Tag: Unlock

  • ವೀಕೆಂಡ್ ಕರ್ಫ್ಯೂ ಇರಲ್ಲ, ಸಭೆ ಸಮಾರಂಭಕ್ಕೆ ಅವಕಾಶವಿಲ್ಲ – ಲಾಕ್‍ಡೌನ್ ಇನ್ನಷ್ಟು ಸಡಿಲ

    ವೀಕೆಂಡ್ ಕರ್ಫ್ಯೂ ಇರಲ್ಲ, ಸಭೆ ಸಮಾರಂಭಕ್ಕೆ ಅವಕಾಶವಿಲ್ಲ – ಲಾಕ್‍ಡೌನ್ ಇನ್ನಷ್ಟು ಸಡಿಲ

    – ನೈಟ್ ಕರ್ಫ್ಯೂ ಸಮಯ ಬದಲಾವಣೆ

    ಬೆಂಗಳೂರು: ಇನ್ನು ಮುಂದೆ ವೀಕೆಂಡ್ ಕರ್ಫ್ಯೂ ಇರಲ್ಲ. ಸಭೆ ಸಮಾರಂಭಕ್ಕೆ ಅವಕಾಶ ಇಲ್ಲ. ಜುಲೈ 5ರಿಂದ ರಿಂದ 19ರವರೆಗೆ ಅನ್ ಲಾಕ್ ಜಾರಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಕೋವಿಡ್-19 ನಿಯಂತ್ರಣ ತಾಂತ್ರಿಕ ಸಲಹೆಗಳನ್ನು ಗಮನಿಸಿ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮೂರನೇ ಅನ್ ಲಾಕ್ ಘೋಷಣೆ ಮಾಡಿದರು. ಸರ್ಕಾರಿ, ಖಾಸಗಿ, ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳು, ಮಾಲ್ ಗಳಿಗೆ ಅನುಮತಿ, ಮೆಟ್ರೋ, ಕಾರ್ಮಿಕ ಕಾರ್ಯಗಳಿಗೆ ಅವಕಾಶ ನೀಡಲಾಗಿದೆ ಎಂದರು.

    ಯಾವುದಕ್ಕೆಲ್ಲ ವಿನಾಯ್ತಿ..?
    1. ಸರ್ಕಾರಿ/ಖಾಸಗಿ ಕಛೇರಿಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಶೇ. 100 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.
    2. ಮಾಲ್ ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
    3. ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಶೇ. 100 ರಷ್ಟು ಪ್ರಮಾಣಿಕರೊಂದಿಗೆ ಸಂಚರಿಸಲು ಅವಕಾಶ ನೀಡಲಾಗಿದೆ.

    4. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.
    5. ಮದುವೆ ಹಾಗೂ ಇನ್ನಿತರೆ ಕೌಟುಂಬಿಕ ಶುಭ ಸಮಾರಂಭಗಳಿಗೆ 100 ಜನರೊಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.
    6. ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ.

    7. ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ.
    8. ಅಂತ್ಯ ಸಂಸ್ಕಾರಕ್ಕೆ 20 ಸದಸ್ಯರು ಭಾಗವಹಿಸಲು ಅವಕಾಶ ನೀಡಲಾಗಿದೆ.
    9. ಕೊರೋನಾ ಕರ್ಫ್ಯೂ (ನೈರ್ಟ್ ಕರ್ಫ್ಯೂ) ರಾತ್ರಿ 9.00 ರಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

    10. ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವುದಿಲ್ಲ.
    11. ಸಾಮಾಜಿಕ, ಧಾರ್ಮಿಕ, ಮತ್ತು ರಾಜಕೀಯ ಸಭೆ ಸಮಾರಂಭಗಳಿಗೆ, ಪ್ರತಿಭಟನೆಗಳಿಗೆ ಹಾಗೂ ಇತರೆ ಸಮಾರಂಭಗಳಿಗೆ ಅವಕಾಶವಿಲ್ಲ.
    12. ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಪ್ರತ್ಯೇಕವಾಗಿ ತೀರ್ಮಾನಿಸಲಾಗುವುದು.

    13. ಪಬ್ ಗಳು ಕಾರ್ಯನಿರ್ವಹಿಸಲು ಅವಕಾಶವಿಲ್ಲ. ಬಾರ್ ಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.
    14. ಚಿತ್ರಮಂದಿರಗಳು ಕಾರ್ಯನಿರ್ವಹಣೆಗೆ ಅವಕಾಶವಿಲ್ಲ.
    15. ಜಿಲ್ಲೆಯಲ್ಲಿರುವ ಪರಿಸ್ಥಿತಿಗನುಗುಣವಾಗಿ ಆಯಾಯ ಜಿಲ್ಲೆಯ ಜಿಲ್ಲಾಡಳಿತಗಳು ಇನ್ನೂ ಹೆಚ್ಚಿನ ನಿರ್ಬಂಧಗಳು ಅವಶ್ಯವಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲು ಸೂಚಿಸಿದೆ.
    16. ಕೋವಿಡ್-19 ನಿಯಂತ್ರಿಸುವ ದೃಷ್ಟಿಯಿಂದ ಸಾರ್ವಜನಿಕರು ನಿಯಂತ್ರಣ ಕ್ರಮಗಳಾದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆ ಕಡೆಗೆ ಗಮನ ಹರಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ಸಿಎಂ ವಿನಂತಿಸಿದರು.

  • ಕೊಡಗಿನಲ್ಲಿ ಮತ್ತೆ ಒಂದು ವಾರ ಲಾಕ್‍ಡೌನ್ ಮುಂದುವರಿಕೆ ಸುಳಿವು ನೀಡಿದ ಡಿಸಿ

    ಕೊಡಗಿನಲ್ಲಿ ಮತ್ತೆ ಒಂದು ವಾರ ಲಾಕ್‍ಡೌನ್ ಮುಂದುವರಿಕೆ ಸುಳಿವು ನೀಡಿದ ಡಿಸಿ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ದಿನದಿಂದ ದಿನಕ್ಕೆ ಕಣ್ಣಾಮುಚ್ಚಾಲೆ ಆಟ ಮುಂದುವರಿದಿದೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗುವವರೆಗೂ ಜಿಲ್ಲೆಯನ್ನು ಅನ್‍ಲಾಕ್ ಮಾಡುವುದು ಬೇಡ ಎಂದು ಕೊಡಗಿನ ಇಬ್ಬರು ಶಾಸಕರು ಹೇಳಿದ ಬೆನ್ನಲ್ಲೇ ಇದೀಗ ಮತ್ತೆ ಒಂದು ವಾರ ಲಾಕ್‍ಡೌನ್ ಮುಂದುವರಿಯುವ ಸಾಧ್ಯತೆ ಇದೆ ಎಂದು ಕೊಡಗಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸುಳಿವು ನೀಡಿದ್ದಾರೆ.

    ಮಡಿಕೇರಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಒಂದು ವಾರದ ಪಾಸಿಟಿವ್ ರೇಟ್ ನೋಡಿದರೆ ಶೇ.6.5 ಇದೆ. ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಟೆಸ್ಟಿಂಗ್ ಪ್ರಮಾಣ ಹೆಚ್ಚು ಮಾಡಿರುವುದರಿಂದ ಸೋಂಕಿತರ ಪ್ರಮಾಣದಲ್ಲಿ ಏರುಪೇರು ಅಗುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳ ಜೊತೆ ಆಂತರಿಕವಾಗಿ ಚರ್ಚಿಸಿರುವಂತೆ ಲಾಕ್‍ಡೌನ್ ಮುಂದುವರಿಸುತ್ತೇವೆ ಎಂದು ಸುಳಿವು ನೀಡಿದ್ದಾರೆ. ಇದನ್ನೂ ಓದಿ : ಜೋಕಾಲಿ ತಂದ ಆಪತ್ತು- ಎರಡು ಎಳೆಯ ಜೀವಗಳಿಗೆ ಕುತ್ತು

    ಮೂಲಗಳ ಪ್ರಕಾರ ಜಿಲ್ಲೆಯಲ್ಲಿ ಮತ್ತೆ ಒಂದು ವಾರ ಲಾಕ್‍ಡೌನ್ ಮುಂದುವರಿಯುವ ಸಾಧ್ಯತೆ ಇದ್ದು, ವಾರದ ಮೂರು ದಿನಗಳಾದ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಗ್ಗೆ 6 ರಿಂದ 4 ಗಂಟೆಯ ವರೆಗೆ ಕಾಲಾವಕಾಶ ವಿಸ್ತರಣೆ ಅಗುವ ಸಾಧ್ಯತೆ ಇದೆ. ಇಂದು ಸಂಜೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುವ ಅನ್‍ಲಾಕ್ ಸಭೆಯ ಬಳಿಕ ಕೊಡಗು ಜಿಲ್ಲೆಗೆ ಲಾಕ್‍ಡೌನ್ ಮುಂದುವರಿಯುತ್ತಾ ಅಥವಾ ಅನ್‍ಲಾಕ್ ಮಾಡುತ್ತಾರಾ..? ಎಂಬ ನಿರ್ಧಾರ ಹೊರಬರಲಿದೆ.

  • ಸೋಮವಾರದಿಂದ ದೇವಾಲಯಕ್ಕೆ ಭಕ್ತರಿಗೆ ಅವಕಾಶ ಸಾಧ್ಯತೆ – ದೇವಾಲಯದ ಶುದ್ಧಿ ಕಾರ್ಯ

    ಸೋಮವಾರದಿಂದ ದೇವಾಲಯಕ್ಕೆ ಭಕ್ತರಿಗೆ ಅವಕಾಶ ಸಾಧ್ಯತೆ – ದೇವಾಲಯದ ಶುದ್ಧಿ ಕಾರ್ಯ

    ಬೆಂಗಳೂರು: ಅನ್‍ಲಾಕ್ 3.ಓ ನಲ್ಲಿ ಇನ್ನಷ್ಟು ಕ್ಷೇತ್ರಗಳನ್ನು ಓಪನ್ ಮಾಡುವ ಪ್ಲಾನ್ ನಲ್ಲಿ ರಾಜ್ಯ ಸರ್ಕಾರವಿದೆ. ಇಂದು ನಡೆಯುವ ಮಹತ್ವದ ಸಭೆಯ ಬಳಿಕ ಸೋಮವಾರದಿಂದ ಅನ್‍ಲಾಕ್ ಮೂರನೇ ಹಂತ ಜಾರಿಗೆ ಬರಲಿದೆ. ಮೂರನೇ ಹಂತದ ಅನ್‍ಲಾಕ್ ನಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ಬರುವ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ.

    ದೇವಾಲಯಳಿಗೆ ಕೊರೊನಾ ಲಾಕ್‍ಡೌನ್‍ನಿಂದ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಮೂರನೇ ಹಂತದಲ್ಲಿ ದೇವಾಲಯಕ್ಕೆ ಭಕ್ತರಿಗೆ ಮುಕ್ತಗೊಳಿಸುವ ಚಿಂತನೆ ನಡೆದಿದೆ. ಈ ಹಿನ್ನೆಲೆ ಸೋಮವಾರದಿಂದ ಭಕ್ತರು ದೇವಾಲಯಕ್ಕೆ ಬರುವ ಸಾಧ್ಯತೆ ಹಚ್ಚಾಗಿದೆ. ಹಾಗಾಗಿ ದೇವಾಲಯವನ್ನು ಶುದ್ಧಗೊಳಿಸಿಕೊಳ್ಳುವ ಕಾರ್ಯಕ್ಕೆ ಸಿಬ್ಬಂದಿ ಮುಂದಾಗಿದ್ದಾರೆ.

    ಬೆಂಗಳೂರಿನ ಪುರಾಣ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಒಳ ಆವರಣವನ್ನು ನೀರಿನ ಮೂಲಕ ತೊಳೆದು ಸ್ಯಾನಿಟೈಸರ್ ಮಾಡುವ ಕಾರ್ಯದಲ್ಲಿ ದೇವಾಲಯದ ಸಿಬ್ಬಂದಿ ನಿರತರಾಗಿದ್ದಾರೆ.

    ಸರ್ಕಾರ ನೀಡುವ ಮಾರ್ಗಸೂಚಿಯ ಅನುಸಾರ ದೇವಾಲಯಕ್ಕೆ ಭಕ್ತರು ಬರಬೇಕಾಗುತ್ತದೆ. ಸರ್ಕಾರ ಸೋಮವಾರದಿಂದ ದೇವಾಲಯಗಳಲ್ಲಿ ಭಕ್ತರಿಗೆ ಅವಕಾಶ ನೀಡುವ ನಿರೀಕ್ಷೆಯಿಂದ ನಾವೂ ಇಂದೇ ಶುದ್ಧತೆಯ ಕಾರ್ಯವನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಆರ್ಚಕರು ಹೇಳಿದ್ದಾರೆ. ಇದನ್ನೂ ಓದಿ : ಉತ್ತರಾಖಂಡ್ ಮುಂದಿನ ಮುಖ್ಯಮಂತ್ರಿ ಯಾರು?

  • ದಕ್ಷಿಣ ಕನ್ನಡದಲ್ಲಿ ಮತ್ತಷ್ಟು ಅನ್‍ಲಾಕ್- ವೀಕೆಂಡ್ ಕರ್ಫ್ಯೂ ಮುಂದುವರಿಕೆ

    ದಕ್ಷಿಣ ಕನ್ನಡದಲ್ಲಿ ಮತ್ತಷ್ಟು ಅನ್‍ಲಾಕ್- ವೀಕೆಂಡ್ ಕರ್ಫ್ಯೂ ಮುಂದುವರಿಕೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಮತ್ತಷ್ಟು ಅನ್‍ಲಾಕ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜಿಲ್ಲೆಯಾದ್ಯಂತ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಿದ್ದು, ಬಸ್ ಸಂಚಾರ ಸೇರಿ ಎಲ್ಲ ಚಟುವಟಿಕೆಗಳಿಗೆ ಸಂಜೆ 5ರವರೆಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.

    ಅನ್‍ಲಾಕ್ ಇದ್ದರೂ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ಎಂದಿನಂತೆ ವೀಕೆಂಡ್ ಕರ್ಫ್ಯೂ ಇರಲಿದೆ. ಈ ಬಾರಿಯ ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತುಗಳ ಖರೀದಿದೆ ಅವಕಾಶ ಇದ್ದು, ಹಾಲು, ತರಕಾರಿ, ಮೀನು, ಮಾಂಸ ಮತ್ತು ದಿನಸಿ ಖರೀದಿಗಷ್ಟೇ ವಾರಾಂತ್ಯ ಅವಕಾಶವಿದೆ.

    ವೀಕೆಂಡ್ ವೇಳೆ ಅಗತ್ಯ ವಸ್ತು ಹೊರತುಪಡಿಸಿ ಯಾವುದೇ ಅಂಗಡಿ ತೆರೆಯಲು ಹಾಗೂ ಬಸ್ ಸಂಚಾರಕ್ಕೂ ಅವಕಾಶ ಇಲ್ಲ. ಈ ಹೊಸ ಆದೇಶ ಜುಲೈ 5ರವರೆಗೆ ಜಾರಿಯಲ್ಲಿ ಇರಲಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

  • ರಸ್ತೆಯಲ್ಲಿ ಎತ್ತು, ಎಮ್ಮೆ, ಹಸುಗಳ ಮಾರಾಟ ಜೋರು

    ರಸ್ತೆಯಲ್ಲಿ ಎತ್ತು, ಎಮ್ಮೆ, ಹಸುಗಳ ಮಾರಾಟ ಜೋರು

    ಹಾವೇರಿ: ಕೊರೊನಾ ಲಾಕ್‍ಡೌನ್ ಅನ್‍ಲಾಕ್‍ಗೊಳಿಸಿದ ಹಿನ್ನೆಲೆ ಹಾವೇರಿಯ ಶಿವಲಿಂಗೇಶ್ವರ ಮಾರುಕಟ್ಟೆಯಲ್ಲಿ ಜಾನುವಾರುಗಳ ಮಾರಾಟ ಜೋರಾಗಿ ನಡೆದಿದೆ.

    ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಸರ್ಕಾರ ಅನ್ ಲಾಕ್ ಘೋಷಣೆ ಮಾಡಿದೆ. ಇನ್ನು ಅನ್ ಲಾಕ್ ಘೋಷಣೆ ಮಾಡಿ ಹನ್ನೇರಡು ದಿನಗಳು ಆಗಿಲ್ಲ, ಜನರು ಮಾಸ್ಕ್ ಧರಿಸದೇ ಓಡಾಡುವ ಸಂಖ್ಯೆ ಹೆಚ್ಚಾಗಿದೆ.

    ಇಂದು ಹಾವೇರಿಯ ಶಿವಲಿಂಗೇಶ್ವರ ಮಾರುಕಟ್ಟೆಯ ಮುಂದೆ ಎತ್ತು, ಎಮ್ಮೆ ಹಾಗೂ ಹಸುಗಳ ಮಾರಾಟ ಜೋರಾಗಿತ್ತು. ಕೊರೊನಾ ಎರಡನೇ ಅಲೆಯಿಂದಾಗಿ ಬಂದ್ ಆಗಿದ್ದ ಮಾರುಕಟ್ಟೆಯನ್ನು ಎಪಿಎಂಸಿ ಸಿಬ್ಬಂದಿ ಇಂದು ಬೆಳಗ್ಗೆ ಓಪನ್ ಮಾಡಿರಲಿಲ್ಲ. ಹೀಗಾಗಿ ಎತ್ತು, ಎಮ್ಮೆ ಹಾಗೂ ಹಸು ಮಾರಾಟಕ್ಕೆ ಬಂದ ಜನರು ಮಾರುಕಟ್ಟೆಯ ಮುಂದೆ ನಿಲ್ಲಿಸಿ ವ್ಯಾಪಾರ ವಹಿವಾಟು ನಡೆಸಿದ್ದರು.

    ಯಾವುದೇ ಸಾಮಾಜಿಕ ಅಂತರ ಇಲ್ಲದೆ, ಕೆಲವು ಜನರು ಮಾತ್ರ ಮಾಸ್ಕ್ ಧರಿಸಿದ್ದು ಬಿಟ್ಟರೆ, ಇನ್ನೂ ಕೆಲವರು ಮೈಮರೆತು ಓಡಾಡಿದವರ ಸಂಖ್ಯೆ ಹೆಚ್ಚಾತ್ತು. ವ್ಯಾಪಾರಸ್ಥರನ್ನು ಹಾಗೂ ರೈತರನ್ನು ನಿಯಂತ್ರಣ ಮಾಡಲು ಪೊಲೀಸ್ ಸಿಬ್ಬಂದಿ ಕೂಡ ಇರಲಿಲ್ಲ. ಇದನ್ನೂ ಓದಿ: ಕೆಐಎಡಿಬಿ ಕಚೇರಿ ಮೇಲೆ ಎಸಿಬಿ ದಾಳಿ – 70 ಸಾವಿರ ನಗದು, ದಾಖಲೆ ಜಪ್ತಿ

  • ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ಸಹಮತವಿದೆ: ಆರ್.ಅಶೋಕ್

    ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ಸಹಮತವಿದೆ: ಆರ್.ಅಶೋಕ್

    – 20 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ
    – ಸಿಎಂ ಬಿಎಸ್‍ವೈ ಬದಲಾವಣೆ ಪ್ರಶ್ನೆಯೇ ಇಲ್ಲ
    – ಜುಲೈ 5ರ ಬಳಿಕ ಮತ್ತಷ್ಟು ಲಾಕ್‍ಡೌನ್ ಸಡಿಲಿಕೆ

    ಹಾಸನ: ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ನಮ್ಮ ಸಹಮತವಿದೆ. ಸರ್ಕಾರ ರಚನೆಯಾಗಲು ರಮೇಶ್ ಜಾರಕಿಹೊಳಿ ಅವರ ಶ್ರಮ ಸಾಕಷ್ಟಿದೆ. ಈಗ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದು, ಪಕ್ಷದಲ್ಲಿ ಸಮನ್ವಯತೆ ಇಲ್ಲ. ಪಕ್ಷದ ರೈಲು ಇನ್ನೂ ಟ್ರ್ಯಾಕ್ ಗೆ ಇಳಿದಿಲ್ಲ. ಕೇಂದ್ರದಲ್ಲೂ ಸಹ ಸಮರ್ಥ ವಿರೋಧ ಪಕ್ಷದ ನಾಯಕರು ಇಲ್ಲದೆ ತಬ್ಬಿಬ್ಬಾಗಿದೆ. ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ನಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜಾತಿ ರಾಜಕೀಯದಲ್ಲಿ ತೊಡಗಿರುವ ಪಕ್ಷದಲ್ಲಿ ಸಂವಿಧಾನ ಬದಲಾವಣೆ ಮೂಲಕ ಜಾತಿಗೊಂದರಂತೆ ಸಿಎಂ ಕುರ್ಚಿಯನ್ನು ಸೃಷ್ಟಿ ಮಾಡಬೇಕು ಅಷ್ಟೇ. ಅದು ಸಹ ಕಷ್ಟ ಸಾಧ್ಯ ಆದ್ದರಿಂದ ಕಾಂಗ್ರೆಸ್ ರಾಜ್ಯದಲ್ಲಿ ಮುಂದಿನ 20 ವರ್ಷ ಅಧಿಕಾರಕ್ಕೆ ಬರುವುದು ಸುಳ್ಳು ಎಂದು ಭವಿಷ್ಯ ನುಡಿದರು.

    ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿದರು ಎಂದು ಹೇಳಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರ ಜಗಳವನ್ನು ಪ್ರೇಕ್ಷಕರಾಗಿ ನೋಡುತ್ತಿದ್ದೇವೆ. ನಮ್ಮ ಬಿಜೆಪಿ ಸರ್ಕಾರದಿಂದ ಕೇವಲ ಅಭಿವೃದ್ಧಿಯ ಮಂತ್ರ ಜಪ ಮಾಡಲಾಗುತ್ತಿದ್ದು, ಕೊರೊನಾ ಹತೋಟಿ, ಲಸಿಕೆ ಕಾರ್ಯಕ್ರಮ ಯಶಸ್ಸಿಗೆ ಹಾಗೂ ಜನರ ಆರ್ಥಿಕ ಸುಧಾರಣೆಗೆ ಕೆಲಸ ಮಾಡುತ್ತಿದ್ದೇವೆ ಎಂದರು .

    ಎರಡು ವರ್ಷ ಬಿಎಸ್‍ವೈ ಸಿಎಂ:
    ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿರುವ ಯಡಿಯೂರಪ್ಪ ಅವರು ಮುಂದಿನ ಮೂರನೇ ಅಲೆಯನ್ನು ಸಹ ಅವರ ನೇತೃತ್ವದಲ್ಲಿಯೇ ನಿರ್ವಹಣೆ ಮಾಡಲಾಗುವುದು ಹಾಗೂ 2 ವರ್ಷದವರೆಗೆ ಸಿಎಂ ಬದಲಾವಣೆ ಪ್ರಶ್ನೆ ಇಲ್ಲ ಎಂದು ಪುನರುಚ್ಚರಿಸಿದರು. ಮುಂದಿನ ಡಿಸೆಂಬರ್ ಒಳಗೆ ರಾಜ್ಯದ ಎಲ್ಲಾ ಜನರಿಗೆ 2 ಡೋಸ್ ಲಸಿಕೆ ಹಾಕಲು ತಯಾರಿ ಮಾಡುತ್ತಿದ್ದೇವೆ. ಕೊರೊನಾ ಮೂರನೇ ಅಲೆ ತಡೆಗಟ್ಟಲು ಪ್ರತ್ಯೇಕ ಟಾಸ್ಕ್ ಫೋರ್ಸ್ ರಚಿಸಲು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದು ಮುಂದಿನ ದಿನಗಳಲ್ಲಿ ಕಾರ್ಯಗತವಾಗಲಿದೆ ಎಂದು ಸ್ಪಷ್ಟಪಡಿಸಿದರು.

    ಜುಲೈ 5 ಬಳಿಕ ಲಾಕ್‍ಡೌನ್ ಇನ್ನಷ್ಟು ಸಡಿಲ:
    ರಾಜ್ಯದಲ್ಲಿ ಜುಲೈ 5 ರಿಂದ ಇನ್ನಷ್ಟು ಲಾಕ್‍ಡೌನ್ ಸಡಿಲ ಮಾಡಲು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಈಗಾಗಲೇ ಜನರು ವ್ಯಾಪಾರ-ವಹಿವಾಟು ಇಲ್ಲದೆ ಸಂಕಷ್ಟದಲ್ಲಿರುವ ಕಾರಣ ಜುಲೈ ಐದರ ಮುಂಚಿತವಾಗಿಯೇ ಲಾಕ್‍ಡೌನ್ ಸಡಿಲಿಸುವ ಬಗ್ಗೆ ಮುನ್ಸೂಚನೆ ನೀಡಿದರು. ಇದನ್ನೂ ಓದಿ: ದೇಶದ ಪ್ರಗತಿ-ನೆಮ್ಮದಿಗಳೆರಡೂ ಆ ದೇಶದ ತೆರಿಗೆ ನೀತಿ ಹೇಗಿದೆ ಎಂಬುದರ ಮೇಲೆ ತೀರ್ಮಾನವಾಗುತ್ತೆ: ಸಿದ್ದರಾಮಯ್ಯ

    ಕರ್ನಾಟಕ ಕಾಂಗ್ರೆಸ್ ನಲ್ಲಿ ಬಂಡಾಯ ಏಳುವ ಸ್ಥಿತಿ ನಿರ್ಮಾಣವಾಗಿದೆ. ಹಲವು ಕಾಂಗ್ರೆಸ್ಸಿಗರು ಚುನಾವಣೆ ಒಂದು ವರ್ಷ ಇದ್ದಹಾಗೆ ಬಿಜೆಪಿಗೆ ಬರಲಿದ್ದಾರೆ ಎಂದ ಅವರು ಕಾಂಗ್ರೆಸ್ ಪಕ್ಷದಿಂದ 15 ಮಂದಿಯನ್ನು ನಾವು ಕರೆದುಕೊಂಡು ಬಂದಿದ್ದೇವೆ ಈ ಮೂಲಕ ನಮ್ಮ ಶಕ್ತಿಪ್ರದರ್ಶನ ಮಾಡಿದ್ದು ಅವರು ಬಿಜೆಪಿಯಿಂದ ಎಷ್ಟುಮಂದಿ ಕರೆದುಕೊಂಡು ಹೋಗುತ್ತಾರೆ ಕಾದು ನೋಡುವ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕಾರ್ಮಿಕರ ಫುಡ್ ಕಿಟ್ ಅನ್ಯರಿಗೆ ಹಂಚಿಕೆ ಆರೋಪ: ಪ್ರಜ್ವಲ್ ರೇವಣ್ಣ ನೇತೃತ್ವದಲ್ಲಿ ಪ್ರತಿಭಟನೆ

    ಹೆಚ್.ವಿಶ್ವನಾಥ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಕ್ಷದ ಬಗ್ಗೆ ಸರ್ಕಾರದ ಬಗ್ಗೆ ಮಾತನಾಡಬಾರದು ಎಂದು ರಾಜ್ಯಕ್ಕೆ ಭೇಟಿ ನೀಡಿದ ಉಸ್ತುವಾರಿ ಅರುಣ್ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಬಿಜೆಪಿ ವಿರುದ್ಧ ಮಾತನಾಡುವ ನಾಯಕರ ಬಗ್ಗೆ ವರದಿ ಕಳುಹಿಸಿಕೊಡಲು ಸಹ ಸೂಚನೆ ನೀಡಿದೆ. ಆದ್ದರಿಂದ ಯತ್ನಾಳ್, ಯೋಗೇಶ್ವರ್, ಬೆಲ್ಲದ್ ವಿಚಾರ ಮಾತನಾಡುತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಈ ಸರ್ಕಾರದಲ್ಲಿ ಅಕ್ಷರ, ಆರೋಗ್ಯ ಎರಡು ಕೆಟ್ಟು ಹೋಗುತ್ತಿದೆ – ವಿಶ್ವನಾಥ್ ವಾಗ್ದಾಳಿ

  • ಇಂದಿನಿಂದ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಮುಕ್ತ ಅವಕಾಶ

    ಇಂದಿನಿಂದ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಮುಕ್ತ ಅವಕಾಶ

    ಶಿವಮೊಗ್ಗ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಜೋಗ ಜಲಪಾತ ವೀಕ್ಷಣೆ ಪ್ರವಾಸಿಗರಿಗೆ ಅವಕಾಶ ಇರಲಿಲ್ಲ. ಎಲ್ಲಾ ಪ್ರವಾಸಿ ತಾಣಗಳು ಬಂದ್ ಆಗಿದ್ದವು. ಇದೀಗ ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಇಂದಿನಿಂದ ಮುಕ್ತ ಅವಕಾಶ ನೀಡಲಾಗಿದೆ.

    ಕೊರೊನಾ ಸೋಂಕು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಅನ್‍ಲಾಕ್ ಘೋಷಿಸಿದ್ದು, ಪ್ರವಾಸಿ ತಾಣಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಹೀಗಾಗಿಯೇ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತ ವೀಕ್ಷಣೆಗೆ ಇಂದಿನಿಂದ ಅವಕಾಶ ಕಲ್ಪಿಸಿದ್ದು, ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಮಯಾವಕಾಶ ನಿಗದಿಪಡಿಸಲಾಗಿದೆ.

    ಈಗಾಗಲೇ ಪಶ್ಚಿಮ ಘಟ್ಟದಲ್ಲಿ ಮುಂಗಾರಿನ ಅಬ್ಬರ ಆರಂಭವಾಗಿದೆ. ಮಳೆ ಹೆಚ್ಚಿರುವ ಕಾರಣ ಶರಾವತಿ ಜೋಗದಲ್ಲಿ ಮೈದುಂಬಿಕೊಂಡು ರಾಜಾ, ರಾಣಿ, ರೋರರ್, ರಾಕೆಟ್ ಆಗಿ ಧುಮಕುವ ದೃಶ್ಯ ರಮಣೀಯವಾಗಿದೆ. ಈ ಹಿನ್ನಲೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ಸಹ ಹೆಚ್ಚಾಗಲಿದೆ. ಕೊರೊನಾದಿಂದ ಮನೆಯಲ್ಲಿಯೇ ಲಾಕ್ ಆಗಿದ್ದವರಿಗೆ ಜೋಗದ ವೈಭೋಗ ವೀಕ್ಷಿಸಲು ಒಳ್ಳೆಯ ಅವಕಾಶ ಎನ್ನಬಹುದು. ಇದನ್ನೂ ಓದಿ: ಸರ್ವ ಋತು ಪ್ರವಾಸಿ ತಾಣವಾಗಲಿದೆ ಜೋಗ ಜಲಪಾತ’

    ಜೋಗ ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗು ಸ್ಯಾನಿಟೈಸರ್ ಬಳಸುವ ಜೊತೆಗೆ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸುವಂತೆ ಪ್ರವಾಸೋದ್ಯಮ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಿಯಮ ಪಾಲಿಸದಿದ್ದರೆ ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.

  • ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಶಾಕ್ – ಮುಷ್ಕರ ಮಾಡದಂತೆ ಆದೇಶ

    ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಶಾಕ್ – ಮುಷ್ಕರ ಮಾಡದಂತೆ ಆದೇಶ

    ಬೆಂಗಳೂರು: ರಾಜ್ಯದಲ್ಲಿ ಅನ್‍ಲಾಕ್ ಆದ ನಂತರ ಬಸ್ ಸಂಚಾರ ಶುರುವಾಗಿದೆ. ಆದರು ಇನ್ನೂ ಮೊದಲ ರೀತಿಯಲ್ಲಿ ಎಲ್ಲಾ ಬಸ್‍ಗಳು ಸರಿಯಾಗಿ ರಸ್ತೆಗೆ ಇಳಿದಿಲ್ಲ. ಈ ಮಧ್ಯೆ ಸರ್ಕಾರಕ್ಕೆ ಶಾಕ್ ನೀಡಲು ಸಾರಿಗೆ ನೌಕರರು ಮುಂದಾಗಿದ್ದರು. ಆದರೆ ಇದೀಗ ಸಾರಿಗೆ ನೌಕರರಿಗೆ ಸರ್ಕಾರವೇ ಚಮಕ್ ನೀಡಿದೆ.

    ಜುಲೈ 5ರ ಬಳಿಕ ಕುಟುಂಬ ಸಮೇತ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ತಯಾರು ನಡೆಸಿದ್ದರು. ಇದನ್ನು ಅರಿತ ಸರ್ಕಾರ ಈ ಹಿನ್ನೆಲೆ ಅಗತ್ಯ ಸೇವೆಗಳ ಮುಷ್ಕರವನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಜುಲೈ 1 ರಿಂದ ಡಿ.31 ರವರೆಗೆ ಸಾರಿಗೆ ನೌಕರರ ಮುಷ್ಕರ ನಿಷೇಧ ಮಾಡಲಾಗಿದೆ. ಇದನ್ನೂ ಓದಿ: ಸಾರಿಗೆ ಸಮಸ್ಯೆಯಾದಾಗ ಜನರೇ ಸಹಿಸಿಕೊಳ್ಳಬೇಕು: ಸವದಿ ಉಡಾಫೆ ಹೇಳಿಕೆ

    ಸದ್ಯ ಕೋವಿಡ್ ನಿಂದ ಆರ್ಥಿಕತೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಸಂದರ್ಭದಲ್ಲಿ ಮುಷ್ಕರ ಮಾಡುವುದು ಸೂಕ್ತವಲ್ಲ. ಹಾಗಾಗಿ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆಯ 3ರ ಉಪವಿಭಾಗ 1ರ ಅನ್ವಯ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಅಗತ್ಯ ಸೇವೆಗಳ ಮುಷ್ಕರ ನಿಷೇಧಿಸಿ ಆದೇಶವನ್ನು ಹೊರಡಿಸಿದೆ. ಇದರಿಂದ ಇದೀಗ ಸಾರಿಗೆ ನೌಕರರಿಗೆ ಹಿನ್ನಡೆ ಆದಂತಾಗಿದೆ.

  • ದಕ್ಷಿಣ ಕನ್ನಡದಲ್ಲಿ ಇಂದಿನಿಂದ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್

    ದಕ್ಷಿಣ ಕನ್ನಡದಲ್ಲಿ ಇಂದಿನಿಂದ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್

    – ಖಾಸಗಿ ಬಸ್ ಸಂಚಾರ ಇಲ್ಲ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಭಾಗಶಃ ಅನ್ ಲಾಕ್ ಆಗಿದ್ದು ಮಾಲ್, ಸಿನಿಮಾ ಥಿಯೇಟರ್, ಧಾರ್ಮಿಕ ಕ್ಷೇತ್ರಗಳನ್ನು ಹೊರತುಪಡಿಸಿ ಬೆಳಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೂ ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

    ಪಾಸಿಟಿವಿಟಿ ರೇಟ್ ಹಾಗೂ ಸಾವಿನ ಸಂಖ್ಯೆ ಕಡಿಮೆಯಾಗದಿದ್ರೂ ಅನ್ ಲಾಕ್ ಮಾಡಲಾಗಿದ್ದು ಬಸ್ ಸಂಚಾರಕ್ಕೂ ಅನುಮತಿಸಲಾಗಿದೆ. ಬಸ್ ಗಳಲ್ಲಿ ಶೇ.50 ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಇರೋದ್ರಿಂದ ಕೆಎಸ್ ಆರ್ ಟಿಸಿ ಬಸ್ಸುಗಳು ಮಾತ್ರ ಸದ್ಯ ರಸ್ತೆಗಿಳಿಯಲಿದ್ದು, ಖಾಸಗಿ ಬಸ್ಸುಗಳು ಈ ತಿಂಗಳ ಅಂತ್ಯದವರೆಗೂ ಸೇವೆ ಆರಂಭಿಸೋದಿಲ್ಲ. ಬಸ್ಸಿನ ತಾಂತ್ರಿಕ ಸ್ಥಿತಿ ನೋಡಿ ಬಳಿಕ ಪೂರ್ಣ ಪ್ರಮಾಣದ ಪ್ರಯಾಣಿಕರ ಸಂಚಾರಕ್ಕೆ ಅನುಮತಿ ಸಿಕ್ಕಿದ ಬಳಿಕವೇ ರಸ್ತೆಗಿಳಿಯಲು ತೀರ್ಮಾನಿಸಲಾಗಿದೆ.

    ಸೋಂಕು ಹೆಚ್ಚಾಗಲು ಕಾರಣವೇನು..?
    ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಇಳಿಕೆಯಾದ್ರೂ ದಕ್ಷಿಣ ಕನ್ನಡದಲ್ಲಿ ಮಾತ್ರ ಸೋಂಕಿನ ಪ್ರಯಾಣ ಏರಿಕೆ ಆಗ್ತಾನೇ ಇದೆ. ಜಿಲ್ಲೆಯಲ್ಲಿ ನಿನ್ನೆ 374 ಪಾಸಿಟಿವ್ ಕೇಸ್ ದಾಖಲಾಗಿದ್ರೆ, 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ. 5.68 ಇದೆ. ಒಟ್ಟು 6,820 ಆಕ್ಟೀವ್ ಕೇಸ್‍ಗಳು ಜಿಲ್ಲೆಯಲ್ಲಿವೆ. ಈವರೆಗೂ 1,080 ಮಂದಿ ಕೊರೋನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ.

    ಕೆಲ ದಿನಗಳಿಂದ ಜಿಲ್ಲೆಯಲ್ಲಿ ಪಾಸಿಟಿವಿಟಿ ಏರುತ್ತಲೇ ಇದೆ. ಇದಕ್ಕೆ ಕಾರಣ ಟೆಸ್ಟಿಂಗ್ ಪ್ರಕ್ರಿಯೆ. ಹೌದು, ಈ ಹಿಂದೆ ಜಿಲ್ಲೆಯಲ್ಲಿ ಸಾಮಾನ್ಯವಾಗಿ 2 ರಿಂದ 3 ಸಾವಿರ ಸ್ಯಾಂಪಲ್‍ಗಳನ್ನು ಆರ್‍ಟಿಪಿಸಿಆರ್ ಟೆಸ್ಟ್‍ಗೆ ಒಳಪಡಿಸಲಾಗ್ತಿತ್ತು. ಆದರೆ ಇದೀಗ ಜಿಲ್ಲಾಡಳಿತದ ಸೂಚನೆಯಂತೆ ದಿನವೊಂದಕ್ಕೆ 8 ರಿಂದ 9 ಸಾವಿರ ಕೊರೋನಾ ಟೆಸ್ಟಿಂಗ್ ನಡೀತಿದೆ. ಗ್ರಾಮಗಳಲ್ಲಿ ಕೊರೋನಾ ಟೆಸ್ಟಿಂಗ್ ಹೆಚ್ಚಾಗಿ ನಡೀತಿದ್ದು ಪಾಸಿಟಿವ್ ಕೇಸ್‍ಗಳು ದಾಖಲಾಗ್ತಾನೇ ಇವೆ.

  • ಜನ ಜಾಗೃತರಾಗದೇ ಇದ್ದರೆ ಮತ್ತೆ ಲಾಕ್‍ಡೌನ್: ಮಂಡ್ಯ ಡಿಸಿ

    ಜನ ಜಾಗೃತರಾಗದೇ ಇದ್ದರೆ ಮತ್ತೆ ಲಾಕ್‍ಡೌನ್: ಮಂಡ್ಯ ಡಿಸಿ

    ಮಂಡ್ಯ: ಸತತ ಲಾಕ್‍ಡೌನ್‍ನಿಂದ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗಿರುವ ಕಾರಣ ಜಿಲ್ಲೆಯನ್ನು ಇಂದಿನಿಂದ ಅನ್‍ಲಾಕ್ ಮಾಡಲಾಗಿದೆ. ಜನರು ಮುಂದಿನ ದಿನಗಳಲ್ಲಿ ಕೊರೊನಾ ಮಾರ್ಗ ಸೂಚಿಗಳನ್ನು ಅನುಸರಿಸದೇ ಇದ್ದರೆ ಮತ್ತೆ ಲಾಕ್‍ಡೌನ್ ಮಾಡುವುದುದಾಗಿ ಜಿಲ್ಲಾಧಿಕಾರಿ ಅಶ್ವಥಿ ಅವರು ಎಚ್ಚರಿಕೆ ನೀಡಿದ್ದಾರೆ.

    ಇಂದು ಜಿಲ್ಲೆಯನ್ನು ಅನ್‍ಲಾಕ್ ಮಾಡಿರುವ ಕಾರಣ ಮಂಡ್ಯ ನಗರ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು. ಬಟ್ಟೆ, ಚಿನ್ನ, ಮೊಬೈಲ್ ಅಂಗಡಿಗಳು ಸೇರಿದಂತೆ ಇತರೆ ಕಡೆ ಜನಗುಂಳಿ ನಿರ್ಮಾಣವಾಗಿದೆ. ಜನರು ಕೊರೊನಾ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿ ಕೊರೊನಾ ಇಲ್ಲ ಎಂಬಂತೆ ವರ್ತನೆ ಮಾಡುತ್ತಿದ್ದಾರೆ.

    ಜನರ ಈ ವರ್ತನೆಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಅಶ್ವಥಿ ಅವರು, ಮತ್ತೆ ಲಾಕ್‍ಡೌನ್ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಮಂಡ್ಯದಲ್ಲಿ ಪಾಸಿಟಿವಿಟಿ ಕಡಿಮೆ ಆಗಿದೆ. ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾಗಿಯೇ ಇದೆ. ನಾನು ಎರಡು ಮೂರು ದಿನ ನೋಡುತ್ತೇನೆ. ಜನರು ಹೀಗೆ ವರ್ತಿಸಿದಲ್ಲಿ ಮತ್ತೆ ಲಾಕ್‍ಡೌನ್ ಮಾಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ:ಎರಡು ವರ್ಷಗಳಿಂದ ಪೊಲೀಸರಿಗೆ ಸಿಗದ ಖತರ್ನಾಕ್ ಕಳ್ಳ