Tag: uppinangadi

  • ಹಿಜಬ್ ಧರಿಸಿ ಬಂದ 24 ವಿದ್ಯಾರ್ಥಿನಿಯರಿಗೆ 1 ವಾರ ತರಗತಿಗೆ ನಿರ್ಬಂಧ

    ಹಿಜಬ್ ಧರಿಸಿ ಬಂದ 24 ವಿದ್ಯಾರ್ಥಿನಿಯರಿಗೆ 1 ವಾರ ತರಗತಿಗೆ ನಿರ್ಬಂಧ

    ಮಂಗಳೂರು: ಉಪ್ಪಿನಂಗಡಿ ಕಾಲೇಜಿನಲ್ಲಿ ಹಿಜಬ್ ವಿವಾದ ಮುಗಿಯುವಂತೆ ತೋರುತ್ತಿಲ್ಲ. ಪ್ರಾಂಶುಪಾಲರ ಕಟ್ಟುನಿಟ್ಟಿನ ಸೂಚನೆ ಹೊರತಾಗಿಯೂ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಲವು ವಿದ್ಯಾರ್ಥಿನಿಯರು ಹಿಜಬ್ ಧರಿಸಿಕೊಂಡೇ ಬಂದಿದ್ದಾರೆ.

    ಕಳೆದ ಹಲವು ದಿನಗಳಿಂದ ಹಿಜಬ್ ವಿವಾದದಲ್ಲಿ ಸುದ್ದಿಯಾಗಿದ್ದ ಕಾಲೇಜು ಅಭಿವೃದ್ಧಿ ನಿರ್ಣಯದಂತೆ, ಹಿಜಬ್‌ಗೆ ಪಟ್ಟು ಹಿಡಿದು ಕುಳಿತ 24 ವಿದ್ಯಾರ್ಥಿನಿಯರಿಗೆ 1 ವಾರ ತರಗತಿಗೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಸಂಪೂರ್ಣ ಪಠ್ಯ ಪುಸ್ತಕ ಪರಿಷ್ಕರಣೆ ಕೈ ಬಿಡೋಲ್ಲ: ಬಿ.ಸಿ.ನಾಗೇಶ್

    ರಾಜ್ಯ ಹೈಕೋರ್ಟ್ ತೀರ್ಪು ಹಾಗೂ ಸರ್ಕಾರದ ಸುತ್ತೊಲೆಯ ಹಿನ್ನೆಲೆ 24 ವಿದ್ಯಾರ್ಥಿನಿಯರಿಗೆ 1 ವಾರ ತರಗತಿಗೆ ನಿರ್ಬಂಧಿಸಲಾಗಿದೆ.

    ಕೆಲ ದಿನಗಳ ಹಿಂದೆ 7 ವಿದ್ಯಾರ್ಥಿನಿಯರು ಅಮಾನತಾಗಿದ್ದರು. ಹಿಜಬ್ ವಿಚಾರವಾಗಿ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಕೆಲ ವಿದ್ಯಾರ್ಥಿನಿಯರು ಹಲ್ಲೆ ಮಾಡಿದ್ದರು. ಟಿವಿ ವರದಿಗಾರರು ಸೇರಿದಂತೆ ಮೂವರ ಮೇಲೆ ವಿದ್ಯಾರ್ಥಿನಿಯರು ದೂರು ನೀಡಿದ್ದು, ಈ ಹಿನ್ನೆಲೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: ಈದ್ಗಾ ಮೈದಾನ ವಿವಾದ- ಇಕ್ಕಟ್ಟಿಗೆ ಸಿಲುಕಿದ ಚಾಮರಾಜಪೇಟೆ ಪೊಲೀಸರು

  • ಭಿನ್ನಮತೀಯ ಜೋಡಿ ಪತ್ತೆ, ಇಬ್ಬರ ಬಂಧನ – ಉಪ್ಪಿನಂಗಡಿಯಲ್ಲಿ ಬಿಜೆಪಿ ಶಾಸಕರಿದ್ದ ಬಸ್‌ಗೆ ತಡೆ, ಮುತ್ತಿಗೆ

    ಭಿನ್ನಮತೀಯ ಜೋಡಿ ಪತ್ತೆ, ಇಬ್ಬರ ಬಂಧನ – ಉಪ್ಪಿನಂಗಡಿಯಲ್ಲಿ ಬಿಜೆಪಿ ಶಾಸಕರಿದ್ದ ಬಸ್‌ಗೆ ತಡೆ, ಮುತ್ತಿಗೆ

    ಮಂಗಳೂರು: ಭಿನ್ನಮತೀಯ ಜೋಡಿ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಕ್ಕೆ ಹಿಂದೂಪರ ಸಂಘಟನೆಯ ಸದಸ್ಯರು ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರು ಅವರಿಗೆ ಮುತ್ತಿಗೆ ಹಾಕಿದ್ದಾರೆ.

    ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಅರಣ್ಯ ಪ್ರದೇಶದಲ್ಲಿ ಭಿನ್ನಮತೀಯ ಜೋಡಿ ಪತ್ತೆಯಾಗಿತ್ತು. ವೀಡಿಯೋ ವೈರಲ್‌ ಆದ ಬೆನ್ನಲ್ಲೇ ಯುವಕ ಹಿಂದೂ ಸಂಘಟನೆಯ ಕಾರ್ಯಕರ್ತರ ವಿರುದ್ಧವೇ ಉಪ್ಪಿನಂಗಡಿ ಠಾಣೆಯಲ್ಲಿ ದೂರು ನೀಡಿದ್ದ.

    POLICE JEEP

    ಆಟೋ ರಿಕ್ಷಾ ತಡೆದು ನಿಲ್ಲಿಸಿ ಹಲ್ಲೆ ನಡೆಸಿರುವುದಾಗಿ ಯುವಕ ದೂರಿನಲ್ಲಿ ಆರೋಪಿಸಿದ್ದ. ಈ ದೂರಿನ ಆಧಾರದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ಹಿಂದೂಪರ ಸಂಘಟನೆಯ ಇಬ್ಬರು ಸದಸ್ಯರನ್ನು ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ನಮ್ಮ ತ್ಯಾಗಕ್ಕೆ ಬೆಲೆ ಸಿಗಲಿದೆ, ನಾನು ಕ್ಯಾಬಿನೆಟ್ ಸೇರಲಿದ್ದೇನೆ: ಆರ್.ಶಂಕರ್

    ಬಂಧನವನ್ನು ಖಂಡಿಸಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಮಂಗಳವಾರ ರಾತ್ರಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಂಜೀವ ಮಠಂದೂರು ಅವರಿದ್ದ ಬಸ್ಸನ್ನು ಉಪ್ಪಿನಂಗಡಿಯಲ್ಲಿ ತಡೆದಿದ್ದಾರೆ. ಸಂಜೀವ ಮಠಂದೂರಿಗೆ ಮುತ್ತಿಗೆ ಹಾಕಿದ ಕಾರ್ಯರ್ತರು ಬಂಧನ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಸ್ಕೈವಾಕ್‍ನಿಂದ ಜಿಗಿದ ವ್ಯಕ್ತಿ – ಸೊಂಟಕ್ಕೆ ಗಂಭೀರ ಪೆಟ್ಟು

  • ವೈದ್ಯರ ಬಳಿ ತೆರಳ್ತಿದ್ದ ತಾಯಿ, ಮಗು ಬಸ್ಸಿನಡಿ ಸಿಲುಕಿ ದುರ್ಮರಣ

    ವೈದ್ಯರ ಬಳಿ ತೆರಳ್ತಿದ್ದ ತಾಯಿ, ಮಗು ಬಸ್ಸಿನಡಿ ಸಿಲುಕಿ ದುರ್ಮರಣ

    ಮಂಗಳೂರು: ಬಸ್ಸಿನಡಿ ಬಿದ್ದು ತಾಯಿ, ಮಗು ದುರ್ಮರಣಕ್ಕೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲುಖಿನ ಉಪ್ಪಿನಂಗಡಿ ಬಳಿ ನಡೆದಿದೆ.

    ಮೃತರನ್ನು ದುರ್ದೈವಿಗಳನ್ನು ಶಾಹಿದಾ (25) ಹಾಗೂ ಆಕೆಯ 1 ವರ್ಷದ ಪುತ್ರ ಶಾಹೀಲ್ ಎಂದು ಗುರುತಿಸಲಾಗಿದೆ. KSRTC ಬಸ್ಸೊಂದು ಅತೀ ವೇಗವಾಗಿ ಬಸ್ ನಿಲ್ದಾಣಕ್ಕೆ ಬಂದಿದೆ. ಈ ವೇಳೆ ಶಾಹಿದಾ ಹಾಗೂ ಆಕೆಯ ಪುತ್ರ ಬಸ್ಸಿನ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಬೆಳ್ತಂಗಡಿ ತಾಲೂಕಿನ ಶಿರ್ಲಾಲು ನಿವಾಸಿಯಾಗಿರುವ ಶಾಹಿದಾ, ಗೇರುಕಟ್ಟೆಯಲ್ಲಿರುವ ತನ್ನ ತಾಯಿ ಮನೆಗೆ ಬಂದಿದ್ದರು. ಇಂದು ಬೆಳಗ್ಗೆ ತನ್ನ ಮಗನೊಂದಿಗೆ ಪುತ್ತೂರಿನಲ್ಲಿರುವ ವೈದ್ಯರ ಬಳಿ ತೆರಳುತ್ತಿದ್ದರು. ಹೀಗಾಗಿ ಬಸ್ ನಿಲ್ದಾಣಕ್ಕೆ ಬಂದಿದ್ದ ಸಂದರ್ಭದಲ್ಲಿ ಶಾಹಿದಾ ಹಾಗೂ ಆಕೆಯ ಪುತ್ರನ ತಲೆ ಮೇಲೆ ಬಸ್ ಹರಿದಿದ್ದರಿಂದ ಇಬ್ಬರ ದಾರುಣ ಸಾವಾಗಿದೆ. ಇದನ್ನೂ ಓದಿ: ಮಕ್ಕಳಿಗೆ ಲಸಿಕೆ ಭಾಗ್ಯ- 2 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ

    ಘಟನೆ ಸಂಬಂಧ ಉಪ್ಪಿನಗಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಧ್ಯರಾತ್ರಿ ಮಕ್ಕಳೇ ತಂದೆಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಕೊಂದ್ರು

    ಮಧ್ಯರಾತ್ರಿ ಮಕ್ಕಳೇ ತಂದೆಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಕೊಂದ್ರು

    ಮಂಗಳೂರು: ತಂದೆಯನ್ನೇ ಇಬ್ಬರು ಮಕ್ಕಳು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ನಡೆದಿದೆ.

    ಇಲ್ಲಿನ ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿನ ನಿವಾಸಿ ಧರ್ನಪ್ಪ ಪೂಜಾರಿ (65) ಕೊಲೆಯಾದ ವ್ಯಕ್ತಿ. ಇವರನ್ನು ಮಕ್ಕಳಾದ ಮೋನಪ್ಪ ಹಾಗೂ ನವೀನ್ ಎಂಬವರು ಭಾನುವಾರ ತಡರಾತ್ರಿ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ.

    ಮನೆಯಲ್ಲಿದ್ದ ತೆಂಗಿನ ಮರದ ತೆಂಗಿನಕಾಯಿ, ಸೀಯಾಳವನ್ನು ತೆಗೆದು ತಂದೆ ಮಾರಾಟ ಮಾಡುತ್ತಿದ್ದರು. ಇದೇ ವಿಚಾರಕ್ಕೆ ತಂದೆ ಹಾಗೂ ಮಕ್ಕಳಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

    ನಿನ್ನೆ ಮಧ್ಯರಾತ್ರಿಯೂ ಇದೇ ವಿಚಾರಕ್ಕೆ ತಂದೆ-ಮಕ್ಕಳ ಮಧ್ಯೆ ಜಗಳ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಮಕ್ಕಳು ತಂದೆಯನ್ನು ಕತ್ತಿಯಿಂದ ಕಡಿದಿದ್ದಾರೆ. ಗಂಭೀರ ಗಾಯಗೊಂಡ ಧರ್ನಪ್ಪ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಪ್ರಕರಣ ಇಂದು ಬೆಳಕಿಗೆ ಬಂದಿದ್ದು, ಆರೋಪಿಗಳಿಬ್ಬರನ್ನು ಉಪ್ಪಿನಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

  • ಉಪ್ಪಿನಂಗಡಿ ಬಳಿ ರಸ್ತೆಗೆ ನುಗ್ಗಿದ ನೀರು – ಮಂಗಳೂರು, ಬೆಂಗಳೂರು ರಸ್ತೆ ಸಂಪರ್ಕ ಬಂದ್

    ಉಪ್ಪಿನಂಗಡಿ ಬಳಿ ರಸ್ತೆಗೆ ನುಗ್ಗಿದ ನೀರು – ಮಂಗಳೂರು, ಬೆಂಗಳೂರು ರಸ್ತೆ ಸಂಪರ್ಕ ಬಂದ್

    ಮಂಗಳೂರು: ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಕುಮಾರಧಾರಾ ಮತ್ತು ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಪ್ರವಾಹದ ಭೀತಿ ಎದುರಾಗಿದೆ.

    ಕುಮಾರಾಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ನೆಲ್ಯಾಡಿ ಸಮೀಪದ ಉದನೆಯಲ್ಲಿ ಹೆದ್ದಾರಿಗೆ ನೀರು ನುಗ್ಗಿದ ಪರಿಣಾಮ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಸದ್ಯಕ್ಕೆ ಬಂದ್ ಆಗಿದೆ. ಹೆದ್ದಾರಿಯಲ್ಲಿ ಉದ್ದಕ್ಕೂ ವಾಹನಗಳ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದು, ಉಪ್ಪಿನಂಗಡಿ ಪೊಲೀಸರು ಹೆದ್ದಾರಿಯಲ್ಲಿ ಬಂದೋಬಸ್ತ್ ಕಲ್ಪಿಸಿದ್ದಾರೆ.

    ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಲ್ಲಿ ಕುಮಾರಧಾರಾ ನದಿ ನೀರು ನುಗ್ಗಿದ ಪರಿಣಾಮ ನಾಲ್ಕು ಮನೆಗಳಿಗೆ ತೊಂದರೆಯಾಗಿದೆ. ಮನೆಯವರು ಮುಂಜಾಗ್ರತಾ ಕ್ರಮವಾಗಿ ಬೇರೆಡೆಗೆ ಸ್ಥಳಾಂತರಗೊಂಡಿದ್ದು, ಸಂತ್ರಸ್ತರಿಗೆ ಗಂಜಿ ಕೇಂದ್ರದ ವ್ಯವಸ್ಥೆ ಮಾಡಲಾಗುತ್ತಿದೆ.

    ಕುಮಾರಧಾರಾ ನದಿ ನೀರು ಸುಬ್ರಹ್ಮಣ್ಯ ಸ್ನಾನಘಟ್ಟದ ಬಳಿ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಗೂ ನುಗ್ಗಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಅಲ್ಲದೆ ಸುಳ್ಯ-ಸುಬ್ರಹ್ಮಣ್ಯ-ಸಕಲೇಶಪುರ ಸಂಪರ್ಕಿಸುವ ಬಿಸಿಲೆ ಘಾಟ್ ರಸ್ತೆಯಲ್ಲೂ ಮರ ಹಾಗೂ ಗುಡ್ಡ ಕುಸಿದ ಪರಿಣಾಮ ಬಿಸಿಲೆ ಘಾಟ್ ರಸ್ತೆಯಲ್ಲೂ ಸಂಚಾರಕ್ಕೆ ತೊಡಕಾಗಿದೆ.

    ಮತ್ತೆ ಕುಸಿತ: ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ನಾಲ್ಕು ಕಡೆಗಳಲ್ಲಿ ಗುಡ್ಡೆ ರಸ್ತೆಗೆ ಜಾರಿದೆ. 6 ಜೆಸಿಬಿ ಯಂತ್ರದ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ.

  • ಭೀಕರ ಅಪಘಾತ -ಐಷರ್ ಟೆಂಪೋ ಲಾರಿಗಳೆರಡು ಮುಖಾಮುಖಿಯಾಗಿ ಡಿಕ್ಕಿ,: ಚಾಲಕರಿಬ್ಬರ ದುರ್ಮರಣ

    ಭೀಕರ ಅಪಘಾತ -ಐಷರ್ ಟೆಂಪೋ ಲಾರಿಗಳೆರಡು ಮುಖಾಮುಖಿಯಾಗಿ ಡಿಕ್ಕಿ,: ಚಾಲಕರಿಬ್ಬರ ದುರ್ಮರಣ

    ಮಂಗಳೂರು: ಐಷೆರ್ ಟೆಂಪೋ ಲಾರಿಗಳ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿ ಲಾರಿ ಚಾಲಕರಿಬ್ಬರು ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತ್ತೊಟ್ಟುವಿನಲ್ಲಿ ಸಂಭವಿಸಿದೆ.

    ಓರ್ವ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ಚಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶಿಕಾರಿಪುರ ನಿವಾಸಿ ಮಂಜುನಾಥ ಸ್ಥಳದಲ್ಲೇ ಮೃತಗೀಡಾದ ಚಾಲಕ. ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಚಾಲಕನನ್ನು ಬೆಂಗಳೂರು ನೆಲಮಂಗಲ ನಿವಾಸಿ ನಾಗೇಶ್ ಎಂದು ತಿಳಿದುಬಂದಿದೆ.

    ಬೆಂಗಳೂರಿನಿಂದ ಬರುತ್ತಿದ್ದ ಲಾರಿಯು ಗೋಳಿತ್ತೊಟ್ಟು ಸೇತುವೆ ಬಳಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದು ಮಂಗಳೂರಿನಿಂದ ಬರುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಎರಡು ಲಾರಿಗಳ ಮುಂಭಾಗ ಪರಸ್ಪರ ಅಂಟಿ ಹೋಗಿದ್ದು, ಚಾಲಕರು ಲಾರಿಯೊಳಗಡೆ ಸಿಲುಕಿಕೊಂಡಿದ್ದರು. ಬಳಿಕ ಜೆಸಿಬಿ ಬಳಸಿ ಲಾರಿಗಳನ್ನು ಬೇರ್ಪಡಿಸಿ ಚಾಲಕರನ್ನು ಹೊರತರಲಾಯಿತು.

    ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮಗಳ ಕೊರಳಿಗೆ ತಾಳಿ ಬಿದ್ದ ಕೆಲವೇ ಕ್ಷಣಗಳಲ್ಲಿ ತಾಯಿಗೆ ಹೃದಯಾಘಾತ!

    ಮಗಳ ಕೊರಳಿಗೆ ತಾಳಿ ಬಿದ್ದ ಕೆಲವೇ ಕ್ಷಣಗಳಲ್ಲಿ ತಾಯಿಗೆ ಹೃದಯಾಘಾತ!

    ಮಂಗಳೂರು: ಮಗಳ ಕೊರಳಿಗೆ ತಾಳಿ ಬಿದ್ದ ಕೆಲವೇ ಕ್ಷಣಗಳಲ್ಲಿ ತಾಯಿ ಮೃತಪಟ್ಟ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.

    50 ವರ್ಷದ ವಾರಿಜಾ ಮೃತ ದುರ್ದೈವಿ. ಇವರು ಬೆಳ್ತಂಗಡಿಯ ಪಿಲಿಗೂಡು ನಿವಾಸಿ ತನಿಯಪ್ಪರ ಪತ್ನಿ.

    ಇಂದು ವಾರಿಜಾ ಅವರ ಮಗಳ ಮದುವೆ ಉಪ್ಪಿನಂಗಡಿಯ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯುತ್ತಿತ್ತು. ಮಗಳ ಕೊರಳಿಗೆ ತಾಳಿ ಬೀಳುತ್ತಿದ್ದಂತೆಯೇ ವಾರಿಜಾ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಷ್ಟರಲ್ಲೇ ವಾರಿಜ ಮೃತಪಟ್ಟಿದ್ದಾರೆ.

    ವಾರಿಜಾ- ತನಿಯಪ್ಪ ದಂಪತಿಗೆ ಒಬ್ಬಳೇ ಮಗಳು ನವ್ಯ. ಈಕೆಗೆ ಮೊಗ್ರು ಗ್ರಾಮದ ಕಂಚಿನಡ್ಕ ನಿವಾಸಿ ಆನಂದ ಎಂಬವರ ಜೊತೆ  ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಇಂದು ನವ್ಯಳ ವಿವಾಹದಲ್ಲಿ ತಾಯಿ ವಾರಿಜಾ ಸಂತೋಷದಿಂದಲೇ ಓಡಾಡುತ್ತಿದ್ದರು. ಅತಿಯಾದ ಸಂತೋಷ ಹಾಗೂ ಭಾವದ್ವೇಗದಿಂದಲೇ ವಾರಿಜಾ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ.

    ವಧುವಿನ ತಾಯಿಯ ಮರಣದಿಂದಾಗಿ ಇದೀಗ ಮದುವೆ ಮನೆಯಲ್ಲಿ ಸೂತಕದ ಛಾಯೆ ನಿರ್ಮಾಣವಾಗಿದೆ.

  • ತಂದೆಯ ಪಿಂಡ ಪ್ರದಾನಕ್ಕೆ ಮಂಗಳೂರಿಗೆ ಐಶ್ವರ್ಯ ರೈ ಭೇಟಿ

    ತಂದೆಯ ಪಿಂಡ ಪ್ರದಾನಕ್ಕೆ ಮಂಗಳೂರಿಗೆ ಐಶ್ವರ್ಯ ರೈ ಭೇಟಿ

    ಮಂಗಳೂರು: ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ತಮ್ಮ ತಂದೆ ಕೃಷ್ಣರಾಜ್ ಅವರ ಪಿಂಡ ಪ್ರದಾನ ಮಾಡುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದಾರೆ.

    ಐಶ್ವರ್ಯ ಜೊತೆ ತಾಯಿ ಬೃಂದಾ ರೈ ಮತ್ತು ಮಗಳು ಆರಾಧ್ಯ ಬಚ್ಚನ್ ಪಿಂಡ ಪ್ರದಾನ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಮೃತ ಕೃಷ್ಣರಾಜ್ ಮಂಗಳೂರಿನ ಕೌಡೂರು ಮೂಲದವರು. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯ ಸಂಗಮ ಕ್ಷೇತ್ರದಲ್ಲಿ ಪಿಂಡ ಪ್ರದಾನ ಕಾರ್ಯ ಮಾಡಲಾಗುತ್ತಿದೆ. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ದ ನೇತ್ರಾವತಿ ಕುಮಾರಧಾರಾ ಸಂಗಮ ಕ್ಷೇತ್ರದಲ್ಲಿ ಇಂದು ತಂದೆಯ ಪಿಂಡ ಪ್ರದಾನ ಕಾರ್ಯವನ್ನು ಐಶ್ವರ್ಯ ಕೈಗೊಳ್ಳಲಿದ್ದಾರೆ.

    ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೃಷ್ಣರಾಜ್ ರೈ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 17ರಂದು ನಿಧನ ಹೊಂದಿದ್ದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.

     

  • ಮಂಗಳೂರು: ಬೆಕ್ಕು ಕಚ್ಚಿ ರೇಬೀಸ್‍ಗೆ ತುತ್ತಾಗಿ ಉಪನ್ಯಾಸಕಿ ಸಾವು

    ಮಂಗಳೂರು: ಬೆಕ್ಕು ಕಚ್ಚಿ ರೇಬೀಸ್‍ಗೆ ತುತ್ತಾಗಿ ಉಪನ್ಯಾಸಕಿ ಸಾವು

    ಮಂಗಳೂರು: ಬೆಕ್ಕು ಕಚ್ಚಿ ರೇಬಿಸ್‍ಗೆ ತುತ್ತಾಗಿ ಉಪನ್ಯಾಸಕಿಯೊಬ್ಬರು ಮೃತಪಟ್ಟಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದಲ್ಲಿ ನಡೆದಿದೆ.

    ಕೇಂದ್ರ ಸಚಿವ ಡಿವಿ ಸದಾನಂದ ಗೌಡರ ಸಂಬಂಧಿ 56 ವರ್ಷದ ಪುಷ್ಪಾವತಿ ರೇಬಿಸ್‍ನಿಂದಾಗಿ ಮೃತಪಟ್ಟ ಮಹಿಳೆ. ಪುಷ್ಪಾವತಿ ಅವರಿಗೆ ನಾಲ್ಕು ತಿಂಗಳ ಹಿಂದೆ ಮನೆಯಲ್ಲಿ ಬೆಕ್ಕು ಕಚ್ಚಿತ್ತು. ಈ ಬಗ್ಗೆ ಆರಂಭದಲ್ಲಿ ಪುಷ್ಪಾವತಿ ನಿರ್ಲಕ್ಷ್ಯ ವಹಿಸಿದ್ದರು. ಆದರೆ ಕೆಲ ದಿನಗಳ ಹಿಂದೆ ಬೆನ್ನು ನೋವಿಗೆ ಒಳಗಾಗಿ ಆಸ್ಪತ್ರೆ ಸೇರಿದ ಪುಷ್ಪಾವತಿ ಅವರಲ್ಲಿ ರೇಬಿಸ್ ಲಕ್ಷಣಗಳು ಪತ್ತೆಯಾಗಿತ್ತು ಮತ್ತು ವರ್ತನೆಯಲ್ಲೂ ಅಸಹಜತೆ ಕಾಣಿಸಿಕೊಂಡಿತ್ತು.

    ತಕ್ಷಣ ಮನೆಯವರು ಪುಷ್ಪಾವತಿ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಮತ್ತು ಅಪೋಲೊ ಆಸ್ಪತ್ರೆಗೆ ಸೇರಿಸಿದ್ದರೂ, ಚಿಕಿತ್ಸೆ ಫಲಿಸದೆ ಪುಷ್ಪಾವತಿ ಮೃತಪಟ್ಟಿದ್ದಾರೆ. ಕಳೆದ 25 ವರ್ಷಗಳಿಂದ ಉಪ್ಪಿನಂಗಡಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಪುಷ್ಪಾವತಿ ಅಪಾರ ಶಿಷ್ಯ ವರ್ಗವನ್ನೂ ಹೊಂದಿದ್ದರು.

     

  • ಮಂಗಳೂರು: ಬಸ್ ಚಾಲಕನ ಕಿಸೆಯಲ್ಲೇ ಮೊಬೈಲ್ ಸ್ಫೋಟ!

    ಮಂಗಳೂರು: ಬಸ್ ಚಾಲಕನ ಕಿಸೆಯಲ್ಲೇ ಮೊಬೈಲ್ ಸ್ಫೋಟ!

    ಮಂಗಳೂರು: ಬಸ್ ಚಲಾಯುಸುತ್ತಿದ್ದ ಚಾಲಕನ ಶರ್ಟ್ ಕಿಸೆಯಲ್ಲೇ ಮೊಬೈಲ್ ಫೋನ್ ಸ್ಫೋಟಗೊಂಡು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ನಡೆದಿದೆ.

    ಮಡಂತ್ಯಾರಿನಿಂದ ಉಪ್ಪಿನಂಗಡಿಗೆ ಆಗಮಿಸುತ್ತಿದ್ದ ಖಾಸಗಿ ಬಸ್‍ವೊಂದರಲ್ಲಿ ಈ ಅವಘಡ ಸಂಭವಿಸಿದೆ. ಈ ರಸ್ತೆ ತುಂಬಾ ಕಿರಿದಾಗಿದ್ದರಿಂದ ಚಾಲಕನ ಗಮನವೆಲ್ಲಾ ಬಸ್ ಚಲಾಯಿಸುವ ಕಡೆ ಹಾಗೂ ಎದುರುಗಡೆಯಿಂದ ಬರುವ ವಾಹನಗಳತ್ತ ಇತ್ತು. ಮಾತ್ರವಲ್ಲದೇ ಬೆಳಗ್ಗಿನ ಸಮಯವಾಗಿದ್ದರಿಂದ ಪ್ರಯಾಣಿಕರಿಂದ ತುಂಬಿದ್ದ ಬಸ್ಸನ್ನು ಜಾಗರೂಕತೆಯಿಂದ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಚಾಲಕನ ಕಿಸೆಯಲ್ಲಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇದರಿಂದ ಚಾಲಕ ಮಾತ್ರವಲ್ಲದೇ ಅವರ ಪಕ್ಕದಲ್ಲಿದ್ದ ಪ್ರಯಾಣಿಕರೂ ಒಮ್ಮೆ ಕಕ್ಕಾಬಿಕ್ಕಿಯಾದ್ರು.

    ಇಂಟೆಕ್ಸ್ ಕಂಪೆನಿಗೆ ಸೇರಿದ ಈ ಮೊಬೈಲ್ ಸ್ಫೋಟಗೊಂಡಿದ್ದರಿಂದ ಒಂದು ಕ್ಷಣ ಆ ಬಸ್ಸಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಚಾಲಕನ ಜಾಗರೂಕತೆಯಿಂದ ಭಾರೀ ಅಪಾಯವೊಂದು ತಪ್ಪಿದರೂ, ಚಾಲಕ ಸಂದೇಶ್ ಬಂದಾರು ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಮಾತ್ರವಲ್ಲದೆ ಅವರ ಶರ್ಟ್ ಭಾಗಶಃ ಸುಟ್ಟು ಹೋಗಿದೆ ಎಂಬುವುದಾಗಿ ತಿಳಿದುಬಂದಿದೆ.