂಡವು ಪಿಲಿಕುಳ ಸ್ಕೌಟ್ಸ್ ಭವನದಲ್ಲಿ ವಾಸ್ತವ್ಯ ಹೂಡಿದೆ. ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಸನ್ನಿವೇಶ ಎದುರಿಸಲು ಜಿಲ್ಲಾಡಳಿತಕ್ಕೆ ಎನ್.ಡಿ.ಆರ್.ಎಫ್ ಆಗಮನ ನೆರವಾಗಲಿದೆ.

    ಉಡುಪಿಯಲ್ಲೂ ನಿಸರ್ಗ ಚಂಡಮಾರುತ ಅಬ್ಬರ ಜೋರಾಗಿದೆ. ಗಂಟೆಗೆ 50-60 ಕಿಲೋ ಮೀಟರ್ ವೇಗದ ವಿಪರೀತ ಗಾಳಿ ಆರಂಭವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಿಸರ್ಗ ಚಂಡಮಾರುತ ಅಬ್ಬರ ಹೆಚ್ಚಾಗಿದ್ದು, ಕಾರವಾರದಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಕಾರವಾರ ಸೇರಿದಂತೆ ಹಲವು ಭಾಗಗಳಲ್ಲಿ ಮರಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಐದು ದಿನಗಳ ಕಾಲ ಮೀನುಗಾರಿಕೆಯನ್ನು ಬಂದ್ ಮಾಡು, ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.

    ಕಳೆದ ಬಾರಿಯ ಮಳೆಗಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಭಾಗದಲ್ಲಿ ಸಾಕಷ್ಟು ಪ್ರಾಕೃತಿಕ ಹಾನಿ ಸಂಭವಿಸಿತ್ತು. ಇದೀಗ ಸೈಕ್ಲೋನ್ ಮಳೆಗೆ ತಾಲೂಕಿನ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಜನ ಆತಂಕಗೊಂಡಿದ್ದಾರೆ.

  • ಗೋಕರ್ಣಕ್ಕೆ ಅನಿಲ್ ಕುಂಬ್ಳೆ ಭೇಟಿ

    ಗೋಕರ್ಣಕ್ಕೆ ಅನಿಲ್ ಕುಂಬ್ಳೆ ಭೇಟಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಖ್ಯಾತ ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಭೇಟಿ ನೀಡಿ ಪೂಜಾ ಕಾರ್ಯ ನೆರವೇರಿಸಿದರು.

    ಆತ್ಮಲಿಂಗಕ್ಕೆ ಪಂಚಾಮೃತ, ನವಧಾನ್ಯ, ಗಂಗಾಭಿಷೇಕ ಪೂಜೆ ಮತ್ತು ಸುವರ್ಣ ನಾಗಾಭರಣ ವಿಶೇಷ ಪೂಜೆ ನೆರವೇರಿಸಿದರು. ವೇ.ವಿಶ್ವನಾಥ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು.

    ದೇವಸ್ಥಾನದ ಆಡಳಿತಾಧಿಕಾರಿ ಶ್ರೀ ಜಿಕೆ ಹೆಗಡೆ ಆತ್ಮಲಿಂಗ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಉಪಾಧಿವಂತ ಮಂಡಳದ ಸದಸ್ಯರು ಉಪಸ್ಥಿತರಿದ್ದರು.

  • ಸ್ನಾನಕ್ಕಾಗಿ ಹೊಳೆಯಲ್ಲಿ ಇಳಿದಿದ್ದ ಇಬ್ಬರು ಸಾವು

    ಸ್ನಾನಕ್ಕಾಗಿ ಹೊಳೆಯಲ್ಲಿ ಇಳಿದಿದ್ದ ಇಬ್ಬರು ಸಾವು

    ಕಾರವಾರ: ಸ್ನಾನಕ್ಕಾಗಿ ಹೊಳೆಗೆ ಇಳಿದಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಓಣಿಕೇರಿ ಗ್ರಾಮದ ಸಮೀಪದಲ್ಲಿರುವ ಬಿಳಚಿಕಟ್ಟು ಬಳಿ ಕೆಂಗ್ರೆಹೊಳೆಯಲ್ಲಿ ಗುರುವಾರ ನಡೆದಿದೆ.

    ಬೈಂದೂರು ಮೂಲದ ದಿನೇಶ್ (35) ಹಾಗೂ ಶಿರಸಿ ಮೂಲಕ ವಿನಾಯಕ್ (20) ಮೃತ ದುರ್ದೈವಿಗಳು. ಶಾಲ್ಮಲಾ ನದಿ ಪಾತ್ರದ ಕೆಂಗ್ರೆಹೊಳೆಯಲ್ಲಿ ದುರ್ಘಟನೆ ನಡೆದಿದೆ.

    ಶಿರಸಿಯ ಕರಾವಳಿ ಹೋಟೆಲ್‍ನಲ್ಲಿ ದಿನೇಶ್ ಹಾಗೂ ವಿನಾಯಕ್ ಕೆಲಸ ಮಾಡುತ್ತಿದ್ದರು. ಶಿರಸಿಯಲ್ಲಿ ಮಂಗಳವಾರ ಗಾಳಿ ಸಹಿತ ಭಾರೀ ಮಳೆಯಾಗಿದ್ದರಿಂದ ಹೋಟೆಲ್ ಜಖಂಗೊಂಡಿತ್ತು. ಹೀಗಾಗಿ ಕಳೆದ ಎರಡು ದಿನಗಳಿಂದ ಮಾಲೀಕರ ಮನೆಗೆ ಹೋಗಿ ಊಟ ಮಾಡಿಕೊಂಡು ತಾವು ತಂಗಿದ್ದ ರೂಮ್‍ಗೆ ಬರುತ್ತಿದ್ದರು. ಮಾಲೀಕರ ಮನೆಯಲ್ಲಿ ಇಂದು ಮಧ್ಯಾಹ್ನ ಊಟ ಮಾಡಿಕೊಂಡು, ಸ್ನಾನ ಮಾಡಲು ಕೆಂಗ್ರೆಹೊಳೆಗೆ ಬಂದಿದ್ದರು. ಹೊಳೆಗೆ ಇಳಿದಾಗ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

    ಹೊಳೆಯ ಬಳಿಗೆ ಬಂದಿದ್ದ ಕೆಲ ಸ್ಥಳೀಯರಿಗೆ ದಡದ ಮೇಲೆ ಬಟ್ಟೆ ಹಾಗೂ ನೀರಿನಲ್ಲಿ ಎರಡು ಮೃತ ದೇಹಗಳು ತೇಲುತ್ತಿರವುದು ಕಂಡಿತ್ತು. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು, ಮೃತ ದೇಹವನ್ನು ಹೊಳೆಯಿಂದ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ಶಿರಸಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕರಾವಳಿ ಮೀನುಗಾರರಿಂದ ಚುನಾವಣೆ ಸಾಮೂಹಿಕ ಬಹಿಷ್ಕಾರ!

    ಕರಾವಳಿ ಮೀನುಗಾರರಿಂದ ಚುನಾವಣೆ ಸಾಮೂಹಿಕ ಬಹಿಷ್ಕಾರ!

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮೀನುಗಾರರು ಸಾಮೂಹಿಕವಾಗಿ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

    ಈ ಕುರಿತು ಜಿಲ್ಲಾ ಮೀನುಗಾರರ ಸಂಘದ ಅಧ್ಯಕ್ಷರಾದ ಗಣಪತಿ ಮಾಂಗ್ರೆ ಮಾತನಾಡಿ, ಕಳೆದ ಡಿಸೆಂಬರಿನಲ್ಲಿ ನಾಪತ್ತೆಯಾಗಿದ್ದ ಮೀನುಗಾರರ ಬಗ್ಗೆ ಸಮರ್ಪಕವಾಗಿ ಕ್ರಮಕೈಗೊಳ್ಳದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಸಡ್ಡೆ ತೋರಿದ್ದು, ಪರಿಣಾಮ ಪಕ್ಷಾತೀತವಾಗಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ತಿಳಿಸಿದ್ದಾರೆ.

    ಚುನಾವಣಾ ಬಹಿಷ್ಕಾರದ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಮೀನುಗಾರರ ಪತ್ತೆಗೆ ಸರ್ಕಾರಗಳು ಅಸಡ್ಡೆ ತೋರದೆ ಕ್ರಮಕೈಗೊಳ್ಳಬೇಕಿದೆ ಎಂದಿದ್ದಾರೆ.

    ಡಿಸೆಂಬರ್ 13 ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಎನ್ನುವ ಬೋಟ್ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಕಾಣೆಯಾಗಿತ್ತು. ಘಟನೆಯಲ್ಲಿ ಜಿಲ್ಲೆಯ ಐದು ಜನ ಹಾಗೂ ಮಲ್ಪೆಯ ಇಬ್ಬರು ಕಾಣೆಯಾಗಿದ್ದರು. ಈ ಹಿನ್ನಲೆಯಲ್ಲಿ ಕರಾವಳಿ ಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮೀನುಗಾರರನ್ನು ಹುಡುಕಿಕೊಡಬೇಕೆಂದು ರಾಜ್ಯ, ಕೇಂದ್ರ ಸರ್ಕಾರಗಳಿಗೆ ಮನವಿ ನೀಡಿದ್ದರು. ಆದರೆ ಇದುವರೆಗೂ ಕೂಡ ಮೀನುಗಾರರ ಬಗ್ಗೆ ಯಾವುದೇ ರೀತಿಯ ಸುಳಿವು ಲಭ್ಯವಾಗಿಲ್ಲ.

  • ಕಾಡು ಪ್ರಾಣಿಗಳನ್ನ ಬೇಟೆಯಾಡಿ ಮಾರಾಟ ಮಾಡುತ್ತಿದ್ದ ಆರು ಜನರ ಬಂಧನ

    ಕಾಡು ಪ್ರಾಣಿಗಳನ್ನ ಬೇಟೆಯಾಡಿ ಮಾರಾಟ ಮಾಡುತ್ತಿದ್ದ ಆರು ಜನರ ಬಂಧನ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅರಣ್ಯದಲ್ಲಿ ವನ್ಯಜೀವಿ ಬೇಟೆಯಾಡಿ ಅವುಗಳ ಚರ್ಮ, ಮಾಂಸವನ್ನು ಮಾರಾಟ ಮಾಡುತ್ತಿದ್ದ ಆರು ಜನರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

    ಅಂಕೋಲ ಹಾಗೂ ಕುಮಟಾ ಮೂಲದ ಶ್ರೀಧರ್ ನಾಗೇಶ್ ಬಂಡಾರಿ, ರಾಮಚಂದ್ರ ಕುಪ್ಪುಗೌಡ, ಮಹೇಶ್ ಗೌಡ, ಈಶ್ವರ್ ಗೌಡ, ಅಶೋಕ್ ಬಂಡಾರಿ ಮತ್ತು ರಾಜು ನಾಯ್ಕ ಬಂಧಿತ ಆರೋಪಿಗಳು. ಸಿನಿಮಿ ರೀತಿಯಲ್ಲಿ ಪ್ಲಾನ್ ರೂಪಿಸಿದ್ದ ಪೊಲೀಸರು ಇಂದು ಆರೋಪಿಗಳನ್ನು ಬಂಧಿಸಿದ್ದಾರೆ.

    ಅಂಕೋಲದ ಅಭಿಷೇಕ್ ದಿನಕರ್ ನಾಯಕ್ ಎಂಬವನನ್ನು ಕುಮಟಾ ಅರಣ್ಯ ಅಧಿಕಾರಿಗಳು ಶನಿವಾರ ಬಂಧಿಸಿದ್ದರು. ಅಭಿಷೇಕ್‍ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತನ್ನ ಜಾಲವನ್ನು ಬಿಚ್ಚಿಟ್ಟಿದ್ದಾನೆ. ಈ ಮಾಹಿತಿ ಆಧಾರ ಮೇಲೆ ಉಳಿದ ಆರೋಪಿಗಳಿಗೆ ಬಲೆ ಬೀಸಿದ ಪೊಲೀಸರು ಇಂದು ಆರು ಜನರನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳು ಸುಮಾರು ವರ್ಷಗಳಿಂದ ವನ್ಯಜೀವಿ ಬೇಟೆ ಆಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದರು. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪ್ರದೇಶದಲ್ಲಿ ಪ್ರಾಣಿಗಳನ್ನು ಬೇಟೆಯಾಡಿ, ಮಾಂಸ, ಚರ್ಮ, ಮೂಳೆಗಳನ್ನು ಮಾರಾಟ ಮಾಡುತ್ತಿದ್ದರು. ವೈಲ್ಡ್ ಕ್ಯಾಟ್ ಪ್ರಾಣಿಯ ಚರ್ಮ ಸೇರಿದಂತೆ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಆರೋಪಿಗಳ ವಿರುದ್ಧ ವನ್ಯಜೀವಿ ಹತ್ಯೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇಂತಹದ್ದೇ ಘಟನೆಯೊಂದು ಇಂದು ಮೈಸೂರಿನಲ್ಲಿ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಜೀವಂತ ಚಿಪ್ಪು ಹಂದಿಯನ್ನು ರಕ್ಷಿಸಿದ್ದಾರೆ. ಇದನ್ನು ಓದಿ: ವಿದೇಶಕ್ಕೆ ಚಿಪ್ಪು ಹಂದಿ ಸಾಗಾಟ ಯತ್ನ-ಇಬ್ಬರ ಬಂಧನ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv