Tag: USA

  • ಸುನೀತಾ ವಿಲಿಯಮ್ಸ್‌ ಇನ್ನೂ 6 ತಿಂಗಳು ಭೂಮಿಗೆ ಬರಲ್ಲ – ಅಲ್ಲಿವರೆಗೂ ಗಗನಯಾನಿಗಳಿಗೆ ಆಹಾರ ವ್ಯವಸ್ಥೆ ಹೇಗೆ?

    ಸುನೀತಾ ವಿಲಿಯಮ್ಸ್‌ ಇನ್ನೂ 6 ತಿಂಗಳು ಭೂಮಿಗೆ ಬರಲ್ಲ – ಅಲ್ಲಿವರೆಗೂ ಗಗನಯಾನಿಗಳಿಗೆ ಆಹಾರ ವ್ಯವಸ್ಥೆ ಹೇಗೆ?

    ವಾಷಿಂಗ್ಟನ್‌: ಕಳೆದ ಜೂನ್‌ 5ರಂದು ಬಾಹ್ಯಾಕಾಶಕ್ಕೆ (Space) ತೆರಳಿದ್ದ ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ (Sunita Williams) ಅವರು ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಒಂದು ವಾರದ ಅವಧಿಗೆಂದು ಹೋದ ಅವರು ಇನ್ನೂ 6 ತಿಂಗಳು ಬಾಹ್ಯಾಕಾಶದಲ್ಲೇ ಉಳಿಯಲಿದ್ದಾರೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

    ಸದ್ಯ ಸುನೀತಾ ವಿಲಿಯಮ್ಸ್‌ ಹಾಗೂ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ (Butch Wilmore) ತಾಂತ್ರಿಕ ದೋಷದಿಂದಾಗಿ ಬಾಹ್ಯಕಾಶದಲ್ಲೇ ಸಿಲುಕಿಕೊಂಡಿದ್ದಾರೆ. ಈ ಇಬ್ಬರು ಗಗನಯಾತ್ರಿಗಳು ಮುಂದಿನ ವರ್ಷ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಹೇಳಿದೆ. ಮುಂದಿನ ಫೆಬ್ರವರಿಯಲ್ಲಿ ಬುಚ್ ಮತ್ತು ಸುನಿತಾ ಕ್ರ್ಯೂ-9 ರೊಂದಿಗೆ ಹಿಂತಿರುಗುತ್ತಾರೆ ಮತ್ತು ಸ್ಟಾರ್ಲೈನರ್ ಸಿಬ್ಬಂದಿಯಿಲ್ಲದೇ ಹಿಂತಿರುಗುತ್ತಾರೆ ಎಂದು ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ. ಬೋಯಿಂಗ್ ಬಾಹ್ಯಾಕಾಶ ನೌಕೆಯ ಥ್ರಸ್ಟರ್ ಅಸಮರ್ಪಕ ಕಾರ್ಯಗಳಿಂದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ಹಿಂತಿರುಗುವುದು ವಿಳಂಬವಾಗಿದೆ ಎಂದು ಅವರು ಹೇಳಿದ್ದಾರೆ.

    ಆಹಾರ ವ್ಯವಸ್ಥೆ ಹೇಗೆ?
    ಸದ್ಯ ಇನ್ನೂ 6 ತಿಂಗಳು ಬಾಹ್ಯಾಕಾಶದಲ್ಲೇ ಉಳಿಯಲಿರುವ ಗಗನ ಯಾನಿಗಳಿಗೆ ಆಹಾರ ಪೂರೈಕೆ ಹೇಗೆ ಸಾಧ್ಯ ಎನ್ನುವುದರ ಬಗ್ಗೆ ಎಲ್ಲರ ಕುತೂಹಲ ನೆಟ್ಟಿದೆ. ಇದಕ್ಕೆ ನಾಸಾ ಮಾಸ್ಟರ್‌ ಪ್ಲ್ಯಾನ್‌ ಸಹ ಮಾಡಿಕೊಂಡಿದೆ. ಹೌದು. ಮಾನವ ಸಹಿತ ನೌಕೆಯ ಉಡ್ಡಯನ ಸಾಧ್ಯವಾಗದೇ ಇದ್ದರೂ, ಸರಕು ಸಾಗಾಣೆಗೆ ಇರುವ ನೌಕೆಗಳು ಬಾಹ್ಯಾಕಾಶ ಕೇಂದ್ರಕ್ಕೆ ಆಗಾಗ್ಗೆ ಹೋಗಿಬರುತ್ತವೆ. ಅದರ ಮೂಲಕವೇ ಸುನೀತಾ ಹಾಗೂ ವಿಲ್ಮೋರ್‌ ಅವರಿಗೆ ಆಹಾರ ಸಾಮಗ್ರಿಗಳನ್ನು ಕಳುಹಿಸಿಕೊಡಲು ನಾಸಾ ನಿರ್ಧರಿಸಿದೆ.

    ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕಳೆದ ಜೂನ್‌ 5ರಂದು ಆರಂಭಿಸಿದ್ದರು. ಜೂನ್‌ 6ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್‌ ತಲುಪಿದ್ದ ಅವರು 1 ವಾರ ಸಂಶೋಧನೆ ನಡೆಸಿ ವಾಪಸಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಅವರು ಅಲ್ಲಿಯೇ ಸಿಲುಕಿದ್ದಾರೆ. ಇವರು ಯಾವಾಗ ಬರುತ್ತಾರೆ ಎಂಬುದರ ಕುರಿತು ನಾಸಾ ಈಗ ಮಾಹಿತಿ ನೀಡಿದೆ.

  • ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ವಿನಯ್ ಮೋಹನ್ ಕ್ವಾತ್ರಾ ಅಧಿಕಾರ ಸ್ವೀಕಾರ

    ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ವಿನಯ್ ಮೋಹನ್ ಕ್ವಾತ್ರಾ ಅಧಿಕಾರ ಸ್ವೀಕಾರ

    ವಾಷಿಂಗ್ಟನ್: ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ (Indian Ambassador) ವಿನಯ್ ಮೋಹನ್ ಕ್ವಾತ್ರಾ (Vinay Mohan Kwatra) ಅಧಿಕಾರ ಸ್ವೀಕರಿಸಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ.

    61 ವರ್ಷ ವಯಸ್ಸಿನ ಕ್ವಾತ್ರಾ ಅವರು ಇತ್ತೀಚಿನವರೆಗೂ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ (Foreign Secretary) ಕೆಲಸ ನಿರ್ವಹಿಸಿದ್ದರು. ಇದಕ್ಕೂ ಮುನ್ನ ಕ್ವಾತ್ರಾ ಅವರು ಫ್ರಾನ್ಸ್ ಮತ್ತು ನೇಪಾಳಕ್ಕೆ ಭಾರತದ ರಾಯಭಾರಿಯಾಗಿದ್ದರು, ನಂತರ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಕಳೆದ ಜುಲೈ 14 ರಂದು ವಿದೇಶಾಂಗ ಸೇವೆಯಿಂದ ನಿವೃತ್ತರಾಗಿದ್ದರು. ಇದನ್ನೂ ಓದಿ: Bengaluru | ಆಗಸ್ಟ್‌ 15ರ ವರೆಗೆ ಹಸಿರು ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ

    ಕ್ವಾತ್ರಾ ಅವರು ತರಂಜಿತ್ ಸಿಂಗ್ ಸಂಧು ಅವರ ಉತ್ತರಾಧಿಕಾರಿಯಾಗಿದ್ದಾರೆ. ಈ ವರ್ಷಾರಂಭದಲ್ಲಿ ವಿದೇಶಿ ಸೇವೆಯಿಂದ ನಿವೃತ್ತರಾದ ಕ್ವಾತ್ರಾ 2020 ರಿಂದ 2024ರ ಅವಧಿಗೆ ಯುಎಸ್‌ನಲ್ಲಿ (US) ಭಾರತದ ಉನ್ನತ ರಾಜತಾಂತ್ರಿಕರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಅಮೆರಿಕದಲ್ಲಿ ಭಾರತದ ನೂತನ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ಈ ನಡುವೆ ಅಮೆರಿಕಗೆ ಭಾರತದ ಹೊಸ ರಾಯಭಾರಿಯಾಗಿ ಕ್ವಾತ್ರಾ ಅವರನ್ನು ಸ್ವಾಗತಿಸಲು ನಮಗೆ ಸಂತೋಷವಾಗಿದೆ. ನಾವೆಲ್ಲರೂ (ಭಾರತೀಯ ರಾಯಭಾರ ಕಚೇರಿಯಲ್ಲಿ) ಅವರ ನಾಯಕತ್ವದಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಎಂದು ಚಾರ್ಜ್ ಡಿ ಅಫೇರ್ಸ್ ಶ್ರೀಪ್ರಿಯಾ ರಂಗನಾಥನ್ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ 2024: ಜಂಬೂಸವಾರಿ ಆನೆಗಳ ಪಟ್ಟಿ ರಿಲೀಸ್‌ – ಈ ಬಾರಿಯೂ ಅಭಿಮನ್ಯು ʻಕ್ಯಾಪ್ಟನ್‌ʼ

    ಹೊಸ ಭಾರತೀಯ ರಾಯಭಾರಿಯನ್ನು ಸ್ವಾಗತಿಸಲು ಗ್ರೇಟರ್ ವಾಷಿಂಗ್ಟನ್ ಡಿಸಿ ಪ್ರದೇಶದ ಪ್ರಖ್ಯಾತ ಭಾರತೀಯ ಅಮೆರಿಕನ್ನರ ಗುಂಪು ಡಲ್ಲೆಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಮಾಯಿಸಿತ್ತು. ಆದರೆ, ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ.

  • ಅಮೆರಿಕದಲ್ಲಿ ನಿರುದ್ಯೋಗ ದರ ಏರಿಕೆ, ಆರ್ಥಿಕ ಹಿಂಜರಿತ ಭೀತಿ – ಕರಗಿತು ಹೂಡಿಕೆದಾರರ 17 ಲಕ್ಷ ಕೋಟಿ  ರೂ. ಸಂಪತ್ತು

    ಅಮೆರಿಕದಲ್ಲಿ ನಿರುದ್ಯೋಗ ದರ ಏರಿಕೆ, ಆರ್ಥಿಕ ಹಿಂಜರಿತ ಭೀತಿ – ಕರಗಿತು ಹೂಡಿಕೆದಾರರ 17 ಲಕ್ಷ ಕೋಟಿ ರೂ. ಸಂಪತ್ತು

    ಮುಂಬೈ: ಇಸ್ರೇಲ್‌- ಇರಾನ್‌ ಮಧ್ಯೆ ಯುದ್ಧ (Israel Iran War) ಭೀತಿ, ಅಮೆರಿಕದಲ್ಲಿ ಆರ್ಥಿಕ ಹಿಂಜರಿತ (USA Recession) ಲಕ್ಷಣ ಸೇರಿದಂತೆ ಹಲವಾರು ಕಾರಣಗಳಿಂದ ಷೇರು ಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗಿದ್ದು ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 17 ಲಕ್ಷ ಕೋಟಿ ರೂ. ಕರಗಿದೆ.

    ಇಂದು ಬೆಳಗ್ಗೆಯೇ ಗಿಫ್ಟ್‌ ನಿಫ್ಟಿ 300 ಅಂಕ ಇಳಿಕೆಯಾಗಿತ್ತು. ಈ ಕಾರಣದಿಂದ ಬಾಂಬೆ ಷೇರು ಮಾರುಕಟ್ಟೆ (BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ನಿರೀಕ್ಷೆಯಂತೆ ಸೆನ್ಸೆಕ್ಸ್‌ 2,500 ಅಂಕ ಪತಗೊಂಡರೆ ನಿಫ್ಟಿ 760 ಅಂಕ ಇಳಿಕೆಯಾಗಿದೆ.  ಇದನ್ನೂ ಓದಿ: ಜನರನ್ನ ಕಾಪಾಡಬೇಕಾದ ಶಾಸಕರೇ ನರಭಕ್ಷಕರಾದ್ರೆ ನಮ್ಮ ಗತಿಯೇನು?: ಮೃತ ಪಿಎಸ್‌ಐ ಪರಶುರಾಮ್ ಮಾವ ಕಿಡಿ

    ಪತನವಾಗಲು ಕಾರಣ ಏನು?
    ಅಮೆರಿಕದ ಆರ್ಥಿಕ ಹಿಂಜರಿತ ಭೀತಿ:
    ಅಮೆರಿಕದಲ್ಲಿ ಉದ್ಯೋಗ ಬೆಳವಣಿಗೆಗೆ (Job Growth) ನಿರೀಕ್ಷೆಗಿಂತಲೂ ಕಡಿಮೆಯಾಗಿದೆ. ಕಾರ್ಮಿಕ ಇಲಾಖೆಯು ಕಳೆದ ತಿಂಗಳು ಕೇವಲ 1,14,000 ಉದ್ಯೋಗಿಳ ನೇಮಕವಾಗಿದೆ ಎಂದು ವರದಿ ಮಾಡಿದೆ. ಕಳೆದ ತಿಂಗಳು 1,75,000 ಉದ್ಯೋಗಿಗಳ ನೇಮಕವಾಗಬಹುದು ಎಂಬ ನಿರೀಕ್ಷೆ ಇತ್ತು. ಅಮೆರಿಕದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಲೆಕ್ಕ ಹಾಕಿದರೆ ಪ್ರತಿ ತಿಂಗಳು 2 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಬೇಕು. ಅಮೆರಿಕದಲ್ಲಿ ನಿರುದ್ಯೋಗ (Unemployment) ದರವು 4.3%ಕ್ಕೆ ಏರಿದ್ದು, ಇದು ಮೂರು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ.

    ಜಪಾನ್‌ನಲ್ಲಿ ಬಡ್ಡಿದರ ಏರಿಕೆ
    ಹಣದುಬ್ಬರವನ್ನು ನಿಯಂತ್ರಿಸಲು ಜಪಾನಿನ ಕೇಂದ್ರ ಬ್ಯಾಂಕ್‌  ಆಗಿರುವ ಬ್ಯಾಂಕ್‌ ಆಫ್‌ ಜಪಾನ್‌ (Bank Of Japan) ಬಡ್ಡಿದರವನ್ನು 0.25% ಏರಿಕೆ ಮಾಡಿದೆ ಮತ್ತು ಬಾಂಡ್‌ ಖರೀದಿಯನ್ನು ಕಡಿಮೆ ಮಾಡಿದೆ. ಇದರ ಪರಿಣಾಮ ಜಪಾನ್‌ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದು ಏಷ್ಯಾ ಸೇರಿದಂತೆ ವಿಶ್ವದ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬಿದ್ದಿದೆ. ಜಪಾನ್‌ ನಿಕ್ಕಿ 4,451 ಅಂಕ (14%) ಇಳಿಕೆಯಾಗಿದೆ. 2011 ರ ಆರ್ಥಿಕ ಬಿಕ್ಕಟ್ಟಿನ ನಂತರ ಆಗಿರುವ ಅತಿದೊಡ್ಡ ನಷ್ಟ ಇದಾಗಿದೆ.

    ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು
    ಇರಾನ್ ಮತ್ತು ಅದರ ಪ್ರಾದೇಶಿಕ ಮಿತ್ರರಾಷ್ಟ್ರಗಳಿಂದ ಇಸ್ರೇಲ್‌ನ ಮೇಲೆ ಸಂಭಾವ್ಯ ದಾಳಿಯ ಬಗ್ಗೆ ಕಳವಳಗಳು ಹೆಚ್ಚಾದ ಕಾರಣ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಇಸ್ರೇಲ್ ವಿರುದ್ಧ ಇರಾನ್ ಮತ್ತು ಹಿಜ್ಬುಲ್ಲಾ ಸೋಮವಾರ ದಾಳಿ ನಡೆಸಹುದು ಅಮೆರಿಕ ಹೇಳಿಕೆಯೂ ಪರಿಣಾಮ ಬೀರಿದೆ.

    ಜೂನ್‌ ತ್ರೈಮಾಸಿಕ ವರದಿ:
    ಭಾರತದ ಹಲವು ಕಂಪನಿಗಳು ನಿರೀಕ್ಷೆಗಿಂತಲೂ ಹೆಚ್ಚು ಬೆಳವಣಿಗೆ ಸಾಧಿಸಲು ವಿಫಲವಾಗಿದೆ. ಲಾಭಾಂಶ ಕಡಿಮೆ ಆಗಿರುವುದರಿಂದ ಭಾರತದ ಮಾರುಕಟ್ಟೆಯಿಂದ ಹೂಡಿಕೆದಾರರು ಹಣವನ್ನು ತೆಗೆದಿದ್ದಾರೆ.

     

  • ಹಾವಿನ ವಿಷವೇ ಈತನಿಗೆ ಆಹಾರ – ʻಸ್ನೇಕ್‌ ಮ್ಯಾನ್‌ʼ ಜೀವನ ಕಥೆಯೇ ರೋಚಕ!

    ಹಾವಿನ ವಿಷವೇ ಈತನಿಗೆ ಆಹಾರ – ʻಸ್ನೇಕ್‌ ಮ್ಯಾನ್‌ʼ ಜೀವನ ಕಥೆಯೇ ರೋಚಕ!

    ಹಾವಿನ ದ್ವೇಷ 12 ವರ್ಷ ಅನ್ನುವ ಮಾತಿದೆ. ಇದು ಸತ್ಯವೋ ಸುಳ್ಳೋ ಬೇರೆ ಪ್ರಶ್ನೆ. ಆದ್ರೆ ಕೆಲವು ಜಾಗಗಳಲ್ಲಿ ಹಾವುಗಳು ಪದೇ ಪದೇ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣಗಳನ್ನೂ ಜನರು ಊಹಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಶೇ. 70ರಷ್ಟು ಹಾವು (Snake) ಕಡಿತದ ಪ್ರಕರಣಗಳಲ್ಲಿ ವಿಷ ಏರುವುದಿಲ್ಲ ಎಂದು ಉರಗ ತಜ್ಞರು ಹೇಳುತ್ತಾರೆ. ಕಚ್ಚಿದ ಹಾವಿನಲ್ಲಿ ವಿಷವಿಲ್ಲದಿರುವುದು, ಕುಟುಕಿದಾಗ ಅಪಾಯಕಾರಿ ಆಗುವಷ್ಟು ಪ್ರಮಾಣದ ವಿಷ ದೇಹ ಸೇರದೇ ಇರುವುದು ಮುಂತಾದ ಹಲವು ಕಾರಣಗಳು ಇದ್ದಿರಬಹುದು. ಕೆಲವೊಮ್ಮೆ ಹಾವು ಕುಟುಕಿದಾಕ್ಷಣ ದೇಹದ ಆ ಭಾಗ ಕೆಂಪಾಗಿ ಊತ, ನೋವು ಕಾಣಬಹುದು, ರಕ್ತ ಹರಿಯಲೂಬಹುದು. ಆದರೆ ಕೆಲ ಜಾತಿಯ ಹಾವುಗಳು ಕಚ್ಚಿದಾಗ ಇಂಥ ಯಾವ ಬಾಹ್ಯ ಲಕ್ಷಣಗಳೂ ಕಾಣದೇ ಹೊಟ್ಟೆ ನೋವು ಬರಬಹುದು.

    ಉತ್ತರ ಪ್ರದೇಶದಲ್ಲಿ (Uttar Pradesh) ಇತ್ತೀಚೆಗೆ ವಿಚಿತ್ರ ಪ್ರಕರಣವೊಂದು ವರದಿಯಾಗಿತ್ತು. 24 ವರ್ಷದ ಯುವಕನೊಬ್ಬನನ್ನ ಹಾವು ಬೆನ್ನತ್ತಿತ್ತು. ಫತೇಹ್‌ಪುರದ ವಿಕಾಸ್ ದುಬೆ ಎಂಬ ವ್ಯಕ್ತಿಗೆ ಕಳೆದ 40 ದಿನಗಳಲ್ಲಿ ಏಳು ಬಾರಿ ಹಾವು ಕಚ್ಚಿತ್ತು. ಇದು ವೈದ್ಯರನ್ನೂ ಕಳವಳಕ್ಕೀಡುಮಾಡಿದೆ. ಇನ್ನೂ ನೂರಾರು ಹಾವುಗಳಿಂದ ನೂರಾರು ಬಾರಿ ವ್ಯಕ್ತಿಯೊಬ್ಬ ಕಚ್ಚಿಸಿಕೊಂಡಿದ್ದರು ಅಂದ್ರೆ ನೀವು ನಂಬುತ್ತೀರಾ? ಪ್ರತಿ ದಿನ ಸುಮಾರು 30 ಹಾವುಗಳ ವಿಷವನ್ನಾ ಆಹಾರದಂತೆ ಸೇವಿಸುತ್ತಿದ್ದರು ಅನ್ನೂದನ್ನ ಊಹಿಸಲು ಸಾಧ್ಯವೇ? ನಂಬಲಸಾಧ್ಯವಾದರೂ ಇದು ನಿಜ.

    ಅಮೆರಿಕದ ಸ್ನೇಕ್‌ ಮ್ಯಾನ್‌ (USA SnakeMan) ಎಂದೇ ಖ್ಯಾತಿಯಾಗಿದ್ದ ವ್ಯಕ್ತಿಯೊಬ್ಬ 173 ಬಾರಿ ವಿವಿಧ ಬಗೆಯ ಹಾವುಗಳಿಂದ ಕಚ್ಚಿಸಿಕೊಂಡಿದ್ದರು. ಪ್ರತಿದಿನ ಸುಮಾರು 30ಕ್ಕೂ ಹೆಚ್ಚು ಸರ್ಪಗಳ ವಿಷ ಸೇವಿಸುತ್ತಿದ್ದರಂತೆ. ಆದರೂ ಅವರು ಬದುಕುಳಿದಿದ್ದೇ ಪವಾಡವೆನ್ನಿಸಿತ್ತು. ಅಷ್ಟಕ್ಕೂ ಅಮೆರಿಕದ ಸ್ನೇಕ್‌ ಮ್ಯಾನ್‌ ಯಾರು? ಹಾವಿನ ವಿಷ ಸೇವನೆ ಮಾಡಿದರೂ ಆತ ಬದುಕುಳಿದಿದ್ದು ಹೇಗೆ? ಅದಕ್ಕಾಗಿ ಆತ ಮಾಡುತ್ತಿದ್ದದ್ದು ಏನು? ಎಂಬ ರೋಚಕ ಸಂಗತಿಗಳನ್ನು ತಿಳಿಯೋಣ…

    ಅಮೆರಿಕದ ಸ್ನೇಕ್‌ ಮ್ಯಾನ್‌ ಯಾರು?

    ಹಾವುಗಳ ಪ್ರಪಂಚವೇ ನಿಗೂಢ, ಕೆಲ ಹಾವುಗಳು ಕಚ್ಚಿದ ಕೆಲವೇ ಕ್ಷಣಗಳಲ್ಲಿ ಸಾವು ಸಂಭವಿಸಿದರೆ, ಇನ್ನು ಕೆಲ ಹಾವುಗಳು ಕಚ್ಚಿದ ನಂತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಚಿಕಿತ್ಸೆ ಪಡೆಯದಿದ್ದರೇ ನಿಧಾನಗತಿಯಲ್ಲಿ ಸಾವನ್ನು ತರುತ್ತವೆ. ಆದ್ರೆ ಅಮೆರಿಕದ ಸ್ನೇಕ್‌ ಮ್ಯಾನ್‌ ಎಂದೇ ಖ್ಯಾತಿಯಾಗಿದ್ದ ʻಬಿಲ್ ಹಾಸ್ಟ್ ಅಕಾʼ (Bill Haast  Aka) ಎಂಬ ವ್ಯಕ್ತಿ ನೂರಾರು ಬಾರಿ ಹಾವುಗಳಿಂದ ಕಚ್ಚಿಸಿಕೊಂಡರೂ ಬದುಕುಳಿದಿರುವುದು ಪವಾಡವೇ ಸರಿ. ಅಲ್ಲದೇ ಈತ ರಕ್ತದಾನ ಮಾಡಿ ಅನೇಕ ಜೀವಗಳನ್ನೂ ಉಳಿಸಿದ್ದಾನೆ. 173 ಬಾರಿ ಅತ್ಯಂತ ವಿಷಕಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದ ಸ್ನೇಕ್‌ ಮ್ಯಾನ್‌ ತಮ್ಮ ಜೀವಿತಾವಧಿಯಲ್ಲಿ 30 ಲಕ್ಷಕ್ಕೂ ಹೆಚ್ಚು ಹಾವುಗಳನ್ನು ನೋಡಿದ್ದರಂತೆ.

    ಹಾವುಗಳ ಬಗ್ಗೆ ಆಸಕ್ತಿ ಹುಟ್ಟಿದ್ದೇಗೆ?

    ಸ್ನೇಕ್‌ಮ್ಯಾನ್‌ ಖ್ಯಾತಿಯ ಬಿಲ್‌ ಹಾಸ್ಟ್‌ ಅಕಾ 1910 ರಲ್ಲಿ ನ್ಯೂಜೆರ್ಸಿಯಲ್ಲಿ ಜನಿಸಿದರು. ಶಾಲಾ ದಿನಗಳಲ್ಲಿ ಸ್ಕೌಟ್‌ ಶಿಬಿರಕ್ಕೆ ಸೇರಿದ್ದರು. ಒಂದೊಮ್ಮೆ ಕಾಡಿನಲ್ಲಿ ಕ್ಯಾಂಪ್‌ ಮಾಡುವ ವೇಳೆ ಹಾವು ಅಕಸ್ಮಾತಾಗಿ ಹಾವು ಕಚ್ಚಿತ್ತು. ಆದ್ರೆ ಹಾಸ್ಟ್‌ಗೆ ಪ್ರಾಣಾಪಾಯ ಸಂಭವಿಸಲಿಲ್ಲ. ಕೆಲ ಗಂಟೆಗಳ ಬಳಿಕ ಹಾವು ಕಚ್ಚಿದ ಕೈ ಭಾಗ ಊದಿಕೊಂಡಿತ್ತು. ಅದಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದರು. ಇದಾದ ಸ್ವಲ್ಪ ಸಮಯದಲ್ಲೇ ಕಾಪರ್ಹೆಡ್‌ ಎಂಬ ವಿಷಕಾರಿ ಹಾವು ಕಚ್ಚಿತ್ತು. ವಿಷ ಏರಿದ್ದ ಕಾರಣ ಒಂದು ವಾರ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಈತನಿಗೆ ಹಾವುಗಳ ಬಗ್ಗೆ ಆಕರ್ಷಣೆ ಹೆಚ್ಚಾಯಿತು. ಇದರಿಂದ ಅವುಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಬೆಳೆಸಿಕೊಂಡರು. ವಿವಿಧ ಬಗೆಯ ಹಾವುಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು, ಜೊತೆಗೆ ಹಾವುಗಳಿಂದ ಸ್ಟಂಟ್‌ ಮಾಡಿಸಲು ಪ್ರಾರಂಭಿಸಿ, ಹಾವಿನ ಪ್ರಯೋಗಾಲಯವೊಂದನ್ನು ಆರಂಭಿಸಿದರು.

    ಹಾವಿನ ಪ್ರಯೋಗಾಲಯದ ಸೀಕ್ರೆಟ್‌:

    ಹಾವುಗಳ ಅಧ್ಯಯನ ಮಾಡಲು ತೊಡಗಿದ್ದ ಸ್ನೇಕ್‌ ಮ್ಯಾನ್‌ ವಿಶೇಷ ಪ್ರಯೋಗಾಲಯವೊಂದನ್ನು ಆರಂಭಿಸಿದ್ದರು. ಹಾವುಗಳ ವಿಷ ಹೊರ ತೆಗೆಯುವುದು ಹಾಗೂ ಅದನ್ನು ಸಂಶೋಧನೆಗಾಗಿ ಆಸ್ಪತ್ರೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಕಳುಹಿಸುವ ಕೆಲಸ ಇಲ್ಲಿ ಆಗುತ್ತಿತ್ತು. ಈ ಪ್ರಯೋಗಾಲಯದಲ್ಲಿ ವಿಶ್ವದ ಅನೇಕ ಬಗೆಯ ಹಾವುಗಳಿದ್ದವು. ಅವುಗಳ ವಿಷದ ಪ್ರಬೇಧಗಳೂ ವಿಭಿನ್ನವಾಗಿದ್ದವು. ಅದರಲ್ಲೂ ಕೆಲ ಹಾವುಗಳ ವಿಷ ಎಷ್ಟು ಅಪಾಯಕಾರಿಯಾಗಿತ್ತೆಂದರೆ, ಕಚ್ಚಿದ ಒಂದೇ ನಿಮಿಷದಲ್ಲಿ ಪ್ರಾಣ ತೆಗೆಯುವಷ್ಟು ಅಪಾಯಕಾರಿಯಾಗಿರುತ್ತಿದ್ದವು. 90ರ ದಶದ ವರೆಗೆ ಹಾಸ್ಟ್‌ ಅವರ ಈ ಪ್ರಯೋಗಾಲಯ ವಿವಿಧ ವೈದ್ಯಕೀಯ ಉದ್ದೇಶಗಳಿಗಾಗಿ ಪ್ರತಿ ವರ್ಷ ಸುಮಾರು 36 ಸಾವಿರ ವಿಷದ ಮಾದರಿಗಳನ್ನು ಒದಗಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.

    ವಿಷ ಹೊರತೆಗೆಯುತ್ತಿದ್ದದ್ದು ಹೇಗೆ?

    ನೂರಾರು ಹಾವುಗಳಿಂದ ಕಚ್ಚಿಸಿಕೊಂಡಿದ್ದ ಹಾಸ್ಟ್‌ನ ಜೀವನ ಶೈಲಿಯೂ ಅಷ್ಟೇ ಸ್ವಾರಸ್ಯಕರವಾಗಿತ್ತು. ನ್ಯೂಯಾರ್ಕ್‌ ಟೈಮ್ಸ್‌ ವರದಿಯ ಪ್ರಕಾರ, ಹಾಸ್ಟ್‌ ಪ್ರತಿದಿನ ಸುಮಾರು 30 ಹಾವುಗಳ ವಿಷವನ್ನು ಆಹಾರದ ರೀತಿ ಸೇವನೆ ಮಾಡುತ್ತಿದ್ದ. ಜೊತೆಗೆ ಹಾವಿನ ವಿಷ ಹೊರ ತೆಗೆಯುವಾಗಲೂ ಬರಿಗೈನಿಂದಲೇ ಕೆಲಸ ಮಾಡುತ್ತಿದ್ದ. ನಾಗರಹಾವು, ಕಾಳಿಂಗ ಸರ್ಪಗಳಂತಹ ವಿಷಪೂರಿತ ಹಾವುಗಳು ಹಲವಾರು ಬಾರಿ ಕಚ್ಚಿದರೂ ಬದುಕಿರುವುದರ ಹಿಂದೆ ವಿಶೇಷ ಕಾರಣವಿತ್ತು. ಅವರ ಜೀವನದ ಆರು ದಶಕಗಳವರೆಗೆ, ಹಾಸ್ಟ್ ನಿರಂತರವಾಗಿ 32 ಹಾವುಗಳ ವಿಷವನ್ನು ಸಂಯೋಜನೆ ಮಾಡಿ ಸೇವಿಸುತ್ತಿದ್ದರು. ಇದರಿಂದ ಹಾಸ್ಟ್‌ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟು ಆತ ಭಯಂಕರವಾಗಿ ಸಾಯುತ್ತಾನೆ ಎಂದೇ ವೈದ್ಯರು ಬಹಳಷ್ಟು ಸಲ ಎಚ್ಚರಿಕೆ ನೀಡಿದ್ದರು. ಮಧ್ಯೆ ಮಧ್ಯೆ ಹೊಟ್ಟೆ ನೋವು, ಕಣ್ಣುಗಳ ಸೌರ್ಬಲ್ಯದಿಂದ ನಿದ್ರೆ ಮತ್ತು ಮಾನಸಿಕ ಅಸಮತೋಲನ ಕಾಣಿಸಿಕೊಂಡರೂ ವೈದ್ಯಲೋಕಕ್ಕೆ ಸೆಡ್ಡು ಹೊಡೆದು ಪವಾಡ ಪುರುಷನಂತೆ ಹಾಸ್ಟ್‌ ನೂರು ವರ್ಷಕ್ಕೂ ಹೆಚ್ಚು ಕಾಲ ಬದುಕಿದ್ದರು ಎಂದು ವರದಿಗಳು ಹೇಳಿವೆ.

    ಹಾವುಗಳಿಗಾಗಿ ಸೇನೆಯ ಕೆಲಸವನ್ನೇ ಬಿಟ್ಟ ಸ್ನೇಕ್‌ ಮ್ಯಾನ್‌:

    ಹಾಸ್ಟ್‌ ಅಮೆರಿಕದ ಸೇನೆಯಲ್ಲಿ ಫ್ಲೈಟ್‌ ಎಂಜಿನಿಯರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಜೊತೆಗೆ ವೃತ್ತಿಪರ ಕೋರ್ಸ್‌ಗಳನ್ನೂ ಮಾಡಿಕೊಂಡಿದ್ದರು. ಆದ್ರೆ ಹಾವುಗಳ ಸಾಕಾಣಿಕೆ ಮತ್ತು ಅವುಗಳ ಅಧ್ಯಯನದ ಗುರಿಯಿಂದ ಸೇನೆಯ ಕೆಲಸವನ್ನೇ ಬಿಟ್ಟರು. ಅಮೆರಿಕನ್‌ ಸ್ನೇಕ್‌ಮ್ಯಾನ್‌ನ ಹಾವುಗಳ ಮೇಲಿನ ಉತ್ಸಾಹದಿಂದ ಅವನ ಮೊದಲ ಮದುವೆ ಮುರಿದುಹೋಯಿತು. ನಂತರ ಅವರು ಎರಡು ಬಾರಿ ವಿವಾಹವಾಗಿದ್ದರು.

    21 ಜೀವಗಳನ್ನ ಉಳಿಸಿದ್ದ ಸ್ನೇಕ್‌ ಮ್ಯಾನ್‌:

    ನಿರಂತರ ಹಾವುಗಳ ವಿಷ ಸೇವನೆಯಿಂದ ಬದುಕಿ ಪವಾಡವನ್ನೇ ಸೃಷ್ಟಿಸಿದ್ದ ಸ್ನೇಕ್‌ ಮ್ಯಾನ್‌ 21 ಜೀವಗಳನ್ನೂ ಉಳಿಸಿದ್ದರು ಎಂಬುದು ಗಮನಾರ್ಹ. ಹೌದು. ಅವರು ಸೇವಿಸುತ್ತಿದ್ದ ವಿಷವೇ ರೋಗ ನಿರೋಧಕ ಶಕ್ತಿಯಾಗಿ ಮಾರ್ಪಟ್ಟಿತ್ತು. ಹಾಗಾಗಿ ಹಾವು ಕಡಿತದಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದವರಿಗೆ ರಕ್ತ ಕೊಟ್ಟು ಕಾಪಾಡಿದ್ದರು. ನಂತರ ಪ್ರಪಂಚದ ಅನೇಕ ದೇಶಗಳಲ್ಲಿ ತುರ್ತು ರಕ್ತದಾನಕ್ಕಾಗಿ ಹಾಸ್ಟ್ ಅನ್ನು ಕರೆಯಲಾಯಿತು. ವಿಷಪೂರಿತ ಹಾವು ಕಡಿತದಿಂದ ಸಾವಿನ ಹಂತ ತಲುಪಿದ್ದ 21 ರೋಗಿಗಳಿಗೆ ಅವರು ತಮ್ಮ ರಕ್ತವನ್ನ ದಾನ ಮಾಡಿದರು. ಇದಕ್ಕಾಗಿಯೇ ವೆನೆಜುವೆಲಾ ಅವರಿಗೆ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನೂ ನೀಡಿತ್ತು ಎಂದು ವರದಿಗಳು ಉಲ್ಲೇಖಿಸಿವೆ.

  • Trump Assassination Attempt | 48 ಗಂಟೆಯ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಟ್ರಂಪ್‌

    Trump Assassination Attempt | 48 ಗಂಟೆಯ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಟ್ರಂಪ್‌

    ವಾಷಿಂಗ್ಟನ್‌: ಶೂಟೌಟ್‌ ನಡೆದ ಎರಡು ದಿನದ ಬಳಿಕ ಮೊದಲ ಬಾರಿಗೆ ಡೊನಾಲ್ಡ್‌ ಟ್ರಂಪ್‌ (Donald Trump) ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಸೋಮವಾರ ಮಿಲ್ವಾಕಿಯಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಟ್ರಂಪ್‌ ಭಾಗವಹಿಸಿದರು.

    ಗುಂಡೇಟಿನಿಂದ ಬಲ ಕಿವಿಗೆ ಗಾಯವಾಗಿದ್ದು ಬ್ಯಾಂಡೇಜ್‌ ಹಾಕಲಾಗಿದೆ. ಟ್ರಂಪ್‌ ಬರುತ್ತಿದ್ದಂತೆ ರಿಪಬ್ಲಿಕನ್‌ ಪಕ್ಷದ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದರು.

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ (Republican Party) ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಅವರನ್ನು ಆಯ್ಕೆ ಮಾಡಲಾಯಿತು. ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಈ ನಿರ್ಧಾರವನ್ನು ಘೋಷಿಸಲಾಯಿತು.  ಇದನ್ನೂ ಓದಿ: ಜೈಲಿನಲ್ಲಿರೋ ಇಮ್ರಾನ್‌ ಖಾನ್‌ಗೆ ಮತ್ತೆ ಶಾಕ್ – ದೇಶ ವಿರೋಧಿ ಚಟುವಟಿಕೆ ಆರೋಪದಡಿ ಪಿಟಿಐ ನಿಷೇಧ!

     

    2016 ರ ಚುನಾವಣೆಯಲ್ಲಿ ಟ್ರಂಪ್‌ ಅವರು ಹಿಲರಿ ಕ್ಲಿಂಟನ್‌ ಅವರನ್ನು ಸೋಲಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಆದರೆ 2020ರ ಚುನಾವಣೆಯಲ್ಲಿ ಜೋ ಬೈಡನ್‌ ಮುಂದೆ ಟ್ರಂಪ್‌ ಸೋತಿದ್ದರು. ಈಗ ಎರಡನೇ ಬಾರಿ ಜೋ ಬೈಡನ್‌ ಅವರನ್ನು 78 ವರ್ಷದ ಟ್ರಂಪ್‌ ಎದುರಿಸಲಿದ್ದಾರೆ.

    ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಜೆಡಿ ವ್ಯಾನ್ಸ್ ಅವರನ್ನು ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ. ಜೆಡಿ ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್, ಭಾರತೀಯ ಸಂಜಾತೆಯಾಗಿದ್ದಾರೆ.

    ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾ ರಾಜ್ಯದ ಬಟ್ಲರ್‌ ಟೌನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹಿರಂಗ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಥಾಮಸ್ ಕ್ರುಕ್ಸ್ ಗುಂಡು ಹಾರಿಸಿದ್ದ. ಅದೃಷ್ಟವಶಾತ್ ಗುಂಡು ಟ್ರಂಪ್ ಬಲ ಕಿವಿಯನ್ನು ಸೀಳಿ, ಕಾರ್ಯಕರ್ತನ ಎದೆಗೆ ನುಗ್ಗಿದೆ. ತಕ್ಷಣವೇ ಟ್ರಂಪ್ ಕೆಳಗೆ ಕೂತು ತಪ್ಪಿಸಿಕೊಂಡಿದ್ದಾರೆ.

    ಅರೆಕ್ಷಣದಲ್ಲೇ ಭದ್ರತಾ ಪಡೆಗಳು ಟ್ರಂಪ್ ಸುತ್ತುವರಿದು ರಕ್ಷಣೆ ನೀಡಿವೆ. ಕ್ಷಣಾರ್ಧದಲ್ಲೇ ಅಣತಿ ದೂರದ ಉತ್ಪಾದನಾ ಘಟಕದ ಛಾವಣಿಯ ಮೇಲೆ ಕೂತು ಗುಂಡು ಹಾರಿಸಿದ ಹಂತಕನನ್ನು ಅಮೆರಿಕ ಸ್ನಿಪ್ಪರ್‌ಗಳು ಹೊಡೆದುರುಳಿಸಿವೆ. ಹಂತಕನನ್ನು ಬೆಥೆಲ್ ಪಾರ್ಕ್ನ 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಎಫ್‌ಬಿಐ ಗುರುತಿಸಿದೆ. ಘಟನೆ ಬಳಿಕ ಸಾವರಿಸಿಕೊಂಡ ಟ್ರಂಪ್, ಕೈ ಎತ್ತಿ ಮುಷ್ಠಿ ಹಿಡಿದು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಸರಣಿ ಟ್ವೀಟ್ ಮಾಡಿ, ನನ್ನ ಬಲಕಿವಿಯ ಮೇಲ್ಭಾಗದಲ್ಲಿ ಗಾಯವಾಗಿದೆ. ನಮ್ಮ ದೇಶದಲ್ಲಿ ಇಂತಹ ಕೃತ್ಯ ನಡೆದಿರುವುದನ್ನು ನಂಬಲಾಗುತ್ತಿಲ್ಲ. ಸೀಕ್ರೆಟ್ ಸರ್ವಿಸ್ ಹಾಗೂ ಕಾನೂನು ವ್ಯವಸ್ಥೆ ಕೈಗೊಂಡ ತ್ವರಿತ ಕ್ರಮಕ್ಕೆ ಧನ್ಯವಾದಗಳು ಎಂದಿದ್ದರು.

  • Trump Assassination Attempt | ಮನೆಯಿಂದ ಮನೆಗೆ ಟೆರೇಸ್ ಮೇಲೆ ಜಿಗಿಯುತ್ತಾ ಬಂದಿದ್ದ ಯುವಕ

    Trump Assassination Attempt | ಮನೆಯಿಂದ ಮನೆಗೆ ಟೆರೇಸ್ ಮೇಲೆ ಜಿಗಿಯುತ್ತಾ ಬಂದಿದ್ದ ಯುವಕ

    ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ (Donald Trump) ಪ್ರಚಾರದ ನಡೆಸುತ್ತಿದ್ದ ಸಮಯದಲ್ಲಿ ಬಿಗಿ ಭದ್ರತೆ ಕಲ್ಪಿಸಿದ್ದರೂ ಗನ್‌ ಹಿಡಿದ ಯುವಕ ಟೆರೇಸ್ ಮೇಲೆ ಬಂದಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

    ಭದ್ರತಾ ವಿಚಾರ ಬಂದಾಗ ಅಮೆರಿಕ ಸೀಕ್ರೇಟ್‌ ಸರ್ವೀಸ್‌ಗೆ (Secret Service) ವಿಶ್ವದಲ್ಲೇ ಸ್ಥಾನವಿದೆ. ಸೀಕ್ರೇಟ್ ಸರ್ವೀಸ್‌ ಭದ್ರತೆಯಲ್ಲಿ ಲೋಪವಾಗುವುದಿಲ್ಲ. ಹೀಗಿರುವಾಗ ಮಾಜಿ ಅಧ್ಯಕ್ಷರ ಮೇಲೆ ಗುಂಡಿನ ದಾಳಿ ನಡೆಯುವ ಮೂಲಕ ಭಾರೀ ಲೋಪವಾಗಿದೆ.

    ಸ್ಥಳದಲ್ಲಿ ಭಾರಿ ಬಿಗಿ ಭದ್ರತೆಯಿದ್ದರೂ ಗನ್ ಹಿಡಿದ 20 ವರ್ಷದ ಯುವಕ ಥಾಮಸ್ ಕ್ರುಕ್ಸ್ (Thomas Matthew Crooks) ಆ ಸ್ಥಳಕ್ಕೆ ಬಂದಿದ್ದು ಹೇಗೆ ಎನ್ನುವುದೇ ತಿಳಿಯುತ್ತಿಲ್ಲ ಎಂದು ಭದ್ರತಾ ಪಡೆ ಹೇಳಿರುವುದಾಗಿ ವರದಿಯಾಗಿದೆ.

    ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಪ್ರತಿಕ್ರಿಯಿಸಿ, ನಾವು ಹಂತಕನನ್ನು ನೋಡಿದ್ದೆವು. ಭದ್ರತಾ ಪಡೆಗೆ ಈ ಬಗ್ಗೆ ಮಾಹಿತಿ ಸಹ ನೀಡಿದ್ದೆವು. ಆದರೆ ಭದ್ರತಾ ಪಡೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ತಿಳಿಸಿದ್ದಾರೆ.

    ಥಾಮಸ್ ಕ್ರುಕ್ಸ್ ಮನೆಯಿಂದ ಮನೆಗೆ ಜಿಗಿದು ಉತ್ಪಾದನಾ ಘಟಕದ ಛಾವಣಿಯ ಮೇಲೆ ಕೂತು ಟ್ರಂಪ್‌ ಮೇಲೆ ಗುಂಡು ಹಾರಿಸಿದ್ದ. ಟ್ರಂಪ್ ಭಾಷಣ ಮಾಡುತ್ತಿದ್ದ ಸ್ಥಳದಿಂದ 200 ರಿಂದ 250 ಅಡಿ ದೂರದಲ್ಲಿದ್ದ ಉತ್ಪಾದನಾ ಚಾವಣಿಯ ಮೇಲೆ ಮಲಗಿ ಶೂಟ್‌ ಮಾಡಿದ್ದ. ಶೂಟ್‌ ಮಾಡಿದ ಬೆನ್ನಲ್ಲೇ ಅಮೆರಿಕದ ಸ್ನೈಪರ್ಸ್‌ ಆತನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಥಾಮಸ್ ಕ್ರುಕ್ಸ್ ಬೂದು ಬಣ್ಣದ ಜಾಕೆಟ್ ಧರಿಸಿ ಗನ್ ಹಿಡಿದು ಮಲಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿರುವ ವಿಡಿಯೋ ಒಂದರಲ್ಲಿ ಕಾಣಿಸುತ್ತದೆ.

    ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಮುಂದಾಗಿದ್ದ ಥಾಮಸ್‌ ಕ್ರುಕ್ಸ್‌ ಉದ್ದೇಶ ಏನು ಎನ್ನುವುದು ತಿಳಿದು ಬಂದಿಲ್ಲ. ಎಫ್‌ಬಿಐ ಅಧಿಕಾರಿಗಳು ಈಗ ಆತನ ಫೋನ್‌ ವಶಕ್ಕೆ ಪಡೆದು ಮಾಹಿತಿ ತೆಗೆಯುತ್ತಿದ್ದಾರೆ. ಆತನ ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದಾರೆ. ತನಿಖಾಧಿಕಾರಿಗಳು ಆತನ ಕಾರಿನಲ್ಲಿ ಸ್ಫೋಟಕ ಸಾಧನಗಳನ್ನು ವಶಕ್ಕೆ ಪಡೆದಿದ್ದಾರೆ.

    ಏನಿದು ಘಟನೆ?
    ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾ ರಾಜ್ಯದ ಬಟ್ಲರ್‌ ಟೌನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹಿರಂಗ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಥಾಮಸ್ ಕ್ರುಕ್ಸ್ ಗುಂಡು ಹಾರಿಸಿದ್ದ. ಅದೃಷ್ಟವಶಾತ್ ಗುಂಡು ಟ್ರಂಪ್ ಬಲ ಕಿವಿಯನ್ನು ಸೀಳಿ, ಕಾರ್ಯಕರ್ತನ ಎದೆಗೆ ನುಗ್ಗಿದೆ. ತಕ್ಷಣವೇ ಟ್ರಂಪ್ ಕೆಳಗೆ ಕೂತು ತಪ್ಪಿಸಿಕೊಂಡಿದ್ದಾರೆ.

    ಅರೆಕ್ಷಣದಲ್ಲೇ ಭದ್ರತಾ ಪಡೆಗಳು ಟ್ರಂಪ್ ಸುತ್ತುವರಿದು ರಕ್ಷಣೆ ನೀಡಿವೆ. ಕ್ಷಣಾರ್ಧದಲ್ಲೇ ಅಣತಿ ದೂರದ ಉತ್ಪಾದನಾ ಘಟಕದ ಛಾವಣಿಯ ಮೇಲೆ ಕೂತು ಗುಂಡು ಹಾರಿಸಿದ ಹಂತಕನನ್ನು ಅಮೆರಿಕ ಸ್ನಿಪ್ಪರ್‌ಗಳು ಹೊಡೆದುರುಳಿಸಿವೆ. ಹಂತಕನನ್ನು ಬೆಥೆಲ್ ಪಾರ್ಕ್ನ 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಎಫ್‌ಬಿಐ ಗುರುತಿಸಿದೆ.

     

    ಘಟನೆ ಬಳಿಕ ಸಾವರಿಸಿಕೊಂಡ ಟ್ರಂಪ್, ಕೈ ಎತ್ತಿ ಮುಷ್ಠಿ ಹಿಡಿದು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಸರಣಿ ಟ್ವೀಟ್ ಮಾಡಿ, ನನ್ನ ಬಲಕಿವಿಯ ಮೇಲ್ಭಾಗದಲ್ಲಿ ಗಾಯವಾಗಿದೆ. ನಮ್ಮ ದೇಶದಲ್ಲಿ ಇಂತಹ ಕೃತ್ಯ ನಡೆದಿರುವುದನ್ನು ನಂಬಲಾಗುತ್ತಿಲ್ಲ. ಸೀಕ್ರೆಟ್ ಸರ್ವಿಸ್ ಹಾಗೂ ಕಾನೂನು ವ್ಯವಸ್ಥೆ ಕೈಗೊಂಡ ತ್ವರಿತ ಕ್ರಮಕ್ಕೆ ಧನ್ಯವಾದಗಳು ಅಂದಿದ್ದಾರೆ.

  • 17 ಆಟಗಾರರು, 60 ಐಷಾರಾಮಿ ರೂಮ್‌ – ಜಾಲಿ ಮೂಡಿನಲ್ಲಿ ಪಾಕ್‌ ಕ್ರಿಕೆಟಿಗರು!

    17 ಆಟಗಾರರು, 60 ಐಷಾರಾಮಿ ರೂಮ್‌ – ಜಾಲಿ ಮೂಡಿನಲ್ಲಿ ಪಾಕ್‌ ಕ್ರಿಕೆಟಿಗರು!

    – ನೀವೇನ್‌ ಕ್ರಿಕೆಟ್‌ ಆಡೋಕೆ ಹೋದ್ರಾ, ಮಜಾ ಮಾಡೋಕೆ ಹೋದ್ರಾ ಅಂತ ಟೀಕೆ

    ವಾಷಿಂಗ್ಟನ್‌: 2024ರ ಟಿ20 ವಿಶ್ವಕಪ್‌ (T20 World Cup) ಟೂರ್ನಿಯಲ್ಲಿ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿರುವ ಪಾಕಿಸ್ತಾನ ಕ್ರಿಕೆಟ್‌ ಆಟಗಾರರ ವಿರುದ್ಧ ತಮ್ಮದೇ ದೇಶದ ಅಭಿಮಾನಿಗಳು (Pak Cricket Fans) ಹಾಗೂ ಹಿರಿಯ ಕ್ರಿಕೆಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

    ಹೌದು. ಸದ್ಯ ಟಿ20 ವಿಶ್ವಕಪ್‌ ಟೂರ್ನಿಯಿಂದ ಪಾಕ್‌ ತಂಡ ಹೊರಬಿದ್ದರೂ ಆಟಗಾರರು ಮರಳಿ ತವರಿಗೆ ಹಿಂದಿರುಗದೇ ಅಮೆರಿಕದಲ್ಲಿಯೇ ಉಳಿದಿದ್ದಾರೆ. ಐಷಾರಾಮಿ ರೂಮ್‌ಗಳನ್ನು (Luxury Rooms) ಬುಕ್ಕಿಂಗ್‌ ಮಾಡಿಕೊಂಡಿದ್ದು, ಯುಎಸ್‌ನಲ್ಲಿ ಹಾಲಿಡೆ ಎಂಜಾಯ್‌ ಮಾಡಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಪಾಕ್‌ ಆಟಗಾರರ ವಿರುದ್ಧ ಹಿರಿಯ ಕ್ರಿಕೆಟಿಗರ ಆಕ್ರೋಶ ಮುಂದುವರಿದಿದೆ.

    ಈ ಕುರಿತು ಮಾತನಾಡಿರುವ ಪಾಕ್‌ ಕ್ರಿಕೆಟ್‌ ಮಂಡಳಿ ಸದಸ್ಯ (PCB Member) ಅತೀಕ್‌, ಯುಎಸ್‌ನಲ್ಲಿ ನೀವೇನು ನಾಟಕ ಆಡ್ತಿದ್ದೀರಾ, ಹಿಂದೆಲ್ಲ ನಮ್ಮ ತಂಡಕ್ಕೆ ಒಬ್ಬ ಕೋಚ್‌ ಮತ್ತು ಓರ್ವ ಮ್ಯಾನೇಜರ್‌ ಮಾತ್ರ ಇರುತ್ತಿದ್ದರು. ಈಗ ನಿಮಗೆ 17 ಆಟಗಾರರಿಗೆ 17 ಮ್ಯಾನೇಜರ್‌ಗಳಿದ್ದಾರೆ. ನೀವು 60 ಕೊಠಡಿಗಳನ್ನ ಬುಕ್‌ ಮಾಡಿದ್ದೀರಿ. ರಜೆಯ ಮೇಲೆ ಹೋಗಿರುವಂತೆ ಹೆಂಡತಿ ಮಕ್ಕಳೊಂದಿಗೆ ಸುತ್ತಾಡುತ್ತಿದ್ದೀರಿ. ಅಮೆರಿಕಕ್ಕೆ ಹೋಗಿದ್ದು ಏತಕ್ಕೆ? ಕ್ರಿಕೆಟ್‌ ಆಡಲು ಹೋಗಿದ್ದೀರೋ ಅಥವಾ ರಜೆಯ ಮಜಾ ಮಾಡಲು ಹೋಗಿದ್ದೀರೋ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಶಿಸ್ತು ಎಂದರೆ ಯಾರಿಗೂ ತಿಳಿಯದೇ ಇರುವಂತಹ ಸಂಸ್ಕೃತಿಯನ್ನ ಹುಟ್ಟುಹಾಕುತ್ತಿದ್ದಾರೆ. ವಿಶ್ವಕಪ್‌ ಆಡಲು ಹೋದವರ ಗಮನ ಎಲ್ಲಿರಬೇಕು? ಕ್ರಿಕೆಟ್‌ ಮಂಡಳಿ ನಿಮಗೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ, ಹೀಗಿರುವಾಗ ನೀವು ಯಾವ ರೀತಿ ನಡೆದುಕೊಳ್ಳುತ್ತಿದ್ದೀರಿ ಎಂದು ಕಟುವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ಇದು ನಿನ್ನ ಭಾರತವಲ್ಲ- ಅಭಿಮಾನಿ ಮೇಲೆ ಹಲ್ಲೆಗೆ ಮುಂದಾದ ಪಾಕ್ ವೇಗಿ

    ಪ್ರಸಕ್ತ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಗ್ರೂಪ್‌-ಎ ನಲ್ಲಿದ್ದ ಪಾಕ್‌ ತಂಡ 4 ಪಂದ್ಯಗಳ ಪೈಕಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ, ಲೀಗ್‌ ಸುತ್ತಿನಲ್ಲೇ ಹೊರಬಿದ್ದಿತು. ಇದನ್ನೂ ಓದಿ: ವಿಶ್ವಕಪ್‌ನಿಂದ ಪಾಕ್‌ ಔಟ್‌ – ಬಾಬರ್‌, ರಿಜ್ವಾನ್‌ನನ್ನ ತಂಡದಿಂದ ಕಿತ್ತೊಗೆಯುವಂತೆ ಆಗ್ರಹ

  • ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್‌

    ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್‌

    – ಅಮೆರಿಕ, ಐರ್ಲೆಂಡ್‌ ಪಂದ್ಯ ಮಳೆಗೆ ಬಲಿ
    – ಸೂಪರ್‌  8ಕ್ಕೆ  ಪ್ರವೇಶ ಪಡೆದ ಅಮೆರಿಕ

    ಫ್ಲೋರಿಡಾ: ಈ ಬಾರಿ ಟಿ20 ವಿಶ್ವಕಪ್‌ (T20 World Cup) ಗೆಲ್ಲಲೇಬೇಕೆಂದು ಸೇನಾ ಕೇಂದ್ರಗಳಲ್ಲಿ ತರಬೇತಿ ಪಡೆದಿದ್ದ ಪಾಕಿಸ್ತಾನ (Pakistan) ಈಗ ಟೂರ್ನಿಯಿಂದಲೇ ಔಟ್‌ ಆಗಿದೆ.

    ಅಮೆರಿಕ, ಐರ್ಲೆಂಡ್‌ ಪಂದ್ಯ ಮಳೆಯಿಂದ (Rain) ರದ್ದಾಗಿದೆ. ಪರಿಣಾಮ ಅಮೆರಿಕ (USA) ಅಧಿಕೃತವಾಗಿ ಸೂಪರ್‌ 8 ಪ್ರವೇಶಿಸಿದ್ದು ಪಾಕ್‌ ಕನಸು ನುಚ್ಚು ನೂರಾಗಿದೆ. ಅಷ್ಟೇ ಅಲ್ಲದೇ ಮೊದಲ ಟಿ20 ವಿಶ್ವಕಪ್‌ನಲ್ಲೇ ಸೂಪರ್‌ 8 ಹಂತ ಪ್ರವೇಶಿಸಿದ ಸಾಧನೆ ಮಾಡಿದೆ.

    ಎ ಗುಂಪಿನಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿ 6 ಅಂಕಗಳನ್ನು ಪಡೆದು ಭಾರತ (Team India) ಈಗಾಗಲೇ ಸೂಪರ್‌ 8 (Super 8) ಪ್ರವೇಶಿಸಿದ್ದರೆ ಅಮೆರಿಕ ಮತ್ತು ಪಾಕ್‌ ಮಧ್ಯೆ ತೀವ್ರ ಸ್ಪರ್ಧೆ ಇತ್ತು. ಅಮೆರಿಕ ಎರಡು ಪಂದ್ಯ ಗೆದ್ದಿದ್ದರೆ ಪಾಕ್‌ ಒಂದು ಪಂದ್ಯ ಗೆದ್ದಿತ್ತು.

    ಶುಕ್ರವಾರದ ಪಂದ್ಯ ರದ್ದಾದ ಕಾರಣ ಇತ್ತಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗಿದೆ. ಇದರಿಂದಾಗಿ 5 ಅಂಕದೊಂದಿಗೆ ಅಮೆರಿಕ ಸೂಪರ್‌ 8 ಪ್ರವೇಶಿಸಿತು. ಒಂದು ವೇಳೆ ಅಮೆರಿಕ ಈ ಪಂದ್ಯವನ್ನು ಸೋತಿದ್ದರೆ ಪಾಕ್‌ಗೆ ಒಂದು ಅವಕಾಶವಿತ್ತು. ಇದನ್ನೂ ಓದಿ: ಪಾಕ್‌ ತಂಡದ ವಿರುದ್ಧ ದೇಶದ್ರೋಹದ ಕೇಸ್‌!

    ಪಾಕಿಸ್ತಾನ 3 ಪಂದ್ಯವಾಡಿ ಒಂದು ಪಂದ್ಯದಲ್ಲಿ ಮಾತ್ರ ಜಯಗಳಿಸಿದೆ. ಭಾನುವಾರ ಐರ್ಲೆಂಡ್‌ ವಿರುದ್ಧ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆದ್ದರೂ 4 ಅಂಕ ಮಾತ್ರ ಸಂಪಾದಿಸುವುದರಿಂದ ಪಾಕ್‌ ಸೂಪರ್‌ 8 ಪ್ರವೇಶಿಸಲು ವಿಫಲವಾಯಿತು. ಪಾಕ್‌ ಜೊತೆಗೆ ಎ ಗುಂಪಿನಲ್ಲಿದ್ದ ಕೆನಡಾ ಮತ್ತು ಐರ್ಲೆಂಡ್‌ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ.

    2026ರ ವಿಶ್ವಕಪ್‌ಗೂ ಅಮೆರಿಕ ನೇರ ಪ್ರವೇಶ ಪಡೆಯಿತು.  ಸೂಪರ್‌-8 ಹಂತಕ್ಕೇರುವ ಎಲ್ಲಾ 8 ತಂಡಗಳು 2026ರ  ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯಲಿದೆ.  ಈ ವಿಶ್ವಕಪ್‌ ಟೂರ್ನಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿದೆ. ಶ್ರೀಲಂಕಾ ಸೂಪರ್‌ 8 ಹಂತಕ್ಕೆ ಅರ್ಹತೆ ಪಡೆಯದೇ ಇದ್ದರೂ ಆತಿಥ್ಯ ವಹಿಸಿದ ಕಾರಣ ಅರ್ಹತೆ ಪಡೆಯಲಿದೆ.

  • ಅಮೆರಿಕಕ್ಕೆ ಸೌದಿ ಶಾಕ್‌, ಪೆಟ್ರೋಡಾಲರ್ ಒಪ್ಪಂದಕ್ಕೆ ಗುಡ್‌ಬೈ – ಡಾಲರ್‌ ವಿಶ್ವದ ಕರೆನ್ಸಿಯಾದ ಕಥೆ ಓದಿ

    ಅಮೆರಿಕಕ್ಕೆ ಸೌದಿ ಶಾಕ್‌, ಪೆಟ್ರೋಡಾಲರ್ ಒಪ್ಪಂದಕ್ಕೆ ಗುಡ್‌ಬೈ – ಡಾಲರ್‌ ವಿಶ್ವದ ಕರೆನ್ಸಿಯಾದ ಕಥೆ ಓದಿ

    ರಿಯಾದ್‌: ಮಹತ್ವದ ವಿದ್ಯಮಾನದಲ್ಲಿ ಸೌದಿ ಅರೇಬಿಯಾ (Saudi Arabia) ಅಮೆರಿಕದ (USA) ಜೊತೆ ಮಾಡಿಕೊಂಡಿದ್ದ 50 ವರ್ಷಗಳ ಹಳೆಯ ಪೆಟ್ರೋಡಾಲರ್ ಒಪ್ಪಂದವನ್ನು (Petrodollar Agreement) ಕೊನೆಗೊಳಿಸಲು ನಿರ್ಧರಿಸಿದೆ.

    ಜೂನ್ 8, 1974 ರಂದು ಸಹಿ ಹಾಕಿದ್ದ ಒಪ್ಪಂದ ಜೂನ್ 9 ರಂದು ಮುಕ್ತಾಯಗೊಂಡಿದ್ದು ಈಗ ಸೌದಿ ಅರೇಬಿಯಾ ಈ ಒಪ್ಪಂದವನ್ನು ನವೀಕರಿಸದೇ ಇರುವ ತೀರ್ಮಾನವನ್ನು ತೆಗೆದುಕೊಂಡಿದೆ.

    ‘ಪೆಟ್ರೋಡಾಲರ್’ ಎಂಬ ಪದವು ಜಾಗತಿಕ ಕಚ್ಚಾ ತೈಲ (Crude Oil) ವಹಿವಾಟುಗಳಿಗೆ ಕರೆನ್ಸಿಯಾಗಿ ಅಮೆರಿಕದ ಡಾಲರ್‌ ಬಳಕೆಯನ್ನು ಸೂಚಿಸುತ್ತದೆ. ಈ ಒಪ್ಪಂದದ ಪ್ರಕಾರ ವಿಶ್ವದ ಯಾವುದೇ ದೇಶವೂ ಸೌದಿ ಜೊತೆ ಕಚ್ಚಾ ತೈಲ ಖರೀದಿಸಬೇಕಾದರೆ ಡಾಲರ್‌ ಮೂಲಕವೇ ಖರೀದಿಸಬೇಕಿತ್ತು.

    ಅಮೆರಿಕದ ಡಾಲರ್‌ ಅವಲಂಬನೆ ತಪ್ಪಿಸಲು ಈಗ ದೇಶಗಳು ಸ್ಥಳೀಯ ಕರೆನ್ಸಿ ಜೊತೆ ವ್ಯವಹಾರ ನಡೆಸಲು ಆರಂಭಿಸಿದೆ. ಈಗಾಗಲೇ ಭಾರತ (India) ಕೆಲ ದೇಶಗಳಲ್ಲಿ ರೂಪಾಯಿ ಮೂಲಕ ವ್ಯಾಪಾರ ನಡೆಸುತ್ತಿದೆ. ಅದೇ ರೀತಿ ಚೀನಾ (China) ಯುವಾನ್‌ ಮೂಲಕ ನಡೆಸುತ್ತಿದೆ. ತೈಲ ಉತ್ಪಾದನೆ ಮಾಡುವ ಒಪೆಕ್‌ ರಾಷ್ಟ್ರಗಳ ಪೈಕಿ ದೊಡ್ಡ ದೇಶವಾದ ಸೌದಿ ಅರೇಬಿಯಾ ಪೆಟ್ರೋಡಾಲರ್ ಒಪ್ಪಂದವನ್ನು ನವೀಕರಿಸದ ಕಾರಣ ಡಾಲರ್‌ ಬೆಲೆ ಮತ್ತಷ್ಟು ಕುಗ್ಗಲಿದೆ.

     

    ಏನಿದು ಒಪ್ಪಂದ?
    ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಮತ್ತು ಸೌದಿ ರಾಜಮನೆತನದ ಜೊತೆ ಸರಣಿ ಮಾತುಕತೆ ನಡೆದು ಜೂನ್ 8, 1974 ರಂದು ಒಪ್ಪಂದಕ್ಕೆ ಸಹಿ ಹಾಕಿದ ನಂತರ ಪೆಟ್ರೋಡಾಲರ್ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು.  ಇದನ್ನೂ ಓದಿ:  ಆರ್‌ಬಿಐನಿಂದ ಸಾಧನೆ – ಯುಕೆಯಿಂದ ಮರಳಿ ಭಾರತಕ್ಕೆ ಬಂತು 100 ಟನ್‌ ಚಿನ್ನ!

    ಸೌದಿ ಅರೇಬಿಯಾ ಸಹಿ ಹಾಕಿದ್ದು ಯಾಕೆ?
    ಅಟೊಮೊಬೈಲ್‌ ಕ್ಷೇತ್ರ ತೆರೆದುಕೊಳ್ಳುತ್ತಿದ್ದಂತೆ ಅಮೆರಿಕ ಮತ್ತು ಬ್ರಿಟಿಷರು ತೈಲ ನಿಕ್ಷೇಪಗಳನ್ನು ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ ಭೂಮಿಯಿಂದ ತೈಲವನ್ನು ಕೊರೆಯುವ ತಂತ್ರಜ್ಞಾನ ಈ ದೇಶಗಳಿಗೆ ಮಾತ್ರ ತಿಳಿದಿತ್ತು. 1938ರಲ್ಲಿ ಅಮೆರಿಕದ ಕಂಪನಿ ಸೌದಿ ಅರೇಬಿಯಾದಲ್ಲಿ ತೈಲ ಕೊರೆಯಲು ಆರಂಭಿಸಿತ್ತು. ಸೌದಿ ಅರೇಬಿಯಾಗೆ ತಮ್ಮ ಬಳಿ ಇದ್ದ ಈ ಅಮೂಲ್ಯ ಸಂಪತ್ತು ಮುಂದೆ ವಿಶ್ವವನ್ನೇ ಆಳುತ್ತದೆ ಎಂಬ ಕಲ್ಪನೆ ಸಹ ಇರಲಿಲ್ಲ. ಈ ಸಂದರ್ಭದಲ್ಲಿ ಭೂಮಿಯಿಂದ ಕಚ್ಚಾ ತೈಲವನ್ನು ತೆಗೆದು ಸಂಸ್ಕರಿಸುವ ತಂತ್ರಜ್ಞಾನ ಅಮೆರಿಕ ಮತ್ತು ಬ್ರಿಟಿಷ್‌ ಕಂಪನಿಗಳಿಗೆ ಮಾತ್ರ ತಿಳಿದಿತ್ತು.

    ಎರಡನೇ ಮಹಾಯುದ್ಧದ ಸಮಯದಲ್ಲಿ ಇಟಲಿ ಅಮೆರಿಕವನ್ನು ಗುರಿಯಾಗಿಸಿಕೊಂಡು ಸೌದಿ ಮೇಲೆ ದಾಳಿ ನಡೆಸಿತು. ಸೌದಿ ಮೇಲೆ ಇಟಲಿ ದಾಳಿ ನಡೆಸಲು ಕಾರಣವಿದೆ. ತನ್ನ ವಿರೋಧಿ ದೇಶಗಳಿಗೆ ಇಂಧನವನ್ನು ಸೌದಿ ಪೂರೈಸುತ್ತದೆ ಎಂದು ತಿಳಿದು ಬಹರೇನ್‌ ಮತ್ತು ಸೌದಿ ಮೇಲೆ ಬಾಂಬ್‌ ದಾಳಿ ನಡೆಸಿತು. ಈ ದಾಳಿಯಿಂದ ಸೌದಿಗೆ ಕಚ್ಚಾ ತೈಲ ಉತ್ಪಾದನೆ ಮಾಡಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಅಮೆರಿಕ ಸೌದಿಯ ರಕ್ಷಣೆಗೆ ಮುಂದಾಯಿತು.

    ಎರಡನೇ ಮಹಾಯುದ್ಧದ ನಂತರ ಅಮೆರಿಕ ಮತ್ತು ಯುಎಸ್‌ಎಸ್‌ಆರ್‌ ಮಧ್ಯೆ ಶೀತಲ ಸಮರ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಕೆಲ ದೇಶಗಳು ಅಮೆರಿಕ ಪರ ನಿಂತರೆ ಕೆಲವು ಯುಎಸ್‌ಎಸ್‌ಆರ್‌ ಪರ ನಿಂತವು. ಸೌದಿ ಅರೇಬಿಯಾ ದೇಶವಾಗಿದ್ದರೂ ಸರಿಯಾದ ಸೇನಾ ಬಲವನ್ನು ಹೊಂದಿರಲಿಲ್ಲ. ಈ ವೇಳೆ ಸೌದಿ ಅರೇಬಿಯಾದಲ್ಲಿರುವ ತೈಲ ಸಂಪತ್ತು ಮುಂದೆ ಇಡೀ ವಿಶ್ವವನ್ನೇ ಆಳಲಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಅಮೆರಿಕ ಸೌದಿ ರಕ್ಷಣೆಗೆ ಮುಂದಾಗುತ್ತದೆ. ಸೌದಿಯ ರಾಜಮನೆತನದ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ.

    ಸೌದಿಯಲ್ಲಿರುವ ಎಲ್ಲಾ ತೈಲ ಕೊರೆಯುವ ಬಾವಿಗಳಿಗೆ ನಾವು ಸಂಪೂರ್ಣ ರಕ್ಷಣೆ ನೀಡುತ್ತೇವೆ. ಇದಕ್ಕೆ ಪ್ರತಿಯಾಗಿ ನೀವು ಎಲ್ಲಾ ದೇಶಗಳ ಜೊತೆ ತೈಲ ವ್ಯವಹಾರ ಮಾಡಲು ಡಾಲರ್‌ ಅನ್ನು ಬಳಸಬೇಕು ಎಂದು ಷರತ್ತನ್ನು ಅಮೆರಿಕ ವಿಧಿಸುತ್ತದೆ. ಬೇರೆ ದೇಶಗಳು ದಾಳಿ ಮಾಡಬಹುದು ಎಂಬ ಭಯದಿಂದ ಸೌದಿ ಈ ಷರತ್ತನ್ನು ಒಪ್ಪಿಕೊಂಡು ಒಪ್ಪಂದಕ್ಕೆ ಸಹಿ ಹಾಕುತ್ತದೆ.   ಷರತ್ತಿನಿಂದಾಗಿ ಕಚ್ಚಾ ತೈಲ ವ್ಯವಹಾರ ಡಾಲರ್‌ನಲ್ಲೇ ನಡೆಯುತ್ತದೆ. ಪರಿಣಾಮ ವಿಶ್ವದಲ್ಲೇ  ಡಾಲರ್‌ ವಿಶ್ವದ ಕರೆನ್ಸಿಯಾಗಿ ಬದಲಾಗುತ್ತದೆ.

    ಚಿನ್ನದಿಂದ ಶ್ರೀಮಂತವಾಯ್ತು ಅಮೆರಿಕ
    ಎರಡನೇ ಮಹಾಯುದ್ಧಕ್ಕೆ ಅಮೆರಿಕ ತಡವಾಗಿ ಪ್ರವೇಶ ಮಾಡಿದ್ದರಿಂದ ಯುಕೆ, ಯುಎಸ್‌ಎಸ್‌ಆರ್‌ಗೆ ಬಲ ಬಂದಿತ್ತು. ಆದರೆ ಈ ಮಿತ್ರ ರಾಷ್ಟ್ರಗಳ ಮಧ್ಯೆ ಮಧ್ಯೆ ವ್ಯವಹಾರಕ್ಕೆ ಬಹಳ ಸಂಕಷ್ಟ ಎದುರಾಗಿತ್ತು. ಯಾಕೆಂದರೆ ಒಂದೊಂದು ರಾಷ್ಟ್ರದಲ್ಲಿ ಒಂದೊಂದು ಕರೆನ್ಸಿ ಇತ್ತು. ಈ ಸಮಸ್ಯೆ ಪರಿಹಾರಕ್ಕೆ ಅಮೆರಿಕದಲ್ಲಿ 1944ರಲ್ಲಿ ಬ್ರೆಟ್ಟನ್‌ವುಡ್ಸ್‌ ಒಪ್ಪಂದಕ್ಕೆ 44 ದೇಶಗಳು ಸಹಿ ಹಾಕಿದ್ದವು.

    ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಅಮೆರಿಕನ್‌ ಡಾಲರ್‌ ಅನ್ನು ಎಲ್ಲಾ ದೇಶಗಳು ವ್ಯವಹಾರಕ್ಕೆ ಬಳಸಲು ಅಧಿಕೃತ ಒಪ್ಪಿಗೆ ನೀಡಿದವು. ದೇಶಗಳು ಚಿನ್ನವನ್ನು ನೀಡಿ ಅಮೆರಿಕನ್‌ ಡಾಲರ್‌ ಖರೀದಿಸುವುದು ಒಪ್ಪಂದದ ಮುಖ್ಯ ತಿರುಳು. ಈ ವೇಳೆ ಒಂದು ಔನ್ಸ್‌ ಅಥವಾ 28.35 ಗ್ರಾಂ ಚಿನ್ನಕ್ಕೆ 35 ಡಾಲರ್‌ ದರವನ್ನು ನಿಗದಿ ಮಾಡಲಾಗಿತ್ತು. ಈ ಚಿನ್ನದ ಒಪ್ಪಂದಕ್ಕೆ ಅಮೆರಿಕ ಬಂದಿದ್ದು ಯಾಕೆ ಎನ್ನುವುದಕ್ಕೆ ಕಾರಣವಿದೆ. 1910ರಲ್ಲಿ 2 ಸಾವಿರ ಟನ್‌ ಚಿನ್ನ ಅಮೆರಿಕದಲ್ಲಿ ಇದ್ದರೆ ತನ್ನ ಎಲ್ಲಾ ವ್ಯವಹಾರಗಳಿಂದ 1940ರ ವೇಳೆಗೆ ಇದು 20 ಸಾವಿರ ಟನ್‌ಗೆ ಏರಿಕೆಯಾಗಿತ್ತು. ಮಾಹಿತಿಗಳ ಪ್ರಕಾರ ಅಂದು ವಿಶ್ವದ 75% ಚಿನ್ನ ಅಮೆರಿಕದ ಬಳಿ ಇತ್ತು. ಚಿನ್ನ ಹೊಂದಿದ್ದವರೇ ಬಾಸ್‌ ಎನ್ನುವಂತೆ ಬ್ರೆಟ್ಟನ್‌ವುಡ್ಸ್‌ ಒಪ್ಪಂದದ ಬಳಿಕ ಡಾಲರ್‌ ವಿಶ್ವದ ಕರೆನ್ಸಿಯಾಗಿ ಬದಲಾಯ್ತು. ಪರಿಣಾಮ ಅಮೆರಿಕ ಶ್ರೀಮಂತ ದೇಶವಾಗಿ ಹೊರಹೊಮ್ಮಿತ್ತು.

     

  • ಯುಎಸ್‌ಎ-ಐರ್ಲೆಂಡ್‌ ಪಂದ್ಯ ಮಳೆಗೆ ಬಲಿಯಾದ್ರೆ ಪಾಕ್‌ ಮನೆಗೆ – ಏಕೆ ಗೊತ್ತೆ?

    ಯುಎಸ್‌ಎ-ಐರ್ಲೆಂಡ್‌ ಪಂದ್ಯ ಮಳೆಗೆ ಬಲಿಯಾದ್ರೆ ಪಾಕ್‌ ಮನೆಗೆ – ಏಕೆ ಗೊತ್ತೆ?

    – ಪಾಕ್‌ ತಂಡದ ವಿರುದ್ಧ ದೇಶದ್ರೋಹದ ಕೇಸ್‌!

    ಫ್ಲೋರಿಡಾ: ಅಮೆರಿಕ ಮತ್ತು ಐರ್ಲೆಂಡ್‌ ನಡುವೆ ನಡೆಯಲಿರುವ ಇಂದಿನ (ಶುಕ್ರವಾರ) ಟಿ20 ವಿಶ್ವಕಪ್‌ (T20 World Cup) ಪಂದ್ಯ ಮಳೆಯಿಂದ ರದ್ದಾದರೆ ಪಾಕಿಸ್ತಾನ ತಂಡ (Pakistan Team) ಮನೆಗೆ ತೆರಳುವುವುದು ಖಚಿತವಾಗಿದೆ.

    2024ರ ಟಿ20 ವಿಶ್ವಕಪ್‌ ಟೂರ್ನಿಯ ನಿರ್ಣಾಯಕ ಪಂದ್ಯ ಶುಕ್ರವಾರ ಅಮೆರಿಕದ (USA) ಲಾಡರ್ಹಿಲ್‌ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಯುಎಸ್‌ಎ-ಐರ್ಲೆಂಡ್‌ (USA vs Ireland) ತಂಡಗಳು ಕಾದಾಟ ನಡೆಸಲಿವೆ. ಸದ್ಯಕ್ಕೆ ಫ್ಲೋರಿಡಾ ನಗರದಲ್ಲಿ 89% ಸಾಂದ್ರತೆಯೊಂದಿಗೆ 23% ಮಳೆಯಾಗುವ ಸಾಧ್ಯತೆಯಿದ್ದು. 8 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದು ವೇಳೆ ಯುಎಸ್‌ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯ ಮಳೆಯಿಂದ ರದ್ದಾದರೇ, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಸಿಗಲಿದೆ. ಇದನ್ನೂ ಓದಿ: ‌250 ಕೋಟಿ ರೂ. ವೆಚ್ಚದಲ್ಲಿ ಐದೇ ತಿಂಗಳಲ್ಲಿ ನಿರ್ಮಿಸಿದ್ದ ನಸ್ಸೌ ಕೌಂಟಿ ಸ್ಟೇಡಿಯಂ ನೆಲಸಮ?

    ಪಾಕ್‌ ಏಕೆ ಮನೆಗೆ?
    ಟಿ20 ವಿಶ್ವಕಪ್‌ನಲ್ಲಿ A ಗುಂಪಿನಲ್ಲಿರುವ 5 ತಂಡಗಳ ಪೈಕಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಟೀಂ ಇಂಡಿಯಾ 6 ಅಂಕಗಳೊಂದಿಗೆ ಸೂಪರ್‌-8‌ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. A ಗುಂಪಿನಲ್ಲಿ ಸೂಪರ್‌ 8 ಪ್ರವೇಶಿಸಲು ಇನ್ನೊಂದು ತಂಡಕ್ಕೆ ಮಾತ್ರ ಅವಕಾಶ ಇದೆ. ಯುಎಸ್‌ ತಂಡ ಈಗಾಗಲೇ 2 ಪಂದ್ಯಗಳಲ್ಲಿ ಗೆದ್ದು 4 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದೆ. ಪಾಕ್‌ ತಂಡ ಯುಎಸ್‌ಎಗಿಂತಲೂ ಉತ್ತಮ ನೆಟ್‌ ರನ್‌ರೇಟ್‌ ಹೊಂದಿದ್ದರೂ 2 ಪಂದ್ಯಗಳಲ್ಲಿ ಸೋತಿರುವುದರಿಂದ 2 ಅಂಕ ಪಡೆದು 3ನೇ ಸ್ಥಾನಕ್ಕೆ ಕುಸಿದಿದೆ. ಐರ್ಲೆಂಡ್‌ ವಿರುದ್ಧ ಯುಎಸ್‌ ಸೋತು, ಪಾಕ್‌ ಐರ್ಲೆಂಡ್‌ ವಿರುದ್ಧ ಮುಂದಿನ ಪಂದ್ಯದಲ್ಲಿ ಗೆದ್ದರೆ, ಸೂಪರ್‌-8ಗೆ ಅರ್ಹತೆ ಪಡೆದುಕೊಳ್ಳಲಿದೆ.

    ಒಂದು ವೇಳೆ ಐರ್ಲೆಂಡ್‌ ವಿರುದ್ಧದ ಪಂದ್ಯ ಮಳೆಗೆ ಬಲಿಯಾದರೆ ಆಗ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಪಡೆದುಕೊಳ್ಳಲಿದೆ. ಯುಎಸ್‌ 5 ಅಂಕದೊಂದಿಗೆ ಸೂಪರ್‌-8ಕ್ಕೆ ಅರ್ಹತೆ ಪಡೆದುಕೊಳ್ಳಲಿದೆ. ಪಾಕ್‌ ತಂಡ ಐರ್ಲೆಂಡ್‌ ವಿರುದ್ಧ ಗೆದ್ದರೂ ಟೂರ್ನಿಯಿಂದ ಹೊರಬೀಳಲಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಕಾಫಿನಾಡಿನ ಯುವಕ – ಕೊರೊನಾ ವೇಳೆ ಚಿಕ್ಕಮಗಳೂರಿನಲ್ಲಿ ಅಭ್ಯಾಸ!

    ಪಾಕ್‌ ತಂಡದ ವಿರುದ್ಧ ದೇಶದ್ರೋಹದ ಕೇಸ್‌:
    ಈ ಬಾರಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯ ಮಾಜಿ ಚಾಂಪಿಯನ್ ಪಾಕಿಸ್ತಾನ ತಂಡದ ವಿರುದ್ಧ ಪಾಕ್‌ನ ಗುಜ್ರಾನ್ವಾಲಾ ನಗರದ ವಕೀಲರೊಬ್ಬರು ದೇಶ ದ್ರೋಹ ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಕೇಸ್‌ನ ಬಗ್ಗೆ ಜೂ.21ಕ್ಕೆ ಮುನ್ನ ವರದಿ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ ಎಂದು ತಿಳಿದುಬಂದಿದೆ. ಪಾಕ್ ತಂಡದ ಪ್ರದರ್ಶನದ ಬಗ್ಗೆ ಅರ್ಜಿದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಹಣ ವ್ಯರ್ಥವಾಗುತ್ತಿದೆ ಮತ್ತು ರಾಷ್ಟ್ರದ ನಂಬಿಕೆಗೆ ದ್ರೋಹ ಬಗೆದಂತಾಗಿದೆ. ಆಟಗಾರರು ದೇಶದ ಬಗ್ಗೆ ಗೌರವಕ್ಕಿಂತ ಆರ್ಥಿಕ ಲಾಭಕ್ಕೆ ಆದ್ಯತೆ ನೀಡಿದ್ದಾರೆ ಎಂದು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: India vs Pakistan: ಟ್ರ್ಯಾಕ್ಟರ್‌ ಮಾರಿ ಕ್ರಿಕೆಟ್‌ ನೋಡಲು ಬಂದ ಪಾಕ್ ಅಭಿಮಾನಿಗೆ ನಿರಾಸೆ