Tag: union government

  • ಮೋದಿ ರೀತಿ ಡೋಂಗಿ ಬಜೆಟ್ ಮಂಡಿಸಲ್ಲ: ಸಿಎಂ ಎಚ್‍ಡಿಕೆ

    ಮೋದಿ ರೀತಿ ಡೋಂಗಿ ಬಜೆಟ್ ಮಂಡಿಸಲ್ಲ: ಸಿಎಂ ಎಚ್‍ಡಿಕೆ

    – ಆಪರೇಷನ್ ಕಮಲ ನಡೆಸಲು ಕೋಟಿ ಕೋಟಿ ಎಲ್ಲಿಂದ ಬರುತ್ತೆ..!

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ಸಿಎಂ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಮಂಡಿಸಿರುವ ಡೋಂಗಿ ಬಜೆಟ್ ರೀತಿ ನಾನು ಬಜೆಟ್ ಮಂಡಿಸುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಆಪರೇಷನ್ ಕಮಲ ನಡೆಸಲಾಗುತ್ತದೆ ಎಂಬ ಸುದ್ದಿಗಳ ನಡುವೆಯೇ ಇಂದು ಸಿಎಂ ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್‍ಡಿ ದೇವೇಗೌಡ ಅವರನ್ನು ನಗರದ ಪದ್ಮನಾಭನಗರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

    ಎಚ್‍ಡಿಡಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಎಚ್‍ಡಿಕೆ, ಬಿಜೆಪಿ ಅವರು ಆಪರೇಷನ್ ಮಾಡುತ್ತಿರುವುದು ದಿನನಿತ್ಯ ಮಾಹಿತಿ ಲಭಿಸುತ್ತಿದೆ. ನಿನ್ನೆ ಕೂಡ ಯಾವ ಯಾವ ಶಾಸಕರಿಗೆ ಎಷ್ಟು ಆಫರ್ ನೀಡಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಇದೆ. ಈ ಬಗ್ಗೆ ಸ್ವತಃ ಶಾಸಕರೇ ಮಾಹಿತಿ ನೀಡಿದ್ದಾರೆ. ಆದರೆ ಆಪರೇಷನ್ ಕಮಲ ಮಾಡಲು ಬಿಜೆಪಿ ನಾಯಕರಿಗೆ ಇಷ್ಟು ಹಣ ಎಲ್ಲಿಂದ ಬರುತ್ತದೆ ಎಂಬುವುದೇ ನನಗೆ ಶಾಕ್ ತಂದಿದೆ. ಪ್ರಧಾನಿ ಮೋದಿ ಅವರು ಭ್ರಷ್ಟಾಚಾರದ ಕಪ್ಪು ಹಣ ತಡೆಯುತ್ತೇವೆ ಎಂದು ಹೇಳುತ್ತಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ನಾಯಕರು ಶಾಸಕರಿಗೆ ನೀಡುವ ಆಫರ್ ನೋಡಿದ್ರೆ ಶಾಕ್ ಆಗುತ್ತದೆ. ನನ್ನ ಕಡೆಯಿಂದ ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ಮಾಡಲು ಅಡ್ಡಿ ಇಲ್ಲ, ಅವರು ಸಂತೋಷವಾಗಿ ಮಾಡಿಕೊಳ್ಳಲಿ ಎಂದರು.

    ಡೋಂಗಿ ಬಜೆಟ್: ಪ್ರಧಾನಿ ಮೋದಿ ಅವರು ರೀತಿ ನಾನು ಡೋಂಗಿ ಬಜೆಟ್ ಮಂಡಿಸುವುದಿಲ್ಲ. ಉತ್ತಮ ಬಜೆಟ್ ಮಂಡಿಸುತ್ತೇನೆ. ನನ್ನ ಬಜೆಟ್ ಮೇಲೆ ಎಲ್ಲರೂ ನಿರೀಕ್ಷೆ ಇಟ್ಟುಕೊಳ್ಳಬಹುದು. ಎಲ್ಲರ ಪರವಾದ ಬಜೆಟ್ ಮಂಡಿಸುತ್ತೇನೆ. ಸ್ಟೀಲ್ ಬ್ರಿಡ್ಜ್ ಯೋಜನೆ ಮಾತ್ರಯನ್ನು ಮಾತ್ರ ಜನರ ಅಭಿಪ್ರಾಯಕ್ಕೆ ಬಿಡುತ್ತೇನೆ, ಆ ಮೂಲಕ ಅವರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ಬಜೆಟ್ ಕುರಿತು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಣ್ಣ ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ.: ಪಿಯೂಷ್ ಗೋಯಲ್

    ಸಣ್ಣ ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ.: ಪಿಯೂಷ್ ಗೋಯಲ್

    ನವದೆಹಲಿ: 2019 ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಕೊನೆಯ ಬಜೆಟ್ ಮಂಡನೆ ಮಾಡಿದ್ದು, ಈ ವೇಳೆ ಸಣ್ಣ ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂ. ನಗದು ಹಣವನ್ನು ವರ್ಗಾವಣೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

    ರೈತರ ಖಾತೆಗೆ ನೇರ ನಗದು ಯೋಜನೆಯ ಪೂರ್ಣ ಪ್ರಮಾಣದ ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಾಡಿ 75 ಸಾವಿರ ಕೋಟಿ ರೂ. ವೆಚ್ಚ ಆಗಲಿದೆ. 2 ಹೆಕ್ಟೇರ್ ಪ್ರದೇಶಕ್ಕಿಂತ ಕಡಿಮೆ ಭೂಮಿಯನ್ನು ಹೊಂದಿರುವ ರೈತರನ್ನು ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಮೂರು ಹಂತದಲ್ಲಿ ಹಣ ಬಿಡುಗಡೆ ಆಗಲಿದೆ. ಈ ಯೋಜನೆಯಿಂದ ಸುಮಾರು 12 ಕೋಟಿ ಸಣ್ಣ ರೈತರಿಗೆ ಅನುಕೂಲ ಆಗಲಿದೆ. ಈ ಯೋಜನೆ 2018 ಡಿಸೆಂಬರ್ 1 ರಿಂದ ಪೂರ್ವಾನ್ವಯವಾಗಲಿದೆ ಎಂದು ಗೋಯಲ್ ತಿಳಿಸಿದರು.

    ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಜವಾಬ್ದಾರಿಯನ್ನು ಹೊತ್ತಿರುವ ಸಚಿವ ಫಿಯೂಷ್ ಗೋಯಲ್ ಅವರು ಬಜೆಟ್ ಮಂಡನೆ ಮಾಡಿದ್ದಾರೆ. ಇದರೊಂದಿಗೆ ರೈಲ್ವೇ ಬಜೆಟ್ ಕೂಡ ಇಂದೇ ಮಂಡನೆ ಆಗಲಿದೆ. ಲೋಕಸಭಾ ಚುನಾವಣೆಯನ್ನು ಗುರಿಯಾಗಿಕೊಂಡು ಮಂಡನೆ ಆಗಿರುವ ಬಜೆಟ್‍ನಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಕೂಡ ಹೊಸ ಪಿಂಚಣಿ ಯೋಜನೆಯನ್ನು ಜಾರಿ ಮಾಡಿದ್ದು, ಇದರ ಅನ್ವಯ ಫಲಾನುಭವಿಗಳಿಗೆ ವಾರ್ಪಿಕ 3 ಸಾವಿರ ರೂ. ಲಭಿಸಲಿದೆ. ಅಲ್ಲದೇ ಮನ್ರೇಗಾ (ಎಂಎನ್‍ಆರ್‍ಇಜಿಎ) ಯೋಜನೆ ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಜ.30 ರಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

    ಜ.30 ರಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

    ನವದೆಹಲಿ: ಲೋಕಪಾಲ ನೇಮಕ ಮಾಡುವಂತೆ ಒತ್ತಾಯಿಸಿ 81 ವರ್ಷದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಜನವರಿ 30 ರಿಂದ ಉಪವಾಸ ಸತ್ಯಾಗ್ರಹ ಆರಂಭ ಮಾಡುವುದಾಗಿ ಹೇಳಿದ್ದಾರೆ.

    ಭ್ರಷ್ಟಚಾರ ವಿರುದ್ಧ ಹೋರಾಟ ಮಾಡಲು ಲೋಕಪಾಲ ಸಂಸ್ಥೆ ಅನಿವಾರ್ಯವಾಗಿದ್ದು, ಕೂಡಲೇ ಸಂಸ್ಥೆಗೆ ಮುಖ್ಯಸ್ಥರನ್ನು ನೇಮಕ ಮಾಡಬೇಕು. 2013ರಲ್ಲಿ ಲೋಕಪಾಲ ಮಸೂದೆ ರಚನೆ ಆಗಿದ್ದು, 2014ರಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಆಡಳಿತವಹಿಸಿಕೊಂಡಿತ್ತು. ಆಗ ಉತ್ತಮ ಆಡಳಿತ ನಿರೀಕ್ಷೆಯಲ್ಲಿದ್ದೇವೂ. ಆದರೆ ಕಳೆದ 5 ವರ್ಷಗಳಲ್ಲಿ ಅವರು ಏನು ಮಾಡಲಿಲ್ಲ. ಆದ್ದರಿಂದ ಉಪವಾಸ ಸತ್ಯಾಗ್ರಹ ಮಾಡಲು ಮುಂದಾಗಿದ್ದೇನೆ. ಮಹಾರಾಷ್ಟ್ರದ ರಾಲೇಗಾವ್ ಸಿದ್ದಿಯಲ್ಲಿ ಸತ್ಯಾಗ್ರಹ ಮಾಡುವುದಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಲೋಕಪಾಲ ನೇಮಕ ಮಾಡುವಂತೆ ಈ ಹಿಂದೆ ಅಣ್ಣಾ ಹಜಾರೆ ಪ್ರಧಾನಿ ಅವರಿಗೆ ಪತ್ರವನ್ನು ಬರೆದಿದ್ದರು. ಅಲ್ಲದೇ ಈ ಹಿಂದೆಯೇ ಉಪವಾಸ ಸತ್ಯಾಗ್ರಹ ಮಾಡಲು ತೀರ್ಮಾನಿಸಿದ್ದ ಹಜಾರೆ ಅವರು ಕೇಂದ್ರ ಸರ್ಕಾರ ಭರವಸೆಯ ಮೇರೆಗೆ ಹಿಂದೆ ಸರಿದ್ದರು. ಆದರೆ ಇನ್ನು ಅವರ ಸುಳ್ಳು ಆಶ್ವಾಸನೆಗಳನ್ನು ನಂಬಲು ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುದ್ಧವಿಮಾನ ಖರೀದಿಸುವ ಉದ್ದೇಶವೇ ಕಾಂಗ್ರೆಸ್ ಪಕ್ಷಕ್ಕೆ ಇರಲಿಲ್ಲ : ನಿರ್ಮಲಾ ಸೀತಾರಾಮನ್

    ಯುದ್ಧವಿಮಾನ ಖರೀದಿಸುವ ಉದ್ದೇಶವೇ ಕಾಂಗ್ರೆಸ್ ಪಕ್ಷಕ್ಕೆ ಇರಲಿಲ್ಲ : ನಿರ್ಮಲಾ ಸೀತಾರಾಮನ್

    ನವದೆಹಲಿ: ಲೋಕಸಭೆಯಲ್ಲಿ ಇಂದು ರಫೇಲ್ ವಿವಾದ ಕುರಿತು ಕಾವೇರಿದ ಚರ್ಚೆ ನಡೆದಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಗಳಿಗೆ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಆವೇಷಭರಿತವಾಗಿ ಪ್ರತ್ಯುತ್ತರ ನೀಡಿದ್ದಾರೆ.

    ಯುದ್ಧವಿಮಾನ ಖರೀದಿಸುವ ಉದ್ದೇಶವೇ ಕಾಂಗ್ರೆಸ್ ಪಕ್ಷಕ್ಕೆ ಇರಲಿಲ್ಲ. ಅಲ್ಲದೇ ಅವರಿಗೆ ದೇಶದ ಭದ್ರತೆಯ ವಿಷಯ ಆದ್ಯತೆಯಾಗಿರಲಿಲ್ಲ. `ಕಾಣಿಕೆ’ ಸಿಗದ ಕಾರಣ ಕಾಂಗ್ರೆಸ್ ರಫೇಲ್ ಒಪ್ಪಂದ ಸ್ಥಗಿತಗೊಳಿಸಿತ್ತು. ಎನ್‍ಡಿಎ ಅವಧಿಯಲ್ಲಿ ದಲ್ಲಾಳಿಗಳಿಲ್ಲದೇ ಎಲ್ಲ ವ್ಯವಹಾರ ಪೂರ್ಣಗೊಂಡಿದೆ. 5 ವರ್ಷದ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಪ್ರಕರಣಗಳು ವರದಿಯಾಗಿಲ್ಲ ಎಂದು ತಿರುಗೇಟು ಕೊಟ್ಟರು.

    ಎಚ್‍ಎಎಲ್ ಅಭಿವೃದ್ಧಿಪಡಿಸಲು ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಆದರೆ ಈಗ ಮೊಸಳೆ ಕಣ್ಣೀರು ಹಾಕುತ್ತಿದೆ. ಎಚ್‍ಎಎಲ್ ನಮ್ಮ ದೇಶದ ಹೆಮ್ಮೆ. ಎಚ್‍ಎಎಲ್‍ಗೆ 1 ಲಕ್ಷ ಕೋಟಿ ರೂ. ಮೌಲ್ಯದ ಒಪ್ಪಂದವನ್ನು ಎನ್‍ಡಿಎ ಸರ್ಕಾರ ಕೊಟ್ಟಿದೆ ಎಂದು ಸ್ಪಷ್ಟಪಡಿಸಿದರು.

    ರಫೇಲ್ ಜೆಟ್ ದರ 1,600 ಕೋಟಿ ರೂ. ಅಥವಾ 1,500 ಕೋಟಿ ರೂ. ಅಲ್ಲ. ರಫೇಲ್ ಜೆಟ್ ದರವನ್ನು ನಾವು ಖರೀದಿಸುತ್ತಿರುವುದು 670 ಕೋಟಿ ರೂ. ವೆಚ್ಚದಲ್ಲಿ. ಯುಪಿಎ ಅವಧಿಯಲ್ಲಿ ಇದರ ಮೌಲ್ಯ 737 ಕೋಟಿ ರೂ. ಆಗಿತ್ತು. ನಾವು ಶೇಕಡ 9 ರಷ್ಟು ಕಡಿಮೆ ಮೊತ್ತದಲ್ಲಿ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಭಾವೋದ್ವೇಗದಲ್ಲಿ ಮಾತನಾಡಿದರು. ಈ ವೇಳೆ ರಕ್ಷಣಾ ಸಚಿವೆಯ ಮಾತಿಗೆ ಅಮಿತ್ ಶಾ ಸೇರಿದಂತೆ ಪಕ್ಷದ ನಾಯಕರು ಭೇಷ್ ಅಂದಿದ್ದಾರೆ.

    ಇತ್ತ ಮತ್ತೆ ರಫೇಲ್ ವಿವಾದವನ್ನೇ ಮತ್ತೆ ಪ್ರಸ್ತಾಪಿಸಿರುವ ರಾಹುಲ್ ಗಾಂಧಿ ಅವರು, ನನ್ನ ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ. ರಕ್ಷಣಾ ಸಚಿವೆ ನಿರ್ಮಲಾ ಅವರು ಓಡಿಹೋಗುವ ಯತ್ನ ಮಾಡಿದ್ದಾರೆ. ಅನಿಲ್ ಅಂಬಾನಿಯನ್ನ ಪಾಲುದಾರನನ್ನಾಗಿ ಮಾಡುವಂತೆ ಡಸೌಲ್ಟ್ ಗೆ ಮೋದಿ ಅವರು ಒತ್ತಡ ಹೇರಿದ್ದಾರೆ ಎಂದು ರಾಹುಲ್ ಗಾಂಧಿ ಮತ್ತೊಂದು ಆರೋಪ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಪತ್ತೆಯಾದ ಮೀನುಗಾರರ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ- ಶೋಭಾ ಕರಂದ್ಲಾಜೆ ಗಂಭೀರ ಆರೋಪ

    ನಾಪತ್ತೆಯಾದ ಮೀನುಗಾರರ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ- ಶೋಭಾ ಕರಂದ್ಲಾಜೆ ಗಂಭೀರ ಆರೋಪ

    ನವದೆಹಲಿ: ಉಡುಪಿಯಿಂದ ಸುವರ್ಣ ತ್ರಿಭುಜ ಅನ್ನೋ ದೋಣಿ 2018ರ ಡಿ.13ರಿಂದ ಉಡುಪಿಯಿಂದ ಹೊರಟಿದ್ದು, ನಾಪತ್ತೆಯಾಗಿದೆ. ಇದೂವರೆಗೂ ದೋಣಿಯ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳಲು ಮುಂದಾಗಿಲ್ಲ ಅಂತ ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೀನುಗಾರರು ಮೀನು ಹಿಡಿಯಲು ಹೋಗುವ ಸಂದರ್ಭದಲ್ಲಿ 8-10 ದೋಣಿಗಳು ಒಟ್ಟಿಗೆ ಸಾಗುತ್ತವೆ. 15ನೇ ತಾರೀಕಿನಂದು ರಾತ್ರಿ 1 ಗಂಟೆಯವರೆಗೆ ಈ ಎಲ್ಲಾ ದೋಣಿಗಳಲ್ಲಿದ್ದ ಮೀನುಗಾರರು ಪರಸ್ಪರ ಸಂಪರ್ಕದಲ್ಲಿದ್ದರು. ಮಹಾರಾಷ್ಟ್ರದ ಸಿಂಧುದುರ್ಗದಿಂದ ಕೊನೆಯ ವಯರ್ ಲೆಸ್ ಮೆಸೇಜ್ ಮತ್ತು ಮೊಬೈಲ್ ಮೆಸೇಜ್ ಸುವರ್ಣ ತ್ರಿಭುಜ ಅನ್ನೋ ದೋಣಿಯಲ್ಲಿದ್ದ ಮೀನುಗಾರರಿಂದಲೂ ಮೆಸೇಜ್ ಗಳು ಬಂದಿತ್ತು. ಅದರಲ್ಲಿ 7 ಮೀನುಗಾರರಿದ್ದರು. ಅದಾದ ಬಳಿಕ ಇದುವರೆಗೂ ಮೀನುಗಾರರ ದೋಣಿ ನಾಪತ್ತೆಯಾಗಿದೆ. ಎಲ್ಲಿದೆ ಅನ್ನೋದು ಇನ್ನೂ ತಿಳಿದುಬಂದಿಲ್ಲ ಅಂದ್ರು.

    ಕೋಸ್ಟಲ್ ಗಾರ್ಡ್ ಅವರಲ್ಲಿ ವಿನಂತಿ ಮಾಡಿಕೊಂಡ ಬಳಿಕ ಕರಾವಳಿಯ ಎಲ್ಲಾ ಪ್ರದೇಶದಲ್ಲಿಯೂ ಹುಡುಕಾಡಿದ್ದಾರೆ. ಸಾಮಾನ್ಯವಾಗಿ ದೋಣಿ ಮುಳುಗಡೆಯಾದ್ರೆ ಅದರ ಡೀಸೆಲ್ ನೀರಿನಲ್ಲಿ ತೇಲುತ್ತದೆ. ಅಲ್ಲದೇ ಮೀನುಗಾರಿಕೆಗೆ ಬೇಕಾದ ಪ್ಲಾಸ್ಟಿಕ್ ಡಬ್ಬಗಳು ತೇಲುತ್ತವೆ. ಆದ್ರೆ ಆ ರೀತಿಯ ಯಾವುದೇ ಕುರುಹುಗಳು ಕಾಣಿಸುತ್ತಿಲ್ಲ ಅಂತ ಮೀನುಗಾರರು ಹೇಳುತ್ತಿದ್ದಾರೆ.

    ಈ 7 ಜನ ಮೀನುಗಾರರ ಕುಟುಂಬ ಇಂದು ತುಂಬಾ ನೊಂದಿದ್ದು, ದುಃಖದಲ್ಲಿದ್ದಾರೆ. ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳಿಗೆ, ಮಹಾರಾಷ್ಟ್ರ ಸರ್ಕಾರದ ಗೃಹಸಚಿವ, ಡಿಜಿ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಇವರಿಗೆ ಎಲ್ಲಾ ವಿಚಾರಗಳನ್ನು ಈಗಾಗಲೇ ತಿಳಿಸಿದ್ದೇವೆ. ಪತ್ರನೂ ಬರೆದಿದ್ದೇನೆ ಅಂದ್ರು.

    ಕರ್ನಾಟಕ ರಾಜ್ಯ ಸರ್ಕಾರ ಮೀನುಗಾರಿಕಾ ಇಲಾಖೆ ಯಾವ ಕ್ರಮವನ್ನು ಕೈಗೊಳ್ಳಬೇಕಾಗಿತ್ತೋ ಅದನ್ನು ಇಂದಿನವರೆಗೆ ತೆಗೆದುಕೊಂಡಿಲ್ಲ. ಸಹಜವಾಗಿ ನಾವು ಒಬ್ಬರು ತೀರಿಕೊಂಡರೆ ಆತಂಕ ಪಡುತ್ತೇವೆ. ಆದ್ರೆ 7 ಜನ ನಾಪತ್ತೆಯಾದ್ರೂ ಕೂಡ ಇಂದಿನವರೆಗೆ ಯಾವುದೇ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು.

    ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ನಾನು ಮಾತನಾಡಿದ ಬಳಿಕ ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಈ ಒಂದು ಪತ್ರದ ಹೊರತಾಗಿ ಮೀನುಗಾರರನ್ನು ಹುಡುಕೋದ್ರಲ್ಲಿ ಯಾವುದೇ ರೀತಿಯ ಪ್ರಯತ್ನಗಳು ಕಾಣಿಸುತ್ತಿಲ್ಲ ಅಂತ ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕಸುಬಿಗಾಗಿ ಕಡಲಿಗಿಳಿದವರು 17 ದಿನದಿಂದ ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ

    ಉಡುಪಿಯ ಮಲ್ಪೆಯಲ್ಲಿರುವ ಮೀನುಗಾರರ ಜೊತೆ ಇತ್ತೀಚೆಗೆ ಮಾತುಕತೆ ನಡೆಸಿದಾಗ ಅವರು, ಈ ಹಿಂದೆ ಕೂಡ ಸಿಂಧುದುರ್ಗದಿಂದ ನಮ್ಮ ದೋಣಿಯನ್ನು ತಗೊಂಡೋಗಲಾಗಿತ್ತು. ಬಳಿಕ ಅವರನ್ನು ಒತ್ತೆಯಾಳಗಿರಿಸಿಕೊಳ್ಳಲಾಗಿತ್ತು. ಈ ಕಾರಣದಿಂದ ಇಂದು ಈ ದೋಣಿ ಕೂಡ ಮುಳುಗಡೆ ಆಗಿಲ್ಲ ಅಂತಂದ್ರೆ ಎಲ್ಲಿ ಹೋಯಿತು ಅನ್ನೋ ಪ್ರಶ್ನೆ ಅವರಲ್ಲಿ ಮೂಡಿದೆ. ಯಾರು ಅವರನ್ನು ಹಿಡಿದಿಟ್ಟುಕೊಂಡಿದ್ದಾರೆ. ಯಾರು ಅವರನ್ನು ಒತ್ತೆಯಾಳಾಗಿರಸಿಕೊಂಡಿದ್ದಾರೆ. ಯಾವುದಾದರೂ ಡ್ರಗ್ ಮಾಫಿಯಾದ ಕೈವಾಡವಿದೆಯಾ ಅನ್ನೋವಂತದ್ದನ್ನು ಪತ್ತೆ ಹಚ್ಚುವ ದೊಡ್ಡ ಜವಾಬ್ದಾರಿ ಇದೆ. ಹೀಗಾಗಿ ರಾಜ್ಯ ಸರ್ಕಾರ ಮುತುವರ್ಜಿವಹಿಸಿ ಕ್ರಮ ಕೈಗೊಳ್ಳಬೇಕು ಅಂತ ಅವರು ಆಗ್ರಹಿಸಿದ್ರು. ಇದನ್ನೂ ಓದಿ: ಕಡಲಿನಿಂದ್ಲೇ ಅಪಹರಣ ಮಾಡಿದ್ರಾ ಉಗ್ರರು!

    ಇಂದು ಕೇವಲ ಒಂದು ದೋಣಿಯ ಪ್ರಶ್ನೆಯಲ್ಲ. ಇಡೀ ಉಡುಪಿ ಜಿಲ್ಲೆಯ, ಉತ್ತರ ಕನ್ನಡ ಹಾಗೂ ದಕ್ಷಿಣ ಕ್ನನಡದ ವಿಚಾರವಾಗಿದೆ. ಇಲ್ಲಿ ಮೀನುಗಾರಿಕೆ ಕಳೆದ 10 ದಿನಗಳಿಂದ ಬಂದ್ ಆಗಿದೆ. ಯಾಕಂದ್ರೆ ಎಲ್ಲರೂ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕ ಸರ್ಕಾರ ತಕ್ಷಣ ಗೋವಾ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಜೊತೆ ಸಿಎಂ ಎಚ್ ಡಿ ಕುಮಾರಸ್ವಾಮಿಯವರು ಮಾತನಾಡಬೇಕು. ಕೇಂದ್ರ ಸರ್ಕಾರದ ಸಹಾಯವನ್ನೂ ಕೂಡ ಪಡೆದುಕೊಂಡು ತಕ್ಷಣ ಮೀನುಗಾರರನ್ನು ಹಾಗೂ ದೋಣಿಯನ್ನು ಹುಡುಕುವ ಕೆಲಸವನ್ನು ಮಾಡಬೇಕು ಅಂತ ಅವರು ಒತ್ತಾಯಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಬ್ಬಳ್ಳಿ, ಧಾರವಾಡ ನಡುವೆ ಎಲಿವೇಟೆಡ್ ರಸ್ತೆ ನಿರ್ಮಾಣಕ್ಕೆ ಕೇಂದ್ರದ ಒಪ್ಪಿಗೆ

    ಹುಬ್ಬಳ್ಳಿ, ಧಾರವಾಡ ನಡುವೆ ಎಲಿವೇಟೆಡ್ ರಸ್ತೆ ನಿರ್ಮಾಣಕ್ಕೆ ಕೇಂದ್ರದ ಒಪ್ಪಿಗೆ

    – ಸಿಎಂ ಎಚ್‍ಡಿಕೆ ಭೇಟಿಗೆ ಪ್ರಧಾನಿ ಮೋದಿ ಒಪ್ಪಿಗೆ

    ನವದೆಹಲಿ: ಹುಬ್ಬಳ್ಳಿ, ಧಾರವಾಡ ಅವಳಿ ನಗರಗಳ ನಡುವೆ ಎಲಿವೇಟೆಡ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಚಿವ ಗಡ್ಕರಿ ಒಪ್ಪಿಗೆ ಸೂಚಿಸಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಮುಗಿದ ತಕ್ಷಣ ಕಾಮಗಾರಿ ಆರಂಭಿಸುವುದಾಗಿ ಹೇಳಿದ್ದಾರೆ.

    ನವದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ರಾಜ್ಯದ ವಿವಿಧ ಹೆದ್ದಾರಿ ಕಾಮಗಾರಿಗಳಿಗೆ ಅನುಮತಿ ನೀಡುವಂತೆ ಮನವಿ ಮಾಡಿದರು. ಸಚಿವರ ಭೇಟಿ ವೇಳೆ ಕರ್ನಾಟಕ, ಗೋವಾ ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ಎ ಪ್ರಸ್ತುತ ಎರಡು ಪಥಗಳದ್ದಾಗಿದ್ದು, ಇದರ ಅಗಲೀಕರಣಕ್ಕಾಗಿ ಮುಂದಿನ 18 ತಿಂಗಳ ಕಾಲ ಬಂದ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಳಸಬಹುದಾದ ಪರ್ಯಾಯ ಸಂಪರ್ಕ ಮಾರ್ಗಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳುವ ಬಗ್ಗೆಯೂ ಪ್ರಸ್ತಾಪ ಮಾಡಲಾಯಿತು. ಬೇಲೂರು ಹಾಸನ ನಡುವೆ ರಾಷ್ಟ್ರೀಯ ಹೆದ್ದಾರಿ 373ರ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು.

    ಇದೇ ವೇಳೆ ಲೋಕೋಪಯೋಗಿ ಸಚಿವ ರೇವಣ್ಣ ಅವರು ಬೇಲೂರು – ಹಾಸನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಮನವಿ ಮಾಡಿದರು. ಅಲ್ಲದೇ ಹಾಸನ- ಹೊಳೆನರಸೀಪುರ ಚತುಷ್ಪಥ ರಸ್ತೆ, ಚನ್ನರಾಯಪಟ್ಟಣ- ಹೊಳೆ ನರಸೀಪುರ – ಅರಕಲಗೂಡು – ಕೊಡ್ಲಿಪೇಟೆ- ಮಡಿಕೇರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸುವ ಬಗ್ಗೆಯೂ ಭೇಟಿ ವೇಳೆ ಚರ್ಚಿಸಲಾಯಿತು.

    ಉಳಿದಂತೆ ಕಲ್ಲಿದ್ದಲು ಪೂರೈಕೆ ವಿಚಾರವಾಗಿ ನಾಳೆ ಬೆಳಗ್ಗೆ ಪಿಯೂಶ್ ಗೋಯಲ್ ಹಾಗೂ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡುವಂತೆ ಮಧ್ಯಾಹ್ನ 1 ಗಂಟೆಗೆ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಯಾಗಲಿರುವ ಸಿಎಂ, ಸಂಜೆ 5 ಗಂಟೆಗೆ ವೇಳೆಗೆ ಪ್ರಧಾನಿ ಮೋದಿ ಜೊತೆ ಚರ್ಚೆ ನಡೆಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೇಕೆದಾಟು ಡ್ಯಾಂ – ಕರ್ನಾಟಕಕ್ಕೆ ಆರಂಭಿಕ ಗೆಲುವು, ತಮಿಳುನಾಡಿಗೆ ಮುಖಭಂಗ

    ಮೇಕೆದಾಟು ಡ್ಯಾಂ – ಕರ್ನಾಟಕಕ್ಕೆ ಆರಂಭಿಕ ಗೆಲುವು, ತಮಿಳುನಾಡಿಗೆ ಮುಖಭಂಗ

    ಬೆಂಗಳೂರು: ತಮಿಳುನಾಡು ವಿರೋಧದ ನಡುವೆ ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಆರಂಭಿಕ ಒಪ್ಪಿಗೆ ಸಿಕ್ಕಿದೆ. ಕೇಂದ್ರ ಜಲ ಸಂಪನ್ಮೂಲ ಇಲಾಖೆಯಿಂದ ಪ್ರಾಥಮಿಕ ಹಂತದ ಅನುಮತಿ ದೊರಕಿದ್ದು ಯೋಜನೆ ವಿರೋಧಿಸಿದ್ದ ತಮಿಳುನಾಡಿಗೆ ತೀವ್ರ ಹಿನ್ನಡೆಯಾಗಿದೆ. ಮೇಕೆದಾಟು ಯೋಜನೆ ಸಾಧ್ಯಸಾಧ್ಯತೆ ಸಂಬಂಧಿಸಿದಂತೆ ಪ್ರಾಥಮಿಕ ವರದಿ “ಪ್ರಿ-ಫೀಸಿಬಿಲಿಟಿ ರಿಪೋರ್ಟ್” ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ನಿರ್ದೇಶನ ನೀಡಿದೆ.

    ಈ ಬಗ್ಗೆ ಕೇಂದ್ರ ಜಲ ಸಂಪನ್ಮೂಲ ಅಧಿಕಾರಿಗಳು ರಾಜ್ಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಯೋಜನೆಯ ಪ್ರಾಥಮಿಕ ವರದಿ ನೀಡಲು ಸೂಚನೆ ನೀಡಿದೆ. ಕಾವೇರಿ ನದಿ ನೀರು ಹಂಚಿಕೆ ವಿವಾದ ಬಳಿಕ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡುವಂತೆ ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿತ್ತು. ಕರ್ನಾಟಕದಲ್ಲೇ ಅಣೆಕಟ್ಟು ನಿರ್ಮಿಸಿಕೊಳ್ಳುತ್ತಿದ್ದು, ತಮಿಳುನಾಡಿನ ಒಪ್ಪಿಗೆಯ ಅವಶ್ಯಕತೆ ಇಲ್ಲ ಎಂದಿತ್ತು.

    ಮೇಕೆದಾಟು ಯೋಜನೆಯಿಂದ ಮಳೆಗಾಲದ ಸಂದರ್ಭದಲ್ಲಿ ಸಮುದ್ರಕ್ಕೆ ಹರಿದು ಹೋಗಬಹುದಾದ ಹೆಚ್ಚುವರಿ ನೀರನ್ನು ಸಂಗ್ರಹಿಸಿ ಇಡಬಹುದು. ಬೇಸಿಗೆ ವೇಳೆ ಕರ್ನಾಟಕ ಹಾಗೂ ತಮಿಳುನಾಡು ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಬಹುದು. ಜಲವಿದ್ಯುತ್ ಉತ್ಪಾದನೆಗೂ ಅನುಕೂಲ ಆಗಲಿದೆ ಎಂದು ಕೇಂದ್ರದ ಮುಂದೆ ಕರ್ನಾಟಕ ಪ್ರಸ್ತಾವನೆ ಸಲ್ಲಿಸಿತ್ತು. ಕರ್ನಾಟಕ ಪ್ರಸ್ತಾವನೆಯನ್ನು ಪರಿಗಣಿಸಿರುವ ಕೇಂದ್ರ ಜಲಸಂಪನ್ಮೂಲ ಇಲಾಖೆ ಯೋಜನೆಯು ಪ್ರಾಥಮಿಕ ವರದಿ ಕುರಿತು ಮಾಹಿತಿ ನೀಡುವಂತೆ ಕೋರಿದೆ. ಕೇಂದ್ರದ ಈ ನಡೆಯಿಂದ ಕಾಲುಕೆರೆದು ಜಗಳಕ್ಕೆ ಬರುತ್ತಿದ್ದ ತಮಿಳುನಾಡಿಗೆ ಮುಖಭಂಗವಾಗಿದೆ.

    ತಮಿಳುನಾಡಿಗೆ ಹಿನ್ನಡೆ:
    ಸೆಪ್ಟೆಂಬರ್ ತಿಂಗಳಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡುವಂತೆ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಭೇಟಿಯಾಗಿ ಮನವಿ ಮಾಡಿದ್ದರು. ಈ ಬೆನ್ನಲ್ಲೇ ತಮಿಳುನಾಡು ಸಿಎಂ ಪಳನೀಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮೇಕೆದಾಟು ಯೋಜನೆ ಒಪ್ಪಿಗೆ ಸೂಚಿಸದಂತೆ ಒತ್ತಾಯಿಸಿದ್ದರು. ಅಲ್ಲದೇ ಮೇಕೆದಾಟು ಯೋಜನೆ ಪ್ಲಾನ್ ಸರಿ ಇಲ್ಲ ಅಣೆಕಟ್ಟು ನಿರ್ಮಾಣದಿಂದ ನದಿ ನೀರಿನ ನೈಸರ್ಗಿಕ ಹರಿವಿಗೆ ತೊಂದರೆ ಆಗಲಿದೆ. ಅಲ್ಲದೆ ಇದರಿಂದ ಪರಿಸರಕ್ಕೆ ದಕ್ಕೆಯಾಗುವ ಸಾಧ್ಯತೆ ಇದ್ದು, ಕರ್ನಾಟಕ ಮನವಿ ತಿರಸ್ಕರಿಸಬೇಕು ಎಂದು ಪತ್ರವನ್ನು ಬರೆದಿದ್ದರು.

    ಈಗ ತಮಿಳುನಾಡು ವಿರೋಧದ ನಡುವೆಯೇ ಜಲಸಂಪನ್ಮೂಲ ಇಲಾಖೆ ವರದಿ ಕೇಳಿರುವುದು ಕರ್ನಾಟಕ ಪಾಲಿಗೆ ಆಶಾಭಾವನೆ ಮೂಡಿಸಿದೆ. ಕಾವೇರಿ, ಮಹದಾಯಿ ಬಳಿಕ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಶುಭ ಸುದ್ದಿ ಸಿಗುವ ಸಾಧ್ಯತೆ ಕಂಡುಬರುತ್ತಿದೆ. ಸದ್ಯ ಇದು ಕರ್ನಾಟಕದ ಆರಂಭಿಕ ಜಯ ಎನಿಸಿದರೂ ಪ್ರಾಥಮಿಕ ವರದಿ ಬಳಿಕ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಹಾಗೂ ತಾಂತ್ರಿಕ ವಿಭಾಗಗಳಿಂದ ಮೇಕೆದಾಟು ಯೋಜನೆಗೆ ಒಪ್ಪಿಗೆ ಸಿಗಬೇಕಿದೆ.

    ಏನಿದು ಮೇಕೆದಾಟು ಯೋಜನೆ?
    ಮೇಕೆದಾಟು ಬಳಿ ಕುಡಿಯುವ ನೀರಿನ ಯೋಜನೆಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಕಿರು ಅಣೆಕಟ್ಟು ಕಟ್ಟಲು ಕರ್ನಾಟಕ ಸರ್ಕಾರ ಮುಂದಾಗಿದೆ. ಕಾವೇರಿ ನದಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ಬಾರಿಯೂ ಕ್ಯಾತೆ ತೆಗೆಯುವ ತಮಿಳುನಾಡು ಈಗ ಮತ್ತೆ ಅಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದೆ. ಅಷ್ಟೇ ಅಲ್ಲದೇ ಸುಪ್ರೀಂ ಕೋರ್ಟ್‍ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ ಈ ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದೆ.

    ಕರ್ನಾಟಕ ಸರ್ಕಾರ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಿಸಲು ಹೊರಟ್ಟಿದ್ದು ಯಾಕೆ?
    ಕಾವೇರಿ ನ್ಯಾಯಾಧೀಕರಣ ಐತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ರತಿವರ್ಷ ಕರ್ನಾಟಕ 177 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಆದೇಶ ನೀಡಿದೆ. ಈ ನೀರಿನ ಜೊತೆಗೆ ಹೆಚ್ಚುವರಿಯಾಗಿ ಒಂದು ಅಂದಾಜಿನ ಪ್ರಕಾರ 80, 90 ಟಿಎಂಸಿ ನೀರು ತಮಿಳುನಾಡಿಗೆ ಸೇರುತ್ತದೆ. ಹೀಗೆ ರಾಜ್ಯದಿಂದ ಹರಿದು ಹೋಗುತ್ತಿರುವ ಈ ನೀರನ್ನು ಸಂಗ್ರಹಿಸಿ ಬೆಂಗಳೂರು ನಗರಕ್ಕೆ ಪೂರೈಕೆ ಮಾಡಲು ಕರ್ನಾಟಕ ಸರ್ಕಾರ ಅಣೆಕಟ್ಟು ನಿರ್ಮಿಸಲು ಹೊರಟಿದೆ.

    ತಮಿಳುನಾಡು ವಿರೋಧ ಯಾಕೆ?
    ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಬೇಕೆಂಬ ಪ್ರಸ್ತಾಪ 1952ರಲ್ಲೇ ಚಿಗುರೊಡೆದಿತ್ತು. ಆದರೆ ಕೆಲ ಕಾರಣಗಳಿಂದ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟಿತ್ತು. 1996ರಲ್ಲಿ ಮೇಕೆದಾಟುವಿನಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿ ಕೇಂದ್ರ ವಿದ್ಯುತ್ ಪ್ರಾಧಿಕಾರಕ್ಕೆ ಅನುಮೋದನೆಗೆ ಕಳುಹಿಸಿಕೊಟ್ಟಿತ್ತು. ಆದರೆ ಇದೇ ಸಮಯದಲ್ಲಿ ಕಾವೇರಿ ವಿವಾದ ನ್ಯಾಯಾಧಿಕರಣ ಮುಂದೆ ಇದ್ದ ಕಾರಣ ಮೊದಲು ಈ ವಿವಾದವನ್ನು ಬಗೆಹರಿಸಿಕೊಳ್ಳಿ, ನಂತರ ಈ ವಿಚಾರವನ್ನು ಪ್ರಸ್ತಾಪ ಮಾಡಿ ಎಂದು ಹೇಳುವ ಮೂಲಕ ವಿದ್ಯುತ್ ಪ್ರಾಧಿಕಾರ ಉಪಾಯದಿಂದ ಜಾರಿಕೊಂಡಿತ್ತು. 2007ರಲ್ಲಿ ನ್ಯಾಯಾಧಿಕರಣ ಅಂತಿಮ ತೀರ್ಪು ಪ್ರಕಟಿಸಿದ ಬಳಿಕ ಮತ್ತೆ ಮೇಕೆದಾಟು ಯೋಜನೆ ಗರಿಗೆದರತೊಡಗಿತು. ಅಂತಿಮವಾಗಿ 2013ರಲ್ಲಿ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ನಿರ್ಮಿಸಲು ಮಹತ್ವದ ಹೆಜ್ಜೆ ಇಟ್ಟಿತು. ರಾಜ್ಯ ಸರ್ಕಾರ ಅಣೆಕಟ್ಟು ನಿರ್ಮಿಸಲು ಮುಂದಾಗುತ್ತಿದ್ದಂತೆ ಆಗಿನ ತಮಿಳುನಾಡು ಸಿಎಂ ಜಯಲಲಿತಾ ಕೇಂದ್ರದ ಮೊರೆ ಹೋಗಿ, ಸುಪ್ರೀಂನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಈಗ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧವಾಗುತ್ತಿದ್ದು ತಮಿಳುನಾಡು ಸಿಎಂ ಪಳನಿಸ್ವಾಮಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

    ತಮಿಳುನಾಡು ವಾದ ಏನು?
    ಕಾವೇರಿ ನ್ಯಾಯಾಧಿಕರಣದಲ್ಲಿ ನೀರು ಹಂಚಿಕೆ ವಿಚಾರಣೆ ನಡೆಯುವ ವೇಳೆ ಮೇಕೆದಾಟು ವಿಚಾರ ಪ್ರಸ್ತಾಪವಾಗಿಲ್ಲ. ಆದರೆ ಸರ್ಕಾರ ಈಗ ಯೋಜನೆ ಮುಂದಾಗಿದ್ದು ನ್ಯಾಯಮಂಡಳಿಯ ತೀರ್ಪನ್ನು ಉಲ್ಲಂಘಿಸಿದೆ. ತಮಿಳುನಾಡಿಗೆ ನೈಸರ್ಗಿಕವಾಗಿಯೇ ಮಳೆ ಮೂಲಕ ಹೆಚ್ಚುವರಿ ನೀರು ಬರುತ್ತದೆ. ಅದರೆ ಈ ಅಣೆಕಟ್ಟು ನಿರ್ಮಿಸುವ ಮೂಲಕ ಕರ್ನಾಟಕ ತಮಿಳುನಾಡಿನ ರೈತರ ಕೃಷಿಗೆ ಅಡ್ಡಗಾಲು ಹಾಕುತ್ತಿದೆ.

    ಕರ್ನಾಟಕದ ವಾದ ಏನು?
    ಪ್ರತಿವರ್ಷ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವುದು ನಮ್ಮ ಹೊಣೆ. ಒಂದು ವೇಳೆ ನಾವು ಅಷ್ಟು ಪ್ರಮಾಣದ ನೀರನ್ನು ಬಿಡದಿದ್ದರೆ ತಮಿಳುನಾಡು ಪ್ರಶ್ನಿಸುವುದು ಸರಿ. 2018 ರಲ್ಲಿ ಭಾರೀ ಮಳೆಯಾದ ಪರಿಣಾಮ ಈಗಾಗಲೇ ಕರ್ನಾಟಕದಿಂದ 310 ಟಿಎಂಸಿಗಿಂತಲೂ ಹೆಚ್ಚಿನ ಪ್ರಮಾಣದ ನೀರು ತಮಿಳುನಾಡು ಹರಿದುಹೋಗಿದೆ. ಮೆಟ್ಟೂರಿನಲ್ಲಿ ಅಧಿಕ ನೀರಿನ ಸಂಗ್ರಹ ಸಾಮಥ್ರ್ಯ ಇಲ್ಲದೇ ಇರುವ ಕಾರಣ 100 ಟಿಎಂಸಿಗೂ ಹೆಚ್ಚು ನೀರು ಸಮುದ್ರಕ್ಕೆ ಹರಿದು ಹೋಗಿದೆ. ಮೇಕೆದಾಟಿನಲ್ಲಿ ಅಣೆಕಟ್ಟೆ ಇದ್ದಿದ್ದರೆ ಕನಿಷ್ಠ 60 ಟಿಎಂಸಿ ಹಿಡಿದಿಟ್ಟುಕೊಳ್ಳಬಹುದಾಗಿತ್ತು. ಒಂದು ಡ್ಯಾಂ ಇದ್ದಿದ್ದರೆ ತಮಿಳುನಾಡಿಗೆ ತಿಂಗಳವಾರು ಕೋಟಾದಂತೆ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೂ ಅನುಕೂಲವಾಗುತ್ತಿತ್ತು. ನಾವು ಕುಡಿಯುವ ನೀರಿಗಾಗಿ ಡ್ಯಾಂ ಕಟ್ಟುತ್ತೇವೆಯೇ ಹೊರತು ವಿದ್ಯುತ್ ಉತ್ಪಾದನೆಯೇ ನಮ್ಮ ಮೂಲ ಉದ್ದೇಶ ಅಲ್ಲ. ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕೆಂದು ಎಂದು ಅಂತಾರಾಷ್ಟ್ರೀಯ ಜಲ ನೀತಿಯೇ ಹೇಳಿದೆ. ಹೀಗಾಗಿ ನಾವು ಎತ್ತಿಕೊಂಡ ಮೇಕೆದಾಟು ಯೋಜನೆ ನ್ಯಾಯ ಸಮ್ಮತವಾಗಿದೆ.

    ಕರ್ನಾಟಕಕ್ಕೆ ಈ ಅಣೆಕಟ್ಟು ಅಗತ್ಯ ಯಾಕೆ?
    ಬೆಂಗಳೂರು ನಗರಕ್ಕೆ ನೀರು ಬರುವುದು ಕೆಆರ್‍ಎಸ್ ಡ್ಯಾಂನಿಂದ. ಮಳೆಗಾಲದಲ್ಲಿ ಡ್ಯಾಂ ಭರ್ತಿಯಾದರೆ ಬೆಂಗಳೂರು ಜನತೆಗೆ ನೀರು ಭಾಗ್ಯ. ಬೆಂಗಳೂರು ನಗರಕ್ಕೆ ಪ್ರತಿದಿನ 1400 ದಶಲಕ್ಷ ಲೀಟರ್ ಅಗತ್ಯವಿದೆ. ಬೇಸಿಗೆ ಸಮಯದಲ್ಲಿ ನೀರಿನ ಬೇಡಿಕೆ ಶೇ.15ರಷ್ಟು ಹೆಚ್ಚಾಗುತ್ತದೆ. ತಿಪ್ಪಗೊಂಡನಹಳ್ಳಿ ಜಲಾಶಯದಿಂದ 2012ರಲ್ಲಿ ನೀರು ಪಂಪಿಂಗ್ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಬೆಂಗಳೂರಿನ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಇಲ್ಲಿ ಸಂಗ್ರಹವಾದ ಡ್ಯಾಂ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗೆ ಬಳಸುವ ಉದ್ದೇಶ ರಾಜ್ಯ ಸರ್ಕಾರದ್ದು.

    ಎಷ್ಟು ಡ್ಯಾಂ ನಿರ್ಮಾಣವಾಗಲಿದೆ?
    ಆರಂಭಿಕ ಯೋಜನೆ ಪ್ರಕಾರ 4,500 ಎಕ್ರೆ ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಮುಳುಗಡೆಯಾಗುವ ಪ್ರದೇಶವನ್ನು ತಪ್ಪಿಸಲು 20 ಟಿಎಂಸಿ ಸಾಮಥ್ರ್ಯದ 2, 3 ಅಣೆಕಟ್ಟು ಕಟ್ಟುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ಆದರೆ ಎಷ್ಟು ಡ್ಯಾಂ ನಿರ್ಮಾಣ ಮಾಡಬೇಕು ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಸ್ಥಳ ಪರಿಶೀಲನೆಯಾಗಿದ್ದು, ಸಮಗ್ರ ಯೋಜನಾ ವರದಿ ಸರ್ಕಾರದ ಕೈ ಸೇರಿದ ಬಳಿಕ ಎಷ್ಟು ಡ್ಯಾಂ ನಿರ್ಮಿಸಬೇಕು ಎನ್ನುವುದು ಅಂತಿಮವಾಗಲಿದೆ.

    ಅಂತಿಮ ಐತೀರ್ಪು ಪ್ರಕಾರ ಯಾರಿಗೆ ಎಷ್ಟು ನೀರು?
    ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು(ನ್ಯಾಯಾಲಯಗಳು ನೀಡುವ ಅಂತಿಮ ಆದೇಶಕ್ಕೆ ತೀರ್ಪು ಎಂದು ಕರೆದರೆ ನ್ಯಾಯಾಧಿಕರಣಗಳು ನೀಡುವ ಅಂತಿಮ ಆದೇಶಕ್ಕೆ ಐತೀರ್ಪು(ಂತಿಚಿಡಿಜ) ಎಂದು ಕರೆಯಲಾಗುತ್ತದೆ) ನೀಡಿತು. ಈ ಐತೀರ್ಪಿನ ಅನ್ವಯ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರಿದೆ ಎಂದು ಲೆಕ್ಕಹಾಕಲಾಯಿತು. ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 10, ಪರಿಸರ ಸಂರಕ್ಷಣೆಗೆ 10 ಟಿಎಂಸಿ, ಸಮುದ್ರ ಸೇರುವ ನೀರು 4 ಟಿಎಂಸಿ ನೀರನ್ನು ಹಂಚಲಾಯಿತು. ಇದರ ಜೊತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆದೇಶಿಸಿತು.

    ಕಾವೇರಿಯಲ್ಲಿ ಯಾರಿಗೆ ಎಷ್ಟು ನೀರು?
    ಕಾವೇರಿ ನ್ಯಾಯಾಧಿಕರಣ ನೀಡಿದ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ 2018ರ ಫೆಬ್ರವರಿ 15 ರಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿತ್ತು. ಈ ತೀರ್ಪಿನ ಅನ್ವಯ ಕರ್ನಾಟಕಕ್ಕೆ 284 ಟಿಎಂಸಿ, ತಮಿಳುನಾಡು 177.25 ಟಿಎಂಸಿ, ಕೇರಳ 30 ಟಿಎಂಸಿ, ಪುದುಚೇರಿಗೆ 10 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ.

    ಯಾವ ತಿಂಗಳು ಎಷ್ಟು ಟಿಎಂಸಿ ನೀರು ಬಿಡಬೇಕು?
    ಜೂನ್ 9.19, ಜುಲೈ 31.24, ಆಗಸ್ಟ್ 45.95, ಸೆಪ್ಟೆಂಬರ್ 36.76, ಅಕ್ಟೋಬರ್ 20.22, ನವೆಂಬರ್ 13.78, ಡಿಸೆಂಬರ್ 7.35, ಜನವರಿ 2.76 ಟಿಎಂಸಿ ಬಿಡಬೇಕು. ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ತಲಾ 2.5 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡಬೇಕು.

    ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಕರ್ನಾಟಕ ನಿರ್ಮಿಸಿರುವ ಅಣೆಕಟ್ಟುಗಳು ಹಾರಂಗಿ (ಕೊಡಗು), ಕಬಿನಿ (ಮೈಸೂರು), ಹೇಮಾವತಿ (ಹಾಸನ), ಕೆಆರ್‍ಎಸ್ (ಮಂಡ್ಯ)ದಲ್ಲಿ ಅಣೆಕಟ್ಟು ನಿರ್ಮಾಣ ಮಾಡಿದೆ.

    ತಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?
    ತಮಿಳುನಾಡಿನ ಭಾಗದಲ್ಲಿರುವ ಬಿಳಿಗುಂಡ್ಲುವಿನಲ್ಲಿ ಎಷ್ಟು ಪ್ರಮಾಣದ ನೀರು ಹರಿದಿದೆ ಎಂದು ಪತ್ತೆ ಮಾಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳು ವರ್ಷವಿಡಿ ನೀರಿನ ಲೆಕ್ಕಾಚಾರ ಹಾಕುತ್ತಾರೆ. ಪ್ರತಿದಿನ ಬೆಳಗ್ಗೆ 8ರಿಂದ 10ರವರೆಗೆ ಎರಡು ಗಂಟೆಗಳ ಕಾಲ 160 ಮೀಟರ್ ಪ್ರದೇಶದ 15 ನಿರ್ದಿಷ್ಟ ಸ್ಥಳಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. 7 ಮಂದಿ ಸಿಬ್ಬಂದಿ ದೋಣಿ ಮೂಲಕ ಒಂದು ದಂಡೆಯಿಂದ ಮತ್ತೂಂದು ದಂಡೆಗೆ ಸಾಗಿ ತಮ್ಮ ಜೊತೆ ಇರುವ ಉಪಕರಣವನ್ನು ನೀರಿಗೆ ಬಿಡುತ್ತಾರೆ. ಈ ಮೂಲಕ ಪ್ರತಿ ಸೆಕೆಂಡ್‍ಗೆ ಎಷ್ಟು ನೀರು ಕರ್ನಾಟಕದಿಂದ ತಮಿಳುನಾಡಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಮಾಡುತ್ತಾರೆ. ಈ ಸಿಬ್ಬಂದಿಯನ್ನು ಕರ್ನಾಟಕ, ತಮಿಳುನಾಡಿನನವರು ನೇರವಾಗಿ ಸಂಪರ್ಕಿಸುವಂತಿಲ್ಲ. ರಾಜ್ಯ ಸರ್ಕಾರಗಳು ಅಥವಾ ನ್ಯಾಯಾಲಯಗಳು ಕೇಳಿದರೆ ಮಾತ್ರ ಮಾಹಿತಿಯನ್ನು ನೀಡಲಾಗುತ್ತದೆ.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

    https://www.youtube.com/watch?v=SU08dZx8pRI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದೇಶದ ಸಣ್ಣ ವಿಮಾನ ನಿಲ್ದಾಣಗಳಲ್ಲಿ ಮೊಬೈಲ್ ಎಟಿಸಿ: ಹೇಗೆ ಕಾರ್ಯನಿರ್ವಹಿಸುತ್ತೆ? ವಿಡಿಯೋ ನೋಡಿ

    ದೇಶದ ಸಣ್ಣ ವಿಮಾನ ನಿಲ್ದಾಣಗಳಲ್ಲಿ ಮೊಬೈಲ್ ಎಟಿಸಿ: ಹೇಗೆ ಕಾರ್ಯನಿರ್ವಹಿಸುತ್ತೆ? ವಿಡಿಯೋ ನೋಡಿ

    ನವದೆಹಲಿ: ಭಾರತದ ಪ್ರಮುಖ ಸಣ್ಣ ವಿಮಾನ ಕೇಂದ್ರಗಳಲ್ಲಿ ವಿಮಾನ ಸೇವೆ ಒದಗಿಸಲು 8 ಮೊಬೈಲ್ ವಿಮಾನ ನಿಯಂತ್ರಣ ಕೇಂದ್ರ(ಏರ್ ಟ್ರಾಫಿಕ್ ಕಂಟ್ರೋಲ್)ಗಳನ್ನು ಸ್ಥಾಪಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ನಿರ್ಧರಿಸಿದೆ.

    ಮೊದಲ ಬಾರಿಗೆ ಜಾರ್ಖಂಡ್‍ನ ಸ್ಟೀಲ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೋಕಾರೊ ಮೊಬೈಲ್ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಕೇಂದ್ರವನ್ನು ಈ ಸೇವೆಯನ್ನು ಪಡೆಯಲಿದೆ. ಸಣ್ಣ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ನಿಯಂತ್ರಣ ಮಾಡಲು ಎಟಿಸಿ ಬಳಕೆ ಮಾಡಲಿದ್ದು, 64.6 ಕೋಟಿ ರೂ. ವೆಚ್ಚದಲ್ಲಿ ಪ್ರಾದೇಶಿಕ ಸಂಪರ್ಕ ಯೋಜನೆ (ಆರ್ ಸಿಎಸ್) ಅಡಿ ಸ್ಲೊವಾಕಿಯಾ ದೇಶದ ಎಂಎಸ್‍ಎಂ ಕಂಪನಿಯಿಂದ 8 ಮೊಬೈಲ್ ಎಟಿಸಿ ಖರೀದಿ ಮಾಡಲು ಮುಂದಾಗಿದೆ.

    ಕೇಂದ್ರ ಸರ್ಕಾರದ ವಿಮಾನಯಾನದಲ್ಲಿ ಪಗ್ರತಿ ಸಾಧಿಸುವ ದೃಷ್ಟಿಯಿಂದ ಜಾರಿ ಮಾಡಿದ ಅಗ್ಗದ ಬೆಲೆಯ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯ ಭಾಗವಾಗಿ ಸಣ್ಣ ವಿಮಾನದಲ್ಲಿ ಪ್ರತಿ ದಿನ 1 ಅಥವಾ 2 ವಿಮಾನ ಸೇವೆಗಳನ್ನು ನೀಡಲಾಗುತ್ತಿದೆ. ಈ ವಿಮಾನಗಳ ನಿಯಂತ್ರಣಕ್ಕಾಗಿ ಸದ್ಯ ವಿಮಾನ ಪ್ರಾಧಿಕಾರ ಈ ನಿರ್ಣಯ ಕೈಗೊಂಡಿದೆ. ಉಡಾನ್ ಯೋಜನೆ ಅಡಿ 2,500 ರೂ. ಗಿಂತ ಕಡಿಮೆ ಬೆಲೆಯಲ್ಲಿ ಸೇವೆ ನೀಡಲಾಗುತ್ತಿದೆ.

    ಸಣ್ಣ ವಿಮಾನ ನಿಲ್ದಾಣಗಳಲ್ಲಿ ಮೊಬೈಲ್ ಏರ್ ಟ್ರಾಫಿಕ್ ಕಂಟ್ರೋಲ್ ಬಳಸುವುದು ಸೂಕ್ತ ಎಂದು ಎಎಐ ಅಧ್ಯಕ್ಷ ಗುರುಪ್ರಸಾದ್ ಮೊಹಾಪತ್ರಾ ಅಭಿಪ್ರಾಯ ಪಟ್ಟಿದ್ದಾರೆ. ದೇಶದಲ್ಲಿ ಸದ್ಯ 8 ಸಣ್ಣ ವಿಮಾನ ನಿಲ್ದಾಣಗಳು ಈ ಸೇವೆಯನ್ನು ಪಡೆಯಲಿದ್ದು, ಪ್ರಮುಖವಾಗಿ ಬಿಲಾಸ್ಪುರ (ಚತ್ತೀಸ್‍ಗಢ), ಅಂಬಿಕಾಪುರ (ಚತ್ತೀಸ್‍ಗಢ), ಜಗದಾಲ್ಪುರ (ಚತ್ತೀಸ್‍ಗಢ), ಜೆಪೋರ್ ಒಡಿಸ್ಸಾ), ಉತ್ಕೇಳ (ಒಡಿಸ್ಸಾ), ವೆಲ್ಲೂರ್ (ತಮಿಳುನಾಡು), ಬೋಕಾರೊ (ಜಾರ್ಖಂಡ್), ಮಿಥಾಪುರ್ (ಗುಜರಾತ್) ವಿಮಾನ ನಿಲ್ದಾಣಗಳು ಎಟಿಸಿ ಕೇಂದ್ರಗಳನ್ನು ಪಡೆಯಲಿದೆ.

    ಸದ್ಯ ತಯಾರಿಸಲಾಗಿರುವ ಎಟಿಸಿ ಕೇಂದ್ರಗಳನ್ನು ಭಾರತದ ಸಣ್ಣ ವಿಮಾನ ನಿಲ್ದಾಣಗಳನ್ನು ಗಮನದಲ್ಲಿಟ್ಟುಕೊಂಡೆ ನಿರ್ಮಾಣ ಮಾಡಲಾಗಿದ್ದು, ತಾಂತ್ರೀಕವಾಗಿ ಈ ಕೇಂದ್ರಗಳು ಆಧುನಿಕ ಸೌಲಭ್ಯಗಳನ್ನು ಹೊಂದಿದೆ

    ಏನೆಲ್ಲಾ ಸೌಲಭ್ಯ ಹೊಂದಿದೆ:
    ಮೊಬೈಲ್ ಏರ್ ಟ್ರಾಫಿಕ್ ಕಂಟ್ರೋಲ್ ನಲ್ಲಿ ಆಧುನಿಕ ಸಂವಹನ ಸಾಧನ, ದಿಕ್ಸೂಚಿ, ಕಣ್ಗಾವಲು ಕೇಂದ್ರ, ಸ್ವಯಂ ಚಾಲಿತ ಹವಾಮಾನ ವೀಕ್ಷಣಾ ವ್ಯವಸ್ಥೆ ಸಾಧನಗಳನ್ನು ಹೊಂದಿದೆ.

    ಈ ಸಾಧನವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡ್ಯೊಯಲು ಸುಲಭವಾಗಿದ್ದು ಕ್ಯಾಬಿನನ್ನು 8 ಮೀಟರ್ ಎತ್ತರವರೆಗೂ ಏರಿಸಬಹುದು. ಈ ಕ್ಯಾಬಿನ್ ಆಲುಮಿನಿಯಮ್ ನಿಂದ ಸಿದ್ಧಪಡಿಸಲಾಗಿದ್ದು, 360 ಡಿಗ್ರಿ ವ್ಯೂ ಸಿಗುತ್ತಿದೆ. ಅಲ್ಲದೇ ಇದು ಸ್ಫೋಟ, ಚಳಿ ಹಾಗೂ ಕಿಟಕಿಗಳು ಮಬ್ಬಾಗುವುದನ್ನು ತಡೆಯುವ ಸಾಮಥ್ರ್ಯ ಹೊಂದಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ 2017 ಏಪ್ರಿಲ್‍ನಲ್ಲಿ ಉಡಾನ್ ಸೇವೆಗೆ ಹಸಿರು ನಿಶಾನೆ ತೋರಿದ್ದರು. ಶಿಮ್ಲಾದಿಂದ ದೆಹಲಿಗೆ ಮೊದಲ ವಿಮಾನ ಹಾರಾಟವಾಗಿತ್ತು. 2017 ಏಪ್ರಿಲ್ ನಿಂದ 2018 ಸೆಪ್ಟೆಂಬರ್ 23ರ ಅವಧಿಯಲ್ಲಿ ಇದುವರೆಗೂ 4.5 ಲಕ್ಷ ಮಂದಿ ಉಡಾನ್ ಸೇವೆಯನ್ನು ಬಳಕೆ ಮಾಡಿದ್ದಾರೆ. ಈ ಸೇವೆಯನ್ನು ಮತ್ತಷ್ಟು ಜನರಿಗೆ ಲಭ್ಯವಾಗುವಂತೆ ಮಾಡಲು ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

    https://www.youtube.com/watch?v=S_a7_3BsQSw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಬಿಡುಗಡೆಗೊಳಿಸಿದ ಕೇಂದ್ರ-ವಿಡಿಯೋ ನೋಡಿ

    ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಬಿಡುಗಡೆಗೊಳಿಸಿದ ಕೇಂದ್ರ-ವಿಡಿಯೋ ನೋಡಿ

    ನವದೆಹಲಿ: ಸರ್ಜಿಕಲ್ ಸ್ಟ್ರೈಕ್ ನಡೆದ 2 ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಕೈಗೊಂಡಿದ್ದ ಸರ್ಜಿಕಲ್ ಸ್ಟ್ರೈಕ್ ದಾಳಿಯ ವಿಡಿಯೋ ಬಿಡುಗಡೆ ಮಾಡಿದೆ.

    ಸರ್ಜಿಕಲ್ ಸ್ಟ್ರೈಕ್ ನಡೆದು ಸೆ.29 ಕ್ಕೆ 2ನೇ ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ವಿಡಿಯೋ ಬಿಡುಗಡೆ ಮಾಡಲಾಗಿದೆ. 2016 ಸೆ.29 ರಂದು ಸೇನೆ ಗಡಿ ರೇಖೆ ದಾಟಿ  ಸರ್ಜಿಕಲ್ ದಾಳಿ ನಡೆಸಿತ್ತು. ಜಮ್ಮು ಕಾಶ್ಮೀರದ ಉರಿ ದಾಳಿಯ ಪ್ರತಿಕಾರವಾಗಿ ಭಾರತೀಯ ಸೇನೆ ಈ ದಾಳಿ ನಡೆಸಿತ್ತು. ಅಲ್ಲದೇ ಈ ದಾಳಿಯಲ್ಲಿ 20 ಉಗ್ರರನ್ನು ಹತ್ಯೆ ಮಾಡಿದ್ದಾಗಿ ಮಾಹಿತಿ ನೀಡಲಾಗಿತ್ತು.

    ಭಾರತ ಪ್ಯಾರಾ ಮಿಲಿಟರಿ ಫೋರ್ಸ್‍ ನ  ಕಮಾಂಡೋ ತಂಡ ನಡೆಸಿ ಯಶಸ್ವಿಯಾಗಿ ಉಗ್ರರ ತಾಣಗಳನ್ನು ನಾಶ ಪಡಿಸಿ ವಾಪಸ್ ಬಂದಿತ್ತು. ಕಳೆದ ಕೆಲ ದಿನಗಳ ಭಾರತೀಯ ಸೈನ್ಯದ ಮಾಜಿ ಜನರಲ್ ಒಬ್ಬರು ಸರ್ಜಿಕಲ್ ದಾಳಿ ವೇಳೆ ಚಿರತೆಯ ಮೂತ್ರ ತೆಗೆದುಕೊಂಡು ಹೋಗಿದ್ದಾಗಿ ಬಹಿರಂಗ ಪಡಿಸಿದ್ದರು.

    ಭಾರತ ಭೂ ಸೇನೆಯ ಮುಖ್ಯಸ್ಥರದ ಜನರಲ್ ಬಿಪಿನ್ ರಾವತ್ ಕಳೆದ ದಿನಗಳ ಹಿಂದೆ ಉಗ್ರರ ಮೇಲೆ ಮತ್ತೊಂದು ಸರ್ಜಿಕಲ್ ದಾಳಿ ನಡೆಸುವ ಅಗತ್ಯವಿದೆ. ಗಡಿಯಲ್ಲಿ ಪಾಕಿಸ್ತಾನ ನಡೆಯುತ್ತಿರುವ ಉಗ್ರರ ಚಟುವಟಿಕೆಗಳನ್ನು ನಿಯಂತ್ರಣ ಮಾಡದಿದ್ದರೆ ಇದು ಅನಿವಾರ್ಯ ಎಂದು ವಾಗ್ದಾಳಿ ನಡೆಸಿದ್ದರು.

    ಈ ಹಿಂದೆಯೂ ಸರ್ಜಿಕಲ್ ಸ್ಟ್ರೈಕ್ ಕುರಿತ ವಿಡಿಯೋಗಳನ್ನು ಖಾಸಗಿ ವಾಹಿನಿಯೊಂದು ಪ್ರಸಾರ ಮಾಡಿತ್ತು. ವಿಡಿಯೋದಲ್ಲಿ ದಾಳಿ ನಡೆದ ಸಮಯ ದಿನಾಂಕದ ಸಮೇತ ದೃಶ್ಯಗಳು ಲಭ್ಯವಾಗಿತ್ತು. ಯುಎವಿ ಮತ್ತು ಸೈನಿಕರು ಧರಿಸಿದ್ದ ಹೇಡ್ ಮೌಂಟೇನ್ ಕ್ಯಾಮೆರಾದಲ್ಲಿ ಕಾರ್ಯಾಚರಣೆಯನ್ನು ಸೆರೆ ಹಿಡಿಯಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

    https://twitter.com/ANI/status/1045231995544952832

    ವಿಡಿಯೋದಲ್ಲಿ ಸೈನಿಕರ ಮೊದಲ ಟಾರ್ಗೆಟ್ ಆಗಿದ್ದ ಉಗ್ರಗಾಮಿಗಳ ಕ್ಯಾಪ್‍ಗಳು ಸೆರೆಯಾಗಿದ್ದು, ಬಳಿಕ ಯೋಧರು ಅವುಗಳ ಮೇಲೆ ದಾಳಿ ನಡೆಸುವ ಸಂದರ್ಭದ ದೃಶ್ಯಗಳು ಲಭಿಸಿತ್ತು. ಬೆಳಗ್ಗೆ 6.16 ಸಮಯಕ್ಕೆ ಎರಡನೇ ಟಾರ್ಗೆಟ್ ಮೇಲೆ ದಾಳಿ ನಡೆಸಲಾಗಿದೆ. ಮೂರನೇ ಟಾರ್ಗೆಟ್ ಬಂಕರ್ ಆಗಿದ್ದು, ಕೊನೆಯ ಫ್ರೇಮ್ ನಲ್ಲಿ ಉಗ್ರರ ಬಂಕರ್ ನಾಶವಾಗುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • 2019ರಲ್ಲಿ ಹೆಚ್ಚಿನ ಸ್ಥಾನ ಪಡೆದು ಮತ್ತೆ ಅಧಿಕಾರ ಪಡೆಯುತ್ತೇವೆ: ಪ್ರಧಾನಿ ಮೋದಿ

    2019ರಲ್ಲಿ ಹೆಚ್ಚಿನ ಸ್ಥಾನ ಪಡೆದು ಮತ್ತೆ ಅಧಿಕಾರ ಪಡೆಯುತ್ತೇವೆ: ಪ್ರಧಾನಿ ಮೋದಿ

    ನವದೆಹಲಿ: ಕಳೆದ 4 ವರ್ಷಗಳ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಳ್ಳಲಾಗಿರುವ ಜನಪರ ಕಾರ್ಯಕ್ರಮಗಳೇ ಮುಂದಿನ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸುತ್ತವೆ. 2014 ರ ಚುನಾವಣೆಯಲ್ಲಿ ಪಡೆದ ಸ್ಥಾನಗಳಿಗಿಂತಲೂ ಹೆಚ್ಚಿನ ಸ್ಥಾನ ಪಡೆದು ಮತ್ತೆ ಅಧಿಕಾರ ಪಡೆಯುತ್ತೇವೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳಿಗೆ ವಿಶೇಷ ಸಂದರ್ಶನ ನೀಡಿ ಮಾತನಾಡಿದ ಅವರು, ಪ್ರತಿಪಕ್ಷಗಳ ಮಹಾಮೈತ್ರಿಯಿಂದ ರಚಿಸಿದ ಸಮ್ಮಿಶ್ರ ಸರ್ಕಾರಗಳು ಜನರಿಗೆ ಕಹಿ ಅನುಭವವನ್ನು ನೀಡಿದೆ. ಅದು ಜನರೊಂದಿಗೆ ಮೈತ್ರಿ ಸಾಧಿಸಲಾರದು. ದೇಶದ ಜನರು ಸ್ಥಿರ ಹಾಗೂ ಸದೃಢ ಸರ್ಕಾರ ಬೇಕೆಂದು ಬಯಸುತ್ತಿದ್ದಾರೆ ಎಂದು ವಿರೋಧಿ ಪಕ್ಷಗಳ ಮಹಾಮೈತ್ರಿ ಕುರಿತು ವಾಗ್ದಾಳಿ ನಡೆಸಿದರು.

    ಇದೇ ವೇಳೆ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು ವಿಪಕ್ಷಗಳ ಅಹಂಕಾರವನ್ನು ತೋರಿಸುತ್ತದೆ ಎಂದು ಕಿಡಿಕಾರಿದ ಪ್ರಧಾನಿ, ನಾವು ಕಾಮ್‍ದಾರ್ ಗಳೇ ಹೊರತು ನಾಮಧಾರ್ ಗಳಲ್ಲ. ನಮ್ಮಲ್ಲಿ ಅಂತಹ ಆಯ್ಕೆಗಳಿಲ್ಲ, ಗೋರಕ್ಷಣೆ ಸಂಬಂಧಿ ಹಿಂಸೆ, ಹಲ್ಲೆ, ಹತ್ಯೆ ಪ್ರಕರಣಗಳ ನಿಯಂತ್ರಣಕ್ಕಾಗಿ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

    ನಮ್ಮ ಸರ್ಕಾರದ ಅವಧಿಯಲ್ಲಿ ಆರ್ಥಿಕ ಅವ್ಯವಹಾರಗಳಿಗೆ ಕಡಿವಾಣ ಹಾಕಲಾಗಿದ್ದು, ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಗೆ ಸರ್ಕಾರ ಬದ್ಧವಾಗಿದೆ. ಕಳೆದ ಒಂದು ವರ್ಷದಲ್ಲಿ 45 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ದೇಶದಲ್ಲಿ ಪ್ರವಾಸೋದ್ಯಮ, ನವ ಉದ್ಯಮ, ನಿರ್ಮಾಣ ಕ್ಷೇತ್ರ ಹಾಗೂ ಮುದ್ರಾ ಯೋಜನೆ ಅಡಿಯೂ ಹಲವು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಾಗಿದೆ. ರಫೇಲ್ ವಿವಾದದ ಬಗ್ಗೆ ಕಾಂಗ್ರೆಸ್ ಸುಳ್ಳು ಹೆಣೆಯುತ್ತಿದೆ, ರಫೇಲ್ ಒಪ್ಪಂದ ಸರ್ಕಾರದ ಪ್ರಮಾಣಿಕ ಒಪ್ಪಂದವಾಗಿದೆ. ಭಾರತ ಮತ್ತು ಅಮೆರಿಕ ಜಗತ್ತಿನ ಆರ್ಥಿಕತೆಯ ಎರಡು ಇಂಜಿನ್‍ಗಳು, ಅಮೆರಿಕದೊಂದಿಗೆ ನಮ್ಮ ಸಂಬಂಧ ಮುಂದುವರಿಯಲಿದೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews