Tag: Urmila Matondkar

  • ಮಿನಿ ಫ್ರಾಕ್ ಧರಿಸಿ ರಂಗೀಲಾರೆ ಎಂದು ಕುಣಿದ ಊರ್ಮಿಳಾ

    ಮಿನಿ ಫ್ರಾಕ್ ಧರಿಸಿ ರಂಗೀಲಾರೆ ಎಂದು ಕುಣಿದ ಊರ್ಮಿಳಾ

    ಬಾಲಿವುಡ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಚಿತ್ರಗಳಲ್ಲಿ ರಂಗೀಲಾ ಸಿನಿಮಾ ಕೂಡ ಒಂದು. ಇಂದಿಗೆ ರಂಗೀಲಾ ಸಿನಿಮಾ ಬಿಡುಗಡೆಯಾಗಿ 30 ವರ್ಷವಾಗಿದೆ. 1995 ಸೆಪ್ಟೆಂಬರ್ 8 ರಂದು ರಿಲೀಸ್ ಆಗಿದ್ದ ರಂಗೀಲಾ ಮ್ಯೂಸಿಕಲ್ ಹಿಟ್ ಜೊತೆಗೆ ಬ್ಲಾಕ್‌ಬಸ್ಟರ್ ಚಿತ್ರವಾಗಿತ್ತು. ಹಾಡುಗಳಂತೂ ಇಂದಿಗೂ ಎವರ್‌ಗ್ರೀನ್. ಈ ಚಿತ್ರದ ಮೂಲಕ ಬೆಡಗಿ ಊರ್ಮಿಳಾ ಮತೋಂಡ್ಕರ್ ಎಷ್ಟೋ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ್ದ ನಾಯಕಿಯಾದ್ರು. ಈವರೆಗೂ ಊರ್ಮಿಳಾ ಅಂದ್ರೆ ರಂಗೀಲಾ ಎಂದೇ ಕರೆಯಲಾಗುತ್ತೆ. ಊರ್ಮಿಳಾ ಜೊತೆ ಅಮಿರ್ ಖಾನ್ ಹಾಗೂ ಜಾಕಿ ಶ್ರಾಫ್ ತೆರೆ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ಊರ್ಮಿಳಾ ಹಸಿಬಿಸಿಯಾಗಿ ಕಾಣಿಸಿಕೊಂಡ ಪರಿಗೆ ಸಿನಿಮಾ ಇಂಡಸ್ಟ್ರಿ ಶೇಕ್ ಶೇಕ್ ಆಗಿತ್ತು. ಇದೀಗ ಅದೇ ರಂಗೀಲಾ ಚಿತ್ರದ ರಂಗೀಲಾರೇ ಹಾಡಿಗೆ ರೀಲ್ಸ್ ಮಾಡುವ ಮೂಲಕ 30 ವರ್ಷದ ಆನಿವರ್ಸರಿ ಖುಷಿ ಹಂಚಿಕೊಂಡಿದ್ದಾರೆ ಊರ್ಮಿಳಾ ಮತೋಂಡ್ಕರ್.

    ಈ ಹಾಡಿನಲ್ಲಿ ಊರ್ಮಿಳಾ ಮಿನಿ ಫ್ರಾಕ್ ಧರಿಸಿ ಮುಂಬೈ ಬೀದಿಗಳಲ್ಲಿ ಜಸ್ಟ್ ಹೆಜ್ಜೆ ಹಾಕ್ತಾರೆ. ಹೊಸ ನಾಯಕಿಯ ಸೋಲೋ ಹಾಡು ಮ್ಯಾಜಿಕ್ ಕ್ರಿಯೇಟ್ ಮಾಡುತ್ತೆ. ಊರ್ಮಿಳಾ ಅಂದ ಚೆಂದ ನಟನೆ ನೃತ್ಯಕ್ಕೆ, ಆಶಾ ಭೋಸ್ಲೆ ಹಿನ್ನೆಲೆ ಗಾಯನ ಇನ್ನಿಲ್ಲದಂತೆ ಹಾಡಿಗೆ ಮಾದಕತೆಯ ಸ್ಪರ್ಷ ಕೊಡುತ್ತೆ. ಈಗಲೂ ಈ ಹಾಡಿನಲ್ಲಿ ಕಾಣಿಸ್ಕೊಂಡ ಊರ್ಮಿಳಾರನ್ನ ಯಾರೂ ಮರೆಯಲ್ಲ. ಇದೀಗ ಈ ಚಿತ್ರ 30 ವರ್ಷ ಪೂರೈಸಿರುವ ಹಿನ್ನೆಲೆ ಇನ್ಸ್ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡಿ ಸುದೀರ್ಘ ಪದಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ ನಟಿ ಊರ್ಮಿಳಾ. ತಮ್ಮನ್ನು ಬೆಳೆಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

    ಊರ್ಮಿಳಾ ಹೇಳಿದ್ದೇನು?
    ಇಂದಿಗೆ 30 ವರ್ಷಗಳ ಹಿಂದೆ, ರಂಗೀಲಾ ನಿಮ್ಮಲ್ಲಿ ಒಬ್ಬಳಾಗಿದ್ದಳು, ಇಂದಿಗೂ ಸಹ. ನೀವು ನಕ್ಕಾಗ, ನೀವು ಹುರಿದುಂಬಿಸಿದಾಗ, ಮಾಂತ್ರಿಕತೆಯಿಂದ ಪ್ರೀತಿಸಿದಾಗ ಅದು ಹಿಂದುರುಗಿ ಶಕ್ತಿಯಾಗುತ್ತದೆ. ನಿಮ್ಮ ಜೀವನದ ಒಂದು ಭಾಗವಾಗಲು ಅವಕಾಶ ನೀಡಿದ್ದಕ್ಕಾಗಿ, ನನ್ನನ್ನು ತುಂಬಾ ಪ್ರೀತಿಯಿಂದ ಅಪ್ಪಿಕೊಂಡಿದ್ದಕ್ಕಾಗಿ ಮತ್ತು ಕೆಲವರು ಮಾತ್ರ ಕನಸು ಕಾಣುವ ಧೈರ್ಯ ಮಾಡುವ ಸ್ಥಳದಲ್ಲಿ ನನ್ನನ್ನು ಇರಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಮೆಚ್ಚುಗೆ, ಪ್ರಶಂಸೆಗಳು ಕೆಲವರಿಗೆ ಮಾತ್ರ ಸಿಗುತ್ತದೆ. ನನ್ನ ಪ್ರಯಾಣದಲ್ಲಿ ನಿಮ್ಮ ಪ್ರೀತಿ ಶ್ರೇಷ್ಠ ಆಶೀರ್ವಾದವಾಗಿದೆ. ಧನ್ಯವಾದಗಳು.

  • ರಂಗೀಲಾ ಬೆಡಗಿ ಊರ್ಮಿಳಾ ವಿಚ್ಛೇದನ !

    ರಂಗೀಲಾ ಬೆಡಗಿ ಊರ್ಮಿಳಾ ವಿಚ್ಛೇದನ !

    `ರಂಗೀಲಾ’ ಬೆಡಗಿ, ಮಾದಕ ನಟಿ ಊರ್ಮಿಳಾ ಮಾತೋಂಡ್ಕರ್ (Urmila Matondkar) ಸಂಸಾರ ಜೀವನ ಹಳಿ ತಪ್ಪಿದೆ. 2016ರಲ್ಲಿ ನಟಿ ಊರ್ಮಿಳಾ ಉದ್ಯಮಿ ಮೋಹ್ಸಿನ್ ಅಖ್ತರ್ (Mohsin Akhtar)  ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಪತಿ-ಪತ್ನಿ ಇಬ್ಬರೂ ಒಮ್ಮತದ ನಿರ್ಧಾರದ ಮೂಲಕ ದೂರಾಗೋಕೆ ಇಷ್ಟ ಪಡುತ್ತಿದ್ದು, ವಿಚ್ಛೇದನ ಕೋರಿ ಕೋರ್ಟ್‌ಗೆ ಅರ್ಜಿಯನ್ನ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

    ಹೌದು ಎನ್ನುವಂತೆ ಪತಿಯನ್ನು ಊರ್ಮಿಳಾ ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಕಳೆದ ವರ್ಷ ವಿವಾಹ ವಾರ್ಷಿಕೋತ್ಸವದ ದಿನವೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದ ದಂಪತಿ ಈಗ ಏಕಾಏಕಿ ವಿಚ್ಛೇದನ ಪಡೆಯಲು ನಿರ್ಧರಿಸಿರುವುದು ಆಶ್ಚರ್ಯಕರ ಸಂಗತಿ. ಸಿನಿಮಾದಿಂದಲೂ ಅಂತರ ಕಾಯ್ದುಕೊಂಡಿದ್ದ ಊರ್ಮಿಳಾ ಪತಿ ಜೊತೆ ಉತ್ತಮ ಸಂಸಾರ ನಡೆಸುತ್ತಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೀಗ ದಿಢೀರ್ ಇಬ್ಬರ ಸೆಪರೇಶನ್ ಸುದ್ದಿ ಬಂದಿದೆ. ಅಲ್ಲಿಗೆ 8 ವರ್ಷದ ಮದುವೆ ಸಂಬಂಧವನ್ನ ಊರ್ಮಿಳಾ ಮುರಿದುಕೊಳ್ಳಲು ನಿರ್ಧರಿಸಿದ್ದಾರಂತೆ.ಇದನ್ನೂ ಓದಿ: ಮುಂಬೈನಲ್ಲಿ ರಾಕಿಭಾಯ್ ಹವಾ ಜೋರು..!

    ರಂಗೀಲಾ (Rangeela) ಚಿತ್ರದ ಮೂಲಕ ಭಾರೀ ಜನಪ್ರಿಯತೆ ಗಳಿಸಿದ್ದ ಊರ್ಮಿಳಾ, 90ರ ದಶಕದ ಪಡ್ಡೆ ಹುಡುಗರ ನಿದ್ದೆ ಕದ್ದ ಪೋರಿ ಎಂದೇ ಖ್ಯಾತರಾಗಿದ್ದ ಗ್ಲ್ಯಾಮರ್‌ ನಟಿ. ಹಲವು ವರ್ಷಗಳು ಸಿಂಗಲ್ ಆಗೇ ಇದ್ದ ಊರ್ಮಿಳಾ ಅನ್ಯಕೋಮಿನ ಪುರುಷನ ಜೊತೆ ತಡವಾಗೇ ಸಂಸಾರ ಜೀವನಕ್ಕೆ ಕಾಲಿಟ್ಟಿದ್ದರು. 8 ವರ್ಷದ ದಾಂಪತ್ಯ ಜೀವನವನ್ನ ಇದೀಗ ಅಂತ್ಯಗೊಳಿಸಲು ಪರಸ್ಪರ ಮಾತನಾಡಿಕೊಂಡು ದೂರಾಗಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

     

  • ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್‌ಗೆ ಕೋವಿಡ್‌-19 ದೃಢ

    ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್‌ಗೆ ಕೋವಿಡ್‌-19 ದೃಢ

    ನವದೆಹಲಿ: ಬಾಲಿವುಡ್‌ ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್‌ (49) ಅವರಿಗೆ ಕೋವಿಡ್‌-19 ಇರುವುದು ದೃಢಪಟ್ಟಿದೆ.

    URMILA MATONDKAR

    ತನಗೆ ಕೊರೊನಾ ಸೋಂಕು ತಗುಲಿರುವ ವಿಚಾರವನ್ನು ಇನ್‌ಸ್ಟಾ ಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. “ನನಗೆ ಕೋವಿಡ್‌ ತಗುಲಿರುವುದು ದೃಢಪಟ್ಟಿದೆ. ನಾನು ಆರೋಗ್ಯವಾಗಿದ್ದೇನೆ. ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿದ್ದೇನೆ” ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಗೆ ಸಮೀಪವಿರುವ 14 ಜಿಲ್ಲೆಗಳಲ್ಲಿ ಪಟಾಕಿ ನಿಷೇಧಿಸಿದ ಹರಿಯಾಣ

    URMILA MATONDKAR

    ಈಚೆಗೆ ನನ್ನ ಸಂಪರ್ಕಕದಲ್ಲಿದ್ದವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಜನತೆಯಲ್ಲಿ ನಟಿ ಮನವಿ ಮಾಡಿದ್ದಾರೆ.

    URMILA POST

    ಮೊಹಸಿನ್‌ ಅಖ್ತರ್‌ ಅವರನ್ನು ಊರ್ಮಿಳಾ ಮಾತೋಂಡ್ಕರ್‌ ವಿವಾಹವಾಗಿದ್ದಾರೆ. ಇದನ್ನೂ ಓದಿ: ಒಂದು ದಿನ ಬದುಕಿದ್ರೂ ಅಪ್ಪು ತರ ಬದುಕ್ಬೇಕು: ಸಾಧು ಕೋಕಿಲ

    ರಂಗೀಲ, ಜುದಾಯ್‌, ದಾವುದ್‌, ಕುನ್ವಾರ, ಖುಬ್ಸುರತ್‌, ದಿಲ್ಲಗಿ ಮೊದಲಾದ ಸಿನಿಮಾಗಳಲ್ಲಿ ನಟಿ ಊರ್ಮಿಳಾ ಜನಪ್ರಿಯ ಗಳಿಸಿದ್ದಾರೆ. 2014ರಲ್ಲಿ ತೆರೆ ಕಂಡ ಮರಾಠಿ ಚಿತ್ರ “ಅಜೋಬ” ಇವರ ನಟನೆಯ ಕೊನೆಯ ಸಿನಿಮಾ. ಇವರು ಹಲವು ರಿಯಾಲಿಟಿ ಶೋಗಳಲ್ಲೂ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.

  • ಉದ್ಧವ್ ಕೊರೊನಾ ನಿಭಾಯಿಸಿದ ರೀತಿ ಕಂಡು, ಪ್ರಭಾವಿತಳಾಗಿ ಶಿವ ಸೇನೆ ಸೇರಿದೆ: ಊರ್ಮಿಳಾ

    ಉದ್ಧವ್ ಕೊರೊನಾ ನಿಭಾಯಿಸಿದ ರೀತಿ ಕಂಡು, ಪ್ರಭಾವಿತಳಾಗಿ ಶಿವ ಸೇನೆ ಸೇರಿದೆ: ಊರ್ಮಿಳಾ

    ಮುಂಬೈ: ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ತೊರೆದು ಶಿವ ಸೇನೆ ಸೇರಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕೊರೊನಾ ಸಂಕಷ್ಟವನ್ನು ನಿಭಾಯಿಸಿದ ರೀತಿಯನ್ನು ಕಂಡು, ಪ್ರಭಾವಿತಳಾಗಿ ಶಿವ ಸೇನೆ ಸೇರುತ್ತಿದ್ದೇನೆ ಎಂದು ಈ ವೇಳೆ ಊರ್ಮಿಳಾ ತಿಳಿಸಿದ್ದಾರೆ.

    ಶಿವ ಸೇನೆ ಸೇರಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವರ್ಷ ಮಹಾರಾಷ್ಟ್ರಕ್ಕೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅತ್ಯದ್ಭುತ ಕೆಲಸ ಮಾಡಿದ್ದಾರೆ. ಅವರ ಕೆಲಸದಿಂದ ನಾನು ಪ್ರಭಾವಿತಳಾಗಿದ್ದೇನೆ. ಅಲ್ಲದೆ ಅವರೊಂದಿಗೆ ಕೆಲಸ ಮಾಡಬೇಕು ಎಂಬ ಹಂಬಲ ಹೊಂದಿದ್ದೇನೆ ಎಂದರು.

    ವಿಧಾನ ಪರಿಷತ್ ನಾಮನಿರ್ದೇಶನದ ಕುರಿತು ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯತ್ವ ಸ್ಥಾನದ ಕುರಿತು ಮಾತನಾಡುವಾಗ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಶಾಸಕಾಂಗಕ್ಕೆ ಸಂಸ್ಕøತಿ ಹಾಗೂ ಕಲೆಗಳಿಗೆ ಪ್ರಾತಿನಿಧ್ಯ ಸಿಗಬೇಕು ಎಂದರು. ಇದನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ನಾನು ಮರಾಠಿ ಕುಟುಂಬದಿಂದ ಬಂದವಳು. ಅಲ್ಲದೆ ನಾನು ಮೀಡಿಯಾ ಮೇಡ್ ಸ್ಟಾರ್ ಅಲ್ಲ, ಪೀಪಲ್ ಮೇಡ್ ಸ್ಟಾರ್ ಎಂದು ತಿಳಿಸಿದರು.

    46 ವರ್ಷದ ನಟಿ ಊರ್ಮಿಳಾ ಕಳೆದ ವರ್ಷ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದು ಇದೇ ವೇಲೆ ಸ್ಪಷ್ಟಪಡಿಸಿದ್ದಾರೆ.

    ಇಂದು ಬೆಳಗ್ಗೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಅವರ ಮಾತೋಶ್ರೀ ನಿವಾಸದಲ್ಲಿ ಶಿವ ಸೇನೆಗೆ ಸೇರ್ಪಡೆಯಾಗಿದ್ದಾರೆ. ಉದ್ಧವ್ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ ಅವರು ‘ಶಿವ ಬಂಧನ’ ಕಟ್ಟುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

  • ಕಾಂಗ್ರೆಸ್‌ಗೆ ಗುಡ್‌ಬೈ –  ಶಿವಸೇನಾ ಶಾಸಕಿಯಾಗಲಿದ್ದಾರೆ ಊರ್ಮಿಳಾ ಮಾತೋಂಡ್ಕರ್

    ಕಾಂಗ್ರೆಸ್‌ಗೆ ಗುಡ್‌ಬೈ – ಶಿವಸೇನಾ ಶಾಸಕಿಯಾಗಲಿದ್ದಾರೆ ಊರ್ಮಿಳಾ ಮಾತೋಂಡ್ಕರ್

    ಮುಂಬೈ: ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದ ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಇನ್ನು ಮುಂದೆ ಶಿವಸೇನೆಯ   ಶಾಸಕಿಯಾಗಲಿದ್ದಾರೆ.

    ಹೌದು. ಮಹಾರಾಷ್ಟ್ರದಲ್ಲಿ ʼಮಹಾವಿಕಾಸ್‌ ಆಘಾಡಿʼ ಸರ್ಕಾರವಿದ್ದರೂ ಊರ್ಮಿಳಾ ಮಾತೋಂಡ್ಕರ್‌ ಶಿವಸೇನೆಗೆ ಸೇರ್ಪಡೆಯಾಗಲಿದ್ದಾರೆ. ಭಾನುವಾರ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆಪ್ತ ಹರ್ಷಲ್ ಪ್ರಧಾನ್ ಈ ವಿಚಾರ ತಿಳಿಸಿದ್ದು, ಮಂಗಳವಾರ ಮುಖ್ಯಮಂತ್ರಿ ಸಮ್ಮುಖದಲ್ಲಿ ಶಿವಸೇನೆಗೆ ಸೇರಲಿದ್ದಾರೆ ಎಂದು ಹೇಳಿದ್ದಾರೆ.

    ಪಕ್ಷಕ್ಕೆ ಆಗಮಿಸುತ್ತಿರುವ ಊರ್ಮಿಳಾ ಅವರಿಗೆ ಈಗಾಗಲೇ ಶಾಸಕ ಸ್ಥಾನ ನೀಡಲು ಶಿವಸೇನೆ ಮುಂದಾಗಿದೆ.

     

    ರಾಜ್ಯಪಾಲರ ಕೋಟಾದಿಂದ ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಲು 12 ಮಂದಿ ಹೆಸರನ್ನು ರಾಜ್ಯಪಾಲ ಬಿ ಎಸ್ ಕೊಶ್ಯರಿಗೆ ಮಹಾವಿಕಾಸ್‌ ಆಘಾಡಿ ಸರ್ಕಾರ ಕಳುಹಿಸಿದ್ದು, ಈ ಪಟ್ಟಿಯಲ್ಲಿ ಊರ್ಮಿಳಾ ಮಾತೋಂಡ್ಕರ್ ಹೆಸರಿದೆ ಎಂದು ವರದಿಯಾಗಿದೆ. ರಾಜ್ಯಪಾಲರು ಈ ಪಟ್ಟಿಯನ್ನು ಅಂಗೀಕರಿಸಬೇಕಿದೆ.

    ಕಳೆದ ವರ್ಷದ ಮಾರ್ಚ್‌ 27 ರಂದು ಮಾತೋಂಡ್ಕರ್ ಕಾಂಗ್ರೆಸ್‌ ಸೇರಿದ್ದರು. ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಪಕ್ಷದ ಆಂತರಿಕ ಭಿನ್ನಾಭಿಪ್ರಾಯಿಂದ 2019ರ ಸೆ.10 ರಂದು ಊರ್ಮಿಳಾ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು.

    ರಾಜೀನಾಮೆ ನೀಡಿದ ಸಂದರ್ಭದಲ್ಲೇ ಅವರು ಶಿವಸೇನೆಗೆ ಸೇರಲಿದ್ದಾರೆ ಎಂದು ಸುದ್ದಿಗಳು ಪ್ರಕಟವಾಗಿತ್ತು.ಈ ಕುರಿತು ಸ್ಪಷ್ಟನೆ ನೀಡಿದ್ದ ಅವರು, ಸದ್ಯ ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವ ಚಿಂತನೆ ಇಲ್ಲ. ಮಾಧ್ಯಮಗಳು ಈ ರೀತಿಯ ವರದಿಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದರು.

  • ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವ ಚಿಂತನೆ ಇಲ್ಲ: ಊರ್ಮಿಳಾ

    ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವ ಚಿಂತನೆ ಇಲ್ಲ: ಊರ್ಮಿಳಾ

    ಮುಂಬೈ: ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಅವರು ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಅವರು ಸದ್ಯ ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವ ಚಿಂತನೆ ಇಲ್ಲ ಎಂದು ಹೇಳಿದ್ದಾರೆ.

    ನಾನು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ. ಮಾಧ್ಯಮಗಳು ಈ ರೀತಿಯ ವರದಿಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಊರ್ಮಿಳಾ ಮನವಿ ಮಾಡಿದ್ದಾರೆ.

    ಮಹಾರಾಷ್ಟ್ರದಲ್ಲಿ ಮುಂದಿನ ಚುನಾವಣೆಗೆ ಸಿದ್ಧತೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಬೆಳವಣಿಗೆಗಳು ಜೋರಾಗಿದೆ. ಇದರ ನಡುವೆಯೇ ಊರ್ಮಿಳಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಅವರು ಶಿವಸೇನೆಯ ನಾಯಕ ಮಿಲಿಂದ್ ನರ್ವೆಕರ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿತ್ತು.

    ಊರ್ಮಿಳಾ ಕಳೆದ ಲೋಕಸಭಾ ಚುನಾವಣೆಯ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸೇರ್ಪಡೆಯಾಗಿದ್ದರು. ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲುಂಡಿದ್ದರು. ಆ ಬಳಿಕ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯದಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದರು. ವಿಧಾನಸಭೆಯ ಚುನಾವಣೆಗೆ 2 ತಿಂಗಳು ಸಮಯವಷ್ಟೇ ಇರುವ ಸಂದರ್ಭದಲ್ಲಿ ಪಕ್ಷದಲ್ಲಿ ಕಾಂಗ್ರೆಸ್ ನಾಯಕರ ರಾಜೀನಾಮೆ ಭಾರೀ ಸುದ್ದಿಯಾಗಿದೆ. ಇದರ ನಡುವೆಯೇ ಕಾಂಗ್ರೆಸ್ ಮುಂಬರುವ ಚುನಾವಣೆಯಲ್ಲಿ ಇತರೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಮಾತುಕತೆಯನ್ನು ನಡೆಸಿದೆ.

  • ಇದು ಇನ್ನೂ ಅರಂಭ, ನಾನು ರಾಜಕೀಯ ಬಿಡಲ್ಲ – ಊರ್ಮಿಳಾ ಮಾತೋಂಡ್ಕರ್

    ಇದು ಇನ್ನೂ ಅರಂಭ, ನಾನು ರಾಜಕೀಯ ಬಿಡಲ್ಲ – ಊರ್ಮಿಳಾ ಮಾತೋಂಡ್ಕರ್

    ಮುಂಬೈ: ಇದು ಇನ್ನೂ ಅರಂಭ, ಆದರೆ ನಾನು ರಾಜಕೀಯವನ್ನು ಬಿಡುವುದಿಲ್ಲ ಎಂದು ಬಾಲಿವುಡ್ ತಾರೆ ಮತ್ತು ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಊರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.

    ಊರ್ಮಿಳಾ ಮಾತೋಂಡ್ಕರ್ ಈ ಬಾರಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿ ಗೋಪಾಲ್ ಶೆಟ್ಟಿ ವಿರುದ್ಧ ಸ್ಪರ್ಧಿಸಿ, 4,52,226 ಲಕ್ಷ ಮತಗಳ ಅಂತರದಲ್ಲಿ ಸೋತಿದ್ದಾರೆ.

    ಈ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಊರ್ಮಿಳಾ “ನನಗೆ ಈ ಚುನಾವಣೆ ಬಹಳ ಮಹತ್ವವದದ್ದು ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ನಾನು ರಾಜಕೀಯದಲ್ಲಿ ಇನ್ನೂ ಮುಂದುವರೆಯುತ್ತೇನೆ. ನಾನು ನಿಮ್ಮ ಮುಂದೆ ಸೋತ ವ್ಯಕ್ತಿಯಂತೆ ನಿಂತಿಲ್ಲ. ಒಬ್ಬ ವ್ಯಕ್ತಿಗೆ ಅತ್ಮಸಾಕ್ಷಿ ಎಂಬುವುದು ಬಹಳ ಮುಖ್ಯ. ನಾನು ಈ ಚುನಾವಣೆಯಲ್ಲಿ ಘನತೆಯಿಂದ ಮತ್ತು ಸಮಗ್ರತೆಯಿಂದ ಕೆಲಸ ಮಾಡಿದ್ದೇನೆ ಅದು ನನಗೆ ಖುಷಿಯಿದೆ” ಎಂದು ತಿಳಿಸಿದರು.

    ಈ ಚುನಾವಣೆ ನನಗೆ ಅದ್ಭುತ ಅನುಭವವನ್ನು ನೀಡಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನು ಮಾಡಿದ ಕೆಲಸಗಳ ಮೇಲೆ ನನಗೆ ಹೆಮ್ಮೆ ಇದೆ. ಇದು ಇನ್ನೂ ಅರಂಭ ಇನ್ನೂ ಮಾಡುವ ಕೆಲಸ ತುಂಬ ಇದೆ ಅದಕ್ಕಾಗಿ ನಾನು ಸಿದ್ಧವಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಎಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ) ನಲ್ಲಿ ಹಾಕಿರುವ ಸಹಿಗಳು ಹೊಂದಾಣಿಕೆ ಬರುತ್ತಿಲ್ಲ ಎಂದು ಊರ್ಮಿಳಾ ಆರೋಪ ಮಾಡಿದ್ದರು. ಈ ವಿಚಾರದ ಬಗ್ಗೆ ಕೇಳಿದಾಗ. ನಾನು ಗೋಪಾಲ್ ಶೆಟ್ಟಿ ಅವರ ಗೆಲುವಿಗೆ ಅಭಿನಂದನೆ ಹೇಳುತ್ತೇನೆ. ಆದರೆ ನಮಗೆ ಇವಿಎಂನಲ್ಲಿ ಕೆಲವು ಭಿನ್ನತೆಗಳು ಕಂಡುಬಂದಿವೆ. ಇದರ ಬಗ್ಗೆ ತನಿಖೆ ಮಾಡುವಂತೆ ಚುನಾವಣಾ ಅಯೋಗಕ್ಕೆ ದೂರು ನೀಡಿದ್ದೇವೆ ಎಂದು ಹೇಳಿದರು.

  • ‘ಬ್ಲ್ಯಾಕ್ ಮೇಲ್’ ಮಾಡ್ತಿದ್ದಾಳೆ ಅಂದ ಕಾಲತ್ತಿಲ್ ಲೇಡಿ ಸೂಪರ್ ಸ್ಟಾರ್..!

    ‘ಬ್ಲ್ಯಾಕ್ ಮೇಲ್’ ಮಾಡ್ತಿದ್ದಾಳೆ ಅಂದ ಕಾಲತ್ತಿಲ್ ಲೇಡಿ ಸೂಪರ್ ಸ್ಟಾರ್..!

    ಬೆಂಗಳೂರು: ಯಾಯಿರೇ..ಯಾಯಿರೇ ಅಂತಾ ತನ್ನ ಬಳ್ಳಿಯಂತ ಕಾಯವನ್ನು ಬಳುಕಿಸಿ ಕಣ್ಣು ಮಿಟುಕಿಸಿದ್ದ ರಂಗೀಲಾ ಹುಡುಗಿ ಎಲ್ಲಿ ಮರೆಯಾಗಿದ್ಲು? 90ರ ದಶಕದಲ್ಲಿ ಸಿನಿ ಜಗತ್ತನ್ನ ಅನಭಿಷಿಕ್ತ ರಾಣಿಯಂತೆ ಆಳಿದ್ದ ಅದೊಬ್ಬ ತಾರೆ ಎಲ್ಲಿದ್ದಾಳೆ ಅನ್ನೋ ಪ್ರಶ್ನೆ ಪದೇ ಪದೇ ಬರ್ತಾನೇ ಇತ್ತು. ಅಂದ ಹಾಗೆ, ಆಕೆ ಮತ್ಯಾರೂ ಅಲ್ಲ, ಮುಂಬೈ ಬೆಡಗಿ ಊರ್ಮಿಳಾ ಮಾತೋಂಡ್ಕರ್.

    2016ರಲ್ಲಿ ತನಗಿಂತ ಹತ್ತು ವರ್ಷ ಚಿಕ್ಕ ವಯಸ್ಸಿನ ರೂಪದರ್ಶಿ, ಉದ್ಯಮಿ ಮೊಹ್ಸಿನ್ ಅಖ್ತರ್ ನನ್ನ ಮದ್ವೆಯಾಗಿ ಸುದ್ದಿಯಾಗಿದ್ದ ಊರ್ಮಿಳಾ ಅನ್ನೋ ಬಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಪತ್ತೇನೇ ಇರಲಿಲ್ಲ. ಆದ್ರೆ, ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದ ಅಭಿಮಾನಿಗಳಿಗೆ ಈಗ ಸಿಕ್ಕಿದೆ ಸೀರುಂಡೆ ಥರದ ಮ್ಯಾಟ್ರು.

    ರಾಮ್ ಗೋಪಾಲ್ ವರ್ಮಾರ ಗರಡಿಗೆ ಸಿಕ್ಕಿದ್ದ ಊರ್ಮಿಳಾ ಮಾತೋಂಡ್ಕರ್ ರಂಗೀಲಾ, ಜುದಾಯಿ, ಜಂಗಲ್, ಮಸ್ತ್, ಸತ್ಯದಂತಹಾ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಫ್ಯಾನ್ಸ್ ಗೆ ರಸದೌತಣ ಉಣಿಸಿದ್ಲು. ಬಟ್ಟಲು ಕಂಗಳ ಚೆಲುವೆಯ ಬೋಲ್ಡ್ ನೆಸ್ ಗೆ ಜನ ಕನಸಲ್ಲೂ ಕನವರಿಸೋ ಹಾಗಾಗಿತ್ತು. 90ರ ದಶಕದಲ್ಲಿ ಊರ್ಮಿಳಾ ತೆರೆ ಮೇಲೆ ಅಕ್ಷರಶಃ ಕಮಾಲ್ ಮಾಡಿಬಿಟ್ಟಿದ್ಲು. ರಾಮ್ ಗೋಪಾಲ್ ವರ್ಮಾ ಜೊತೆಗಿನ ಸಂಬಂಧದ ಜೊತೆಗೆ ಅನೇಕ ಸಹ ನಟರೊಂದಿಗಿನ ಲಿಂಕ್ ಅಪ್ ಕಥೆಗಳು ಬಹಳ ಕಲರ್ ಫುಲ್ಲಾಗಿ ಕೇಳಿ ಬಂದಿದ್ವು.

    2008ರಲ್ಲಿ ರಿಯಾಲಿಟಿ ಶೋ ಒಂದರ ಜಡ್ಜ್ ಆಗಿ ಕಾಣಿಸಿಕೊಂಡಿದ್ದ ಊರ್ಮಿಳಾ ಆಮೇಲೆ ತೆರೆ ಮೇಲೆ ಬಂದಿದ್ದು 2014ರಲ್ಲಿ. ಆಗ ಮರಾಠಿ ಸಿನಿಮಾವೊಂದರಲ್ಲಿ ನಟಿಸಿದ್ದು ಬಿಟ್ರೆ ಅದಾದ್ ಮೇಲೆ ಊರ್ಮಿಳಾ ದುರ್ಬೀನು ಹಾಕಿ ಹುಡುಕಿದ್ರೂ ಕಾಣಿಸ್ತಾನೇ ಇರಲಿಲ್ಲ. ಆದ್ರೀಗ, ಸರಿ ಸುಮಾರು 10 ವರ್ಷಗಳ ನಂತ್ರ ಊರ್ಮಿಳಾ ಬ್ಲ್ಯಾಕ್ ಮೇಲ್ ಮಾಡೋದಕ್ಕೆ ಬರ್ತಿದ್ದಾಳೆ. ಮೊದಲಿನಷ್ಟೇ ಬೋಲ್ಡ್ ಮತ್ತು ಬ್ಯೂಟಿಫುಲ್ಲಾಗಿ ಕಾಣಿಸ್ತಿರೋ ಊರ್ಮಿಳಾಳ ಲುಕ್ ಈಗ ರಿವೀಲ್ ಆಗಿದೆ.

    ಅಭಿನಯ್ ಡಿಯೋ ಆಕ್ಷನ್ ಕಟ್ ಹೇಳ್ತಿರೋ ಈ ಸಿನಿಮಾದಲ್ಲಿ ಊರ್ಮಿಳಾ ಐಟಂ ಸಾಂಗ್ ಒಂದರಲ್ಲಿ ಧೂಳೆಬ್ಬಿಸಲಿದ್ದಾಳೆ. ನಟ ಇರ್ಫಾನ್ ಮುಖ್ಯ ಭೂಮಿಕೆಯಲ್ಲಿರೋ ಈ ಚಿತ್ರದಲ್ಲಿ ಚಮ್ಮ ಚಮ್ಮ ಬೆಡಗಿ ಮೈ ಚಳಿ ಬಿಟ್ಟು ಮೈ ಕುಣಿಸಿದ್ದಾಳೆ. ಮೊಣಕಾಲಿಗೂ ಮುಟ್ಟದ ಡ್ರೆಸ್ ತೊಟ್ಟು, ನೀಳ ತೊಡೆಗಳನ್ನ ತೋರಿಸಿ ಚಮಕ್ ಕೊಡ್ತಿದ್ದ ಊರ್ಮಿಳಾ ಈ ಐಟಂ ಸಾಂಗಲ್ಲಿ ಸೀರೆ ಉಟ್ಟಿರೋದ್ರಿಂದ ಫ್ಯಾನ್ಸ್ ಗೆ ಸ್ವಲ್ಪ ಮಟ್ಟಿಗೆ ನಿರಾಸೆಯಾಗಿದೆಯಂತೆ.

    1998ರಲ್ಲಿ ರಿಲೀಸ್ ಆದ ಚೀನಾ ಗೇಟ್ ಸಿನಿಮಾದ ಚಮ್ಮಾ ಚಮ್ಮಾ, ಲಜ್ಜಾ ಸಿನಿಮಾದ ಆಯಿಯೇ..ಆಜಾಯಿಯೇಯಂತಹಾ ಐಟಂ ನಂಬರ್ ಗಳಲ್ಲಿ ಹುಚ್ಚೆಬ್ಬಿಸಿದ್ದ ಊರ್ಮಿಳಾಳ ಕಮ್ ಬ್ಯಾಕ್ ಹೇಗಿರುತ್ತೆ..? 44ರ ಹರೆಯದಲ್ಲೂ ಊರ್ಮಿಳಾ ತನ್ನ ದೇಹಸಿರಿಯನ್ನ ಯಾವ ರೀತಿ ಕಾಪಾಡಿಕೊಂಡಿದ್ದಾಳೆ..? ಈ ಬಿರು ಬೇಸಿಗೆಯಲ್ಲಿ ಬೊಗಸೆ ಕಣ್ಣಿನ ಊರ್ಮಿ ಪಡ್ಡೆಗಳೆದೆಯಲ್ಲಿ ಕಿಚ್ಚು ಹತ್ತಿಸೋದಕ್ಕೆ ಸಕ್ಸಸ್ ಆಗ್ತಾಳಾ..? ಗೊತ್ತಿಲ್ಲ. ಆದ್ರೆ, ಸಿನಿಮಾ ಬರೋ ಮೊದಲೇ ಊರ್ಮಿಳಾ ಡಾನ್ಸ್ ಸ್ಟೆಪ್ಸನ್ನ ನೋಡ್ತಾ ನೀವೂ ಕಣ್ ತಂಪು ಮಾಡ್ಕೊಳ್ಳಿ.