Tag: US Open Tennis

  • ಕೋಪ ತಂದ ಸಂಕಷ್ಟ- ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ಹೊರಬಿದ್ದ ಜೊಕೊವಿಚ್

    ಕೋಪ ತಂದ ಸಂಕಷ್ಟ- ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ಹೊರಬಿದ್ದ ಜೊಕೊವಿಚ್

    ನ್ಯೂಯಾರ್ಕ್: ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್ ಕೋಪದಿಂದ ಮಾಡಿದ ಪ್ರಮಾದದಿಂದ ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ಹೊರ ಬಿದಿದ್ದಾರೆ.

    ಯುಎಸ್ ಟೆನಿಸ್ ಟೂರ್ನಿಯ ಟೈಟಲ್ ಗೆಲ್ಲುವ ಫೇವರಿಟ್ ಆಟಗಾರನಾಗಿದ್ದ ಜೊಕೊವಿಚ್, ಭಾನುವಾರ ರಾತ್ರಿ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೆಂಡನ್ನು ಲೈನ್ ಅಂಪೈರ್ ಗೆ ಎಸೆದು ಪ್ರಮಾದ ಎಸಗಿದ್ದರು. ಎದುರಾಳಿ ಸ್ಪೇನ್‍ನ ಪ್ಯಾಬ್ಲೊ ಕರೆನೊ ಎದುರು ಪಾಯಿಂಟ್ ಕಳೆದುಕೊಂಡ ವೇಳೆ ಉದ್ವೇಗಕ್ಕೆ ಒಳಗಾದ ಅವರು ಬ್ಯಾಟ್‍ನಿಂದ ಚೆಂಡನ್ನು ಅಂಪೈರ್ ಕಡೆಗೆ ಎಸೆದಿದ್ದರು. ಆದರೆ ಇದನ್ನು ಅಂಪೈರ್ ಊಹಿಸದ ಕಾರಣ ಚೆಂಡು ಅಂಪೈರ್ ಅವರ ಕುತ್ತಿಗೆಗೆ ಬಡಿದಿತ್ತು. ಕೂಡಲೇ ಅಂಪೈರ್ ಸ್ಥಳದಲ್ಲೇ ಕುಸಿದರು.

    ತಕ್ಷಣ ತಮ್ಮ ತಪ್ಪನ್ನು ಅರಿತುಕೊಂಡ ಜೊಕೊವಿಚ್ ಅಂಪೈರ್ ಬಳಿ ತೆರಳಿ ಅವರನ್ನು ಮೇಲೆತ್ತುವ ಕೆಲಸ ಮಾಡಿದರು. ಕೆಲ ಕಾಲ ಉಸಿರಾಡಲು ಸಮಸ್ಯೆ ಎದುರಿಸಿದ ಅಂಪೈರ್ ಆ ಬಳಿಕ ಎದ್ದು ನಡೆದರು. ಘಟನೆ ಬಳಿಕ ಪಂದ್ಯದ ರೆಫರಿ ಸೋರೆನ್ ಫ್ರೀಮೆಲ್, ಜೊಕೊವಿಚ್‍ರನ್ನು ಅನರ್ಯಗೊಳಿಸಿದರು. ಇದರಿಂದ ಅಸಮಾಧಾನದಿಂದಲೇ ಅವರು ಅಂಗಳದಿಂದ ಹೊರ ನಡೆದರು.

    ಆ ಬಳಿಕ ಟ್ವೀಟ್ ಮಾಡಿ ಕ್ಷಮೆ ತಿಳಿಸಿದ ಜೊಕೊವಿಚ್, ಘಟನೆಯಿಂದ ಬೇಸರವಾಗಿದ್ದು, ಮನಸ್ಸು ಭಾರವಾಗಿದೆ. ಮಹಿಳಾ ಅಂಪೈರ್ ಗೆ ಅಪಾಯ ಆಗಲಿಲ್ಲ ಎಂಬುದು ಮನಸ್ಸಿಗೆ ಸಮಾಧಾನ ತಂದಿದೆ. ಉದ್ವೇಗದ ವರ್ತನೆಗೆ ಕ್ಷಮೆ ಇರಲಿ ಎಂದು ಯುಎಸ್ ಓಪನ್ ನಿರ್ವಹಕರಿಗೆ ಕ್ಷಮೆ ತಿಳಿಸಿದ್ದಾರೆ. ಅಲ್ಲದೇ ಇನ್‍ಸ್ಟಾ ಲೈವ್‍ನಲ್ಲಿ ಮಾತನಾಡಿರುವ ಅವರು, ಈ ಘಟನೆ ನನಗೆ ಒಳ್ಳೆಯ ಗುಣಪಾಠವಾಗಿದೆ ಎಂದಿದ್ದಾರೆ.


    ಆಟಗಾರ ಪ್ರಮಾದಕರ ರೀತಿಯಲ್ಲಿ ಚೆಂಡನ್ನು ಎಸೆಯುವುದನ್ನು ಟೆನಿಸ್ ಕ್ರೀಡೆಯಲ್ಲಿ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜೊಕೊವಿಚ್ ಅವರು ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ ಎಂದು ಕ್ರಮಕೈಗೊಳ್ಳಲಾಗಿದೆ. ಇದರಿಂದ ನಾಲ್ಕನೇ ಬಾರಿ ಯುಎಸ್ ಓಪನ್ ಗೆಲ್ಲಬೇಕೆಂಬ ಜೊಕೊವಿಚ್ ಆಸೆಗೆ ಬ್ರೇಕ್ ಬಿದಿದ್ದೆ.