Tag: USA

  • ಅಮೆರಿಕಕ್ಕೆ ಭಾರತದಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು – ಟ್ರಂಪ್ ಈ ಮಾತ್ರೆಗೆ ಬೇಡಿಕೆ ಇಟ್ಟಿದ್ದು ಯಾಕೆ?

    ಅಮೆರಿಕಕ್ಕೆ ಭಾರತದಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು – ಟ್ರಂಪ್ ಈ ಮಾತ್ರೆಗೆ ಬೇಡಿಕೆ ಇಟ್ಟಿದ್ದು ಯಾಕೆ?

    ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿಯ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡಲು ಒಪ್ಪಿಗೆ ಸೂಚಿಸಿದೆ.

    ಭಾರತ ಸರ್ಕಾರ ದೇಶದಲ್ಲಿ ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಮಲೇರಿಯಾ ರೋಗದ ವಿರುದ್ಧವಾಗಿ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರಾಸಿಟಮೊಲ್ ಸೇರಿದಂತೆ 16 ಮಾತ್ರೆಗಳ ರಫ್ತಿಗೆ ನಿಷೇಧ ಹೇರಿತ್ತು. ಈ ಮಧ್ಯೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿಂದ ಕೊರೊನಾ ಪೀಡಿತ ರೋಗಿಗಳು ಗುಣವಾಗುತ್ತಾರೆ ಎನ್ನುವ ವಿಚಾರ ಅಧ್ಯಯನದಿಂದ ತಿಳಿದು ಬಂದಿತ್ತು.

    ಅಮೆರಿಕದಲ್ಲಿ ಕೊರೊನಾ ಸಾವು ನೋವು ಪ್ರಮಾಣ ತೀವ್ರವಾಗುತ್ತಿರುವ ಬೆನ್ನಲ್ಲೇ ಈ ವರದಿಯಿಂದ ಎಚ್ಚೆತ್ತ ಟ್ರಂಪ್ ಪ್ರಧಾನಿ ಮೋದಿಗೆ ಕರೆ ಮಾಡಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡಬೇಕೆಂದು ಕೇಳಿಕೊಂಡಿದ್ದರು.

    ಟ್ರಂಪ್ ಮನವಿಯ ಬೆನ್ನಲ್ಲೇ ಭಾರತ ಸರ್ಕಾರ ಇಂದು ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರಾಸಿಟಮೊಲ್ ಮಾತ್ರೆಗಳ ಮೇಲಿನ ರಫ್ತನ್ನು ಹಿಂದಕ್ಕೆ ಪಡೆದಿದೆ.

    ಈ ಸಂಬಂಧ ಭಾರತದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿ, ಕೊರೊನಾ ಸಂಕಷ್ಟದ ಸಮಯಯದಲ್ಲಿ ಮಾನವೀಯ ನೆಲೆಯಲ್ಲಿ ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರಾಸಿಟಮೊಲ್ ಮಾತ್ರೆಗಳನ್ನು ಹತ್ತಿರದ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ ಎಂದು ತಿಳಿಸಿದೆ.

    ಕಳೆದ ವಾರವೇ ಟ್ರಂಪ್ ಮನವಿ ಮಾಡಿದ್ದರೂ ಭಾರತ ಈ ಬಗ್ಗೆ ಶೀಘ್ರವೇ ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ.

    ಇಂದು ವಿದೇಶಾಂಗ ಇಲಾಖೆಯ ವಕ್ತಾರ ಶ್ರೀವತ್ಸವ ಪ್ರತಿಕ್ರಿಯಿಸಿ, ಆ ದೇಶದ ಪ್ರಜೆಗಳ ರಕ್ಷಣೆ ಮಾಡುವುದು ಯಾವುದೇ ಜವಾಬ್ದಾರಿಯುತ ಸರ್ಕಾರದ ಮೊದಲ ಕೆಲಸ. ಹೀಗಾಗಿ ಔಷಧಿಗಳು ನಮ್ಮ ಬೇಡಿಕೆಗೆ ತಕ್ಕಂಥೆ ಇದೆಯೇ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಈ ಕಾರಣಕ್ಕಾಗಿ ನಾವು ತಾತ್ಕಾಲಿಕವಾಗಿ ಔಷಧಿಗಳ ರಫ್ತಿಗೆ ನಿಷೇಧವನ್ನು ಹೇರಲಾಗಿತ್ತು. ಈಗ ನಮ್ಮ ಬೇಡಿಕೆಯನ್ನು ನೋಡಿಕೊಂಡು ಔಷಧಗಳ ರಫ್ತಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಕೊರೊನಾ ಮೇಲೆ ಪರಿಣಾಮ ಬೀರುತ್ತಾ?
    ಅಮೆರಿಕದಲ್ಲಿ 3.60 ಲಕ್ಷ ಮಂದಿಗೆ ಕೊರೊನಾ ಬಂದಿದ್ದು ಈಗಾಗಲೇ 10 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕೊರೊನಾಗೆ ಸಧ್ಯಕ್ಕೆ ಯಾವುದೇ ಔಷಧಿ ಇಲ್ಲ. ಹೀಗಾಗಿ ಇಂದು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾ ಎನ್ನವ ಪ್ರಶ್ನೆ ಏಳುವುದು ಸಹಜ.

    ಮಲೇರಿಯಾ ರೋಗದ ವಿರುದ್ಧವಾಗಿ ಹೋರಾಡಲು ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಈ ಮಾತ್ರೆಗಳನ್ನು ದೇಶದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ.

    ಮಲೇರಿಯಾಗೆ ನೀಡುವ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದಲೇ ಕೊರೊನಾ ಗುಣವಾಗುತ್ತದೆ ಎಂದು ಪೂರ್ಣವಾಗಿ ಹೇಳಲು ಬರುವುದಿಲ್ಲ. ಯಾಕೆಂದರೆ ವಿಶ್ವ ಆರೋಗ್ಯ ಸಂಸ್ಥೆಯೇ ಯಾವುದೇ ಔಷಧಿಯಿಂದ ಕೊರೊನಾ ವಾಸಿಯಾಗಿದ್ದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದೆ.

    ಪರಿಸ್ಥಿತಿ ಹೀಗಿರುವಾಗ ತಾತ್ಕಾಲಿಕವಾಗಿ ಕೊರೊನಾಗೆ ಯಾವ ಮಾತ್ರೆ ನೀಡಿದರೆ ಕಡಿಮೆಯಾಗುತ್ತದೆ ಎನ್ನುವ ಬಗ್ಗೆ ಕಂಪನಿಯೊಂದು ಅಧ್ಯಯನ ನಡೆಸಿದೆ. ಹಲವು ದೇಶಗಳಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಜಾಗತಿಕವಾಗಿ ಆರೋಗ್ಯ ಕುರಿತಾಗಿ ಅಧ್ಯಯನ ಮಾಡುವ sermo ಕಂಪನಿ ತಿಳಿಸಿದ ಹಿನ್ನೆಲೆಯಲ್ಲಿ ಈ ಮಾತ್ರೆಗೆ ಬೇಡಿಕೆ ಹೆಚ್ಚಾಗಿದೆ.

    ಅಧ್ಯಯನ ಹೇಳಿದ್ದು ಏನು?
    ಕೊರೊನಾ ತೀವ್ರವಾಗಿ ಹರಡುತ್ತಿರುವ ಯುರೋಪ್, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 30 ದೇಶಗಳ ಒಟ್ಟು 6,227 ಮಂದಿ ವೈದ್ಯರನ್ನು ಸಂಪರ್ಕಿಸಿ ಅಧ್ಯಯನ ನಡೆಸಲಾಗಿದೆ. ಈ ಪೈಕಿ ಶೇ.37ರಷ್ಟು ಮಂದಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಕೊರೊನಾ ತಡೆಗಟ್ಟಲು ನೀಡಲಾಗುವ ಔಷಧಿಗಳ ಪೈಕಿ ಶೇ.56 ನೋವು ನಿವಾರಕಗಳು, ಶೇ.41 ಅಜಿಥ್ರೊಮೈಸಿನ್, ಶೇ.33 ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗುತ್ತಿದೆ. ಈ ಪೈಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಉತ್ತಮ ಪರಿಣಾಮ ಬೀರಿದೆ ಎಂದು ಅಧ್ಯಯನ ತಿಳಿಸಿದೆ.

    ಸ್ಪೇನ್ ಶೇ.72, ಇಟಲಿ ಶೇ.49, ಬ್ರೆಜಿಲ್ ಶೇ.41, ಮೆಕ್ಸಿಕೋ ಶೇ.39, ಫ್ರಾನ್ಸ್ ಶೇ.28, ಅಮೆರಿಕ ಶೇ.23, ಜರ್ಮನಿ ಶೇ.17, ಕೆನಡಾ ಶೇ.16, ಇಂಗ್ಲೆಂಡ್ ಶೇ.13, ಜಪಾನ್ ಶೇ.7 ರಷ್ಟು ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗಿದೆ.

    ಟ್ರಂಪ್ ಹೇಳಿದ್ದು ಏನು?
    ಇಂದಿನ ತುರ್ತು ಪರಿಸ್ಥಿತಿಯಲ್ಲಿ ಲ್ಯಾಬ್‍ನಲ್ಲಿ ಕೊರೊನಾಗೆ ಔಷಧಿ ಕಂಡು ಹುಡುಕುವುದು ಬಹಳ ಸವಾಲಿನ ಕೆಲಸ. ಹೀಗಿರುವಾಗ ಅಮೆರಿಕನ್ನರ ರಕ್ಷಣೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಅಗತ್ಯವಾಗಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ಎರಡು ಮೆಡಿಕಲ್ ಇತಿಹಾಸದಲ್ಲಿ ಗೇಮ್ ಚೇಂಜರ್ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ನಾನು ಕೂಡ ಈ ಮಾತ್ರೆಯನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದರು.

    ಅಧ್ಯಯನದ ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್ ಮಾಡಬಹುದು: www.sermo.com/press-releases

  • 345 ಬಲಿ, ಅಮೆರಿಕದಲ್ಲಿ 1 ಲಕ್ಷ ಗಡಿ ದಾಟಿತು ಕೊರೊನಾ ಪ್ರಕರಣ

    345 ಬಲಿ, ಅಮೆರಿಕದಲ್ಲಿ 1 ಲಕ್ಷ ಗಡಿ ದಾಟಿತು ಕೊರೊನಾ ಪ್ರಕರಣ

    ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1 ಲಕ್ಷದ ಗಡಿಯನ್ನು ದಾಟಿದ್ದು ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

    ಕಳೆದ 24 ಗಂಟೆಯಲ್ಲಿ ಅಮೆರಿಕದಲ್ಲಿ 18 ಸಾವಿರ ಮಂದಿಗೆ ಕೊರೊನಾ ಬಂದಿದ್ದರೆ 345 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಅಮೆರಿಕದಲ್ಲಿ 1.04 ಲಕ್ಷ ಜನರಿಗೆ ಕೊರೊನಾ ಬಂದಿದೆ. ಈ ಪೈಕಿ 1,706 ಮಂದಿ ಕೊರೊನಾದಿಂದ ಮೃತಪಟ್ಟರೆ 2,465 ಮಂದಿ ಗುಣಮುಖರಾಗಿದ್ದಾರೆ.

    ಒಟ್ಟು ವಿಶ್ವದಲ್ಲಿ 5,96,852 ಮಂದಿಗೆ ಕೊರೊನಾ ಬಂದಿದ್ದು 27,352 ಮಂದಿ ಮೃತಪಟ್ಟಿದ್ದಾರೆ. ಸದ್ಯ ಈಗ 4.36ಲಕ್ಷ ಮಂದಿ ಕೊರೊನಾದಿಂದ ಬಳಲುತ್ತಿದ್ದು 1.33 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ಇಟಲಿಯಲ್ಲಿ 969 ಮಂದಿ ಮೃತಪಟ್ಟರೆ, ಸ್ಪೇನ್‍ನಲ್ಲಿ 773 ಮಂದಿ ಮೃತರಾಗಿದ್ದಾರೆ.

    ಅತಿ ಹೆಚ್ಚು ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಅಮೆರಿಕ(1.04 ಲಕ್ಷ), ಇಟಲಿ(86,498), ಚೀನಾ(81,285), ಸ್ಪೇನ್ (65,718), ಜರ್ಮನಿ(50,871) ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ಪಡೆದುಕೊಂಡಿದೆ.

  • ಅಮೆರಿಕದಲ್ಲಿ ಒಂದೇ ದಿನ 100ಕ್ಕೂ ಹೆಚ್ಚು ಸಾವು – ಏ.6ವರೆಗೆ ನ್ಯೂಯಾರ್ಕ್‍ನಲ್ಲಿ ಮನೆಯಿಂದ ಹೊರಬರುವಂತಿಲ್ಲ

    ಅಮೆರಿಕದಲ್ಲಿ ಒಂದೇ ದಿನ 100ಕ್ಕೂ ಹೆಚ್ಚು ಸಾವು – ಏ.6ವರೆಗೆ ನ್ಯೂಯಾರ್ಕ್‍ನಲ್ಲಿ ಮನೆಯಿಂದ ಹೊರಬರುವಂತಿಲ್ಲ

    ವಾಷಿಂಗ್ಟನ್: ಇಟಲಿ, ಸ್ಪೇನ್ ಬಳಿಕ ಅಮೆರಿಕದಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಭಾನುವಾರ ಒಂದೇ ದಿನ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ಒಟ್ಟು 33,461 ಕೊರೊನಾ ಪೀಡಿತರಿದ್ದು 431 ಮಂದಿ ಮೃತಪಟ್ಟಿದ್ದಾರೆ.

    ಕೊರೊನಾ ಪ್ರಕರಣಗಳ ಪೈಕಿ 15,168 ರೋಗಿಗಳು ನ್ಯೂಯಾರ್ಕ್ ರಾಜ್ಯದವರಾಗಿದ್ದಾರೆ. ಭಾರೀ ಸಂಖ್ಯೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಏಪ್ರಿಲ್ 6 ರವರೆಗೆ ಯಾರೂ ಮನೆಯಿಂದ ಹೊರ ಬಾರದಂತೆ ಆದೇಶ ಪ್ರಕಟಿಸಿದೆ.

    ನ್ಯೂಯಾರ್ಕ್ ನಗರದಲ್ಲಿ ಪತ್ತೆಯಾದ 15 ಸಾವಿರಕ್ಕೂ ಅಧಿಕ ಪ್ರಕರಣಗಳಲ್ಲಿ ಶೇ.53 ಜನ 18 ರಿಂದ 49ರ ವಯಸ್ಸಿನವರಾಗಿದ್ದು ಆತಂಕಕ್ಕೆ ಕಾರಣವಾಗಿದೆ.

    ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ಕನೆಕ್ಟಿಕಟ್, ನ್ಯೂ ಜೆರ್ಸಿಯಲ್ಲೂ ಕೊರೊನಾ ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಿರಾಣಿ ಅಂಗಡಿ, ತರಕಾರಿ, ಮೆಡಿಕಲ್ ಸೇರಿ ದಿನನಿತ್ಯದ ಬಳಕೆ ಅಂಗಡಿಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ಮುಚ್ಚುವಂತೆ ಆದೇಶ ಪ್ರಕಟಿಸಲಾಗಿದೆ.

  • ಮೊದಲ ಬಾರಿಗೆ ಕೊರೊನಾ ಲಸಿಕೆ ಅಮೆರಿಕದಲ್ಲಿ ಪ್ರಯೋಗ

    ಮೊದಲ ಬಾರಿಗೆ ಕೊರೊನಾ ಲಸಿಕೆ ಅಮೆರಿಕದಲ್ಲಿ ಪ್ರಯೋಗ

    ವಾಷಿಂಗ್ಟನ್: ಕೊರೊನಾಗೆ ವಿಶ್ವಾದ್ಯಂತ ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದು, ಈಗ ಮೊದಲ ಬಾರಿಗೆ ಅಮೆರಿಕದಲ್ಲಿ ಕೊರೊನಾ ಲಸಿಕೆಯನ್ನು ವ್ಯಕ್ತಿಯೊಬ್ಬರ ಮೇಲೆ ಪ್ರಯೋಗಿಸಲಾಗಿದೆ.

    ಸಾಧಾರಣವಾಗಿ ಒಂದು ಔಷಧಿಯನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿದ ಬಳಿಕ ಮಾನವನ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಆದರೆ ಈಗ ಕೊರೊನಾ ಔಷಧಿ ವಿಶ್ವದೆಲ್ಲೆಡೆ ಮರಣ ಮೃದಂಗ ಬಾರಿಸುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯ ಮೇಲೆ ಪ್ರಯೋಗ ಮಾಡಲಾಗಿದೆ.

    ಬಯೋಟೆಕ್ನಾಲಜಿ ಕಂಪನಿ ಮಾಡರ್ನಾ ಮತ್ತು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೆಲ್ತ್ ವಿಜ್ಞಾನಿಗಳು ಜಂಟಿಯಾಗಿ ಎಂಆರ್‌ಎನ್ಎ-1273 ಹೆಸರಿನ ಔಷಧಿಯನ್ನು ಕಂಡು ಹಿಡಿದಿದ್ದು ಸಿಯಾಟಲ್‍ನಲ್ಲಿರುವ ಹೆಲ್ತ್ ರಿಸರ್ಚ್ ಇನ್‍ಸ್ಟಿಟ್ಯೂಟ್ ನಲ್ಲಿ 43 ವರ್ಷದ ಮಹಿಳೆ ಮೇಲೆ ಪ್ರಯೋಗಿಸಲಾಗಿದೆ.

    ಎಂಆರ್‌ಎನ್ಎ-1273 ಔಷಧಿ ಪ್ರಯೋಗಕ್ಕೆ ಆರೋಗ್ಯವಂತ 45 ಮಂದಿ ವಯಸ್ಕರನ್ನು ಆಯ್ಕೆ ಮಾಡಲಾಗಿದೆ. ಇವರಿಗೆ 2 ಬಾರಿ ಔಷಧಿಯನ್ನು ನೀಡಲಾಗುತ್ತದೆ. ಈ ಔಷಧಿ ನೀಡಿದ ನಂತರ ಈ ವ್ಯಕ್ತಿಗಳ ದೇಹದಲ್ಲಿ ಆರೋಗ್ಯದಲ್ಲಿ ಏನು ಬದಲಾಗುತ್ತದೆ ಮತ್ತು ಎಷ್ಟು ಪ್ರಮಾಣದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬುದನ್ನು ತಿಳಿಯಲಾಗುತ್ತದೆ. ಇದಾದ ಬಳಿಕ ಕೊರೊನಾ ಪೀಡಿತ ವ್ಯಕ್ತಿಯ ದೇಹದಲ್ಲಿರುವ ವೈರಸ್ ವಿರುದ್ಧ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ತಿಳಿಯಲಾಗುತ್ತದೆ.

    ಚೀನಾದಲ್ಲಿ ಕೊರೊನಾ ವೈರಸ್ ಪತ್ತೆಯಾದ ನಂತರ ಸಂಶೋಧನಾ ತಂಡ ಫೆ.7ರಂದು  ಔಷಧಿ ತಯಾರಿಸಿತ್ತು. ಬಳಿಕ ವಿವಿಧ ಪರೀಕ್ಷೆಗೆ ಒಳಪಟ್ಟು ಈಗ ಪ್ರಯೋಗಿಸಲಾಗುತ್ತದೆ.

  • ಅಮೆರಿಕದಿಂದ ಬಂದ ಬೆಂಗಳೂರಿನ ಟೆಕ್ಕಿಗೆ ಕೊರೊನಾ!

    ಅಮೆರಿಕದಿಂದ ಬಂದ ಬೆಂಗಳೂರಿನ ಟೆಕ್ಕಿಗೆ ಕೊರೊನಾ!

    – ಪತ್ನಿ, ಪುತ್ರಿ, ಚಾಲಕನಿಗೆ ಬೆಂಗಳೂರಲ್ಲಿ ಚಿಕಿತ್ಸೆ

    ಬೆಂಗಳೂರು: ಕರ್ನಾಟಕದಲ್ಲಿ ಇಂದು ರಾಜ್ಯದ ಮೊದಲ ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿದೆ. ಅಮೆರಿಕಾದಿಂದ ಬಂದ ಬೆಂಗಳೂರಿನ ಸಾಫ್ಟ್‍ವೇರ್ ಇಂಜಿನಿಯರ್ ತಪಾಸಣೆ ವೇಳೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ. ಇಂದು ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಕೊರೊನಾ ಸೋಂಕು ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

    ಅಮೆರಿಕದಿಂದ ಬೆಂಗಳೂರಿಗೆ ಬಂತು ಕೊರೊನಾ!: ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇಡೀ ಕುಟುಂಬವನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮೆರಿಕದಿಂದ ಬಂದಿದ್ದ ಸಾಫ್ಟ್‍ವೇರ್ ಇಂಜಿನಿಯರ್‍ಗೆ ಕೊರೊನ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಾರ್ಚ್ 1 ರಂದು ಟೆಕ್ಕಿ ಅಮೆರಿಕದಿಂದ ಬಂದಿದ್ದರು. ಕೊರೊನಾ ಪೀಡಿತ ವ್ಯಕ್ತಿ, ಅವರ ಪತ್ನಿ, ಮಗಳು ಹಾಗೂ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು. ಮಾರ್ಚ್ 1 ರಂದು ಟೆಕ್ಕಿ ಪ್ರಯಾಣ ಮಾಡಿದ ವಿಮಾನದ ಸಹ ಪ್ರಯಾಣಿಕರನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಕರ್ನಾಟಕ ಮೂಲದ ವ್ಯಕ್ತಿ ಅಮೆರಿಕಾದಿಂದ ಬಂದಿದ್ದಾರೆ ಎಂದು ಸುಧಾಕರ್ ಮಾಹಿತಿ ನೀಡಿದರು.

    ಸುಮಾರು 40 ವರ್ಷ ವಯಸ್ಸಿನ ಟೆಕ್ಕಿ ಅಮೆರಿಕದಿಂದ ಮಾರ್ಚ್ 1ರಂದು ಬೆಳಿಗ್ಗೆ 8.45ಕ್ಕೆ ಬೆಂಗಳೂರಿಗೆ ಬಂದಿದ್ದಾರೆ. ಸೋಂಕಿತ ವ್ಯಕ್ತಿ, ಪತ್ನಿ ಮತ್ತು ಒಂದು ಮಗು ಜೊತೆ ಡ್ರೈವರ್ ಎಲ್ಲರನ್ನೂ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಅವರು ಪ್ರಯಾಣ ಬೆಳೆಸಿದ ವಿಮಾನದಲ್ಲಿ ಅವರ ಅಕ್ಕಪಕ್ಕ ಕುಳಿತಿದ್ದ ವ್ಯಕ್ತಿಗಳ ಬಗ್ಗೆಯೂ ಗಮನ ಹರಿಸುತ್ತಿದ್ದೇವೆ ಎಂದು ಸುಧಾಕರ್ ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಸಚಿವ ಸುಧಾಕರ್, ಕೇಂದ್ರ ಆರೋಗ್ಯ ಸಚಿವರ ಜೊತೆ ವೀಡಿಯೋ ಕಾನ್ಫರೆನ್ಸ್ ಮಾಡಿದರು. ವೀಡಿಯೋ ಕಾನ್ಫರೆನ್ಸ ನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ಕೊರೊನಾ ವೈರಸ್ ಹರಡದ ರೀತಿ ರಾಜ್ಯ ಆರೋಗ್ಯ ಇಲಾಖೆ ಮಾಡಿಕೊಂಡಿರುವ ಕ್ರಮದ ಬಗ್ಗೆ ಚರ್ಚೆ ನಡೆಯಿತು.

     

  • ರಾಜ್ಯದಲ್ಲಿ ಮೊದಲ ಕೊರೊನಾ ಕೇಸ್ ದಾಖಲು – ಅಮೆರಿಕದಿಂದ ಬಂದ ಟೆಕ್ಕಿಗೆ ಸೋಂಕು

    ರಾಜ್ಯದಲ್ಲಿ ಮೊದಲ ಕೊರೊನಾ ಕೇಸ್ ದಾಖಲು – ಅಮೆರಿಕದಿಂದ ಬಂದ ಟೆಕ್ಕಿಗೆ ಸೋಂಕು

    ಬೆಂಗಳೂರು: ರಾಜ್ಯದಲ್ಲಿ ಮೊದಲ ಕೊರೊನಾ ಪ್ರಕರಣ ಅಧಿಕೃತವಾಗಿ ಪ್ರಕಟವಾಗಿದೆ. ಅಮೆರಿಕದಿಂದ ಆಗಮಿಸಿದ  ಸಾಫ್ಟ್ ವೇರ್ ಎಂಜಿನಿಯರ್ ಅವರ ದೇಹದಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

    ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಮಾರ್ಚ್ 1 ರಂದು ಅಮೆರಿಕದಿಂದ ಆಗಮಿಸಿದ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಿದ್ದು ಪಾಸಿಟಿವ್ ಫಲಿತಾಂಶ ಬಂದಿದೆ ಎಂದು ತಿಳಿಸಿದೆ.

    ಸಾಫ್ಟ್ ವೇರ್ ಎಂಜಿನಿಯರ್ , ಪತ್ನಿ, ಮಗಳ ಜೊತೆ ಚಾಲಕನನ್ನು  ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ 982 ಮಂದಿ ಮೇಲೆ ನಿಗಾ ಇರಿಸಲಾಗಿದೆ. ಈ ಪೈಕಿ ಕಳೆ 28 ದಿನಗಳಿಂದ 266 ಮಂದಿ ಮೇಲೆ ನಿಗಾ ಇಟ್ಟಿದ್ದರೆ 700 ಮಂದಿ ಮನೆಯಲ್ಲೇ ಪ್ರತ್ಯೇಕವಾಗಿ ನಿಗಾ ಇರಿಸಲಾಗಿದೆ.

    ಇಂದು 12 ಮಂದಿ ವಿವಿಧ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಲ್ಲಿಯವರೆಗೆ 432 ಮಂದಿಯ ರಕ್ತದ ಮಾದರಿಯನ್ನು ಲ್ಯಾಬ್ ಗೆ ಕಳುಹಿಸಲಾಗಿದ್ದು 364 ಮಂದಿ ಫಲಿತಾಂಶ ನೆಗೆಟಿವ್ ಬಂದಿದೆ. 68 ಮಂದಿಯ ಫಲಿತಾಂಶ ಲಭ್ಯವಾಗಬೇಕಿದೆ.

    ಬೆಂಗಳೂರಿನಲ್ಲಿ 8, ಮಂಗಳೂರಿನಲ್ಲಿ 2, ಬಾಗಲಕೋಟೆ ಮತ್ತು ಹಾಸನದಲ್ಲಿ ತಲಾ ಒಂದೊಂದು ಮಂದಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.

    ಇಲ್ಲಿಯವರೆಗೆ ಒಟ್ಟು 91,911 ಮಂದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 61,585 ಮಂದಿ, ಮಂಗಳೂರಿನಲ್ಲಿ 25,003 ಮಂದಿಯನ್ನು ಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಿಸಲಾಗಿದೆ. ಕಾರವಾರ ಮತ್ತು ಮಂಗಳೂರು ಬಂದರಿನಲ್ಲಿ ಒಟ್ಟು 5,323 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ ಎಂದು ತಿಳಿಸಿದೆ.

  • ಇರಾನ್, ಅಮೆರಿಕ ಸಂಘರ್ಷ- ಬಾಗ್ದಾದ್ ಮೇಲೆ ಮತ್ತೆ 2 ಕ್ಷಿಪಣಿ ದಾಳಿ

    ಇರಾನ್, ಅಮೆರಿಕ ಸಂಘರ್ಷ- ಬಾಗ್ದಾದ್ ಮೇಲೆ ಮತ್ತೆ 2 ಕ್ಷಿಪಣಿ ದಾಳಿ

    ಬಾಗ್ದಾದ್: ಇರಾಕ್‍ನಲ್ಲಿರುವ ಅಮೆರಿಕ ಸೇನಾ ಕ್ಯಾಂಪ್‍ಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಮತ್ತೆ ಇರಾಕ್ ಮೇಲೆ 2 ಕ್ಷಿಪಣಿ ದಾಳಿ ನಡೆದಿದೆ.

    ಇರಾಕ್ ರಾಜಧಾನಿ ಬಾಗ್ದಾದ್‍ನ ಸುರಕ್ಷಿತ ಪ್ರದೇಶವಾದ ಹಸಿರು ವಲಯದಲ್ಲಿ 2 ಕ್ಷಿಪಣಿ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಇರಾನ್ ಕ್ಷಿಪಣಿ ದಾಳಿ ನಡೆದ ಕೇವಲ 24 ಗಂಟೆಗಳ ಒಳಗೆ ಮತ್ತೆರಡು ಕ್ಷಿಪಣಿಗಳ ದಾಳಿಯಿಂದ ಇರಾಕ್‍ನಲ್ಲಿ ಭಯಯ ವಾತಾವರಣ ಸೃಷ್ಟಿಯಾಗಿದೆ. ಇದನ್ನೂ ಓದಿ: ಇರಾನ್ ಮೇಲೆ‌ ಯುದ್ಧವಿಲ್ಲ, ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡಲ್ಲ: ಟ್ರಂಪ್

    ಬಾಗ್ದಾದ್‍ನ ಹಸಿರು ವಲಯವನ್ನು ಇರಾಕ್‍ನ ಸುರಕ್ಷಿತ ಸ್ಥಳವಾಗಿದ್ದು, ಇಲ್ಲಿ ಅಮೆರಿಕ ಸೇರಿದಂತೆ ವಿಶ್ವದ ವಿವಿಧ ದೇಶಗಳ ರಾಯಭಾರ ಕಚೇರಿಗಳಿವೆ. ಹೀಗಾಗಿ ಇದೇ ಪ್ರದೇಶವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ಮಾಡಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‍ಗೆ ಎಚ್ಚರಿಕೆ ನೀಡಿದ ಬೆನ್ನೆಲ್ಲೇ ಈ ದಾಳಿ ನಡೆದಿದ್ದು, ದಾಳಿಯಲ್ಲಿ ಯಾವುದೇ ರೀತಿಯ ಹಾನಿಯಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ತೈಲ ಬೆಲೆ ಏರಿಕೆ ಎಚ್ಚರಿಕೆ!

    ಇರಾನ್ ಮತ್ತು ಅಮೆರಿಕದ ಮಧ್ಯೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಬುಧವಾರ ಟ್ರಂಪ್ ಪ್ರತಿಕ್ರಿಯೆ ನೀಡಿದ್ದರು. ಕಳೆದ ರಾತ್ರಿ ಇರಾಕ್ ನಲ್ಲಿರುವ ನಮ್ಮ ವಾಯುನೆಲೆಯ ಮೇಲೆ ನಡೆದ ದಾಳಿಯಲ್ಲಿ ಯಾವುದೇ ಸೈನಿಕ ಹಾಗೂ ಅಧಿಕಾರಿಗಳಿಗೆ ತೊಂದರೆಯಾಗಿಲ್ಲ. ಯಾವುದೇ ಸಾವು, ನೋವುಗಳನ್ನು ಸಂಭವಿಸಿಲ್ಲ. ನಮ್ಮ ಎಲ್ಲಾ ಸೈನಿಕರು ಸುರಕ್ಷಿತರಾಗಿದ್ದಾರೆ. ಅಮೆರಿಕದ ಮಿಲಿಟರಿ ನೆಲೆಗಳಲ್ಲಿ ಕನಿಷ್ಠ ಹಾನಿಯಾಗಿದೆ ಎಂದು ತಿಳಿಸಿದ್ದರು.

    ಮೊದಲಿಗಿಂತಲೂ ಅಮೆರಿಕ ಸೈನ್ಯವೂ ಎಲ್ಲದಕ್ಕೂ ಸಿದ್ಧವಾಗಿದೆ. ಸುಧಾರಿತ ಕ್ಷಿಪಣಿಗಳನ್ನು ಹೊಂದಿದ್ದೇವೆ. ಆದರೆ ಅವುಗಳನ್ನು ನಾವು ಬಳಸಲು ಇಚ್ಛಿಸುವುದಿಲ್ಲ. ಯಾಕೆಂದರೆ ನಾವು ಶಾಂತಿಯನ್ನು ಬಯಸುತ್ತೇವೆ. ಇರಾನ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಲು ಹಾಗೂ ವಿಶ್ವ ಶಾಂತಿಯನ್ನು ಕಾಪಾಡಲು ಇಚ್ಛಿಸುತ್ತೇವೆ ಎಂದು ಟ್ರಂಪ್ ಹೇಳಿದ್ದರು. ಇದನ್ನೂ ಓದಿ: ಇರಾನ್ ಕ್ಷಿಪಣಿ ದಾಳಿಗೆ 80 ಅಮೆರಿಕ ಸೈನಿಕರು ಹತ 

    ಇರಾನ್ ದೇಶದ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿ ಉಗ್ರರಿಗೆ ತರಬೇತಿ ನೀಡುತ್ತಿದ್ದ. ಅಷ್ಟೇ ಅಲ್ಲದೆ ಅಮೆರಿಕದ ಭದ್ರತೆಗೆ ಬೆದರಿಕೆ ಒಡ್ಡಿದ್ದ. ಇದರಿಂದಾಗಿ ಆತನನ್ನು ಹತ್ಯೆಗೈಯುವುದು ಅನಿವಾರ್ಯವಾಗಿತ್ತು ಎಂದು ಖಾಸಿಂ ಸೊಲೈಮನಿ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದರು.

    ಇಂಧನ ಹಾಗೂ ಅನಿಲ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ನಾವು ನಂಬರ್ 1. ಸ್ಥಾನದಲ್ಲಿದ್ದೇವೆ. ಹೀಗಾಗಿ ತೈಲ ವಿಚಾರದಲ್ಲಿ ಯಾವುದೇ ದೇಶದ ಮೇಲೆ ಅವಲಂಬಿಸಿಲ್ಲ ಎಂದಿದ್ದರು. ಇರಾನ್ ಉಗ್ರರ ತವರೂರು ಆಗಿದ್ದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿದೆ. ನಮ್ಮ ಅವಧಿಯಲ್ಲಿ ಆಲ್ ಖೈದಾ ಉಗ್ರ ಬಾಗ್ದಾದಿಯನ್ನು ಹತ್ಯೆ ಮಾಡಲಾಗಿದೆ. ಆರ್ಥಿಕವಾಗಿ ನಾವು ಪ್ರಬಲವಾಗಿದ್ದೇವೆ. ಸೇನೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದ್ದರು.

  • ಅಮೆರಿಕದಲ್ಲಿ ದಾಖಲೆ ಬರೆಯಲಿದೆ ‘ಹೌಡಿ ಮೋದಿ’ ಕಾರ್ಯಕ್ರಮ

    ಅಮೆರಿಕದಲ್ಲಿ ದಾಖಲೆ ಬರೆಯಲಿದೆ ‘ಹೌಡಿ ಮೋದಿ’ ಕಾರ್ಯಕ್ರಮ

    ನವದೆಹಲಿ: ಹ್ಯೂಸ್ಟನ್ ನಗರದಲ್ಲಿ ಸೆ.22 ರಂದು ಭಾರತೀಯ ಸಮುದಾಯ ಆಯೋಜಿಸಿರುವ ‘ಹೌಡಿ ಮೋದಿ’ ಕಾರ್ಯಕ್ರಮ ಅಮೆರಿಕ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲಿದೆ.

    ಹೌದು. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಲಿದ್ದು, ಈ ಮೂಲಕ ಅಮೆರಿಕದ ಇತಿಹಾಸದಲ್ಲಿ ಎರಡು ದೇಶದ ನಾಯಕರು ಸಾರ್ವಜನಿಕವಾಗಿ ಮಾತನಾಡುವ ಅತಿ ದೊಡ್ಡ ಖಾಸಗಿ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    ಈ ಕಾರ್ಯಕ್ರಮಕ್ಕೆ ಟ್ರಂಪ್ ಆಗಮಿಸುತ್ತಾರೋ ಇಲ್ಲವೋ ಎನ್ನುವುದು ಖಚಿತವಾಗಿರಲಿಲ್ಲ. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ಟ್ರಂಪ್ ಆಗಮಿಸುತ್ತಿರುವ ವಿಚಾರವನ್ನು ಖಚಿತಪಡಿಸಿದ್ದಾರೆ.

    ವಿಶ್ವಸಂಸ್ಥೆಯ ಮಹಾಧಿವೇಶನ ಸೇರಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂಬಂಧ ಮೋದಿ ಅಮೆರಿಕಕ್ಕೆ ತೆರಳಲಿದ್ದು ಸೆ.27ರ ವರೆಗೆ ಪ್ರವಾಸದಲ್ಲಿ ಇರಲಿದ್ದಾರೆ. ‘ಹೌಡಿ ಮೋಡಿ’ ಕಾರ್ಯಕ್ರಮ ಆಯೋಜಕರು ಕೆಲ ದಿನಗಳಿಂದ ಈ ಕಾರ್ಯಕ್ರಮಕ್ಕೆ ಟ್ರಂಪ್ ಅತಿಥಿಯಾಗಿ ಆಗಮಿಸುತ್ತಾರೆ ಎಂದು ಹೇಳುತ್ತಾ ಬಂದಿದ್ದರೂ ಶ್ವೇತ ಭವನ ಖಚಿತ ಪಡಿಸಿರಲಿಲ್ಲ. ಭಾನುವಾರ ಶ್ವೇತ ಭವನ ಅಧಿಕೃತವಾಗಿ ಟ್ರಂಪ್ ಪಾಲ್ಗೊಳ್ಳುವ ಬಗ್ಗೆ ಖಚಿತಪಡಿಸಿದೆ.

    ಏನಿದು ಹೌಡಿ ಮೋಡಿ ಕಾರ್ಯಕ್ರಮ?
    ನೈಋತ್ಯ ಅಮೆರಿಕದಲ್ಲಿ ‘ಹೌ ಡು ಯು ಡು'(ನೀವು ಹೇಗಿದ್ದೀರಿ) ಎಂದು ಕೇಳಲು ಸಂಕ್ಷಿಪ್ತವಾಗಿ ‘ಹೌಡಿ’ ಎಂದು ಕರೆಯುತ್ತಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಹ್ಯೂಸ್ಟನ್ ನಗರದಲ್ಲಿರುವ ಭಾರತೀಯರು ‘ಹೌಡಿ ಮೋದಿ’ ಹೆಸರನ್ನಿಟ್ಟಿದ್ದಾರೆ.

    ಯಾವೆಲ್ಲ ದಾಖಲೆ ನಿರ್ಮಾಣವಾಗುತ್ತೆ?
    ಎನ್‌ಆರ್‌ಜಿ ಫುಟ್ ಬಾಲ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು ಭಾರತೀಯ ಮೂಲದ 50 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವುದರ ಜೊತೆ ಅಮೆರಿಕದ 60 ಸಂಸದರು ಭಾಗವಹಿಸುತ್ತಿದ್ದಾರೆ. ಈಗಾಗಲೇ ಎಲ್ಲ ಟಿಕೆಟ್ ಗಳು ಮಾರಾಟಗೊಂಡಿದೆ. ಅಮೆರಿಕದಲ್ಲಿ ಪೋಪ್ ಹೊರತು ಪಡಿಸಿ ಯಾವೊಬ್ಬ ವಿದೇಶಿ ಅತಿಥಿಯ ಕಾರ್ಯಕ್ರಮಕ್ಕೆ 50 ಸಾವಿರ ಮಂದಿ ಭಾಗವಹಿಸಿದ್ದ ಇತಿಹಾಸವಿಲ್ಲ. ಅಷ್ಟೇ ಅಲ್ಲದೇ ಒಂದು ದೇಶದ ನಾಯಕನೊಬ್ಬ ಅಮೆರಿಕದಲ್ಲಿ 50 ಸಾವಿರ ಮಂದಿಯನ್ನು ಉದ್ದೇಶಿಸಿ ಮಾತನಾಡಿಲ್ಲ. ಹೀಗಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಅಮೆರಿಕ ನೆಲದಲ್ಲಿ ಮೋದಿ ದಾಖಲೆ ಬರೆಯಲಿದ್ದಾರೆ. ಪತಂಜಲಿ ಯೋಗಪೀಠ, ಅಕ್ಷಯ ಪಾತ್ರಾ ಫೌಂಡೇಶನ್, ಐಐಟಿ ಹಳೆ ವಿದ್ಯಾರ್ಥಿ ಸಂಘಟನೆ ಸೇರಿದಂತೆ ಸುಮಾರು 650 ಸಂಘ, ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಕೈಜೋಡಿಸಿವೆ.

    ಭಾರತಕ್ಕೆ ಏನು ಲಾಭ?
    ಜಮ್ಮು ಕಾಶ್ಮೀರ ವಿಚಾರವನ್ನು ಮುಂದಿಟ್ಟುಕೊಂಡು ನಮಗೆ ಸಹಾಯ ಮಾಡಿ ಪಾಕಿಸ್ತಾನ ಹಲವು ದೇಶಗಳಲ್ಲಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಮೋದಿ ಕಾರ್ಯಕ್ರಮದಲ್ಲೇ ಟ್ರಂಪ್ ಭಾಗವಹಿಸುವ ಮೂಲಕ ಭಾರತದ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂಬ ಸಂದೇಶದ ರವಾನಿಸಿದಂತೆ ಆಗುತ್ತದೆ. ಇದರ ಜೊತೆಯಲ್ಲೇ ಅಮೆರಿಕ ಮತ್ತು ಚೀನಾದ ನಡುವೆ ವ್ಯಾಪಾರ ಸಮರ ಈಗ ತೀವ್ರಗೊಂಡಿದೆ. ಹೀಗಾಗಿ ಮೋದಿ ಟ್ರಂಪ್ ದ್ವಿಪಕ್ಷೀಯ ಮಾತುಕತೆಯ ವೇಳೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆದರೆ ಭಾರತಕ್ಕೆ ನೆರವಾಗಲಿದೆ.

    ಟ್ರಂಪ್‍ಗೆ ಏನು ಲಾಭ?
    2020ರಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣಕ್ಕೆ ಇಳಿಯಲಿದ್ದಾರೆ. ಅಮೆರಿಕದ ಚುನಾವಣೆಯಲ್ಲಿ ಭಾರತೀಯರು ಪ್ರಧಾನ ಪಾತ್ರ ವಹಿಸಲಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾರತದ ಜೊತೆಗಿನ ನಮ್ಮ ಸಂಬಂಧ ನನ್ನ ಅವಧಿಯಲ್ಲಿ ಉತ್ತಮವಾಗಿದೆ ಎಂದು ಹೇಳಿ ಮತದಾರರನ್ನು ಸೆಳೆಯುವ ಸಾಧ್ಯತೆಯಿದೆ.

    ಭಾಷಣ ಮೊದಲಲ್ಲ:
    ಪ್ರಧಾನಿ ಮೋದಿ ಅವರು ಅಮೆರಿಕದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಇದು ಮೊದಲಲ್ಲ. 2014ರಲ್ಲಿ ಅಮೆರಿಕ ಭೇಟಿ ವೇಳೆ ನ್ಯೂಯಾರ್ಕಿನ ಮ್ಯಾಡಿಸನ್ ಸ್ಕ್ವಾರ್ ನಲ್ಲಿ 20 ಸಾವಿರ ಮಂದಿಯನ್ನು ಉದ್ದೇಶಿಸಿ ಭಾಷಣ ಮಾಡಿದ್ದರೆ 2015ರಲ್ಲಿ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿ ಕಾರ್ಯಕ್ರಮದಲ್ಲೂ ಸುಮಾರು 20 ಸಾವಿರ ಜನರನ್ನು ಉದ್ದೇಶಿಸಿ ಮಾತನಾಡಿದ್ದರು.

  • ಸ್ವಚ್ಛ ಭಾರತ ಅಭಿಯಾನಕ್ಕಾಗಿ ಪ್ರಧಾನಿ ಮೋದಿಗೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ

    ಸ್ವಚ್ಛ ಭಾರತ ಅಭಿಯಾನಕ್ಕಾಗಿ ಪ್ರಧಾನಿ ಮೋದಿಗೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ

    ನವದೆಹಲಿ: ವಿಭಿನ್ನ ಯೋಜನೆಗಳು ಹಾಗೂ ಪರಿಶ್ರಮದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದು, ಇದೀಗ ಮತ್ತೊಂದು ಗೌರವವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ‘ಸ್ವಚ್ಛ ಭಾರತದ’ ಅಭಿಯಾನಕ್ಕಾಗಿ ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಸೋಮವಾರ ಪ್ರಶಸ್ತಿಯನ್ನು ಘೋಷಿಸಿದೆ.

    ಈ ಕುರಿತು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಇಂದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಈ ತಿಂಗಳ ಕೊನೆಯಲ್ಲಿ ಮೋದಿ ಅಮೆರಿಕಾಗೆ ಭೇಟಿ ನೀಡಲಿದ್ದು, ಅಂದು ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಿದೆ ಎಂದು ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ನವೀನ ಕಾರ್ಯಕ್ರಮಗಳಿಗೆ ವಿಶ್ವದಾದ್ಯಂತ ಪ್ರಶಸ್ತಿಗಳು ಲಭಿಸುತ್ತಿದ್ದು, ಇದೀಗ ಈ ಪಟ್ಟಿಗೆ ಮತ್ತೊಂದು ಪ್ರಶಸ್ತಿ ಸೇರ್ಪಡೆಯಾಗಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಮತ್ತೊಂದು ಕ್ಷಣವಾಗಿದೆ. ಅಮೆರಿಕಾಗೆ ತೆರಳಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕಾಗಿ ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ ಕೊಡಮಾಡುವ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಕೇಂದ್ರ ಸಚಿವರು ಟ್ವೀಟ್ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ತಮ್ಮ ಮೊದಲ ಅವಧಿಯಲ್ಲಿ ಪ್ರಾರಂಭಿಸಿದ ಮೊದಲ ಕೆಲವು ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಸ್ವಚ್ಛ ಭಾರತ ಅಭಿಯಾನವೂ ಒಂದಾಗಿದೆ. ಅಕ್ಟೋಬರ್ 2ರಂದು ಮಹಾತ್ಮಾ ಗಾಂಧಿ ಅವರ ಜನ್ಮದಿನಾಚರಣೆಯಂದು ಈ ಅಭಿಯಾನವನ್ನು ಪ್ರಧಾನಿ ಮೋದಿ ಪ್ರಾರಂಭಿಸಿದ್ದರು.

    ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಒಂದು ಖಾಸಗಿ ಪ್ರತಿಷ್ಠಾನವಾಗಿದ್ದು, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಅವರ ಪತ್ನಿ ಮೆಲಿಂಡಾ ಗೇಟ್ಸ್ ಅವರದ್ದಾಗಿದೆ.

    ಈ ವರ್ಷದ ಆರಂಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ ಮೆಗಾ ಆರೋಗ್ಯ ಯೋಜನೆ, 10 ಕೋಟಿಗೂ ಅಧಿಕ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಮಹತ್ವಾಕಾಂಕ್ಷಿಯ ‘ಆಯುಷ್ಮಾನ್ ಭಾರತ್’ ಯೋಜನೆಗೆ ಮೋದಿಯನ್ನು ಬಿಲ್ ಗೇಟ್ಸ್ ಶ್ಲಾಘಿಸಿದ್ದರು. ಮೇ 2018ರಂದು ಆಧಾರ್ ತಂತ್ರಜ್ಞಾನವು ಯಾವುದೇ ಗೌಪ್ಯತೆಗೆ ಸಮಸ್ಯೆಯನ್ನುಂಟು ಮಾಡುವುದಿಲ್ಲ ಎಂದು ಹೇಳುವ ಮೂಲಕ ಯೋಜನೆಯನ್ನು ಬೆಂಬಲಿಸಿದ್ದರು.

  • ಕೆರೆಯಲ್ಲಿ ಪತ್ತೆಯಾಯ್ತು 2 ಬಾಯಿಯ ಅಪರೂಪದ ಮೀನು

    ಕೆರೆಯಲ್ಲಿ ಪತ್ತೆಯಾಯ್ತು 2 ಬಾಯಿಯ ಅಪರೂಪದ ಮೀನು

    ನ್ಯೂಯಾರ್ಕ್: ಎರಡು ಬಾಯಿಗಳಿರುವ ಮೀನೊಂದು ಅಮೆರಿಕದ ಪ್ಲಾಟ್ಸ್‌ಬರ್ಗ್‌‌ನ ಚಾಂಪ್ಲೇನ್ ಕೆರೆಯಲ್ಲಿ ಕಂಡುಬಂದಿದ್ದು, ಈ ಅಪರೂಪದ ಮೀನಿನ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

    ನ್ಯೂಯಾರ್ಕ್ ನಿವಾಸಿ ಡೆಬ್ಬಿ ಗೆಡ್ಡೆಸ್ ಅವರಿಗೆ ಈ ಅಪರೂಪದ ಮೀನು ಸಿಕ್ಕಿತ್ತು. ಕೆಲ ದಿನಗಳ ಹಿಂದೆ ಡೆಬ್ಬಿ ಅವರು ತಮ್ಮ ಪತಿಯೊಂದಿಗೆ ಚಾಂಪ್ಲೇನ್ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದರು. ಈ ಸಂದರ್ಭ ಅವರಿಗೆ ಎರಡು ಬಾಯಿ ಇರುವ ವಿಶಿಷ್ಟ ಮೀನು ಸಿಕ್ಕಿತ್ತು. ಅದನ್ನು ನೋಡಿ ಅಚ್ಚರಿಗೊಂಡ ಅವರು ಕೆಲವೇ ಕ್ಷಣಗಳಲ್ಲಿ, ಅದರ ಫೋಟೋಗಳನ್ನು ಸೆರೆ ಹಿಡಿದು ವಾಪಸ್ ನೀರಿಗೆ ಬಿಟ್ಟುಬಿಟ್ಟಿದ್ದಾರೆ.

    https://www.facebook.com/knottyboysfishing/posts/2433491303383951

    ಈ ಫೋಟೋವನ್ನು ಡೆಬ್ಬಿ ಅವರ ಸಹೋದ್ಯೋಗಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಸದ್ಯ ಎಲ್ಲೆಡೆ ವೈರಲ್ ಆಗಿದೆ. ಅಲ್ಲದೆ ಈ ಮೀನನ್ನು ಕಂಡ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಜೊತೆಗೆ ಕೆಲವರು ಕಮೆಂಟ್ ಮಾಡಿ ಜಲಚರಗಳ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ.

    ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಸಮುದ್ರ, ನದಿ, ಕೆರೆಯೊಳಗೆ ವಿಪರೀತ ತ್ಯಾಜ್ಯ ಹಾಕುತ್ತಿರುವ ಕಾರಣ ಅಲ್ಲಿನ ಜಲಚರಗಳ ಹುಟ್ಟಿನಲ್ಲಿ ಈ ರೀತಿಯ ದೋಷಗಳು ಕಾಣಸಿಗುತ್ತಿವೆ ಎಂದು ಅನೇಕರು ಕಮೆಂಟ್‍ಗಳ ಮೂಲಕ ಕಳಕಳಿ ವ್ಯಕ್ತಪಡಿಸಿದ್ದಾರೆ. ಕೆಲವರು ಈ ಮೀನನ್ನು ನೋಡಿ ಖುಷಿಯಾಯ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.