Tag: USA

  • ನ್ಯೂಯಾರ್ಕ್‌ನ ಗಗನಚುಂಬಿ ಕಟ್ಟಡದಲ್ಲಿ ಗುಂಡಿನ ದಾಳಿ; ಬಂದೂಕುದಾರಿ ಸೇರಿ ಐವರು ಸಾವು

    ನ್ಯೂಯಾರ್ಕ್‌ನ ಗಗನಚುಂಬಿ ಕಟ್ಟಡದಲ್ಲಿ ಗುಂಡಿನ ದಾಳಿ; ಬಂದೂಕುದಾರಿ ಸೇರಿ ಐವರು ಸಾವು

    ವಾಷಿಂಗ್ಟನ್‌: ನ್ಯೂಯಾರ್ಕ್‌ನ (New York) ಗಗನಚುಂಬಿ ಕಟ್ಟಡದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್‌ ಅಧಿಕಾರಿ, ಶಂಕಿತ ದಾಳಿಕೋರ ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.

    ನ್ಯೂಯಾರ್ಕ್‌ನ ಕೇಂದ್ರ ಮ್ಯಾನ್‌ಹ್ಯಾಟನ್‌ನಲ್ಲಿ (Midtown Manhattan) ಗುಂಡಿನ ದಾಳಿ ನಡೆದಿದ್ದು, ಓರ್ವ ಪೊಲೀಸ್‌ ಅಧಿಕಾರಿ ಸೇರಿ ನಾಲ್ವರು ಸಾವನ್ನಪ್ಪಿದ್ದರು. ಆ ಬಳಿಕ ಬಂಧೂಕುದಾರಿ ಸ್ವಯಂ ಹಾನಿಯಿಂದ ಸಾವನ್ನಪ್ಪಿದ್ದಾನೆ. ಬಂಧೂಕುಧಾರಿಯನ್ನ ನೆವಾಡಾದ ಶೇನ್ ಟಮುರಾ (27) ಎಂದು ಗುರುತಿಸಿರುವುದಾಗಿ ವರದಿಗಳು ತಿಳಿಸಿವೆ. ಇದನ್ನೂ ಓದಿ: ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮಮ್ಮಿ – ನಿಮಿಷಾ ಪ್ರಿಯಾ ಬಿಡುಗಡೆಗೆ ಮನವಿ ಮಾಡಲು ಯೆಮನ್‍ಗೆ ಬಂದ ಪುತ್ರಿ

    ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ ಪಟ್ಟಣವು NFL ಪ್ರಧಾನ ಕಚೇರಿ ಮತ್ತು ಹೆಡ್ಜ್ ಫಂಡ್, ಬ್ಲಾಕ್‌ಸ್ಟೋನ್ ಸೇರಿದಂತೆ ಹಲವಾರು ಪ್ರಮುಖ ಹಣಕಾಸು ಸಂಸ್ಥೆಗಳ ಕಚೇರಿಗಳನ್ನು ಹೊಂದಿರುವ ಸ್ಥಳವಾಗಿದೆ. ಅಲ್ಲದೇ ಪ್ರಮುಖ ಐಷಾರಾಮಿ ಹೋಟೆಲ್‌ಗಳೂ ಇಲ್ಲಿವೆ. ಅಮೆರಿಕದ ಸ್ಥಳೀಯ ಕಾಲಮಾನ ಸಂಜೆ 6:30ರ ಸುಮಾರಿಗೆ ಗಗನಚುಂಬಿ ಕಟ್ಟಡದಲ್ಲಿ ಗುಂಡಿನ ದಾಳಿ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಅಂಬುಲೆನ್ಸ್‌ ಹಾಗೂ ಭದ್ರತಾ ತಂಡಗಳು ಸ್ಥಳಕ್ಕೆ ದೌಡಾಯಿಸಿವೆ. ಇದನ್ನೂ ಓದಿ: ಬ್ಯಾಂಕಾಕ್ ಫುಡ್ ಮಾರ್ಕೆಟ್‌ನಲ್ಲಿ ಗುಂಡಿನ ದಾಳಿಗೆ 6 ಬಲಿ

    ಇನ್ನೂ ಘಟನೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಆಸ್ಟ್ರೇಲಿಯಾದ ನೈಸರ್ಗಿಕ ವಿಪತ್ತಾದ ‘ಆಲ್ಗಲ್ ಬ್ಲೂಮ್’ – ಈ ಬಿಕ್ಕಟ್ಟಿನ ಹಿಂದಿನ ಕಾರಣವೇನು?

  • ಸೇರ್ಪಡೆಯಾಗಿ 2 ವರ್ಷದ ನಂತ್ರ ಯುನೆಸ್ಕೋದಿಂದ ಹೊರ ಬಂದ ಅಮೆರಿಕ

    ಸೇರ್ಪಡೆಯಾಗಿ 2 ವರ್ಷದ ನಂತ್ರ ಯುನೆಸ್ಕೋದಿಂದ ಹೊರ ಬಂದ ಅಮೆರಿಕ

    ವಾಷಿಂಗ್ಟನ್‌: ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ (USA) ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ಯುನೆಸ್ಕೋದಿಂದ (UNESCO) ಹೊರ ಬಂದಿದೆ.

    ಡೊನಾಲ್ಡ್‌ ಟ್ರಂಪ್‌ ಮೊದಲಿನಿಂದಲೂ ಯುನೆಸ್ಕೋ ನಡೆಯನ್ನು ಟೀಕಿಸುತ್ತಾ ಬಂದಿದ್ದರು. ಯುನೆಸ್ಕೋ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಇಲ್ಲ ಮತ್ತು ಇಸ್ರೇಲ್ (Isreal) ವಿರೋಧಿ ಧೋರಣೆ,  ಚೀನಾ ಪರ ನೀತಿಯಿಂದ  ನಾವು ಹೊರ ಬಂದಿದ್ದೇವೆ ಎಂದು ಅಮೆರಿಕ ಹೇಳಿದೆ.

    ಡೊನಾಲ್ಡ್ ಟ್ರಂಪ್ (Donald Trump) ಅವರ ಮೊದಲ ಆಡಳಿತದ ಅವಧಿಯಲ್ಲಿ ಅಮೆರಿಕ 2018 ರಲ್ಲಿ ಯುನೆಸ್ಕೋದಿಂದ ಹೊರ ಬಂದಿತ್ತು. ಜುಲೈ 2023 ರ ಬೈಡನ್‌ ಅವಧಿಯಲ್ಲಿ ಮತ್ತೆ ಯುನೆಸ್ಕೋವನ್ನು ಅಮೆರಿಕ ಸೇರಿತ್ತು.

    ವಿದೇಶಾಂಗ ಇಲಾಖೆಯ ವಕ್ತಾರ ಟ್ಯಾಮಿ ಬ್ರೂಸ್ ಪ್ರತಿಕ್ರಿಯಿಸಿ, ಪ್ಯಾಲೆಸ್ಟೈನ್‌ನ್ನು ಸದಸ್ಯ ರಾಷ್ಟ್ರವಾಗಿ ಒಪ್ಪಿಕೊಳ್ಳುವ ಯುನೆಸ್ಕೋದ ನಿರ್ಧಾರವು ಹೆಚ್ಚು ಸಮಸ್ಯಾತ್ಮಕವಾಗಿದೆ ಮತ್ತು ಇದು ಅಮೆರಿಕದ ನೀತಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆ ವಿಮಾನ ದುರಂತ ಸಾವಿನ ಸಂಖ್ಯೆ 27ಕ್ಕೆ ಏರಿಕೆ

    ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO), UN ಮಾನವ ಹಕ್ಕುಗಳ ಮಂಡಳಿ, ಪ್ಯಾರಿಸ್ ಹವಾಮಾನ ಒಪ್ಪಂದ ಮತ್ತು ಇರಾನ್ ಪರಮಾಣು ಒಪ್ಪಂದ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಅಮೆರಿಕ ಹೊರಬಂದಿತ್ತು. ಎರಡನೇ ಅವಧಿಯಲ್ಲಿ ಟ್ರಂಪ್‌ ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಂದೆ ಸರಿಯುವಂತೆ ಆದೇಶಿಸಿದ್ದಾರೆ ಮತ್ತು ಪ್ಯಾಲೆಸ್ಟೀನಿಯನ್ ಪರಿಹಾರ ಸಂಸ್ಥೆ UNRWA ಗೆ ಹಣವನ್ನು ನಿಲ್ಲಿಸಿದ್ದಾರೆ.

    1945 ರಲ್ಲಿ ರಚನೆಯಾದ ಯುನೆಸ್ಕೋದ ಸ್ಥಾಪಕ ಸದಸ್ಯ ರಾಷ್ಟ್ರವಾಗಿರುವ ಅಮೆರಿಕ ಯುನೆಸ್ಕೋದ ಒಟ್ಟು ಬಜೆಟ್‌ನ ಸುಮಾರು 8% ರಷ್ಟು ಕೊಡುಗೆ ನೀಡುತ್ತದೆ. ಪ್ಯಾರಿಸ್‌ನಲ್ಲಿ ನೆಲೆಗೊಂಡಿರುವ ಯುನೆಸ್ಕೋವನ್ನು ಅಮೆರಿಕ ತೊರೆದಿರುವುದು ಇದು ಮೂರನೇ ಬಾರಿ. ಇದನ್ನೂ ಓದಿ: ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ ವರದಕ್ಷಿಣೆ ಕಿರುಕುಳ ಆರೋಪ

    ಹಣಕಾಸಿನ ದುರುಪಯೋಗ ಮತ್ತು ಅದು ಅಮೇರಿಕನ್ ವಿರೋಧಿ ಪಕ್ಷಪಾತವೆಂದು ಪರಿಗಣಿಸಿದ ಬಗ್ಗೆ ಕಳವಳ ವ್ಯಕ್ತಪಡಿಸಿ 1984 ರಲ್ಲಿ ರೇಗನ್‌ ಅವಧಿಯಲ್ಲಿ ಮೊದಲು ಹಿಂದೆ ಸರಿಯಿತು. ಸುಧಾರಣೆಗಳನ್ನು ಮಾಡಿದ ನಂತರ 2003 ರಲ್ಲಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ನೇತೃತ್ವದಲ್ಲಿ ಅಮೆರಿಕ ಮತ್ತೆ ಯುನೆಸ್ಕೋವನ್ನು ಸೇರ್ಪಡೆಯಾಗಿತ್ತು.

  • ಪಹಲ್ಗಾಮ್‌ ದಾಳಿಯ ಹೊಣೆ ಹೊತ್ತಿದ್ದ ಟಿಆರ್‌ಎಫ್‌ನ್ನು ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿದ ಅಮೆರಿಕ

    ಪಹಲ್ಗಾಮ್‌ ದಾಳಿಯ ಹೊಣೆ ಹೊತ್ತಿದ್ದ ಟಿಆರ್‌ಎಫ್‌ನ್ನು ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿದ ಅಮೆರಿಕ

    ವಾಷಿಂಗ್ಟನ್‌: ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಮುಖಭಂಗವಾಗಿದೆ. ಏಪ್ರಿಲ್ 22 ರ ಪಹಲ್ಗಾಮ್ ಉಗ್ರ ದಾಳಿ (Pahalgam Attack) ಎಸಗಿದ ಪಾಕಿಸ್ತಾನ (Pakistan) ಮೂಲದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಅನ್ನು ಅಮೆರಿಕದ ವಿದೇಶಾಂಗ ಇಲಾಖೆ ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರಿಸಿದೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರ ಪ್ರಾಣ ಬಲಿ ಪಡೆದ ಘಟನೆಯ ಹೊಣೆಗಾರಿಕೆಯನ್ನು ಈ ಸಂಘಟನೆ ವಹಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ (Marco Rubio) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಏರ್‌ ಇಂಡಿಯಾ ದುರಂತಕ್ಕೆ ಪೈಲಟ್ ಕಾರಣನಾ? ಅಮೆರಿಕ ವರದಿಯಿಂದ ಗೊಂದಲ; ಪ್ರತಿಕ್ರಿಯೆಗೆ ಕೇಂದ್ರ ನಕಾರ

    ಇಂದು ವಿದೇಶಾಂಗ ಇಲಾಖೆಯು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಅನ್ನು ಗೊತ್ತುಪಡಿಸಿದ ವಿದೇಶಿ ಭಯೋತ್ಪಾದಕ ಸಂಘಟನೆ (FTO) ಮತ್ತು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ (SDGT) ಎಂದು ಹೆಸರಿಸುತ್ತದೆ. ಲಷ್ಕರ್-ಎ-ತಯ್ಯಿಬಾ (LeT) ಸಂಸ್ಥೆಯ ಭಾಗವಾಗಿರುರುವ ಟಿಆರ್‌ಎಫ್‌ ಪಹಲ್ಗಾಮ್ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. 2008 ರ ಮುಂಬೈ ದಾಳಿಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಕ ದಾಳಿ ಇದಾಗಿದೆ. ಭಾರತೀಯ ಭದ್ರತಾ ಪಡೆಗಳ ವಿರುದ್ಧದ ಹಲವಾರು ದಾಳಿಯ ಹೊಣೆಯನ್ನು ಟಿಆರ್‌ಎಫ್‌ ಹೊತ್ತುಕೊಂಡಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

    ಈ ಕ್ರಮವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಭಯೋತ್ಪಾದನೆಯನ್ನು ಎದುರಿಸುವ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

  • ಇಂಧನಕ್ಕೆ ಪ್ರಮುಖ ಆದ್ಯತೆ – ನ್ಯಾಟೋ ಮುಖ್ಯಸ್ಥನ ನಿರ್ಬಂಧಗಳ ಬೆದರಿಕೆಗೆ ಭಾರತ ತಿರುಗೇಟು

    ಇಂಧನಕ್ಕೆ ಪ್ರಮುಖ ಆದ್ಯತೆ – ನ್ಯಾಟೋ ಮುಖ್ಯಸ್ಥನ ನಿರ್ಬಂಧಗಳ ಬೆದರಿಕೆಗೆ ಭಾರತ ತಿರುಗೇಟು

    ನವದೆಹಲಿ: ರಷ್ಯಾದಿಂದ ತೈಲ, ಅನಿಲ ಅಥವಾ ಯುರೇನಿಯಂನಂತಹ ಇಂಧನ ಉತ್ಪನ್ನಗಳನ್ನ ಖರೀದಿಸುವುದನ್ನು ಮುಂದುವರಿಸಿದ್ರೆ ಶೇ.100 ರಷ್ಟು ದ್ವಿತೀಯ ಸುಂಕ ವಿಧಿಸುವ ಸಾಧ್ಯತೆಯಿದೆ ಎಂಬ ನ್ಯಾಟೋ ಮುಖ್ಯಸ್ಥ ಮಾರ್ಕ್ ರುಟ್ಟೆ ಅವರ ಬೆದರಿಕೆಯನ್ನು ಭಾರತ ತಳ್ಳಿಹಾಕಿದೆ. ಜೊತೆಗೆ ದೇಶದ ಇಂಧನ ಅಗತ್ಯತೆಗಳನ್ನು ಭದ್ರಪಡಿಸಿಕೊಳ್ಳುವ ಕಡೆಗೆ ಆದ್ಯತೆ ನೀಡಿರುವುದಾಗಿಯೂ ತಿಳಿಸಿದೆ.

    ರಷ್ಯಾದಿಂದ ತೈಲ, ಅನಿಲ ಅಥವಾ ಯುರೇನಿಯಂ ನಂತಹ ಇಂಧನ ಉತ್ಪನ್ನಗಳನ್ನ ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ 500% ಸುಂಕ (Tariff) ವಿಧಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ವರದಿಯಾಗಿತ್ತು. ಈ ಬೆನ್ನಲ್ಲೇ 100% ದ್ವಿತೀಯ ಸುಂಕ ವಿಧಿಸುವುದಾಗಿ ರುಟ್ಟೆ ಬೆದರಿಕೆಹಾಕಿದ್ದರು.

    ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಪ್ರತಿಕ್ರಿಯಿಸಿದ್ದಾರೆ. ತೈಲ ಪೂರೈಕೆಯ ಅಗತ್ಯತೆಗಳನ್ನು ಭದ್ರಪಡಿಸಿಕೊಳ್ಳುವುದು ರಾಷ್ಟ್ರ ರಾಜಧಾನಿಗೆ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರಲ್ಲದೇ ದ್ವಿಮುಖ ಮಾನದಂಡ ಅಳವಡಿಸಿಕೊಳ್ಳದಂತೆಯೂ ಎಚ್ಚರಿಕೆ ನೀಡಿದ್ದಾರೆ. ಮಾರುಕಟ್ಟೆಗಳಲ್ಲಿ ಏನು ಲಭ್ಯವಾಗುತ್ತಿದೆ, ಜಾಗತಿಕ ಪರಿಸ್ಥಿತಿ ಹೇಗಿದೆ? ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಈ ವಿಷಯದ ಕುರಿತು ಅನೇಕ ವರದಿಗಳನ್ನು ನಾವು ನೋಡಿದ್ದೇವೆ. ಅಂತಾರಾಷ್ಟ್ರೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿಯೂ ಗಮನಿಸಿದ್ದೇವೆ. ನಮ್ಮ ಜನಕ್ಕೆ ಬೇಕಾದ ಇಂಧನದ ಅಗತ್ಯತೆಗಳನ್ನ ಭದ್ರಪಡಿಸಿಕೊಳ್ಳುವುದು ಪ್ರಮುಖ ಆದ್ಯತೆಯಾಗಿದೆ. ಜಾಗತಿಕ ಪರಿಸ್ಥಿತಿಗಳು ನಮ್ಮನ್ನ ಗೈಡ್‌ ಮಾಡುತ್ತಿವೆ ಎಂದು ತಿಳಿಸಿದ್ದಾರೆ.

    ರುಟ್ಟೆ ಹೇಳಿದ್ದೇನು?
    50 ದಿನಗಳಲ್ಲಿ ಶಾಂತಿ ಒಪ್ಪಂದದ ಹೊರತು ರಷ್ಯಾದಿಂದ ರಫ್ತು ಮಾಡಿಕೊಳ್ಳುವ ದೇಶಗಳ ಮೇಲೆ ಶೇ. 100ರಷ್ಟು ದ್ವಿತೀಯ ಸುಂಕದ ಬೆದರಿಕೆಯನ್ನು ಟ್ರಂಪ್ ಹಾಕಿದ್ದರು. 2022 ರಲ್ಲಿ ಉಕ್ರೇನ್‌ ವಿರುದ್ಧ ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾದ ಪ್ರಮುಖ ವ್ಯಾಪಾರ ಪಾಲುದಾರನಾದ ಭಾರತ, ಬ್ರೆಜಿಲ್ ಮತ್ತು ಚೀನಾಗಳಿಗೆ ರುಟ್ಟೆ ಎಚ್ಚರಿಕೆ ನೀಡಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿ, ಚೀನಾ, ಭಾರತ ಮತ್ತು ಬ್ರೆಜಿಲ್ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಇದರಿಂದ ನಿಮಗೆ ತೀವ್ರ ತೊಂದರೆಯಾಗಬಹುದು. ವ್ಲಾಡಿಮಿರ್ ಪುಟಿನ್ ಅವರಿಗೆ ಫೋನ್ ಮಾಡಿ, ಉಕ್ರೇನ್ ವಿರುದ್ಧದ ಶಾಂತಿ ಮಾತುಕತೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಹೇಳಿ, ಇಲ್ಲದಿದ್ದರೆ ಇದು ಬ್ರೆಜಿಲ್, ಭಾರತ ಮತ್ತು ಚೀನಾದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಲಿದೆ ಎಂದು ಹೇಳಿದ್ದರು.

  • ಭಾರತಕ್ಕೆ ಮತ್ತಷ್ಟು ಬಲ – ವಾಯುಪಡೆಗೆ 3 ಅಪಾಚೆ ಹೆಲಿಕಾಪ್ಟರ್‌, ಪಾಕ್ ಗಡಿಯಲ್ಲಿ ನಿಯೋಜನೆಗೆ ನಿರ್ಧಾರ

    ಭಾರತಕ್ಕೆ ಮತ್ತಷ್ಟು ಬಲ – ವಾಯುಪಡೆಗೆ 3 ಅಪಾಚೆ ಹೆಲಿಕಾಪ್ಟರ್‌, ಪಾಕ್ ಗಡಿಯಲ್ಲಿ ನಿಯೋಜನೆಗೆ ನಿರ್ಧಾರ

    ನವದೆಹಲಿ: ಭಾರತದ ವಾಯುಪಡೆಗೆ ಅಮೆರಿಕದ 3 ಅಪಾಚೆ ಹೆಲಿಕಾಪ್ಟರ್‌ಗಳು (Apache helicopters) ಸೇರ್ಪಡೆಗೊಂಡಿವೆ. ಜುಲೈ 21ರಂದು ಈ ಮೂರು ಹೆಲಿಕಾಪ್ಟರ್‌ಗಳು ಭಾರತ-ಪಾಕ್ ಗಡಿಯಲ್ಲಿ ನಿಯೋಜನೆ ಮಾಡಲು ನಿರ್ಧರಿಸಲಾಗಿದೆ.

    ರಕ್ಷಣಾ ಮತ್ತು ಭದ್ರತಾ ಸಂಸ್ಥೆಗಳಿಗೆ (Defence Sector) ಸಂಬಂಧಿಸಿದ ಮೂಲಗಳ ಪ್ರಕಾರ, ಭಾರತ ಸ್ವೀಕರಿಸಲಿರುವ ಮೂರು ಹೆಲಿಕಾಪ್ಟರ್‌ಗಳನ್ನು ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲಾಗುತ್ತದೆ. ‘ಗಾಳಿಯಲ್ಲಿರುವ ಯುದ್ಧ ಟ್ಯಾಂಕ್‌ಗಳು’ ಎಂದೂ ಕರೆಯಲ್ಪಡುವ ಸುಧಾರಿತ AH-64E ಮೂರು ಅಪಾಚೆ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಯ (IAF) ಹಿಂಡನ್ ವಾಯುಪಡೆ ನಿಲ್ದಾಣದಲ್ಲಿ ಇಳಿಯಲಿವೆ. ರಾಜಸ್ಥಾನದ ಜೋಧ್‌ಪುರದಲ್ಲಿ ವಾಯುಸೇನೆಯು ತನ್ನ ಮೊದಲ ಅಪಾಚೆ ಸ್ಕ್ವಾಡ್ರನ್ ರಚಿಸಿದ 15 ತಿಂಗಳ ನಂತರ, ಅಮರಿಕದಿಂದ ಮೊದಲ ಕಂತಿನ ಮೂರು ಅಪಾಚೆ ಹೆಲಿಕಾಪ್ಟರ್‌ಗಳು ಭಾರತಕ್ಕೆ ಬರುತ್ತಿವೆ.

    ಈ ಹಿಂದೆ 2015ರಲ್ಲಿ 22 ಅಪಾಚೆ ಹೆಲಿಕಾಪ್ಟರ್ ಖರೀದಿಸಲಾಗಿತ್ತು. ಜುಲೈ 2020ರಲ್ಲಿ ಮತ್ತೆ 600 ಮಿಲಿಯನ್ ಡಾಲರ್ ವೆಚ್ಚದ 6 ಹೆಲಿಕಾಪ್ಟರ್‌ಗಳಿಗಾಗಿ ಸಹಿ ಆಗಿತ್ತು. ಇದಾಗಿ ಒಂದು ವರ್ಷದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದಾಗ, ಮತ್ತೆ ಆರು ಹೊಸ ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಲು 600 ಮಿಲಿಯನ್ ಅಮೆರಿಕನ್‌ ಡಾಲರ್‌ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಯಿತು.

    ಈ ಒಪ್ಪಂದದ ಕರಾರಿನಂತೆ ಮೊದಲ ಕಂತಿನ ಮೂರು ಅಪಾಚೆ ಹೆಲಿಕಾಪ್ಟರ್‌ನ್ನು 2024ರ ಮೇ ಮತ್ತು ಜೂನ್ ನಡುವೆ ಭಾರತಕ್ಕೆ ತಲುಪಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಇದನ್ನು ಮುಂದೂಡಲಾಯಿತು. 15 ತಿಂಗಳು ತಡವಾಗಿ 3 ಹೆಲಿಕಾಪ್ಟರ್‌ ಭಾರತಕ್ಕೆ ಬರ್ತಿವೆ. ಗಾಳಿಯಲ್ಲಿರುವ ಯುದ್ಧ ಟ್ಯಾಂಕರ್ ಎಂದು ಕರೆಯಲ್ಪಡುವ ಸುಧಾರಿತ ಎಎಚ್-64ಇ ಹೆಲಿಕಾಫ್ಟರ್‌ಗಳು ಸೇನೆಯ ಆಕ್ರಮಣಾಕಾರಿ ಹಾಗೂ ವಿಚಕ್ಷಣಾ ಕಾರ್ಯಾಚರಣೆಗೆ ನೆರವಾಗಲಿವೆ.

  • ಆ.4 ರಿಂದ ಅಮೆರಿಕದಲ್ಲಿ ಶಾಸಕಾಂಗ ಶೃಂಗಸಭೆ – ಸಭಾಪತಿ ಹೊರಟ್ಟಿ ನೇತೃತ್ವದಲ್ಲಿ MLCಗಳ ನಿಯೋಗ ಭಾಗಿ

    ಆ.4 ರಿಂದ ಅಮೆರಿಕದಲ್ಲಿ ಶಾಸಕಾಂಗ ಶೃಂಗಸಭೆ – ಸಭಾಪತಿ ಹೊರಟ್ಟಿ ನೇತೃತ್ವದಲ್ಲಿ MLCಗಳ ನಿಯೋಗ ಭಾಗಿ

    ಬೆಂಗಳೂರು: ಮುಂದಿನ ಆಗಸ್ಟ್ 4 ರಿಂದ 6ನೇ ತಾರೀಖಿನವರೆಗೆ ಅಮೆರಿಕದ ಬೋಸ್ಟನ್ ನಗರದಲ್ಲಿ (Boston City) ʻಶಾಸಕಾಂಗ ಶೃಂಗಸಭೆ 2025ʼ (Legislative Summit 2025) ನಡೆಯಲಿದ್ದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಪಾಲ್ಗೊಳ್ಳಲಿದ್ದಾರೆ.

    ʻರಾಜ್ಯ ಶಾಸಕರ ರಾಷ್ಟೀಯ ಸಮಾವೇಶʼ ಹಾಗೂ ʻರಾಷ್ಟ್ರೀಯ ಶಾಸಕರ ಸಮಾವೇಶʼ ಭಾರತ ಸಂಸ್ಥೆಗಳ ಆಶ್ರಯದಲ್ಲಿ ನಡೆಯುವ ಈ ಶೃಂಗಸಭೆಯಲ್ಲಿ ಭಾರತದ ಸಂಸದರು (Indian MPs), ವಿವಿಧ ರಾಜ್ಯಗಳ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರು, ಸಚಿವರು, ರಾಜಕೀಯ ತಜ್ಞರು, ನೀತಿ ನಿರೂಪಕರು, ರಾಜಕೀಯ ಮುತ್ಸದ್ದಿಗಳು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮೂರು ದಿನಗಳ ಶೃಂಗಸಭೆಯಲ್ಲಿ (Summit) ಪ್ರಜಾತಂತ್ರ ಗಟ್ಟಿಗೊಳಿಸುವಿಕೆಯಲ್ಲಿ ಶಾಸನ ಸಭೆಗಳ ಪಾತ್ರ, ಶಾಸನ ಸಭೆಗಳ ಪಕ್ಷಾತೀತ ನಿರ್ವಹಣೆ, ಶಾಸನ ಸಭೆಗಳಿಗೆ ಅರ್ಥಿಕ ಸ್ವಾಯತ್ತತೆ ಸೇರಿದಂತೆ ಹತ್ತು ಹಲವು ವಿಷಯಗಳ ಕುರಿತು ಶೃಂಗ ಸಭೆಯಲ್ಲಿ ಗೋಷ್ಠಿಗಳು, ವಿಚಾರ ಸಂಕಿರಣ, ಸಂವಾದಗಳು ಜರುಗಲಿವೆ. ಇದನ್ನೂ ಓದಿ: ಕೃಷ್ಣಾ ನದಿ ನೀರು ಹಂಚಿಕೆ ವಿವಾದ – ಅಂತಿಮ ವರದಿ ಸಲ್ಲಿಕೆಗೆ ಜು.31ರವರೆಗೆ ಅವಧಿ ವಿಸ್ತರಣೆ

    ಶಾಸಕಾಂಗ ಶೃಂಗಸಭೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರೊಂದಿಗೆ ಉಪಸಭಾಪತಿ ಎಂ.ಕೆ ಪ್ರಾಣೇಶ್, ವಿರೋಧ ಪಕ್ಷದ ನಾಯಕರಾದ ಛಲವಾದಿ ಟಿ. ನಾರಾಯಣಸ್ವಾಮಿ, ಸಭಾನಾಯಕರು ಹಾಗೂ ಸಣ್ಣ ನೀರಾವರಿ ಸಚಿವರಾದ ಮಾನ್ಯ ಎನ್.ಎಸ್ ಭೋಸ್‌ರಾಜು, ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್. ರವಿಕುಮಾರ್, ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ವಿಧಾನ ಪರಿಷತ್ ಶಾಸಕರಾದ ಭಾರತಿ ಶೆಟ್ಟಿ, ಭಲ್ಕೀಸ್ ಬಾನು, ಹೇಮಲತಾ ನಾಯಕ್, ಮತ್ತು ಮಂಜುನಾಥ ಭಂಡಾರಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: NCERT 8ನೇ ತರಗತಿ ಪಠ್ಯಪುಸ್ತಕ ಪರಿಷ್ಕರಣೆ – ದೆಹಲಿ ಸುಲ್ತಾನರ ಕ್ರೌರ್ಯ, ಮೊಘಲರ ಅಸಹಿಷ್ಣುತೆ ಉಲ್ಲೇಖ

    ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿರುವ ಸಭಾಪತಿ ಬಸವರಾಜ ಹೊರಟ್ಟಿರವರ ನೇತೃತ್ವದ ತಂಡ ಶಾಸಕಾಂಗ ಶೃಂಗಸಭೆಯಲ್ಲಿ ಭಾಗವಹಿಸಿ ಪ್ರಸ್ತುತ ರಾಜಕೀಯ ಬೆಳವಣಿಗೆ ಮತ್ತು ನಾಡಿನ ಅಭಿವೃದ್ದಿಯಲ್ಲಿ ಶಾಸಕಾಂಗದ ಪಾತ್ರದ ಬಗ್ಗೆ ಅನೇಕ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಸದರಿ ಶೃಂಗಸಭೆಗೆ ದೇಶಾದ್ಯಂತ ನಾಮ ನಿರ್ದೇಶಿತ ಸಂಸದರು ಮತ್ತು ವಿಧಾನ ಮಂಡಲದ ಶಾಸಕರು, ಸಚಿವರು ಭಾಗವಹಿಸಲಿದ್ದಾರೆ. ಇದೇ ರೀತಿ ಜಗತ್ತಿನಾದ್ಯಂತ ರಾಜಕೀಯ ಧುರೀಣರು ಮತ್ತು ನೀತಿ ನಿರೂಪಕರು ಸೇರಿಂದತೆ ಸುಮಾರು 15,000ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ಶೃಂಗಸಭೆಯಲ್ಲಿ ವಿವಿಧ ಪ್ರಕಾರದ ವಿಷಯಾಧಾರಿತ ಗೋಷ್ಠಿಗಳಲ್ಲಿ ಜಾಗತಿಕ ಪ್ರಸ್ತುತ ರಾಜಕೀಯ ವಿದ್ಯಾಮಾನಗಳು – ಯುವಕರ ಪಾತ್ರ, ಆಧುನಿಕ ತಂತ್ರಜ್ಞಾನದ ಆಧಾರಿತ ಬೆಳವಣಿಗೆಗಳ ಬಗ್ಗೆ ಚರ್ಚೆಗಳು ನಡೆಯಲಿವೆ.

    ಶೃಂಗಸಭೆಯಲ್ಲಿ ನಡೆಸಲಾಗುವ ಚರ್ಚೆಗಳು ಮತ್ತು ವಿಚಾರ ಮಂಥನಗಳಿಂದ ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಶಾಸನ ಸಭೆಗಳಲ್ಲಿ ಧನಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ ಎಂದು ವಿಧಾನ ಪರಿಷತ್ತಿನ ಸಭಾಪತಿಯವರಾದ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ – ಒಡಿಶಾ ವಿಧಾನಸೌಧ ಬಳಿ ಭುಗಿಲೆದ್ದ ಆಕ್ರೋಶ

  • ಭಾರತದೊಂದಿಗೆ ವ್ಯಾಪಾರ ಒಪ್ಪಂದ ಬಹಳ ಹತ್ತಿರದಲ್ಲಿದ್ದೇವೆ – ಬಾಂಗ್ಲಾ ಸೇರಿದಂತೆ 14 ದೇಶಗಳಿಗೆ ಟ್ರಂಪ್‌ ಭಾರೀ ತೆರಿಗೆ

    ಭಾರತದೊಂದಿಗೆ ವ್ಯಾಪಾರ ಒಪ್ಪಂದ ಬಹಳ ಹತ್ತಿರದಲ್ಲಿದ್ದೇವೆ – ಬಾಂಗ್ಲಾ ಸೇರಿದಂತೆ 14 ದೇಶಗಳಿಗೆ ಟ್ರಂಪ್‌ ಭಾರೀ ತೆರಿಗೆ

    ವಾಷಿಂಗ್ಟನ್‌: 14 ದೇಶಗಳ ಜೊತೆ ತೆರಿಗೆ ಸಮರ (Tariff War) ಆರಂಭಿಸಿದ ಟ್ರಂಪ್‌ ಭಾರತದ (India) ಜೊತೆ ಒಪ್ಪಂದ ಮಾಡಿಕೊಳ್ಳಲು ನಾವು ಬಹಳ ಹತ್ತಿರದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ತಾತ್ಕಾಲಿಕವಾಗಿ ತಡೆ ಹಿಡಿದಿದ್ದ ತೆರಿಗೆ ಸಮರವನ್ನು ಮತ್ತೆ ಟ್ರಂಪ್‌ ಆರಂಭಿಸಿದ್ದು ಆಗಸ್ಟ್‌ 1 ರಿಂದ 14 ದೇಶಗಳಿಂದ ಅಮೆರಿಕಕ್ಕೆ (USA) ಬರುವ ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ.

    ನಾವು ಯುನೈಟೆಡ್ ಕಿಂಗ್‌ಡಮ್‌, ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬಹಳ ಹತ್ತಿರದಲ್ಲಿದ್ದೇವೆ ಎಂದು ಟ್ರಂಪ್‌ (Donald Trump) ಹೇಳಿದರು. ಇದನ್ನೂ ಓದಿ: ನೊಬೆಲ್ಶಾಂತಿ ಪ್ರಶಸ್ತಿಗೆ ಟ್ರಂಪ್ಹೆಸರು ನಾಮ ನಿರ್ದೇಶನ ಮಾಡಿದ ಇಸ್ರೇಲ್

    ತೆರಿಗೆ ವಿಧಿಸಿದ ಬಳಿಕ ಹಲವು ದೇಶಗಳು ತಮ್ಮ ಅಮೆರಿಕದ ಬಳಿ ಮಾತುಕತೆ ನಡೆಸುತ್ತಿವೆ. ಈ 14 ದೇಶಗಳಿಗೆ ಈಗಲೂ ಮಾತನಾಡುವ ಆಯ್ಕೆ ಮುಕ್ತವಾಗಿದೆ ಎಂದು ತಿಳಿಸಿದ್ದಾರೆ. ಟ್ರಂಪ್‌ ತೆರಿಗೆ ಪೈಕಿ ಮ್ಯಾನ್ಮಾರ್ ಮತ್ತು ಲಾವೊ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಮೇಲೆ ಅತ್ಯಧಿಕ 40% ರಷ್ಟಿದೆ.

    ಯಾವುದೇ ಕಾರಣಕ್ಕಾಗಿ ನೀವು ನಿಮ್ಮ ಸುಂಕಗಳನ್ನು ಹೆಚ್ಚಿಸಲು ನಿರ್ಧರಿಸಿದರೆ ನೀವು ವಿಧಿಸುವ ತೆರಿಗೆಯ ಮೇಲೆ 25% ಏರಿಕೆ ಮಾಡಲಾಗುವುದು ಎಂದು ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅನಿವಾಸಿ ಭಾರತೀಯರಿಗೆ ಗುಡ್ನ್ಯೂಸ್ 23 ಲಕ್ಷಕ್ಕೆ ಜೀವಿತಾವಧಿಗೋಲ್ಡನ್ವೀಸಾಪರಿಚಯಿಸಿದ ಯುಎಇ

     

    ಯಾವ ದೇಶಕ್ಕೆ ಎಷ್ಟು ತೆರಿಗೆ?
    ಲಾವೋಸ್- 40%
    ಮ್ಯಾನ್ಮಾರ್- 40%
    ಥೈಲ್ಯಾಂಡ್- 36%
    ಕಾಂಬೋಡಿಯಾ – 36%
    ಬಾಂಗ್ಲಾದೇಶ – 35%
    ಸೆರ್ಬಿಯಾ – 35%
    ಇಂಡೋನೇಷ್ಯಾ – 32%
    ದಕ್ಷಿಣ ಆಫ್ರಿಕಾ- 30%
    ಬೋಸ್ನಿಯಾ ಮತ್ತು ಹರ್ಜೆಗೋವಿನಾ- 30%
    ಮಲೇಷ್ಯಾ- 25%
    ಟುನೀಶಿಯಾ- 25%
    ಜಪಾನ್- 25%
    ದಕ್ಷಿಣ ಕೊರಿಯಾ- 25%
    ಕಝಾಕಿಸ್ತಾನ್- 25%

     

  • ಖಲಿಸ್ತಾನಿ ಭಯೋತ್ಪಾದಕ ಹ್ಯಾಪಿ ಪಾಸಿಯಾ ಭಾರತಕ್ಕೆ ಹಸ್ತಾಂತರ ಪ್ರಕ್ರಿಯೆ ಶುರು

    ಖಲಿಸ್ತಾನಿ ಭಯೋತ್ಪಾದಕ ಹ್ಯಾಪಿ ಪಾಸಿಯಾ ಭಾರತಕ್ಕೆ ಹಸ್ತಾಂತರ ಪ್ರಕ್ರಿಯೆ ಶುರು

    – ಪಂಜಾಬ್‌ನಾದ್ಯಂತ 16 ಕಡೆ ಬಾಂಬ್‌ ಸ್ಫೋಟ ಪ್ರಕರಣ ಪ್ರಮುಖ ಆರೋಪಿ ಪಾಸಿಯಾ

    ನವದೆಹಲಿ: ಪಂಜಾಬ್‌ನಾದ್ಯಂತ ಕನಿಷ್ಠ 16 ಭಯೋತ್ಪಾದಕ ದಾಳಿಗಳ ಪ್ರಮುಖ ಆರೋಪಿ ಖಲಿಸ್ತಾನಿ ಉಗ್ರ (Khalistani Terrorist) ಹ್ಯಾಪಿ ಪಾಸಿಯಾನನ್ನು (Happy Passia) ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಲು ಪ್ರಕ್ರಿಯೆ ಶುರುವಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಭಾರತೀಯ ಭದ್ರತಾ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ಲಭಿಸಿದ್ದು, ಈ ಕಾರ್ಯಾಚರಣೆ ಯಶಸ್ವಿಗೊಳಿಸಲು ಶತ ಪ್ರಯತ್ನಗಳು ನಡೆಯುತ್ತಿವೆ.

    ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಜೊತೆಗೆ ಮತ್ತು ಭಯೋತ್ಪಾದಕ ಗುಂಪು ಬಬ್ಬರ್ ಖಲ್ಸಾ ಇಂಟರ್ನ್ಯಾಷನಲ್ (BKI)ನಲ್ಲಿ ಗುರುತಿಸಿಕೊಂಡಿದ್ದ ಹ್ಯಾಪಿ ಪಾಸಿಯಾ 2016-17ರ ಸಮಯದಲ್ಲಿ ಪಂಜಾಬ್‌ನಾದ್ಯಂತ ನಡೆದ 16 ಬಾಂಬ್‌ ಸ್ಫೋಟಕ ಪ್ರಕರಣದ ಪ್ರಮುಖ ಆರೋಪಿ ಆಗಿದ್ದ. ಆ ಸಂದರ್ಭದಲ್ಲಿ ಗುರ್ದಾಸ್‌ಪುರ, ದಿನಾನಗರ ಮತ್ತು ಇತರ ಕಡೆಗಳಲ್ಲಿ ನಡೆದ ಗ್ರೆನೇಡ್ ದಾಳಿಗಳ ರುವಾರಿಯೂ ಈತನಾಗಿದ್ದ. ಈ ದಾಳಿಗಳು ಭಾರತದ ಭದ್ರತೆಗೆ ಧಕ್ಕೆಯನ್ನುಂಟುಮಾಡಿದ್ದವು. ಈತನ ವಿರುದ್ಧ ಭಾರತದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ, ಮತ್ತು ಇಂಟರ್‌ಪೋಲ್‌ನಿಂದ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಲ್ಲಿದೆ.

    ಮೂಲಗಳ ಪ್ರಕಾರ, ಅಮೆರಿಕ ಪಾಸಿಯಾನನ್ನು ಗುರುತಿಸಲಾಗಿದ್ದು, ಭಾರತೀಯ ಗುಪ್ತಚರ ಸಂಸ್ಥೆಗಳ ಸಹಕಾರದೊಂದಿಗೆ ಈತನನ್ನು ವಶಕ್ಕೆ ತೆಗೆದುಕೊಂಡಿವೆ. ಪಂಜಾಬ್‌ನ ಅಮೃತಸರದ ನಿವಾಸಿಯಾದ ಪಾಸಿಯಾನನ್ನು ಕಳೆದ ಏಪ್ರಿಲ್ 18 ರಂದು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಮತ್ತು ICE ತಂಡಗಳು ಬಂಧಿಸಿರುವುದಾಗಿ FBI ನಿರ್ದೇಶಕ ಕಾಶ್ ಪಟೇಲ್ ತಿಳಿಸಿದ್ದರು. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಶುಭಾಂಶು ಶುಕ್ಲಾರಿಂದ ಬೆಂಗಳೂರು ನೀರುಕರಡಿ ಪ್ರಯೋಗ ಪೂರ್ಣ

    ಇದೀಗ ಗಡೀಪಾರು ಪ್ರಕ್ರಿಯೆಯು ಈಗ ರಾಜತಾಂತ್ರಿಕ ಮತ್ತು ಕಾನೂನಾತ್ಮಕ ಹಂತದಲ್ಲಿ ಮುಂದುವರೆದಿದೆ. ಭಾರತ ಮತ್ತು ಅಮೆರಿಕ ನಡುವಿನ ಗಡೀಪಾರು ಒಪ್ಪಂದದ ಅಡಿಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಶೀಘ್ರದಲ್ಲೇ ಈತನನ್ನು ಭಾರತಕ್ಕೆ ಕರೆತರುವ ಸಾಧ್ಯತೆ ಇದೆ. ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಕ್‌ ವಿರುದ್ಧ ಮೋದಿ ಕಟು ವಾಗ್ದಾಳಿ – ಬುದ್ಧನ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ

    ಈ ಬೆಳವಣಿಗೆಯನ್ನು ಭಾರತೀಯ ಭದ್ರತಾ ಸಂಸ್ಥೆಗಳು ಒಂದು ಪ್ರಮುಖ ಯಶಸ್ಸಾಗಿ ಪರಿಗಣಿಸಿವೆ. ಹ್ಯಾಪಿ ಪಾಸಿಯಾನಂತಹ ಆರೋಪಿಗಳನ್ನು ನ್ಯಾಯಂಗದ ಮುಂದೆ ತಂದು ನಿಲ್ಲಿಸೋದು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಭದ್ರತಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬ್ರಿಕ್ಸ್‌ ಅಮೆರಿಕ ವಿರೋಧಿ ಒಕ್ಕೂಟ – 10% ಹೆಚ್ಚುವರಿ ತೆರಿಗೆ ಹಾಕ್ತೀನಿ: ಟ್ರಂಪ್‌ ವಾರ್ನಿಂಗ್‌

  • ಬ್ರಿಕ್ಸ್‌ ಅಮೆರಿಕ ವಿರೋಧಿ ಒಕ್ಕೂಟ – 10% ಹೆಚ್ಚುವರಿ ತೆರಿಗೆ ಹಾಕ್ತೀನಿ: ಟ್ರಂಪ್‌ ವಾರ್ನಿಂಗ್‌

    ಬ್ರಿಕ್ಸ್‌ ಅಮೆರಿಕ ವಿರೋಧಿ ಒಕ್ಕೂಟ – 10% ಹೆಚ್ಚುವರಿ ತೆರಿಗೆ ಹಾಕ್ತೀನಿ: ಟ್ರಂಪ್‌ ವಾರ್ನಿಂಗ್‌

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತೆ ಬ್ರಿಕ್ಸ್‌ (BRICS) ಒಕ್ಕೂಟಕ್ಕೆ ತೆರಿಗೆ ಸಮರದ ಬೆದರಿಕೆ ಹಾಕಿದ್ದಾರೆ. ಬ್ರಿಕ್ಸ್‌ ಜೊತೆ ಹೊಂದಾಣಿಕೆ ಮಾಡುವ ಯಾವುದೇ ದೇಶಕ್ಕೆ 10% ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಬ್ರೆಜಿಲ್‌, ರಷ್ಯಾ, ಇಂಡಿಯಾ, ಚೀನಾ, ಸೌತ್‌ ಆಫ್ರಿಕಾ ಒಳಗೊಂಡಿರುವ ಬ್ರಿಕ್ಸ್‌ ಅನ್ನು ಅಮೆರಿಕ ವಿರೋಧಿ ಎಂದು ಟ್ರಪ್‌ ಪರಿಗಣಿಸಿದ್ದಾರೆ. ತಮ್ಮ ಟ್ರೂತ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಟ್ರಂಪ್‌, ಬ್ರಿಕ್ಸ್‌ ಅಮೇರಿಕನ್ ವಿರೋಧಿ ನೀತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಯಾವುದೇ ದೇಶಕ್ಕೆ ಹೆಚ್ಚುವರಿಯಾಗಿ 10% ಸುಂಕ ವಿಧಿಸಲಾಗುತ್ತದೆ. ಈ ನೀತಿಗೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಗುಡುಗಿದ್ದಾರೆ.  ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಕ್ವಿರುದ್ಧ ಮೋದಿ ಕಟು ವಾಗ್ದಾಳಿ ಬುದ್ಧನ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ

    ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ 17ನೇ ಬ್ರಿಕ್ಸ್ ಶೃಂಗಸಭೆಯ (BRICS Summit) ಸಮಯದಲ್ಲೇ ಟ್ರಂಪ್‌ ಈ ನಿರ್ಧಾರ ಪ್ರಕಟಿಸಿರುವುದು ವಿಶೇಷ. ಇದರ ಜೊತೆ ಭಾರತ (India) ಮತ್ತು ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಕೆಲ ತಿಂಗಳಿನಿಂದ ಮಾತುಕತೆ ನಡೆಸುತ್ತಿರುವ ಸಮಯದಲ್ಲೇ ಟ್ರಂಪ್‌ ಅವರು ಎಚ್ಚರಿಕೆಯ ಪೋಸ್ಟ್‌ ಹಾಕಿದ್ದಾರೆ.

     

    ಏನಿದು ಬ್ರಿಕ್ಸ್‌?
    ಬ್ರಿಕ್ಸ್’ (BRICS) ಎಂಬುದು ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಎಂಬುದರ ಸಂಕ್ಷಿಪ್ತ ರೂಪ. ಜಾಗತಿಕವಾದ ಆರ್ಥಿಕ ಅಭಿವೃದ್ಧಿ ಮತ್ತು ಸಹಕಾರಗಳಿಗೆ ಸಂಬಂಧಿಸಿದಂತೆ ಬೆಳೆಯುತ್ತಿರುವ ಆರ್ಥಿಕ ಶಕ್ತಿಗಳ ನಡುವಿನ ಮೈತ್ರಿಕೂಟವನ್ನು ಇದು ಪ್ರತಿನಿಧಿಸುತ್ತದೆ. ಮೊದಲ ಶೃಂಗಸಭೆಯು 2009 ರಲ್ಲಿ ರಷ್ಯಾದ ಒಕ್ಕೂಟದಲ್ಲಿ ನಡೆದಿತ್ತು. ಆಗ ಜಗತ್ತಿನಾದ್ಯಂತ 20ಕ್ಕೂ ಹೆಚ್ಚು ರಾಷ್ಟ್ರಗಳು ಬ್ರಿಕ್ಸ್‌ನ ಸದಸ್ಯತ್ವವನ್ನು ಕೋರಿ ಅರ್ಜಿಗಳನ್ನು ಸಲ್ಲಿಸಿದ್ದರೆ, ಇತರ 15ಕ್ಕೂ ಹೆಚ್ಚು ದೇಶಗಳು ಬ್ರಿಕ್ಸ್‌ನ ಭಾಗವಾಗುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದವು.  ಇದನ್ನೂ ಓದಿ: ಡಾಲರ್‌ಗೆ ಪೈಪೋಟಿ ನೀಡಲು ಹೊಸ ಕರೆನ್ಸಿ ಆರಂಭಿಸುವ ನಿರ್ಧಾರ ಕೈಗೊಂಡಿಲ್ಲ: ಜೈಶಂಕರ್

    ಏನಿದು ಬ್ರಿಕ್ಸ್‌ ಕರೆನ್ಸಿ?
    ಬ್ರಿಕ್ಸ್‌ ಕರೆನ್ಸಿಯ ಪ್ರಸ್ತಾಪವನ್ನು 2022ರ ಶೃಂಗಸಭೆಯಲ್ಲಿ ರಷ್ಯಾ ಮೊದಲು ಪ್ರಸ್ತಾಪಿಸಲಾಗಿತ್ತು. ನಂತರದ ದಿನಗಳಲ್ಲಿ ಡಾಲರ್‌ ಯಾಕೆ ವಿಶ್ವದ ಕರೆನ್ಸಿಯಾಗಬೇಕು ಎಂಬ ವಿಚಾರಗಳು ಚರ್ಚೆಗೆ ಬಂತು. ನಂತರ ಭಾರತ ರಷ್ಯಾ, ಚೀನಾ, ಬ್ರೆಜಿಲ್‌ಗಳು ರಷ್ಯಾದ ಜೊತೆ ಸ್ಥಳೀಯ ಕರೆನ್ಸಿಯಲ್ಲೇ ವ್ಯವಹಾರ ನಡೆಸುತ್ತಿದೆ. ರಷ್ಯಾದ ಕಾಜಾನ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಬ್ರಿಕ್ಸ್‌ ನೋಟ್‌ ಹಿಡಿದುಕೊಂಡಿದ್ದರು. ಈ ನೋಟು ದೊಡ್ಡ ಸುದ್ದಿಯಾಗುತ್ತಿದ್ದಂತೆ ಬ್ರಿಕ್ಸ್‌ ಕರೆನ್ಸಿಯ ಬಗ್ಗೆ ಚರ್ಚೆ ಹೆಚ್ಚಾಯಿತು. ಆ ಬಳಿಕ ಕಳವಳಗೊಂಡಿದ್ದ ಟ್ರಂಪ್‌ ಅಧಿಕಾರ ಸ್ವೀಕಾರಕ್ಕೂ ಮೊದಲೇ ಬ್ರಿಕ್ಸ್‌ ದೇಶಗಳಿಗೆ 100% ಸುಂಕ ವಿಧಿಸುವ ಎಚ್ಚರಿಕೆ ಕೊಟ್ಟಿದ್ದರು.

    ಸದ್ಯ ಒಂದೊಂದು ದೇಶಗಳಲ್ಲಿ ಒಂದೊಂದು ಕರೆನ್ಸಿ ಇದೆ. ಬ್ರೆಜಿಲ್‌ನಲ್ಲಿ ʻರಿಯಾಲ್‌ʼ, ರಷ್ಯಾದಲ್ಲಿ ʻರುಬೆಲ್‌ʼ, ಭಾರತದಲ್ಲಿ ʻರೂಪಾಯಿʼ, ಚೀನಾದಲ್ಲಿ ʻಯುವಾನ್‌ʼ, ದಕ್ಷಿಣ ಆಫ್ರಿಕಾದಲ್ಲಿ ʻರಾಂಡ್‌ʼ ಇದೆ. ಒಂದೊಂದು ದೇಶದಲ್ಲಿ ಒಂದೊಂದು ಕರೆನ್ಸಿ ಇರುವ ಕಾರಣ ಎಲ್ಲ ದೇಶಗಳಿಗೆ ಒಂದು ದೇಶದ ಕರೆನ್ಸಿಯನ್ನು ಅಪ್ಲೈ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಹೊಸ ಕರೆನ್ಸಿ ಬರಬೇಕು. ಇದಕ್ಕಾಗಿ ʻಬ್ರಿಕ್ಸ್‌ʼ ಮುಂದಾಗಿದೆ.

    ಸದ್ಯ ಹೊಸ ಕರೆನ್ಸಿ ವಿಚಾರದಲ್ಲಿ ಈಗಾಗಲೇ ರಷ್ಯಾ, ಬ್ರೆಜಿಲ್‌, ದಕ್ಷಿಣಾ ಆಫ್ರಿಕಾದ ಒಪ್ಪಿಗೆ ಸೂಚಿಸಿದ್ದು, ಭಾರತದ ನಿಲುವಿಗಾಗಿ ಚೀನಾ ಕಾಯುತ್ತಿದೆ. ಒಟ್ಟಿನಲ್ಲಿ ಬ್ರಿಕ್ಸ್‌ ಒಕ್ಕೂಟ ಮತ್ತಷ್ಟು ಬಲಗೊಂಡರೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಏಕಸ್ವಾಮ್ಯಕ್ಕೆ ಪೆಟ್ಟು ಬೀಳುವುದು ನಿಶ್ಚಿತ.

  • 100 ವರ್ಷಗಳಲ್ಲಿ ಇದೇ ಮೊದಲು – ಟೆಕ್ಸಾಸ್‌ನಲ್ಲಿ ಭೀಕರ ಪ್ರವಾಹಕ್ಕೆ 78 ಮಂದಿ ಬಲಿ, 41 ಜನ ಮಿಸ್ಸಿಂಗ್‌

    100 ವರ್ಷಗಳಲ್ಲಿ ಇದೇ ಮೊದಲು – ಟೆಕ್ಸಾಸ್‌ನಲ್ಲಿ ಭೀಕರ ಪ್ರವಾಹಕ್ಕೆ 78 ಮಂದಿ ಬಲಿ, 41 ಜನ ಮಿಸ್ಸಿಂಗ್‌

    – ವಿಷಪೂರಿತ ಹಾವುಗಳಿಂದ ಕಾರ್ಯಾಚರಣೆಗೆ ಅಡ್ಡಿ

    ವಾಷಿಂಗ್ಟನ್‌: ಅಮೆರಿಕದ ಟೆಕ್ಸಾಸ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ (Texas Flood) ಸಾವನ್ನಪ್ಪಿದವರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಈ ಪೈಕಿ 28 ಮಕ್ಕಳು ಸೇರಿದ್ದಾರೆ. ಇದರೊಂದಿಗೆ 41 ಮಂದಿ ಕಾಣೆಯಾಗಿದ್ದಾರೆ. ಕಳೆದ 100 ವರ್ಷಗಳಲ್ಲೇ ಇದು ಅತ್ಯಂತ ಭೀಕರ ಪ್ರವಾಹ ಎಂದು ವರದಿಗಳಿಂದ ತಿಳಿದುಬಂದಿದೆ.

    ಮುಂದಿನ 48 ಗಂಟೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಹೆಚ್ಚಿನ ಬಿರುಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಆದ್ರೆ ಇಲ್ಲಿ ವಿಷಪೂರಿತ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಇರಾನ್‌-ಇಸ್ರೇಲ್‌ ಯುದ್ಧದ ಬಳಿಕ ನೆತನ್ಯಾಹು-ಟ್ರಂಪ್‌ ಫಸ್ಟ್‌ ಮೀಟ್‌ – ಜು.7ರಂದು ವೈಟ್‌ಹೌಸ್‌ನಲ್ಲಿ ಮಹತ್ವದ ಭೇಟಿ

    ಟ್ರಂಪ್‌ ಸಂತಾಪ
    ಇನ್ನೂ ಮೃತರಿಗೆ ಸಂತಾಪ ಸೂಚಿಸಿರುವ ಯುಎಸ್ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump), ಇದು ನಿಜಕ್ಕೂ ಭಯಾನಕ, ದೇವರು ಜನರಿಗೆ ದುಃಖ ಬರಿಸುವ ಶಕ್ತಿ ಕೊಡಲೆಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಪ್ರವಾಹ ಪೀಡಿತ ಟೆಕ್ಸಾಸ್‌ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಶುಭಾಂಶು ಶುಕ್ಲಾರಿಂದ ಬೆಂಗಳೂರು ನೀರುಕರಡಿ ಪ್ರಯೋಗ ಪೂರ್ಣ

    ಟೆಕ್ಸಾಸ್‌ನಾದ್ಯಂತ ಸುರಿದ 15 ಇಂಚು (38 ಸೆಂ.ಮೀ) ಮಳೆಯಿಂದಾಗಿ ಹಠಾತ್‌ ಪ್ರವಾಹ ಸಂಭವಿಸಿದೆ. ಸದ್ಯ ರಕ್ಷಣಾ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವರೆಗೆ 850ಕ್ಕೂ ಹೆಚ್ಚು ಜನರನ್ನ ರಕ್ಷಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 25 ವರ್ಷದ ಬಳಿಕ ಪಾಕ್‌ ತೊರೆದ ಮೈಕ್ರೋಸಾಫ್ಟ್‌