Tag: United Nations

  • ಪಾಕಿಗೆ ನೀಡಿದ್ದ ‘ಪರಮಾಪ್ತ ರಾಷ್ಟ್ರ’ ಕಿತ್ತೆಸೆದ ಭಾರತ – ಆರ್ಥಿಕತೆಯ ಮೇಲೆ ಹೊಡೆತ ಹೇಗೆ?

    ಪಾಕಿಗೆ ನೀಡಿದ್ದ ‘ಪರಮಾಪ್ತ ರಾಷ್ಟ್ರ’ ಕಿತ್ತೆಸೆದ ಭಾರತ – ಆರ್ಥಿಕತೆಯ ಮೇಲೆ ಹೊಡೆತ ಹೇಗೆ?

    ನವದೆಹಲಿ: ಪುಲ್ವಾಮಾದ ಈ ಹೇಯ ಕೃತ್ಯದ ಹಿಂದೆ ಮಗ್ಗಲ ಮುಳ್ಳು ಪಾಕಿಸ್ತಾನದ ಕೈವಾಡ ಇದ್ದು ಈ ಬಾರಿ ಸರಿಯಾದ ಪಾಠವನ್ನೇ ಕೇಂದ್ರ ಸರ್ಕಾರ ಕಲಿಸುತ್ತಿದೆ.

    ಪಾಕ್ ವಿರುದ್ಧ ರಾಜತಾಂತ್ರಿಕ ಅಸ್ತ್ರ ಪ್ರಯೋಗಿಸಿರುವ ಭಾರತ, 20 ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿತು. ಇದಕ್ಕೂ ಮುನ್ನ, ಬೆಳಗ್ಗೆ ಸಭೆ ನಡೆಸಿ ಪಾಕಿಸ್ತಾನಕ್ಕೆ ಕೊಟ್ಟಿದ್ದ ಅತ್ಯಾಪ್ತ ದೇಶ ಅನ್ನುವ ಸ್ಥಾನಮಾನವನ್ನು ತತ್ ಕ್ಷಣದಿಂದಲೇ ಹಿಂಪಡೆದಿದೆ. ಭಯೋತ್ಪಾದಕ ಸಂಘಟನೆ ಜೈಷ್-ಇ-ಮೊಹ್ಮದ್ ವಿರುದ್ಧ ಕೂಡಲೇ ಕ್ರಮಕೈಗೊಳ್ಳಿ. ಉಗ್ರ ಸಂಘಟನೆಗಳಿಗೆ ಎಲ್ಲಾ ರೀತಿಯ ನೆರವನ್ನು ನಿಲ್ಲಿಸಿ ಅಂತ ಕೇಂದ್ರ ಸಚಿವ ಅರುಣ್ ಜೇಟ್ಲಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    ದುರ್ಘಟನೆ ಖಂಡನೀಯ. ಆದರೆ ಪಾಕಿಸ್ತಾನದ ಕೈವಾಡ ಇಲ್ಲ ಎಂದು ಗುರುವಾರ ಪಾಕ್ ವಿದೇಶಾಂಗ ಸಚಿವಾಲಯ ಕೊಟ್ಟ ಹೇಳಿಕೆಯನ್ನು ನಾವು ಒಪ್ಪಲ್ಲ ಎಮದು ಪಾಕಿಸ್ತಾನದ ಹೈ-ಕಮೀಷನರ್ ಸೊಹೈಲ್ ಮೊಹ್ಮದ್‍ಗೆ ಬಿಸಿ ಮುಟ್ಟಿಸಿದ್ದಾರೆ. ಅಮೆರಿಕ, ರಷ್ಯಾ, ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ವಿಶ್ವರಾಷ್ಟ್ರಗಳು ಸಹ ಘಟನೆಯನ್ನು ಖಂಡಿಸಿವೆ. ಆದರೆ, ಜೈಷ್ ಮುಖ್ಯಸ್ಥ ಉಗ್ರ ಅಜರ್ ಮಸೂದ್‍ನನ್ನು ಜಾಗತಿಕ ಉಗ್ರನೆಂದು ಘೋಷಿಸಲು ಬೆಂಬಲ ನೀಡಬೇಕೆನ್ನುವ ಬೇಡಿಕೆಯನ್ನು ಚೀನಾ ಮತ್ತೆ ತಿರಸ್ಕರಿಸಿದೆ. ಈ ನಡುವೆ ದೆಹಲಿಯಲ್ಲಿರುವ ಪಾಕ್ ರಾಯಭಾರಿ ಕಚೇರಿಗೆ ಜನ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಏನಿದು ಪರಮಾಪ್ತ ರಾಷ್ಟ್ರ?
    1996ರಲ್ಲಿ ಭಾರತ ವಿಶ್ವ ವ್ಯಾಪಾರ ಸಂಘಟನೆಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಂಕ ಹಾಗೂ ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದ(ಗ್ಯಾಟ್)ಅನ್ವಯ ಪಾಕ್‍ಗೆ ಪರಮಾಪ್ತ ಸ್ಥಾನ ನೀಡಿತ್ತು. ಇದರ ಅನ್ವಯ ಎರಡು ರಾಷ್ಟ್ರಗಳ ಅಭಿವೃದ್ಧಿ ದೃಷ್ಟಿಯಿಂದ ವ್ಯಾಪಾರದಲ್ಲಿ ಸೀಮಾ ಸುಂಕವನ್ನು ಕಡಿಮೆ ಮಾಡಲಾಗಿತ್ತು.

    `ಪರಮಾಪ್ತ ರಾಷ್ಟ್ರ’ ಕಿತ್ತೆಸದರೆ ಪರಿಣಾಮ ಏನು..?
    * ಪಾಕಿಸ್ತಾನಕ್ಕೆ 1996ರಲ್ಲಿ ನೀಡಲಾಗಿದ್ದ ‘ಪರಮಾಪ್ತ ರಾಷ್ಟ್ರ’ ಎಂಬ ಮಾನ್ಯತೆ ನೀಡಿತ್ತು.
    * ಪಾಕಿಸ್ತಾನದಿಂದ ಭಾರತಕ್ಕೆ ಬರುವ ಸರಕುಗಳಿಗೆ ಸೀಮಾ ಸುಂಕ ಹೆಚ್ಚಳ ಮಾಡಬಹುದು.
    * ಜಾಗತಿಕ ಮಟ್ಟದಲ್ಲೂ ಪಾಕಿಸ್ತಾನಕ್ಕೆ ಛೀಮಾರಿ, ವ್ಯತಿರಿಕ್ತ ಪರಿಣಾಮ ಬೀರಬಹುದು.
    * ಭಾರತ ಪಾಕಿಸ್ತಾನದಿಂದ ಹಣ್ಣು, ಸಿಮೆಂಟ್, ಚರ್ಮ, ರಾಸಾಯನಿಕ ಸಂಬಾರು ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿತ್ತು.
    * ಭಾರತ ಈ ನಿರ್ಧಾರ ಪಾಕಿಸ್ತಾನದ ಮೇಲೆ ಅಲ್ಪ ಪ್ರಮಾಣದ ಉಂಟು ಮಾಡಲಿದೆ. ಏಕೆಂದರೆ ಈಗಾಗಲೇ ಪಾಕ್ ಭಾರತದ ಹಲವು ವಸ್ತುಗಳ ಆಮದು ಮಾಡಿಕೊಳ್ಳಲು ನಿಷೇಧವನ್ನು ವಿಧಿಸಿದೆ.
    * ವಿಶ್ವಬ್ಯಾಂಕ್ ಮಾಹಿತಿ ಅನ್ವಯ ಭಾರತ ಹಾಗೂ ಪಾಕಿಸ್ತಾನ ನಡುವೆ ಕಡಿಮೆ ಮಟ್ಟದ ವ್ಯಾಪಾರ ನಡೆಯುತ್ತಿದೆ. 2017-18 ರಲ್ಲಿ 2.41 ಶತಕೋಟಿ ಡಾಲರ್ ವ್ಯಾಪಾರ ನಡೆದರೆ, 2016-17 ರಲ್ಲಿ 2.27 ಶತಕೋಟಿ ವ್ಯಾಪಾರ ನಡೆದಿತ್ತು.
    * ವಿಶ್ವಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಳ ಆಗುವಂತೆ ಮಾಡಿ ಮುಂದಿನ ದಿನಗಳಲ್ಲಿ ಪಾಕಿಸ್ತಾನವನ್ನು ಏಕಾಂಗಿ ಆಗಿಸಲು ಈ ನಿರ್ಧಾರ ಸಹಾಯಕವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತಕ್ಕೆ ದೀಪಾವಳಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಿದ ವಿಶ್ವಸಂಸ್ಥೆ

    ಭಾರತಕ್ಕೆ ದೀಪಾವಳಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಿದ ವಿಶ್ವಸಂಸ್ಥೆ

    ನವದೆಹಲಿ: ದೀಪಾವಳಿ ಹಬ್ಬದ ವಿಶೇಷವಾಗಿ ವಿಶ್ವಸಂಸ್ಥೆ ಭಾರತಕ್ಕೆ ವಿಶೇಷ ಉಡುಗೊರೆ ನೀಡಿದ್ದು, ದೀಪಾವಳಿ ಸಡಗರವನ್ನು ನೆನಪಿಸುವ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದೆ.

    ಕೆಟ್ಟದರ ಮೇಲೆ ಒಳಿತು ಜಯಭೇರಿ ಬಾರಿಸುವ ಸಂಕೇತವಾಗಿ ವಿಶ್ವಸಂಸ್ಥೆ ಅಂಚೆ ಚೀಟಿ ಬಿಡುಗಡೆ ಮಾಡಿದ್ದು, ಈ ಮೂಲಕ ವಿಶ್ವಸಂಸ್ಥೆ ದೀಪಾವಳಿ ಹಬ್ಬಕ್ಕೆ ವಿಶೇಷ ರೀತಿಯಲ್ಲಿ ಗೌರವ ಸೂಚಿಸಿದೆ.

    ವಿಶ್ವದಾದ್ಯಂತ ಇರುವ ಭಾರತೀಯರು ಸೇರಿದಂತೆ ಭಾರತದ ಸಂಸ್ಕೃತಿಯ ಪರಿಚಯ ಇರುವ ಕೆಲ ವಿದೇಶಿಯರು ಕೂಡ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದ್ಯೊಯುವ ನಂಬಿಕೆಯಿಂದ ಹಬ್ಬ ಆಚರಣೆ ಮಾಡಲಾಗುತ್ತದೆ. ಮೂರು ದಿನಗಳ ಕಾಲ ಆಚರಣೆ ಮಾಡಲಾಗುವ ಈ ಹಬ್ಬ ಸುಖ ಸಮೃದ್ಧಿಯನ್ನು ನೀಡಲಿ ಎಂಬ ಆಶಯ ಹೊಂದಿದೆ. ವಿಶ್ವ ಸಂಸ್ಥೆಯ ಅಂಚೆ ಚೀಟಿ ವಿಭಾಗವು ಭಾರತೀಯರಿಗೆ ವಿಶೇಷ ಕೊಡುಗೆ ನೀಡಿದೆ.

    ಬೆಲೆ ಎಷ್ಟು?
    ವಿಶ್ವ ಸಂಸ್ಥೆ ಬಿಡುಗಡೆ ಮಾಡಿರುವ ಸ್ಟಾಂಪ್ ಹಾಳೆ ಬೆಲೆ 1.15 ಡಾಲರ್ ಬೆಲೆ (83 ರೂ.) ಹೊಂದಿದ್ದು, ಒಂದು ಹಾಳೆಯಲ್ಲಿ 10 ಸ್ಟಾಂಪ್ ಸ್ಟಿಕ್ಕರ್ ಹೊಂದಿರುತ್ತದೆ. ಈ ಕುರಿತು ಯುಎನ್ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಎಲ್ಲರಿಗೂ ದೀಪಾವಳಿಯ ಶುಭಾಶಯ ತಿಳಿಸಲಾಗಿದೆ. ಅಲ್ಲದೇ ಈ ಟ್ವೀಟ್‍ನಲ್ಲಿ ದೀಪಾವಳಿ ವಿಶೇಷವಾಗಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯನ್ನು ದೀಪಗಳಿಂದ ಅಲಂಕೃತ ಮಾಡಿರುವ ವಿಶೇಷ ಫೋಟೋ ಕೂಡ ಟ್ವೀಟ್ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಧಾನಿ ಮೋದಿಗೆ ವಿಶ್ವಸಂಸ್ಥೆಯ ‘ಚಾಂಪಿಯನ್ಸ್ ಆಫ್ ಅರ್ತ್’ ಗೌರವ

    ಪ್ರಧಾನಿ ಮೋದಿಗೆ ವಿಶ್ವಸಂಸ್ಥೆಯ ‘ಚಾಂಪಿಯನ್ಸ್ ಆಫ್ ಅರ್ತ್’ ಗೌರವ

    ನವದೆಹಲಿ: ವಿಶ್ವಸಂಸ್ಥೆಯ ಅತಿದೊಡ್ಡ ಪ್ರಶಸ್ತಿ ಎನಿಸಿಕೊಂಡಿರುವ ಚಾಂಪಿಯನ್ಸ್ ಆಫ್ ಅರ್ತ್ ಪ್ರಶಸ್ತಿಯ ಗೌರವಕ್ಕೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಈ ಗೌರವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಅವರ ಜೊತೆ ಹಂಚಿಕೊಳ್ಳಲಿದ್ದಾರೆ.

    ಪಾಲಿಸಿ ಆಫ್ ಲೀಡರ್‍ಶಿಪ್ ವಿಭಾಗದಲ್ಲಿ ಮೋದಿ ಅವರಿಗೆ ಈ ಗೌರವ ಸಿಕ್ಕಿದೆ. ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಕ್ಕಾಗಿ ಮೋದಿಗೆ ಈ ಗೌರವ ನೀಡಲಾಗಿದೆ. ಇದೇ ವೇಳೆ 2022ಕ್ಕೆ ಸಂಪೂರ್ಣ ಪ್ಲಾಸ್ಟಿಕ್ ಬಳಕೆ ನಿರ್ಮೂಲನೆ ವಾಗ್ದಾನವನ್ನು ಕೂಡ ಗೌರವವನ್ನು ಘೋಷಿಸುವಾಗ ವಿಶೇಷವಾಗಿ ಉಲ್ಲೇಖಿಸಲಾಗಿದೆ.

    ಇದೇ ವೇಳೆ ಇತರ ಬೇರೆ ಬೇರೆ ವಿಭಾಗದಲ್ಲಿ 4 ಜನ ಪರಿಸರ ತಜ್ಞರಿಗೆ ಪ್ರಶಸ್ತಿ ಸಿಕ್ಕಿದೆ. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಜಾಗತಿಕ ಪರಿಸರ ಒಪ್ಪಂದದ ಮುಂಚೂಣಿ ಸ್ಥಾನ ವಹಿಸಿದ್ದಕ್ಕಾಗಿ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

    ಇದೇ ವೇಳೆ ಕೇರಳದ ಕೊಚ್ಚಿ ವಿಮಾನ ನಿಲ್ದಾಣ ಕೂಡ ಇತರ ನಾಲ್ವರಲ್ಲಿ ಪ್ರಶಸ್ತಿಯನ್ನು ಪಡೆದಿರುವುದು ವಿಶೇಷವಾಗಿದೆ. ಸುಸ್ಥಿರ ಇಂಧನ ಬಳಕೆಗೆ ಮುಂದಾಳತ್ವ ವಹಿಸಿರುವುದು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಪ್ರಶಸ್ತಿ ಬರಲು ಕಾರಣವಾಗಿದೆ.

    ಏನಿದು ಸೌರ ಒಕ್ಕೂಟ?
    ಅತಿ ಹೆಚ್ಚು ಸೂರ್ಯನ ಬೆಳಕನ್ನು ಪಡೆಯುವ ದೇಶಗಳ ಒಕ್ಕೂಟವನ್ನು ಸ್ಥಾಪಿಸಿ, ಸೌರ ವಿದ್ಯುತ್ ಬಳಕೆಯ ತಂತ್ರಜ್ಞಾನ, ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಬಗ್ಗೆ 2015ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡಿನ ಲಂಡನ್ ನಲ್ಲಿರುವ ವೆಂಬ್ಲೆ ಸ್ಟೇಡಿಯಂನಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು. ಈ ದೇಶಗಳನ್ನು ಸೂರ್ಯನ ಮಕ್ಕಳು ಎಂದು ಮೋದಿ ಉಲ್ಲೇಖಿಸಿದ್ದರು. 2016ರಲ್ಲಿ ಈ ಬಗ್ಗೆ ರೂಪುರೇಷೆ ಸಿದ್ಧವಾಗಿದ್ದು, ಈ ಒಪ್ಪಂದಕ್ಕೆ ಒಳಪಡಲು ಅಂದಿನಿಂದ 121 ದೇಶಗಳು ಸಹಿ ಹಾಕಿವೆ. 2018ರ ಮಾರ್ಚ್ ನಲ್ಲಿ ನವದೆಹಲಿಯಲ್ಲಿ ಮೊದಲ ಸಮ್ಮೇಳನ ಆಯೋಜನೆಗೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಇನ್ನಿಲ್ಲ

    ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಇನ್ನಿಲ್ಲ

    ಸ್ವಿಜರ್ಲ್ಯಾಂಡ್: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಹಾಗೂ ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ (80) ಶನಿವಾರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಕೋಫಿ ಅನ್ನಾನ್ ಫೌಂಡೇಶನ್ ತಿಳಿಸಿದೆ.

    ಇಂದು ಸ್ವಿಜರ್ಲ್ಯಾಂಡ್​ನ ಬರ್ನ್ ಆಸ್ಪತ್ರೆಯಲ್ಲಿ ಕೋಫಿ ಅನ್ನಾನ್ ನಿಧನರಾಗಿದ್ದಾರೆ. ಈ ವೇಳೆ ಅವರ ಪತ್ನಿ ನಾನೆ, ಮಕ್ಕಳಾದ ಅಮಾ, ಕಾಜೋ ಮತ್ತು ನಿನಾ ಇದ್ದರು. ಮೂಲತಃ ಘಾನಾ ದೇಶದವರಾದ ಕೋಫಿ ಅನ್ನಾನ್, ಆಫ್ರಿಕಾದ ಖಂಡದ ಅನೇಕ ದೇಶಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದರು.

    ಕೋಫಿ ಅನ್ನಾನ್ ಜನವರಿ 1997 ರಿಂದ ಡಿಸೆಂಬರ್ 2006ರವರೆಗೆ ವಿಶ್ವಸಂಸ್ಥೆಯ 7ನೇ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದರು. ಈ ಮೂಲಕ ಮೊದಲ ಕಪ್ಪು ವರ್ಣೀಯ ವ್ಯಕ್ತಿ ಈ ಪಟ್ಟವನ್ನು ಅಲಂಕರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.ಅಧ್ಯಕ್ಷತೆ ಅವಧಿ ಬಳಿಕ ಕೋಫಿ ಅನ್ನಾನ್ ಫೌಂಡೇಶನ್ ತೆರೆದು, ಅದರ ಮೂಲಕ ಶಾಂತಿ ಸ್ಥಾಪನೆಗಾಗಿ ದುಡಿದಿದ್ದರು. ಹೀಗಾಗಿ ಅವರಿಗೆ 2001ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತ್ತು.

    ಆಫ್ರಿಕಾ ಪ್ರೋಗ್ರೆಸ್ ಪ್ಯಾನಲ್‍ನಲ್ಲಿ ಅಧ್ಯಕ್ಷರಾಗಿ ಮತ್ತು ಗ್ರೀನ್ ರೆವಲ್ಯೂಷನ್ ಇನ್ ಆಫ್ರಿಕಾದಲ್ಲಿ ನಾಯಕತ್ವ ವಹಿಸಿ ದುಡಿದಿದ್ದರು. ಕೋಫಿ ಅನ್ನಾನ್ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

  • ಯೋಗ ನಮ್ಮ ಬದುಕಿನ ದೈನಂದಿನ ಅವಿಭಾಜ್ಯ ಅಂಗವಾಗಬೇಕು- ಬಿಎಸ್ ವೈ

    ಯೋಗ ನಮ್ಮ ಬದುಕಿನ ದೈನಂದಿನ ಅವಿಭಾಜ್ಯ ಅಂಗವಾಗಬೇಕು- ಬಿಎಸ್ ವೈ

    ಬೆಂಗಳೂರು: ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿ ಎದುರು ಸಾಮೂಹಿಕ ಯೋಗಾಸನ ಕಾರ್ಯಕ್ರಮ ನಡೆಯಿತು.

    ಬಿಜೆಪಿ ಕಚೇರಿ ಎದುರು ರಸ್ತೆಯಲ್ಲೇ ಕಾರ್ಯಕರ್ತರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಯೋಗ ಮಾಡಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯನಾಗಿರೋ ಬಿಎಸ್‍ವೈ ಸೂರ್ಯ ನಮಸ್ಕಾರ ಮಾಡುವಷ್ಟರಲ್ಲಿ ಸುಸ್ತಾದ್ರು. ಹೀಗಾಗಿ ಲಘು ಯೋಗ , ಸೂರ್ಯ ನಮಸ್ಕಾರದ ಮೂರು ಆಸನಗಳ ಬಳಿಕ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡರು.

    ಬಳಿಕ ಮಾತನಾಡಿದ ಬಿಎಸ್‍ವೈ, ಸ್ವಾಮಿ ವಿವೇಕಾನಂದರು ಹೇಳಿದಂತೆ ಯೋಗ ಮನಸ್ಸನ್ನು ಶಕ್ತಿಯುತ ಹಾಗು ಶಿಸ್ತುಬದ್ಧಗೊಳಿಸಲಿದೆ. ಯೋಗ ಕೇವಲ ದೈಹಿಕ ವ್ಯಾಯಾಮ ಮಾತ್ರವಲ್ಲ, ಶರೀರ, ಬುದ್ಧಿ, ಮನಸ್ಸು ಸಮತೋಲನ ಸಾಧಿಸುವ ಜೀವನ ವಿಧಾನವಾಗಿದೆ. ನಮ್ಮಲ್ಲಿನ ಶಕ್ತಿಯನ್ನು ಕಂಡುಕೊಳ್ಳುವುದೇ ಯೋಗ. ಪುರಾತನ ಯೋಗ ಪದ್ಧತಿ ನಮ್ಮ ದೇಶದ ಹೆಮ್ಮೆಯಾಗಿದೆ. ದೇಹ ದೇವಾಲಯವಿದ್ದಂತೆ ಅದನ್ನು ಶುದ್ಧಿಯಾಗಿಟ್ಟುಕೊಳ್ಳುವುದೇ ಯೋಗ. ಯೋಗ ಇಂದು ಜಾಗತಿಕ ಮನ್ನಣೆ ಪಡೆದಿದೆ ಅಂದ್ರು.

    ಅಂತಾರಾಷ್ಟ್ರೀಯ ಯೋಗ ದಿನ ಎಂದು ವಿಶ್ವಸಂಸ್ಥೆ ಘೊಷಿಸಿದೆ. ಇದರ ಯಶಸ್ಸು ಮೋದಿಗೆ ಸಲ್ಲಬೇಕು. ಯೋಗ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡುವ ಅಗತ್ಯವಿದೆ. ದೈಹಿಕ ಮಾನಸಿಕ ಸದೃಢತೆ ಬೆಳೆಸಿಕೊಳ್ಳಬೇಕು. ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಬೇಕು. ಯೋಗ ದಿನಕ್ಕೆ ಯೋಗಾಸನ ಮಾಡುವುದು ಸೀಮಿತವಾಗದೆ ಯೋಗ ನಮ್ಮ ಬದುಕಿನ ದೈನಂದಿನ ಅವಿಭಾಜ್ಯ ಅಂಗವಾಗಬೇಕು ಅಂತ ಸಲಹೆ ನೀಡಿದ್ರು.

  • ಭಾರತವನ್ನು ಟೀಕಿಸಲು ಹೋಗಿ  ತನ್ನ ಮಾನವನ್ನು ತಾನೇ ಹರಾಜು ಹಾಕಿತು ಪಾಕಿಸ್ತಾನ!

    ಭಾರತವನ್ನು ಟೀಕಿಸಲು ಹೋಗಿ ತನ್ನ ಮಾನವನ್ನು ತಾನೇ ಹರಾಜು ಹಾಕಿತು ಪಾಕಿಸ್ತಾನ!

    ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ವಿರುದ್ಧ ಆರೋಪಗಳನ್ನು ಮಾಡಲು ಹೋಗಿ ತನ್ನ ಮಾನವನ್ನೇ ಹರಾಜು ಹಾಕಿ ನಗೆಪಾಟಲಿಗೆ ಪಾಕಿಸ್ತಾನ ಗುರಿಯಾಗಿದೆ.

    ವಿಶ್ವ ಸಂಸ್ಥೆಯ 72ನೇ ಮಹಾ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದ ನೈಜ ಬಣ್ಣವನ್ನು ತೆರೆದಿಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತ ಭಯೋತ್ಪಾದನೆಯ ತವರು ನೆಲ ಎಂಬ ಆರೋಪವನ್ನು ಮಾಡಿತ್ತು. ಆದರೆ ಈ ಆರೋಪವನ್ನು ಮಾಡಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಮಾನ ವಿಶ್ವಸಂಸ್ಥೆಯಲ್ಲಿ ತನ್ನ ಅಧಿಕಾರಿಯ ಮೂಲಕ ಹರಾಜು ಆಗಿದೆ.

    ಪಾಕಿಸ್ತಾನ ಪ್ರತಿನಿಧಿ ಮಲೇಹಾ ಲೋಧಿ ಭಾರತದಲ್ಲಿ ಹೇಗೆ ಹಿಂಸಾಚಾರ ನಡೆಯುತ್ತಿದೆ ಎನ್ನುವುದನ್ನು ವಿಶ್ವಕ್ಕೆ ತೋರಿಸಲು ಪೆಲೆಟ್ ಗನ್‍ನಿಂದ ಗಾಯಗೊಂಡಿದ್ದ ಯುವತಿ ಫೋಟೋವನ್ನು ಪ್ರದರ್ಶಿಸಿದ್ದರು. ಆದರೆ ಈ ಫೋಟೋ ಗಾಜಾ ಯುದ್ಧ ಸಂದರ್ಭದಲ್ಲಿನ ಫೋಟೋ ಎಂದು ಮಾಧ್ಯಮಗಳು ಪ್ರಕಟಿಸುವ ಮೂಲಕ ಪಾಕ್ ನೈಜ ಬಣ್ಣವನ್ನು ಬಯಲು ಮಾಡಿವೆ.

    ಗಾಜಾ ಯುದ್ಧದ ಸಂದರ್ಭದಲ್ಲಿ ದಾವಿ ಅಬು ಜೊಮ್(17) ಯುವತಿ ಗಾಯಗೊಂಡಿದ್ದಳು. ಈ ಫೋಟೋವನ್ನು ಪಾಕ್ ಅಧಿಕಾರಿ ಪ್ರದರ್ಶಿಸಿದ ಬಳಿಕ ವಿಶ್ವದಾದ್ಯಂತ ಪಾಕ್ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದೆ.

     

    ಮಲೇಹಾ ಲೋಧಿ ಹೇಳಿದ್ದು ಏನು?
    ಸುಷ್ಮಾ ಸ್ವರಾಜ್ ಅವರಿಗೆ ತಿರುಗೇಟು ನೀಡಿದ ಲೋಧಿ ಏಷ್ಯಾ ಖಂಡದಲ್ಲಿ ಭಾರತ ಭಯೋತ್ಪದನೆಯ ತವರು ನೆಲ ಎಂಬ ಆರೋಪವನ್ನು ಮಾಡಿದರು. ಭಾರತದ ವಿವಿಧ ಭಾಗಗಳಲ್ಲಿ ಭಯೋತ್ಪಾದನ ನೆಲೆಗಳಿವೆ ಎಂದಿದ್ದಾರೆ.

    ಸುಷ್ಮ ಸ್ವರಾಜ್ ಅವರು ಶನಿವಾರ ಪಾಕಿಸ್ತಾನದಲ್ಲಿ ನೆಲೆಯುರಿರುವ ಭಯೋತ್ಪಾದನ ಸಂಸ್ಥೆಗಳಾದ ಲಷ್ಕರ್ ಎ ತೋಯ್ಬಾ, ಜೈಷ್ ಎ ಮೊಹಮ್ಮದ್, ಹಿಜ್ಜುಲ್ ಮುಜಾಹಿದೀನ್, ಹಕ್ಕಾನಿಯಂತಹ ಹಲವು ಸಂಘಟನೆಗಳ ಕುರಿತು ವಿಸ್ತಾರವಾದ ಮಾಹಿತಿಯನ್ನು ನೀಡಿದ್ದರು.

    https://www.youtube.com/watch?v=lviT78WtYig

    ಈ ಕುರಿತು ಪ್ರತಿಕ್ರಿಯಿಸಿರುವ ಲೋಧಿ, ಅಂತರಾಷ್ಟ್ರೀಯ ಸಂಸ್ಥೆಗಳು ಭಾರತ ಹಾಗೂ ಪಾಕಿಸ್ತಾನದ ನಡುವೆ ಶಾಂತಿ ಹಾಗೂ ಸೌರ್ಹದತೆಯನ್ನು ಬಯಸಿದರೆ, ಭಾರತವು ಗಡಿಯಲ್ಲಿ ಉಂಟುಮಾಡುತ್ತಿರುವ ಪ್ರಚೋದನೆ ಹಾಗೂ ಅಕ್ರಮಾಣಕಾರಿ ಪ್ರವೃತ್ತಿಯನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು. ಅಲ್ಲದೇ ಭಾರತದ ನೆಲದಲ್ಲಿ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸಬೇಕು ಎಂದು ಹೇಳಿದರು.

    ಈ ಸಂದರ್ಭದಲ್ಲಿ ಭಾರತದ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಪಾಕ್ ಆಕ್ರಮಿತ ಕಾಶ್ಮೀರದ ಬಾಲುಚಿಸ್ತಾನ ವಿಷಯದಲ್ಲಿ ಮಧ್ಯ ಪ್ರವೇಶಿಸುವ ಕುರಿತು ಸಹ ಪಾಕಿಸ್ತಾನದಿಂದ ಆಕ್ಷೇಪ ವ್ಯಕ್ತಪಡಿಸಿತು.

    ಯಾವುದೇ ಸಮಸ್ಯೆಯನ್ನು ಎರಡು ದೇಶಗಳು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳದಿದ್ದರೆ ಇದರ ವಿಚಾರಣೆಯನ್ನು ನಡೆಸುವ ಅಧಿಕಾರ ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳಿಗಿದೆ. ಆದರೆ ಇಂತಹ ನಿಯಮಗಳು ಸಮಯಕ್ಕೆ ಸರಿಯಾಗಿ ಕೈಗೊಳ್ಳಲಾಗುತ್ತಿಲ್ಲ. ನ್ಯಾಯಲಯಕ್ಕೆ ಯಾವುದೇ ಅಂತಿಮ ದಿನವಿರುದಿಲ್ಲ. ಹಾಗೆಯೇ ಮಾನವಿಯತೆಯನ್ನು ಸಮಯದ ಅಧಾರವಾಗಿ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಭಾರತವು ವಿಶ್ವ ಸಂಸ್ಥೆಯ ನಿರ್ಧಾರಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

    ಇದೇ ಸಂದರ್ಭದಲ್ಲಿ ಭಾರತದ ಆರೋಪಗಳನ್ನು ತಳ್ಳಿ ಹಾಕಿದ ಅವರು ವಿಶ್ವ ಸಂಸ್ಥೆಯೇ ಭಯೋತ್ಪಾದನೆಯ ವ್ಯಾಖ್ಯಾನವನ್ನು ನೀಡಬೇಕು ಎಂದು ಕೋರಿದರು. ಭಾರತವು ತನ್ನ ನೆರೆಯ ದೇಶಗಳ ಮೇಲೆ ದಾಳಿಯನ್ನು ಮಾಡಲು ಭಯೋತ್ಪಾದನೆಯನ್ನು ಮಾಡಲು ಪೋಷಣೆ ಮಾಡುತ್ತಿದೆ. ಪಾಕಿಸ್ತಾನದ ವಿವಿಧೆಡೆ ವಿದ್ವಾಂಸಕ ಕೃತ್ಯಗಳನ್ನು ನಡೆಸಲು ಯೋಜನೆ ರೂಪಿಸಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಭಾರತವು ಭಯೋತ್ಪಾದನೆಯ ತವರು ನೆಲ ಎಂಬ ಸ್ಪಷ್ಟವಾಗುತ್ತದೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಎಂಬುವುದು ವಿಶ್ವ ದೊಡ್ಡ ಬುಟಾಟಿಕೆಯಾಗಿದೆ. ಫ್ಯಾಸಿಸ್ಟ್ ಸಿದ್ಧಾಂತವನ್ನು ಅನುಸರಿಸುವ ಮೂಲಕ ಭಾರತ ತನ್ನ ಅಡಳಿತವನ್ನು ನಡೆಸುತ್ತಿದೆ ಎಂದರು.

    ಪಾಕಿಸ್ತಾನದ ಸ್ಥಾಪಕ ಜಿನ್ನಾ ಅವರ ಕುರಿತ ಹೇಳಿಕೆಗಳನ್ನು ನಿರಾಕರಿಸಿದ ಲೋಧಿ, ಪಾಕಿಸ್ತಾನ ಜಮ್ಮು ಕಾಶ್ಮೀರ ವಿಚಾರವಾಗಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ಮಾತುಕತೆಗೆ ಸಿದ್ಧ ಎಂದು ತಿಳಿಸಿದರು.

  • ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಹರಾಜು ಹಾಕಿದ ಭಾರತದ ಈನಂ ಗಂಭೀರ್

    ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಹರಾಜು ಹಾಕಿದ ಭಾರತದ ಈನಂ ಗಂಭೀರ್

    ನ್ಯೂಯಾರ್ಕ್: ಪಾಕಿಸ್ತಾನ ಈಗ ಟೆರರಿಸ್ತಾನವಾಗಿದ್ದು, ವಿಶ್ವಕ್ಕೆ ಭಯೋತ್ಪಾದನೆ ಅಲ್ಲಿಂದಲೇ ರಫ್ತಾಗುತ್ತಿದೆ ಎಂದು ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಭಾರತ ವಾಗ್ದಾಳಿ ನಡೆಸಿದೆ.

    ಗುರುವಾರ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ಪಾಕ್ ಪ್ರಧಾನಿ ಶಾಹೀದ್ ಅಬ್ಬಾಸಿ, ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳಿಲ್ಲ. ಉಗ್ರ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ನಾವು ವಿಫಲರಾಗಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಕಾರ್ಯದರ್ಶಿಯಾಗಿರುವ ಈನಂ ಗಂಭೀರ್ ಪ್ರತಿಕ್ರಿಯಿಸಿ, ಉಗ್ರ ಹಫೀಸ್ ಸಯೀದ್ ಪಾಕಿಸ್ತಾನದಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿದ್ದು ಮಾತ್ರವಲ್ಲೇ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಉಗ್ರರಿಗೆ ಪಾಕ್ ಎಷ್ಟು ಸುರಕ್ಷಿತ ದೇಶ ಎನ್ನುದ್ದಕ್ಕೆ ಇದೊಂದೆ ಉದಾಹರಣೆ ಸಾಕು ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

    ಒಸಾಮಾ ಬಿನ್ ಲಾಡೆನ್ ಮತ್ತು ಮುಲ್ಲಾ ಓಮರ್‍ಗೆ ಪಾಕಿಸ್ತಾನ ರಕ್ಷಣೆ ನೀಡಿದೆ. ಭಯೋತ್ಪಾದನೆ ಅಲ್ಲಿನ ಉದ್ಯಮವಾಗಿ ಈಗ ಪರಿವರ್ತನೆಯಾಗಿದೆ. ಪಾಕ್ ಮಿಲಿಟರಿ ಮತ್ತು ರಾಜಕೀಯ ನಾಯಕರ ಜೊತೆ ಉಗ್ರರು ಉತ್ತಮ ನಂಟನ್ನು ಹೊಂದಿದ್ದಾರೆ ಎಂದು ಗಂಭೀರ್ ಹೇಳುವ ಮೂಲಕ ಪಾಕಿಸ್ತಾನದ ಮಾನವನ್ನು ಹರಾಜು ಹಾಕಿದರು.

    ಕಾಶ್ಮೀರ ಸಮಸ್ಯೆಗೆ ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಬೇಕು. ಭಾರತದಿಂದ ಕದನ ವಿರಾಮ ಉಲ್ಲಂಘನೆ ಆಗುತ್ತಿದ್ದು, ಗಡಿಯ ಅಶಾಂತಿಗೆ ನಾವು ಕಾರಣರಲ್ಲ ಎಂದು ಪಾಕ್ ಪ್ರಧಾನಿ ಹೇಳಿದ್ದರು. ಇದಕ್ಕೆ ಈನಂ ಗಭೀರ್, ಉಗ್ರರನ್ನು ಕಳುಹಿಸಿ ಭಾರತ ಮೇಲೆ ದಾಳಿ ನಡೆಸುವ ನಿಮ್ಮ ತಂತ್ರ ಎಂದಿಗೂ ಸಫಲವಾಗುವುದಿಲ್ಲ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎನ್ನುವುನ್ನು ನೆನಪಿನಲ್ಲಿರಲಿ ಎಂದು ಹೇಳುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದರು.

  • ರೋಹಿಂಗ್ಯಾಮುಸ್ಲಿಮರಿಂದ ದೇಶದ ಭದ್ರತೆಗೆ ಅಪಾಯ: ಕೇಂದ್ರ ಸರ್ಕಾರ

    ರೋಹಿಂಗ್ಯಾಮುಸ್ಲಿಮರಿಂದ ದೇಶದ ಭದ್ರತೆಗೆ ಅಪಾಯ: ಕೇಂದ್ರ ಸರ್ಕಾರ

    ನವದೆಹಲಿ: ರೋಹಿಂಗ್ಯಾ ಮುಸ್ಲಿಮರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.

    ರೋಹಿಂಗ್ಯ ಮುಸ್ಲಿಮರು ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಅಷ್ಟೇ ಅಲ್ಲದೇ ನೆಲೆಸಿರುವ ಮಂದಿ ಪೈಕಿ ಕೆಲವರು ಪಾಕಿಸ್ತಾನದ ಐಎಸ್‍ಐ ಮತ್ತು ಐಸಿಸ್ ಉಗ್ರರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.

    15 ಪುಟಗಳ ಅಫಿಡವಿಟ್‍ನಲ್ಲಿ ಸರ್ಕಾರ ಮ್ಯಾನ್ಮಾರ್, ಪಶ್ಚಿಮ ಬಂಗಾಳ, ತ್ರಿಪುರದಲ್ಲಿ ಒಂದು ಸಂಘಟನಾ ಜಾಲವೇ ಇದೆ ಎಂದು ಸರ್ಕಾರ ಮಾಹಿತಿಯನ್ನು ಕೋರ್ಟ್ ಗೆ ನೀಡಿದೆ.

    ಎಲ್ಲ ದೇಶಗಳಂತೆ ವಲಸೆಗೆಂದು ಬರುವ ಜನರ ಮೇಲೆ ನಮಗೆ ಅನುಕಂಪವಿದೆ. ಆದರೆ ವಿಶೇಷವಾಗಿ ಈ ಪ್ರಕರಣದಲ್ಲಿ ದೇಶದ ಭದ್ರತೆ ವಿಚಾರವೂ ಇರುವ ಕಾರಣ ಈ ಅನುಕಂಪ ದುರ್ಬಳಕೆಯಾಗಬಾರದು ಎಂದು ಹೇಳಿದೆ.

    ಗುಪ್ತಚರ ವರದಿಗಳು ಅಧಿಕೃತವಾಗಿ ಪಾಕಿಸ್ತಾನ ಮೂಲದ ಉಗ್ರರು ಮತ್ತು ಇತರ ದೇಶಗಳಲ್ಲಿರುವ ಉಗ್ರರ ಜೊತೆ ರೋಹಿಂಗ್ಯಾ ಮುಸ್ಲಿಮರಿಗೆ ಸಂಪರ್ಕವಿದೆ ಎನ್ನುವ ಮಾಹಿತಿಯನ್ನು ನೀಡಿವೆ. ಅಷ್ಟೇ ಅಲ್ಲದೇ ದೇಶದಲ್ಲಿರುವ ಬೌದ್ಧರ ಮೇಲೆ ಹಿಂಸಾಚಾರ ನಡೆಯುವ ಭೀತಿಯೂ ಇದೆ ಎಂದು ಅಫಿಡವಿತ್ ನಲ್ಲಿ ಸರ್ಕಾರ ಹೇಳಿದೆ.

    ವಲಸಿಗರ ನೀತಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ನೀತಿಗೆ ಭಾರತ ಬದ್ಧವಾಗಿದೆ. ಆದರೆ ಇದರ ಜೊತೆಗೆ ದೇಶದಲ್ಲಿರುವ ಪ್ರಜೆಗಳ ಮಾನವ ಹಕ್ಕುಗಳ ರಕ್ಷಣೆಯನ್ನು ಕಾಪಾಡುವ ಹೊಣೆಗಾರಿಕೆಯೂ ನಮ್ಮ ಮೇಲಿದೆ ಎಂದು ತಿಳಿಸಿದೆ.

    ಕೇಂದ್ರದ ಅಫಿಡವಿಟ್ ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ, ಈ ಪ್ರಕರಣ ಮೊದಲು ಅವರು ಅಕ್ರಮ ವಲಸಿಗರೇ ಎನ್ನುವುದನ್ನು ತೀರ್ಮಾನಿಸಬೇಕಿದೆ ಎಂದು ಅಭಿಪ್ರಾಯಪಟ್ಟು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿದ್ದಾರೆ.

    ಏನಿದು ಪ್ರಕರಣ?
    ಮ್ಯಾನ್ಮಾರ್‍ನ ದಕ್ಷಿಣದಲ್ಲಿರುಗ ರಾಖೈನ್ ರಾಜ್ಯದಲ್ಲಿ ರೋಹಿಂಗ್ಯಾ ಜನರಿದ್ದಾರೆ. ಬೌದ್ಧರೆ ಹೆಚ್ಚಾಗಿರುವ ಈ ದೇಶದಲ್ಲಿ ಈಗ ರೋಹಿಂಗ್ಯಾಮುಸ್ಲಿಮರ ಮೇಲೆ ದೌರ್ಜನ್ಯ ಆಗುತ್ತಿದ್ದು ಭಾರತ, ಬಾಂಗ್ಲಾದೇಶಕ್ಕೆ ವಲಸೆ ಬರುತ್ತಿದ್ದಾರೆ. ಭದ್ರತೆ ವಿಚಾರವನ್ನು ಇಟ್ಟುಕೊಂಡು ಕೇಂದ್ರ ಸರ್ಕಾರ  ವಲಸೆಗಾರರನ್ನು ದೇಶದಿಂದ ಹೊರ ಹಾಕಲು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಇಬ್ಬರು ರೋಹಿಂಗ್ಯ ಮುಸ್ಲಿಮರು ಸುಪ್ರೀಂ ಮೊರೆ ಹೋಗಿ, ನಮಗೆ ಭಾರತದಲ್ಲಿ ನಿರಾಶ್ರಿತರ ಮಾನ್ಯತೆಯನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.