Tag: unnao

  • ಶೇ.90ರಷ್ಟು ದೇಹ ಸುಟ್ಟ ನಂತರವೂ 1 ಕಿ.ಮೀ ಓಡಿ ಅತ್ಯಾಚಾರ ಸಂತ್ರಸ್ತೆಯಿಂದ 100ಕ್ಕೆ ಕರೆ

    ಶೇ.90ರಷ್ಟು ದೇಹ ಸುಟ್ಟ ನಂತರವೂ 1 ಕಿ.ಮೀ ಓಡಿ ಅತ್ಯಾಚಾರ ಸಂತ್ರಸ್ತೆಯಿಂದ 100ಕ್ಕೆ ಕರೆ

    – ಕೋರ್ಟಿಗೆ ಹೋಗುತ್ತಿದ್ದ ಸಂತ್ರಸ್ತೆಯ ಕೊಲೆಗೆ ಯತ್ನ

    ಲಕ್ನೋ: ಕೋರ್ಟಿಗೆ ಹೋಗುತ್ತಿದ್ದ 23 ವರ್ಷದ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶ ಉನ್ನಾವೋದಲ್ಲಿ ನಡೆದಿದೆ.

    ಸಂತ್ರಸ್ತೆಯ ದೇಹ ಶೇ.90ರಷ್ಟು ಸುಟ್ಟ ನಂತರವೂ ಆಕೆ ಸಹಾಯಕ್ಕಾಗಿ ಸುಮಾರು ಒಂದು ಕಿಲೋಮೀಟರ್ ಓಡಿ, ಸ್ವತಃ ಪೊಲೀಸರಿಗೆ ಕರೆ ಮಾಡಿದ್ದಾಳೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಈ ಅಮಾನವೀಯ ಘಟನೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಮಹಿಳೆಯು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಇದನ್ನೂ ಓದಿ: ಅತ್ಯಾಚಾರಿಗಳನ್ನು ಗಲ್ಲಿಗೇರಿಸುವುದಕ್ಕೆ ನನ್ನ ಸಹಮತವಿಲ್ಲ – ಪವನ್ ಕಲ್ಯಾಣ್

    ಈ ಪ್ರಕರಣದ ಪ್ರತ್ಯಕ್ಷದರ್ಶಿ ರವೀಂದ್ರ ಪ್ರಕಾಶ್ ಪ್ರಮುಖ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಬೆಂಕಿ ಹೊತ್ತಿಕೊಂಡಿದ್ದ ಸಂತ್ರಸ್ತೆಯು ಕಾಪಾಡಿ, ಕಾಪಾಡಿ ಎಂದು ಕೂಗುತ್ತಿದ್ದಳು. ಆದರೆ ಬೆಂಕಿಯನ್ನು ಕಂಡು ನಾವು ಭಯಭೀತರಾಗಿದ್ದೇವು. ಯಾರೊಬ್ಬರೂ ರಕ್ಷಣೆಗೆ ನಿಲ್ಲದ ಪರಿಣಾಮ ಸಂತ್ರಸ್ತೆಯು ಸಂಪೂರ್ಣವಾಗಿ ಸುಟ್ಟುಹೋದಳು. ಅಷ್ಟೇ ಅಲ್ಲದೆ ಆಕೆ ಮಾಟಗಾತಿ ಎಂದು ಭಾವಿಸಿದ್ದೇವೆ. ಹೀಗಾಗಿ ಆಕೆಯ ಹಿಂದೆ ಓಡಿ ಕೋಲೆಗೆ ಯತ್ನಿಸಿದ್ದೇವು ಎಂದು ತಿಳಿಸಿದ್ದಾರೆ.

    ಶೇ.90ರಷ್ಟು ಸುಟ್ಟ ನಂತರವೂ ಸಂತ್ರಸ್ತೆ ಸಹಾಯಕ್ಕಾಗಿ ಸುಮಾರು ಒಂದು ಕಿಲೋಮೀಟರ್ ಓಡಿದಳು. ಮಹಿಳೆಯ ಗುರುತು ತಿಳಿದ ನಂತರವೂ ನಮ್ಮ ಭಯ ಕಡಿಮೆಯಾಗಲಿಲ್ಲ. ಆಕೆಯಿಂದ ದೂರವೇ ನಿಂತಿದ್ದೇವು. ಈ ವೇಳೆ ನಮ್ಮ ಬಳಿ ಫೋನ್ ಪಡೆದು, ಸ್ವತಃ 100 ನಂಬರ್‌ಗೆ ಕರೆ ಮಾಡಿ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದಳು. ಸಂತ್ರಸ್ತೆಯೊಂದಿಗೆ ಮಾತನಾಡಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ತಲುಪಿದರು ಎಂದು ರವೀಂದ್ರ ಪ್ರಕಾಶ್ ಹೇಳಿದ್ದಾರೆ.

    ಏನಿದು ಪ್ರಕರಣ: ಮಹಿಳೆಯ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಸಂಬಂಧ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಳು. ಕೋರ್ಟ್  ವಿಚಾರಣೆಗೆ ಹಾಜರಾಗಲು ಮಹಿಳೆ ಹೋಗುತ್ತಿದ್ದಳು. ಈ ವೇಳೆ ಆಕೆಯ ಮೇಲೆ ಹಲ್ಲೆ ಮಾಡಿದ ಆರೋಪಿಗಳು, ಬೆಂಕಿ ಹಚ್ಚಿದ್ದಾರೆ.

    ಸಂತ್ರಸ್ತೆಯ ಹೇಳಿಕೆ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. ಈಗಾಗಲೇ ಇಬ್ಬರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

  • ಉನ್ನಾವ್ ರೇಪ್ ಕೇಸ್ – ಸಂತ್ರಸ್ತೆಗೆ 25 ಲಕ್ಷ ರೂ. ಪರಿಹಾರ, ಸಿಆರ್‌ಪಿಎಫ್ ಭದ್ರತೆ ಕೊಡಿ

    ಉನ್ನಾವ್ ರೇಪ್ ಕೇಸ್ – ಸಂತ್ರಸ್ತೆಗೆ 25 ಲಕ್ಷ ರೂ. ಪರಿಹಾರ, ಸಿಆರ್‌ಪಿಎಫ್ ಭದ್ರತೆ ಕೊಡಿ

    ನವದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಕುಟುಂಬಕ್ಕೆ ಸಿಆರ್‌ಪಿಎಫ್  ಯೋಧರ ಭದ್ರತೆ, 25 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಅಪಘಾತದ ಕುರಿತ ತನಿಖೆಯನ್ನು 7 ದಿನಗಳಲ್ಲಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

    ಪ್ರಕರಣದ ಕುರಿತು ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಯ್‍ಬರೇಲಿಯಲ್ಲಿ ನಡೆದ ಸಂತ್ರಸ್ತೆಯ ಅಪಘಾತ ಪ್ರಕರಣ ಸೇರಿದಂತೆ ಉನ್ನಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐದೂ ಪ್ರಕರಣಗಳನ್ನು ದೆಹಲಿಯ ಸಿಬಿಐಗೆ ವರ್ಗಾಯಿಸಬೇಕು. ಇದರೊಂದಿಗೆ ರಾಯ್‍ಬರೇಲಿಯಲ್ಲಿ ನಡೆದ ಅಪಘಾತ ಪ್ರಕರಣದ ತನಿಖೆಯನ್ನು ಬುಧವಾರದಿಂದ ಕೇವಲ 7 ದಿನಗಳ ಒಳಗಡೆ ಪೂರ್ಣಗೊಳಿಸುವಂತೆ ಸಿಬಿಐಗೆ ಸೂಚಿಸಿದೆ.

    ಪ್ರತಿ ದಿನ ವಿಚಾರಣೆ ನಡೆಸಿ 45 ದಿನಗಳೊಳಗೆ ಅತ್ಯಾಚಾರ ಪ್ರಕರಣದ ತನಿಖೆ ಪೂರ್ಣಗೊಳಿಸಬೇಕು ಎಂದು ಆದೇಶಿಸಿದೆ. 25 ಲಕ್ಷ ರೂ. ಪರಿಹಾರದ ಜೊತೆಗೆ ಸಂತ್ರಸ್ತೆಯ ಕುಟುಂಬ ಬಯಸಿದರೆ, ಅಪಘಾತದಲ್ಲಿ ಬದುಕುಳಿದವರನ್ನು ಲಕ್ನೋ ಆಸ್ಪತ್ರೆಯಿಂದ ಉತ್ತಮ ಚಿಕಿತ್ಸಾ ಸೌಲಭ್ಯ ಹೊಂದಿರುವ ದೇಶದ ಯಾವುದೇ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.

    ಸಂತ್ರಸ್ತೆಯ ತಾಯಿ, ಒಡಹುಟ್ಟಿದವರು, ಚಿಕ್ಕಪ್ಪ ಮಹೇಶ್ ಸಿಂಗ್ ಸೇರಿದಂತೆ ಅವರ ಹತ್ತಿರದ ಸಂಬಂಧಿ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ವಕೀಲರಿಗೆ ಸಿಆರ್‌ಪಿಎಫ್  ಯೋಧರ ಭದ್ರತೆ ನೀಡಬೇಕು. ಭದ್ರತೆಯ ಕುರಿತ ಆದೇಶವನ್ನು ಪಾಲಿಸಿರುವ ಕುರಿತು ನಾಳೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ತಿಳಿಸಿದೆ. ವಿಚಾರಣೆ ತಡವಾಗಿರುವ ಕುರಿತು ಸೂಕ್ತ ಕಾರಣ ತಿಳಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

    ಸಂತ್ರಸ್ತೆ ಮತ್ತು ಅವರ ಕುಟುಂಬಸ್ಥರು ವಕೀಲರೊಂದಿಗೆ ರಾಯ್‍ಬರೇಲಿ ಜೈಲಿನಲ್ಲಿರುವ ಸಂಬಂಧಿಕರೊಬ್ಬರನ್ನು ನೋಡಲು ತೆರಳುತ್ತಿದ್ದರು. ಈ ವೇಳೆ ಸಂತ್ರಸ್ತೆಯ ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಕುಟುಂಬದ ಇಬ್ಬರು ಸಾವನ್ನಪ್ಪಿದ್ದರು. ಅಲ್ಲದೆ, ಸಂತ್ರಸ್ತೆ ಹಾಗೂ ವಕೀಲರು ತೀವ್ರ ಗಾಯಗೊಂಡಿದ್ದರು.

    ಮಳೆ ಹೆಚ್ಚು ಬರುತ್ತಿದ್ದರಿಂದ ಎರಡೂ ವಾಹನಗಳ ನಿಯಂತ್ರಣ ತಪ್ಪಿ ಅಪಘಾತ ಸಂಭವಿದೆ ಎಂದು ಉನ್ನಾವ್ ಪೊಲೀಸ್ ವರಿಷ್ಠಾಧಿಕಾರಿ ಮಾಧವ್ ಪ್ರಸಾದ್ ವರ್ಮಾ ತಿಳಿಸಿದ್ದರು. ಸಂತ್ರಸ್ತೆಯು ಉನ್ನಾವ್‍ನ ನಿವಾಸಿಯಾಗಿದ್ದು, ಬ್ಯಾಂಗರ್ಮೌ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕುಲ್‍ದೀಪ್ ಸೆಂಗರ್ 2017ರಲ್ಲಿ ಮಗಳನ್ನು ಅತ್ಯಾಚಾರ ಗೈದಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದರು. ಆದರೆ ಈ ಬಗ್ಗೆ ಯಾರು ಕೂಡ ಕ್ರಮ ತೆಗೆದುಕೊಂಡಿರಲಿಲ್ಲ. ಬಳಿಕ ಸಂತ್ರಸ್ತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ನಿವಾಸದ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.

    ಅಪಘಾತದ ನಂತರ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕಲು ಆರೋಪಿಗಳೇ ಈ ಅಪಘಾತ ಮಾಡಿಸಿರಬಹುದು ಎಂದು ದೂರಿದ್ದರು. ಕಳೆದ ಎರಡು ದಿನಗಳಿಂದ ಪ್ರಕರಣ ಭಾರೀ ಸಂಚಲನ ಮೂಡಿಸಿದ್ದು, ಯುಪಿಯಲ್ಲಿ ಪ್ರತಿಭಟನೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಅಭಿಯಾನ ನಡೆಸಲಾಗುತ್ತಿದೆ. ಇಂದು ಶಾಸಕ ಕುಲ್‍ದೀಪ್ ಸೆಂಗರ್ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಬಿಜೆಪಿ ಆದೇಶ ಹೊರಡಿಸಿದೆ.

  • ಉನ್ನಾವ್ ರೇಪ್ ಕೇಸ್ – ಬಿಜೆಪಿಯಿಂದ ಆರೋಪಿ ಶಾಸಕ ಕುಲದೀಪ್ ಸಿಂಗ್ ಉಚ್ಛಾಟನೆ

    ಉನ್ನಾವ್ ರೇಪ್ ಕೇಸ್ – ಬಿಜೆಪಿಯಿಂದ ಆರೋಪಿ ಶಾಸಕ ಕುಲದೀಪ್ ಸಿಂಗ್ ಉಚ್ಛಾಟನೆ

    ನವದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣದ ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಬಿಜೆಪಿ ಆದೇಶ ಹೊರಡಿಸಿದೆ.

    ಉನ್ನಾವ್ ಅತ್ಯಾಚಾರಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶದಿಂದ ದೆಹಲಿಗೆ ವರ್ಗಾಯಿಸಿದ ಬೆನ್ನಲ್ಲೇ, ಬಿಜೆಪಿ ಈ ನಿರ್ಧಾರ ಕೈಗೊಂಡಿದೆ. ಸುಪ್ರೀಂ ಕೋರ್ಟ್ 1 ವಾರದ ಒಳಗಡೆ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿದೆ

    ಅತ್ಯಾಚಾರ ಸಂತ್ರಸ್ತೆ ತೆರಳುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಕೆಲ ದಿನಗಳ ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗಳು ನಡೆಯುತ್ತಿವೆ. ಸಂತ್ರಸ್ತೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರೇ ನನ್ನನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಳು. ಇತ್ತೀಚೆಗೆ ನಡೆದ ಲಾರಿ ಅಪಘಾತದಲ್ಲಿ ಸಂತ್ರಸ್ತೆ ಕುಟುಂಬದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಅಲ್ಲದೆ, ಸಂತ್ರಸ್ತೆ ಹಾಗೂ ಅವರ ವಕೀಲರ ಸ್ಥಿತಿ ಗಂಭೀರವಾಗಿದೆ.

    ಉನ್ನಾವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ತನ್ನ ಕುಟುಂಬ ಮತ್ತು ವಕೀಲರೊಂದಿಗೆ ರಾಯ್‍ಬರೇಲಿ ಸಮೀಪ ಕಾರಿನಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಟ್ರಕ್ ಕಾರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಕಾರಿನಲ್ಲಿದ್ದ ಸಂತ್ರಸ್ತೆ ಹಾಗೂ ವಕೀಲರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಲ್ಲದೆ ಸಂತ್ರಸ್ತೆಯ ಇಬ್ಬರು ಕುಟುಂಬಸ್ಥರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಳೆ ಬೀಳುತ್ತಿದ್ದ ಕಾರಣ ನಿಯಂತ್ರಣ ತಪ್ಪಿ ಎರಡು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ ಎಂದು ಪೊಲೀಸರು ತಿಳಿಸಿದ್ದರು. ಆದರೆ, ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಲು ಆರೋಪಿಗಳೇ ಉದ್ದೇಶಪೂರ್ವಕವಾಗಿ ಈ ಅಪಘಾತ ಮಾಡಿಸಿದ್ದಾರೆ ಎಂದು ಕಾಂಗ್ರೆಸ್, ಸೇರಿದಂತೆ ವಿರೋಧ ಪಕ್ಷಗಳು ದೂರಿದ್ದವು.

    ಸಂತ್ರಸ್ತೆ ಮತ್ತು ಅವರ ಕುಟುಂಬಸ್ಥರು ವಕೀಲರೊಂದಿಗೆ ರಾಯ್‍ಬರೇಲಿ ಜೈಲಿನಲ್ಲಿರುವ ಸಂಬಂಧಿಕರೊಬ್ಬರನ್ನು ನೋಡಲು ತೆರಳುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ಅಪಘಾತವಾಗಿದೆ ಎಂದು ಉನ್ನಾವ್ ಪೊಲೀಸ್ ವರಿಷ್ಠಾಧಿಕಾರಿ ಮಾಧವ್ ಪ್ರಸಾದ್ ವರ್ಮಾ ತಿಳಿಸಿದ್ದರು.

    ಸಂತ್ರಸ್ತೆಯು ಉನ್ನಾವ್‍ನ ನಿವಾಸಿಯಾಗಿದ್ದು, ಬ್ಯಾಂಗರ್ಮೌ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕುಲ್‍ದೀಪ್ ಸೆಂಗರ್ 2017ರಲ್ಲಿ ಮಗಳನ್ನು ಅತ್ಯಾಚಾರ ಗೈದಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದರು. ಆದರೆ ಈ ಬಗ್ಗೆ ಯಾರು ಕೂಡ ಕ್ರಮ ತೆಗೆದುಕೊಂಡಿರಲಿಲ್ಲ. ಬಳಿಕ ಸಂತ್ರಸ್ತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ನಿವಾಸದ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.

    ದುರ್ನಡತೆ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಶಾಸಕರು ಹಾಗೂ ಸಂಸದರು ಸೇರಿದಂತೆ ಜನಪ್ರತಿನಿಧಿಗಳನ್ನು ಪಕ್ಷದಿಂದ ಹೊರ ಹಾಕುವಂತೆ ಪ್ರಧಾನಿ ಮೋದಿ ಇತ್ತೀಚೆಗಷ್ಟೇ ಕಟ್ಟಪ್ಪಣೆ ನೀಡಿದ್ದರು. ಶಾಸಕ ಆಕಾಶ್ ವಿಜಯ್‍ವರ್ಗಿಯಾ ಅವರು ಕ್ರಿಕೆಟ್ ಬ್ಯಾಟ್‍ನಿಂದ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಪ್ರಕರಣದ ನಂತರ ಬಿಜೆಪಿಯ ಎಲ್ಲ ಜನಪ್ರತಿನಿಧಿಗಳಿಗೆ ಮೋದಿ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ಯಾವ ನಾಯಕರ ಮಗನಾಗಿದ್ದರೂ ಸರಿ ಅಂತಹವನ್ನು ಪಕ್ಷದಿಂದ ಹೊರಹಾಕಿ ಎಂದು ಆದೇಶಿಸಿದ್ದರು. ಈ ಬೆನ್ನಲ್ಲೇ ಉನ್ನಾವ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಬಿಜೆಪಿ ಆದೇಶ ಹೊರಡಿಸಿದೆ.

  • ಅಂಗಲಾಚಿ ಬೇಡಿದರೂ ಬಿಡದ ಕಾಮುಕರು, ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ!

    ಅಂಗಲಾಚಿ ಬೇಡಿದರೂ ಬಿಡದ ಕಾಮುಕರು, ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ!

    ಲಕ್ನೋ: ಮಹಿಳೆಯ ಮೇಲೆ ಮೂವರು ಕಾಮುಕರು ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಗಂಗಾಘಾಟ್ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಉನ್ನಾವೋ ಜಿಲ್ಲೆಯ ಗಂಗಾಘಾಟ್ ಗ್ರಾಮದ ಮಹಿಳೆಯನ್ನು ಮೂವರು ದುಷ್ಕರ್ಮಿಗಳು ಅರಣ್ಯ ಪ್ರದೇಶದಲ್ಲಿ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೇ ಮತ್ತೋರ್ವ ಆರೋಪಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಸೆರೆಹಿಡಿದಿದ್ದಾನೆ. ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

    ವಿಡಿಯೋದಲ್ಲಿ ಮಹಿಳೆಯು ತನ್ನ ಮೇಲೆ ಅತ್ಯಾಚಾರ ನಡೆಸದಂತೆ ಅವರಲ್ಲಿ `ಭಯ್ಯಾ ಐಸಾ ಮತ್ ಕರೋ'(ಅಣ್ಣಾ ಈ ರೀತಿ ಮಾಡಬೇಡಿ) ಎಂದು ಗೋಗರೆದಿದ್ದಾರೆ. ಮಹಿಳೆ ಅಂಗಲಾಚಿ ಕೇಳಿಕೊಂಡರೂ ಆ ಮೂವರು ಕಾಮುಕರು ದೌರ್ಜನ್ಯ ಮುಂದುವರಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚೆತ್ತುಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಯಾದ ಅನೂಪ್ ಸಿಂಗ್, ಘಟನೆ ಸಂಬಂಧ ಇಬ್ಬರು ಆರೋಪಿಗಳಾದ ರಾಹುಲ್ ಹಾಗೂ ಆಕಾಶ್ ಎಂಬವರನ್ನು ಬಂಧಿಸಿದ್ದೇವೆ. ಅಲ್ಲದೇ ಉಳಿದ ಇಬ್ಬರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೇ ವಿಡಿಯೋ ವೈರಲ್ ಮಾಡಿದ್ದವರ ಮೇಲೆಯೂ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಮಹಿಳೆಯರ ಮೇಲಿನ ದೌರ್ಜನ್ಯದಿಂದಲೇ ಹೆಸರುವಾಸಿಯಾಗಿದ್ದ ಉನ್ನಾವೋ ಜಿಲ್ಲೆಯಲ್ಲಿ ಮತ್ತೊಮ್ಮೆ ಲೈಂಗಿಕ ದೌರ್ಜನ್ಯ ನಡೆದಿದೆ. ಈ ಹಿಂದೆ ಉತ್ತರಪ್ರದೇಶ ಬಿಜೆಪಿ ಶಾಸಕ ಕುಲದೀಪ್ ಯಾದವ್ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಯುವತಿಯೊಬ್ಬಳು ಆರೋಪಿಸಿದ್ದಳು. ಈ ಪ್ರಕರಣ ತನಿಖೆ ನಡೆಯುತ್ತಿರುವಾಗಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

  • ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಭಾಗಿ: ಸಿಬಿಐ

    ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಭಾಗಿ: ಸಿಬಿಐ

    ದೆಹಲಿ: ಉನ್ನಾವೋದ 17 ವರ್ಷದ ಬಾಲಕಿ ಮೇಲೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅತ್ಯಾಚಾರ ಎಸಗಿದ್ದಾನೆ ಎಂದು ಬಂಧನಕ್ಕೆ ಒಳಗಾದ ಸಹಾಯಕ ತಿಳಿಸಿದ್ದಾನೆ ಎಂದು ಸಿಬಿಐ ತಿಳಿಸಿದೆ.

    ಮುಂದೆ ಉದ್ಯೋಗ ನೀಡುತ್ತೇನೆ ಎಂದು ಆಶ್ವಾಸನೆ ನೀಡಿ ಕುಲದೀಪ್ ಸಿಂಗ್ ಸೆಂಗಾರ್ ಮತ್ತು ಸಂಗಡಿಗರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸಿಬಿಐ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.

    ಈ ಸಂಬಂಧ ಕುಲದೀಪ್ ಸಹಾಯಕನನ್ನು ಸಿಬಿಐ ವಶಕ್ಕೆ ಪಡೆದಿತ್ತು. ತೀವ್ರ ತನಿಖೆ ನಡೆಸಿದ ವೇಳೆ ಆರೋಪಿ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    2017ರ ಜೂ.4ರಂದು ಉತ್ತರಪ್ರದೇಶದ ಮಖಿ ಗ್ರಾಮದಲ್ಲಿನ ಮನೆಯೊಂದರಲ್ಲಿ ಕುಲದೀಪ್ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ಈ ವೇಳೆ ತಾನು ಬಾಗಿಲು ಕಾಯುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಶಾಸಕನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಬಾಲಕಿಯನ್ನು ಮತ್ತೆ ಜೂ.11 ರಂದು ಶುಭಾಸಿಂಗ್ ಅವಧ್ ನಾರಾಯಣ ಹಾಗೂ ಬ್ರಿಜೇಶ್ ಯಾದವ್ ಅಪಹರಿಸಿದ್ದು, ಜೂ. 19ರ ವರೆಗೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿರುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಬಾಲಕಿ ಜೂ.20 ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಶಾಸಕ ಕುಲದೀಪ್ ಸಿಂಗ್ ವಿರುದ್ಧ ಎಫ್‍ಐಆರ್ ದಾಖಲು ಮಾಡಿಕೊಂಡಿರಲಿಲ್ಲ. ಅಲ್ಲದೇ, ಸ್ಥಳೀಯ ಪೊಲೀಸರು ನಡೆಸಿದ ತನಿಖೆಯ ಬಳಿಕ ಸಲ್ಲಿಸಿದ ಆರೋಪ ಪಟ್ಟಿಯಲ್ಲಿಯೂ ಕುಲದೀಪ್ ಹೆಸರಿರಲಿಲ್ಲ. ಈ ಪ್ರಕರಣ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾದ ಸರ್ಕಾರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ನಂತರ ಸಿಬಿಐ ಶಾಸಕನ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಿತ್ತು.

    ಕುಲದೀಪ್ ಪ್ರಭಾವಿ ವ್ಯಕ್ತಿಯಾಗಿದ್ದರಿಂದ, ಬಾಲಕಿ ವೈದ್ಯಕೀಯ ತಪಾಸಣೆ ನಡೆಸುವಲ್ಲಿ ಉದ್ದೇಶಪೂರ್ವಕವಾಗಿ ತಡ ಮಾಡಲಾಗಿದೆ. ಅಲ್ಲದೇ, ಯುವತಿ ಧರಿಸಿದ್ದ ಉಡುಗೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಲ್ಲ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮೂರು ಎಫ್‍ಐಆರ್ ದಾಖಲು ಮಾಡಿದೆ. ಕುಲದೀಪ್ ಹಾಗೂ ಆತನ ಸಹಚರನ ವಿರುದ್ಧ ಒಂದು ಎಫ್‍ಐಆರ್ ದಾಖಲಾಗಿದ್ದರೆ, ಸಂತ್ರಸ್ತೆಯ ಕುಟುಂಬ ಯೋಗಿ ಆದಿತ್ಯನಾಥ್ ನಿವಾಸದ ಮುಂದೆ ಪ್ರತಿಭಟನೆ ನಡೆಸುವ ವೇಳೆ ನಡೆದ ಗಲಾಟೆಯ ಸಂಬಂಧಿಸಿದಂತೆ ಸ್ಥಳೀಯರ ವಿರುದ್ಧ ಎರಡನೇ ಎಫ್‍ಐಆರ್ ದಾಖಲಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದ ಸಂತ್ರಸ್ತೆಯ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಮೂರನೇ ಎಫ್‍ಐಆರ್ ದಾಖಲಾಗಿದೆ.

  • ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಪೋಷಕರೇ ಕಾರಣ: ಯುಪಿ ಬಿಜೆಪಿ ಶಾಸಕ

    ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಪೋಷಕರೇ ಕಾರಣ: ಯುಪಿ ಬಿಜೆಪಿ ಶಾಸಕ

    ಲಕ್ನೋ: ಮೊಬೈಲ್ ಬಳಕೆ ಮಾಡುವ ಮಹಿಳೆಯರ ಮೇಲೆ ಅತ್ಯಾಚಾರವಾಗಿರುವ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಅಲ್ಲದೇ, ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗುವುದಕ್ಕೆ ಪೋಷಕರೇ ಕಾರಣ ಎಂದು ಉತ್ತರಪ್ರದೇಶದ ಬಾಲಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    15 ವರ್ಷದ ಒಳಗಿನ ಮಕ್ಕಳನ್ನು ಕಟ್ಟುನಿಟ್ಟಾಗಿ ಬೆಳೆಸಬೇಕು. ಅಲ್ಲದೇ, ಅವರಿಗೆ ಮುಕ್ತವಾಗಿ ಸಂಚರಿಸಲು ಹಾಗೂ ಸ್ಮಾರ್ಟ್ ಫೋನ್ ಬಳಕೆಗೆ ಅವಕಾಶ ನೀಡಬಾರದು ಎಂದಿದ್ದಾರೆ.

    ಈ ಹಿಂದೆ ಉನ್ನವೋ ಅತ್ಯಾಚಾರ ಸಂತ್ರಸ್ತೆ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸಿದ್ದಾಳೆ ಎಂದು ಸುರೇಂದ್ರ ಸಿಂಗ್ ಹೇಳಿದ್ದರು.”ಈ ಹಿಂದೆ ಆಕೆ ಯುವಕನ ವಿರುದ್ಧ ಸುಳ್ಳು ಅತ್ಯಾಚಾರದ ಕೇಸ್ ದಾಖಲಿಸಿದ್ದಳು. ಈಕೆಯ ದೂರಿನ ಪರಿಣಾಮ ಆತ 6 ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸುವಂತಾಗಿತ್ತು” ಎಂದು ಹೇಳಿಕೆ ನೀಡಿದ್ದರು.

    ಕಳೆದ ಏಪ್ರಿಲ್‍ನಲ್ಲಿ ಉನ್ನಾವೋದ ಯುವತಿ ಮೇಲಿನ ಅತ್ಯಾಚಾರ ಆರೋಪದಡಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ಬಂಧಿಸಲಾಗಿದೆ. ಸೆಂಗರ್ ಮತ್ತು ಅತ್ಯಾಚಾರ ಸಂತ್ರಸ್ತೆಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕಿದೆ. ತನಿಖೆ ನಂತರ ಸತ್ಯ ಹೊರ ಬರಲಿದೆ. ಆರೋಪ ಸಾಬೀತಾದರೆ ಶಿಕ್ಷೆ ವಿಧಿಸಬೇಕು ಎಂದರು.

    ಸೆಂಗರ್ ಮತ್ತು ಆತನ ಸಹಚರರು ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಮಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಸಂತ್ರಸ್ತೆಯ ಕುಟುಂಬಸ್ಥರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಅವರು ಆತ್ಮಹತ್ಯಗೆ ಯತ್ನಿಸಿದ್ದರು. ಕೂಡಲೇ ಯುವತಿ ಹಾಗೂ ಕುಟುಂಬದವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರು ವಶಕ್ಕೆ ಪಡೆದಿದ್ದ ಸಂತ್ರಸ್ತೆಯ ತಂದೆ ತೀವ್ರ ಗಾಯದಿಂದಾಗಿ ಠಾಣೆಯಲ್ಲಿಯೇ ಮೃತಪಟ್ಟಿದ್ದರು.

    ತನಿಖೆಯ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಏಪ್ರಿಲ್ 12 ರಂದು ಸಿಬಿಐಗೆ ವಹಿಸಿದೆ.

  • ಉನ್ನಾವೋ ರೇಪ್ ಪ್ರಕರಣ: ಸಿಬಿಐನಿಂದ ಬಿಜೆಪಿ ಶಾಸಕನ ವಿಚಾರಣೆ

    ಉನ್ನಾವೋ ರೇಪ್ ಪ್ರಕರಣ: ಸಿಬಿಐನಿಂದ ಬಿಜೆಪಿ ಶಾಸಕನ ವಿಚಾರಣೆ

    ಲಕ್ನೋ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಸಿಬಿಐ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

    ಕಳೆದ ವರ್ಷ ಉತ್ತರಪ್ರದೇಶದ ಉನ್ನಾವೋದಲ್ಲಿ 17 ವರ್ಷದ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರನ್ನು ವಶಕ್ಕೆ ಪಡೆದು ಈಗ ಸಿಬಿಐನ ಲಕ್ನೋ ಕಚೇರಿಯಲ್ಲಿ ವಿಚಾರಣೆ ನಡೆಯುತ್ತಿದೆ.

    ಇಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ಲಕ್ನೋದ ಇಂದಿರಾ ನಗರದಲ್ಲಿರೋ ಮನೆಗೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಸೆಂಗಾರ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಹಝರತ್ ಗಂಗ್ ನಲ್ಲಿರುವ ಸಿಬಿಐ ಕಚೇರಿಗೆ ಕರೆದೊಯ್ದಿದ್ದರು.

    ಕಳೆದ ವಾರವಷ್ಟೇ ಸಂತ್ರಸ್ತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನೆ ಮುಂದೆ ತನಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ ಧರಣಿ ನಡೆಸಿದ್ದರು. ಅಲ್ಲದೇ ಇದೇ ಸಂದರ್ಭದಲ್ಲಿ ಆತ್ಮಹತ್ಯೆಗೂ ಯತ್ನಿಸಿದ್ದರು. ಕೂಡಲೇ ಯುವತಿ ಹಾಗೂ ಆಕೆಯ ಕುಟುಂಬದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ನಡುವೆ ಸಂತ್ರಸ್ತೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿ ತೀವ್ರ ಗಾಯಗಳಾಗಿ ಮೃತಪಟ್ಟಿದ್ದರು. ಈ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

    ಧರಣಿ ವೇಳೆ ಆರೋಪಿ ಸೆಂಗಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೇ ಪ್ರಕಣಕ್ಕೆ ಸಂಬಂಧಿಸಿದಂತೆ ಕೂಡಲೇ ಆತನಿಗೆ ಶಿಕ್ಷೆ ನಿಡಬೇಕು ಎಂದು ಸಂತ್ರಸ್ತೆ ಹೇಳಿದ್ದರು.

    ಇಡೀ ಪ್ರಕರಣದ ತನಿಖೆ ನಡೆಸುವಂತೆ ರಾಜ್ಯ ಪೊಲೀಸರು ಸಿಬಿಐ ಕೈಗೆ ಗುರುವಾರ ಹಸ್ತಾಂತರಿಸಿದ್ದರು. ಹೀಗಾಗಿ ಮಾಖಿ ಪೊಲೀಸ್ ಠಾಣೆಯ ಪೊಲೀಸರೊಂದಿಗೆ ಸಿಬಿಐ ತಂಡ ಕೂಡಲೇ ಉನ್ನಾವೋ ಗೆ ತೆರಳಿ ಸಂತ್ರಸ್ತೆ ಹಾಗೂ ಆಕೆಯ ಕುಟುಂಬಸ್ಥರ ಹೇಳಿಕೆಯನ್ನು ಪಡೆದುಕೊಂಡಿದ್ದರು. ಇದೇ ವೇಳೆ ಸಂತ್ರಸ್ತೆಯ ತಂದೆಗೆ ಚಿಕಿತ್ಸೆ ನೀಡಿದ ವೈದ್ಯರು ಕೂಡ ಅವರಿಗೆ ಸಾಥ್ ನೀಡಿದ್ದರು.