Tag: US Court

  • ಆಮದು ಸುಂಕ ಕಾನೂನುಬಾಹಿರ: ಟ್ರಂಪ್‌ಗೆ ಯುಎಸ್‌ ಕೋರ್ಟ್‌ನಿಂದಲೇ ಛೀಮಾರಿ

    ಆಮದು ಸುಂಕ ಕಾನೂನುಬಾಹಿರ: ಟ್ರಂಪ್‌ಗೆ ಯುಎಸ್‌ ಕೋರ್ಟ್‌ನಿಂದಲೇ ಛೀಮಾರಿ

    – ಭಾರತ ಸೇರಿ ಹಲವು ದೇಶಗಳ ಮೇಲೆ ಮಿತಿ ಮೀರಿದ ಟ್ಯಾರಿಫ್ ಹೇರಿರುವ ಟ್ರಂಪ್

    ವಾಷಿಂಗ್ಟನ್: ಆಮದು ಸುಂಕ (Tariff) ಕಾನೂನು ಬಾಹಿರ ಎಂದು ಯುಎಸ್‌ ಕೋರ್ಟ್‌ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ನಿರ್ಧಾರಕ್ಕೆ ಕೋರ್ಟ್‌ ಛೀಮಾರಿ ಹಾಕಿದೆ.

    ಟ್ರಂಪ್‌ ನಿರ್ಧಾರಕ್ಕೆ ವಾಷಿಂಗ್ಟನ್‌ನ ಫೆಡರಲ್ ಮೇಲ್ಮನವಿ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಕೆಳ ನ್ಯಾಯಾಲಯದ ತೀರ್ಪನ್ನು ನ್ಯಾಯಾಲಯವು ಅನುಮೋದಿಸಿದ್ದು, ಟ್ರಂಪ್ ವಿಧಿಸಿರುವ ಹೆಚ್ಚಿನ ಆಮದು ಸುಂಕಗಳು ಕಾನೂನುಬಾಹಿರ ಎಂದು ಹೇಳಿದೆ. ಈ ಸಂದರ್ಭದಲ್ಲಿ ಈ ಅಧಿಕಾರವನ್ನು ಬಳಸಲು ಅಧ್ಯಕ್ಷರ ಅಧಿಕಾರವನ್ನು ನ್ಯಾಯಾಲಯವು ಪ್ರಶ್ನಿಸಿದೆ.

    ಫೆಡರಲ್ ಮೇಲ್ಮನವಿ ನ್ಯಾಯಾಲಯವು ಅಮೆರಿಕ ಅಧ್ಯಕ್ಷರು ತುರ್ತು ಅಧಿಕಾರಗಳ ದುರುಪಯೋಗದ ಬಗ್ಗೆ ಮಾತನಾಡಿದೆ. 11 ನ್ಯಾಯಾಧೀಶರ ಪೀಠದಲ್ಲಿ, 7 ನ್ಯಾಯಾಧೀಶರು ಟ್ರಂಪ್ ಅವರ ಸುಂಕ ವಿಧಿಸುವ ನಿರ್ಧಾರವನ್ನು ಕಾನೂನುಬಾಹಿರವೆಂದು ಘೋಷಿಸಿದರೆ, 4 ನ್ಯಾಯಾಧೀಶರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಆದೇಶ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಶ್ವೇತ ಭವನ ನಿರ್ಧರಿಸಿದೆ.

    ಇತರೆ ದೇಶಗಳ ಮೇಲೆ ವಿಧಿಸಿರುವ ಎಲ್ಲಾ ಸುಂಕಗಳು ಜಾರಿಯಲ್ಲಿರುತ್ತವೆ. ಒಂದು ವೇಳೆ ಟ್ಯಾರಿಫ್‌ ತೆಗೆದುಹಾಕಿದರೆ, ದೇಶಕ್ಕೆ ಹಾನಿಕಾರಕ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುನರುಚ್ಚರಿಸಿದ್ದಾರೆ. ‌ಟ್ರಂಪ್ ಅವರ ಹಲವು ಸುಂಕಗಳು ಕಾನೂನುಬಾಹಿರ ಎಂದು ಯುಎಸ್ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ.

    ಎಲ್ಲಾ ಸುಂಕಗಳು ಇನ್ನೂ ಜಾರಿಯಲ್ಲಿವೆ. ಇಂದು ಅತ್ಯಂತ ಪಕ್ಷಪಾತದ ಮೇಲ್ಮನವಿಗೆ ನ್ಯಾಯಾಲಯವು ನಮ್ಮ ಸುಂಕಗಳನ್ನು ತೆಗೆದುಹಾಕಬೇಕು ಎಂದು ತಪ್ಪಾಗಿ ಹೇಳಿದೆ. ಆದರೆ, ಕೊನೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಗೆಲ್ಲುತ್ತದೆ ಎಂದು ಅವರಿಗೆ ತಿಳಿದಿದೆ. ಈ ಸುಂಕಗಳು ಎಂದಾದರೂ ರದ್ದಾದರೆ, ಅದು ದೇಶಕ್ಕೆ ವಿಪತ್ತು. ಅದು ನಮ್ಮನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತದೆ. ನಾವು ಬಲಿಪಶು ಆಗಬೇಕಾಗುತ್ತದೆ ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.

    ನಮ್ಮ ತಯಾರಕರು, ರೈತರು ಮತ್ತು ಎಲ್ಲರನ್ನೂ ದುರ್ಬಲಗೊಳಿಸುವ ಅನ್ಯಾಯದ ಸುಂಕಗಳನ್ನು ನಾವು ಒಪ್ಪಲ್ಲ. ಇತರ ದೇಶಗಳು, ಅವರು ಮಿತ್ರರಾಗಿರಲಿ ಅಥವಾ ವೈರಿಯಾಗಿರಲಿ ವಿಧಿಸುವ ಸುಂಕೇತರ ವ್ಯಾಪಾರ ಅಡೆತಡೆಗಳನ್ನು ಅಮೆರಿಕ ಇನ್ಮುಂದೆ ಸಹಿಸುವುದಿಲ್ಲ. ಒಂದು ವೇಳೆ ಈ ನಿರ್ಧಾರವನ್ನು (ಟ್ಯಾರಿಫ್) ತಡೆಯಲು ಮುಂದಾದರೆ, ಅಕ್ಷರಶಃ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ನಾಶಪಡಿಸಿದಂತೆ ಎಂದು ಟ್ರಂಪ್‌ ಹೇಳಿದ್ದಾರೆ.

    ಸುಂಕಗಳು ಕಾರ್ಮಿಕರಿಗೆ ಸಹಾಯ ಮಾಡಲು ಮತ್ತು ‘ಮೇಡ್ ಇನ್ ಅಮೆರಿಕ’ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಗಳನ್ನು ಬೆಂಬಲಿಸಲು ಅತ್ಯುತ್ತಮ ಸಾಧನವಾಗಿದೆ ಎಂದು ಟ್ರಂಪ್‌ ನಿಲುವು.

    ಹಲವು ವರ್ಷಗಳಿಂದ ಕಾಳಜಿಯಿಲ್ಲದ ಮತ್ತು ಅವಿವೇಕದ ರಾಜಕಾರಣಿಗಳು ಸುಂಕಗಳನ್ನು ನಮ್ಮ ವಿರುದ್ಧವೇ ಬಳಸಲು ಅನುಮತಿಸಿದ್ದರು. ಈಗ ಯುನೈಟೆಡ್ ಸ್ಟೇಟ್ಸ್ ಸುಪ್ರೀಂ ಕೋರ್ಟ್ ಸಹಾಯದಿಂದ, ಅವುಗಳನ್ನು ನಮ್ಮ ರಾಷ್ಟ್ರದ ಪ್ರಯೋಜನಕ್ಕಾಗಿ ಬಳಸುತ್ತೇವೆ. ಅಮೆರಿಕವನ್ನು ಮತ್ತೆ ಶ್ರೀಮಂತ, ಬಲಿಷ್ಠ ಮತ್ತು ಶಕ್ತಿಶಾಲಿಯನ್ನಾಗಿ ಮಾಡುತ್ತೇವೆ ಎಂದು ಟ್ರಂಪ್‌ ಪ್ರತಿಜ್ಞೆ ಮಾಡಿದ್ದಾರೆ.

  • ಮುಂಬೈ ಟೆರರ್ ಅಟ್ಯಾಕ್ – ಪಾಕ್ ಮೂಲದ ರಾಣಾ ಹಸ್ತಾಂತರಕ್ಕೆ ಯುಎಸ್ ಕೋರ್ಟ್ ಅಸ್ತು

    ಮುಂಬೈ ಟೆರರ್ ಅಟ್ಯಾಕ್ – ಪಾಕ್ ಮೂಲದ ರಾಣಾ ಹಸ್ತಾಂತರಕ್ಕೆ ಯುಎಸ್ ಕೋರ್ಟ್ ಅಸ್ತು

    ವಾಷಿಂಗ್ಟನ್: 2008ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ (Mumbai Terror Attack) ಭಾಗಿಯಾಗಿರುವ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾನನ್ನು (Tahawwur Rana) ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಅಮೆರಿಕ ಕೋರ್ಟ್ (US Court) ತೀರ್ಪು ನೀಡಿದೆ.

    ಎರಡು ದೇಶಗಳ ನಡುವಿನ (ಭಾರತ-ಯುಎಸ್ ಹಸ್ತಾಂತರ) ಒಪ್ಪಂದವು ರಾಣಾ ಹಸ್ತಾಂತರಕ್ಕೆ ಅನುಮತಿ ನೀಡುತ್ತದೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ. ಈ ತೀರ್ಪಿನಿಂದ ರಾಣಾಗೆ ತೀವ್ರ ಹಿನ್ನಡೆಯಾಗಿದೆ.

    ರಾಣಾ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಆಪಾದಿತ ರಾಣಾ ಎಸಗಿದ ಅಪರಾಧ ಅಮೆರಿಕ ಮತ್ತು ಭಾರತದ ನಡುವಿನ ಹಸ್ತಾಂತರ ಒಪ್ಪಂದದ ನಿಯಮಗಳಿಗೆ ಒಳಪಟ್ಟಿದೆ ಎಂದು ಅಭಿಪ್ರಾಯಪಟ್ಟಿದೆ. ರಾಣಾ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಭಾರತವು ಸಾಕಷ್ಟು ಸಮರ್ಥ ಪುರಾವೆಗಳನ್ನು ಒದಗಿಸಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಣಾಗೆ ಅವಕಾಶವಿದೆ.

    2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನ್ಯಾಯಾಲಯ ಈ ಹಿಂದೆ ಅನುಮೋದನೆ ನೀಡಿತ್ತು. ಇದರ ವಿರುದ್ಧ ಆತ ಮತ್ತೆ ಕಾನೂನಿನ ಮೊರೆ ಹೋಗಿದ್ದ.

    ಮುಂಬೈನ ತಾಜ್ ಹೋಟೆಲ್ ಮತ್ತು ಪ್ರಮುಖ ಸ್ಥಳಗಳ ಮೇಲೆ ನಡೆದಿದ್ದ ದಾಳಿಯಲ್ಲಿ 6 ಅಮೆರಿಕನ್ನರು ಸೇರಿದಂತೆ 160 ಜನ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣಾನನ್ನು ಅಮೆರಿಕದಲ್ಲಿ ಬಂಧಿಸಲಾಗಿತ್ತು.