ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದ ಅನ್‍ಲಾಕ್ ನಲ್ಲಿ ಸಾರಿಗೆ ಸಂಚಾರಕ್ಕೆ ಅವಕಾಶ ಇದ್ದರೂ ಪರಿಪೂರ್ಣ ಬಸ್ ವ್ಯವಸ್ಥೆಯಿಲ್ಲದೆ ಜನ ಪರದಾಡುತ್ತಿದ್ದಾರೆ. ಆದರೆ ಇತ್ತ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಸಮಸ್ಯೆ ಬಗೆಹರಿಸುವ ಬಗ್ಗೆ ಯೋಚನೆ ಮಾಡದೇ, ಸಾರಿಗೆ ಸಮಸ್ಯೆಯಾದಾಗ ಜನರೇ ಸಹಿಸಿಕೊಳ್ಳಬೇಕು ಎಂದು ಉಡಾಫೆ ಉತ್ತರ ನೀಡಿದ್ದಾರೆ.
ಸಾರಿಗೆ ಸಮಸ್ಯೆಯ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಲಾಕ್‍ಡೌನ್ ಬಳಿಕ ರಾಜ್ಯದಲ್ಲಿ ಅನ್‍ಲಾಕ್ ಘೋಷಣೆಯಾಗಿದೆ. ಪ್ರಾರಂಭದಲ್ಲಿ ಈ ರೀತಿಯ ಸಮಸ್ಯೆ ಆಗೋದು ಸಹಜ. ಸಮಸ್ಯೆ ಬಗೆಹರಿಸುವ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ತಿಳಿಸದರು. ಇದನ್ನೂ ಓದಿ: ಇದೇ ಬುಧವಾರದಿಂದ ಬಿಗ್‍ಬಾಸ್ ಪ್ರಾರಂಭ
ಪ್ರಾರಂಭದ ದಿನವಾಗಿರುವುದರಿಂದ ಈ ರೀತಿಯ ವ್ಯತ್ಯಾಸ ಆಗಿದೆ. ನಾಳೆ ಯಾವುದೇ ರೀತಿಯ ತೊಂದರೆ ಇಲ್ಲದೆ ಸಮಸ್ಯೆ ಬಗೆಹರಿಯಲಿದೆ. ಈ ರೀತಿ ಸಮಸ್ಯೆಗಳಾದಾಗ ಜನ ಸ್ವಲ್ಪ ಸಹಿಸಿಕೊಳ್ಳಬೇಕು. ಉತ್ತರ ಕರ್ನಾಟಕದ ಸಿಬ್ಬಂದಿ ಇನ್ನೂ ಸಹ ಕೆಲಸಕ್ಕೆ ಹಾಜರಾಗಿಲ್ಲ. ನಾಳೆ ಬಳಿಕ ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಬರಲಿದ್ದಾರೆ. ಸಮಸ್ಯೆ ಹಂತಹಂತವಾಗಿ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗ್ಗೆ 6ರಿಂದ ಸಂಜೆ 7 ಗಂಟೆಯವರೆಗೆ ಬಸ್ ಸಂಚಾರ ಇರಲಿದೆ. ಈ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆಯೇ ಮೆಜೆಸ್ಟಿಕ್ ನಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿರುವುದು ಕಂಡು ಬಂದಿದೆ. ಬಿಎಂಟಿಸಿ, ಕೆ ಎಸ್ ಆರ್ ಟಿಸಿ ಬಸ್ ಗಳಿಗಾಗಿ ಪ್ರಯಾಣಿಕರು ಕಾದು ಕುಳಿತಿದ್ದಾರೆ.
ಇತ್ತ ಕೆಎಸ್‍ಆರ್‍ಟಿಸಿ ಸಂಚಾರಕ್ಕೆ ಅವಕಾಶ ಬೆನ್ನಲ್ಲೆ ಜನ ಊರಿನತ್ತ ಹೊರಟಿದ್ದಾರೆ. ಅನ್ ಲಾಕ್ ಹಿನ್ನೆಲೆ ಜನ ಊರುಗಳತ್ತ ತಂಡೋಪ ತಂಡವಾಗಿ ಹೊರಟಿದ್ದಾರೆ. ಸರ್ಕಾರಿ ಬಸ್ ಗಳಲ್ಲಿ ಕೇವಲ 50ರಷ್ಟು ಜನರಿಗೆ ಮಾತ್ರ ಅವಕಾಶ ಹಿನ್ನೆಲೆಯಲ್ಲಿ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ತುಮಕೂರು ರಸ್ತೆಯ ಗೋವರ್ಧನ ಬಸ್ ನಿಲ್ದಾಣದ ಬಳಿ ಊರಿನತ್ತ ಹೋಗಲು ಸರ್ಕಾರಿ ಬಸ್, ಖಾಸಗಿ ವಾಹನಗಳಿಗೆ ಜನ ಕಾದು ನಿಂತಿರುವುದು ಕಂಡು ಬಂದಿದೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್‍ರವರು ಜಿಲ್ಲೆಯಲ್ಲಿ ಲಾಕ್‍ಡೌನ್ ಸಡಿಲಿಕೆಯಲ್ಲಿ ಕೆಲವು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಆದೇಶದಲ್ಲಿ ಜಿಲ್ಲೆಯಲ್ಲಿ ಮದುವೆ ಸಮಾರಂಭಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಮನೆಯಲ್ಲಿ 20 ಜನರಿಗೆ ಮೀರದಂತೆ ಸ್ಥಳೀಯ ಆಡಳಿತದ ಅನುಮತಿ ಪಡೆದು ನಡೆಸಬಹುದಾಗಿದೆ.
ಜಿಲ್ಲೆಯಲ್ಲಿ ಯಾವುದೇ ಪ್ರದೇಶದಲ್ಲಿ ಹತ್ತಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾದಲ್ಲಿ ಇಂತಹ ಪ್ರದೇಶವನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಿ ಈ ಪ್ರದೇಶವನ್ನು ಸಂಪೂರ್ಣ ಲಾಕ್‍ಡೌನ್ ಮಾಡಲು ಆದೇಶಿಸಲಾಗಿದೆ. ಉಳಿದಂತೆ ರಾಜ್ಯ ಹೊರಡಿಸಿದ ಅನ್‍ಲಾಕ್ ನಿಯಮದಂತೆ ಜಿಲ್ಲೆಯಲ್ಲಿ ನಿಯಮಗಳು ಜಾರಿ ಇರಲಿದೆ.
ವೀಕೆಂಡ್ ಲಾಕ್‍ಡೌನ್ ನಲ್ಲಿ ಸಹ ಬಸ್ ಸಂಚಾರ: ಜಿಲ್ಲೆಯಲ್ಲಿ ನಾಳೆಯಿಂದ ಆರು ಘಂಟೆಗೆ ಎಂದಿನಂತೆ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಂತರ್ ಜಿಲ್ಲಾ ಸಂಚಾರದಲ್ಲಿ ಪ್ರಯಾಣಿಕರ ಸಾಂದ್ರತೆಗನುಗುಣವಾಗಿ ಬಸ್ ಗಳನ್ನು ಬಿಡಲು ಸೂಚಿಸಲಾಗಿದ್ದು, ಮೂರು ಜನ ಕೂರುವ ಸೀಟ್ ನಲ್ಲಿ ಕೇವಲ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಕರೊನಾ ನಿಯಮ ಪಾಲಿಸಿ ಪ್ರಯಾಣಿಕರು ಪ್ರಯಾಣಿಸಬೇಕಿದೆ.
ಹೊರ ಜಿಲ್ಲೆಗಳಿಗೂ ಬಸ್ ಸಂಚಾರ ಮಾಡಲಿದ್ದು, ಲಾಕ್‍ಡೌನ್ ಇರುವ ಜಿಲ್ಲೆಗಳಲ್ಲಿ ಸಂಚಾರ ನಿಬರ್ಂಧಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 133 ಜನರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದ್ದು, ನಾಲ್ಕು ಜನ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ 1,358 ಸಕ್ರಿಯ ಪ್ರಕರಣವಿದೆ. ಇದನ್ನೂ ಓದಿ: ಮಂಗಳೂರಿನ ಕುಪ್ಪೆಪದವಿನಲ್ಲಿ ಗುಡ್ಡ ಕುಸಿತ- ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ
ಧಾರವಾಡ: ಜಿಲ್ಲೆಯನ್ನು ಅನ್‍ಲಾಕ್-2 ರ ಮಾರ್ಗಸೂಚಿಯನ್ವಯ ಸಡಿಲಿಕೆಗಳನ್ನು ನೀಡಬೇಕೆಂದು ಸಿಎಂ ಯಡಿಯೂರಪ್ಪ ಬಳಿ ಸಚಿವ ಜಗದೀಶ್ ಶೆಟ್ಟರ್ ಮನವಿ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜತೆ ದೂರವಾಣಿ ಮೂಲಕ ಮಾತಾಡಿ ಧಾರವಾಡ ಜಿಲ್ಲೆಯನ್ನು ಅನ್‍ಲಾಕ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ನಡೆದ ಮಾತುಕತೆಯನ್ನು ಸಚಿವ ಶೆಟ್ಟರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜಿಲ್ಲೆಗಳಲ್ಲಿ ಅನ್ ಲಾಕ್ ಪ್ರಕ್ರಿಯೆಯು ಕಳೆದ ಹತ್ತು ದಿನಗಳ ಕೋವಿಡ್ ಪಾಸಿಟಿವಿಟಿ ದರದ ಸರಾಸರಿ ಆಧಾರಿಸಿ ನಿರ್ಧರಿತವಾಗಲಿದೆ. ಧಾರವಾಡ ಜಿಲ್ಲೆಯ ಕೋವಿಡ್ ಪರಿಸ್ಥಿತಿಯನ್ನು ಜಿಲ್ಲಾಡಳಿತದಿಂದ ಸರಾಸರಿ ಮಾಹಿತಿ ಪಡೆದು ಪರಿಶೀಲಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.4.5 ಕ್ಕಿಂತ ಕಡಿಮೆ ಇರುವುದು ಖಚಿತವಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವರಾದ ಸುಧಾಕರ್ ಅವರಿಗೆ ವೈಯಕ್ತಿಕವಾಗಿ ಜಿಲ್ಲೆಯ ಕೋವಿಡ್ ಸ್ಥಿತಿಗತಿಯ ಮಾಹಿತಿ ರವಾನಿಸಿ ಮಾತನಾಡಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರ ಪಾಸ್ ಅವಧಿ ವಿಸ್ತರಿಸಿದ ಬಿಎಂಟಿಸಿ
ಆದ್ದರಿಂದ ಮುಖ್ಯಮಂತ್ರಿಗಳಾದ ಶ್ರೀ @BSYBJP & ಆರೋಗ್ಯ ಸಚಿವರಾದ @mla_sudhakar ಅವರಿಗೆ ವೈಯಕ್ತಿಕವಾಗಿ ಮಾಹಿತಿ ರವಾನಿಸಿ, ಮಾತನಾಡಿದ್ದು, ನಮ್ಮ ಜಿಲ್ಲೆಯನ್ನೂ ಸಹ ಅನ್ ಲಾಕ್ ಮಾಡುವಂತೆ ಕೇಳಿಕೊಂಡಿದ್ದೇನೆ. ಶೀಘ್ರದಲ್ಲಿಯೇ ಈ ಕುರಿತು ಕ್ರಮಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.@DC_Dharwad
ಈ ದೂರವಾಣಿ ಮಾತುಕತೆಯಲ್ಲಿ ಧಾರವಾಡ ಜಿಲ್ಲೆಯನ್ನೂ ಸಹ ಅನ್‍ಲಾಕ್ ಮಾಡುವಂತೆ ಸಚಿವ ಶೆಟ್ಟರ್ ಕೇಳಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಈ ಕುರಿತು ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದೂ ಶೆಟ್ಟರ್ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸೋಮವಾರದಿಂದ ಹೊಸ ರೂಲ್ಸ್, ಹೊಸ ಲೈಫ್ – ಅನ್‍ಲಾಕ್ 2.Oಗೆ ಬೆಂಗಳೂರಿಗರ ಸಿದ್ಧತೆ
ಬೆಂಗಳೂರು: ನಾಳೆಯಿಂದ ಬಸ್ ಸಂಚಾರ ಆರಂಭವಾಗ್ತಿದೆ. ರಾಜ್ಯದ ನಾಲ್ಕು ನಿಗಮಗಳಾದ ಕೆಎಸ್‍ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆಯ ಬಸ್ ಗಳು ಕಾರ್ಯಾಚರಣೆಗೊಳ್ಳುತ್ತಿವೆ. ಬಸ್ ಸಂಚಾರ ಆರಂಭವಾಯ್ತು ಅಂತಾ ರಿಲಾಕ್ಸ್ ಆಗುವ ಸಮಯದಲ್ಲಿ ಸಾರಿಗೆ ನೌಕರರಿಂದ ಸರ್ಕಾರಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಮತ್ತೆ ಮತ್ತೇ ಸಾರಿಗೆ ಪ್ರೋಟೆಸ್ಟ್ ನಡೆಸುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದು, ಹೊಸ ಬಾಂಬ್ ಸಿಡಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್, ಜುಲೈ 1ರವರೆಗೆ ಸರ್ಕಾರಕ್ಕೆ ಡೆಡ್ ಲೈನ್ ನೀಡಲಾಗಿದೆ. ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳಿಗೆ ಸ್ಪಂದಿಸದೇ ಇದ್ರೆ ಜುಲೈ 1 ರಿಂದ ಮತ್ತೆ ಸಾರಿಗೆ ಮುಷ್ಕರ ಆರಂಭಿಸುವುದಾಗಿ ಗುಡುಗಿದ್ದಾರೆ.
ಕಳೆದ ಬಾರಿ ಏಪ್ರಿಲ್ 7 ರಿಂದ 22 ರವರೆಗೆ 15 ದಿನ ಸಾರಿಗೆ ಪ್ರೊಟೆಸ್ಟ್ ನಡೆದಿತ್ತು. ನಂತರ ಹೈಕೋರ್ಟ್ ಮಧ್ಯೆ ಪ್ರವೇಶದಿಂದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. ಇದೀಗ ಮತ್ತೆ ಪ್ರತಿಭಟನೆಯ ಕೂಗು ಕೇಳಿಬಂದಿದೆ. ಸರ್ಕಾರ ಕೊಟ್ಟ ಮಾತಿನಂತೆ ಆರನೇ ವೇತನ ಆಯೋಗ ಜಾರಿಗೆ ತರಬೇಕು. ಇಲ್ಲದಿದ್ದರೇ ಈ ಬಾರಿ ಸಾರಿಗೆ ನೌಕರರು ಅಷ್ಟೇ ಅಲ್ಲದೇ ಹೆಂಡತಿ, ಮಕ್ಕಳ ಜೊತೆಗೂಡಿ ಕುಟುಂಬ ಸಮೇತರಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಇದನ್ನೂ ಓದಿ:ಬಿಜೆಪಿ ಮೂಲಭೂತವಾಗಿ ಕನ್ನಡ ವಿರೋಧಿ – ಕುಮಾರಸ್ವಾಮಿ ಆಕ್ರೋಶ
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವ ಜನ ಅರೆಕೂಲಿಯಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಸರಿಯಾದ ನ್ಯಾಯಯುತ ವೇತನ ನೀಡಿ. ಸರ್ಕಾರ ಆರನೇ ವೇತನ ಆಯೋಗವನ್ನು ಜಾರಿ ಮಾಡುತ್ತೇವೆ ಎಂದಿತ್ತು. ಕಳೆದ ಬಾರಿ 15 ದಿನ ಪ್ರತಿಭಟನೆ ನಡೆಸಿದ್ದೇವೆ. ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಈಗಾಗಲೇ ಸಾರಿಗೆ ನೌಕರರನ್ನು ಅಮಾನತು, ವರ್ಗಾವಣೆ ಮಾಡಿದ್ದಾರೆ. ಎರಡು ತಿಂಗಳ ಸಂಬಳ ಕೊಡಬೇಕು. ಸಾವಿರ ರೂಪಾಯಿ ಸಂಬಳ ಕೊಡೋ ಕೆಲಸ ಮಾಡ್ತಿದೆ. ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯ ತರುತ್ತಿದ್ದೇವೆ. ಸಾರಿಗೆ ನೌಕರರ ಕುಟುಂಬದವರೊಂದಿಗೆ ಪ್ರತಿಭಟನೆ ಮಾಡ್ತೇವೆ. ಹೆಂಡತಿ, ಮಕ್ಕಳನೊಂದಿಗೆ ಸಾರಿಗೆ ನೌಕರರು ಪ್ರತಿಭಟಿಸುತ್ತಾರೆ. ಜೊತೆಗೆ ಸರ್ಕಾರ ವಿಶೇಷವಾದ ಪ್ಯಾಕೇಜ್ ಕೊಟ್ಟು ಸಾರಿಗೆ ಇಲಾಖೆಯನ್ನು ಉಳಿಸುವ ಕೆಲಸ ಮಾಡಬೇಕು. ಜುಲೈ ಒಂದನೇ ತಾರೀಖಿನ ಒಳಗೆ ಸಭೆ ನಡೆಸಿ, ಮುಂದಿನ ಹೋರಾಟದ ರೂಪುರೇಷೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಯಾಣಿಕರ ಪಾಸ್ ಅವಧಿ ವಿಸ್ತರಿಸಿದ ಬಿಎಂಟಿಸಿ
ಯಾದಗಿರಿ: ನಾಳೆಯಿಂದ ಹೋಟೆಲ್, ರೆಸ್ಟೋರೆಂಟ್‍ಗಳಿಗೆ ಶೇ50 ರಷ್ಟು ಅವಕಾಶ ನೀಡಿರುವ ಹಿನ್ನೆಲೆ ಯಾದಗಿರಿ ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ನಾಳೆ ತೆರೆಯಲು ಭರ್ಜರಿ ತಯಾರಿ ನಡೆದಿದೆ.
ನಗರದ ಪ್ರಮುಖ ರೆಸ್ಟೋರೆಂಟ್ ಗಳಲ್ಲಿ ಸ್ವಚ್ಚತೆ ಕಾರ್ಯ ಆರಂಭವಾಗಿದ್ದು, ಕೋವಿಡ್ ಮಾರ್ಗಸೂಚಿಗಳ ಪ್ರಕಾರ, ಸ್ಯಾನಿಟೈಸಿಂಗ್, ಜಾಗೃತಿ ಮೂಡಿಸುವ ಬೋರ್ಡ್‍ಗಳನ್ನು ಅಳವಡಿಸಲಾಗುತ್ತಿದೆ. ಸಾಮಾಜಿಕ ಅಂತರ ಪಾಲನೆ ಮಾಡುವ ನಿಟ್ಟಿನಲ್ಲಿ ಒಂದು ಟೇಬಲ್‍ಗೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಕಾಶ್ಮೀರದ ನಾಯಕರ ಜೊತೆ ಮೋದಿ ಸಭೆಗೆ ಪಾಕ್ ಕಿರಿಕ್
ಜಿಮ್ ಓಪನ್‍ಗೆ ಅವಕಾಶ ನೀಡಿರುವ ಹಿನ್ನೆಲೆ ಜಿಮ್ ಕೇಂದ್ರಗಳಲ್ಲಿ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ನಾಳೆಯಿಂದ ಜಿಮ್ ಓಪನ್ ಹಿನ್ನೆಲೆ, ಯಾದಗಿರಿ ಜಿಮ್ಗಳಲ್ಲಿ ತಯಾರಿ ನಡೆಯುತ್ತಿದೆ. ವ್ಯಾಯಾಮ ಶಾಲೆಗಳಲ್ಲಿ ಶೇ50 ರಷ್ಟು ಅವಕಾಶ ನೀಡಿದ ಹಿನ್ನೆಲೆ, ಸಿಫ್ಟ್ ಮಾದರಿಯಲ್ಲಿ ಜಿಮ್ ನಡೆಸಲು ಮಾಲೀಕರು ತಯಾರಿ ನಡೆಸಿದ್ದಾರೆ. ಸದ್ಯ ಜಿಮ್ ಗಳಲ್ಲಿ ಕ್ಲಿನಿಂಗ್, ಸ್ಯಾನಿಟೈಸಿಂಗ್ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳ ಅನುಗುಣವಾಗಿ ಸಿದ್ಧತೆ ನಡೆದಿದೆ .
ಆದರೆ ಸಂಜೆ 5 ಗಂಟೆಯ ನಂತರ ನೈಟ್ ಕಫ್ರ್ಯೂ ಜಾರಿ ಹಿನ್ನಲೆ, ಸಂಜೆ ಟೈಮ್‍ನಲ್ಲಿ ಜಿಮ್ ಬರುವವರಿಗೆ ತೊಂದರೆಯಾಗುತ್ತದೆ. ಹೀಗಾಗಿ ಜಿಮ್‍ಗಳಿಗೆ ಈ ನಿಯಮ ಸಡಲಿಕೆ ಮಾಡಬೇಕು ಅಂತ ಜೀಮ್ ಮಾಲೀಕರು ಒತ್ತಾಯ ಮಾಡಿದ್ದಾರೆ.
ರಾಯಚೂರು: ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಿರುವ ಜಿಲ್ಲೆಗಳಲ್ಲಿ ಸೋಮವಾರದಿಂದ ಲಾಕ್‍ಡೌನ್ ಸಡಿಲಿಕೆ ಘೋಷಣೆ ಮಾಡಿದ ಬೆನ್ನಲ್ಲೇ ಜಿಲ್ಲೆಯ ಮಸ್ಕಿ ಪಟ್ಟಣ ಸೇರಿದಂತೆ ವಿವಿಧೆಡೆಯಿಂದ ನೂರಾರು ವಾಹನಗಳಲ್ಲಿ ಜನ ಬೆಂಗಳೂರಿಗೆ ಗುಳೆ ಹೊರಟಿದ್ದಾರೆ.
ಲಾಕ್‍ಡೌನ್ ಹಿನ್ನೆಲೆ ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಕೂಲಿ ಕಾರ್ಮಿಕರು, ಅನ್‍ಲಾಕ್ ಘೋಷಣೆ ಯಾಗುತ್ತಿದ್ದಂತೆ ಗಂಟು ಮೂಟೆ ಸಹಿತ ಮತ್ತೆ ಬೆಂಗಳೂರಿಗೆ ಗುಳೆ ಹೊರಟಿದ್ದಾರೆ. ಅಡುಗೆ ಸಾಮಾನುಗಳು, ಬಟ್ಟೆ, ಬೈಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ಕಟ್ಟಿಕೊಂಡು ಜನ ಗುಳೆ ಹೊರಟಿದ್ದಾರೆ.
ಮಸ್ಕಿ ಪಟ್ಟಣದಲ್ಲೇ ನೂರಾರು ಜನ ಸಾಲು ಸಾಲಾಗಿ ಟೆಂಪೋ ವಾಹನಗಳಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ. ಬೆಂಗಳೂರಲ್ಲಿ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಕಡಿಮೆ ಹಿನ್ನೆಲೆ ಅನ್‍ಲಾಕ್ ಆಗಿರುವುದರಿಂದ ಕೆಲಸಗಳು ಸಿಗುವ ಭರವಸೆಯಲ್ಲಿ ಜನ ಹೊರಟಿದ್ದಾರೆ. ಅಲ್ಲದೆ ಈಗಾಗಲೇ ಕಟ್ಟಡ ಕೆಲಸಗಳು ಆರಂಭಗೊಂಡಿರುವುದರಿಂದ ಗುತ್ತಿಗೆದಾರರು ಕೂಲಿಕಾರರನ್ನು ಕರೆಸಿಕೊಳ್ಳುತ್ತಿದ್ದಾರೆ.
ಬೆಂಗಳೂರು: ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆ ಹಂತ ಹಂತವಾಗಿ ಅನ್‍ಲಾಕ್ ಮಾಡಲಾಗುತ್ತಿದ್ದು, 16 ಜಿಲ್ಲೆಗಳಲ್ಲಿ ಮತ್ತಷ್ಟು ನಿಯಮ ಸಡಿಲಿಕೆ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಸಿಟಿವಿಟಿ ದರದ ಆಧಾರದ ಮೇಲೆ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಹಾಗೂ ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಅನ್‍ಲಾಕ್ ಮಾಡಲಾಗುತ್ತಿದೆ. ಶೇ.5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ (ಬಿಬಿಎಂಪಿ ಸೇರಿದಂತೆ), ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಿಗೆ ಸಂಜೆ 5 ಗಂಟೆಯವರೆಗೆ ಸಡಿಲಿಕೆ ನೀಡಲಾಗಿದೆ.
ಈ ಜಿಲ್ಲೆಗಳಲ್ಲಿ ಎಲ್ಲ ಅಂಗಡಿಗಳನ್ನು ಬೆಳಗ್ಗೆ 5 ರಿಂದ ಸಂಜೆ 5 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಎಸಿ ಹಾಕದೇ ಹೋಟೆಲ್, ಕ್ಲಬ್ಸ್, ರೆಸ್ಟೋರೆಂಟ್‍ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತು ತಿನ್ನಲು ಸಂಜೆ 5 ಗಂಟೆಯವರೆಗೆ ಶೇ.50 ಸಾಮರ್ಥ್ಯದೊಂದಿಗೆ ಅವಕಾಶ ನೀಡಲಾಗಿದೆ. ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ಬಸ್ ಮತ್ತು ಮೆಟ್ರೋದಲ್ಲಿ ಶೇ.50 ಸಾಮರ್ಥ್ಯದೊಂದಿಗೆ ಪ್ರಯಾಣಿಸಬಹುದು. ಹೊರಾಂಗಣ ಕ್ರೀಡೆಗಳಿಗೆ ವೀಕ್ಷಕರಿಲ್ಲದೇ ಅನುಮತಿ ನೀಡಲಾಗಿದೆ. ಸರ್ಕಾರಿ, ಖಾಸಗಿ ಕಚೇರಿಗಳಿಗೆ ಶೇ.50ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿಸಿದೆ. ಲಾಡ್ಜ್, ರೆಸಾರ್ಟ್, ಜಿಮ್ ಗಳಲ್ಲಿ ಶೇ.50 ಸಾಮರ್ಥ್ಯದೊಂದಿಗೆ (ಹವಾ ನಿಯಂತ್ರಣ ಇಲ್ಲದೇ) ಅವಕಾಶ ನೀಡಿದೆ.
ಶೇ.5ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ 13 ಜಿಲ್ಲೆಗಳಾದ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಜೂನ್ 11ರ ಆದೇಶದಲ್ಲಿ ನೀಡಿರುವ ಸಡಿಲಿಕೆಗಳು ಮಾತ್ರ ಅನ್ವಯಿಸುತ್ತವೆ.
ಶೇ.10ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ ಮೈಸೂರು ಜಿಲ್ಲೆಯಲ್ಲಿ ಯಥಾಸ್ಥಿತಿ ನಿರ್ಬಂಧಗಳು ಮುಂದುವರೆಯುತ್ತವೆ. ಅಲ್ಲದೆ ರಾಜ್ಯವ್ಯಾಪಿ ಅನ್ವಯವಾಗುವಂತೆ ಪ್ರತಿ ದಿನ ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಇರುತ್ತದೆ. ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಬಸ್ ಸಂಚಾರ ಶೇ.50ರಷ್ಟು ಪ್ರಯಾಣಿಕರಿಗೆ ಮಿತಿಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು: ಲಾಕ್‍ಡೌನ್ ರಿಲ್ಯಾಕ್ಸ್ ಎಲ್ಲ ವಲಯಕ್ಕೂ ಬೇಕಾಗಿದೆ. ಅದರಲ್ಲೂ ಆರ್ಥಿಕ ಚೇತರಿಕೆಗಾಗಿ ಬೇಡಿಕೆಗಳ ಸರಮಾಲೆ ಬರುತ್ತಿದೆ. ಸದ್ಯ ಬಿಬಿಎಂಪಿ ಈ ರೀತಿ ಆರ್ಥಿಕ ಚೇತರಿಕೆ ಹಾಗೂ ಕೊರೊನಾ ಮುನ್ನಚ್ಚರಿಕೆ ಎರಡನ್ನು ಆಧಾರವಾಗಿಸಿ ಏನೆಲ್ಲ ಓಪನ್ ಮಾಡಲು ಅವಕಾಶ ಇದೆ, ಯಾವುದೆಲ್ಲ ಬೇಡ ಅಂತ ಪಟ್ಟಿ ಸಿದ್ಧಪಡಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದೆ.
ನಗರದಲ್ಲಿ ಈ ಸಂಬಂಧ ಬಿಬಿಎಂಪಿ ಚೀಫ್ ಕಮೀಷನರ್ ಗೌರವ್ ಗುಪ್ತಾ ಮಾತನಾಡಿ, ಅನ್ ಲಾಕ್ 2.0 ಜಾರಿ ವಿಚಾರವನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಿದೆ. ಅನ್ ಲಾಕ್ ಅದ ಮೇಲೆ ಸೋಂಕಿನ ಕಡೆ ಹೆಚ್ಚಿನ ಗಮನ ಹರಿಸಿದ್ವಿ. ನಾಲ್ಕೈದು ದಿನಗಳಿಂದ ಸೋಂಕಿನ ಪ್ರಮಾಣ ಯಥಾಸ್ಥಿತಿ ಇದೆ. ಜನ ಸಾಮನ್ಯರ ಜೀವನ ಸಹಜ ಸ್ಥಿತಿಗೆ ತರಬೇಕಿದೆ. ಇಂದು ಸಿಎಂ ಜತೆ ಅನ್‍ಲಾಕ್ ಬಗ್ಗೆ ಚರ್ಚೆ ಆಗುತ್ತದೆ. ಅಂಗಡಿ, ಕೈಗಾರಿಕೆಗಳನ್ನ ಆರಂಭಿಸೋ ಬಗ್ಗೆ ಚಿಂತನೆ ಇದೆ ಎಂಬ ಅಂಶವನ್ನು ಹೇಳಿದರು.
ಬಸ್ ಗಳನ್ನ ಓಡಿಸೋ ಬಗ್ಗೆಯೂ ಚಿಂತನೆ ಇದೆ. ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿದೆ. ಹೊಟೇಲ್ ಗಳಲ್ಲಿ ಕೂತು ಊಟ ಮಾಡುವ ಬಗ್ಗೆಯೂ ಇಂದು ನಿರ್ಧಾರವಾಗಲಿದೆ. ಕಮರ್ಷಿಯಲ್ ಕಾಂಪ್ಲೆಕ್ಸ್, ಮಾರ್ಕೇಟ್ ಆರಂಭಿಸುವ ಕುರಿತು ಇಂದು ನಿರ್ಧಾರ ಹೊರಬೀಳಬೇಕಾಗಿದೆ. ಮಾಲ್, ಸಿನೆಮಾ ಮಂದಿರಗಳ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಮಾಲ್, ಸಿನೆಮಾ ಮಂದಿರ ನಷ್ಟದಲ್ಲಿದೆ ಅಂತ ಓಪನ್ ಮಾಡಿದ್ರೆ ಕಷ್ಟವಾಗುತ್ತದೆ ಎಂದರು. ಇದನ್ನೂ ಓದಿ: ಅನ್‍ಲಾಕ್ ಬೆನ್ನಲ್ಲೇ ಮತ್ತೆ ಮಹಾನಗರಗಳತ್ತ ಯಾದಗಿರಿ ಜನರ ಮಹಾ ವಲಸೆ
ಯಾವುದೇ ಹೆಜ್ಜೆ ಇಡಬೇಕು ಅಂದರೆ ಅತ್ಯಂತ ಜಾಗರೂಕರಾಗಿ ಇಡಬೇಕಿದೆ. ಹೀಗಾಗಿ ಸದ್ಯಕ್ಕೆ ಈ ವಿನಾಯಿತಿ ಬಗ್ಗೆ ಪ್ರಸ್ತಾಪ ನೀಡಿಲ್ಲ. ವಾಣಿಜ್ಯ ಚಟುವಟಿಕೆ ನಷ್ಟದಲ್ಲಿದೆ ಎಂಬ ಕಾರಣಕ್ಕೆ ಆಸ್ತಿ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಕಾರಣ ಮುಖ್ಯಮಂತ್ರಿಗಳು ಬಹುತೇಕ ವಲಯಗಳಿಗೆ ಪ್ಯಾಕೇಜ್ ಘೋಷಿಸಿದ್ದಾರೆ ಎಂದರು.
ಆನೇಕಲ್: ಕಳೆದ 47 ದಿನಗಳಿಂದ ಲಾಕ್‍ಡೌನ್ ಸಂಕಷ್ಟಕ್ಕೆ ಸರ್ಕಾರ ಬ್ರೇಕ್ ಕೊಟ್ಟು, ಬೆಂಗಳೂರು ನಗರ ಸೇರಿದಂತೆ 19 ಜಲ್ಲೆಗಳಲ್ಲಿ ಅರ್ಧ ದಿನ ಅನ್‍ಲಾಕ್ ಘೊಷಣೆ ಮಾಡಿತ್ತು. ಇಂದಿನಿಂದ ರಸ್ತೆಗಿಳಿದ ವಾಹನಗಳಿಂದ ಬೆಂಗಳೂರು ಹೊರವಲಯ ಅತ್ತಿಬೆಲೆ ಗಡಿಭಾಗದ ರಾಷ್ಟ್ರೀಯ ಹೆದ್ದಾರಿ ಮೂಲಕ ತಮಿಳುನಾಡು ಮತ್ತು ಕೇರಳ ದಿಂದ ಸಾವಿರಾರು ವಾಹನದಲ್ಲಿ ಜನ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದು, ಅತ್ತಿಬೆಲೆ ಟೋಲ್ ಬಳಿ ವಾಹನಗಳು ಸಾಲುಗಟ್ಟಿ ನಿಂತಿವೆ. ಲಾಕ್‍ಡೌನ್ ಸಮಯದಲ್ಲಿ ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರಿಗೆ ತೆರಳಿದ್ದ ಬಹುತೇಕ ಜನರು ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಅದರಲ್ಲೂ ತಮಿಳುನಾಡು ಮತ್ತು ಕೇರಳದಿಂದ ಸಾವಿರಾರು ಜನ ತಮ್ಮ ಸರಕು ಸಾಮಾನುಗಳೊಂದಿಗೆ ಹಿಂದಿರುಗುತ್ತಿದ್ದಾರೆ. ಇದರಿಂದ ಇದೀಗ ಬೆಂಗಳೂರಿಗೆ ಕೊರೊನಾ ಕಂಟಕ ಎದುರಾಗಿದೆ. ಇದನ್ನೂ ಓದಿ: ವಿಶ್ವನಾಥ್ ಆನಂದ್‍ಗೆ ಟಫ್ ಫೈಟ್ ಕೊಟ್ಟ ಕಿಚ್ಚ- 6.65 ಲಕ್ಷ ದೇಣಿಗೆ ಸಂಗ್ರಹ
ಅತ್ತಿಬೆಲೆಯಲ್ಲಿ ಚೆಕ್ ಪೋಸ್ಟ್ ನಿರ್ಮಾಣಮಾಡಿ ಕರ್ನಾಟಕಕ್ಕೆ ಯಾರೇ ಬಂದರೂ ಅವರನ್ನು ತಪಾಸಣೆ ಮಾಡಿ ಕಳುಹಿಸಿಕೊಡಬೇಕು. ಆದರೆ ಅತ್ತಿಬೆಲೆ ಚೆಕ್ ಪೋಸ್ಟ್ ಗೆ ನಿಯೋಜನೆಯಾಗಿರುವ ಕೆಲವೇ ಕೆಲವು ಪೊಲೀಸ್ ಸಿಬ್ಬಂದಿಯಿಂದ ಸರಿಯಾದ ರೀತಿಯಲ್ಲಿ ತಪಾಸಣೆ ಕೂಡ ಮಾಡಲು ಸಾಧ್ಯ ಆಗುತ್ತಿಲ್ಲ. ರಾಜಾರೋಷವಾಗಿ ಬೆಂಗಳೂರಿಗೆ ಜನ ಬರುತ್ತಿದ್ದು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಇರುವುದು ಕಂಡುಬರುತ್ತಿದೆ. ಇದೇ ರೀತಿ ಜನ ಬಂದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕೊರೊನಾ ಮತ್ತೆ ಹೆಚ್ಚಾಗುವ ಎಲ್ಲಾ ಸಾಧ್ಯತೆ ಇದೆ.