Tag: USA

  • ಪಾಕಿಸ್ತಾನಕ್ಕೆ ಸುಧಾರಿತ AMRAAM ಕ್ಷಿಪಣಿ ನೀಡಲ್ಲ: ವರದಿ ನಿರಾಕರಿಸಿದ ಅಮೆರಿಕ

    ಪಾಕಿಸ್ತಾನಕ್ಕೆ ಸುಧಾರಿತ AMRAAM ಕ್ಷಿಪಣಿ ನೀಡಲ್ಲ: ವರದಿ ನಿರಾಕರಿಸಿದ ಅಮೆರಿಕ

    ನವದೆಹಲಿ: ಪಾಕಿಸ್ತಾನಕ್ಕೆ (Pakistan) ಯಾವುದೇ ಹೊಸ ಸುಧಾರಿತ ಮಧ್ಯಮ-ಶ್ರೇಣಿಯ ಏರ್-ಟು-ಏರ್ ಕ್ಷಿಪಣಿಗಳನ್ನು (AMRAAMs) ನೀಡುವುದಿಲ್ಲ ಎಂದು ಅಮೆರಿಕ (USA) ಸ್ಪಷ್ಟಪಡಿಸಿದೆ.

    ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹೆಚ್ಚಳವಾಗುತ್ತಿದ್ದಂತೆ ಪಾಕಿಸ್ತಾನಕ್ಕೆ AMRAAMs ಕ್ಷಿಪಣಿಯನ್ನು ಅಮೆರಿಕ ನೀಡಲಿದೆ ಎಂದು ವರದಿಯಾಗಿತ್ತು. ಈ ವರದಿ ಪ್ರಕಟವಾದ ಬೆನ್ನಲ್ಲೇ ಭಾರತದಲ್ಲಿರುವ  ರಾಯಭಾರ ಕಚೇರಿ ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕದ ನಿಲುವು ತಿಳಿಸಿದೆ.

    ಪಾಕಿಸ್ತಾನವು ಅಮೆರಿಕದಿಂದ AIM-120 ಸುಧಾರಿತ ಮಧ್ಯಮ-ಶ್ರೇಣಿಯ ಏರ್-ಟು-ಏರ್ ಕ್ಷಿಪಣಿಗಳನ್ನು ಪಡೆಯುವ ಸಾಧ್ಯತೆಯಿದೆ. ಟ್ರಂಪ್‌ (Donald Trump) ಅವಧಿಯಲ್ಲಿ ಯುದ್ಧ ಇಲಾಖೆಯಾಗಿ ಬದಲಾಗಿರುವ ಅಮೆರಿಕದ ರಕ್ಷಣಾ ಇಲಾಖೆ ಕ್ಷಿಪಣಿ ಖರೀದಿಸುವ ಒಟ್ಟು 35 ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಪಾಕಿಸ್ತಾನದ ಹೆಸರಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು.

    ಅಮೆರಿಕ ರಾಯಭಾರ ಕಚೇರಿ ಪ್ರತಿಕ್ರಿಯಿಸಿ, ಈ ಒಪ್ಪಂದವು ಈಗಾಗಲೇ ಅಸ್ತಿತ್ವದಲ್ಲಿರುವ ವಿದೇಶಿ ಮಿಲಿಟರಿ ಮಾರಾಟ ಒಪ್ಪಂದಕ್ಕೆ ಮಾಡಲಾಗಿರುವ ತಿದ್ದುಪಡಿಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ:  ಭಯೋತ್ಪಾದಕ ಗುಂಪು ಜೆಇಎಂ ಮಹಿಳಾ ವಿಭಾಗ ಆರಂಭ – ‘ಆಪರೇಷನ್‌ ಸಿಂಧೂರ’ದಲ್ಲಿ ಗಂಡನ ಕಳೆದುಕೊಂಡ ಮಹಿಳೆಗೆ ಚುಕ್ಕಾಣಿ

    ಸೆಪ್ಟೆಂಬರ್‌ನಲ್ಲಿ ಯುದ್ಧ ಇಲಾಖೆಯು ಪ್ರಮಾಣಿತ ಒಪ್ಪಂದ ಪ್ರಕಟಣೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ಪಾಕಿಸ್ತಾನ ಸೇರಿದಂತೆ ಹಲವಾರು ದೇಶಗಳಿಗೆ ಸುಸ್ಥಿರತೆ ಮತ್ತು ಬಿಡಿಭಾಗಗಳಿಗಾಗಿ ಅಸ್ತಿತ್ವದಲ್ಲಿರುವ ವಿದೇಶಿ ಮಿಲಿಟರಿ ಮಾರಾಟ ಒಪ್ಪಂದವನ್ನು ತಿಳಿಸುತ್ತದೆ. ಈ ಒಪ್ಪಂದದ ಅನ್ವಯ ಬಹು ರಾಷ್ಟ್ರಗಳಲ್ಲಿ ನವೀಕರಣಗಳು, ಬಿಡಿಭಾಗಗಳು ಮತ್ತು ನಿರ್ವಹಣೆಯನ್ನು ಮಾಡಲಾಗುತ್ತದೆ ಎಂದು ಹೇಳಿದೆ.

    ಒಪ್ಪಂದದ ಅನ್ವಯ ಯುನೈಟೆಡ್ ಕಿಂಗ್‌ಡಮ್, ಪೋಲೆಂಡ್, ಪಾಕಿಸ್ತಾನ, ಜರ್ಮನಿ, ಫಿನ್‌ಲ್ಯಾಂಡ್, ಆಸ್ಟ್ರೇಲಿಯಾ, ರೊಮೇನಿಯಾ, ಕತಾರ್, ಓಮನ್, ಕೊರಿಯಾ, ಗ್ರೀಸ್, ಸ್ವಿಟ್ಜರ್‌ಲ್ಯಾಂಡ್, ಪೋರ್ಚುಗಲ್, ಸಿಂಗಾಪುರ, ನೆದರ್‌ಲ್ಯಾಂಡ್ಸ್, ಜೆಕ್ ರಿಪಬ್ಲಿಕ್, ಜಪಾನ್, ಸ್ಲೋವಾಕಿಯಾ, ಡೆನ್ಮಾರ್ಕ್, ಕೆನಡಾ, ಬೆಲ್ಜಿಯಂ, ಬಹ್ರೇನ್, ಸೌದಿ ಅರೇಬಿಯಾ, ಇಟಲಿ, ನಾರ್ವೆ, ಸ್ಪೇನ್, ಕುವೈತ್, ಫಿನ್‌ಲ್ಯಾಂಡ್, ಸ್ವೀಡನ್, ತೈವಾನ್, ಲಿಥುವೇನಿಯಾ, ಇಸ್ರೇಲ್, ಬಲ್ಗೇರಿಯಾ, ಹಂಗೇರಿ ಮತ್ತು ಟರ್ಕಿಗೆ ಶಸ್ತ್ರಾಸ್ತ್ರ ನೀಡಲು ಅನುಮತಿ ನೀಡುತ್ತದೆ. ಇದನ್ನೂ ಓದಿ:  ಕಾಬೂಲ್‌ ಮೇಲೆ ಪಾಕ್‌ ಏರ್‌ಸ್ಟ್ರೈಕ್‌ – ಇಸ್ಲಾಮಾಬಾದ್‌, ರಾವಲ್ಪಿಂಡಿಯಲ್ಲಿ ಇಂಟರ್‌ನೆಟ್‌ ಬಂದ್‌

    ಬಾಲಾಕೋಟ್‌ ಏರ್‌ಸ್ಟ್ರೈಕ್‌ಗೆ ಪ್ರತಿಯಾಗಿ ಪಾಕ್‌ ಎಫ್‌-16 ಯುದ್ಧವಿಮಾನ ಬಳಸಿ ಪ್ರಯೋಗಿಸಿದ AMRAAM ಕ್ಷಿಪಣಿ ಭಾಗವನ್ನು ಪ್ರದರ್ಶಿಸುತ್ತಿರುವ ಸೇನೆಯ ಅಧಿಕಾರಿಗಳು
    ಬಾಲಾಕೋಟ್‌ ಏರ್‌ಸ್ಟ್ರೈಕ್‌ಗೆ ಪ್ರತಿಯಾಗಿ ಪಾಕ್‌ ಎಫ್‌-16 ಯುದ್ಧವಿಮಾನ ಬಳಸಿ ಪ್ರಯೋಗಿಸಿದ AMRAAM ಕ್ಷಿಪಣಿ ಭಾಗವನ್ನು ಪ್ರದರ್ಶಿಸುತ್ತಿರುವ ಸೇನೆಯ ಅಧಿಕಾರಿಗಳು

    ಪಾಕ್‌ ಬಳಿಯಿದೆ ಎಫ್‌ 16:
    ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡ ಉರುಳಿದ ಬಳಿಕ ಅಮೆರಿಕ ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್‌ (Taliban) ಮೇಲೆ ಯುದ್ಧ ಸಾರಿತ್ತು. ಈ ಯುದ್ಧಕ್ಕೆ ಪಾಕಿಸ್ತಾನ ತನ್ನ ಭೂಮಿ, ಬಂದರು, ವಾಯು ನೆಲೆಗಳ ನೆರವು ನೀಡಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಪಾಕಿಸ್ತಾನಕ್ಕೆ ಎಫ್‌ 16 ಯುದ್ಧ ವಿಮಾನಗಳನ್ನು ನೀಡಿದೆ. ಸದ್ಯ ಪಾಕ್‌ ಬಳಿ 75 ಎಫ್‌-16 ಯುದ್ಧ ವಿಮಾನ ಇರಬಹುದು ಎಂದು ಅಂದಾಜಿಸಲಾಗಿದೆ.

    ಭಯೋತ್ಪಾದನೆ ನಿಗ್ರಹ ಮತ್ತು ಆಂತರಿಕ ರಕ್ಷಣೆಗೆ ಮಾತ್ರ ಈ ಯುದ್ಧ ವಿಮಾನಗಳನ್ನು ಬಳಸಬೇಕು ಎಂದು ಅಮೆರಿಕ ಪಾಕಿಗೆ ಷರತ್ತು ವಿಧಿಸಿದೆ. ಹೀಗಿದ್ದರೂ 2019 ರಲ್ಲಿ ಬಾಲಾಕೋಟ್‌ ಏರ್‌ಸ್ಟ್ರೈಕ್‌ ಮಾಡಿದ ಬಳಿಕ ಭಾರತದ ಮೇಲೆ ದಾಳಿ ನಡೆಸಲು ಪಾಕ್‌ ಎಫ್‌-16 ಯುದ್ಧ ವಿಮಾನಗಳನ್ನು ಬಳಸಿತ್ತು. ಹೀಗಿದ್ದರೂ ಅಭಿನಂದನ್‌ ವರ್ಧಮಾನ್‌ ಅವರು ಹಳೆಯ ಮಿಗ್‌ 21 ಬೈಸನ್‌ ವಿಮಾನದ ಮೂಲಕ ಆಕಾಶದಲ್ಲೇ ಕಾದಾಟ(ಡಾಗ್‌ ಫೈಟ್‌) ನಡೆಸಿ ಎಫ್‌ 16 ಯುದ್ಧ ವಿಮಾನವನ್ನು ಹೊಡೆದು ಹಾಕಿದ್ದರು. ಪಾಕ್‌ ಎಫ್‌ 16 ವಿಮಾನದ ಮೂಲಕ AMRAAM ಕ್ಷಿಪಣಿಯನ್ನು ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಇದಕ್ಕೆ ಸಾಕ್ಷ್ಯವಾಗಿ ಭಾರತ ಪಾಕ್‌ ಬಳಸಿದ್ದ AMRAAM ಕ್ಷಿಪಣಿಯ ಬಿಡಿ ಭಾಗವನ್ನು ಪ್ರದರ್ಶಿಸಿತ್ತು.

    ಆಪರಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತ ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಮುಖ್ಯವಾಗಿ ರಾವಲ್ಪಿಂಡಿ ಬಳಿಯ ನೂರ್‌ ಖಾನ್‌ ವಾಯುನೆಲೆಯ ಮೇಲೆ ದಾಳಿ ನಡೆಸಿತ್ತು. ಈ ವಾಯುನೆಲೆಯಲ್ಲಿ ಅಮೆರಿಕ ನಿರ್ಮಿತ ಎಫ್‌16 ಯುದ್ಧ ವಿಮಾನಗಳು ಇದ್ದವು. ದಾಳಿಯ ಸಂದರ್ಭದಲ್ಲಿ ಹಲವು ಎಫ್‌16 ಯುದ್ಧ ವಿಮಾನಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ಇದನ್ನು ಅಮೆರಿಕದ ಅನಧಿಕೃತ ವಾಯು ನೆಲೆ ಎಂದೇ ಕರೆಯಲಾಗುತ್ತದೆ.   ಈಗ ತನ್ನ ಎಫ್‌ 16 ವಿಮಾನಗಳ ರಕ್ಷಣೆಗೆ ಅಮೆರಿಕ AMRAAM ಕ್ಷಿಪಣಿಯನ್ನು ನೀಡಲು ಮುಂದಾಗಿದೆ ಎನ್ನಲಾಗುತ್ತಿದೆ.

  • ಅಮೆರಿಕ ಶಟ್‌ಡೌನ್‌ -7.50 ಲಕ್ಷ ನೌಕರರಿಗೆ ವೇತನರಹಿತ ಕಡ್ಡಾಯ ರಜೆ!

    ಅಮೆರಿಕ ಶಟ್‌ಡೌನ್‌ -7.50 ಲಕ್ಷ ನೌಕರರಿಗೆ ವೇತನರಹಿತ ಕಡ್ಡಾಯ ರಜೆ!

    – ರಿಪಬ್ಲಿಕನ್, ಡೆಮಾಕ್ರೆಟಿಕ್ ನಡುವಿನ ಹಗ್ಗಜಗ್ಗಾಟ ತಾರಕಕ್ಕೆ
    – ದೇಶದ ಸುರಕ್ಷತೆ ಸೇರಿ ಕೆಲ ಅಗತ್ಯ ಸೇವೆಗಳಿಗೆ ಸಮಸ್ಯೆಯಿಲ್ಲ

    ವಾಷಿಂಗ್ಟನ್‌: ವಿಶ್ವದ ದೊಡ್ಡಣ್ಣ ಅಂತ ಹೇಳಿಕೊಳ್ಳುವ ಅಮೆರಿಕ (USA) ಇದೀಗ ಹಿಂದೆಂದೂ ಕಾಣದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದೆ.

    ಆಡಳಿತಾರೂಢ ಡೊನಾಲ್ಡ್‌ ಟ್ರಂಪ್‌ (Donald Trump) ರಿಪಬ್ಲಿಕನ್ ಪಕ್ಷ (Republican Party) ಮತ್ತು ವಿರೋಧ ಪಕ್ಷವಾದ ಡೆಮಾಕ್ರೆಟಿಕ್ ನಡುವಿನ ಹಗ್ಗಜಗ್ಗಾಟ ತಾರಕಕ್ಕೇರಿದೆ. ಆರೋಗ್ಯ ಸೇವಾ ಅನುದಾನದ ಭಿನ್ನಾಭಿಪ್ರಾಯದಿಂದ ಮಧ್ಯಂತರ ಅನುದಾನದ ಮಸೂದೆಗೆ ಬಹುಮತ ಸಿಗದೇ ಬಿಲ್ ಪಾಸ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಶಟ್‌ಡೌನ್ ಆಗಿದ್ದು 7.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರ ಭವಿಷ್ಯ ಅತಂತ್ರವಾಗಿದೆ.

    ರಿಪಬ್ಲಿಕನ್ ಪಕ್ಷವು ಮಂಡಿಸಿದ ಮಧ್ಯಂತರ ಅನುದಾನ ಮಸೂದೆಯನ್ನು ಡೆಮಾಕ್ರೆಟಿಕ್ (Democartic) ಸದಸ್ಯರು ಸೆನೆಟ್‌ನಲ್ಲಿ ವಿರೋಧಿಸಿದರು. ತಮ್ಮ ಪ್ರಮುಖ ಬೇಡಿಕೆಗಳನ್ನು ಈ ಮಸೂದೆಯಲ್ಲಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾರೆ.  ಇದನ್ನೂ ಓದಿಬಾಗ್ರಾಮ್‌ ವಾಯುನೆಲೆ | ಅಮೆರಿಕ ವಿರುದ್ಧ ಯುದ್ಧಕ್ಕೂ ಸೈ ಎಂದ ತಾಲಿಬಾನ್‌ – ಏನಿದು ವಿವಾದ?

    ಅಫೋರ್ಡಬಲ್ ಕೇರ್ ಆಕ್ಟ್ ಅಂದರೆ ಒಬಾಮಾಕೇರ್ ಅಡಿಯಲ್ಲಿ ಲಕ್ಷಾಂತರ ಜನರಿಗೆ ನೀಡಲಾಗುತ್ತಿರುವ ಹೆಲ್ತ್ ಇನ್ಸೂರೆನ್ಸ್ ಸಬ್ಸಿಡಿಗಳನ್ನು ಮುಂದುವರಿಸಬೇಕು ಎನ್ನುವುದು ಡೆಮಾಕ್ರೆಟಿಕ್‌ಗಳ ಪ್ರಮುಖ ಬೇಡಿಕೆಯಾಗಿದೆ. ಇದಕ್ಕೆ ರಿಪಬ್ಲಿಕನ್ನರು ಒಪ್ಪದ ಕಾರಣ ಸೆನೆಟ್‌ನಲ್ಲಿ 55-45 ಮತಗಳ ಅಂತರದಿಂದ ಬಿಲ್ ಬಿದ್ದು ಹೋಯಿತು. ಇದರ ಪರಿಣಾಮವಾಗಿ ಆಡಳಿತ ಕಾರ್ಯನಿರ್ವಹಣೆಗೆ ಸರ್ಕಾರದ ಬಳಿ ಹಣವಿಲ್ಲದೇ ಬುಧವಾರ ಮಧ್ಯರಾತ್ರಿ 12:01ಕ್ಕೆ ಅಧಿಕೃತವಾಗಿ ಶಟ್‌ಡೌನ್ (US Shutdown) ಘೋಷಿಸಲಾಗಿದೆ.

    ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಇಂತಹ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಹಿಂದೆ ಈ ಹಿಂದೆ 2018ರಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯಲ್ಲಿಯೇ 35 ದಿನಗಳ ಕಾಲ ಕೊನೆಯ ಬಾರಿ ಶಟ್‌ಡೌನ್ ಸಂಭವಿಸಿತ್ತು. ಈಗ ಎಷ್ಟು ದಿನ ಈ ಶಟ್‌ಡೌನ್ ಇರಲಿದೆಯೋ ಎಂಬುದು ಯಾರಿಗೂ ಗೊತ್ತಿಲ್ಲ.

    ಅಮೆರಿಕ ಶಟ್‌ಡೌನ್ ಏನೆಲ್ಲಾ ಎಫೆಕ್ಟ್?
    ದೇಶದ ಸುರಕ್ಷತೆ ಸೇರಿ ಕೆಲ ಅಗತ್ಯ ಸೇವೆಗಳು ಮುಂದುವರಿಯಲಿದ್ದು ಕಾನೂನಿನ ಪ್ರಕಾರ, ಅಗತ್ಯ ಸೇವೆಗಳ ನೌಕರರು ಕೆಲಸ ಮಾಡಲೇಬೇಕು. ಆದರೆ ಅವರಿಗೆ ಶಟ್‌ಡೌನ್ ಮುಗಿಯುವವರೆಗೂ ವೇತನ ಸಿಗುವುದಿಲ್ಲ. ಸೇನಾ ಸಿಬ್ಬಂದಿ, ಗಡಿ ಭದ್ರತಾ ಪಡೆ, ಮತ್ತು ಕಾನೂನು ಜಾರಿ ಸಂಸ್ಥೆಗಳು ಕರ್ತವ್ಯದಲ್ಲಿರುತ್ತವೆ.

    ಆಸ್ಪತ್ರೆಗಳಲ್ಲಿನ ವೈದ್ಯಕೀಯ ಆರೈಕೆ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಮುಂದುವರಿಯುತ್ತದೆ. ಸಾಮಾಜಿಕ ಭದ್ರತೆ ಮತ್ತು ಮೆಡಿಕೇರ್ ಚೆಕ್‌ಗಳನ್ನು ಫಲಾನುಭವಿಗಳಿಗೆ ಕಳುಹಿಸಲಾಗುತ್ತದೆ. ನಾಸಾದ ಬಾಹ್ಯಾಕಾಶ ಯೋಜನೆಗಳು ಮತ್ತು ಅಧ್ಯಕ್ಷ ಟ್ರಂಪ್‌ರ ವಲಸೆ ನೀತಿಗೆ ಸಂಬಂಧಿಸಿದ ಕಾರ್ಯಗಳು ಮುಂದುವರಿಯಲಿವೆ. ಇದನ್ನೂ ಓದಿ:  ವಿದೇಶಿ ಸಿನಿಮಾಗಳ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌

    ಅಗತ್ಯವಲ್ಲದ ಎಂದು ಪರಿಗಣಿಸಲಾದ ಸುಮಾರು 7.50 ಲಕ್ಷ ನೌಕರರನ್ನು ವೇತನರಹಿತ ಕಡ್ಡಾಯ ರಜೆ ಮೇಲೆ ಕಳಿಸಲಾಗುತ್ತದೆ. ಶಿಕ್ಷಣ ಇಲಾಖೆಯ ಶೇ. 90ರಷ್ಟು ಸಿಬ್ಬಂದಿ ರಜೆಯಲ್ಲಿರುತ್ತಾರೆ. ರಾಷ್ಟ್ರೀಯ ಉದ್ಯಾನವನಗಳು, ವಸ್ತುಸಂಗ್ರಹಾಲಯಗಳು ಸಂಪೂರ್ಣವಾಗಿ ಮುಚ್ಚಲ್ಪಡುತ್ತವೆ.

    ಸಣ್ಣ ಉದ್ಯಮಗಳಿಗೆ ನೀಡುವ ಸಾಲ ಸ್ಥಗಿತಗೊಳ್ಳಲಿದೆ. ಆಹಾರ ನೆರವು ಕಾರ್ಯಕ್ರಮಗಳು, ವಿದ್ಯಾರ್ಥಿ ವೇತನ ವಿತರಣೆ, ಮತ್ತು ಆಹಾರ ತಪಾಸಣಾ ಕಾರ್ಯಗಳಿಗೆ ಅಡ್ಡಿಯಾಗಲಿದೆ. ದೇಶದ ಆರ್ಥಿಕತೆಯ ಪ್ರಮುಖ ಸೂಚಕವಾದ ಕಾರ್ಮಿಕ ಇಲಾಖೆಯ ಮಾಸಿಕ ನಿರುದ್ಯೋಗ ವರದಿ ಕೂಡ ಪ್ರಕಟವಾಗುವುದಿಲ್ಲ.

  • ಒಂದಿಂಚು ಜಾಗವನ್ನೂ ಬಿಡಲ್ಲ – ಬಾಗ್ರಾಮ್‌ ವಾಯುನೆಲೆ ಹಿಂದಿರುಗಿಸುವ ಟ್ರಂಪ್ ಬೇಡಿಕೆ ತಿರಸ್ಕರಿಸಿದ ತಾಲಿಬಾನ್

    ಒಂದಿಂಚು ಜಾಗವನ್ನೂ ಬಿಡಲ್ಲ – ಬಾಗ್ರಾಮ್‌ ವಾಯುನೆಲೆ ಹಿಂದಿರುಗಿಸುವ ಟ್ರಂಪ್ ಬೇಡಿಕೆ ತಿರಸ್ಕರಿಸಿದ ತಾಲಿಬಾನ್

    ಕಾಬೂಲ್‌: ಅಫ್ಘಾನಿಸ್ತಾನದಿಂದ (Afghanistan) ತನ್ನ ಸೇನಾ ಪಡೆಯನ್ನು ಸಂಪೂರ್ಣವಾಗಿ ಹಿಂಪಡೆದುಕೊಂಡಿರುವ ಅಮೆರಿಕ ಇದೀಗ ಮತ್ತೆ ಅಫ್ಫಾನಿಸ್ತಾನದ ಮೇಲೆ ಕಣ್ಣಿಟ್ಟಿದೆ. ಅಫ್ಘಾನಿಸ್ತಾನದ ಬಾಗ್ರಾಮ್ ವಾಯುನೆಲೆಯ ನಿಯಂತ್ರಣವನ್ನು ಅಮೆರಿಕ ಮರಳಿ ಪಡೆಯಬೇಕು ಎಂಬ ಬೇಡಿಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾನುವಾರ ಪುನರುಚ್ಚರಿಸಿದ್ದಾರೆ. ಆದ್ರೆ ಈ ಬೇಡಿಕೆಯನ್ನು ತಾಲಿಬಾನ್‌ ನಿರಾಕರಿಸಿದೆ.

    ಅಮೆರಿಕದ ಯಾವ್ದೇ ಬೆದೆರಿಕೆಗೂ ನಾವು ಹೆದರಲ್ಲ ಎಂದಿದೆ. ಅಲ್ಲದೇ ಒಂದೇ ಒಂದಿಂಚು ಜಾಗವನ್ನೂ ಬಿಡಲ್ಲ ಎಂದು ತಿರುಗೇಟು ನೀಡಿದೆ. ಇದು ಅಮೆರಿಕ ಹಾಗೂ ತಾಲಿಬಾನ್‌ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ದಟ್ಟವಾಗಿದೆ.

    Donald Trump 3

    ಅಫ್ಘಾನ್‌ಗೆ ಟ್ರಂಪ್‌ ಎಚ್ಚರಿಕೆ
    ಟ್ರಂಪ್‌ ಆಡಳಿತವು ಪ್ರಸ್ತುತ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದೊಂದಿಗೆ ವಾಯುನೆಲೆಯನ್ನು ಅಮೆರಿಕದ ನಿಯಂತ್ರಣಕ್ಕೆ ತರುವ ಸಾಧ್ಯತೆಗಳ ಕುರಿತು ಚರ್ಚಿಸುತ್ತಿದೆ. ನಾವು ಶೀಘ್ರದಲ್ಲೇ ವಾಯುನೆಲೆಯನ್ನು ಮರಳಿ ಪಡೆಯಲು ಬಯಸಿದ್ದೇವೆ. ಒಂದು ವೇಳೆ ಇದಕ್ಕೆ ಒಪ್ಪದಿದ್ದರೆ ನಾನು ಏನು ಮಾಡಲಿದ್ದೇನೆ ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ. ಅಫ್ಘಾನಿಸ್ತಾನವು ಬಾಗ್ರಾಮ್ ವಾಯುನೆಲೆಯನ್ನು ಅದನ್ನು ನಿರ್ಮಿಸಿದವರಿಗೆ ಮರಳಿ ನೀಡದಿದ್ದರೆ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗಲಿದೆ ಎಂದು ಟ್ರಂಪ್‌ ಅವರು ತಾಲಿಬಾನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ವಾಯುನೆಲೆ ಮೇಲೆ ಟ್ರಂಪ್ ಕಣ್ಣೇಕೆ?
    ಬಾಗ್ರಾಮ್ ಏರ್ ಬೇಸ್ (Bagram Air Base) 2021ರಲ್ಲಿ ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಂಡ ನಂತರ ತಾಲಿಬಾನ್ ನಿಯಂತ್ರಣಕ್ಕೆ ಬಂದಿತ್ತು. ಜುಲೈ 2021 ರಲ್ಲಿ ಬಾಗ್ರಾಮ್ ವಾಯುನೆಲೆಯನ್ನು ಅಧಿಕೃತವಾಗಿ ಖಾಲಿ ಮಾಡಿದ ಅಮೆರಿಕ ಪಡೆಗಳು ಅಫ್ಘಾನಿಸ್ತಾನದಲ್ಲಿ ಅಮೆರಿಕದ 20 ವರ್ಷಗಳ ಮಿಲಿಟರಿ ಉಪಸ್ಥಿತಿಯ ಸಾಂಕೇತಿಕ ಅಂತ್ಯವೆಂದು ಪರಿಗಣಿಸಲಾಯಿತು. ನೆಲೆಯ ಮೇಲಿನ ಅಮೆರಿಕದ ನಿಯಂತ್ರಣವನ್ನು ತ್ಯಜಿಸಿರುವುದನ್ನು ಟ್ರಂಪ್ ಹಲವಾರು ಸಂದರ್ಭಗಳಲ್ಲಿ ಟೀಕಿಸಿದ್ದಾರೆ. ಜೊತೆಗೆ ದೇಶದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವ ಮಾಜಿ ಅಧ್ಯಕ್ಷ ಜೋ ಬಿಡೆನ್ ಸರ್ಕಾರದ ನಿರ್ಧಾರವನ್ನು ʻಸಂಪೂರ್ಣ ದುರಂತʼ ಎಂದು ಕರೆದಿದ್ದಾರೆ. ನಾವು ಅದನ್ನು ಅವರಿಗೆ ವ್ಯರ್ಥವಾಗಿ ನೀಡಿದ್ದೇವೆ. ನಾವು ಆ ನೆಲೆಯನ್ನು ಮರಳಿ ಬಯಸುತ್ತೇವೆ ಎಂದು ಟ್ರಂಪ್‌ ತಮ್ಮ ಟ್ರುತ್‌ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.

    ಅಫ್ಘಾನ್‌ ಖಡಕ್‌ ರಿಯಾಕ್ಷನ್‌ ಏನು?
    ಟ್ರಂಪ್‌ ಹೇಳಿಕೆಗೆ ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ಮುಖ್ಯಸ್ಥ ಫಸಿಹುದ್ದೀನ್ ಫಿತ್ರಾತ್ ಪ್ರತಿಕ್ರಿಯಿಸಿದ್ದು, ಕೆಲವರು ರಾಜಕೀಯ ಒಪ್ಪಂದದ ಮೂಲಕ ವಾಯುನೆಲೆಯನ್ನು ಹಿಂದಕ್ಕೆ ಪಡೆಯಲು ಬಯಸುತ್ತಿದ್ದಾರೆ. ಬಾಗ್ರಾಮ್ ವಾಯುನೆಲೆಯನ್ನ ವಾಪಸ್ ಪಡೆಯಲು ಅಫ್ಘಾನಿಸ್ತಾನದೊಂದಿಗೆ ಮಾತುಕತೆ ನಡೆಸಿದ್ದಾರೆ. ಆದ್ರೆ ಅಫ್ಘಾನಿಸ್ತಾನದ ಒಂದು ಇಂಚು ಮಣ್ಣನ್ನೂ ನಾವು ಬಿಟ್ಟುಕೊಡಲ್ಲ. ನಮಗೆ ಅದರ ಅಗತ್ಯವೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

  • ಅಮೆರಿಕ ವಿರೋಧದ ನಡ್ವೆ ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡಲು ಬ್ರಿಟನ್ ಸಿದ್ಧತೆ

    ಅಮೆರಿಕ ವಿರೋಧದ ನಡ್ವೆ ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡಲು ಬ್ರಿಟನ್ ಸಿದ್ಧತೆ

    ಲಂಡನ್: ಅಮೆರಿಕದ (USA) ತೀವ್ರ ವಿರೋಧದ ನಡುವೆಯೂ ಬ್ರಿಟನ್ ಸರ್ಕಾರವು ಪ್ಯಾಲೆಸ್ಟೀನ್‌ಗೆ (Palestine) ದೇಶದ ಮಾನ್ಯತೆ ನೀಡಲು ಮುಂದಾಗಿದೆ.

    ಗಾಜಾದಲ್ಲಿ ನಡೆಸುತ್ತಿರುವ ಯುದ್ಧ ಸಂಬಂಧ ಬ್ರಿಟನ್ ಸರ್ಕಾರ ಇಸ್ರೇಲ್‌ಗೆ (Israel) ಕೆಲ ನಿಬಂಧನೆ ವಿಧಿಸಿತ್ತು. ಆದ್ರೆ ಇಸ್ರೇಲ್‌ ನಿಬಂಧನೆ ಪಾಲಿಸದ ಹಿನ್ನೆಲೆ ಬ್ರಿಟನ್‌ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್‌ ದಾಳಿ – ಒಂದೇ ದಿನ 91 ಮಂದಿ ಸಾವು

    ಸೋಮವಾರದಿಂದ (ಸೆ.22) ವಿಶ್ವಸಂಸ್ಥೆಯ (United Nations) 80ನೇ ಸಾಮಾನ್ಯ ಸಭೆ ಆರಂಭವಾಗಲಿದೆ. ಗಾಜಾದಲ್ಲಿ ನಡೆಯುತ್ತಿರುವ ಯುದ್ಧ, ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡುವ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ. ಅದಕ್ಕೂ ಮುನ್ನ ಬ್ರಿಟನ್, ಫ್ರಾನ್ಸ್, ಕೆನಡಾ, ಆಸ್ಟ್ರೇಲಿಯಾ, ಪೋರ್ಚುಗಲ್ ಸೇರಿದಂತೆ ಸುಮಾರು 140 ದೇಶಗಳು ಪ್ಯಾಲೆಸ್ಟೀನ್ ಅನ್ನು ಪ್ರತ್ಯೇಕ ದೇಶವನ್ನಾಗಿ ಪರಿಗಣಿಸಲು ಮುಂದಾಗಿವೆ. ಇದನ್ನೂ ಓದಿ: H1B ವೀಸಾಕ್ಕೆ ಮೊದಲು ಎಷ್ಟು ಶುಲ್ಕ ಇತ್ತು? ಟ್ರಂಪ್‌ ನಿರ್ಧಾರ ಭಾರತಕ್ಕೆ ಲಾಭವೋ? ನಷ್ಟವೋ?

    ಇದೊಂದು ಸಾಂಕೇತಿಕ ನಡೆಯಾಗಲಿದೆಯಾದರೂ ಯುದ್ಧ ನಿಲ್ಲಿಸಲು ಇಸ್ರೇಲ್ ಮೇಲೆ ಈ ನಿರ್ಧಾರವು ರಾಜತಾಂತ್ರಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸಬಹುದು. ಇದರಿಂದ ಗಾಜಾದಲ್ಲಿ ಶಾಂತಿ ನೆಲಸಬಹುದು ಎಂದು ಬ್ರಿಟನ್ ಆಶಿಸಿದೆ. ಫ್ರಾನ್ಸ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ನಿರ್ಧಾರವನ್ನು ಇಸ್ರೇಲ್‌ನಲ್ಲಿರುವ ಶಾಂತಿಪರ ಹೋರಾಟಗಾರರು ಸ್ವಾಗತಿಸಿದ್ದಾರೆ. ಇದನ್ನೂ ಓದಿ: H-1B ವೀಸಾ ಶುಲ್ಕ ಹೊಸ ಅರ್ಜಿದಾರರಿಗೆ ಮಾತ್ರ- ಒಂದು ಬಾರಿ ಪಾವತಿಸಬೇಕು: ಅಮೆರಿಕ ಸರ್ಕಾರ

    ಈ ಬೆಳವಣಿಗೆ ನಡುವೆಯೇ ಗಾಜಾ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಒಂದೇ ದಿನ 91 ಸಾವು ಸಾವನ್ನಪ್ಪಿದ್ದಾರೆ. ಇದರಿಂದ ಟೆಲ್ ಅವೀವ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಗಾಜಾದ ಅತಿದೊಡ್ಡ ನಗರ ಕೇಂದ್ರವನ್ನು ವಶಪಡಿಸಿಕೊಳ್ಳಲು ವಾಯು ಮತ್ತು ಭೂಸೇನಾ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು. ಇಸ್ರೇಲಿ ಪಡೆಗಳು ಒಂದೇ ದಿನದಲ್ಲಿ ಗಾಜಾದಲ್ಲಿ 91 ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡಿವೆ. ಪ್ರಮುಖ ವೈದ್ಯರ ಕುಟುಂಬ ಸದಸ್ಯರು ಮತ್ತು ಉತ್ತರ ಗಾಜಾ ನಗರದ ಹಲವಾರು ಜನರು ಮೃತಪಟ್ಟಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.

  • ನ.30 ರ ನಂತರ ಭಾರತದ ಮೇಲಿನ ಶೇ.25 ರಷ್ಟು ದಂಡ ಸುಂಕವನ್ನು ಅಮೆರಿಕ ತೆಗೆಯಬಹುದು: CEA

    ನ.30 ರ ನಂತರ ಭಾರತದ ಮೇಲಿನ ಶೇ.25 ರಷ್ಟು ದಂಡ ಸುಂಕವನ್ನು ಅಮೆರಿಕ ತೆಗೆಯಬಹುದು: CEA

    ಕೋಲ್ಕತ್ತಾ: ಭಾರತದ ಕೆಲ ವಸ್ತುಗಳ ಮೇಲೆ ವಿಧಿಸಿದ ಸುಂಕವನ್ನು ನವೆಂಬರ್‌ 30ರ ನಂತರ ಅಮೆರಿಕ (USA) ಹಿಂದಕ್ಕೆ ಪಡೆಯಬಹುದು ಎಂದು ಮುಖ್ಯ ಆರ್ಥಿಕ ಸಲಹೆಗಾರ (CEA) ವಿ ಅನಂತ ನಾಗೇಶ್ವರನ್ (V Anantha Nageswaran) ಆಶಾವಾದ ವ್ಯಕ್ತಪಡಿಸಿದ್ದಾರೆ.

    ಕೋಲ್ಕತ್ತಾದಲ್ಲಿ ವ್ಯಾಪಾರಿಗಳ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಶೇ.25 ಸುಂಕ ನಂತರ ದಂಡದ ರೂಪದಲ್ಲಿ ಶೇ.25 ಸುಂಕ ವಿಧಿಸಬಹುದು ಎಂದು ನಾವು ನಿರೀಕ್ಷಿಸಿರಲಿಲ್ಲ. ಭೌಗೋಳಿಕ ರಾಜಕೀಯ ಸಂದರ್ಭಗಳು ಎರಡನೇ ಶೇ.25 ಸುಂಕ ವಿಧಿಸಲು ಕಾರಣವಾಗಿರಬಹುದು. ಆದರೆ ಕಳೆದ ಎರಡು ವಾರ ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣಿಸಿ ನ.30ರ ನಂತರ ಈ ದಂಡದ ಸುಂಕ ಇರಲಾರದು ಎಂದು ಭಾವಿಸಿದ್ದೇನೆ ಎಂದು ಹೇಳಿದರು.

    ಸ್ಥಗಿತಗೊಂಡಿದ್ದ ಭಾರತ (India) ಮತ್ತು ಅಮೆರಿಕ ಮಧ್ಯೆ ವ್ಯಾಪಾರ ಮಾತುಕತೆ (Trade Talk) ಮತ್ತೆ ಆರಂಭವಾಗಿದೆ. ಅಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಸಮಯದಲ್ಲಿ ಡೊನಾಲ್ಡ್‌ ಟ್ರಂಪ್‌ ದೂರವಾಣಿ ಕರೆ ಮಾಡಿ ಶುಭ ಕೋರಿದ್ದರು. ಈ ಎಲ್ಲಾ ಬೆಳವಣಿಗೆ ಮಧ್ಯೆ ಅನಂತ ನಾಗೇಶ್ವರನ್ ಅವರಿಂದ ಈ ಹೇಳಿಕೆ ಬಂದಿರುವುದು ವಿಶೇಷ.

    ಮುಂದಿನ ಎರಡು ತಿಂಗಳುಗಳಲ್ಲಿ ದಂಡ ಸುಂಕ ಮತ್ತು ಪರಸ್ಪರ ಸುಂಕಗಳ ಮೇಲಿನ ನಿರ್ಧಾರ ಅಂತಿಮವಾಗಬಹುದು ಎಂದು ನಾನು ನಂಬುತ್ತೇನೆ. ಭಾರತದ ರಫ್ತು ಬೆಳವಣಿಗೆ ಪ್ರಸ್ತುತ ವಾರ್ಷಿಕವಾಗಿ 850 ಶತಕೋಟಿ ಡಾಲರ್ ಆಗಿದ್ದು, ಇದು 1 ಟ್ರಿಲಿಯನ್ ಡಾಲರ್ ತಲುಪುವ ಹಾದಿಯಲ್ಲಿದೆ. ಇದು ಜಿಡಿಪಿಯ ಶೇ.25 ರಷ್ಟನ್ನು ಪ್ರತಿನಿಧಿಸುತ್ತದೆ. ಇದು ಆರೋಗ್ಯಕರ, ಮುಕ್ತ ಆರ್ಥಿಕತೆಯನ್ನು ಸೂಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

    ಸೆಡಾನ್‌ಗಳು, SUVಗಳು, ಕ್ರಾಸ್‌ಒವರ್‌ಗಳು, ಮಿನಿವ್ಯಾನ್‌ಗಳು, ಕಾರ್ಗೋ ವ್ಯಾನ್‌ಗಳು ಮತ್ತು ಲಘು ಟ್ರಕ್‌ಗಳಂತಹ ಪ್ರಯಾಣಿಕ ವಾಹನಗಳು, ಅವುಗಳ ಬಿಡಿಭಾಗಗಳ ಜೊತೆಗೆ ವಿನಾಯಿತಿ ನೀಡಲಾಗಿದೆ. ಇದರ ಜೊತೆಗೆ, ಅರೆ-ಸಿದ್ಧಪಡಿಸಿದ ತಾಮ್ರ ಉತ್ಪನ್ನಗಳು ಮತ್ತು ಕೆಲವು ತೀವ್ರವಾದ ತಾಮ್ರ ಉತ್ಪನ್ನಗಳನ್ನು ಹೆಚ್ಚಿನ ಸುಂಕಗಳಿಂದ ಹೊರಗಿಡಲಾಗಿದೆ. ಕಬ್ಬಿಣ, ಉಕ್ಕು, ಅಲ್ಯೂಮಿನಿಯಂ, ವಾಹನಗಳು, ಭಾಗಗಳು ಮತ್ತು ತಾಮ್ರ ಉತ್ಪನ್ನಗಳಂತಹ ಪ್ರಮುಖ ವರ್ಗಗಳನ್ನು ಸುಂಕ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

  • ವ್ಯಾಪಾರ ಮಾತುಕತೆಗೆ ಮತ್ತೆ ವೇದಿಕೆ ಸಿದ್ದ- ಇಂದು ಭಾರತಕ್ಕೆ ಬರುತ್ತಿದ್ದಾರೆ ಅಮೆರಿಕ ಪ್ರತಿನಿಧಿ

    ವ್ಯಾಪಾರ ಮಾತುಕತೆಗೆ ಮತ್ತೆ ವೇದಿಕೆ ಸಿದ್ದ- ಇಂದು ಭಾರತಕ್ಕೆ ಬರುತ್ತಿದ್ದಾರೆ ಅಮೆರಿಕ ಪ್ರತಿನಿಧಿ

    ನವದೆಹಲಿ: ಅಮೆರಿಕ (USA) ಮತ್ತು ಭಾರತ (India) ನಡುವೆ ವ್ಯಾಪಾರ ಮಾತುಕತೆಗೆ (Trade Talk) ಮತ್ತೆ ವೇದಿಕೆ ಸಿದ್ಧವಾಗಿದೆ.

    ಅಮೆರಿಕದ ವ್ಯಾಪಾರ ಪ್ರತಿನಿಧಿಯಾಗಿರುವ ಬ್ರೆಂಡನ್ ಲಿಂಚ್, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (BTA)ಮಾತುಕತೆಗಾಗಿ ಇಂದು ರಾತ್ರಿ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಟ್ರಂಪ್‌ (Donald Trump) ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಭಾರತ ಅಮೆರಿಕದ ನಡುವಿನ ವ್ಯಾಪಾರ ಮಾತುಕತೆ ಆರಭವಾಗಿತ್ತು. ಆದರೆ ಕೃಷಿ ಮತ್ತು ಹಾಲಿನ ಉತ್ಪನ್ನ ಮಾರಾಟಕ್ಕೆ ಅಮೆರಿಕ ಬಹಳ ಪಟ್ಟು ಹಿಡಿದಿತ್ತು. ಅಮೆರಿಕದ ಈ ಬೇಡಿಕೆಗೆ ಭಾರತದ ಮಣಿದಿರಲಿಲ್ಲ.

    ಮಾತುಕತೆ ವಿಫಲವಾದ ಬೆನ್ನಲ್ಲೇ ಟ್ರಂಪ್‌ ಭಾರತದಿಂದ ಆಮದಾಗುವ ಕೆಲ ವಸ್ತುಗಳಿಗೆ 25% ತೆರಿಗೆ ವಿಧಿಸಿದ್ದರು. ಇದಾದ ಬಳಿಕ ರಷ್ಯಾದಿಂದ (Russia) ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡವಾಗಿ 25% ಸುಂಕ ಹೇರಿದ್ದಾರೆ. ಪರಿಣಾಮ ಈಗ ಭಾರತದಿಂದ ಅಮೆರಿಕಕ್ಕೆ ಆಮದಾಗುವ ಕೆಲ ವಸ್ತುಗಳಿಗೆ 50% ಸುಂಕ ವಿಧಿಸಲಾಗಿದೆ. ಇದನ್ನೂ ಓದಿ:  Explained| ದಿಢೀರ್‌ ಟ್ರಂಪ್‌ಗೆ ಭಾರತದ ಮೇಲೆ ಪ್ರೀತಿ ಬಂದಿದ್ದು ಯಾಕೆ? ಅಮೆರಿಕದ ʼವರಿʼ ಏನು?

    ಸುಂಕ ಹೇರಿದಕ್ಕೆ ಅಮೆರಿಕದಲ್ಲಿ ಭಾರೀ ಟೀಕೆ ಬರುತ್ತಿದ್ದಂತೆ ಟ್ರಂಪ್‌ ತನ್ನ ವರಸೆ ಬದಲಾಯಿಸಿದ್ದಾರೆ. ಭಾರತವನ್ನು ಡೆಡ್‌ ಎಕಾನಮಿ ಎಂದು ಕರೆದಿದ್ದ ಟ್ರಂಪ್‌ ಈಗ ಪ್ರಧಾನಿ ನರೇಂದ್ರ ಮೋದಿ (Narendra Modi) ನನ್ನ ಸ್ನೇಹಿತ. ಅವರ ಜೊತೆ ಮಾತನಾಡಲು ಎದುರು ನೋಡುತ್ತೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಒಂದೇ ವಾರದಲ್ಲಿ ಎರಡು ಬಾರಿ ಮೋದಿ ನನ್ನ ಸ್ನೇಹಿತ ಎಂದು ಕರೆಯುವ ಮೂಲಕ ವಿಶ್ವಕ್ಕೆ ಅಚ್ಚರಿ ನೀಡಿದ್ದರು.

    ಮತ್ತೊಂದು ಕಡೆ ಕೇಂದ್ರ ಸಚಿವ ಪಿಯೂಶ್‌ ಗೋಯಲ್‌ ನವೆಂಬರ್‌ ವೇಳೆಗೆ ಭಾರತ ಅಮೆರಿಕದ ಮಧ್ಯೆ ವ್ಯಾಪಾರ ಮಾತುಕತೆ ಅಂತಿಮವಾಗಬಹುದು ಎಂದು ಈ ಹಿಂದೆ ತಿಳಿಸಿದ್ದರು.

  • 50% ತೆರಿಗೆ ಹಾಕುವುದು ಸುಲಭವಾಗಿರಲಿಲ್ಲ, ಇದರಿಂದಾಗಿಯೇ ಭಾರತದ ಜೊತೆ ಭಿನ್ನಾಭಿಪ್ರಾಯ ಶುರುವಾಯ್ತು: ಟ್ರಂಪ್‌

    50% ತೆರಿಗೆ ಹಾಕುವುದು ಸುಲಭವಾಗಿರಲಿಲ್ಲ, ಇದರಿಂದಾಗಿಯೇ ಭಾರತದ ಜೊತೆ ಭಿನ್ನಾಭಿಪ್ರಾಯ ಶುರುವಾಯ್ತು: ಟ್ರಂಪ್‌

    ವಾಷಿಂಗ್ಟನ್‌: ರಷ್ಯಾದಿಂದ ತೈಲ ಖರೀದಿಸುತ್ತಿರುವುದರಿಂದ ಭಾರತದ (India) ಮೇಲೆ ವಿಧಿಸಲಾದ 50% ಸುಂಕವು ಎರಡೂ ದೇಶಗಳ ನಡುವಿನ ಸಂಬಂಧ ಹದಗೆಡಿಸಿದೆ ಅಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ತಪ್ಪೊಪ್ಪಿಕೊಂಡಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ಟ್ರಂಪ್‌, ರಷ್ಯಾದಿಂದ ತೈಲ (Russian Oil) ಖರೀದಿಸುತ್ತಿರುವುದರಿಂದ ಭಾರತದ ಮೇಲೆ ವಿಧಿಸಲಾದ 50% ಸುಂಕವು ಎರಡೂ ದೇಶಗಳ ನಡುವಿನ ಸಂಬಂಧ ಹದಗೆಡಿಸಿದೆ. ಭಾರತ ರಷ್ಯಾದ ಅತಿದೊಡ್ಡ ಗ್ರಾಹಕ, ಹಾಗಾಗಿ ಸುಂಕ ವಿಧಿಸಲಾಯ್ತು. ಆದ್ರೆ ಭಾರತದ ಮೇಲೆ 50% ತೆರಿಗೆ ಹಾಕುವುದು ಸುಲಭವಾಗಿರಲಿಲ್ಲ, ಇದರಿಂದಾಗಿಯೇ ಭಾರತದ ಜೊತೆ ಭಿನ್ನಾಭಿಪ್ರಾಯ ಶುರುವಾಯ್ತು. ಈ ಕ್ರಮದಿಂದ ಯುರೋಪಿಯನ್‌ ರಾಷ್ಟ್ರಗಳ ಮೇಲೂ ಸಮಸ್ಯೆ ಆಗಿದೆ ಎಂದೂ ಅವರು ಹೇಳಿದರು.

    ಮುಂದುವರಿದು.. ಇದು ಒಂದು ದೊಡ್ಡ ಹೆಜ್ಜೆಯಾದರೂ ಭಾರತದೊಂದಿಗಿನ ಸಂಬಂಧಗಳನ್ನ ಹಾಳು ಮಾಡಿದೆ. ವ್ಯಾಪಾರ ಯುದ್ಧವು, ಎರಡೂ ದೇಶಗಳ ನಡುವಿನ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟುಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಚಾರ್ಲಿ ಕಿರ್ಕ್‌ ಹತ್ಯೆಯ ಶಂಕಿತ ಆರೋಪಿ ಬಂಧನ: ಡೊನಾಲ್ಡ್‌ ಟ್ರಂಪ್‌

    ಅಮೆರಿಕಕ್ಕೇ ತಿರುಗುಬಾಣ
    ಭಾರತದ ಮೇಲೆ 50% ಸುಂಕ ವಿಧಿಸಿದ ಬಳಿಕ ಅಮೆರಿಕ ವಿರುದ್ಧ ಅಸಮಾಧಾನ ಹೆಚ್ಚಾಗಿದೆ. ಉಕ್ರೇನ್ ಮೇಲಿನ ಯುದ್ಧಕ್ಕಾಗಿ ಪಾಶ್ಚಿಮಾತ್ಯ ದೇಶಗಳು ಈಗಾಗಲೇ ರಷ್ಯಾದ ಮೇಲೆ ನಿರ್ಬಂಧಗಳನ್ನ ಹೇರಿವೆ. ಈ ಪರಿಸ್ಥಿತಿಯಲ್ಲಿ ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಮೇಲೆ 50% ಆಮದು ಸುಂಕ ವಿಧಿಸಿರೋದು, ಅಮೆರಿಕಕ್ಕೇ ತಿರುಗುಬಾಣ ಬಿಟ್ಟಂತಾಗಿದೆ. ಇದನ್ನೂ ಓದಿ: ಸಮುದ್ರದ ತಳದಲ್ಲಿ ಇದೆಯಂತೆ ಸಿಹಿನೀರು – ಭೂಮಿ ಮೇಲಿನ ಜನರಿಗೆ ಕುಡಿಯೋಕೆ ಸಿಗುತ್ತಾ?

    ಪಾಕ್‌ಗಿಂತಲೂ ಭಾರತಕ್ಕೆ ಸುಂಕ ಅಧಿಕ
    ಈ ಹಿಂದೆ 25% ಆಮದು ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್‌, ಭಾರತ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ ಬಳಿಕ ಆಗಸ್ಟ್‌ 27ರಿಂದ ಅನ್ವಯವಾಗುವಂತೆ 50% ಸುಂಕ ವಿಧಿಸಿದರು. ಆದ್ರೆ ಪಾಕಿಸ್ತಾನದ ಆಮದಿನ ಮೇಲೆ ಟ್ರಂಪ್‌ 19% ಸುಂಕ ಮಾತ್ರ ವಿಧಿಸಿದ್ದಾರೆ. ಆದಾಗ್ಯೂ ಟ್ರಂಪ್‌ ವ್ಯಾಪಾರ ಸಂಬಂಧಕ್ಕೆ ಉಂಟಾಗಿರುವ ಅಡೆತಡೆಗಳನ್ನು ತೆಗೆದುಹಾಲು ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.

    ಯುರೋಪ್ ಒಗ್ಗೂಡುವಂತೆ ಮನವಿ
    ಟ್ರಂಪ್ ಅವರ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಮಾತನಾಡಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಗ್ಗೆ ಟ್ರಂಪ್ ಅವರ ತಾಳ್ಮೆ ಈಗ ಕೊನೆಯಾಗ್ತಿದೆ. ಬ್ಯಾಂಕುಗಳು ಮತ್ತು ತೈಲದ ಮೇಲೆ ಹೊಸ ನಿರ್ಬಂಧ ವಿಧಿಸಬಹುದು. ಅದಕ್ಕಾಗಿ ಯುರೋಪಿಯನ್ ರಾಷ್ಟ್ರಗಳು ಒಗ್ಗೂಡಬೇಕಾಗುತ್ತದೆ ಎಂದು ಇತ್ತೀಚೆಗೆ ಕರೆ ನೀಡಿದ್ದರು. ಇದನ್ನೂ ಓದಿ: ರಷ್ಯಾದ ಕರಾವಳಿಯಲ್ಲಿ ಮತ್ತೆ ಪ್ರಬಲ ಭೂಕಂಪ – ಸುನಾಮಿ ಆತಂಕ

  • Explained| ದಿಢೀರ್‌ ಟ್ರಂಪ್‌ಗೆ ಭಾರತದ ಮೇಲೆ ಪ್ರೀತಿ ಬಂದಿದ್ದು ಯಾಕೆ? ಅಮೆರಿಕದ ʼವರಿʼ ಏನು?

    Explained| ದಿಢೀರ್‌ ಟ್ರಂಪ್‌ಗೆ ಭಾರತದ ಮೇಲೆ ಪ್ರೀತಿ ಬಂದಿದ್ದು ಯಾಕೆ? ಅಮೆರಿಕದ ʼವರಿʼ ಏನು?

    ಭಾರತವನ್ನು ಡೆಡ್‌ ಎಕಾನಮಿ ಎಂದು ಕರೆದಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ವರಸೆ ಬದಲಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನನ್ನ ಸ್ನೇಹಿತ. ಅವರ ಜೊತೆ ಮಾತನಾಡಲು ಎದುರು ನೋಡುತ್ತೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಒಂದೇ ವಾರದಲ್ಲಿ ಎರಡು ಬಾರಿ ಮೋದಿ ನನ್ನ ಸ್ನೇಹಿತ ಎಂದು ಕರೆಯುವ ಮೂಲಕ ವಿಶ್ವಕ್ಕೆ ಅಚ್ಚರಿ ನೀಡಿದ್ದಾರೆ. ಹೀಗಾಗಿ ದಿಢೀರ್‌ ಟ್ರಂಪ್‌ಗೆ ಭಾರತದ ಮೇಲೆ ಪ್ರೀತಿ ಬಂದಿದ್ದು ಯಾಕೆ? ಟ್ರಂಪ್‌ ಮಾತನ್ನು ನಾವು ನಂಬಬಹುದೇ? ಅಮೆರಿಕದ ʼವರಿʼ ಏನು ಇತ್ಯಾದಿ ವಿಚಾರಗಳನ್ನು ಇಲ್ಲಿ ವಿವರಿಸಲಾಗಿದೆ.

    ತಲೆ ಕೆಡಿಸಿಕೊಳ್ಳದ ಭಾರತ:
    ಡೊನಾಲ್ಡ್‌ ಟ್ರಂಪ್‌ (Donald Trump) ತೆರಿಗೆ ಸಮರ ಆರಂಭಿಸಿದ ಬಳಿಕ ಯುರೋಪ್‌ ಸೇರಿದಂತೆ ಹಲವು ದೇಶಗಳ ಮುಖ್ಯಸ್ಥರು ಅಮೆರಿಕಕ್ಕೆ ತೆರಳಿ ಮಾತುಕತೆ ನಡೆಸಿದ್ದರು. ಬೇರೆ ದೇಶಗಳಂತೆ ಭಾರತವು (India) ಅಮೆರಿಕದ ಜೊತೆ ಮಾತುಕತೆ ನಡೆಸುತ್ತಿತ್ತು. ಮಾತುಕತೆಯ ವೇಳೆ ಡೈರಿ ಮತ್ತು ಕೃಷಿ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿತ್ತು. ಹಲವು ಸುತ್ತಿನ ಮಾತುಕತೆ ನಡೆದರೂ ಭಾರತ ತನ್ನ ಹಠವನ್ನು ಬಿಟ್ಟಿರಲಿಲ್ಲ. ಇದಕ್ಕೆ ಸಿಟ್ಟಾದ ಟ್ರಂಪ್‌ ಭಾರತದ ಕೆಲ ವಸ್ತುಗಳ ಮೇಲೆ 25% ಸುಂಕ ವಿಧಿಸಿದರು.

    ಅಮೆರಿಕ ಸುಂಕ ವಿಧಿಸುತ್ತಿದ್ದಂತೆ ಭಾರತ ಆಫ್ರಿಕಾ, ಏಷ್ಯಾ, ಯರೋಪ್‌ ಜೊತೆ ವ್ಯಾಪಾರ ಮಾತುಕತೆ ನಡೆಸಲು ಮುಂದಾಯಿತು. ಈ ಬೆನ್ನಲ್ಲೇ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ ಟ್ರಂಪ್‌ ಮತ್ತೆ 25% ಸುಂಕ ಹೇರಿದರು. ಪರಿಣಾಮ ಆಮದಾಗುವ ಭಾರತದ ಕೆಲ ವಸ್ತುಗಳಿಗೆ ಈಗ ಅಮೆರಿಕದಲ್ಲಿ 50% ಸುಂಕ ವಿಧಿಸಲಾಗಿದೆ. ಇದನ್ನೂ ಓದಿ: ನನ್ನ ಆತ್ಮೀಯ ಸ್ನೇಹಿತ ಮೋದಿ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ: ಟ್ರಂಪ್‌

     

    ಭಾರತ ಯಾವುದೇ ತೀಕ್ಷ್ಣ ಪ್ರತಿಕ್ರಿಯೆ ನೀಡದೇ ಇದ್ದರೂ ಮೋದಿ (Narendra Modi) ಶಾಂಘೈ ಸಹಕಾರ ಒಕ್ಕೂಟದ ಶೃಂಗಸಭೆಯಲ್ಲಿ ಭಾಗಿಯಾಗಿದರು. 7 ವರ್ಷದ ಬಳಿಕ ಚೀನಾಗೆ ಭೇಟಿ ನೀಡಿದರು. ಮೋದಿ, ಕ್ಸಿ ಜಿನ್‌ಪಿಂಗ್‌, ಪುಟಿನ್‌ ಮಾತುಕತೆ ವಿಶ್ವದಲ್ಲಿ ಸಂಚಲನ ಮೂಡಿಸಿತು. ಅದರಲ್ಲೂ ಮೋದಿ ಮತ್ತು ಪುಟಿನ್‌ ಕಾರಿನಲ್ಲಿ ಇಬ್ಬರೇ ಸುಮಾರು 30 ನಿಮಿಷ ಮಾತನಾಡಿದ್ದು ದೊಡ್ಡ ಸುದ್ದಿಯಾಯಿತು. ಈ ಸಭೆಯ ಮುಗಿದ ಕೆಲ ದಿನದ ಬಳಿಕ ಟ್ರಂಪ್‌ ಅವರು ನಮ್ಮ ಸ್ನೇಹಿತನಾಗಿದ್ದ ಭಾರತ ಮತ್ತು ರಷ್ಯಾವನ್ನು ಚೀನಾಗೆ ಬಿಟ್ಟುಕೊಟ್ಟಿದ್ದೇವೆ ಎಂದು ಪೋಸ್ಟ್‌ ಮಾಡಿದ್ದರು.

    ಇನ್ನೊಂದು ಕಡೆ ಟ್ರಂಪ್‌ ಅವರ ವ್ಯಾಪಾರ ಸಲಹೆಗಾರ ಪೀಟರ್‌ ನವರೋ, ಭಾರತವು ಬ್ಲಡ್‌ ಮನಿ ನೀಡಿ ರಷ್ಯಾದಿಂದ ತೈಲ ಖರೀದಿಸುತ್ತಿದೆ. ರಷ್ಯಾದಿಂದ ತೈಲ ಖರೀದಿಸುವ ಮೂಲಕ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಅಮೆರಿಕ ಏನೇ ಮಾತನಾಡಿದರೂ ತಲೆ ಕೆಡಿಸಿಕೊಳ್ಳದ ಭಾರತ ಜಿಎಸ್‌ಟಿ ದರವನ್ನು ಪರಿಷ್ಕರಿಸಿತು ಮತ್ತು ಬೇರೆ ದೇಶಗಳ ಜೊತೆ ವ್ಯಾಪಾರ ಮಾತುಕತೆ ನಡೆಸುತ್ತಿದೆ.

    ಟ್ರಂಪ್‌ಗೆ ಭಾರತದ ಮೇಲೆ ಸಿಟ್ಯಾಕೆ?
    ಟ್ರಂಪ್‌ ಸಿಟ್ಟಿಗೆ ಹಲವು ಕಾರಣಗಳನ್ನು ನೀಡಬಹುದು. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಟ್ಯಾರಿಫ್‌ ಹಾಕುವ ದೇಶ ಎಂದು ಟ್ರಂಪ್‌ ಮೊದಲ ಅವಧಿಯಲ್ಲೇ ದೂರಿದ್ದರು. ಎರಡನೇಯದ್ದಾಗಿ ಭಾರತ ಈಗ ಮೊದಲಿನಂತೆ ಇಲ್ಲ. ಚೀನಾದಂತೆ ಉತ್ಪದನಾ ವಲಯ ದೇಶವಾಗಿ ನಿಧಾನವಾಗಿ ಬದಲಾಗುತ್ತಿದೆ. ಅಮೆರಿಕ ಮತ್ತು ಯರೋಪಿಯನ್‌ ಯೂನಿಯನ್‌ಗಳು ಮೊದಲಿನಿಂದಲೂ ಭಾರತ ಬಡ ದೇಶ ಎಂದು ಹೇಳುತ್ತಾ ಬಂದಿದ್ದವು. ಆದರೆ ಈಗ ಭಾರತ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಬದಲಾಗಿದೆ. ಅಷ್ಟೇ ಅಲ್ಲೇ ವಿಶ್ವದ ಜಿಡಿಪಿ ಬೆಳವಣಿಗೆಯಲ್ಲಿ ಭಾರತ ನಿರಂತರವಾಗಿ ಮೊದಲ ಸ್ಥಾನದಲ್ಲೇ ಮುನ್ನಡೆಯುತ್ತಿದೆ. ಇದನ್ನು ಅರಗಿಸಿಕೊಳ್ಳಲು ಅಮೆರಿಕಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಭಾರತವನ್ನು ಮತ್ತೊಂದು ಚೀನಾ ಆಗಲು ನಾನು ಬಿಡುವುದಿಲ್ಲ. ಅಮೆರಿಕದ ಕಂಪನಿಗಳು ಅಮೆರಿಕದಲ್ಲಿ ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿ ಮಾಡಬೇಕೆಂಬ ಬೇಡಿಕೆಯನ್ನು ಟ್ರಂಪ್‌ ಮುಂದಿಟ್ಟಿದ್ದಾರೆ.

    ಇನ್ನೊಂದು ಮುಖ್ಯ ಕಾರಣ ಆಪರೇಷನ್‌ ಸಿಂಧೂರ ಕಾರ್ಯಾಚರಣೆ. ಆಪರಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತ ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಮುಖ್ಯವಾಗಿ ರಾವಲ್ಪಿಂಡಿ ಬಳಿಯ ನೂರ್‌ ಖಾನ್‌ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದು ಅಮೆರಿಕಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಮೆರಿಕ ನಿರ್ಮಿತ ಎಫ್‌16 ಯುದ್ಧ ವಿಮಾನಗಳಿದ್ದ ಈ ನೆಲೆಯ ಮೇಲೆ ಭಾರತ ದಾಳಿ ಮಾಡಿತ್ತು. ದಾಳಿಯಿಂದಾಗಿ ಹಲವು ಎಫ್‌16 ಯುದ್ಧ ವಿಮಾನಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ಇದನ್ನು ಅಮೆರಿಕದ ಅನಧಿಕೃತ ವಾಯು ನೆಲೆ ಎಂದೇ ಕರೆಯಲಾಗುತ್ತದೆ.

    ಕೆಲ ರಕ್ಷಣಾ ವಿಶ್ಲೇಷಕರ ಪ್ರಕಾರ, ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್‌ ಅಮೆರಿಕದ ಪರ್ಲ್‌ ಹರ್ಬರ್‌ ನೌಕಾ ನೆಲೆಯ ಮೇಲೆಯ ದಾಳಿ ನಡೆಸಿತ್ತು. ಈ ದಾಳಿಯ ನಂತರ ಅಮೆರಿಕ ನಿರ್ಮಿತ ಯುದ್ಧ ವಿಮಾನಗಳ ಮೇಲೆ ನಡೆದ ಭೀಕರ ದಾಳಿ ಇದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಭಾರತ ಮತ್ತು ಪಾಕ್‌ ನಡುವಿನ ಯುದ್ಧ ನಿಲ್ಲಿಸಲು ನಾನು ಕಾರಣ ಎಂದು ಟ್ರಂಪ್‌ ಹೇಳುತ್ತಾ ಬಂದಿದ್ದಾರೆ. ಆದರೆ ಭಾರತ ಇಲ್ಲಿಯವರೆಗೆ ಟ್ರಂಪ್‌ಗೆ ಯಾವುದೇ ಕ್ರೆಡಿಟ್‌ ನೀಡಿಲ್ಲ. ಆದರೆ ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದಕ್ಕೆ ಟ್ರಂಪ್‌ ಹೆಸರನ್ನು ನೊಬೆಲ್‌ ಪ್ರಶಸ್ತಿಗೆ ಶಿಫಾರಸು ಮಾಡಿದೆ.

    ಪ್ರಧಾನಿ ಮೋದಿ ಜಿ7 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗಿಯಾಗಲು ಕೆನಡಾಗೆ ತೆರಳಿದ್ದರು. ಈ ಸಂದರ್ಭದಲ್ಲಿ ಟ್ರಂಪ್‌ ಮೋದಿ ಅವರನ್ನು ಅಮೆರಿಕಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಆದರೆ ಮೋದಿ ಪೂರ್ವ ನಿಗದಿತ ಕಾರ್ಯಕ್ರಮಗಳು ಇರುವ ಕಾರಣ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಟ್ರಂಪ್‌ ಆಹ್ವಾನ ನೀಡುವಾಗ ಪಾಕ್‌ ಸೇನಾ ಮುಖ್ಯಸ್ಥ ಆಸೀಫ್‌ ಮುನೀರ್‌ ಸಹ ಅಮೆರಿಕದಲ್ಲೇ ಇದ್ದರು. ಒಂದು ವೇಳೆ ಅಮೆರಿಕಕ್ಕೆ ತೆರಳಿದ್ದರೆ ಮೋದಿ ಮತ್ತು ಮುನೀರ್‌ ಜೊತೆ ನಿಂತು ಯುದ್ಧ ನಿಲ್ಲಿಸಿದ್ದು ನಾನು ಎಂದು ಪೋಸ್‌ ಕೊಡಲು ಟ್ರಂಪ್‌ ಮುಂದಾಗಿದ್ದರು. ಆದರೆ ಮೋದಿ ನಯವಾಗಿ ಟ್ರಂಪ್‌ ಆಹ್ವಾನವನ್ನು ತಿರಸ್ಕರಿಸಿದ್ದರು. ಇದಕ್ಕೆ ಉದಾಹರಣೆ ಎಂಬಂತೆ ಅಜರ್‌ಬೈಜನ್‌ ಮತ್ತು ಅರ್ಮೇನಿಯಾದ ಮಧ್ಯೆ ಕಿತ್ತಾಟ ನಡೆದಾಗ ಟ್ರಂಪ್‌ ಈ ಎರಡು ದೇಶಗಳ ಮುಖ್ಯಸ್ಥರನ್ನು ಶ್ವೇತ ಭವನಕ್ಕೆ ಕರೆಸಿ ಮಾತನಾಡಿದ್ದರು. ರಷ್ಯಾ- ಉಕ್ರೇನ್‌ ಮಧ್ಯೆ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಪುಟಿನ್‌ ಜೊತೆ ಕರೆ ಮಾಡುವಾಗ ಯುರೋಪಿನ ನಾಯಕರನ್ನು ತನ್ನ ನಿವಾಸಕ್ಕೆ ಟ್ರಂಪ್‌ ಕರೆಸಿ ನಾನು ಬಾಸ್‌ ಎಂಬಂತೆ ವರ್ತಿಸಿದ್ದರು.

    ಟ್ರಂಪ್‌ ಮಧ್ಯಸ್ಥಿತಿಕೆಯಲ್ಲಿ ಕದನ ವಿರಾಮ ಘೋಷಿಸಿದ ಅಜರ್‌ಬೈಜನ್, ಅರ್ಮೇನಿಯಾ
    ಟ್ರಂಪ್‌ ಮಧ್ಯಸ್ಥಿತಿಕೆಯಲ್ಲಿ ಕದನ ವಿರಾಮ ಘೋಷಿಸಿದ ಅಜರ್‌ಬೈಜನ್, ಅರ್ಮೇನಿಯಾ

    ಭಾರತದ ಜೊತೆಗಿನ ವ್ಯಾಪಾರ ಮಾತುಕತೆ ವಿಫಲವಾದ ನಂತರ ಟ್ರಂಪ್‌ ನಾಲ್ಕು ಬಾರಿ ಮೋದಿ ಅವರಿಗೆ ಕರೆ ಮಾಡಿದ್ದರು. ಆದರೆ ಮೋದಿ ಅವರು ಟ್ರಂಪ್‌ ಕರೆಯನ್ನು ತಿರಸ್ಕರಿಸಿದ್ದರು ಎಂದು ವರದಿಯಾಗಿದೆ. ಈ ಎಲ್ಲಾ ಕಾರಣಕ್ಕೆ ಟ್ರಂಪ್‌ ಭಾರತದ ವಿರುದ್ಧ ಸಿಟ್ಟಾಗಿರಬಹುದು ಎನ್ನಲಾಗುತ್ತಿದೆ.

    ಯುರೋಪಿಯನ್‌ ನಾಯಕರ ಜೊತೆ ಟ್ರಂಪ್‌ ಮಾತು

    ಈಗ ಭಾರತದ ಜಪ ಯಾಕೆ?
    ಅಣುಬಾಂಬು ಸ್ಫೋಟ ಮಾಡಿದ್ದಕ್ಕೆ ಸಿಟ್ಟಾದ ಅಮೆರಿಕ ನಿರ್ಬಂಧ ಹೇರಿದ್ದರಿಂದ ಭಾರತ ರಷ್ಯಾದ ಕಡೆ ವಾಲಿತ್ತು. ಆದರೆ 2000ದ ಬಳಿಕ ಭಾರತ ಮತ್ತು ಅಮೆರಿಕ ಸಂಬಂಧ ನಿಧಾನವಾಗಿ ಸುಧಾರಣೆಯಾಗತೊಡಗಿತು. ಅದರಲ್ಲೂ ಮೋದಿ ಅವರ ಅವಧಿಯಲ್ಲಿ ಒಬಾಮಾ ಭಾರತಕ್ಕೆ ಬಂದಿದ್ದರು. ಅಷ್ಟೇ ಅಲ್ಲದೇ ಟ್ರಂಪ್‌ ಭಾರತಕ್ಕೆ ಆಗಮಿಸಿ ಅಹಮದಾಬಾದ್‌ನಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಉದ್ಘಾಟಿಸಿದ್ದರು. ಮೋದಿ ಅವರು ಟ್ರಂಪ್‌ ಅವರ ಪರ ಅಮೆರಿಕದಲ್ಲಿ ಪ್ರಚಾರ ಸಹ ನಡೆಸಿದ್ದರು. ಭಾರತ ಮತ್ತು ಅಮೆರಿಕದ ಸಂಬಂಧ ಉತ್ತಮವಾಗುತ್ತಿರುವ ಸಮಯದಲ್ಲೇ ಟ್ರಂಪ್‌ ಸುಂಕ ಸಮರ ಹೇರಿದ್ದರು.

    ಸುಂಕ ಸಮರದ ಬಳಿಕ ಯಾರೂ ನೀರಿಕ್ಷೆ ಮಾಡದ ರೀತಿಯಲ್ಲಿ ಭಾರತ, ಚೀನಾ ಒಂದಾಗಿದೆ. ಸದ್ಯ ವಿಶ್ವದಲ್ಲಿ ಸದ್ಯ ಅಮೆರಿಕಕ್ಕೆ ಸಡ್ಡು ಹೊಡೆಯಬಲ್ಲ ಸಾಮರ್ಥ್ಯ ಇರುವ ದೇಶ ಯಾವುದು ಎಂದರೆ ಅದು ಚೀನಾ ಮಾತ್ರ. ಇನ್ನೊಂದು ಕಡೆ ಏಷ್ಯಾದಲ್ಲಿ ಚೀನಾಗೆ ಪ್ರತಿಸ್ಪರ್ಧಿಯಾಗಬಲ್ಲ ದೇಶ ಯಾವುದು ಎಂದರೆ ಅದು ಭಾರತ. ಹೀಗಾಗಿ ಭಾರತದ ಜೊತೆ ಅಮೆರಿಕದ ಸಂಬಂಧ ಸುಧಾರಿಸಿತ್ತು. ಆದರೆ ಟ್ರಂಪ್‌ ನೀತಿಯಿಂದಾಗಿ ಭಾರತ ಅಮೆರಿಕದ ಸಂಬಂಧ ಈಗ ಹಾಳಾಗಿದೆ.

    ಭಾರತ, ಚೀನಾ, ರಷ್ಯಾದ ನಾಯಕರು ಒಂದಾಗಿ ಮಾತುಕತೆ ನಡೆಸಿದ ಬಳಿಕ ಅಮೆರಿಕದ ಮಾಜಿ ಅಧಿಕಾರಿಗಳು ಟ್ರಂಪ್‌ ನೀತಿಯನ್ನು ಪ್ರತಿನಿತ್ಯ ಟೀಕಿಸುತ್ತಿದ್ದಾರೆ. ರಷ್ಯಾ, ಚೀನಾಕ್ಕಿಂತಲೂ ಸದ್ಯ ಭಾರತ ನಮಗೆ ಅಗತ್ಯವಿದೆ. ಭಾರತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಭಾರತವನ್ನು ನಾವು ಕಳೆದುಕೊಂಡರೆ ದೊಡ್ಡ ಮಾರುಕಟ್ಟೆಯನ್ನು ಕಳೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

    ಅಮೆರಿಕದವರು ಭಾರತದ ಪರ ಮಾತನಾಡಲು ಕಾರಣ ಸಹ ಇದೆ. ವಿಶ್ವದ ಆರ್ಥಿಕತೆಯಲ್ಲಿ ಅಮೆರಿಕ ನಂಬರ್‌ ಒನ್‌ ಹೌದು. ಆದರೆ ವಿಶ್ವದ ಜನಸಂಖ್ಯೆಯಲ್ಲಿ ಭಾರತ, ಚೀನಾ, ರಷ್ಯಾದ ರಾಷ್ಟ್ರಗಳ ಜನಸಂಖ್ಯೆ ಶೇ.34 ರಷ್ಟಿದೆ. ಅಮೆರಿಕದ ಜನಸಂಖ್ಯೆ 34 ಕೋಟಿ ಇದ್ದರೆ ಭಾರತದಲ್ಲಿ 144 ಕೋಟಿ, ಚೀನಾದಲ್ಲಿ 143 ಕೋಟಿ, ರಷ್ಯಾದಲ್ಲಿ 14.6 ಕೋಟಿ ಜನರಿದ್ದಾರೆ. ಅಂದರೆ ಅಮೆರಿಕ ಜನಸಂಖ್ಯೆಯ 9 ಪಟ್ಟು ಜನಸಂಖ್ಯೆ ಈ ದೇಶಗಳಲ್ಲಿ ಇದೆ. ಹಿಂದೆ ಜನಸಂಖ್ಯೆಯನ್ನು ನಾವು ಶಾಪ ಎಂದುಕೊಂಡಿದ್ದೆವು. ಆದರೆ ಈಗ ಜನಸಂಖ್ಯೆಯೇ ನಮ್ಮ ಶಕ್ತಿಯಾಗಿದೆ. ಅತಿ ದೊಡ್ಡ ಗ್ರಾಹಕ ಮಾರುಕಟ್ಟೆ ಭಾರತ ಮತ್ತು ಚೀನಾದಲ್ಲಿದೆ. ಭಾರತ ಮತ್ತು ಚೀನಾ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ. ಆದರೆ ತೈಲವನ್ನು ನಾವು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ. ಆದರೆ ಈಗ ತೈಲಕ್ಕೂ ನಮಗೆ ರಷ್ಯಾದಂತಹ ಸ್ನೇಹಿತ ಸಿಕ್ಕಿದ್ದಾನೆ.

    ಅಮೆರಿಕ ಮತ್ತು ಯುರೋಪ್‌ ದೇಶಗಳು ವಿಶ್ವವನ್ನು ಹೇಗೆ ಬೇಕಾದರೂ ಆಡಿಸಬಹುದು ಎಂದು ಅಹಂಕಾರದಿಂದ ವರ್ತಿಸುತ್ತಿದ್ದವು. ಆದರೆ ರಷ್ಯಾ ಉಕ್ರೇನ್‌ ಯುದ್ಧದಿಂದ ಈ ದೇಶಗಳಿಗೂ ನಮ್ಮ ಆಟ ಇನ್ನುಮುಂದೆ ನಡೆಯುವುದಿಲ್ಲ ಎನ್ನುವುದು ಗೊತ್ತಾಗಿದೆ. ರಷ್ಯಾದ ಖಾತೆಯನ್ನು ಫ್ರೀಜ್‌ ಮಾಡಿದಾಗ ರಷ್ಯಾದ ಆರ್ಥಿಕತೆ ಪತನವಾಗಿ ಯುದ್ಧದಲ್ಲಿ ಸೋಲಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು. ಆದರೆ ಆದರೆ ಕಥೆ ಬದಲಾಗಿದ್ದು ಭಾರತ ಮತ್ತು ಚೀನಾ ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಿತು. ಪರಿಣಾಮ ಆರ್ಥಿಕತೆ ಅಷ್ಟೊಂದು ಸಮಸ್ಯೆಯಾಗಲಿಲ್ಲ ಮತ್ತು ವಿಶ್ವದ ಕಚ್ಚಾ ತೈಲ ಬೆಲೆಯೂ ಏರಲಿಲ್ಲ.

    ಒಂದು ವೇಳೆ ಅಮರಿಕ ಯುರೋಪ್‌ ಒತ್ತಡಕ್ಕೆ ಮಣಿದು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಿದ್ದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿಯಾಗಿ ಒಂದು ಬ್ಯಾರೆಲ್‌ ಕಚ್ಚಾ ತೈಲ ದರ 150 ರಿಂದ 200 ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆಯಿತ್ತು. ಆದರೆ ಭಾರತ, ಚೀನಾದ ಪ್ರಯತ್ನದಿಂದ ಕಚ್ಚಾ ತೈಲ ದರ ನಿಯಂತ್ರಣದಲ್ಲಿದೆ. ಭಾರತ ತನ್ನ ಮಾತನ್ನು ಕೇಳುವುದಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ ಟ್ರಂಪ್‌ ಈಗ ಸ್ವಲ್ಪ ಸಾಫ್ಟ್‌ ಆದಂತೆ ಕಾಣುತ್ತಿದೆ.

     

     

    ಅಮೆರಿಕವನ್ನು ನಂಬಬಹುದೇ?
    ಈಗ ಏನೋ ಟ್ರಂಪ್‌ ಮೋದಿ ನನ್ನ ಮಿತ್ರ ಎಂದು ಹೇಳುತ್ತಿದ್ದರೂ ಶ್ವೇತ ಭವನದ ಅಧಿಕಾರಿಗಳು ಭಾರತವನ್ನು ಗುರಿಯಾಗಿಸಿ ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದು ಕಡೆ ಟ್ರಂಪ್‌ ಯುರೋಪ್‌ ದೇಶಗಳಿಗೆ ಭಾರತದಿಂದ ಆಮದಾಗುವ ವಸ್ತುಗಳಿಗೆ 100% ತೆರಿಗೆ ವಿಧಿಸುವಂತೆ ಹೇಳಿರುವುದಾಗಿ ವರದಿಯಾಗಿದೆ.

    ಆಪರೇಷನ್ ಸಿಂಧೂರದ ಬಳಿಕ ಟ್ರಂಪ್‌ ಪಾಕಿಸ್ತಾನಕ್ಕೆ ಆಪ್ತರಾಗಿದ್ದಾರೆ. ತನ್ನ ನಿವಾಸದಲ್ಲೇ ಪಾಕ್‌ ಸೇನಾ ಮುಖ್ಯಸ್ಥ ಮುನೀರ್‌ಗೆ ಔತಣ ನೀಡಿದ್ದಾರೆ. ಅಷ್ಟೇ ಅಲ್ಲದೇ ಟ್ರಂಪ್‌ ಕುಟುಂಬದ ಕ್ರಿಪ್ಟೋ ವ್ಯವಹಾರ ನಡೆಸಲು ಪಾಕ್‌ ಸರ್ಕಾರ ಸಹ ಒಪ್ಪಿಗೆ ನೀಡಿದೆ. ಹೀಗಾಗಿ ಟ್ರಂಪ್‌ ತನಗೆ ಏನು ಲಾಭ ಸಿಗುತ್ತೆ ಅದನ್ನು ನೋಡಿಕೊಂಡು ವ್ಯವಹಾರ ನಡೆಸುತ್ತಾರೆ. ಹಾಗೆ ನೋಡಿದರೆ ವ್ಯಾಪಾರ ವಹಿವಾಟಿನಲ್ಲಿ ಭಾರತದಿಂದ ಅಮೆರಿಕಕ್ಕೆ ಹೆಚ್ಚಿನ ವಸ್ತುಗಳು ರಫ್ತಾಗುತ್ತದೆ. ಈ ಕಾರಣಕ್ಕೆ ಟ್ರಂಪ್‌ ಹಾಲಿನ ಉತ್ಪನ್ನ ಮತ್ತು ಕೃಷಿ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗೆ ನುಗ್ಗಿಸಲು ಬಹಳ ಪ್ರಯತ್ನ ಪಟ್ಟಿದ್ದರು. ಆದರೆ ಸರ್ಕಾರ ಅಮೆರಿಕದ ಒತ್ತಡಕ್ಕೆ ಬಗ್ಗಿರಲಿಲ್ಲ.

    ಆಪರೇಷನ್‌ ಸಿಂಧೂರದ ಬಗ್ಗೆ ಭಾರತ ಅಧಿಕೃತವಾಗಿ ನಿರ್ಧಾರ ಪ್ರಕಟಿಸುವ ಮೊದಲೇ ಟ್ರಂಪ್‌ ಕದನ ವಿರಾಮ ನಡೆದಿದೆ. ನನ್ನಿಂದಾಗಿ ಅಣ್ವಸ್ತ್ರ ಹೊಂದಿದ ಎರಡು ದೇಶಗಳ ಕಾದಾಟ ನಿಂತಿದೆ ಎಂದು ಹಲವು ಬಾರಿ ಹೇಳಿದ್ದಾರೆ. ಟ್ರಂಪ್‌ ಮಾತಿಗೆ ಪಾಕ್‌ ಧ್ವನಿಗೂಡಿಸಿದ್ದರೆ ಭಾರತ ಪಾಕ್‌ ಮನವಿಯ ಮೇರೆಗೆ ಕದನ ವಿರಾಮ ಘೋಷಣೆಯಾಗಿದೆ ಎಂದು ಹೇಳಿದೆ. ಸದ್ಯ ಟ್ರಂಪ್‌ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಸ್ನೇಹಿತ ಎಂದು ಈಗ ಕರೆದರೂ ಕೆಲ ದಿನಗಳ ಹಿಂದೆ ಭಾರತವನ್ನ ಡೆಡ್‌ ಎಕಾನಮಿ ಎಂದು ಟ್ರಂಪ್‌ ಕರೆದು ವ್ಯಂಗ್ಯವಾಡಿದ್ದರು. ನಂಬಿಕೆ ಇದ್ದಲ್ಲಿ ವಿಶ್ವಾಸ ಇರುತ್ತದೆ. ಆದರೆ ಟ್ರಂಪ್‌ ಅವರ ಮೇಲೆ ಇಟ್ಟಿದ್ದ ನಂಬಿಕೆ ಹೋಗಿದೆ. ಹೀಗಾಗಿ ಭಾರತ ಅದರಲ್ಲೂ ಟ್ರಂಪ್‌ ಅವಧಿಯಲ್ಲಿ ಅಮೆರಿಕದ ಜೊತೆ ವ್ಯವಹಾರ ನಡೆಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

  • ಕ್ಯಾಂಪಸ್‌ನಲ್ಲಿ ಬಂದೂಕು ಸಂಸ್ಕೃತಿ ವಿರೋಧಿಸಿ ಮಾತನಾಡುವಾಗಲೇ ಟ್ರಂಪ್‌ ಸ್ನೇಹಿತ, ಉದ್ಯಮಿ ಗುಂಡೇಟಿಗೆ ಬಲಿ

    ಕ್ಯಾಂಪಸ್‌ನಲ್ಲಿ ಬಂದೂಕು ಸಂಸ್ಕೃತಿ ವಿರೋಧಿಸಿ ಮಾತನಾಡುವಾಗಲೇ ಟ್ರಂಪ್‌ ಸ್ನೇಹಿತ, ಉದ್ಯಮಿ ಗುಂಡೇಟಿಗೆ ಬಲಿ

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಆಪ್ತ 31 ವರ್ಷದ ಚಾರ್ಲಿ ಕಿರ್ಕ್ (Charlie Kirk) ಅವರನ್ನು ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.

    ಚಾರ್ಲ್ಸ್ ಕಿರ್ಕ್ ಬಲಪಂಥೀಯ ರಾಜಕೀಯ ಕಾರ್ಯಕರ್ತರಾಗಿದ್ದರು. 2012 ರಲ್ಲಿ ʼಟರ್ನಿಂಗ್ ಪಾಯಿಂಟ್ʼ ಹೆಸರಿನಲ್ಲಿ ಸಂಘಟನೆಯನ್ನು ಸ್ಥಾಪಿಸಿದ್ದರು. ಟರ್ನಿಂಗ್ ಪಾಯಿಂಟ್ ಆಕ್ಷನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ರಾಷ್ಟ್ರೀಯ ನೀತಿ ಮಂಡಳಿಯ ಸದಸ್ಯರಾಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.

    ಚಾರ್ಲಿ ಕಿರ್ಕ್ ಅವರು ತಮ್ಮ ಲಾಭರಹಿತ ರಾಜಕೀಯ ಸಂಸ್ಥೆ ಆಯೋಜಿಸಿದ್ದ ಚರ್ಚೆಯಲ್ಲಿ ಮಾತನಾಡುತ್ತಿದ್ದರು. ಗುಂಡಿನ ದಾಳಿಗೆ ಮೊದಲು ಕಿರ್ಕ್ ಸಾಮೂಹಿಕ ಗುಂಡಿನ ದಾಳಿ ಮತ್ತು ಬಂದೂಕು ಹಿಂಸಾಚಾರದ ಬಗ್ಗೆ ಪ್ರೇಕ್ಷಕರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು.

    ಕಳೆದ 10 ವರ್ಷಗಳಲ್ಲಿ ಎಷ್ಟು ಟ್ರಾನ್ಸ್‌ಜೆಂಡರ್ ಅಮೆರಿಕನ್ನರು ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದಾರೆಂದು ನಿಮಗೆ ತಿಳಿದಿದೆಯೇ ಎಂಬ ಪ್ರಶ್ನೆಗೆ ಕಿರ್ಕ್‌ ಬಹಳ ಹೆಚ್ಚಿನ ಪ್ರಮಾಣದಲ್ಲಿ ದಾಳಿ ನಡೆಸಿದಾರೆ ಎಂದು ಉತ್ತರಿಸಿದ್ದರು. ಗುಂಡಿನ ದಾಳಿ ಕುರಿತ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರ ನೀಡುವಾಗಲೇ ಅವರ ಎದೆಗೆ ಗುಂಡು ಬಿದ್ದಿದೆ.

    ಚಾರ್ಲಿ ಕಿರ್ಕ್ ಅವರ ಕಾರ್ಯಕ್ರಮಕ್ಕೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಕಿರ್ಕ್ ಅವರ ಕ್ಯಾಂಪಸ್‌ ಪ್ರವೇಶಕ್ಕೆ ನಿರ್ಬಂಧ ಹೇರುವಂತೆ ಸಾವಿರಕ್ಕೂ ಹೆಚ್ಚು ಮಂದಿ ಆನ್‌ಲೈನ್‌ ಮೂಲಕ ಸಹಿ ಹಾಕಿದ್ದರು.

    ಟ್ರಂಪ್‌ ಪ್ರತಿಕ್ರಿಯಿಸಿ, ದಂತಕಥೆಯೂ ಆಗಿರುವ ಚಾರ್ಲಿ ಕಿರ್ಕ್ ನಿಧನರಾಗಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಚಾರ್ಲಿಗಿಂತ ಉತ್ತಮವಾಗಿ ಯಾರೂ ಯುವಕರ ಹೃದಯವನ್ನು ಅರ್ಥಮಾಡಿಕೊಂಡಿಲ್ಲ ಅಥವಾ ಹೊಂದಿರಲಿಲ್ಲ. ಅವರನ್ನು ಎಲ್ಲರೂ, ವಿಶೇಷವಾಗಿ ನಾನು ಪ್ರೀತಿಸುತ್ತಿದ್ದೆ ಮತ್ತು ಮೆಚ್ಚುತ್ತಿದ್ದೆ ಮತ್ತು ಈಗ ಅವರು ನಮ್ಮೊಂದಿಗೆ ಇಲ್ಲ. ಗುಂಡೇಟಿಗೆ ಬಲಿಯಾದ ಚಾರ್ಲಿ ಕಿರ್ಕ್‌ಗಾಗಿ ನಾವೆಲ್ಲರೂ ಪ್ರಾರ್ಥಿಸಬೇಕು ಎಂದು ಪೋಸ್ಟ್‌ ಮಾಡಿದ್ದಾರೆ.

  • ನನ್ನ ಆತ್ಮೀಯ ಸ್ನೇಹಿತ ಮೋದಿ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ: ಟ್ರಂಪ್‌

    ನನ್ನ ಆತ್ಮೀಯ ಸ್ನೇಹಿತ ಮೋದಿ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ: ಟ್ರಂಪ್‌

    – ಟ್ರಂಪ್‌ ಜೊತೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ: ಮೋದಿ

    ವಾಷಿಂಗ್ಟನ್‌/ನವದೆಹಲಿ: ಭಾರತದ ಮೇಲೆ ಸುಂಕ ಸಮರ ಆರಂಭಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ವಾರದಲ್ಲಿ ಎರಡನೇ ಬಾರಿ ಪ್ರಧಾನಿ ನರೇಂದ್ರ ಮೋದಿ (Narendra Modi) ನನ್ನ ಉತ್ತಮ ಸ್ನೇಹಿತ ಎಂದು ಹೇಳಿದ್ದಾರೆ.

    ತನ್ನ ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಟ್ರಂಪ್‌, ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ಅಡೆತಡೆಗಳನ್ನು ನಿವಾರಿಸಲು ಭಾರತ (India) ಮತ್ತು ಅಮೆರಿಕ (USA) ಮಾತುಕತೆಗಳನ್ನು ಮುಂದುವರಿಸುತ್ತಿವೆ ಎಂದು ಪ್ರಕಟಿಸಲು ಸಂತೋಷವಾಗುತ್ತಿದೆ. ಮುಂಬರುವ ವಾರಗಳಲ್ಲಿ ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಟ್ರಂಪ್‌ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮೋದಿ, ಭಾರತ ಮತ್ತು ಅಮೆರಿಕ ಆಪ್ತ ಸ್ನೇಹಿತರು ಮತ್ತು ಪಾಲುದಾರರಾಗಿದ್ದೇವೆ. ಶ್ರೀಘ್ರವೇ ನಮ್ಮ ತಂಡ ಭಾರತ-ಅಮೆರಿಕ ವ್ಯಾಪಾರ ಮಾತುಕತೆಯನ್ನು ಪೂರ್ಣಗೊಳಿಸಬಹುದು ಎಂವ ವಿಶ್ವಾಸವಿದೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಲು ನಾನು ಸಹ ಎದುರು ನೋಡುತ್ತಿದ್ದೇನೆ. ಎರಡು ದೇಶದ ಜನರಿಗಾಗಿ ಉಜ್ವಲ, ಹೆಚ್ಚು ಸಮೃದ್ಧ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಮೂರು ದೇಶಗಳ ನಾಯಕರು ಒಟ್ಟಿಗೆ ಕಾಣಿಸಿಕೊಂಡ ಕೆಲವು ದಿನಗಳ ನಂತರ, ಡೊನಾಲ್ಡ್ ಟ್ರಂಪ್ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಕುಸಿದಿದೆ ಎಂದು ಹೇಳಿದ್ದರು. ನಾವು ಭಾರತ (India) ಮತ್ತು ರಷ್ಯಾವನ್ನು (Russia) ಚೀನಾಗೆ (China) ಬಿಟ್ಟು ಕೊಟ್ಟಿದ್ದೇವೆ. ಎರಡು ದೇಶಗಳ ಭವಿಷ್ಯ ಉಜ್ವಲವಾಗಿರಲಿ ಎಂದು ವ್ಯಂಗ್ಯವಾಗಿ ಹಾರೈಸಿದರು.

    ಚೀನಾದ ಕ್ಸಿ ಜಿನ್‌ಪಿಂಗ್ ಆಯೋಜಿಸಿದ್ದ ಶೃಂಗಸಭೆಯಲ್ಲಿ ಮೂವರು ನಾಯಕರ ಭೇಟಿ ವಿಶ್ವಕ್ಕೆ ಒಂದು ಸಂದೇಶವನ್ನು ಕಳುಹಿಸಿತ್ತು. ಟ್ರಂಪ್‌ ಸುಂಕ ಸಮರದ ವಿರುದ್ಧ ಹೋರಾಡಲು ಮೂವರು ನಾಯಕರು ಒಂದಾಗಿದ್ದಾರೆ ಎಂದು ಬಣ್ಣಿಸಲಾಗುತ್ತಿದೆ. ಇದನ್ನೂ ಓದಿ:  ಇದನ್ನೂ ಓದಿ: PublicTV Explainer: ಮತ್ತೊಮ್ಮೆ ಇಂಡೋ-ಚೀನಾ ಭಾಯಿ ಭಾಯಿ- ಭಾರತಕ್ಕೆ ಚೀನಾ ಯಾಕೆ ಬೇಕು?

    ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೋದಿ ಭಾಗವಹಿಸುವುದಿಲ್ಲ. ವಿದೇಶಾಂಗ ಸಚಿವ ಜೈಶಂಕರ್‌ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನಲ್ಲೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕೇಂದ್ರ ಕಚೇರಿ ಇರುವ ಕಾರಣ ಸಾಧಾರಣವಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಗಣ್ಯರು ಅಮೆರಿಕದ ಅಧ್ಯಕ್ಷರನ್ನು ಭೇಟಿಯಾಗುತ್ತಾರೆ. ಆದರೆ ಈ ಬಾರಿ ತೆರಳದ ಕಾರಣ ಟ್ರಂಪ್‌ ಮತ್ತು ಮೋದಿ ಎಲ್ಲಿ ಮಾತನಾಡುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

    ಭಾರತ ಮತ್ತು ಅಮೆರಿಕದ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಸುಧಾರಣೆಯಾಗುವ ಹಂತಕ್ಕೆ ತಲುಪಿತ್ತು. ಸುಧಾರಣೆಯಾಗುತ್ತಿರುವ ಸಂಬಂಧವನ್ನು ಟ್ರಂಪ್‌ ಹಾಳು ಮಾಡಿದ್ದಾರೆ. ರಷ್ಯಾ, ಚೀನಾದ ಜೊತೆ ಭಾರತ ಸೇರಿದರೆ ಮುಂಬರುವ ದಿನಗಳಲ್ಲಿ ಅಮೆರಿಕಕ್ಕೆ ಕಷ್ಟವಾಗಬಹುದು. ಪ್ರಸ್ತುತ ಈಗ ವಿಶ್ವದ ಬಹುತೇಕ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶಗಳು ಅಮೆರಿಕವನ್ನು ಎದುರುಹಾಕಿಕೊಂಡಿದೆ. ಭಾರರತ ವಿಶ್ವದ ದೊಡ್ಡ ಗ್ರಾಹಕ ಮಾರುಕಟ್ಟೆ ದೇಶ. ಭಾರತವನ್ನು ಎದುರು ಹಾಕಿಕೊಂಡರೆ ನಮಗೆ ಕಷ್ಟವಾಗಲಿದೆ ಎಂದು ಅಮೆರಿಕ ಸರ್ಕಾರದ ಮಾಜಿ ಅಧಿಕಾರಿಗಳು ಆತಂಕವನ್ನು ಹೊರಹಾಕಿದ್ದರು.