Tag: Unnao case

  • ಬಿಜೆಪಿ ಸರ್ಕಾರ ನನ್ನೊಂದಿಗೆ ಇದೆಯಾ? ಕುಲದೀಪ್ ಸೆನ್‍ಗರ್ ಜೊತೆ?: ಉನ್ನಾವೋ ಪ್ರಕರಣದ ಸಂತ್ರಸ್ತೆ

    ಬಿಜೆಪಿ ಸರ್ಕಾರ ನನ್ನೊಂದಿಗೆ ಇದೆಯಾ? ಕುಲದೀಪ್ ಸೆನ್‍ಗರ್ ಜೊತೆ?: ಉನ್ನಾವೋ ಪ್ರಕರಣದ ಸಂತ್ರಸ್ತೆ

    ಲಕ್ನೋ: ಬಿಜೆಪಿ ಸರ್ಕಾರ ನನ್ನೊಂದಿಗೆ ಇದೆಯಾ ಅಥವಾ ಅಪರಾಧಿ ಕುಲದೀಪ್ ಸೆನ್‍ಗರ್ ಜೊತೆಗಿದೆಯಾ ಎಂದು ಉನ್ನಾವೋ ಪ್ರಕರಣದ ಸಂತ್ರಸ್ತೆ ಪ್ರಶ್ನೆ ಮಾಡಿದ್ದಾರೆ.

    ಉನ್ನಾವೋ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷ ಚುನಾವಣೆಗೆ ಅರುಣ್ ಸಿಂಗ್ ಬಿಜೆಪಿ ಅಭ್ಯರ್ಥಿ. ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಕುಲದೀಪ್ ಸೆನ್‍ಗರ್ ಆಪ್ತ. ಹೀಗಾಗಿ ಅರುಣ್ ಸಿಂಗ್‍ಗೆ ಟಿಕೆಟ್ ನೀಡಿರುವುದನ್ನ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ವಿರೋಧಿಸಿದ್ದಾರೆ. ಈ ಸಂಬಂಧ ವೀಡಿಯೋ ಮೂಲಕ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

    ವೀಡಿಯೋ ಹೇಳಿಕೆ: ಮಾನ್ಯ ರಾಷ್ಟ್ರಪತಿಗಳೇ, ಪ್ರಧಾನಿಗಳು ಮತ್ತು ಸಿಎಂ ಯೋಗಿ ಆದಿತ್ಯನಾಥ್ ನೀವು ನನ್ನ ಪಶ್ನೆಗೆ ಉತ್ತರ ನೀಡಬೇಕು. ಒಂದು ವೇಳೆ ಅರುಣ್ ಸಿಂಗ್ ಚುನಾವಣೆಯಲ್ಲಿ ಗೆದ್ದರೆ, ನನ್ನ ಜೀವಕ್ಕಿರುವ ಅಪಾಯ ಹೆಚ್ಚಾಗಲಿದೆ. ಕೂಡಲೇ ಸರ್ಕಾರ ಮತ್ತು ಪಕ್ಷ ಅರುಣ್ ಸಿಂಗ್‍ಗೆ ನೀಡಿರುವ ಟಿಕೆಟ್ ಹಿಂಪಡೆದುಕೊಳ್ಳಬೇಕು. ಕಳಂಕರಹಿತರಿಗೆ ಟಿಕೆಟ್ ನೀಡಬೇಕು. ನನ್ನ ಚಿಕಪ್ಪ ಪೊಲೀಸ್ ಬಂಧನದಲ್ಲಿದ್ದು, ಪೆರೋಲ್ ಗೆ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ ಕುಲ್‍ದೀಪ್ ಪ್ರಭಾವದಿಂದ ಪೆರೋಲ್ ಸಿಗುತ್ತಿಲ್ಲ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾರೆ.

    ಸಂತ್ರಸ್ತೆ ಹೇಳಿಕೆ ಬಳಿಕ ಬಿಜೆಪಿ ನೀಡಿದ ಟಿಕೆಟ್ ಹಿಂಪಡೆದುಕೊಂಡಿದೆ. ಅರುಣ್ ಸಿಂಗ್ ನಮ್ಮ ಅಭ್ಯರ್ಥಿ ಅಲ್ಲ, ಶಕುನ್ ಸಿಂಗ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜ್ ಕಿಶೋರ್ ರಾವತ್ ಹೇಳಿದ್ದಾರೆ. ಇದನ್ನೂ ಓದಿ: ಉನ್ನಾವೋ ಕೇಸ್ – ಅತ್ಯಾಚಾರಿ ಶಾಸಕ ಸೆಂಗಾರ್‌ಗೆ ಜೀವಾವಧಿ ಜೈಲು ಶಿಕ್ಷೆ

  • ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ ಸೋನಿಯಾ ಗಾಂಧಿ

    ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ ಸೋನಿಯಾ ಗಾಂಧಿ

    ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನಾಳೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

    ದೇಶದಲ್ಲಿ ಮಹಿಳೆಯರ ಮೇಲಿನ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಹುಟ್ಟುಹಬ್ಬ ಆಚರಿಸದಿರಲು ಸೋನಿಯಾ ಗಾಂಧಿ ತೀರ್ಮಾನಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಡಿಸೆಂಬರ್ 9ರಂದು ಸೋನಿಯಾ ಗಾಂಧಿಯವರು 73ನೇ ವಸಂತಕ್ಕೆ ಕಾಲಿಡಲಿದ್ದು, ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಹುಟ್ಟುಹಬ್ಬ ಆಚರಣೆ ಮಾಡಬೇಡಿ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎನ್ನಲಾಗುತ್ತಿದೆ.

    ದಿಶಾ ಮತ್ತು ಉನ್ನಾವೋ ಪ್ರಕರಣಗಳಿಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ದಿಶಾ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ನಲ್ಲಿ ಹೊಡೆದುರಳಿಸಿದ್ದಾರೆ. ಉನ್ನಾವೋ ಪ್ರಕರಣದ ಕಾಮುಕರಿಗೆ ಶಿಕ್ಷೆ ಆಗಬೇಕೆಂಬ ಕೂಗು ಕೇಳಿ ಬರುತ್ತಿದೆ.

    ಶನಿವಾರ ಉನ್ನಾವೋ ಸಂತ್ರಸ್ತೆ ಕುಟುಂಬಸ್ಥರನ್ನು ಭೇಟಿ ಮಾಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಸಾಂತ್ವಾನ ಹೇಳಿದ್ದರು. ಈ ಹಿಂದೆ ಇಂತಹುದೇ ಪ್ರಕರಣ ನಡೆದಿದ್ದರೂ 23 ವರ್ಷದ ಮಹಿಳೆಗೆ ಯಾಕೆ ರಕ್ಷಣೆ ನೀಡಲಿಲ್ಲ. ಈ ಮೂಲಕ ಈ ಹಿಂದೆ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಮೇಲೆ ಆರೋಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಲಾರಿ ಹರಿಸಿ ಅಪಘಾತವಾಗಿದೆ ಎನ್ನುವ ರೀತಿಯಲ್ಲಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಹೇಳಲಾಗಿತ್ತು. ಸಂತ್ರಸ್ತೆಯ ಕುಟುಂಬಕ್ಕೆ ಬೆಂಬಲ ನೀಡುವ ಸಲುವಾಗಿ ವ್ಯಾಪಕ ಪ್ರಚಾರ ನೀಡಬೇಕಿದೆ ಎಂದು ಪ್ರಿಯಾಂಕ ಗಾಂಧಿ ಒತ್ತಾಯಿಸಿದ್ದರು.

    ಎಫ್‍ಐಆರ್ ದಾಖಲಿಸಿಕೊಳ್ಳಲೂ ನಿರಾಕರಿಸಿದ ಪೊಲೀಸರು ಯಾವ ರೀತಿಯ ಕ್ರಮ ಕೈಗೊಂಡಿದ್ದಾರೆ? ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದರು. ನಿತ್ಯ ನಡೆಯುವ ಪ್ರಕರಣದ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

    ಸಾಮಾಜಿಕವಾಗಿ ಪ್ರತಿಯೊಬ್ಬರ ಸಾಮೂಹಿಕ ವೈಫಲ್ಯದಿಂದಾಗಿ ಮಹಿಳೆಗೆ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. ಸಾಮಾಜಿಕವಾಗಿ ನಾವೆಲ್ಲರೂ ತಪ್ಪಿತಸ್ಥರು. ಅದೇ ರೀತಿ ಯುಪಿಯಲ್ಲಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ತೋರಿಸುತ್ತದೆ ಎಂದು ಪ್ರಿಯಾಂಕ ಹರಿಹಾಯ್ದಿದ್ದಾರೆ.

  • ಉನ್ನಾವೋ ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕೆಂದು ತನ್ನ ಮಗಳ ಮೇಲೆ ಪೆಟ್ರೋಲ್ ಸುರಿದ ತಾಯಿ

    ಉನ್ನಾವೋ ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕೆಂದು ತನ್ನ ಮಗಳ ಮೇಲೆ ಪೆಟ್ರೋಲ್ ಸುರಿದ ತಾಯಿ

    ನವದೆಹಲಿ: ಉನ್ನಾವೋ ಸಂತ್ರಸ್ತೆಗೆ ನ್ಯಾಯ ಕೊಡಿಸಿ ಎಂದು ತಾಯಿಯೊಬ್ಬಳು ತನ್ನ ಅಪ್ರಾಪ್ತ ಮಗಳ ಮೇಲೆ ಪೆಟ್ರೋಲ್ ಸುರಿದಿರುವ ಘಟನೆ ಇಂದು ಮಧ್ಯಾಹ್ನ ನವದೆಹಲಿಯ ಸಫ್ದರ್ಜಂಗ್ ಆಸ್ಪತ್ರೆ ಎದುರು ನಡೆದಿದೆ.

    ಉನ್ನಾವೋ ಪ್ರಕರಣದ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದು ಪ್ರಕರಣದ ಸಂತ್ರಸ್ತೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ ಶೇ.90 ರಷ್ಟು ಸುಟ್ಟು ಹೋಗಿದ್ದ ಸಂತ್ರಸ್ತೆ ಶುಕ್ರವಾರ ರಾತ್ರಿ 11.40 ಸಮಯದಲ್ಲಿ ಚಿಕಿತ್ಸೆ ಫಲಿಸದೆ ನವದೆಹಲಿಯ ಸಫ್ದರ್ಜಂಗ್ ಆಸ್ಪತ್ರೆ ಸಾವನ್ನಪ್ಪಿದ್ದಳು.

    ಸಂತ್ರಸ್ತೆಯ ಸಾವಿನ ನಂತರ ಆಕೆಯ ಸಾವಿಗೆ ನ್ಯಾಯ ಬೇಕು ಎಂದು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಯುತ್ತಿದ್ದು, ಈ ಪ್ರತಿಭಟನೆಯ ವೇಳೆ ಉನ್ನಾವೋ ಸಂತ್ರಸ್ತೆಗೆ ನ್ಯಾಯ ಕೊಡಿಸಿ ಎಂದು ಮಹಿಳೆಯೋರ್ವಳು ತನ್ನ 6 ವರ್ಷದ ಮಗಳ ಮೇಲೆ ಪೆಟ್ರೋಲ್ ಸುರಿದಿದ್ದಾಳೆ. ಆದರೆ ಸ್ಥಳದಲ್ಲಿದ್ದ ಪೊಲೀಸರು ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಹಾಗೂ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಉನ್ನಾವೋ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯನ್ನು ಮರಣೋತ್ತರ ಪರೀಕ್ಷೆ ಮಾಡಿ ಮೃತದೇಹವನ್ನು ಉತ್ತರ ಪ್ರದೇಶದ ಆಕೆಯ ಗ್ರಾಮಕ್ಕೆ ಕೊಂಡೊಯ್ದ ಒಂದು ಗಂಟೆಯ ನಂತರ ಈ ಘಟನೆ ನಡೆದಿದೆ. ಉನ್ನಾವೋ ಸಂತ್ರಸ್ತೆಗೆ ಐವರು ಆರೋಪಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ನಂತರ ಶೇ.90 ರಷ್ಟು ಸುಟ್ಟಿದ್ದ ಸಂತ್ರಸ್ತೆ 40 ಗಂಟೆಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಡಿ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದರು.

    ಸಂತ್ರಸ್ತ ಯುವತಿ ಮೇಲೆ 2018ರಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಮಾರ್ಚ್ 5 ಮತ್ತು 6 ರಂದು ಆರೋಪಿಗಳ ವಿರುದ್ಧ ಯುವತಿ ದೂರು ನೀಡಿದ್ದಳು. ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಶುಭಂ ತ್ರಿವೇದಿ ಎಂಬಾತನನ್ನು ಬಂಧಿಸಿದ್ದರು. ಕಳೆದ ನವೆಂಬರ್ 30ರಂದು ಆರೋಪಿ ಶುಭಂಗೆ ಕೋರ್ಟ್ ಜಾಮೀನು ನೀಡಿತ್ತು. ಡಿಸೆಂಬರ್ 5ರಂದು ಸಾಕ್ಷಿ ಹೇಳಲು ಕೋರ್ಟಿಗೆ ತೆರಳುತ್ತಿದ್ದ ಸಂತ್ರಸ್ತೆ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು.

    ಬೆಂಕಿ ಹೊತ್ತಿಕೊಂಡಿದ್ದ ಸಂತ್ರಸ್ತೆಯು ಕಾಪಾಡಿ, ಕಾಪಾಡಿ ಎಂದು ಕೂಗುತ್ತಿದ್ದಳು. ಆದರೆ ಬೆಂಕಿಯನ್ನು ಕಂಡು ನಾವು ಭಯಭೀತರಾಗಿದ್ದೇವು. ಯಾರೊಬ್ಬರೂ ರಕ್ಷಣೆಗೆ ನಿಲ್ಲದ ಪರಿಣಾಮ ಸಂತ್ರಸ್ತೆಯು ಸಂಪೂರ್ಣವಾಗಿ ಸುಟ್ಟುಹೋದಳು. ಅಷ್ಟೇ ಅಲ್ಲದೆ ಆಕೆ ಮಾಟಗಾತಿ ಎಂದು ಭಾವಿಸಿದ್ದೇವೆ. ಹೀಗಾಗಿ ಆಕೆಯ ಹಿಂದೆ ಓಡಿ ಕೊಲೆಗೆ ಯತ್ನಿಸಿದ್ದೇವು. ಸಂತ್ರಸ್ತೆಯ ದೇಹ ಶೇ.90ರಷ್ಟು ಸುಟ್ಟ ನಂತರವೂ ಆಕೆ ಸಹಾಯಕ್ಕಾಗಿ ಸುಮಾರು ಒಂದು ಕಿಲೋಮೀಟರ್ ಓಡಿ, ಸ್ವತಃ ಪೊಲೀಸರಿಗೆ ಕರೆ ಮಾಡಿದ್ದಾಳೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದರು.

  • ಉನ್ನಾವೋ ಕೇಸ್ – ಶಾಸಕ ರೇಪ್‍ಗೈದ 1 ವಾರದ ನಂತ್ರ ಅಪ್ರಾಪ್ತೆಯ ಮೇಲೆ ಮೂವರಿಂದ ಗ್ಯಾಂಗ್‍ರೇಪ್

    ಉನ್ನಾವೋ ಕೇಸ್ – ಶಾಸಕ ರೇಪ್‍ಗೈದ 1 ವಾರದ ನಂತ್ರ ಅಪ್ರಾಪ್ತೆಯ ಮೇಲೆ ಮೂವರಿಂದ ಗ್ಯಾಂಗ್‍ರೇಪ್

    – ಸಿಬಿಐನಿಂದ ದೆಹಲಿ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಕೆ
    – ಅ.10 ರಿಂದ ವಿಚಾರಣೆ ಆರಂಭ

    ಲಕ್ನೋ: ಉನ್ನಾವೋ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರಿಯ ತನಿಖಾ ದಳ (ಸಿಬಿಐ) ಗುರುವಾರ ದೆಹಲಿ ಜಿಲ್ಲಾ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದು, ಮೂವರು ಸಂತ್ರಸ್ತೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದೆ.

    ಈ ಚಾರ್ಜ್‍ಶೀಟ್‍ನಲ್ಲಿ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರು ಅತ್ಯಾಚಾರ ಮಾಡಿದ ಒಂದು ವಾರದ ನಂತರ ಅದೇ ಸಂತ್ರಸ್ತೆಯನ್ನು ಇನ್ನೂ ಮೂವರು ಉನ್ನವೋದಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಉಲ್ಲೇಖಿಸಿದೆ.

    ಸಂತ್ರಸ್ತೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಮೂವರನ್ನು ನರೇಶ್ ತಿವಾರಿ, ಬ್ರಿಜೇಶ್ ಯಾದವ್ ಸಿಂಗ್ ಮತ್ತು ಶುಭಮ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಶುಭಂ ಸಿಂಗ್ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಅವರ ಸಹವರ್ತಿ ಶಶಿ ಸಿಂಗ್ ಅವರ ಪುತ್ರನಾಗಿದ್ದು, ಕುಲದೀಪ್ ಯಾದವ್ ಅವರೇ ಇದನ್ನು ಮಾಡಿಸಿದ್ದಾರೆ ಎಂದು ಆರೋಪಿಸಿದೆ.

    ಸಧ್ಯ ಈ ಮೂವರು ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿದ್ದು, ಈ ಮೂವರು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಜೂನ್ 11 2017 ರಂದು ಉನ್ನಾವೊದಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಈ ಪ್ರಕರಣದಲ್ಲಿ ಶಶಿ ಸಿಂಗ್ ಕೂಡ ಸಹ ಆರೋಪಿಯಾಗಿದ್ದಾನೆ. ಶಶಿ ಸಿಂಗ್ ಆಮಿಷವೊಡ್ಡಿ ಕುಲದೀಪ್ ಸಿಂಗ್ ನಿವಾಸಕ್ಕೆ ಸಂತ್ರಸ್ತೆಯನ್ನು ಕರೆ ತಂದ ಬಳಿಕ ಜೂನ್ 4 2017 ರಂದು ಸಂತ್ರಸ್ತೆಯನ್ನು ಕುಲದೀಪ್ ಸಿಂಗ್ ಅತ್ಯಾಚಾರ ಮಾಡಿದ್ದಾರೆ ಎಂದು ಉಲ್ಲೇಖಿಸಿದೆ.

    ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲು ಅ.10ರಂದು ದಿನ ನಿಗದಿ ಮಾಡಿದೆ. ಇನ್ನು 6 ದಿನ ಸಿಕ್ಕಿದ ಹಿನ್ನೆಲೆಯಲ್ಲಿ ಸಿಬಿಐ ನ್ಯಾಯಾಲಯಕ್ಕೆ ಮತ್ತಷ್ಟು ಸಾಕ್ಷ್ಯಗಳನ್ನು ಸಲ್ಲಿಸುವ ಸಾಧ್ಯತೆಯಿದೆ. ರೇಪ್ ಕೇಸ್ ದೇಶಾದ್ಯಂತ ಸುದ್ದಿಯಾದ ಬಳಿಕ ಬಿಜೆಪಿ ಕುಲ್‍ದೀಪ್ ಸಿಂಗ್ ಸೆಂಗಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.