Tag: Union human resource development ministry

  • ನೀಟ್‍ನಂತೆ 2018ರಿಂದ ಎಂಜಿನಿಯರಿಂಗ್ ಏಕರೂಪದ ಪರೀಕ್ಷೆ

    ನವದೆಹಲಿ: ಎಂಜಿನಿಯರಿಂಗ್ ಹಾಗೂ ಆರ್ಕಿಟೆಕ್ಚರ್ ಕೋರ್ಸ್‍ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಒಂದೇ ಪ್ರವೇಶ ಪರೀಕ್ಷೆ ನಡೆಸುವ ಪ್ರಸ್ತಾವನೆಗೆ ಕೇಂದ್ರ ಒಪ್ಪಿಗೆ ಸೂಚಿಸಿದೆ.

    ವೈದ್ಯಕೀಯ ಕೋರ್ಸ್‍ಗಳಿಗೆ ನೀಟ್ ಪರೀಕ್ಷೆ ಇರುವ ಮಾದರಿಯಲ್ಲೇ ಇನ್ಮುಂದೆ ಆರ್ಕಿಟೆಕ್ಚರ್ ಹಾಗೂ ಎಂಜಿನಿಯರಿಂಗ್‍ಗೆ ದೇಶದಲ್ಲಿ ಒಂದೇ ಪ್ರವೇಶ ಪರೀಕ್ಷೆ ನಡೆಯಲಿದೆ. ಹೊಸ ನೀತಿ 2018ರಿಂದ ಜಾರಿಗೆ ಬರಲಿದೆ. ಈ ಪ್ರಸ್ತಾವನೆಯನ್ನು 2018-19 ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಸೂಕ್ತ ನಿಯಮ ರೂಪಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ)ಗೆ ಸೂಚಿಸಿದೆ.

    ಅಮೆರಿಕದಲ್ಲಿ ಕಾಲೇಜು ಪ್ರವೇಶಾತಿಗಾಗಿ ನಡೆಯುವ ಎಸ್‍ಎಟಿ ಪರೀಕ್ಷೆಯಂತೆಯೇ ವರ್ಷದಲ್ಲಿ ಹಲವು ಬಾರಿ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ವರದಿಯಾಗಿದೆ. ಆದ್ರೆ ಈ ಪರೀಕ್ಷೆ ಐಐಟಿ ಪ್ರವೇಶಾತಿಗೆ ಅನ್ವಯವಾಗುವುದಿಲ್ಲ. ಐಐಟಿಗಳು ತಮ್ಮದೇ ಪ್ರತ್ಯೇಕ ಪ್ರವೇಶ ಪರೀಕ್ಷೆ ಮಾಡುವುದನ್ನು ಮುಂದುವರೆಸುತ್ತವೆ ಎಂದು ಹೇಳಲಾಗಿದೆ.

    ಭಾಷಾ ವೈವಿಧ್ಯತೆಯನ್ನು ಗಮನದ್ಲಲಿಟ್ಟುಕೊಂಡು ಪರೀಕ್ಷಾ ಪ್ರಕ್ರಿಯೆಯನ್ನು ರೂಪಿಸಬೇಕೆಂದು ಎಐಸಿಟಿಇಗೆ ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ. ಈ ವರ್ಷ ನೀಟ್ ಪರೀಕ್ಷೆಯನ್ನು 10 ವಿವಿಧ ಭಾಷೆಗಳಲ್ಲಿ ನಡೆಸುತ್ತಿರುವ ರೀತಿಯಲ್ಲೇ ವಿವಿಧ ಭಾಷೆಗಳಲ್ಲಿ ಪ್ರವೇಶ ಪರೀಕ್ಷೆಯನ್ನು ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಎಐಸಿಟಿಇ ಮೂಲಗಳು ತಿಳಿಸಿವೆ.