Tag: United Nations

  • ವಿಶ್ವ ಸಂಸ್ಥೆಯ ಶಾಂತಿ ಪಾಲಕರಾಗಿ ಕೊಡಗಿನ ಯೋಧರು

    ವಿಶ್ವ ಸಂಸ್ಥೆಯ ಶಾಂತಿ ಪಾಲಕರಾಗಿ ಕೊಡಗಿನ ಯೋಧರು

    ಮಡಿಕೇರಿ: ವಿಶ್ವ ಸಂಸ್ಥೆಯೂ ತನ್ನ ಸಂಯುಕ್ತ ರಾಷ್ಟ್ರದ ಅಡಿಯಲ್ಲಿ ಬರುವಂಥ ಕೆಲವೊಂದು ಸಣ್ಣ ದೇಶಗಳಿಗೆ ಆರ್ಥಿಕ ಮತ್ತು ರಕ್ಷಣಾತ್ಮಕ ನೆರವನ್ನು ತಲುಪಿಸಲು ಯುನೈಟೆಡ್ ನೇಶನ್ಸ್ ಫೋರ್ಸ್‍ ಅನ್ನು( UN forces) ಅಂತಹ ದೇಶದಲ್ಲಿ ನಿಯೋಜಿಸಲಾಗುತ್ತದೆ. ಇದೀಗ ಈ ಸೇನೆಯಲ್ಲಿ ಭಾರತದಿಂದ ಕೊಡಗಿನ ಯೋಧರು ಆಯ್ಕೆಯಾಗಿದ್ದು, ವಿಶ್ವ ಸಂಸ್ಥೆಯ ಶಾಂತಿ ಪಾಲಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

    ಸಂಯುಕ್ತ ರಾಷ್ಟ್ರಗಳಲ್ಲಿ ಬಲಿಷ್ಟ ಸೇನೆಗಳಿಂದ ಕೆಲವೊಂದು ಸೈನಿಕರನ್ನು ಆಯ್ಕೆ ಮಾಡಿ ಕೆಲ ತಿಂಗಳ ಕಾಲ ಯುನೈಟೆಡ್ ನೇಶನ್ಸ್  ಫೋರ್ಸ್‍ನಲ್ಲಿ ಕಾರ್ಯ ನಿರ್ವಹಿಸಲು ವಿದೇಶಕ್ಕೆ ಕಳುಹಿಸಲಾಗುತ್ತದೆ. ಇದೇ ರೀತಿ ಈ ಭಾರಿಯ ಯುನೈಟೆಡ್ ನೇಶನ್ಸ್ ಫೋರ್ಸ್‍ನಲ್ಲಿ ಭಾರತೀಯ ಸೇನೆಯಿಂದ ಕೆಲ ಯೋಧರು ಆಯ್ಕೆಯಾಗಿದ್ದಾರೆ. ಆಯ್ಕೆ ಆದವರಲ್ಲಿ ಹಲವರು ಕೊಡಗಿನ ಯೋಧರಾಗಿದ್ದಾರೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್ ಕ್ರೀಡಾಪಟುಗಳನ್ನು ಭೇಟಿ ಮಾಡಿ ಅಭಿನಂದಿಸಿದ ಪ್ರಧಾನಿ

    ಕೊಡಗಿನ ವೀರ ಯೋಧರಾದ, ಪೆಮ್ಮಡ ರವೀಂದ್ರ ಪಿ ಎಸ್, ಶಾಂತಿ ನಗರ ನೇಶನ್ಸ್ ಫೋನ್ನಂಪೇಟೆ, ಕರೋಟಿರ ಲೋಕೇಶ್ ಪಾಲಿಬೆಟ್ಟ, ವಿನೋದ್ ಕಾಳಪ್ಪ ಗಾಳಿಬೀಡು, ಸತೀಶ್ ವಿ.ದೊಡ್ಡಯ್ಯ ಶನಿವಾರಸಂತೆ, ಫೋನ್ನ ಚೆಟ್ಟೀರ ಪಳಂಗಪ್ಪ ಕಾಲೂರು ಮಡಿಕೇರಿ, ದಿನೇಶ್ ಪೂಜಾರಿ ಚಾಮುಂಡೇಶ್ವರಿ ನಗರ ಮಡಿಕೇರಿ, ದೀಕ್ಷಿತ್ ಶೆಟ್ಟಿ ಭಗವತಿ ನಗರ ಮಡಿಕೇರಿ,ಭರತ್ ಪೂಜಾರಿ ಕಗ್ಗೊಡು ಮಡಿಕೇರಿ ಇವರುಗಳು ಇದೇ ಸೆಪ್ಟಂಬರ್ ನಲ್ಲಿ ಲೆಬನಾನ್ ದೇಶದಲ್ಲಿ ನಡೆಯುವ ಯುನೈಟೆಡ್ ನೇಶನ್ಸ್ ಪೀಸ್ ಕೀಪಿಂಗ್ ಕ್ಯಾಂಪ್ (united Nations peace keeping camp) ನಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

  • ಪ್ರತಿ ವರ್ಷ ಒಬ್ಬ ವ್ಯಕ್ತಿಯಿಂದ 50 ಕೆ.ಜಿ. ಆಹಾರ ಕಸಕ್ಕೆ- 931 ಮಿಲಿಯನ್ ಮೆಟ್ರಿಕ್ ಟನ್ ಆಹಾರ ವ್ಯರ್ಥ

    ಪ್ರತಿ ವರ್ಷ ಒಬ್ಬ ವ್ಯಕ್ತಿಯಿಂದ 50 ಕೆ.ಜಿ. ಆಹಾರ ಕಸಕ್ಕೆ- 931 ಮಿಲಿಯನ್ ಮೆಟ್ರಿಕ್ ಟನ್ ಆಹಾರ ವ್ಯರ್ಥ

    – ಊಟ ಮಾಡುವ ಶೇ.17ರಷ್ಟು ಆಹಾರ ವ್ಯರ್ಥ

    ನವದೆಹಲಿ: ಭಾರತದಲ್ಲಿ ಪ್ರತಿ ವರ್ಷ ಪ್ರತಿಯೊಬ್ಬ ವ್ಯಕ್ತಿಯಿಂದ 50 ಕೆ.ಜಿ. ಆಹಾರವನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ಯುನೈಟೆಡ್ ನೇಷನ್ಸ್ ಎನ್ವರಾನ್ಮೆಂಟ್ ಪ್ರೋಗ್ರಾಮ್ಸ್ ಫುಡ್ ವೇಸ್ಟ್ ಇಂಡೆಕ್ಸ್-2021ರ ವರದಿಯಲ್ಲಿ ಬಹಿರಂಗವಾಗಿದೆ.

    ಹೊಸ ಫುಡ್ ವೇಸ್ಟ್ ಇಂಡೆಕ್ಸ್ ರಿಪೋರ್ಟ್ ಬಿಡುಗಡೆಯಾಗಿದ್ದು, ದೇಶದಲ್ಲಿ ಪ್ರತಿಯೊಬ್ಬರಿಂದ ಪ್ರತಿ ವರ್ಷ 50 ಕೆ.ಜಿ. ಆಹಾರ ವ್ಯರ್ಥವಾಗುತ್ತಿದ್ದು, ಸುಮಾರು 931 ಮಿಲಿಯನ್ ಮೆಟ್ರಿಕ್ ಟನ್‍ನಷ್ಟು ಆಹಾರವನ್ನು ಕಸಕ್ಕೆ ಸುರಿಯಲಾಗುತ್ತಿದೆ. ಅಂದರೆ 2019ರಲ್ಲಿ ಸೇವಿಸಲು ಒಟ್ಟು ಲಭ್ಯವಿದ್ದ ಆಹಾರದಲ್ಲಿ ಶೇ.17ರಷ್ಟನ್ನು ವ್ಯರ್ಥ ಮಾಡಲಾಗಿದೆ. ಮನೆ, ಸಂಸ್ಥೆ, ರೀಟೇಲ್ ಔಟ್‍ಲೆಟ್ಸ್ ಹಾಗೂ ರೆಸ್ಟೋರೆಂಟ್‍ಗಳಿಂದ ಆಹಾರವನ್ನು ಕಸಕ್ಕೆ ಸುರಿಯಲಾಗುತ್ತಿದೆ. ಮನೆಯ ಹಂತದಲ್ಲಿ ಪ್ರತಿ ವರ್ಷ ಗ್ರಾಹಕ ಮಟ್ಟದ ಆಹಾರದಲ್ಲಿ ಶೇ.61ರಷ್ಟು ಡಸ್ಟ್‍ಬಿನ್ ಸೇರುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಆದಾಯ ಮಟ್ಟವನ್ನು ಲೆಕ್ಕಿಸದೆ ಪ್ರತಿ ದೇಶದಲ್ಲಿಯೂ ಆಹಾರ ವ್ಯರ್ಥವಾಗುತ್ತಿದ್ದು, ದಕ್ಷಿಣ ಏಷ್ಯಾದ ರಾಷ್ಟ್ರಗಳಾದ ಭಾರತದಲ್ಲಿ ಪ್ರತಿ ವರ್ಷ ಮನೆಯ ಹಂತದಲ್ಲಿ ಪ್ರತಿಯೊಬ್ಬ ವ್ಯಕ್ತಿಯಿಂದ 50 ಕೆ.ಜಿ.ಆಹಾರ ವ್ಯರ್ಥವಾಗುತ್ತಿದೆ. 65 ಕೆ.ಜಿ. ಬಾಂಗ್ಲಾದೇಶ, 74 ಕೆ.ಜಿ.ಪಾಕಿಸ್ತಾನ, 76 ಕೆ.ಜಿ.ಶ್ರೀಲಂಕಾ, 79 ಕಿ.ಜಿ.ನೇಪಾಳ ಹಾಗೂ ಅಫ್ಘಾನಿಸ್ಥಾನದಲ್ಲಿ 82 ಕೆ.ಜಿ.ಯಷ್ಟು ಆಹಾರವನ್ನು ಕಸಕ್ಕೆ ಹಾಕಲಾಗುತ್ತಿದೆ ಎಂಬುದು ವರದಿಯಲ್ಲಿ ಬಹಿರಂಗವಾಗಿದೆ.

    ಇದೆಲ್ಲದರ ಮಧ್ಯೆ ಕೋಟ್ಯಂತರ ಜನ ಹಸಿವಿನಿಂದ ಬಳುತ್ತಿದ್ದಾರೆ ಎಂಬುದು ಸಹ ಬೇಸರದ ಸಂಗತಿಯಾಗಿದೆ. ವಿಶ್ವಸಂಸ್ಥೆಯ ಲೆಕ್ಕಾಚಾರದ ಪ್ರಕಾರ 2019ರಲ್ಲಿ ಸುಮಾರು 690 ಮಿಲಿಯನ್ ಜನ ಹಸಿವಿನಿಂದ ಬಳಲಿದ್ದಾರೆ. ಕೊರೊನಾ ಸಮಯದಲ್ಲಿ ಇದರ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.

  • ಗಾಂಜಾ ಅಪಾಯಕಾರಿ ಮಾದಕ ವಸ್ತುವಲ್ಲ- ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಬೆಂಬಲ

    ಗಾಂಜಾ ಅಪಾಯಕಾರಿ ಮಾದಕ ವಸ್ತುವಲ್ಲ- ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಬೆಂಬಲ

    ನವದೆಹಲಿ: ಗಾಂಜಾ ಹಾಗೂ ಗಾಂಜಾ ಅಂಟನ್ನು ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಹೊರಗಿಡುವ ಸಂಬಂಧ ವಿಶ್ವಸಂಸ್ಥೆ ಮಹತ್ವದ ನಿರ್ಧಾರ ಕೈಗೊಂಡಿದೆ.

    ಮಾದಕ ದ್ರವ್ಯ ವಸ್ತುಗಳಿಗೆ ಸಂಬಂಧಿಸಿದ ಆಯೋಗದ ಅಧಿವೇಶನ ಡಿಸೆಂಬರ್ 2ರಿಂದ 4ರವರೆಗೆ ನಡೆಯಿತು. ಈ ಅಧಿವೇಶನದಲ್ಲಿ ಭಾರತ ಸೇರಿದಂತೆ 27 ದೇಶಗಳು ಪರವಾಗಿ ಮತ ಹಾಕಿದ್ದರಿಂದ ನಿರ್ಣಯ ಅಂಗೀಕಾರವಾಗಿದೆ.

    ಬೆಂಬಲ ನೀಡಿದದವರು ಯಾರು?
    ಮಾದಕ ವಸ್ತುಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಆಯೋಗದ 1961ರ ಒಪ್ಪಂದದ 4ನೇ ಅನುಚ್ಛೇದದಡಿ ಹೆರಾಯಿನ್‌ನಂತಹ ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಲ್ಲಿ ಗಾಂಜಾ ಇತ್ತು. ಈ ಪಟ್ಟಿಯಿಂದ ಗಾಂಜಾವನ್ನು ಹೊರಗಿಡಲು 53 ಸದಸ್ಯ ರಾಷ್ಟ್ರಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವು.

    ಭಾರತ, ಅಮೆರಿಕ, ಯುರೋಪ್‌ ಒಕ್ಕೂಟದ ಬಹುತೇಕ ದೇಶಗಳು ಸೇರಿ 27 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾವಣೆ ಮಾಡಿದ್ದರೆ ಚೀನಾ, ಪಾಕಿಸ್ತಾನ, ರಷ್ಯಾ ಸೇರಿ 25 ದೇಶಗಳು ವಿರುದ್ಧ ಹಾಕಿದವು. ಉಕ್ರೇನ್‌ ತಟಸ್ಥವಾಗಿ ನಿಂತಿತು.

    ಏನು ಲಾಭ?
    ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಲ್ಲಿದ್ದ ಕಾರಣ ಗಾಂಜಾವನ್ನು ಔಷಧಿ ಹಾಗೂ ಚಿಕಿತ್ಸೆಗೆ ಬಳಸಲು ಸಾಧ್ಯವಾಗಿರಲಿಲ್ಲ. ವಿಶ್ವಸಂಸ್ಥೆ ಈ ಪಟ್ಟಿಯಿಂದ ಗಾಂಜಾವನ್ನು ಹೊರಗಡೆ ಇಟ್ಟ ಕಾರಣ ಇನ್ನು ಮುಂದೆ ಬಳಸಬಹುದಾಗಿದೆ.

    ಭಾರತದಲ್ಲಿ ಮುಂದೇನು?
    ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ(ಎನ್‌ಡಿಪಿಎಸ್‌) 1985ರ ಪ್ರಕಾರ ಪ್ರಕಾರ ಗಾಂಜಾ ಉತ್ಪಾದನೆ, ಮಾರಾಟ, ಖರೀದಿ, ವಶದದಲ್ಲಿ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಆರೋಪ ಸಾಬೀತಾದರೆ 6 ತಿಂಗಳು ಜೈಲು ಮತ್ತು ಗರಿಷ್ಟ 10 ಸಾವಿರ ರೂ. ದಂಡ ವಿಧಿಸಬಹುದಾಗಿದೆ.

    ಎನ್‌ಡಿಪಿಎಸ್‌ ಕಾಯ್ದೆಯ ಅಡಿಯಲ್ಲಿ ಈಗಾಗಲೇ ಸ್ಯಾಂಡಲ್‌ವುಡ್‌, ಬಾಲಿವುಡ್‌ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದ್ದು ಅರೆಸ್ಟ್‌ ಮಾಡಲಾಗಿದೆ. ಈಗ ಭಾರತ ನಿರ್ಣಯದ ಪರವಾಗಿ ಮತದಾನ ಮಾಡಿದ್ದು ಮುಂದಿನ ದಿನಗಳಲ್ಲಿ ಕಠಿಣವಾಗಿರುವ ಎನ್‌ಡಿಪಿಎಸ್‌ ಕಾಯ್ದೆ ಮೃದುವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಈ ವಿಚಾರದದ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಹೇರಾಯಿನ್‌ ಇರುವ ಪಟ್ಟಿಯಲ್ಲಿ ಗಾಂಜಾವನ್ನು ಸೇರಿಸಿದ್ದು ತಪ್ಪು. ಗಾಂಜಾವನ್ನು ಸೇವಿಸಿ ಸಮಸ್ಯೆಯಾಗಿದೆ ಎಂದು ಹೇಳಿಕೊಳ್ಳುವ ಮಂದಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅಫೀಮು ಸೇವನೆಯಿಂದ ಹೆಚ್ಚಿನ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ.

    ಭಾರತದಲ್ಲಿ ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಗಾಂಜಾವನ್ನ ಹೊರಗಡೆ ಇಡಬೇಕಾದರೆ ಡ್ರಗ್‌ ಮತ್ತು ಕಾಸ್ಮೆಟಿಕ್‌ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಯಾವ ನಿರ್ಧಾರವನ್ನು ಪ್ರಕಟಿಸುತ್ತದೆ ಎಂಬ ಕುತೂಹಲ ಮೂಡಿದೆ.

  • ಸೋನು ಸೂದ್ ಲೋಕೋಪಕಾರಿ ಕಾರ್ಯಕ್ಕೆ ಪ್ರಶಸ್ತಿ ನೀಡಿ ಗೌರವಿಸಿದ ವಿಶ್ವಸಂಸ್ಥೆ

    ಸೋನು ಸೂದ್ ಲೋಕೋಪಕಾರಿ ಕಾರ್ಯಕ್ಕೆ ಪ್ರಶಸ್ತಿ ನೀಡಿ ಗೌರವಿಸಿದ ವಿಶ್ವಸಂಸ್ಥೆ

    ಮುಂಬೈ: ಲಾಕ್‍ಡೌನ್ ಸಮಯದಲ್ಲಿ ಬಾಲಿವುಡ್ ನಟ ಸೋನು ಸೂದ್ ಅಪಾರ ಜನರಿಗೆ ಸಹಾಯ ಮಾಡಿದ್ದಾರೆ. ಇಂದಿಗೂ ತಮ್ಮ ಬಳಿ ಸಹಾಯ ಕೇಳುವ ಮಂದಿಗೆ ಕೂಡಲೇ ಸ್ಪಂದಿಸುತ್ತಿದ್ದಾರೆ. ಹೀಗಾಗಿ ಅವರ ಲೋಕೋಪಕಾರಿ ಕೆಲಸಕ್ಕಾಗಿ ಅವರಿಗೆ ವಿಶ್ವಸಂಸ್ಥೆ ಪ್ರತಿಷ್ಠಿತ ಎಸ್‍ಡಿಜಿ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ. ಇದನ್ನೂ ಓದಿ: ಕೊಟ್ಟ ಮಾತಿನಂತೆ ನಡೆದ ಸೋನು ಸೂದ್ – ಯಾದಗಿರಿಯ ಕುಟುಂಬಕ್ಕೆ ಬಂತು ದಿನಸಿ

    ಸೋನು ಸೂದ್ ಅವರಿಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‍ಡಿಪಿ)ದ ಪ್ರತಿಷ್ಠಿತ ಎಸ್‍ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿಯನ್ನು ನೀಡಲಾಗಿದೆ. ಸೋಮವಾರ ಸಂಜೆ ನಡೆದ ಸಮಾರಂಭ ಕಾರ್ಯಕ್ರಮದಲ್ಲಿ ಸೋನ್ ಸೂದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ತಮಗೆ ನೀಡಿದ ಗೌರವದ ಬಗ್ಗೆ ಸೋನು ಸೂದ್ ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೀವು ನಿಜಕ್ಕೂ ದೇವರ ತದ್ರೂಪಿ – ಕೊಟ್ಟ ಮಾತಿನಂತೆ ಶಸ್ತ್ರಚಿಕಿತ್ಸೆಗೆ ಸೋನು ಸೂದ್ ಸಹಾಯ

    ಯುಎನ್‍ಡಿಪಿ ನನ್ನ ಪ್ರಯತ್ನಗಳಿಗೆ ಸಂಪೂರ್ಣವಾಗಿ ಬೆಂಬಲಿಸಿದೆ. ಇದು ಅಪರೂಪದ ಗೌರವವಾಗಿದೆ. ಯುಎನ್ ಮಾನ್ಯತೆ ಬಹಳ ವಿಶೇಷವಾಗಿದೆ. ನಾನು ಯಾವುದೇ ನಿರೀಕ್ಷೆಗಳಿಲ್ಲದೆ ನನ್ನ ದೇಶವಾಸಿಗಳಿಗೆ ಅಲ್ಪಸ್ವಲ್ಪ ಕಾರ್ಯವನ್ನು ಮಾಡಿದ್ದೇನೆ. ಆದರೆ ಅದನ್ನು ಗುರುತಿಸಿ ಯುಎನ್‍ಡಿಪಿ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ. ನಿಜಕ್ಕೂ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.

    ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದವರಿಗೆ ಈ ಪ್ರಶಸ್ತಿಯ ನೀಡಿ ಗೌರವಿಸಲಾಗುತ್ತದೆ. ಈ ಹಿಂದೆ ಏಂಜಲೀನಾ ಜೋಲಿ, ಡೇವಿಡ್ ಬೆಕ್ಹ್ಯಾಮ್, ಲಿಯೊನಾರ್ಡೊ ಡಿಕಾಪ್ರಿಯೊ, ಎಮ್ಮಾ ವ್ಯಾಟ್ಸನ್ ಮತ್ತು ಲಿಯಾಮ್ ನೀಸನ್ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದರು.

    ಕೊರೊನಾ ಹಿನ್ನೆಲೆ ಲಾಕ್‍ಡೌನ್ ಮಾಡಿದ ಸಂದರ್ಭದಲ್ಲಿ ಸುಮಾರು 45,000ಕ್ಕೂ ಹೆಚ್ಚು ಜನರಿಗೆ ಆಹಾರ ಮತ್ತು ಆಶ್ರಯ ವ್ಯವಸ್ಥೆಗಳನ್ನು ಒದಗಿಸಿದ್ದರು. ಜೊತೆಗೆ 15,000ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಮನೆಗಳಿಗೆ ತಲುಪಲು ಸಹಾಯ ಮಾಡಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದಿದ್ದರು. ಈ ಮೂಲಕ ತಮ್ಮ ಸ್ವಂತ ಖರ್ಚಿನಲ್ಲಿ ಒಟ್ಟು ಹತ್ತು ಬಸ್‍ಗಳ ವ್ಯವಸ್ಥೆ ಮಾಡಿ ಥಾಣೆಯಿಂದ ಕಲಬುರಗಿಗೆ ತಾವೇ ಮುಂದೆ ನಿಂತು ಕಳುಹಿಸಿಕೊಟ್ಟಿದ್ದರು.

    ಅಷ್ಟೇ ಅಲ್ಲದೇ ಸೋನು ಸೂದ್ ವೈಯಕ್ತಿಕವಾಗಿ ಸೋಶಿಯಲ್ ಮೀಡಿಯಾದ ಮೂಲಕ ಸಹಾಯವನ್ನು ಕೋರಿ ಕಳುಹಿಸಿದ ಕರೆಗಳು ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿದ್ದರು. ಇದಲ್ಲದೆ ಲಾಕ್‍ಡೌನ್ ಸಮಯದಲ್ಲಿ ತಮ್ಮ ಬಳಿ ಸಹಾಯ ಕೇಳಿದ ಬಡ ಜನರಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿದ್ದ ಅನೇಕರಿಗೆ ಉದ್ಯೋಗಾವಕಾಶವನ್ನು ನೀಡಿದ್ದಾರೆ.

    ಲಾಕ್‍ಡೌನ್ ವೇಳೆ ಒಡಿಶಾದ ಸುಮಾರು 177 ಯುವತಿಯರು ಕೇರಳದಲ್ಲಿ ಸಿಲುಕಿಕೊಂಡಿದ್ದರು. ಈ ಯುವತಿಯರ ಬಗ್ಗೆ ಭುವನೇಶ್ವರದಲ್ಲಿರುವ ಸ್ನೇಹಿತರೊಬ್ಬರ ಮೂಲಕ ಸೋನು ಸೂದ್ ತಿಳಿದುಕೊಂಡಿದ್ದರು. ತಕ್ಷಣ ವಿಮಾನ ನಿಲ್ದಾಣಗಳನ್ನು ತೆರೆಯಲು ಕೇರಳ ಮತ್ತು ಒಡಿಶಾ ಸರ್ಕಾರಗಳಿಂದ ಅನೇಕ ಅನುಮತಿಗಳನ್ನು ಪಡೆದುಕೊಂಡಿದ್ದರು. ಬಳಿಕ ಸೋನು ಸೂದ್ ಯುವತಿಯರ ರಕ್ಷಣೆ ಮಾಡಿದ್ದು, ಅಲ್ಲಿಂದ ಅವರನ್ನು ವೈಮಾನಿಕ ಮಾರ್ಗದ ಮೂಲಕ ಒಡಿಶಾಕ್ಕೆ ಕಳುಹಿಸಿದ್ದರು.

    ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ಪದ್ಮಾಗೆ ಮೂರು ಗಂಡು ಮಕ್ಕಳು ಜನಿಸಿದ್ದವು. ಕಡು ಬಡತನದಲ್ಲಿದ್ದ ಈ ಕುಟುಂಬ ಪಬ್ಲಿಕ್ ಟಿವಿ ಮೂಲಕ ಸಹಾಯ ಹಸ್ತವನ್ನು ಚಾಚಿದ್ದರು, ಈ ಸುದ್ದಿಯನ್ನು ಯಾದಗಿರಿಯ ಮಲ್ಲಿಕಾರ್ಜುನ ರೆಡ್ಡಿಯವರು ನಟ ಸೋನು ಸೂದ್‍ಗೆ ಕಳುಹಿಸಿದ್ದರು. ಸುದ್ದಿ ನೋಡಿದ ಸೋನು ಸೂದ್ ಪದ್ಮಾ ಕುಟುಂಬಕ್ಕೆ ರೇಷನ್ ನೀಡುವ ಭರವಸೆ ನೀಡಿದ್ದರು. ಭರವಸೆ ನೀಡಿದ ಎರಡೇ ದಿನಕ್ಕೆ ಮುಂಬೈಯಿಂದ ದಿನಸಿ ಕಳುಹಿಸಿದ್ದರು.

  • ಮಾನವೀಯತೆಯ ಶತ್ರುಗಳ ವಿರುದ್ಧ ಧ್ವನಿ ಎತ್ತಲು ಭಾರತ ಹಿಂಜರಿಯಲ್ಲ- ಚೀನಾ, ಪಾಕ್‍ಗೆ ಮೋದಿ ಟಾಂಗ್

    ಮಾನವೀಯತೆಯ ಶತ್ರುಗಳ ವಿರುದ್ಧ ಧ್ವನಿ ಎತ್ತಲು ಭಾರತ ಹಿಂಜರಿಯಲ್ಲ- ಚೀನಾ, ಪಾಕ್‍ಗೆ ಮೋದಿ ಟಾಂಗ್

    ನವದೆಹಲಿ: ಭಾರತ ವಸುದೈವ ಕುಟುಂಬ ಎಂಬ ನಿಯಮ ಪಾಲಿಸುತ್ತದೆ. ಹೀಗಾಗಿ ಇಡೀ ವಿಶ್ವವನ್ನೇ ಒಂದು ಕುಟುಂಬವೆಂದು ಪರಿಗಣಿಸಿದೆ. ಶಾಂತಿಯನ್ನು ಕಾಪಾಡುವುದು ನಮ್ಮ ಉದ್ದೇಶವಾಗಿದೆ. ಅದೇ ರೀತಿ ಮನವೀಯತೆಯ ಶತ್ರುಗಳ ವಿರುದ್ಧ ಧ್ವನಿ ಎತ್ತಲು ಹಿಂಜರಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವೈರಿ ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ವಿಶ್ವಸಂಸ್ಥೆಯ 75ನೇ ಸಾಮಾನ್ಯ ಅಧಿವೇಶನ(ಯುಎನ್‍ಜಿಎ)ದಲ್ಲಿ ಮಾತನಾಡಿದ ಅವರು, ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ನಾವೂ ಒಬ್ಬರು ಎಂಬುದರ ಕುರಿತು ಭಾರತಕ್ಕೆ ಹೆಮ್ಮೆ ಇದೆ. ಈ ಐತಿಹಾಸಿಕ ಸಂದರ್ಭದಲ್ಲಿ ಭಾರತದ 130 ಕೋಟಿ ಜನರ ಭಾವನೆಗಳನ್ನು ಹಂಚಿಕೊಳ್ಳಲು ಜಾಗತಿಕ ವೇದಿಕೆಗೆ ಬಂದಿದ್ದೇನೆ. ವಿಶ್ವಸಂಸ್ಥೆಯ ಸುಧಾರಣೆಗಳು ಪೂರ್ಣಗೊಳ್ಳುವ ಪ್ರಕ್ರಿಯೆಗಾಗಿ ಭಾರತದ ಜನ ತುಂಬಾ ಸಮಯದಿಂದ ಕಾಯುತ್ತಿದ್ದಾರೆ ಎಂದು ಇದೇ ವೇಳೆ ಹೇಳಿದರು.

    ಕಳೆದ 75 ವರ್ಷಗಳಲ್ಲಿ ವಿಶ್ವಸಂಸ್ಥೆ ಕಾರ್ಯಕ್ಷಮತೆ ಬಗ್ಗೆ ವಸ್ತುನಿಷ್ಠ ಮೌಲ್ಯಮಾಪನ ಮಾಡಿದ್ದೇವೆ. ಹಲವು ನಾಕ್ಷತ್ರಿಕ ಸಾಧನೆಗಳನ್ನು ನೋಡಿದ್ದೇವೆ. ಆದರೆ ಇದೇ ಸಮಯದಲ್ಲಿ ವಿಶ್ವಸಂಸ್ಥೆಯ ಕೆಲಸದ ಬಗ್ಗೆ ಗಂಭೀರವಾದ ಆತ್ಮಾವಲೋಕನದ ಅಗತ್ಯವಿದೆ. ಕಳೆದ 8-9 ತಿಂಗಳಿಂದ ಇಡೀ ಜಗತ್ತು ಕೊರೊನಾ ವೈರಸ್ ಎದುರಿಸುತ್ತಿದೆ. ಸಾಂಕ್ರಾಮಿಕ ರೋಗದ ವಿರುದ್ಧದ ಜಂಟಿ ಹೋರಾಟದಲ್ಲಿ ವಿಶ್ವಸಂಸ್ಥೆ ಎಲ್ಲಿದೆ? ಇದರ ಪರಿಣಾಮಕಾರಿ ಪ್ರತಿಕ್ರಿಯೆ ಎಲ್ಲಿದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

    ವಿಶ್ವಸಂಸ್ಥೆಯ ಸುಧಾರಣೆಗಳು ಪೂರ್ಣಗೊಳ್ಳುವುದನ್ನು ಭಾರತ ತುಂಬಾ ಸಮಯದಿಂದ ಕಾಯುತ್ತಿದೆ. ಈ ಸುಧಾರಣಾ ಪ್ರಕ್ರಿಯೆ ಕುರಿತು ಯಾವಾಗ ತಾರ್ಕಿಕ ತೀರ್ಮಾನ ಕೈಗೊಳ್ಳುತ್ತದೆ ಎಂದು ಭಾರತದ ಜನತೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವಸಂಸ್ಥೆಯ ನಿರ್ಧಾರ ಕೈಗೊಳ್ಳುವ ವಿಭಾಗದಿಂದ ಭಾರತವನ್ನು ಇನ್ನೂ ಎಷ್ಟು ದಿನ ದೂರವಿಡಲಾಗುವುದು ಎಂದು ಶಾಶ್ವತ ಸದಸ್ಯತ್ವದ ಕುರಿತು ಮೋದಿ ಗುಡುಗಿದ್ದಾರೆ.

    ನಾವು ಬಲಶಾಲಿಯಾಗಿದ್ದಾಗ ಎಂದಿಗೂ ಜಗತ್ತಿಗೆ ಬೆದರಿಕೆ ಹಾಕಿಲ್ಲ. ಅದೇ ರೀತಿ ದುರ್ಬಲರಾಗಿದ್ದಾಗ ಸಹ ಎಂದೂ ವಿಶ್ವಕ್ಕೆ ಹೊರೆಯಾಗಿಲ್ಲ. ಒಂದು ದೇಶದಲ್ಲಿ ಆಗುತ್ತಿರುವ ಪರಿವರ್ತನೆ, ಬದಲಾವಣೆಗಳು ವಿಶ್ವದ ಬಹುಪಾಲು ಭಾಗದ ಮೇಲೆ ಪರಿಣಾಮ ಬೀರುವಾಗ ಒಂದು ದೇಶ ಎಷ್ಟು ಸಮಯ ಕಾಯಬೇಕು. ಭಾರತವು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ಧೈರ್ಯಶಾಲಿ ಸೈನಿಕರನ್ನು ಕಳೆದುಕೊಂಡಿದೆ. ಇಂದು ಪ್ರತಿಯೊಬ್ಬ ಭಾರತೀಯನು ಯುಎನ್‍ಗೆ ಭಾರತದ ಕೊಡುಗೆಯನ್ನು ನೋಡಿದಾಗ ವಿಶ್ವಸಂಸ್ಥೆಯಲ್ಲಿ ಭಾರತದ ವಿಸ್ತೃತ ಪಾತ್ರವನ್ನು ಆಶಿಸುತ್ತಿದ್ದಾನೆ ಎಂದು ಮೋದಿ ಹೇಳಿದ್ದಾರೆ.

  • ಪಾಕ್ ನಮ್ಮನ್ನು ಪ್ರಾಣಿಗಳ ರೀತಿ ನೋಡಿಕೊಳ್ತಿದೆ- ವಿಶ್ವಸಂಸ್ಥೆಯಲ್ಲಿ ಪಿಒಕೆ ನಾಯಕ ಅಳಲು

    ಪಾಕ್ ನಮ್ಮನ್ನು ಪ್ರಾಣಿಗಳ ರೀತಿ ನೋಡಿಕೊಳ್ತಿದೆ- ವಿಶ್ವಸಂಸ್ಥೆಯಲ್ಲಿ ಪಿಒಕೆ ನಾಯಕ ಅಳಲು

    – ಪಿಒಕೆಯಲ್ಲಿ ಯುವಕರನ್ನು ಯುದ್ಧಕ್ಕೆ ತಯಾರಿ ಮಾಡಲಾಗುತ್ತಿದೆ
    – ಪಾಕ್ ಭಯೋತ್ಪಾದಕ ಚಟುವಟಿಕೆಯನ್ನು ಜೀವಂತವಾಗಿರಿಸಿದೆ

    ಜಿನೀವಾ: ಜಮ್ಮು ಕಾಶ್ಮೀರದಲ್ಲಿನ ಜನರ ಸ್ವಾತಂತ್ರ್ಯವನ್ನು ಭಾರತ ಕಿತ್ತುಕೊಂಡಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಲಾಗಿದೆ ಎಂದು ಬೊಬ್ಬೆ ಹಾಕುವ ಪಾಕಿಸ್ತಾನದ ಬಣ್ಣ ಇದೀಗ ಬಯಲಾಗಿದೆ. ವಿಶ್ವ ಸಂಸ್ಥೆಯ ಸಭೆಯಲ್ಲಿ ಸ್ವತಃ ಪಿಒಕೆ ನಾಯಕ ಈ ಆರೋಪ ಮಾಡಿದ್ದು, ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪಿಒಕೆ ಜನರನ್ನು ಪ್ರಾಣಿಗಳ ರೀತಿ ನಡೆಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕಾರ್ಯಕರ್ತ ಸಜದ್ ರಾಜಾ ಆರೋಪಿಸಿದ್ದಾರೆ.

    ಸ್ವಿಟ್ಜರ್ಲೆಂಡ್‍ನ ಜಿನೀವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 45ನೇ ಅಧಿವೇಶನದಲ್ಲಿ ಅವರು ಪಾಕಿಸ್ತಾನದ ಬಣ್ಣವನ್ನು ಬಯಲು ಮಾಡಿದ್ದಾರೆ. ಅಲ್ಲದೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ರಾಜಕೀಯ, ನಾಗರಿಕ ಹಾಗೂ ಸಾಂವಿಧಾನಿಕ ಹಕ್ಕಗಳನ್ನು ಮರು ಸ್ಥಾಪಿಸಲು ಸಹಾಯ ಮಾಡುವಂತೆ ವಿಶ್ವಸಂಸ್ಥೆಗೆ ಕೇಳಿಕೊಂಡಿದ್ದಾರೆ. ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪಿಒಕೆ ಪ್ರದೇಶದ ನಾಗರಿಕರನ್ನು ಪ್ರಾಣಿಗಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

    ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಜನರಾದ ನಾವು ಮಂಡಳಿಯನ್ನು ಕೇಳಿಕೊಳ್ಳುವುದೇನೆಂದರೆ, ಪಾಕಿಸ್ತಾನ ಪ್ರಾಣಿಗಳ ರೀತಿ ನೋಡಿಕೊಳ್ಳುತ್ತಿರುವುದನ್ನು ತಡೆಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ. ಪಿಒಕೆ ಚುನಾವಣಾ ಕಾಯ್ದೆ-2020 ನಮ್ಮ ಎಲ್ಲ ಸಾಂವಿಧಾನಿಕ, ನಾಗರಿಕ ಹಾಗೂ ರಾಜಕೀಯ ಹಕ್ಕನ್ನು ಕಿತ್ತುಕೊಂಡಿದೆ. ಪಾಕಿಸ್ತಾನದ ಪಿಒಕೆ ಮೇಲಿನ ಹಸ್ತಕ್ಷೇಪವನ್ನು ವಿರೋಧಿಸುವ ನಮ್ಮ ನಡೆಯನ್ನು ವಿಶ್ವಸಂಸ್ಥೆಯ ನಿರ್ಣಯಗಳ ಉಲ್ಲಂಘನೆಯಲ್ಲಿ ರಾಜ್ಯ ವಿರೋಧಿ ಎಂದು ಘೋಷಿಸಲಾಗಿದೆ ಎಂದು ರಾಷ್ಟ್ರೀಯ ಸಮಾನತೆ ಪಕ್ಷದ ಅಧ್ಯಕ್ಷ ಸಜದ್ ರಾಜಾ ಅವರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ(ಯುಎನ್‍ಎಚ್‍ಆರ್‍ಸಿ) ಮನವಿ ಸಲ್ಲಿಸುತ್ತಿದ್ದಂತೆ ಪಿಒಕೆ ಕಾರ್ಯಕರ್ತ ಕಣ್ಣೀರು ಹಾಕಿದ್ದಾರೆ. ನಮ್ಮ ಸ್ವಂತ ಮನೆಯನ್ನು ರಕ್ಷಿಸಿಕೊಳ್ಳುತ್ತಿರುವುದಕ್ಕೆ ನಮ್ಮನ್ನು ದೇಶದ್ರೋಹಿಗಳಾಗಿ ಪರಿಗಣಿಸಲಾಗಿದೆ. ನಮ್ಮ ರಾಜಕೀಯ ಚಟುವಟಿಕೆಗಳನ್ನು ಕಾನೂನು ಬಾಹಿರವೆಂದು ಘೋಷಿಸಿದ್ದು, ಈ ಕಾಯ್ದೆಯ ಮೂಲಕ ನಮ್ಮ ಜನರನ್ನು ಹತ್ಯೆ ಮಾಡಲು ಪಾಕಿಸ್ತಾನ ಸೈನ್ಯಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದ್ದಾರೆ.

    ಜಮ್ಮು ಕಾಶ್ಮೀರದ ಗಡಿಯ ಎರಡೂ ಬದಿಗಳಲ್ಲಿರುವ ಯುವ ಸಮೂಹವನ್ನು ಅಧಿಕಾರಿಗಳು ಮೈಂಡ್ ವಾಶ್ ಮಾಡುವ ಮೂಲಕ ಭಾರತದೊಂದಿಗೆ ಪ್ರಾಕ್ಸಿ ಯುದ್ಧ ಮಾಡಲು ಫಿರಂಗಿಗೆ ಆಹಾರವನ್ನಾಗಿಸುತ್ತಿದ್ದಾರೆ. ಪಾಕಿಸ್ತಾನ ಪಿಒಕೆಯಿಂದ ಭಯೋತ್ಪಾದಕ ಶಿಬಿರಗಳನ್ನು ನಡೆಸುತ್ತಲೇ ಇದೆ ಎಂಬ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ.

    ಪಾಕಿಸ್ತಾನ ಏಜೆನ್ಸಿಗಳಿಂದಾಗಿ ಕಣ್ಮರೆಯಾಗುತ್ತಿರುವ ಸಿಂಧಿ ಜನರನ್ನು ರಕ್ಷಿಸುವ ಜವಾಬ್ದಾರಿಯನ್ನು ವಿಶ್ವಸಂಸ್ಥೆ ಪೂರೈಸಬೇಕು. ಪಾಕಿಸ್ತಾನ ಸರ್ಕಾರವನ್ನು ಹೊಣೆಗಾರರನ್ನಾಗಿಸಿ ಅಪರಾಧಿಗಳನ್ನು ನ್ಯಾಯಾಲಯಕ್ಕೆ ತರಬೇಕು. ಕಳೆದ ಮೂರು ತಿಂಗಳಲ್ಲಿ 60ಕ್ಕೂ ಹೆಚ್ಚು ಸಿಂಧಿಯರನ್ನು ಅಪಹರಿಸಲಾಗಿದೆ. ಭಯೋತ್ಪಾದನೆಯನ್ನು ಪಸರಿಸಲು ಇವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸಿಂಧಿ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಆರೋಪಿಸಿದ್ದಾರೆ.

  • ಹಾಟ್, ಕೋಲ್ಡ್ ಯಾವುದೇ ಯುದ್ಧದ ಉದ್ದೇಶ ಹೊಂದಿಲ್ಲವೆಂದ ಚೀನಾ

    ಹಾಟ್, ಕೋಲ್ಡ್ ಯಾವುದೇ ಯುದ್ಧದ ಉದ್ದೇಶ ಹೊಂದಿಲ್ಲವೆಂದ ಚೀನಾ

    – ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಯುದ್ಧದ ಕುರಿತು ಸ್ಪಷ್ಟನೆ

    ಬೀಜಿಂಗ್: ಗಡಿ ವಾಸ್ತವಿಕ ರೇಖೆ ಬಳಿ ಯುದ್ಧದ ಪರಿಸ್ಥಿತಿ ಉಂಟಾಗಿರುವಾಗಲೇ ಇದೀಗ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅಚ್ಚರಿಯ ಹೇಳಿಕೆ ನೀಡಿದ್ದು, ಯುದ್ಧದ ಕುರಿತು ಸ್ಪಷ್ಟಪಡಿಸಿದ್ದಾರೆ.

    ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 75ನೇ ಅಧಿವೇಶನದಲ್ಲಿ ಮಾತನಾಡಿರುವ ಕ್ಸಿ ಜಿನ್‍ಪಿಂಗ್, ಚೀನಾ ಯಾವುದೇ ದೇಶದೊಂದಿಗೆ ಹಾಟ್ ಅಥವಾ ಕೋಲ್ಡ್ ಯಾವುದೇ ರೀತಿಯ ಯುದ್ಧವನ್ನು ನಡೆಸುವ ಉದ್ದೇಶ ಹೊಂದಿಲ್ಲ. ದೇಶಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಹೊಂದುವುದು ಸಹಜ. ಆದರೆ ಇವುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಚೀನಾದಿಂದ ಕುತಂತ್ರದ ಮೇಲೆ ಕುತಂತ್ರ- ಎಲ್‍ಎಸಿ ಬಳಿ ಶಸ್ತ್ರಸಜ್ಜಿತ ಯೋಧರ ಜಮಾವಣೆ

    ನಾವು ಸಂವಾದ, ಸಮಾಲೋಚನೆ ಮೂಲಕ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಿಕೊಳ್ಳುತ್ತೇವೆ. ಇದೇ ರೀತಿ ವಿವಾದಗಳನ್ನೂ ಪರಿಹರಿಸಿಕೊಳ್ಳುತ್ತೇವೆ. ನಾವು ನಮ್ಮನ್ನು ಮಾತ್ರ ಅಭಿವೃದ್ಧಿಪಡಿಸಲು ಅಥವಾ ಝೀರೋ-ಸಮ್ ಗೇಮ್ ನಲ್ಲಿ ತೊಡಗಿಸಿಕೊಳ್ಳಲು ಯತ್ನಿಸುವುದಿಲ್ಲ ಎಂದು ಕ್ಸಿ ಜಿನ್‍ಪಿಂಗ್ ಹೇಳಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆ ವಿಶ್ವ ಸಂಸ್ಥೆ ನಡೆಸಿದ ವಿಶ್ವ ನಾಯಕರ ವಾರ್ಷಿಕ ವಿಡಿಯೋ ಸಂವಾದದಲ್ಲಿ ಜಿನ್‍ಪಿಂಗ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಅವರ ಈ ಹೇಳಿಕೆ ಸಹ ವಿಡಿಯೋ ರೂಪದಲ್ಲಿ ದಾಖಲಾಗಿದೆ. ಇದನ್ನೂ ಓದಿ: ಪೂರ್ವ ಲಡಾಕ್ ಗಡಿಯಲ್ಲಿ ಗುಂಡಿನ ಸದ್ದು – ಇಂದು ಭಾರತ, ಚೀನಾ ನಡುವೆ ಮಹತ್ವದ ಸಭೆ

    ಚೀನಾ ಸೈನಿಕರ ದಾಳಿಯಿಂದಾಗಿ ಕರ್ನಲ್ ಸಂತೋಷ್ ಬಾಬು ಸೇರಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಲ್ಲದೆ ಭಾರತೀಯ ಸೈನಿಕರು ನಡೆಸಿದ ಪ್ರತಿ ದಾಳಿಗೆ ಚೀನಾದ ಹಲವು ಸೈನಿಕರು ಸಹ ಸಾವನ್ನಪ್ಪಿದ್ದರು. ಆದರೆ ಚೀನಾ ಈ ಕುರಿತು ಬಾಯ್ಬಿಟ್ಟಿರಲಿಲ್ಲ. ಈ ಘಟನೆ ನಡೆದ ಬಳಿಕ ಹಲವು ಬಾರಿ ಗಡಿಯಲ್ಲಿ ಗುಂಡಿನ ಚಕಮಕಿ, ಸಂಘರ್ಷ ನಡೆದಿದೆ. ಅದೇ ರೀತಿ ಎರಡೂ ದೇಶಗಳ ಪ್ರಮುಖರ ನಡುವೆ ಸಭೆಗಳು ಸಹ ನಡೆದಿವೆ. ಆದರೆ ಚೀನಾ ತನ್ನ ಕುತಂತ್ರ ಬುದ್ಧಿಯನ್ನು ಮಾತ್ರ ಬಿಟ್ಟಿಲ್ಲ.

    ಗಲ್ವಾನ್ ವ್ಯಾಲಿ, ಹಾಟ್ ಸ್ಪ್ರಿಂಗ್ಸ್ ಹಾಗೂ ಕೊಂಗ್ರಂಗ್ ನಾಲೆ ಪ್ರದೇಶ ಸೇರಿದಂತೆ ವಿವಿಧ ಭಾಗಗಳಲ್ಲಿ ಚೀನಾ ಸೇನೆ ನಿಯಮ ಉಲ್ಲಂಘಿಸಿ ಅತಿಕ್ರಮಣ ಮಾಡುತ್ತಿದೆ. ಹೀಗಾಗಿ ಏಪ್ರಿಲ್-ಮೇ ತಿಂಗಳಿಂದ ಭಾರತ ಹಾಗೂ ಚೀನಾ ಮಧ್ಯೆ ಸಂಘರ್ಷ ನಡೆಯುತ್ತಿದೆ.

  • ವಿಶ್ವಸಂಸ್ಥೆಯಲ್ಲಿ ಚೀನಾವನ್ನು ಸೋಲಿಸಿದ ಭಾರತ

    ವಿಶ್ವಸಂಸ್ಥೆಯಲ್ಲಿ ಚೀನಾವನ್ನು ಸೋಲಿಸಿದ ಭಾರತ

    ವಾಶಿಂಗ್ಟನ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮಹತ್ವದ ಗೆಲುವು ಲಭಿಸಿದ್ದು, ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ECOSOC) ಮಹಿಳಾ ವಿಭಾಗದ ಸದಸ್ಯತ್ವಕ್ಕೆ ಭಾರತ ಆಯ್ಕೆಯಾಗಿದೆ.

    ಚೀನಾವನ್ನು ಸೋಲಿಸುವ ಮೂಲಕ ಭಾರತ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಮಹಿಳಾ ವಿಭಾಗದ ಸದಸ್ಯತ್ವವನ್ನು ಪಡೆದುಕೊಂಡಿದ್ದು, ಈ ಕುರಿತ ಮಾಹಿತಿಯನ್ನು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಹಂಚಿಕೊಂಡಿದ್ದಾರೆ.

    ವಿಶ್ವಸಂಸ್ಥೆಯ ECOSOC ಮಂಡಳಿಯೂ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಉತ್ತೇಜಿಸುವ ಕಾರ್ಯವನ್ನು ಮಾಡುತ್ತದೆ. ನಮ್ಮ ಎಲ್ಲರ ಪ್ರಯತ್ನದಿಂದ ಮಹಿಳೆಯರ ಸಬಲೀಕರಣವನ್ನು ಉತ್ತೇಜಿಸುವ ನಮ್ಮ ಬದ್ಧತೆಗೆ ಜಯ ಸಿಕ್ಕಿದೆ ಎಂದು ಟಿಎಸ್ ತಿರುಮೂರ್ತಿ ತಿಳಿಸಿದ್ದಾರೆ.

    ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಮಹಿಳಾ ವಿಭಾಗದಲ್ಲಿ 54 ಸದಸ್ಯರಿದ್ದು, ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ವರ್ಗದ 2 ಸದಸ್ಯತ್ವ ಸ್ಥಾನಕ್ಕೆ ಚುನಾವಣೆ ನಡೆಸಲಾಗಿತ್ತು. ಯುಎನ್‍ನ ರಾಯಭಾರಿ ಅಡೆಲಾ ರಾಜ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅಘ್ಫಾನಿಸ್ತಾನ 39 ಮತಗಳನ್ನು ಗಳಿಸಿದರೆ, 38 ಮತಗಳನ್ನು ಪಡೆಯಿತು. ಆದರೆ ಚೀನಾ ಅಗತ್ಯವಿರುವ ಬಹುಮತ (28)ಕ್ಕಿಂತ ಕಡಿಮೆ ಅಂದರೆ 27 ಮತಗಳನ್ನು ಮಾತ್ರ ಪಡೆಯಿತು. ಈಗಾಗಲೇ ಮಂಡಳಿಯ ಸದಸ್ಯತ್ವ ಪಡೆದಿದ್ದ 54 ದೇಶಗಳು ಮತದಾನ ಮಾಡಿದ್ದವು.

  • ಕರ್ನಾಟಕ, ಕೇರಳದಲ್ಲಿ ಸಾಕಷ್ಟು ಐಸಿಸ್ ಭಯೋತ್ಪಾದಕರಿದ್ದಾರೆ: ವಿಶ್ವಸಂಸ್ಥೆ

    ಕರ್ನಾಟಕ, ಕೇರಳದಲ್ಲಿ ಸಾಕಷ್ಟು ಐಸಿಸ್ ಭಯೋತ್ಪಾದಕರಿದ್ದಾರೆ: ವಿಶ್ವಸಂಸ್ಥೆ

    ನವದೆಹಲಿ: ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಐಸಿಸ್ ಭಯೋತ್ಪಾದಕರಿದ್ದಾರೆ ಅನ್ನೋ ಬೆಚ್ಚಿ ಬೀಳುವ ಸುದ್ದಿಯನ್ನು ವಿಶ್ವಸಂಸ್ಥೆ ನೀಡಿದೆ.

    ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್‍ಗೆ ಸೇರಿದ ಸುಮಾರು 150ರಿಂದ 200 ಐಸಿಸ್ ಭಯೋತ್ಪಾದಕರು ಕರ್ನಾಟಕ, ಕೇರಳದಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂಬ ಭಯಾನಕ ವಿಚಾರವನ್ನು ವಿಶ್ವಸಂಸ್ಥೆ ತಿಳಿಸಿದೆ. ಕಳೆದ ವರ್ಷ ಮೇನಲ್ಲಿ ಐಸಿಸ್ ಭಾರತದಲ್ಲಿ ಹೊಸ ಪ್ರಾಂತ್ಯವನ್ನು ತೆರೆದಿದ್ದೇವೆ ಎಂದು ಹೇಳಿಕೊಂಡಿತ್ತು.

    ವಿಶ್ವಸಂಸ್ಥೆಯ 26ನೇ ಅನಾಲಿಟಿಕಲ್ ಸಪೋರ್ಟ್ ಅಂಡ್ ಸ್ಯಾಂಕ್ಷನ್ಸ್ ಮಾನಿಟರಿಂಗ್ ತಂಡದ ವರದಿಯಲ್ಲಿ ಐಸಿಸ್, ಅಲ್‍ಖೈದಾ ಮತ್ತು ಅದರ ಸಹಚರ ಭಯೋತ್ಪಾದಕ ಗುಂಪುಗಳು ಈ 2 ರಾಜ್ಯಗಳಲ್ಲಿ ಸಕ್ರಿಯವಾಗಿವೆ. ಈ ಗುಂಪುಗಳನ್ನು ಭಾರತದ ಉಪಖಂಡದ ನೇತೃತ್ವ ವಹಿಸಿಕೊಂಡ ಅಲ್‍ಖೈದಾ ನಾಯಕ ಒಸಮಾ ಮಹಮ್ಮೂದ್ ಮುನ್ನಡೆಸುತ್ತಿದ್ದಾನೆ. ಇವರೆಲ್ಲರೂ ಉಗ್ರ ಆಸಿಮ್ ಉಮರ್ ಹತ್ಯೆಗೆ ಪ್ರತಿಕಾರವಾಗಿ ಭಾರಿ ದಾಳಿಗಳನ್ನು ನಡೆಸಲು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಇದನ್ನು ಓದಿ: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ- ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೈನಿಕರು

    ಅಲ್ ಖೈದಾ ಉಗ್ರ ಸಂಘಟನೆಯ ಭಾರತೀಯ ಉಪಖಂಡದ ಮುಖ್ಯಸ್ಥ ಅಸಿಮ್ ಉಮರ್ ನನ್ನು ಅಫ್ಘಾನಿಸ್ಥಾನದಲ್ಲಿ ಕಳೆದ ವರ್ಷ ಕೊಂದುಹಾಕಲಾಗಿತ್ತು. 2019 ಸೆಪ್ಟೆಂಬರ್ 23 ರಂದು ಹೆಲ್ಮಾಂಡ್ ಪ್ರಾಂತ್ಯದ ತಾಲಿಬಾನ್ ಕಾಂಪೌಂಡ್ ಮೇಲೆ ಅಮೇರಿಕಾ-ಅಫ್ಘನ್ ಭದ್ರತಾ ಪಡೆಗಳು ನಡೆಸಿದ ದಾಳಿಯಲ್ಲಿ ಭಾರತೀಯ ಉಪಖಂಡದ ಅಲ್ ಖೈದಾದ ಮುಖ್ಯಸ್ಥ ಅಸಿಮ್ ಉಮರ್ ಮೃತಪಟ್ಟಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.

  • ಕೇರಳದ ಆರೋಗ್ಯ ಸಚಿವೆಗೆ ಗೌರವ ಸಲ್ಲಿಸಿದ ವಿಶ್ವಸಂಸ್ಥೆ

    ಕೇರಳದ ಆರೋಗ್ಯ ಸಚಿವೆಗೆ ಗೌರವ ಸಲ್ಲಿಸಿದ ವಿಶ್ವಸಂಸ್ಥೆ

    ನ್ಯೂಯಾರ್ಕ್: ಹೆಮ್ಮಾರಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಿದ್ದಕ್ಕಾಗಿ ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಟೀಚರ್‌ ಅವರಿಗೆ ವಿಶ್ವಸಂಸ್ಥೆ ವಿಶೇಷ ಗೌರವ ಸಲ್ಲಿಸಿದೆ.

    ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹಾಗೂ ಸಾಮಾನ್ಯ ಸಭೆಯ ಅಧ್ಯಕ್ಷರ ನೇತೃತ್ವ ವಹಿಸಿದ್ದ ಸಾರ್ವಜನಿಕ ಸೇವಾ ದಿನಾಚರಣೆಯಲ್ಲಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್‌ ಪಾಲ್ಗೊಂಡಿದ್ದರು. ಜೂನ್ 23ರಂದು ವರ್ಚುವಲ್ ಕಾರ್ಯಕ್ರಮದಲ್ಲಿ ಕೋವಿಡ್ ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಭಾರತದಿಂದ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರಿಗೆ ಮಾತ್ರ ಆಹ್ವಾನ ಸಿಕ್ಕಿತ್ತು.

    ಈ ವೇಳೆ ಮಾತನಾಡಿದ ಕೆ.ಕೆ.ಶೈಲಜಾ ಟೀಚರ್‌, 2018-19ರ ನಡುವೆ ನಿಪಾ ವೈರಸ್ ಮತ್ತು ಎರಡು ಪ್ರವಾಹಗಳು ಸಂಭವಿಸಿ ರಾಜ್ಯವನ್ನು ತಲ್ಲಣಗೊಳಿಸಿತ್ತು. ಈ ವೇಳೆ ಕೈಗೊಂಡ ತಂತ್ರಗಳು ಕೋವಿಡ್-19 ಅನ್ನು ಸಮಯೋಚಿತವಾಗಿ ನಿಭಾಯಿಸಲು ಸಹಾಯಕವಾಯಿತು ಎಂದು ತಿಳಿಸಿದರು.

    “ವುಹಾನ್‍ನಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾದ ತಕ್ಷಣವೇ ಎಚ್ಚೆತ್ತ ಕೇರಳ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿ, ಸೂಚನೆಯನ್ನು ಅನುಸರಿಸಲು ಆರಂಭಿಸಿತು. ವಿದೇಶದಿಂದ ಪ್ರತಿಯೊಬ್ಬರನ್ನ ಕ್ವಾರಂಟೈನ್ ಮಾಡುವುದು ಸೇರಿದಂತೆ ವಿವಿಧ ನಿಯಮಗಳನ್ನು ಅನುಸರಿಸಿದ್ದರಿಂದ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿತು” ಎಂದು ವಿವರಿಸಿದರು.

    ಕಾರ್ಯಕ್ರಮದಲ್ಲಿ ಕೆ.ಕೆ.ಶೈಲಜಾ ಹಾಗೂ ಕೊರೊನಾ ನಿಯಂತ್ರಣಕ್ಕೆ ನಿರ್ಣಾಯಕ ಪಾತ್ರ ವಹಿಸಿರುವ ವಿವಿಧ ದೇಶಗಳ ಪ್ರತಿನಿಧಿಗಳಿಗೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿ, ಗೌರವ ಸಲ್ಲಿಸಿತು. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಸಾಮಾನ್ಯ ಸಭೆಯ ಅಧ್ಯಕ್ಷ ಟಿಜ್ಜನಿ ಮೊಹಮ್ಮದ್ ಬಂಡೆ, ಇಥಿಯೋಪಿಯಾದ ಅಧ್ಯಕ್ಷ ಸಾಹ್ಲೆ ವರ್ಕ್ ಸೂಡ್, ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಡೆನೊಮಮ್ ಗೆಬ್ರಿಯೇಶಿಯಸ್, ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಉಪ ಕಾರ್ಯದರ್ಶಿ ಲಿಯು ಶೆನ್ಮಿನ್, ಕೊರಿಯಾದ ಆಂತರಿಕ ಮತ್ತು ಭದ್ರತಾ ಸಚಿವ ಚಿನ್ ಯಂಗ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.