Tag: USA

  • ಟ್ರಂಪ್‌ ಸುಂಕ ಸಮರಕ್ಕೆ ಭಾರತ ತಿರುಗೇಟು – ಅಮೆರಿಕದ ಶಸ್ತ್ರಾಸ್ತ್ರ, ವಿಮಾನ ಖರೀದಿಸುವ ಯೋಜನೆ ಸ್ಥಗಿತ

    ಟ್ರಂಪ್‌ ಸುಂಕ ಸಮರಕ್ಕೆ ಭಾರತ ತಿರುಗೇಟು – ಅಮೆರಿಕದ ಶಸ್ತ್ರಾಸ್ತ್ರ, ವಿಮಾನ ಖರೀದಿಸುವ ಯೋಜನೆ ಸ್ಥಗಿತ

    ನವದೆಹಲಿ: ಭಾರತದ ಆಮದುಗಳ ಮೇಲೆ 50% ಸುಂಕ (Tariff) ವಿಧಿಸಿದ ಬೆನ್ನಲ್ಲೇ ಭಾರತ ತಿರುಗೇಟು ನೀಡಿದೆ. ಅಮೆರಿಕದಿಂದ ಹೊಸ ಶಸ್ತ್ರಾಸ್ತ್ರಗಳು ಹಾಗೂ ವಿಮಾನಗಳನ್ನು ಖರೀದಿಸುವ ಯೋಜನೆಯನ್ನ (US Weapon Deal Plan) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

    ಕೆಲ ಶಸ್ತ್ರಾಸ್ತ್ರಗಳನ್ನು ಖರೀಸುವ ಒಪ್ಪಂದಗಳಿಗಾಗಿ ಮುಂದಿನ ವಾರಗಳಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಅವರನ್ನು ವಾಷಿಂಗ್ಟನ್‌ಗೆ ಕಳುಹಿಸುವ ಯೋಜನೆ ಇತ್ತು. ಆದ್ರೆ ಟ್ರಂಪ್‌ (Donald Trump) ಸುಂಕ ಏರಿಕೆ ಬೆನ್ನಲ್ಲೇ ಪ್ರವಾಸವನ್ನ ಮೊಟಕುಗೊಳಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಆದ್ರೆ ಕೆಲ ಉನ್ನತ ಮೂಲಗಳು ರಕ್ಷಣಾ ಒಪ್ಪಂದಗಳನ್ನ ರದ್ದುಗೊಳಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಒಪ್ಪಂದಗಳು, ಶಸ್ತ್ರಾಸ್ತ್ರ ಸರಬರಾಜು ಮುಂದುವರಿಯುತ್ತದೆ ಎಂದು ತಿಳಿಸಿವೆ. ಇದನ್ನೂ ಓದಿ: ಟ್ಯಾರಿಫ್‌ ವಾರ್‌ಗೆ ಸೆಡ್ಡು| P-8I ವಿಮಾನ ಖರೀದಿಸಲ್ಲ ಎಂದ ಭಾರತ

    trade war India Halts Procurement of Six usa Boeing P 8I Aircraft

    ಜನರಲ್ ಡೈನಾಮಿಕ್ಸ್ ಲ್ಯಾಂಡ್ ಸಿಸ್ಟಮ್ಸ್ ತಯಾರಿಸಿದ ಸ್ಟ್ರೈಕರ್ ಯುದ್ಧ ಟ್ಯಾಂಕರ್‌ ಸೇರಿದಂತೆ ಹಲವು ರಕ್ಷಣಾ ಉತ್ಪನ್ನಗಳ ಖರೀದಿಗೆ ಭಾರತ ಆಸಕ್ತಿ ತೋರಿತ್ತು. ಇದನ್ನೂ ಓದಿ: ಟ್ಯಾರಿಫ್‌ ಶಾಕ್‌; ಚಿನ್ನದ ಬೆಲೆ 3,600 ರೂ. ಏರಿಕೆ

    P-8I ವಿಮಾನ ಖರೀದಿಸಲ್ಲ
    ಇದಕ್ಕೂ ಮುನ್ನವೇ ಬೋಯಿಂಗ್‌ P-8I ವಿಮಾನವನ್ನು ಖರೀದಿಸದೇ ಇರಲು ನಿರ್ಧರಿಸಿದೆ ಎಂದು ವರದಿಯಾಗಿತ್ತು. 6 ಪಿ-81 ವಿಮಾನ ಖರೀದಿಗೆ ಭಾರತ ಮುಂದಾಗಿತ್ತು. ಆದರೆ ಈಗ ಕಡಲಿನಲ್ಲಿ ಗಸ್ತು ಕಾಯುವ ಈ ವಿಮಾನ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ. 2009 ರಲ್ಲಿ ಭಾರತ 8 ವಿಮಾನ ಖರೀದಿಗೆ 2.2 ಬಿಲಿಯನ್ ಡಾಲರ್‌ ಒಪ್ಪಂದ ಮಾಡಿಕೊಂಡಿತ್ತು. 2016 ರಲ್ಲಿ 4 ವಿಮಾನ ಖರೀದಿಸಿತ್ತು. ಭಾರತದ ಸಮುದ್ರದ ಮೇಲೆ ನಿಗಾ ಇಡಲು ಭಾರತೀಯ ನೌಕಾ ಸೇನೆಗೆ ಒಟ್ಟು 18 ಪಿ-81 ವಿಮಾನಗಳ ಅಗತ್ಯವಿದೆ. ಇದನ್ನೂ ಓದಿ: ಮಹಾದೇವಪುರದಲ್ಲಿ ಮತಗಳ್ಳತನ – ದಾಖಲೆ ಸಮೇತ ಮಾಹಿತಿ ಬಹಿರಂಗಪಡಿಸಿದ ರಾಹುಲ್ ಗಾಂಧಿ

    ಆಮದು ಸುಂಕ 50% ಏರಿಕೆ
    ಇದೇ ತಿಂಗಳ ಆಗಸ್ಟ್‌ 6ರಂದು ರಷ್ಯಾದ ತೈಲ ಖರೀದಿಗೆ ಶಿಕ್ಷೆಯಾಗಿ ಭಾರತದ ಆಮದು ಸರಕುಗಳ ಮೇಲೆ 25% ಸುಂಕ ವಿಧಿಸಿ ಟ್ರಂಪ್‌ ಆದೇಶ ಹೊರಡಿಸಿದ್ದರು. ಆದ್ರೆ ಭಾರತ ರಷ್ಯಾದ ತೈಲ ಖರೀದಿಯಿಂದ ಹಿಂದೆ ಸರಿಯದ ಹಿನ್ನೆಲೆ ಸುಂಕದ ಪ್ರಮಾಣವನ್ನು 50%ಗೆ ಏರಿಕೆ ಮಾಡಿದ್ದಾರೆ. ಇದು ಶೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.  ಇದನ್ನೂ ಓದಿ: ರಾಹುಲ್ ಆರೋಪದಲ್ಲಿ ಯಾವುದೇ ಹುರುಳಿಲ್ಲ, ದಾಖಲೆ ಇದ್ದರೆ ಕೋರ್ಟ್‌ಗೆ ಹೋಗಿ: ಶೆಟ್ಟರ್

  • ಟ್ಯಾರಿಫ್‌ ವಾರ್‌ಗೆ ಸೆಡ್ಡು| P-8I ವಿಮಾನ ಖರೀದಿಸಲ್ಲ ಎಂದ ಭಾರತ

    ಟ್ಯಾರಿಫ್‌ ವಾರ್‌ಗೆ ಸೆಡ್ಡು| P-8I ವಿಮಾನ ಖರೀದಿಸಲ್ಲ ಎಂದ ಭಾರತ

    ನವದೆಹಲಿ: ಸುಂಕ ಸಮರ ಆರಂಭಿಸಿದ ಅಮೆರಿಕಕ್ಕೆ (USA) ಭಾರತ (India) ಮತ್ತೆ ತಿರುಗೇಟು ನೀಡಿದ್ದು, ಬೋಯಿಂಗ್‌ P-8I ವಿಮಾನವನ್ನು ಖರೀದಿಸದೇ ಇರಲು ನಿರ್ಧರಿಸಿದೆ ಎಂದು ವರದಿಯಾಗಿದೆ.

    6 ಪಿ-81 ವಿಮಾನ ಖರೀದಿಗೆ ಭಾರತ ಮುಂದಾಗಿತ್ತು. ಆದರೆ ಈಗ ಕಡಲಿನಲ್ಲಿ ಗಸ್ತು ಕಾಯುವ ಈ ವಿಮಾನ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.

    2009 ರಲ್ಲಿ ಭಾರತ 8 ವಿಮಾನ ಖರೀದಿಗೆ 2.2 ಬಿಲಿಯನ್ ಡಾಲರ್‌ ಒಪ್ಪಂದ ಮಾಡಿಕೊಂಡಿತ್ತು. 2016 ರಲ್ಲಿ 4 ವಿಮಾನ ಖರೀದಿಸಿತ್ತು. ಭಾರತದ ಸಮುದ್ರದ ಮೇಲೆ ನಿಗಾ ಇಡಲು ಭಾರತೀಯ ನೌಕಾ ಸೇನೆಗೆ ಒಟ್ಟು 18 ಪಿ-81 ವಿಮಾನಗಳ ಅಗತ್ಯವಿದೆ.  ಇದನ್ನೂ ಓದಿ: ಯಾವುದೇ ಕಾರಣಕ್ಕೂ ರಾಜಿಯಾಗಲ್ಲ, ನನಗೆ ರೈತರ ಹಿತವೇ ಮುಖ್ಯ: ಟ್ರಂಪ್‌ಗೆ ಮೋದಿ ಗುದ್ದು

    ಮೇ 2021 ರಲ್ಲಿ ಆರು ಹೆಚ್ಚುವರಿ ವಿಮಾನಗಳ ಮಾರಾಟಕ್ಕೆ ಅಮೆರಿಕ ಸರ್ಕಾರ ಅನುಮೋದನೆ ನೀಡಿತ್ತು. ಆರಂಭದಲ್ಲಿ ಈ ವಿಮಾನ ಖರೀದಿಗೆ 2.42 ಬಿಲಿಯನ್ ಡಾಲರ್‌ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಪೂರೈಕೆ ಸರಪಳಿಯಲ್ಲಿನ ಅಡಚಣೆಗಳು ಮತ್ತು ಇತರ ಜಾಗತಿಕ ಸಮಸ್ಯೆಯಿಂದ ಖರೀದಿ ವೆಚ್ಚ 3.6 ಬಿಲಿಯನ್‌ ಡಾಲರ್‌ಗೆ ಈಗ ಏರಿಕೆಯಾಗಿದೆ. ಇದನ್ನೂ ಓದಿ: ಟ್ರಂಪ್ಸುಂಕ ಶಾಕ್ಬೆನ್ನಲ್ಲೇವರ್ಷ ಭಾರತಕ್ಕೆ ಪುಟಿನ್‌ ಭೇಟಿ

    ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದ್ದಕ್ಕೆ ಡೊನಾಲ್ಡ್‌ ಟ್ರಂಪ್‌ (Donald Trump) ಭಾರತದ ವಸ್ತುಗಳ ಮೇಲೆ 25% ತೆರಿಗೆ ವಿಧಿಸಿದ್ದರು. ಈಗ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ತೆರಿಗೆ ಹಾಕಿದ್ದಾರೆ. ಹೀಗಾಗಿ ಈಗ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಕೆಲ ವಸ್ತುಗಳ ಮೇಲೆ 50% ಸುಂಕ ವಿಧಿಸಲಾಗಿದೆ.

  • ಯಾವುದೇ ಕಾರಣಕ್ಕೂ ರಾಜಿಯಾಗಲ್ಲ, ನನಗೆ ರೈತರ ಹಿತವೇ ಮುಖ್ಯ: ಟ್ರಂಪ್‌ಗೆ ಮೋದಿ ಗುದ್ದು

    ಯಾವುದೇ ಕಾರಣಕ್ಕೂ ರಾಜಿಯಾಗಲ್ಲ, ನನಗೆ ರೈತರ ಹಿತವೇ ಮುಖ್ಯ: ಟ್ರಂಪ್‌ಗೆ ಮೋದಿ ಗುದ್ದು

    ನವದೆಹಲಿ: ರೈತರು (Faramers) ಮತ್ತು ಮೀನುಗಾರರಿಗೆ (Fishermen) ಸಮಸ್ಯೆಯಾಗುವ ಯಾವುದೇ ಹಿತಾಸಕ್ತಿಯ ಜೊತೆ ಭಾರತ (India) ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi)  ಸ್ಪಷ್ಟವಾಗಿ ಹೇಳಿದ್ದಾರೆ.

    ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಸುಂಕ ಸಮರವನ್ನು ಆರಂಭಿಸಿದ ಮರುದಿನವೇ ನರೇಂದ್ರ ಮೋದಿ ಈ ಹೇಳಿಕೆ ನೀಡುವ ಮೂಲಕ ಅಮೆರಿಕಕ್ಕೆ (USA) ಬಲವಾದ ಸಂದೇಶ ಕಳುಹಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ದುಬಾರಿ ಬೆಲೆ ತೆರಬೇಕಾಗುತ್ತದೆ ಎನ್ನುವುದು ತಿಳಿದಿದ್ದರೂ ರೈತರಿಗಾಗಿ ನಾನು ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಹೇಳಿದ್ದಾರೆ.

    ದೆಹಲಿಯಲ್ಲಿ ನಡೆದ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತರರಾಷ್ಟ್ರೀಯ ಸಮ್ಮೇಳದಲ್ಲಿ ಮಾತನಾಡಿದ ಅವರು, ರೈತರ ಹಿತಾಸಕ್ತಿ ನಮ್ಮ ಪ್ರಮುಖ ಆದ್ಯತೆಯಾಗಿದೆ. ಭಾರತ ತನ್ನ ರೈತರು, ಜಾನುವಾರು ಮಾಲೀಕರು ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸರ್ಕಾರದ ನಿರ್ಧಾರದಿಂದ ಭಾರೀ ಬೆಲೆ ತೆರಬೇಕಾಗುತ್ತದೆ ಎನ್ನುವುದು ನನಗೆ ತಿಳಿದಿದೆ. ಇದಕ್ಕೆ ನಾನು ಸಿದ್ಧನಿದ್ದೇನೆ. ದೇಶದ ರೈತರು, ಮೀನುಗಾರರು ಮತ್ತು ಜಾನುವಾರು ಮಾಲೀಕರ ಹಿತದೃಷ್ಟಿಯಿಂದ ಭಾರತ ಎಲ್ಲದ್ದಕ್ಕೂ ಸಿದ್ಧವಾಗಿದೆ ಎಂದು ತಿಳಿಸಿದರು.

    ಜುಲೈ 20 ರಂದು ಅಮೆರಿಕ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ 25% ಸುಂಕವನ್ನು ವಿಧಿಸಿತ್ತು. ಈಗ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಮತ್ತೆ 25% ಸುಂಕವನ್ನು ಡೊನಾಲ್ಡ್‌ ಟ್ರಂಪ್‌ ಹಾಕಿದ್ದಾರೆ.

    ಭಾರತ ಸಹಿ ಹಾಕದ್ದು ಯಾಕೆ?
    ಟ್ರಂಪ್‌ ಸುಂಕ ಸಮರ ಆರಂಭಿಸಿದ ಕೂಡಲೇ ಭಾರತ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳ ಮೇಲೆ ತೆರಿಗೆ ಸಮರ ಆರಂಭಿಸಿದ್ದರು. ನಂತರ ಉಳಿದ ದೇಶಗಳು ವ್ಯಾಪಾರ ಸಂಬಂಧ ಮಾತುಕತೆ ನಡೆಸಲು ಆಸಕ್ತಿ ತೋರಿದ ಬೆನ್ನಲ್ಲೇ ಅಮೆರಿಕ ಸುಂಕ ಸಮರವನ್ನು ತಡೆ ಹಿಡಿದಿತ್ತು. ಈ ಸಂದರ್ಭದಲ್ಲಿ ಭಾರತ ಅಮೆರಿಕದ ಜೊತೆ ವ್ಯಾಪಾರ ಮಾತುಕತೆ ನಡೆಸತೊಡಗಿತು.

    ಬಹುತೇಕ ವಿಚಾರಗಳ ಮಧ್ಯೆ ಭಾರತ ಮತ್ತು ಅಮೆರಿಕ ಒಪ್ಪಿಗೆ ನೀಡಿದರೂ ಮಹತ್ವದ ಕೆಲ ವಿಚಾರಗಳ ಭಾರತಕ್ಕೆ ಒಪ್ಪಿಗೆ ನೀಡಿಲ್ಲ. ಮುಖ್ಯವಾಗಿ ಕೃಷಿ, ಹೈನು ಉತ್ಪನ್ನಗಳ ವಲಯ. ಮೀನುಗಾರಿಕೆ ಸಂಬಂಧಿಸಿದಂತೆ ಅಮೆರಿಕದ ಉತ್ಪನ್ನಗಳಿಗೆ ಮುಕ್ತವಾಗಿಸಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿಲ್ಲ. ಅಮೆರಿಕ ಉಕ್ಕು, ಅಲ್ಯೂಮಿನಿಯಂ ಮತ್ತು ಆಟೊಮೊಬೈಲ್‌ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ವಿಧಿಸಬಾರದು ಎಂದು ಭಾರತ ಇರಿಸಿರುವ ಬೇಡಿಕೆಯನ್ನು ಒಪ್ಪಿಲ್ಲ.

    ಅಮೆರಿಕದ ಡೈರಿ ಉತ್ಪನ್ನಗಳಿಗೆ ಭಾರತ ಅನುಮತಿ ನೀಡಿಲ್ಲ ಯಾಕೆ ಎನ್ನುವುದಕ್ಕೆ ಕಾರಣ ಇದೆ. ಭಾರತದಲ್ಲಿ ದನಗಳಿಗೆ ಹುಲ್ಲು, ಒಣಗಿದ ಮೇವು, ಧಾನ್ಯಗಳು, ಮತ್ತು ಪಶು ಆಹಾರವನ್ನು ನೀಡಲಾಗುತ್ತದೆ. ಆದರೆ ಅಮೆರಿಕದಲ್ಲಿ ಹಾಗಲ್ಲ. ಅಮೆರಿಕದಲ್ಲಿ ಜಾನುವಾರುಗಳಿಗೆ ಆಹಾರವಾಗಿ ನಾನ್‌ ವೆಜ್‌ ಆಹಾರಗಳನ್ನು ನೀಡಲಾಗುತ್ತದೆ. ಮಾಂಸ ಮತ್ತು ಮೂಳೆ ಊಟ, ಒಣಗಿದ ರಕ್ತ ಮತ್ತು ಕೋಳಿ ತ್ಯಾಜ್ಯ ಸೇರಿದಂತೆ ಪ್ರಾಣಿ ಉತ್ಪನ್ನಗಳನ್ನು ಜಾನುವಾರು ಆಹಾರದಲ್ಲಿ ಬಳಸಲು ಅವಕಾಶ ನೀಡುತ್ತವೆ. ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಮೇವಿನ ವೆಚ್ಚವನ್ನು ಕಡಿಮೆ ಮಾಡಲು ಅಮೆರಿಕದ ರೈತರು ಈ ಆಹಾರವನ್ನು ನೀಡುತ್ತಾರೆ. ಈ ರೀತಿಯ ಆಹಾರ ನೀಡಲು ಅಮೆರಿಕದ ಕಾನೂನಿನಲ್ಲಿ ಅನುಮತಿ ಇದೆ.

    ಭಾರತದಲ್ಲಿ ಹಸುಗಳನ್ನು ಪವಿತ್ರ ಮತ್ತು ಪೂಜ್ಯ ಭಾವದಿಂದ ನೋಡಲಾಗುತ್ತದೆ. ಹಸುಗಳು ತಿಂದ ಪ್ರಾಣಿ ಉತ್ಪನ್ನಗಳಿಂದ ಬರುವ ಹಾಲು ಸೇವಿಸುವುದನ್ನು ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಸುಮಾರು 8 ಕೋಟಿಗೂ ಅಧಿಕ ಮಂದಿ ಹೈನುಗಾರಿಕೆ ಉದ್ಯಮದಲ್ಲಿ ತೊಡಗಿದ್ದಾರೆ. ಭಾರತದ ಜಿಡಿಪಿಗೆ ಹೈನುಗಾರಿಕೆ 5% ಕೊಡುಗೆ ನೀಡುತ್ತದೆ.

    ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರುವ ಕಾರಣ ಭಾರತದ ಮಾರುಕಟ್ಟೆ ಪ್ರವೇಶಿಲು ಅಮೆರಿಕ ಮೊದಲಿನಿಂದಲೂ ಭಾರೀ ಪ್ರಯತ್ನ ಮಾಡುತ್ತಿದೆ. ಒಂದು ವೇಳೆ ಭಾರತ ಅನುಮತಿ ನೀಡಿದರೆ ರೈತರು ಬೀದಿಗೆ ಇಳಿಯುವ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರವೇ ಪತನ ಹೊಂದುವ ಸಾಧ್ಯತೆಯಿದೆ. ಈ ಕಾರಣಕ್ಕೆ ಇಲ್ಲಿಯವರೆಗೆ ಯಾವುದೇ ಸರ್ಕಾರಗಳು ಭಾರತದ ಮಾರುಕಟ್ಟೆಗೆ ಅಮೆರಿಕದ ಡೈರಿ ಉತ್ಪನ್ನ ಪ್ರವೇಶಕ್ಕೆ ಅನುಮತಿ ನೀಡಿಲ್ಲ.

  • ಟ್ರಂಪ್ ಸುಂಕ ಬೆದರಿಕೆ ನಡ್ವೆ ಅಮೆರಿಕಕ್ಕೆ ತಿವಿದ ಇಂಡಿಯನ್ ಆರ್ಮಿ – ಪಾಕ್‌ಗೆ ಶಸ್ತ್ರಾಸ್ತ್ರ ಪೂರೈಕೆ ಬಗ್ಗೆ 1971ರ ಪೇಪರ್ ಕಟಿಂಗ್‌ ಪೋಸ್ಟ್

    ಟ್ರಂಪ್ ಸುಂಕ ಬೆದರಿಕೆ ನಡ್ವೆ ಅಮೆರಿಕಕ್ಕೆ ತಿವಿದ ಇಂಡಿಯನ್ ಆರ್ಮಿ – ಪಾಕ್‌ಗೆ ಶಸ್ತ್ರಾಸ್ತ್ರ ಪೂರೈಕೆ ಬಗ್ಗೆ 1971ರ ಪೇಪರ್ ಕಟಿಂಗ್‌ ಪೋಸ್ಟ್

    ನವದೆಹಲಿ: ರಷ್ಯಾದಿಂದ ಕಚ್ಚಾ ತೈಲ (Russian Oil) ಆಮದು ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ, ಅಮೆರಿಕದ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ. ಅಮೆರಿಕ (America) ಆಕ್ಷೇಪಣೆಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನೆ, 1971ರ ಯುದ್ಧದ ಸಮಯದಲ್ಲಿ ಅಮೆರಿಕ ಪಾಕಿಸ್ತಾನವನ್ನು ಹೇಗೆ ಬೆಂಬಲಿಸಿತು? ಎನ್ನುವ ವರದಿಯೊಂದನ್ನು ಉಲ್ಲೇಖಿಸಿ ತಿರುಗೇಟು ನೀಡಿದೆ.

    ʻಈ ದಿನ ಆ ವರ್ಷʼ – ಯುದ್ಧದ ನಿರ್ಮಾಣ – 05 ಆಗಸ್ಟ್ 1971 #KnowFactsʼ ಎಂಬ ಶೀರ್ಷಿಕೆಯ ಅಡಿ ಸೇನೆಯು ಹಳೆಯ ಪೇಪರ್‌ ಕಟಿಂಗ್‌ವಿಂದನ್ನ ಪೊಸ್ಟ್ ಮಾಡಿದೆ. ಅಮೆರಿಕವು 1954 ರಿಂದ ಪಾಕಿಸ್ತಾನಕ್ಕೆ (Pakistan) 2 ಶತಕೋಟಿ ಡಾಲರ್‌ ಮೌಲ್ಯದ ಶಸ್ತ್ರಾಸ್ತ್ರಗಳನ್ನು ರವಾನಿಸಿದೆ ಎಂಬ ಶೀರ್ಷಿಕೆ ಹೊಂದಿರುವ ಪತ್ರಿಕಾ ವರದಿಯನ್ನ ಹಂಚಿಕೊಂಡು ಪಾಕ್ ಪರ ಹೇಗೆ ಕೆಲಸ ಮಾಡಿತು ಎಂದು ತಿವಿದಿದೆ. ಇದನ್ನೂ ಓದಿ: ʻಆಪರೇಷನ್ ಸಿಂಧೂರʼ ಯಶಸ್ಸಿಗೆ ಸನ್ಮಾನ – ʻಜೈ ಶ್ರೀರಾಮ್‌, ಹರಹರ ಮಹದೇವ್ʼ ಘೋಷಣೆ ನಡ್ವೆ ಮೋದಿಗೆ ಗೌರವ

    ರಷ್ಯಾದಿಂದ ಕಚ್ಚಾ ತೈಲ ಖರೀದಿ ಮೂಲಕ ಉಕ್ರೇನ್‌ (Ukraine) ವಿರುದ್ಧದ ಯುದ್ಧಕ್ಕೆ ಭಾರತ ಫಂಡಿಗ್‌ ಮಾಡುತ್ತಿದೆ ಎನ್ನುವ ಅಮೆರಿಕದ ಹೇಳಿಕೆಗೆ ಭಾರತ ಕೌಂಟರ್‌ ಕೊಟ್ಟ ಒಂದು ದಿನದ ನಂತರ ಈ ಪೋಸ್ಟ್ ಬಂದಿದೆ. ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಟೀಕೆಗಳು ʻಅಸಮರ್ಥನೀಯ ಮತ್ತು ಅಸಮಂಜಸʼ ಎಂದು ಭಾರತ ಕರೆದಿದೆ. ಉಕ್ರೇನ್ ಸಂಘರ್ಷ ಪ್ರಾರಂಭವಾದ ನಂತರ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕಾಗಿ ಭಾರತವನ್ನ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಗುರಿಯಾಗಿಸಿಕೊಂಡಿದೆ. ಇದನ್ನೂ ಓದಿ: ಕೆಂಪು ಕೋಟೆಗೆ ಪ್ರವೇಶಿಸಲು ಯತ್ನ – ಐವರು ಬಾಂಗ್ಲಾ ಪ್ರಜೆಗಳು ಅರೆಸ್ಟ್‌

    ಪತ್ರಿಕಾ ವರದಿಯಲ್ಲಿ 1954ರಿಂದ 1971ರ ವರೆಗೆ ಅಮೆರಿಕವು ಪಾಕಿಸ್ತಾನಕ್ಕೆ ಸುಮಾರು 2 ಶತಕೋಟಿ ಡಾಲರ್ ಮೌಲ್ಯದ ಆಯುಧಗಳನ್ನು ಪೂರೈಸಿರುವುದಾಗಿ ವರದಿ ಮಾಡಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪಾಕಿಸ್ತಾನ 1971ರ ಬಾಂಗ್ಲಾದೇಶ ಮುಕ್ತಿ ಯುದ್ಧದ ಸಂದರ್ಭದಲ್ಲಿ ಹಾಗೂ ಆಪರೇಷನ್ ವಿಜಯ್ ವರ್ಷದಲ್ಲಿ ಬಳಕೆ ಮಾಡಿದೆ ಎನ್ನುವುದು ಉಲ್ಲೇಖಿಸುತ್ತದೆ. ಇದನ್ನೂ ಓದಿ: ವೀಸಾ ಅವಧಿ ಮೀರಿ ವಾಸ್ತವ್ಯ; ಭಾರತ ಸೇರಿ ವಿದೇಶಿ ಪ್ರಜೆಗಳಿಗೆ ಅಮೆರಿಕ ಗಡೀಪಾರು ಎಚ್ಚರಿಕೆ

  • ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕ – ಭಾರತ ಕೌಂಟರ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

    ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕ – ಭಾರತ ಕೌಂಟರ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

    ವಾಷಿಂಗ್ಟನ್: ರಷ್ಯಾದಿಂದ (Russia) ಕಚ್ಚಾ ತೈಲ ಆಮದು ಮಾಡಿ ಉಕ್ರೇನ್‌ (Ukraine) ವಿರುದ್ಧದ ಯುದ್ಧಕ್ಕೆ ಸಹಕಾರ ನೀಡುತ್ತಿದೆ ಎನ್ನುವ ಹೇಳಿಕೆಗೆ ಭಾರತ ತಿರುಗೇಟು ಕೊಟ್ಟಬೆನ್ನಲ್ಲೇ ಟ್ರಂಪ್‌ ಮತ್ತಷ್ಟು ಸುಂಕ ವಿಧಿಸುವ ಬೆದರಿಕೆ ಹಾಕಿದ್ದಾರೆ. ಭಾರತದಿಂದ ಖರೀದಿಸುವ ಎಲ್ಲ ಆಮದು ವಸ್ತುಗಳ ಮೇಲೆ ಸುಂಕ ಗಣನೀಯ ಏರಿಕೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

    ಹೌದು. ಭಾರತ ರಷ್ಯಾದಿಂದ (India Russia) ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುತ್ತಿದೆ. ಭಾರತವು ದೊಡ್ಡ ಪ್ರಮಾಣದಲ್ಲಿ ರಷ್ಯಾದ ತೈಲ (Russian Oil) ಮಾತ್ರ ಖರೀದಿಸುತ್ತಿಲ್ಲ, ಖರೀದಿಸಿದ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ದೊಡ್ಡ ಪ್ರಮಾಣದ ಲಾಭ ಮಾಡಿಕೊಳ್ಳುತ್ತಿದೆ ಎಂದು ತಮ್ಮ ಸಾಮಾಜಿಕ ಜಾಲತಾಣ ‘ಟ್ರುಥ್ ಸೋಷಿಯಲ್‌ʼನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನೀವು ರಷ್ಯಾದಿಂದ ಆಮದು ಮಾಡಬಹುದು, ನಾವು ಮಾಡಿದ್ರೆ ಯುದ್ಧಕ್ಕೆ ಫಂಡಿಂಗ್‌ ಹೇಗೆ: ಟ್ರಂಪ್‌ಗೆ ಭಾರತದ ಗುದ್ದು

    ಅತ್ತ ರಷ್ಯಾದ ಯುದ್ಧ ಟ್ಯಾಂಕರ್‌ಗಳಿಂದ ಉಕ್ರೇನ್‌ನಲ್ಲಿ ಹಲವು ಜನ ಸಾಯುತ್ತಿದ್ದರೂ ಅವರು ಹೆದರುತ್ತಿಲ್ಲ. ಈ ಕಾರಣದಿಂದಲೇ, ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕವನ್ನ ಗಣನೀಯವಾಗಿ ಏರಿಕೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, ಸುಂಕ ಹೇರುವ ಪರಿಣಾಮಗಳ ಕುರಿತು ಪರಿಶೀಲನೆ ನಡೆಸುತ್ತಿದ್ದು, ದೇಶದ ಹಿತಾಸಕ್ತಿ ಕಾಯಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ರಷ್ಯಾದ ತೈಲ ಖರೀದಿ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಭಾರತ ಫಂಡಿಂಗ್‌ – ಅಮೆರಿಕ

    ಭಾರತಕ್ಕಿಂತ ಪಾಕ್‌ಗೆ ಕಡಿಮೆ ಸುಂಕ
    ಈಗಾಗಲೇ ಆಗಸ್ಟ್‌ 7ರಿಂದ ಅನ್ವಯವಾಗುವಂತೆ `ಭಾರತದಿಂದ ಆಮದು ಮಾಡಿಕೊಳ್ಳುವ ಎಲ್ಲ ಸರಕುಗಳಿಗೂ ಶೇ.25ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಟ್ರಂಪ್‌ ಸಹಿ ಹಾಕಿದ್ದಾರೆ. ಆದ್ರೆ ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ್ದಾರೆ. ಬೃಹತ್‌ ಪ್ರಮಾಣದಲ್ಲಿ ರಷ್ಯಾದ ಸೇನಾ ಉಪಕರಣಗಳು, ಕಚ್ಚಾ ತೈಲ ಖರೀದಿಸುತ್ತಿರುವ ಭಾರತದ ಮೇಲೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದರು. ಆದ್ರೆ, ಯಾವ ದಿನಾಂಕದಿಂದ ಈ ನಿರ್ಧಾರ ಜಾರಿಗೆ ಬರಲಿದೆ ಎಂದು ತಿಳಿಸಿರಲಿಲ್ಲ.

    ಅಲ್ಲದೇ ಒಂದು ದಿನದ ಹಿಂದೆಯಷ್ಟೇ, ಭಾರತ ರಷ್ಯಾದಿಂದ ಕಚ್ಚಾತೈಲ ಖರೀದಿ ಮಾಡುವ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಪರೋಕ್ಷವಾಗಿ ಫಂಡಿಂಗ್‌ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿತ್ತು. ಈ ಬೆನ್ನಲ್ಲೇ ಭಾರತ ಕೌಂಟರ್‌ ಕೊಟ್ಟಿತ್ತು. ನೀವು ರಷ್ಯಾದಿಂದ ಆಮದು ಮಾಡಬಹುದು, ನಾವು ಮಾಡಿದ್ರೆ ಯುದ್ಧಕ್ಕೆ ಫಂಡಿಂಗ್‌ ಹೇಗೆ ಆಗುತ್ತೆ? ಎಂದು ಪ್ರಶ್ನಿಸಿತ್ತು. ಈ ಬೆನ್ನಲ್ಲೇ ಸುಂಕ ಸಮರಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಕಾರು ಅಪಘಾತ; ನಾಪತ್ತೆಯಾಗಿದ್ದ ಭಾರತೀಯ ಮೂಲದ ನಾಲ್ವರ ಮೃತದೇಹ ಪತ್ತೆ

    2ನೇ ಅತೀ ದೊಡ್ಡ ಖರೀದಿದಾರ
    ಭಾರತವು ರಷ್ಯಾದಿಂದ ದೇಶದ ಅಗತ್ಯವಿರುವ ಕಚ್ಚಾತೈಲದ ಪೈಕಿ ಶೇ.35ರಿಂದ 40ರಷ್ಟು ಖರೀದಿಸುತ್ತಿದೆ. ಉಕ್ರೇನ್ ಜೊತೆಗಿನ ಯುದ್ಧ ಆರಂಭಕ್ಕೂ ಮುನ್ನ ಹೋಲಿಸಿದ್ರೆ, ಆಮದು ಪ್ರಮಾಣವು ಶೇ.0.2ರಷ್ಟು ಏರಿಕೆಯಾಗಿದೆ. ರಷ್ಯಾದಿಂದ ಗರಿಷ್ಠ ಪ್ರಮಾಣದ ಕಚ್ಚಾತೈಲ ಖರೀದಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತವು ನಂತರದ ಸ್ಥಾನದಲ್ಲಿದೆ ಎಂದು ವರದಿಗಳು ತಿಳಿಸಿವೆ.

  • ನೀವು ರಷ್ಯಾದಿಂದ ಆಮದು ಮಾಡಬಹುದು, ನಾವು ಮಾಡಿದ್ರೆ ಯುದ್ಧಕ್ಕೆ ಫಂಡಿಂಗ್‌ ಹೇಗೆ: ಟ್ರಂಪ್‌ಗೆ ಭಾರತದ ಗುದ್ದು

    ನೀವು ರಷ್ಯಾದಿಂದ ಆಮದು ಮಾಡಬಹುದು, ನಾವು ಮಾಡಿದ್ರೆ ಯುದ್ಧಕ್ಕೆ ಫಂಡಿಂಗ್‌ ಹೇಗೆ: ಟ್ರಂಪ್‌ಗೆ ಭಾರತದ ಗುದ್ದು

    – ಟ್ರಂಪ್ ದ್ವಿಮುಖ ನೀತಿಯ ಬುಟಾಟಿಕೆ ಅನಾವರಣ
    – ಅಂಕಿ ಸಂಖ್ಯೆಯನ್ನು ಮುಂದಿಟ್ಟು ಖಡಕ್‌ ತಿರುಗೇಟು

    ನವದೆಹಲಿ: ರಷ್ಯಾದಿಂದ (Russia) ಕಚ್ಚಾ ತೈಲ ಆಮದು ಮಾಡಿ ಉಕ್ರೇನ್‌ (Ukraine) ಯುದ್ಧಕ್ಕೆ ಸಹಕಾರ ನೀಡುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ದೂರಿದ್ದಕ್ಕೆ ಭಾರತ (India) ಮೊದಲ ಬಾರಿಗೆ ಅಂಕಿಸಂಖ್ಯೆಯನ್ನು ನೀಡುವ ಮೂಲಕ ಖಡಕ್‌ ತಿರುಗೇಟು ನೀಡಿದೆ.

    ವಿದೇಶಾಂಗ ಸಚಿವಾಲಯ ಯುರೋಪಿಯನ್‌ ಒಕ್ಕೂಟಗಳು (European Union) ಮತ್ತು ಅಮೆರಿಕ ಈಗಲೂ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ನೀವು ಆಮದು ಮಾಡಿಕೊಳ್ಳಬಹುದು. ಆದರೆ ನಾವು ರಷ್ಯಾದಿಂದ ಆಮದು ಮಾಡಿದರೆ ಉಕ್ರೇನ್‌ ಯುದ್ಧಕ್ಕೆ ಫಂಡಿಂಗ್‌ ಹೇಗಾಗುತ್ತದೆ? ಭಾರತವನ್ನು ಗುರಿಯಾಗಿಸಿ ತೆರಿಗೆ ಹಾಕುವುದು ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸವಾಗಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ರಷ್ಯಾದ ತೈಲ ಖರೀದಿ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಭಾರತ ಫಂಡಿಂಗ್‌ – ಅಮೆರಿಕ

    ಟ್ರಂಪ್‌ ಹೇಳಿದ್ದೇನು?
    ಭಾರತವು ಬೃಹತ್ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುವುದಲ್ಲದೆ, ಖರೀದಿಸಿದ ಹೆಚ್ಚಿನ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ರಷ್ಯಾದ ಯುದ್ದದಿಂದಾಗಿ ಉಕ್ರೇನ್‌ನಲ್ಲಿ ಎಷ್ಟು ಜನರು ಕೊಲ್ಲಲ್ಪಡುತ್ತಿದ್ದಾರೆ ಎಂಬುದು ಅವರಿಗೆ ಮುಖ್ಯವಲ್ಲ. ಈ ಕಾರಣಕ್ಕೆ ಭಾರತವು ಅಮೆರಿಕಕ್ಕೆ ಪಾವತಿಸುವ ಸುಂಕವನ್ನು ನಾನು ಗಣನೀಯವಾಗಿ ಹೆಚ್ಚಿಸುತ್ತೇನೆ.

    ಭಾರತದ ಹೇಳಿಕೆಯಲ್ಲಿ ಏನಿದೆ?
    ಉಕ್ರೇನ್ ಸಂಘರ್ಷ ಆರಂಭವಾದ ನಂತರ ರಷ್ಯಾದಿಂದ ತೈಲ ಆಮದು ಮಾಡಿಕೊಂಡಿದ್ದಕ್ಕಾಗಿ ಭಾರತವನ್ನು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಗುರಿಯಾಗಿಸಿಕೊಂಡಿವೆ. ನಿಜವಾಗಿ ಸಂಘರ್ಷ ಪ್ರಾರಂಭವಾದ ನಂತರ ಸಾಂಪ್ರದಾಯಿಕವಾಗಿ ಬರುತ್ತಿದ್ದ ತೈಲಗಳು ಯುರೋಪ್‌ ಕಡೆ ತಿರುಗಿತ್ತು. ಈ ಕಾರಣಕ್ಕೆ ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಲು ಪ್ರಾರಂಭಿಸಿತ್ತು. ಜಾಗತಿಕ ತೈಲ ಮಾರುಕಟ್ಟೆಗಳ ಬೆಲೆ ಸ್ಥಿರವಾಗಿರಲು ಆ ಸಮಯದಲ್ಲಿ ಅಮೆರಿಕ ಭಾರತದ ಆಮದುಗಳಿಗೆ ಪ್ರೋತ್ಸಾಹ ನೀಡಿತ್ತು.

    ಭಾರತೀಯ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ತೈಲ ನೀಡಲು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಭಾರತವನ್ನು ಟೀಕಿಸುವ ರಾಷ್ಟ್ರಗಳೇ ರಷ್ಯಾದೊಂದಿಗೆ ವ್ಯಾಪಾರದಲ್ಲಿ ತೊಡಗಿಕೊಂಡಿವೆ.

    2024 ರಲ್ಲಿ ಯುರೋಪಿಯನ್ ಒಕ್ಕೂಟವು ರಷ್ಯಾದೊಂದಿಗೆ 67.5 ಬಿಲಿಯನ್ ಯುರೋಗಳಷ್ಟು ದ್ವಿಪಕ್ಷೀಯ ಸರಕು ವ್ಯಾಪಾರವನ್ನು ಹೊಂದಿತ್ತು. ಇದಲ್ಲದೆ 2023 ರಲ್ಲಿ 17.2 ಬಿಲಿಯನ್ ಯುರೋಗಳಷ್ಟು ಸೇವೆಗಳ ವ್ಯಾಪಾರವನ್ನು ಅದು ಹೊಂದಿತ್ತು. ಇದು ಆ ವರ್ಷ ಅಥವಾ ನಂತರ ರಷ್ಯಾದೊಂದಿಗೆ ಭಾರತ ನಡೆಸಿದ ಒಟ್ಟು ವ್ಯಾಪಾರಕ್ಕಿಂತ ಗಮನಾರ್ಹವಾಗಿ ಹೆಚ್ಚಿದೆ. 2024 ರಲ್ಲಿ ಯುರೋಪಿಯನ್ ದೇಶಗಳು ದಾಖಲೆಯ 16.5 ಮಿಲಿಯನ್ ಟನ್‌ ಎಲ್‌ಎನ್‌ಜಿಯನ್ನು ಆಮದು ಮಾಡಿಕೊಂಡಿದೆ. 2022 ರಲ್ಲಿ15.21 ಮಿಲಿಯನ್ ಟನ್‌ ಎಲ್‌ಎನ್‌ಜಿಯನ್ನು ಆಮದು ಮಾಡಿಕೊಂಡಿದ್ದು ಇದುವರೆಗಿನ ದಾಖಲೆಯಾಗಿತ್ತು.

    ಯುರೋಪ್-ರಷ್ಯಾ ವ್ಯಾಪಾರವು ಕೇವಲ ಇಂಧನವನ್ನು ಮಾತ್ರವಲ್ಲ ರಸಗೊಬ್ಬರ, ಗಣಿಗಾರಿಕೆ ಉತ್ಪನ್ನಗಳು, ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕು ಮತ್ತು ಯಂತ್ರೋಪಕರಣಗಳು ಮತ್ತು ಸಾರಿಗೆ ಉಪಕರಣಗಳನ್ನು ಒಳಗೊಂಡಿದೆ.

    ಅಮೆರಿಕ ತನ್ನ ಪರಮಾಣು ಉದ್ಯಮಕ್ಕೆ ರಷ್ಯಾದಿಂದ ಯುರೇನಿಯಂ ಹೆಕ್ಸಾಫ್ಲೋರೈಡ್, ತನ್ನ ಇವಿ ಉದ್ಯಮಕ್ಕೆ ಪಲ್ಲಾಡಿಯಮ್, ರಸಗೊಬ್ಬರಗಳು ಮತ್ತು ರಾಸಾಯನಿಕಗಳನ್ನು ಈಗಲೂ ಆಮದು ಮಾಡಿಕೊಳ್ಳುತ್ತಿದೆ.

    ಈ ಹಿನ್ನೆಲೆಯಲ್ಲಿ ಕೇವಲ ಭಾರತವನ್ನು ಗುರಿಯಾಗಿಸಿಕೊಂಡು ಮಾತನಾಡುವುದು ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸವಾಗಿದೆ. ಯಾವುದೇ ಪ್ರಮುಖ ಆರ್ಥಿಕತೆಯಂತೆ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

  • ಎಫ್‌-35 ಖರೀದಿಸಲ್ಲ ಎಂದ ಭಾರತ – ತೆರಿಗೆ ಸಮರ ಆರಂಭಿಸಿದ ಟ್ರಂಪ್‌ಗೆ ಶಾಕ್‌

    ಎಫ್‌-35 ಖರೀದಿಸಲ್ಲ ಎಂದ ಭಾರತ – ತೆರಿಗೆ ಸಮರ ಆರಂಭಿಸಿದ ಟ್ರಂಪ್‌ಗೆ ಶಾಕ್‌

    ನವದೆಹಲಿ: ಡೊನಾಲ್ಡ್‌ ಟ್ರಂಪ್‌ (Donald Trump) ತೆರಿಗೆ ಸಮರ ಸಾರಿದ ಬೆನ್ನಲ್ಲೇ ಅಮೆರಿಕದಿಂದ ಎಫ್‌-35 ಯುದ್ಧ ವಿಮಾನವನ್ನು ಭಾರತ (India) ಖರೀದಿಸದೇ ಇರಲು ನಿರ್ಧರಿಸಿದೆ.

    ಹೌದು. ಭಾರತ ಐದನೇ ತಲೆಮಾರಿನ (Fifth Generation) ಯುದ್ಧ ವಿಮಾನ ಖರೀದಿಸಲು ಆಸಕ್ತಿ ವಹಿಸಿದೆ. ಮೋದಿ ಅವರ ಅಮೆರಿಕ ಪ್ರವಾಸದ ಸಮಯದಲ್ಲಿ ಟ್ರಂಪ್‌ ಅಮೆರಿಕ ಭಾರತಕ್ಕೆ ಎಫ್‌ 35 ವಿಮಾನ ನೀಡುವ ಆಫರ್‌ ನೀಡಿದ್ದರು.

    ಈ ಆಫರ್‌ ಪ್ರಕಟವಾದ ನಂತರ  ಭಾರತ ಎಫ್‌-35 (F-35) ಖರೀದಿ ಸಂಬಂಧ ಮಾತುಕತೆ ನಡೆಸಿತ್ತು. ಆದರೆ ಈಗ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ 25% ತೆರಿಗೆ ವಿಧಿಸಿದ ಬೆನ್ನಲ್ಲೇ ಭಾರತ ಎಫ್‌-35 ಖರೀದಿಸದೇ ಇರಲು ತೀರ್ಮಾನಿಸಿದೆ ಎಂದು ಬ್ಲೂಮ್‌ಬರ್ಗ್‌ ಭಾರತದ ಖಚಿತ ಮೂಲಗಳನ್ನು ಆಧರಿಸಿ ವರದಿ ಮಾಡಿದೆ.

    ನರೇಂದ್ರ ಮೋದಿ ಸರ್ಕಾರವು ದೇಶೀಯವಾಗಿ ಜಂಟಿಯಾಗಿ ರಕ್ಷಣಾ ಉಪಕರಣಗಳನ್ನು ವಿನ್ಯಾಸಗೊಳಿಸುವುದು ಮತ್ತು ತಯಾರಿ ಮಾಡಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ಅಮೆರಿಕಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: 69 ದೇಶಗಳಿಗೆ ಸುಂಕದ ಬರೆ – ಭಾರತಕ್ಕೆ 25%, ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ ಟ್ರಂಪ್‌

    ಬ್ಲೂಮ್‌ಬರ್ಗ್‌ ಮಾಧ್ಯಮ ವರದಿಯ ಬಗ್ಗೆ ಇಲ್ಲಿಯವರೆಗೆ ಭಾರತ, ಅಮೆರಿಕ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

    ಭಾರತದ ಬತ್ತಳಿಕೆಯಲ್ಲಿ ರಫೇಲ್‌ ಮತ್ತು ತೇಜಸ್‌ ಯುದ್ಧ ವಿಮಾನವಿದೆ. ಇದು Four and Half Generation Jet Fighters ವಿಭಾಗಕ್ಕೆ ಬರುತ್ತದೆ. ಎಫ್‌ 35 ಮತ್ತು ಸು 57 ಎರಡು ಐದನೇ ತಲೆಮಾರಿನ ಯುದ್ಧ ವಿಮಾನಗಳು. ಈ ತಲೆಮಾರಿನ ಯುದ್ಧ ವಿಮಾನಗಳು ಭಾರತದಲ್ಲಿ ಇಲ್ಲ.

     

    ಸದ್ಯ ಭಾರತದಲ್ಲಿ 2,229 ಯುದ್ಧ ವಿಮಾನಗಳಿವೆ, ಈ ಪೈಕಿ 600 ಫೈಟರ್‌ ಜೆಟ್‌ ವಿಮಾನಗಳಿವೆ. ಭಾರತ ಈಗ AMCA ಅಂದರೆ Advanced Medium Combat Aircraft ತಯಾರಿಸುತ್ತಿದೆ. ಬೆಂಗಳೂರಿನಲ್ಲಿ ನಡೆದ ಏರ್‌ಶೋದಲ್ಲಿ ಇದರ ಮಾದರಿಯನ್ನು ಅನಾವರಣಗೊಳಿಸಲಾಗಿತ್ತು. 2028ಕ್ಕೆ ಈ ವಿಮಾನ ನಿರ್ಮಾಣವಾಗುವ ಸಾಧ್ಯತೆಯಿದೆ. ಇದರ ಪ್ರಯೋಗಗಳು ಎಲ್ಲಾ ಯಶಸ್ವಿಯಾದರೆ 2034ಕ್ಕೆ ವಾಯುಸೇನೆಗೆ ಹಸ್ತಾಂತರವಾಗಬೇಕೆಂಬ ಗುರಿಯನ್ನು ಹಾಕಲಾಗಿದೆ. ಇದನ್ನೂ ಓದಿ: ಭಾರತದ್ದು ಸತ್ತೋದ ಆರ್ಥಿಕತೆ – ಹೀನ ಪದ ಬಳಸಿದ ಟ್ರಂಪ್‌

    ಇಲ್ಲೊಂದು ಸೂಕ್ಷ್ಮ ವಿಚಾರ ಇದೆ. ಆದರೆ ಅಮೆರಿಕ ಅಷ್ಟು ಸುಲಭವಾಗಿ ತಂತ್ರಜ್ಞಾನ ವರ್ಗಾವಣೆ ನೀಡುವುದಿಲ್ಲ. ಹೆಚ್‌ಎಎಲ್‌ ತೇಜಸ್‌ ವಿಮಾನಕ್ಕೆ ಎಂಜಿನ್‌ ನೀಡುವುದಾಗಿ ಅಮೆರಿಕದ General Electric ಹೇಳಿತ್ತು. ಆದರೆ ಸರಿಯಾದ ಸಮಯಕ್ಕೆ ಎಂಜಿನ್‌ ವಿತರಣೆ ಆಗಿಲ್ಲ. ಈ ಕಾರಣಕ್ಕೆ ತೇಜಸ್‌ ವಿಮಾನ ಉತ್ಪಾದನೆ ತಡವಾಗುತ್ತಿದೆ.

  • 69 ದೇಶಗಳಿಗೆ ಸುಂಕದ ಬರೆ – ಭಾರತಕ್ಕೆ 25%, ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ ಟ್ರಂಪ್‌

    69 ದೇಶಗಳಿಗೆ ಸುಂಕದ ಬರೆ – ಭಾರತಕ್ಕೆ 25%, ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ ಟ್ರಂಪ್‌

    – 10% ನಿಂದ 41% ವರೆಗೆ ಸುಂಕ ವಿಧಿಸುವ ಆದೇಶಕ್ಕೆ ಟ್ರಂಪ್ ‌ಸಹಿ

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ (Donald Trump) ಅವರು ವ್ಯಾಪಾರ ಒಪ್ಪಂದದ ಗಡುವಿಗೆ ಮುಂಚಿತವಾಗಿಯೇ ಹಲವು ವ್ಯಾಪಾರ ಪಾಲುದಾರ ದೇಶಗಳ ಮೇಲೆ ಹೆಚ್ಚಿನ ಸುಂಕದ (Tariffs) ಬರೆ ಎಳೆದಿದ್ದಾರೆ. ಸುಂಕ ವಿಧಿಸುವ ಹೊಸ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಗಳು ತಿಳಿಸಿವೆ.

    69 ವ್ಯಾಪಾರ ಪಾಲುದಾರ (Trading Partners) ದೇಶಗಳ ಮೇಲೆ 10% ರಿಂದ 41% ರಷ್ಟು ಹೆಚ್ಚಿನ ಆಮದು ಸುಂಕ ವಿಧಿಸಿದ್ದು, ಇದು 7 ದಿನಗಳಲ್ಲಿ ಜಾರಿಗೆ ಬರುತ್ತದೆ ಎಂದು ತಿಳಿಸಿದ್ದಾರೆ. ಆದೇಶಕ್ಕೆ ಸಹಿ ಹಾಕುವಾಗ, ವರ್ಷಗಳಿಂದ ನಡೆಯುತ್ತಿರುವ ವ್ಯಾಪಾರ ಅಸಮತೋಲನ ತೆಗೆದುಹಾಕಲು ಮತ್ತು ಅಮೆರಿಕದ ಆರ್ಥಿಕ ಭದ್ರತೆ ಬಲಪಡಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಟ್ರಂಪ್‌ ಹೇಳಿದ್ದಾರೆ. ಇದನ್ನೂ ಓದಿ: ಭಾರತದ್ದು ಸತ್ತೋದ ಆರ್ಥಿಕತೆ – ಹೀನ ಪದ ಬಳಸಿದ ಟ್ರಂಪ್‌

    ಕೆನಡಾ (Canada) ಮೇಲೆ ಸದ್ಯ 25% ರಷ್ಟು ಸುಂಕ ವಿಧಿಸಲಾಗುತ್ತಿದ್ದು, ಅದನ್ನ ಶುಕ್ರವಾರದಿಂದ 35%ಗೆ ಹೆಚ್ಚಿಸಲಾಗುತ್ತದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಅಲ್ಲದೇ ಈ ಆದೇಶದ ಅಡಿಯಲ್ಲಿ, ಭಾರತದ ಮೇಲೆ 25% ಸುಂಕ ವಿಧಿಸಲಾಗಿದೆ. ಪಾಕಿಸ್ತಾನದ ಮೇಲೆ 19%, ಬಾಂಗ್ಲಾದೇಶ ಮತ್ತು ವಿಯೆಟ್ನಾಂ ಮೇಲೆ 20%, ದಕ್ಷಿಣ ಆಫ್ರಿಕಾದ ಮೇಲೆ 30% ಮತ್ತು ಸ್ವಿಟ್ಜರ್ಲೆಂಡ್‌ನ ಮೇಲೆ 39% ರಷ್ಟು ಅತ್ಯಧಿಕ ಸುಂಕ ವಿಧಿಸಲಾಗಿದೆ. ಅಲ್ಲದೆ, ಕ್ಯಾಮರೂನ್, ಚಾಡ್, ಇಸ್ರೇಲ್, ಟರ್ಕಿಯೆ, ವೆನೆಜುವೆಲಾ ಮತ್ತು ಲೆಸೊಥೊ ದೇಶಗಳ ಮೇಲೆ 15% ಸುಂಕ ವಿಧಿಸಲಾಗಿದೆ. ಆದ್ರೆ ಚೀನಾ ಜೊತೆಗಿನ ವ್ಯಾಪಾರ ಒಪ್ಪಂದ ಇನ್ನೂ ಅಂತಿಮಗೊಂಡಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸುನಾಮಿ ಎಂದರೇನು? ಭೂಕಂಪಕ್ಕೂ ಇದಕ್ಕೂ ಏನು ಸಂಬಂಧ?

    ಯಾವ ದೇಶಕ್ಕೆ ಎಷ್ಟು ಸುಂಕ?
    * 41% ಸುಂಕ – ಸಿರಿಯಾ
    * 40% ಸುಂಕ – ಲಾವೋಸ್, ಮ್ಯಾನ್ಮಾರ್ (ಬರ್ಮಾ)
    * 39% ಸುಂಕ – ಸ್ವಿಟ್ಜರ್ಲೆಂಡ್
    * 35% ಸುಂಕ – ಇರಾಕ್, ಸೆರ್ಬಿಯಾ
    * 30% ಸುಂಕ – ಅಲ್ಜೀರಿಯಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಲಿಬಿಯಾ, ದಕ್ಷಿಣ ಆಫ್ರಿಕಾ
    * 25% ಸುಂಕ – ಭಾರತ, ಬ್ರೂನಿ, ಕಝಾಕಿಸ್ತಾನ್, ಮೊಲ್ಡೊವಾ, ಟುನೀಶಿಯಾ
    * 20% ಸುಂಕ – ಬಾಂಗ್ಲಾದೇಶ, ಶ್ರೀಲಂಕಾ, ತೈವಾನ್, ವಿಯೆಟ್ನಾಂ
    * 19% ಸುಂಕ – ಪಾಕಿಸ್ತಾನ, ಮಲೇಷ್ಯಾ, ಇಂಡೋನೇಷ್ಯಾ, ಕಾಂಬೋಡಿಯಾ, ಫಿಲಿಪೈನ್ಸ್, ಥೈಲ್ಯಾಂಡ್
    * 18% ಸುಂಕ – ನಿಕರಾಗುವಾ
    * 15% ಸುಂಕ – ಇಸ್ರೇಲ್, ಜಪಾನ್, ಟರ್ಕಿ, ನೈಜೀರಿಯಾ, ಘಾನಾ ಮತ್ತು ಇತರ ಹಲವು ದೇಶಗಳು
    * 10% ಸುಂಕ – ಬ್ರೆಜಿಲ್, ಯುನೈಟೆಡ್ ಕಿಂಗ್‌ಡಮ್ (ಯುಕೆ), ಫಾಕ್‌ಲ್ಯಾಂಡ್ ದ್ವೀಪಗಳು

  • ಭಾರತದ ಮೇಲೆ ಟ್ರಂಪ್‌ ತೆರಿಗೆ ಸಮರ : ಆ.1 ರಿಂದಲೇ 25% ಸುಂಕ

    ಭಾರತದ ಮೇಲೆ ಟ್ರಂಪ್‌ ತೆರಿಗೆ ಸಮರ : ಆ.1 ರಿಂದಲೇ 25% ಸುಂಕ

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಭಾರತದ ಮೇಲೆ ತೆರಿಗೆ ಸಮರ ಆರಂಭಿಸಿದ್ದಾರೆ. ಆಗಸ್ಟ್‌ 1 ರಿಂದ ಭಾರತದಿಂದ (Inidia) ಆಮದಾಗುವ ವಸ್ತುಗಳ ಮೇಲೆ 25% ತೆರಿಗೆ ವಿಧಿಸಲಾಗುವುದು ಘೋಷಿಸಿದ್ದಾರೆ.

    ಈ ಸಂಬಂಧ ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಭಾರತದ ಮೇಲೆ ತೆರಿಗೆ ವಿಧಿಸಲಾಗುವುದು ಎಂದು ಪ್ರಕಟಿಸಿದ್ದಾರೆ. ಇದನ್ನೂ ಓದಿ: ಯುರೋಪಿಯನ್‌ ಒಕ್ಕೂಟದೊಂದಿಗೆ ಟ್ರಂಪ್‌ ಬಿಗ್‌ ಡೀಲ್‌ – ಆಮದುಗಳ ಮೇಲೆ 15% ಸುಂಕ

    ಪೋಸ್ಟ್‌ನಲ್ಲಿ ಏನಿದೆ?
    ಭಾರತ ನಮ್ಮ ಸ್ನೇಹಿತನಾಗಿದ್ದರೂ, ನಾವು ವರ್ಷಗಳಲ್ಲಿ ಅವರೊಂದಿಗೆ ತುಲನಾತ್ಮಕವಾಗಿ ಕಡಿಮೆ ವ್ಯವಹಾರ ಮಾಡಿದ್ದೇವೆ ಎಂಬುದನ್ನು ನೆನಪಿಡಿ. ಭಾರತದ ಸುಂಕ ತುಂಬ ಹೆಚ್ಚಿವೆ. ಇದು ವಿಶ್ವದಲ್ಲೇ ಹೆಚ್ಚು.

    ಎಲ್ಲರೂ ರಷ್ಯಾ (Russia) ಉಕ್ರೇನ್‌ನಲ್ಲಿ ಮಾಡುತ್ತಿರುವ ಯುದ್ಧವನ್ನು ನಿಲ್ಲಿಸಬೇಕೆಂದು ಹೇಳುತ್ತಿರುವ ಸಮಯದಲ್ಲಿ ಭಾರತ ಯಾವಗಲೂ ತಮ್ಮ ಮಿಲಿಟರಿ ಉಪಕರಣಗಳ ಬಹುಪಾಲು ರಷ್ಯಾದಿಂದ ಖರೀದಿಸಿದೆ ಮತ್ತು ಚೀನಾದೊಂದಿಗೆ (China) ರಷ್ಯಾದಿಂದ ಹೆಚ್ಚು ಇಂಧನ ಖರೀದಿ ಮಾಡುತ್ತಿದೆ. ಈ ಕಾರಣಕ್ಕೆ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ 25% ತೆರಿಗೆ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.

  • ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹ ಇಂದು ನಭಕ್ಕೆ; ಭಾರತ-ಅಮೆರಿಕ ಮಹತ್ವದ ಹೆಜ್ಜೆ

    ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹ ಇಂದು ನಭಕ್ಕೆ; ಭಾರತ-ಅಮೆರಿಕ ಮಹತ್ವದ ಹೆಜ್ಜೆ

    – ನಿಸಾರ್‌ ಕಳುಹಿಸುವ ದತ್ತಾಂಶ ಎಲ್ಲಾ ದೇಶಗಳ ಅಧ್ಯಯನಕ್ಕೆ ಫ್ರೀ ಫ್ರೀ ಫ್ರೀ
    – 13,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಉಪಗ್ರಹ

    ಬೆಂಗಳೂರು/ವಾಷಿಂಗ್ಟನ್‌: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಅಮೆರಿಕದ ನಾಸಾ (NASA) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ʻನಾಸಾ – ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ (ನಿಸಾರ್ NISAR)ʼ ಉಪಗ್ರಹ ಇಂದು ಶ್ರೀಹರಿಕೋಟಾದಿಂದ ಉಡಾವಣೆಗೆ ಸಜ್ಜಾಗಿದೆ. ʻನಿಸಾರ್ʼ ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 5:40ಕ್ಕೆ ಇಸ್ರೋದ GSLV-F16 ಉಪಗ್ರಹದ ಬೆನ್ನೇರಿ ಬಾಹ್ಯಾಕಾಶಕ್ಕೆ ತೆರಳಲಿದೆ.

    ಈ ಉಪಗ್ರಹವು ಶ್ರೀಹರಿಕೋಟದಿಂದ (Sriharikota) ಉಡಾವಣೆ ಆಗುತ್ತಿರುವ 102ನೇ ಉಪಗ್ರಹವಾಗಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪ ನಿರ್ವಹಣೆ ಮತ್ತು ಕೃಷಿ ಕ್ಷೇತ್ರಗಳಿಗೆ ಅಮೂಲ್ಯವಾದ ಮಾಹಿತಿ ಒದಗಿಸಲಿದೆ. ಅಲ್ಲದೇ ನಿರ್ಗಲ್ಲು, ಹಿಮಫಲಕಗಳ ಬದಲಾವಣೆ, ಮಣ್ಣಿನಲ್ಲಿರುವ ತೇವಾಂಶ, ಪ್ರವಾಹ, ಅರಣ್ಯ ನಾಶ, ಬೆಳೆಯ ಆರೋಗ್ಯ, ನಗರೀಕರಣ ಮತ್ತು ಸೌಕರ್ಯಗಳ ಬದಲಾವಣೆ ಮುಂತಾದ ವಿಷಯಗಳನ್ನು ಒದಗಿಸಲಿದೆ. ಇದು ಭಾರತ-ಅಮೆರಿಕ ಸಹಭಾಗಿತ್ವದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

    ಇದರೊಡನೆ ಭಾರತ – ಅಮೆರಿಕದ ಮುಂದಿನ ಬಹು ವರ್ಷಗಳ ಬಾಹ್ಯಾಕಾಶ ಸಹಕಾರ ಆರಂಭಗೊಳ್ಳಲಿದೆ. ಕಕ್ಷೆಯತ್ತ ರಾಕೆಟ್‌ನ ಪ್ರಯಾಣ ಬಹುತೇಕ 19 ನಿಮಿಷ ತೆಗೆದುಕೊಳ್ಳಲಿದೆ. ಆ ಬಳಿಕ, ನಿಸಾರ್ ಉಪಗ್ರಹವನ್ನು ಅದರ ಉದ್ದೇಶಿತ-747 ಸನ್ ಸಿಂಕ್ರೊನಸ್ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ. ಈ ಯೋಜನೆಯನ್ನು ವಿಶೇಷವಾಗಿಸುವುದು ಕೇವಲ ಅದರ ಮಹತ್ವಾಕಾಂಕ್ಷೆ ಮತ್ತು ಸಾಮರ್ಥ್ಯಗಳು ಮಾತ್ರವಲ್ಲ. ಬದಲಿಗೆ, ನಿಸಾರ್ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ತೋರಿದ ತಾಳ್ಮೆ ಮತ್ತು ನಿಖರತೆಗಳೂ ಅಷ್ಟೇ ಮುಖ್ಯವಾಗಿವೆ.

    13,000 ಕೋಟಿ ವೆಚ್ಚ:
    ಇನ್ನೂ ನಿಸಾರ್‌ ಭೂಸರ್ವೇಕ್ಷಣಾ ಉಪಗ್ರಹಕ್ಕೆ 13,000 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹವಾಗಿ ಗುರುತಿಸಿಕೊಂಡಿದೆ. ಅಲ್ಲದೇ ನಿಸಾರ್‌ ಉಪಗ್ರಹವು ಒಂದು ಬಾರಿಗೆ 242 ಕಿಮೀ ಭೂವಿಸ್ತೀರ್ಣವನ್ನು ನೋಡುವ ಸಾಮರ್ಥ್ಯ ಹೊಂದಿದೆ. 97 ನಿಮಿಷಕ್ಕೆ ಭೂಮಿಗೆ ಒಂದು ಸುತ್ತು ಬರಲಿದ್ದು, 12 ದಿನಗಳಿಗೆ ಒಮ್ಮೆ ಇಡೀ ಭೂಮಿ ಸುತ್ತಲಿದೆ. ಮುಖ್ಯವಾಗಿ ನಿಸಾರ್‌ ಉಪಗ್ರಹವು ಕಳುಹಿಸುವ ಎಲ್ಲ ಮಾಹಿತಿಗಳು ಹಾಗೂ ದತ್ತಾಂಶಗಳನ್ನು ಉಚಿತವಾಗಿ ಎಲ್ಲಾ ದೇಶಗಳು ಅಧ್ಯಯನಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ.

    ಕಕ್ಷೆಯತ್ತ ಪಯಣ ಮತ್ತು ಅದರಾಚೆಗಿನ ಕಾರ್ಯ
    ನಿಸಾರ್ ಉಪಗ್ರಹ ಭೂಮಿಯಿಂದ 747 ಕಿಲೋಮೀಟರ್ ಎತ್ತರದಲ್ಲಿರುವ ತನ್ನ ಉದ್ದೇಶಿತ ಕಕ್ಷೆಯನ್ನು ತಲುಪಿದ ಬಳಿಕ ಅದರ ನೈಜ ಕಾರ್ಯ ಆರಂಭಗೊಳ್ಳುತ್ತದೆ. ಕಕ್ಷೆಗೆ ಸೇರಿದ ಬಳಿಕ, ಉಪಗ್ರಹದ 90 ದಿನಗಳ ಅವಧಿಯ, ಮುಖ್ಯವಾದ ‘ಕಮಿಷನಿಂಗ್ ಹಂತ’ ಆರಂಭಗೊಳ್ಳುತ್ತದೆ. ಇದನ್ನು ‘ಇನ್ ಆರ್ಬಿಟ್ ಚೆಕೌಟ್’ ಎಂದೂ ಕರೆಯಲಾಗಿದ್ದು, ಈ ಅವಧಿಯಲ್ಲಿ ಉಪಗ್ರಹವನ್ನು ಅದರ ವೈಜ್ಞಾನಿಕ ಗುರಿಗಳಿಗೆ ಸೂಕ್ತವಾಗಿ ಸಿದ್ಧಪಡಿಸಲಾಗುತ್ತದೆ. ಅಂದರೆ, ಉಪಗ್ರಹ ಇಂದು ಸಂಜೆ ಉಡಾವಣೆಗೊಂಡರೂ, ನಿಸಾರ್ ಅದರ ಸಂಪೂರ್ಣ ವೈಜ್ಞಾನಿಕ ಕಾರ್ಯಾಚರಣೆಗಳಲ್ಲಿ ತೊಡಗಲು ಭಾರತ ಅಕ್ಟೋಬರ್ ತಿಂಗಳ ಕೊನೆಯ ಭಾಗದ ತನಕ ಕಾಯಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

    ಕಮಿಷನಿಂಗ್ ಹಂತದ ವಿಶೇಷತೆ ಏನು?
    ಕಮಿಷನಿಂಗ್ ಹಂತದ ವಿಶೇಷ ಅಂಶವೆಂದರೆ, ನಿಸಾರ್ ಉಪಗ್ರಹದ 12 ಮೀಟರ್ ವ್ಯಾಸ ಹೊಂದಿರುವ ಬೃಹತ್ ಪ್ರತಿಫಲಕವನ್ನು (ರಿಫ್ಲೆಕ್ಟರ್) ಬಾಹ್ಯಾಕಾಶದಲ್ಲಿ ಬಿಡಿಸುವುದಾಗಿದೆ. ಇದು ಭೂ ವೀಕ್ಷಣಾ ಉಪಗ್ರಹದೊಡನೆ ಇಲ್ಲಿಯ ತನಕ ಬಾಹ್ಯಾಕಾಶಕ್ಕೆ ತೆರಳಿರುವ ಅತಿದೊಡ್ಡ ಆ್ಯಂಟೆನಾ ಆಗಿದೆ. ಈ ಬೃಹತ್ ಆ್ಯಂಟೆನಾವನ್ನು ಬಾಹ್ಯಾಕಾಶದಲ್ಲಿ ಪೂರ್ಣ ಪ್ರಮಾಣದಲ್ಲಿ ತೆರೆದಾಗ ಅದು ಬಹುತೇಕ ಒಂದು ಟೆನ್ನಿಸ್ ಆಟದ ಮೈದಾನದಷ್ಟು ದೊಡ್ಡದಾಗಿರಲಿದೆ. ಇದನ್ನು ಬಾಹ್ಯಾಕಾಶದ ತೀವ್ರ ವಾತಾವರಣದಲ್ಲಿ ಅತ್ಯಂತ ಜಾಗರೂಕವಾಗಿ ಬಿಡಿಸಬೇಕಾಗುತ್ತದೆ. ಆ್ಯಂಟೆನಾ ಬಿಡಿಸುವಿಕೆ ಅತ್ಯಂತ ಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಅದರ ಪ್ರತಿಯೊಂದು ಹಂತವನ್ನೂ ಇಂಜಿನಿಯರ್‌ಗಳು ವರ್ಷಾನುಗಟ್ಟಲೆ ಭೂಮಿಯಲ್ಲೇ ನಿಖರವಾಗಿ ಅಭ್ಯಾಸ ನಡೆಸಿ, ಕರಾರುವಾಕ್ಕಾಗಿ ರೂಪಿಸಿದ್ದಾರೆ.