Tag: United Nations

  • ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿಯಾಗಿ ರುಚಿರಾ ಕಾಂಬೋಜ್ ನೇಮಕ

    ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿಯಾಗಿ ರುಚಿರಾ ಕಾಂಬೋಜ್ ನೇಮಕ

    ನ್ಯೂಯಾರ್ಕ್‌: ಹಿರಿಯ ರಾಜತಾಂತ್ರಿಕ ಅಧಿಕಾರಿ ರುಚಿರಾ ಕಾಂಬೋಜ್ ಅವರನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿ ಇಂದು ನೇಮಕ ಮಾಡಲಾಗಿದೆ.

    ಭಾರತೀಯ ವಿದೇಶಾಂಗ ಸೇವೆಯ (ಐಎಫ್‌ಎಸ್) 1987ರ ಬ್ಯಾಚ್‌ನ ಅಧಿಕಾರಿಯಾಗಿರುವ ರುಚಿರಾ ಅವರು ಪ್ರಸ್ತುತ ಭೂತಾನ್‌ನಲ್ಲಿ ಭಾರತೀಯ ರಾಯಭಾರಿಯಾಗಿದ್ದರು. ಇದೀಗ ಟಿ.ಎಸ್.ತಿರುಮೂರ್ತಿ ಅವರ ನಿವೃತ್ತಿ ನಂತರ ವಿಶ್ವಸಂಸ್ಥೆಯ ಭಾರತೀಯ ರಾಯಭಾರಿಯಾಗಲಿದ್ದಾರೆ. ಅವರು ಶೀಘ್ರ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಮಾವೋವಾದಿಗಳ ದಾಳಿಗೆ 3 CRPF ಸಿಬ್ಬಂದಿ ಹುತಾತ್ಮ

    ಅಲ್ಲದೆ ರುಚಿರಾ ಅವರು 1991-96ರ ಅವಧಿಯಲ್ಲಿ ಪಶ್ಚಿಮ ಯೂರೋಪ್‌ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ಫ್ರಾನ್ಸ್, ಯುಕೆ, ಬೆನೆಲಕ್ಸ್ ದೇಶಗಳು, ಇಟಲಿ, ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳೊಂದಿಗೆ ವ್ಯವಹರಿಸಿದ್ದರು. ಕಾಮನ್‌ವೆಲ್ತ್ ದೇಶಗಳೊಂದಿಗಿನ ಸಂಬಂಧವನ್ನೂ ನಿರ್ವಹಿಸಿದ್ದರು. 2011-14ರ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಶಿಷ್ಟಾಚಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಇದನ್ನೂ ಓದಿ: ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿರುವ ಹಡಗು- 15 ಮಂದಿಯ ರಕ್ಷಣೆ

    ಪ್ರಸಕ್ತ ವರ್ಷದಲ್ಲಿ ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ನೇಮಗೊಂಡ ಐಎಫ್‌ಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ.

    Live Tv

  • ವಿಶ್ವಸಂಸ್ಥೆ ಮುಖ್ಯಸ್ಥರ ತಂತ್ರಜ್ಞಾನ ರಾಯಭಾರಿಯಾಗಿ ಭಾರತದ ಅಮನ್ ದೀಪ್ ನೇಮಕ

    ವಿಶ್ವಸಂಸ್ಥೆ ಮುಖ್ಯಸ್ಥರ ತಂತ್ರಜ್ಞಾನ ರಾಯಭಾರಿಯಾಗಿ ಭಾರತದ ಅಮನ್ ದೀಪ್ ನೇಮಕ

    ನ್ಯೂಯಾರ್ಕ್: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್ ಅವರ ತಂತ್ರಜ್ಞಾನ ರಾಯಭಾರಿಯಾಗಿ ಭಾರತೀಯ ರಾಜತಾಂತ್ರಿಕ ಅಧಿಕಾರಿ ಅಮನ್ ದೀಪ್ ಸಿಂಗ್ ಗಿಲ್ ಅವರನ್ನು ನೇಮಿಸಲಾಗಿದೆ.

    2016 ರಿಂದ 2018 ರವರೆಗೆ ಜಿನೀವಾದಲ್ಲಿ ನಡೆದ ನಿಶಸ್ತ್ರೀಕರಣದ ಸಮ್ಮೇಳನಕ್ಕೆ ಭಾರತೀಯ ರಾಯಭಾರಿ ಹಾಗೂ ಖಾಯಂ ಪ್ರತಿನಿಧಿಯಾಗಿದ್ದ ಗಿಲ್, ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್‌ನ ಅಂತಾರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮತ್ತು ಕೃತಕ ಬುದ್ಧಿಮತ್ತೆ ಸಂಶೋಧನಾ ಸಹಯೋಗದ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಇದನ್ನೂ ಓದಿ: ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಕೋಲ್ಡ್ ವಾರ್ – ನಟಿ ಅನುಷ್ಕಾ ಶೆಟ್ಟಿ ಸಹೋದರನ ಕೊಲೆಗೆ ಸ್ಕೆಚ್

    ಪಂಜಾಬ್ ವಿವಿಯಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ತಂತ್ರಜ್ಞಾನದಲ್ಲಿ ಪದವಿ ಪಡೆದಿರುವ ಗಿಲ್, ಲಂಡನ್‌ನ ಕಿಂಗ್ಸ್ ಕಾಲೇಜಿನಿಂದ ಪಿಹೆಚ್‌ಡಿ ಪದವಿ ಪಡೆದಿದ್ದಾರೆ. ಜಿನಿವಾ ವಿವಿಯಿಂದ ಫ್ರೆಂಚ್ ಇತಿಹಾಸ ಹಾಗೂ ಭಾಷೆಯಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್

    ಅಮನ್ ದೀಪ್ ಸಿಂಗ್ ಗಿಲ್ ಅವರು ಡಿಜಿಟಲ್ ತಂತ್ರಜ್ಞಾನದ ಚಿಂತನೆಯ ನಾಯಕನಾಗಿದ್ದು, ಡಿಜಿಟಲ್ ತಂತ್ರಜ್ಞಾನಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದಾರೆ. ಡಿಜಿಟಲ್ ರೂಪಾಂತರಗಳನ್ನು ಜವಾಬ್ದಾರಿಯುತವಾಗಿ ಹಾಗೂ ಅಭಿವೃದ್ಧಿಗೊಳಿಸುವ ಬಗ್ಗೆ ಒಳ್ಳೆಯ ತಿಳುವಳಿಕೆ ಹೊಂದಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

  • ಪರಮಾಣು ಅಸ್ತ್ರ ಬಳಸಿದರೆ, ಯುಎನ್‌ಗೆ ನಿರ್ಬಂಧ ಕಠಿಣಗೊಳಿಸಲು ಯತ್ನಿಸುತ್ತೇವೆ: ಉತ್ತರ ಕೊರಿಯಾಗೆ ಅಮೆರಿಕ ಎಚ್ಚರಿಕೆ

    ವಾಷಿಂಗ್ಟನ್: ಉತ್ತರ ಕೊರಿಯಾ ಪರಮಾಣು ಅಸ್ತ್ರ ಪ್ರಯೋಗಿಸಿದ್ದಲ್ಲಿ, ವಿಶ್ವಸಂಸ್ಥೆಗೆ ನಿರ್ಬಂಧವನ್ನು ಕಠಿಣಗೊಳಿಸುವಂತೆ ಒತ್ತಾಯಿಸುತ್ತೇವೆ ಎಂದು ಅಮೆರಿಕ ಎಚ್ಚರಿಸಿದೆ.

    ಉತ್ತರ ಕೊರಿಯಾ ವಿನಾಶಕಾರಿ ಪರಮಾಣು ಅಸ್ತ್ರ ಪರೀಕ್ಷೆಗೆ ಮುಂದಾದಲ್ಲಿ, ಅಮೆರಿಕದ ಭದ್ರತ ಮಂಡಳಿ ಹೊಸ ಪ್ರಯತ್ನ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಮೆರಿಕ ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್, ಖಂಡಿತವಾಗಿಯೂ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರಾಜ್ಯದ ಉದ್ಯಮಿಗಳಿಗೆ ಐಟಿ ಶಾಕ್

     

    ಮೊದಲನೆಯದಾಗಿ ನಾವು ಈಗಾಗಲೇ ಜಾರಿಗೊಳಿಸಲು ಅಧಿಕಾರ ಹೊಂದಿರುವ ನಿರ್ಬಂಧಗಳನ್ನು ಜಾರಿಗೊಳಿಸಬೇಕಾಗಿದೆ. ಈ ಕೊನೆಯ ನಿರ್ಣಯದಲ್ಲಿ ನಾವು ಪ್ರಯತ್ನಿಸಿದಂತೆ ಹೆಚ್ಚುವರಿ ನಿರ್ಬಂಧಗಳನ್ನು ಜಾರಿಗೊಳಿಸುವಂತೆ ವಿಶ್ವಸಂಸ್ಥೆಯನ್ನು ಒತ್ತಾಯಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಭಾರತ, ಪಾಕಿಸ್ತಾನ ಪರಸ್ಪರ ವ್ಯಾಪಾರದಿಂದ ಬಹಳಷ್ಟು ಲಾಭ ಹೊಂದಿದೆ: ಪಾಕ್ ಪ್ರಧಾನಿ

    ಉತ್ತರ ಕೊರಿಯಾ 2017ರಿಂದಲೇ ತನ್ನ ಪ್ರಮಾಣು ಅಸ್ತ್ರ ಪರೀಕ್ಷೆ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ತಿಳಿಸಿದೆ.

    ಉತ್ತರ ಕೊರಿಯಾ ಪರಮಾಣು ಅಸ್ತ್ರ ಪ್ರಯೋಗ ನಡೆಸಿತು ಎಂದಾದಲ್ಲಿ ಅಮೆರಿಕ ಭದ್ರತಾ ಮಂಡಳಿಯಲ್ಲಿ ಕಠಿಣ ನಿರ್ಬಂಧದ ಕುರಿತು ಮತ ಚಲಾಯಿಸುವಂತೆ ಒತ್ತಾಯಿಸಿದೆ ಎಂದು ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಅಧಿಕಾರಿಗಳು ತಿಳಿಸಿದ್ದಾರೆ.

  • ಅಫ್ಘಾನ್ ಮಹಿಳೆಯರ ಮೇಲೆ ಕಠಿಣ ಕ್ರಮ – ವಿಶ್ವಸಂಸ್ಥೆಯ ಕರೆಗೆ ಕ್ಯಾರೇ ಅನ್ನದ ತಾಲಿಬಾನ್

    ಅಫ್ಘಾನ್ ಮಹಿಳೆಯರ ಮೇಲೆ ಕಠಿಣ ಕ್ರಮ – ವಿಶ್ವಸಂಸ್ಥೆಯ ಕರೆಗೆ ಕ್ಯಾರೇ ಅನ್ನದ ತಾಲಿಬಾನ್

    ವಾಷಿಂಗ್ಟನ್: ಅಫ್ಘಾನಿಸ್ತಾನದ ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ಕಠಿಣ ನಿಯಮಗಳನ್ನು ತೆಗೆದು ಹಾಕಬೇಕೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ(ಯುಎನ್‌ಎಸ್‌ಸಿ) ಕರೆಯನ್ನು ತಾಲಿಬನ್ ತಿರಸ್ಕರಿಸಿದೆ

    ಅಫ್ಘಾನಿಸ್ತಾನದ ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ಕಟ್ಟುನಿಟ್ಟಿನ ಕ್ರಮಗಳಿಗೆ ಯುಎನ್‌ಎಸ್‌ಸಿ ಕಳವಳ ವ್ಯಕ್ತಪಡಿಸಿದ್ದು, ಇದನ್ನು ತಾಲಿಬಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರಸ್ಕರಿಸಿದೆ ಎಂದು ವರದಿಯಾಗಿದೆ.

    ಅಫ್ಘಾನಿಸ್ತಾನದ ಜನರು ಪ್ರಧಾನವಾಗಿ ಮುಸ್ಲಿಮರಾಗಿರುವುದರಿಂದ ನಮ್ಮ ಸರ್ಕಾರ ಇಸ್ಲಾಮಿಕ್ ಹಿಜಬ್ ಅನ್ನು ಸಮಾಜದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಿಗೆ ಅನುಗುಣವಾಗಿ ಪರಿಗಣಿಸುತ್ತದೆ ಎಂದು ತಾಲಿಬಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಕಹರ್ ಬಾಲ್ಖಿ ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಿಂದ ಬಂದ ಶೇ.87 ಮಂದಿಗೆ ಭಾರತದ ಪೌರತ್ವ

    ಇತ್ತೀಚೆಗೆ ಭದ್ರತಾ ಮಂಡಳಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವ ನೀತಿಗಳನ್ನು ತಕ್ಷಣವೇ ತೆಗೆದುಹಾಕುವಂತೆ ತಾಲಿಬಾನ್‌ಗೆ ಸೂಚಿಸಿತ್ತು.

    ಅಫ್ಘಾನ್ ಮಹಿಳೆಯರ ಶಿಕ್ಷಣ, ಉದ್ಯೋಗ, ಚಳುವಳಿಯ ಸ್ವಾತಂತ್ರ್ಯ ಹಾಗೂ ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಮೇಲೆ ತಾಲಿಬಾನ್ ವಿಧಿಸಿರುವ ನಿರ್ಬಂಧಗಳನ್ನು ಅನುಸರಿಸಿ ಅಲ್ಲಿನ ಹುಡುಗಿಯರು ಹಾಗೂ ಮಹಿಳೆಯರ ಬಗ್ಗೆ ಆಳವಾಗಿ ಕಳವಳ ವ್ಯಕ್ತಪಡಿಸಿರುವುದಾಗಿ ತಿಳಿಸಿತ್ತು. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ

    ಇತ್ತೀಚೆಗೆ ತಾಲಿಬಾನ್ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೇರಿದ ನಿರ್ಬಂಧ, ಕಟ್ಟುನಿಟ್ಟಿನ ಹಿಜಬ್ ಜಾರಿ ಹಾಗೂ ರಾಜಕೀಯರಂಗದಿಂದ ಮಹಿಳೆಯರನ್ನು ದೂರ ಉಳಿಸಿದ ಸಂದರ್ಭದಲ್ಲಿ ಭದ್ರತಾ ಮಂಡಳಿ ತಕ್ಷಣವೇ ವಿದ್ಯಾರ್ಥಿನಿಯರಿಗೆ ಶಾಲೆಗಳನ್ನು ತೆರೆಯಲು ಸೂಚನೆ ನೀಡಿತ್ತು.

  • ನಮಗೆ ನಿಮ್ಮ ಸಲಹೆ ಬೇಡ: ನೆದರ್ಲೆಂಡ್‌ಗೆ ತಿರುಗೇಟು ನೀಡಿದ ಭಾರತ

    ನಮಗೆ ನಿಮ್ಮ ಸಲಹೆ ಬೇಡ: ನೆದರ್ಲೆಂಡ್‌ಗೆ ತಿರುಗೇಟು ನೀಡಿದ ಭಾರತ

    ವಾಷಿಂಗ್ಟನ್: ವಿಶ್ವಸಂಸ್ಥೆಯ ಭಾರತೀಯ ರಾಯಭಾರಿ ಟಿಎಸ್ ತಿರುಮೂರ್ತಿ ಶುಕ್ರವಾರ ಬ್ರಿಟನ್‌ನಲ್ಲಿರುವ ನೆದರ್ಲೆಂಡ್ ರಾಯಭಾರಿ ಕೆರೆಲ್ ವ್ಯಾನ್ ಒಸ್ಟೆರೋಮ್ ರೊಂದಿಗೆ ಟ್ವಿಟರ್‌ನಲ್ಲಿ ವಾಗ್ವಾದ ನಡೆಸಿದ್ದಾರೆ.

    ಉಕ್ರೇನ್ ಬಗೆಗಿನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಗೈರುಹಾಜರಾಗಬಾರದಿತ್ತು ಎಂದು ಕೆರೆಲ್ ವ್ಯಾನ್ ಒಸ್ಟೆರೋಮ್ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ತಿರುಮೂರ್ತಿ, ನಮಗೆ ನಿಮ್ಮ ಸಲಹೆ ಬೇಡ. ನಮಗೆ ಏನು ಮಾಡಬೇಕೆಂಬುದು ತಿಳಿದಿದೆ ಎಂದು ಟ್ವಿಟ್ಟರ್‌ನಲ್ಲಿ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: 2024ರಲ್ಲಿ ಶುಕ್ರಯಾನಕ್ಕೆ ISRO ಸಜ್ಜು- ಇಲ್ಲಿದೆ ಶುಕ್ರಗ್ರಹದ ಸ್ವಾರಸ್ಯಕರ ಸಂಗತಿ

    ರಷ್ಯಾ-ಉಕ್ರೇನ್ ಯುದ್ಧದ ಕುರಿತು ಬುಧವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ತಿರುಮೂರ್ತಿ ಹೇಳಿಕೆ ಬಗ್ಗೆ ವಿವರಣೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕರೇಲ್ ವ್ಯಾನ್ ಒಸ್ಟೆರೊಮ್ ಸಾಮಾನ್ಯ ಸಭೆಯಲ್ಲಿ ನೀವು ಗೈರಾಗಬಾರದಿತ್ತು. ವಿಶ್ವಸಂಸ್ಥೆಯ ನಿಯಮಗಳನ್ನು ಗೌರವಿಸಬೇಕಿತ್ತು ಎಂದಿದ್ದರು. ಇದನ್ನೂ ಓದಿ: ರಷ್ಯಾದ ಜನರಲ್‌ಗಳನ್ನು ಕೊಲ್ಲಲು ಉಕ್ರೇನ್‌ಗೆ ಅಮೆರಿಕ ಗುಪ್ತಚರ ಸಹಾಯ

    ಈ ವರ್ಷ ಜನವರಿಯಿಂದ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಸಾಮಾನ್ಯ ಸಭೆ ಹಾಗೂ ಉಕ್ರೇನ್-ರಷ್ಯಾದ ಆಕ್ರಮಣದ ಬಗ್ಗೆ ಮಾನವ ಹಕ್ಕುಗಳ ಮಂಡಳಿಯಲ್ಲಿನ ಕಾರ್ಯವಿಧಾನದ ಮತ ಹಾಗೂ ಕರಡು ನಿರ್ಣಯಗಳಿಂದ ಭಾರತ ದೂರ ಉಳಿದಿತ್ತು. ಈ ಹಿನ್ನೆಲೆಯಲ್ಲಿ ನೆದರ್ಲೆಂಡ್‌ನ ರಾಯಭಾರಿ ಭಾರತವನ್ನು ಟೀಕಿಸಿದ್ದರು.

  • ಉಕ್ರೇನಿಯನ್ನರು ಕೆನಡಾದಲ್ಲಿ 3 ವರ್ಷ ಉಳಿಯಬಹುದು

    ಉಕ್ರೇನಿಯನ್ನರು ಕೆನಡಾದಲ್ಲಿ 3 ವರ್ಷ ಉಳಿಯಬಹುದು

    ಒಟ್ಟಾವಾ: ರಷ್ಯಾ ಮತ್ತು ಉಕ್ರೇನ್ ನಡುವೆ ಭಾರೀ ಯುದ್ಧ ನಡೆಯುತ್ತಿದ್ದು, ಅಲ್ಲಿನ ಜನರು ಪ್ರಾಣ ಉಳಿಸಿಕೊಳ್ಳಲು ದೇಶವನ್ನು ಬಿಟ್ಟು ಹೋಗುತ್ತಿದ್ದಾರೆ. ಈ ಹಿನ್ನೆಲೆ ಉಕ್ರೇನ್ ನಿಂದ ಪಲಾಯನ ಮಾಡುವವರು ಕೆನಡಾದಲ್ಲಿ ಉಳಿದುಕೊಳ್ಳಬಹುದು ಎಂದು ಕೆನಡಾ ರಾಜಧಾನಿ ಒಟ್ಟಾವಾ ಗುರುವಾರ ತಿಳಿಸಿದೆ.

    ರಷ್ಯಾದ ಆಕ್ರಮಣಕಾರಿ ದಾಳಿಯಿಂದ ಪಲಾಯನ ಮಾಡುವ ಉಕ್ರೇನಿಯನ್ನರಿಗೆ ಮೂರು ವರ್ಷಗಳವರೆಗೆ ತಾತ್ಕಾಲಿಕ ಕೆನಡಾದ ನಿವಾಸ ಪರವಾನಗಿಯನ್ನು ನೀಡುವ ಹೊಸ ವಲಸೆ ಕಾರ್ಯಕ್ರಮವನ್ನು ಸ್ಥಾಪಿಸುವುದಾಗಿ ಒಟ್ಟಾವಾ ಘೋಷಿಸಿತು. ಇದರ ಜೊತೆಗೆ ಉಕ್ರೇನಿಯನ್ನರು ತಮ್ಮ ಕೆಲಸ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಈ ವೇಳೆ ತಿಳಿಸಿದೆ. ಇದನ್ನೂ ಓದಿ: ಯುದ್ಧ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ ಆದೇಶ – ಬ್ರೆಡ್ ಪಡೆಯಲು ಸಾಲುಗಟ್ಟಿದ್ದವರ ಮೇಲೆ ರಷ್ಯಾ ದಾಳಿ

    ಹೆಚ್ಚು ಉಕ್ರೇನಿಯನ್ ವಲಸೆಗಾರರನ್ನು ಕೆನಡಾ ಹೊಂದಿದೆ. ಅದರಲ್ಲಿಯೂ ವಿಶೇಷವಾಗಿ ಕೆನಡಾದ ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ಉಕ್ರೇನ್ ಪ್ರಜೆಗಳು ಉಳಿದುಕೊಂಡಿದ್ದಾರೆ. ಈ ಹಿನ್ನೆಲೆ ಕೆನಡಾ ಸರ್ಕಾರ ಉಕ್ರೇನಿಯನ್ನರು ಮೂರು ವರ್ಷಗಳವರೆಗೆ ತಾತ್ಕಾಲಿಕ ನಿವಾಸಿಗಳಾಗಿ ಕೆನಡಾದಲ್ಲಿ ಉಳಿಯಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.

    ಅರ್ಜಿದಾರರು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ತಮ್ಮ ಬಯೋಮೆಟ್ರಿಕ್ ಡೇಟಾವನ್ನು ಫಿಂಗರ್‌ಪ್ರಿಂಟ್‌ಗಳು ಮತ್ತು ಫೋಟೋ ರೂಪದಲ್ಲಿ ಒದಗಿಸಬೇಕಾಗುತ್ತದೆ. ಉಕ್ರೇನಿಯನ್ ನಿರಾಶ್ರಿತರು ಏಕಕಾಲದಲ್ಲಿ ಕೆಲಸ ಮತ್ತು ಅಧ್ಯಯನ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಘೋಷಣೆಯಲ್ಲಿ ವಿವರಿಸಲಾಗಿದೆ.

    ಕೆನಡಾದ ಈಗಾಗಲೇ ನೆಲೆಸಿರುವ ಉಕ್ರೇನಿಯನ್ನರು ಮತ್ತು ಅವರ ಕುಟುಂಬಗಳು ಈ ಹೊಸ ಕ್ರಮಗಳಿಂದ ಪ್ರಯೋಜನ ಪಡೆಯುತ್ತವೆ ಎಂದು ಹೇಳಿದೆ. ಇದನ್ನೂ ಓದಿ: ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್

    ಗುರುವಾರ ಬಿಡುಗಡೆಯಾದ ವಿಶ್ವಸಂಸ್ಥೆಯ ಎಣಿಕೆಯ ಪ್ರಕಾರ, ಫೆಬ್ರವರಿ 24 ರಂದು ರಷ್ಯಾ, ಉಕ್ರೇನ್ ಮೇಲೆ ನಡೆಸುತ್ತಿರುವ ಮಾರಣಾಂತಿಕ ಆಕ್ರಮಣದಿಂದ ಇಲ್ಲಿವರೆಗೂ ಮೂರು ದಶಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‍ನಿಂದ ಪಲಾಯನ ಮಾಡಿದ್ದಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಪೋಲೆಂಡ್‍ನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿಸಿದೆ.

  • ಒಂದು ವಾರದೊಳಗೆ 1 ಮಿಲಿಯನ್ ಜನ ಉಕ್ರೇನ್‍ನಿಂದ ಪಲಾಯನ: ವಿಶ್ವಸಂಸ್ಥೆ

    ಒಂದು ವಾರದೊಳಗೆ 1 ಮಿಲಿಯನ್ ಜನ ಉಕ್ರೇನ್‍ನಿಂದ ಪಲಾಯನ: ವಿಶ್ವಸಂಸ್ಥೆ

    ಜಿನೆವಾ: ರಷ್ಯಾದ ಆಕ್ರಮಣದಿಂದ ತತ್ತರಿಸಿ ಹೋಗಿರುವ ಉಕ್ರೇನ್‍ನಿಂದ ಕೇವಲ ಒಂದು ವಾರದಲ್ಲಿ 1 ಮಿಲಿಯನ್ ಜನರು ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಇದು ಈ ಶತಮಾನದ ಅತಿದೊಡ್ಡ ನಿರಾಶ್ರಿತರ ಬಿಕ್ಕಟ್ಟಾಗಿ ಪರಿಣಮಿಸುವ ಪರಿಸ್ಥಿತಿಯನ್ನು ತೋರಿಸುತ್ತದೆ.

    ವಿಶ್ವ ಬ್ಯಾಂಕ್ 2020ರ ಅಂತ್ಯದಲ್ಲಿ ನಡೆಸಿದ ಎಣಿಕೆಯಲ್ಲಿ ಉಕ್ರೇನ್ ಸುಮಾರು 44 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ ಎಂದು ತಿಳಿಸಿತ್ತು. ಆದರೆ ಒಂದು ವಾರದೊಳಗೆ ಉಕ್ರೇನ್‍ನಿಂದ ಶೇಕಡ 2ಕ್ಕಿಂತ ಹೆಚ್ಚು ಮಂದಿ ಪಲಾಯಾನ ಮಾಡುತ್ತಿದ್ದಾರೆ. ಅಲ್ಲದೇ ಮುಂದೆ 4 ಮಿಲಿಯನ್ ಜನರು ಅಂತಿಮವಾಗಿ ಉಕ್ರೇನ್ ತೊರೆಯಬಹುದು ಎಂದು ವಿಶ್ವಸಂಸ್ಥೆ ಭವಿಷ್ಯ ನುಡಿದಿದೆ. ಇದನ್ನು ಓದಿ: ಪುಟಿನ್‌ ಜೊತೆ 2ನೇ ಬಾರಿ ಮೋದಿ ಮಾತುಕತೆ

    ಇಮೇಲ್ ಮೂಲಕ ವಿಶ್ವಸಂಸ್ಥೆ ವಕ್ತಾರ ಜೌಂಗ್-ಆಹ್ ಘೆಡಿನಿ-ವಿಲಿಯಮ್ಸ್ ಅವರು, ರಾಷ್ಟ್ರೀಯ ಅಧಿಕಾರಿಗಳು ಸಂಗ್ರಹಿಸಿದ ಎಣಿಕೆಗಳ ಆಧಾರದ ಮೇಲೆ ಮಧ್ಯ ಯೂರೋಪ್‍ನಲ್ಲಿ ಸುಮಾರು 1ಮಿಲಿಯನ್ ಮಂದಿ ದೇಶ ತೊರೆದಿದ್ದಾರೆ ಎಂದು ನಮ್ಮ ಡೇಟಾವು ಸೂಚಿಸುತ್ತಿದೆ.

    ಮತ್ತೊಂದೆಡೆ ವಿಶ್ವಸಂಸ್ಥೆ ಹೈ ಕಮಿಷನರ್ ಫಿಲಿಪ್ಪೊ ಗ್ರಾಂಡಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಕೇವಲ ಏಳು ದಿನಗಳಲ್ಲಿ ಉಕ್ರೇನ್‍ನಿಂದ ನೆರೆಯ ದೇಶಗಳಿಗೆ ಒಂದು ಮಿಲಿಯನ್ ನಿರಾಶ್ರಿತರು ವಲಸೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಅಕ್ರಮ ಶಸ್ತ್ರಾಸ್ತ್ರಗಳ ಬದಲಿಗೆ, ಯುಪಿ ಈಗ ಕ್ಷಿಪಣಿಗಳನ್ನು ತಯಾರಿಸುತ್ತಿದೆ: ಅಮಿತ್ ಶಾ

  • ಉಕ್ರೇನ್ ಉದ್ವಿಗ್ನತೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತ ಆತಂಕ

    ಉಕ್ರೇನ್ ಉದ್ವಿಗ್ನತೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತ ಆತಂಕ

    ನ್ಯೂಯಾರ್ಕ್: ರಷ್ಯಾ ಉಕ್ರೇನ್ ಮೇಲೆ ನಡೆಸಬಹುದಾದ ದಾಳಿ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಂಗಳವಾರ ತುರ್ತು ಸಭೆ ನಡೆಸಿದೆ. ರಷ್ಯಾ-ಉಕ್ರೇನ್ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಬಗ್ಗೆ ಭಾರತ ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದೆ.

    ನಾವು ಉಕ್ರೇನ್ ಸಂಬಂಧಿಸಿದ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದ್ದೇವೆ. ಉಕ್ರೇನ್-ರಷ್ಯಾ ಗಡಿಯ ಸನ್ನಿವೇಶ ಹಾಗೂ ರಷ್ಯನ್ ಒಕ್ಕೂಟ ಸಂಬಂಧಿತ ಘೋಷಣೆಯ ಮೇಲೂ ಗಮನ ಹರಿಸುತ್ತಿದ್ದೇವೆ ಎಂದು ಭಾರತದ ಕಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ವಿಶ್ವಸಂಸ್ಥೆ ತಿಳಿಸಿದ್ದಾರೆ.

    ಉಕ್ರೇನ್ ಗಡಿಯಲ್ಲಿ ಹುಟ್ಟಿಸುತ್ತಿರುವ ಉದ್ವಿಗ್ನತೆ ಆತಂಕಕರವಾಗಿದೆ. ಈ ಬೆಳವಣಿಗೆಗಳು ಶಾಂತಿ ಹಾಗೂ ಭದ್ರತೆಗೆ ಅಪಾಯವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!

    ಉಕ್ರೇನ್ ಮೇಲೆ ರಷ್ಯಾ ನಡೆಸಬಹುದಾದ ದಾಳಿ ಕುರಿತಂತೆ ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳು ತುರ್ತು ಸಭೆ ನಡೆಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮನವಿ ಮಾಡಿತ್ತು. ಉಕ್ರೇನ್ ಮೇಲೆ ರಷ್ಯಾದ ಸಂಭವನೀಯ ಆಕ್ರಮಣ ತಡೆಯಲು ರಾಜತಾಂತ್ರಿಕ ಪ್ರಯತ್ನಗಳು ತಡೆಯುತ್ತಿವೆ. ಇದನ್ನೂ ಓದಿ: ಸ್ವಂತ ಸಾಮಾಜಿಕ ಮಾಧ್ಯಮ ಆ್ಯಪ್ ಬಿಡುಗಡೆ ಮಾಡಿದ ಟ್ರಂಪ್

    ಅಮೆರಿಕ ಮತ್ತು ಯುರೋಪ್ ದೇಶಗಳು ರಷ್ಯಾ ವಿರುದ್ಧವಾಗಿದ್ದರೆ ಭಾರತದ ನಡೆ ಏನು ಎನ್ನುವು ಕುತೂಹಲ ಇತ್ತು. ಆದರೆ ಭಾರತ ಯಾವ ಕಡೆಯೂ ಇಲ್ಲದೇ ಶಾಂತಿ ಮಾತುಕತೆಯಿಂದ ಸಮಸ್ಯೆ ಪರಿಹರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

  • ಇಬ್ಬರು ಯುಎನ್ ತಜ್ಞರ ಹತ್ಯೆ – 51 ಮಂದಿಗೆ ಮರಣದಂಡನೆ

    ಇಬ್ಬರು ಯುಎನ್ ತಜ್ಞರ ಹತ್ಯೆ – 51 ಮಂದಿಗೆ ಮರಣದಂಡನೆ

    ಕಿನ್ಶಾಸ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಮಿಲಿಟರಿ ನ್ಯಾಯಾಲಯ ಶನಿವಾರ ಇಬ್ಬರು ವಿಶ್ವಸಂಸ್ಥೆಯ ತಜ್ಞರ ಹತ್ಯೆಗೈದ 51 ಜನರಿಗೆ ಮರಣದಂಡನೆ ವಿಧಿಸಿದೆ.

    2017ರಲ್ಲಿ ಇಬ್ಬರು ಯುಎನ್ ತಜ್ಞರ ಹತ್ಯೆಯಾಗಿತ್ತು. ಈ ಹತ್ಯೆಗೆ ಸಂಬಂಧ ಪಟ್ಟ 50 ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ವಿಚಾರಣೆಯಲ್ಲಿ ಹಲವರು ನ್ಯಾಯಾಲಯಕ್ಕೆ ಗೈರಾಗುತ್ತಿದ್ದು. ಈಗ ಕೋರ್ಟ್ ಬರೋಬ್ಬರಿ 51 ಮಂದಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

    2017ರಲ್ಲಿ ಸರ್ಕಾರ ಹಾಗೂ ಸ್ಥಳೀಯ ಗುಂಪಿನ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಅಮೆರಿಕ ಮೂಲದ ಮೈಕೆಲ್ ಶಾರ್ಪ್ ಹಾಗೂ ಚಿಲಿ ಮೂಲದ ಝೈದಾ ಕ್ಯಾಟಲಾನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅವರು ಸಾವನ್ನಪ್ಪಿದ 16 ದಿನಗಳ ಬಳಿಕ 2017 ಮಾರ್ಚ್ 28ರಂದು ಶವ ಪತ್ತೆಯಾಗಿತ್ತು. ಇದನ್ನೂ ಓದಿ: ಇರಾಕ್ ಏರ್‌ಸ್ಟ್ರೈಕ್ – 6 ಐಸಿಸ್‌ ಉಗ್ರರ ಹತ್ಯೆ

    2016ರಲ್ಲಿ ಸ್ಥಳೀಯ ಸಾಂಪ್ರದಾಯಿಕ ಮುಖ್ಯಸ್ಥ ಕಮುಯಿನಾ ನ್ಸಾಪು ಅವರ ಹತ್ಯೆಯ ಬಳಿಕ ಈ ಸಂಘರ್ಷ ಪ್ರಾರಂಭವಾಗಿತ್ತು. ಸಂಘರ್ಷದಲ್ಲಿ 3,400 ಜನರು ಪ್ರಾಣ ಬಿಟ್ಟಿದ್ದು, ಸಾವಿರಾರು ಜನರು ಊರು ಬಿಟ್ಟಿದ್ದರು. ಈ ವೇಳೆ ವಿಶ್ವಸಂಸ್ಥೆ ದೇಶದಲ್ಲಿ ಶಾಂತಿ ಸ್ಥಾಪಿಸಲು ಶಾಂತಿಪಾಲನ ಪಡೆಯ ಜೊತೆ ತಜ್ಞರನ್ನು ಕಳುಹಿಸಿಕೊಟ್ಟಿತ್ತು. ಇದನ್ನೂ ಓದಿ: ಅಮೆರಿಕದಲ್ಲಿ ಭಾರಿ ಹಿಮಪಾತದ ಸುಳಿವು – ನ್ಯೂಯಾರ್ಕ್ ಸೇರಿ ಹಲವೆಡೆ ತುರ್ತು ಪರಿಸ್ಥಿತಿ ಘೋಷಣೆ

    ವಿಶ್ವಸಂಸ್ಥೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಇಬ್ಬರು ಯುಎನ್ ತಜ್ಞರ ಹತ್ಯೆಗೈಯಲಾಗಿತ್ತು. ಶಿಕ್ಷೆ ಒಳಗಾದವರ ಪೈಕಿ 22 ಮಂದಿ ಪರಾರಿಯಾಗಿದ್ದಾರೆ.

  • ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

    ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

    ನ್ಯೂಯಾರ್ಕ್: ಭಯೋತ್ಪಾದನೆಯನ್ನು ರಾಜಕೀಯ ಸಾಧನವಾಗಿ ಬಳಸುವವರು ಭಯೋತ್ಪಾದನೆಯು ತಮಗೂ ಅಪಾಯಕಾರಿ ಎಂಬುದನ್ನು ತಿಳಿದಿರಬೇಕು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

    ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅಫ್ಘಾನ್ ನೆಲವನ್ನು ಭಯೋತ್ಪಾದನೆಗೆ ತಳಪಾಯವಾಗಿ ಬಳಸದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಕೆಲ ದೇಶಗಳು ತಮ್ಮ ಆಸಕ್ತಿಯನ್ನು ಹೆಚ್ಚಿಸಲು ಅಫ್ಘಾನಿಸ್ತಾನವನ್ನು ತಮ್ಮ ರಾಜಕೀಯ ಸಾಧನವಾಗಿ ಬಳಸಬಾರದು ಎಂದು ಪಾಕಿಸ್ತಾನನ ಹೆಸರನ್ನು ಹೇಳದೇ ಎಚ್ಚರಿಕೆ ನುಡಿಯನ್ನು ಆಡಿದರು.

    ಅಫ್ಘಾನಿಸ್ತಾನದಲ್ಲಿ, ಅಲ್ಪಸಂಖ್ಯಾತರಿಗೆ ಸಹಾಯ ಬೇಕು. ನಾವು ನಮ್ಮ ಜವಾಬ್ದಾರಿಯನ್ನು ಪೂರೈಸಬೇಕು. ನಾವು ಸಾಗರ ಸಂಪನ್ಮೂಲಗಳನ್ನು ಬಳಸಬಹುದೆಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು, ಆದರೆ ಅವುಗಳನ್ನು ದುರ್ಬಳಕೆ ಮಾಡಬಾರದು. ಪ್ರಪಂಚವು ಸಾಗರಗಳನ್ನು ವಿಸ್ತರಣೆಯಿಂದ ರಕ್ಷಿಸಬೇಕು ಮತ್ತು ಸಮುದ್ರ ವ್ಯಾಪಾರವನ್ನು ಮುಕ್ತವಾಗಿರಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

    ಮೋದಿ ಭಾಷಣದ ಮುಖ್ಯಾಂಶಗಳು
    ಜಗತ್ತಿನ ಪ್ರತಿ ಆರನೇ ವ್ಯಕ್ತಿ ಭಾರತೀಯ. ಭಾರತ ಬೆಳೆದಾಗ ಜಗತ್ತು ಬೆಳೆಯುತ್ತದೆ. ಭಾರತದಲ್ಲಿ ಸುಧಾರಣೆಯಾದಾಗ ಪ್ರಪಂಚವು ಬದಲಾಗುತ್ತದೆ.

    ನಾವು ಭಾರತವನ್ನು ವಿಶ್ವದ ಅತಿದೊಡ್ಡ ಹಸಿರು ಜಲಜನಕ ಕೇಂದ್ರವನ್ನಾಗಿಸುವ ಕೆಲಸವನ್ನೂ ಆರಂಭಿಸಿದ್ದೇವೆ.

    75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾರತದ ವಿದ್ಯಾರ್ಥಿಗಳು ಮಾಡಿದ 75 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸಲಿದೆ.

    ಭಾರತವು ವಿಶ್ವದ ಮೊದಲ ಡಿಎನ್‍ಎ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ವಿಶ್ವ ಸಂಸ್ಥೆಯಲ್ಲಿ ಹೇಳಲು ನನಗೆ ಸಂತೋಷವಾಗುತ್ತಿದೆ. ಇದನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಯಾರಿಗಾದರೂ ನೀಡಬಹುದು. ಒಂದು mRNA ಲಸಿಕೆ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ. ಭಾರತೀಯ ವಿಜ್ಞಾನಿಗಳು ಮೂಗಿನ ಮೂಲಕ ನೀಡಲು ಲಸಿಕೆಯನ್ನೂ ಅಭಿವೃದ್ಧಿಪಡಿಸುತ್ತಿದ್ದಾರೆ.  ಇದನ್ನೂ ಓದಿ: ಕ್ವಾಡ್ ಜಾಗತಿಕ ಒಳಿತಿಗಾಗಿ ಸದಾ ಶ್ರಮಿಸುತ್ತದೆ: ಪ್ರಧಾನಿ ಮೋದಿ 

    ಪ್ರಪಂಚದಾದ್ಯಂತದ ಇರುವ ಲಸಿಕೆ ತಯಾರಕರಿಗೆ ಭಾರತದಲ್ಲಿ ಲಸಿಕೆಗಳನ್ನು ತಯಾರಿಸಲು ನಾನು ಆಹ್ವಾನ ನೀಡುತ್ತಿದ್ದೇನೆ.

    ಭಾರತವು ಇಂದು ಸಮಗ್ರ ಸಮಾನತೆಯ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಎಲ್ಲರನ್ನೂ ಒಳಗೊಂಡು, ಎಲ್ಲರನ್ನು ಮುನ್ನಡೆಸುವುದೇ ನಮ್ಮ ಆದ್ಯತೆ.

    ಕಳೆದ 1.5 ವರ್ಷಗಳಲ್ಲಿ, ಇಡೀ ವಿಶ್ವವು 100 ವರ್ಷಗಳಲ್ಲಿ ಅತ್ಯಂತ ಭೀಕರವಾದ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ, ಈ ಮಾರಕ ಸಾಂಕ್ರಾಮಿಕದಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ ಮತ್ತು ಅವರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.