Tag: Unknown Person

  • ನಡುರಸ್ತೆಯಲ್ಲಿ ಲಾಂಗ್ ಹಿಡಿದು ಓಡಾಡಿದ ಅಪರಿಚಿತ – ಆತಂಕದಲ್ಲಿ ಜನರು

    ನಡುರಸ್ತೆಯಲ್ಲಿ ಲಾಂಗ್ ಹಿಡಿದು ಓಡಾಡಿದ ಅಪರಿಚಿತ – ಆತಂಕದಲ್ಲಿ ಜನರು

    ಚಿಕ್ಕಮಗಳೂರು: ಅಪರಿಚಿತ ವ್ಯಕ್ತಿಯೊಬ್ಬ ನಡುರಸ್ತೆಯಲ್ಲಿ ಲಾಂಗ್ ಹಿಡಿದು ಕೆಲ ಹೊತ್ತು ಜನರಿಗೆ ಆತಂಕ ಹುಟ್ಟಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಡೆದಿದೆ.

    ಅಪರಿಚಿತ ವ್ಯಕ್ತಿ ಕೊಪ್ಪ ಬಸ್ ನಿಲ್ದಾಣ ಹಾಗೂ ಮುಖ್ಯ ರಸ್ತೆಯಲ್ಲಿ ಓಡಾಡಿದ್ದು, ಲಾಂಗ್ ಹಿಡಿದು ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ವ್ಯಕ್ತಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಪೊಲೀಸರು ಕೊಪ್ಪ ಪಟ್ಟಣದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆದರೂ ಸಹ ಆ ಅಪರಿಚಿತ ವ್ಯಕ್ತಿ ಪತ್ತೆ ಆಗಲಿಲ್ಲ. ಲಾಂಗ್ ಹಿಡಿದು ಓಡಾಡಿದ ನಂತರ ಆ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಹೀಗಾಗಿ ಪೊಲೀಸರು ಫೋಟೋ ಆಧರಿಸಿ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಸೋಮವಾರ ಸಂಜೆ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಹಾಸನದ ಲೇಡಿಸ್ ಹಾಸ್ಟೆಲ್ ನಲ್ಲಿ ಮತ್ತೆ ಅಪರಿಚಿತ ವ್ಯಕ್ತಿ ಎಂಟ್ರಿ

    ಹಾಸನದ ಲೇಡಿಸ್ ಹಾಸ್ಟೆಲ್ ನಲ್ಲಿ ಮತ್ತೆ ಅಪರಿಚಿತ ವ್ಯಕ್ತಿ ಎಂಟ್ರಿ

    ಹಾಸನ: ನಗರದ ಪ್ರತಿಷ್ಠಿತ ಪಶುವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಮತ್ತೊಮ್ಮೆ ಅಪರಿಚಿತ ವ್ಯಕ್ತಿ ಎಂಟ್ರಿ ಕೊಟ್ಟು ಹೋಗಿದ್ದಾನೆ. ಇದರಿಂದ ಸಹಜವಾಗಿಯೇ ವಿದ್ಯಾರ್ಥಿನಿಯರು ಭಯಗೊಂಡಿದ್ದಾರೆ.

    ಇದೇ ವರ್ಷ ಅಂದರೆ 2017 ಮಾರ್ಚ್ 30ರ ರಾತ್ರಿ ಅನಾಮಿಕನೊಬ್ಬ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರಾತ್ರಿ ವೇಳೆ ಲೇಡೀಸ್ ಹಾಸ್ಟೆಲ್ ಗೆ ಎಂಟ್ರಿ ಕೊಟ್ಟಿದ್ದ. ಇದು ದೊಡ್ಡ ಸುದ್ದಿಯಾಗಿತ್ತು. ಅಷ್ಟೇ ಅಲ್ಲ ಹಾಸ್ಟೆಲ್ ನ ಒಳಹೊರಗೆ ಸಿಸಿ ಕ್ಯಾಮೆರಾ ಜೊತೆಗೆ ಕಾವಲಿಗೆ ಸೆಕ್ಯುರಿಟಿ ಗಾರ್ಡ್ ಇದ್ದರೂ ಆತ ಬಂದಿದ್ದು ಹೇಗೆ ಎಂಬುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು.

    ಈ ಬಗ್ಗೆ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ಆ ಘಟನೆ ಮಾಸುವ ಮುನ್ನವೇ ಡಿಸೆಂಬರ್ 2 ರಂದು ಮತ್ತೊಬ್ಬ ಅಪರಿಚಿತ ಅದೇ ಹಾಸ್ಟೆಲ್ ಗೆ ಹಳೇ ಶೈಲಿಯಲ್ಲೇ ಬಂದು ಹೋಗಿದ್ದಾನೆ. ಇದಕ್ಕೆ ಯಾವ ಲೋಪ ಕಾರಣ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆತ ಕಾಮುಕನೋ? ಕಳ್ಳನೋ? ಗೊತ್ತಿಲ್ಲ. ಆದರೆ ಸಣ್ಣ ಪೈಪ್ ಸಹಾಯದಿಂದ ಕಟ್ಟಡ ಏರಿರುವುದು ಪಾದದ ಗುರುತುನಿಂದ ಖಾತ್ರಿಯಾಗಿದೆ.

    ಇಷ್ಟೆಲ್ಲಾ ಆದ ಬಳಿಕ ಪೈಪ್ ಗೆ ತಂತಿ ಸುತ್ತಿರುವ ಆಡಳಿತ ಮಂಡಳಿ, ಮುಂದೆ ಹಾಸ್ಟೆಲ್ ನಲ್ಲಿ ಭದ್ರತೆ ಹೆಚ್ಚಿಸಲು ಮುಂದಾಗಿದೆ. ಅಲ್ಲದೇ ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಮತ್ತೊಮ್ಮೆ ಬಡಾವಣೆ ಪೊಲೀಸರಿಗೆ ದೂರು ನೀಡಲಾಗಿದೆ.

  • ಮಲೆ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಅಪರಿಚಿತ ಶವ ಪತ್ತೆ

    ಮಲೆ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಅಪರಿಚಿತ ಶವ ಪತ್ತೆ

    ಚಾಮರಾಜನಗರ: ದೇವಸ್ಥಾನದ ಆವರಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನ ಮಲೆ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಪತ್ತೆಯಾಗಿದೆ.

    ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಲೆ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ರಾತ್ರಿಯಿಂದಲೂ ಅಪರಿಚಿತ ಶವ ಬಿದ್ದಿದರೂ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

    ದೇವಸ್ಥಾನದ ಆವರಣದಲ್ಲಿ ಶವವನ್ನು ನೋಡುತ್ತಿರುವ ಭಕ್ತರು ಇದೀಗ ಗಾಬರಿಯಾಗುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗೆ ತಿಳಿಸಿದರೂ ಸಹ ಶವವನ್ನು ಸ್ಥಳಾಂತರ ಮಾಡುವ ಕೆಲಸಕ್ಕೆ ಮಾತ್ರ ಮುಂದಾಗುತ್ತಿಲ್ಲ. ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಮುಂದೆಯೇ ಈ ಘಟನೆ ಜರುಗಿದ್ದರೂ ಸಹ ಅಧಿಕಾರಿಗಳು ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ.

    ಕಳೆದ 3 ತಿಂಗಳ ಹಿಂದೆಯೂ ಶವ ಪತ್ತೆಯಾಗಿತ್ತು. ಆ ಸಂದರ್ಭದಲ್ಲೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ.

  • ನಾಲೆಯಲ್ಲಿ ತೇಲಿ ಬಂತು ಕೈಕಾಲು ಕಟ್ಟಿ ಎಸೆದ ಮೃತದೇಹ

    ನಾಲೆಯಲ್ಲಿ ತೇಲಿ ಬಂತು ಕೈಕಾಲು ಕಟ್ಟಿ ಎಸೆದ ಮೃತದೇಹ

    ಮಂಡ್ಯ: ಜಿಲ್ಲೆಯ ಪಾಂಡವಪುರದ ನಾಲೆಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ತೇಲಿ ಬಂದಿರೋ ಘಟನೆ ಬೆಳಕಿಗೆ ಬಂದಿದೆ.

    ಪಟ್ಟಣದಲ್ಲಿ ಹರಿದು ಹೋಗುವ ವಿಶ್ವೇಶ್ವರಯ್ಯ ನಾಲೆಯಲ್ಲಿ ಈ ಅಪರಿಚಿತ ವ್ಯಕ್ತಿಯ ಶವ ತೇಲಿ ಬಂದಿದೆ. ಸುಮಾರು 42 ವರ್ಷದ ವ್ಯಕ್ತಿಯ ಕೈಕಾಲುಗಳನ್ನು ಕಟ್ಟಿದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ನಾಲೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.

    ನಾಲೆಯಲ್ಲಿ ವ್ಯಕ್ತಿಯ ಮೃತದೇಹ ನೋಡಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.