Tag: US

  • ವಲಸಿಗರ ಜಾಬ್ ಲೈಸೆನ್ಸ್ ಸ್ವಯಂ ನವೀಕರಣ ವ್ಯವಸ್ಥೆ ರದ್ದುಗೊಳಿಸಿದ ಯುಎಸ್

    ವಲಸಿಗರ ಜಾಬ್ ಲೈಸೆನ್ಸ್ ಸ್ವಯಂ ನವೀಕರಣ ವ್ಯವಸ್ಥೆ ರದ್ದುಗೊಳಿಸಿದ ಯುಎಸ್

    ವಾಷಿಂಗ್ಟನ್: ಹೆಚ್-1ಬಿ ವೀಸಾ (H-1B Visa) ಶುಲ್ಕ ಏರಿಸಿದ ಅಮೆರಿಕ ಇದೀಗ ವಲಸಿಗರ ಕೆಲಸದ ಪರವಾನಗಿಯ ಸ್ವಯಂ ನವೀಕರಣ ವ್ಯವಸ್ಥೆಯನ್ನು ರದ್ದುಗೊಳಿಸಿದೆ.

    ಅಮೆರಿಕದ (America) ಗೃಹ ಭದ್ರತಾ ಇಲಾಖೆ ವಲಸೆ ಕಾರ್ಮಿಕರ ಉದ್ಯೋಗಾಧಿಕಾರ ದಾಖಲೆಗಳ ಸ್ವಯಂಚಾಲಿತ ನವೀಕರಣ ವ್ಯವಸ್ಥೆಯನ್ನು ರದ್ದುಪಡಿಸಿದೆ. ಇದರ ಪರಿಣಾಮ ಭಾರತೀಯ ವಲಸಿಗರ ಮೇಲೆ ಸಾಧ್ಯತೆ ಇದೆ. ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್ ಶೇ. 57ರಿಂದ 47ಕ್ಕೆ ಇಳಿಸಿದ ಟ್ರಂಪ್

    ಹೊಸ ನಿಯಮದ ಪ್ರಕಾರ, ಅಕ್ಟೋಬರ್ 30 ರಿಂದ ಅಥವಾ ಅದರ ನಂತರ ತಮ್ಮ ಎಂಪ್ಲಾಯ್‌ಮೆಂಟ್ ಅಥಾರಿಟಿ ಡಾಕ್ಯುಮೆಂಟ್ (EADs) ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವವರು ಇನ್ನು ಮುಂದೆ ಸ್ವಯಂಚಾಲಿತ ವಿಸ್ತರಣೆಗೆ ಅರ್ಹರಾಗಿರುವುದಿಲ್ಲ.

    ಇನ್ನು, ಆರು ವರ್ಷಗಳ ನಂತರ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್‌ಪಿಂಗ್‌ರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಿದ್ದಾರೆ. ಈ ವೇಳೆ ಚೀನಾ ವಸ್ತುಗಳ ಮೇಲೆ ಹೇರಿರುವ 57% ರಷ್ಟು ಟ್ಯಾರಿಫ್ ಅನ್ನು 47% ಗೆ ಇಳಿಸಲಾಗುವುದು ಎಂದು ಟ್ರಂಪ್ ಘೋಷಿಸಿದ್ದಾರೆ.

  • ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ – ಮೋದಿ ಭರವಸೆ ಕೊಟ್ಟಿದ್ದಾರೆ ಎಂದ ಟ್ರಂಪ್‌ಗೆ ತಿರುಗೇಟು

    ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ – ಮೋದಿ ಭರವಸೆ ಕೊಟ್ಟಿದ್ದಾರೆ ಎಂದ ಟ್ರಂಪ್‌ಗೆ ತಿರುಗೇಟು

    * ಮೋದಿ-ಟ್ರಂಪ್ ಮಧ್ಯೆ ದೂರವಾಣಿ ಸಂಭಾಷಣೆ ನಡೆದಿಲ್ಲ: ವಿದೇಶಾಂಗ ಸಚಿವಾಲಯ ಸ್ಪಷ್ಟನೆ

    ನವದೆಹಲಿ: ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ ಅಂತ ಪ್ರಧಾನಿ ಮೋದಿ (PM Modi) ಭರವಸೆ ಕೊಟ್ಟಿದ್ದಾರೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿಕೆಗೆ ಭಾರತ ತಿರುಗೇಟು ನೀಡಿದೆ.

    ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ ಅಂತ ಮೋದಿ ಭರವಸೆ ಕೊಟ್ಟಿದ್ದಾರೆ. ಇದೊಂದು ದೊಡ್ಡ ಹೆಜ್ಜೆಯಾಗಿದೆ ಎಂದಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಮೋದಿ-ಟ್ರಂಪ್ ಮಧ್ಯೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಭಾರತದ ಆರ್ಥಿಕತೆಗೆ ರಷ್ಯಾದ ತೈಲ ಮುಖ್ಯ, ನಮ್ಮ ಸಂಬಂಧ ನಂಬಿಕೆ ಮೇಲೆ ಕಟ್ಟಿರುವ ಸೇತುವೆ: ರಷ್ಯಾ

    ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯೆ ನೀಡಿದ್ದು, ಭಾರತದ ಆಮದು ನೀತಿಗಳು ದೇಶದ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಮಾರ್ಗದರ್ಶಿಸಲ್ಪಡುತ್ತವೆ. ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ಸರ್ಕಾರದ ಸ್ಥಿರ ಆದ್ಯತೆಯಾಗಿದೆ ಎಂದಿದ್ದಾರೆ.

    ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಪ್ರತಿಕ್ರಿಯಿಸಿ, ಮಾಸ್ಕೋ ಜೊತೆಗಿನ ಭಾರತದ ಇಂಧನ ಸಹಕಾರವು ಅದರ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅನುಗುಣವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ, ಮೋದಿ ನನಗೆ ಭರವಸೆ ನೀಡಿದ್ದಾರೆ: ಟ್ರಂಪ್‌

    ಈ ಮಧ್ಯೆ, ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಹೆದರುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಟ್ರಂಪ್‌ಗೆ ಭರವಸೆ ನೀಡಿದ್ದಕ್ಕೆ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದು, ಟ್ರಂಪ್ ಹೇಳಿಕೆಗಳಿಗೆ ಮೋದಿ ಏಕೆ ಖಂಡನೆ ವ್ಯಕ್ತಪಡಿಸುವುದಿಲ್ಲ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.

  • ಚೀನಾ ಮೇಲೆ 100% ಸುಂಕ ವಿಧಿಸಿದ ಟ್ರಂಪ್‌

    ಚೀನಾ ಮೇಲೆ 100% ಸುಂಕ ವಿಧಿಸಿದ ಟ್ರಂಪ್‌

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಚೀನಾದ (China) ಮೇಲೆ ಹೆಚ್ಚುವರಿ ಶೇ.100 ರಷ್ಟು ಸುಂಕವನ್ನು (Tariff) ಘೋಷಿಸಿದ್ದಾರೆ.

    ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಶೃಂಗಸಭೆಯನ್ನು ರದ್ದುಗೊಳಿಸುವುದಾಗಿ ಟ್ರಂಪ್ ತಿಳಿಸಿದ್ದಾರೆ. ಅಪರೂಪದ ಭೂಮಿಯ ಖನಿಜಗಳ ಮೇಲಿನ ರಫ್ತು ನಿರ್ಬಂಧಕ್ಕೆ ಸಂಬಂಧಿಸಿದಂತೆ ಚೀನಾ ಜೊತೆಗಿನ ಅಮೆರಿಕ ವ್ಯಾಪಾರ ಯುದ್ಧವನ್ನು ಮತ್ತೆ ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ವಿದೇಶಿ ಸಿನಿಮಾಗಳ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌

    ಚೀನಾ ಕೆಲವೊಂದು ಅಸಾಧಾರಣ ಕ್ರಮಗಳನ್ನು ಕೈಗೊಂಡಿದೆ. ಅದಕ್ಕೆ ಪ್ರತಿಕಾರವಾಗಿ, ಎಲ್ಲಾ ನಿರ್ಣಾಯಕ ಸಾಫ್ಟ್‌ವೇರ್‌ಗಳ ಮೇಲಿನ ಹೆಚ್ಚುವರಿ ಸುಂಕಗಳು ನ.1ರಿಂದಲೇ ಜಾರಿಗೆ ಬರಲಿವೆ. ಯುಎಸ್‌ ರಫ್ತು ನಿಯಂತ್ರಣಗಳು ಸಹ ಜಾರಿಗೆ ಬರಲಿವೆ ಎಂದು ಟ್ರೂತ್‌ ಸೋಷಿಯಲ್‌ನಲ್ಲಿ ಟ್ರಂಪ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ.

    ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧ ಮತ್ತೆ ಭುಗಿಲೆದ್ದಂತೆ ಷೇರು ಮಾರುಕಟ್ಟೆಗಳು ಕುಸಿತ ಕಂಡಿವೆ. ನಾಸ್ಡಾಕ್ ಶೇ.3.6 ರಷ್ಟು ಮತ್ತು ಎಸ್ & ಪಿ 500 ಶೇ.2.7 ರಷ್ಟು ಕುಸಿದಿವೆ. ಇದನ್ನೂ ಓದಿ: ಚೀನಾ ಮೇಲೆ 50-100% ಸುಂಕ ವಿಧಿಸಲು ಟ್ರಂಪ್‌ ಕರೆ

    ಫೆಂಟನಿಲ್ ವ್ಯಾಪಾರದಲ್ಲಿ ಚೀನಾ ಸಹಾಯ ಮಾಡುತ್ತಿದೆ ಎಂದು ಆರೋಪಿಸಿ ಈಗಾಗಲೇ ಟ್ರಂಪ್ ಸುಂಕ ಹೇರಿದ್ದರು. ಹೀಗಾಗಿ, ಚೀನಾದ ಸರಕುಗಳು ಪ್ರಸ್ತುತ ಯುಎಸ್ ಶೇ.30 ರಷ್ಟು ಸುಂಕವನ್ನು ಎದುರಿಸುತ್ತಿವೆ.

  • ಅಮೆರಿಕ ಧ್ವಜ ಸುಟ್ಟರೆ ತಕ್ಷಣ ಬಂಧನ, 1 ವರ್ಷ ಜೈಲು ಶಿಕ್ಷೆ: ಡೊನಾಲ್ಡ್‌ ಟ್ರಂಪ್‌ ಆದೇಶ

    ಅಮೆರಿಕ ಧ್ವಜ ಸುಟ್ಟರೆ ತಕ್ಷಣ ಬಂಧನ, 1 ವರ್ಷ ಜೈಲು ಶಿಕ್ಷೆ: ಡೊನಾಲ್ಡ್‌ ಟ್ರಂಪ್‌ ಆದೇಶ

    ವಾಷಿಂಗ್ಟನ್‌: ಅಮೆರಿಕ ರಾಷ್ಟ್ರಧ್ವಜವನ್ನು (American Flag) ಸುಟ್ಟು ಹಾಕಿದರೆ, ಅಂತಹವರನ್ನು ತಕ್ಷಣವೇ ಬಂಧಿಸಿ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಆದೇಶಿಸಿದ್ದಾರೆ.

    ಧ್ವಜ ಅಪವಿತ್ರಗೊಳಿಸುವ ಕುರಿತಾದ ತನ್ನ ಕಾರ್ಯಕಾರಿ ಆದೇಶದಲ್ಲಿ, ‘ICE, ಗಡಿ ಗಸ್ತು, ಲಾ ಎನ್‌ಫೋರ್ಸ್‌ಮೆಂಟ್ ಮತ್ತು ಎಲ್ಲಾ US ಮಿಲಿಟರಿ ಎಲ್ಲರೂ ಗಮನಿಸಿ.. ಅಮೆರಿಕನ್ ಧ್ವಜವನ್ನು ಸುಡುವವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದನ್ನೂ ಓದಿ: ವಿದೇಶಿ ಸಿನಿಮಾಗಳ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌

    ಧ್ವಜ ಅಪವಿತ್ರಗೊಳಿಸುವವರನ್ನು ಶಿಕ್ಷಿಸಲು ಟ್ರಂಪ್ ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದರು. ಈಗ ತಮ್ಮ ಸರ್ಕಾರದ ಅವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ತೀಕ್ಷ್ಣಗೊಳಿಸಲು ಟ್ರಂಪ್‌ ಮುಂದಾಗಿದ್ದಾರೆ ಎನ್ನಲಾಗಿದೆ.

    ನಮ್ಮ ದೇಶದ ಶ್ರೇಷ್ಠತೆಯ ವಿಶೇಷ ಸಂಕೇತವಾದ ಅಮೆರಿಕನ್ ಧ್ವಜವನ್ನು ಅಮೆರಿಕನ್ನರ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಹಿಂಸಾಚಾರ ಮತ್ತು ಗಲಭೆಗಳನ್ನು ಪ್ರಚೋದಿಸಲು ಒಂದು ಸಾಧನವಾಗಿ ಬಳಸಲು ಅಧ್ಯಕ್ಷ ಟ್ರಂಪ್ ಅನುಮತಿಸುವುದಿಲ್ಲ ಎಂದು ಶ್ವೇತಭವನದ ವಕ್ತಾರ ಅಬಿಗೈಲ್ ಜಾಕ್ಸನ್ ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್‌ ಒಪ್ಪಿಗೆ

    ಟ್ರಂಪ್‌ ಅವರ ಈ ಆದೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಇಲಾಖೆ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.

  • ಅಮೆರಿಕದ ಹೆಚ್‌-1ಬಿ ವೀಸಾಗೆ ಟಕ್ಕರ್‌ ಕೊಡಲು ಬರ್ತಿದೆ ಚೀನಾದ ಕೆ-ವೀಸಾ; ಭಾರತೀಯರಿಗೆ ಲಾಭ?

    ಅಮೆರಿಕದ ಹೆಚ್‌-1ಬಿ ವೀಸಾಗೆ ಟಕ್ಕರ್‌ ಕೊಡಲು ಬರ್ತಿದೆ ಚೀನಾದ ಕೆ-ವೀಸಾ; ಭಾರತೀಯರಿಗೆ ಲಾಭ?

    ‘ಅಮೆರಿಕ ಮೊದಲು’ ಎನ್ನುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್-1ಬಿ ವೀಸಾಗೆ (H-1B Visa) ಹೊಸ ನಿಯಮ ರೂಪಿಸಿ, ತನ್ನ ದೇಶಕ್ಕೆ ಹೆಚ್ಚಾಗಿ ಬರುತ್ತಿದ್ದ ವಿದೇಶಿ ಪ್ರತಿಭೆಗಳ ನಿರ್ಬಂಧಕ್ಕೆ ಮುಂದಾಗಿದ್ದಾರೆ. ಹೆಚ್-1ಬಿ ವೀಸಾ ಶುಲ್ಕವನ್ನು ಹೆಚ್ಚಿಸಿದ್ದು, ಅಮೆರಿಕದಲ್ಲಿ ಕೆಲಸ ಮಾಡಿ ಹೆಚ್ಚು ಹಣ ಸಂಪಾದಿಸಬೇಕೆಂಬ ವಿದೇಶಿ ಟೆಕ್ಕಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ. ಟ್ರಂಪ್ ನಿಲುವಿನಿಂದ ಭಾರತ, ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಹೊಡೆತ ಬಿದ್ದಿದೆ. ಈಗ ಅಮೆರಿಕಗೆ ಟಕ್ಕರ್ ಕೊಡಲು ಚೀನಾ ‘ಕೆ-ವೀಸಾ’ (K Visa) ಜಾರಿಗೆ ಸಿದ್ಧತೆ ನಡೆಸಿದೆ. ಯುಎಸ್ ಬೇಡ, ನಮ್ಮ ದೇಶಕ್ಕೆ ಬನ್ನಿ.. ಒಳ್ಳೆಯ ಉದ್ಯೋಗಾವಕಾಶ ನೀಡುತ್ತೇವೆಂದು ವಿದೇಶಗಳ ಪರಿಣತರಿಗೆ ಆಹ್ವಾನ ನೀಡಲು ಡ್ರ್ಯಾಗನ್ ರಾಷ್ಟ್ರ ಮುಂದಾಗಿದೆ. ಈ ಬೆಳವಣಿಗೆ ಜಾಗತಿಕ ಪ್ರತಿಭಾ ಸ್ಪರ್ಧೆಯಲ್ಲಿ ನಾಟಕೀಯ ತಿರುವು ಪಡೆದುಕೊಂಡಿದೆ. ಏನಿದು ಕೆ ವೀಸಾ? ಇದು ಯಾವಾಗ ಜಾರಿಯಾಗುತ್ತೆ? ಇದರ ಉದ್ದೇಶ ಏನು? ಭಾರತೀಯರಿಗೆ ಇದರಿಂದ ಲಾಭ ಇದ್ಯಾ? ಮೊದಲಾದ ಪ್ರಶ್ನೆಗಳಿಗೆ ಇಲ್ಲಿದೆ ವಿವರ.

    ಯುಎಸ್ ವರ್ಸಸ್ ಚೀನಾ
    H-1B ವೀಸಾಗಳಿಗೆ 100,000 ಡಾಲರ್ ಶುಲ್ಕವನ್ನು ಟ್ರಂಪ್ ವಿಧಿಸಿದ್ದಾರೆ. ಅಮೆರಿಕದ ವೀಸಾ ನೀತಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಆದರೂ, ಚೀನಾ ಪ್ರಪಂಚದಾದ್ಯಂತದ ಅತ್ಯುತ್ತಮ ಪ್ರತಿಭೆಗಳನ್ನು ಸ್ವಾಗತಿಸುತ್ತದೆ ಎಂದು ಹೇಳಿದೆ. ಅದಕ್ಕೆ ಕೆ-ವೀಸಾ ಜಾರಿಗೆ ಕ್ರಮವಹಿಸಿದೆ. ಅದನ್ನು ಹೊರತರುವ ಪ್ರಕ್ರಿಯೆಯಲ್ಲಿದೆ. ಪ್ರವೇಶ-ನಿರ್ಗಮನ ನಿಯಮಗಳಿಗೆ ಹೊಸ ತಿದ್ದುಪಡಿಗಳ ಮೂಲಕ ದೇಶದ 13 ನೇ ಸಾಮಾನ್ಯ ವೀಸಾವಾಗಿ ಕೆ-ವೀಸಾವನ್ನು ಚೀನಾ ಪರಿಚಯಿಸಲಿದೆ. STEM (Science, technology, engineering, and mathematics) ಕ್ಷೇತ್ರದಲ್ಲಿ ಕನಿಷ್ಠ ಪದವಿ ಹೊಂದಿರುವ, ಸಂಶೋಧನೆ, ಶಿಕ್ಷಣ ಅಥವಾ ತಂತ್ರಜ್ಞಾನ ನಾವೀನ್ಯತೆಯಲ್ಲಿ ತೊಡಗಿಸಿಕೊಂಡಿರುವ ವಿದೇಶಿ ಯುವ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರತಿಭೆಗಳಿಗೆ ಈ ವೀಸಾದಡಿ ಅವಕಾಶ ಸಿಗಲಿದೆ. ಇದನ್ನೂ ಓದಿ: ಅಮೆರಿಕದ H-1B ವೀಸಾ ಹೊಡೆತ ಬೆನ್ನಲ್ಲೇ ಕೌಶಲ್ಯಪೂರ್ಣ ಭಾರತೀಯರಿಗೆ ಜರ್ಮನಿ ಸ್ವಾಗತ

    ಏನಿದು ಕೆ-ವೀಸಾ?
    ಚೀನಾದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ವೀಸಾ ವರ್ಗಗಳಿಗೆ ಹೋಲಿಸಿದರೆ, ಕೆ-ವೀಸಾ ಭಿನ್ನವಾಗಿರಲಿದೆ. ಈ ವೀಸಾ ಹೊಂದಿರುವವರು ಬಹು ವಲಯಗಳಿಗೆ ಪ್ರವೇಶ, ವಿಸ್ತೃತ ಮಾನ್ಯತೆ ಮತ್ತು ದೀರ್ಘಾವಧಿಯ ವಾಸ್ತವ್ಯಗಳನ್ನು ಆನಂದಿಸಬಹುದು. ಇದರ ವ್ಯಾಪ್ತಿಯು ವ್ಯಾಪಕವಾದ ಚಟುವಟಿಕೆಗಳನ್ನು ಒಳಗೊಂಡಿದೆ. ಉದ್ಯಮಶೀಲತೆ, ವ್ಯವಹಾರ, ಶೈಕ್ಷಣಿಕ ಸಂಶೋಧನೆ ಮತ್ತು ಸಾಂಸ್ಕೃತಿಕ ಅಥವಾ ವೈಜ್ಞಾನಿಕ ಕ್ಷೇತ್ರ ಇದರ ವ್ಯಾಪ್ತಿಗೆ ಬರುತ್ತವೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಸಂಶೋಧನೆಯಲ್ಲಿ ಯುವ ವೃತ್ತಿಪರರನ್ನು ಆಕರ್ಷಿಸಲು ಚೀನಾದ ಕೆ-ವೀಸಾವನ್ನು ಜಾರಿಗೆ ತರುತ್ತಿದೆ. ಅಂತರರಾಷ್ಟ್ರೀಯ ಪ್ರತಿಭೆಗಳು ಚೀನಾದಲ್ಲಿ ಶೈಕ್ಷಣಿಕ, ಸಂಶೋಧನೆ ಮತ್ತು ಉದ್ಯಮಶೀಲ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಸುಲಭಗೊಳಿಸುವ ಮೂಲಕ ಅದರ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಚೀನಾ ಸರ್ಕಾರದ ಉದ್ದೇಶವಾಗಿದೆ.

    ಹೊಸ ವೀಸಾ ಜಾರಿ ಯಾವಾಗ?
    ಕೆ-ವೀಸಾ ಇದೇ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಇದರ ಅರ್ಹತಾ ಮಾನದಂಡಗಳನ್ನು ಚೀನಾದ ಅಧಿಕಾರಿಗಳು ಇನ್ನೂ ಅಂತಿಮಗೊಳಿಸಿಲ್ಲ. ಆದರೆ, ಪ್ರಮುಖ ಷರತ್ತುಗಳನ್ನು ಒಳಗೊಂಡಿರುತ್ತವೆ. ಮಾನ್ಯತೆ ಪಡೆದ ಸಂಸ್ಥೆಯಿಂದ STEM ಪದವಿ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಅಥವಾ ಗಣಿತ), ಸಂಶೋಧನೆ ವಲಯದವರಿಗೆ ವೀಸಾ ಸಿಗಲಿದೆ. ಅಸ್ತಿತ್ವದಲ್ಲಿರುವ ಅನೇಕ ಕೆಲಸದ ವೀಸಾಗಳಿಗಿಂತ ಇದು ಭಿನ್ನ. ಆದರೆ, ವಯಸ್ಸಿನ ಮಿತಿ, ವಾಸ್ತವ್ಯದ ಅವಧಿ, ದೀರ್ಘಾವಧಿಯ ನಿವಾಸ ಅಥವಾ ಶಾಶ್ವತ ಪೌರತ್ವಕ್ಕೆ ಮಾರ್ಗಗಳು ಮತ್ತು ಉದ್ಯಮದ ವಿವರಗಳನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ. ಇದನ್ನೂ ಓದಿ: PublicTV Explainer: ಭಾರತದ ಯುವ ಪ್ರತಿಭೆಗಳಿಗೆ ಅಮೆರಿಕ ವೀಸಾ ತಡೆಗೋಡೆ?; ಏನಿದು H-1B ವೀಸಾ ಹೊಸ ರೂಲ್ಸ್‌?

    ಜಾಗತಿಕ ಪ್ರತಿಭಾ ಸಮರ
    ಅಮೆರಿಕವು ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ತನ್ನ ವೀಸಾ ಮಾನದಂಡಗಳನ್ನು ಬಿಗಿಗೊಳಿಸುತ್ತಿರುವ ಸಮಯದಲ್ಲಿ ಚೀನಾ ಕೆ-ವೀಸಾವನ್ನು ಅನಾವರಣಗೊಳಿಸುತ್ತಿದೆ. ಅಮೆರಿಕದ ನಿಲುವು ಜಾಗತಿಕ ವೃತ್ತಿಪರರಲ್ಲಿ ಆತಂಕವನ್ನುಂಟುಮಾಡುತ್ತಿದೆ. 100,000 ಡಾಲರ್ H-1B ವೀಸಾ ಶುಲ್ಕವು ವಿದೇಶಿ ತಾಂತ್ರಿಕ ಪ್ರತಿಭೆಗಳು ಮತ್ತು ಸಣ್ಣ ನವೋದ್ಯಮಗಳಿಗೆ ನಿರುತ್ಸಾಹಗೊಳಿಸುತ್ತಿದೆ ಎಂದು ಟೀಕಿಸಲಾಗಿದೆ. ಆದರೆ, ಈಗ ಚೀನಾದ ಕೆ-ವೀಸಾ ವಲಸೆ ವೃತ್ತಿಪರರನ್ನು ಮಾತ್ರವಲ್ಲದೆ ಪ್ರಪಂಚದಾದ್ಯಂತದ ಪರಿಣತ ಯುವ ಮನಸ್ಸುಗಳನ್ನು ಆಕರ್ಷಿಸಲು ಸಕಾಲಿಕ. ವಿಶೇಷವಾಗಿ ಭಾರತಕ್ಕೆ ಇದು ವರದಾನವಾಗುವ ಸಾಧ್ಯತೆ ಇದೆ. ಭಾರತದ ಪದವೀಧರರು US ತಂತ್ರಜ್ಞಾನ ವಲಯದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಚೀನಾದ ವೀಸಾವು ಸ್ಪರ್ಧೆ ಮತ್ತು ಅವಕಾಶ ಎರಡನ್ನೂ ಪ್ರತಿನಿಧಿಸುತ್ತದೆ.

    ಇತರ ಚೀನಾ ಕೆಲಸದ ವೀಸಾಗಳಿಗಿಂತ ಹೇಗೆ ಭಿನ್ನ?
    ಇದು ವಿದೇಶಿ ವಿಜ್ಞಾನಿಗಳು, ಸಂಶೋಧಕರು ಮತ್ತು ತಂತ್ರಜ್ಞರು ಸ್ಥಳೀಯ ಉದ್ಯೋಗದಾತ ಕಂಪನಿಗಳ ಅಗತ್ಯವಿಲ್ಲದೆ ಚೀನಾದಲ್ಲಿ ವಾಸಿಸಲು, ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಸಾಂಪ್ರದಾಯಿಕ ಚೀನೀ ಕೆಲಸದ ವೀಸಾಗಳಿಗಿಂತ ಭಿನ್ನವಾಗಿದೆ. ಕೆ-ವೀಸಾಕ್ಕೆ ಉದ್ಯೋಗದಾತ ಕಂಪನಿ ಅಥವಾ ಅಧಿಕೃತ ಆಹ್ವಾನದ ಅಗತ್ಯವಿಲ್ಲ. ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸುವ ಚೀನಾದ ಕಾರ್ಯತಂತ್ರದ ಭಾಗವಾಗಿ ಕೆ-ವೀಸಾ ಇರಲಿದೆ.

    ಭಾರತೀಯ STEM ಪದವೀಧರರು ಚೀನಾದ ಕೆ-ವೀಸಾಕ್ಕೆ ಅರ್ಜಿ ಸಲ್ಲಿಸಬಹುದೇ?
    ಹೌದು, ಜಾಗತಿಕ ತಂತ್ರಜ್ಞಾನ ಕಾರ್ಯಪಡೆಯ ದೊಡ್ಡ ಭಾಗವಾಗಿರುವ ಭಾರತೀಯ STEM ಪದವೀಧರರು ಕೆ-ವೀಸಾಕ್ಕೆ ಪ್ರಮುಖ ಅರ್ಜಿದಾರರಾಗುವ ನಿರೀಕ್ಷೆಯಿದೆ. ಸಂಶೋಧನೆ ಮತ್ತು ನಾವೀನ್ಯತೆ ವೃತ್ತಿಗಳಿಗಾಗಿ US ಮತ್ತು ಯುರೋಪ್‌ಗೆ ಪರ್ಯಾಯಗಳನ್ನು ಹುಡುಕುತ್ತಿರುವ ಭಾರತೀಯ ವೃತ್ತಿಪರರಿಗೆ ಈ ಯೋಜನೆ ಅವಕಾಶಗಳನ್ನು ತೆರೆಯುತ್ತದೆ. ಇದನ್ನೂ ಓದಿ: H1B ವೀಸಾಕ್ಕೆ ಮೊದಲು ಎಷ್ಟು ಶುಲ್ಕ ಇತ್ತು? ಟ್ರಂಪ್‌ ನಿರ್ಧಾರ ಭಾರತಕ್ಕೆ ಲಾಭವೋ? ನಷ್ಟವೋ?

    ಚೀನಾ ಬಳಿ ಈಗಾಗಲೇ ಇರೋ ವೀಸಾಗಳ್ಯಾವುವು?
    ಚೀನಾದಲ್ಲಿ ನಾಲ್ಕು ಬಗೆಯ ವೀಸಾಗಳಿವೆ. 1) ರಾಜತಾಂತ್ರಿಕ ವೀಸಾ, 2) ಸುವ್ಯವಹಾರ ವೀಸಾ, 3) ಸೇವಾ ವೀಸಾ, 4) ಸಾಮಾನ್ಯ ವೀಸಾ. ಈ ಸಾಮಾನ್ಯ ವೀಸಾಗಳನ್ನು 16 ವರ್ಗಗಳಾಗಿ ವಿಂಗಡಿಸಲಾಗಿದೆ. L – ಪ್ರವಾಸಿ, M – ವ್ಯವಹಾರ, F – ವ್ಯವಹಾರೇತರ, X – ಅಧ್ಯಯನ, Z – ಕೆಲಸ ಹೀಗೆ ವಿವಿಧ ಉದ್ದೇಶಗಳಿಗಾಗಿ ವರ್ಗೀಕರಣ ಮಾಡಲಾಗಿದೆ. ಈ ವೀಸಾಗಳಿಗೂ ಭಿನ್ನವಾಗಿ ಕೆ-ವೀಸಾ ಜಾರಿಗೊಳಿಸಲು ಚೀನಾ ಚಿಂತನೆ ನಡೆಸಿದೆ. ಅಕ್ಟೋಬರ್‌ನಲ್ಲಿ ಕೆ-ವೀಸಾ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ಚೀನಾ ಸರ್ಕಾರ, ಡಿಜಿಟಲ್ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್‌ಗಳನ್ನು ಹೊರತರಲು ಯೋಜಿಸಿದೆ.

    70 ಕ್ಕೂ ಹೆಚ್ಚು ದೇಶಗಳಿಗೆ ಚೀನಾಗೆ ವೀಸಾ ಮುಕ್ತ ಪ್ರವೇಶ!
    74 ದೇಶಗಳ ನಾಗರಿಕರು ಈಗ ವೀಸಾ ಇಲ್ಲದೇ 30 ದಿನಗಳವರೆಗೆ ಚೀನಾಕ್ಕೆ ಪ್ರವೇಶಿಸಬಹುದು. ವೀಸಾ ಮುಕ್ತ ಪ್ರಯಾಣವನ್ನು ವಿಸ್ತರಿಸುವ ಚೀನಾದ ಕ್ರಮವು ಪ್ರವಾಸೋದ್ಯಮ, ಆರ್ಥಿಕತೆ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ಇದರಿಂದ ಪ್ರವಾಸಿ ತಾಣಗಳಿಗೆ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಬೇಸಿಗೆ ರಜೆಗೆ ಚೀನಾಗೆ ಹೆಚ್ಚಾಗಿ ಧಾವಿಸುತ್ತಾರೆ. ಇದು ಸ್ಥಳೀಯ ಪ್ರವಾಸಿ ಕಂಪನಿಗಳು ಹಾಗೂ ಮಾರ್ಗದರ್ಶಿಗಳಿಗೆ ದೊಡ್ಡ ವರದಾನವಾಗಿದೆ.

  • ಜಾಗತಿಕ ಅಡೆತಡೆ, ಅನಿಶ್ಚಿತತೆಗಳ ಹೊರತಾಗಿಯೂ ಭಾರತದ ಬೆಳವಣಿಗೆ ಆಕರ್ಷಕವಾಗಿದೆ: ಮೋದಿ

    ಜಾಗತಿಕ ಅಡೆತಡೆ, ಅನಿಶ್ಚಿತತೆಗಳ ಹೊರತಾಗಿಯೂ ಭಾರತದ ಬೆಳವಣಿಗೆ ಆಕರ್ಷಕವಾಗಿದೆ: ಮೋದಿ

    – ಟ್ಯಾರಿಫ್‌, ಹೆಚ್‌-1ಬಿ ವೀಸಾ ಹೊಸ ನಿಯಮಗಳ ಮೂಲಕ ಅಮೆರಿಕ ಟಾರ್ಗೆಟ್‌ಗೆ ಮೋದಿ ಟಾಂಗ್‌

    ನವದೆಹಲಿ: ಜಾಗತಿಕ ಅಡೆತಡೆಗಳು ಮತ್ತು ಅನಿಶ್ಚಿತತೆಗಳ ಹೊರತಾಗಿಯೂ ಭಾರತದ ಬೆಳವಣಿಗೆ ಆಕರ್ಷಕವಾಗಿ ಉಳಿದಿದೆ. ಸರ್ಕಾರವು ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಸಾಕಷ್ಟು ಒತ್ತು ನೀಡಿದ್ದು, ದೇಶದೊಳಗೆ ಚಿಪ್‌ನಿಂದ ಹಡಗು ಉತ್ಪಾದಿಸಲು ಯೋಜಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಹೇಳಿದ್ದಾರೆ.

    ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಮಾರ್ಟ್‌ನಲ್ಲಿ ಆಯೋಜಿಸಿದ್ದ ಉತ್ತರ ಪ್ರದೇಶ ಅಂತರರಾಷ್ಟ್ರೀಯ ವ್ಯಾಪಾರ ಪ್ರದರ್ಶನವನ್ನು ಪ್ರಧಾನಿ ಮೋದಿ ಉದ್ಘಾಟಿಸಿ ಮಾತನಾಡಿದರು. ಇದನ್ನೂ ಓದಿ: ನಾನು ಭಾರತದ ದೊಡ್ಡ ಅಭಿಮಾನಿ – ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಮತ್ತೆ ಅಮೆರಿಕ ಒತ್ತಾಯ

    ಈ ಎಕ್ಸ್‌ಪೋದಲ್ಲಿ 2,250 ಕ್ಕೂ ಹೆಚ್ಚು ಪ್ರದರ್ಶಕರು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸುತ್ತಿದ್ದಾರೆ. ರಷ್ಯಾ ಈ ವ್ಯಾಪಾರ ಪ್ರದರ್ಶನದ ದೇಶದ ಪಾಲುದಾರ ಎಂದು ಮೋದಿ ಹೇಳಿದರು. ಇದು ಸಮಯ-ಪರೀಕ್ಷಿತ ಪಾಲುದಾರಿಕೆಯ ಮತ್ತಷ್ಟು ಬಲವರ್ಧನೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

    ಜಾಗತಿಕ ಅಡೆತಡೆಗಳು ನಮಗೆ ಅಡ್ಡಿಯಾಗುವುದಿಲ್ಲ. ನಾವು ಆ ಸಂದರ್ಭಗಳಲ್ಲಿಯೂ ಹೊಸ ದಿಕ್ಕುಗಳನ್ನು ಹುಡುಕುತ್ತಿದ್ದೇವೆ. ಈ ಎಲ್ಲಾ ಅಡೆತಡೆಗಳ ನಡುವೆ, ಭಾರತವು ಮುಂಬರುವ ದಶಕಗಳಿಗೆ ಅಡಿಪಾಯವನ್ನು ಬಲಪಡಿಸುತ್ತಿದೆ. ಆತ್ಮನಿರ್ಭರ ಭಾರತ ಮಂತ್ರ ನಮ್ಮ ಸಂಕಲ್ಪ. ಒಂದು ದೇಶವು ಇತರರ ಮೇಲೆ ಹೆಚ್ಚು ಅವಲಂಬಿತವಾಗಿದ್ದರೆ, ಅದರ ಬೆಳವಣಿಗೆಯಲ್ಲಿ ಹೆಚ್ಚು ರಾಜಿಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ಉಗ್ರರಿಗೆ ಸಹಾಯ ಮಾಡಿದ್ದ ವ್ಯಕ್ತಿ ಅರೆಸ್ಟ್‌ – ಶಿಕ್ಷಕನಾಗಿ ಕೆಲಸ, ಲಷ್ಕರ್‌ ಗುಂಪಿನೊಂದಿಗೆ ಸಂಪರ್ಕ

    ಸೆಮಿಕಂಡಕ್ಟರ್ ವಲಯದಲ್ಲಿ ದೇಶದ ಸ್ವಾವಲಂಬನೆಯನ್ನು ಬಲಪಡಿಸುವಲ್ಲಿ ಉತ್ತರ ಪ್ರದೇಶ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಭಾರತದಲ್ಲಿ ತಯಾರಾಗುವ ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ಉತ್ತರ ಪ್ರದೇಶವು ಪಾಲು ಶೇ.55 ರಷ್ಟಿದೆ. ನಮ್ಮ ಸಶಸ್ತ್ರ ಪಡೆಗಳು ಇತರ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ ಎಂದು ತಿಳಿಸಿದ್ದಾರೆ.

  • ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ, ಅವನು ಬದಕಲು ಅರ್ಹನಲ್ಲ: 71ರ ವೃದ್ಧನ ಕೊಂದ ಭಾರತೀಯ ಮೂಲದ ವ್ಯಕ್ತಿ

    ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ, ಅವನು ಬದಕಲು ಅರ್ಹನಲ್ಲ: 71ರ ವೃದ್ಧನ ಕೊಂದ ಭಾರತೀಯ ಮೂಲದ ವ್ಯಕ್ತಿ

    ವಾಷಿಂಗ್ಟನ್‌: ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅವನು ಬದುಕಲು ಅರ್ಹನಲ್ಲ ಎಂದು ಹೇಳಿ 71 ವರ್ಷದ ವೃದ್ಧನನ್ನು ಭಾರತೀಯ ಮೂಲದ ವ್ಯಕ್ತಿ ಇರಿದು ಕೊಂದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

    ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿ 71 ವರ್ಷದ ನೋಂದಾಯಿತ ಲೈಂಗಿಕ ಅಪರಾಧಿ ಡೇವಿಡ್ ಬ್ರಿಮ್ಮರ್‌ನನ್ನು ಇರಿದು ಕೊಂದ ಆರೋಪದ ಮೇಲೆ 29 ವರ್ಷದ ಭಾರತೀಯ ಮೂಲದ ವರುಣ್ ಸುರೇಶ್ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ.

    ಘಟನಾ ಸ್ಥಳದಲ್ಲಿ ಸುರೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಚಾಕು ವಶಪಡಿಸಿಕೊಳ್ಳಲಾಗಿದೆ. ‘ಚಿಕ್ಕ ಮಕ್ಕಳಿಗೆ ಡೇವಿಡ್‌ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅವನು ಸಾಯುವುದಕ್ಕೇ ಅರ್ಹ. ಅವನನ್ನು ಕೊಲ್ಲಲು ಬಹಳ ದಿನಗಳಿಂದ ಕಾಯುತ್ತಿದ್ದೆ’ ಎಂದು ಆರೋಪಿ ಸುರೇಶ್‌ ಪೊಲೀಸರು ಮುಂದೆ ಹೇಳಿಕೆ ನೀಡಿದ್ದಾನೆ.

    1995 ರಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕಾಗಿ ಡೇವಿಡ್‌ ಬ್ರಿಮ್ಮರ್‌ 9 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದ. ಅವನನ್ನು ಪತ್ತೆಹಚ್ಚಲು ಸುರೇಶ್ ಕ್ಯಾಲಿಫೋರ್ನಿಯಾದ ಮೇಗನ್ ಕಾನೂನು ಡೇಟಾಬೇಸ್ ಅನ್ನು ಬಳಸಿದ್ದಾನೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.

    ಕೊಲೆ ಆರೋಪಿ ಸುರೇಶ್ ಫೋನ್‌ನಲ್ಲಿ ಕ್ಯಾಲಿಫೋರ್ನಿಯಾದ ಮೇಗನ್ ಲಾ ವೆಬ್‌ಸೈಟ್‌ನಿಂದ ಹಲವರ ಪ್ರೊಫೈಲ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡಿದ್ದ. ಅದರಲ್ಲಿ ಬ್ರಿಮ್ಮರ್ ಕೂಡ ಸೇರಿದ್ದ. ಪ್ರೊಫೈಲ್‌ನಲ್ಲಿರುವವರ ಕೊಲೆಗೆ ಸಂಚು ಸುರೇಶ್‌ ಸಂಚು ರೂಪಿಸಿದ್ದ.

  • ಅಮೆರಿಕದ H-1B ವೀಸಾ ಹೊಡೆತ ಬೆನ್ನಲ್ಲೇ ಕೌಶಲ್ಯಪೂರ್ಣ ಭಾರತೀಯರಿಗೆ ಜರ್ಮನಿ ಸ್ವಾಗತ

    ಅಮೆರಿಕದ H-1B ವೀಸಾ ಹೊಡೆತ ಬೆನ್ನಲ್ಲೇ ಕೌಶಲ್ಯಪೂರ್ಣ ಭಾರತೀಯರಿಗೆ ಜರ್ಮನಿ ಸ್ವಾಗತ

    – ಪರಿಣತ ಭಾರತೀಯರು ಜರ್ಮನಿಗೆ ಬರಬಹುದು ಅಂತ ಬಿಗ್‌ ಆಫರ್‌

    ಬರ್ಲಿನ್: ಅಮೆರಿಕದ H-1B ವೀಸಾ‌ (H-1B Visa) ಶುಲ್ಕ ಹೆಚ್ಚಳ ವಿವಾದದ ಬೆನ್ನಲ್ಲೇ ಕೌಶಲ್ಯಪೂರ್ಣ ಭಾರತೀಯರಿಗೆ ಜರ್ಮನಿ ಬಿಗ್‌ ಆಫರ್‌ ನೀಡಿದೆ. ವೃತ್ತಿಪರ ಪರಿಣತ ಭಾರತೀಯರಿಗೆ ಜರ್ಮನಿಗೆ ಬರಬಹುದು ಎಂದು ರಾಯಭಾರಿ ಸ್ವಾಗತ ಕೋರಿದ್ದಾರೆ.

    ಎಲ್ಲಾ ಹೆಚ್ಚು ಕೌಶಲ್ಯಪೂರ್ಣ ಭಾರತೀಯರಿಗೆ ನನ್ನ ಕರೆ ಇಲ್ಲಿದೆ. ಜರ್ಮನಿ ತನ್ನ ಸ್ಥಿರ ವಲಸೆ ನೀತಿಗಳೊಂದಿಗೆ ಮತ್ತು ಐಟಿ, ನಿರ್ವಹಣೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರಿಗೆ ಉತ್ತಮ ಉದ್ಯೋಗಾವಕಾಶ ಕಲ್ಪಿಸುತ್ತದೆ ಎಂದು ಫಿಲಿಪ್ ಅಕೆರ್ಮನ್ ಮಂಗಳವಾರ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: PublicTV Explainer: ಭಾರತದ ಯುವ ಪ್ರತಿಭೆಗಳಿಗೆ ಅಮೆರಿಕ ವೀಸಾ ತಡೆಗೋಡೆ?; ಏನಿದು H-1B ವೀಸಾ ಹೊಸ ರೂಲ್ಸ್‌?

    ವೀಡಿಯೋ ಕೂಡ ಹಂಚಿಕೊಂಡಿರುವ ಅಕೆರ್ಮನ್‌, ಜರ್ಮನಿಯಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಗುಂಪಿನಲ್ಲಿ ಭಾರತೀಯರು ಸೇರಿದ್ದಾರೆ ಎಂದು ತಿಳಿಸಿದ್ದಾರೆ.

    ಜರ್ಮನಿಯಲ್ಲಿ ಕೆಲಸ ಮಾಡುವ ಭಾರತೀಯರು, ಸ್ಥಳೀಯ ಜರ್ಮನಿಯರಿಗಿಂತ ಹೆಚ್ಚು ಸಂಪಾದಿಸುತ್ತಾರೆ. ಏಕೆಂದರೆ, ಭಾರತೀಯರು ನಮ್ಮ ಸಮಾಜ ಮತ್ತು ನಮ್ಮ ಕಲ್ಯಾಣಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ, ಅವರಿಗೆ ಹೆಚ್ಚಿನ ಸಂಬಳ. ನಾವು ಕಠಿಣ ಪರಿಶ್ರಮದ ಜನರಿಗೆ ಉತ್ತಮ ಉದ್ಯೋಗಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟ್ರಂಪ್‌ H-1B ವೀಸಾ ಟಫ್‌ ರೂಲ್ಸ್‌ ನಡುವೆಯೂ ಭಾರತೀಯರಿಗೆ ಮಣೆ ಹಾಕಿದ ಕಂಪನಿಗಳು – ಮೈಸೂರಲ್ಲಿ ಓದಿದ್ದ ವ್ಯಕ್ತಿಗೆ ಸಿಇಒ ಪಟ್ಟ

    ಹೆಚ್‌-1ಬಿ ವೀಸಾ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿ ಅಮೆರಿಕ ಸರ್ಕಾರ ಆದೇಶ ಹೊರಡಿಸಿದೆ. ಅಮೆರಿಕದ ಸ್ಥಳೀಯರಿಗೆ ಮಣೆ ಹಾಕುವ ಉದ್ದೇಶದಿಂದ ಟ್ರಂಪ್‌ ಅವರು ಈ ಕ್ರಮಕೈಗೊಂಡಿದ್ದಾರೆ. ಇದರಿಂದ ಅಮೆರಿಕದಲ್ಲಿ ಉದ್ಯೋಗ ಬಯಸುವ ಭಾರತ ಸೇರಿದಂತೆ ಇತರೆ ದೇಶಗಳ ಪರಿಣತ ಉದ್ಯೋಗಿಗಳಿಗೆ ತೊಂದರೆ ಆಗಲಿದೆ. ಇಷ್ಟು ಪ್ರಮಾಣದ ಹಣವನ್ನು ಅಮೆರಿಕ ಕಂಪನಿಗಳು ಭರಿಸಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಅಮೆರಿಕ ಕಂಪನಿಗಳು ಹಿಂದೇಟು ಹಾಕುವ ಸಾಧ್ಯತೆ ಹೆಚ್ಚಿದೆ. ಅಮೆರಿಕದಲ್ಲಿ ವಿದೇಶಿಯರಿಗೆ ಉದ್ಯೋಗಾವಕಾಶ ಕಡಿಮೆಯಾಗುವ ಸಾಧ್ಯತೆ ಇದೆ.

  • PublicTV Explainer: ಭಾರತದ ಯುವ ಪ್ರತಿಭೆಗಳಿಗೆ ಅಮೆರಿಕ ವೀಸಾ ತಡೆಗೋಡೆ?; ಏನಿದು H-1B ವೀಸಾ ಹೊಸ ರೂಲ್ಸ್‌?

    PublicTV Explainer: ಭಾರತದ ಯುವ ಪ್ರತಿಭೆಗಳಿಗೆ ಅಮೆರಿಕ ವೀಸಾ ತಡೆಗೋಡೆ?; ಏನಿದು H-1B ವೀಸಾ ಹೊಸ ರೂಲ್ಸ್‌?

    ಹೊರದೇಶದಲ್ಲಿ ನಿರಂತರ ದುಡಿಮೆ.. ಅಪರೂಪಕ್ಕೆ ಸ್ವದೇಶಕ್ಕೆ ಬಂದು ಕುಟುಂಬಸ್ಥರನ್ನು ಕಾಣಲು ವಿಮಾನ ಏರಿದ್ದರು.. ಎಷ್ಟೋ ಮಂದಿ ತವರಿಗೆ ಬಂದು ಹಬ್ಬ-ಹರಿದಿನಗಳಲ್ಲಿ ಭಾಗವಹಿಸಿ ಖುಷಿಯಲ್ಲಿದ್ದರು.. ಮನೆಯಲ್ಲಿ ಮದುವೆ ಸಂಭ್ರಮದಲ್ಲಿದ್ದರು.. ಈ ಎಲ್ಲರಿಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಘೋಷಣೆಯೊಂದು ಬರಸಿಡಿಲಿನಂತೆ ಭಾಸವಾಯಿತು. ಅಮೆರಿಕದ ಐಟಿ ವಲಯದ ಕಂಪನಿಗಳಲ್ಲಿ ದುಡಿಯುತ್ತಿದ್ದ ಲಕ್ಷಾಂತರ ವಿದೇಶಿ ಉದ್ಯೋಗಿಗಳಲ್ಲಿ ಅರೆಕ್ಷಣ ದಿಗಿಲುಟ್ಟಿಸಿತು. ಇವರನ್ನೆಲ್ಲ ಕೆಲಸಕ್ಕಿಟ್ಟುಕೊಂಡಿದ್ದ ಕಂಪನಿಗಳು ಸಹ ಶಾಕ್ ಆಗಿದ್ದುಂಟು. ‘ಸ್ವದೇಶಕ್ಕೆ ಹೊರಟಿರುವವರು, ಈಗಾಗಲೇ ಹೋಗಿರುವವರು ತಕ್ಷಣ ಅಮೆರಿಕಗೆ ವಾಪಸ್ ಬನ್ನಿ’ ಅಂತ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟವು. ಊರಿಗೆ ಹೊರಟಿದ್ದವರು ವಾಪಸ್ ಆದರು. ಬಂದಿದ್ದವರು ಬೇಸರದಿಂದಲೇ ಗಂಟುಮೂಟೆ ಕಟ್ಟಿದರು. ಸಂಭ್ರಮದಲ್ಲಿದ್ದವರು ಮದುವೆ ರದ್ದುಗೊಳಿಸಿ ಕಣ್ಣೀರಿಟ್ಟರು. ಇದಕ್ಕೆಲ್ಲ ಕಾರಣ, ಹೆಚ್-1ಬಿ ವೀಸಾ.

    ಹೌದು, ಹೆಚ್-1ಬಿ ವೀಸಾ (H-1B Visa) ವಾರ್ಷಿಕ ಶುಲ್ಕವನ್ನು ದಿಢೀರ್ 1 ಲಕ್ಷ ಡಾಲರ್‌ಗೆ (ಅಂದಾಜು 88 ಲಕ್ಷ ರೂ.) ಹೆಚ್ಚಿಸಿ ಟ್ರಂಪ್ ಆದೇಶ ಹೊರಡಿಸಿದ್ದೇ ಇದಕ್ಕೆಲ್ಲ ಕಾರಣ. ‘ಅಮೆರಿಕವೇ ಮೊದಲು’ ಎಂಬುದು ಟ್ರಂಪ್ ಸರ್ಕಾರದ ಧ್ಯೇಯ. ಈ ವೀಸಾ ನೀತಿಯಲ್ಲೂ ಅದನ್ನು ಪ್ರತಿಪಾದಿಸಲು ಹೊರಟಿದ್ದಾರೆ. ಇತ್ತೀಚಿನ ದಿನಮಾನಗಳಲ್ಲಿ ಟ್ರಂಪ್ ಭಾರತವನ್ನು ಒಂದಲ್ಲ ಒಂದು ರೀತಿಯಲ್ಲಿ ಟಾರ್ಗೆಟ್ ಮಾಡಿದಂತೆ ಕಾಣುತ್ತಿದೆ. ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಟ್ಯಾರಿಫ್ ಅಸ್ತ್ರ ಪ್ರಯೋಗಿಸಿದರು. ಜಗತ್ತಿನಲ್ಲಿ ಹೆಚ್ಚಿನ ಪ್ರಮಾಣದ ಟ್ಯಾರಿಫ್ (ಶೇ.50) ದೇಶಗಳ ಸಾಲಿನಲ್ಲಿ ಭಾರತವೂ ಇದೆ. ಅದರ ಬೆನ್ನಲ್ಲೇ ಈಗ ಹೆಚ್-1ಬಿ ವೀಸಾ ಶುಲ್ಕ ಹೆಚ್ಚಳ ಮೂಲಕ ಭಾರತದ ವಿರುದ್ಧ ಟ್ರಂಪ್ ಅಸ್ತ್ರ ಪ್ರಯೋಗಿಸಿದ್ದಾರೆ. ಏಕೆಂದರೆ, ಈ ವೀಸಾದಡಿ ಅಮೆರಿಕದಲ್ಲಿ ನೆಲೆಸಿರುವ ವಿದೇಶಿ ಉದ್ಯೋಗಿಗಳಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ. ಪ್ರತಿ ವರ್ಷ ಈ ವೀಸಾದಡಿ ಅಮೆರಿಕಗೆ ಹೋಗುವವರ ಸಂಖ್ಯೆಯಲ್ಲೂ ಭಾರತೀಯರದ್ದೇ ಸಿಂಹಪಾಲು. ಈಗ ಶುಲ್ಕ ಹೆಚ್ಚಿಸಿರುವುದು ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿ ಅಮೆರಿಕಗೆ ಹೋಗ ಬಯಸುವ ಯುವಸಮೂಹದ ಕನಸನ್ನು ನುಚ್ಚು ನೂರು ಮಾಡಿದಂತಿದೆ. ಇದನ್ನೂ ಓದಿ: H1B ವೀಸಾಕ್ಕೆ ಮೊದಲು ಎಷ್ಟು ಶುಲ್ಕ ಇತ್ತು? ಟ್ರಂಪ್‌ ನಿರ್ಧಾರ ಭಾರತಕ್ಕೆ ಲಾಭವೋ? ನಷ್ಟವೋ?

    ಅಷ್ಟಕ್ಕೂ ಏನಿದು ಹೆಚ್-1ಬಿ ವೀಸಾ? ಇದರ ಉದ್ದೇಶ ಏನು? ಅಮೆರಿಕ ಕಂಪನಿಗಳಿಗೆ ಇದು ಏಕೆ ಮುಖ್ಯ? ಭಾರತೀಯ ವೃತ್ತಿಪರ ಪರಿಣಿತರಿಗೆ ಇದರಿಂದ ಪ್ರಯೋಜನ ಎಷ್ಟು? ಶುಲ್ಕ ಹೆಚ್ಚಿಸಿದ್ಯಾಕೆ? ಇದರಿಂದಾಗುವ ಪರಿಣಾಮಗಳೇನು?

    ಹೆಚ್-1ಬಿ ವೀಸಾ ಎಂದರೇನು?
    ಹೆಚ್-1ಬಿ ವಲಸೆಯೇತರ ವೀಸಾ.

    ಜಾರಿಗೆ ಬಂದಿದ್ದು ಯಾವಾಗ?
    ಹೆಚ್-1ಬಿ ವೀಸಾ ಕಾರ್ಯಕ್ರಮವು 1990 ರ ವಲಸೆ ಕಾಯ್ದೆಯೊಂದಿಗೆ (IMMACT90) ಪ್ರಾರಂಭವಾಯಿತು.

    ಆಗಿನ ಅಧ್ಯಕ್ಷರು ಯಾರು?
    ಈ ನೀತಿಗೆ ಆಗಿನ ಅಧ್ಯಕ್ಷ ಜಾರ್ಜ್ ಹೆಚ್.ಡಬ್ಲ್ಯೂ. ಬುಷ್ ಅವರು 1990ರ ನವೆಂಬರ್ 20 ರಂದು ಸಹಿ ಹಾಕಿದರು. ಹೆಚ್-1 ವೀಸಾವನ್ನು ಎರಡು ಭಾಗಗಳಾಗಿ ವಿಭಜಿಸಲಾಯಿತು. ಹೆಚ್-1ಎ ವೀಸಾ ನರ್ಸ್‌ಗಳಿಗೆ.

    ಹೆಚ್-1ಬಿ ವೀಸಾ ಯಾರಿಗೆ ಸಿಗುತ್ತೆ?
    ಹೊರದೇಶಗಳ ಪರಿಣತ ವೃತ್ತಿಪರರಿಗೆ ಅಮೆರಿಕದಲ್ಲಿ ಉದ್ಯೋಗ ನೀಡಲು ಅಲ್ಲಿನ ಕಂಪನಿಗಳಿಗೆ ಈ ವೀಸಾ ಅವಕಾಶ ನೀಡುತ್ತದೆ. ಎಂಜಿನಿಯರಿಂಗ್, ತಂತ್ರಜ್ಞಾನ, ವೈದ್ಯಕೀಯ, ವ್ಯವಹಾರದಂತಹ ಕ್ಷೇತ್ರಗಳಲ್ಲಿ ಪರಿಗಣತರಿಗೆ ಈ ವೀಸಾ ಸೌಲಭ್ಯ ಸಿಗುತ್ತದೆ.

    ವೀಸಾ ಅವಧಿ ಎಷ್ಟು?
    ಇದು ತಾತ್ಕಾಲಿಕ ವೀಸಾ. ಇದಕ್ಕೆ 3 ರಿಂದ 6 ವರ್ಷಗಳ ಅವಧಿ ಇರುತ್ತದೆ. ಅವಧಿ ಮುಗಿದ ಮೇಲೆ ಮತ್ತೆ ವೀಸಾ ನವೀಕರಿಸಬಹುದು.

    ಅರ್ಹತೆ, ನಿಯಮಗಳೇನು?
    ವಿದೇಶಗಳ ಕೌಶಲಯುಕ್ತ ವೃತ್ತಿಪರರನ್ನು ನೇಮಿಸಿಕೊಳ್ಳಲು ಕಂಪನಿಗಳು ಈ ವೀಸಾಕ್ಕಾಗಿ ಅರ್ಜಿ ಸಲ್ಲಿಸುತ್ತವೆ. ಅಭ್ಯರ್ಥಿಯು ವಿಶೇಷತೆಯ ಕ್ಷೇತ್ರದಲ್ಲಿ ಪದವಿ ಹೊಂದಿರಬೇಕು. ಉದ್ಯೋಗ ನೀಡುವ ಕಂಪನಿಗಳೇ ತನ್ನ ಉದ್ಯೋಗಿಯ ವೀಸಾ ಅರ್ಜಿ ಶುಲ್ಕವನ್ನು ಭರಿಸಬೇಕು. ಕಂಪನಿ ಕಾರ್ಮಿಕ ಇಲಾಖೆಯಲ್ಲಿ ಎಲ್‌ಎಸಿ ಸಲ್ಲಿಸುತ್ತದೆ. ವೇತನ ಮತ್ತು ಕೆಲಸದ ಪರಿಸ್ಥಿತಿಗಳನ್ನು ದೃಢೀಕರಿಸುತ್ತದೆ. ನಂತರ ಅಭ್ಯರ್ಥಿ ಪರವಾಗಿ USCIS ಗೆ ಅರ್ಜಿ ಸಲ್ಲಿಸುತ್ತದೆ. ಕೆಲಸಕ್ಕೆ ವಿಶೇಷ ಪರಿಣತಿ ಮತ್ತು ಪದವಿ, ಅನುಭವದ ಅಗತ್ಯವಿರುತ್ತದೆ. ಅದನ್ನು ಅಭ್ಯರ್ಥಿ ಪೂರೈಸಬೇಕು. ಇದನ್ನೂ ಓದಿ: H-1B ವೀಸಾ ಶುಲ್ಕ ಹೊಸ ಅರ್ಜಿದಾರರಿಗೆ ಮಾತ್ರ- ಒಂದು ಬಾರಿ ಪಾವತಿಸಬೇಕು: ಅಮೆರಿಕ ಸರ್ಕಾರ

    ವರ್ಷಕ್ಕೆ ಎಷ್ಟು ವೀಸಾ ಹಂಚಿಕೆ?
    ಪ್ರತಿ ವರ್ಷ 65,000 ವೀಸಾಗಳನ್ನು ಹಂಚಲಾಗುತ್ತದೆ. ಅಮೆರಿಕ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಹೊಂದಿದವರಿಗೆ 20,000 ಹೆಚ್ಚುವರಿ ವೀಸಾಗಳನ್ನು ನೀಡಲಾಗುತ್ತದೆ.

    ಶುಲ್ಕ ಎಷ್ಟಿತ್ತು?
    ಈ ವೀಸಾ ಪಡೆಯಲು 2,000 ದಿಂದ 8,000 ಡಾಲರ್ ವರೆಗೆ ಶುಲ್ಕ ಇತ್ತು.

    ಹೊಸ ಶುಲ್ಕ ಎಷ್ಟು?
    ಟ್ರಂಪ್ ಹೊಸ ಶುಲ್ಕ ಘೋಷಿಸಿದ್ದು, ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿದ್ದಾರೆ. ಇದು ಪೂರ್ಣಾವಧಿ ಶುಲ್ಕವಾಗಿರುತ್ತದೆ.

    ಶುಲ್ಕ ಹೆಚ್ಚಿಸಿದ್ದು ಯಾಕೆ?
    ಕಂಪನಿಗಳು ಈ ವೀಸಾ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಸ್ಥಳೀಯರಿಗೆ ಹೆಚ್ಚಿನ ಸಂಬಳ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಅವರಿಗೆ ಅವಕಾಶ ನೀಡದೇ, ಹೊರದೇಶಗಳಿಂದ ಕಡಿಮೆ ಸಂಬಳಕ್ಕೆ ವೃತ್ತಿಪರರನ್ನು ಕರೆಸಿಕೊಂಡು ಉದ್ಯೋಗ ನೀಡುತ್ತಿವೆ ಎಂದು ಟ್ರಂಪ್ ತಿಳಿಸಿದ್ದಾರೆ.

    ಯಾವ ದೇಶದ ಜನತೆ ಹೆಚ್ಚು ವೀಸಾ ಪಡೆದಿದ್ದಾರೆ?
    ಹೆಚ್-1ಬಿ ವೀಸಾವನ್ನು ಪಡೆದ ದೇಶಗಳಲ್ಲಿ ಭಾರತವೇ ನಂ.1. ಈ ದೇಶವೇ ಶೇ.71 ರಷ್ಟು ಪಾಲನ್ನು ಹೊಂದಿದೆ. ಶೇ.12 ರಷ್ಟನ್ನು ಚೀನಾ ಹೊಂದಿದೆ. ಶೇ.17 ರಷ್ಟನ್ನು ಜಗತ್ತಿನ ಇತರೆ ದೇಶಗಳು ಹೊಂದಿವೆ.

    ವೀಸಾಕ್ಕಾಗಿ ಎಷ್ಟು ಅರ್ಜಿ ಸಲ್ಲಿಕೆ?
    ಕಳೆದ ವರ್ಷ ಮಾರ್ಚ್ನಲ್ಲಿ ನೋಂದಣಿ ಮುಕ್ತಾಯಗೊಂಡ ಕೊನೆಯ ಹೆಚ್-1ಬಿ ಲಾಟರಿ ಸುತ್ತಿಗೆ ಸುಮಾರು 3,39,000 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದು ವಾರ್ಷಿಕ ಮಿತಿಯನ್ನು ಮೀರಿದೆ. ಯುಎಸ್‌ಸಿಐಎಸ್ ದತ್ತಾಂಶದ ಪ್ರಕಾರ, ಆ ಪೈಕಿ 1,20,141 ಅರ್ಜಿಗಳನ್ನು ಲಾಟರಿಗೆ ಆಯ್ಕೆ ಮಾಡಲಾಗಿದೆ. (ಹೊಸ ಶುಲ್ಕವು ಆ ಅರ್ಜಿದಾರರ ಮೇಲೂ ಪರಿಣಾಮ ಬೀರಲ್ಲ).

    ಹೆಚ್ಚು ವೀಸಾ ಹೊಂದಿರುವ ಕಂಪನಿಗಳು ಯಾವುವು?
    ಅಮೆಜಾನ್: 10,044
    ಟಿಸಿಎಸ್: 5,505
    ಮೈಕ್ರೋಸಾಫ್ಟ್: 5,189
    ಮೆಟಾ: 5,123
    ಆ್ಯಪಲ್: 4,202
    ಗೂಗಲ್: 4,181
    ಜೆಪಿಮಾರ್ಗನ್: 2,440
    ಅಮೆಜಾನ್ ವೆಬ್ ಸರ್ವಿಸಸ್: 2,347
    ಇನ್ಫೊಸಿಸ್: 2,004
    ಮೈಂಡ್‌ಟ್ರೀ: 1,807

    ಹೊಸ ಶುಲ್ಕ ಯಾರಿಗೆ ಅನ್ವಯ?
    ಹೊಸ ಶುಲ್ಕವು ಹೊಸ ಅರ್ಜಿಗಳಿಗಷ್ಟೇ ಅನ್ವಯವಾಗುತ್ತದೆ (ಮುಂದಿನ ಲಾಟರಿ ಸೈಕಲ್‌ಗೆ).

    ಈಗಾಗಲೇ ಈ ವೀಸಾ ಹೊಂದಿರುವವರ ಕಥೆ ಏನು?
    ಹೆಚ್-1ಬಿ ವೀಸಾದಡಿ ಈಗಾಗಲೇ ಕೆಲಸ ಮಾಡುತ್ತಿರುವವರು ಹೊಸ ಶುಲ್ಕ ಪಾವತಿಸಬೇಕಿಲ್ಲ. ವೀಸಾ ಅವಧಿ ಮುಕ್ತಾಯಗೊಂಡ ಬಳಿಕ ಸಲ್ಲಿಸುವ ನವೀಕರಣ ಅರ್ಜಿಗೂ ಇದು ಅನ್ವಯಿಸಲ್ಲ.

    ಯಾರ ಮೇಲೆ ಹೆಚ್ಚು ಎಫೆಕ್ಟ್?
    ಈ ವೀಸಾದಡಿ ಅಮೆರಿಕಗೆ ತೆರಳುವವರಲ್ಲಿ ಭಾರತೀಯರೇ ಹೆಚ್ಚಿದ್ದಾರೆ. ನಂತರದ ಸ್ಥಾನದಲ್ಲಿ ಚೀನೀಯರು ಬರುತ್ತಾರೆ. ಅಮೆರಿಕದಲ್ಲಿ ಕಂಪ್ಯೂಟರ್ ಸಂಬಂಧಿತ ಉದ್ಯೋಗಗಳಲ್ಲಿ ಈ ಎರಡು ದೇಶಗಳ ಜನರೇ ಹೆಚ್ಚು. ಒಂದು ದಶಕಕ್ಕೂ ಹೆಚ್ಚು ಕಾಲ ಪ್ರತಿವರ್ಷ ಅನುಮೋದಿಸಲಾದ ಹೆಚ್-1ಬಿ ವೀಸಾದಡಿ ಹೋಗುತ್ತಿರುವವರಲ್ಲಿ ಶೇ.60 ರಷ್ಟು ಮಂದಿ ಕಂಪ್ಯೂಟರ್ ಸಂಬಂಧಿತ ಉದ್ಯೋಗಗಳನ್ನೇ ಹೊಂದಿದ್ದಾರೆ. 2010 ರಿಂದ ಹೆಚ್ಚಿನ ಹೆಚ್-1ಬಿ ವೀಸಾ ಅನುಮೋದನೆಗಳು ಭಾರತೀಯರಿಗೆ ಸಿಕ್ಕಿವೆ ಎಂದು ಪ್ಯೂ ರಿಸರ್ಚ್ ತಿಳಿಸಿದೆ. ಇದನ್ನೂ ಓದಿ: H-1B Visa ಹೊಂದಿರುವವರು 24 ಗಂಟೆಯೊಳಗೆ ಅಮೆರಿಕಗೆ ವಾಪಸ್‌ ಬನ್ನಿ: ಮೆಟಾ, ಮೈಕ್ರೋಸಾಫ್ಟ್‌ ಸೂಚನೆ

    ತಜ್ಞರು ಹೇಳೋದೇನು?
    ಹೊಸ ಶುಲ್ಕ ಕ್ರಮದಿಂದ ಅಮೆರಿಕಗೆ ತುಂಬಾ ನಷ್ಟ. ಯುಎಸ್‌ನಲ್ಲಿರುವ ಭಾರತದ ಐಟಿ ಕಂಪನಿಗಳು ಸುಮಾರು ಶೇ.50ರಿಂದ ಶೇ.80 ರಷ್ಟು ಸ್ಥಳೀಯರನ್ನೇ ನೇಮಿಸಿಕೊಂಡಿವೆ. ಹೊಸ ಶುಲ್ಕ ನೀತಿಯಿಂದ ಭಾರತೀಯರನ್ನು ನೇಮಿಸಿಕೊಳ್ಳಲು ಕಂಪನಿಗಳು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಈ ಹೊರೆಯನ್ನು ತಪ್ಪಿಸಲು ಕಂಪನಿಗಳು ಹೊರದೇಶಗಳಿಂದಲೇ ತಮ್ಮ ಕಂಪನಿಗಳ ಕಾರ್ಯಾಚರಣೆಯನ್ನು ಹೆಚ್ಚಿಸಬಹುದು. ಇದರಿಂದ ಅಮೆರಿಕಗೆ ತುಂಬಾ ನಷ್ಟವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

    ಭವಿಷ್ಯದ ಯುವಜನರ ಕನಸು ಭಗ್ನ
    ಅಮೆರಿಕದಲ್ಲಿ ದುಡಿದು ಹಣ ಸಂಪಾದಿಸಬೇಕೆಂದು ಪ್ರತಿಭಾವಂತ ಯುವಸಮುದಾಯ ಕನಸು ಕಾಣುತ್ತದೆ. ಅಂತಹವರಿಗೆ ಹೆಚ್-1ಬಿ ವೀಸಾ ಸಂಪರ್ಕ ಸೇತುವೆಯಂತೆ ಇದೆ. ಈ ವೀಸಾ ಮೂಲಕ ಯುಎಸ್‌ಗೆ ತೆರಳಿ ಒಂದಷ್ಟು ವರ್ಷ ಕೆಲಸ ಮಾಡಿ, ಹೆಚ್ಚಿನ ಸಂಪಾದನೆ ಮಾಡಿ ನಂತರ ಪೌರತ್ವ ಪಡೆದು ಅಲ್ಲಿಯೇ ನೆಲೆಸಿರುವವರ ಸಂಖ್ಯೆಯೂ ಹೆಚ್ಚಿದೆ. ಅದೇ ರೀತಿಯ ಕನಸನ್ನು ಈಗಿನ ಯುವಸಮುದಾಯವೂ ಕಾಣುತ್ತಿರುತ್ತದೆ. ಆದರೆ, ಟ್ರಂಪ್ ನೀತಿಯು ಅಂತಹ ಲಕ್ಷಾಂತರ ಕೌಶಲ್ಯಯುಕ್ತ ಯುವಕ-ಯುವತಿಯರ ಕನಸಿಗೆ ತಣ್ಣೀರೆರಚಿದೆ.

  • H-1B ವೀಸಾ ಶುಲ್ಕ ಹೊಸ ಅರ್ಜಿದಾರರಿಗೆ ಮಾತ್ರ- ಒಂದು ಬಾರಿ ಪಾವತಿಸಬೇಕು: ಅಮೆರಿಕ ಸರ್ಕಾರ

    H-1B ವೀಸಾ ಶುಲ್ಕ ಹೊಸ ಅರ್ಜಿದಾರರಿಗೆ ಮಾತ್ರ- ಒಂದು ಬಾರಿ ಪಾವತಿಸಬೇಕು: ಅಮೆರಿಕ ಸರ್ಕಾರ

    – ಈಗಾಗಲೇ ವೀಸಾ ಹೊಂದಿರುವವರು ಇದು ಅನ್ವಯ ಆಗಲ್ಲ ಎಂದು ಸ್ಪಷ್ಟನೆ

    ವಾಷಿಂಗ್ಟನ್‌: ಹೆಚ್‌-1ಬಿ ವೀಸಾಗೆ 1 ಲಕ್ಷ ಡಾಲರ್‌ ಶುಲ್ಕವನ್ನು ಹೊಸ ಅರ್ಜಿದಾರರಿಗೆ ಮಾತ್ರ ವಿಧಿಸಲಾಗುವುದು. ಇದು ಒಂದು ಬಾರಿಯ ಪಾವತಿಯಾಗಿರುತ್ತದೆ ಎಂದು ಅಮೆರಿಕ ಸರ್ಕಾರ ಸ್ಪಷ್ಟಪಡಿಸಿದೆ.

    ಶುಕ್ರವಾರ ಶುಲ್ಕ ಹೆಚ್ಚಳವನ್ನು ಘೋಷಿಸಿದ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್, ಇದು ವಾರ್ಷಿಕ ಶುಲ್ಕವಾಗಿದೆ. ಹೊಸ ವೀಸಾ ಮತ್ತು ನವೀಕರಣಗಳನ್ನು ಬಯಸುವ ಜನರಿಗೆ ಅನ್ವಯಿಸುತ್ತದೆ ಎಂದು ಹೇಳಿದ್ದರು.

    ಆದರೆ, ಹೊಸ ನೀತಿ ಜಾರಿಗೆ ಬರುವ ಕೆಲವೇ ಗಂಟೆಗಳ ಮೊದಲು, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಶನಿವಾರ ಸ್ಪಷ್ಟೀಕರಣ ನೀಡಿದ್ದಾರೆ. ‘ಇದು ವಾರ್ಷಿಕ ಶುಲ್ಕವಲ್ಲ. ಇದು ಒಂದು ಬಾರಿಯ ಶುಲ್ಕವಾಗಿದೆ. ಹೊಸ ವೀಸಾಗಳಿಗೆ ಮಾತ್ರ ಅನ್ವಯಿಸುತ್ತದೆ. ನವೀಕರಣಗಳಿಗೆ ಅಲ್ಲ ಮತ್ತು ಪ್ರಸ್ತುತ ವೀಸಾ ಹೊಂದಿರುವವರಿಗೆ ಅಲ್ಲ ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    ಈಗಾಗಲೇ H-1B ವೀಸಾಗಳನ್ನು ಹೊಂದಿರುವವರು, ಪ್ರಸ್ತುತ ದೇಶದ ಹೊರಗೆ ಇರುವವರಿಗೆ ಮತ್ತೆ ಪ್ರವೇಶಿಸಲು 1 ಲಕ್ಷ ಡಾಲರ್ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಲೀವಿಟ್ ಸ್ಪಷ್ಟನೆ ನೀಡಿದ್ದಾರೆ.

    ಶ್ವೇತಭವನದ ಸ್ಪಷ್ಟೀಕರಣದ ಮೊದಲು, ಅಮೆರಿಕದ ಕಂಪನಿಗಳು ತಮ್ಮ ವಿದೇಶಿ ಉದ್ಯೋಗಿಗಳಿಗೆ ಕೂಡಲೇ ವಾಪಸ್‌ ಬನ್ನಿ ಎಂದು ಸೂಚನೆ ನೀಡಿದ್ದವು. ಹಲವಾರು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ದೇಶವನ್ನು ತೊರೆಯದಂತೆ ಸೂಚಿಸಿದ್ದವು ಎಂದು ವರದಿಯಾಗಿದೆ.

    H-1B ವೀಸಾಗಳು ಕಂಪನಿಗಳು ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ಕಂಪ್ಯೂಟರ್ ಪ್ರೋಗ್ರಾಮರ್‌ಗಳಂತಹ ವಿಶೇಷ ಕೌಶಲ್ಯ ಹೊಂದಿರುವ ವಿದೇಶಿ ಕಾರ್ಮಿಕರನ್ನು ಅಮೆರಿಕದಲ್ಲಿ ಕೆಲಸ ಮಾಡಲು ಪ್ರಾಯೋಜಿಸಲು ಅವಕಾಶ ನೀಡುತ್ತವೆ, ಆರಂಭದಲ್ಲಿ ಮೂರು ವರ್ಷಗಳವರೆಗೆ ಆದರೆ ಆರು ವರ್ಷಗಳವರೆಗೆ ವಿಸ್ತರಿಸಬಹುದು.