Tag: USA

  • 16ನೇ ವರ್ಷಕ್ಕೆ ಸ್ಕೂಲ್‌ ಡ್ರಾಪ್‌ಔಟ್‌ – ಬಿಲಿಯನೇರ್‌, ಗಗನಯಾತ್ರಿ ಈಗ ನಾಸಾ ಮುಖ್ಯಸ್ಥ!

    16ನೇ ವರ್ಷಕ್ಕೆ ಸ್ಕೂಲ್‌ ಡ್ರಾಪ್‌ಔಟ್‌ – ಬಿಲಿಯನೇರ್‌, ಗಗನಯಾತ್ರಿ ಈಗ ನಾಸಾ ಮುಖ್ಯಸ್ಥ!

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಸಜ್ಜಾಗುತ್ತಿರುವ ಡೊನಾಲ್ಡ್‌ ಟ್ರಂಪ್‌ (Donald Trump) ತಮ್ಮ ಕಾರ್ಯವರ್ಗಕ್ಕೆ ಈಗ ನಾಸಾ (NASA) ಮುಖ್ಯಸ್ಥರಾಗಿ ಬಿಲಿಯನೇರ್, ಗಗನಯಾತ್ರಿ ಜೇರೆಡ್ ಐಸಾಕ್‌ಮನ್  ಅವರನ್ನು (Jared Isaacman) ಆಯ್ಕೆ ಮಾಡಿದ್ದಾರೆ.

    ಜೇರೆಡ್ ಐಸಾಕ್‌ಮನ್ ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಅವರ ಉದ್ದಿಮೆ ಪಾಲುದಾರರಾಗಿದ್ದಾರೆ. ಸ್ಪೇಸ್ ಎಕ್ಸ್ ಚಟುವಟಿಕೆಯಲ್ಲಿ ಜೆರ್ಡ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಜೇರೆಡ್ ನೇಮಕ ಈಗ ಭಾರೀ ಟೀಕೆ-ಟಿಪ್ಪಣಿಗಳಿಗೆ ಕಾರಣವಾಗಿದೆ.

     

    ಟ್ರಂಪ್‌ ಹೇಳಿದ್ದೇನು?
    ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ ಮುಖ್ಯಸ್ಥರಾಗಿ ಲೋಕೋಪಕಾರಿ, ಪೈಲಟ್ ಮತ್ತು ಗಗನಯಾತ್ರಿ ಜೇರೆಡ್ ಐಸಾಕ್‌ಮನ್ಅ ವರನ್ನು ನಾಮನಿರ್ದೇಶನ ಮಾಡಲು ನಾನು ಸಂತೋಷಪಡುತ್ತೇನೆ.

    ಕಳೆದ 25 ವರ್ಷಗಳಲ್ಲಿ Shift4 ನ ಸಂಸ್ಥಾಪಕ ಮತ್ತು CEO ಆಗಿ ಜೇರೆಡ್ ಅಸಾಧಾರಣ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ಜಾಗತಿಕ ಹಣಕಾಸು ತಂತ್ರಜ್ಞಾನ ಕಂಪನಿಯನ್ನು ನಿರ್ಮಿಸಿದ್ದಾರೆ. ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್ ಡಿಫೆನ್ಸ್ ಮತ್ತು ನಮ್ಮ ಮಿತ್ರರಾಷ್ಟ್ರಗಳನ್ನು ಬೆಂಬಲಿಸುವ ಡಿಫೆನ್ಸ್ ಏರೋಸ್ಪೇಸ್ ಕಂಪನಿಯಾದ ಡ್ರೇಕನ್ ಇಂಟರ್‌ನ್ಯಾಷನಲ್‌ ಸ್ಥಾಪಿಸಿದ್ದಾರೆ. ಜೇರೆಡ್‌ನ ಬಾಹ್ಯಾಕಾಶ, ಗಗನಯಾತ್ರಿ ಅನುಭವ ಬ್ರಹ್ಮಾಂಡದ ರಹಸ್ಯಗಳನ್ನು ತಿಳಿಯಲು ಮತ್ತು  ನಾಸಾವನ್ನು ಹೊಸ ಯುಗದಲ್ಲಿ ಮುನ್ನಡೆಸಲು ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ಟ್ರಂಪ್‌ ಬಣ್ಣಿಸಿದ್ದಾರೆ.

    ಯಾರು ಈ ಐಸಾಕ್‌ಮನ್?
    41 ವರ್ಷದ ಜೇರೆಡ್ ಐಸಾಕ್‌ಮನ್ ಒಬ್ಬ ಪ್ರಮುಖ ಅಮೇರಿಕನ್ ವಾಣಿಜ್ಯೋದ್ಯಮಿ, ಪೈಲಟ್ ಮತ್ತು ಗಗನಯಾತ್ರಿಯಾಗಿದ್ದಾರೆ. ನ್ಯೂಜೆರ್ಸಿಯಲ್ಲಿ ಜನಿಸಿದ ಇವರು 16ನೇ ವಯಸ್ಸಿನಲ್ಲಿ ಪ್ರೌಢಶಾಲೆಗೆ ಗುಡ್‌ಬೈ ಹೇಳಿ ಪೋಷಕರ ನೆರವಿನಿಂದ Shift4 ಪಾವತಿ ಕಂಪನಿ ಸ್ಥಾಪಿಸಿದ್ದರು. ಇದನ್ನೂ ಓದಿ: ಒತ್ತೆಯಾಳುಗಳನ್ನ ಬಿಡುಗಡೆ ಮಾಡದಿದ್ರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತೆ: ಹಮಾಸ್‌ಗೆ ಟ್ರಂಪ್‌ ವಾರ್ನಿಂಗ್

    ಈ ಪಾವತಿ ಸಂಸ್ಕರಣಾ ಕಂಪನಿಯು ಈಗ ಸರಿಸುಮಾರು 7.4 ಶತಕೋಟಿ ಡಾಲರ್‌ ಮೌಲ್ಯವನ್ನು ಹೊಂದಿದೆ. ಹಿಲ್ಟನ್ ಮತ್ತು KFC ನಂತಹ ಪ್ರಮುಖ ಬ್ರಾಂಡ್‌ಗಳಿಗೆ ಪಾವತಿ ವ್ಯವಸ್ಥೆಯಾಗಿ ಬಳಕೆಯಾಗುತ್ತಿದೆ.

    ವಾಯುಯಾನದ ಬಗ್ಗೆ ಅಪಾರವಾದ ಆಸಕ್ತಿ ಬೆಳೆಸಿದ್ದ ಇವರು 2009ರಲ್ಲಿ ಲೆಟ್‌ ಜೆಟ್‌ನಲ್ಲಿ 62 ಗಂಟೆ ಸುತ್ತಿ ವಿಶ್ವದಾಖಲೆ ಬರೆದಿದ್ದರು.

    ಸೆಪ್ಟೆಂಬರ್ 2024 ರಲ್ಲಿ ಸ್ಪೇಸ್‌ಎಕ್ಸ್‌ನಿಂದ (SpaceX Polaris Dawn Mission) ಹಮ್ಮಿಕೊಂಡಿದ್ದ ‘ಪೋಲಾರಿಸ್‌ ಡಾನ್‌ ಮಿಷನ್’‌ ಬಾಹ್ಯಾಕಾಶ ನಡಿಗೆ (Spacewalk) ಯಶಸ್ವಿಯಾಗಿತ್ತು ಮತ್ತು ನಾಲ್ವರು ಗಗನಯಾತ್ರಿಕರು ಅಂತರಿಕ್ಷದಲ್ಲಿ ಓಡಾಟ ನಡೆಸಿದ್ದರು. ಜೇರೆಡ್ ಐಸಾಕ್‌ಮನ್‌ ಖಾಸಗಿ ಬಾಹ್ಯಾಕಾಶ ನಡಿಗೆಯಲ್ಲಿ ಭಾಗವಹಿಸಿದ ಮೊದಲ ವ್ಯಕ್ತಿಯಾಗಿದ್ದರು.

     

  • ಸೊರೊಸ್‌ ಜೊತೆ ಕೈಜೋಡಿಸಿರುವ ರಾಹುಲ್‌ ದೇಶದ್ರೋಹಿ: ಸಂಬಿತ್‌ ಪಾತ್ರ ಕಿಡಿ

    ಸೊರೊಸ್‌ ಜೊತೆ ಕೈಜೋಡಿಸಿರುವ ರಾಹುಲ್‌ ದೇಶದ್ರೋಹಿ: ಸಂಬಿತ್‌ ಪಾತ್ರ ಕಿಡಿ

    ನವದೆಹಲಿ: ಭಾರತದ ಆರ್ಥಿಕತೆಯನ್ನು (Indian Economy) ಅಸ್ಥಿರಗೊಳಿಸಲು ಅಮೆರಿಕ ಮೂಲದ ಉದ್ಯಮಿ ಜಾರ್ಜ್‌ ಸೊರೊಸ್‌ (George Soros) ಮುಂದಾಗಿದ್ದು, ಅವರ ಜೊತೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಕೈಜೋಡಿಸಿದ್ದಾರೆ. ಭಾರತದ ವಿರುದ್ಧ ಪಿತೂರಿ ನಡೆಸುತ್ತಿರುವ ವ್ಯಕ್ತಿಗಳಿಗೆ ಬೆಂಬಲ ನೀಡುತ್ತಿರುವ ರಾಹುಲ್‌ ಗಾಂಧಿ ದೇಶದ್ರೋಹಿ (Traitor) ಎಂದು ಬಿಜೆಪಿ ಸಂಸದ ಸಂಬಿತ್‌ ಪಾತ್ರ (Sambit Patra) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಫ್ರೆಂಚ್ ಪತ್ರಿಕೆ ಮೀಡಿಯಾಪಾರ್ಟ್ ಡಿಸೆಂಬರ್ 2 ರಂದು ತನಿಖಾ ಪತ್ರಿಕೋದ್ಯಮ ನಡೆಸುತ್ತಿರುವ OCCRP (Organized Crime and Corruption Reporting Project) ಮತ್ತು ಅಮೆರಿಕ ಸರ್ಕಾರದ ನಡುವಿನ ಸಂಬಂಧದ ಬಗ್ಗೆ ವರದಿ ಪ್ರಕಟಿಸಿದ ನಂತರ ಸಂಬಿತ್‌ ಪಾತ್ರ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

    OCCRP ಸಂಸ್ಥೆಗೆ ಜಾರ್ಜ್‌ ಸೊರೊಸ್‌ ಹಣವನ್ನು ನೀಡುತ್ತಾರೆ. ಈ OCCRP ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಸುಳ್ಳು ವರದಿಗಳನ್ನು ಪ್ರಕಟಿಸುತ್ತದೆ. OCCRP ವರದಿ ಪ್ರಕಟಿಸಿದ ನಂತರ ಇಲ್ಲಿ ರಾಹುಲ್‌ ಗಾಂಧಿ ಅಳಲು ಆರಂಭಿಸುತ್ತಾರೆ. ಜಾರ್ಜ್‌ ಸೊರೊಸ್‌ ಮತ್ತು ರಾಹುಲ್‌ ಗಾಂಧಿ ದೇಹಗಳು ಬೇರೆ ಬೇರೆಯಾದರೂ ಆತ್ಮ ಮಾತ್ರ ಒಂದೇ. ಸೊರೊಸ್‌ ಅವರ ಕಾರ್ಯಸೂಚಿಯನ್ನು ಪೂರೈಸಲು ರಾಹುಲ್‌ ಗಾಂಧಿ ಬಯಸುತ್ತಾರೆ. ಇವರಿಬ್ಬರು ದೇಶದ ಹಿತಾಸಕ್ತಿಗೆ ಧಕ್ಕೆ ತರಲು ಬಯಸುತ್ತಾರೆ ಎಂದು ದೂರಿದರು. ಇದನ್ನೂ ಓದಿ: ಹಿಂಡನ್‌ಬರ್ಗ್‌ನಲ್ಲಿ ಸೊರೊಸ್ ಮುಖ್ಯ ಹೂಡಿಕೆದಾರ, ವಿದೇಶದಿಂದ ಭಾರತದ ವಿರುದ್ಧ ಪಿತೂರಿ: ರವಿಶಂಕರ್‌ ಪ್ರಸಾದ್

    OCCRP ಜಾಗತಿಕ ಮಾಧ್ಯಮ ಸಂಸ್ಥೆಯಾಗಿದ್ದು ಆ ಸಂಸ್ಥೆ ಪ್ರಕಟಿಸುವುದನ್ನು ಕೋಟ್ಯಂತರ ಮಂದಿ ಓದುತ್ತಾರೆ. ಸರ್ಕಾರೇತರ ಸಂಸ್ಥೆಯಾದ ಓಪನ್‌ ಸೊಸೈಟಿ ಫೌಂಡೇಶನ್‌ OCCRP ಸಂಸ್ಥೆಗೆ ಭಾರೀ ಪ್ರಮಾಣದಲ್ಲಿ ಧನಸಹಾಯ ನೀಡುತ್ತದೆ. ಓಪನ್‌ ಸೊಸೈಟಿ ಸೊರೊಸ್‌ ಅವರು ಸ್ಥಾಪನೆ ಮಾಡಿದ ಸಂಸ್ಥೆಯಾಗಿದ್ದು ರಾಹುಲ್‌ ಗಾಂಧಿ ದೇಣಿಗೆ ನೀಡುತ್ತಾರೆ. ಹಣ ನೀಡುವ ಜನರ ಹಿತಾಸಕ್ತಿಗೆ ಅನುಗುಣವಾಗಿ ಈ ಸಂಸ್ಥೆಗಳು ಕೆಲಸ ಮಾಡುತ್ತವೆ ಎಂದು ದೂರಿದರು.

    ಲೋಕಸಭೆಯ ವಿರೋಧ ಪಕ್ಷದ ನಾಯಕನನ್ನು ದೇಶದ್ರೋಹಿ ಎಂದು ಕರೆಯಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ರಾಷ್ಟ್ರೀಯ ಹಿತಾಸಕ್ತಿಗಳಿಗೆ ಧಕ್ಕೆ ತರುವ ವಿಷಯಗಳನ್ನು ರಾಹುಲ್‌ ಗಾಂಧಿ ಆಗಾಗ ಪ್ರಸ್ತಾಪಿಸುತ್ತಾರೆ. ಭಾರತ ವಿರೋಧಿ ಭಾವನೆಗಳನ್ನು ಹೊಂದಿರುವ ವ್ಯಕ್ತಿಗಳು ಮತ್ತು ಗುಂಪುಗಳಿಂದ ರಾಹುಲ್‌ ಗಾಂಧಿ ಮೆಚ್ಚುಗೆಯನ್ನು ಗಳಿಸುತ್ತಾರೆ.

    ಈ OCCRP ಬಗ್ಗೆ ಹಲವು ಪ್ರಶ್ನೆಗಳು ಏಳುತ್ತದೆ. ಏಕೆಂದರೆ ಇದರ 70% ನಿಧಿ ಒಂದೇ ಮೂಲದಿಂದ ಬರುತ್ತದೆ. OCCRP ಜಾರ್ಜ್ ಸೊರೊಸ್ ಮತ್ತು ಅಮೆರಿಕಾದ ಹಿತಾಸಕ್ತಿಗೆ ಅನುಗುಗಣವಾಗಿ ಕೆಲಸ ಮಾಡುತ್ತದೆ ಎಂದು ಕಿಡಿಕಾರಿದರು.

     

  • ಶಿಯಾ-ಸುನ್ನಿಗಳ ನಡುವೆ ಮತ್ತೆ ರಕ್ತಪಾತ – ದಿನ ದಿನಕ್ಕೂ ಏರುತ್ತಿದೆ ಸಾವಿನ ಸಂಖ್ಯೆ!

    ಶಿಯಾ-ಸುನ್ನಿಗಳ ನಡುವೆ ಮತ್ತೆ ರಕ್ತಪಾತ – ದಿನ ದಿನಕ್ಕೂ ಏರುತ್ತಿದೆ ಸಾವಿನ ಸಂಖ್ಯೆ!

    ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ (Khyber Pakhtunkhwa) ಜಿಲ್ಲೆಯೊಂದರಲ್ಲಿ ಕೋಮುಗಲಭೆ ಭುಗಿಲೆದ್ದಿದೆ. ಮುಸ್ಲಿಂ ಧರ್ಮದ ಎರಡು ದೊಡ್ಡ ಪಂಗಡಗಳಾದ ಶಿಯಾ ಮತ್ತು ಸುನ್ನಿಗಳ ನಡುವಿನ ಸಂಘರ್ಷ ಸಂಘರ್ಷಗಳು ನಿರಂತರವಾಗಿ ಶಾಂತಿ ಕದಡುತ್ತಿವೆ. ಪಾಕ್‌ನ ಆಫ್ಘನ್ ಗಡಿಯ ಕುರ್ರಂ ಜಿಲ್ಲೆಯ ಖೈಬ‌ರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಈ ಎರಡು ಪಂಗಡಗಳು ಪರಸ್ಪರ ಕಾದಾಟಕ್ಕಿಳಿದಿದ್ದು, ಕಂಡಕಂಡಲ್ಲಿ ದಾಳಿಗಳು ನಡೆಯುತ್ತಿವೆ. ಈ ಸಂಘರ್ಷ ಕೇವಲ ಪಾಕಿಸ್ತಾನ ಮಾತ್ರವಲ್ಲದೇ ವಿಶ್ವದ ಇತರ ಮುಸ್ಲಿಂ ರಾಷ್ಟ್ರಗಳಲ್ಲೂ (Muslims Nation) ಕಂಪನ ಸೃಷ್ಟಿಸಿವೆ.

    ಕಳೆದ 6 ತಿಂಗಳಿನಿಂದ ಮತ್ತೆ ಶಿಯಾ – ಸುನ್ನಿ ಪಂಗಡಗಳ ನಡುವಿನ ಸಂಘರ್ಷ (Shia Sunni Clash) ತಾರಕಕ್ಕೇರಿದ್ದು, ಈ ಅವಧಿಯಲ್ಲಿ ನೂರಾರು ಮಂದಿ ಪ್ರಾಣ ತೆತ್ತಿದ್ದಾರೆ. ಸದ್ಯ ಒಂದು ವಾರ ಕದನವಿರಾಮ ಘೋಷಣೆಯಾಗಿದ್ದರೂ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತಲೇ ಇದೆ. ಇದರಿಂದ 1 ವಾರದಲ್ಲಿ 87 ಇದ್ದ ಸಾವಿನ ಸಂಖ್ಯೆ ಕಳೆದ 3 ದಿನಗಳಿಂದ 133ಕ್ಕೆ ಏರಿಕೆಯಾಗಿದೆ. ಇದರೊಂದಿಗೆ 300ಕ್ಕೂ ಅಧಿಕ ಕುಟುಂಬಗಳು ವಲಸೆ ಹೋಗಿವೆ. ಈ ಸಂಘರ್ಷ ನಿಯಂತ್ರಣಕ್ಕೆ ಅಲ್ಲಿನ ಜಿಲ್ಲಾಡಳಿತ ಹಾಗೂ ಭದ್ರತಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಅದಕ್ಕಾಗಿ ಭದ್ರತಾ ಪಡೆಗಳು ಸ್ಥಳದಲ್ಲೇ ಬೀಡುಬಿಟ್ಟಿವೆ. ಕುರ್ರಂನ ಪ್ರಮುಖ ನಗರಗಳಾದ ಪರಾಚಿಬಾರ್‌, ಪೇಶಾಬವರ್‌ ಅನ್ನು ಸಂಪರ್ಕಿಸುವ ಮುಖ್ಯರಸ್ತೆಯನ್ನು ಬಂದ್‌ ಮಾಡಲಾಗಿದೆ.

    ಸಂಘರ್ಷಕ್ಕೆ ಕಾರಣವೇನು?

    ಇಸ್ಲಾಮಿನ ಅಂತಿಮ ಪ್ರವಾದಿ ಮೊಹಮ್ಮದ್‌ರ ನಂತರದ ಉತ್ತರಾಧಿಕಾರ ವಿಚಾರದಲ್ಲಿ ಹುಟ್ಟಿಕೊಂಡ ವಿವಾದ ಇಂದಿಗೂ ಮುಂದುವರಿದಿದೆ. ಪಾಕ್‌ನಲ್ಲಿ ಬಹುಸಂಖ್ಯಾತರಾಗಿರುವ ಸುನ್ನಿ ಸಮುದಾಯದವರು ರಾಜಕೀಯ ಸಹಿತ ಎಲ್ಲ ಅಧಿಕಾರವೂ ತಮ್ಮ ಬಳಿಯೇ ಇರಬೇಕೆಂದು ಬಯಸುತ್ತಿದ್ದು, ಹಾಗಾಗಿ ಅವರು ಶಿಯಾಗಳ (Shia) ನೆರಳನ್ನೂ ಕಾಣಲು ತಯಾರಿಲ್ಲ. ಈ ವಿಚಾರದಲ್ಲಿ ಎರಡೂ ಪಂಗಡಗಳ ನಡುವೆ ಘರ್ಷಣೆ ಸದಾ ಇದ್ದಿದ್ದೇ.

    ಸಂಘರ್ಷ ಶುರುವಾಗಿದ್ದು ಎಲ್ಲಿಂದ?

    ಪಾಕಿಸ್ತಾನದ ಪಖ್ತುಂಖ್ವಾ ಪ್ರಾಂತ್ಯ ಅನ್ನೋದು ಅಫ್ಘಾನಿಸ್ತಾನದ (Afghanistan) ಗಡಿಯಲ್ಲಿರುವ ಒಂದು ಸಣ್ಣ ಜಿಲ್ಲೆ. ಇಂದು ಅಲ್ಲಿ ಈ ಪರಿಯಾಗಿ ಸಂಘರ್ಷ ಶುರುವಾಗಲು ಕಾರಣ ಏನು ಎಂದು ಹುಡುಕುತ್ತಾ ಹೋದರೆ ಅಫ್ಘಾನಿಸ್ತಾನದ ಸಂಘರ್ಷ ಹಾಗೂ 70ರ ದಶಕದಲ್ಲಿ ಪಾಕಿಸ್ತಾನದ ಮಿಲಿಟರಿ ಅಧಿ ಕಾರಿಯಾಗಿದ್ದ ಜಿಯಾ ಉಲ್ ಹಕ್ ಎಂಬ ಸೇನಾ ನಾಯಕನ ಪಾತ್ರ ಕಾಣಿಸುತ್ತದೆ.

    ವಿಶ್ವದ 2ನೇ ಮಹಾಯುದ್ಧದ ಬಳಿಕ 2 ಬಲಾಡ್ಯ ರಾಷ್ಟ್ರಗಳ ನಡುವೆ ಉಂಟಾದ ʻಶೀತಲ ಸಮರ’ದ ಕಾಲದಲ್ಲಿ ಅಫ್ಘಾನಿಸ್ತಾನದಲ್ಲಿ ರಷ್ಯಾದ ಪಡೆಗಳು ಬೀಡುಬಿಟ್ಟಿದ್ದವು. ಇತ್ತ ಪಾಕಿಸ್ತಾನವು ಅಮೆರಿಕ ಪರ ನಿಂತುಕೊಂಡಿತ್ತು. ಆಗ ಅಫ್ಘಾನಿಸ್ತಾನದ ನಿರಾಶ್ರಿತರನ್ನು ಕರೆತಂದಿರುವ ಜಿಯಾ ಉಲ್ ಹಕ್ ಇದೇ ಪ್ರಾಂತ್ಯದಲ್ಲಿ ಆಶ್ರಯ ನೀಡುತ್ತಾ ಬಂದ. ಅವರಿಗಾಗಿಯೇ ಮದರಸಾಗಳನ್ನ ತೆರೆಯಲಾಯಿತು. ಇವರೆಲ್ಲರೂ ಶಿಯಾ ಸಮುದಾಯದವರಾಗಿದ್ದು, ಇವರನ್ನು ಅಫ್ಘಾನ್‌ನಲ್ಲಿದ್ದ ರಷ್ಯಾ ಪಡೆಗಳ ವಿರುದ್ಧ ಹಾಗೂ ಕಾಶ್ಮೀರದಲ್ಲಿ ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ಬಳಸಲು ಯೋಜನೆ ರೂಪಿಸಿ ಅವರಿಗೆ ಹಣಕಾಸಿನ ನೆರವನ್ನೂ ನೀಡಲಾಯಿತು. ವರ್ಷಗಳು ಉರುಳಿದಂತೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶಿಯಾಗಳ ಸಂಖ್ಯೆ ಕಡಿಮೆಯಾಗಿ ಸುನ್ನಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಇದರಿಂದ ನಿಧಾನವಾಗಿ ಎರಡು ಪಂಗಡಗಳ ನಡುವೆ ಸಂಘರ್ಷದ ಕಿಡಿ ಹೊತ್ತಿಕೊಂಡಿತ್ತು.

    ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ಹೇಗೆ?

    ಈ ಸಮುದಾಯಗಳ ಸಂಘರ್ಷಕ್ಕೆ ಇನ್ನೂ ಒಂದು ಮುಖ್ಯ ಕಾರಣವಿದೆ. ಕುರ್ರಂ ಜಿಲ್ಲೆಯು ಬುಡಕಟ್ಟು ಪ್ರದೇಶವಾಗಿದ್ದು, 7.84 ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿದೆ. ಈ ಪೈಕಿ ಶೇ.99 ರಷ್ಟು ತುರಿ, ಬಂಗಾಶ್‌, ಜೈಮುಷ್ಟ್‌, ಮಂಗಲ್‌, ಮುಕ್ಬಾಲ್‌ ಮತ್ತು ಮುಸುಜೈ ಮತ್ತು ಪರ್ಷಮ್ಕಾನಿ, ಬಂಗಾಶ್‌ ಶಿಯಾ ಸಮುದಾಗಳಿವೆ. ಉಳಿದವರು ಸುನ್ನಿಗಳಿದ್ದಾರೆ. 2001ರಲ್ಲಿ ಅಮೆರಿಕವು ಪಾಕಿಸ್ತಾನದ ಮೇಲೆ ದಾಳಿ ಮಾಡಿದಾಗ ಲಕ್ಷಾಂತರ ಸುನ್ನಿಗಳು ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಅಫ್ಘಾನಿಸ್ತಾನದಲ್ಲಿದ್ದ ಸುನ್ನಿಗಳು ಪಾಕ್‌ನ ಹಲವು ಪ್ರದೇಶಗಳಲ್ಲಿ ನೆಲೆದರು. ಆದ್ರೆ ಕುರ್ರಂ ಜಿಲ್ಲೆಯಲ್ಲಿದ್ದ ಶಿಯಾಗಳು ಇಲ್ಲಿನ ಸುನ್ನಿಗಳಿಗೆ ನೆಲೆಯೂರಲು ವಿರೋಧ ವ್ಯಕ್ತಪಡಿಸಿತ್ತು. ಆದ್ರೆ ಅಂದಿನ ಜನರಲ್‌ ಜಿಯಾ ಉಲ್‌ ಹಕ್‌ನಿಂದಾಗಿ ಸುನ್ನಿಗಳಿಗೆ ಈ ಪ್ರದೇಶದಲ್ಲಿ ನೆಲೆಸುವ ಅವಕಾಶ ಸಿಕ್ಕಿತು. 2007ರಲ್ಲಿ ಶಿಯಾ – ಸುನ್ನಿಗಳ ನಡುವೆ ರಕ್ತಸಿಕ್ತ ಘರ್ಷಣೆ ನಡೆಯಿತು. ಈ ನಡುವೆ 2008 ರಲ್ಲಿ, ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಹೆಸರಿನ ಶಿಯಾ ವಿರೋಧಿ ಭಯೋತ್ಪಾದಕ ಸಂಘಟನೆ ರಚಿಸಲಾಯಿತು. ಇದು ಹಿಂಸಾಚಾರವನ್ನು ಮತ್ತಷ್ಟು ಹೆಚ್ಚಿಸಿತು. ಸುಮಾರು ನಾಲ್ಕು ವರ್ಷಗಳ ಕಾಲ ನಡೆದ ಈ ಯುದ್ಧದಲ್ಲಿ ಸಾವಿರಾರು ಜನ ಸತ್ತರು. ಅಂತಿಮವಾಗಿ 2011ರಲ್ಲಿ ಶಾಂತಿ ಒಪ್ಪಂದಕ್ಕೆ ಬರಲಾಯಿತು. 2021ರಲ್ಲಿ ತಾಲಿಬಾನ್‌ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗ ಮತ್ತೆ ಇಲ್ಲಿ ಹಿಂಸಾಚಾರ ಭುಗಿಲೆದ್ದಿತು.

    ಸಮುದಾಯಗಳ ಬಲಾ-ಬಲ ಹೇಗಿದೆ?

    ಪಾಕಿಸ್ತಾನದಲ್ಲಿ ಒಟ್ಟು 24.5 ಕೋಟಿ ಜನಸಂಖ್ಯೆಯಲ್ಲಿ ಸುಮಾರು 96% ರಷ್ಟು ಮುಸ್ಲಿಮರೇ ಇದ್ದಾರೆ. ಮುಸ್ಲಿಮರಲ್ಲಿ 80% ರಷ್ಟು ಸುನ್ನಿಗಳಿದ್ದಾರೆ. ಸುಮಾರು 12% ರಷ್ಟು ಶಿಯಾಗಳು ವಾಸವಾಗಿದ್ದಾರೆ. ಈ ಎರಡು ಪಂಗಡಗಳಲ್ಲದೇ ಸುಮಾರು 45 ಲಕ್ಷ ಅಹಮದೀಯರು ಈ ದೇಶದಲ್ಲಿದ್ದಾರೆ. ಧರ್ಮಾಚರಣೆ ಸಹಿತ ಅನೇಕ ವಿಚಾರಗಳಲ್ಲಿ ಈ ಪಂಗಡಗಳ ನಡುವೆ ಭಿನ್ನತೆ ಇದೆ.

    ಹಲವು ಬುಡಕಟ್ಟು ಸಮುದಾಯಗಳ ನೆಲೆಯಾಗಿರುವ ಕುರ್ರಂನಲ್ಲಿ ರಕ್ತಪಾತವಾಗಲು ಸ್ಥಳೀಯರು ಮಾತ್ರ ಕಾರಣವಲ್ಲ, ವಾಸ್ತವವಾಗಿ ಸೌದಿ ಅರೇಬಿಯಾ, ಇರಾನ್‌ ಸಹ ಇಲ್ಲಿನ ಹಿಂಸಾಚಾರಕ್ಕೆ ಕಾರಣ ಅನುಮಾನಗಳು ವ್ಯಕ್ತವಾಗಿವೆ. ಇರಾನ್‌ ಶಿಯಾಗಳನ್ನು ಹೆಚ್ಚಾಗಿ ಹೊಂದಿರುವ ದೇಶವಾಗಿದ್ದು, ಸೌದಿ ಅರೇಬಿಯಾ ಸುನ್ನಿಗಳ ಬಹುಸಂಖ್ಯಾತ ರಾಷ್ಟ್ರವಾಗಿದೆ. ಪಾಕಿಸ್ತಾನದ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಕಾಂಟೆಂಪರರಿ ರಿಸರ್ಚ್ ವರದಿಯು ಸೌದಿ ಅರೇಬಿಯಾ ಕುರ್ರಂನಲ್ಲಿ ಸುನ್ನಿ ಉಗ್ರಗಾಮಿ ಸಂಘಟನೆಗಳನ್ನು ಹಾಗೂ ಇರಾನ್‌ ಶಿಯಾ ಸಂಘಟನೆಗಳನ್ನು ಬೆಂಬಲಿಸುತ್ತಿದೆ. ತಾಲಿಬಾನ್ ಬೆಂಬಲಿತ ಸಂಘಟನೆಗಳ ವಿರುದ್ಧ ಹೋರಾಡಲು ಜೈನ್ಬಿಯುನ್ ಬ್ರಿಗೇಡ್ ಎಂಬ ಹೆಸರಿನ ಸಂಘಟನೆಯನ್ನು ಇರಾನ್ ಇಲ್ಲಿ ಸ್ಥಾಪಿಸಿದೆ. ಪಾಕಿಸ್ತಾನ ಸರ್ಕಾರ ಜೈನ್ಬಿಯುನ್ ಬ್ರಿಗೇಡ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಅಂಕಿ ಅಂಶಗಳ ಪ್ರಕಾರ 2007 ಮತ್ತು 2011ರ ನಡುವೆ ಕುರ್ರಂನಲ್ಲಿ ನಡೆದ ಶಿಯಾ-ಸುನ್ನಿಗಳ ನಡುವಿನ ದಂಗೆಗಳಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 5 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡರು, 10 ಸಾವಿರಕ್ಕೂ ಹೆಚ್ಚು ಮಂದಿ ಆ ಪ್ರದೇಶದಿಂದಲೇ ಕಾಲ್ಕಿತ್ತರು ಎಂದು ಹೇಳಲಾಗಿದೆ.

    ಇತರ ಪಂಗಡಗಳಿಗೂ ನೆಮ್ಮದಿ ಇಲ್ಲ!

    ಪಾಕಿಸ್ತಾನದಲ್ಲಿ ಶಿಯಾ- ಸುನ್ನಿಗಳ ಹೊರತಾಗಿ ಅಹಮದೀಯರು, ಇಸ್ಮಾಯಿಲಿ, ಬಹುರಾ, ಜೈದಿ, ಸೂಫಿ ಪಂಥ ಸಹಿತ ಇನ್ನಿತರ ಪಂಗಡಗಳು ಇವೆ. ಆದರೆ, ಇವರೆಲ್ಲ ತೀರಾ ಚಿಕ್ಕ ಸಮುದಾಯ ಆಗಿರುವ ಕಾರಣ ಇವರ ಏಳಿಗೆಯನ್ನು ಅಲ್ಲಿನ ಬಹುಸಂಖ್ಯಾತರು ಸಹಿಸುತ್ತಿಲ್ಲ. ಬಹುತೇಕ ಈ ಚಿಕ್ಕ ಸಮುದಾಯವನ್ನು ಗುರಿಯಾಗಿಸಿಯೇ ಭಯೋತ್ಪಾದನಾ ದಾಳಿಗಳು ನಡೆಯುತ್ತಿದ್ದು, ರಕ್ತಸಿಕ್ತ ಅಧ್ಯಾಯದಿಂದ ಈ ಪಂಗಡಗಳು ನಲುಗಿ ಹೋಗಿವೆ.

    ಅಹಮದೀಯರಿಗೇಕೆ ನೆಲೆ ಇಲ್ಲ?

    ಪಾಕಿಸ್ತಾನದಲ್ಲಿ ಸುನ್ನಿ ಮತ್ತು ಶಿಯಾಗಳ ನಡುವೆ ಇನ್ನೊಂದು ಮುಸ್ಲಿಂ ಪಂಗಡ ವಾಸಿಸುತ್ತಿದೆ. ಅದುವೇ ಅಹಮ್ಮದೀಯ ಸಮುದಾಯ. ಆದರೆ, ಪಾಕಿಸ್ತಾನದಲ್ಲಿ ಸದ್ಯ ಅವರಿಗೆ ನೆಲೆಯೇ ಇಲ್ಲದ ಸ್ಥಿತಿ ಇದೆ. ಅಹಮದೀಯ ಪಂಥದವರು ತಮ್ಮನ್ನು ತಾವು ಮುಸ್ಲಿಂ ಎಂದು ಕರೆದುಕೊಳ್ಳುತ್ತಾರೆ. ಆದರೆ, ಅವರನ್ನು ಪಾಕಿಸ್ತಾನದ ಸಂವಿಧಾನದ ಅಡಿಯಲ್ಲಿ 1974ರಲ್ಲಿ ʻಮುಸ್ಲಿಮೇತರರು’ ಎಂದು ಘೋಷಿಸಲಾಯಿತು. ಪಂಜಾಬ್ ಪ್ರಾಂತ್ಯದಲ್ಲಿ ಇವರ ಸಂಖ್ಯೆ ಹೆಚ್ಚಾಗಿದೆ. ಧಾರ್ಮಿಕ ವಿಚಾರವಾಗಿ ಇವರ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದು, ಅವರಿಗೆ ಸೇರಿದ ಧಾರ್ಮಿಕ ಸ್ಥಳಗಳು ಮತ್ತು ಖಬರಸ್ಥಾನಗಳನ್ನು (ಸ್ಮಶಾನ) ನಾಶ ಮಾಡಲಾಗಿದೆ. ಪಾಕಿಸ್ತಾನದಲ್ಲಿ 1985ರಲ್ಲಿ ವಿವಿಧ ಧಾರ್ಮಿಕ ಗುಂಪುಗಳಿಗೆ ಪ್ರತ್ಯೇಕ ಮತದಾರರ ಪಟ್ಟಿಯನ್ನು ಪರಿಚಯಿಸಲಾಯಿತು. ಇದರಲ್ಲಿ ಅಹಮ್ಮದೀಯರನ್ನೂ ಸೇರಿಸಲಾಯಿತು. ಇದು ಅಹಮ್ಮದೀಯರನ್ನು ಕೆರಳಿಸಿದ್ದು, ಇಂದಿಗೂ ಅವರು ಪೂರ್ಣ ಪ್ರಮಾಣದಲ್ಲಿ ಅಲ್ಲಿನ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸದೆ ದೂರವೇ ಉಳಿದಿದ್ದಾರೆ ಎನ್ನುತ್ತವೆ ವರದಿಗಳು.

    WTC ದಾಳಿಯೂ ಸಂಘರ್ಷಕ್ಕೆ ಕಾರಣವಾಗಿದ್ದು ಹೇಗೆ?

    ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ 2001ರ ಸೆ.11ರಂದು ತಾಲಿಬಾನಿಗಳು ದಾಳಿ ನಡೆಸಿದ ಬಳಿಕ ಅಮೆರಿಕದಿಂದ ಲಕ್ಷಾಂತರ ಮಂದಿ ಸುನ್ನಿ ಸಮುದಾಯದವರನ್ನು ಓಡಿಸಲಾಯಿತು. ಅವರು ನೆಲೆ ಇಲ್ಲದೇ ಬೇರೆ-ಬೇರೆ ದೇಶಗಳಿಗೆ ಹೋಗಿ ಆಶ್ರಯ ಪಡೆದರು. ಪಾಕಿಸ್ತಾನಕ್ಕೂ ಲಕ್ಷಾಂತರ ಸುನ್ನಿಗಳು ವಲಸೆ ಹೋದರು. ಅವರಿಗೆ ಪುನರ್ವಸತಿ ಕಲ್ಪಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು. ಈ ಹಂತದಲ್ಲಿ ಪಾಕಿಸ್ತಾನದ ಅಂದಿನ ಸರ್ಕಾರ ಖೈಬ‌ರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಆಶ್ರಯ ಕಲ್ಪಿಸಲು ಮುಂದಾಗಿತ್ತು. ಆದ್ರೆ, ಆ ಪ್ರಾಂತ್ಯದಲ್ಲಿ ಬಹುಸಂಖ್ಯಾತರಾಗಿದ್ದ ಶಿಯಾ ಸಮುದಾಯ ಸುನ್ನಿಗಳಿಗೆ ಆಶ್ರಯ ನೀಡುವುದನ್ನು ವಿರೋಧಿಸಿತು. ಇಲ್ಲಿಂದ ಸಂಘರ್ಷ ತಾರಕಕ್ಕೇರಿತು.

  • ಅದಾನಿ ಬಂಧನಕ್ಕೆ ಅಮೆರಿಕದಿಂದ ಯಾವುದೇ ವಿನಂತಿ ಸ್ವೀಕರಿಸಿಲ್ಲ: ಕೇಂದ್ರ

    ಅದಾನಿ ಬಂಧನಕ್ಕೆ ಅಮೆರಿಕದಿಂದ ಯಾವುದೇ ವಿನಂತಿ ಸ್ವೀಕರಿಸಿಲ್ಲ: ಕೇಂದ್ರ

    ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ (Gautam Adani) ಮತ್ತು ಅವರ ಕಾರ್ಯನಿರ್ವಾಹಕರ ವಿರುದ್ಧ ಸಮನ್ಸ್ ನೀಡಲು ಅಥವಾ ಬಂಧನ ವಾರಂಟ್ ನೀಡಲು ಅಮೆರಿಕದಿಂದ (USA) ಭಾರತ ಯಾವುದೇ ವಿನಂತಿಯನ್ನು ಸ್ವೀಕರಿಸಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಶುಕ್ರವಾರ ತಿಳಿಸಿದೆ.

    ವಾರದ ಸುದ್ದಿಗೋಷ್ಠಿಯಲ್ಲಿ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal)  ಪ್ರತಿಕ್ರಿಯಿಸಿ  ಇದು ಖಾಸಗಿ ಸಂಸ್ಥೆ, ವ್ಯಕ್ತಿ ಮತ್ತು ಅಮೆರಿಕ ನ್ಯಾಯಾಂಗ ಇಲಾಖೆಯನ್ನು ಒಳಗೊಂಡಿರುವ ಕಾನೂನು ವಿಷಯ ಎಂದು ತಿಳಿಸಿದರು. ಇದನ್ನೂ ಓದಿ: ಗುತ್ತಿಗೆ ಪಡೆಯಲು ಭಾರತದಲ್ಲಿ 2,200 ಕೋಟಿ ಲಂಚ – ಅದಾನಿ ವಿರುದ್ಧ ಅಮೆರಿಕ ಕೋರ್ಟ್‌ ಅರೆಸ್ಟ್‌ ವಾರೆಂಟ್‌


    ಸಮನ್ಸ್ ಅಥವಾ ಬಂಧನ ವಾರಂಟ್ ಸೇವೆಗಾಗಿ ವಿದೇಶಿ ಸರ್ಕಾರದ ಯಾವುದೇ ವಿನಂತಿಯು ಪರಸ್ಪರ ಕಾನೂನು ನೆರವಿನ ಭಾಗವಾಗಿದೆ ಮತ್ತು ಅಂತಹ ವಿನಂತಿಗಳನ್ನು ಸ್ವೀಕರಿಸಿದಾಗ ಅರ್ಹತೆಗಳ ಮೇಲೆ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: 2007ರ ಘಟನೆ ಉಲ್ಲೇಖಿಸಿ ಎಂಜೆಲಾ ಮರ್ಕೆಲ್ ಬಳಿ ಈಗ ಕ್ಷಮೆ ಕೇಳಿದ ಪುಟಿನ್‌

    ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಇತರ ಅಧಿಕಾರಿಗಳ ವಿರುದ್ಧ ಲಂಚದ ಆರೋಪಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಇಲಾಖೆ ನೀಡಿದ ಮೊದಲ ಪ್ರತಿಕ್ರಿಯೆ ಇದಾಗಿದೆ.

  • ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್‌-ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆ

    ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್‌-ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆ

    ಟೆಲ್‌ ಅವಿವ್‌: 2023ರ ಅಕ್ಟೋಬರ್‌ನಿಂದ ನಡೆಯುತ್ತಿರುವ ಇಸ್ರೇಲ್‌-ಲೆಬನಾನ್‌ ಯುದ್ಧದ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ 10-1 ಮತಗಳಿಂದ ಯುಎಸ್ ಮತ್ತು ಫ್ರಾನ್ಸ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ (Israel-Hezbollah ceasefire) ಒಪ್ಪಂದವನ್ನು ಅನುಮೋದಿಸಿದೆ. ಭಾರತೀಯ ಕಾಲಮಾದ ಪ್ರಕಾರ ಇಂದು ಬೆಳಗ್ಗೆ 7:30 ರಿಂದ ಕದನ ವಿರಾಮ ಜಾರಿಗೆ ಬರಲಿದೆ.

    ಕದನ ವಿರಾಮ ಒಪ್ಪಂದದ ನಂತರ, ಅಮೆರಿಕ ಅಧ್ಯಕ್ಷ ಜೋ ಬೈಡನ್‌ (Joe Biden), ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಮತ್ತು ಲೆಬನಾನ್‌ನ ಪ್ರಧಾನಿ ನಜೀಬ್ ಮಿಕಾಟಿ ಶಾಂತಿ ಸುವ್ಯವಸ್ಥೆ ಸ್ಥಾಪಿಸುವ ಕುರಿತು ಮಾತುಕತೆ ಆಡಿದ್ದಾರೆ.

    ಇದು 13 ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ದಾರಿ ಮಾಡಿಕೊಟ್ಟಿದೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಮಂಗಳವಾರ ಪ್ರಕಟಿಸಿದೆ. ಆದ್ರೆ ಗಾಝಾದಲ್ಲಿ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದೆ.

    ಇಸ್ರೇಲ್‌ನ (Israel) ಅನುಮೋದನೆಯ ನಂತರ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅವರ US ಅಧ್ಯಕ್ಷ ಜೋ ಬಿಡೆನ್ ಜಂಟಿ ಹೇಳಿಕೆಯನ್ನು ನೀಡಿದರು. ಈ ಸಂಘರ್ಷವು ಹಿಂಸಾಚಾರದ ಮತ್ತೊಂದು ಚಕ್ರವಾಗೋದನ್ನ ತಡೆಯಲು ನಿರ್ಧರಿಸಿದ್ದೇವೆ. ಲೆಬನಾನ್‌ನ ಸಶಸ್ತ್ರ ಪಡೆಗಳನ್ನು ನವೀಕರಿಸಲು ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುವ ಪ್ರಯತ್ನಕ್ಕಾಗಿ ಉಭಯ ರಾಷ್ಟ್ರಗಳು ಬದ್ಧವಾಗಿರಬೇಕು ಎಂದು ಹೇಳಿದ್ದಾರೆ.

    ಜೋ ಬೈಡನ್‌ ಮಾತನಾಡಿ, 60 ದಿನಗಳ ಕದನ ವಿರಾಮ ಅವಧಿಯಲ್ಲಿ ಇಸ್ರೇಲ್ ಕ್ರಮೇಣ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುತ್ತದೆ. ಇದೇ ವೇಳೆ ಲೆಬನಾನ್‌ ಇಸ್ರೇಲ್‌ ಗಡಿಯಲ್ಲಿರುವ ತನ್ನ ಸೇನೆಯನ್ನು ನಿಯಂತ್ರಿಸುತ್ತದೆ ಎಂದು ಭಾವಿಸುತ್ತೇವೆ. ಕದನ ವಿರಾಮ ಒಪ್ಪಂದದ ಪ್ರಕಾರ ಇಸ್ರೇಲಿ ಪಡೆಗಳು ದಕ್ಷಿಣ ಲೆಬನಾನ್‌ನಿಂದ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಬೇಕು. ಆ ಪ್ರದೇಶದಲ್ಲಿ ಲೆಬನಾನ್‌ ತನ್ನ ಸೇನೆಯನ್ನು ನಿಯೋಜಿಸಬೇಕು. ಹಿಜ್ಬುಲ್ಲಾ ಮತ್ತು ಇತರ ಯಾವುದೇ ಭಯೋತ್ಪಾದಕ ಸಂಘಟನೆಗಳು ಇಸ್ರೇಲ್‌ನ ಭದ್ರತೆಗೆ ಬೆದರಿಕೆ ಹಾಕಲು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.

    ಲೆಬನಾನಿನ ವಿದೇಶಾಂಗ ಸಚಿವ ಅಬ್ದುಲ್ಲಾ ಬೌ ಹಬೀಬ್ ಮಾತನಾಡಿ, ಇಸ್ರೇಲಿ ಪಡೆಗಳು ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುತ್ತಿದ್ದಂತೆ, ದಕ್ಷಿಣ ಲೆಬನಾನ್‌ನಲ್ಲಿ ಕನಿಷ್ಠ 5,000 ಸೈನಿಕರನ್ನು ನಿಯೋಜಿಸಲು ತಮ್ಮ ಸೈನ್ಯವು ಸಿದ್ಧವಾಗಿದೆ. ಜೊತೆಗೆ ಇಸ್ರೇಲ್‌ ದಾಳಿಗಳಿಂದ ನಾಶವಾದ ಮೂಲಸೌಕರ್ಯಗಳನ್ನು ಮರುನಿರ್ಮಾಣ ಮಾಡುವಲ್ಲಿ ಅಮೆರಿಕ ಪಾತ್ರ ವಹಿಸುತ್ತದೆ ಎಂದಿದ್ದಾರೆ.

    ಕಳೆದ ವರ್ಷ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ರಾಕೆಟ್‌ ದಾಳಿ ನಡೆಸಿದ ನಂತರ ಯುದ್ಧ ಶುರುವಾಗಿತ್ತು. ಈವರೆಗೆ ಯುದ್ಧದಲ್ಲಿ ಲೆಬನಾನ್‌ನಲ್ಲಿ ಸುಮಾರು 3,800 ಜನರು ಹತ್ಯೆಗೀಡಾಗಿದ್ದಾರೆ, ಸುಮಾರು 16,000 ಮಂದಿ ಗಾಯಗೊಂಡಿದ್ದಾರೆ. ಒಟ್ಟಾರೆ ಎರಡೂ ರಾಷ್ಟ್ರಗಳಿಂದ 43 ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

  • ಅಧಿಕಾರಕ್ಕೆ ಏರುವ ಮುನ್ನವೇ ಚೀನಾ, ಕೆನಡಾಗೆ ಟ್ರಂಪ್ ಶಾಕ್

    ಅಧಿಕಾರಕ್ಕೆ ಏರುವ ಮುನ್ನವೇ ಚೀನಾ, ಕೆನಡಾಗೆ ಟ್ರಂಪ್ ಶಾಕ್

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಡೊನಾಲ್ಡ್‌ ಟ್ರಂಪ್ (Donald Trump) ಚೀನಾ, ಮೆಕ್ಸಿಕೋ ಮತ್ತು ಕೆನಡಾಗೆ ಶಾಕ್ ನೀಡಿದ್ದಾರೆ.

    ಜ.20 ರಂದು ತಾನು ಅಧಿಕಾರ ಸ್ವೀಕರಿಸಿದ ಕೂಡಲೇ ಮೆಕ್ಸಿಕೋ, ಕೆನಡಾದಿಂದ ಆಮದಾಗುವ ಉತ್ಪನ್ನಗಳ ಮೇಲೆ 25% ರಷ್ಟು ತೆರಿಗೆ ವಿಧಿಸುವ ಕಡತಕ್ಕೆ ಸಹಿ ಹಾಕುವುದಾಗಿ ಟ್ರಂಪ್ ಪ್ರಕಟಿಸಿದ್ದಾರೆ.

    ಕಾನೂನುಬಾಹಿರವಾದ ಮಾದಕವಸ್ತು ಸರಬರಾಜು, ವಲಸೆಗಳಿಗೆ ವಿರುದ್ಧವಾಗಿ ತಾನು ಈ ನಿರ್ಧಾರ ತೆಗೆದುಕೊಳ್ಳೋದಾಗಿ ಟ್ರಂಪ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಚೀನಾ (China) ಉತ್ಪನ್ನಗಳ ಮೇಲೆ ಹೆಚ್ಚುವರಿ 10% ಸುಂಕ ವಿಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಪಾಕ್‌ ಹಿಂಸಾಚಾರಕ್ಕೆ ನಾಲ್ವರು ಸೈನಿಕರು ಸೇರಿ 5 ಸಾವು – ಸೇನೆಯಿಂದ ಕಂಡಲ್ಲಿ ಗುಂಡು ಆದೇಶ

    ಅಮೆರಿಕ (USA) ವಿಶ್ವದ ದೊಡ್ಡ ಆಮುದುದಾರ ದೇಶವಾಗಿದೆ. ಅಮರಿಕಕ್ಕೆ ಆಮದಾಗುವ ವಸ್ತುಗಳ ಪೈಕಿ ಕೆನಡಾ, ಚೀನಾ, ಮೆಕ್ಸಿಕೋದ ಪಾಲು 40% ಇದೆ.

    ಟ್ರಂಪ್ ಘೋಷಣೆ ಮಾಡಿದ ನಂತರ, ಅವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಅವರೊಂದಿಗೆ ಸುಮಾರು 10 ನಿಮಿಷಗಳ ಕಾಲ ವ್ಯಾಪಾರ ಮತ್ತು ಗಡಿ ಭದ್ರತೆಯ ಬಗ್ಗೆ ಚರ್ಚಿಸಿದ್ದಾರೆ. ಅಮೆರಿಕ-ಮೆಕ್ಸಿಕೋ ಗಡಿಗೆ ಹೋಲಿಸಿದರೆ ಕೆನಡಾದ ಗಡಿಯನ್ನು ದಾಟುವ ವಲಸಿಗರ ಸಂಖ್ಯೆ ಬಹಳ ಸಣ್ಣದು ಎಂದು ಟ್ರುಡೋ ಹೇಳಿರುವುದಾಗಿ ವರದಿಯಾಗಿದೆ.

     

  • ಗೌತಮ್ ಅದಾನಿ ಬಂಧನಕ್ಕೆ ರಾಹುಲ್ ಗಾಂಧಿ ಒತ್ತಾಯ

    ಗೌತಮ್ ಅದಾನಿ ಬಂಧನಕ್ಕೆ ರಾಹುಲ್ ಗಾಂಧಿ ಒತ್ತಾಯ

    – ಮೋದಿ ಅದಾನಿಯನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪ

    ನವದೆಹಲಿ: ಗುತ್ತಿಗೆ ಪಡೆಯಲು ಭಾರತದಲ್ಲಿ ಅದಾನಿ 2,200 ಕೋಟಿ ರೂ. ಲಂಚ ಪಡೆದಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಗೌತಮ್ ಅದಾನಿಯನ್ನು ತಕ್ಷಣವೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಒತ್ತಾಯಿಸಿದ್ದಾರೆ.

    ಗೌತಮ್ ಅದಾನಿ (Gautham Adani) ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಇತರ ಏಳು ಅಧಿಕಾರಿಗಳು ಸೌರವಿದ್ಯುತ್ ಗುತ್ತಿಗೆ ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್‌ಗೂ (ಅಂದಾಜು 2238 ಕೋಟಿ ರೂ.) ಹೆಚ್ಚು ಲಂಚದ ಭರವಸೆ ನೀಡಿದ್ದರು ಎಂದು ಆರೋಪಿಸಿದೆ. ನ್ಯೂಯಾರ್ಕ್ ಕೋರ್ಟ್ ಗೌತಮ್ ಅದಾನಿ ಮತ್ತು ಸಾಗರ್ ಅದಾನಿಗೆ ಬಂಧನ ವಾರೆಂಟ್ ಹೊರಡಿಸಿದೆ. ಆ ವಾರೆಂಟ್‌ಗಳನ್ನು ವಿದೇಶಿ ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲು ಪ್ರಾಸಿಕ್ಯೂಟರ್‌ಗಳು ಯೋಜಿಸಿದ್ದಾರೆ ಎಂದು ವರದಿಯಾಗಿದೆ.ಇದನ್ನೂ ಓದಿ:

    ಸದ್ಯ ಅದಾನಿ ವಿರುದ್ಧದ ಅರೆಸ್ಟ್ ವಾರಂಟ್ ಕಾಂಗ್ರೆಸ್-ಬಿಜೆಪಿ (BJP) ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ, ಗೌತಮ್ ಅದಾನಿಯನ್ನು ತಕ್ಷಣವೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಆರೋಪ ಬಂದ ತಕ್ಷಣವೇ ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿಯನ್ನೇ ಬಂಧಿಸಲಾಗಿತ್ತು. ಆದರೆ, ಪ್ರಧಾನಿ ಮೋದಿಯಿಂದಾಗಿ ಅದಾನಿಗೆ ರಕ್ಷಣೆ ದೊರೆಯುತ್ತಿದೆ ಎಂದು ಆರೋಪಿಸಿದ್ದಾರೆ.

    ಪ್ರಕರಣ ಸಂಬಂಧ ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್‌ರನ್ನೂ ತನಿಖೆಗೆ ಒಳಪಡಿಸಬೇಕು. ಅಲ್ಲದೆ, ಈ ಕುರಿತು ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ. ಜಂಟಿ ಸದನ ಸಮಿತಿ ತನಿಖೆಗೆ ಒತ್ತಾಯಿಸುತ್ತೇವೆ ಎಂದು ಆಗ್ರಹಿಸಿದ್ದಾರೆ. ಇನ್ನೂ ರಾಹುಲ್ ಟೀಕೆಗೆ ಬಿಜೆಪಿ ತಿರುಗೇಟು ಕೊಟ್ಟಿದೆ. ದೇಶವನ್ನು ನಿಂದಿಸಲು ರಾಹುಲ್ ಗಾಂಧಿ ಈ ತಂತ್ರ ಬಳಸುತ್ತಿದ್ದಾರೆ ಎಂದು ಕಿಡಿಕಾರಿದೆ.

    ಆರೋಪ ಏನು?
    ಅಧಿಕಾರಿಗಳಿಗೆ ಲಂಚ ನೀಡಿ ಹೂಡಿಕೆದಾರರನ್ನು ವಂಚಿಸಿದ್ದಾರೆ. ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಹೇಳಿಕೆಗಳ ಮೂಲಕ ಯುಎಸ್ ಹೂಡಿಕೆದಾರರು ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳಿಂದ ಹಣವನ್ನು ಪಡೆದುಕೊಳ್ಳಲು ಬಹು ಶತಕೋಟಿ ಡಾಲರ್ ಯೋಜನೆಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

    ಅದಾನಿ ಗ್ರೀನ್ ಎನರ್ಜಿ ಮತ್ತು ಅಜುರೆ ಪವರ್ ಸಂಸ್ಥೆಗಳು ಭಾರತದಲ್ಲಿ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರದಲ್ಲಿ ಸೌರಶಕ್ತಿ ಗುತ್ತಿಗೆಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್?ಗೂ ಅಧಿಕ ಮೊತ್ತದಷ್ಟು ಲಂಚ ನೀಡಿದೆ. ಮುಂದಿನ ಎರಡು ದಶಕಗಳಲ್ಲಿ 2 ಶತಕೋಟಿ ಲಾಭವನ್ನು ಗಳಿಸಲು ಲಂಚ ನೀಡಲಾಗಿದೆ.

    ಅದಾನಿ ಗ್ರೀನ್ ಎನರ್ಜಿಗಾಗಿ 3 ಶತಕೋಟಿ ಡಾಲರ್ ಸಾಲ ಮತ್ತು ಬಾಂಡ್‌ಗಳನ್ನು ಪಡೆಯಲು ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಕಾರ್ಯನಿರ್ವಾಹಕ ವಿನೀತ್ ಜೈನ್ ಹೂಡಿಕೆದಾರರರಿಗೆ ಹಲವಾರು ವಿಷಯಗಳನ್ನು ಮರೆಮಾಡಿ ವಂಚಿಸಿದ್ದಾರೆ.

    ಸೌರಶಕ್ತಿ ಯೋಜನೆಗಾಗಿ 2021ರ ಜುಲೈ ಮತ್ತು 2022ರ ಫೆಬ್ರವರಿ ಸಮಯದಲ್ಲಿ ಆಂಧ್ರಪ್ರದೇಶದಲ್ಲಿ ಅಧಿಕಾರಿಗಳಿಗೆ 1,750 ಕೋಟಿ ರೂ. (228 ಮಿಲಿಯನ್ ಡಾಲರ್) ನೀಡಿದೆ. ಛತ್ತೀಸ್‌ಗಢ, ಒಡಿಶಾ, ತಮಿಳುನಾಡು ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜ್ಯ ವಿದ್ಯುತ್ ಕಂಪನಿಗಳಿಗೆ ಲಂಚವನ್ನು ನೀಡಿದೆ ಎಂದು ಆರೋಪಿಸಿದೆ. ಈ ಆರೋಪಗಳು ವಿದೇಶಿ ಭ್ರಷ್ಟಚಾರ ಕಾಯ್ದೆಯ ಅಡಿಯಲ್ಲಿ ಬರುತ್ತದೆ ಎಂದು ಹೇಳಿದೆ.ಇದನ್ನೂ ಓದಿ:

  • ಗುತ್ತಿಗೆ ಪಡೆಯಲು ಭಾರತದಲ್ಲಿ 2,200 ಕೋಟಿ ಲಂಚ – ಅದಾನಿ ವಿರುದ್ಧ ಅಮೆರಿಕ ಕೋರ್ಟ್‌ ಅರೆಸ್ಟ್‌ ವಾರೆಂಟ್‌

    ಗುತ್ತಿಗೆ ಪಡೆಯಲು ಭಾರತದಲ್ಲಿ 2,200 ಕೋಟಿ ಲಂಚ – ಅದಾನಿ ವಿರುದ್ಧ ಅಮೆರಿಕ ಕೋರ್ಟ್‌ ಅರೆಸ್ಟ್‌ ವಾರೆಂಟ್‌

    – 5 ರಾಜ್ಯಗಳಲ್ಲಿ ಗುತ್ತಿಗೆಗಾಗಿ ಅಧಿಕಾರಿಗಳಿಗೆ ಲಂಚ
    – ಅಮೆರಿಕದಲ್ಲಿ ಹೂಡಿಕೆ ಸಂಗ್ರಹದಿಂದ ಹಿಂದೆ ಸರದಿ ಅದಾನಿ ಗ್ರೀನ್‌

    ವಾಷಿಂಗ್ಟನ್‌: ಕಳೆದ ವರ್ಷ ಭಾರತದಲ್ಲಿ 20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಎಂಟರ್‌ಪ್ರೈಸಸ್‌ ಚಾಲನೆ ನೀಡುವ ಸಂದರ್ಭದಲ್ಲಿ ಹಿಂಡೆನ್‌ಬರ್ಗ್‌ ಸಂಶೋಧನಾ (Hindenburg Research) ವರದಿ ಪ್ರಕಟಗೊಂಡು ಶಾಕ್‌ ನೀಡಿತ್ತು. ಈಗ ಅಮೆರಿಕದಲ್ಲಿ ಅದಾನಿ ಗ್ರೀನ್‌ ಎನರ್ಜಿಗಾಗಿ (Adani Green Energy) 6,000 ಮಿಲಿಯನ್‌ ಅಮೆರಿಕನ್‌ ಡಾಲರ್‌ ಬಾಂಡ್‌ ಬಿಡುಗಡೆ ಮಾಡಿ ಹೂಡಿಕೆ ಸಂಗ್ರಹಿಸಲು ಮುಂದಾಗಿದ್ದ ಗೌತಮ್‌ ಅದಾನಿ ಅವರಿಗೆ ಅಮೆರಿಕ ನ್ಯಾಯಾಂಗ ಇಲಾಖೆ ಶಾಕ್‌ ನೀಡಿದೆ.

    ಗೌತಮ್‌ ಅದಾನಿ (Gautam Adani) ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಇತರ ಏಳು ಅಧಿಕಾರಿಗಳು ಸೌರ ಶಕ್ತಿಯ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್‌ಗೂ (ಅಂದಾಜು 2238 ಕೋಟಿ ರೂ.) ಹೆಚ್ಚು ಲಂಚದ (Bribe) ಭರವಸೆ ನೀಡಿದ್ದಾರೆ ಎಂದು ಆರೋಪಿಸಿದೆ.

    ನ್ಯೂಯಾರ್ಕ್‌ ಕೋರ್ಟ್‌ ಗೌತಮ್ ಅದಾನಿ ಮತ್ತು ಸಾಗರ್ ಅದಾನಿಗೆ ಬಂಧನ ವಾರೆಂಟ್‌ ಹೊರಡಿಸಿದೆ. ಆ ವಾರೆಟ್‌ಗಳನ್ನು ವಿದೇಶಿ ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲು ಪ್ರಾಸಿಕ್ಯೂಟರ್‌ಗಳು ಯೋಜಿಸಿದ್ದಾರೆ ಎಂದು ವರದಿಯಾಗಿದೆ.

    ಗೌತಮ್ ಅದಾನಿ, ಸೈರಿಲ್ ಕೆಬನೆಸ್,  ಸಾಗರ್ ಅದಾನಿ, ವಿನೀತ್ ಜೈನ್, ರಂಜಿತ್ ಗುಪ್ತ, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ, ರೂಪೇಶ್ ಅಗರ್ವಾಲ್ ಅವರ ವಿರುದ್ಧ  ವಂಚನೆ ಪಿತೂರಿ  ಆರೋಪ ಮಾಡಲಾಗಿದೆ. ಇದನ್ನೂ ಓದಿ: PUBLiC TV Impact| ಸರ್ಕಾರಕ್ಕೆ ರೇಷನ್ ಕಾರ್ಡ್ ಪರಿಷ್ಕರಣೆ ವರದಿ ಸಲ್ಲಿಕೆ: ರದ್ದಿಗೆ ಮಾನದಂಡ ಏನು?

    ಮಹತ್ವದ ಬೆಳವಣಿಗೆಯ ಬೆನ್ನಲ್ಲೇ 6,000 ಮಿಲಿಯನ್‌ ಅಮೆರಿಕನ್‌ ಡಾಲರ್‌ ಬಾಂಡ್‌ ಬಿಡುಗಡೆ ಮಾಡಿ ಹೂಡಿಕೆ ಆಕರ್ಷಿಸಲು ಮುಂದಾಗಿದ್ದ ಅದಾನಿ ಗ್ರೀನ್ ಎನರ್ಜಿ ಕಂಪನಿಯು ತನ್ನ ನಿರ್ಧಾರದಿಂದ ಹಿಂದೆ ಸರಿಯುದಾಗಿ ತಿಳಿಸಿದೆ.

    ಆರೋಪ ಏನು?
    ಅಧಿಕಾರಿಗಳಿಗೆ ಲಂಚ ನೀಡಿ ಹೂಡಿಕೆದಾರರನ್ನು ವಂಚಿಸಿದ್ದಾರೆ. ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಹೇಳಿಕೆಗಳ ಮೂಲಕ ಯುಎಸ್ ಹೂಡಿಕೆದಾರರು ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳಿಂದ ಹಣವನ್ನು ಪಡೆದುಕೊಳ್ಳಲು ಬಹು ಶತಕೋಟಿ ಡಾಲರ್ ಯೋಜನೆಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

    ಅದಾನಿ ಗ್ರೀನ್ ಎನರ್ಜಿ ಮತ್ತು ಅಜುರೆ ಪವರ್ ಸಂಸ್ಥೆಗಳು ಭಾರತದಲ್ಲಿ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರದಲ್ಲಿ ಸೌರಶಕ್ತಿ ಗುತ್ತಿಗೆಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್​ಗೂ ಅಧಿಕ ಮೊತ್ತದಷ್ಟು ಲಂಚ ನೀಡಿದೆ. ಮುಂದಿನ ಎರಡು ದಶಕಗಳಲ್ಲಿ 2 ಶತಕೋಟಿ ಲಾಭವನ್ನು ಗಳಿಸಲು ಲಂಚ ನೀಡಲಾಗಿದೆ.

    ಅದಾನಿ ಗ್ರೀನ್ ಎನರ್ಜಿಗಾಗಿ 3 ಶತಕೋಟಿ ಡಾಲರ್‌ ಸಾಲ ಮತ್ತು ಬಾಂಡ್‌ಗಳನ್ನು ಪಡೆಯಲು ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಕಾರ್ಯನಿರ್ವಾಹಕ ವಿನೀತ್ ಜೈನ್ ಹೂಡಿಕೆದಾರರರಿಗೆ ಹಲವಾರು ವಿಷಯಗಳನ್ನು ಮರೆಮಾಡಿ ವಂಚಿಸಿದ್ದಾರೆ.

    ಸೌರಶಕ್ತಿ ಯೋಜನೆಗಾಗಿ 2021ರ ಜುಲೈ ಮತ್ತು 2022ರ ಫೆಬ್ರವರಿ ಸಮಯದಲ್ಲಿ ಆಂಧ್ರಪ್ರದೇಶದಲ್ಲಿ ಅಧಿಕಾರಿಗಳಿಗೆ 1,750 ಕೋಟಿ ರೂ. (228 ಮಿಲಿಯನ್ ಡಾಲರ್‌) ನೀಡಿದೆ. ಛತ್ತೀಸ್‌ಗಢ, ಒಡಿಶಾ, ತಮಿಳುನಾಡು ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜ್ಯ ವಿದ್ಯುತ್ ಕಂಪನಿಗಳಿಗೆ ಲಂಚವನ್ನು ನೀಡಿದೆ ಎಂದು ಆರೋಪಿಸಿದೆ. ಈ ಆರೋಪಗಳು ವಿದೇಶಿ ಭ್ರಷ್ಟಚಾರ ಕಾಯ್ದೆಯ ಅಡಿಯಲ್ಲಿ ಬರುತ್ತದೆ ಎಂದು ಹೇಳಿದೆ.

    ಆರೋಪ ಪಟ್ಟಿಯಲ್ಲಿರುವ ಆರೋಪಗಳು ಸಾಬೀತಾಗುವವರೆಗೂ ಅವರನ್ನು ನಿರ್ದೋಷಿಗಳೆಂದು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿರುವುದಾಗಿ ಅಮೆರಿಕದ ಅಟಾರ್ನಿ ಕಚೇರಿ ತಿಳಿಸಿದೆ.

    ಅದಾನಿಯಿಂದ ಎಫ್‌ಪಿಒ ರದ್ದು:
    20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಕಂಪನಿ 2023ರ ಜನವರಿಯಲ್ಲಿ ಚಾಲನೆ ನೀಡಿತ್ತು. ಪ್ರತಿ ಷೇರಿಗೆ 3,112ರಿಂದ 3,276 ರೂ. ಆಫರ್‌ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಿಂಡೆನ್‌ಬರ್ಗ್‌ ಅದಾನಿ ಕಂಪನಿ ವಿರುದ್ಧ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು. ವರದಿ ಬಳಿಕ ಅದಾನಿ ಕಂಪನಿಯ ಷೇರಿನ ಮೌಲ್ಯ ಕುಸಿತ ಕಂಡಿದ್ದರೂ ಎಫ್‌ಪಿಒ ಬಿಡ್‌ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿತ್ತು.

    ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ನಂತರ 20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಎಫ್‌ಪಿಒ ಪ್ರಕ್ರಿಯೆಯನ್ನೇ ಅದಾನಿ ಸಮೂಹ ರದ್ದು ಮಾಡಿತ್ತು. ನಮ್ಮ ಷೇರು (Share) ಮೌಲ್ಯ ಕುಸಿದಿದೆ. ಈ ಸಂದರ್ಭದಲ್ಲಿ ಎಫ್‌ಪಿಒನೊಂದಿಗೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಹೇಳಿ ಹೂಡಿಕೆದಾರರ ಹಣವನ್ನು ಮರಳಿಸಲಾಗುವುದು ಎಂದು ಗೌತಮ್‌ ಅದಾನಿ ತಿಳಿಸಿದ್ದರು.

     

  • 1,000 ದಿನ ಪೂರೈಸಿದ ರಷ್ಯಾ-ಉಕ್ರೇನ್‌ ಯುದ್ಧ; ಪರಮಾಣು ಶಸ್ತ್ರಾಸ್ತ್ರ ಬಳಕೆ ಎಚ್ಚರಿಕೆ ನೀಡಿದ ಪುಟಿನ್‌

    1,000 ದಿನ ಪೂರೈಸಿದ ರಷ್ಯಾ-ಉಕ್ರೇನ್‌ ಯುದ್ಧ; ಪರಮಾಣು ಶಸ್ತ್ರಾಸ್ತ್ರ ಬಳಕೆ ಎಚ್ಚರಿಕೆ ನೀಡಿದ ಪುಟಿನ್‌

    ಮಾಸ್ಕೋ: 2ನೇ ವಿಶ್ವ ಮಹಾಯುದ್ಧದ ನಂತರ ಅತಿಹೆಚ್ಚು ಸಾವು-ನೋವು ಕಂಡ ರಷ್ಯಾ-ಉಕ್ರೇನ್‌ ಯುದ್ಧ (Russia Ukraine War) ಬರೋಬ್ಬರಿ 1,000 ದಿನಗಳನ್ನು ಪೂರೈಸಿದೆ. ಈ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಹೊಸ ಪರಮಾಣು ನೀತಿಯನ್ನು ಅನುಮೋದಿಸಿದ್ದಾರೆ. ಈ ಮೂಲಕ ಉಕ್ರೇನ್‌ ಮೇಲೆ ಪರಮಾಣು ಶಸ್ತ್ರಾಸ್ತ್ರ ಬಳಕೆಯ ಎಚ್ಚರಿಕೆ ನೀಡಿದ್ದಾರೆ.

    2022ರ ಫ್ರೆಬ್ರವರಿ 24ರಂದು ಶುರುವಾದ ಯುದ್ಧ 1,000 ದಿನಗಳನ್ನು ಪೂರೈಸುತ್ತಿದ್ದಂತೆ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ಪುಟಿನ್‌ ಒಪ್ಪಿಗೆ ನೀಡಿದ್ದಾರೆ. ಮಂಗಳವಾರ ಪರಿಷ್ಕೃತ ಪರಮಾಣು ಸಿದ್ಧಾಂತಕ್ಕೆ (Nuclear Deterrent Policy) ಸಹಿ ಹಾಕಿದ್ದು, ಪರಮಾಣು ಶಕ್ತಿ ಬೆಂಬಲಿತವಾಗಿರುವ ಯಾವುದೇ ರಾಷ್ಟ್ರವು ರಷ್ಯಾದ ಮೇಲೆ ನಡೆಸುವ ಸಾಂಪ್ರದಾಯಿಕ ದಾಳಿಯನ್ನು ಜಂಟಿ ದಾಳಿ ಎಂದು ಪರಿಗಣಿಸುವುದಾಗಿ ಘೋಷಿಸಿದ್ದಾರೆ.

    ರಷ್ಯಾದ ಮೇಲೆ ದೀರ್ಘ ಶ್ರೇಣಿಯ ಕ್ಷಿಪಣಿಗಳನ್ನು ಬಳಸಲು ಅಮೆರಿಕ ಉಕ್ರೇನ್‌ಗೆ ಒಪ್ಪಿಗೆ ನೀಡಿದ ಒಂದು ದಿನದ ನಂತರ ಪುಟಿನ್‌ ಈ ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿ: PublicTV Explainer: ಆಗಸದಲ್ಲೂ ಹಾರುತ್ತೆ, ನೀರಲ್ಲೂ ಲ್ಯಾಂಡ್‌ ಆಗುತ್ತೆ; ಏನಿದು ಸೀ ಪ್ಲೇನ್? – ಕರ್ನಾಟಕಕ್ಕೂ ಜಲ ವಿಮಾನ ಬರುತ್ತಾ?

    ಅನಿವಾರ್ಯತೆ ಬಂದ್ರೆ ಯೋಚಿಸಲ್ಲ:
    ಇದೇ ವೇಳೆ ಕ್ರೆಮ್ಲಿನ್‌ (Kremlin) ಉಕ್ರೇನ್‌ ಅನ್ನು ಸೋಲಿಸಲು ಪ್ರತಿಜ್ಞೆ ಮಾಡಿದೆ. ಕೈವ್‌ಗೆ ಪಾಶ್ಚಿಮಾತ್ಯ ದೇಶಗಳ ಬೆಂಬಲದಿಂದ ಸಂಘರ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ದಾಳಿ ಮುಂದುವರಿಯುತ್ತದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಎಚ್ಚರಿಸಿದ್ದಾರೆ.

    ಅಲ್ಲದೇ ರಷ್ಯಾ ಯಾವಾಗಲೂ ಪರಮಾಣು ಶಸ್ತ್ರಾಸ್ತ್ರಗಳನ್ನು ಕೊನೆಯ ಅಸ್ತ್ರವಾಗಿ ಬಳಕೆ ಮಾಡಲು ನಿರ್ಧರಿಸಿದೆ. ಅನಿವಾರ್ಯ ಅನ್ನಿಸಿದ್ರೆ ಬಳಸಲು ಹಿಂದೆ ಮುಂದೆ ಯೋಚಿಸಲ್ಲ ಎಂದು ಪೆಸ್ಕೋವ್‌ ಹೇಳಿದ್ದಾರೆ. ಇದನ್ನೂ ಓದಿ: ICC Champions Trophy 2025 | ಈ ವಾರವೇ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ

    ಅಮೆರಿಕ ಉಕ್ರೇನ್‌ಗೆ ಹೇಳಿದ್ದೇನು?
    ರಷ್ಯಾ-ಉಕ್ರೇನ್‌ (Russia- Ukraine) ಯುದ್ಧ ನಿಲ್ಲಿಸುತ್ತೇನೆಂದು ನಿಯೋಜಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದರ ಹೊರತಾಗಿಯೂ ಇನ್ನೆರಡು ತಿಂಗಳು ಅಧಿಕಾರದಲ್ಲಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ (Joe Biden) ರಷ್ಯಾ ವಿರುದ್ಧ ಯುದ್ಧ ಮಾಡುವಂತೆ ಉಕ್ರೇನ್‌ಗೆ ಅನುಮತಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿದ್ದವು. ಇದನ್ನೂ ಓದಿ: ಜನಸಂಖ್ಯೆ ಹೆಚ್ಚಳಕ್ಕೆ ರಷ್ಯಾದಲ್ಲಿ ʻಸೆಕ್ಸ್‌ ಸಚಿವಾಲಯʼ ಸ್ಥಾಪನೆಗೆ ಪ್ಲ್ಯಾನ್‌ – ಭಾರತದಲ್ಲಿ ಏನಾಗ್ತಿದೆ?

    ಮುಂಬರುವ ದಿನಗಳಲ್ಲಿ ಉಕ್ರೇನ್ ತನ್ನ ಮೊದಲ ದೀರ್ಘ-ಶ್ರೇಣಿಯ ಕ್ಷಿಪಣಿ ದಾಳಿ ನಡೆಸಲು ಯೋಜಿಸಿದೆ ಎಂದು ವರದಿಯಾಗಿದೆ. ಉತ್ತರ ಕೊರಿಯಾದ ಪಡೆಗಳನ್ನು ರಷ್ಯಾ ನಿಯೋಜಿಸಿದ ಬೆನ್ನಲ್ಲೇ ಈ ಮಹತ್ವದ ವಿದ್ಯಮಾನ ನಡೆದಿದೆ. 190 ಮೈಲುಗಳವರೆಗೆ (306 ಕಿಮೀ) ವ್ಯಾಪ್ತಿಯನ್ನು ಹೊಂದಿರುವ ಎಟಿಎಸಿಎಂಎಸ್ ರಾಕೆಟ್‌ಗಳನ್ನು ಬಳಸಿಕೊಂಡು ಮೊದಲ ದಾಳಿಯನ್ನು ಉಕ್ರೇನ್‌ ನಡೆಸುವ ಸಾಧ್ಯತೆಯಿದೆ. ಇದಕ್ಕೆ ಜೋ ಬೈಡನ್‌ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿತ್ತು.

    120 ಕ್ಷಿಪಣಿಗಳಿಂದ ದಾಳಿ:
    ಉಕ್ರೇನ್‌ನ ಇಂಧನ ಮೂಲಭೂತ ಸೌಕರ್ಯವನ್ನು ಗುರಿಯಾಗಿಸಿ ರಷ್ಯಾ ಸೇನೆ ಭಾನುವಾರ 120 ಕ್ಷಿಪಣಿಗಳನ್ನು ಹಾರಿಸಿದೆ. ಇದರಿಂದಾಗಿ ಇಬ್ಬರು ನಾಗರಿಕರು ಮೃತಪಟ್ಟದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ಇದನ್ನೂ ಓದಿ: 95 ವರ್ಷಗಳಿಂದ ಈ ದೇಶದಲ್ಲಿ ಒಂದೇ ಒಂದು ಮಗು ಜನಿಸಿಲ್ಲ – ಇದರ ಹಿಂದಿನ ನಿಗೂಢ ಕಾರಣವೇನು?

  • ಅಮೆರಿಕದ ಗುಪ್ತಚರ ವಿಭಾಗಕ್ಕೆ ತುಳಸಿ ಬಾಸ್‌- ಭಾರತ ಸಂಬಂಧ ಇಲ್ಲದೇ ಇದ್ದರೂ ಹಿಂದೂ ಹೆಸರು ಬಂದಿದ್ದು ಹೇಗೆ?

    ಅಮೆರಿಕದ ಗುಪ್ತಚರ ವಿಭಾಗಕ್ಕೆ ತುಳಸಿ ಬಾಸ್‌- ಭಾರತ ಸಂಬಂಧ ಇಲ್ಲದೇ ಇದ್ದರೂ ಹಿಂದೂ ಹೆಸರು ಬಂದಿದ್ದು ಹೇಗೆ?

    ವಾಷಿಂಗ್ಟನ್‌: ಅಮೆರಿಕದ ರಾಷ್ಟ್ರೀಯ ಗುಪ್ತಚರ (National Intelligence) ವಿಭಾಗದ ನಿರ್ದೇಶಕಿಯಾಗಿ ತುಳಸಿ ಗಬ್ಬಾರ್ಡ್ (Tulsi Gabbard) ಅವರನ್ನು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಯ್ಕೆ ಮಾಡಿದ್ದಾರೆ.

    ತುಳಸಿ ಗಬ್ಬಾರ್ಡ್ ಅಮೆರಿಕದ ಮೊದಲ ಹಿಂದೂ ಸಂಸದೆಯಾಗಿದ್ದು ಈ ಮೊದಲು ಡೆಮಾಕ್ರಟಿಕ್ ಪಕ್ಷದಲ್ಲಿದ್ದರು. 2022 ರಲ್ಲಿ ರಿಪಬ್ಲಿಕನ್‌ ಪಕ್ಷ ಸೇರಿದ ಇವರು ಡೊನಾಲ್ಡ್‌ ಟ್ರಂಪ್‌ ಅವರನ್ನು ಅಧ್ಯಕ್ಷ ಸ್ಪರ್ಧೆಗೆ ಅನುಮೋದಿಸಿದ್ದರು.

    ನ್ಯೂಯಾರ್ಕ್‌ನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಸೆಪ್ಟೆಂಬರ್ 11 , 2001 ರಂದು ದಾಳಿ ನಡೆದ ಬಳಿಕ ಅಮೆರಿಕದ ಗುಪ್ತಚರ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಲು ಮತ್ತು ವೈಫಲ್ಯಗಳನ್ನು ತಡೆಯಲು ಸಹಾಯ ಮಾಡಲು ರಾಷ್ಟ್ರೀಯ ಗುಪ್ತಚರ ವಿಭಾಗವನ್ನು 2004 ರಲ್ಲಿ ರಚಿಸಲಾಯಿತು. ವಿದೇಶಿ ಚುನಾವಣಾ ಹಸ್ತಕ್ಷೇಪ, ಸೈಬರ್ ಸಮಸ್ಯೆಗಳು, ಭಯೋತ್ಪಾದನೆ ಮತ್ತು ಬೇಹುಗಾರಿಕೆಯಂತಹ ಬೆದರಿಕೆಗಳ ಮೇಲೆ ಕೇಂದ್ರೀಕರಿಸಿ ಕೆಲಸ ಮಾಡುತ್ತದೆ.  ಇದನ್ನೂ ಓದಿ: ಅಮೆರಿಕದಲ್ಲಿ ತೆರಿಗೆ ಹಣ ವೆಚ್ಚಕ್ಕೆ ನಿಯಂತ್ರಣ: ಮಸ್ಕ್‌ಗೆ ಸಿಕ್ತು ಮಹತ್ವದ ಹುದ್ದೆ

    ಯಾರು ತುಳಸಿ ಗಬ್ಬಾರ್ಡ್‌?
    ಸುಮಾರು 20 ವರ್ಷದಗಳ ಸೈನ್ಯದ ಶಾಖೆಯಾದ ನ್ಯಾಷನಲ್ ಗಾರ್ಡ್‌ನಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ಭಾರತದ ಜೊತೆ ನೇರವಾದ ಸಂಬಂಧ ಇಲ್ಲ. ಆದರೆ ಇವರ ತಾಯಿ ಹಿಂದೂ (Hindu) ಧರ್ಮವನ್ನು ಪಾಲಿಸುತ್ತಿದ್ದ ಹಿನ್ನೆಲೆಯಲ್ಲಿ ಪುತ್ರಿಗೆ ತುಳಸಿ ಎಂದು ಹೆಸರನ್ನು ಇರಿಸಿದ್ದರು.

    ಬಾಲ್ಯದಲ್ಲಿ ಯೋಗ ಅಭ್ಯಾಸ ಮಾಡುತ್ತಿದ್ದ ಇವರು ಭಗವದ್ಗೀತೆಯಿಂದ ಆಧ್ಯಾತ್ಮಿಕ ವಿಷಯಗಳನ್ನು ಕಲಿತ್ತಿದ್ದಾರೆ. ವೈಷ್ಣವ ಹಿಂದೂ ಸಂಘಟನೆಯಾದ ಸೈನ್ಸ್ ಆಫ್ ಐಡೆಂಟಿಟಿ ಫೌಂಡೇಶನ್ ಮತ್ತು ಇಸ್ಕಾನ್‌ ಸಂಸ್ಥೆಯ ಪ್ರಭಾವದಿಂದಾಗಿ ತುಳಸಿ ಅವರು ಹಿಂದೂ ಜೀವನ ಪದ್ದತಿಯಂತೆ ಜೀವಿಸುತ್ತಿದ್ದಾರೆ.

    2015ರಲ್ಲಿ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿರುವ ಅಬ್ರಹಾಂ ವಿಲಿಯಮ್ಸ್ ಅವರನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಪತಿಯೂ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ. ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಭಗವತ್ ಗೀತೆಯ ಮೇಲೆ ಕೈಯಿಟ್ಟು ತುಳಸಿ ಪ್ರಮಾಣ ವಚನ ಸ್ವೀಕರಿಸಿದ್ದರು.

    2014ರ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ತುಳಸಿ ಗಬ್ಬಾರ್ಡ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಭಗವದ್ಗೀತೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು. ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನಿಯವರ ಪ್ರಸ್ತಾವನೆಗೆ ಅವರು ಬೆಂಬಲ ವ್ಯಕ್ತಪಡಿಸಿದ್ದರು.