Tag: US Tariff

  • ಭಾರತ ಯಾರ ಮುಂದೆಯೂ ಅವಮಾನಕ್ಕೆ ಒಳಗಾಗಲು ರಷ್ಯಾ ಬಿಡಲ್ಲ: ಅಮೆರಿಕ ಟ್ಯಾರಿಫ್‌ಗೆ ಪುಟಿನ್‌ ಟಾಂಗ್‌

    ಭಾರತ ಯಾರ ಮುಂದೆಯೂ ಅವಮಾನಕ್ಕೆ ಒಳಗಾಗಲು ರಷ್ಯಾ ಬಿಡಲ್ಲ: ಅಮೆರಿಕ ಟ್ಯಾರಿಫ್‌ಗೆ ಪುಟಿನ್‌ ಟಾಂಗ್‌

    ಮಾಸ್ಕೋ: ರಷ್ಯಾದ ಕಚ್ಚಾ ತೈಲ ವ್ಯಾಪಾರವನ್ನು ನಿಲ್ಲಿಸುವಂತೆ ಭಾರತದ ಮೇಲೆ ಒತ್ತಡ ಹೇರಲು ಅಮೆರಿಕ ಪ್ರಯತ್ನಿಸುತ್ತಿರುವುದನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಟೀಕಿಸಿದ್ದಾರೆ.

    ಭಾರತ (India) ಎಂದಿಗೂ ಅಂತಹ ಬೇಡಿಕೆಗಳಿಗೆ ಮಣಿಯುವುದಿಲ್ಲ. ಯಾರ ಮುಂದೆಯೂ ಅವಮಾನಕ್ಕೊಳಗಾಗಲು ರಷ್ಯಾ ಬಿಡುವುದಿಲ್ಲ ಎಂದು ಪುಟಿನ್ ಹೇಳಿದ್ದಾರೆ. ಸೋಚಿಯಲ್ಲಿ ನಡೆದ ವಾಲ್ಡೈ ಚರ್ಚಾ ಕ್ಲಬ್‌ನ ಸಮಗ್ರ ಅಧಿವೇಶನದಲ್ಲಿ ಮಾತನಾಡಿದ ರಷ್ಯಾದ ಅಧ್ಯಕ್ಷ, ಪ್ರಧಾನಿ ನರೇಂದ್ರ ಮೋದಿಯವರನ್ನು ಸಮತೋಲಿತ ಮತ್ತು ಬುದ್ಧಿವಂತ ನಾಯಕ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ವಿದೇಶಿ ಸಿನಿಮಾಗಳ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌

    ಭಾರತವು ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದು ಆರ್ಥಿಕ ಲೆಕ್ಕಾಚಾರ ಅಷ್ಟೆ. ಇಲ್ಲಿ ಯಾವುದೇ ರಾಜಕೀಯ ಅಂಶವಿಲ್ಲ. ಭಾರತ ನಮ್ಮ ಇಂಧನ ಪೂರೈಕೆಗಳನ್ನು ನಿರಾಕರಿಸಿದರೆ, ಅದು ಕೆಲವು ನಷ್ಟಗಳನ್ನು ಅನುಭವಿಸುತ್ತದೆ. ಅಂದಾಜುಗಳು ಬದಲಾಗುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಭಾರತದಂತಹ ದೇಶದ ಜನರು ನನ್ನನ್ನು ನಂಬಿರಿ. ರಾಜಕೀಯ ನಾಯಕತ್ವವು ತೆಗೆದುಕೊಳ್ಳುವ ನಿರ್ಧಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಯಾರ ಮುಂದೆಯೂ ಯಾವುದೇ ಅವಮಾನವನ್ನು ಎಂದಿಗೂ ಸಹಿಸಲ್ಲ. ನನಗೆ ಪ್ರಧಾನಿ ಮೋದಿ ಗೊತ್ತು. ಅವರು ಸ್ವತಃ ಈ ರೀತಿಯ ಯಾವುದೇ ಕ್ರಮಗಳನ್ನು ಎಂದಿಗೂ ತೆಗೆದುಕೊಳ್ಳುವುದಿಲ್ಲ. ಅಮೆರಿಕದ ದಂಡನಾತ್ಮಕ ಸುಂಕಗಳಿಂದಾಗಿ ಭಾರತ ಎದುರಿಸುತ್ತಿರುವ ನಷ್ಟಗಳನ್ನು ರಷ್ಯಾದಿಂದ ಕಚ್ಚಾ ತೈಲ ಆಮದುಗಳಿಂದ ಸಮತೋಲನಗೊಳಿಸಲಾಗುತ್ತದೆ. ಜೊತೆಗೆ ಅದು ಸಾರ್ವಭೌಮ ರಾಷ್ಟ್ರವಾಗಿ ಪ್ರತಿಷ್ಠೆಯನ್ನು ಪಡೆಯುತ್ತದೆ ಎಂದು ಪುಟಿನ್‌ ತಿಳಿಸಿದ್ದಾರೆ. ಇದನ್ನೂ ಓದಿ: ಟ್ರಂಪ್‌ ದಿಟ್ಟತನದಿಂದ ಭಾರತದ ಜೊತೆ ಕದನ ವಿರಾಮ ಸಾಧ್ಯವಾಯ್ತು: ಹಾಡಿ ಹೊಗಳಿದ ಪಾಕ್‌ ಪ್ರಧಾನಿ

    ಎರಡು ವಾರಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುತ್ತಿದ್ದಾಗ, ಉಕ್ರೇನ್ ಯುದ್ಧಕ್ಕೆ ಚೀನಾ ಮತ್ತು ಭಾರತ ಪ್ರಾಥಮಿಕ ನಿಧಿದಾರರು ಎಂದು ಕರೆದಿದ್ದರು. ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರೆಸುವ ಮೂಲಕ ಅವರು ಉಕ್ರೇನ್ ಯುದ್ಧಕ್ಕೆ ರಷ್ಯಾಗೆ ಹಣಕಾಸು ಒದಗಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಶಿಕ್ಷೆಯಾಗಿ ಅಮೆರಿಕ, ಭಾರತದ ಮೇಲೆ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕವನ್ನು ವಿಧಿಸಿದ್ದು, ಆಗಸ್ಟ್‌ನಲ್ಲಿ ಭಾರತದ ರಫ್ತಿನ ಮೇಲಿನ ಒಟ್ಟು ತೆರಿಗೆಯನ್ನು ಶೇ. 50 ಕ್ಕೆ ಹೆಚ್ಚಿಸಿದೆ.

  • ಚೀನಾ ಮೇಲೆ 50-100% ಸುಂಕ ವಿಧಿಸಲು ಟ್ರಂಪ್‌ ಕರೆ

    ಚೀನಾ ಮೇಲೆ 50-100% ಸುಂಕ ವಿಧಿಸಲು ಟ್ರಂಪ್‌ ಕರೆ

    ವಾಷಿಂಗ್ಟನ್‌: ರಷ್ಯಾದ ಆರ್ಥಿಕ ಪ್ರಾಬಲ್ಯವನ್ನು ದುರ್ಬಲಗೊಳಿಸಲು ಚೀನಾದ (China) ಮೇಲೆ 50 ರಿಂದ 100% ರಷ್ಟು ಸುಂಕಗಳನ್ನು ವಿಧಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ನ್ಯಾಟೋಗೆ ಕರೆ ನೀಡಿದ್ದಾರೆ.

    ಶನಿವಾರ ಟ್ರಂಪ್ ನ್ಯಾಟೋ ರಾಷ್ಟ್ರಗಳಿಗೆ ಪತ್ರವೊಂದನ್ನು ಬರೆದಿದ್ದು, ರಷ್ಯಾದ (Russia) ತೈಲ ಖರೀದಿಯನ್ನು ನಿಲ್ಲಿಸುವಂತೆ ಮತ್ತು ರಷ್ಯಾದ ಮೇಲೆ ಪ್ರಮುಖ ನಿರ್ಬಂಧಗಳನ್ನು ವಿಧಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಷ್ಯಾದ ತೈಲ ಖರೀದಿ ರಾಷ್ಟ್ರಗಳ ಮೇಲೆ ಸುಂಕ ವಿಧಿಸಲು G7 ದೇಶಗಳಿಗೆ ಅಮೆರಿಕ ಕರೆ

    ಎಲ್ಲಾ ನ್ಯಾಟೋ ರಾಷ್ಟ್ರಗಳು ಒಪ್ಪಿಕೊಂಡು ಅದೇ ರೀತಿ ಮಾಡಲು ಪ್ರಾರಂಭಿಸಿದಾಗ ಮತ್ತು ಎಲ್ಲಾ ನ್ಯಾಟೋ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದಾಗ, ನಾನು ರಷ್ಯಾದ ಮೇಲೆ ಪ್ರಮುಖ ನಿರ್ಬಂಧಗಳನ್ನು ವಿಧಿಸಲು ಸಿದ್ಧನಿದ್ದೇನೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    ರಷ್ಯಾ ಮತ್ತು ಉಕ್ರೇನ್ ಜೊತೆಗಿನ ಯುದ್ಧ ಮುಗಿದ ನಂತರ ಚೀನಾದ ಮೇಲಿನ 50 ರಿಂದ 100% ಸುಂಕಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬಹುದು. ಆದರೆ, ಈಗ ವಿಧಿಸಬಹುದಾದ ಸುಂಕವು ಯುದ್ಧವನ್ನು ಕೊನೆಗೊಳಿಸುವಲ್ಲಿ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ಟ್ರಂಪ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: 50% ತೆರಿಗೆ ಹಾಕುವುದು ಸುಲಭವಾಗಿರಲಿಲ್ಲ, ಇದರಿಂದಾಗಿಯೇ ಭಾರತದ ಜೊತೆ ಭಿನ್ನಾಭಿಪ್ರಾಯ ಶುರುವಾಯ್ತು: ಟ್ರಂಪ್‌

    ಚೀನಾ ಮತ್ತು ಭಾರತದ ನಂತರ NATO ಸದಸ್ಯ ಟರ್ಕಿ, ರಷ್ಯಾದ ತೈಲದ ಮೂರನೇ ಅತಿದೊಡ್ಡ ಖರೀದಿದಾರರಾಗಿದ್ದಾರೆ. ಇಂಧನ ಮತ್ತು ಶುದ್ಧ ಗಾಳಿಯ ಸಂಶೋಧನಾ ಕೇಂದ್ರದ ಪ್ರಕಾರ, ರಷ್ಯಾದ ತೈಲ ಖರೀದಿಯಲ್ಲಿ ತೊಡಗಿರುವ 32 ರಾಷ್ಟ್ರಗಳ ಮೈತ್ರಿಕೂಟದ ಇತರ ಸದಸ್ಯರಲ್ಲಿ ಹಂಗೇರಿ ಮತ್ತು ಸ್ಲೋವಾಕಿಯಾ ಸೇರಿವೆ.

    ಉಕ್ರೇನ್‌ನಲ್ಲಿನ ಯುದ್ಧವನ್ನು ಕೊನೆಗೊಳಿಸಲು ಯಾವುದೇ ಪ್ರಗತಿ ಸಾಧಿಸದಿದ್ದರೆ ರಷ್ಯಾ ಮೇಲೆ ನಿರ್ಬಂಧಗಳು ಮತ್ತು ಅದರ ತೈಲವನ್ನು ಖರೀದಿಸುವ ಪ್ರಮುಖ ಖರೀದಿದಾರರಾದ ಚೀನಾ ಮತ್ತು ಭಾರತದಂತಹ ದೇಶಗಳ ಮೇಲೆ ದ್ವಿತೀಯ ನಿರ್ಬಂಧಗಳನ್ನು ವಿಧಿಸುವುದಾಗಿ ಟ್ರಂಪ್ ಈ ಹಿಂದೆ ಬೆದರಿಕೆ ಹಾಕಿದ್ದರು.

    ಕಳೆದ ತಿಂಗಳು, ಅಮೆರಿಕದ ಅಧ್ಯಕ್ಷರು ರಷ್ಯಾದ ತೈಲವನ್ನು ನಿರಂತರವಾಗಿ ಆಮದು ಮಾಡಿಕೊಳ್ಳುತ್ತಿರುವುದನ್ನು ಉಲ್ಲೇಖಿಸಿ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ 25% ಸುಂಕವನ್ನು ವಿಧಿಸಿದ್ದರು. ಆದರೆ, ಚೀನಾ ವಿರುದ್ಧ ಅಂತಹ ಕ್ರಮವನ್ನು ತೆಗೆದುಕೊಂಡಿಲ್ಲ.

  • ಭಾರತ ಇನ್ನೆರಡು ತಿಂಗಳಲ್ಲಿ ಟ್ರಂಪ್‌ ಕ್ಷಮೆಯಾಚಿಸುತ್ತೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ

    ಭಾರತ ಇನ್ನೆರಡು ತಿಂಗಳಲ್ಲಿ ಟ್ರಂಪ್‌ ಕ್ಷಮೆಯಾಚಿಸುತ್ತೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ

    ವಾಷಿಂಗ್ಟನ್: ಭಾರತ ಇನ್ನೆರಡು ತಿಂಗಳಲ್ಲಿ ನಮಗೆ ಕ್ಷಮೆಯಾಚಿಸುತ್ತದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೂವಾರ್ಡ್‌ ಲುಟ್ನಿಕ್‌ ಹೇಳಿಕೆ ನೀಡಿದ್ದಾರೆ.

    ರಷ್ಯಾದ ತೈಲವನ್ನು ಖರೀದಿಸದಂತೆ ಅಮೆರಿಕದ ಒತ್ತಡಕ್ಕೆ ಭಾರತ ಮಣಿದಿಲ್ಲ. ಆದರೂ, ಕೆಲವೇ ತಿಂಗಳುಗಳಲ್ಲಿ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಭಾರತ ಮತ್ತೆ ಬರುತ್ತದೆ ಎಂದು ಲುಟ್ನಿಕ್‌ ತಿಳಿಸಿದ್ದಾರೆ. ಇದನ್ನೂ ಓದಿ: ಟೆಕ್‌ ದಿಗ್ಗಜರಿಗೆ ಟ್ರಂಪ್‌ ಡಿನ್ನರ್‌ – ಭಾರತೀಯ ಮೂಲದ ಐವರು ಸಿಇಒಗಳು ಭಾಗಿ

    ಒಂದು ಅಥವಾ ಎರಡು ತಿಂಗಳಲ್ಲಿ ಭಾರತ ಮಾತುಕತೆಗೆ ಬರಲಿದೆ ಎಂದು ನಾನು ಭಾವಿಸುತ್ತೇನೆ. ಕ್ಷಮಿಸಿ ಅಂತ ಕೇಳುತ್ತಾರೆ. ಡೊನಾಲ್ಡ್ ಟ್ರಂಪ್ ಜೊತೆ ಒಪ್ಪಂದ ಮಾಡಿಕೊಳ್ಳಲು ಮತ್ತೆ ಪ್ರಯತ್ನಿಸುತ್ತಾರೆಂದು ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

    ಒಂದು ವೇಳೆ ಅಮೆರಿಕವನ್ನು ಬೆಂಬಲಿಸದಿದ್ದರೆ, ರಫ್ತಿನ ಮೇಲೆ ಶೇ.50 ರಷ್ಟು ಸುಂಕವನ್ನು ಭಾರತ ಪಾವತಿಸಬೇಕಾಗುತ್ತದೆ. ಭಾರತವು ತನ್ನ ಮಾರುಕಟ್ಟೆಯನ್ನು ತೆರೆಯಲು, ರಷ್ಯಾದ ತೈಲ ಖರೀದಿ ನಿಲ್ಲಿಸಲು ಮತ್ತು ಬ್ರಿಕ್ಸ್‌ನ ಭಾಗವಾಗುವುದನ್ನು ನಿಲ್ಲಿಸಲು ಬಯಸುವುದಿಲ್ಲ. ನೀವು ರಷ್ಯಾ ಮತ್ತು ಚೀನಾ ನಡುವೆ ಸೇತುವೆಯಾಗಲು ಬಯಸಿದರೆ, ಹೋಗಿ. ಆದರೆ ಡಾಲರ್ ಅನ್ನು ಬೆಂಬಲಿಸಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕವನ್ನು ಬೆಂಬಲಿಸಿ. ನಿಮ್ಮ ಅತಿದೊಡ್ಡ ಕ್ಲೈಂಟ್ ಅನ್ನು ಬೆಂಬಲಿಸಿ. ಇಲ್ಲದಿದ್ದರೆ, 50% ಸುಂಕಗಳನ್ನು ಪಾವತಿಸಿ. ಇದು ಎಷ್ಟು ಕಾಲ ಇರುತ್ತದೆ ಎಂದು ನೋಡೋಣ ಎಂದಿದ್ದಾರೆ.

    ರಷ್ಯಾದ ಕಚ್ಚಾತೈಲವು ನಿಜಕ್ಕೂ ಅಗ್ಗವಾಗಿದೆ. ತೈಲ ಖರೀದಿಗೆ ರಷ್ಯನ್ನರು ಜನರನ್ನು ಹುಡುಕುತ್ತಿದ್ದಾರೆ. ಅಗ್ಗವಾದ ತೈಲ ಖರೀದಿಸಿ ಹಣ ಸಂಪಾದಿಸೋಣ ಅಂತ ಭಾರತ ತೀರ್ಮಾನಿಸಿದೆ ಎಂದು ಲುಟ್ನಿಕ್‌ ಮಾತನಾಡಿದ್ದಾರೆ. ಇದನ್ನೂ ಓದಿ: ನಾವು ಭಾರತ, ರಷ್ಯಾವನ್ನು ಚೀನಾಗೆ ಬಿಟ್ಟು ಕೊಟ್ಟಿದ್ದೇವೆ: ಟ್ರಂಪ್‌

  • ಅಮೆರಿಕ ಒತ್ತಡದ ನಡುವೆ ಭಾರತಕ್ಕೆ ರಷ್ಯಾ ಗಿಫ್ಟ್‌; ಇನ್ನಷ್ಟು S-400 ವಾಯು ರಕ್ಷಣಾ ವ್ಯವಸ್ಥೆ ಪೂರೈಕೆಗೆ ನಿರ್ಧಾರ

    ಅಮೆರಿಕ ಒತ್ತಡದ ನಡುವೆ ಭಾರತಕ್ಕೆ ರಷ್ಯಾ ಗಿಫ್ಟ್‌; ಇನ್ನಷ್ಟು S-400 ವಾಯು ರಕ್ಷಣಾ ವ್ಯವಸ್ಥೆ ಪೂರೈಕೆಗೆ ನಿರ್ಧಾರ

    – ಮತ್ತಷ್ಟು ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಗೆ ಭಾರತ ನಿರ್ಧಾರ

    ಮಾಸ್ಕೋ: ಅಮೆರಿಕ ಸುಂಕ ಸಮರದ ನಡುವೆಯೂ ಹೆಚ್ಚಿನ S-400 ವಾಯು ರಕ್ಷಣಾ ವ್ಯವಸ್ಥೆಗಳಿಗಾಗಿ (S-400 Air Defence Systems) ರಷ್ಯಾ, ಭಾರತ ಮಾತುಕತೆ ನಡೆಸುತ್ತಿವೆ ಎಂದು ವರದಿಯಾಗಿದೆ. ಇದು ಭಾರತ ಮತ್ತು ರಷ್ಯಾ (India – Russia) ನಡುವಿನ ಸಂಬಂಧ ಬಲಗೊಳ್ಳುತ್ತಿರುವುದಕ್ಕೆ ಉದಾಹರಣೆಯಾಗಿದೆ.

    S-400 ವಾಯು ರಕ್ಷಣಾ ವ್ಯವಸ್ಥೆಗಳ ಪೂರೈಕೆಯನ್ನು ಹೆಚ್ಚಿಸಲು ರಷ್ಯಾ ಮತ್ತು ಭಾರತ ಮಾತುಕತೆ ನಡೆಸುತ್ತಿವೆ. ಭಾರತ ಈಗಾಗಲೇ ಎಸ್‌-400 (ಸುದರ್ಶನ ಚಕ್ರ) ಹೊಂದಿದ್ದರೂ ಇದರ ಪೂರೈಕೆ ಇನ್ನಷ್ಟು ಹೆಚ್ಚಿಸಲು ಮಾತುಕತೆ ನಡೆಯುತ್ತಿದೆ ಎಂದು ರಷ್ಯಾ ಮಿಲಿಟರಿ ವಿಭಾಗದ ಹಿರಿಯ ಅಧಿಕಾರಿ ಡಿಮಿಟ್ರಿ ಶುಗಾಯೆವ್‌ ತಿಳಿಸಿದ್ದಾರೆ.

    2018ರಲ್ಲಿ ಭಾರತ ಎಸ್‌-400 ವಾಯು ರಕ್ಷಣಾ ವ್ಯವಸ್ಥೆಗಳಿಗಾಗಿ ರಷ್ಯಾದೊಂದಿಗೆ 5.5 ಶತಕೋಟಿ ಡಾಲರ್‌ ಒಪ್ಪಂದಕ್ಕೆ ಸಹಿ ಹಾಕಿತ್ತು. ಚೀನಾದ (China) ಮಿಲಿಟರಿ ಶಕ್ತಿಯನ್ನು ಎದುರಿಸುವ ಉದ್ದೇಶದಿಂದ ಅಂದು ಭಾರತ, ರಷ್ಯಾ ಜೊತೆ ಈ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದ್ರೆ ಈವರೆಗಿನ ಪೂರೈಕೆಯಲ್ಲಿ ವಿಳಂಬವಾಗಿತ್ತು. ಇದೀಗ ಈ ಒಪ್ಪಂದದ ಅಡಿಯಲ್ಲಿ ಕೊನೆಯ 2 ಘಟಕಗಳು 2026 ಮತ್ತು 2027ರ ವೇಳೆ ಭಾರತಕ್ಕೆ ಲಭ್ಯವಾಗಲಿದೆ ಎಂದು ವರದಿಗಳು ತಿಳಿಸಿವೆ.

    ಆಪರೇಷನ್‌ ಸಿಂಧೂರದಲ್ಲಿ ಯಶಸ್ವಿ ಕಾರ್ಯಾಚರಣೆ
    ಆಪರೇಷನ್ ಸಿಂಧೂರ ಸಮಯದಲ್ಲಿ ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದವು. ದೀರ್ಘ-ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯು ಪಾಕ್‌ನ ಮಿಸೈಲ್‌, ಡ್ರೋನ್‌ಗಳನ್ನು ಹೊಡೆದುರುಳಿಸಿದ್ದವು. ಇದಾದ ಬಳಿಕ ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಂದಲೂ ಎಸ್‌-400 ಗೆ ಬೇಡಿಕೆ ಹೆಚ್ಚಾಗಿತ್ತು. ಪಾಕ್‌ ಕೂಡ ಭಾರತಕ್ಕೆ ನೀಡಿರುವ ವಾಯು ರಕ್ಷಣಾ ವ್ಯವಸ್ಥೆಯನ್ನ ತಮಗೆ ಕೊಡುವಂತೆ ಮನವಿ ಮಾಡಿಕೊಂಡಿತ್ತು.

    ಸುದರ್ಶನ ಚಕ್ರ ವಿಶೇಷತೆ ಏನು?
    IAF ಸೇವೆಯಲ್ಲಿ ಸುದರ್ಶನ ಚಕ್ರ ಎಂದು ಕರೆಯಲ್ಪಡುವ S-400 ಟ್ರಯಂಫ್, ವಿಶ್ವದ ಅತ್ಯಂತ ಮುಂದುವರಿದ ದೀರ್ಘ-ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಒಂದಾಗಿದೆ. ರಷ್ಯಾ ನಿರ್ಮಿತ ಮತ್ತು ಭಾರತದ ಕಾರ್ಯತಂತ್ರದ ವಾಯು ರಕ್ಷಣಾ ಕಮಾಂಡ್‌ಗೆ ಇದು ಸಂಯೋಜಿಸಲ್ಪಟ್ಟದೆ. ರಹಸ್ಯ ವಿಮಾನಗಳು, ಕ್ರೂಸ್ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಯುದ್ಧತಂತ್ರದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಾಯುಗಾಮಿ ಬೆದರಿಕೆಗಳನ್ನು ಪತ್ತೆಹಚ್ಚುವ ಮತ್ತು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಏಕಕಾಲಕ್ಕೆ 80 ಗುರಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಇದಕ್ಕಿದೆ.

    ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಗೆ ನಿರ್ಧಾರ
    ಇನ್ನೂ ಟ್ರಂಪ್‌ ಸುಂಕದ ಬೆದರಿಕೆಗೆ ಡೋಂಟ್‌ ಕೇರ್‌ ಎಂದಿರುವ ಭಾರತ, ರಷ್ಯಾದಿಂದ ಇನ್ನಷ್ಟು ರಿಯಾಯಿತಿ ದರದಲ್ಲಿ‌ ಹೆಚ್ಚಿನ ಪ್ರಮಾಣದ ಕಚ್ಚಾತೈಲ ಖರೀದಿಗೆ ನಿರ್ಧರಿಸಿದೆ. ಇದರಿಂದ ಭಾರತಕ್ಕೆ ಹೆಚ್ಚಿನ ಉಳಿತಾಯ ಆಗಲಿದೆ ಎಂದು ತಿಳಿದುಬಂದಿದೆ.

  • ಎಷ್ಟೇ ಒತ್ತಡ ಬಂದ್ರೂ ತಡೆದುಕೊಳ್ಳುವ ಶಕ್ತಿ ನಮಗಿದೆ – ಟ್ರಂಪ್‌ಗೆ ಮೋದಿ ಖಡಕ್‌ ಸಂದೇಶ

    ಎಷ್ಟೇ ಒತ್ತಡ ಬಂದ್ರೂ ತಡೆದುಕೊಳ್ಳುವ ಶಕ್ತಿ ನಮಗಿದೆ – ಟ್ರಂಪ್‌ಗೆ ಮೋದಿ ಖಡಕ್‌ ಸಂದೇಶ

    – ಗುಜರಾತ್‌ನಲ್ಲಿದ್ದ ಕರ್ಫ್ಯೂ ದಿನಗಳನ್ನ ಇಂದಿನ ಯುವ ಪೀಳಿಗೆ ನೋಡಿಲ್ಲ; ಪಿಎಂ

    ನವದೆಹಲಿ: ರಷ್ಯಾದಿಂದ ತೈಲ ಖರೀದಿಸುತ್ತಿರುವ ಕಾರಣಕ್ಕೆ ಭಾರತದ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಧಿಸಿರುವ ಶೇ.50ರಷ್ಟು ಸುಂಕ ಅಧಿಕೃತವಾಗಿ ಜಾರಿಯಾಗಲು ಇನ್ನೆರಡು ದಿನ ಬಾಕಿ ಇದೆ (ಇಂದು ಸೇರಿದಂತೆ). ಆದ್ರೆ ಗಡುವು ಮೀರುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ (Narendra Modi), ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರಿಗೆ ಖಡಕ್‌ ಅಂದೇಶ ಕೊಟ್ಟಿದ್ದಾರೆ.

    ಅಹಮದಾಬಾದ್‌ನಲ್ಲಿ (Ahmedabad) ನಡೆದ‌ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಮೋದಿ, ಅಮೆರಿಕದ ಒತ್ತಡದ ಹೊರತಾಗಿಯೂ ನಾವು ಪರಿಹಾರ ಕಂಡುಕೊಳ್ಳುತ್ತೇವೆ. ಒತ್ತಡದಿಂದ ಹೊರಬರುವುದಕ್ಕೆ ನಮ್ಮ ಸರ್ಕಾರ ಬೇರೆ ಮಾರ್ಗವನ್ನು ಕಂಡುಕೊಳ್ಳುತ್ತದೆ ಎಂದಿದ್ದಾರೆ.

    ಎಷ್ಟೇ ಒತ್ತಡ ಬಂದರೂ, ಅದನ್ನ ತಡೆದುಕೊಳ್ಳುವ ಶಕ್ತಿ ಬೆಳೆಸಿಕೊಂಡಿದ್ದೇವೆ. ನಮ್ಮ ದೇಶದ ಸಣ್ಣ ಉದ್ಯಮಿಗಳು, ರೈತರಿಗೆ ನಾನು ಭರವಸೆ ಕೊಡ್ತೇನೆ. ಈ ಮೋದಿಗೆ ನಿಮ್ಮ ಹಿತಾಸಕ್ತಿಗಳೇ ಮುಖ್ಯ. ನನ್ನ ಸರ್ಕಾರವು ಸಣ್ಣ ಉದ್ಯಮಿಗಳು, ರೈತರು ಮತ್ತು ಜಾನುವಾರು ಮಾಲೀಕರಿಗೆ ತೊಂದರೆ ಮಾಡಲು ಎಂದಿಗೂ ಅವಕಾಶ ಕೊಡಲ್ಲ. ಎಷ್ಟೇ ಒತ್ತಡ ಬಂದರೂ ಅದನ್ನು ತಡೆದು ಪರಿಹಾರ ಕಂಡುಕೊಳ್ಳುವ ಹಾಗೂ ನಮ್ಮ ಶಕ್ತಿ ಹೆಚ್ಚಿಸಿಕೊಳ್ಳುತ್ತೇವೆ ಎಂದು ಮೋದಿ ಗುಡುಗಿದ್ದಾರೆ.

    ಮುಂದುವರಿದು.. ʻಆತ್ಮನಿರ್ಭರ ಭಾರತʼ (Atmanirbhar Bharat) ಅಭಿಯಾನವು ಗುಜರಾತ್‌ನಿಂದ ಸಾಕಷ್ಟು ಶಕ್ತಿಯನ್ನ ಪಡೆಯುತ್ತಿದೆ. ಪ್ರತಿದಿನ ಇಲ್ಲಿ ಕರ್ಫ್ಯೂ ವಿಧಿಸಲಾಗುತ್ತಿತ್ತು. ಆದ್ರೆ ಆ ದಿನಗಳನ್ನ ಇಂದಿನ ಯುವ ಪೀಳಿಗೆ ನೋಡಿಲ್ಲ. ಇಲ್ಲಿ ವ್ಯಾಪಾರ ಮಾಡುವುದೂ ಕಷ್ಟಕರವಾಗಿತ್ತು. ಆದರಿಂದು ಅಹಮದಾಬಾದ್ ದೇಶದ ಸುರಕ್ಷಿತ ನಗರಗಳಲ್ಲಿ ಒಂದಾಗಿದೆ. ಇದರ ಹಿಂದೆ 2 ದಶಕಗಳ ಕಠಿಣ ಪರಿಶ್ರಮವಿದೆ ಎಂದು ಬಣ್ಣಿಸಿದರು.

    ಗುಜರಾತ್‌ನಲ್ಲಿ (Gujarat) ಶಾಂತಿ ಮತ್ತು ಭದ್ರತೆಯ ವಾತಾವರಣವು ಉತ್ತಮ ಫಲಿತಾಂಶ ಕೊಡುತ್ತಿರುವುದನ್ನು ನಾವು ನೋಡ್ತಿದ್ದೇವೆ. ನಮ್ಮ ರಾಜ್ಯವು ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿರುವುದನ್ನ ನೋಡಿ ಇಡೀ ಗುಜರಾತ್ ಹೆಮ್ಮೆಪಡುತ್ತದೆ ಎಂದು ಶ್ಲಾಘಿಸಿದರು.

  • 14ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಟ್ರಂಪ್‌ ಸುಂಕ; ಭಾರತ ಬಚಾವ್‌ ಆಗಿದ್ದು ಯಾಕೆ?

    14ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಟ್ರಂಪ್‌ ಸುಂಕ; ಭಾರತ ಬಚಾವ್‌ ಆಗಿದ್ದು ಯಾಕೆ?

    ನ್ನ ದೇಶದ ವ್ಯಾಪಾರ ಸುಧಾರಿಸುವ ದೃಷ್ಟಿಯಲ್ಲಿ ಹಲವು ದೇಶಗಳ ಮೇಲ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಂಕ ಸಮರ ಸಾರಿದ್ದಾರೆ. ಕೆನಡಾ, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ 15ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಸುಂಕು ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಒಂದರ ಮೇಲೆ ಒಂದರಂತೆ ವಿವಿಧ ದೇಶಗಳ ಮೇಲೆ ಸುಂಕ ಹೇರಿಕೆ ಸಂಬಂಧ ಆದೇಶ ಪತ್ರಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಟ್ರಂಪ್ ಟ್ಯಾರಿಫ್‌ನಿಂದ ಸದ್ಯ ಭಾರತ ತಪ್ಪಿಸಿಕೊಂಡಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಅದೇನು ಅಂತ ಇಲ್ಲಿ ವಿವರಿಸಲಾಗಿದೆ.

    ಭಾರತ ಸೇರಿ ಹಲವು ದೇಶಗಳ ಮೇಲೆ ಟ್ಯಾರಿಫ್ ಸಮರ
    ಏಪ್ರಿಲ್ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಟ್ಯಾರಿಫ್ (Tariff) ಹಾಕಿದ್ದರು. ಮೋದಿ ನನ್ನ ಆತ್ಮೀಯ ಸ್ನೇಹಿತ ಎನ್ನುತ್ತಲೇ ಭಾರತಕ್ಕೆ ಶೇ.26 ಪ್ರತಿಸುಂಕ ವಿಧಿಸುವುದಾಗಿ ಘೋಷಿಸಿದ್ದರು. ಅದಾಗ್ಯೂ, ನಂತರ 90 ದಿನಗಳ ವರೆಗೆ ತಮ್ಮ ಆದೇಶವನ್ನು ಅಮಾನತಿನಲ್ಲಿಟ್ಟರು. ಆಗಲೂ ಭಾರತ ಪ್ರತಿಸುಂಕದಿಂದ ತಪ್ಪಿಸಿಕೊಂಡಿತು. ಇದಾದ ಬಳಿಕ ಭಾರತದಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಯಿತು. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸೋ ದೇಶಗಳ ಮೇಲೆ 500% ಸುಂಕ – ಭಾರತ, ಚೀನಾಗೆ ಟ್ರಂಪ್‌ ಶಾಕ್‌?

    ಭಾರತ-ಪಾಕ್ ಸಂಘರ್ಷ; ಟ್ರಂಪ್ ಹೇಳಿದ್ದೇನು?
    ಕಾಶ್ಮೀರದ ಪಹಲ್ಗಾಮ್ ಮೇಲೆ ಉಗ್ರರು ನಡೆಸಿದ ದಾಳಿಗೆ 26 ಪ್ರವಾಸಿಗರು ಬಲಿಯಾದರು. ದಾಳಿಗೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕ್‌ನಲ್ಲಿ ಉಗ್ರರ ತಾಣಗಳನ್ನು ಗುರಿಯಾಗಿಸಿ ಭಾರತ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿತು. ಇದರ ಬೆನ್ನಲ್ಲೇ ಪಾಕ್ ಮತ್ತು ಭಾರತ ನಡುವೆ ಯುದ್ಧ ಸನ್ನಿವೇಶ ಸೃಷ್ಟಿಯಾಯಿತು. ಉಭಯ ದೇಶಗಳು ಪರಸ್ಪರ ವೈಮಾನಿಕ ದಾಳಿ ನಡೆಸಿದವು. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಬಹುದು ಎಂಬುದನ್ನರಿತ ಟ್ರಂಪ್ ಭಾರತ-ಪಾಕ್ ನಡುವೆ ಕದನ ವಿರಾಮಕ್ಕೆ ಒತ್ತಾಯಿಸಿದರು. ಮಾತುಕತೆ ಬಳಿಕ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಮೊದಲು ಟ್ರಂಪ್ ಘೋಷಿಸಿದರು. ನಾವು ವ್ಯಾಪಾರ ಒಪ್ಪಂದಕ್ಕಾಗಿ ಸಂಘರ್ಷ ತಡೆದಿದ್ದೇವೆ. ನೀವಿಬ್ಬರು ಯುದ್ಧ ಮುಂದುವರಿಸಿದರೆ, ನಾವು ನಿಮ್ಮೊಂದಿಗೆ ವ್ಯವಹರಿಸುವುದಿಲ್ಲ ಎಂದು ಎಚ್ಚರಿಸಿದ್ದಾಗಿ ಟ್ರಂಪ್ ತಿಳಿಸಿದ್ದರು. ಅದಾದ ಬಳಿಕ, ಈಚೆಗೆ ಭಾರತದ ಜೊತೆ ಬಿಗ್‌ ಡೀಲ್ ಇದೆ ಎಂದು ಟ್ರಂಪ್‌ ಸುಳಿವು ಕೊಟ್ಟಿದ್ದರು. ಅದೇನಂತ ಕಾದುನೋಡಬೇಕಿದೆ.

    14 ದೇಶಗಳ ಮೇಲೆ ಹೊಸ ಸುಂಕ
    ಏಟಿಗೆ ಎದುರೇಟು ಎಂಬಂತೆ ಜಗತ್ತಿನ 14 ದೇಶಗಳ ಮೇಲೆ ಡೊನಾಲ್ಡ್ ಟ್ರಂಪ್ ಹೊಸ ಸುಂಕ ವಿಧಿಸಿದ್ದಾರೆ. ಈ ಪಟ್ಟಿಯಲ್ಲಿ ಭಾರತವನ್ನು ಹೊರಗಿಟ್ಟಿದ್ದಾರೆ. ಆಗಸ್ಟ್ 1 ರಿಂದಲೇ ಹೊಸ ಸುಂಕ ಜಾರಿಗೆ ಬರಲಿದೆ. ನಿಮ್ಮ ದೇಶಗಳೊಂದಿಗಿನ ನಮ್ಮ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಸುಂಕದ ಪ್ರಮಾಣವನ್ನು ಮಾರ್ಪಡಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷರು ತಿಳಿಸಿದ್ದಾರೆ. ಹೊಸ ಸುಂಕಗಳಿಂದ ಯಾವ ದೇಶಗಳು ಹೆಚ್ಚು ಹಾನಿಗೊಳಗಾಗುತ್ತವೆ? ಯಾವ ದೇಶಗಳನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ? ಇಲ್ಲಿಂದ ಮುಂದಿನ ಹಾದಿ ಏನು ಎಂಬುದಕ್ಕೆ ವಿವರ ಇಲ್ಲಿದೆ.

    AI ಚಿತ್ರ
    AI ಚಿತ್ರ

    ಯಾವ ದೇಶಕ್ಕೆ ಎಷ್ಟು ಸುಂಕ?
    ಬಾಂಗ್ಲಾದೇಶ 35%, ಬೋಸ್ನಿಯಾ ಮತ್ತು ಹರ್ಜೆಗೋವಿನಾ 30%, ಕಾಂಬೋಡಿಯಾ 36, ಇಂಡೋನೇಷಿಯಾ 32, ಜಪಾನ್ 25, ಕಜಕಿಸ್ತಾನ್ 25, ಲಾವೋಸ್ 40, ಮಲೇಷ್ಯಾ 25, ಮ್ಯಾನ್ಮಾರ್ 40, ಸೆರ್ಬಿಯಾ 35, ದಕ್ಷಿಣ ಆಫ್ರಿಕಾ 30, ದಕ್ಷಿಣ ಕೊರಿಯಾ 25, ಥೈಲ್ಯಾಂಡ್ 36, ಟುನೀಶಿಯಾಗೆ 25% ಸುಂಕವನ್ನು ವಿಧಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ, ಅಮೆರಿಕದ ಪ್ರಮುಖ ವ್ಯಾಪಾರ ಪಾಲುದಾರರು ಮತ್ತು ಮಿತ್ರರಾಷ್ಟ್ರಗಳಾದ ಜಪಾನ್ & ದಕ್ಷಿಣ ಕೊರಿಯಾಗಳ ಮೇಲೆ ಶೇ.25 ಸುಂಕ ವಿಧಿಸಲಾಗಿದೆ. ಮ್ಯಾನ್ಮಾರ್ ಮತ್ತು ಲಾವೋಸ್‌ಗೆ ಅತಿ ಹೆಚ್ಚು ಸುಂಕ ಹೇರಲಾಗಿದೆ. ಇದನ್ನೂ ಓದಿ: ಕೆನಡಾ ಮೇಲೆ 35% ಸುಂಕ ವಿಧಿಸಿದ ಟ್ರಂಪ್ – ಪ್ರತೀಕಾರಕ್ಕೆ ಮುಂದ್ರಾದ್ರೆ ಇನ್ನಷ್ಟು ಸುಂಕ ವಿಧಿಸುವುದಾಗಿ ವಾರ್ನಿಂಗ್‌

    ಯುಎಸ್ ಪತ್ರ ರವಾನೆ
    ಟ್ಯಾರಿಫ್ ಹೇರಲ್ಪಟ್ಟ ದೇಶಗಳಿಗೆ ಅಮೆರಿಕ ಪತ್ರಗಳನ್ನು ಬರೆದಿದೆ. ಅಮೆರಿಕವು ತಮ್ಮೊಂದಿಗಿನ ವ್ಯಾಪಾರ ಕೊರತೆಯನ್ನು ಸರಿಪಡಿಸಲು ಬಯಸುತ್ತದೆ. ಯುಎಸ್ ರಫ್ತು ಮಾಡುವುದಕ್ಕಿಂತ ಈ ದೇಶಗಳಿಂದ ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ, ಹೊಸ ದರದಲ್ಲಿ ತೆರಿಗೆ ವಿಧಿಸುತ್ತದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಇದು ಅಮೆರಿಕ ಘೋಷಿಸಿರುವ ವಲಯ ಸುಂಕಗಳಿಂದ (ಆಟೋಮೊಬೈಲ್, ಉಕ್ಕು ಇತ್ಯಾದಿ..) ಪ್ರತ್ಯೇಕವಾಗಿದೆ. ಟ್ರಾನ್ಸ್ಶಿಪ್ ಮಾಡಲಾದ ಸರಕುಗಳು ಸಹ ಆ ಹೆಚ್ಚಿನ ಸುಂಕಕ್ಕೆ ಒಳಪಟ್ಟಿರುತ್ತವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಟ್ರಾನ್ಸ್ಶಿಪ್‌ಮೆಂಟ್ ಎಂದರೆ, ಹೆಚ್ಚಿನ ಸುಂಕಗಳನ್ನು ಎದುರಿಸುತ್ತಿರುವ ದೇಶಗಳು ಕಡಿಮೆ ಸುಂಕಗಳನ್ನು ಎದುರಿಸುತ್ತಿರುವ ಮೂರನೇ ದೇಶದ ಮೂಲಕ ತಮ್ಮ ಸರಕುಗಳನ್ನು ಯುಎಸ್‌ಗೆ ಸಾಗಿಸಬಹುದು.

    ಈ ದೇಶಗಳನ್ನೇ ಆಯ್ಕೆ ಮಾಡಿದ್ದೇಕೆ?
    ಏಪ್ರಿಲ್‌ನಲ್ಲಿ ಟ್ರಂಪ್ ಹಲವು ದೇಶಗಳ ಮೇಲೆ ಪ್ರತಿಸುಂಕ ವಿಧಿಸಿದ್ದರು. ಅದರ ಬೆನ್ನಲ್ಲೇ 90 ದಿನಗಳ ಗಡುವು ವಿಧಿಸಿ ತಮ್ಮ ಪ್ರತಿಸುಂಕ ಆದೇಶವನ್ನು ಅಮಾನತಿನಲ್ಲಿಟ್ಟರು. ಈ ಅವಧಿಯಲ್ಲಿ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವಂತೆ ದೇಶಗಳಿಗೆ ಸೂಚಿಸಿದ್ದರು. ಈ 90 ದಿನಗಳ ಗಡುವು ಮುಕ್ತಾಯವಾಗಿದೆ. ಆದರೆ, ಯುಕೆ ಮತ್ತು ವಿಯೆಟ್ನಾಂನೊಂದಿಗೆ ಕೇವಲ 2 ಅಸ್ಪಷ್ಟ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ನಂತರದ ದಿನಗಳಲ್ಲಿ ಕೆನಡಾ ಕೂಡ ಈ ಲಿಸ್ಟ್‌ಗೆ ಸೇರಿದೆ.

    ಈ 14 ದೇಶಗಳನ್ನೇ ಏಕೆ ಆರಿಸಿಕೊಂಡೆ ಎಂಬುದನ್ನು ಅಮೆರಿಕ ಸರ್ಕಾರ ಇನ್ನೂ ಬಹಿರಂಗಪಡಿಸಿಲ್ಲ. ಆದಾಗ್ಯೂ, ಮಾತುಕತೆಗಳಲ್ಲಿನ ನಿಧಾನಗತಿಯ ಪ್ರಗತಿಗಾಗಿ ಟ್ರಂಪ್ ಇತ್ತೀಚೆಗೆ ಜಪಾನ್ ಅನ್ನು ಟೀಕಿಸುತ್ತಿದ್ದರು. ‘ನಾವು ಜಪಾನ್‌ನೊಂದಿಗೆ ವ್ಯವಹರಿಸಿದ್ದೇವೆ. ನಾವು ಒಪ್ಪಂದ ಮಾಡಿಕೊಳ್ಳುತ್ತೇವೆಯೇ ಎಂದು ನನಗೆ ಖಚಿತವಿಲ್ಲ. ಜಪಾನ್‌ನೊಂದಿಗೆ ನನಗೆ ಅನುಮಾನವಿದೆ. ಅವರು ತುಂಬಾ ಕಠಿಣರು. ಅವರು ತುಂಬಾ ಹಾಳಾಗಿದ್ದಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಭಾರತದಂತೆಯೇ ಜಪಾನ್ ಕೂಡ ತನ್ನ ಕೃಷಿ ವಲಯವನ್ನು ಅಮೆರಿಕದ ಆಮದುಗಳಿಗೆ ತೆರೆಯಲು ಬಯಸುವುದಿಲ್ಲ’ ಎಂದು ಟ್ರಂಪ್ ಹೇಳಿದ್ದರು. ಇದನ್ನೂ ಓದಿ: ತಾಮ್ರದ ಮೇಲೆ 50%, ಔಷಧ ಆಮದಿನ ಮೇಲೆ 200% ಸುಂಕದ ಎಚ್ಚರಿಕೆ – ಭಾರತದ ಮೇಲೆ ಏನು ಪರಿಣಾಮ?

    ಅದೇ ರೀತಿ, ದಕ್ಷಿಣ ಕೊರಿಯಾದೊಂದಿಗಿನ ಒಪ್ಪಂದವೂ ಪ್ರಗತಿಯಲ್ಲಿಲ್ಲ. ಈ ದೇಶಗಳು ಅಮೆರಿಕಕ್ಕೆ ದೊಡ್ಡ ವ್ಯಾಪಾರ ಪಾಲುದಾರರಾಗಿದ್ದರೂ, ಕಾರುಗಳಂತಹ ನಿರ್ದಿಷ್ಟ ವಲಯಗಳಲ್ಲಿ ವಿನಾಯಿತಿಗಳನ್ನು ಬಯಸಿದ್ದವು. ಅಮೆರಿಕವು ಆಟೋಮೊಬೈಲ್‌ಗಳ ದೊಡ್ಡ ಆಮದುದಾರರಾಗಿದ್ದರೆ, ದೇಶೀಯ ಕಾರು ಉತ್ಪಾದನಾ ಉದ್ಯಮವು ತನ್ನ ಕಳೆದುಹೋದ ಪ್ರಾಬಲ್ಯವನ್ನು ಮರಳಿ ಪಡೆಯಬೇಕೆಂದು ಟ್ರಂಪ್ ಬಯಸುತ್ತಾರೆ. ‘ಅಮೆರಿಕದ ಆಮದುಗಳಿಗೆ ಕೊರಿಯಾದ ಬಹುತೇಕ ಎಲ್ಲಾ ಸುಂಕಗಳು ಶೂನ್ಯದಲ್ಲಿವೆ. ಇದರಿಂದಾಗಿ ಅವರು ಭಾರತ ಅಥವಾ ವಿಯೆಟ್ನಾಂಗಿಂತ ಹೆಚ್ಚಿನ ಸುಂಕಗಳೊಂದಿಗೆ ಅಮೆರಿಕಕ್ಕೆ ನೀಡಲು ಕಡಿಮೆ ಅವಕಾಶವನ್ನು ಹೊಂದಿದ್ದಾರೆ’ ಎಂದು ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಉಪಾಧ್ಯಕ್ಷ ಮತ್ತು ದಕ್ಷಿಣ ಕೊರಿಯಾ-ಯುಎಸ್ ಮುಕ್ತ ವ್ಯಾಪಾರ ಒಪ್ಪಂದದ ಮಾಜಿ ಸಮಾಲೋಚಕ ವೆಂಡಿ ಕಟ್ಲರ್ ಹೇಳಿದ್ದಾರೆ.

    ಚೀನಾ ಫ್ರೆಂಡ್ಸ್‌ಗೆ ಶಾಕ್!
    ಟ್ರಂಪ್ ಟ್ಯಾರಿಫ್ ಹಾಕಿರುವ 14 ದೇಶಗಳಲ್ಲಿ ಆರು (ಮ್ಯಾನ್ಮಾರ್, ಲಾವೋಸ್, ಇಂಡೋನೇಷ್ಯಾ, ಕಾಂಬೋಡಿಯಾ, ಮಲೇಷ್ಯಾ, ಥೈಲ್ಯಾಂಡ್) ಚೀನಾದೊಂದಿಗೆ ನಿಕಟ ಸಂಬಂಧ ಹೊಂದಿರುವ ಆಸಿಯಾನ್ ಗುಂಪಿನ ಸದಸ್ಯರಾಗಿದ್ದಾರೆ. ರಫ್ತು ಮತ್ತು ಆಮದು ವಿಚಾರದಲ್ಲಿ ಹಲವು ದೇಶಗಳು ಲಾಭವನ್ನು ಪಡೆದುಕೊಳ್ಳುತ್ತಿವೆ. ಅಮೆರಿಕ ಜೊತೆಗಿನ ವ್ಯಾಪಾರದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿವೆ. ಹೀಗಾಗಿ, ಹೊಸ ಸುಂಕದ ಅಸ್ತ್ರ ಪ್ರಯೋಗಿಸಲಾಗುತ್ತಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

    ಮುಂದೇನು?
    ಟ್ರಂಪ್ ಆಗಾಗ್ಗೆ ತಪ್ಪುಗಳನ್ನು ಮಾಡುವುದರಿಂದ ಮತ್ತು ಈ ಸುಂಕಗಳನ್ನು ಮೊದಲು ವಿಧಿಸುವ ಅವರ ಅಧಿಕಾರವು ಅಮೆರಿಕದಲ್ಲಿ ಕಾನೂನು ಸವಾಲನ್ನು ಎದುರಿಸುತ್ತಿರುವುದರಿಂದ ಇದು ಸ್ಪಷ್ಟವಾಗಿಲ್ಲ. ಆದಾಗ್ಯೂ, ಸುಂಕಗಳು ಇತರ ದೇಶಗಳು ಅಮೆರಿಕದೊಂದಿಗೆ ಒಪ್ಪಂದಗಳನ್ನು ವೇಗವಾಗಿ ತೀರ್ಮಾನಿಸಲು ಪ್ರೇರೇಪಿಸುವ ಸಾಧ್ಯತೆಯಿದೆ. ಸುಂಕಕ್ಕೆ ಗುರಿಯಾಗಿಸಿಕೊಂಡ ದೇಶಗಳು ಮಾತುಕತೆಗಳನ್ನು ಮುಂದುವರಿಸಲು ಇಚ್ಛೆ ವ್ಯಕ್ತಪಡಿಸಿವೆ. ಇದನ್ನೂ ಓದಿ: ಟ್ರಂಪ್‌ 25% ಸುಂಕ ಹೇರಿದ್ರೂ ಭಾರತದ ಐಫೋನ್‌ ಚೀಪ್‌ – ಅಮೆರಿಕದ್ದು ದುಬಾರಿ

    ಸುಂಕಗಳು ಎಂದರೆ ದೇಶದ ಹೊರಗಿನಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವ ವ್ಯಾಪಾರಿಗಳು ಪಾವತಿಸುವ ಹೆಚ್ಚುವರಿ ತೆರಿಗೆಗಳು. ಹೆಚ್ಚಿನವು ಈ ಹೆಚ್ಚಿದ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ. ಎಲ್ಲಾ ಸುಂಕಗಳು ಜಾರಿಗೆ ಬಂದರೆ, ಅಮೆರಿಕದ ಗ್ರಾಹಕರು ಇತರ ದೇಶಗಳಿಂದ ಅಮೆರಿಕಕ್ಕೆ ಹೋಗುವ ಹಲವಾರು ಸರಕುಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ನಂತರ ಅವರು ಆ ಸರಕುಗಳನ್ನು ಖರೀದಿಸದಿರಲು ಅಥವಾ ಕಡಿಮೆ ಪ್ರಮಾಣದಲ್ಲಿ ಖರೀದಿಸಲು ಮುಂದಾಗಬಹುದು. ಇದು ರಫ್ತುದಾರರಿಗೆ ನಷ್ಟಕ್ಕೆ ಕಾರಣವಾಗಬಹುದು. ಬಾಂಗ್ಲಾದೇಶದಂತಹ ರಫ್ತು-ಚಾಲಿತ ಆರ್ಥಿಕತೆಗಳನ್ನು ಹೊಂದಿರುವ ದೇಶಗಳು ಈ ಸುಂಕಗಳಿಂದಾಗಿ ತೀವ್ರವಾಗಿ ಪರಿಣಾಮ ಬೀರುತ್ತವೆ. ಇತರ ರಾಷ್ಟ್ರಗಳಿಗೆ ಸ್ವಲ್ಪ ಪರಿಣಾಮ ಬೀರಬಹುದು.