Tag: United Nations

  • ವಿಶ್ವಸಂಸ್ಥೆ ಭದ್ರತಾ ಮಂಡಳಿ ಚುನಾವಣೆ – ಭಾರತಕ್ಕೆ 184 ವೋಟ್‌, ಉಳಿದ ರಾಷ್ಟ್ರಗಳಿಗೆ ಎಷ್ಟು ವೋಟ್‌ ಬಿದ್ದಿದೆ?

    ವಿಶ್ವಸಂಸ್ಥೆ ಭದ್ರತಾ ಮಂಡಳಿ ಚುನಾವಣೆ – ಭಾರತಕ್ಕೆ 184 ವೋಟ್‌, ಉಳಿದ ರಾಷ್ಟ್ರಗಳಿಗೆ ಎಷ್ಟು ವೋಟ್‌ ಬಿದ್ದಿದೆ?

    ನ್ಯೂಯಾರ್ಕ್‌: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎರಡು ವರ್ಷಗಳ ಕಾಲ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ.

    ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಪರವಾಗಿ 184 ಮತಗಳು ಬಿದ್ದಿರುವುದು ವಿಶೇಷ. 192 ಸದಸ್ಯ ರಾಷ್ಟ್ರಗಳಿರುವ ಭದ್ರತಾ ಮಂಡಳಿಯಲ್ಲಿ ಸದಸ್ಯ ರಾಷ್ಟ್ರವಾಗಿ ಆಯ್ಕೆ ಆಗಲು ಒಂದು ದೇಶಕ್ಕೆ 128 ರಾಷ್ಟ್ರಗಳ ಬೆಂಬಲ ಬೇಕಿತ್ತು.

    2021-22ನೇ ಅವಧಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಜೊತೆ ಐರ್ಲೆಂಡ್, ಮೆಕ್ಸಿಕೊ ಮತ್ತು ನಾರ್ವೆ ದೇಶಗಳು ಸಹ ಸ್ಥಾನ ಪಡೆದಿದೆ. ಚುನಾವಣೆಯಲ್ಲಿ ಖಾಯಂ ರಹಿತ ಸದಸ್ಯ ರಾಷ್ಟ್ರ ಸ್ಥಾನಮಾನ ಬಯಸಿದ್ದ ಕೆನಡಾಗೆ ಸೋಲಾಗಿದೆ. ನಾರ್ವೆಗೆ 130, ಐರ್ಲೆಂಡಿಗೆ 128, ಕೆನಡಾಗೆ 108, ಮೆಕ್ಸಿಕೋಗೆ 187 ಮತಗಳು ಬಿದ್ದಿವೆ.

    ಈ ಹಿಂದೆ 1950-51, 1967-68, 1972-73, 1977-78, 1984-85, 1991-92 ಮತ್ತು 2011-12ರಲ್ಲಿ ಸಹ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸ್ಥಾನವನ್ನು ಭಾರತ ಅಲಂಕರಿಸಿತ್ತು.

    ಏಷ್ಯಾ ಪೆಸಿಫಿಕ್‌ ವಲಯದಿಂದ ಭಾರತ ಒಂದೇ ಸ್ಪರ್ಧಿಸಿತ್ತು. ಆಫ್ರಿಕಾ ದೇಶಗಳ ಪೈಕಿ ಕೀನ್ಯಾ ಮತ್ತು ಜಿಬೌಟಿ ದೇಶಗಳು ಸ್ಪರ್ಧಿಸಿತ್ತು. ಈ ಪೈಕಿ ಕೀನ್ಯಾಗೆ 113 ವೋಟ್‌ ಬಿದ್ದರೆ ಜಿಬೌಟಿಗೆ 78 ವೋಟ್‌ ಬಿದ್ದಿದೆ. ಹೀಗಾಗಿ ಮತ್ತೆ ಈ ಚುನಾವಣೆ ನಡೆಯಲಿದೆ.

    ಭಾರತಕ್ಕೆ ಏನು ಲಾಭ?
    ಭಾರತ ವಿಶ್ವಸಂಸ್ಥೆಯಲ್ಲಿ ಖಾಯಂ ಸ್ಥಾನ ಸಿಗಲು ಪ್ರಯತ್ನಿಸುತ್ತಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ 5 ಶಾಶ್ವತ ಸದಸ್ಯ ರಾಷ್ಟ್ರಗಳು ಮತ್ತು 10 ಶಾಶ್ವತ ರಹಿತ ಸದಸ್ಯ ರಾಷ್ಟ್ರಗಳು ಇವೆ. ಸದ್ಯ ಅಮೆರಿಕ, ಚೀನಾ, ಫ್ರಾನ್ಸ್‌, ರಷ್ಯಾ, ಇಂಗ್ಲೆಂಡ್‌ ದೇಶಗಳು ಖಾಯಂ ಸದಸ್ಯ ರಾಷ್ಟ್ರಗಳಾಗಿದ್ದು ವಿಶೇಷ ವೀಟೋ ಅಧಿಕಾರವನ್ನು ಹೊಂದಿದೆ. ಈಗ ಭಾರತ ಈ ರಾಷ್ಟ್ರಗಳ ಜೊತೆ ಎರಡು ವರ್ಷಗಳ ಕಾಲ ಕುಳಿತುಕೊಳ್ಳಲಿದೆ. ಎಸ್ಟೋನಿಯಾ, ನೈಜರ್, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟುನೀಶಿಯಾ ಮತ್ತು ವಿಯೆಟ್ನಾಂ ದೇಶಗಳೂ ಕೂಡ ಇವೆ.

     

  • ವಿಶ್ವಸಂಸ್ಥೆಯ ಪ್ರತಿಷ್ಠಿತ ಮಿಲಿಟರಿ ಪ್ರಶಸ್ತಿಗೆ ಭಾರತದ ಸೇನಾ ಮೇಜರ್ ಆಯ್ಕೆ

    ವಿಶ್ವಸಂಸ್ಥೆಯ ಪ್ರತಿಷ್ಠಿತ ಮಿಲಿಟರಿ ಪ್ರಶಸ್ತಿಗೆ ಭಾರತದ ಸೇನಾ ಮೇಜರ್ ಆಯ್ಕೆ

    ನವದೆಹಲಿ: ವಿಶ್ವಸಂಸ್ಥೆ ನೀಡುವ ಪ್ರತಿಷ್ಠಿತ ಮಿಲಿಟರಿ ಪ್ರಶಸ್ತಿಗೆ ಭಾರತೀಯ ಸೇನಾ ಮೇಜರ್ ಸುಮನ್ ಗವಾನಿ ಆಯ್ಕೆ ಆಗಿದ್ದಾರೆ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಿಂಗ ಸಮಾನತೆಗೆ ಹೋರಾಟ ನಡೆಸಿದ್ದಕ್ಕೆ ಸುಮನ್ ಗವಾನಿ ಮತ್ತು ಬ್ರೆಜಿಲಿನ ನೌಕಾಪಡೆ ಅಧಿಕಾರಿ ಕಾರ್ಲಾ ಮಾಂಟೆರೋ ಡಿ ಕ್ಯಾಸ್ಟ್ರೊ ಅರೌಜೊ ಅವರನ್ನು ಮಿಲಿಟರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಈ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತದ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಸುಮನ್ ಗವಾನಿ ಪಾತ್ರರಾಗಿದ್ದಾರೆ.

    ಈ ಇಬ್ಬರು ಮಹಿಳಾ ಶಾಂತಿಪಾಲಕರು ಪ್ರಭಾವಿ ಮಾದರಿ ವ್ಯಕ್ತಿಗಳೆಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಬ್ಬರು ಮಹಿಳೆಯರು ರೋಲ್ ಮಾಡೆಲ್‍ಗಳು. ತಮ್ಮ ಉತ್ತಮ ಕೆಲಸದಿಂದ ಸಮುದಾಯದ ಏಳಿಗೆಗೆ ಶ್ರಮಿಸಿಸಿದ್ದಾರೆ. ಇವರ ಈ ಸಾಧನೆ ಇತರರಿಗೆ ಪ್ರೇರಣೆಯಾಗಲಿ ಎಂದು ಗುಟೆರಸ್ ಹೇಳಿದ್ದಾರೆ.

    ಲಿಂಗ ಸಮಾನತೆಗೆ ಹೋರಾಟ ನಡೆಸಿದವರಿಗೆ ನೀಡಲಾಗುವ ಈ ಪ್ರಶಸ್ತಿಯಲ್ಲಿ 2016ರಲ್ಲಿ ಸ್ಥಾಪಿಸಲಾಗಿದ್ದು, ಮೊದಲ ಬಾರಿಗೆ ಇಬ್ಬರು ಮಹಿಳೆಯರು ಆಯ್ಕೆ ಆಗಿದ್ದಾರೆ.

    ಪ್ರಶಸ್ತಿ ಯಾಕೆ?
    ಸುಮನ್ ಗವಾನಿ ದಕ್ಷಿಣ ಸುಡಾನಿನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯ 230 ಸೇನಾ ವೀಕ್ಷಕರಿಗೆ ಲೈಂಗಿಕ ದೌರ್ಜನ್ಯ ಮತ್ತು ಸಂಘರ್ಷ ವಿಚಾರಕ್ಕೆ ಮಾರ್ಗದರ್ಶನ ನೀಡಿದ್ದರು. ಅಷ್ಟೇ ಅಲ್ಲದೇ ಮಹಿಳಾ ಸೇನಾ ವೀಕ್ಷಕರ ಸಂಖ್ಯೆ ಹೆಚ್ಚಿಸುವಲ್ಲಿ ಇವರು ಮುಖ್ಯ ಪಾತ್ರವಹಿಸಿದ್ದರು.

    ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಪದವಿ ಪಡೆದ ಬಳಿಕ 2011ರಲ್ಲಿ ಸುಮನ್ ಗವಾನಿ ಭಾರತೀಯ ಸೇನೆಯನ್ನು ಸೇರಿದ್ದಾರೆ. ಸುಮನ್ ಗವಾನಿ ಅವರು ಮಿಲಿಟರಿ ಕಾಲೇಜಿನಲ್ಲಿ ಟೆಲಿಕಮ್ಯೂನಿಕೇಶನ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

  • ವಿಶ್ವಕ್ಕೆ ಕೊರೊನಾ ಚಿಂತೆ – ಪಾಕ್ ಪ್ರೇಮಿ ಚೀನಾಗೆ ಜಮ್ಮುಕಾಶ್ಮೀರ ಚಿಂತೆ

    ವಿಶ್ವಕ್ಕೆ ಕೊರೊನಾ ಚಿಂತೆ – ಪಾಕ್ ಪ್ರೇಮಿ ಚೀನಾಗೆ ಜಮ್ಮುಕಾಶ್ಮೀರ ಚಿಂತೆ

    ನವದೆಹಲಿ: ಕೊರೊನಾ ವೈರಸ್ ಹರಡಿಸಿ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಪಾಕ್ ಸ್ನೇಹಿತ ಚೀನಾ ಈಗ ಜಮ್ಮು ಕಾಶ್ಮೀರ ವಿಚಾರವನ್ನು ಮತ್ತೆ ಕೆದಕಿದೆ. ಚೀನಾದ ಈ ಬುದ್ಧಿಗೆ ಭಾರತ, ಜಮ್ಮು ಕಾಶ್ಮೀರ ನಮ್ಮ ಆಂತರಿಕ ವಿಚಾರ. ಈ ಬಗ್ಗೆ ಯಾರೂ ಮಾತನಾಡುವ ಅಗತ್ಯವಿಲ್ಲ ಎಂದು ಹೇಳಿ ತಿರುಗೇಟು ನೀಡಿದೆ.

    ವಿಶ್ವಸಂಸ್ಥೆಯ ಚೀನಾದ ಶಾಶ್ವತ ಪ್ರತಿನಿಧಿತ್ವ ಮಿಶನ್ ವಕ್ತಾರರು, ಜಮ್ಮು ಕಾಶ್ಮೀರ ವಿಶ್ವಸಂಸ್ಥೆಯ ಭದ್ರತಾ ಕಾರ್ಯಸೂಚಿಯಲ್ಲಿ ಉಳಿದಿದೆ. ಕಾಶ್ಮೀರ ವಿಚಾರವನ್ನು ಚೀನಾ ಸೂಕ್ಷ್ಮವಾಗಿ ಗಮನಿಸುತ್ತದೆ. ಈ ವಿಚಾರವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು ಎಂದು ಹೇಳಿದ್ದರು.

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ಶ್ರೀವತ್ಸವ, ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಮುಂದೆಯೂ ಇದು ಭಾರತ ದೇಶದ ಭಾಗವಾಗಿಯೇ ಮುಂದುವರಿಯುತ್ತದೆ. ಜಮ್ಮು ಕಾಶ್ಮೀರ ಭಾರತದ ಆಂತರಿಕ ವಿಚಾರ ಎಂದು ಹೇಳಿ ತಿರುಗೇಟು ನೀಡಿದ್ದಾರೆ.

    ಲಡಾಖ್ ಪ್ರದೇಶದ ಹಲವು ಭಾಗ ತನಗೆ ಸೇರಿದ್ದು ಎಂದು ಚೀನಾ ವಾದಿಸುತ್ತಿದೆ. ಈ ಮಧ್ಯೆ ಕಳೆದ ವರ್ಷ ಕೇಂದ್ರಾಡಳಿತ ಪ್ರದೇಶವನ್ನಾಗಿ ಲಡಾಖ್ ಘೋಷಣೆ ಮಾಡಿದ್ದು ಚೀನಾದ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕಾರಣಕ್ಕಾಗಿ ಆಗಾಗ ಜಮ್ಮು ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪ ಮಾಡುತ್ತಿದೆ.

    ಕಳೆದ ಆಗಸ್ಟ್ ತಿಂಗಳಿನಲ್ಲಿ ಚೀನಾ ವಿಶ್ವಸಂಸ್ಥೆಯ ಭದ್ರತಾ ಸಭೆಯಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪ ಮಾಡಲು ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಆದರೆ ಭಾರತ ಭದ್ರತಾ ಸಮಿತಿಯ ಉಳಿದ ರಾಷ್ಟ್ರಗಳ ಜೊತೆ ಉತ್ತಮ ಸಂಪರ್ಕ ಹೊಂದಿದ್ದ ಕಾರಣ ಚೀನಾದ ಪ್ರಯತ್ನ ಸಫಲವಾಗಲಿಲ್ಲ.

  • ಪಾಕ್‍ನಲ್ಲಿ ಹಿಂದೂ, ಕ್ರಿಶ್ಚಿಯನ್ನರ ಮೇಲೆ ದಾಳಿ- ಇಮ್ರಾನ್ ಖಾನ್‍ಗೆ ವಿಶ್ವಸಂಸ್ಥೆ ಎಚ್ಚರಿಕೆ

    ಪಾಕ್‍ನಲ್ಲಿ ಹಿಂದೂ, ಕ್ರಿಶ್ಚಿಯನ್ನರ ಮೇಲೆ ದಾಳಿ- ಇಮ್ರಾನ್ ಖಾನ್‍ಗೆ ವಿಶ್ವಸಂಸ್ಥೆ ಎಚ್ಚರಿಕೆ

    – ಒತ್ತಾಯ ಪೂರ್ವಕ ಮತಾಂತರ, ಹಲ್ಲೆ
    – ಧಾರ್ಮಿಕ ಸ್ವಾತಂತ್ರ್ಯವೇ ಇಲ್ಲದಾಗಿದೆ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗುತ್ತಿದ್ದು, ಹಿಂದೂ ಹಾಗೂ ಕ್ರಿಶ್ಚಿಯನ್ನರ ಯುವತಿಯರನ್ನು ಒತ್ತಾಯಪೂರ್ವಕವಾಗಿ ಮತಾಂತರ ಮಾಡಲಾಗುತ್ತಿದೆ. ಅಲ್ಲದೆ ಹಲ್ಲೆ, ದಾಳಿಗಳು ನಡೆಯುತ್ತಿವೆ. ಇಮ್ರಾನ್ ಖಾನ್ ಸರ್ಕಾರದ ಅವಧಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇಲ್ಲದಾಗಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

    ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ಮಂಡಳಿಯ ಮಹಿಳೆಯರ ಸ್ಥಿತಿಗತಿ ಕುರಿತ ಆಯೋಗ ಈ ಕುರಿತು ವರದಿ ಸಲ್ಲಿಸಿದ್ದು, ವರದಿಯಲ್ಲಿ ಆತಂಕಕಾರಿ ಅಂಶಗಳನ್ನು ಉಲ್ಲೇಖಿಸಿದೆ. ಪಾಕ್ ಸರ್ಕಾರದ ಆಕ್ರಮಣಕಾರಿ ನೀತಿಯನ್ನು ಎತ್ತಿ ತೋರಿಸಿದೆ. ಪಾಕಿಸ್ತಾನದ ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್-ಇ-ಇನ್ಸಾಫ್ ಸರ್ಕಾರವು ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ. ಸರ್ಕಾರದ ಉಗ್ರ ಮನಸ್ಥಿತಿಯಿಂದ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ‘ಪಾಕಿಸ್ತಾನ- ಧಾರ್ಮಿಕ ಸ್ವಾತಂತ್ರ್ಯ ಮೇಲೆ ದಾಳಿ’ ಎಂಬ ಶೀರ್ಷಿಕೆಯಡಿ ಒಟ್ಟು 47 ಪುಟಗಳ ವರದಿಯನ್ನು ಮಹಿಳೆಯರ ಸ್ಥಿತಿಗತಿ ಕುರಿತ ಆಯೋಗ ಡಿಸೆಂಬರ್‍ನಲ್ಲಿ ಈ ವರದಿಯನ್ನು ಸಿದ್ಧಪಡಿಸಿದೆ. ಧರ್ಮನಿಂದನೆಯ ಕಾನೂನುಗಳ ಮೂಲಕ ಶಸ್ತ್ರಾಸ್ತ್ರೀಕರಣ ಹಾಗೂ ರಾಜಕೀಯ ಅಹ್ಮದಿಯಾ ವಿರೋಧಿ ಶಾಸನಗಳನ್ನು ಮುಸ್ಲಿಂ ಗುಂಪುಗಳು ಬಳಸಿಕೊಂಡು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿವೆ. ಇದು ಅಲ್ಲಿನ ರಾಜಕೀಯದ ಮೇಲೂ ಪರಿಣಾಮ ಬೀರಿದೆ ಎಂದು ವರದಿಯಲ್ಲಿ ತಿಳಿಸಿದೆ.

    ಅಲ್ಲದೆ ಪಾಕಿಸ್ತಾನದಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ನರು ದಾಳಿಗೊಳಗಾಗಿದ್ದಾರೆ, ವಿಶೇಷವಾಗಿ ಮಹಿಳೆಯರು ಹಾಗೂ ಯುವತಿಯರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ. ಪ್ರತಿ ವರ್ಷವೂ ನೂರರಲ್ಲಿ ಒಬ್ಬರನ್ನು ಮುಸ್ಲಿಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಿಸಲಾಗುತ್ತಿದ್ದು, ಮುಸ್ಲಿಂ ಯುವಕರನ್ನು ಮದುವೆಯಾಗುವಂತೆ ಒತ್ತಡ ಹೇರಲಾಗುತ್ತಿದೆ.

    ಅಪಹರಣಕಾರರು ಮಹಿಳೆಯರು ಹಾಗೂ ಅವರ ಕುಟುಂಬಕ್ಕೆ ಒಡ್ಡುತ್ತಿರುವ ಬೆದರಿಕೆಯಿಂದಾಗಿ ಸಂತ್ರಸ್ತರು ಮರಳಿ ಮನೆಗೆ ಬರುತ್ತೇವೆ ಎಂಬ ನಂಬಿಕೆಯೇ ಇಲ್ಲದಂತಾಗಿದೆ. ಈ ಕುರಿತು ಪೊಲೀಸರು ಕ್ರಮ ಕೈಗೊಳ್ಳದಿರುವುದು ಹಾಗೂ ನ್ಯಾಯಾಂಗ ಪ್ರಕ್ರಿಯೆಯ ದೌರ್ಬಲ್ಯವೇ ಕಾರಣ. ಅಲ್ಲದೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಪೊಲೀಸರು ಹಾಗೂ ನ್ಯಾಯಾಂಗ ಸಹ ತಾರತಮ್ಯ ಎಸಗುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಧಾರ್ಮಿಕ ಅಲ್ಪಸಂಖ್ಯಾತರನ್ನು ಪಾಕಿಸ್ತಾನದಲ್ಲಿ ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ನೋಡಲಾಗುತ್ತಿದೆ ಎಂಬುದಕ್ಕೆ ವರದಿಯಲ್ಲಿ ಹಲವಾರು ಉದಾಹರಣೆಗಳನ್ನು ನೀಡಿದ್ದು, ಇದರಲ್ಲಿ ಮೇ 2019ರಲ್ಲಿ ಸಿಂಧ್ ಪ್ರದೇಶದ ಮಿರ್‍ಪುರಖಾಸ್ ನಲ್ಲಿ ಹಿಂದೂ ಪಶು ವೈದ್ಯ ರಮೇಶ್ ಕುಮಾರ್ ಮಾಲ್ಹಿ ಅವರ ಅವರ ಪಶು ಆಸ್ಪತ್ರೆಯನ್ನು ಸುಟ್ಟಿದ್ದ ಪ್ರಕರಣವನ್ನು ಉಲ್ಲೇಖಿಸಲಾಗಿದೆ. ಖುರಾನ್‍ನ ಹಾಳೆಯಲ್ಲಿ ಪೊಟ್ಟಣ ಕಟ್ಟಿ ಔಷಧಿ ನೀಡಿದ್ದರು ಎಂದು ಆರೋಪಿಸಿ ಧರ್ಮ ನಿಂದನೆ ಆರೋಪ ಹೊರಿಸಲಾಗಿತ್ತು. ಘಟನೆ ಕುರಿತು ಆ ಪ್ರದೇಶದಲ್ಲಿ ಸುದ್ದಿ ಹರಡುತ್ತಿದ್ದಂತೆ ವೈದ್ಯರ ಪಶು ಕ್ಲಿನಿಕ್‍ನ್ನು ಸುಟ್ಟು ಹಾಕಲಾಗಿತ್ತು. ಅಲ್ಲದೆ ಹಿಂದೂಗಳಿಗೆ ಸೇರಿದ್ದ ಇತರೆ ಅಂಗಡಿಗಳಿಗೂ ಬೆಂಕಿ ಹಚ್ಚಲಾಗಿತ್ತು.

    ಮುಸ್ಲಿಮರನ್ನು ಯಾರಾದರೂ ಅವಮಾನಿಸಿದರೆ, ಧಾರ್ಮಿಕ ಅಲ್ಪ ಸಂಖ್ಯಾತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಬಂಧಿಸಲಾಗುತ್ತಿದೆ. 18 ವರ್ಷದ ಹಿಂದೂ ಹಾಗೂ ಕ್ರಿಶ್ಚಿಯನ್ ಯುವತಿಯರನ್ನು ಒತ್ತಾಯ ಪೂರ್ವಕವಾಗಿ ಮಕತಾಂತರ ಮಾಡಿಸುವುದು ಹಾಗೂ ಮುಸ್ಲಿಂ ಯುವಕರನ್ನು ಮದುವೆಯಾಗುಂತೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇಂತಹ ಪ್ರಕರಣಗಳು ಪಂಜಾಬ್ ಹಾಗೂ ಸಿಂಧ್ ಪ್ರದೇಶದಲ್ಲಿ ಹೆಚ್ಚು ನಡೆಯುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

    ಹಿಂದೂ ಕುಟುಂಬಗಳು ಅರ್ಥಿಕವಾಗಿ ಹಿಂದುಳಿದಿರುವುದನ್ನೇ ಬಂಡವಾಳ ಮಾಡಿಕೊಂಡು ಅವರನ್ನು ಒತ್ತಾಯಪೂರ್ವಕವಾಗಿ ಮತಾಂತರ ಮಾಡಿಸುತ್ತಿದ್ದಾರೆ. ಬಡ ಹೆಣ್ಣು ಮಕ್ಕಳೇ ಹೆಚ್ಚು ಬಲಿಯಾಗುತ್ತಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಬಹುತೇಕ ಮಕ್ಕಳನ್ನು ಮಾನಸಿಕ ಹಾಗೂ ದೈಹಿಕವಾಗಿ ಕೀಳುಮಟ್ಟದಲ್ಲಿ ನಡೆಸಿಕೊಳ್ಳಲಾಗುತ್ತಿದೆ. ಅವರಿಗೆ ಅವಮಾನಿಸುವುದು, ಹಲ್ಲೆ ನಡೆಸುವುದು, ಥಳೀಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಹಿಂಸಿಸಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

  • ಕಪ್ಪು ಪಟ್ಟಿಗೆ ಸೇರುವ ಭೀತಿಯಲ್ಲಿ ಪಾಕ್- ಟೆರರ್ ಫಂಡಿಂಗ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದ ಎಫ್‍ಎಟಿಎಫ್

    ಕಪ್ಪು ಪಟ್ಟಿಗೆ ಸೇರುವ ಭೀತಿಯಲ್ಲಿ ಪಾಕ್- ಟೆರರ್ ಫಂಡಿಂಗ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದ ಎಫ್‍ಎಟಿಎಫ್

    ನವದೆಹಲಿ: ಉಗ್ರರಿಗೆ ಬಹಿರಂಗವಾಗಿ ಸಹಕಾರ ನೀಡುತ್ತಿರುವ ಪಾಕಿಸ್ತಾನಕ್ಕೆ ಮತ್ತೆ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗಿದ್ದು, ಉಗ್ರರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯಾದ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‍ಎಟಿಎಫ್)ನ ಕಪ್ಪು ಪಟ್ಟಿಗೆ ಸೇರಿಸುವ ಕಾಲ ಇನ್ನೂ ಹತ್ತಿರವಾಗಿದೆ.

    ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ರೆಸಲ್ಯೂಶನ್ 1267 ಕ್ರಮವನ್ನು ಸಂಪೂರ್ಣವಾಗಿ ಜಾರಿಗೆ ತರಲು ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿಲ್ಲ. ಭಯೋತ್ಪಾನೆಯ ಹಣಕಾಸು ವ್ಯವಸ್ಥೆ(ಟೆರರ್ ಫಂಡಿಂಗ್)ಯ ವಿರುದ್ಧ ಕ್ರಮ ಕೈಗೊಂಡಿರುವ ಕುರಿತು ಸ್ಪಷ್ಟಪಡಿಸಿಲ್ಲ ಎಂದು ಎಫ್‍ಎಟಿಎಫ್(ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ಪಾಕ್‍ಗೆ ಮತ್ತೊಮ್ಮೆ ತಿವಿದಿದೆ.

    ವಿಶೇಷವಾಗಿ ಮುಂಬೈ ಸ್ಫೋಟದ ರೂವಾರಿ ಹಾಗೂ ಹಫೀಜ್ ಸಯೀದ್ ಸ್ಥಾಪಿಸಿರುವ ಲಷ್ಕರ್-ಎ-ತೋಯ್ಬಾ ಹಾಗೂ ಜಮಾತ್-ಉದ್-ದವಾಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬುದರ ಕುರಿತು ಜಾಗತಿಕ ಭಯೋತ್ಪಾದನಾ ವಿರೋಧಿ ಹಣಕಾಸು ಸಂಸ್ಥೆ ವರದಿ ಪ್ರಕಟಿಸಿದೆ.

    ಪಾಕಿಸ್ತಾನದ ಸೆಂಟ್ರಲ್ ಬ್ಯಾಂಕ್ ಮತ್ತು ಮಾರುಕಟ್ಟೆ ನಿಯಂತ್ರಣವು ಭಯೋತ್ಪಾದನೆಯ ಹಣಕಾಸಿನ ವ್ಯವಸ್ಥೆ ಬಗ್ಗೆ ಸ್ಪಷ್ಟ ತಿಳಿವಳಿಕೆಯನ್ನು ಹೊಂದಿಲ್ಲ ಎಂದು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(ಎಫ್‍ಎಟಿಎಫ್)ನ ಏಷ್ಯಾದ ಅಂಗ ಸಂಸ್ಥೆ ಏಷ್ಯಾ ಫೆಸಿಫಿಕ್ ಗ್ರೂಪ್(ಎಪಿಜಿ) ವರದಿಯಲ್ಲಿ ತಿಳಿಸಿದೆ.

    ಪಾಕಿಸ್ತಾನ ಕಾನೂನುಬದ್ಧ ಹಾಗೂ ಕಾನೂನುಬಾಹಿರ ಮೂಲಗಳಿಂದ ಭಯೋತ್ಪಾದಕ ಹಣಕಾಸಿನ ಅಪಾಯಗಳನ್ನು ಎದುರಿಸುತ್ತಿದೆ. ಈ ವಲಯದಲ್ಲಿ ನಿಯಂತ್ರಣ, ಮೇಲ್ವಿಚಾರಣೆ ದುರ್ಬಲವಾಗಿವೆ ಎಂದು ವರದಿಯಲ್ಲಿ ತಿಳಿಸಿದೆ.

    ಇದರಿಂದ ಪಾಕಿಸ್ತಾನಕ್ಕೆ ಇನ್ನೂ ತೀವ್ರ ಮುಖಭಂಗವಾಗಿದ್ದು, ಅಕ್ಟೋಬರ್ 13 ಮತ್ತು 18ರಂದು ನಡೆಯುತ್ತಿರುವ ಎಫ್‍ಎಟಿಎಫ್‍ನ ಬಹುದೊಡ್ಡ ಸಭೆಗೂ ಮುನ್ನ ಈ ವರದಿ ಬಂದಿದೆ. ಇದರಿಂದ ಪಾಕ್‍ಗೆ ಇನ್ನೂ ಆತಂಕ ಶುರುವಾಗಿದೆ. ಪಾಕಿಸ್ತಾನ ಭಯೋತ್ಪಾದನೆ ಹಣಕಾಸು ನಿಗ್ರಹಿಸಲು ಅಸಮರ್ಥವಾಗಿದ್ದರಿಂದ ಈಗಾಗಲೇ ಬೂದು ಪಟ್ಟಿಯಲ್ಲಿಡಲಾಗಿದೆ. ಅಲ್ಲದೆ ಕಪ್ಪು ಪಟ್ಟಿಗೆ ಸೇರಿಸುವ ಸಾಧ್ಯತೆಯನ್ನು ಎದುರಿಸುತ್ತಿದೆ.

    ಇದರಿಂದಾಗಿ ಪಾಕಿಸ್ತಾನ ತೀವ್ರ ಚಿಂತೆಗೀಡಾಗಿದ್ದು, ಕಳೆದ ತಿಂಗಳು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಅಧಿವೇಶನದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಹ ಈ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಭಾರತದ ವಿರುದ್ಧ ಆರೋಪಿಸಿ, ಪಾಕಿಸ್ತಾನವನ್ನು ಭಾರತ ಎಫ್‍ಎಟಿಎಫ್‍ನ ಕಪ್ಪು ಪಟ್ಟಿಗೆ ಸೇರಿಸಲು ನೋಡುತ್ತಿದೆ ಎಂದು ದೂರಿದ್ದರು.

    ಎಫ್‍ಎಟಿಎಫ್ ಸಭೆಯಲ್ಲಿ ಭಾರತದ ಪಾತ್ರವನ್ನು ಅರಿತ ನಂತರ ಭಾರತದ ಜೊತೆಗಿನ ಶಾಂತಿ ಮಾತುಕತೆಯಿಂದ ಹಿಂದೆ ಸರಿದಿದ್ದೇವೆ ಎಂದು ಇಮ್ರಾನ್ ಖಾನ್ ತನ್ನ ಭಾಷಣದಲ್ಲಿ ತಿಳಿಸಿದ್ದರು. ನಮ್ಮನ್ನು ಆರ್ಥಿಕವಾಗಿ ದಿವಾಳಿ ಮಾಡಲು ಭಾರತ ಪ್ರಯತ್ನಿಸುತ್ತಿದೆ, ಹೀಗಾಗಿ ನಾವು ಶಾಂತಿಯ ಮಾತುಕತೆಯಿಂದ ಹಿಂದೆ ಸರಿದಿದ್ದೇವೆ. ಪಾಕಿಸ್ತಾನವನ್ನು ವಿಪತ್ತಿಗೆ ತಳ್ಳಲು ಭಾರತ ತಂತ್ರ ನಡೆಸುತ್ತಿದೆ ಎಂದು ಖಾನ್ ವಿಶ್ವಸಂಸ್ಥೆಯಲ್ಲಿ ಆರೋಪಿಸಿದ್ದರು.

    ಆಗಿದ್ದು ಏನು?
    ಪುಲ್ವಾಮಾ ದಾಳಿಯಾದ ನಂತರ ಪಾಕಿಸ್ತಾನವನ್ನು ಯಾವುದೇ ಕಾರಣಕ್ಕೂ ಗ್ರೇ ಪಟ್ಟಿಯಿಂದ ಹೊರಗಡೆ ಇಡಬಾರದು ಎಂದು ಭಾರತ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಫ್ರಾನ್ಸ್ ಸಹ ಪಾಕಿಸ್ತಾನವನ್ನು ಗ್ರೇ ಪಟ್ಟಿಯಲ್ಲೇ ಇರಿಸುವಂತೆ ಎಫ್‍ಎಟಿಎಫ್ ಮೇಲೆ ಒತ್ತಡ ಹಾಕಿತ್ತು.

    ಉಗ್ರಗಾಮಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಒತ್ತಡ ಜಾಸ್ತಿಯಾದ ಹಿನ್ನೆಲೆಯಲ್ಲಿ ಎಫ್‍ಎಟಿಎಫ್ ಪಾಕಿಸ್ತಾನವನ್ನು ಮುಂದಿನ ಅಕ್ಟೋಬರ್ ವರೆಗೆ ಗ್ರೇ ಪಟ್ಟಿಯಲ್ಲಿ ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಗ್ರೇ ಪಟ್ಟಿಯಿಂದ ಹೊರಗೆ ಬರಲು ಪಾಕಿಸ್ತಾನ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಮನವಿ ಮಾಡಿತ್ತು. ಆದರೆ ಪಾಕ್ ಮನವಿಯನ್ನು ಇತರೇ ರಾಷ್ಟ್ರಗಳು ಗಂಭೀರವಾಗಿ ಸ್ವೀಕರಿಸಿರಲಿಲ್ಲ.

    1989ರಲ್ಲಿ ಎಫ್‍ಎಟಿಎಫ್ ಸ್ಥಾಪಿಸಲಾಗಿದ್ದು, ಉಗ್ರರಿಗೆ ಹಣಕಾಸು ಪೂರೈಕೆ ತಡೆ, ಅಕ್ರಮ ಹಣ ವರ್ಗಾವಣೆ, ಅಂತರಾಷ್ಟ್ರೀಯ ಹಣಕಾಸು ವ್ಯವಸ್ಥೆ ಬೆದರಿಕೆ ಒಡ್ಡುವ ಕೃತ್ಯಗಳನ್ನು ತಡೆಯುವ ಕೆಲಸವನ್ನು ಈ ಕ್ರಿಯಾಪಡೆ ಮಾಡುತ್ತದೆ. ವಿಶ್ವದ ಒಟ್ಟು 38 ರಾಷ್ಟ್ರಗಳು ಎಫ್‍ಎಟಿಎಫ್ ಸದಸ್ಯ ರಾಷ್ಟ್ರಗಳಾಗಿವೆ. ತಾನು ನಿಗದಿಪಡಿಸಿದ ಕ್ರಮಗಳನ್ನು ಅನುಸರಿಸದೇ ಇದ್ದರೆ ಎಫ್‍ಎಟಿಎಫ್ ದೇಶಗಳನ್ನು ಗ್ರೇ ಅಥವಾ ಬ್ಲಾಕ್ ಲಿಸ್ಟ್ ಗೆ ಹಾಕುತ್ತದೆ. 2019ರ ಅಕ್ಟೋಬರ್ ಒಳಗಡೆ ಪಾಕಿಸ್ತಾನ ಎಫ್‍ಎಟಿಎಫ್ ಬೇಡಿಕೆಯನ್ನು ಈಡೇರಿಸದೇ ಇದ್ದರೆ ಕಪ್ಪು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

    ಏನಿದು ಗ್ರೇ ಲಿಸ್ಟ್?
    ಫುಟ್ ಬಾಲ್ ಪಂದ್ಯಗಳಲ್ಲಿ ತಪ್ಪು ಮಾಡಿದ ಆಟಗಾರಿಗೆ ಹೇಗೆ ಹಳದಿ ಕಾರ್ಡ್ ನೀಡಿ ಎಚ್ಚರಿಕೆ ನೀಡುತ್ತಾರೋ ಅದೇ ರೀತಿಯಾಗಿ ರಾಷ್ಟ್ರವೊಂದಕ್ಕೆ ಮೊದಲ ಎಚ್ಚರಿಕೆ ನೀಡಲು ಈ ಪಟ್ಟಿಗೆ ಸೇರಿಸಲಾಗುತ್ತದೆ. ಗ್ರೇ ಪಟ್ಟಿಗೆ ಒಂದು ದೇಶ ಸೇರಿದರೆ ಅದಕ್ಕೆ ಹಲವು ಸಮಸ್ಯೆಗಳಾಗುತ್ತದೆ. ವಿವಿಧ ಹಣಕಾಸು ಸಂಸ್ಥೆಗಳು(ಐಎಂಎಫ್, ವಿಶ್ವಬ್ಯಾಂಕ್) ಸಾಲ ನೀಡಲು ಹಿಂದೇಟು ಹಾಕಬಹುದು. ಆರ್ಥಿಕ ನಿರ್ಬಂಧ ಹೇರಬಹುದು. ರಾಷ್ಟ್ರಗಳು ವ್ಯಾಪಾರವನ್ನು ಕಡಿತಗೊಳಿಸಬಹುದು. ರೇಟಿಂಗ್ ಏಜೆನ್ಸಿಗಳು ದೇಶಕ್ಕೆ ಕಡಿಮೆ ರೇಟಿಂಗ್ ಕೊಡಹುದು.

    ಏನಿದು ಕಪ್ಪು ಪಟ್ಟಿ?
    ಎಫ್‍ಎಟಿಎಫ್ ನಿಗದಿ ಪಡಿಸಿದ ಮಾನದಂಡಕ್ಕೆ ಅನುಗುಣವಾಗಿ ಕೆಲಸ ಮಾಡದೇ ಇದ್ದರೆ ಗ್ರೇ ಪಟ್ಟಿಯಲ್ಲಿರುವ ದೇಶವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.

    ಪಾಕಿಸ್ತಾನಕ್ಕೆ ಹೊಸದೇನಲ್ಲ:
    ಕುತಂತ್ರಿ ಪಾಕಿಸ್ತಾನಕ್ಕೆ ಗ್ರೇ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹೊಸದೆನಲ್ಲ. ಈ ಹಿಂದೆ 2012 ರಿಂದ 2015 ರವರೆಗೆ ಗ್ರೇ ಪಟ್ಟಿಯಲ್ಲಿತ್ತು. ಭಾರತದ ನಿರಂತರ ಒತ್ತಡದ ಬಳಿಕ 2018ರ ಜೂನ್ ಕೊನೆಯಲ್ಲಿ ಗ್ರೇ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಲಾಗಿತ್ತು. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಪಾಕಿಸ್ತಾನ ಸಿಲುಕಿದ್ದು ವಿಶ್ವದ ರಾಷ್ಟ್ರಗಳಿಂದ ಭಿಕ್ಷೆ ಬೇಡಿ ತಿನ್ನುವ ಪರಿಸ್ಥಿತಿಗೆ ಬಂದಿದೆ. ಒಂದು ವೇಳೆ ಕಪ್ಪು ಪಟ್ಟಿಗೆ ಸೇರ್ಪಡೆಯಾದರೆ ಈಗಾಗಲೇ ವಿವಿಧ ರಾಷ್ಟ್ರಗಳಿಂದ ಸಾಲ ಮಾಡಿ ಪಾಕಿಸ್ತಾನದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಟ್ಟು ಡೋಲಾಯಮಾನವಾಗಬಹುದು.

  • ಪಾಕಿಗೆ ವಿಶ್ವಸಂಸ್ಥೆಯಲ್ಲಿ ಮತ್ತೆ ಮುಖಭಂಗ – ‘ಉಗ್ರರು ಚಂದ್ರಲೋಕದಿಂದ ಬರಲ್ಲ, ಪಾಕಿಸ್ತಾನದಿಂದ ಇಳಿಯುತ್ತಾರೆ’

    ಪಾಕಿಗೆ ವಿಶ್ವಸಂಸ್ಥೆಯಲ್ಲಿ ಮತ್ತೆ ಮುಖಭಂಗ – ‘ಉಗ್ರರು ಚಂದ್ರಲೋಕದಿಂದ ಬರಲ್ಲ, ಪಾಕಿಸ್ತಾನದಿಂದ ಇಳಿಯುತ್ತಾರೆ’

    – ಭಾರತದ ನಿರ್ಧಾರ ಸರಿ ಎಂದ ಯುರೋಪಿಯನ್ ಸಂಸತ್
    – ಜಮ್ಮು ಕಾಶ್ಮೀರ ಭಾರತದ ಆಂತರಿಕ ವಿಚಾರ

    ನವದೆಹಲಿ: ಜಮ್ಮು ಕಾಶ್ಮೀರದ ಸಮಸ್ಯೆ ದ್ವಿಪಕ್ಷೀಯವಾದದ್ದು ಎಂದು ವಿಶ್ವಸಂಸ್ಥೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

    ಬುಧವಾರ ಪಾಕಿಸ್ತಾನಿ ಮಾಧ್ಯಮವೊಂದು ಜಮ್ಮು ಕಾಶ್ಮೀರದ ಬಿಕ್ಕಟ್ಟಿನ ಕುರಿತು ಪ್ರಶ್ನಿಸಿದ್ದು, ಇದಕ್ಕೆ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಉತ್ತರಿಸಿ, ಜಮ್ಮು ಕಾಶ್ಮೀರದ ಸಮಸ್ಯೆ ದ್ವಿಪಕ್ಷೀಯವಾದದ್ದು. ಅಲ್ಲದೆ, ಭಾರತ ಪಾಕಿಸ್ತಾನದ ನಡುವಿನ ಸಂವಾದವು ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಅಗತ್ಯ ಅಂಶವಾಗಿದೆ ಎಂದು ತಿಳಿಸಿದ್ದಾರೆ.

    ಕಳೆದವಾರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಜಮ್ಮು ಕಾಶ್ಮೀರದ ಬಗ್ಗೆ ಭಾರತ ತನ್ನ ನಿಲುವನ್ನು ಪುನರುಚ್ಚರಿಸಿತ್ತು. ಪಾಕಿಸ್ತಾನ ಸುಳ್ಳು ಹಾಗೂ ಉನ್ಮಾದದ ಹೇಳಿಕೆಗಳೊಂದಿಗೆ ಈ ವೇದಿಕೆಯನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿತ್ತು.

    ನಮ್ಮ ಸಾಮರ್ಥ್ಯವು ಉತ್ತಮ ಆಡಳಿತಕ್ಕೆ ಸಂಬಂಧಿಸಿದೆ. ಉತ್ತಮ ಸಲಹೆಗಳನ್ನು ಸ್ವೀಕರಿಸಿದಾಗ ಮಾತ್ರ ಉತ್ತಮ ಆಡಳಿತವನ್ನು ಕಾರ್ಯಗತಗೊಳಿಸಬಹುದು. ಮತ್ತೊಂದೆಡೆ ವಕಾಲತ್ತು ವಹಿಸುವುದು ಹಾಗೂ ಅದನ್ನು ಕಾಪಾಡಿಕೊಳ್ಳುವುದು ಸಹ ಪ್ರಮುಖ ಅಂಶವಾಗಿದೆ ಎಂದು ಆಂಟೋನಿಯೊ ಗುಟೆರೆಸ್ ತಿಳಿಸಿದ್ದಾರೆ.

    ಭೂಪ್ರದೇಶದಲ್ಲಿ ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಗೌರವಿಸಬೇಕು. ಭಾರತ ಪಾಕಿಸ್ತಾನದ ನಡುವಿನ ಸಂವಾದವು ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಅಗತ್ಯ ಅಂಶವಾಗಿದೆ ಎಂದು ತಿಳಿಸಿದ್ದಾರೆ.

    ಕಳೆದ ವಾರ, ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಕಾಶ್ಮೀರದಲ್ಲಿ ಧ್ವಜಾರೋಹಣ ಮಾಡಲು ಪಾಕಿಸ್ತಾನ ನಡೆಸಿದ ಮತ್ತೊಂದು ಪ್ರಯತ್ನದ ಕುರಿತು ಪ್ರಸ್ತಾಪಿಸಲಾಗಿತ್ತು. ಆಗ ಭಾರತ ಪ್ರತಿಕ್ರಿಯಿಸಿ, ಮಾನವ ಹಕ್ಕುಗಳ ಹೆಸರಿನಲ್ಲಿ ರಾಜಕೀಯ ದುರುದ್ದೇಶಕ್ಕಾಗಿ ಈ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇದನ್ನು ನಾವು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿ ಭಾರತ ತಿರುಗೇಟು ನೀಡಿತ್ತು.

    ಇತ್ತೀಚೆಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ, ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೆ ಭವಿಷ್ಯದಲ್ಲಿ ‘ನರಮೇಧ’ ಸಂಭವಿಸುವ ಕುರಿತು ಅಭಿಪ್ರಾಯಪಟ್ಟಿದ್ದರು.

    ಖುರೇಷಿ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದ ಭಾರತದ ವಿದೇಶಾಂಗ ಸಚಿವಾಲಯ, ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಕೆಲವು ಪಾಕಿಸ್ತಾನಿ ನಾಯಕರು ಜಿಹಾದಿಗಳ ಮೊರೆ ಹೋಗಿದ್ದಾರೆ. ‘ನರಮೇಧ’ವನ್ನು ಸೃಷ್ಟಿಸುವ ಸಲುವಾಗಿ ವಾಸ್ತವದಿಂದ ದೂರ ಉಳಿದಿದ್ದಾರೆ ಎಂದು ತಕ್ಕ ಉತ್ತರ ನೀಡಿತ್ತು.

    ಆಗಸ್ಟ್ ನಲ್ಲಿ ಭಾರತದ ಜಮ್ಮು ಕಾಶ್ಮೀರಕ್ಕೆ ನಿಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನ ತೀವ್ರ ಆತಂಕಕ್ಕೊಳಗಾಗಿದೆ. ಈ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲು ಮುಂದಾಗುತ್ತಿದ್ದು ವಿವಿಧ ದೇಶಗಳ ನೆರವು ಕೇಳುತ್ತಿದೆ.

    ಮಂಗಳವಾರ ಯುರೋಪಿಯನ್ ಸಂಸತ್ತಿನ ವಿಶೇಷ ಚರ್ಚೆ ಸಂದರ್ಭದಲ್ಲಿಯೂ ಸಹ ಜಮ್ಮು ಕಾಶ್ಮೀರದ ವಿಚಾರ ಪ್ರಸ್ತಾಪವಾಗಿದ್ದು, ಸಂಸತ್ ಸದಸ್ಯರಾದ ರಿಸ್ಜಾರ್ಡ್ ಜಾರ್ನೆಕಿ ಹಾಗೂ ಫುಲ್ವಿಯೊ ಮಾರ್ಟುಸ್ಸಿಯೆಲ್ಲೊ ಅವರು ಭಾರತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆಯುವ ಮೂಲಕ ಭಾರತದ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಅಲ್ಲದೆ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಪೋಲೆಂಡ್‍ನ ಯುರೋಪಿಯನ್ ಕನ್ಸರ್ವೇಟಿವ್ ಮತ್ತು ರಿಫಾರ್ಮಿಸ್ಟ್ಸ್ ಗ್ರೂಪ್‍ನ ಸದಸ್ಯ ಜಾರ್ನೆಕಿ ಭಾರತವನ್ನು ‘ವಿಶ್ವದ ಶ್ರೇಷ್ಠ ಪ್ರಜಾಪ್ರಭುತ್ವ’ ಎಂದು ಕರೆದಿದ್ದಾರೆ. ಅಲ್ಲದೆ ಭಾರತದ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳನ್ನು ನಾವು ನೋಡಬೇಕಿದೆ. ಈ ಭಯೋತ್ಪಾದಕರು ಚಂದ್ರ ಲೋಕದಿಂದ ಇಳಿದಿದ್ದಲ್ಲ. ಬದಲಿಗೆ ನೆರೆಯ ದೇಶ ಪಾಕಿಸ್ತಾನದಿಂದ ಬರುತ್ತಿರುವುದು. ಹೀಗಾಗಿ ನಾವು ಭಾರತವನ್ನು ಬೆಂಬಲಿಸಬೇಕು ಎಂದು ಹೇಳಿ ಜಾರ್ನೆಕಿ ಗಮನಸೆಳೆದಿದ್ದಾರೆ.

  • ಪಾಕ್ ಭಯೋತ್ಪಾದನೆ ಮುಂದುವರಿಸಿದಲ್ಲಿ ತುಂಡು ತುಂಡಾಗುವುದು ನಿಶ್ಚಿತ – ರಾಜನಾಥ್ ಸಿಂಗ್

    ಪಾಕ್ ಭಯೋತ್ಪಾದನೆ ಮುಂದುವರಿಸಿದಲ್ಲಿ ತುಂಡು ತುಂಡಾಗುವುದು ನಿಶ್ಚಿತ – ರಾಜನಾಥ್ ಸಿಂಗ್

    ಗಾಂಧಿನಗರ: ಪಾಕಿಸ್ತಾನ ಭಯೋತ್ಪಾದನೆಗೆ ಪ್ರಚೋದನೆ ನೀಡುವುದನ್ನು ನಿಲ್ಲಿಸದಿದ್ದರೆ, ತುಂಡು ತುಂಡಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ.

    ಸೂರತ್‍ನಲ್ಲಿ ನಡೆದ 122 ಹುತಾತ್ಮ ಸೈನಿಕರ ಕುಟುಂಬಕ್ಕೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನಿಗಳು ಗಡಿ ನಿಯಂತ್ರಣ ರೇಖೆ(ಎಲ್‍ಓಸಿ)ಯನ್ನು ದಾಟಿದಲ್ಲಿ ನಮ್ಮ ಸೈನಿಕರು ಅವರು ಜೀವಂತವಾಗಿ ಮರಳು ಬಿಡುವುದಿಲ್ಲ ಎಂದು ಕುಟುಕಿದ್ದಾರೆ.

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಸೈನಿಕರಿಗೆ ಗಡಿ ನಿಯಂತ್ರಣ ರೇಖೆಯನ್ನು ದಾಟದಂತೆ ಉತ್ತಮ ಸಲಹೆಯನ್ನು ನೀಡಿದ್ದಾರೆ. ಏಕೆಂದರೆ, ಭಾರತೀಯ ಸೈನಿಕರು ಪಾಕಿಸ್ತಾನಿಗಳನ್ನು ಬಗ್ಗು ಬಡಿಯಲು ಸಿದ್ಧರಾಗಿದ್ದಾರೆ. ಅವರು ಪಾಕಿಸ್ತನಕ್ಕೆ ಜೀವಂತವಾಗಿ ಮರಳಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 370ನೇ ವಿಧಿಯ ರದ್ದತಿಯ ಭಾರತದ ನಿರ್ಧಾರವನ್ನು ಪಾಕಿಸ್ತಾನಕ್ಕೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಅದನ್ನು ತಪ್ಪುದಾರಿಗೆ ಎಳೆಯಲು ವಿಶ್ವಸಂಸ್ಥೆ ಮೊರೆ ಹೋಯಿತು. ಆದರೆ, ಪಾಕಿಸ್ತಾನ ಹೇಳುವುದನ್ನು ಅಂತರಾಷ್ಟ್ರೀಯ ಸಮುದಾಯ ನಂಬುವುದಿಲ್ಲ ಎಂದರು.

    ಶುಕ್ರವಾರ ಮುಜಾಫರಾಬಾದ್‍ನಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್, ನಾನು ಸೂಚನೆ ನೀಡುವವರೆಗೆ ಪಕಿಸ್ತಾನದ ಜನತೆ ಗಡಿ ನಿಯಂತ್ರಣ ರೇಖೆಯತ್ತ ಸಾಗಬಾರದು ಎಂದು ಸೂಚಿಸಿದ್ದರು.

    ಈ ವರ್ಷದ 9 ತಿಂಗಳ ಅವಧಿಯಲ್ಲಿ ಬರೋಬ್ಬರಿ 2,050ಕ್ಕೂ ಹೆಚ್ಚು ಬಾರಿ ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿದೆ. ಅಲ್ಲದೆ, 21 ಭಾರತೀಯರನ್ನು ಹತ್ಯೆ ಮಾಡಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

    ಇದರ ನಡುವೆ, ವಿದೇಶಿ ಆಂಗ್ಲ ಮಾಧ್ಯಮಕ್ಕೆ ಸಂದರ್ಶನ ಕೊಟ್ಟಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಭಾರತದ ಜೊತೆ ಯುದ್ಧವಾದರೆ ನಾವು ಸೋತು ಸುಣ್ಣವಾಗುತ್ತೇವೆ. ಇದರ ಅರಿವು ನಮಗಿದೆ. ಆದರೆ, ಭಾರತ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಭಾರತದ ಮೇಲೆ ನ್ಯೂಕ್ಲಿಯರ್ ವಾರ್ ಬೆದರಿಕೆ ಒಡ್ಡುತ್ತಿದ್ದೀರಾ ಅಂತ ಸಂದಕರ್ಶಕ ಕೇಳಿದಾಗ ಈ ವಿಚಾರದಲ್ಲಿ ಗೊಂದಲಗಳೇ ಇಲ್ಲ. ಪಾಕಿಸ್ತಾನ ಯಾವತ್ತೂ ತಾನಾಗೇ ಪರಮಾಣು ಯುದ್ಧ ಆರಂಭಿಸಲ್ಲ. ನಾನು ಶಾಂತಿಪ್ರಿಯ. ಯುದ್ಧ ವಿರೋಧಿ, ಯುದ್ಧಗಳಿಂದ ಪರಿಹಾರ ಸಿಗಲ್ಲ ಅಂತ ಒಕ್ಕಣೆ ಹಾಕಿದ್ದಾರೆ. ಈ ಮಧ್ಯೆ, ಪಾಕಿಸ್ತಾನಿಗಳು ನಮ್ಮ ಸಹೋದರರು, ದ್ವೇಷ ಬೇಡ ಎಂದು ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಹೇಳಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

  • ಕಾಶ್ಮೀರ ಯಾವಾಗ ನಿಮಗೆ ಸೇರಿತ್ತು, ನೀವು ಅಳುತ್ತಿರೋದು ಯಾಕೆ – ಪಾಕಿಗೆ ರಾಜ್‍ನಾಥ್ ಪ್ರಶ್ನೆ

    ಕಾಶ್ಮೀರ ಯಾವಾಗ ನಿಮಗೆ ಸೇರಿತ್ತು, ನೀವು ಅಳುತ್ತಿರೋದು ಯಾಕೆ – ಪಾಕಿಗೆ ರಾಜ್‍ನಾಥ್ ಪ್ರಶ್ನೆ

    ಲೇಹ್: ಕಾಶ್ಮೀರ ಯಾವಾಗ ನಿಮಗೆ ಸೇರಿತ್ತೆಂದು ನೀವು ಅಳುತ್ತಿದ್ದೀರಿ ಎಂದು ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಪ್ರಶ್ನಿಸಿ ಪಾಕ್ ವಿರುದ್ಧ ಹರಿಹಾಯ್ದಿದ್ದಾರೆ.

    ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಓ) ಇಂದು ಲೇಹ್ ಲಡಾಖ್‍ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಪಾಕಿಸ್ತಾನಕ್ಕೆ ಕೇಳ ಬಯಸುತ್ತೇನೆ. ಕಾಶ್ಮೀರ ಯಾವಾಗ ಪಾಕಿಸ್ತಾನದ ಭಾಗವಾಗಿತ್ತು? ಈ ಕುರಿತು ನೀವು ಯಆಕೆ ಅಳುತ್ತಿದ್ದೀರಿ ಎಂದು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಇಸ್ಲಮಾಬಾದ್‍ನಲ್ಲಿ ನಡೆಯುತ್ತಿರುವ ಹೋರಾಟದ ಕುರಿತು ಟೀಕಿಸಿದ್ದಾರೆ.

    ಪಾಕಿಸ್ತಾನ ರಚನೆಯಾದಾಗಿನಿಂದ ಅದರ ಅಸ್ಥಿತ್ವವನ್ನು ನಾವು ಗೌರವಿಸಿದ್ದೇವೆ. ಕಾಶ್ಮೀರ ಯಾವಾಗಲೂ ಭಾರತದ ಭಾಗವಾಗಿದೆ. ಭಾರತವು ಪಾಕಿಸ್ತಾನದೊಂದಿಗೆ ಉತ್ತಮ ನೆರೆಯ ಸಂಬಂಧವನ್ನು ಹೊಂದಲು ಬಯಸುತ್ತದೆ. ಆದರೆ ಭಾರತಕ್ಕೆ ಭಯೋತ್ಪಾದಕರನ್ನು ಕಳುಹಿಸುವ ಕೃತ್ಯವನ್ನು ಬಿಡಬೇಕು ಎಂದು ಎಚ್ಚರಿಸಿದರು.

    ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ ಬಳಿಕ ರಾಜನಾಥ್ ಸಿಂಗ್ ಅವರು ಮೊದಲ ಬಾರಿಗೆ ಲಡಾಖ್‍ಗೆ ಭೇಟಿ ನೀಡಿದ್ದು, ಇದೇ ವೇಳೆ ಲಡಾಖ್ ಪ್ರದೇಶದಲ್ಲಿ ಭದ್ರತೆಯನ್ನು ಕುರಿತು ಪರಿಶೀಲಿಸಿದರು.

    ಪಾಕಿಸ್ತಾನ ಜಮ್ಮು ಕಾಶ್ಮೀರದ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದೌರ್ಜನ್ಯಗಳನ್ನು ಪರಿಹರಿಸುವತ್ತ ಚಿತ್ತ ಹರಿಸಲಿ. ಜಮ್ಮು ಕಾಶ್ಮೀರದ ವಿಚಾರದಲ್ಲಿ ಯಾವೊಂದು ದೇಶವೂ ಸಹ ಪಾಕಿಸ್ತಾನದ ಜೊತೆಗಿಲ್ಲ ಎಂದು ರಾಜ್‍ನಾಥ್ ಸಿಂಗ್ ಹರಿಹಾಯ್ದರು.

    ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ, ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ ಭಾರತದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಪಾಕಿಸ್ತಾನ ವಿಶ್ವದ ಬೆಂಬಲ ಪಡೆಯಲು ಹಾತೊರೆಯುತ್ತಿದೆ. ಆದರೆ, ಜಮ್ಮು ಕಾಶ್ಮೀರದ ಸಮಸ್ಯೆ ದ್ವಿಪಕ್ಷೀಯವಾದದ್ದು ಎಂದು ಹೆಚ್ಚಿನ ರಾಷ್ಟ್ರಗಳು ಒಪ್ಪಿಕೊಂಡ ನಂತರ ಕಾಶ್ಮೀರದ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮೂಲಕ ಒತ್ತಡ ಹೇರುವ ಪಾಕಿಸ್ತಾನ ಪ್ರಯತ್ನಗಳೆಲ್ಲ ವಿಫಲವಾದವು. ಹೀಗಾಗಿ ಪಾಕಿಸ್ತಾನ ಮೈ ಪರಚಿಕೊಳ್ಳುತ್ತಿದೆ.

    ಪಾಕಿಸ್ತಾನ ಕಾಶ್ಮೀರದ ವಿಚಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಸಬೇಕೆಂದು ವಿಶ್ವಸಂಸ್ಥೆ ಮೊರೆ ಹೋಗಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಹ ಎರಡೂ ದೇಶಗಳ ಮಧ್ಯೆ ಸಂಚರಿಸುವ ರೈಲು ಹಾಗೂ ಬಸ್ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ.

  • ಪ್ರಿಯಾಂಕ ಚೋಪ್ರಾ ವಿರುದ್ಧ ವಿಶ್ವಸಂಸ್ಥೆಗೆ ದೂರು ಸಲ್ಲಿಸಿದ ಪಾಕ್

    ಪ್ರಿಯಾಂಕ ಚೋಪ್ರಾ ವಿರುದ್ಧ ವಿಶ್ವಸಂಸ್ಥೆಗೆ ದೂರು ಸಲ್ಲಿಸಿದ ಪಾಕ್

    ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ವಿರುದ್ಧ ವಿಶ್ವಸಂಸ್ಥೆಗೆ ಪಾಕಿಸ್ತಾನ ದೂರು ಸಲ್ಲಿಸಿದೆ.

    ಸದ್ಯ ಪ್ರಿಯಾಂಕ ಯೂನಿಸೆಫ್‍ನ ಸೌಹಾರ್ದಯುತ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಪ್ರಿಯಾಂಕರನ್ನು ರಾಯಭಾರಿ ಸ್ಥಾನದಿಂದ ತೆಗೆಯುವಂತೆ ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಝಾರಿ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ.

    ಪ್ರಿಯಾಂಕ ಚೋಪ್ರಾ ಅವರು ಕಾಶ್ಮೀರದ ಬಗ್ಗೆ ಭಾರತ ಸರ್ಕಾರ ಕೈಗೊಂಡಿರುವ ನಿರ್ಧಾರದ ಕುರಿತು ತಮ್ಮ ನಿಲುವನ್ನು ಬಹಿರಂಗವಾಗಿ ತಿಳಿಸಿದ್ದಾರೆ. ಭಾರತೀಯ ಸಚಿವರು ಪಾಕಿಸ್ತಾನಕ್ಕೆ ನೀಡಿರುವ ನ್ಯೂಕ್ಲಿಯರ್ ಬೆದರಿಕೆಯನ್ನು ಬೆಂಬಲಿಸಿದ್ದಾರೆ. ಈ ಎಲ್ಲ ವಿಚಾರಗಳು ಶಾಂತಿ ಹಾಗೂ ಸದ್ಭಾವನೆಗೆ ವಿರುದ್ಧವಾಗಿವೆ. ಅಲ್ಲದೆ ವಿಶ್ವಸಂಸ್ಥೆಯ ನಿಯಮಗಳಿಗೂ ವಿರುದ್ಧವಾಗಿವೆ. ಹೀಗಾಗಿ ಪ್ರಿಯಾಂಕ ಚೋಪ್ರಾ ಅವರನ್ನು ರಾಯಭಾರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಮಝಾರಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಇದನ್ನು ಓದಿ: ‘ಜೈ ಹಿಂದ್’ ಎಂದ ಪ್ರಿಯಾಂಕ ಚೋಪ್ರಾ ವಿರುದ್ಧ ಪಾಕ್ ಗರಂ

    ಫೆ.26ರಂದು ಬಾಲಾಕೋಟ್ ಮೇಲೆ ಭಾರತೀಯ ವಾಯುಪಡೆ ನಡೆಸಿದ ಏರ್ ಸ್ಟ್ರೈಕ್ ನಂತರ ಅದೇ ದಿನ ಅವರು ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ. ಭಾರತೀಯ ಯುದ್ಧ ವಿಮಾನಗಳು ಬಾಲಕೋಟ್‍ನ ಜೈಶ್-ಇ-ಮೊಹಮ್ಮದ್ ಸಂಘಟನೆಯ ಟೆರರಿಸ್ಟ್ ಕ್ಯಾಂಪ್ ಮೇಲೆ ದಾಳಿ ನಡೆಸಿ, ಉಗ್ರರ ಅಡಗುದಾಣಗಳನ್ನು ಧ್ವಂಸಗೊಳಿಸಿದ್ದವು. ಇದಕ್ಕೆ ಪಾಕ್ ಪ್ರತಿಕ್ರಿಯಿಸಿ, ಭಾರತೀಯ ವಾಯು ಸೇನೆ ಖಾಲಿ ಜಾಗದಲ್ಲಿ ಬಾಂಬ್ ಹಾಕಿದೆ ಎಂದು ತಿಳಿಸಿತ್ತು. ಈ ವೇಳೆ ಪ್ರಿಯಾಂಕಾ ಚೋಪ್ರಾ ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದರು.

  • 370 ವಿಧಿ ರದ್ದು- ಪಾಕ್ ಮನವಿಯಂತೆ ವಿಶ್ವಸಂಸ್ಥೆಯಲ್ಲಿ ರಹಸ್ಯ ಸಭೆ

    370 ವಿಧಿ ರದ್ದು- ಪಾಕ್ ಮನವಿಯಂತೆ ವಿಶ್ವಸಂಸ್ಥೆಯಲ್ಲಿ ರಹಸ್ಯ ಸಭೆ

    ನವದೆಹಲಿ: ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದೆ. ಈ ಸಂಬಂಧ ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಹಸ್ಯ ಸಭೆ ನಡೆಯಲಿದೆ.

    ಜಮ್ಮು ಮತ್ತು ಕಾಶ್ಮೀರ ವಿಚಾರ ತುಂಬಾ ಸೂಕ್ಷ್ಮವಾದ ವಿಚಾರವಾದ ಕಾರಣ. ಈ ವಿಚಾರ ಕುರಿತು ಆಗಸ್ಟ್ 16ರಂದು ನಾಲ್ಕು ಗೋಡೆಗಳ ಮಧ್ಯೆ ರಹಸ್ಯವಾಗಿ ಚರ್ಚಿಸಲಾಗುವುದು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷರು ಹೇಳಿದ್ದಾರೆ ಎನ್ನಲಾಗಿದೆ. ಇದನ್ನು ಓದಿ: ಕಾಶ್ಮೀರದ ವಿಶೇಷ ಸ್ಥಾನಮಾನ, ಅಧಿಕಾರ ರದ್ದು-ರಾಜ್ಯಸಭೆಯಲ್ಲಿ ಅಮಿತ್ ಶಾ ಘೋಷಣೆ

    ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ತುರ್ತು ಸಭೆ ಕರೆಯುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದಿರುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಅವರು ಹೇಳಿದ್ದಾರೆ. ಈ ಬೆನ್ನಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಹಸ್ಯ ಸಭೆ ನಡೆಸಲಾಗುತ್ತಿದೆ.