Tag: USA

  • ಅಮೆರಿಕದ ಮಾಧ್ಯಮಗಳಿಗೆ ​ಲಕ್ಷಾಂತರ ಡಾಲರ್ ಸುರಿದಿದೆ ಚೀನಾ

    ಅಮೆರಿಕದ ಮಾಧ್ಯಮಗಳಿಗೆ ​ಲಕ್ಷಾಂತರ ಡಾಲರ್ ಸುರಿದಿದೆ ಚೀನಾ

    ವಾಷಿಂಗ್ಟನ್: ಅಮೆರಿಕ ಮಧ್ಯಮಗಳಿಗೆ ಚೀನಾದ ‘ಚೀನಾ ಡೈಲಿ’ ಲಕ್ಷಾಂತರ ಡಾಲರ್ ಸುರಿದಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಅಮೆರಿಕದ ಜಸ್ಟಿಸ್ ಡಿಪಾರ್ಟ್‍ಮೆಂಟ್ ಮಾಹಿತಿ ಅನ್ವಯ ಟೈಮ್, ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಹಲವು ಮಾಧ್ಯಮಗಳಿಗೆ ಕಳೆದ 6 ತಿಂಗಳಿನಲ್ಲಿ ಲಕ್ಷಾಂತರ ಡಾಲರ್ ಹಣವನ್ನು ನೀಡಿದೆ.

    ಟೈಮ್ ಮ್ಯಾಗಜಿನ್ 7,00,000 ಡಾಲರ್, ಫೈನಾನ್ಶಿಯಲ್ ಟೈಮ್ಸ್ 3,71,577 ಡಾಲರ್, ಫಾರಿನ್ ಪಾಲಿಸಿ ಮ್ಯಾಗಜಿನ್ 2,72,000 ಡಾಲರ್, ಲಾಸ್ ಏಂಜಲೀಸ್ ಟೈಮ್ಸ್ ಗೆ 1 ದಶಲಕ್ಷ ಡಾಲರ್ ಹಣವನ್ನು ನೀಡಿದೆ.

    ಚೀನಾದ ಪರವಾಗಿ ಸುದ್ದಿಯನ್ನು ಪ್ರಕಟ ಮಾಡಲು ಈ ಹಣವನ್ನು ಮಾಧ್ಯಮಗಳಿಗೆ ಪಾವತಿಸಲಾಗಿದೆ ಎಂದು ಜಸ್ಟೀಸ್ ಡಿಪಾರ್ಟ್‍ಮೆಂಟ್ ಹೇಳಿದೆ. ಜಾಹೀರಾತು ಸಂಬಂಧ ನ್ಯೂಯಾರ್ಕ್ ಟೈಮ್ಸ್ ಗೆ  50 ಸಾವಿರ ಡಾಲರ್, ಫಾರಿನ್ ಪಾಲಿಸಿಗೆ 2,40,000 ಡಾಲರ್ ಹಣವನ್ನು ಪಾವತಿಸಿದೆ. ಇದನ್ನೂ ಓದಿ: ಚೀನಿ ಲಸಿಕೆ ಪಡೆದ ರಾಷ್ಟ್ರಗಳಲ್ಲಿ ಕೊರೊನಾ ಕೇಸ್ ಭಾರೀ ಹೆಚ್ಚಳ

    ಒಟ್ಟು ಚೀನಾ ಡೈಲಿ ಜಾಹೀರಾತು ಸಂಬಂಧ ಪತ್ರಿಕೆಗಳಿಗೆ ಒಟ್ಟು 1,10,02,628 ಡಾಲರ್ ಹಣ, ಟ್ವಿಟ್ಟರ್ ಗೆ 2,65,822 ಡಾಲರ್ ಹಣವನ್ನು ಪಾವತಿಸಿದೆ.

    ಈ ಹಿಂದೆ ಚೀನಾದ ಕಮ್ಯೂನಿಸ್ಟ್ ಪಾರ್ಟಿ ನಿಯಂತ್ರಣದಲ್ಲಿರುವ ಚೀನಾ ಡೈಲಿ 4.6 ದಶಲಕ್ಷ ಡಾಲರ್ ಹಣವನ್ನು ವಾಷಿಂಗ್ಟನ್ ಪೋಸ್ಟ್, ಹತ್ತಿರ ಹತ್ತಿರ 6 ದಶಲಕ್ಷ ಡಾಲರ್ ಹಣವನ್ನು 2016ರ ನವೆಂಬರ್ ನಿಂದ ನೀಡಿದೆ ಎಂದು ‘ಡೈಲಿ ಕಾಲರ್’ ವರದಿ ಮಾಡಿತ್ತು.

    ಕೋವಿಡ್ 19 ವಿಚಾರದಲ್ಲಿ ಆಸ್ಟ್ರೇಲಿಯಾ, ಭಾರತ, ಯುರೋಪ್ ದೇಶದ ಮಾಧ್ಯಮಗಳು ಚೀನಾವನ್ನು ಕಟುವಾಗಿ ಟೀಕಿಸುತ್ತಿದ್ದರೆ ಅಮೆರಿಕದ ಕೆಲ ಮಾಧ್ಯಮಗಳು ಕೊರೊನಾ ವುಹಾನ್ ಲ್ಯಾಬ್‍ನಿಂದ ಸೃಷ್ಟಿಯಾಗಿಲ್ಲ ಎಂಬ ವಾದವನ್ನು ಮುಂದಿಡುತ್ತಿವೆ. ಅಮೆರಿಕದ ಪ್ರತಿಷ್ಠಿತ ಮಾಧ್ಯಮಗಳ ಈ ಧೋರಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿತ್ತು. ಚೀನಾ ಅಮೆರಿಕದ ಮಾಧ್ಯಮಗಳಿಗೆ ಹಣವನ್ನು ಸುರಿದು ತನ್ನ ಕೈಗೊಂಬೆಯನ್ನಾಗಿ ಮಾಡಿ ತನ್ನ ತಪ್ಪನ್ನು ಮರೆಮಾಚಲು ಮುಂದಾಗುತ್ತಿದೆ ಎಂದು ರಿಪಬ್ಲಿಕನ್ ಪಕ್ಷದ ನಾಯಕರು ಈ ಹಿಂದೆ ಆರೋಪ ಮಾಡಿದ್ದರು.

  • ಆರೋಗ್ಯ ತಪಾಸಣೆಗಾಗಿ ಅಮೆರಿಕಾಗೆ ತೆರಳಿದ ತಲೈವಾ

    ಆರೋಗ್ಯ ತಪಾಸಣೆಗಾಗಿ ಅಮೆರಿಕಾಗೆ ತೆರಳಿದ ತಲೈವಾ

    ಚೆನ್ನೈ: ತಮಿಳಿನ ಖ್ಯಾತ ನಟ ರಜನಿಕಾಂತ್ ಅವರು ಆರೋಗ್ಯ ತಪಾಸಣೆಗಾಗಿ ತಮ್ಮ ಕುಟುಂಬ ಸಮೇತರಾಗಿ ಖಾಸಗಿ ವಿಮಾನದ ಮೂಲಕ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದಾರೆ.

    ರಜನಿಕಾಂತ್ ಅವರು ಕಳೆದ ವರ್ಷ ಡಿಸೆಂಬರ್‍ ನಲ್ಲಿ ಅನಾರೋಗ್ಯದಿಂದಾಗಿ ಹೈದರಾಬಾದ್‍ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಅಣ್ಣಾತ್ತೆ ಚಿತ್ರದ ಶೂಟಿಂಗ್‍ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕೊರೊನಾದಿಂದಾಗಿ ಚಿತ್ರೀಕರಣ ನಿಂತಿರುವುದರಿಂದ ಚೆನ್ನೈನ ತಮ್ಮ ನಿವಾಸದಲ್ಲೇ ಇದ್ದ ರಜನಿ ಏಕಾಏಕಿ ಅಮೆರಿಕಾಗೆ ತೆರಳಿರುವುದರಿಂದಾಗಿ ತಲೈವಾಗೆ ಮತ್ತೆ ಅನಾರೋಗ್ಯ ಕಾಡುತ್ತಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ:ರಾಜಕೀಯ ಪಕ್ಷ ಸ್ಥಾಪನೆಯ ನಿರ್ಧಾರದಿಂದ ಹಿಂದೆ ಸರಿದ ರಜನಿಕಾಂತ್

    ರಜನಿಕಾಂತ್ ಅಮೆರಿಕಾಗೆ ತೆರಳಿರುವ ಬಗ್ಗೆ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳಲ್ಲಿ ಕಳವಳ ಉಂಟುಮಾಡಿದೆ. ಈ ನಡುವೆ ರಜನಿಕಾಂತ್ ಅವರು ಆರೋಗ್ಯವಾಗಿದ್ದು ಕೆಲವು ವದಂತಿಗಳು ಹರಿದಾಡುತ್ತಿದೆ. ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಅಮೆರಿಕ ತೆರಳಿರುವ ಬಗ್ಗೆ ವರದಿಯಾಗಿದೆ. ಕೊರೊನಾದಿಂದಾಗಿ ಭಾರತದಿಂದ ವಿದೇಶ ಪ್ರಯಾಣಕ್ಕೆ ನಿರ್ಬಂಧವಿರುವುದರಿಂದಾಗಿ ಕೆಲವು ದಿನಗಳ ಹಿಂದೆ ರಜನಿಕಾಂತ್ ಅಮೆರಿಕ ತೆರಳಲು ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಬಳಿಕ ಕೇಂದ್ರ ಸರ್ಕಾರ ಇವರಿಗೆ ಅಮೆರಿಕ ತೆರಳಲು ಅನುಮತಿ ನೀಡಿದೆ.

    ಕೇಂದ್ರ ಸರ್ಕಾರ ಅನುಮತಿ ನೀಡಿದ ನಂತರ ವಿಶೇಷ ವಿಮಾನದಲ್ಲಿ ರಜನಿ ಕುಟುಂಬ ಸಮೇತರಾಗಿ ಅಮೆರಿಕಗೆ ತೆರಳಿದ್ದಾರೆ. ಆರೋಗ್ಯ ತಪಾಸಣೆಯ ನಂತರ ಕೆಲವು ದಿನಗಳವರೆಗೆ ಅಮೆರಿಕಾದ ವಿಶ್ರಾಂತಿ ಪಡೆದು ನಂತರ ಭಾರತಕ್ಕೆ ಹಿಂತಿರುಗುವ ಬಗ್ಗೆ ಮೂಲಗಳಿಂದ ತೆಳಿದು ಬಂದಿದೆ. ರಜನಿ ನಟನೆಯ ಅಣ್ಣಾತ್ತೆ ಸಿನಿಮಾ ಈಗಾಗಲೇ ಚಿತ್ರೀಕರಣ ಕೊನೆ ಹಂತ ತಲುಪಿದ್ದು ಡೈರೆಕ್ಟರ್ ಶಿವ ಅವರು ಈ ವರ್ಷ ದೀಪಾವಳಿ ವೇಳೆ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ.

  • ಭಾರತಕ್ಕೆ ಲಸಿಕೆ ಕಚ್ಚಾ ವಸ್ತುಗಳ ರಫ್ತಿಗೆ ನಿಷೇಧ – ನಮಗೆ ಅಮೆರಿಕವೇ ಫಸ್ಟ್, ಬೈಡನ್ ಸರ್ಕಾರದ ಸಮರ್ಥನೆ

    ಭಾರತಕ್ಕೆ ಲಸಿಕೆ ಕಚ್ಚಾ ವಸ್ತುಗಳ ರಫ್ತಿಗೆ ನಿಷೇಧ – ನಮಗೆ ಅಮೆರಿಕವೇ ಫಸ್ಟ್, ಬೈಡನ್ ಸರ್ಕಾರದ ಸಮರ್ಥನೆ

    ನವದೆಹಲಿ:“ಅಮೆರಿಕನ್ನರ ಆರೋಗ್ಯ ರಕ್ಷಣೆಯೇ ಬೈಡೆನ್ ಸರಕಾರದ ಮೊದಲ ಆದ್ಯತೆ” ಎಂದು ಹೇಳುವ ಮೂಲಕ ಕೊರೊನಾ ಲಸಿಕೆ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ರಫ್ತಿಗೆ ತಾನು ವಿಧಿಸಿರುವ ನಿಷೇಧ ಕ್ರಮವನ್ನು ಅಮೆರಿಕ ಬಲವಾಗಿ ಸಮರ್ಥಿಸಿಕೊಂಡಿದೆ.

    ಲಸಿಕೆಗೆ ಬೇಕಾದ ಅಗತ್ಯ ಕಚ್ಚಾ ವಸ್ತುಗಳ ರಫ್ತಿಗೆ ಅಮೆರಿಕ ಸರ್ಕಾರ ನಿಷೇಧ ಹೇರಿದೆ. ಇದರಿಂದಾಗಿ ಲಸಿಕೆ ಉತ್ಪಾದನೆಗೆ ಸಮಸ್ಯೆಯಾಗಿದೆ. ಈ ಕೂಡಲೇ ಭಾರತ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಸೀರಂ ಇನ್‍ಸ್ಟಿಟ್ಯೂಟ್ ಮುಖ್ಯಸ್ಥ ಆಧಾರ್ ಪೂನಾವಾಲಾ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿದ ಭಾರತ ಅಮೆರಿಕ ಸರ್ಕಾರಕ್ಕೆ ರಫ್ತು ಮೇಲಿನ ನಿಷೇಧವನ್ನು ತೆರವುಗೊಳಿಸಲು ಮನವಿ ಮಾಡಿತ್ತು.

    ಭಾರತದ ಮನವಿಗೆ ಅಮೆರಿಕದಿಂದ ಸರಿಯಾದ ಪ್ರತಿಕ್ರಿಯೆ ಬಂದಿಲ್ಲ. ವಿದೇಶಾಂಗ ಸಚಿವ ಜೈಶಂಕರ್ ಅವರು ಮಾತುಕತೆ ನಡೆಸಿದರೂ ಯಾವುದೇ ಫಲ ಸಿಕ್ಕಿಲ್ಲ.

    ಈ ಬಗ್ಗೆ ಮಾಧ್ಯಮಗಳು ಅಮೆರಿಕ ಸರ್ಕಾರದ ವಕ್ತಾರರ ಜೊತೆ ಪ್ರಶ್ನೆ ಕೇಳಿದ್ದಕ್ಕೆ, ಜಗತ್ತಿನ ಯಾವುದೇ ದೇಶಕ್ಕಿಂತ ಅತಿ ಹೆಚ್ಚು ಕೋವಿಡ್ 19 ಸೋಂಕಿಗೆ ಅಮೆರಿಕ ಜನತೆ ತುತ್ತಾಗಿದ್ದು, ಇಲ್ಲಿಯವರೆಗೆ 5.5 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಬೈಡನ್ ಸರ್ಕಾರ ಅಮೆರಿಕ ಪ್ರಜೆಗಳ ರಕ್ಷಣೆಗೆ ಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೋವಿಡ್-19 ಲಸಿಕೆ ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಅಮೆರಿಕದ ಕಂಪನಿಗಳು ರಫ್ತು ಮಾಡದಂತೆ ಕಳೆದ ಫೆಬ್ರವರಿಯಲ್ಲಿ ಅಧ್ಯಕ್ಷ ಬೈಡೆನ್ ನಿಷೇಧ ಹೇರಿದ್ದಾರೆ. ಇದರಿಂದಾಗಿ ಭಾರತದಲ್ಲಿ ಕೋವಿಶೀಲ್ಡ್ ಉತ್ಪಾದನೆ ಮಾಡುವ ಸೀರಂ ಮತ್ತು ಕೊವ್ಯಾಕ್ಸಿನ್ ಉತ್ಪಾದನೆ ಮಾಡುವ ಭಾರತ್ ಬಯೋಟೆಕ್ ಕಂಪನಿಗೆ ಸಮಸ್ಯೆಯಾಗಿದೆ.

    ವಿದೇಶಗಳ ಲಾಬಿ ಏನು?
    ವಿಶ್ವದ 60 ಪ್ರತಿಶತ ಲಸಿಕೆಗಳು ಭಾರತದಲ್ಲಿ ತಯಾರಾಗಿ ರಫ್ತು ಆಗುತ್ತಿದ್ದವು. ಭಾರತದ ಕೊರೊನಾ ಲಸಿಕೆಗೆಳು ವಿಶ್ವದಲ್ಲೇ ಕಡಿಮೆ ಬೆಲೆಯಲ್ಲಿ ತಯಾರಾಗಿದ್ದ ಕಾರಣ ಬೇಡಿಕೆಯೂ ಹೆಚ್ಚಿತ್ತು. ಕೊರೊನಾ ಲಸಿಕೆಯನ್ನು ವಿಶ್ವ ವಾಣಿಜ್ಯ ಒಪ್ಪಂದದಿಂದ ಹೊರಗಿಟ್ಟು ಕಡಿಮೆ ಬೆಲೆಯಲ್ಲಿ ಜನರಿಗೆ ನೀಡಬೇಕು ಎಂದು ಭಾರತ ವಾದಿಸಿತ್ತು. ಆದರೆ ಅಮೆರಿಕ ಮತ್ತು ಯುರೋಪ್ ದೇಶಗಳು ಕಡಿಮೆ ಬೆಲೆಯಲ್ಲಿ ಲಸಿಕೆ ನೀಡಿದರೆ ಸಂಶೋಧನೆ, ಉತ್ಪಾದನೆಗೆ ಬಂಡವಾಳ ಹೂಡುವ ಕಂಪನಿಗಳಿಗೆ ತೊಂದರೆ ಆಗುತ್ತದೆ ಎಂದು ಹೇಳಿ ವಿರೋಧ ವ್ಯಕ್ತಪಡಿಸಿದ್ದವು.

    ಭಾರತದಿಂದ ಸೀರಂ ಕಂಪನಿ ತಯಾರಿಸಿದ ಲಸಿಕೆಗಳು 80ಕ್ಕೂ ಅಧಿಕ ಬಡ ರಾಷ್ಟ್ರಗಳಿಗೆ ರಫ್ತು ಆಗತೊಡಗಿದಾಗ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೈಡನ್ ಲಸಿಕೆ ತಯಾರಿಸಲು ಬೇಕಾದ ಕಚ್ಚಾ ವಸ್ತುವಿನ ಅಮದಿನ ಮೇಲೆ ನಿರ್ಬಂಧ  ಹೇರಿದರು. ಈ ನಡುವೆ ಭಾರತದಲ್ಲೂ ಕೊರೊನಾ ಎರಡನೇ ಅಲೆ ಅಬ್ಬರ ದಿನೇ ದಿನೇ ಜಾಸ್ತಿಯಾಗುತ್ತಿದೆ. ಪರಿಣಾಮ ಭಾರತದಲ್ಲಿ ಅಮೆರಿಕ ಸೇರಿದಂತೆ ವಿದೇಶಿ ಕಂಪನಿಗಳ ಲಸಿಕೆಗಳಿಗೆ ಅನುಮತಿ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಭಾರತದ ಮೇಲೆ ಒತ್ತಡ ಹಾಕಿಸಿ ಲಸಿಕೆಗೆ ಅನುಮತಿ ನೀಡುವಲ್ಲಿ ವಿದೇಶಿ ಕಂಪನಿಗಳ ಲಾಬಿ ಕೊನೆಗೂ ಯಶಸ್ವಿಯಾಗಿದೆ ಎಂಬ ಅಭಿಪ್ರಾಯ ಈಗ ವ್ಯಕ್ತವಾಗುತ್ತಿದೆ.

  • ಡಿಜಿಟಲ್ ಪಾವತಿ – ವಿಶ್ವದಲ್ಲೇ ಭಾರತ ಈಗ ನಂಬರ್ 1

    ಡಿಜಿಟಲ್ ಪಾವತಿ – ವಿಶ್ವದಲ್ಲೇ ಭಾರತ ಈಗ ನಂಬರ್ 1

    ನವದೆಹಲಿ: ಡಿಜಿಟಲ್ ಪಾವತಿಯಲ್ಲಿ ಭಾರತ ಈಗ ವಿಶ್ವದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ಹೌದು. ಕೋವಿಡ್ 19 ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಡಿಜಿಟಲ್ ವ್ಯವಹಾರ ನಡೆದಿದೆ. ಪರಿಣಾಮ ಅಮೆರಿಕ, ಚೀನಾವನ್ನು ಹಿಂದಿಕ್ಕಿ ಭಾರತ 2020ರ ಅವಧಿಯಲ್ಲಿ ಅಗ್ರ ಸ್ಥಾನವನ್ನು ಸಂಪಾದಿಸಿದೆ.

    ಯುನೈಟೆಡ್ ಕಿಂಗ್‍ಡಮ್‍ನ ಎಸಿಐ ವರ್ಲ್ಡ್ ಈ ವರದಿ ನೀಡಿದ್ದು, 2020ರಲ್ಲಿ 25.5 ಶತಕೋಟಿ ರಿಯಲ್ ಟ್ರೈಮ್ ಆನ್‍ಲೈನ್ ವ್ಯವಹಾರ ನಡೆದಿದೆ. ಭೀಮ್ ಆಪ್, ಗೂಗಲ್ ಪೇ, ಪೇಟಿಂಎ, ಫೋನ್ ಪೇ ಸೇರಿದಂತೆ ಹಲವು ಆಪ್‍ಗಳಿಂದ ವ್ಯವಹಾರ ನಡೆಸಿದ ಪರಿಣಾಮ ಭಾರತಕ್ಕೆ ಮೊದಲ ಸ್ಥಾನ ಸಿಕ್ಕಿದೆ ಎಂದು ಹೇಳಿದೆ.

    ಯಾವ ದೇಶದಲ್ಲಿ ಎಷ್ಟು?
    ಚೀನಾ 15.7 ಶತಕೋಟಿ, ದಕ್ಷಿಣ ಕೊರಿಯಾ 6 ಶತಕೋಟಿ, ಥಾಯ್ಲೆಂಡ್ 5.2 ಶತಕೋಟಿ, ಇಂಗ್ಲೆಂಡ್ 2.8 ಶತಕೋಟಿ, ಅಮೆರಿಕ 1.2 ಶತಕೋಟಿ ವ್ಯವಹಾರ ನಡೆಸಿದೆ.

    ಭಾರತದಲ್ಲಿ ರಿಯಲ್ ಟೈಂ ವ್ಯವಹಾರ ಪಾಲು ಶೇ.15.6ರಷ್ಟು ಇದ್ದರೆ ಎಲೆಕ್ಟ್ರಾನಿಕ್ ಪಾವತಿ ಪಾಲು ಶೇ.22.9 ರಷ್ಟು ಇದೆ. ನಗದು ಮೂಲಕ ದೇಶದಲ್ಲಿ ಶೇ.61.4 ರಷ್ಟು ವ್ಯವಹಾರ ನಡೆದಿದೆ ಎಂದು ಅಧ್ಯಯನ ತಿಳಿಸಿದೆ.

    2025ರ ವೇಳೆ ರಿಯಲ್ ಟೈಂ ಮತ್ತು ಇತರ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಗಳು ಕ್ರಮವಾಗಿ ಶೇ.37.1 ಮತ್ತು ಶೇ.34.6ಕ್ಕೆ ಏರಿಕೆಯಾಗಲಿದೆ. ನಗದು ಮೂಲಕ ನಡೆಸುವ ವ್ಯವಹಾರ ಶೇ.28.3ಕ್ಕೆ ಕುಸಿಯಬಹುದು. 2024ರ ವೇಳೆಗೆ ರಿಯಲ್‍ಟೈಂ ಪೇಮೆಂಟ್ ವ್ಯವಸ್ಥೆ ಭಾರತದಲ್ಲಿ ಶೇ.50ಕ್ಕಿಂತ ಹೆಚ್ಚಾಗಲಿದೆ ಎಂದು ವರದಿ ಅಂದಾಜಿಸಿದೆ.

    ಪೇಟಿಎಂ, ಫೋನ್‍ಪೇ, ಪೈನ್ ಲ್ಯಾಬ್ಸ್, ರಾಝರ್ ಪೇ, ಭಾರತ್ ಪೇ ಸೇರಿದಂತೆ ಇನ್ನಿತರ ಸಂಸ್ಥೆಗಳು ಕೋವಿಡ್ 19 ಅವಧಿಯಲ್ಲಿ ಬೆಳವಣಿಗೆ ಸಾಧಿಸಿದೆ. ಕ್ಯಾಶ್‍ಬ್ಯಾಕ್, ಕೊಡುಗೆಗಳನ್ನು ಪ್ರಕಟಿಸಿದರಿಂದ ಗ್ರಾಹಕರು ಈ ಸೇವೆಯತ್ತ ಹೆಚ್ಚು ಆಕರ್ಷಿತರಾಗಿದ್ದಾರೆ.

    ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ(ಎನ್‍ಪಿಸಿಐ) ಆರಂಭಿಸಿದ ಪ್ರಿ ಪೇಯ್ಡ್ ಇನ್‍ಸ್ಟ್ರುಮೆಂಟ್ಸ್(ಪಿಪಿಐ), ಯುನಿವರ್ಸಲ್ ಪೇಮೆಂಟ್ ಇಂಟರ್‍ಫೇಸ್(ಯುಪಿಐ) ಅಲ್ಲದೇ ಭೀಮ್ ಆಪ್‍ನಿಂದಾಗಿ ಕೆಲ ವರ್ಷದಲ್ಲಿ ಹಣಕಾಸು ವ್ಯವಹಾರದಲ್ಲಿ ಭಾರೀ ಬದಲಾವಣೆಯಾಗಿದೆ ಎಂದು ಹೇಳಿದೆ.

     

    ಯರ್ನೆಸ್ಟ್ ಯಂಗ್ ಸಂಸ್ಥೆಯ ಪ್ರಕಾರ 2020 ರಿಂದ 25ರ ಹಣಕಾಸು ವರ್ಷದಲ್ಲಿ ಶೇ.27 ರಷ್ಟು ಡಿಜಿಟಲ್ ಬೆಳವಣಿಗೆಯಾಗಬಹುದು. 2020ರಲ್ಲಿ 2,153 ಲಕ್ಷ ಕೋಟಿ ರೂ. ವ್ಯವಹಾರ ನಡೆದಿದ್ದರೆ 2025ರ ವೇಳೆಗೆ ಇದು 7,092 ಲಕ್ಷ ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ಹೇಳಿದೆ.

    ಪ್ರತಿ ತಿಂಗಳು ಯುಪಿಐ ವ್ಯವಹಾರ ಶೇ.18.7ರಷ್ಟು ಏರಿಕೆ ಕಾಣುತ್ತಿದೆ ಎಂದು ಎನ್‍ಪಿಸಿಐ ಹೇಳಿದೆ. 2021ರ ಫೆಬ್ರವರಿ 4.25 ಲಕ್ಷ ಕೋಟಿ ರೂ. ವ್ಯವಹಾರ ನಡೆದಿದ್ದರೆ ಮಾರ್ಚ್ ನಲ್ಲಿ 5.05 ಲಕ್ಷ ಕೋಟಿ ರೂ. ವ್ಯವಹಾರ ನಡೆದಿದೆ. ಈ ಅವಧಿಯಲ್ಲಿ 2,292.90 ದಶಲಕ್ಷದಿಂದ 2,731.68 ದಶಲಕ್ಷಕ್ಕೆ ವ್ಯವಹಾರ ಏರಿಕೆಯಾಗಿದೆ ಎಂದು ಅದು ತಿಳಿಸಿದೆ.

  • ಏಲಿಯನ್‍ನಂತೆ ಕಾಣಿಸಿಕೊಳ್ಳಲು, ಮೂಗು, ಕಿವಿ, ತುಟಿ ನಾಲಿಗೆ ಕತ್ತರಿಸಿಕೊಂಡ ವ್ಯಕ್ತಿ

    ಏಲಿಯನ್‍ನಂತೆ ಕಾಣಿಸಿಕೊಳ್ಳಲು, ಮೂಗು, ಕಿವಿ, ತುಟಿ ನಾಲಿಗೆ ಕತ್ತರಿಸಿಕೊಂಡ ವ್ಯಕ್ತಿ

    ವಾಷಿಂಗ್ಟನ್: 32 ವರ್ಷದ ವ್ಯಕ್ತಿಯೋರ್ವ ತಾನು ಬ್ಲಾಕ್ ಏಲಿಯನ್ ಮಾದರಿ ಕಾಣಬೇಕೆಂದು ಬಯಸಿ ಮೂಗು, ಉಬ್ಬು, ಕಿವಿ, ತುಟಿ ಹಾಗೂ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾನೆ.

    ಹೌದು. ಟ್ಯಾಟೂ ಮತ್ತು ದೇಹದ ಪೂರ್ತಿ ಚುಚ್ಚಿಸಿಕೊಂಡಿರುವ ಆಂಥೋನಿ ಲೋಫ್ರೆಡೋ ಎಂಬಾತ ತಾನು ನಿಜ ಜೀವನದಲ್ಲಿ ಏಲಿಯನ್ ರೀತಿ ಕಾಣಬೇಕೆಂದು ದೇಹದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ.

    ಆಂಥೋನಿ ಲೋಫ್ರೆಡೋವನ್ನು ಇರುವುದನ್ನು ನೋಡಿ ಸಾಕಷ್ಟು ಮಂದಿ ಆಶ್ಚರ್ಯಗೊಳುತ್ತಾರೆ. ಅಲ್ಲದೆ ಈ ರೀತಿ ಬದಲಾಗಲು ಆಂಥೋನಿ ಲೋಫ್ರೆಡೋಗೆ ತಾಯಿ ಸಂಪೂರ್ಣ ಬೆಂಬಲ ನೀಡಿದ್ದಾರೆ. ಯಾಕೆಂದರೆ ನಿನ್ನೆ ಯುಕೆಯಲ್ಲಿ ಮದರ್ಸ್ ಡೇ ಇತ್ತು. ಈ ವೇಳೆ ಆಂಥೋನಿ ತಾಯಿಯೊಂದಿಗೆ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಅಮ್ಮ ಇದೆಲ್ಲಾ ನಿಜವಲ್ಲ, ಇದನ್ನು ನೋಡಿದಾಗ ನಿಮಗೆ ಕನಸಿನಂತೆ ಕಾಣಿಸಬಹುದು. ಆದರೆ ನಾನು ನಿಮ್ಮ ಮುಖದಲ್ಲಿ ನಗೆಬೀರಿಸಲು ಪ್ರಯತ್ನಿಸುತ್ತೇನೆ. ನಾನು ಗೆದ್ದವುಗಳಲ್ಲಿ ನೀವು ನನ್ನ ಮೊದಲ ಗೆಲುವು ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದನು. ಈ ಪೋಸ್ಟ್‍ಗೆ ಈವರೆಗೂ 40 ಸಾವಿರ ಲೈಕ್ಸ್ ಬಂದಿದ್ದು, ತಾಯಿ ಪ್ರೀತಿಗಿಂತ ಪವಿತ್ರವಾದ ಪ್ರೀತಿ ಮತ್ತೊಂದಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

    ಏಲಿಯನ್ ಮಾದರಿ ಕಾಣಲು ಆಂಥೋನಿ ಲೋಫ್ರೆಡೋ ತನ್ನ ದೇಹದ ಮೇಲಿನ ಚರ್ಮವನ್ನು ತೆಗೆದು ಮೆಟಲ್ ಅಂಟಿಸಿಕೊಂಡಿದ್ದು, ತನ್ನ ತೋಳು, ಕೈ ಕಾಲು, ಬೆರಳು ಹಾಗೂ ತಲೆಯ ಹಿಂಭಾಗ ಕೂಡ ಬದಲಾವಣೆ ಮಾಡಿಕೊಳ್ಳಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ನೋಡಲು ಸುಂದರವಾಗಿದ್ದ ಆಂಥೋನಿ ಲೋಫ್ರೆಡೋ ತನ್ನ ದೇಹದಲ್ಲಿ ಮಾಡಿಕೊಂಡ ಬದಲಾವಣೆಗಳ ಕುರಿತಂತೆ ಯಾವುದೇ ಬೇಸರವಾಗಿಲ್ಲ ಎಂದು ತಿಳಿಸಿದ್ದಾರೆ.

    ಬ್ಲಾಕ್ ಏಲಿಯನ್ ಪ್ರಾಜೆಕ್ಟ್ ಎಂಬ ಹೆಸರಿನಲ್ಲಿ ಆಂಥೋನಿ ದೇಹದಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡಿದ್ದು, ಈತ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಖಾತೆಯಲ್ಲಿ 345 ಸಾವಿರ ಮಂದಿ ಫಾಲೋವರ್ಸ್‍ಗಳನ್ನು ಹೊಂದಿದ್ದಾನೆ. ಈ ಹಿಂದೆ ಮೂಗು, ನಾಲಿಗೆಯನ್ನು ಕತ್ತರಿಸಿಕೊಂಡಿದ್ದ ವೇಳೆ ಈತ ಮಾತನಾಡಲು ಬಹಳ ಕಷ್ಟಪಟ್ಟಿದ್ದರೂ ಕೂಡ ತನ್ನ ಏಲಿಯನ್‍ನಂತೆ ಕಾಣಿಸುತ್ತಿರುವ ಬಗ್ಗೆ ಹೆಮ್ಮೆ ಪಡುತ್ತಾನೆ.

  • ಮೇ 1ರ ನಂತರ ಅಮೇರಿಕಾದ್ಯಂತ ಲಸಿಕೆ

    ಮೇ 1ರ ನಂತರ ಅಮೇರಿಕಾದ್ಯಂತ ಲಸಿಕೆ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮೇ ಆರಂಭದಲ್ಲಿ ಕೋವಿಡ್-19 ಲಸಿಕೆ ಪಡೆಯಲು ಇಚ್ಛಿಸುವ ಜನರ ಮೇಲಿನ ಆದ್ಯತೆ ಹಾಗೂ ನಿರ್ಬಂಧಗಳನ್ನು ತೆಗೆದುಹಾಕಲು ಆದೇಶಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

    ಮೇ 1 ಬಳಿಕ ಅಮೆರಿಕದ ಎಲ್ಲ ನಾಗರೀಕರು ಕೊರೊನಾ ಲಸಿಕೆ ಪಡೆಯಬಹುದು. ಈ ಕುರಿತಂತೆ ಜೋ ಬಿಡನ್ ಪ್ರೈಂ ಟೈಮ್ ದೂರದರ್ಶನದ ಮೂಲಕ ತಮ್ಮ ಯೋಜನೆಗಳನ್ನು ಚರ್ಚಿಸಲಿದ್ದಾರೆ ಎಂದು ಹಿರಿಯ ಆಡಳಿತ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ನಿಗದಿ ಪಡಿಸಿದ ದಿನಾಂಕದಂದೇ ಎಲ್ಲ ವಯಸ್ಕರೆಲ್ಲರು ಲಸಿಕೆ ಪಡೆಯುತ್ತಾರೆ ಎಂದಲ್ಲ. ಮೊದಲಿಗೆ ವಯಸ್ಸು, ವೃತ್ತಿ ಹಾಗೂ ಆರೋಗ್ಯ ಪರಿಸ್ಥಿತಿಗಳ ಅನುಗುಣವಾಗಿ ಜನರಿಗೆ ಲಸಿಕೆ ನೀಡಲಾಗುತ್ತದೆ. ಅಮೆರಿಕದ ವಯಸ್ಕರಿಗೆ ಸಾಕಷ್ಟು ಲಸಿಕೆ ಸರಬರಾಜು ಆಗುತ್ತಿದ್ದು, ದೇಶದ ಎಲ್ಲಾ ವಯಸ್ಕರಿಗೆ ಮೇ ಅಂತ್ಯದ ವೇಳೆಗೆ ಲಸಿಕೆ ಲಭ್ಯವಾಗುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ತಿಳಿಸಿದರು.

  • ಮಾಸ್ಕ್ ಸುಟ್ಟು ಹಾಕಿ ಆಕ್ರೋಶ ಹೊರಹಾಕಿದ ಜನ – ವೀಡಿಯೋ ವೈರಲ್

    ಮಾಸ್ಕ್ ಸುಟ್ಟು ಹಾಕಿ ಆಕ್ರೋಶ ಹೊರಹಾಕಿದ ಜನ – ವೀಡಿಯೋ ವೈರಲ್

    ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕ ರೋಗದಿಂದ ಜಗತ್ತು ಇದೀಗ ನಿಧನವಾಗಿ ಮುಕ್ತವಾಗುತ್ತಿದೆ. ಕೋವಿಡ್‍ನಿಂದ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಹೀಗೆ ಹಲವಾರು ನಿಯಮಗಳಿಂದ ಜನರು ತತ್ತರಿಸಿಹೋಗಿದ್ದರು. ಇದೀಗ ಅಮೇರಿಕಾದ ಇಡಾಹೊ ಎಂಬ ರಾಜ್ಯದ ಜನರು ಒಂದೆಡೆ ಗುಂಪು ಸೇರಿ ಬ್ಯಾರೆಲ್‍ವೊಂದರ ಒಳಗೆ ಬೆಂಕಿ ಹಚ್ಚಿ ಮಾಸ್ಕ್‌ ಗಳನ್ನು ಸುಟ್ಟು ಹಾಕುವ ಮೂಲಕ ವಿಭಿನ್ನವಾಗಿ ಕೊರೊನಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಕೇವಲ ದೊಡ್ಡವರಷ್ಟೇ ಅಲ್ಲದೆ ಮಕ್ಕಳು ಸಹ ಪೋಷಕರೊಂದಿಗೆ ಒಂದು ಹೆಜ್ಜೆ ಮುಂದೆ ಹಾಕಿ, ತಮ್ಮ ಮಾಸ್ಕ್‌ ಗಳನ್ನು ಕಳಚಿ ಬ್ಯಾರೆಲ್‍ವೊಳಗಿರುವ ಬೆಂಕಿಗೆ ಹಾಕುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

    ಈ ವೀಡಿಯೋವನ್ನು ಸೆರ್ಗಿಯೋ ಓಲ್ಮೋಸ್ ಎಂಬ ಪತ್ರಕರ್ತರೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ 2 ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಮೊದಲ ವೀಡಿಯೋ 4 ಮಿಲಿಯನ್(40 ಲಕ್ಷ) ವೀವ್ಸ್ ಪಡೆದುಕೊಂಡಿದ್ದು, ಮತ್ತೊಂದು ವೀಡಿಯೋ 65,000 ವಿವ್ಸ್ ಪಡೆದುಕೊಂಡಿದ್ದು, ಕಮೆಂಟ್‍ಗಳ ಸುರಿ ಮಳೆ ಹರಿದುಬರುತ್ತಿದೆ.

  • ಅಮೆರಿಕದಲ್ಲಿ ಜೋ ಬೈಡೆನ್‌ ಯುಗಾರಂಭ

    ಅಮೆರಿಕದಲ್ಲಿ ಜೋ ಬೈಡೆನ್‌ ಯುಗಾರಂಭ

    – ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್‌ ಪ್ರಮಾಣ ವಚನ

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆಯಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    46ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ 76 ವರ್ಷದ ಜೋ ಬೈಡೆನ್ ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಆಗಿದ್ದರೆ 49ನೇ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ (58) ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿದ್ದಾರೆ.

    127 ವರ್ಷದಷ್ಟು ಹಳೆಯ ಬೈಬಲ್ ಮೇಲೆ ಬೈಡೆನ್ ಪ್ರಮಾಣ ವಚನ ನಡೆದಿದ್ದು ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಹಿಲ್ ಪಶ್ಚಿಮ ಭಾಗದಲ್ಲಿ ಕಾರ್ಯಕ್ರಮ ನಡೆಯಿತು. 1937ರಿಂದಲೂ ಜ.20ಕ್ಕೆ ಅಧ್ಯಕ್ಷರ ಪ್ರಮಾಣ ವಚನ ಕಾರ್ಯಕ್ರಮ ನಡೆದುಕೊಂಡು ಬಂದಿದೆ. ಈ ಮೊದಲು ಮಾರ್ಚ್ 4ಕ್ಕೆ ನಡೆಯುತ್ತಿತ್ತು.

    ಅಮೆರಿಕದವರೇ ಆಗಿರುವ ದಕ್ಷಿಣ ಆಫ್ರಿಕಾದ ಕಪ್ಪುವರ್ಣೀಯರು ಮತ್ತು ದಕ್ಷಿಣ ಏಷ್ಯಾದ ಮೂಲದವರೇ ಹೆಚ್ಚಾಗಿ ಡೆಮಾಕ್ರೆಟಿಕ್ ಪಕ್ಷಕ್ಕೆ ವೋಟ್ ಮಾಡಿದ್ದು, ಅವರಿಗೀಗ ಹಬ್ಬದಂತಾಗಿದೆ. ಲಿಂಕನ್ ಸ್ಮಾರಕದ ಬಳಿ 400 ಕ್ಯಾಂಡಲ್ ಹಚ್ಚಿರುವ ಬೈಡೆನ್, ಕೊರೋನಾ ಬಲಿಯಾದ 4 ಲಕ್ಷ ಜನರಿಗೆ ನಮನ ಸಲ್ಲಿಸಿದ್ದಾರೆ.

    ಬಿಗಿ ಭದ್ರತೆ:
    ಹೊಸ ಅಧ್ಯಕ್ಷರ ಪ್ರಮಾಣ ವಚನಕ್ಕೆ ಸಮಾರಂಭಕ್ಕೆ ವಾಷಿಂಗ್ಟನ್ ಡಿಸಿಯಲ್ಲಿ ಲಾಕ್‍ಡೌನ್ ವಿಧಿಸಲಾಗಿದೆ. ಹಿಂದೆಂದೂ ಕಂಡಿರದಷ್ಟು ಭದ್ರತೆ, ಯುದ್ಧ ಟ್ಯಾಂಕ್‍ಗಳನ್ನು ಕೂಡ ನಿಯೋಜಿಸಲಾಗಿದೆ. ಕೆಲವು ಕಡೆ ಕಾಂಕ್ರಿಟ್ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಅಮೆರಿಕದ ಸಂಸತ್ ಕ್ಯಾಪಿಟೊಲ್ ಸುತ್ತ ಬೇಲಿ ಎಳೆಯಲಾಗಿದೆ. ಶ್ವೇತ ಭವನ ವಿದ್ಯುದ್ದೀಪಾಲಂಕಾರದಿಂದ ಝಗಮಗಿಸ್ತಿದೆ.

    ಅಧ್ಯಕ್ಷರ ಪ್ರಮಾಣ ವಚನ ಸಮಾರಂಭಕ್ಕೆ 2 ಲಕ್ಷ ಮಂದಿ ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ಕೋವಿಡ್‌ 19 ಕಾರಣದಿಂದ ಟಿಕೆಟ್ ಮಾರಾಟ ಮಾಡಿಲ್ಲ. ಲೈವ್‌ ವಿಡಿಯೋ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಮಾಡಲಾಗಿದೆ.

    ಟ್ರಂಪ್‌ ಗೈರು:
    ಪ್ರಮಾಣ ವಚನ ಕಾರ್ಯಕ್ರಮಕ್ಕೆ ಟ್ರಂಪ್‌ ಹಾಜರಾಗಬೇಕಿತ್ತು. ಆದರೆ ಇಂದು ಶ್ವೇತ ಭವನ ಖಾಲಿ ಮಾಡಿದ ಟ್ರಂಪ್‌ ಫ್ಲೋರಿಡಾಗೆ ಹೊರಟಿದ್ದಾರೆ. ವಿದಾಯ ಭಾಷಣದಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ ಹೆಮ್ಮೆ ನನಗಿದೆ. ಮತ್ತೊಂದು ರೂಪದಲ್ಲಿ ಮರಳಿ ಬರುತ್ತೇನೆ. ನೂತನ ಆಡಳಿತಕ್ಕೆ ಶುಭವಾಗಲಿ. ದೇಶವನ್ನು ಸುರಕ್ಷಿತ ಮತ್ತು ಸಮೃದ್ಧಿಯತ್ತ ಕೊಂಡೊಯ್ಯುವ ಯಶಸ್ವಿ ಆಡಳಿತ ನೀಡಲಿ ಎಂದು ಶುಭ ಹಾರೈಸಿದರು.

    ಹರಿದು ಹಂಚಿ ಹೋಗಿರೋ ರಾಷ್ಟ್ರದ ಮೌಲ್ಯಗಳನ್ನು ಅಮೆರಿಕನ್ನರು ಒಟ್ಟುಗೂಡಿಸಬೇಕು. ಭಿನ್ನಾಭಿಪ್ರಾಯ, ದ್ವೇಷ ಮೀರಿ, ಒಗ್ಗಟ್ಟಿನಿಂದ ಎಲ್ಲರೂ ನಿಗದಿತ ಗುರಿ ಸಾಧಿಸಬೇಕು ಅಂತ ಟ್ರಂಪ್ ಕರೆ ನೀಡಿದ್ದಾರೆ.

    ತಿಂಗಳ ಆರಂಭದಲ್ಲಿ ಕ್ಯಾಪಿಟಲ್ ಭವನದಲ್ಲಿ ನಡೆದ ಹಿಂಸಾಚಾರ ಅಮೆರಿಕನ್ನರನ್ನ ದಿಗ್ಭ್ರಮೆಗೊಳಿಸಿದೆ ಎಂದು ಖಂಡಿಸಿದ್ದಾರೆ. ತಮ್ಮ ಆಡಳಿತದ ಪ್ರಮುಖ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಆದರೆ ಎಲ್ಲೂ ಜೋ ಬೈಡೆನ್ ಹೆಸರು ಪ್ರಸ್ತಾಪಿಸಲಿಲ್ಲ.

  • ಮತ್ತೊಂದು ಕುಖ್ಯಾತಿಗೆ ಪಾತ್ರವಾದ ಡೊನಾಲ್ಡ್‌ ಟ್ರಂಪ್‌

    ಮತ್ತೊಂದು ಕುಖ್ಯಾತಿಗೆ ಪಾತ್ರವಾದ ಡೊನಾಲ್ಡ್‌ ಟ್ರಂಪ್‌

    ವಾಷಿಂಗ್ಟನ್‌: ಇನ್ನೊಂದು ವಾರದಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿರುವ ಡೊನಾಲ್ಡ್ ಟ್ರಂಪ್ ಮತ್ತೊಂದು ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಕ್ಯಾಪಿಟೊಲ್ ಮೇಲಿನ ದಾಳಿಗೆ ಟ್ರಂಪ್ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಡೆಮಾಕ್ರಟೆಕ್‌ ಮಂಡಿಸಿದ ವಾಗ್ದಂಡನೆಗೆ ಜನಪ್ರತಿನಿಧಿಗಳ ಸಭೆ ಅನುಮೋದನೆ ನೀಡಿದೆ.

    232-197 ಮತಗಳ ಅಂತರದಲ್ಲಿ ಜನಪ್ರತಿನಿಧಿಗಳ ಸಭೆ ವಾಗ್ದಂಡನೆ ನಿಲುವಳಿಗೆ ಅಂಗೀಕಾರ ನೀಡಿತು. ಈ ಹಿನ್ನೆಲೆಯಲ್ಲಿ ಅಮೆರಿಕ ಇತಿಹಾಸದಲ್ಲಿಯೇ ಜನಪ್ರತಿನಿಧಿಗಳ ಸಭೆಯಲ್ಲಿ ಎರಡು ಬಾರಿ ವಾಗ್ದಂಡನೆಗೆ ಗುರಿಯಾದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್ ಪಾತ್ರರಾದರು.

     

    ವಾಗ್ದಂಡನೆಯ ಗ್ಗೆ ಸೆನೆಟ್‍ನಲ್ಲಿ ಚರ್ಚೆ ನಡೆಯಲಿದೆ. ಜನವರಿ 19ಕ್ಕೆ ಸೆನೆಟ್ ಸಭೆ ಸೇರಲಿದೆ. ಸೆನೆಟ್‍ನಲ್ಲಿ ವಾಗ್ದಂಡನೆ ನಿಲುವಳಿ ಅನುಮೋದನೆ ಹೊಂದಲು ಡೆಮೆಕ್ರಾಟಿಕ್‌ಗೆ 17 ಮತಗಳ ಕೊರತೆ ಇದೆ. ರಿಪಬ್ಲಿಕನ್ ಪಕ್ಷದ ಕೆಲವರು ಈ ನಿಲುವಳಿಯನ್ನು ಬೆಂಬಲಿಸುವ ಸುಳಿವು ನೀಡಿದ್ದಾರೆ. ಜನವರಿ 20ಕ್ಕೆ ಬೈಡನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಟ್ರಂಪ್ ವಿಚಾರಣೆ ನಡೆಯುವ ಸಂಭವ ಇದೆ.

    ಟ್ರಂಪ್ ಟ್ವಿಟ್ಟರ್ ಖಾತೆಯನ್ನು ತೊಲಗಿಸಿದ ಕ್ರಮ ಸರಿಯಾದುದ್ದೇ ಎಂದು ಟ್ವಿಟ್ಟರ್ ಸಿಇಓ ಜಾಕ್ ಡೋರ್ಸೇ ಸಮರ್ಥಿಸಿಕೊಂಡಿದ್ದಾರೆ.

  • ಪ್ರತಿದಿನ ನಾಯಿ ಮೂತ್ರ ಕುಡಿಯುವ ಮಹಿಳೆ

    ಪ್ರತಿದಿನ ನಾಯಿ ಮೂತ್ರ ಕುಡಿಯುವ ಮಹಿಳೆ

    ವಾಷಿಂಗ್ಟನ್: ಪ್ರಪಂಚದಲ್ಲಿ ಎಲ್ಲಾ ಪುರುಷರು ಮತ್ತು ಮಹಿಳೆಯರು ತ್ವಚೆಯ ಕಾಂತಿಗೋಸ್ಕರ ಹಲವಾರು ರೀತಿಯ ಕ್ರೀಮ್ಸ್, ಸೋಪು, ಮನೆಮದ್ದುಗಳನ್ನು, ಆಯುರ್ವೇದ ಔಷಧಿ, ಟಿಪ್ಸ್‍ಗಳನ್ನು ಬಳಸುತ್ತಾರೆ. ಆದ್ರೆ ಇಲ್ಲೋರ್ವ ಮಹಿಳೆ ಶ್ವಾನದ ಮೂತ್ರ ಸೇವಿಸುವುದರ ಮೂಲಕ ವಿಭಿನ್ನ ರೀತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ನಾಯಿಯನ್ನು ನಿಯತ್ತಿನ ಪ್ರಾಣಿ ಎಂದೇ ಕರೆಯುತ್ತಾರೆ. ಗೂಗಲ್‍ನಲ್ಲಿ ಹುಡುಕಿದರೂ ಕೂಡ ಶ್ವಾನ ಮನುಷ್ಯನ ಆತ್ಮೀಯ ಸ್ನೇಹಿತ ಎಂದು ತೋರಿಸುತ್ತದೆ. ಈ ಮುಗ್ಧ ಪ್ರಾಣಿ ಶ್ವಾನವನ್ನು ಯುನೈಟೆಡ್ ಸ್ಟೇಟ್‍ನ ಮನೆಗಳಲ್ಲಿ ಕುಟುಂಬ ಸದಸ್ಯರಲ್ಲಿ ಒಂದು ಪರಿಗಣಿಸಲಾಗುತ್ತದೆ.

    ಯುಎಸ್‍ನ ಲೀನಾ ತನ್ನ ತ್ವಚೆಯ ಕಾಂತಿಯನ್ನು ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತಂತೆ ಮಾತನಾಡಿದ ಲೀನಾ, ನಾನು ಪ್ರತಿ ದಿನ ನಾಯಿಯ ಮೂತ್ರವನ್ನು ಕುಡಿಯುತ್ತಿದ್ದೆ, ಇದರಿಂದ ನನ್ನ ಮುಖದಲ್ಲಿದ್ದ ಮೊಡವೆಗಳು ಒಂದು ವಾರದಲ್ಲಿ ಮಾಯಾವಾಯಿತು ಮತ್ತು ನಾಯಿಯ ಮೂತ್ರದಲ್ಲಿ ವಿಟಮಿನ್ ಎ, ವಿಟಮಿನ್ ಇ ಮತ್ತು ಕ್ಯಾಲ್ಸಿಯಂ ಗುಣಗಳಿದೆ ಎಂದು ತಿಳಿಸಿದ್ದಾಳೆ.

    ಅಲ್ಲದೆ ನಾಯಿಯ ಮೂತ್ರವನ್ನು ಕುಡಿಯುವುದರಿಂದ ಕ್ಯಾನ್ಸರ್ ಪರಿಣಾಮವನ್ನು ಸಹ ತಪ್ಪಿಸಬಹುದು. ನಾಯಿ ಮೂತ್ರವು ಹಲವು ರೋಗಗಳಿಗೆ ಮದ್ದು ಎಂದರು ತಪ್ಪಾಗಲಾರದು ಎಂದು ಹೇಳಿದ್ದಾಳೆ.

    ಮೊದಲನೇ ಬಾರಿ ಶ್ವಾನದ ಮೂತ್ರ ಕುಡಿದಾಗ ನನಗೆ ಬಹಳ ವಿಚಿತ್ರವಾಗಿ ಅನಿಸಿತು. ಆದ್ರೆ ಎಷ್ಟೋ ತಿಂಗಳಿನಿಂದ ಇದ್ದ ಮುಖದ ಮೇಲಿನ ಮೊಡವೆಗಳು ನಾಯಿ ಮೂತ್ರ ಕುಡಿದ ಒಂದು ವಾರದಲ್ಲಿ ಹೋದವು ಮತ್ತು ಮೊಡವೆಯ ಕಲೆಗಳು ಕೂಡ ಹೋಗಿ ತ್ವಚೆಯ ಕಾಂತಿಯು ಹೆಚ್ಚಾಯಿತು ಎಂದು ಹೇಳಿದಳು.

    ಲೀನಾ ಮೂತ್ರ ಸೇವಿಸಿದ ನಂತರ ಈ ವಿಚಾರ ಇದೀಗ ಪ್ರಪಂಚದಾದ್ಯಂತ ಚರ್ಚೆಗೆ ಕಾರಣವಾಗಿದೆ.