Tag: upper class

  • ಮೇಲ್ಜಾತಿಯ ಜನ ದಾರಿ ನೀಡದ್ದಕ್ಕೆ ಸೇತುವೆ ಮೇಲಿಂದ ಶವ ಇಳಿಸಿದ್ರು

    ಮೇಲ್ಜಾತಿಯ ಜನ ದಾರಿ ನೀಡದ್ದಕ್ಕೆ ಸೇತುವೆ ಮೇಲಿಂದ ಶವ ಇಳಿಸಿದ್ರು

    ಚೆನ್ನೈ: ಮೇಲ್ವರ್ಗದ ಸಮುದಾಯದವರು ತಮ್ಮ ಜಮೀನಿನಲ್ಲಿ ಶವವನ್ನು ತೆಗೆದುಕೊಂಡು ಹೋಗಲು ದಾರಿ ನೀಡದ ಕಾರಣ ದಲಿತರು ಸೇತುವೆ ಮೇಲಿನಿಂದ ಹಗ್ಗ ಕಟ್ಟಿ ಶವ ಇಳಿಸಿದ್ದಾರೆ. ಈ ಅಮಾನವೀಯ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ವನಿಯಂಬಾಡಿ ತಾಲೂಕಿನಲ್ಲಿ ನಡೆದಿದೆ.

    46 ವರ್ಷದ ಎಸ್.ಕುಪ್ಪಂ ಎಂಬ ವ್ಯಕ್ತಿ ಸಾವನ್ನಪ್ಪಿದ್ದರು. ಅಂತ್ಯಕ್ರಿಯೆಯಾಗಿ ಶವವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಮೇಲ್ಜಾತಿಯ ಕೆಲವರು ತಮ್ಮ ಜಮೀನಿನಲ್ಲಿ ಶವವನ್ನು ತೆಗೆದುಕೊಂಡು ಹೋಗದಂತೆ ತಡೆದಿದ್ದಾರೆ. ಕೊನೆಗೆ ಕುಟುಂಬಸ್ಥರು ಸೇತುವೆ ಮೇಲಿಂದ ಶವವನ್ನು ಕೆಳಗೆ ಇಳಿಸಿದ್ದಾರೆ.

    ಈ ಗ್ರಾಮದಲ್ಲಿ ದಲಿತರಿಗೆ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲು ಇರುವುದು ಒಂದೇ ಸ್ಮಶಾನ. ಶವವನ್ನು ತೆಗೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೇಲ್ವರ್ಗದವರ ಕೃಷಿ ಜಮೀನನ್ನು ದಾಟಿಕೊಂಡು ಹೋಗಬೇಕು. ಮೇಲ್ವರ್ಗದ ಜನರು ತಮ್ಮ ಜಮೀನಿನಲ್ಲಿ ಶವ ತೆಗೆದುಕೊಂಡು ಹೋಗಲು ಅಡ್ಡಿಪಡಿಸುತ್ತಾರೆ. ಹೀಗಾಗಿ ಚಟ್ಟಕ್ಕೆ ಎರಡು ಕಡೆ ಹಗ್ಗ ಕಟ್ಟಿ ಕೆಲವರು ಮೇಲಿನಿಂದ ಇಳಿಸುತ್ತಾರೆ. ಕೆಳಗೆ ಕೆಲವರು ಶವವನ್ನು ಇಳಿಸಿಕೊಳ್ಳುತ್ತಾರೆ.

    ಶವವನ್ನು ಸೇತುವೆ ಮೇಲಿಂದ ಕೆಳಗಿಳಿಸುವ ದೃಶ್ಯಗಳನ್ನು ಕೆಲವರು ಮೊಬೈಲಿನಲ್ಲಿ ಸೆರೆಹಿಡಿದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸರು, ಈ ರೀತಿಯ ಘಟನೆ ನಡೆದಿದೆಯೇ ಎಂದು ತನಿಖೆ ನಡೆಸಲಾಗುವುದು. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

  • ಸವರ್ಣಿಯರಿಂದ ದಲಿತ ಮಹಿಳೆಯ ಮೇಲೆ ದೌರ್ಜನ್ಯ – ಮನೆ ಕಟ್ಟದಂತೆ ಊರಿನಿಂದ ಬಹಿಷ್ಕಾರ

    ಸವರ್ಣಿಯರಿಂದ ದಲಿತ ಮಹಿಳೆಯ ಮೇಲೆ ದೌರ್ಜನ್ಯ – ಮನೆ ಕಟ್ಟದಂತೆ ಊರಿನಿಂದ ಬಹಿಷ್ಕಾರ

    ಧಾರವಾಡ: ಗ್ರಾಮದ ಸವರ್ಣಿಯರ ದೌರ್ಜನ್ಯಕ್ಕೆ ಬೇಸತ್ತು ಕುಟುಂಬವೊಂದು ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಂಗಲಾಚಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ವಿಠಲಾಪೂರ ಗ್ರಾಮದ ಲಕ್ಷ್ಮವ್ವ ಹರಿಜನ ಎಂಬವರ ಮೇಲೆ ದೌರ್ಜನ್ಯ ನಡೆದಿದೆ. ಊರಿನ ಕೆಲವು ಸವರ್ಣಿಯರ ಗುಂಪು ಬಹಿಷ್ಕಾರ ಹಾಕಿ ದೌರ್ಜನ್ಯ ಎಸಗಿದೆ ಎಂದು ಲಕ್ಷ್ಮವ್ವ ಆರೋಪಿಸಿದ್ದಾರೆ.

    ಗ್ರಾಮದಲ್ಲಿ ಕಟ್ಟಿಕೊಂಡಿದ್ದ ಸಣ್ಣ ಜೋಪಡಿಯೊಂದನ್ನು ಸಹ ನಾಶ ಮಾಡಿದ್ದಾರೆ ಹಾಗೂ ಮನೆ ಕೂಡಾ ಕಟ್ಟದಂತೆ ದಬ್ಬಾಳಿಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಈ ಮಹಿಳೆ, ನನ್ನ ಮಕ್ಕಳನ್ನು ಸಹ ಊರಲ್ಲಿ ಯಾರು ಮಾತನಾಡಿಸುವಂತಿಲ್ಲ, ಯಾವುದೆ ಅಂಗಡಿಗಳಲ್ಲಿ ವ್ಯವಹರಿಸದಂತೆ ನಿರ್ಬಂಧ ಹೇರಿದ್ದಾರೆ ಎಂದು ದೂರಿದ್ದಾರೆ.

    ಕೆಲ ದಿನಗಳ ಹಿಂದೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಕೂಡಾ ಭೇಟಿ ನೀಡಿ ಸ್ಥಳಿಯರಿಂದ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸುವದಾಗಿ ಭರವಸೆ ಸಹ ಜಿಲ್ಲಾಧಿಕಾರಿ ನೀಡಿದ್ದರು. ಆದರೆ ಇದುವರೆಗೆ ಸಹ ಈ ಮಹಿಳೆ ಲಕ್ಷ್ಮವ್ವಳಿಗೆ ಯಾವುದೆ ನ್ಯಾಯ ಸಿಕ್ಕಿಲ್ಲ ಮತ್ತು ಊರಿನಿಂದ ಹಾಕಿದ ಬಹಿಷ್ಕಾರ ಕೂಡ ಬದಲಾಗಿಲ್ಲ.

    ಮಕ್ಕಳನ್ನು ಯಾರಾದರೂ ಮಾತನಾಡಿಸಿದ್ರೆ ಅವರನ್ನು ಹೆದರಿಸುತ್ತಿದ್ದಾರೆ. ಹೀಗಾಗಿ ದಯಮಾಡಿ ನನಗೆ ನ್ಯಾಯ ನೀಡಿ ಎಂದು ಲಕ್ಷ್ಮವ್ವ ಕೇಳಿಕೊಂಡಿದ್ದಾರೆ.